ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ

ಸ್ವಾತ್ಮಗತ

ರೈತ ದಿನಾಚರಣೆ ಕೆ.ಶಿವು ಲಕ್ಕಣ್ಣವರ್ ಬೆವರು ಕಂಬನಿ ರಕುತವ ಸುರಿಸಿ, ನೆಲವನು ತಣಿಸಿ, ಕೆಸರಿನಿಂದ ಅಮೃತಕಲಶನೆತ್ತಿ ಕೊಡುತಿರುವ ರೈತನ ದಿನಾಚರಣೆ ಇಂದು..! ಇಂದು ಡಿಸೆಂಬರ್ 23. ಅಂದರೆ ರೈತ ದಿನಾಚರಣೆ. ಈ ದಿನಾಚರಣೆ ನಮ್ಮೆಲ್ಲರ ಊಟವನ್ನು ಮಾಡಿಸುತ್ತಿರುವ ರೈತನ ನೆನೆ, ನೆನೆದು ಉಣ್ಣುವ ದಿನ… ಆ ನಿಮಿತ್ಯ ರೈತನನ್ನು ನೆನೆವ ಲೇಖನವಿದು… ಗದ್ದೆ ಕೆಸರನು ಕುಡಿದು ಕಾಡು ಮುಳ್ಳನು ಕಡಿದು, ಮುಂಜಾನೆಯಿಂದ ಸಂಜೆಯವರೆಗೆ ದುಡಿದುಡಿದು ಚಳಿಯೋ ಮಳೆಯೋ ಬಿಸಿಲೋ ಬೇಗೆಯಲ್ಲವ ಸಹಿಸಿ, ಬೆವರು ಕಂಬನಿ ರಕುತವ ಸುರಿಸಿ, ನೆಲವನು ತಣಿಸಿ, ಕೆಸರಿನಿಂದ ಅಮೃತಕಲಶವನೆತ್ತಿ ಕೊಡುತ್ತಿರುವವ ರೈತ… ಹಸಿದು ಉನ್ನುವುದು ಪ್ರಕೃತಿ, ಹಸಿಯದೇ ಉನ್ನುವುದು ವಿಕೃತಿ ತಾನು ಹಸಿದರೂ ಇತರರಿಗೆ ಉಣಬಡಿಸುವವನು ರೈತ. ಇಂತಹ ಶ್ರಮಜೀವಿ ಈ ನಾಡಿನ ಸ್ವಾಭಿಮಾನಿ. ಇಂತಹ ರೈತನ ದಿನಾಚರಣೆ ಎಷ್ಟೋ ಜನರಿಗೆ ಇನ್ನೂ ಗೊತ್ತೇ ಇಲ್ಲ. ಇದು ತುಂಬಾ ವಿಪರ್ಯಾಸ… ಅಂದರೆ, ಅನ್ನ ಕೊಡುವ ರೈತನನ್ನೇ ಮರೆತು ಜೀವನ ಸಾಗಿಸಿದರೆ ಇನ್ನೇಲ್ಲಿದೆ ರೈತನಿಗೆ ಗೌರವ. ರೈತ ದಿನಾಚರಣೆ ಇತಿಹಾಸ ಮತ್ತು ಹಿನ್ನೇಲೆ ತಿಳಿದು ಆತನ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿ ವಂದಿಸಬೇಕಿದೆ. “ನೀನು ಇವತ್ತು ಊಟ ಮಾಡಿದ್ದರೆ ರೈತನನ್ನು ನೆನೆ” ಎಂಬ ನಾಣ್ಣುಡಿಯಂತೆ ಇಂದು ನಾವೆಲ್ಲರೂ ಹೊಟ್ಟೆ ತುಂಬುವಷ್ಟು ಊಟ ಮಾಡಿ ಹಸಿವೆ ಇಲ್ಲದೇ ನಿಶ್ಚಿತೆಯಿಂದ ನಿದ್ದೆ ಮಾಡುತ್ತಿದ್ದರೆ, ಇದರ ಹಿಂದೆ ರೈತನ ಶ್ರಮ ಮತ್ತು ಬೆವರೇ ಮುಖ್ಯ ಕಾರಣ… ಇಂತಹ ರೈತನಿಗೆ ನಾವೆಲ್ಲರೂ ಕೃತಜ್ಞರಾಗಿರಬೇಕೆಂಬುದು ಮೇಲಿನ ಸಾಲಿನ ಅರ್ಥ. ನಮಗೆಲ್ಲರಿಗೂ ಡಾಕ್ಟರ್‍ಗಳು, ಲಾಯರ್‍ಗಳು, ಇಂಜನಿಯರ್‍ಗಳೂ ಮಾತ್ರ ಬೇಕಾಗುತ್ತಾರೆ. ಆದರೆ, ದಿನ ಒಂದಕ್ಕೆ ಮೂರು ಹೊತ್ತು ತುತ್ತು ಅನ್ನವನ್ನು ನೀಡಿದ ರೈತನ ನೆನಪು ಮಾತ್ರ ಬರುವುದಿಲ್ಲ. ಇಂತಹ ರೈತನನ್ನೇ ನಾವಿಂದು ಕಡೆಗಣಿಸಿದ್ದೇವೆ… ಭಾರತದ ಮೊದಲ ಪ್ರಧಾನ ಮಂತ್ರಿ ಆಗಿದ್ದ ಜವಾಹರಲಾಲ ನೆಹರೂರವರು ಹೇಳಿದಂತೆ “ಪ್ರಕೃತಿಯು ಕೃಷಿಯೊಂದಿಗೆ ಜೂಜಾಟ ಆಡುತ್ತಿದೆ”. ಹಲವಾರು ಪ್ರದೇಶಗಳಲ್ಲಿ ಅತಿವೃಷ್ಠಿ ಅಥವಾ ಅನಾವೃಷ್ಠಿ, ಇಲ್ಲವೇ ರೋಗ-ಕೀಟಗಳ ಬಾಧೆ, ಹೀಗೆ ಅನೇಕ ಕಾರಣಗಳಿಂದ ರೈತರು ನಿರಂತರವಾಗಿ ನಷ್ಟಗಳನ್ನು ಅನುಭವಿಸುತ್ತಾ ಸಾಲಗಾರರಾಗಿದ್ದಾರೆ. ಇಷ್ಟೆಲ್ಲ ಸವಾಲುಗಳ ನಡುವೆಯೂ ಒಂದೊಮ್ಮೆ ಒಳ್ಳೆಯ ಫಸಲು ಬಂದಾಗಲೂ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೆ ನಷ್ಟವಾಗಿ ಬೆಳೆಗಳನ್ನು ಬೆಳೆಯಲು ಸುರಿದ ಬಂಡವಾಳವು ಮರಳಿ ಬಾರದಂತಾಗಿದೆ. ಕೆಲವರಂತೂ ಸಾಲದ ಬಾಧೆ ತಾಳದೇ ನೇಣಿಗೇ ಕೊರಳೊಡ್ಡುತ್ತಿದ್ದಾರೆ. ಇದು ಅತ್ಯಂತ ಚಿಂತಾದಾಯಕ ಸ್ಥಿತಿ. ಹಲವಾರು ಸಂಕಷ್ಟಗಳ ನಡುವೆಯೂ ನಮ್ಮ ದೇಶದಲ್ಲಿ ಹಸಿವೆಯಿಂದ ಬಳಲುತ್ತಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಾ ಬಂದಿದೆ. ಇದಕ್ಕೆ ಪ್ರಮುಖ ಕಾರಣ ಈ ನೆಲದ ಮಣ್ಣಿನ ಮಗ… ರೈತನ ಶ್ರಮ, ಆತನ ಬೆವರ ಹನಿ, ಮಳೆ ಇರಲಿ-ಬಿಡಲಿ-ಹೆಚ್ಚಾಗಲಿ-ಕಡಿಮೆಯಾಗಲಿ ಒಂದು ಒಳ್ಳೆಯ ಬೆಳೆಯನ್ನು ಪಡೆಯುವ ಆಸೆಯ ನಿರೀಕ್ಷೆಯಿಂದ ಹೊಲವ ಬಿತ್ತುತ್ತಾನೆ. ಸಾಕಷ್ಟು ಪ್ರಯತ್ನ ಪಟ್ಟು ಮಳೆ ಚಳಿ ಬಿಸಿಲುಗಳೆನ್ನದೇ, ಹಗಲು-ರಾತ್ರಿ ಪರಿವೇ ಇಲ್ಲದೇ, ಶ್ರಮ ವಹಿಸಿ ವ್ಯವಸಾಯ ಮಾಡುತ್ತಾನೆ. ಈ ವ್ಯವಸಾಯವೇ ನಮ್ಮ ಅನ್ನದ ಬಟ್ಟಲನ್ನು ತುಂಬಿಸುತ್ತದೆ… ಇಂತಹ ರೈತರ ಶ್ರಮಕ್ಕೆ ನಾವಿಂದು ಬೆಲೆ ಕೊಡಬೇಕಾಗಿದೆ, ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿದೆ. ಸರ್ಕಾರದ ಮಟ್ಟದಲ್ಲಿ ಕೃಷಿಗೆ ಹೆಚ್ಚು ಒತ್ತು ಸಿಗಬೇಕಾದ ವ್ಯವಸ್ಥಿತವಾದ ಕೃಷಿ ಮಾಹಿತಿ ವಿನಿಮಯ ವ್ಯವಸ್ಥೆ, ವ್ಯವಸ್ಥಿತ ಮಾರುಕಟ್ಟೆಗಳ ಲಭ್ಯತೆ ಮತ್ತು ಸ್ಥಿರವಾದ ಬೆಲೆಯನ್ನು ದೊರಕಿಸಿಕೊಡುವ ಪ್ರಮಾಣಿಕ ಪ್ರಯತ್ನ ಸರ್ಕಾರ ಮತ್ತು ಉನ್ನತ ಮಟ್ಟದ ಆಡಳಿತ ವರ್ಗದಿಂದ ಆಗಬೇಕಾಗಿದೆ… ಒಕ್ಕಲನು ನಲುಗಿಸದೇ ಲೆಕ್ಕವನು ಸಿಕ್ಕಿಸದೇ, ಕಕ್ಕುಲತೆಯಿಂದ ನಡೆಸುವ ಅರಸು ತಾ ಚೆಕ್ಕಂದವಿರುವ – ಸರ್ವಜ್ಞ ರೈತ ಸಂಕಷ್ಟದಲ್ಲಿದ್ದಾಗ ಆತನಿಗೆ ಸಹಾಯ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾದಾಗ ಮಾತ್ರ ರೈತ ಸಧೃಡವಾಗಿ ಬದುಕಲು ಸಾಧ್ಯ. ಇಲ್ಲದೇ ಹೊದಲ್ಲಿ ಆ ನಾಡಿನ ಆರ್ಥಿಕ ಬೆಳವಣಿಗೆ ಆರೋಗ್ಯಕರವಾಗಿರುವುದಿಲ್ಲ. ರೈತ ಸಮಸ್ಯೆಗಳ ಸುಳಿಗೆ ಸಿಕ್ಕು ಹಳ್ಳಿಗಳಿಗೆ ಬೆನ್ನು ಮಾಡಿ ಪಟ್ಟಣಗಳತ್ತ ಮುಖ ಮಾಡಿದರೆ, ಪ್ರತಿಯೊಬ್ಬರು ಅನ್ನದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಈ ದೇಶ ಹಳ್ಳಿಗಳ ದೇಶ. ರೈತ ಉದ್ಧಾರವಾದರೆ, ಹಳ್ಳಿಗಳು ಉದ್ಧಾರವಾದಂತೆ. ಹಳ್ಳಿಗಳು ಉದ್ಧಾರವಾದರೆ, ಇಡೀ ದೇಶವೇ ಉದ್ಧಾರವಾದಂತೆ ಎಂಬುದನ್ನು ಎಲ್ಲರೂ ಮನಗಾಣಬೇಕಾಗಿದೆ… ನಮ್ಮ ಶ್ರಮಜೀವಿ ರೈತರ ಪಾತ್ರದ ಗೌರವಾರ್ಥ ಭಾರತದ ಮಾಜಿ ಪ್ರಧಾನಿ ಅಪಾರ ರೈತಪರ ಕಳಕಳಿಯನ್ನು ಹೊಂದಿದ ಗೌರವಾನ್ವಿತ ಶ್ರೀ ಚೌದರಿ ಚರಣ್ ಸಿಂಗ್‍ರ ಜನ್ಮದಿನವಾದ ಡಿಸೆಂಬರ, 23 ನೇ ತಾರೀಖಿನಂದು ರಾಷ್ಟ್ರೀಯ ರೈತ ದಿನಾಚರಣೆಯನ್ನು ಆಚರಿಸಲಾಗುತ್ತಿದೆ… ಶ್ರೀ ಚೌದರಿ ಚರಣ್ ಸಿಂಗ್‍ರವರು ರೈತ ಕುಟುಂಬದಿಂದ ಬಂದವರಾಗಿದ್ದು, ಅತ್ಯಂತ ಸರಳ ಜೀವಿಗಳು, ಸೂಕ್ಷ್ಮ ಸಂವೇದಿಗಳು. ರೈತರ ಮತ್ತು ಕೂಲಿ ಕಾರ್ಮಿಕರ ಮೇಲೆ ತೀವ್ರತರ ಕಳಕಳಿಯನ್ನು ಹೊಂದಿದ್ದರು. ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾಗಿ, ಭಾರತದ ಪ್ರಧಾನಿ ಹಾಗೂ ಉಪ ಪ್ರಧಾನಿಯಾದಾಗ ಬಜೆಟ್‍ಗಳನ್ನು ಕೃಷಿಕರ ಪರವಾಗಿರುವಂತೆ ನೋಡಿಕೊಂಡರು. ರೈತರ ಪರವಾಗಿ ಹಲವಾರು ನೀತಿಗಳನ್ನು ತರುವಲ್ಲಿ ಯಶಸ್ವಿಯಾಗಿದ್ದರು… ಇವರು ಜುಲೈ 28, 1979 ರಿಂದ ಜನೇವರಿ 14, 1980 ರವರೆಗೆ ಅಲ್ಪಾವಧಿಗೆ ಪ್ರಧಾನ ಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದಾರೆ. 1979 ನೇ ಸಾಲಿನ ಬಜೇಟ್‍ನ್ನು ಮಂಡಿಸಿದ ಇವರು ರೈತರ ಅಗತ್ಯತೆಗಳನ್ನು ಪೂರೈಸಲು ಬೇಕಾದ ಎಲ್ಲ ಅಂಶಗಳನ್ನು ಬಜೆಟ್‍ನಲ್ಲಿ ಸೇರಿಸಿದ್ದರು. ಇದರಲ್ಲಿ ರೈತ ಪರವಾದ ಹಲವಾರು ನೀತಿಗಳನ್ನು ಪ್ರಕಟಿಸಿದ್ದರು. ಇವರ ಪ್ರಯತ್ನಗಳಿಂದಾಗಿ ಎಲ್ಲ ಸಣ್ಣ ಮತ್ತು ಬಡ ರೈತರುಗಳನ್ನು ದೊಡ್ಡ ಭೂ ಮಾಲಿಕರು ಮತ್ತು ಹಣದಾಳದಾರರ ವಿರುದ್ಧ ಒಗ್ಗೂಡಿಸಲು ದೊಡ್ಡ ಶಕ್ತಿಯಾಗಿ ಕೆಲಸ ಮಾಡಿದರು… ಇವರು ಲೋಕಸಭೆಯಲ್ಲಿ ಪರಿಚಯಿಸಿದ್ದ ಕೃಷಿ ಉತ್ಪಾದನೆ ಮಸೂದೆಯು ಅತ್ಯಂತ ಪ್ರಸಿದ್ಧ ಮಾರುಕಟ್ಟೆ ಮಸೂದೆಯಾಗಿತ್ತು. ಈ ಮಸೂದೆಯನ್ನು ಹಣವುಳ್ಳ ವಿತರಕರು ಮತ್ತು ಭೂ ಮಾಲಿಕರು ರೈತರನ್ನು ಶೋಷಣೆ ಮಾಡುವುದರಿಂದ ತಡೆಯುವ ಉದ್ದೇಶದಿಂದ ಹೊರತರಲಾಗಿತ್ತು. ಇವರು ಜಮೀನ್ದಾರಿ ನಿರ್ಮೂಲನಾ ನೀತಿ ಹೊರತರುವಲ್ಲಿ ಶ್ರಮಿಸಿ ಯಶಸ್ವಿಯಾಗಿದ್ದರು. ಇದರಿಂದ ರೈತರ ಮೇಲಿನ ತಮ್ಮ ಕಳಕಳಿ ಅತ್ಯಂತ ಕಾಳಜಿಯುತವಾದದ್ದೆಂದು ತೋರಿಸಿಕೊಟ್ಟಿದ್ದರು… ಇವರು ಉತ್ತಮ ವಾಗ್ಮಿಗಳಲ್ಲದೆ, ಒಳ್ಳೆಯ ಬರಹಗಾರರೂ ಆಗಿದ್ದರು. ಬರಹಗಾರರಾಗಿ ರೈತರ, ಬಡವರ ಸಮಸ್ಯೆಗಳ ಕುರಿತ ಆಲೋಚನೆಗಳನ್ನು ಚಿತ್ರಿಸುವ ಲೇಖನಗಳನ್ನು ಮತ್ತು ಪುಸ್ತಕಗಳನ್ನು ರಚಿಸಿದ್ದಲ್ಲದೆ, ಎಲ್ಲ ಸಮಸ್ಯೆಗಳಿಗೆ ಸಾಧ್ಯವಿರುವಂತಹ ವಿವಿಧ ಪರಿಹಾರಗಳನ್ನು ಸಹ ಕೊಡುತ್ತಿದ್ದರು… ಇವರು ಮಾಜಿ ಪ್ರಧಾನಿ ಲಾಲ್ ಬಹದ್ದೂರ ಶಾಸ್ತ್ರಿಯವರ ಘೋಷಣೆಯಾದ “ಜೈ ಜವಾನ್ ಜೈ ಕಿಸಾನ್” ರೈತರ ಕ್ಷೇಮಕ್ಕಾಗಿ ಸದಾ ಶ್ರಮಿಸುತ್ತಿದ್ದರು. ಹಳ್ಳಿಯ ರೈತಾಪಿ ಕುಟುಂಬದಲ್ಲಿ ಜನಿಸಿದ್ದರಿಂದ ಅಲ್ಲಿನ ಜನರ ಪರಿಸ್ಥಿತಿ ಮತ್ತು ಸಮಸ್ಯೆಗಳ ಆಳವಾದ ಅರಿವನ್ನು ಹೊಂದಿದ್ದರಿಂದ ಹಳ್ಳಿಗರು, ಹಿಂದುಳಿದವರ ಮತ್ತು ರೈತರ ಅಭಿವೃದ್ಧಿಗಾಗಿ ಸದಾ ಕಾರ್ಯಪ್ರವೃತ್ತರಾಗಿರುತ್ತಿದ್ದರು. ಶೇ. 70 ಕ್ಕಿಂತ ಹೆಚ್ಚು ಜನ ಹಳ್ಳಿಯವರಿದ್ದು, ಅವರ ಕಸುಬು ವ್ಯವಸಾಯವಾಗಿರುತ್ತದೆ. ರೈತರು ನಮ್ಮ ದೇಶದ ಬೆನ್ನೆಲುಬು ಹಾಗೂ ಹಳ್ಳಿಗಳ ಅಭಿವೃದ್ಧಿಯಿಂದಲೇ ದೇಶದ ಏಳಿಗೆ ಸಾಧ್ಯವೆಂದು ದೃಢವಾಗಿ ನಂಬಿದ್ದರು. ಹೀಗಾಗಿ ಇವರನ್ನು ರೈತ ಸಮುದಾಯಕ್ಕೆ ಸೇರಿದ ಮಣ್ಣಿನ ಮಗನನ್ನಾಗಿ ಗುರುತಿಸಲ್ಪಡಲಾಗುತ್ತಿದೆ. ಮೇ 29, 1987 ನೇ ದಿವಸದಂದು ಕೊನೆಯುಸಿರೆಳೆದರು. ಇವರ ಸಮಾಧಿ ಸ್ಥಳವನ್ನು “ಕಿಸಾನ್ ಘಾಟ್” ಎಂದು ನಾಮಕರಣ ಮಾಡಿ ರೈತ ಪರ ಕಾಳಜಿ ಹೊಂದಿದ ಇವರಿಗೆ ಗೌರವ ಸಲ್ಲಿಸಲಾಗಿದೆ… ಶ್ರಮಜೀವಿ ರೈತರ ಗೌರವಾರ್ಥ ಮತ್ತು ಆಹಾರೋತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವಲ್ಲಿ ರೈತರ ಪಾತ್ರದ ಮಹತ್ವವನ್ನು ಸಾರುವ ಉದ್ದೇಶದಿಂದ ಪ್ರತಿ ವರ್ಷ ಡಿಸೆಂಬರ 23 ರಂದು ರಾಷ್ಟ್ರೀಯ ರೈತ ದಿನಾಚರಣೆಯನ್ನು ಆಚರಿಸಲಾಗುತ್ತಿದೆ… ಉತ್ತರ ಪ್ರದೇಶದಲ್ಲಿ ಈ ದಿನದಂದು ಸಾರ್ವಜನಿಕ ರಜೆ ಇರುತ್ತದೆ. ಈ ದಿನದಂದು ದೇಶದಾದ್ಯಂತ ಎಲ್ಲ ರಾಜ್ಯಗಳಲ್ಲಿಯೂ ಕೃಷಿ ಇಲಾಖೆಗಳು, ಕೃಷಿ ವಿಜ್ಞಾನ ಕೇಂದ್ರಗಳು, ರಾಜ್ಯ ಕೃಷಿ ವಿಶ್ವವಿದ್ಯಾಲಯಗಳು, ಕೃಷಿ ಸಂಶೋಧನಾ ಕೇಂದ್ರಗಳಲ್ಲೆಡೆಯೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ… ಇಂದು ರೈತಪರ ಹೋರಾಟಗಳಲ್ಲಿ ಮುಂದಾಳತ್ವ ವಹಿಸಿದ ರೈತರ ಯಶೋಭಿವೃದ್ಧಿಗೆ ಶ್ರಮಿಸಿದ ನಾಯಕರಿಗೆ ಗೌರವ ಸಲ್ಲಿಸಲಾಗುತ್ತದೆ. ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳು ಚರ್ಚಾಕೂಟ, ವಸ್ತು ಪ್ರದರ್ಶನಗಳನ್ನು, ಸಾಧಕ ರೈತರಿಗೆ ಸನ್ಮಾನ ಕಾರ್ಯಕ್ರಮಗಳನ್ನು ಹಾಗೂ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತಾರೆ. ರೈತರ ಮತ್ತು ಕೃಷಿಯಲ್ಲಿ ಸ್ವಾತಂತ್ರ್ಯದ ನಂತರದಿಂದ ಇಲ್ಲಿಯವರಿಗೆ ನಡೆದು ಬಂದ ಹಾದಿ, ಮುಂದೆ ಸಾಗಬೇಕಾದ ದಾರಿಯ ರೂಪರೇಷೆಗಳು, ರೈತರ ಸಮಸ್ಯೆಗಳ ಪರಿಹಾರೋಪಾಯಗಳು ಮುಂತಾದ ವಿಚಾರಗಳ ಚರ್ಚೆಯನ್ನು ವಿಜ್ಞಾನಿಗಳು, ವಿಸ್ತರಣಾಧಿಕಾರಿಗಳು ಮತ್ತು ರೈತ ನಾಯಕರುಗಳ ಸಮ್ಮುಖದಲ್ಲಿ ನಡೆಸಲಾಗುತ್ತದೆ… ಕೃಷಿ ಮತ್ತು ರೈತ ಎರಡೂ ಅತ್ಯಂತ ಪ್ರಮುಖವಾಗಿದ್ದರೂ ಅಭಿವೃದ್ಧಿ ಪಥದಲ್ಲಿ ಇವೆರಡೂ ಹೆಚ್ಚು ನಿರ್ಲಕ್ಷಕ್ಕೆ ಒಳಗಾಗಿವೆ ಎಂದು ಹೇಳಬಹುದು. ಕೃಷಿಯ ಬೆಳೆವಣಿಗೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಲವಾರು ನೀತಿಗಳನ್ನು ರೂಪಿಸಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ಇವು ಇತರೆ ಕ್ಷೇತ್ರಗಳಿಗೆ ಹೋಲಿಸಿದಲ್ಲಿ ತೀವ್ರ ಕಡಿಮೆ ಎನ್ನಬಹುದು ಅಥವಾ ನಮ್ಮ ವ್ಯವಸ್ಥೆಯಲ್ಲಿನ ದೋಷಗಳಿಂದ ಅವು ರೈತರಿಗೆ ತಲುಪದೆ ಅಭಿವೃದ್ಧಿ ಪಥದಲ್ಲಿ ಕೃಷಿ ಇನ್ನೂ ಎಗುತ್ತಲೇ ಸಾಗಿದೆ ಎನ್ನಬಹುದು. ಇದಕ್ಕೆ ಇನ್ನೂ ಹಲವಾರು ಕಾರಣಗಳನ್ನು ಹೆಸರಿಸಬಹುದು… “ಹಸಿರು ಕ್ರಾಂತಿ” ಯಿಂದಾಗಿ ದೇಶದ ಆಹಾರೋತ್ಪಾದನೆ ಹೆಚ್ಚಾಗಿದ್ದಂತು ನಿಜ. ಆದರೆ, ಹಸಿರು ಕ್ರಾಂತಿಯ ಜೊತೆ ಜೊತೆಗೆ ಬಂದ ರಾಸಾಯನಿಕ ಗೊಬ್ಬರಗಳು ಮತ್ತು ಪೀಡೆನಾಶಕಗಳು ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆಗಳಿಗೆ ಕಾರಣಗಳಾಗುತ್ತವೆ ಎಂಬುದನ್ನು ಸರಕಾರಗಳು ಮತ್ತು ಇಲಾಖೆಗಳು ಮುಂದಾಲೋಚಿಸಿರಲಿಲ್ಲ. ಹಸಿರು ಕ್ರಾಂತಿಯ ಪರಿಣಾಮದಿಂದ ಭೂಮಿಯ ಒಡಲು ವಿಷದಿಂದ ತುಂಬಿದೆ. ಭೂಮಿಯಲ್ಲಿ ಸಾವಯವದ ಅಂಶ ತೀವ್ರ ಕಡಿಮೆಯಾಗಿ ಮಣ್ಣಿನಲ್ಲಿರುವ ಸೂಕ್ಷ್ಮಾಣು ಜೀವಿಗಳ ಸಂಖ್ಯೆ ತೀವ್ರವಾಗಿ ಕ್ಷೀಣಿಸಿದೆ. ವಾಸ್ತವವಾಗಿ ಭೂಮಿಯು ನಿರ್ಜೀವವಾಗುತ್ತಿದೆ. ಮಣ್ಣಿನ ತೇವಾಂಶವನ್ನು ಹಿಡಿದಿಡುವ ಶಕ್ತಿ ಕಡಿಮೆಯಾಗಿ ಬೆಳೆಗಳಿಗೆ ನೀರಿನ ಅಭಾವವುಂಟಾಗಿ ನಿರೀಕ್ಷಿತ ಇಳುವರಿಯನ್ನು ಪಡೆಯಲಾಗುತ್ತಿಲ್ಲ… ಎಷ್ಟೋ ಬಾರಿ ಖುರ್ಚು ಮಾಡಿದ ಬಂಡವಾಳವೂ ಸಹಿತ ಮರಳದಂತಾಗಿದೆ. ಇದರಿಂದಾಗಿ ನಮ್ಮ ರೈತರು ತೀವ್ರ ಸಂಕಷ್ಟಗಳಿಗೆ ಈಡಾಗುತ್ತಿದ್ದಾರೆ. ಅಭಿವೃದ್ಧಿಯ ಹೆಸರಿನಲ್ಲಿ ರಸ್ತೆಗಳು, ಕೈಗಾರಿಕೆಗಳು, ಶಹರಗಳು, ವಿಮಾನ ನಿಲ್ದಾಣಗಳು ಮುಂತಾದವುಗಳ ನಿರ್ಮಾಣಕ್ಕಾಗಿ ಕೃಷಿ ಭೂಮಿಯನ್ನು ಉಪಯೋಗಿಸಿಕೊಳ್ಳುವುದರಿಂದ ದಿನೇ ದಿನೇ ಕೃಷಿ ಭೂಮಿ ಕ್ಷೀಣಿಸುತ್ತಿದೆ. ಅಭಿವೃದ್ಧಿಯ ಈ ನಾಗಾಲೋಟದ ಕಾರಣ, ಕಾಡುಗಳು ಸಹ ನಾಶವಾಗುತ್ತಿದ್ದು, ಪರಿಸರದಲ್ಲಿ ಅತಿ ಹೆಚ್ಚಿನ ಅಸಮತೋಲನ ಕಂಡು ಬರುತ್ತಿದೆ. ಇದರಿಂದ ಬರ, ಅಕಾಲಿಕ ಮಳೆ ಕೆಲವೆಡೆ ಪ್ರವಾಹದಂತಹ ಪರಿಸ್ಥಿತಿಗಳು ಎದುರಾಗುತ್ತ್ತಿವೆ. ಇನ್ನು ತಾಪಮಾನವು ಸಹ ಹೆಚ್ಚುತ್ತಿದ್ದು, ತೇವಾಂಶದ ಕೊರತೆಯ ಜೊತೆಗೆ ಹೆಚ್ಚಿದ ಉಷ್ಣಾಂಶದಿಂದ ಕೆಲವೊಂದು ಬೆಳೆಗಳನ್ನು ಬೆಳೆಯಲಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಇದು ಜಾಗತಿಕ ತಾಪಮಾನದ ಪರಿಣಾಮ ಎನ್ನಬಹುದು… ಒಟ್ಟಾರೆ ಕೃಷಿ ಮತ್ತು ರೈತ ಎಲ್ಲ ಕಡೆಯಿಂದಲೂ ಪರೀಕ್ಷೆಗೆ ಒಳಪಡಲಾಗುತ್ತಿದ್ದು, ಒಂದು ಬೆಳೆಯನ್ನು ಬೆಳೆಯಲು ಹಲವಾರು ಸವಾಲುಗಳನ್ನು ಎದುರಿಸುವ ಪರಿಸ್ಥಿತಿ ಉಂಟಾಗಿದೆ. ಒಟ್ಟಾರೆ ಭಾರತದ ಕೃಷಿ ಸ್ಥಿತಿಯು ಗೊಂದಲಮಯ ಸ್ಥಿತಿಯಲ್ಲಿದೆ. ಇಲ್ಲಿಂದ ಮುಂದಕ್ಕೆ ಇಡಬೇಕಾದ ಹೆಜ್ಜೆಯನ್ನು ನಾವಿನ್ನು ಮುಂದಾಲೋಚನೆಯಿಂದ, ವಿವೇಕತನದಿಂದ ಮತ್ತು ಅತ್ಯಂತ ಜಾಗರೂಕತೆಯಿಂದ ಇಡಬೇಕಾಗಿದೆ. ನಮ್ಮ ದೇಶದ ಮಟ್ಟಿಗೆ ಕೃಷಿಯು ಕೇವಲ ಆಹಾರೋತ್ಪಾದನೆಯ ಕಾರ್ಖಾನೆಯಾಗಿರದೆ, ಅದೊಂದು ಬದುಕಿನ ಭಾಗ ಮತ್ತು ಜೀವ ವಿಧಾನವಾಗಬೇಕಿದೆ. ಸ್ವಾವಲಂಬಿ ಬದುಕಿನ ಮಾರ್ಗವಾಗಬೇಕಾಗಿದೆ. ಆದರೆ, ಆಧುನಿಕ ದಿನಗಳಲ್ಲಿ ಕೃಷಿಯು ಅಸ್ಥಿರವಾಗಿದೆ ಮತ್ತು ಎಲ್ಲದಕ್ಕೂ ಇತರರನ್ನು ಅವಲಂಬಿಸಿರುವ ಕೃಷಿಯಾಗಿದೆ… ನಾವಿನ್ನು ಬದಲಾಗಬೇಕಿದೆ. ರೈತರು ವೈಜ್ಞಾನಿಕ ತಿಳುವಳಿಕೆಯಿಂದ ಹೊಸ ತಂತ್ರಜ್ಞಾನಗಳ ಜೊತೆಗೆ ಸುಸ್ಥಿರ ಮತ್ತು ಸ್ವಾವಲಂಬಿ ಕೃಷಿ ವಿಧಾನಗಳಾದ ಸಾವಯವ ಕೃಷಿಯನ್ನು ಸಾಧ್ಯವಾದಷ್ಟು ಒಳಸುರಿಗಳನ್ನು [ರಸಾಯನಿಕ ಗೊಬ್ಬರ ಮತ್ತು ಪೀಡೆ ನಾಶಕ] ಗಳನ್ನು ನಮ್ಮಲ್ಲಿಯೇ ಉತ್ಪಾದಿಸಿ ಬಳಸುವತ್ತ ಚಿತ್ತ ಹರಿಸಬೇಕಿದೆ… ಜೊತೆಗೆ

ಸ್ವಾತ್ಮಗತ Read Post »

ಕಾವ್ಯಯಾನ

ಕಾವ್ಯಯಾನ

ಥೇಟ್ ನಿನ್ನ ಹಾಗೆ! ಸಂತೆಬೆನ್ನೂರು ಫೈಜ್ನಾಟ್ರಾಜ್ ಅದೇ ಹಾಡು ತುಟಿಗೆ ಬಂದು ವಾಪಾಸಾಯಿತು ಏಕೋ ಏನೋ ಹೀಗೆ ರಸ್ತೆಯ  ಕೊನೇ ತಿರುವಲ್ಲಿ ಕಾದಿರು ಈಗ ಬಂದೆ ಎಂದು ಮಾಯವಾದ ಥೇಟ್ ನಿನ್ನ  ಹಾಗೆ! * ಕಾಫಿಯ ಘಮವೋ ಮುಡಿದ ಮಲ್ಲಿಗೆ ಗಂಧವೋ… ಉಳಿದ ಮಾತುಗಳು ಹೇಳಲಾರದೇ ಖಾಲಿಯಾದವು…. ನಿನ್ನಂತೆ! * ನೂರು ಮಾತುಗಳು ಆಡಿದರೇನು ಬರಿದೆ; ಚಹ ಪುಡಿಯಿಲ್ಲದ ಚಹ ಕುಡಿದಂತೆ ಬರಿದೆ! * ಮುಳ್ಳ ಬೆನ್ನ ಮೇಲೆಯೇ ಗುಲಾಬಿ ಕೆಸರ ಸೊಂಟದ ಪಕ್ಕದಲ್ಲೇ ಕಮಲ ಮಣ್ಣ ಕಾಲಡಿಯೇ ಚಿನ್ನ ಕೆಸರ ರಾಡಿಯಲ್ಲೇ ಅನ್ನ ಕಷ್ಟವೆಂದೇಕೆ ಅಳುವೆ; ಅದರ ಹಿಂದೆಯೇ ಅಡಗಿದೆ ಹಿತ ನಗುತ ಮುಂಸಾಗು ಅಷ್ಟೆ! * ಭೂಮಿ ದುಂಡಗೈತೆ ಅಂತ ನಮ್ಮೇಷ್ಟ್ರು ಹೇಳಿ ನಂಬಿಸಿದ್ರು ಈಗೀಗ ಈ ಅಂತರ್ಜಾಲ ದಲ್ಲಿ ಸಿಗಬಾರದವರೆಲ್ಲಾ ಸಿಕ್ರು; ಪ್ಚ್….ನೀ ಮಾತ್ರ ಕೊನಿಗೂ ಭೇಟಿ ಆಗಲೇ ಇಲ್ಲ…ನಿಜಕ್ಕೂ ಭೂಮಿ ದುಂಡಗಿದೆಯಾ….? * ಶರಾಬು ಎಲ್ಲರನ್ನೂ ಹತ್ತಿರಕ್ಕೆ ತರುತ್ತೆ ಅನ್ನೋದಾದರೆ ಸಖಿ,ಅಂಥಾ ಸಾಮಿಪ್ಯ ನನಗೆ ಬೇಡ ಜನ ದೂರಾದರೇನಂತೆ ನಾ ನಾನಾಗಿ ಉಳಿವೆ ಬೇಡವೇ ಬೇಡ ನಶೆಯ ಜಂಜಡ!

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಅರುಣ್ ಕೊಪ್ಪ ನೀನು ನಗುತ್ತಿಲ್ಲ,ತಾರೆಯಾ ಹೊದ್ದು ಭೂಪನಂತಿದ್ದರೂ ಅಹಂಕಾರವಿಲ್ಲದ ನಿಗರ್ವಿ ನೀನು ನಿನಗಾಗಿ ಅಲ್ಲವೆ ನೀನು ಕಪ್ಪಾದ ಪಂಜರದಲ್ಲಿ ಮೌನ ಸಾಕಿ ಬೀಗುವದಿಲ್ಲ ಬಡಾಯಿ ಕೊಚ್ಚೊ ಬೊಗಳೇದಾಸನಾ ನೀನು ನಿನಗಾಗಿ ಅಲ್ಲವೆ ಮುಳ್ಳು ಮೈಗೆ ಆವರಿಸಿದರೂ ಮೊಗ ನಗು ಮೊಗ್ಗು ಹೂವುಗಳು ಕೆಲ ತಾವುಗಳಲಿ ಸುರಸುಂದರಿ ನೀನು ನಿನಗಾಗಿ ಅಲ್ಲವೆ ಸುತ್ಮೂರು ಹಳ್ಳಿಗಳ ಹಿಶೆ, ನ್ಯಾಯಕೆ ಜಗರಿ ಕೂರುವ ಒಂಟಿ ಸಲಗದಂತೆ ಬೇಕು ಬೇಡಗಳ ನುಂಗಿ, ತಂಪು ಚೆಲ್ಲುವ ತಂಗಾಳಿ ಆಲ ನೀನು ನಿನಗಾಗಿ ಅಲ್ಲವೆ ಭಕ್ತರ ಹೂವು ,ಹಾಲು ,ಗಂಧ ಸುಗಂಧಗಳ ಮೆಂದು ಬೆಳಗಿನಿಂದ ಇಡಿ ದಿನ ಒಂಟಿಯಾಗಿ ಕೂತ ದೇವ ಯೆನ್ನುವ ಮೌನ ಮುರಿಯದ ನೀನು ನಿನಗಾಗಿ ಅಲ್ಲವೇ =======

ಕಾವ್ಯಯಾನ Read Post »

ಅಂಕಣ ಸಂಗಾತಿ

ಸ್ವಾತ್ಮಗತ

ಚಿಂದೋಡಿ ಲೀಲಾ ನಾಟಕರಂಗದ ಒಂದು ಸಾಹಸ ಪಯಣ ಕೆ.ಶಿವು ಲಕ್ಕಣ್ಣವರ್ ಸುಮಾರು ಎಂಟು ದಶಕಗಳ ಇತಿಹಾಸವುಳ್ಳ ಕನ್ನಡ ವೃತ್ತಿ ನಾಟಕ ಮಂಡಲಿಯ ಒಡತಿ. ಶತಮಾನೋತ್ಸವ, ಸಹಸ್ರಮಾನೋತ್ಸವಗಳನ್ನಾಚರಿಸಿದ ನಾಟಕಗಳ ಪ್ರಧಾನ ಅಭಿನೇತ್ರಿ ಚಿಂದೋಡಿ ಲೀಲಾ ಅವರು… ಕನ್ನಡ ವೃತ್ತಿರಂಗ ಭೂಮಿಯಲ್ಲಿ ಇನ್ನೂ ಸರಿಗಟ್ಟಲಾಗದ ದಾಖಲೆಗಳನ್ನು ಸ್ಥಾಪಿಸಿದ ಸಾಹಸಿ. ಜನ್ಮ ದಾವಣಗೆರೆಯಲ್ಲಿ 1941ರಲ್ಲಿ… ತಂದೆ ಚಿಂದೋಡಿ ವೀರಪ್ಪನವರು. ಪ್ರಖ್ಯಾತ ಗಾಯಕರು, ನಟರೂ ಆಗಿದ್ದವರು. ತಾಯಿ ಶಾಂತಮ್ಮ ಗೃಹಿಣಿಯಾಗಿದ್ದರು… ಚಿಂದೋಡಿ ವೀರಪ್ಪ ದಾವಣಗೆರೆಯಲ್ಲಿ ಸ್ಥಾಪಿಸಿದ್ದ ‘ಶ್ರೀಗುರು ಕರಿಬಸವ ರಾಜೇಂದ್ರ ನಾಟಕ’ ಮಂಡಳಿ (ಕೆ.ಬಿ.ಆರ್.ಡ್ರಾಮಾ ಕಂಪನಿ) ಅಭಿನಯಸುತ್ತಿದ್ದ ಗುಲೇಬ ಕಾವಲಿ, ಕಾಳಿದಾಸ, ಸಂಪೂರ್ಣ ರಾಮಾಯಣ, ಗುಣಸಾಗರಿ ಅತ್ಯಂತ ಜನಪ್ರಿಯ ನಾಟಕಗಳಾಗಿದ್ದವು… ಮೈಸೂರಿನ ಅರಸರಾದ ಕೃಷ್ಣರಾಜ ಒಡೆಯರು ವೀರಪ್ಪನವರ ಅಭಿನಯ ಗಾಯನವನ್ನು ಮೆಚ್ಚಿ ಗಾಯನ ಗಂಧರ್ವ’ ಎಂಬ ಬಿರುದುಕೊಟ್ಟುಕೊಟ್ಟು ಚಿನ್ನದ ತೋಡಾ ನೀಡಿ ಗೌರವಿಸಿದ್ದರು.ಚಿನ್ನದ ತೋಡಾ ತೊಟ್ಟ ವೀರಪ್ಪ, ಚಿಂದೋಡಿ ವೀರಪ್ಪನಾಗಿ ಪ್ರಸಿದ್ಧರು. `ಚಿಂದೋಡಿ ಮನೆತನದ ಹೆಸರಾಗಿ ಬಳಕೆಗೆ ಬಂತು ಆಗ… ಚಿಂದೋಡಿ ವೀರಪ್ಪನವರ ಐದು ಮಂದಿ ಗಂಡು, ನಾಲ್ಕು ಹೆಣ್ಣುಮಕ್ಕಳಲ್ಲಿ ಲೀಲಮ್ಮ ಕೊನೆಯವರು; ಗಂಡು ಮಕ್ಕಳೆಲ್ಲಾ ಕಂಪನಿಯ ನಟರು. ಇವರದು ಸಂಪ್ರದಾಯಸ್ಥ ವೀರಶೈವ ಕುಟುಂಬ. ಹೆಣ್ಣುಮಕ್ಕಳು ನಾಟಕ ರಂಗಪ್ರವೇಶ ಮಾಡುವುದು ನಿಷಿದ್ಧವಾಗಿತ್ತು. ಚಿಂದೋಡಿ ವೀರಪ್ಪನವರ ಕಂಪನಿಯಲ್ಲಿ ಸ್ತ್ರೀ ಪಾತ್ರಗಳನ್ನು ಅವರ ಮಕ್ಕಳೇ ಮಾಡುತ್ತಿದ್ದರು. ಈ ಸಂಪ್ರದಾಯಕ್ಕೆ ವಿರುದ್ಧವಾಗಿ ಚಿಂದೋಡಿ ಲೀಲಾ ತಮ್ಮ 5ನೇ ವಯಸ್ಸಿನಲ್ಲಿ ರಂಗಪ್ರವೇಶ ಮಾಡಿದರು. ಶಿವಯೋಗಿ ಸಿದ್ಧರಾಮ ನಾಟಕದಲ್ಲಿ ಬಾಲ ಸಿದ್ಧರಾಮನ ಪಾತ್ರ ಮಾಡಿದರು. ಬಾಲ ನಟಿಯ ಅಭಿನಯ ಜನಕ್ಕೆ ಮೆಚ್ಚುಗೆಯಾಯಿತು. ಪುರುಷರೇ ಸ್ತ್ರೀಪಾತ್ರ ನಿರ್ವಹಿಸುತ್ತಿದ್ದ ಕಾಲವದು. ಬದಲಾವಣೆ ಮಾಡಬಾರದೇಕೆ? ಎಂಬ ಕಲ್ಪನೆ ಬಂದದ್ದೇ ತಡ. ಲೀಲಮ್ಮ ತಮ್ಮ 14ನೇ ವಯಸ್ಸಿನಲ್ಲಿಹಳ್ಳಿಹುಡುಗಿ’ ನಾಟಕದಲ್ಲಿ ಪ್ರಧಾನ ಸ್ತ್ರೀ ಪಾತ್ರ ನಿರ್ವಹಿಸಿದವರು. ಚೂಟಿಯಾದ ಚೆಲುವಿನ ಕಿಶೋರಿಯ ಅಭಿನಯಕ್ಕೆ ಸರ್ವತ್ರ ಮೆಚ್ಚುಗೆ ಪ್ರಶಂಸೆ ಬಂತು ನಾಟಕ ಪ್ರೀಯರಿಂದ. ಆ ನಂತರ ಚಿಂದೋಡಿ ಲೀಲಾ ಹಿಂತಿರುಗಿ ನೋಡಲಿಲ್ಲ. ರಂಗಕ್ಕೆ ಪ್ರವೇಶ ಮಾಡಿ 50 ವರ್ಷಗಳಾದರೂ ನಿರ್ಗಮನ ಕಾಣಲಿಲ್ಲ… ಚಿಂದೋಡಿ ವೀರಪ್ಪನವರ ಐದು ಮಂದಿ ಗಂಡು, ನಾಲ್ಕು ಹೆಣ್ಣುಮಕ್ಕಳಲ್ಲಿ ಲೀಲಮ್ಮ ಕೊನೆಯವರು; ಗಂಡು ಮಕ್ಕಳೆಲ್ಲಾ ಕಂಪನಿಯ ನಟರು. ಇವರದು ಸಂಪ್ರದಾಯಸ್ಥ ವೀರಶೈವ ಕುಟುಂಬ. ಹೆಣ್ಣುಮಕ್ಕಳು ನಾಟಕ ರಂಗಪ್ರವೇಶ ಮಾಡುವುದು ನಿಷಿದ್ಧವಾಗಿತ್ತು. ಚಿಂದೋಡಿ ವೀರಪ್ಪನವರ ಕಂಪನಿಯಲ್ಲಿ ಸ್ತ್ರೀ ಪಾತ್ರಗಳನ್ನು ಅವರ ಮಕ್ಕಳೇ ಮಾಡುತ್ತಿದ್ದರು. ಈ ಸಂಪ್ರದಾಯಕ್ಕೆ ವಿರುದ್ಧವಾಗಿ ಚಿಂದೋಡಿ ಲೀಲಾ ತಮ್ಮ 5ನೇ ವಯಸ್ಸಿನಲ್ಲಿ ರಂಗಪ್ರವೇಶ ಮಾಡಿದರು. ಶಿವಯೋಗಿ ಸಿದ್ಧರಾಮ ನಾಟಕದಲ್ಲಿ ಬಾಲ ಸಿದ್ಧರಾಮನ ಪಾತ್ರ ಮಾಡಿದರು. ಬಾಲ ನಟಿಯ ಅಭಿನಯ ಜನಕ್ಕೆ ಮೆಚ್ಚುಗೆಯಾಯಿತು. ಪುರುಷರೇ ಸ್ತ್ರೀಪಾತ್ರ ನಿರ್ವಹಿಸುತ್ತಿದ್ದ ಕಾಲವದು. ಬದಲಾವಣೆ ಮಾಡಬಾರದೇಕೆ? ಎಂಬ ಕಲ್ಪನೆ ಬಂದದ್ದೇ ತಡ. ಲೀಲಮ್ಮ ತಮ್ಮ 14ನೇ ವಯಸ್ಸಿನಲ್ಲಿಹಳ್ಳಿಹುಡುಗಿ’ ನಾಟಕದಲ್ಲಿ ಪ್ರಧಾನ ಸ್ತ್ರೀ ಪಾತ್ರ ನಿರ್ವಹಿಸಿದವರು. ಚೂಟಿಯಾದ ಚೆಲುವಿನ ಕಿಶೋರಿಯ ಅಭಿನಯಕ್ಕೆ ಸರ್ವತ್ರ ಮೆಚ್ಚುಗೆ ಪ್ರಶಂಸೆ ಬಂತು ನಾಟಕ ಪ್ರೀಯರಿಂದ. ಆ ನಂತರ ಚಿಂದೋಡಿ ಲೀಲಾ ಹಿಂತಿರುಗಿ ನೋಡಲಿಲ್ಲ. ರಂಗಕ್ಕೆ ಪ್ರವೇಶ ಮಾಡಿ 50 ವರ್ಷಗಳಾದರೂ ನಿರ್ಗಮನ ಕಾಣಲಿಲ್ಲ… 1960-1975ರವರೆಗಿನ ಅವಧಿಯಲ್ಲಿ ಕೆ.ಬಿ.ಆರ್. ಡ್ರಾಮಾ ಕಂಪನಿ ಗುಣಸಾಗರಿ, ಲಂಕಾದಹನ, ಚಿತ್ರಾಂಗದ, ಶಾಕುಂತಲ, ಹಳ್ಳಿಹುಡುಗಿ ಮೊದಲಾದ ನಾಟಕಗಳನ್ನು ಕರ್ನಾಟಕದ ಹಳ್ಳಿಹಳ್ಳಿಗಳಲ್ಲಿ ಸಹಸ್ರಾರು ಪ್ರದರ್ಶನಗಳನ್ನು ನೀಡಿತ್ತು. ಆದರೆ ಇವುಗಳಲ್ಲಿ ಅತ್ಯಂತ ಜನಪ್ರಿಯವಾದುದು, ಚಿಂದೋಡಿ ಲೀಲಾ ಪಾತ್ರ – ಹಳ್ಳಿ ಹುಡುಗಿ’ ಪಾತ್ರ ಕರ್ನಾಟಕದಲ್ಲಿ ಆ ಪಾತ್ರ ಮನೆ ಮಾತಾಯಿತು. ಲೀಲಾ ಅವರನ್ನುಹಳ್ಳಿ ಹುಡುಗಿ’ ಎಂದೇ ಅಭಿಮಾನಿ ಪ್ರೇಕ್ಷಕರು ಗುರುತಿಸುತ್ತಿದ್ದರು… ಗಡಿ ನಾಡಿನಲ್ಲಿ ಕನ್ನಡದ ಜಯಭೇರಿ ಬಾರಿಸುವ ಬಯಕೆ, ಬೆಳಗಾವಿಯಲ್ಲಿ ಕ್ಯಾಂಪ್. ಅಭಿನಯಿಸಿದ ನಾಟಕಗಳೆಲ್ಲಾ ಶತದಿನೋತ್ಸವ ಆಚರಿಸಿದವು. ಗಡಿ ಭಾಗದಲ್ಲಿ 2000 ಕನ್ನಡ ನಾಟಕಗಳ ಪ್ರದರ್ಶನ ನೀಡಿದ್ದಕ್ಕಾಗಿ ಕರ್ನಾಟಕ ರಾಜ್ಯಪಾಲ ಎ.ಎನ್ ಬ್ಯಾನರ್ಜಿ ಅಧ್ಯಕ್ಷತೆಯಲ್ಲಿ ವಿಶೇಷ ಉತ್ಸವವೇ ನಡೆಯಿತು. ಗಡಿನಾಡಿನಲ್ಲಿ ನಡೆಸಿದ ಕಲಾ ಸೇವೆ ಮೆಚ್ಚಿ ಸರ್ಕಾರ ತಾತ್ಕಾಲಿಕ ರಂಗಮಂದಿರ ನಿರ್ಮಿಸಿದ್ದ ಜಮೀನನ್ನೇ 30 ವರ್ಷಗಳ ಗುತ್ತಿಗೆಗೆ ನೀಡಿತು. ಅಲ್ಲಿ ಈಗ `ಚಿಂದೋಡಿ ಲೀಲಾ ರಂಗಮಂದಿರ’ ನಿರ್ಮಾಣವಾಗಿದೆ. ಬೆಳಗಾವಿಯ ಉತ್ತರ ಭಾಗದ ಜನರಿಗೆ ಅನುಕೂಲವಾಗಲೆಂದು, ಸದಾಶಿವ ನಗರದಲ್ಲಿ ಕೆ.ಬಿ.ಆರ್. ಕನ್ನಡ ಸಂಸ್ಕೃತಿ ಕೇಂದ್ರ ರಂಗಮಂದಿರ ನಿರ್ಮಿಸಿದ್ದಾರೆ… 1950-60ರ ದಶಕದ ನಂತರ ಹಿರಣ್ಣಯ್ಯ ಮಿತ್ರ ಮಂಡಲಿಯಂತಹ ಸಂಸ್ಥೆಗಳನ್ನು ಬಿಟ್ಟರೆ, ವೃತ್ತಿಪರ ನಾಟಕ ಸಂಸ್ಥೆಗಳ ಚಟುವಟಿಕೆ ಬೆಂಗಳೂರಿನಲ್ಲಿ ಕಂಡು ಬರುತ್ತಿರಲಿಲ್ಲ. ಚಿಂದೋಡಿ ಲೀಲಾ ಬೆಂಗಳೂರಿನಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಲೆಂದು 1995ರ ಅಕ್ಟೋಬರ್‍ನಲ್ಲಿ ಬಂದರು. ಬೆಂಗಳೂರಿನ ಹೃದಯ ಭಾಗದಲ್ಲಿರುವ ಗುಬ್ಬಿ ವೀರಣ್ಣ ಚಿತ್ರಮಂದಿರದಲ್ಲಿ ಆರಂಭವಾದ `ಪೊಲೀಸನ ಮಗಳು’ ನಾಟಕ, ಸತತ ಮೂರು ವರ್ಷಗಳು ನಡೆಯಿತು. ದಿನಕ್ಕೆರಡು ಪ್ರದರ್ಶನ. ಒಂದೇ ನಾಟಕ, ಒಂದೇ ತಂಡದಿಂದ. ದಿನಕ್ಕೆ ಎರಡು ಮೂರು ಪ್ರದರ್ಶನದಂತೆ ನಿರಂತರವಾಗಿ 1135 ಪ್ರದರ್ಶನಗಳನ್ನು ಕಂಡಿತು. ಈ ಯಶಸ್ಸಿನ ಕೇಂದ್ರ ಬಿಂದು ಪ್ರಧಾನ ಪಾತ್ರಧಾರಿ ಚಿಂದೋಡಿ ಲೀಲಾರವರೇ ಎಂದು ಹೇಳಿದರೆ ತಪ್ಪಾಗಲಾರದು… ಬೆಂಗಳೂರಿನಲ್ಲಿ ಅಪೂರ್ವ ಯಶಸ್ಸು ಸಾಧಿಸಿದ ಪೊಲೀಸನ ಮಗಳು’ ಕರ್ನಾಟಕದ ಎಲ್ಲೆಡೆ ಪ್ರದರ್ಶಿತವಾಗಿದೆ. ಒಟ್ಟು 3340 ಪ್ರದರ್ಶನ ಕಂಡ ನಾಟಕ, ಗಿನ್ನೆಸ್ ದಾಖಲೆಗೆ ಸೇರಲಿರುವ ವೃತ್ತಿ ನಾಟಕ ಸಂಸ್ಥೆಯ ನಾಟಕವದು. ಚಿಂದೋಡಿ ಲೀಲಾ ಪ್ರಧಾನ ಭೂಮಿಕೆಯಲ್ಲಿರುವ ಇನ್ನೊಂದು ನಾಟಕಧರ್ಮದ ದೌರ್ಜನ್ಯ’ ಅನೇಕ ಊರುಗಳಲ್ಲಿ ಶತದಿನೋತ್ಸವ ಪ್ರದರ್ಶನಗೊಂಡ ನಾಟಕವಾಯಿತು. ಈ ನಾಟಕದಲ್ಲಿ ಚಿಂದೋಡಿ ಲೀಲಾ ಪೊಲೀಸ್ ಸೂಪರಿಂಟೆಂಡ್ `ಜ್ಯೋತಿ’ ಯಾಗಿ ಅಭಿನಯಿಸಿದ್ದಾರೆ. ಹಳ್ಳಿ ಹುಡುಗಿಯಂತೆಯೇ ಪ್ರಸಿದ್ಧವಾದ ಪಾತ್ರ. ಶಾಕುಂತಲ, ಚಿತ್ರಾಂಗದ, ಲಂಕಾ ದಹನ, ಮಹರಾವಣ, ಸಿಂಡಿಕೇಟ್-ಇಂಡಿಕೇಟ್, ಬ್ರಹ್ಮಚಾರಿಯ ಮಗ-ಇವು ಚಿಂದೋಡಿ ಲೀಲಾ ಅಭಿನಯದ ಪ್ರಮುಖ ನಾಟಕಗಳು ಮತ್ತು ಜನಪ್ರಿಯ ನಾಟಕಗಳು… ಚಿಂದೋಡಿ ವೀರಪ್ಪ 1928ರಲ್ಲಿ ಸ್ಥಾಪಿಸಿದ ಕೆ.ಬಿ.ಆರ್. ಡ್ರಾಮಾ ಕಂಪನಿ, ಇಂದಿಗೂ ಜೀವಂತ. ಕುಟುಂಬದ ಮೊದಲ ಬಂಗಾರ ತೋಡಾಧಾರಿಯಾದ ವೀರಪ್ಪ ನಿಧನಾನಂತರ, ಅವರ ಹಿರಿಯ ಮಗ ಚಿಂದೋಡಿ ವೀರಪ್ಪ ನೇತೃತ್ವದಲ್ಲಿ ಕಂಪನಿ ಮುಂದುವರೆಯಿತು. ಎರಡನೇ ವೀರಪ್ಪನವರ ನಿಧನಾನಂತರ, 1978ರಲ್ಲಿ ಕಂಪನಿ ಕುಟುಂಬದಲ್ಲಿ ಮೂರು ಕವಲಾಗಿ ಹಂಚಿ ಹೋಯಿತು. ಕೆಲ ಕಾಲಾನಂತರ ಆ ಮೂರು ಸಂಸ್ಥೆಗಳು ಚಿಂದೋಡಿ ಲೀಲಾ ನೇತೃತ್ವದಲ್ಲಿ ಮುನ್ನಡೆದವು. ಈಗ ಅವು ಮೂರು ಮತ್ತೆ ಒಂದಾಗಿವೆ; ಲೀಲಾ ಸಾರಥ್ಯದಲ್ಲಿ ಮುಂದುವರೆದವು. ಸಂಸ್ಥೆಯ ಕೇಂದ್ರ ಸ್ಥಾನವಾದ ದಾವಣಗೆರೆಯಲ್ಲಿ `ಚಿಂದೋಡಿ ಲೀಲಾ ಕಲಾಕ್ಷೇತ್ರ ನಿರ್ಮಾಣ ಕಾರ್ಯ ಮುಗಿದಿದೆ ಈಗ. ಆಧುನಿಕ ಉಪಕರಣಗಳಿಂದ ಕೂಡಿದ ಅತ್ಯಾಧುನಿಕ ರಂಗಮಂದಿರ ಸಿದ್ಧವಾಗಿದೆ… ಕನ್ನಡ ವೃತ್ತಿಪರ ನಾಟಕ ಸಂಸ್ಕೃತಿ ಪರಿಚಯ ಕಾರ್ಯಕ್ರಮದ ಅಂಗವಾಗಿ ಕಾಸರಗೋಡಿನಿಂದ ಕಾಶಿಯವರೆಗೆ ರಂಗಯಾತ್ರೆ ನಡೆಸಿದ್ದಾರೆ. ಈ ರಂಗಯಾತ್ರೆ ಕಾಲದಲ್ಲಿ ಅನೇಕ ನಗರಗಳಲ್ಲಿ ವಿಚಾರ ಸಂಕೀರ್ಣ ನಡೆಸಿ, ನಾಟಕಗಳನ್ನು ಪ್ರದರ್ಶಿಸಲಾಯಿತು. ಕರ್ನಾಟಕ ಸರಕಾರದ ನೆರವಿನಿಂದ ಬ್ರಿಟನ್ ಮತ್ತಿತರ ದೇಶಗಳಿಗೆ ಹೋಗಿ ಅಲ್ಲಿಕಿತ್ತೂರು ಚೆನ್ನಮ್ಮ ಟಿಪ್ಪೂ ಸುಲ್ತಾನ್,ಜಗಜ್ಯೋತಿ ಬಸವೇಶ್ವರ ನಾಟಕಗಳನ್ನೂ ಪ್ರದರ್ಶಿಸಿದ್ದಾರೆ… ಚಿಂದೋಡಿ ಲೀಲಾ ಅವರಿಗೆ ಸರ್ಕಾರವಲ್ಲದೆ ಖಾಸಗಿ ಸಂಘ ಸಂಸ್ಥೆಗಳು, ಗುರು ಮಠಗಳೂ ಸನ್ಮಾನಿಸಿವೆ. ಅನೇಕ ಪ್ರಶಸ್ತಿಗಳನ್ನು ನೀಡಿವೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿ (1985), ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ (1994), ಪ್ರತಿಷ್ಠಿತ ಗುಬ್ಬಿ ವೀರಣ್ಣ ಪ್ರಶಸ್ತಿ (2003)-ಮೊದಲಾದ ಪ್ರತಿಷ್ಠಿತ ಪ್ರಶಸ್ತಿಗಳಿಂದ ಸನ್ಮಾನಿತರಾಗಿರುವ ಈ ಕಲಾವಿದೆಗೆ ಕೇಂದ್ರ ಸರ್ಕಾರ `ಪದ್ಮಶ್ರೀ ಪ್ರಶಸ್ತಿ (1988) ನೀಡಿ ಗೌರವಿಸಿದೆ… ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿ (1987) ಅನಂತರ ಅಧ್ಯಕ್ಷೆಯಾಗಿ(1991) ರಂಗಭೂಮಿಗೆ ಗಣನೀಯ ಸೇವೆ ಸಲ್ಲಿಸಿದ್ದಾರೆ ಚಿಂದೋಡಿ ಲೀಲಾ… ಕನ್ನಡದ ಕೆಲವು ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ನಿರೀಕ್ಷಿಸಿದ ಪ್ರೋತ್ಸಾಹ ದೊರೆಯದ ಕಾರಣ, ನಾಟಕ ರಂಗದಲ್ಲೇ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಂಡರು. ಸೋದರಳಿಯ ಬಂಗಾರೇಶ್ (ಅಣ್ಣ ಚಿಂದೋಡಿ ವೀರಪ್ಪನ ಮಗ) ನಿರ್ದೇಶನದ ಚಿಂದೋಡಿ ಲೀಲಾ ನಿರ್ಮಿಸಿದ `ಗಾನಯೋಗಿ ಪಂಚಾಕ್ಷರಿ ಗವಾಯಿ’ ಚಿತ್ರಕ್ಕೆ ರಾಷ್ಟ್ರಪತಿಗಳ ಸ್ವರ್ಣಕಮಲ ಪ್ರಶಸ್ತಿ ದೊರಕಿರುವುದು ತೃಪ್ತಿ ತಂದಿದೆ. ಕರ್ನಾಟಕ ಸರಕಾರ ಗಾನಯೋಗಿ ಚಿತ್ರಕ್ಕೆ 1995-96ರ ಅತ್ಯುತ್ತಮ ಚಿತ್ರ ಪ್ರಶಸ್ತಿ (ನಿರ್ದೇಶಕ: ಚಿಂದೋಡಿ ಬಂಗಾರೇಶ್), ಅತ್ಯುತ್ತಮ ಪೋಷಕ ನಟ ಪ್ರಶಸ್ತಿ (ಗಿರೀಶ್ ಕಾರ್ನಾಡ್), ಅತ್ಯುತ್ತಮ ಸಂಗೀತ ನಿರ್ದೇಶಕ (ಹಂಸಲೇಖ) ನೀಡಿ ಗೌರವಿಸಿದೆ… ಹೀಗೆ ಸಾಗಿತ್ತು ಚಿಂದೋಡಿ ಲೀಲಾ ನಾಟಕ ಮತ್ತು ಅಭಿನಯದ ಪಯಣ. ಚಿಂದೋಡಿ ಲೀಲಾ ಮರೆಯಾದರೂ ಇನ್ನೂ ಈ ನಾಟಕ ಕಂಪನಿಯ ಪ್ರಯತ್ನವಿನ್ನೂ ಮುಂದುವರಿದೇ. ಯಾವುದಕ್ಕೂ ನಾವು ಇಂತಹ ವೃತ್ತಿ ರಂಗದ ನಾಟಕ ಕಂಪನಿ ಉಳಿಸಿ ಬೆಳೆಸಬೇಕಾಗಿದೆ…

ಸ್ವಾತ್ಮಗತ Read Post »

ಅನುವಾದ

ಅನುವಾದ ಸಂಗಾತಿ

ಮೂಲ-ಜಯಂತ ಮಹಾಪಾತ್ರ ಒರಿಸ್ಸಾದ ಭಾರತೀಯ ಆಂಗ್ಲ ಕವಿ ಅನುವಾದ–ಕಮಲಾಕರ ಕಡವೆ “ಪುರಿಯಲ್ಲಿ ಬೆಳಗು” ಕೊನೆಯಿರದ ಕಾಗೆಗಲಭೆಪವಿತ್ರ ಮರಳಲ್ಲಿ ತಲೆಬುರುಡೆಯೊಂದುಹಸಿವಿನೆಡೆಗೆ ವಾಲಿಸುತ್ತದೆ ಖಾಲಿ ದೇಶವನ್ನು. ಬಿಳಿತಳೆದ ವಿಧವೆಯರುತಮ್ಮ ಬಾಳಿನ ಮಧ್ಯದಾಚೆಮಹಾಮಂದಿರದೊಳಗೆ ಹೊಗಲು ಕಾದಿದ್ದಾರೆ. ಅವರ ವಿರಕ್ತ ಕಣ್ಣುಗಳುಬಲೆಯಲ್ಲಿ ಸಿಕ್ಕಿಬಿದ್ದವರಂತೆ ದಿಟ್ಟಿಸುತ್ತವೆ,ಬೆಳಬೆಳಗ್ಗೆ ಶ್ರದ್ಧೆಯ ಬೆಳಗಿನೆಳೆಗೆ ಜೋತುಬಿದ್ದು. ನಿತ್ರಾಣ ಮುಂಜಾನೆ ಬೆಳಕಿಗೆ ಬಿದ್ದಿವೆಒಂದನಿನ್ನೊಂದು ಆತಿರುವ ಪಾಳು ತೊನ್ನುಭರಿತ ಚಿಪ್ಪುಗಳು,ಹೆಸರಿರದೆ ಕುಗ್ಗಿಹೋದ ಮುಖಗಳ ಮುಂದೆ, ತಟ್ಟನೆ ನನ್ನ ತೊಗಲೊಳಗಿಂದ ಹೊರಬೀಳುವ ಬಿಕ್ಕುಸೇರುತ್ತದೆ ಏಕಾಕಿ ಮಂಕು ಚಿತೆಯೊಂದರ ಹೊಗೆಯನನ್ನ ಮುದಿ ಅಮ್ಮನ ಕವಿಯುವ ಧಗೆಯ: ತನ್ನನಿಲ್ಲಿ ಸುಡಬೇಕೆಂಬ ಅವಳ ಕೊನೆಯಾಸೆನೆಲೆಬದಲುವ ಮರಳದಿಣ್ಣೆಯ ಮೇಲೆಬೆಳಕಂತೆ ಸಂದಿಗ್ಧವಾಗಿ ತಿರುಚಿ. ಮೂಲ ಕವಿತೆ: Endless crow noisesA skull in the holy sandstilts its empty country towards hunger. White-clad widowed Womenpast the centers of their livesare waiting to enter the Great Temple Their austere eyesstare like those caught in a nethanging by the dawn’s shining strands of faith. The fail early light catchesruined, leprous shells leaning against one another,a mass of crouched faces without names, and suddenly breaks out of my hideinto the smoky blaze of a sullen solitary pyrethat fills my aging mother: her last wish to be cremated heretwisting uncertainly like lighton the shifting sands

ಅನುವಾದ ಸಂಗಾತಿ Read Post »

ಕಾವ್ಯಯಾನ

ಕಾವ್ಯಯಾನ

ಮೌನದ ಹಾಡು ದೇವು ಮಾಕೊಂಡ, ಸಿಂದ್ಗಿ ಇಳಿಸಂಜೆಯ ಒಬ್ಬಂಟಿತನದಲಿ ಮೈನೆರೆದು ನಿಂತ ಮುಳ್ಳುಕಂಟಿಗಳ ನಡುವೆ ಬೆಣ್ಣೆಯುಂಡೆಯಾಗಿದ್ದೇನೆ ಹೆಪ್ಪುಗಟ್ಟಿವೆ ಕ್ರೀಯೆಗಳು ಬಂಡೆಗಲ್ಲಿನ ಹಾಗೆ ಪತರಗುಟ್ಟುತ್ತಿವೆ ಭಾವಗಳು ಚಪ್ಪರದಂತೆ ನಿಷ್ಕ್ರೀಯಗೊಂಡಿದೆ ಚಲನೆ ಸೀಮೆಗಲ್ಲಿನಷ್ಟು ಮಧು ಕುಡಿದು ಎದೆಚುಚ್ಚುವ  ರಣಹದ್ದುಗಳದ್ದೇ ಕಾರುಬಾರುವಿಲ್ಲಿ ಅದಕ್ಕೆಂದೆ ಹೂವುಗಳು ರಾತ್ರಿಯೆದ್ದು ಹಗಲು ಮಲಗುತ್ತವೆ ಕರಾಳ ಬೆಳಕಿಗಂಜಿ ಹೆಪ್ಪುಗಟ್ಟಿದ ಬೆಳಕಿಗೆ ನೆರಳುಗಳಾಡಿಸುವ  ಹಗಲು ರಾತ್ರಿಗಳ ಪಂಜೆಗಳು ವಿಭೇದಿಸುವ ಕಪ್ಪು ನೆಲವೇ ರೂಪರೇಖೆ ನಮ್ಮೊಳಗಿನ ಮೌನದ ಹಾಡೆ ಸುಖದ ಹೆರಿಗೆ

ಕಾವ್ಯಯಾನ Read Post »

ಕಾವ್ಯಯಾನ

ಗಝಲ್

ಗಝಲ್ ಸುಜಾತ ರವೀಶ್ ಬಾಳಬಾನಲಿ ಹೊಂಬೆಳಕಾಗಿ ಬಂದೆ ಏನಿರಲಿಲ್ಲ ಕಾರಣ ಇಂದೀಗ ಅಮಾವಾಸ್ಯೆಯ ಕಗ್ಗತ್ತಲು ತಿಳಿಯುತ್ತಿಲ್ಲ ಕಾರಣ ಜೀವನವನದಿ ಅರಳಿ ನಗುತ್ತಿದ್ದವು ಸುಂದರ ಹೂಗಳು ಈಗೆಲ್ಲಾ ಬರೀ ಬೋಳು ಬರಡು ಅರಿಯಲಾಗುತ್ತಿಲ್ಲ ಕಾರಣ ಜೀವ ವೀಣೆ ಮಿಡಿದು ಅಂದು ಹೊರಟಿತ್ತು ಒಂದು ಸುಶ್ರಾವ್ಯ ಗಾನ ತಂತಿ ಏಕೋ ಮುರಿದು ಅಪಸ್ವರ ಕೇಳಲಾಗುತ್ತಿಲ್ಲ ಕಾರಣ ಹೊಸ ಹೊಸ ಆಸೆ ತರಂಗಗಳು ಗಗನದೆತ್ತರ ವಿಸ್ತಾರ ಅಗಲಿಕೆಯ ಬಿರುಗಾಳಿ ಏಕೆ ಹೇಳಲಾಗುತ್ತಿಲ್ಲ ಕಾರಣ ಹಂಬಲಗಳ ನವ ಕನಸುಗಳು ಮೂಡಿಸಿದ್ದವು ಚಿತ್ತಾರ ದುಃಖಿತೆ ವಿರಹಿಣಿ ಸುಜಿಗೆ ನೀ ಹೇಳಿಹೋಗಲಿಲ್ಲ ಕಾರಣ

ಗಝಲ್ Read Post »

ಕಾವ್ಯಯಾನ

ಕಾವ್ಯಯಾನ

ಪುಣ್ಯವಂತೆ… ಅವ್ಯಕ್ತ ಕಾಣಲಿರುವ ಒಡನಾಟದ ಚುಕ್ಕಿಯಾಗಿ ಬಂದಳು ಕನಸುಗಳ ಹೊತ್ತು ನನಸ ಮಾಡುವ ಬಿರುಸಿನಲಿ ಮಿಡಿಯೋ ಮನಸುಗಳಿಗೆ ಮಿಲನದ ಔತಣವನಿಟ್ಟು ಮುಗಿಲೆತ್ತರದ ಭಾವಗಳ ಮುಟ್ಪಿಬರುವ ರೆಕ್ಕೆ ಹೊತ್ತು ನೋವುಗಳ ನುಂಗಿ ನಗುತ ನಲಿಸುವ ಕಲೆಯೇ ಸುಂದರ ಅಂತ್ಯದೆಡೆಗೆ ಹೂಹಾಸಿ ನಲಿಯುತ ಹರಿಯುವುದೇ ಸುಂದರ ತುಸು ಕ್ಷಣದ ಹನಿಗಳಲಿ ,ಮೈಮರೆತು ಲೀನಳಾಗಿ.. ನಿನ್ನಲ್ಲೆಲ್ಲೋ ನನ್ನ ಕಂಡೆ ನನ್ನಲ್ಲೆಲ್ಲೋ ನಿನ್ನ ಕಂಡೆ. ಕಣ್ರೆಪ್ಪೆ ಮಿಟುಕಿಸುವಷ್ಟರಲ್ಲಿ ಹೇಳದೇ ಮಾಯವಾಗುವವರಲ್ಲಿ, ಹೇಳಿಹೋದ ಸೌಂದರ್ಯ ಕನಿಕೆ.. ಸಾಧನೆಯ ಪುಟಗಳಲ್ಲಿ ಮಿನುಗುನಕ್ಷತ್ರ.. ನೀನಿಲ್ಲದೆ ನೀನಿಲ್ಲಿರುವೆ, ನೀನಳಿದರು ಅಳಿಯದೆ ಹೊಳೆಯುತಿರುವೆ, ತಂಪಾದ ಗಾಳಿಯಲ್ಲಿ ಸೊಂಪಾದ ಪರಿಮಳದಂತೆ, ತಿಳಿ ನೀರಿನಲಿ ಅಡಗಿರುವ ಸವಿರುಚಿಯಂತೆ, ಕಣ್ಣೀರಿನ ಅಂಚಿನಲಿ ಸಿಹಿ ನೆನಪುಗಳ ನಗುವಿನಂತೆ, ನೀನೆ ಪುಣ್ಯವಂತೆ…. ಅತಿ ವಿರಳ ಉಡುಗೊರೆ ನಿನ್ನದಾಗಿದೆ.. ಮನಗಳ ಅರಮನೆಯಲ್ಲಿ ನಿನಗೊಂದು ಶಾಶ್ವತ ಸ್ಥಾನವಿದೆ! ಆತ್ಮಕ್ಕಿಂದು ಎನ್ನ ಮನದಾಳದ ನಮನ

ಕಾವ್ಯಯಾನ Read Post »

ಇತರೆ

ಅನಿಸಿಕೆ

ಸಿಂಪಿ’ಲ್ಲಾಗ್ ಒಂದು ಲವ್ ಸ್ಟೋರಿ ಶ್ರೀವತ್ಸ ಜೋಶಿ ಅದು ಸ್ವಾತಿ ಮಳೆಯೇ ಇರಬೇಕು! ನಿನ್ನ ಎದೆಯಿಂದ ಜಾರಿದ ಹನಿಯೊಂದು ನನ್ನ ತುಟಿ ಸಿಂಪಿಯ ಸೇರಿ ಈಗ- ಮುತ್ತಾಗಿದೆ ! @ಡಾ.ಗೋವಿಂದ ಹೆಗಡೆ ‘ಸಿಂಪಿ’ಲ್ಲಾಗ್ ಒಂದು ಲವ್ ಸ್ಟೋರಿ ಹುಬ್ಬಳ್ಳಿಯಲ್ಲಿ ಅರಿವಳಿಕೆ ತಜ್ಞರಾಗಿರುವ ಡಾ. Govind Hegdeಯವರು ಒಬ್ಬ ಸೂಕ್ಷ್ಮಮನಸ್ಸಿನ, ಕವಿಹೃದಯದ ಕವಿ. ಪ್ರಚಾರ ಬಯಸದ ಪ್ರತಿಭಾವಂತ. ಕನ್ನಡದಲ್ಲಿ ಹನಿಗವನಗಳನ್ನು, ಕಬೀರನ ‘ದೋಹಾ’ಗಳಂತಿರುವ ದ್ವಿಪದಿಗಳನ್ನು, ಪೂರ್ಣಪ್ರಮಾಣದ ಕವಿತೆಗಳನ್ನೂ ಬರೆಯುತ್ತಿರುತ್ತಾರೆ. ನೂರಕ್ಕೂ ಹೆಚ್ಚು ಕನ್ನಡ ಗಜ಼ಲ್‌ಗಳನ್ನು ಬರೆದಿದ್ದಾರೆ. ಅವುಗಳನ್ನು ಯಾರಾದರೂ ಉತ್ತಮ ಗಾಯಕ/ಗಾಯಕಿಯರು ಹಾಡಿದರೆ ಶ್ರೇಷ್ಠ ಮಟ್ಟದ ಧ್ವನಿಸಂಪುಟ ಆಗಬಲ್ಲದು. ‘ರಾಧೆಯೊಲವಲಿ ಮಗ್ನ ನೀನು ಪ್ರೇಮರೂಪಿ ಮಾಧವ’ ಎಂಬ ಕವಿತೆಯ ಸಂದರ್ಭದಲ್ಲಿ ಡಾ. ಗೋವಿಂದ ಹೆಗಡೆಯವರನ್ನು ತಿಳಿರುತೋರಣ ಅಂಕಣದಲ್ಲಿಯೂ ಒಮ್ಮೆ ಪರಿಚಯಿಸಿದ್ದೆ. ಇದು, ಡಾ.ಗೋವಿಂದ ಹೆಗಡೆಯವರು (ನಾನವರನ್ನು “Dr.G” ಎಂದು ಕರೆಯುತ್ತೇನೆ) ಇವತ್ತು ಈಗಷ್ಟೇ ರಚಿಸಿ ಹಂಚಿಕೊಂಡಿರುವ honeyಗವನ. ಇದಕ್ಕೆ “ಸಿಂಪಿಲ್ಲಾಗ್ ಒಂದು ಲವ್ ಸ್ಟೋರಿ” ಎಂಬ ಶೀರ್ಷಿಕೆ ನನ್ನ ಕಡೆಯಿಂದ ಮೆಚ್ಚುಗೆಯ ರೂಪದಲ್ಲಿ. “ಈ ಲವ್ ಸ್ಟೋರಿಗೆ ಹೆತ್ತವರಿಂದ/ಸಮಾಜದಿಂದ ವಿರೋಧ ಬಂದರೆ, ‘ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ’ ಎಂದು ಸುಮ್ಮನಾಗಬೇಕಾದರೆ, ಸಿಂಪಿ ಸಿಂಪಿಗನಾಗಬೇಕಾಗುತ್ತದೆ!” ಎಂದು ತಮಾಷೆ ಪ್ರತಿಕ್ರಿಯೆಯನ್ನೂ ಸೇರಿಸಿದ್ದೆ. ಸಿಂಪಿ (ಮೂಲ ಮರಾಠಿ ‘ಸಿಂಪೀ’) = ಸಮುದ್ರ ತೀರದಲ್ಲಿ ದೊರೆಯುವ ಗಟ್ಟಿ ಕವಚವುಳ್ಳ ಒಂದು ಪದಾರ್ಥ, ಶುಕ್ತಿ. ಸಿಂಪಿಗ = ಬಟ್ಟೆ ಹೊಲಿಯುವವನು, ದರ್ಜಿ.

ಅನಿಸಿಕೆ Read Post »

You cannot copy content of this page

Scroll to Top