ಪ್ರಬಂಧ
ಶ್ರೀದೇವಿ ಕೆರೆಮನೆ
ಪ್ರಬಂಧ
ಮನೆಯ ತಿಂಡಿ
ಮಳೆಗಾಲದ ಆರಂಭ ಮತ್ತು ಮೀನು ಶಿಕಾರಿ… ರಮೇಶ್ ನೆಲ್ಲಿಸರ ‘ಮಳ್ಗಾಲ ಅನ್ನೋದ್ ಯಾವಾಗ್ ಬಂದ್ ಈ ಸುಡ್ಗಾಡ್ ಶೆಕೀನ ಹೊತ್ಕಂಡ್ ಹೋಯ್ತದೋ ಆ ದ್ಯಾವ್ರೆ ಬಲ್ಲ’, ಅಂತ ಬೇಸ್ಗೀಲಿ ಹಾಗೇಯ “ಈ ಹಾಳಾದ್ ಮಳಿ ದಸೇಂದ್ ಮನೆ ಹೊರ್ಗ್ ಕಾಲಿಡಕ್ ಆಗ್ದು” ಅಂತ ಮಳ್ಗಾಲದಾಗೆ , ಈ ಬಗೀ ಮಾತು ನಮ್ ಮಲ್ನಾಡ್ ಕಡೆ ಎಲ್ರೂ ನಾಲ್ಗಿ ಮೇಲೂ ನಲೀತರ‌್ದದೆ. ಏನ್ ಶೆಕಿ ಅಂತೀರಾ, ಹೋದ್ ಮಳ್ಗಾಲ‌್ದಲ್ ಆ ನಮೂನಿ ಮಳೆ ಹೊಯ್ದ್ರು ನೀರ್ ಅನ್ನದ್ ಪಾತಾಳ್‌ಮಟ ಇಳ್ದು ತುಂಗಾ ನದಿ ಅನ್ನೋದು ಬೇಗೊಳ್ಳಿ ಹಳ್ದಂಗ್ ಆಗಿ ಆಚಿದಡ ಈಚಿದಡಕ್ಕೆ ನಡ್ಕೊತಾನೆ ದಾಟಾಡೊಂಗ್ ಆಗಿತ್ತು. ಮುುುಂಗಾರಲ್ ಮಳಿ ಹೆಂಗಪ್ಪ ಅಂದ್ರೆ ಅತ್ಲಾಗೂ ಬಂದಂಗೂ ಅಲ್ಲ, ಇತ್ಲಾಗ್ ಬರ್ದೀತೆ ಇರಂಗು ಅಲ್ಲ, ಒಂದ್ ಸರಿ ಹೊಯ್ತದೆ,ಮಾರ‌್ನೆ ಗಳ್ಗೆಗ್ ಬಿಸ್ಲ್ ಮೂಡತ್ತೆ, ಮಳಿ ಹಿಡ್ಕಳಾ ಒಳ್ಗೇನೆ ದರ‌್ಗು, ಒಣ ಹುಲ್ಲು,ಕಟ್ಗಿ ಎಲ್ಲಾ ಕೊಟ್ಗೆಗ್ ಸೇರ್ಸಿದ್ವೊ ಆತು ಇಲ್ಲಾಂದ್ರೆ ಆ ಯಮ ಮಳೀಲಿ ಹೊರ್ಗ್ ಹೊಂಡಾಕ್ ಆಗ್ತ?, ಊಹುಂ ಅದ್ ಕೇಣ್ಬೇಡಿ. ಬೇಸ್ಗಿ ಮುಗ್ಯೋವರ್ಗು ಕೇಸಿನ್ ಸೊಪ್ಪು, ಬಸ್ಲೆ ದಂಟು, ಸೂರೇನ್‌ಗೆಡ್ಡೆ, ಅಂತ ಚಪ್ಪೆ ತಿನ್ಕುಂಡು ನಾಲ್ಗಿ ಕೆಟ್ಟೋಗಿರೋ ಟೇಮಿಗ್ ಈ ಮಳಿ ಅನ್ನೊದ್ ನಮ್ಗೆ ಅಮೃತ ಇದ್ದಂಗೆ,ಇಷ್ಯ ಏನಪ್ಪ ಅಂದ್ರೆ ಚೂರ್ ಮಳಿ ಬಂದು ಕೊನೇಗ್ ಗದ್ದೆ ಬದಿ ಹಳ್ಳನಾರು ಬಂದಿದ್ರೆ ನಾಕ್ ಸೊಸ್ಲು ಹಿಡ್ಕಂಡ್ ಬಂದ್ರೆ ಪಲ್ಯಾಕಾದ್ರೂ ಆದೀತು ಅಂತ. ಈ ಸಮುದ್ರದ್ ಮೀನ್ನ ನಮ್ಗ್ ಕೊಣ್ಣಾಕ್ ಆದೀತಾ ಊಹುಂ, ಆ ಪಾಟಿ ರೇಟು!, ಏನಾರ್ ಅರ್ಧಕೇಜಿ ತಕ್ಕಂಬದು ಆದ್ರೆ ಅದೂ ಕೊನ್ಕೊನೆಗೆ ಚಪ್ಪೇಯ, ಭೂತಾಯಿ ಬಂಗ್ಡೆ ಎಲ್ಲಾರ್ ತೀರ್ಥಳ್ಳಿ ಪೇಟೆ ಕಡೆ ಹ್ವಾದ್ರೆ ಹ್ವಾಟ್ಲಲ್ ತಿನ್ಕಬರ್ಬೋದು, ಅದೂ ದೊಡ್ಡೋರ್ ಮಾತ್ರ. ಆಗಿಂದನೂ ಅಷ್ಟೇ ಅಪ್ಪಯ್ಯ, ದೊಡ್ಡಪಯ್ಯೋರು ಮಳಿ ಬಂತು ಅಂದ್ರೆ ಗದ್ದೆ ಬದ ಕೆತ್ತೋದು, ಗೊಬ್ರ ಹರ‌್ಡೋದು, ಬೀಜದ್ ಭತ್ತ ಬಿತ್ತಕ್ ಅಣಿ ಮಾಡೋದು ಅವ್ರ್ ಅವ್ರು ಅವರ್ ಕೆಲ್ಸ್ದಾಗ್ ಇದ್ರೆ ನಮ್ ಮಂಜ್ ಚಿಕ್ಕಪ್ಪಯ್ಯ ನಾವ್ ಹುಡುಗ್ರು ಮಕ್ಕಳನ್ನ ಸೇರ್ಸೊಂಡು ಬಿದ್ರಳ್ಳ ತುದೀಗ್ ಹೋಗಿ ಸೋಸ್ಲು ಮೀನ್ ಹಿಡೀತಾ ಕೂಕಂತಿದ್ರು. ಚಿಕ್ಕಪ್ಪಯ್ಯ ಸಿಕ್ದಷ್ಟ್ ಮೀನ್ ಹಿಡ್ಕಣಕ್ ಒದ್ದಾಡ್ತಿದ್ರೆ ನಾನು ಮತ್ತೆ ತಮ್ಮಣ್ಣಿ, ಆಚೆಮನಿ ರಾಜು, ದೊಡ್ಡಪ್ಪಯ್ಯನ್ ಮಗ ವಿನಯ ಮತ್ತೆ ನಾಗತ್ತೆ ಮಗ್ಳು ಜಲಜ ಎಲ್ಲಾ ಕೆಸ್ರು ನೀರಾಗ್ ಬಿದ್ದ್ ಒದ್ದಾಡೊದೇ!, ಒಳ್ಳೆ ಹಾಲಂಗ್ ಇರೋ ಮಳೆ ನೀರ‌್ನ ಕೆಸ್ರು ರಾಡಿ ಎಬ್ಸ್ತಿದ್ದೋ. ಪಾಪದ್ ಚಿಕ್ಕಪಯ್ಯಂಗ್ ಎಲ್ಲಾ ಬಯ್ಯೋರೆ,ಆದ್ರೆ ಮೀನಿನ್ ಸಾರಿನ್ ಘಾಟಿಗ್ ಒಲಿ ಹತ್ರನೇ ಬಂದ್ ಕೂರವ್ರು ಎಲ್ಲರೂವೆ. ಮಂಜ್ ಚಿಕ್ಕಪಯ್ಯಂಗೆ ತಲಿ ಕೆಟ್ಟದೆ ಅಂತ ಅವ್ರಿಗ್ ಜಾಸ್ತಿ ಕೆಲ್ಸ ಏನೂ ಕೊಡ್ತ ಇರ್ಲಿಲ್ಲ, ಅದ್ಕೆ ಬರೀ ಇಂತವ್ವೆ ಕೆಲ್ಸ ಹಲ್ಸಿನ್ ಬೀಜ ಒಟ್ಟಾಕದು, ಮುರ್ಗನ್ ಹುಳಿ ಒಣಗ್ಸಿ ಇಡೋದು (ಮೀನ್ ಪಲ್ಯಕ್ ಭಾರಿ ಮಸ್ತಾತದೆ), ಏಡಿ ಹಿಡ್ಯಾಕ್ ಹೋಗದು, ಅಳ್ಬಿ ಹುಡ್ಕಂಡು ಕಾನಿನ್ ಬದಿ ತಿರ್ಗಾದು, ನಾಕ್ ರುಪಾಯ್‌ಗೆ ಹಲ್ಸಿನ್ ಕಾಯ್ ಕೊಯ್ದ್ ಮಾರದು ಇವೇಯ. ಚಿಕ್ಕಪಯ್ಯ ನಮ್ಗೆ ಕೆಲವ್ ಅಸಾಮಾನ್ಯ ಕೆಲ್ಸಗಳ್ ಕಲ್ಸ್‌ಕೊಟೈತೆ, ಅವ್ ಏನಂದಿರಾ? ನಮ್ಮವ್ ಅಸಾಮಾನ್ಯ ಕೆಲ್ಸಗಳ್ ಅಂದ್ರೆ ಇವೇಯ, ಸೊಳ್ಳೆ ಪರ್ದೆ ಒಟ್ಟಾಕದು, ಯಾದಾದ್ರೂ ಬಲೆ ಇದ್ರೆ ಅದ್ನ ಸರಿ ಮಾಡ್ಕಣದು, ಅವ್ವನ್ ಹತ್ರ ಉಗ್ಸ್ಕೊಂಡು ಹಳೆ ಸೀರೆಲಿ ಮೀನ್ ಹಿಡ್ಯಾದು. ಅದ್ರಲ್ ಈ ರಾತ್ರಿ ಮೀನ್ ಹಿಡ್ಯಾಕ್ ಹೋಗೋದ್ ತಾಪತ್ರಯ ಯಾರಿಗೂ ಬ್ಯಾಡ, ಅಪ್ಪಯ್ಯ ಬೆಳ್ಗಾತಿಂದ ಸಂಜೆಮಟ ಗದ್ದೆ,ತ್ವಾಟ ರಾತ್ರಿ ಶಿಕಾರಿಗ್ ಹತ್ಯಾರ ಜೋಡ್ಸುದ್ ನೋಡುದೆ ಚಂದ, ಉದ್ದದ್ ಕತ್ತಿ ಮಸ್ಕಂಡು, ಬ್ಯಾಟ್ರಿಗ್ ಶೆಲ್ ಹಾಕಿಟ್ಕೊಣದು, ಕಂಬ್ಳಿ ಕೊಪ್ಪೆಗ್ ತೇಪೆ ಹಾಕಿ ರೆಡಿ ಮಾಡ್ಕೊತಿದ್ರು. ಅಪ್ಪಯ್ಯೋ ನಾನು ಬತ್ತೀನೋ ಅಂದ್ರು ಇದ್ ಅಪ್ಪಯ್ಯ ಕೇಣ್ಬೇಕಲ್ಲ, ‘ಮೈ ಎಲ್ಲಾ ತೊಪ್ಪೆ ಆತದ್ ಮುದ್ರ್ಕೊಂಡು ಉಂಡ್ಕಂಡ್ ಬಿದ್ಕೋ ಅಂತ ಹೇಳ್ ಹೊಂಡೋರು. ಅಪ್ಪಯ್ಯ ಮತ್ತೆ ಅವ್ರು ಪ್ರೆಂಡ್‌ಗಳ್ದು ಮೀನ್ ಹಿಡ್ಯೋ ನಮೂನಿನೆ ಬೇರೆ, ಹಳ್ಳದ್ ಬದಿ ಹೋಗಿ ಆಯ್ಕಟ್ಟಲಿ ಕುಣಿ ಹಾಕಿ ಈ ಕಡೆ ಕತ್ತಿಂದ ಬ್ಯಾಟ್ರಿ ಬೆಳ್ಕ್ ನೀರಲ್ ಬಿಟ್ಟು ಮೀನ್ ಕಾಣ್ಸಿದ್ ಕೂಡ್ಲೆ ಎತ್ತಿದ್ ಏಟಿಗ್ ಕತ್ತಿ ಬೀಸಿದ್ರೆ ಆ ಮೀನು ಇಲ್ಲೋ ಎರಡ್ ಪೀಸ್ ಆಗೋವು ಇಲ್ದಿದ್ರೆ ತಪ್ಸ್‌ಕೊಂಡ್ ಪಾರಾಗೋವು. ರಾತ್ರಿ ಕಳೆಯೋದೆ ಕಾಯ್ತ ಕೂಕಣದ್ ಯಮ ಯಾತ್ನೆ ಯಾವಂಗು ಬ್ಯಾಡ, ಸೊಳ್ಳೆ ಕಚ್ಚುಸ್ಕುತ ಹುಯ್ಯೋ ಮಳೇಲಿ ನೆನೀತ ಇರ್ಬೇಕು, ಹಾಕಂಡಿರೋ ಕಂಬ್ಳಿ ಆ ಗಾಳಿಮಳೆಗ್ ಯಾವ್ ಲೆಕ್ಕಾನು ಅಲ್ಲ, ಹಳ್ಳದ್ ನೀರು ಏರ್ತಿದ್ದಂಗೆ ಮುರ್ಗೋಡು, ಚೇಳಿ, ಗೊಜ್ಲೆ ,ಗೌರಿ ಮತ್ತೆ ಏಡಿ ದಡಕ್ಕೆ ಬತ್ತಿದಂಗೆ ನಮ್ಮ್ ಕೆಲ್ಸ ಸುರು, ಚೂರು ಸೌಂಡ್ ಮಾಡ್ದೆ ಬ್ಯಾಟ್ರಿ ಬೆಳ್ಕ್ ಬಿಟ್ರೆ ಮೀನ್ ಅಲ್ಲೆ ಬೆಳ್ಕ್ ನೋಡ್ಕುತಾ ನಿಲ್ತವೆ ಆಗ್ಲೆ ಕತ್ತಿಲ್ ರಪ್ ಅಂತ್ ತಾಗೂ ಹಾಗೋ ಮಂಡೆ ಬುಡ್ದಲ್ ಹೊಡ್ಯಾದು ಇನ್ನುಬ್ರು ಹೊಡ್ದಿದ್ ಏಟಿಗ್ ಮೇಲ್‌ಬರೋ ಮೀನ್ ಹಿಡ್ಕಂಡು ಚೀಲಕ್ ತುರ‌್ಕದು. ಈ ಹತ್ಮೀನ್ ಮಾತ್ರ ಸೊಳ್ಳೆಪರ್ದೇಲ್ ಸೋಸಿದ್ರೆ ಕೆಲೋ ಬಾರಿ ಮೂಟೆಗಟ್ಲೆನೂ ಸಿಕ್ತಾವೆ. ನಾನೂ ಐದ್ನೇ ಕ್ಲಾಸ್ ಅಗೋವರ್ಗೂ ಅಪ್ಪಯ್ಯ ರಾತ್ರಿ ಶಿಕಾರಿಗ್ ನಂಗ್ ಕರ್ಕೊಂಡ್ ಹೋಗ್ನಿರ್ನಿಲ್ಲ, ಆಮೇಲಾಮೇಲೆ ನಾನೆ ಬಯ್ದ್ರು ಓಡ್ ಹೋಗ್ತಿದ್ರೆ , ಏನ್ ನಾಕೇಟ್ ಹೊಡೆಯವ್ರು ಆದ್ರೆ ಮೀನ್ ಹಿಡ್ಯೋ ಖುಷಿ ಮುಂದೆ ಅವೆಲ್ಲಾ ಹೊಡ್ತ ಎಂತದೂ ಅಲ್ಲ ಬಿಡಿ. ಕಾಲೇಜಿಗ್ ಹೋಗ್ವಾಗ ಮಂಜ್ ಚಿಕ್ಕಪಯ್ಯ ಹೋದ್ರು, ಆಮೇಲ್ ಅಪ್ಪಯ್ಯ ಮೀನ್ ಶಿಕಾರಿ ಕಡ್ಮೆ ಮಾಡ್ತು, ಹೆಂಗು ಹಿಡ್ದೋರ್ ಯಾರಾರು ಸ್ವಲ್ಪ ಕೊಡೋರು, ನಾನುವೆ ಆಗಾಗ ದೊಡ್ಡಪ್ಪಯ್ಯನ್ ಜೊತೆ ಹೋಗ್ತಿದ್ದೆ. ಒಂದೊಂದ್ ಸರಿ ಹ್ವಾದ್ರು ಒಂದೊಂದ್ ಅನುಭವ ಆಗದು, ಕೆಲ ಸಲ ಏನೂ ಸಿಗ್ದೆ ನಾಕ್ ಏಡಿ ಹಿಡ್ಕ ಬಂದಿದ್ದೂ ಅದೆ.ಸರಿ ರಾತ್ರಿ ಆದ್ರೂ ಅಮ್ಮ ಕಾಯ್ಕೊತಾ ಇದ್ದು ಎರ್ಡ್ ಗಂಟೆ ಆದ್ರೂ ವಾಟೆಹುಳಿ ಹಾಕ್ ಘಮ್ ಅನ್ನೋ ಬಿಸಿಬಿಸಿ ಮೀನ್ ಸಾರ್ ಮಾಡ್ ಹಾಕ್ತಿತ್ತು ,ಆಗ್ಲೆ ನಮ್ ಶಿಕಾರಿನು ಸಾರ್ಥಕ ಆಗೋದು. ಈಗ್ ಎಲ್ಲೆಲ್ಲೋ ಪೇಟೆಲ್ ಕೆಲ್ಸ ಮಾಡ್ಕುತ ಇರೋ ನಮ್ಗೆ ಯಾರಾದ್ರು ಹತ್ಮೀನ್ ಕಡಿಯೋ ಪೋಟೋ ಹಾಕಿದ್ರೆ ಹಳೆ ನೆಂಪೆಲ್ಲಾ ಅಂಗೆ ಕಣ್ ಮುಂದೇನೆ ಬಂದಂಗ್ ಆತದೆ. ಈಗ್ಲೂವೆ ಮಲ್ನಾಡ್ ಬದಿ ಮೀನ್‌ಶಿಕಾರಿ ಅಂದ್ರೆ ಅದೊಂಥರ ಹಬ್ಬಾನೆ… ರಮೇಶ್ ನೆಲ್ಲಿಸರ ಪರಿಚಯ: ಮೂಲತಃ ತೀರ್ಥಹಳ್ಳಿ,ಪ್ರಸ್ತುತ ಸರ್ಕಾರಿ ಪ್ರೌಢ ಶಾಲೆ ಯಡೂರು, ಹೊಸನಗರ ತಾಲ್ಲೂಕು, ಇಲ್ಲಿ ಇಂಗ್ಲಿಷ್ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಓದಿದ್ದು ಆಂಗ್ಲ ಸಾಹಿತ್ಯ, ಕತೆ ,ಕವನ ಮತ್ತು ಲಲಿತ ಪ್ರಬಂಧಗಳನ್ನು ಬರೆಯುವ ಹವ್ಯಾಸವಿದ್ದು. ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಮೀನು ಶಿಕಾರಿಯ ಸಂಭ್ರಮ Read Post »
ಹೇಳಿ ಹೋಗು ಕಾರಣ ಸಂಗೀತ ಶ್ರೀಕಾಂತ್ ನುಡಿವೊಮ್ಮೆ ನಲ್ಲ ನಿನ್ನ ಕೊಳಲ!! ಕೊರಳ ಮಧುರ ಭಾವ ಹೊರಬರಲಿ.. ಎದೆಯೊಳಗಿರುವ ನಂಜು- ನೋವುಗಳೆಲ್ಲಾ ಹಾಡಾಗಿ ಹೊರ ಬಂದು ಕೇಳುವಂತಾಗಲಿ…. ಭಾವಧ್ಯುಯ್ಯಲೆಯಲಿ ಬದುಕಾ ದುಡುತ್ತಿರುವಾಗ ಅದನ್ನು ಧಿಕ್ಕರಿಸುತ್ತೆನೆಂಬುದು ಎಂಥ ಮೂರ್ಖತನವಾದಿತು? ನಿರ್ಭಾವದಲಿ ನಿಜವ ಕೊಲ್ಲ ಹೊರಟಿರುವುದೇಕೆ? ಬೆರಗಾಗಿದ್ದೆ ಹಿಂದೊಮ್ಮೆ ಬಂಡೆಗಳ ಮೇಲೂ ಚಿಗುರೊಡೆಯಬಲ್ಲೆ ಎಂಬ ಅದಮ್ಯ ಉತ್ಸಾಹಕ್ಕೆ ಜಗತ್ತನ್ನೆದುರಿಸಿ ನೆಡೆಯುತ್ತಿದ್ದ ನಿರ್ಭಿತ ನೆಡೆಗೆ.. ವಿರಹದ ದಳ್ಳುರಿಯ ದಾವನಲದಲ್ಲಿ ನಾ ಬೆಂದು ಬಸವಳಿಯುತ್ತಿರುವಾಗ ಬಂಧನ- ಬಿಡುಗಡೆ, ವಿರಹ- ವಿದಾಯ ಎಂಬೆಲ್ಲ ಅರ್ಥವಿರದ ಆಲಾಪ ಬೇಕೆ? ನಿನ್ನೆಲ್ಲಾ ನೆನಪುಗಳ ವಿಲೇವಾರಿ ಮಾಡಿ ಜಾರಿ ಬಿಡೋಣವೆಂದರೆ ನನ್ನ ಪ್ರೀತಿಯೇನು ಪದ್ಮಪತ್ರದ ಮೇಲಿನ ಜಲಬಿಂದುವಲ್ಲಾ, ಹೇಳುವಷ್ಟು ಸಲೀಸೆ ಕಾಡುವ ನೆನಪುಗಳ ತಾಳುವುದು/ ದೂಡುವುದು…?? ಸುಖದ ಸ್ವಪ್ನಗಳನ್ನೆಲ್ಲ ಬಚ್ಚಿಟ್ಟು ನನ್ನೆದೆಯ ಬಾಗಿಲಿನ ರಂಗೋಲಿ ಒದ್ದು ತುಟಿ ಬಿಚ್ಚದೆ, ನೂರು ಮಾತಿನ ಭಾವಗಳ ಕವಿತೆಯಾಗಿಸದೆ ಹೋಗಿದ್ದು ಏಕೆಂದು ಹೇಳಿಬಿಡು ನೀನು ಅಷ್ಟೇ ಸಾಕೆನಗೆ….. ===================== ಪರಿಚಯ: ಬಾಲ್ಯ/ ಓದು ಎಲ್ಲಾ ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖದಲ್ಲಿ. ಸದ್ಯ ಹಾಸನದಲ್ಲಿ ವಾಸ. ಓದು/ ಬರಹ ಹವ್ಯಾಸ.
ಒಮ್ಮೆ ತಿರುಗಿ ನೋಡು ನನ್ನ ಕೊನೆಯ ತಿರುವು ಬರುವ ಮುನ್ನ. ವಿಷ್ಣು ಭಟ್ ಹೊಸ್ಮನೆ ನನ್ನ ಮನಸ್ಸು ಅವಳು ತಿರುಗಿ ನೋಡಲೇಬಾರದು. ಮುಂದೆ ಎಂದಿಗೂ ಸಂಧಿಸದ ಹಾದಿಯಲ್ಲಿ ನಾನು ಮತ್ತು ಅವಳು ಸಾಗುತ್ತ ಇರಬೇಕು ಅಂದುಕೊಂಡಿತ್ತು. ಅವತ್ತು ತಿರುಗಿ ನೋಡದೇ ಹೋದರೂ ಎರಡು ದಿನ ಬಿಟ್ಟು ಮತ್ತೆ ಅವಳು ಬಂದಿದ್ದಳು. ಅವಳನ್ನು ಮತ್ತೆ ನೋಡಿದೆ ಎಂಬೊಂದು ಖುಷಿ ಬಿಟ್ಟರೆ ಮತ್ತೇನೂ ನನ್ನಲ್ಲಿ ಹುಟ್ಟಲಿಲ್ಲ. ಆದರೆ ಅವಳು ಎದೆ ತುಂಬ ಪ್ರೀತಿಯನ್ನು ಹೊತ್ತು ತಂದಿದ್ದಳು. ಅವಳು ಕಾದುಕಾದು ಕೇಳಿದ್ದು ಒಂದೇ ಮಾತು “ನನ್ನನ್ನು ಪ್ರೀತಿಸುತ್ತೀಯಾ? ಪ್ಲೀಸ್..” ಇದು ನನಗೆ ಅನಿರೀಕ್ಷಿತ. “ಇಲ್ಲ” ಎಂದು ಬಿಟ್ಟೆ. ಎರಡು ದಿನ ತಲೆ ಕೆಟ್ಟುಹೋಗಿತ್ತು. ಈ ನಿರಾಕರಣೆಗೆ ಕಾರಣವಿರಲಿಲ್ಲ. ಎಷ್ಟು ನೊಂದುಕೊಂಡಳೋ? ಇಲ್ಲ ಎನ್ನುವುದಕ್ಕಾದರೂ ಕೊನೆಯ ಪಕ್ಷ ಎರಡು ದಿನ ಸಮಯ ಕೊಡು ಎಂದು ಬಿಡಬಹುದಿತ್ತು. ಮತ್ತೆ ಎರಡು ದಿನ ಬಿಟ್ಟು ನನ್ನ ಬಳಿ ಬಂದು ನಿಂತಿದ್ದಳು. ಈ ಬಾರಿ ಅವಳು ಕೇಳಲಿಲ್ಲ; ಹೇಳಿದಳು. “ನೀನು ನನ್ನನ್ನು ಪ್ರೀತಿಸಲೇ ಬೇಕು, ಇಲ್ಲ ಅನ್ನಬೇಡ” ಎನ್ನುತ್ತ ನನ್ನ ಕೈಯನ್ನು ಎಳೆದು ಹಿಡಿದುಕೊಂಡು ನಿಂತೇ ಇದ್ದಳು; ಕಣ್ಣಲ್ಲಿ ನೀರು ತುಂಬಿತ್ತು. ಅವಳೆದೆಯಲ್ಲಿ ಮೊಗೆದಷ್ಟೂ ಪ್ರೀತಿ. ನಾನು ಒಪ್ಪಿಕೊಂಡೆ. ನನ್ನ ಹಣೆಗೊಂದು ಮುತ್ತಿಕ್ಕಿ ಹೊರಟು ಹೋದಳು. ನನ್ನಲ್ಲಿ ನಿಜವಾಗಿ ಪ್ರೀತಿ ಹುಟ್ಟಿತ್ತಾ? ಅವಳನ್ನು ನಿರಾಕರಿಸಲಾಗದೇ ಒಪ್ಪಿಕೊಂಡೇನಾ? ಅಥವಾ ಒಳ ಮನಸ್ಸಿನಲ್ಲಿ ಅವಳನ್ನು ಇಷ್ಟ ಪಡದೆ ಒಪ್ಪಿಕೊಳ್ಳಲು ಸಾಧ್ಯವಾ? ಎಂದು ಕೇಳಿಕೊಳ್ಳುತ್ತಾ ಹೋದೆ. ಎಲ್ಲವೂ ಗೊಂದಲ. ಮುಂದೇನು? ಎಂಬ ಪ್ರಶ್ನೆ. ಪ್ರೀತಿಗೆ ಕಾರಣಗಳನ್ನು ಹುಡುಕಬಾರದು; ಪ್ರೀತಿ ಬೇಗನೆ ಸತ್ತು ಬಿಡುತ್ತದೆ. ನಾನೂ ಪ್ರೀತಿಸಿದೆ; ಮುಂದಿನದನ್ನು ಯೋಚಿಸದೆ. * “ಇನ್ನು ಹದಿನೈದು ದಿನಕ್ಕೆ ನನ್ನ ಮದುವೆ. ನನ್ನನ್ನು ಹುಡುಕಿಕೊಂಡು ಮನೆಯ ತನಕ ಬರಬೇಡ. ನಮ್ಮದು ಮರ್ಯಾದಸ್ಥ ಕುಟುಂಬ. ನೀನು ಬಂದರೂ ನೀನು ಯಾರೆಂದು ಗೊತ್ತಿಲ್ಲ ಎಂದೇ ಹೇಳುವ ಪರಿಸ್ಥಿತಿಯಲ್ಲಿ ನಾನಿದ್ದೇನೆ. ಹೇಳಿದರೂ ನಿನಗೆ ನನ್ನನ್ನು ಕೊಟ್ಟು ನನ್ನಪ್ಪ ಮದುವೆ ಮಾಡುವುದಿಲ್ಲ. ನೀನು ನನ್ನನ್ನು ಪ್ರೀತಿಸಿದ್ದು ನಿಜವೇ ಆಗಿದ್ದರೆ ನನ್ನನ್ನು ಮರೆತು ಬಿಡು. ಸಾಧ್ಯವಾದರೆ ಕ್ಷಮಿಸಿಬಿಡು.” ಇದು ಅವಳ ಕೊನೆಯ ಮಾತು. ಅದೂ ಫೋನಿನಲ್ಲಿ. ಅವತ್ತೇ ಅವಳ ಮೊಬೈಲ್ ನಂಬರ್ ಬದಲಾಗಿತ್ತು. ನನಗೆ ಸಿಟ್ಟು ಬರಬೇಕಿತ್ತು. ಆದರೆ ಅಳು ಬರುತ್ತಿತ್ತು. ಗಂಡಸು ಅಳಬಾರದಂತೆ. ನೋವು ಮತ್ತು ಸಾವಿಗೆ ಗಂಡು ಹೆಣ್ಣೆಂಬ ಭೇದವಿಲ್ಲ. ಪ್ರೀತಿ ಸತ್ತು ಶವವಾಗಿ ಬಿದ್ದ ಮೇಲೆ, ಅಳುವೊಂದೇ ಉಳಿದ ಭಾವ. ಕಣ್ಣಿಗೆ ಕಣ್ಣಿಟ್ಟು ಬಂದವಳೇ ಕೊಟ್ಟ ಕಣ್ಣೀರು. ನನ್ನ ನೆನಪುಗಳೊಂದಿಗೆ ನಾನು ಏಕಾಂಗಿ. * ಅವಳಲ್ಲಿ ಕೇಳಬೇಕಿತ್ತು. ಈ ಪ್ರೀತಿಯನ್ನು ಹೇಗೆ ಕೊಂದುಕೊಳ್ಳಲಿ? ನೀನಾದರೂ ಹೇಗೆ ಅಷ್ಟು ಸುಲಭವಾಗಿ ಸಾಯಿಸಿಬಿಟ್ಟ? ಕಾರಣವೇ ಅಲ್ಲದ ಕಾರಣಗಳನ್ನು ಕೊಟ್ಟು ಹೊರಟು ಬಿಟ್ಟೆ? ಆದರೆ ನಿಜವಾದ ಕಾರಣಗಳನ್ನು ಕೇಳಿಯಾದರೂ ಏನು ಮಾಡಲಿ? ಬನದ ತುಂಬ ಘಮವ ಪಸರಿಸಿ ತೊಟ್ಟು ಕಳಚಿಕೊಂಡು ಬಿದ್ದ ಹೂವಿನಂಥಾದ ಪ್ರೀತಿಗೆ ಇನ್ನು ಏನೆಂದು ಕರೆಯಲಿ? ಕರೆಯದೇ ಕಾಯದೇ ಬಂದವಳು ತೊರೆದ ರೀತಿಗೆ ನಾನೀಗ ನನ್ನ ಪ್ರೀತಿಯನ್ನು ಕೊಲ್ಲಬೇಕು. ಆದರೆ ಅವಳ ನೆನಪುಗಳು ಸಾಯುವುದಿಲ್ಲ. ಕನಸುಗಳನ್ನು ಕಸಿದುಕೊಂಡು ನೆನಪುಗಳನ್ನು ಬಿಟ್ಟುಹೋಗಿದ್ದು ಸರಿಯೇನು? ಎಷ್ಟೊಂದು ಕನಸುಗಳು ಹುಟ್ಟಿದ್ದವು. ನಾನು ಅವಳು ಒಟ್ಟೊಟ್ಟಿಗೆ ಪೇರಿಸಿ ಇಟ್ಟ ಕನಸುಗಳಿಗೆ ಲೆಕ್ಕವಿಲ್ಲ. ಇವತ್ತು ಎಲ್ಲವೂ ಹಾಗೇ ಸುರುಳಿ ಸುತ್ತಿಕೊಂಡು ನೆನಪಿನ ಮೂಟೆಯಾಗಿ ಮನದೊಳಗೆ ಕಾಡುತ್ತಿವೆ. ನೆನಪಿನ ಮೊಟ್ಟೆಯೊಡೆದ ಕವನ ಕಣ್ಣಿರು. ಅವಳ ನೆನಪುಗಳಿಂದ ಬಿಡಿಸಿಕೊಳ್ಳಲು ಮಾಡಿದ ಸಾಹಸಗಳು ಸಾವಿರಾರು. ಒಂದಿಷ್ಟು ದಿನ ಯಾರ ಜೊತೆಗೂ ಮಾತನಾಡಲಿಲ್ಲ. ಅದಕ್ಕಿಂತ ಹೆಚ್ಚಾಗಿ ನನ್ನ ದನಿಯಲ್ಲಿ ನೋವಿತ್ತು. ಇವತ್ತಿನಿಂದ ಅವಳು ನನ್ನ ಜೊತೆಗಿಲ್ಲ ಎಂದುಕೊಳ್ಳುವಾಗಲೆಲ್ಲ ಎದೆನೋವು. ಹೃದಯಯವೂ ಅಷ್ಟೊಂದು ಭಾರ ಎಂಬುದು ಅರಿವಾದದ್ದೇ ಅವಳು ಹೋದ ಬಳಿಕ. ಈ ನೋವು ಸಾವಿಗಿಂತಲೂ ತೀವ್ರ ಮತ್ತು ಭಯಾನಕ. ಎದೆಗೆ ಚುಚ್ಚಿಕೊಂಡೇ ನಲಿವ ಮುಳ್ಳುಗಳು. ನನಗೆ ಒಂದು ಸಂಶಯ ಕಾಡುತ್ತಿದೆ; ಈ ಪ್ರೀತಿ ಎಂದರೇ ನೆನಪುಗಳಾ? ಅಥವಾ ಸತ್ತ ಕನಸುಗಳು ಭೂತವಾಗಿ ಕಾಡುವ ಬಗೆಯಾ? ಇವತ್ತಿನಿಂದ ಅವಳನ್ನು ಮರೆತು ಈ ನೋವುಗಳನ್ನೇ ಪ್ರೀತಿಸಬೇಕು. ಅಂದು ನೀನಿತ್ತ ಮುತ್ತಿನ ಅಮೃತ ಬಿಂದು ಎದೆ ಚುಚ್ಚಿ ಕೊಲ್ಲುತಿದೆ ನೀ ಮರಳ ಬಾರದೇ ಸಾವುಯುವುದರ ಒಳಗೆ. ಅವಳನ್ನು ಕರೆಯುತ್ತಲೇ ಇದ್ದೆ. ಖಾಲಿ ಬಿದ್ದಿದ್ದ ಹೃದಯದಲ್ಲಿ ಉಳಿದುಕೊಂಡು ಈಗ ಅನಾಥವಾಗಿಸಿ ಹೋದದ್ದು ಅವಳಿಗೆ ಕಾಡದೇ ಹೋಯಿತೇಕೋ? ಒಮ್ಮೆ ತಿರುಗಿ ನೋಡು ನನ್ನ ಕೊನೆಯ ತಿರುವು ಬರುವ ಮುನ್ನ ‘ಒಮ್ಮೆ ತಿರುಗಿ ನೋಡು, ಈಗ ಹುಟ್ಟಿಕೊಂಡ ಪ್ರೀತಿ ಏಳೂ ಜನ್ಮಗಳಿಗೆ ಸಾಕು. ನಾನು ನಾನಾಗಿ, ನೀನು ನೀನಾಗಿ, ನಿನ್ನೊಳಗೆ ನಾನೂ ನನ್ನೊಳಗೆ ನೀನೂ, ಇಬ್ಬರೂ ಒಂದೇ ಆಗಿ ಬದುಕಿ ಬಿಡೋಣ. ಈ ಪ್ರೀತಿ ಸಹಿ ಇಲ್ಲದ ಒಪ್ಪಿಗೆ, ಬಾ ಹಿಂದಿರುಗು’ ಎಂದು ಹೇಳಲು ಕಾಯುತ್ತಲೇ ಇದ್ದೆ. ಅವಳು ಹೋಗಿಯಾಗಿತ್ತು. ತಿರುಗಬಾರದ ತಿರುವ ದಾಟಿ; ಎದೆಯೊಳಗಿನ ತಂತಿಯ ಮೀಟಿ. * ಅವಳು ಬರೆದ ಪತ್ರಗಳ ರಾಶಿಯಲ್ಲಿ ನಾನು ಕಳೆದು ಹೋಗಿದ್ದೆ. ಮರೆಯಲೇ ಬೇಕೆಂದು ನಿರ್ಧರಿಸಿದೆ. ಅವಳು ಕೊಟ್ಟ ಗಿಫ್ಟುಗಳು ನನ್ನ ಕಣ್ಣ ದಂಡೆಯನ್ನು ಚುಚ್ಚುತ್ತಿದ್ದವು. ಎದೆನೋವು ಸ್ವಲ್ಪ ಕಡಮೆಯಾದಂತೆ ಕಂಡುಬಂದ ಬೆಳದಿಂಳಿಲ್ಲದ ಒಂದು ರಾತ್ರಿ ಅವಳು ಕೊಟ್ಟಿದ್ದೆಲ್ಲವನ್ನು ಮನೆಯ ಅಂಗಳದಲ್ಲಿ ಚೆಲ್ಲಿ ಬೆಂಕಿಕೊಟ್ಟೆ. ಎದೆಯೊಳಗೆ ಉರಿ ಹೆಚ್ಚಿತು. ಎದೆ ಬರಿದಾಗಲೇ ಇಲ್ಲ. ಆ ರಾತ್ರಿ ನಿದ್ರೆ ಬರಲಿಲ್ಲ. ಮರೆಯಲಾಗದ ಹೊತ್ತಲ್ಲಿ ದ್ವೇಷಿಸಬೇಕೆಂಬ ಹಠಕ್ಕೆ ಬಿದ್ದೆ. ಈ ಪ್ರೀತಿ ದ್ವೇಷಿಸಲೂ ಬಿಡಲೊಲ್ಲದು. ಮತ್ತೆ ಎದೆನೋವು. ಎದೆಯನ್ನು ಹಗುರ ಮಾಡಿಕೊಳ್ಳಲೇ ಬೇಕಿತ್ತು. ಒಂದು ಡೈರಿಯನ್ನು ಎತ್ತಿಕೊಂಡು ಗೀಚಿದೆ. ಪದಪದಗಳ ನಡುವೆ ಕಾಡಿದ ಅವಳು ವಿರಹದ ವಿರಾಟ್ ರೂಪ. ಕನವರಿಕೆಯ ಹೋಯ್ದಾಟದಲ್ಲಿ ಒದ್ದೆಯಾಗುತ್ತಲೇ ಇದ್ದೆ. ಕತ್ತಲಲ್ಲಿ ಬಿಟ್ಟು ಹೋಗ ಬೇಡ ನನಗೆ ಭಯ ಇರುವುದು ಹಗಲಿನಲ್ಲೇ.. ತೊರೆದವರ ಬಗೆಗೆ ಬರೆದರೆ ಬರುವರೇನು? ಬರೆಯುತ್ತ ಹೋದಂತೆ ನಾನು ಖಾಲಿಯಾಗಬೇಕಿತ್ತು. ಆದರೆ ನೆನಪುಗಳು ಮತ್ತೆಮತ್ತೆ ಸುತ್ತಿಕೊಂಡವು. ಮೊದಲು ಈ ನೆನಪುಗಳಿಂದ ಬಿಡುಗಡೆ ಹೊಂದಬೇಕೆಂಬ ನಿರ್ಧಾರಕ್ಕೆ ಬಂದೆ. ಸಾಯದ ನೆನಪುಗಳಿಗೆ ಅಹಂಕಾರ ಜಾಸ್ತಿ. ಅವಳು ಬಂದಲ್ಲಿಂದ ಹೋದಲ್ಲಿಯ ತನಕ ಬರೆದೆ. ಆ ಡೈರಿ ಕಣ್ಣಿಗೆ ಬಿದ್ದಾಕ್ಷಣ ಮತ್ತೆ ಮತ್ತೆ ಸಾಯುತ್ತಿದ್ದೆ. ಮತ್ತೊಂದು ಕಪ್ಪಗಿನ ರಾತ್ರಿಗಾಗಿ ಕಾದೆ. ಒಂದೊಂದೇ ಪುಟವನ್ನು ಹರಿದು ಬೆಂಕಿಗೆ ಹಾಕುತ್ತ ಪೂರ್ತಿಯಾಗಿ ಸುಟ್ಟುಬಿಟ್ಟೆ. ನೆನಪುಗಳು ಸುಟ್ಟು ಹೋಗಲಿಲ್ಲ. ಮಂದಾಗ್ನಿ ಎದೆಯೊಳಗೆ ಉರಿಯುತ್ತಲೇ ಇದೆ! ========================================== ವಿಷ್ಣು ಭಟ್ ಹೊಸ್ಮನೆ. ಪರಿಚಯ: ಲಘು ಹಾಸ್ಯದ ಲೇಖನ ಮತ್ತು ಇತರ ಲೇಖನಗಳನ್ನು ಬರೆಯುವುದು, ಓದುವುದು ಹಾಗೂ ಚಿತ್ರ ಬಿಡಿಸುವುದು, ಜೇಡಿಮಣ್ಣಿನಲ್ಲಿ ಗಣಪತಿ ಮಾಡುವುದು ನನ್ನ ಹವ್ಯಾಸ. ಹುಟ್ಟಿದ ಊರು ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗುಂಡೀಬೈಲ್ ಎಂಬ ಹಳ್ಳಿ. ಪ್ರಸ್ತುತ ಮಣಿಪಾಲ್ ಟೆಕ್ನೋಲೋಜೀಸ್ ಲಿಮಿಟೆಡ್ ನಲ್ಲಿ ಉದ್ಯೋಗಿ.
You cannot copy content of this page