ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಲೆಕ್ಕ ಇಡುವುದನ್ನು  ನಿಲ್ಲಿಸಿದ್ದೇನೆ

ಚಂದ್ರಪ್ರಭ.ಬಿ

ಅದೊಂದು ದಿನ ಅಪ್ಪ ನನ್ನ ಅವಸರಿಸಿ ಬರ ಹೇಳಿದ

ಶಾಲೆಯಿಂದ ಓಡೋಡಿ ಬಂದ ನನ್ನ

ತೆಕ್ಕೆಯಲ್ಲಿ ಬಿಗಿದು ಒಂದೇ ಸಮ ರೋಧಿಸಿದ

ಅವನೂ ಅನಾಥನಾಗಿದ್ದ ನನ್ನಂತೆ ತನ್ನವ್ವನ ಕಳಕೊಂಡು

ಆಡು ಕುರಿ ದನ ಮೇಯಿಸುತ್ತ

ಅಪ್ಪನ ಕೂಗಿಗೆ ಓಗೊಡುತ್ತ

ಆಗಾಗ ಶಾಲೆಗೂ ಮುಖ ತೋರಿಸುತಿದ್ದೆ

ವರ್ಷದ ಕೊನೆಗೆ

ಗೆಳೆಯರೆಲ್ಲ ಮುಂದಿನ ತರಗತಿಗೆ ನಾನು ಮಾತ್ರ ಹಿಂದೆ

ಮೇಷ್ಟ್ರು ಹೇಳಿದರು – ‘ಗಣಿತದಲ್ಲಿ ನೀ ಎಲ್ಲ ಕಳಕೊಂಡೆ’

ವಸಂತ ಲಗ್ಗೆಯಿಟ್ಟುದು ಅರಿವಾದುದೇ

ಅವಳ ರಾಗ ನನ್ನ ಕವಿತೆ ಸಂಧಿಸಿದಾಗ

ನಮ್ಮ ನಡುವೆ ಗೋಡೆ ಎಳೆದವು ಅಂತಸ್ತಿನ ಇಟ್ಟಿಗೆ

ನಾ ಬರಿಗೈಯಾಗಿದ್ದೆ ಒಲವ ಕಳಕೊಂಡು

ಜೀವನ ನಾಟಕದ ಅಗಾಧ ರಂಗಸ್ಥಲ

ಅಗಣಿತ ಪಾತ್ರ

ಒಂದೊಂದು ಅಂಕದಲೂ

ತಿರುವುಗಳ ರೋಚಕತೆ

ತಿರುವು ತಿರುವಿನಲೂ ಬಗೆ ಬಗೆಯ ಲೆಕ್ಕ

ಎಟುಕುತ್ತಲೇ ಕೈ ಜಾರುವ

ಕೈಚೆಲ್ಲಿ ಕೂತಾಗ ತೆಕ್ಕೆಗೆ ಬಂದು ಬೀಳುವ

ಸಂಗತಿಗಳ ವಿಸ್ಮಯ

ಬದುಕಿನಲ್ಲಿ ಈಗ ಎಲ್ಲವೂ ಇದೆ

ಕಳೆದುಕೊಳ್ಳುವುದು

ನಿತ್ಯದ ಪರಿಪಾಠವಾದಂದಿನಿಂದ

ಲೆಕ್ಕ ಇಡುವುದನ್ನು 
ನಿಲ್ಲಿಸಿದ್ದೇನೆ.

ಚಂದ್ರಪ್ರಭಾ

ಕವಿ ಪರಿಚಯ:

ಕಾಲೇಜಿನಲ್ಲಿ ಉಪನ್ಯಾಸಕರು. ಸಾಹಿತ್ಯದ ಓದು, ಬರವಣಿಗೆಯಲ್ಲಿ ಆಸಕ್ತಿ.
ಕವಿತೆ, ಲೇಖನ ಬರೆಯುವ ಹವ್ಯಾಸ. ಪ್ರಕಟಿತ ಕೃತಿಗಳಿಲ್ಲ

About The Author

Leave a Reply

You cannot copy content of this page

Scroll to Top