ಕಾವ್ಯಯಾನ
ಹೊಸ ಹಾಡು ದೇವಯಾನಿ ನೆನಪಿಗೆಂದು ಕೊಳಲ ನಾನೆಂದೂ ಕೇಳಲೇ ಇಲ್ಲ ಚಕ್ರ ಹಿಡಿಯಲೆಂದೇ ಹೊರಟವನು ನೀನು , ಕೊಳಲು ಬೇಕಿರಲಿಲ್ಲ ಏನು ಮಾಡಲಿ ಈ ಕೊಳಲ ಗಾಳಿ ನುಸುಳಿದರೂ ರಾಧೆ ರಾಧೇ ಎಂದೇ ಉಲಿಯುತ್ತಿದ್ದ ಕೊಳಲೀಗ ಬರಿ ಬಿದಿರ ಕೊಳವೆಯಾಗಿ ಬಿದ್ದಿದೆ ನೀನು ಕೊಳಲೂದಲೆಂದೇ ಗೋಕುಲಕೆ ಈ ಜಗಕೆ ಬರಲಿಲ್ಲ ಬಿಡು ಆದರೂ ಚಕ್ರ ಹೊತ್ತ ಕೈ ಸೋತಾಗ ಕೊಳಲ ನೆನಪಾಗದ್ದೇ ನನಗೆ ವಿಸ್ಮಯ ಕೊಳಲೆಂದರೆ ರಾಧೆ ಎಂದುಕೊಂಡಿದ್ದೆ ಎಂದು ಹೆಮ್ಮೆ ಪಡುತ್ತಿದ್ದೆ ನಾನು ಕೊಳಲ ತೊರೆದಷ್ಟೇ ಸುಲಭವಾಗಿ ನನ್ನ ತೊರೆದೇ ಬಿಟ್ಟೆ ನೀನು ನಿನ್ನ ಕೊಳಲು ನಿನಗೇ ಇರಲಿ ನನ್ನ ಪಾಡು ನನಗಿರಲಿ ಕೊಳಲ ಗೀತವಿಲ್ಲದೆಯೂ ಈ ರಾಧೆ ಬದುಕುತ್ತಾಳೆ ತನ್ನದೇ ಹಾಡ ಹಾಡುತ್ತಾಳೆ ============== ದೇವಯಾನಿ ಪರಿಚಯ: ಶುಭಾ ಎ.ಆರ್, ಗಣಿತ – ವಿಜ್ಞಾನ ಶಿಕ್ಷಕಿ, ದೇವಯಾನಿ ಹೆಸರಿನಲ್ಲಿ ಕಾಲೇಜು ದಿನಗಳಿಂದಲೂ ಕಥೆ ,ಕವನ ಪ್ರಕಟವಾಗಿವೆ. ” ಧರೆಯನುಳಿಸುವ ಬನ್ನಿರಿ ” ಶಾಲಾ ಮಕ್ಕಳಿಗಾಗಿ ಮೂರು ವಿಜ್ಞಾನ ನಾಟಕಗಳು, ” ತುಂಡು ಭೂಮಿ – ತುಣುಕು ಆಕಾಶ ” ಕಥಾ ಸಂಕಲನ, ” ತುಟಿ ಬೇಲಿ ದಾಟಿದ ನಗು” ಎಂಬ ಕವನ ಸಂಕಲನ ಪ್ರಕಟವಾಗಿವೆ .6,5 ನೇ ತರಗತಿಯ ವಿಜ್ಞಾನ ಪಠ್ಯ ಪುಸ್ತಕ ಸಮಿತಿಯಲ್ಲಿ ಕಾರ್ಯ ನಿರ್ವಹಣೆ. ಈಗ ಬೆಂಗಳೂರಿನ ರಾಜಾಜಿನಗರ ಬಿ ಇ ಒ ಕಚೇರಿಯಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ.





