ಕಾವ್ಯಯಾನ
ಮದುವೆಯ ಪ್ರಸ್ತಾಪ ಹರ್ಷಿತಾ ಕೆ.ಟಿ. ನೋಡುನೋಡುತ್ತಿದ್ದಂತೆ ಆಕಾಶದಲ್ಲೊಂದು ಕದ ತೆರೆದುಕೊಂಡಿತು ಯಾವುದೋ ಕೈಯೊಂದೂ ಚಾಚಿ ಕರೆಯಿತು ನಿಂತಲ್ಲಿಂದಲೇ ಕತ್ತು ನೀಳ ಮಾಡಿ ಎಟುಗಿಸಿ ನೋಡಿದೆ ಕದದ ಆ ಬದಿಯ ಲೋಕ ಅಲ್ಲಿ ಎಲ್ಲವೂ ಕಲ್ಪಿಸಿಕೊಂಡಿದ್ದಕಿಂತ ಅಚ್ಚುಕಟ್ಟು ಜೋಡಿಸಿಟ್ಟ ಕನಸುಗಳಿಗೆ ಧೂಳು ತಾಕಿರಲಿಲ್ಲ ಅಲ್ಲಿ ಹಸಿವು ಬಾಯಾರಿಕೆಗಳೂ ಊಳಿಡುವುದಿಲ್ಲ ಬತ್ತಿ ಸಿಕ್ಕಿಸಿ ಎಣ್ಣೆ ತುಂಬಿಸಿಟ್ಟ ದೀಪಗಳು ಬೆಳಗುವುದೊಂದೇ ಬಾಕಿ ಆದರೂ ಎತ್ತಲೂ ಈಗಾಗಲೇ ಬೆಳಕು ಈ ಭೂಮಿಯಂತಲ್ಲ ಕಸದ ರಾಶಿ ಇಲ್ಲ ಅಂಗಳವೂ ಇಕ್ಕಟ್ಟಿಲ್ಲ ಒಲೆಯೇರಿ ಕುಳಿತ ಮಡಿಕೆಗೆ ತೂತುಗಳಿಲ್ಲ ಮಾಳಿಗೆ ಸೋರಿ ಆಸೆಗಳು ನೀರು ಕುಡಿಯುವುದಿಲ್ಲ ಇದೇ ತಾನೇ ನಾ ಕಲ್ಪಿಸಿ ಕನವರಿಸಿದ್ದು ಇದೇ ತಾನೇ ನನ್ನಮ್ಮ ದಿಬ್ಬದ ಗುಡಿಯಲ್ಲಿ ಹರಸಿಕೊಂಡಿದ್ದು ಆದರೂ ಏನೋ ಸರಿಯೆನಿಸುತ್ತಿಲ್ಲ ಬಯಕೆಗೂ ಮಿಗಿಲಾಗಿ ದಕ್ಕಿದರೂ ಉಪ್ಪು ಸಾಲದ ಭಾವನೆಗಳು ಹಿಗ್ಗಿದರೂ ಅರಳದ ಒಡಲು ಬೆಳಕಿನ ಲೋಕದಲ್ಲಿ ಪ್ರತಿ ಘಳಿಗೆಯೂ ಬೆಳಕಂತೆ ಕತ್ತಲೆಯೇ ಕಾಣದಷ್ಟು ಕಣ್ಣಿಗೇ ಕತ್ತಲು ಕವಿಯುವಷ್ಟು ಗಂಧವಿಲ್ಲದ ಬೆಳಕು ಕೈಗಂಟಿದ್ದ ಎಂದೋ ಬಾಚಿದ ಸಗಣಿಯ ಘಮಲು, ಎದೆಯೊಳಗಿನ ಕತ್ತಲು ಹೆಚ್ಚು ಜೀವಂತವೆನಿಸಿತು ಮುಂಜಾವಿನಲಿ ಹಿತವೆನಿಸಿದ ಒಪ್ಪ ಓರಣಗಳು ಸಂಜೆ ಹೊತ್ತಿಗೆ ಅಸುನೀಗಿದಷ್ಟು ಸ್ತಬ್ದವೆನಿಸಿದವು ಸಾವು ನೋವುಗಳ ಕೇಳರಿಯದ ಮಹಲಿನ ಗೋಡೆಗಳು ಹೀರುತ್ತಿದಂತಿತ್ತು ನಗುವಿನ ಸದ್ದನೂ ಪ್ರತಿಧ್ವನಿಸದಂತೆ ಆಸೆಗಳಿಗೆ ರೆಕ್ಕೆ ಕಟ್ಟದ ಭೂಮಿ ಆಯ ತಪ್ಪಿ ಬಿದ್ದರೆ ಭೂಮಿ ಸಿಗದ ಆಕಾಶ ಚಾಚಲೊಲ್ಲದ ಕೈ ಒಲ್ಲೆಯೆನ್ನದ ಬಾಯಿ ಸಗಣಿ ಮೆತ್ತಿದ ಕನಸುಗಳು ಹರಡಿಕೊಂಡು ಕುಳಿತಿರುವೆ ಮನದ ಎದುರು ಆಯ್ಕೆಗಾಗಿ









