ಕಾವ್ಯಯಾನ
ಡಾ.ಗೋವಿಂದ ಹೆಗಡೆಯವರ ಎರಡು ಪದ್ಯಗಳು ನಕ್ಕು ಬಿಡು. ಉಂಡ ಕಹಿಗುಳಿಗೆಗಳ ತಪಸೀಲು ಬೇಕಿಲ್ಲ ಸವೆಸಿದ ಕೊರಕಲು ದಿಣ್ಣೆ ದಾರಿಗಳಿಗೆ ಎಡವಿದ ಗಾಯ ನಟ್ಟ ಮುಳ್ಳುಗಳಿಗೆ ಪುರಾವೆಯಿಲ್ಲ ಹನಿಗೂಡಿದ ಕಣ್ಣುಗಳಲ್ಲಿ ತಿರುಗಿ ನೋಡಿ ಒಮ್ಮೆ ನಕ್ಕು ಬಿಡು, ಗೆಳತಿ! ಕೂಡಿ ನಡೆದ ದಾರಿಗಳು ಬೇರಾದ ಹೆಜ್ಜೆಗಳು ಏರು ದಾರಿಯ ಕುಂಟುನಡೆ-ಗೆ ಒದಗದ ಊರುಗೋಲುಗಳು ಬೆನ್ನಿಗೆರಗಿದ ಬಾರುಕೋಲುಗಳು ಎಲ್ಲ ಅನುಭವ ಸಂತೆಯಲ್ಲೊಮ್ಮೆ ನಿಂತು ಗೆಳತೀ, ನಕ್ಕುಬಿಡು ದಾರಿ ಹೂವಿನದಲ್ಲ ನೆರಳು- ನೀರು ಸಿಗುವ ಖಾತರಿಯಿಲ್ಲ ಮುಗಿವ ಮುನ್ನ ಹಗಲು ಸೇರುವುದು ಯಾವ ಮಜಲು ಕಾಲ ಕೆಳಗಿನ ಕಳ್ಳ ಹುದಿಲಲ್ಲೂ ನೇರ ನಡೆವ ಬಿಗಿ ನಿಲುವಿನ ಅವಡುಗಚ್ಚಿದ ಮುಖದಲ್ಲೂ ಒಮ್ಮೆ ಸಡಲಿಸಿ ಗಂಟು ಕುಸಿದಾಗ ಮಡಿಲೀವ ನೆಲದ ನಲುಮೆಗೆ ನಮಿಸಿ ಒಮ್ಮೆ- ನಕ್ಕುಬಿಡು! ಕುಲುಮೆ ಚಿನ್ನ ಸುಟ್ಟಾಗ ಶುದ್ಧವಾಗುತ್ತದೆ ಮಣ್ಣು ಇಟ್ಟಿಗೆಯಾಗುತ್ತದೆ ಕಟ್ಟಿಗೆ ಇಂಧನವಾಗುತ್ತದೆ ಯಾರದೋ ಹಸಿವೆಗೆ ಎದೆಯ ಕುಲುಮೆ ಉರಿಯುತ್ತಲೇ ಇದೆ ಏನನ್ನು ಉರಿಸುತ್ತದೆ ಪುಟಕ್ಕಿಡುತ್ತದೆ ಅಥವಾ ಸುಟ್ಟು ಬೂದಿಯಾಗಿಸುತ್ತದೆ ನೀನು ಅಲಕ್ಕಾಗಿ ಕೂತುಬಿಟ್ಟಿದ್ದೀ- ನೆನಪುಗಳೇ ಇಲ್ಲದ ಹಾಗೆ..









