ಕಾವ್ಯಯಾನ
ನಾನು ನಿನ್ನಾತ್ಮದ ಗುರುತಾಗಿದ್ದೆ ಬಿದಲೋಟಿ ರಂಗನಾಥ್ ಹೌದು ನಾನು ನಿನ್ನಾತ್ಮದ ಗುರುತಾಗಿದ್ದೆ ಆ ನಿನ್ನ ನೋಡುವ ನೋಟದ ಬಿಸುಪಿಗೆ ಚಳಿಯಾಗಿದ್ದೆ ಮಳೆಯಾಗಿದ್ದೆ ಮುಗಿಲೇ ಆಗಿದ್ದೆ ನಿನ್ನ ಮೈಯೊಳಗಿನ ಬಿಸಿಗೆ ಬೆರೆತ ಜೀವವಾಗಿದ್ದೆ ನೀನು ನಡೆದ ದಾರಿಯ ಮೇಲಿನ ಹೆಜ್ಜೆಯನು ಮುಟ್ಟಿ ಬೆಳಕಿನ ಕಿರಣಗಳ ಮುಡಿಸಿದ್ದೆ ಉಳಿದ ಮಾತುಗಳ ನಿಟ್ಟುಸಿರ ಮೌನಕೆ ಕಾಲದ ಸವಾರ ಕುಂಟಾಗಿ ಬಿದ್ದಿದ್ದ ಎದೆಯೊಳಗಿನ ಗಿಲಕಿಗೆ ಕೀ ಕೊಡುವ ನಿನ್ನ ಹೃದಯದ ಕೋಮಲ ಕೈಗಳು ನನ್ನಿಂದ ಜಾರಿಹೋದಾಗಿನ ಶೂನ್ಯತೆಯಲಿ ಕತ್ತಲ ಮನೆಯಲಿ ದಿನಗಳ ಎಣಿಸುತ್ತ ಕೂತಿರುವೆ ಎಷ್ಟೊಂದಿತ್ತು ಹೇಳಲು ಮೌನದ ಒರಟುತನವ ಪಾಳಿಸಲು ನೋಡು ನಿನ್ನ ಕಣ್ಣ ಚಿಪ್ಪಿನಲಿ ಕಡೆದ ನನ್ನದೇ ಚಿತ್ರ ಕಣ್ಣೀರ ಕೋಡಿ ಹರಿದರೂ ಕೊಚ್ಚಿ ಹೋಗಿಲ್ಲ ಅಂದು ನಿನ್ನೆದೆಯೊಳಗೆ ಮಿನುಗಿದ ನಕ್ಷತ್ರ ಕಣ್ಮಿಟುಕಿಸುತ್ತಲೇ ಇದೆ… ನೀನು ಜಾರಿ ಹೋಗಿ ಎಷ್ಟೋ ವರುಷಗಳಾದರು ! ಅವತ್ತು ನೀನೆ ಹೇಳಬಹುದಿತ್ತು ಹೃದಯ ಕಣ್ಣೀರುಕ್ಕಿಸಿದ ಕಥೆಯ ಹೇಳದೆ ಹೋಗಿ ನೋವಿನಲಿ ಹೆಣೆದ ಬಲೆಯಾದೆ ನೀನೂರಿದ ಹೆಜ್ಜೆಗಳು ಕವಲೊಡೆದು ಚಾಚಿವೆ ಎದೆಯ ತುಂಬಾ ಒಣಗಿ ಬೆತ್ತಲಾಗಿದ್ದರೆ ನಿಜಕ್ಕೂ ಈ ಕವಿತೆ ಇವತ್ತು ನಗುವ ಚಲ್ಲುತಿರಲಿಲ್ಲ ನಿನ್ನ ನೆನಪ ದಾರಿಯ ಏರಿಯ ಮೇಲೆ ಕೂತು ಕೆರೆಯ ನೀರಿಗೆ ಕಲ್ಲೆಸೆಯುತ್ತಿರಲಿಲ್ಲ.!









