ಕಾವ್ಯಯಾನ
ಗಝಲ್ ಎ.ಹೇಮಗಂಗಾ ಎಲ್ಲ ಜಂಜಡಗಳ ಮರೆಸುವ ಮಾಯೆಯಿದೆ ನಿನ್ನ ನಗುವಿನಲ್ಲಿ ಎಲ್ಲ ಒತ್ತಡಗಳ ಶೂನ್ಯವಾಗಿಸುವ ಕಲೆಯಿದೆ ನಿನ್ನ ನಗುವಿನಲ್ಲಿ ನನಗೆಂದೇ ದೈವ ಬುವಿಗೆ ಕಳಿಸಿದ ಕೊಡುಗೆ ನೀನು ಮಗುವೇ… ಎಲ್ಲ ಚಿಂತೆಗಳ ಇಲ್ಲವಾಗಿಸುವ ಮೋಡಿಯಿದೆ ನಿನ್ನ ನಗುವಿನಲ್ಲಿ ಕಾಲದ ಪರಿವೆಯಿಲ್ಲದೇ ಕಾದೆ ಬರಿದಾದ ಮಡಿಲು ತುಂಬಲೆಂದು ಎಲ್ಲೆಡೆಯೂ ಮುದ ಹರಡುವ ಮುಗ್ಧತೆಯಿದೆ ನಿನ್ನ ನಗುವಿನಲ್ಲಿ ಹೆಣ್ತನಕೆ ಹಿರಿಮೆ ತಂದ ತಾಯ್ತನದ ಭಾಗ್ಯ ನನ್ನದಾಗಿದೆ ಇಂದು ಅಶಾಂತಿಯ ತೊಡೆವ ಶಾಂತಿಯ ನೆಲೆಯಿದೆ ನಿನ್ನ ನಗುವಿನಲ್ಲಿ ಕಿವಿಗಳ ತಣಿಸುತಿವೆ ನಿನ್ನ ಮೃದು ಮಧುರ ತೊದಲು ನುಡಿಗಳು ಬಳಲಿದ ಜೀವಕೆ ಬಲ ನೀಡುವ ಚೈತನ್ಯವಿದೆ ನಿನ್ನ ನಗುವಿನಲ್ಲಿ ಇನ್ನೆಂದೂ ನಾ ಏಕಾಂಗಿಯಲ್ಲ ನಿನ್ನೊಡನಾಟ ನಲಿವು ತಂದಿರಲು ಸಂಕಷ್ಟಗಳ ಇರುಳು ಕಳೆದು ಬೆಳಕು ಮೂಡಿದೆ ನಿನ್ನ ನಗುವಿನಲ್ಲಿ ಸಿರಿಸಂಪತ್ತೆಲ್ಲವೂ ಗೌಣವಾಗಿದೆ ಅಮೂಲ್ಯ ನಿಧಿಯೇ ನೀನಾಗಿರೆ ಆ ಸ್ವರ್ಗವನೇ ಧರೆಗಿಳಿಸಿದ ಚಮತ್ಕಾರವಿದೆ ನಿನ್ನ ನಗುವಿನಲ್ಲಿ *************************









