ಕಾವ್ಯಯಾನ
ದಂಗೆ. ಜ್ಯೋತಿ ಡಿ.ಬೊಮ್ಮಾ. ಶಾಂತಿದೂತ ಪಾರಿವಾಳವೇ ಇನಿತು ಹೇಳಿ ಬಾ ಅವರಿಗೆ ದ್ವೇಷ ತುಂಬಿದ ಎದೆಗೂಡೊಳಗೆ ಕೊಂಚ ಪ್ರೀತಿಯ ಸಿಂಚನ ಮೂಡಿಸಲು.. ಪ್ರೀತಿಯ ಮೇಘದೂತನೆ ಸ್ವಲ್ಪ ಅರುಹಿ ಬಿಡು ಅವರನ್ನು ಸೇಡಿನ ಜ್ವಾಲೆಯಿಂದ ಒಬ್ಬರನ್ನೊಬ್ಬರು ದಹಿಸಿಕೊಳ್ಳದಿರೆಂದು.. ಎಲ್ಲೆಡೆ ಸಮನಾಗಿ ಹಬ್ಬಿದ ಬೆಳದಿಂಗಳೆ ತಿಳಿಸಿ ಹೇಳು ಅವರಿಗೆ ಹಿಂದಿನಂತೆ ಮುಂದೆಯೂ ಇದು ರಾಮ ರಹೀಮರ ನಾಡೇ ಎಂದು.. ಎಲ್ಲರಿಗೂ ಬೆಳಕನ್ನು ಹಂಚುವ ಬಿಸಿಲೆ ಅರ್ಥ ಮಾಡಿಸು ಅವರಿಗೆ ಅಮಾಯಕರನ್ನೂ ಪ್ರಚೋದಿಸಿ ದಂಗೆ ಎಬ್ಬಿಸಿ ಶಾಂತಿ ಕದಡುವ ಆಗಂತುಕರಿದ್ದಾರೆಂದು.. ನಾಲ್ಕು ದಿಕ್ಕಿಗೂ ಬೀಸುವ ಗಾಳಿಯೆ ದೃಢ ಪಡಿಸು ಅವರನ್ನೂ ಇಲ್ಲಿ ಯಾರು ಯಾರ ಹಕ್ಕು ಕಸಿಯುತ್ತಿಲ್ಲವೆಂದೂ ದಾಖಲೆ ಹೊಂದುವದರಿಂದ ನಮ್ಮ ಹಕ್ಕುಗಳು ಇನ್ನಷ್ಟೂ ಗಟ್ಟಿಗೊಳ್ಳುತ್ತವೆಂದು.. ಎಲ್ಲರ ತೃಷೆ ತೀರಿಸುವ ಜಲದೇವಿಯೇ ಶುಧ್ಧ ಗೊಳಿಸು ಮನಕ್ಕಂಟಿದ ಮಲೀನವನ್ನೂ ಭಾರತದಲ್ಲಿರುವ ನಾವೆಲ್ಲರೂ ಭಾರತೀಯರಾಗಿರೋಣ ಎಂದೆಂದಿಗೂ. ************









