ಯುಗಾದಿಗೊಂದು ಗಝಲ್
ಗಝಲ್ ಸುಜಾತಾ ಲಕ್ಮನೆ ಒಲಿದೊಮ್ಮೆ ನಕ್ಕುಬಿಡು ಯುಗಾದಿ ಚೆಲ್ಲಲಿ ನಮ್ಮೊಳಗೆ ಮುನಿಸೇಕೆ ಹೇಳಿಬಿಡು ಯುಗಾದಿ ಮಾಗಲಿ ನಮ್ಮೊಳಗೆ ಕನಸು ಕಂಗಳ ತುಂಬ ರಂಗು ರಂಗಿನ ಚುಂಬಕ ಚಿತ್ತಾರ ಚುಕ್ಕಿಗಳ ಸುರಿದುಬಿಡು ಯುಗಾದಿ ತುಂಬಲಿ ನಮ್ಮೊಳಗೆ ಹೀಗೆ ವರುಷ ವರುಷಕೂ ಬರುವ ಹಬ್ಬವೇತಕೆ ಹೇಳು ನವ ಹರುಷವ ತೂಗಿಬಿಡು ಯುಗಾದಿ ಜೀಕಲಿ ನಮ್ಮೊಳಗೆ ತೆರೆಯು ತೆರೆವ ತೆರದಿ ನಾವು ತೆರೆದು ಬೆರೆಯಲಾರೆವೇನು ತೆರೆತೆರೆದು ಬೆರೆತುಬಿಡು ಯುಗಾದಿ ಬೀಗಲಿ ನಮ್ಮೊಳಗೆ ಉಸಿರುಸಿರು ಬೆರೆಯದೇ ಒಳಗೆ ಬಿಸುಪು ಹರಿವುದೇನೇ ನಿನ್ನ್ಹೆಸರ ಉಸಿರಿಬಿಡು ಯುಗಾದಿ ಮಿಂಚಲಿ ನಮ್ಮೊಳಗೆ ಹಗಲಿರುಳು ಪ್ರೀತಿ ಸುರಿವಾಗ ಜಗದ ಗೊಡವೆ ನಮಗೇಕೆ ಬರಸೆಳೆದು ಅಪ್ಪಿಬಿಡು ಯುಗಾದಿ ನಾಚಲಿ ನಮ್ಮೊಳಗೆ ಎದೆಕದವು ತೆರೆದಿದೆ ನಿನಗೆ ನೇರ ಒಳಗೆ ಬಾ ಎನ್ನೊಲವೆ “ಸುಜೂ” ಒಳ ಭಾವ ಅರಿತುಬಿಡು ಯುಗಾದಿ ಬಾಳಲಿ ನಮ್ಮೊಳಗೆ









