ಕಾವ್ಯಯಾನ
ಪ್ರೀತಿಸಲಾಗುವುದಿಲ್ಲವಲ್ಲ ದೀಪಾ ಗೋನಾಳ.. ದ್ವೇಷಿಸುವಷ್ಟು ಸುಲಭವಾಗಿ ಪ್ರೀತಿಸಲಾಗುವುದಿಲ್ಲವಲ್ಲ ಎನೆಲ್ಲ ನೋವು ಹತಾಷೆ, ಸಂಕಟ ಅನುಭವಿಸಿಯು ಅನದೆ ಉಳಿಯಬೇಕಲ್ಲ ಹಾವು ತುಳಿದರೂ ಹೂವು ತುಳಿದದ್ದೆಂದು ಸಂಭಾಳಿಸಬೇಕಲ್ಲ ಕನಸು ಕನವರಿಕೆ ಬೆಸುಗೆ ಹಾಕಿ ಚೆಂದದ ಮಾತ ಹೇಳಿದಾಗಲೂ ಮುನಿಸು ಮಾಡುವ ಗೆಳೆಯನ ಉಳಿಸಿಕೊಳಬೇಕಲ್ಲ ಕಾಡಿಗೆಯಿಟ್ಟ ಕಣ್ಕೆಳಗಿನ ಕಪ್ಪು ವರ್ತುಲಕೆ ಬೆಳ್ಳಂಬೆಳ್ಳಗಿನ ಪೌಡರು ಹಾಕಿ ನಿಂದು, ಒಂದೂದ್ದದ ನಿದ್ದೆ ಮಾಡಿದೆ ಕನಸಿನ ತುಂಬ ನೀನೆ ಎಂದಂದು ಅವನ ಕನಸಿನ ಹೆಣಿಕೆಗೆ ದಾರವಾಗಬೇಕಲ್ಲ ಭುಜ ಹಿಡಿದು ಅಲುಗಿಸಿದಾಗೆಲ್ಲ ಕಳೆದು ಹೋದ ಚಿಂತೆಜಾತ್ರೆಯ ಮುಚ್ಚಿಟ್ಟು ಆಕಾಶ ನಿರುಕಿಸಬೇಕಲ್ಲ ದ್ವೇಷಿಸುವಷ್ಟು ಸುಲಭವಾಗಿ ಪ್ರೀತಿಸಲಾಗುವುದಿಲ್ಲವಲ್ಲ ಅವನೆಂಬ ಅಂಬಾರಿಯ ಎದೆತುಂಬ ಹೊತ್ತು ಜೀವನ ಸವಾರಿಗೆ ಸಿಗದ ಸುಖೀ ಚಣಗಳ ಹುಡುಕುತ್ತ ರಥ ಬೀದಿಯಲ್ಲಿ ಸಾಗಬೇಕಲ್ಲ ಭಾರವಾಯಿತೆನ್ನುವಂತಿಲ್ಲ ಶ್ವಾಸಕ್ಕಿಳಿದ ಗಾಳಿ, ಅರಸುತ್ತ ಉಸಿರೆಳೆದವಳು ನಾನೇ ಅಲ್ಲವೇ ಅನ್ನುತ್ತಾನಲ್ಲ ದ್ವೇಷಿಸುವಷ್ಟು ಸುಲಭವಾಗಿ ಪ್ರೀತಿಸಲಾಗುವುದಿಲ್ಲವಲ್ಲ.. ********









