ಕಾವ್ಯಯಾನ
ನೀರೊಲೆಯ ಮೇಲೆ. ಶಶಿಕಲಾ ವೀ ಹುಡೇದ ನೀರೊಲೆಯ ಮೇಲೆ. ಸೀಗೆಯ ಹೊಗರು ಸುಡುಸುಡು ನೀರು ಬೆರಕೆಯ ಬೇಡುವ ಹೊತ್ತು ಸುಣ್ಣ ನುಂಗಿದ ಹೊಗೆಸುತ್ತಿದ ಗೋಡೆಗಳ ಮೇಲೆ ನೀರ ಹನಿಗಳದೇ ಚಿತ್ತಾರ ಯಾವ ಯುದ್ಧದ ಕತೆಯ ಹೇಳುತ್ತಾವೋ ನೋಡುವ ಕಣ್ಣುಗಳಿಗೆ ಒಂದೊಂದು ರೀತಿಯ ಅರ್ಥ ಉಸಿರಾಡಲು ಒದ್ದಾಡುವ ಒಂದೇ ಒಂದು ಕಿಂಡಿಯ ಕುತ್ತಿಗೆಯ ಮಟ್ಟ ಧೂಳು ಮಸಿಯದೇ ಕಾರುಬಾರು ಹೆಸರೂ ನೆನಪಿರದ ಮುತ್ತಜ್ಜ ಬುನಾದಿ ಹಾಕಿದ ಈ ಬಚ್ಚಲು ಮನೆ ಯಾವ ವಾರಸುದಾರನ ಅವಧಿಗೆ ಏನನು ಸುಖ ಕಂಡಿದೆಯೋ ಯಾರಿಗೂ ನೆನಪಿಲ್ಲ ತಿಕ್ಕಿ ತೊಳೆಯಲು ಹೋಗಿ ಅದೆಷ್ಟು ಬಳೆಗಳು ಚೂರಾಗಿವೆಯೋ ಆ ದೇವರೇ ಬಲ್ಲ! ನೀರು ಕುಡಿದು ಲಡ್ಡಾದ ಕದ ಮುಚ್ಚಿದ ಈ ಕೋಣೆಯೊಳಗೆ ಮಾತ್ರ ಇಷ್ಟು ಹತ್ತಿರ ನಾನು ನನಗೆ ಬಯಲಿನಷ್ಟು ಬೆಳೆದು ಬೆಟ್ಟವಾಗಿ ಬೆತ್ತಲಾಗಿ ಮಲ್ಲಿಕಾರ್ಜುನನಿಗಾಗಿ ಕಾಡುಮೇಡ ಅಲೆದ ಅಕ್ಕ ಫಕ್ಕನೆ ನೆನಪಾಗುತ್ತಾಳೆ ಇದೇ ಬಚ್ಚಲಿನಲ್ಲಿ ಧರ್ಮರಾಯನ ಕೃಪೆ ತುಂಬಿದ ಸಭೆಯೊಳಗೆ ಮುಟ್ಟಾದ ಪಾಂಚಾಲಿ ಗೇಣು ಬಟ್ಟೆಯ ಕರುಣಿಸುವ ಜಾರ ಕೃಷ್ಣನ ಕೈಗಳನು ಹುಡುಕಿ ಕಣ್ಣೀರಿಡುವ ಚಿತ್ರ ಮರೆಯಾಗಲು ಇನ್ನೇಸು ದಿನ ಬೇಕು? ಸೀರೆಯ ಸೆಳೆದ ದುಶ್ಯಾಸನ ದುರುಳನೇ ಸರಿ ಆದರೆ ಒಬ್ಬನಲ್ಲ ಇಬ್ಬರಲ್ಲ ಕೋತ್ವಾಲರಂತಹ ಐವರಿರುವಾಗ ಗಂಡ ಅನ್ನುವುದಕೆ ಏನು ಅರ್ಥ ಹೇಳಿ? ಸ್ವಯಾರ್ಜಿತ ಆಸ್ತಿಯಾಗಿ ಹೋದೆ ನನ್ನ ಬೆತ್ತಲೆ ಮಾಡಲು ಹೋಗಿ ಲೋಕವೇ ಬೆತ್ತಲಾಯಿತಲ್ಲ! ಎನ್ನುವ ಪಾಂಚಾಲಿಯ ಸ್ವಗತಕ್ಕೆ ಯಾರೋ ಸ್ಪೀಕರು ಹಚ್ಚಿದ್ದಾರೆ ಅಹಲ್ಯೆಯ ಸೇರಲು ಹೋಗಿ ಇಂದ್ರ ಸಹಸ್ರಯೋನಿಯಾದದ್ದೇನೋ ಸರಿ ಅವಳೇಕೆ ಕಲ್ಲಾಗಿ ರಾಮನಿಗಾಗಿ ಕಾಯಬೇಕು? ಅಷ್ಟಕ್ಕೂ ಆ ರಾಮನೇನು ಸಾಜೋಗನೆ? ತುಳಿತುಳಿದು ಆಳಲೆಂದು ಹತ್ತತ್ತು ಅವತಾರವೆತ್ತಿ ಮತ್ತೆ ಮತ್ತೆ ಬರುತ್ತಾರಿವರು ಗಂಧರ್ವರ ರತಿಕೇಳಿ ನೋಡಿದ ರೇಣುಕೆ ತಲೆಯನ್ನೇ ಕೊಡಬೇಕಾಗಿತ್ತೆ? ನೂರೆಂಟು ಪ್ರಶ್ನೆಗಳಿವೆ ಉತ್ತರಿಸುವ ಧೀರರಾರೊ ಕಾಣೆ ಕೂಸಾಗಿ ಇದೇ ಬಚ್ಚಲಲ್ಲಿ ಮೂಗು ಹಣೆ ತಿಕ್ಕಿಸಿಕೊಂಡು ಕೆಂಪಾಗಿ ಚಿಟಿಚಿಟಿ ಚೀರಿದ್ದು ದೊಡ್ಡವಳಾದೆನೆಂದು ಹಾಲು ತುಪ್ಪ ಹಾಕಿ ಅರಿಷಿಣವ ಪೂಸಿ ಮೀಯಿಸಿದರು ಮತ್ತೆ ಇದೇ ಬಚ್ಚಲಲ್ಲಿ ಮಣೆಯ ಮೇಲೆ ಸೇಸೆ ವಧುವಾಗಿ ಮಧುವಾಗಿ ಹಣ್ಣಾಗಿ ಹೆಣ್ಣಾಗಿ ಮತ್ತೆ ದಣಿವು ಕಳೆಯಲೆಂದು ಇದೇ ಬಚ್ಚಲಿನ ಸುಡುಸುಡು ನೀರು ಮೀಯಲೆಂದು ಮೀಯಿಸಲೆಂದು ಹುಟ್ಟಿದ ಜೀವವೇ ನೀರೊಲೆಯ ನೆಂಟಸ್ತಿಕೆ ನಿನಗೆ ಕುದಿವ ನೀರಿಗೆ ಬೆರಕೆಯ ಹದ ಅಷ್ಟಕೇ ದಣಿವು ಕಳೆಯಿತೆಂದು ನಿದ್ದೆ ಮಾಡೀಯೆ ಜೋಕೆ! ಸೀತೆ ಸಾವಿತ್ರಿ ದ್ರೌಪದಿ ಅನಸೂಯೆ ಏಸೊಂದು ಮಾದರಿ ನಡುವೆ ನಿನಗಿಷ್ಟ ಬಂದದ್ದು ಆರಿಸಿಕೋ ಪರವಾಗಿಲ್ಲ ನೆನಪಿಡು ಇದು ದಿಗಂತವಿರದ ನಿರ್ಭಯದ ನಿತ್ಯ ವ್ಯವಹಾರ ಇಲ್ಲಿ ನೋವು ಚಿರಾಯುವಾಗಿದೆ ಗೆಳತಿ ಸೀಗೆಯ ಕಡುಹೊಗರು ಈಗಿಲ್ಲದಿರಬಹುದು ಕೆಂಡಸಂಪಿಗೆಯಂಥ ಬೆಂಕಿ ಈಗ ಕಾಣದಿರಬಹುದು ಮಸಿಬಳಿದು ಹುಗಿದ ಹಂಡೆ ಕಾಣೆಯಾಗಿರಬಹುದು ಝಳ ಹೆಚ್ಚುತ್ತಲೇ ಇದೆ ಹೀಗೆ ಈ ಬಚ್ಚಲು ನಮ್ಮೊಳಗಿನ ನಮ್ಮನ್ನು ತಟ್ಟಿ ಎಬ್ಬಿಸುತ್ತಲೇ ಇದೆ ಬೆಚ್ಚಿ ಬೀಳಿಸುತ್ತಲೇ ಇದೆ.. ************









