ಕಾವ್ಯಯಾನ
ನನ್ನೊಳಗಿನ ನೀನು ದೀಪಾ ಗೋನಾಳ ಏನೋ ಹೇಳಬೇಕಿತ್ತು ಹೇಳುವುದು ಬೆಟ್ಟದಷ್ಟಿತ್ತು ಸಂತಸದ ಮೂಟೆಹೊತ್ತು ನಿನ್ನ ಬಾಗಿಲು ತಟ್ಟಿದೆ ನೂಕಿಕೊಂಡು ರಭಸವಾಗಿ ಒಳನುಗ್ಗಿದೆ, ಅವಸರ ಸಲ್ಲದು ನಿಧಾನ ಎಂದವನ ಧ್ವನಿಯಲ್ಲಿ ಕೋಪ ಮಿಶ್ರಿತ ಪ್ರೀತಿಯಿತ್ತು ಇನ್ನೇನು ಎಲ್ಲ ಹೇಳಿ ಗೆಲುವ ಹಂಚಿ ತೇಗಬೇಕು ಮಾತಿನ ನಡುವಿನ ಅಂತರದಲ್ಲಿ ಅವಾಂತರವೆದ್ದಿತು ಹೋಗು ಇನ್ನೊಮ್ಮೆ ಹುಡುಕಿ ತಾ ಎಂದಿ, ಬಂದೆ, ತಿರುವಿನಲ್ಲಿ ನಿಂತು ಬಿಕ್ಕಳಿಸಿ ತಂದ ಮೂಟೆಯ ತಲೆಯಲ್ಲೆ ಉಳಿಸಿ ಹೊರಟೆ, ಎಲ್ಲಿಗೆ!? ನನ್ನ ಜೀವ ತಲ್ಲಣಿಸುತ್ತಿತ್ತು ಹಿಡಿ ಮಾತು ಹುಡಿಯಾಗಿ ಇಡೀ ಜೀವ ಮುದ್ದೆಮಾಡಿ ಪಳ್ಳನೆ ಉದುರಿದ ಹನಿ ನೆಲಕಾಣುವ ಮನ್ನ ಕವಸ್ತ್ರಕ್ಕಿಟ್ಟು ಕರಗಿಸಿ ನೆಲಕಚ್ಚಿ ಕುಳಿತೆ ಈ ನೆಲ ಒಮ್ಮೆ ಬಿರಿದು ನುಂಗಿಬಿಡಲಿ ಸಮಾಧಾನದ ಧಾತ್ರಿಯ ಒಡಲ ಸೇರಿಬಿಡಲಿ, ಅಲ್ಲಿಗೆ.. ಸಂತಸ ಸಂಕಟ ಬಿಕ್ಕು ಕಣ್ಣಹನಿ ಒಡಲು ಕಡಲು ನಾನು ನನ್ನೊಳಗಿನ ನೀನು ಇಲ್ಲೆ ಸಮಾಧಿಯಾಗಿಬಿಡಲಿ.. **********









