ಕಾವ್ಯಯಾನ
ಪ್ರೀತಿಯ ಗೆಳೆಯರೇ ಮೂಗಪ್ಪ ಗಾಳೇರ ಪ್ರೀತಿಯ ಗೆಳೆಯರೇ……. ನಿಮಗೊಂದು ಕತೆ ಹೇಳಬೇಕೆಂದಿರುವೆ ಎರೆಮಣ್ಣ ಕರಿ ಚೆಲುವು ಸುಳಿಗಾಳಿಯ ಅಲೆಮಾರಿಯ ನಡಿಗೆ ಬೈಕೊಂಡು ಹುರ್ಕೊಂಡು ಸರಿಯಾಗಿ ಕೇಳಿ ನಾ ಹೇಳುವ ಕಥೆಯಾ……..! ಪ್ರೀತಿಯ ಗೆಳೆಯರೇ……. ನಿಮಗೊಂದು ಪತ್ರ ಬರೆಯುವೆ ನಿಟ್ಟುಸಿರು ಬಿಡದೆ ಬಿಟ್ಟ ಕಣ್ಣುಗಳ ಮುಚ್ಚದೆ ಓದಿ ಅಲ್ಲಲ್ಲಿ ಹುಡುಕಿ ತಡಕಿ ಭಯಬಿದ್ದ ಮನಸ್ಸುಗಳನ್ನು ಪತ್ರದಲ್ಲಿ ಬಚ್ಚಿಟ್ಟಿರುವೆ……..! ಪ್ರೀತಿಯ ಗೆಳೆಯರೇ…… ನಿಮಗೊಂದು ಗುಟ್ಟು ಹೇಳಬೇಕೆಂದಿರುವೆ ಬಾರದ ದಿನಗಳಲ್ಲಿ ಕಳೆದ ಕಂಬನಿಯ ಕನಸುಗಳು ಚಿರತೆ ನಡಿಗೆ ಕದ್ದ ಪೂರ್ವಜರ ಉಸಿರು ಒಲವಿನ ಬಗೆಬಗೆಯ ಗುಟ್ಟನ್ನು ಬೆಂಕಿಯ ಹೃದಯದಲ್ಲಿ ಹೊರಬಂದ ತಣ್ಣನೆಯ ನಾಲಿಗೆಯ ಗುಟ್ಟೊಂದು ಹೇಳುವೆ…….! ಪ್ರೀತಿಯ ಗೆಳೆಯರೇ…… ನಿಮಗೊಂದು ಕವಿತೆ ಕೇಳಿಸಬೇಕೆಂದಿರುವೆ ಇರುಳ ಕತ್ತಲೆಯಲ್ಲಿ ಖಾಲಿಯಾದ ಕನಸುಗಳನ್ನು ಬಯಲುಗಳಲ್ಲಿ ಒಂಟಿಯಾದ ಜೀವಿಗಳ ಒಲವನ್ನು ಕಾಡು ಕಡಲ ಮಡಿಲಲ್ಲಿ ಜಂಡು ಜನಗಳ ಅಸಾಯಕ ತೋಳುಗಳ; ಶಬ್ದಶ್ಮಶಾನದಾಚೆ ಇರುವ ಕಡಲಾಳದ ಕವಿತೆಯೊಂದು ಕೇಳಿಸುವೆ………! ********









