ಕಾವ್ಯಯಾನ
ಮುಂಜಾನೆ ಮಂಜಿಗೂ ಮತ್ತೇರುತ್ತಿದೆಯಂತೆ!!! ಸರೋಜಾ ಶ್ರೀಕಾಂತ್ ಅಮಾತಿ ಇಬ್ಬನಿಯ ಹನಿಯೊಂದು ಲಜ್ಜೆ ಬಿಟ್ಟು ಗೆಜ್ಜೆನಾದದ ಹೆಜ್ಜೆ ಹೇಗಿಡಲೆಂತಂತೆ!? ಹರಸುತ ಮೋಡಗಳೆಲ್ಲ ಮತ್ತೇ ತುಸು ಕತ್ತಲವ ಹೊತ್ತು ತಂದು ಹಾರೈಸಿದವಂತೆ! ಹಬ್ಬಿದ ಮಬ್ಬನ್ನೇ ನೆವ ಮಾಡಿಕೊಂಡಿಬ್ಬನಿ ಗರಿಕೆಯ ತಬ್ಬಿಕ್ಕೊಂಡಿತಂತೆ! ಅರಸಿ ಬಂದ ಸವಿಗಾಳಿಯು ಸರಸವ ನೋಡಿ ಸುಮ್ಮನೆ ದೂರ ಸರಿಯಿತಂತೆ! ಸ್ಪರ್ಶದುಸಿರು ಹರ್ಷದರಸಿಗೆ ಹೊಸದಿರಿಸ ನೆಪದಿ ಹನಿಹನಿ ನೀರನೇ ಪೋಣಿಸಿ ಸೀರೆಯಾಗಿಸಿತಂತೆ! ನಾಚಿ ಇಬ್ಬನಿ ಮುತ್ತಿಗೆ ಹಾಕಿದೆ ಮುತ್ತೀನಿಂದಲೇ…. ಬಾಚಿ ಅಪ್ಪಿದ ಮುಂಜಾನೆ ಮಂಜಿಗೂ ಮತ್ತೇರುತ್ತಿದೆಯಂತೆ….!!! ***********









