ಕಾವ್ಯಯಾನ
ಅವ್ವ ಲಕ್ಷ್ಮಿ ದೊಡಮನಿ ನಮ್ಮನೆ ಮುತ್ತೈದಿಯಾದಾಕಿ ಅವ್ವ ನೀನಂದ್ರ ನನ್ಜೀವ ಅಪ್ಪನ ಅರ್ಧಾಂಗಿಯಾದಾಕಿ ಅವ್ವ ನೀನಂದ್ರ ನನ್ಜೀವ ಚಳಿಗಾಲದಾಗ ಸೂರ್ಯಾನು ವ್ಯಾಳಿ ಮೀರ್ತಾನ ಆದ್ರ ಹೊತ್ತೀಗ ಕೈತುತ್ತಿಡುವಾಕಿ ಅವ್ವ ನೀನಂದ್ರ ನನ್ಜೀವ ನನ್ನ ಚಿಕ್ಕಂದನ್ನ ಚಿನ್ನದ ಚಣಗಳಿಂದ ಹೆಣಿದು ಒಲವು ಸುರಿಸಿದಾಕಿ ಅವ್ವ ನೀನಂದ್ರ ನನ್ಜೀವ ಜೇನುಗೂಡಿನ ಛಾವಣಿ ನಿಸರ್ಗ ಕೋಪಕ ನಡುಗಿದ್ರೇನ ಸೆರಗು ಅಲ್ಲಾಡಿಸದಾಕಿ ಅವ್ವ ನೀನಂದ್ರ ನನ್ಜೀವ ಕಾಡೋ ಒಲಿ,ಉರಿಸೋ ಹೊಗಿ, ಅಳಿಸೋ ಬಡತನವ ಸೋಲಿಸಿ ನಗುವಾಕಿ ಅವ್ವ ನೀನಂದ್ರ ನನ್ಜೀವ ಊಟದ ನಡುವ ಗುಟುಕ ಅಂಬಲಿ ಕುಡಿದಾಂಗ ಸವಿಸವಿ ಮಾತಾಡಾಕಿ ಅವ್ವ ನೀನಂದ್ರ ನನ್ಜೀವ ಅಡುಗಿ ಮಾಡಾಗ ಕತಿ ಹೇಳಿ ಒಳಮನಸ್ಸಿಗ ಕೈಹಾಕಿ ಮೊದಲ ಮೇಷ್ಟಾದಾಕಿ ಅವ್ವ ನೀನಂದ್ರ ನನ್ಜೀವ **********









