ಕಾವ್ಯಯಾನ
ಜೇಡ ರಾಜೇಶ್ವರಿ ಭೋಗಯ್ಯ ಕಾವ್ಯಕ್ಕೆ ವಸ್ತುವಾಗಲೆಂದು ಜೇಡವನ್ನು ಆರಿಸಿಕೊಂಡಿದ್ದೆ ಕವಿಯೊಬ್ಬರು ಹೇಳಿದ್ದರು , ವಸ್ತು ಯಾವುದಾದರೂ ಆಗಬಹುದು ಕವನ ಕಟ್ಟುವುದಕ್ಕೆ, ಒಡೆದ ದೋಣಿ ,ಮುರಿದ ಏಣಿ ಹೀಗೆ… ಜೇಡ ಕಟ್ಟುತ್ತಲೇ ಇತ್ತು ಬಲೆಯನ್ನು ನಾ ಕೆಡವುತ್ತಲೇ ಇದ್ದೆ ಪದೇ ಪದೇ ಅದರ ಬದುಕನ್ನು ಕೂತು ನೋಡಿದ್ದೇ ಬಂತು, ಪದಗಳು ಬರಲಿಲ್ಲ ರಾಜ ಬಲೆ ಹೆಣವುದ ನೋಡಿಯೇ ಸ್ಪೂರ್ತಿಗೊಂಡನಲ್ಲ ಜೇಡ ಬಲೆಯನ್ನು ಹೆಣೆಹೆಣೆದು ಕಟ್ಟಿಯೇ ಬಿಟ್ಟಿತು ತನ್ನರಮನೆಯನ್ನು ದಿಕ್ಕೆಟ್ಟಿದ್ದವ ಅವ, ಜೇಡ ಮನೆಕಟ್ಟಿದ್ದ ನೋಡಿ ತಾನೂ ಕಟ್ಟಿದ ಪುನಃ ಸೈನ್ಯವ ನಾನೋ ಯಾರಿಗೂ ಆಗಿರಲಿಲ್ಲ ರಾಜ ಮುಳುಗಿರಲಿಲ್ಲ ಸಾಮ್ರಾಜ್ಯ ಸುಖಾಸುಮ್ಮನೆ ಯಾರು ಯಾರಿಗೋ ಮೂಡುವುದಿಲ್ಲ ಪದಗಳು ಜೀವ ತಲ್ಲಣಿಸದೆ ಕಟ್ಟಲಾಗುವುದಿಲ್ಲ ಬಲೆಯನ್ನೂ , ಬದುಕನ್ನು. *********









