ಅವಳು ಮತ್ತು ಅಗ್ಗಿಷ್ಟಿಕೆಯು..!!
ಕವಿತೆ ವೀಣಾ ಪಿ. ಧೋ………. ಎಂದೆನುತೆ ಸುರಿಮಳೆಯ ದಾರ್ಢ್ಯತೆಯ ಗಡ-ಗಡನೆ ನಡುಗಿಸುವ ತಣ್ಣೀರ ಧಾವಂತಕೆ ತೊಯ್ದ ಕಾಯವ ಮುಚ್ಚಿಟ್ಟ ಸೀರೆಯ ಸೆರಗಿನಂಚನು ಹಿಂಡುತಲಿ ಗುಡುಗು-ಮಿಂಚಿನ ಸೆಡವಿಗೆ ಭಯಗೊಂಡ ಹುಲ್ಲೆಯಂತಾದ ಭಾವದಲಿ ಬರದೂರ ಬಯಲಿಂದ ಕಟ್ಟಿಗೆಯನಾಯಲು ಕಾನನಕೆ ಬಂದಾಕೆ ಸಂಜೆ ಮಳೆಗೆ ಸಿಲುಕಿರಲು ಕತ್ತಲಾವರಣದಂಜಿಕೆಗೆ ದೂರದಂಚಿನ ಬೆಳಕು ಅರಸುತ್ತಲೋಡುತ್ತ ಅದಾವುದೋ ಹಿತ್ತಲಿನ ಹೊಚ್ಚನೆಯ ತಾವತ್ತ ಹೊರಳಿಸಿರೆ ಅಂಜುತಲಿ ಜಿಂಕೆ ಕಣ್ಗಳನು ಬೆಳದಿಂಗಳಂತಿವಳ ಸೆಳೆದು ಕಾವು ಕೊಡುವೆನೆಂದೆಂಬ ಕಾಮದಲಿ ಅಗ್ಗಿಷ್ಟಿಕೆಯೊಂದು ಉರಿಜ್ವಾಲೆಯಾಡಂಬರ ತೋರುತಿರೆ.. ತಾ ತೋಯ್ದ ಗತಿ ಮರೆತು ಚಡಪಡಿಕೆ ಪುಟಿಸುತ್ತ ಹೊರಟೇ ಬಿಟ್ಟಳಾಕೆ ತನ್ನಿರುವಿಲ್ಲದೇ ತೊಟ್ಟಿಲಲಿ ಕನಲುತಿಹ ಕಂದನ ಕನವರಿಕೆಯಲಿ.. ಇತ್ತ ಅಗ್ಗಿಷ್ಟಿಕೆ ಬಳಿ ಸಾರದವಳನ್ನು ಹಳಿಯುತ್ತ ಕೆಂಡ ಕೆದರಿ ಮತ್ತೊಂದು ಹೊಸ ಜಿಂಕೆ ಬಂದೀತು ಬಳಿ ಸಾರಿ ಎಂಬಂತೆ ಧಗ-ಧಗನೆ ಉರಿಯುತ್ತಿತ್ತು..!! ***********************
ಅವಳು ಮತ್ತು ಅಗ್ಗಿಷ್ಟಿಕೆಯು..!! Read Post »









