ಸಂಕ್ರಾಂತಿ ಕಾವ್ಯ ಸುಗ್ಗಿ ಕನ್ನಡಿ ಟಿ ಎಸ್ ಶ್ರವಣ ಕುಮಾರಿ ಅಜ್ಜನ ಮನೆಯಲ್ಲಿದ್ದ ಕನ್ನಡಿ ಅವರಜ್ಜ ತಂದದ್ದಂತೆ;ಅಜ್ಜನಜ್ಜ ಆ ಮನೆಕಟ್ಟಿದಾಗ ಗೋಡೆಗೆ ಹಾಕಿದ್ದಂತೆ. ಎರಡಡಿ ಎತ್ತರ, ಒಂದೂವರೆಯಡಿಯಗಲದ ಕನ್ನಡಿಗೆ –ಕರಿಮರದ ಕೆತ್ತನೆಯ ಚೌಕಟ್ಟು, ಹಿಂಬದಿಗೆ ಗಟ್ಟಿ ಹಲಗೆ.ಮಿರಮಿರ ಮಿಂಚುವ ಬೆಲ್ಜಿಯಂ ಗ್ಲಾಸಿನ ಕನ್ನಡಿಯಡಿಗೆ –ಮರದ ಗೂಡು, ಅದರಲ್ಲಿ ಸಾದು, ಕುಂಕುಮ, ಹಣಿಗೆ… ಬಚ್ಚಲ ಮನೆಯಿಂದ ಬಂದರೆ ಎದುರಿಗೇ ಕಾಣುವಂತೆ,ಮುಚ್ಚಟೆಯಿಂದ ಬಾಚಿ, ಹಣೆಗಿಡಲು ಅನುವಾಗುವಂತೆ,ಮಚ್ಚಿನಿಂದ ಬೀಳುತಿದ್ದ ಬೆಳಕು ಮುಖ ತೋರುವಂತೆ,ಅಚ್ಚೆಯಿಂದಿತ್ತು ಗೋಡೆಯಲಿ ಮೌನವೇ ಮಾತಾದಂತೆ! ಅಜ್ಜನಜ್ಜನ ಕಾಲದಿಂದದೆಷ್ಟು ಮುಖಗಳ ಕಂಡಿರಬಹುದು?ಲಜ್ಜೆಯ ಕಿರುನಗೆ, ಒಜ್ಜೆಯ ಭಾವಗಳ ಬಿಂಬಿಸಿರಬಹುದು!ಅಜ್ಜನಪ್ಪ ಹೊರಹೋಗುವಾಗ ಠೀವಿಯಿಂದ ನೋಡಿರಬಹುದು;ಅಜ್ಜನಮ್ಮ ಸಂಜೆಯಲಿ ಬಾಚಿ ಕುಂಕುಮ ತೀಡಿ ತಿದ್ದಿರಬಹುದು. ಅಜ್ಜನ ಕಾಲಕ್ಕೊಂದು ಕಪಾಟು, ಕನ್ನಡಿ ಪಕ್ಕಕ್ಕೆ ಬಂದಿದ್ದಂತೆ –ಅಜ್ಜಿಗೊಂದು ಗೂಡು – ಕಾಡಿಗೆ, ಚೌರಿ, ಗಂಟುಪಿನ್ನುಗಳಿಗಂತೆ.ಅಜ್ಜನಿಗೆ ದಿನವೂ ನೈಸು ದಾಡಿ ಮಾಡುವ ಅಭ್ಯಾಸವಿತ್ತಂತೆ;ಅಜ್ಜಿ ಸಂಜೆ ಮುಂದೆ ಹೆರಳುಸುತ್ತಿ ಹೂ ಮುಡಿಯುತ್ತಿದ್ದಳಂತೆ. ನಡುಮನೆಗೆ ನಡೆಯುತ್ತ ಬಂದಿತ್ತು ಕನ್ನಡಿ ಅಪ್ಪನ ಕಾಲದಲ್ಲಿ…ಅಡಿಗೊಂದು ಕಪಾಟು, ಮೂರ್ನಾಲ್ಕು ಬಿಡಿ ಖಾನೆ ಅದರಲ್ಲಿ.ಇಡಲು ಅಪ್ಪನ, ಅಮ್ಮನ, ಮಕ್ಕಳ ವಸ್ತುಗಳ ಬೇರೆಯಾಗಲ್ಲಿ.ಓಡಾಡುವಾಗೆಲ್ಲಾ ಒಮ್ಮೆ ಹಣುಕುತಿರಬಹುದಿತ್ತು ಕನ್ನಡಿಯಲ್ಲಿ. ನನ್ನ ಕಾಲಕ್ಕನ್ನಿಸಿತು ಕನ್ನಡಿ ನಡುಮನೆಯಲಿದ್ದರೇನು ಚಂದ?ನಂನಮ್ಮ ರೂಮಿನಲ್ಲಿಡಬೇಕು ನಿಲುಗನ್ನಡಿಯನೊಂದೊಂದ.ನಂನಮ್ಮ ಮುಖಭಾವ ನಮಗಷ್ಟೆ, ಬೇರೆಯವರಿಗೇನದರಿಂದ?ಇನ್ನೊಬ್ಬರೇಕೆ ತಿಳಿಯಬೇಕು ನಮ್ಮೊಳಗು, ಲಾಭವೇನದರಿಂದ! ಈಗ ಅಂತರ ಬೇಕಂತೆ, ಹಾಗೆ ಮಗ ಸೊಸೆಗೆ ಪ್ರತ್ಯೇಕ ಕೋಣೆ!ಈಗವರಿಗೆ ಅವರವರದೇ ಬೀರು, ಕನ್ನಡಿ, ಸ್ನಾನಶೌಚದ ಕೋಣೆ.ಆಗ ಅಜ್ಜನ ಮನೆಯಲ್ಲಿದ್ದ ಕನ್ನಡಿ ಅಲ್ಲೇ ಇರಬಹುದೇನೋ ಕಾಣೆ?ಬೇಗ ತಂದಿರಿಸಿ ಮುಖವ ನೋಡಿಕೊಳ್ಳಬೇಕೆನಿಸಿದೆ ದೇವರಾಣೆ!! ———————————————————————-