ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಥಾಗುಚ್ಛ

ನಂಬಿಕೆ : ಮರು ಪ್ರಶ್ನೆ

ಸಣ್ಣ ಕಥೆ  ನಂಬಿಕೆ : ಮರು ಪ್ರಶ್ನೆ ರೇಷ್ಮಾ ನಾಯ್ಕ, ಶಿರಸಿ ಯಾರು ಒಳ್ಳೆ ಕೆಲ್ಸ ಮಾಡ್ತಾರೋ ಅವ್ರ ಪರ ದೇವ್ರು ನಿಂತಿರ್ತಾನೆ ಯಾವುದೇ ರೀತಿಲಿ ಸಮಸ್ಯೆಗಳಿಗೆ ಪರಿಹಾರಾನೂ ಸೂಚಿಸುತ್ತಾನೆ ಎಂದ ಮಾತಿಗೆ;  ಮಗಳು , ” ಹಾಗಾದ್ರೆ ಜಗತ್ತಿಗೆ ಕರೋನ ಬಂದಿದೆ ಇಷ್ಟೆಲ್ಲ ಕಷ್ಟ ಪಡ್ತಿದೀವಿ ಶಾಲೆಗೂ ಹೋಗೋಕಾಗ್ತಿಲ್ಲ  ಯಾಕಮ್ಮ ದೇವ್ರು ಪರಿಹಾರಾನೇ ಸೂಚಿಸ್ತಿಲ್ಲ?”  ಎಂದಳು. ಕಂದಾ, ” ದೇವ್ರು ಅನ್ನೋದು ಒಂದು ನಂಬಿಕೆ , ಧೈರ್ಯ. “ ನಿಂಗೆ ಜ್ವರ ಬಂದಾಗ ಹೆದ್ರಬೇಡ ನಾವ್ ನಿಂಜೊತೆಗೆ ಇರ್ತೀವಿ. ಹಾಸ್ಪಿಟಲ್ ಗೂ ಹೋಗ್ಬಂದಿವಿ. ನಿಂಗೇನು ಆಗಲ್ಲ ಅಂದಾಗ ;  ನಿಂಗೆ ಬಂದಿರೋ ಜ್ವರ ಸ್ವಲ್ಪ ಕಡಿಮೆ ಆದ ಹಾಗೆ ಅನ್ನಿಸುತ್ತಲ್ಲ….  ಹಾಗೆ, ಮತ್ತೂ ಇಲ್ಲಿ ”  ಜ್ವರ ಕಡಿಮೆ ಯಾಗದಿದ್ರೂ ನಾವ್ ಕೊಡೊ ಭದ್ರತೆ ಕೆಲ್ಸ ಮಾಡುತ್ತೆ ” ಎಂದೆ ಹಾಗಾದ್ರೆ , ಒಂದ್ ಕೆಲ್ಸ ಮಾಡ್ತಿನಮ್ಮ ;  ” ದೇವಸ್ಥಾನಕ್ಕೆ ನಾವಿಬ್ಬರೂ ಹೋದ ಹಾಗೆ.. ಚಿತ್ರ ಬಿಡಿಸ್ತಿನಮ್ಮ … ಆಗ ನಾವು ಅಲ್ಲಿಗೆ ಹೋದ ಹಾಗೆ …. ಯಾಕಂದ್ರೆ ದೇವ್ರು ಮನಸಿನ ನಂಬಿಕೆ ಅಲ್ವಾ ”  ಅಂದಳು ಈಗ ಉತ್ತರಿಸಲಾಗದೆ ತಡವರಿಸುವ ಸರದಿ ನನ್ನದಾಯ್ತು.. *******************************************

ನಂಬಿಕೆ : ಮರು ಪ್ರಶ್ನೆ Read Post »

ಕಥಾಗುಚ್ಛ

ಸುಳಿಗಾಣ

ಸಣ್ಣ ಕತೆ. ಸುಳಿಗಾಣ ಶೋಭಾ ನಾಯ್ಕ .ಹಿರೇಕೈ ರಾತ್ರಿಯಿಡಿ ನಿದ್ದೆಯಿಲ್ಲದೆ ಕೆಂಡದುಂಡೆಯಾದ ಕಣ್ಣುಗಳನ್ನುಜ್ಜಿಕೊಂಡು ಹಾಸಿಗೆಯಿಂದೆದ್ದ ಮಾದೇವ ರೂಢಿಯಂತೆ ಕೊಟ್ಟಿಗೆಯ  ಕಡೆ ಕಣ್ಣು ಹಾಯಿಸಿದ.  ಉಕ್ಕಿ ಬಂದ ಸಿಟ್ಟು, ಅಳು ಎಲ್ಲವನ್ನೂ ನುಂಗಿಕೊಂಡು ” ಛೇ.. ”  ಎಂದು ಬಲಗಾಲನ್ನೆತ್ತಿ ದೊಪ್ಪೆಂದು  ನೆಲಕ್ಕೆ ಬಡಿದವನೆ, ಏನೋ ತೀರ್ಮಾನ ಮಾಡಿದವನಂತೆ ತಂಗಿಯನ್ನಾದರೂ  ‘ವಿದ್ಯಾಗಿರಿ’ ಹೈಸ್ಕೂಲ್ ಮೆಟ್ಟಿಲ ಹತ್ತಿಸಿಯೇ ತೀರಬೇಕೆಂದು, ತನಗೆ ಕಲಿಸಿದ ಮಾಸ್ತರರ ಮನೆಯತ್ತ ಹೋಗುತ್ತಿದ್ದಾಗ, ” ಈ ಮಾಸ್ತರರ ಮನೆಯಲ್ಲಿ ಎಲ್ಲರನ್ನೂ ಒಳ ಸೇರಿಸಿ ಬಿಡ್ತಾರಪ್ಪ. ನಮಗೆ ಕೊಡೋ ಲೋಟದಲ್ಲೇ .. ಅವರಿಗೂ ಚಾ ಕೊಡ್ತಾರೆ.  ಶೀ… ಹೇಸಿಗೆ.”ಎಂದು ಕಬ್ಬಿನ ಗದ್ದೆಯ  ರವದಿಯ ಸಂದಿಯಿಂದ ಕೇಳಿ ಬಂದ ಮಾತು ಗಾಯದ ಮೇಲೆಯೇ ಬರೆ ಎಳೆದಂತಾದರೂ  ಎದೆಗುಂದದ ಅವನ ಹೆಜ್ಜೆಗಳು ಮತ್ತೂ ಬಿರುಸಾದವು. ತಮ್ಮೂರ ಶಾಲೆಯಲ್ಲೇ ಏಳನೇ ತರಗತಿ ಮುಗಿಸಿ ಇನ್ನೇನು ಹೈಸ್ಕೂಲ್  ಹತ್ತಬೇಕಾದ ಅವನಿಗೆ , ಕುಡಿತದಿಂದ   ಸಾಲ ಮಾಡಿ ಮಾಡಿ ಸತ್ತ ಅಪ್ಪನ ಸಾವಿನಿಂದ ಆಘಾತವಾಯಿತು. ಇದ್ದ ತುಂಡು ಹೊಲ ಪಂಚಾಯ್ತಿ ಕಟ್ಟೆಯಲ್ಲಿ ಸಾಲ ಕೊಟ್ಟವರ ಪಾಲಾಯಿತು ಎರಡು ವರುಷಗಳವರೆಗೆ. ಓದುವ ಆಸೆ ಕೈಬಿಟ್ಟ ಹುಡುಗ  ಹತ್ತಾರು ಮನೆಯ ದನಗಾವಲಿಗೆ ನಿಂತು,  ಮನೆಯ ಚಿಕ್ಕ ಪುಟ್ಟ ಖರ್ಚು ನಿಭಾಯಿಸಿ  ಮನೆಯ ಪುಟ್ಟ ಯಜಮಾನನಾದಾಗ, ಅವ್ವಳ ದಿನ ನಿತ್ಯದ ಅಳು ನಿಂತದ್ದು ಗಮನಿಸಿದ ಹುಡುಗ ಹೇಗಾದರೂ ಮಾಡಿ ತನ್ನ ಹೊಲವನ್ನು ತಮ್ಮದಾಗಿಸಿಕೊಳ್ಳಬೇಕೆಂದುಕೊಂಡ. ಇದೇ ವೇಳೆಗೆ  ಇವನ ಸಾಲದೊಡೆಯ  ತನ್ನದೆರಡು ಹೋರಿ ಕರುಗಳನ್ನು  ಸಾಕಿಕೊಳ್ಳಲು ಅನುಮತಿ ಕೊಟ್ಟು ಬಿಟ್ಟಾಗ ಹುಡುಗನಿಗೆ ಸ್ವರ್ಗಕ್ಕಿನ್ನು ಒಂದು ಗೇಣೂ ಅಂತರವಿಲ್ಲ ಅನ್ನಿಸಿಬಿಟ್ಟಿತು. ದಿನವೂ ತಾನೇ ಮೇಯಿಸಿಕೊಂಡು ಬರುವ ಹೋರಿ ಕರುಗಳೀಗ ತನ್ನವೇ ಆಗುತ್ತಿವೆ.   ಸಂತೋಷಕ್ಕೆ ಪಾರವಿಲ್ಲದೆ ಹುಲ್ಲು,  ಸೊಪ್ಪು, ಸದೆ, ಅಕ್ಕಚ್ಚು, ನೀರು ಎಂದು ಮಕ್ಕಳಂತೆ ಪಾಲನೆ ಮಾಡಿದ. ರಾಮ , ಲಕ್ಷ್ಮಣರೆಂದೂ ಹೆಸರೂ ಇಟ್ಟು ಬಿಟ್ಟ. ಬಿಸಿನೀರಿನಿಂದ ಮೈ ತೊಳೆದು  ಕಿವಿ ಚಟ್ಟೆ, ಮೂಗ ಹೊಳ್ಳೆಯೊಳಗೆಲ್ಲ ಸೇರಿ ಬಿಡುವ  ಉಣುಗನ್ನೂ ಬಿಡದೆ ತೆಗೆದು ಆರೈಕೆ ಮಾಡಿದ.ಎರಡು ವರುಷದೊಳಗೆ   ನೋಡಿದವರ ಕಣ್ಣು ಬೀಳುವಂತೆ  ಬೆಳೆದು ನಿಂತ ಹೋರಿಗಳೀಗ ಎತ್ತುಗಳಾಗೋ ಕಾಲ.  ಸುಳಿಗಾಣ ಕಟ್ಟಿ, ತಿದ್ದಿ ಗದ್ದೆ ಹೂಳಲು ರಾಮ , ಲಕ್ಷ್ಮಣರು ಸಿದ್ಧವಾಗುತ್ತಿರುವ ಸುದ್ದಿ   ಸಾಲ ದೊಡೆಯನಿಗೆ ( ಹೋರಿಗಳೊಡೆಯನೂ )   ತಲುಪಿಯೇ ಬಿಟ್ಟಿತ್ತು. ಮರು ದಿನವೇ ಹೊಸದೆರಡು ಜೊತೆ ದಾಬದ ಕಣ್ಣಿಯೊಂದಿಗೆ ಬಂದ ಆತ  ರಾಮ ಲಕ್ಷ್ಮಣರ ಕತ್ತಿಗೆ ಬಿಗಿದು, ” ಮಾದ,  ನಮ್ಮನೆ ಕೊಟ್ಟಿಗೆ ಬೇರೆ ಮಾಡಾಯ್ತೋ.. ಜಾಗಕ್ಕೇನೂ ಬರ ಇಲ್ಲ ಈಗ.  ನಿನ್ ಲೆಕ್ಕಾಚಾರ ಮುಂದೆ ಮುಗಿಸಿದರಾತು, ಹ್ಯಾಗಾದರೂ ಸಗಣಿಗಿಗಣಿ ಬಳಸ್ಕಂಡಿಯಲ್ಲ ಇಷ್ಟು ದಿನ . ಹೈ.. ಹೈ.. ” ಎನ್ನುತ್ತಾ ಹೋರಿಗಳೆರಡನ್ನೂ ಎಳೆದುಕೊಂಡು ಹೊರಟೇ ಬಿಟ್ಟಾಗ , ಇತ್ತ ಮಾದೇವ ಎಚ್ಚರ ತಪ್ಪಿ ಬಿದ್ದ ಸುದ್ದಿ ಊರಲ್ಲೆಲ್ಲ ಹಬ್ಬಿ   ಎಲ್ಲರೂ  ‘ ಅಯ್ಯೋ’ ಅಂದಿದ್ದು ಬಿಟ್ಟರೆ  ಮತ್ತೇನೂ ಆಗಲೇ ಇಲ್ಲ . ಮನೆಯತ್ತ ಬರುತಿದ್ದ ಮಾದೇವನ ಕಂಡಾಗ  ಅವನ ಕತೆ ನೆನಪಿಸಿ ಕಣ್ಣಂಚು ಒದ್ದೆ ಮಾಡಿಕೊಂಡ ಮಾಸ್ತರರ ಹೆಂಡತಿ  ಚಹಕ್ಕಿಡಲು ಒಳಗೆ ಹೋದಳು. ***************************************************

ಸುಳಿಗಾಣ Read Post »

ಕಥಾಗುಚ್ಛ

ಮುಗಿಲ ಮಲ್ಲಿಗೆ

ಕಥೆ ಮುಗಿಲ ಮಲ್ಲಿಗೆ ರೂಪಕಲಾ ಕೆ.ಎಂ. ಕತ್ತಲೆಯ ಸೆರಗನ್ನು ಹೊದ್ದು ಮಲಗಿದ್ದ ರಸ್ತೆಯಲ್ಲಿ, ವೇಗವಾಗಿ ಚಲಿಸುತ್ತಿದ್ದ ಬಸ್ಸು.. ಅದಕ್ಕಿಂತಲೂ ವೇಗದಲ್ಲಿ ಓಡುತ್ತಿತ್ತು ಹರೀಶನ ಮನಸ್ಸು. ಆಗಾಗ ಎದುರಾಗುವ ವಾಹನಗಳ ಬೆಳಕು ಬಂದು ಕಣ್ಣಿಗೆ ಹೊಡೆದರೂ, ಮನಸ್ಸು ಮಾತ್ರ ಕತ್ತಲೆಯ ಗೂಡಾಗಿತ್ತು.. ಪಕ್ಕದ ಸೀಟಿನಲ್ಲಿ ರಾಧಿಕ ಗಾಢವಾದ ನಿದ್ರೆಯಲ್ಲಿದ್ದಳು.. ಬಸ್ಸಿನ ಪ್ರಯಾಣದಲ್ಲಿಯೂ ಗೊರಕೆ ಹೊಡೆಯುತ್ತ ಮಲಗಿದ್ದ ಸಹ ಪ್ರಯಾಣಕರನ್ನು ನೋಡಿ, ‘ಚಿಂತೆಯಿಲ್ಲದವರೆಗೆ ಸಂತೆಯಲ್ಲೂ ನಿದ್ರೆಯಂತೆ’ ಅನ್ನೊ ಮಾತು ಅವನಿಗೆ ನೆನಪಾಯಿತು.. ಅವನ ಮನ ಪದೇ ಪದೆ ಪ್ರದೀಪನನ್ನೇ ಮೆಲಕು ಹಾಕುತ್ತಿತ್ತು. ‘ಈಗ ಅವನಿಗೆ ಎಷ್ಟು ಖೂಷಿಯಾಗುತ್ತೋ!?, ಪ್ರತಿ ಬಾರಿಯು ಊರಲ್ಲಿದ್ದಾಗ “ನಮ್ಮ ಊರಿಗೆ ಒಂದು ಬಾರಿ ಬಾರೋ, ಆಗ ಗೊತ್ತಾಗುತ್ತೆ.. ಹಳ್ಳಿಯ ಸೊಬಗು ಹೇಗಿರುತ್ತೆ ಅಂತ. ಸಿಟಿಯಲ್ಲಿ ಜೀವನ ಮಾಡೋರಿಗೆ ಪ್ರಕೃತಿಯ ಸೌಂದರ್ಯ ಹೇಗೆ ಗೊತ್ತಾಗುತ್ತೆ ಹೇಳು” ಎಂದಿದ್ದ.. ಈಗ ಊರಿಗೆ ಬರ್ತಿದಿವಿ ಅನ್ನೋ ಪತ್ರ ಕೈ ಸೇರುವಷ್ಟರಲ್ಲಿಯೇ ನಾವೂ ಊರಲ್ಲಿ ಇರ್ತೀವಿ..ಅಬ್ಬಾ ಅವನ ಖುಷಿ ನಮ್ಮ ಕಣ್ಣಾರೇ ನೋಡಬೇಕು’… ಯೋಚನೆಗೆ ಭಂಗ ತರುವಂತೆ ಸಡನ್ ಬ್ರೇಕ್ ಹೊಡೆದಾಗ ಗಾಢವಾದ ನಿದ್ರೆಯಲ್ಲಿದ್ದವರೂ ಕೂಡ ಬೆಚ್ಚಿ ಬಿದ್ದು,ಏನಾಯಿತು ಎಂದು ಸುತ್ತ ಮುತ್ತ ಕತ್ತಲಿನಲ್ಲಿಯೇ ಕಣ್ಹಾಯಿಸಿ ಹುಡುಕುತ್ತಿದ್ದರು. “ಅಬ್ಬಾ, ಏನಾಯ್ತು ಹರೀಶ್!?,” ಮುಂದಿನ ಸೀಟು ಹಣೆಗೆ ತಾಗಿ ನೋವಾದ ಕಡೆ ಒತ್ತುತ್ತ ಕೇಳಿದಳು ರಾಧಿಕ. ಎದ್ದು ನೋಡುವನಿದ್ದ ಅಷ್ಟರಲ್ಲಿಯೇ ಕಂಡೆಕ್ಟರ್ ಬಂದು ” ಏನಾಗಿಲ್ಲ ಹಸು ಅಡ್ಡ ಬಂತು” ” ನೋಡಿ ನಡ್ಸೋಕ್ಕಾಗಲ್ವಾ?, ತಲೆಗೆಷ್ಟು? ಪೆಟ್ಟು ಬಿತ್ತು” ಹಿಂದೆ ಸೀಟಲ್ಲಿದ್ದವರ ಮಾತಿಗೆ.. ” ನೋಡಿ ನಡೆಸ್ತಾ ಇರೋದಕ್ಕೆ ಅಪಾಯ ತಪ್ಪಿದ್ದು ಸರ್. ಇಲ್ಲವಾಗಿದ್ರೆ ಬಸ್ಸು ಪಲ್ಟಿ ಹೊಡಿತಿತ್ತೋ ಅಥವಾ….” ಗುಣುಗುತ್ತಾ ಮುಖ ನೋಡಿ ಹೋದ ಕಂಡೆಕ್ಟರ್ ಮಾತಿಗೆ ಹರೀಶ್ ಹೌದು ಎನ್ನುವಂತೆ ತಲೆ ಆಡಿಸಿದನು. ಹಿಂದೆಯಿಂದ ಮಾತುಗಳು ಕೇಳುತ್ತಲೇ ಇದ್ದವು. ಯಾವುದನ್ನು ತಲೆಗೆ ಹಾಕಿಕೊಳ್ಳದೇ ತನ್ನಷ್ಟಕ್ಕೆ ತಾನು ರಸ್ತೆ ಕಡೆ ದೃಷ್ಟಿ ಇಟ್ಟಿದ್ದ ಡ್ರೈವರ್ ಹತ್ತಿರ ಹೋಗಿ “ಇವುರ್ಗಳಿಗೆ ಬಸ್ಸಲ್ಲು ಹ್ಯಾಂಗ್ ನಿದ್ರೆ ಬತ್ತದೆ ಅಂತ..ದಿನಾ ಓಡಾಡೋ ನಮಗೆ ನಿದ್ದೆ ಇಲ್ಲದಿದ್ದರೂ ನಿದ್ದೆ ಬರಲ್ಲ. ಇನ್ನು ಮೇಲಾಗಿ ಸಲಹೆ ಕೊಡ್ತಾವ್ರೆ”..ಗೊಣಗಿದ ಕಂಡೆಕ್ಟರಿಗೆ.. ” ಏನೋ ನಿಂದು?, ಯಾಕೆ ಗೊಣಗ್ತಿಯಾ.. ಯಾರು ಏನಂದ್ರು ಈಗ?..ಅವರನ್ನು ಬಂದು ಇಲ್ಲಿ ಕೂರಲು ಹೇಳು” ” ಸಾಯ್ಲಿ ಬಿಡಣ್ಣೋ.. ಜೀವ ಹೋದ್ರೂ ನಿದ್ದೆ ಬೇಕು ಅನ್ನೋ ಜನ್ಗಳು”.. ಹರೀಶ ಅವರಿಬ್ಬರ ಮಾತು ಕೇಳಿ ರಾಧಿಕಳ ಕಡೆ ತಿರುಗಿ ನೋಡಿ ನಕ್ಕಾಗ ” ಅವ್ರು ನಂಗಲ್ಲ ಹೇಳಿದ್ದು ಆಯ್ತಾ.. ನೀನೇನೋ ನನ್ನ ನೋಡಿ ನಗ್ಲಿಕ್ಕೆ?,.. ” ಅಯ್ಯೋ ರಾಮ. ನಾನೇನೇ ಅಂದೇ ಈಗ!?,. ” ಏನಿಲ್ಲ ಬಿಡು” ಎನ್ನುತ ರಗ್ಗನ್ನು ಸರಿ ಮಾಡಿಕೊಂಡು ಮುದುರಿ ಮಲಗಿದಳು. ———— ಸೂರ್ಯ ಇನ್ನು ನಿದ್ರೆಯಿಂದ ಎದ್ದಿರಲಿಲ್ಲ ಆಗಲೇ ಹಕ್ಕಿಗಳಿಗೆ ಬೆಳಗಾಗಿತ್ತು.. ಅಲ್ಲಲ್ಲಿ ತಂಬಿಗೆ ಹಿಡಿದು ಹೋಗುವ ಜನರನ್ನು ಕಂಡು… “ಅಬ್ಬಾ ರಸ್ತೆ ಬದಿಯಲ್ಲೇ?…ಕರ್ಮ. ಮರ್ಯಾದೆ ಸಹ ಇರಲ್ವಾ ಇವರಿಗೆಲ್ಲಾ?” ಮೂಗು ಮುಚ್ಚಿಕೊಂಡು ರಾಧಿಕ ಸಿಟ್ಟಿನಲ್ಲಿ ಹೇಳಿದಾಗ.. ” ಇದೆಲ್ಲಾ ಹಳ್ಳಿ ಕಡೆ ಕಾಮನ್ ರಾಧಿಕ, ಇಲ್ಲಿ ಇಷ್ಟೆ.. ಇನ್ನೂ ಕೆಲವು ಕಡೆ ಮಹಿಳೆಯರು ಕೂಡ!”… ” ಬೇಡ ಬಿಡು ಆ ಮಾತು.. ಇವರನ್ನೆಲ್ಲಾ ತಿದ್ದಲು ಆ ಬ್ರಹ್ಮನೇ ಬರಬೇಕೇನೋ… ಅದಿರಲಿ ಈಗ ಪ್ರದೀಪನ ಮನೆ ಎಲ್ಲಿ ಅಂತ ನಿಂಗೆ ಗೊತ್ತಾ?” ” ಇಲ್ಲ,..ಇರು.., ಅಲ್ಲಿ ಯಾರಾನ್ನಾದರೂ ಕೇಳೋಣ” ಎನ್ನುತ್ತ ಸ್ವಲ್ಪ ಮುಂದೆ ನಡೆದರು. ಅಲ್ಲಿಯೇ ಇದ್ದ ಸಣ್ಣ ಗೂಡಂಗಡಿಯಲ್ಲಿ ಇಬ್ಬರು ಟೀ ಕುಡಿದು ವಿಚಾರಿಸಿದಾಗ… ಅವರು ಹೋಗಬೇಕಾದ ಊರು ಇನ್ನು ಒಂದು ಕಿಲೋ ಮೀಟರ್ ದೂರವಿರುವುದಾಗಿಯು ” ಇಲ್ಲೇ ಒಂದು ಆಟೋ ಬತ್ತದೆ ಈಗ. ಅದು ಆ ಊರಿಗೆ ಹೋಗತ್ತೆ ಅದರಲ್ಲಿ ಹೋಗಿ” ಅಂಗಡಿಯವರು ಹೇಳಿದಾಗ ಸರಿಯೆಂದು ಆಟೋಕ್ಕಾಗಿ ಕಾದು ನಿಂತರು. —– ರಾಧಿಕ ಮತ್ತು ಹರೀಶ್ ಮಾರನ ಹಳ್ಳಿ ಪ್ರವೇಶಿಸಿದ ಕೂಡಲೆ ಅಲ್ಲಿ ಯಾರನ್ನಾದರೂ ಕೇಳಿದರೆ ಪ್ರದೀಪನ ಬಗ್ಗೆ ತಿಳಿಯುತ್ತದೆಂದು ಯೋಚಿಸಿದ್ದರು.ಆದರೆ ಅಲ್ಲಿಯೇ ಆಡುತಿದ್ದ ಮಕ್ಕಳನ್ನು ಕೇಳಿದಾಗ ಇವರಿಬ್ಬರ ಕಡೆ ವಿಚಿತ್ರವಾಗಿ ನೋಡಿದರು.ಅದಕ್ಕು ಕಾರಣವಿತ್ತು. ರಾಧಿಕಳ ಉಡುಗೆ ಹರೀಶನ ಉಡುಗೆಯು ಒಂದೇ ತೆರನಾಗಿದ್ದವು. ಮುಂದೆ ಹೋಗಿ ಅಲ್ಲಿಯೇ ಹಲಸಿನ ಮರದ ಕಟ್ಟೆಯಲ್ಲಿ ಕುಳಿತ ಹಿರಿಯರನ್ನು ಕೇಳಿದರು. ಅವರಲ್ಲಿ ಹಿರಿಯರಾದ ಒಬ್ಬರು ಅವರಿಬ್ಬರನ್ನು ತೀಕ್ಷ್ಣವಾಗಿ ನೋಡಿ ” ಅವ , ನಿಮಗ್ ಹ್ಯಾಗ್ ಗೊತ್ತು?” ಎಂದರು. ಅವರ ಮಾತು ಅರ್ಥವಾಗದೆ ಇಬ್ಬರು ಒಬ್ಬರನ್ನೊಬ್ಬರು ಮುಖ ನೋಡಿಕೊಂಡರು.ಅದನ್ನರಿತ ಹಿರಿಯರು ” ಎಲ್ಲಿಂದ ಬಂದ್ರಿ” ” ಸಿಟಿಯಿಂದ, ಪ್ರದೀಪನನ್ನು ಕಾಣಬೇಕಿತ್ತು. ನಾವೆಲ್ಲ ಒಟ್ಟಿಗೆ ಓದಿದವರು” ” ಈಗ ನಿಮಗಾ ಅವ ಸಿಗಂಗಿಲ್ರಿ” ” ಅಂದ್ರೆ!!?” ” ಬನ್ರಿ, ಅವರ ಮನೆಯಾಗ ಬಿಡ್ತೀನಿ” ಎಂದವರೇ ಆ ಹಿರಿಯರು ಎದ್ದು ಮುಂದೆ ಹೆಜ್ಜೆ ಹಾಕಿದರು. ಅವರಿಬ್ಬರೂ ಹಿಂಬಾಲಿಸಿದರು. ಊರಿನ ಹಲವಾರು ಮನೆಗಳನ್ನು ದಾಟಿ ದೊಡ್ಡದೊಂದು ಮನೆಯ ಮುಂದೆ ಬಂದು ನಿಂತು!,. ” ಅದೇ ಅವ್ರ ಮನೆ” ಎಂದರು. ” ಥ್ಯಾಂಕ್ಸ್ ಸರ್” ಎಂದವರೇ ಮನೆಯ ಮುಂದೆ ಹೋಗಿ ಬಾಗಿಲ ಬಳಿ ನಿಂತು ಹರೀಶ ಒಳ ನೋಡುತ್ತ ಕರೆದನು. ” ಪ್ರದೀಪ್,ಪ್ರದೀಪ್” ಇವರ ಸ್ವರ ಕೇಳಿ ಒಳಗಿನಿಂದ ಬಂದ ವ್ಯಕ್ತಿಯನ್ನು ” ಸರ್,ಪ್ರದೀಪ ಇಲ್ವಾ?” ” ನೀವ್ಯಾರು?” “ನಾವು ಅವನ ಫ್ರೆಂಡ್ಸ್. ಕಾಲೇಜಲ್ಲಿ ಒಟ್ಟಿಗೆ ಓದುತ್ತಿದ್ದೆವು, ತುಂಬಾ ತಿಂಗಳಿಂದ ಅವನಿಂದ ಯಾವುದೇ ಸಂಪರ್ಕ ಸಿಗುತ್ತಿಲ್ಲ.ಹಾಗಾಗಿ ನಾವೇ ಬಂದ್ವಿ”. ” ಹೋ, ಹೌದಾ!!,. ಬನ್ನಿ ಒಳಗ, ಪ್ರದೀಪನು ನನ್ನ ಮಗನೇ.ನನ್ನ ಹೆಸರು ಶಿವಪ್ಪ ಅಂತ” ” ನಮಸ್ತೆ ಸರ್,ನಾನು ಹರೀಶ ಅಂತ,ಇವರು ರಾಧಿಕ.ನಾವು ಮೂವರು ಬೆಸ್ಟ್ ಫ್ರೆಂಡ್ಸ್”, “ಹೌದ,ಬನ್ನಿ ಕೂತ್ಕಳ್ಳಿ,ಈಗ ಬಂದೆ” ಎಂದು ಒಳ ಹೋಗಿ ಕುಡಿಯಲು ನೀರು ತಂದರು. ದೂರದಿಂದ ಬಂದವರಿಗೆ ಊಟೋಪಚಾರದ ವ್ಯವಸ್ಥೆಯು ಆದ ನಂತರ ನಿಧಾನವಾಗಿ ಮಾತಿಗೆ ಇಳಿದರು. “ಸರ್, ಈಗ ಅವನೆಲ್ಲಿದ್ದಾನೆ?”. ” ಪ್ರದೀಪ,!? ಈಗ ಎಲ್ಲಿದ್ದಾನೆ ಅಂತ ಹೇಳದು,ನಮಗಾ ಗೊತ್ತಿದ್ದರ ಮನೆಯಲ್ಲಿಯೆ ಇರ್ತಿದ್ದ.ಆದ್ರ ದೇವರು ನಮಗಾ ಅನ್ಯಾಯ ಮಾಡ್ದ” ಎಂದು ನಿಟ್ಟುಸಿರು ಬಿಟ್ಟರು.ಕಣ್ಣಿನಿಂದ ನೀರು ಹೊರ ಬಂದಿತ್ತು .ಇಬ್ಬರಿಗೂ ಗಾಬರಿ .ಅವನಿಗೆ ಏನಾಗಿರ ಬಹುದು?. ಒಳಗಿನಿಂದ ಅಳುವ ಶಬ್ದ ಕೇಳಿ ಬಂತು. ” ಸರ್, ದಯವಿಟ್ಟು ಹೇಳಿ ,ಪ್ರದೀಪನಿಗೆ ಏನಾಯ್ತು?,ಈಗ ಎಲ್ಲಿದ್ದಾನೆ?.” ಕಣ್ಣು ಒರೆಸಿಕೊಂಡು ಹೇಳಲು ಶುರು ಮಾಡಿದರು. ” ಅವನಿಗೆ ಹುಚ್ಚು ಹಿಡಿತಪ್ಪಾ,ಈಗ ಎಲ್ಲಿದ್ದಾನಂತ ಗೊತ್ತಿಲ್ಲ.ಯಾರಾದರು ಅವನನ್ನ ನೋಡಿದೊರು ಬಂದು ಹೇಳ್ತಾರ! ನಾವು ಹೋಗೋದ್ರೊಳಗ ಅವ ಅಲ್ಲಿರಲ್ಲ.ಇದೇ ಆಗದೇಪ್ಪ ಆರು ತಿಂಗಳಿಂದ”, ಬಿಕ್ಕಿದರು. ಹರೀಶ್ ಕುಳಿತಲ್ಲಿಂದ ಎದ್ದು ಬಂದು ಅವರ ಕೈ ಹಿಡಿದು ಸಮಾಧಾನ ಮಾಡುತ್ತ ಕೇಳಿದ. ” ಇದೆಲ್ಲ ಹೇಗಾಯ್ತು ಸರ್”, ” ಪಿರುತಿ ಮಾಡಿದ್ದನಪ್ಪ..ಆ ಮಗ ಸತ್ತು ಹೋದ್ಲು,ಅದರ ನೋವು ತಡಿಲಾರ್ದೆ ಇವ ಹುಚ್ಚ ಆದ.ಸ್ವಲ್ಪ ದಿನ ತಡಿದಿದ್ರೆ ಇಬ್ಬರ ಮದುವೆ ನಾವೇ ಮಾಡೋರು.ಆದ್ರ ದೇವ್ರಿಗ ನಮ್ಮ ಮೇಲ ಕರುಣೆ ಇಲ್ಲ ನೋಡಿ.ಇದ್ದ ಒಬ್ಬ ಮಗನ್ನ ಹೀಗಾ ಮಾಡ್ಬಿಟ್ಟ”, ಮತ್ತೆ ಅಳಲು ಶುರು ಮಾಡಿದ್ರು.ರಾಧಿಕಳ ಕಣ್ಣಲ್ಲಿ ಆಗಲೆ ನೀರು ಇಳಿಯುತಿತ್ತು.ಮನೆಯ ಒಳಗಿನ ಅಳು ಸ್ವಲ್ಪ ಕಡಿಮೆ ಆಗಿತ್ತು.ಶಿವಪ್ಪನವರ ದುಃಖ ನೋಡಲಾಗದೆ ಹರೀಶ್ ನಿಧಾನವಾಗಿ ಎದ್ದು ಹೊರ ಬಂದ.ರಾಧಿಕ ಕೂಡ ಅವನ ಹಿಂದೆಯೆ ಬಂದಳು. ಏನೋ ಯೋಚಿಸಿದವರಂತೆ ಮತ್ತೆ ಒಳಗಡೆ ಬಂದವರು ಕುರ್ಚಿಯಲ್ಲಿ ಕುಳಿತರು. ” ಸರ್ ನಮಗೆ ಪ್ರದೀಪನ ಪೂರ್ಣ ಮಾಹಿತಿ ಬೇಕು.ಕಾಲೇಜು ಬಿಟ್ಟು ಬಂದಲ್ಲಿಂದ ಇಲ್ಲಿ ಏನಾಯಿತು ಅಂತ ತಿಳಿಸಲು ಆಗತ್ತ.ನಮಗೆ ನಮ್ಮ ಮೆಚ್ಚಿನ ಗೆಳೆಯನ ಜೀವನ ಹೀಗೆ ಆಗಿದ್ದು ನಂಬಲು ಆಗುತ್ತಿಲ್ಲ.ದಯವಿಟ್ಟು ವಿವರವಾಗಿ ತಿಳಿಸಿ ಸರ್”, ಅವರಿಬ್ಬರನ್ನು ಒಮ್ಮೆ ನೋಡಿದರು.’ಪ್ರದೀಪನ ವಯಸ್ಸಿನವರೆ’ ಅನ್ನಿಸಿತು.ಹರೀಶನನ್ನು ನೋಡಿ ಮಗನ ನೆನಪಾಗಿ ಕಣ್ತುಂಬಿ ಬಂದವು. ನಡೆದ ಕಥೆ ಹೇಳಲು ಶುರು ಮಾಡಿದರು. “ನಂಗಾ ಇಬ್ರು ಮಕ್ಳು.ಮಗಳ ಮದ್ವಿ ಆಗದೆ. ಇವ ಓದು ಮುಗ್ಸಿ ಊರಿಗೆ ಬಂದ.ನಾವು ಅವ್ನ ಕೆಲ್ಸದ ವಿಷಯ ಏನೂ ಹೇಳಿಲ್ಲ.ಮನೇಲಿ ಮೂರು ತಲೆಮಾರಿಗೂ ಕೂತು ಉಣ್ಣೊಷ್ಟು ಇರುವಾಗ ಅವ ಕೆಲಸಕ್ಕೆ ಹೋಗೂ ಅಗತ್ಯ ನಂಗಿರ್ಲಿಲ್ಲ”, ಮಾತು ನಿಲ್ಲಿಸಿ ಒಳಗೆ ನೋಡಿದರು. ಹೆಂಡತಿಗೆ ತನ್ನ ಮಾತು ಕೇಳಿದರೆ?. ” ನಿಮ್ಗೆ ದಣಿವಿಲ್ಲಾಂದ್ರಾ ತೋಟಕ್ ಹೋಗುಣಾ?”, ಮೂವರು ಎದ್ದು ಹೊರ ಹೋಗುವಾಗ ಲಕ್ಷ್ಮಮ್ಮನವರು ಹೊರ ಬಂದರು.ಅವರಿಗೆ ತೋಟಕ್ಕೆ ಹೋಗಿ ಬರುತ್ತೆವೆಂದು ಹೇಳಿ ಹೊರಟರು. *** ಊರ ಹೊರಗಿನ ಹೊಲದ ಮಧ್ಯದಲ್ಲಿ ಒಂದು ಪುಟ್ಟ ಮನೆ. ಸುತ್ತಲೂ ಹಚ್ಚ ಹಸಿರಾದ ಪೈರು.ಹೂ ಬಿಟ್ಟು ಭತ್ತದ ತೆನೆ ಬಿಡುವ ಸಮಯ.ಗಾಳಿ ಬಂದರೆ ಪೈರಿನ ಪರಿಮಳ ಮೂಗಿಗೆ ತಾಗಲು, ‘ಅಹ್ಹಾ’,ಎಷ್ಟೊಂದು ಅಹ್ಲಾದಕರ. ಗದ್ದೆ ಅಂಚಿನ ಮೇಲೆ ಮೆಲ್ಲನೆ ಹೆಜ್ಜೆ ಹಾಕುತ್ತ ನಡೆಯುತಿದ್ದಳು ಮಲ್ಲಿ. “ಯಾರಲ್ಲಿ?”. ಕೂಗಿಗೆ ಹೆದರಿ ನಿಂತಳು.ತಿರುಗಿ ನೋಡಿದರೆ ತನಗೆ ಸ್ವಲ್ಪ ದೂರದಲ್ಲಿಯೆ ಒಬ್ಬರು ದ್ವಿಚಕ್ರ ವಾಹನದಲ್ಲಿ ನಿಂತಿದ್ದರು. ಅವರನ್ನು ಎಂದೂ ನೋಡಿರಲಿಲ್ಲ .’ಯಾರಿರ ಬಹುದು?’ಎಂದು ಕುತೂಹಲದಲ್ಲಿರುವಾಗಲೆ ಮತ್ತದೇ ದ್ವನಿ. “ನಿನ್ನನ್ನೆ ಕೇಳಿದ್ದು, ಯಾರು ನೀನು?.ಎಲ್ಲಿಯೂ ನೋಡಿದ ನೆನಪಿಲ್ಲ.ಹೊಸ ಮುಖದ ಹಾಗೆ ಕಾಣುತ್ತಿಯ!?” “ನಾನು ಮಲ್ಲಿ,ಸುಬ್ಬಣ್ಣನ ಮಗಳು” “ಹೌದಾ!!?.ನಮ್ಮ ಸುಬ್ಬಣ್ಣನ ಮಗಳಾ?.ಇಷ್ಟು ದಿನ ಎಲ್ಲಿದ್ದೆ?.ಒಂದು ದಿನವು ಕಾಣಲಿಲ್ಲ!!?” ” ನಾನು ಸಿಟಿಯಲ್ಲಿನ ಚಿಕ್ಕಪ್ಪನ ಮನೆಯಲ್ಲಿದ್ದು ಕಲಿತಿದ್ದೆ” “ಎಷ್ಟನೆ ಕ್ಲಾಸಿನವರೆಗೆ ಓದಿದ್ದಿಯಾ” “ಹತ್ತು, ಪಾಸು”. “ಮುಂದೆ!?” ಅವರ ಮಾತನ್ನು ತಡೆಯುವಂತೆ “ನೀವ್ಯಾರು!?”ಎಂದು ಕೇಳಿ ನಾಲಿಗೆ ಕಚ್ತಿಕೊಂಡಳು. “ಹೋ, ನೋಡಿದ್ಯಾ ನಿನ್ನ ಬಗ್ಗೆ ಕೇಳುವ ಆತುರದಲ್ಲಿ ನಾನು ಯಾರು? ಅಂತ ಹೇಳಲೆ ಇಲ್ಲ ಅಲ್ವಾ?.ನಾನು ಈ ಊರಿನ ಗೌಡರ ಮಗ ಪ್ರದೀಪ. ನಿನ್ನ ತಂದೆ ನಮ್ಮ ಮನೆಯಲ್ಲೆ ಕೆಲಸ ಮಾಡೋದು.ನಿನ್ನ ಹಾಗೆಯೆ ಸಿಟಿಯಲ್ಲಿ ಓದುತಿದ್ದೆ.ಈಗ ಸಧ್ಯಕ್ಕೆ ಓದು ಮುಗಿಯಿತು.ಕೆಲಸಕ್ಕೆ ಪ್ರಯತ್ನ ನಡೆಸಬೇಕು.” ಸಾಕ? ಎನ್ನುವಂತೆ ಅವಳ ಕಡೆ ನೋಡಿದನು. ಒಂದೇ ಉಸಿರಲ್ಲಿ ಮಾತನಾಡಿ ಮುಗಿಸಿದ ಅವನನ್ನೇ ತದೇಕ ಚಿತ್ತದಿಂದ ನೋಡುತಿದ್ದಳು.ಅವನೂ ಸಹ ಮಾತು ನಿಲ್ಲಿಸಿ ಮಲ್ಲಿಯ ಕಡೆ ನೋಡಲು ಇಬ್ಬರ ಕಣ್ಣುಗಳ ಮಿಲನವಾಯಿತು.ಮಲ್ಲಿ ಅವನ ನೋಟಕ್ಕೆ ನಾಚಿ ತಲೆ ತಗ್ಗಿಸಿದಳು.ಪ್ರದೀಪ ಮಾತ್ರ ಮಲ್ಲಿಯ ಅಂದವನ್ನು ಸವಿಯುವದರಲ್ಲೆ ಮಗ್ನನಾದ. ಹಾಲು ಕೆನ್ನೆಯ ದುಂಡನೆಯ ಮುಖದಲ್ಲಿ ಕಾಡಿಗೆಯ ಅಗತ್ಯವೇ ಇಲ್ಲದಂತೆ ಹೊಳೆಯುವ ಕಣ್ಗಳು..ನೀಳವಾಗಿ ಉದ್ದವಾದ ಕೂದಲನ್ನು ಎಣ್ಣೆ ಹಾಕಿ ಬಲವಂತವಾಗಿ ಬಾಚಿದಂತೆ ಕಂಡರು, ಅವಳಿಗದು ಅಂದ ತಂದಿತ್ತು.ಬಲ ಕಿವಿಯ ಹತ್ತಿರ ಇಳಿ ಬಿದ್ದ ಗುಂಗುರು ಕೂದಲು. ಕಿವಿಯಲ್ಲಿ ಸಣ್ಣದೊಂದು ಓಲೆ. ಎರಡೂ ಕೈಯಲ್ಲಿ ನಾಲ್ಕೇ ನಾಲ್ಕು ಮಣ್ಣಿನ ಕೆಂಪು ಬಳೆಗಳು ಅವಳ ಬಿಳಿ ಕೈಗಳಿಗೆ ಮುದ್ದಾಗಿದ್ದವು. ಹೆಚ್ಚೇನು ಎತ್ತರವಿಲ್ಲದ ಅತಿ ದಪ್ಪವು ಅಲ್ಲದ ಅವಳು, ಒಮ್ಮೆ ನೋಡಿದರೆ ಮತ್ತೆ ತಿರುಗಿ ನೋಡಬೇಕೆನ್ನಿಸುವ ಶರೀರ,ಅದರಲ್ಲೂ ಮೈಯನ್ನಪ್ಪಿದ ಲಂಗ ರವಿಕೆಯಲ್ಲಿನ ದೇಹದ ಸಿರಿ, ಪ್ರದೀಪನಿಗೆ ಸಿಟಿಯ ವೈಯ್ಯಾರಿಯರ ಮಧ್ಯೆ ಕೂಡ ಮಲ್ಲಿಯೇ ಅಂದವಾಗಿ ಕಂಡಿದ್ದಳು. ಪ್ರದೀಪನ ಕಣ್ಣು ತನ್ನ ಮೇಲಿರುವುದು ಅರಿತ ಮಲ್ಲಿ, ಮೆಲ್ಲನೆ ನಾಚಿ ಜಿಂಕೆಯಂತೆ ಓಡುವ ಸನ್ನಾಹ ಪ್ರದೀಪನ ಅರಿವಿಗೆ ಬಂದದ್ದೆ ತಡ ಅವಳನ್ನು ತಡೆಯುತ್ತಾ ”

ಮುಗಿಲ ಮಲ್ಲಿಗೆ Read Post »

ಕಥಾಗುಚ್ಛ

ಮರಳಿ ತವರಿಗೆ

ಸಣ್ಣ ಕಥೆ ಮರಳಿ ತವರಿಗೆ ನಾಗರಾಜ್ ಹರಪನಹಳ್ಳಿ ಕರೋನಾ ಕಾರಣವಾಗಿ ತವರು ಮನೆಗೆ ಕೊಲ್ಲಾಪುರ ದಿಂದ ಬಂದಿದ್ದ ರೋಶನಿ ತನ್ನೆರಡು‌ ಮಕ್ಕಳೊಂದಿಗೆ ಹೈಸ್ಕೂಲ್ ಗೆಳತಿ ಶರ್ಮಿತಾಳನ್ನು ಕಾಣಲು ಹೊರಟಳು.ಮಲೆ ‌ನಾಡಿನ ಒಂಟಿ ಮನೆಗಳು ಅಡಿಕೆ ತೆಂಗು ಹಾಗೂ ಕಾಡಿನ ಮರಗಳ ಮಧ್ಯೆ ಅಡಗಿರುವುದೇ ಹೆಚ್ಚು. ಶರ್ಮಿತಾಳ ತಾಯಿ ಮನೆ ಎದುರು ದನಗಳಿಗೆ ಕರಡ ಬೆಳೆಯಲು ಬಿಟ್ಟಿದ್ದ ಬಯಲು ಭೂಮಿ , ಜೂನ್  ತಿಂಗಳು ಎರಡು ವಾರ  ಸುರಿದ  ಮಳೆಯ ಕಾರಣ , ಅದಾಗಲೇ ಹಸಿರಾಗಿ ಇತ್ತು.‌‌  ಮೊದಲ ಮಹಡಿಯ ಮೇಲಿನ ಕಾರಿಡಾರ್ ನಿಂದ ತನ್ನ ಮನೆಯತ್ತ ಹೆಣ್ಮಗಳೊಬ್ಬಳು  ಮಕ್ಕಳೊಂದಿಗೆ ಬರುತ್ತಿರುವುದ ಗಮನಿಸಿ,  ‘ ಆಯಿ ,  ಯಾರೋ ನೆಂಟರು ಬಂದ್ರೆ’  ಅಂತ ಕೂಗಿ ಸೂಚನೆ ಕೊಟ್ಟಳು. ಮನೆಯಿಂದ ಹೊರ ಬಂದ ಆಯಿ , ದೂರದಿಂದಲೇ ಭಟ್ಟರ ಮನೆ ಮಗು ಅಂಬಂಗೆ ಕಾಣ್ತದೆ.  ಅವಳು ಈಚೆಗೆ ನಾಲ್ಕು ವರ್ಷ ಆಯಿತು ;  ಈಕಡೆ ಬಂದಿರಲಿಲ್ಲ.‌ ಈಗ ಬಂದಿರಬೇಕು ಎಂದ ಆಯಿ  ,ಬಳ್ಳಿಯಲ್ಲಿ ಅರಳಿದ ಮಲ್ಲಿಗೆ ಹೂ ಬಿಡಿಸಿತೊಡಗಿದಳು. ಪುಟಾಣಿ‌ ಮಕ್ಕಳೊಂದಿಗೆ ಮನೆ ಹತ್ತಿರ  ಬಂದಂತೆ ಆಕೆ ರೋಶನಿ ! ,  ತನ್ನ ಹೈಸ್ಕೂಲ್ ಗೆಳತಿ ಎಂದು ಶರ್ಮಿತಾಳಿಗೆ  ಮನದಟ್ಟಾಗುತ್ತಿದ್ದಂತೆ , ಕಣ್ಣುಗಳು ಅರಳಿದವು.  ಮನೆಯಂಗಳಕ್ಕೆ ಬಂದದ್ದೇ ನಗುವಿನ‌ ವಿನಿಮಯ, ಆತ್ಮೀಯ ‌ಅಪ್ಪುಗೆಯ ನಂತರ‌ ಇಬ್ಬರೂ  ಮಾತಿಗಿಳಿದರು .   ಗಂಟೆಗಟ್ಟಲೆ ಮಾತು.‌ ಅಪರೂಪಕ್ಕೆ ಹತ್ತು ವರ್ಷಗಳ ನಂತರದ ಭೇಟಿ.‌ ಕೇಳಬೇಕೆ? ಉತ್ಸಾಹ , ಕುತೂಹಲಗಳು ಮರದ ಕವಲುಗಳು  ಮುಗಿಲ ಕಡೆ ಮುಖ ಮಾಡಿದಂತೆ , ಮನಸು ದೂರ ಕಾಣುವ ದಿಗಂತ ನೋಡುತ್ತಲೇ ಗೆಳತಿರ ಕಣ್ಣೋಟಗಳು ಬೆರೆತಿದ್ದವು.  ಶರ್ಮಿತಾ ಈಗ ಕವಯಿತ್ರಿಯಾಗಿದ್ದಳು. ರೋಶನಿಯ ‘ಆಯಿ’  ಈ‌ ಸುದ್ದಿಯನ್ನು ‌ಕೊಲ್ಲಾಪುರದಿಂದ ಬಂದ ಮೊದಲ ದಿನವೇ  ಶರ್ಮಿತಾಳ ಸುದ್ದಿ ಮಾತಾಡಿ ಕುತೂಹಲ ನೂರ್ಮಡಿಸಿದ್ದಳು .  ಆ ಕುತೂಹಲ ತಣಿಸಿಕೊಳ್ಳಲು, ಅವಳ  ಕವನ ಸಂಕಲನ ಪಡೆಯಲು ಹಾಗೂ ಗೆಳತಿಯ ಪ್ರಸಿದ್ಧಿ ಅರಿತು ಖುಷಿಪಡಲು  ರೋಶನಿ ಬಂದದ್ದಾಗಿತ್ತು. ಅಂತೂ ಕವಯಿತ್ರಿಯ ಸುದ್ದಿ  ಕೇಳಿದ ಮೇಲೆ ; ತನ್ನ ಲಂಡನ್ ಪ್ರವಾಸ, ಅಲ್ಲಿನ ಜನ ,‌ಜೀವನ, ಯುವ ಜನರ ಬದುಕು, ಪ್ರೀತಿ, ಮುಕ್ತವಾದ ಜೀವನೋತ್ಸಾಹ , ಪ್ರಾಜೆಕ್ಟ್ ವರ್ಕ  ಬಗ್ಗೆ ಮಾತು ಹೊರಳಿ ಕೊಂಡವು ಹಾಗೂ ಕೊಲ್ಲಾಪುರದಿಂದ ಮರಳಿ ತವರಿಗೆ ಬಂದ ಕಾರಣದ  ವಿವರಗಳು  ಒಂದೊಂದೆ ಎಳೆ ಎಳೆಯಾಗಿ ಮಾತಲ್ಲಿ  ನಡೆಯುತ್ತಾ  ಹೋದವು.  ಸಮಾಜಶಾಸ್ತ್ರ ಅಧ್ಯಯನ, ಪಿಎಚ್ಡಿ  ಮಾಡಿದ್ದು …ಎಲ್ಲಾ ಹೇಳಿದ ನಂತರ ; ಗಂಡನ ಕಡೆ ಮಾತು‌ ಹೊರಳಿತು. ‘ ಹೇಗೆ ನಿಮ್ಮ ಮನೆಯವರು ಅಂತ ‘  ಪ್ರಶ್ನೆ ಎಸೆದಳು ಶರ್ಮಿತಾ . ‌ ಹಾಗೆ ನೋಡಿದರೆ ಶರ್ಮಿತಾಳ‌ ಊರಿನವನೇ ಆಗಿದ್ದ ವಿನಾಯಕ ಎಂಜಿನಿಯರಿಂಗ್ ಮಾಡಿ, ದೇಶ ಅಲೆದು,  ಮುಂಬಯಿ, ಪುಣೆ ಸುತ್ತಿ ಕೊಲ್ಲಾಪುರದಲ್ಲಿ ‌ನೆಲೆ ನಿಂತಿದ್ದ.‌   ಕರೋನಾ ಕಾರಣವಾಗಿ‌ ಅವನು ತನ್ನ ಮೂಲ ಮನೆಗೆ ಮರಳಿದ್ದ.‌ ಪಕ್ಕದ ವಾಟಗಾರ ಗ್ರಾಮದ ಹೈಸ್ಕೂಲ್ ಸಹಪಾಠಿ ರೋಶನಿಯನ್ನೇ ಮದುವೆಯಾಗಿದ್ದ. ಸಹಜವಾಗಿ ಕೇಳಿದ ಪ್ರಶ್ನೆ ಅದಾಗಿತ್ತು. ಒಂದು‌ ನಿಟ್ಟುಸಿರು ಬಿಟ್ಟ ರೋಶನಿ “ದೇಶ ವಿದೇಶ ಸುತ್ತಿದರೂ ಗಂಡಸರ‌ ಅನುಮಾನ ಹೋಗಲ್ಲ ಬಿಡು.‌ಅದೇ ಮೊಬೈಲ್ ಹಿಡಿದರೆ ತಕರಾರು.‌ ಕಾಣದ ಸಂಶಯಗಳು ಇದ್ದದ್ದೆ.‌ ಗಂಡಸರಿಗೆ ಎಷ್ಟು ಪ್ರೀತಿ ‌ಕೊಟ್ಟರೂ ,ಸಂಶಯಿಸುವುದ ಬಿಡಲ್ಲ ಎಂದು” ಮೌನವಾದಳು. ತನ್ನ ಸಮಸ್ಯೆಯೂ ಅದೇ ಎಂದು ಹೇಳಬೇಕೆಂದ ಶರ್ಮಿತಾಳ ತುಟಿತನಕ ಬಂದ ಮಾತು ತಡೆದು,‌ಮಾತು ಬದಲಿಸಿದಳು. ಹಾಗೂ  ನೀ‌ನು ಬರೆ ಏನಾದ್ರೂ ಅಂದ್ಲು.‌ “ಹು,‌ ಇನ್ನು ಬರೆಯಬೇಕು. ನೀನು ನಮ್ಮೂರಿಗೆ ಹೆಸರು ತಂದಿದಿಯಾ” .ಅದೇ ಸಂಭ್ರಮ.‌ ನೀ‌‌ ಕೊಟ್ಟ ಕಾವ್ಯದ ಪುಸ್ತಕ ನನ್ನತ್ತೆ ಇಟ್ಟುಕೊಂಡರು. ಅವರ ಮಗಳಿಗೆ ಕೊಡಲು. ನನಗೆ ಮತ್ತೊಂದು ‘ಮಲ್ಲಿಗೆ ದಂಡೆ’ ಕೊಡು ಎಂದು‌ ನಸು‌ನಕ್ಕಳು….ರೋಶನಿ. ಅವಳ ಮಾತಿನ  ಕಣ್ ಮಿಂಚು ಶರ್ಮಿತಾಳ ಎದೆಯೊಳಗೆ ಬೆಳಕು ಹಚ್ಚಿದಂತಾಯಿತು. *********************************

ಮರಳಿ ತವರಿಗೆ Read Post »

ಕಥಾಗುಚ್ಛ

ದನ ಕಾಯೋದಂದ್ರ ಏನ ಮ್ಮ

ಕಿರುಗಥೆ ದನ ಕಾಯೋದಂದ್ರ ಏ‌ನಮ್ಮ ರಶ್ಮಿ .ಎಸ್. ಅರ್ನಿ, ಹೋಂವರ್ಕ್‌ ಮಾಡಿಲ್ಲ… ಇಲ್ಲಮ್ಮ… ಮಾಡಾಂಗಿಲ್ಲ? ಇಲ್ಲಮ್ಮ… ಆಯ್ತು ಹಂಗಾರ… ನಾಳೆಯಿಂದ ಸಾಲೀಗೆ ಹೋಗಬ್ಯಾಡ… ದನಾ ಕಾಯಾಕ ಹೋಗು… ದನಾ ಕಾಯೂದಂದ್ರೇನಮ್ಮ.. ದನಾ ಕಾಯೂದಂದ್ರ ಒಂದು ನಾಲ್ಕು ಎಮ್ಮಿ ಕೊಡಸ್ತೀನಿ. ಎಮ್ಮಿ ಎಲ್ಲೆಲ್ಲಿ ಅಡ್ಡಾಡ್ತಾವ ಅಲ್ಲೆಲ್ಲ ಅದರ ಹಿಂದ ಹಿಂದೇ ಅಡ್ಯಾಡಬೇಕು. ಶಗಣಿ ಹಾಕಿದ್ರೂ, ಸುಸು ಮಾಡಿದ್ರೂ ಅದರ ಜೊತಿಗೇ ಇರಬೇಕು. ಶಗಣಿ ಹಾಕೂದಂದ್ರ? ಎಮ್ಮಿ ಕಕ್ಕಾ ಮಾಡೂದು.. ಅವಾಗೂ ಬಿಟ್ಟು ಹೋಗೂಹಂಗಿಲ್ಲಾ? ಇಲ್ಲ… ಓಹ್‌… ಆಸಮ್‌…ನಾ ಎಮ್ಮೀ ಜೊತೀಗೆ ಇರಬೇಕು.. ಹೌದು… ಅಮ್ಮಾ.. ಹಂಗಾರ ನಾ ಎಮ್ಮೀ ಒಲ್ಲೆ… ಅಮ್ಮಾನ ಕಾಯ್ತೀನಿ. ನೀ ಎಲ್ಲಿ ಹೋದ್ರೂ ನಿನ್ನ ಹಿಂದ ಇರ್ತೀನಿ. ಆಫೀಸಿಗೆ ಬರ್ತೀನಿ. ಮನ್ಯಾಗೂ ನಿನ್ನ ಜೊತಿಗೆ ಇರ್ತೀನಿ. ಬಾತ್‌ರೂಮಿಗೂ ಬರ್ತೀನಿ… ಪ್ಲೀಸ್‌ ಅಮ್ಮಾ… ನಾ ಅಮ್ಮಾಗ ಕಾಯ್ತೀನಿ. ಬೇಕಂದ್ರ ಅಪ್ಪಾಗೂ ಕಾಯ್ತೀನಿ… ಸಾಲೀ ಒಲ್ಲೆ… ……

ದನ ಕಾಯೋದಂದ್ರ ಏನ ಮ್ಮ Read Post »

ಕಥಾಗುಚ್ಛ

ನಿರುತ್ತರ

ಕಥೆ ನಿರುತ್ತರ ಚಂದ್ರಿಕಾ ನಾಗರಾಜ್  ಹಿರಿಯಡಕ ಸೆರಗಿನಲ್ಲಿ ಹೆರಕಿ ತಂದಿದ್ದ ಹೂವುಗಳನ್ನು ಒಂದೊಂದಾಗಿಯೇ ತನ್ನ ಪಾಡಿಗೆ ತಾನು, ಹಮ್ಮು ಬಿಮ್ಮಿಲದೇ, ಪ್ರಫುಲ್ಲ ಮನಸ್ಥಿಯಲ್ಲಿ ಹರಿಯುತ್ತಿದ್ದ ತೊರೆಯಲ್ಲಿ ಹರಿಯ ಬಿಡುತ್ತಿದ್ದೆ. ಅದು ಹೂವ ಚಿತ್ತಾರದ ಸೀರೆಯುಟ್ಟ ನೀರೆಯಂತೆ ಬಳುಕುತ್ತಾ ಸಾಗುತ್ತಿತ್ತು.  ನಾನೇಕೋ ಇಂದು ಅದನ್ನು ಆಸ್ವಾದಿಸುವ ಮನಸ್ಥಿತಿಯಲ್ಲಿ ಇಲ್ಲ.  ಕೈಗಳು ಶಾಂತವಾಗಿ ತೊರೆಯ ಮೈ ಸವರುತ್ತಿತ್ತಷ್ಟೆ, ಮನವು ಪ್ರಕ್ಷುಬ್ಧ ಕಡಲಾಗಿತ್ತು.  ದುಃಖ ಹೆಪ್ಪು ಗಟ್ಟಿತ್ತು. ಅದು ಒಡೆದು ಹೋಗಲು ಅವನೇ ಬರಬೇಕು‌.  ಅವನ ಮೈಗಂಧವ  ತಂಗಾಳಿ ನನ್ನ ನಾಸಿಕಗಳಿಗೆ ಸವರಿ ಹೋದರೆ ಸಾಕು ನಾನು ಅದಾಗಲೇ ನಿಟ್ಟುಸಿರಾಗಬಲ್ಲೆ…ಅವನ ಹೆಜ್ಜೆಯ ಸಪ್ಪಳವ ತರಗೆಲೆಗಳು ಮೆತ್ತಗೆ ಚೀರಿ ಕಿವಿಗೆರೆದು ಹಾರಿದರೆ ಸಾಕು ನಾನು ಚುರುಕಾಗಬಲ್ಲೆ  ಇತರೆಡೆ ಗಮನವ ಹರಿಸದೆ ಪಂಚೇಂದ್ರೀಯಗಳು ಕೇವಲ ಆತನ ಹಾದಿಯತ್ತ ತಮ್ಮ ಚಿತ್ತ ಹರಿಸಿವೆ. ಬರಲಿ ಆತ, ಒಂದೊಮ್ಮೆ ಎದುರು ನಿಲಲಿ…ಇರುಳಲಿ ನಿಶಾಚರ ಪ್ರಾಣಿಯಂತಾಗಿದ್ದ ಮನವು ಆತನೆದೆಯಲಿ ನಿದ್ರಿಸಿಬಿಡುವುದೋ…ಮುಂಜಾವಿನಲಿ, ಹಕ್ಕಿಗಳಿಂಚರದಿ ಬೆರೆತು ತಾನು ಹಾಡಾಗದೆ ಉಳಿದ ದನಿ ಮಾತಾಗುವುದೋ…ಅಪರಾಹ್ನದಿ ಸೂರ್ಯದೇವನ  ತಾಪದಲಿ ಮಿಂದು ಬೆಂದಿರುವ ಈ ಒಡಲು ಅವನ ಸುಕೋಮಲ ಸ್ಪರ್ಷಕೆ ತಣಿದು ಕಡಲಾಗುವುದೋ… ಮುಸ್ಸಂಜೆಯ ಈ ರಂಗು ಕೆನ್ನೆಗಂಟಿ ಲಜ್ಜೆಯ ಮಜ್ಜೆಯಾಗುವುದೋ…ಅಥವಾ ವಿರಹದ ಕುಪಿತತೆಯ ಕುರುಹಾಗುವುದೋ…  ಹ್ಹ ಹ್ಹ! ನಿನ್ನ ಬಗೆಗೆ ನನಗೆ ಗೊತ್ತಿಲ್ಲವೇ!.. ಅವನು ಬರುತ್ತಾನೆ..ಒಂದೋ ನೀನವನನ್ನು ನೋಡಿ ಮುಖವ ಸಿಂಡರಿಸುತ್ತಿಯೇ…ಅವನು ಬಳಿ ಬಂದಂತೆ ಒಂದು ಮೋಡ ಮಗದೊಂದು ಮೋಡವ ಬೆಂಬತ್ತುವಂತೆ ನಿಮ್ಮಿಬ್ಬರ ಆಟ ನಡೆಯುತ್ತದೆ. ಮತ್ತೆ ಅವು ಸೇರಲೇ ಬೇಕಲ್ಲವೇ…ಇಲ್ಲವಾದಲ್ಲಿ, ಅವನು ಬರುತ್ತಿರುವಂತೆ ಪಂಜರದಿಂದ ಹೊರಬಿಟ್ಟ ಪಕ್ಷಿಯಂತೆ, ಬೇಡನಿಟ್ಟ ಬಲೆಗೆ ಸಿಲುಕಿದ ಜಿಂಕೆಯೊಂದ ಅದು ಯಾರೋ ಬಿಡಿಸಿದಾಗ  ಛಂಗನೆ ನೆಗೆಯುತ್ತದೆ ನೋಡು ಹಾಗೆ ನೀನು ಓಡಿ ಹೋಗಿ ಆತನ ಯೋಗ ಕ್ಷೇಮ ವಿಚಾರಿಸುತ್ತೀಯೇ, ಸೂರ್ಯ ದೇವನು ತನ್ನೊಡಲ ಸೇರಲು ಕಡಲ ಮೈಬಣ್ಣ ರಂಗೇರುವಂತೆ,  ಅವನ ಮೊಗದಲ್ಲರಳೋ ಕಿರುನಗೆ ನಿನ್ನ ಮೊಗದಲ್ಲಿ ನಸುಗೆಂಪ ಹಮ್ಮಿಸುತ್ತದೆ. ಅಲ್ಲವೇ…!? ಮನದ ಮಾತುಗಳು ಕಲ್ಪನಾ ರೂಪದಲ್ಲಿ ದೃಶ್ಯಗಳಾಗಿ ನಯನಗಳ ಮುಂದೆ ಚಲಿಸಿದಾಗ ನಾನು ಪಿಸು ನಕ್ಕು ತಣ್ಣಗೆ ಹರಿಯುತ್ತಿದ್ದ ತೊರೆಯೊಳಗೆ ಕಾಲ ಇಳಿಬಿಟ್ಟು ಹರ್ಷಿಸಲಾರಂಭಿಸಿದೆ. ಅಷ್ಟರಲ್ಲಾಗಲೆ  ಮೀನುಗಳು ನನ್ನ ಪಾದೋಪಚಾರಕ್ಕೆ ತೊಡಗಿಕೊಂಡವು. ನನ್ನೊಳಗೆ ಕಚಗುಳಿಯ ಅನುಭೂತಿ…ಮೆಲ್ಲನೆ ಬಾಗಿ ನೀರ ಬೊಗಸೆಯಲಿ ಹಿಡಿದು ನೋಡಿದೆ ನನ್ನದೇ ಪ್ರತಿಬಿಂಬ…ಕಾಯುವಿಕೆಯಲಿ ನೋಟವ ನೆಟ್ಟು  ಕಳೆಗುಂದಿರುವ ನೇತ್ರಗಳು…ಚಿಂತನೆಗಳಲಿ ಗಂಟು ಕಟ್ಟಿರುವ ಹುಬ್ಬು, ನೊಸಲು…ಒಲವ ಸುಗಂಧಕ್ಕೆ ಕಾದು ಸೋಲೊಪ್ಪಿಕೊಂಡಿರುವ ನಾಸಿಕ…ಸಾವಿರ ಮಾತುಗಳ ಆಡುವ ತವಕತೆ ಮರೆಯಾಗಿ ಮೌನಕ್ಕೆ ಶರಣಾಗಿರುವ ತುಟಿಗಳು…ನೀರುಣ್ಣದೆ ಬಾಡಿದ ನೈದಿಲೆಯಂತಾಗಿರುವ ಮುಗುಳ್ನಗೆಗೆ ಹಿಗ್ಗಬೇಕಾಗಿದ್ದ ಕೆನ್ನೆ ಗಲ್ಲಗಳು…ಹೌದು, ನಿರೀಕ್ಷೆಗಳು ಸುಡುತ್ತವೆ. ಚಿಂತೆ, ಚಿಂತನೆಗಳನ್ನು ಸೀಳಿ ಆ ಗಾನ ಹೊಮ್ಮಿತು…ಕೊಲ್ಮಿಂಚೊಂದು ಬಂದು ಅಂಧಕಾರದಿ ಬೆವಿತಿರೋ ಜಗವ ಒಮ್ಮೆಗೆ ಬೆಳಗಿ ಹೋದಂತೆ ನನ್ನೊಳಗೆ ಭಾಸವಾಯಿತು. ಮುರಳಿಯ ಗಾನ…ಇದೇ ರಾಗಕೆ ಕಾಯುತ್ತಿದ್ದ ಕರ್ಣಗಳು ನೆಟ್ಟಗಾದವು, ಕಂಗಳು ಮಿಂಚಿದವು, ನಾಸಿಕ ಕೆರಳಿದವು, ತುಟಿಗಳು ಅರಳಿದವು…ಅತ್ತ ಹೊರಟೆ…ಹೌದು, ಇದು ಅವನದೇ ವೇಣುವಿನ ನಾದ…ಇಷ್ಟು ಕಾಯಿಸಿ, ಸತಾಯಿಸಿ ಇದೀಗ ಬಂದನೇ…ಒಡತಿ ಹಾಕುವ ಕಾಳಿಗಾಗಿ ಹಸಿವಿನಿಂದ ಕಾದು ಕೂರುವ ಪಂಜರದ ಶುಕದಂತೆ ನಾನು ಚಡಪಡಿಸಿ ಬಿಟ್ಟೆನಲ್ಲಾ…ನಾನೇ ಬಳಿ ಸಾಗಿ ಬರಲೆಂದು ಅಲ್ಲೆಲ್ಲೋ ಕುಳಿತು ಸುನಾದ ನುಡಿಸುತ್ತಿದ್ದಾನಲ್ಲಾ ಎಂದು ಹುಸಿಗೋಪ ನಟಿಸುತ್ತಾ ನಡೆದೆ…ಇದೀಗಲೇ ಹೋಗಿ ಅವನ ಹೆಗಲಿಗೊರಗಿ ಜಗವ ಮರೆಯಬೇಕು! ಪಾದಗಳು ಅದ್ಯಾವುದೋ ಶಕ್ತಿ ಒಲಿದಿರುವಂತೆ  ಹೆಜ್ಜೆ ಇಡುತ್ತಿದ್ದವು. ಆಗಲೇ ಆ ದೃಶ್ಯ ಕಾಲುಗಳಿಗೆ ವಿರಾಮ ನೀಡಿತು.  ಎಂತಹ ತನ್ಮಯತೆ! ಜಗವ ಮರೆಯಿಸಿ, ತಾನೂ  ಮರೆತಿರುವ ಜಗದ್ದೋದ್ಧಾರಕ..! ಇಳಿ ಸಂಜೆಯಲಿ ತಂಗಾಳಿಯ ಹಾಸುತ್ತಿರುವ ಹಸನ್ಮುಖಿ! ಜೊತೆಗೆ ಅವನ ಮಡಿಲಲಿ ತಲೆ ಇಟ್ಟು ಕಣ್ಣೆವೆಗಳ ಮುಚ್ಚಿ ಅದ್ಯಾವುದೋ ಅವ್ಯಾಹತ ಆನಂದದಿ ಮುಳುಗಿರುವ ದೇವಿ ರುಕ್ಮಿಣಿ. ಹೆಗಲು ಖಾಲಿ…! ಆದರೆ!? ಅವನ ಮನ ತುಂಬಿದೆಯಲ್ಲವೇ..?  ಹಿಂತಿರುಗಿ ನಡೆದೆ… ನಾ ರಾಧೆ… ****************************

ನಿರುತ್ತರ Read Post »

ಕಥಾಗುಚ್ಛ

ನಿಯತ್ತು

ಕಥೆ ನಿಯತ್ತು ಎಂ. ಆರ್.ಅನಸೂಯ ಹೊರಗಡೆ ಯಾರೋ ಬೆಲ್ ಮಾಡಿದರು,ಆಗ  ಅಡುಗೆ ಮನೆಯಲ್ಲಿದ್ದ ಜಾನಕಿ ಅಲ್ಲಿಂದಲೇ ಮಗಳಿಗೆ” ನೋಡೇ ಸುಧಾ ಅದ್ಯಾರು”. ಬಾಗಿಲು ತೆಗೆಯದೆ ಕಿಟಕಿಯಿಂದಲೇ ಹೊರಗಡೆ ನಿಂತಿದ್ದವರನ್ನು ಸುಧಾ “ಯಾರು ಬೇಕಿತ್ತು”  ಎಂದು ಕೇಳಿದಳು. ಸುಮಾರು ಐವತ್ತು ವರ್ಷದ  ಅವರು “ನನ್ನ ಹೆಸರು ಇಸ್ಮಾಯಿಲ್. ನಿಮ್ಮ ತಾಯಿಯವರ ಹತ್ರ ಮಾತಾಡ ಬೇಕಿತ್ತು . ಸ್ವಲ್ಪ ಕರೆಯಮ್ಮ’ ಎಂದರು.  ಒಳಗೆ  ಬಂದು ” ಅಮ್ಮ, ಅದ್ಯಾರೊ  ಇಸ್ಮಾಯಿಲ್ ಅಂತೆ ನಿನ್ನತ್ರ ಮಾತಾಡಬೇಕಂತೆ” ಎಂದಾಗ ಯಾರಪ್ಪ ಅವ್ರು ಎನ್ನುತ್ತಾ ಬಂದು ಅವರನ್ನು  ನೋಡುತ್ತಿದ್ದಂತೆಯೇ ” ಓ ನೀವಾ” ಎಂದರು. ಆ ವ್ಯಕ್ತಿ ಕೈ ಮುಗಿದು ನಮಸ್ಕರಿಸುತ್ತ ” ಒಳಗೆ ಬರಬಹುದೇನ್ರಮ್ಮ” ಎಂದು ಕೇಳುತ್ತ ಅಲ್ಲೇ ನಿಂತಿದ್ದರು. ಆಗ ಜಾನಕಿ ಇಷ್ಟವಿಲ್ಲದಿದ್ದರೂ “ಬನ್ರಿ”ಎನ್ನ ಬೇಕಾಯ್ತು. ಜಾನಕಿ ಕುಳಿತುಕೊಳ್ಳಿ ಎಂದು ಕುರ್ಚಿ ಕಡೆ ತೋರಿಸಿದರು  ಕುಳಿತ ಮೇಲೆ “ನಿಮಗೆ ನನ್ನ ಮೇಲೆ ಸಿಟ್ಟೈತೆ. ಬೇಜಾರ್ ಮಾಡ್ಕಬೇಡ್ರಿ. ನಿಮಗೆ ಸಿಟ್ಟು ಬರಂಗೆ ನಡ್ಕಂಡಿದೀನಮ್ಮ ಏನೋ ಕೆಟ್ಟ ಕಾಲ. ಇವತ್ತು ನಿಮ್ಮ ಋಣ ತೀರಿಸೊ ಕಾಲ ಬಂತ್ರಮ್ಮ. ತಗೊಳ್ರಿ ನೀವು ಕೊಟ್ಟ ಐವತ್ತು ಸಾವಿರವನ್ನ ಅಸಲಷ್ಟೆ ಕೊಡ್ತಿರೋದು. ನನ್ನ ಕೈಲಾಗದು ಇಷ್ಟೇನಮ್ಮ ಮುಂದೆ ಆ ಅಲ್ಲಾ ಶಕ್ತಿ ಕೊಟ್ರೆ ಬಡ್ಡೀನು ತೀರಿಸಿ ಬಿಡ್ತೀನಿ”  ಎನ್ನುತ್ತಾ ಟೇಬಲ್ ಮೇಲೆ ನೋಟುಗಳ ಕಂತೆಯಿಟ್ಟರು. ಆಗ ಜಾನಕಿ ದುಡ್ಡನ್ನು ತೆಗೆದುಕೊಳ್ಳುತ್ತ “ಈ ದುಡ್ಡು ಮತ್ತೆ     ವಾಪಸ್ ಬರುತ್ತೆ ಅನ್ಕೊಂಡೇ ಇರಲಿಲ್ಲ. ಅದರ  ಆಸೇನ ನಾವು ಯಾವತ್ತೋ ಕೈ ಬಿಟ್ಟು ಸುಮ್ಮನಾಗಿದ್ವಿ. ಏನೋ ನಿಮಗೆ  ಆ ದೇವರು ಒಳ್ಳೆ ಬುದ್ದಿ ಕೊಟ್ನಲ್ಲ. ನಾವು ನಿಮ್ಮ ಸ್ಥಿತಿ ಅರ್ಥ ಮಾಡ್ಕಂಡು ವಿಧಿಯಿಲ್ಲದೆ ಸುಮ್ಮನಾಗಿ ಬಿಟ್ವಿ  ಆ ದುಡ್ಡು ನಮ್ಮದಾಗಿದ್ದರೆ ನಮಗೆ ಸಿಗುತ್ತೆ ಇಲ್ಲದಿದ್ದರೆ ಇಲ್ಲಾ ಅಂತ” ಎಂದು ಹೇಳಿ ಸುಧಾಳಿಗೆ ಟೀ ಮಾಡಲು ಹೇಳಿದರು.ಟೀ ಕುಡಿಯುವಾಗ ” ನೀವು ಎಲ್ಲಿದೀರಿ ಈಗ” ಎಂದು ಜಾನಕಿ ಕೇಳಿದರು”ನಾನು ಬೆಂಗ್ಳೂರಲ್ಲೆ ಇದೀನಿ ನಾನವತ್ತು ನಿಮ್ಮನೆಗೆ ಬಂದಿದ್ನಲ್ಲ ಅದರ  ಮಾರನೆಯ ದಿನವೇ ಬೆಂಗ್ಳೂರಿಗೆ  ಹೋಗ್ಬಿಟ್ಟೆ. ಸಾಲ ಕೊಟ್ಟವರು  ಸುಮ್ಮನೆ ಬಿಡ್ತಾರಾ. ಸಾಲಗಾರರ ಕಾಟ  ತಡೀಲಾರದೆ ಅಂಗಡಿಯಲ್ಲಿದ್ದ ಸಾಮಾನು ಮಾರಿ ಅಂಗಡಿ ಮನೇನ ಅಡವಿಟ್ಟು ಸಾಲ ತೀರ್ಸಿದೆ ಬಾಡಿಗೆಯನ್ನು  ಮತ್ತೊಬ್ಬ ಸಾಲಗಾರನಿಗೆ ಬರೆದು ಕೊಟ್ಟುಬಿಟ್ಟೆ. ಮಗ ಓದ್ತಿದ್ದ. ಮನೆ ನಡಿಬೇಕಲ್ಲ. ಬೆಂಗಳೂರಲ್ಲಿದ್ದ ನನ್ನ ಹೆಂಡ್ತಿ ಅಣ್ಣನೆ ನಿಮ್ಮಂಥಾ ದೊಡ್ಡ ವ್ಯಾಪಾರಸ್ಥರ ಹತ್ರ ಸ್ಟೋರ್ ಕೀಪರ್  ಕೆಲ್ಸ ಕೊಡಿಸಿದ. ನನ್ನ ಕೆಲಸ ಅವ್ರಿಗೆ ಇಷ್ಟ ಆಯ್ತು. ಅವ್ರೇ ರಾತ್ರಿ ವಾಚ್ಮನ್ ಕೆಲಸನೂ ನನಗೆ ಕೊಟ್ರು.ಇರಕ್ಕೆ ಒಂದು ರೂಂ  ಕೊಟ್ರು. ಎರಡೂ  ಕೆಲ್ಸಕ್ಕೂ ಸೇರಿ  ಮೂವತ್ತು ಸಾವಿರ ಕೊಡ್ರಿದ್ರು. ಮನೆಗೆ ಹದಿನೈದು ಸಾವಿರ ಕೊಟ್ಟರೆ. ಸಾಲಕ್ಕಂತ ಹತ್ತು ಸಾವ್ರ ಹೋಗಿ ನನ್ನ ಖರ್ಚಿಗೆ  ಐದು ಸಾವಿರ ಇಟ್ಕಂತಿದ್ದೆ. ನಮ್ಮಮ್ಮನೂ ನನ್ನ ಹೆಂಡ್ತಿ ಮನೇಲಿ ಸುಮ್ನೆ ಇರದೆ ಹೂ ಕಟ್ಟಿ ಸಂಪಾದನೆ ಮಾಡಿದ್ರು. ಈಗ ಮಗನಿಗೆ ಕೆ.ಇ.ಬಿ. ನಲ್ಲಿ ಕೆಲಸ ಸಿಕ್ಕಿತು ಶಿವಮೊಗ್ಗದಲ್ಲಿ ಮನೆ ಮಾಡಿ ವರ್ಷ ಆಯ್ತು. ಎಲ್ಲರೂ ಅಲ್ಲೆ ಇದ್ದಾರೆ.ಮಗನು ದುಡಿದು ಸಾಲ ತೀರಿಸ್ತಿದಾನೆ.ಮನೆನೂ ಬಾಡಿಗೆ ಕೊಟ್ಟು ಅದರ ದುಡ್ಡನ್ನು ಸಾಲಕ್ಕೆ ಕಟ್ತಾ ಇದೀವಿ. ಸಾಲ ತೀರಿದ  ಮೇಲೆ ಮಗನಿಗೆ ಮದ್ವೆ ಮಾಡಿ ನಾನು ಕೆಲ್ಸ ಬಿಟ್ಬಿಟ್ಟು ಬಂದು ಎಲ್ಲಾರೂ ಒಂದತ್ರ ಇರ್ತಿವಿ. ಈ ಐವತ್ತು ಸಾವಿರ ನಾನು ದುಡಿದಿರ  ದುಡ್ಡು. ನಾನು ಊರು ಬಿಟ್ಟೋಗಿ ಎಂಟು ವರ್ಷ ಆಯ್ತು ವನವಾಸ ಆದಂಗಾಯ್ತು ಮಗನಿಗೆ ಕೆಲಸ ಸಿಕ್ಕಿದ ಮೇಲೆ ನೆಮ್ಮದಿಯಾಗಿ ನಿರಾಳವಾಯ್ತು”ಎಂದು ಹೇಳಿ ಮುಗ್ಸಿದ.  ಸುಧಾಳನ್ನು ನೋಡಿ “ಎಲ್ಲಾ ಅವರಜ್ಜಿ ಇದ್ದಂಗೆ” ಎಂದು ಹೇಳಿ ಜಾನಕಿಯವರ ಅತ್ತೆ ಕಮಲಮ್ಮನವರನ್ನು ಕೇಳಿದ  ಅವರು ತಮ್ಮ ಮಗಳ ಮನೇಲೀ ನಾಲ್ಕೈದು ದಿನ ಇದ್ದು ಬರಲು ಹೋಗಿದ್ದಾರೆ ಎಂದಾಗ ಅವರ ಕೈ ರುಚಿಯನ್ನು ಕೊಡುತ್ತಿದ್ದ ಊಟತಿಂಡಿಯನ್ನು ನೆನೆದು ಹೊಗಳಿದರು ಜಾನಕಿಯ ಗಂಡ ಪ್ರಕಾಶಣ್ಣನು ಬೆಂಗಳೂರಿಗೆ ಹೋದ ವಿಚಾರ ತಿಳಿದು ಮತ್ತೊಮ್ಮೆ ಬಂದಾಗ ಮಾತಾಡಿಸ್ತೀನಿ ಎನ್ನುತ್ತ ಹೊರಡುವಾಗ ಮತ್ತೆ ನಡೆದ ವಿಷಯಗಳಿಗೆಲ್ಲ ಬೇಸರ ಮಾಡಿ ಕೊಳ್ಳಬಾರದೆಂದುಹೇಳಿದರು. ಅವರು ಹೋದ ಮೇಲೆ ಸುಧಾ ” ಯಾರಮ್ಮ ಇವ್ರು ನನಗೀಗ ಇವರನ್ನು ನೋಡಿದ ನೆನಪಾಯ್ತು” ಎಂದು  ಕೇಳಿದಾಗ ಜಾನಕಿ “ಅದೊಂದು ದೊಡ್ಡ ಕತೆ” ಎನ್ನುತ್ತಲೇ ಅಡುಗೆ ಮನೆಯತ್ತ ನಡೆದರೆ ಸುಧಾ ಸಹಾ ಅವರ ಹಿಂದೆಯೇ ಹೊರಟಳು. ಜಾನಕಿ ಕಥೆಯ ಪೀಠಿಕೆ ಶುರು ಮಾಡಿದಳು “ಈಗ ಬಂದಿದ್ದಲ್ಲ ಇಸ್ಮಾಯಿಲ್ ಅವ್ರ ತಂದೆ ಇಬ್ರಾಹಿಂ ಹಾಗು ನಿಮ್ಮ ತಾತ ಚಿಕ್ಕಂದಿನಿಂದ್ಲೂ ಒಳ್ಳೆಯ ಸ್ನೇಹಿತರು ಇಬ್ಬರ ನಡುವೆ ಹಣಕಾಸಿನ ವ್ಯವಹಾರವೂ ಇತ್ತು. ಅದು ನಂಬಿಕೆ ಹಾಗೂ ನಿಯತ್ತಿನಿಂದ ಕೂಡಿತ್ತು. ಆ ಸ್ರೇಹ ಹಾಗೆ ಮುಂದುವರಿಯುತ್ತ ಅವರ ಮಕ್ಕಳ ಕಾಲಕ್ಕೂ ಬಂದಿತ್ತು ಎರಡು ಕುಟುಂಬಗಳ ನಡುವಿನ ವಿಶ್ವಾಸಕ್ಕೆ ಯಾವುದೇ  ಭಂಗ ಬರದೆ ಎಲ್ಲವು ಚೆನ್ನಾಗೆ ಇತ್ತು. ಇಬ್ರಾಹಿಂರವರು ಸಣ್ಣಕಿರಾಣಿ ಅಂಗಡಿ ಇಟ್ಟಿದ್ದರು. ಅವರಪ್ನ ತೀರಿಕೊಂಡ ಮೇಲೆ ಇಸ್ಮಾಯಿಲ್ ನಡೆಸಿಕೊಂಡು ಹೋಗುತ್ತಿದ್ದರು. ಅಂಗಡಿಯ ಜೊತೆಗೆ ತೆಂಗಿನಕಾಯಿಯ ಹೋಲ್ ಸೇಲ್ ವ್ಯಾಪಾರ ಮಾಡುವ ಉತ್ಸಾಹದಿಂದ ಶುರುಮಾಡಿದರು.  ತಾವು ಕೂಡಿಟ್ಟ ಹಣದೊಂದಿಗೆ ಸ್ಟಲ್ಪ ಸಾಲವನ್ನು ಮಾಡಿ ಹಣ ಹೊಂದಿಸಿಕೊಂಡು ಹೊಸ ವ್ಯವಹಾರಕ್ಕೆ ಹಾಕಿದ್ದರು ಯಾಕೋ ಏನೋ ಹೊಸ ವ್ಯವಹಾರದಲ್ಲಿ ಏಳ್ಗೆಯಾಗದೆ  ನಷ್ಟವಾಗ ತೊಡಗಿತು. ಹೊಸ ವ್ಯವಹಾರದ ಆಸಕ್ತಿಯ ಫಲವಾಗಿ ಕಿರಾಣಿ ಅಂಗಡಿಯೂ ಸರಿಯಾಗಿ ನಡೆಯದೆ  ಅದರಲ್ಲೂ ಆದಾಯ ಕಡಿಮೆಯಾಯಿತು.ಅಂದುಕೊಂಡ ಹಾಗೆ ಏನೂ ನಡೆಯದೆ ಎಲ್ಲವೂ ಏರುಪೇರಾಗಿ ಬಿಟ್ಟಿತು ಒಟ್ನಲ್ಲಿ ಗ್ರಹಚಾರ ಕೆಟ್ಟ ಪರಿಣಾಮವೋ ಏನೋ ಅವರ ಕೆಟ್ಟ ದಿನಗಳು ಪ್ರಾರಂಭವಾದವು. ಅದು ಸಾಲದೆಂಬಂತೆ  ಆಗಲೇ ಅವರ ತಾಯಿಗೆ ಅನಾರೋಗ್ಯದಿಂದಾಗಿ ಆಸ್ಪತ್ರೆ ಸೇರಬೇಕಾಯ್ತು. ಹೊಸ ವ್ಯವಹಾರದಲ್ಲಾದ ನಷ್ಟ ಮತ್ತು ಆಸ್ಪತ್ರೆ ಖರ್ಚಿಗಾಗಿ ಮತ್ತೆ ಸಾಲಮಾಡದೆ ಬೇರೆ ದಾರಿಯೆ ಇರಲಿಲ್ಲ ಆಗ ನಮ್ಮ ಹತ್ರ ಒಂದು ಲಕ್ಷ ರೂಪಾಯಿ ಸಾಲ ತೆಗೆದರು. ಅವರ ತಾಯಿ ಆರೋಗ್ಯವಂತರಾಗಿ ಮನೆಗೇ  ಬಂದರೂ ಹಣಕಾಸಿನ ಪರಿಸ್ಥಿತಿ ಮಾತ್ರ ತೀರ ಹದಗೆಟ್ಟು ಹೋಗಿತ್ತು ಸಾಲಗಾರರ ಕಾಟದಿಂದಾಗಿ ಮರ್ಯಾದೆಗೆ ಹೆದರಿ ಅವರದೆ ಸ್ವಂತ ಅಂಗಡಿ ಮನೆಯನ್ನು ಭೋಗ್ಯಕ್ಕೆ ಹಾಕಿ ಅರ್ಧ ಸಾಲ ತೀರಿಸಿ ಹೆಂಡತಿಯ ಒಡವೆಗಳನ್ನೂ ಮಾರಿದರು. ಆಗ ನಿಮ್ಮಪ್ಪ ಸಾಲದ ದುಡ್ಡು ಕೇಳಿದರು. ಆಗ ಅವನಲ್ಲಿದ್ದ ಐವತ್ತು ಸಾವಿರ ಕೊಟ್ಟು “ಉಳಿದ ಹಣ ಈಗಲೇ ಕೊಡಕ್ಕೆ ಆಗಲ್ಲ. ಬೇರೆ ಕಡೆ ಇನ್ನೂ ಸಾಲ ಐತೆ ನೀವು ಈಗಲೇ ಕೊಡಬೇಕು ಅಂದ್ರೆ ನೇಣು ಹಾಕ್ಕಂಡು ಸಾಯದು ಬಿಟ್ರೆ ಇನ್ನೇನೂ ಮಾಡಕ್ಕಾಗಲ್ಲ. ನನಗೆ ಸ್ಟಲ್ಪ ಟೈಂ ಕೊಡ್ರಿ ನಿಮ್ಮ ಋಣ ಇಟ್ಕೊಂಡು ಸಾಯಲ್ಲ” ಎಂದು ಕೈ ಮುಗಿದು ಕೇಳ್ಕಂಡಿದ್ದರು. ಆಗ ನಿಮ್ಮಅಜ್ಜಿ ನಿಮ್ಮಪ್ಪನ ಹತ್ರ “ಪ್ರಕಾಶ, ಒತ್ತಡ ಹಾಕ್ಬೇಡ. ನಿಯತ್ತಿನ ಮನುಷ್ಯನೇ ಪಾಪ.ಲೇಟಾದ್ರು ದುಡ್ಡು ಬರುತ್ತೆ”ಎಂದುಹೇಳ್ಬಿಟ್ಟಿದ್ದರು.   ಮಾರನೇ ದಿನವೇ ಇಸ್ಮಾಯಿಲ್ ಊರು ಬಿಟ್ಟಿದ್ದ. ಆಗ ನಿಮ್ಮಪ್ಪ ಹಣ ವಾಪಸ್ ಬರುವ ಆಸೆಯನ್ನೇ ಕೈ ಬಿಟ್ಟರು “ಅದಾದ ಮೇಲೆ ಇವತ್ತೇ ನಾನು ನೋಡ್ತಿರೋದು. ಇನ್ನು ಮುಂದಿನ ಕತೆನೆಲ್ಲಾ ಅವನೇ ಹೇಳಿದನಲ್ಲ. ಅಂತು ಅವ್ರ ನಿಯತ್ತು ಮೆಚ್ಚಬೇಕು.ಅದಕ್ಕೆ ಅಲ್ವೇ ಹೇಳೋದು ದುಡ್ಡು ಶಾಶ್ವತ ಅಲ್ಲ ಅಂತ “ಎಂದು ಜಾನಕಿ ಹೇಳಿದರೆ ” ಎಂಟು ವರ್ಷ ಆದ ಮೇಲೆ ಅವರಾಗೇ ಬಂದು ದುಡ್ಡು ಕೊಟ್ಟು ಸಾಲ ತೀರ್ಸಿದಾರೆ.ಅವ್ರು ನಿಜವಾಗ್ಲೂ ಈಗಿನ ಕಾಲಕ್ಕೇ ಗ್ರೇಟ್ ಕಣಮ್ಮ”ಎಂದು ಸುಧಾ ಸಹಾ ಹೊಗಳಿದಳು. …….

ನಿಯತ್ತು Read Post »

ಕಥಾಗುಚ್ಛ

ಮಿಸ್ಟರ್ ಅನ್ ಫ್ರೆಂಡ್

ತೆಲುಗಿನಿಂದ ಅನುವಾದವಾದ ಕಥೆ ತೆಲುಗು ಮೂಲಃ ಶ್ರೀ ರಾಮದುರ್ಗಂ ಮಧುಸೂದನ ರಾವು                   ಕನ್ನಡಕ್ಕೆ: ಚಂದಕಚರ್ಲ ರಮೇಶ ಬಾಬು ಈಗೇನು ಮಾಡೋದು…..? ಗೇಟಿನಿಂದಲೇ ಹೊರಗೋಡಿಸಿದ್ದರೆ ಚೆನ್ನಾಗಿರೋದಾ….. ಈಗಂತೂ ಆ ಛಾನ್ಸ್ ಇಲ್ಲ. ಬಂದು ಕೂತಿದ್ದಾನೆ. ಬರೀ ಪರರ ಜೀವನಗಳಲ್ಲಿ ಇಣುಕಿ ನೋಡುವುದು ಬಿಟ್ಟರೆ ಇಷ್ಟು ವರ್ಷಗಳ ತನ್ನ ಜೀವನದಲ್ಲಿ ಮಾಡಿದ್ದು ಬೇರೇ ಏನಾದರೂ ಇದೆಯಾ ? ಎಲ್ಲಿ ಸಿಕ್ಕರೆ ಅಲ್ಲಿ…. ಯಾವಗ ಸಿಕ್ಕರೆ ಅವಾಗ…. ಹೇಗೆ ಸಿಕ್ಕರೆ ಹಾಗೆ ತೂರಿಬಿಡೋದೇ! ********** ಉಂಡಾಡಿ….. ಗಾಳಿ ಜೀವ…. ಶಿವಕುಮಾರನ ನೆನಪು ಬಂದಾಕ್ಷಣ ಮನಸ್ಸಿನಲ್ಲಿ ಹೊಳೆಯುವ ತಕ್ಷಣದ ಮಾತು ಆ ಎರಡೇ ! ನನಗಿನ್ನೂ ಚೆನ್ನಾಗಿ ನೆನಪಿದೆ. ಅವನನ್ನ ಜೀಜೆ ( ಗಾಳಿ ಜೀವ) ಎಂದು ಕರೆಯುತ್ತಿದ್ದೆವು. ನನ್ನ ಜೀವನದಲ್ಲಿ ಕನಸಿನಲ್ಲೂ ಸ್ವಾಗತಿಸದ ಮನುಷ್ಯ ಯಾರಾದರೂ ಇದ್ದಾರಾ ಎಂದರೆ ಅದು ಅವನೊಬ್ಬನೇ ! ಹಾಗಂತ ಇಬ್ಬರೂ ಗಟ್ಟಿಯಾಗಿ ಜಗಳ ಮಾಡಿಲ್ಲ. ಮಾತಾಡಿದ್ದು ಸಹ ತುಂಬಾ ಕಮ್ಮಿ !                                                           ********** ಶಾಲಾ ಜೀವನದ ಸಹಪಾಠಿ. ಯಾವಾಗಲೂ ಯಾವ ಗಿಡದ ಕೆಳಗೋ ಅಥವಾ ಆಟದ ಮೈದಾನದಲ್ಲೋ ಕಾಣಿಸಿಕೊಳ್ಳುತ್ತಿದ್ದ…. ತುಂಡಾದ ಗಾಳಿ ಪಟದ ಹಾಗೆ ! ನೋಡಿದಾಗಲೆಲ್ಲ ನಗುತ್ತಿದ್ದ….. ತನ್ನೆತ್ತರದ ನಿರ್ಲಕ್ಷ್ಯದಂತೆ ! ಧರಿಸುವ ದಿರಿಸಿನ ಮೇಲೆ ಗಮನ ಇರುತ್ತಿರಲಿಲ್ಲ. ಕಾಲಲ್ಲಿ ಚಪ್ಪಲಿ ಇಲ್ಲದೆ ತಿರುಗುತ್ತಿದ್ದ ಒಬ್ಬನೇ ವಿದ್ಯಾರ್ಥಿ ನಮ್ಮ ಶಾಲೆಯಲ್ಲಿ ಎಂದರೆ ಇವನೇ ! ಅಷ್ಟೇ ಅಲ್ಲ. ನನ್ನ ಸ್ವಾಭಿಮಾನಕ್ಕೆ ಮೊದಲಸಲ ಧಕ್ಕೆ ತಂದವನೂ ಇವನೇ. ಸದಾ ಕ್ಲಾಸಿನಲ್ಲಿ ನಾನೇ ಮೊದಲಿಗನಾಗುವಂತೆ ನೋಡಿಕೊಳ್ಳುತ್ತಿದ್ದೆ. ಟೆನ್ತ್ ಕ್ಲಾಸಿನ ಅರ್ಧ ವಾರ್ಷಿಕ ಪರೀಕ್ಷೆಯಲ್ಲಿ ಶಿವ ಲೆಕ್ಕದಲ್ಲಿ ಮೊದಲಿಗನಾಗಿದ್ದ. ಆ ದಿನಗಳಲ್ಲಿ ಅದೊಂದು ಸೆನ್ಸೇಷನ್ ! ಹಿಂದಿನ ಬೆಂಚಿನಲ್ಲಿ ಇದ್ದಾನಾ ಇಲ್ಲವಾ ಎನ್ನುವಷ್ಟು ಸೈಲೆಂಟಾಗಿ ಇರುವ ಹುಡುಗ ಇದ್ದಕ್ಕಿದ್ದಂತೆ ಎಲ್ಲರ ಕಣ್ಣಿಗೆ ಬಿದ್ದ. ’ ಎಷ್ಟು ಸೈಲೆಂಟಾಗಿರ್ತೀಯಲ್ಲ… ಅಷ್ಟು ಮಾರ್ಕ್ ಹೇಗೆ ತೆಗೆದೆ ಮಾರಾಯಾ ’ ಅಂತ ಕೇಳಿದರೆ… ’ ಓದಿದ್ದೇ ಬಂದರೆ ಯಾರಾದರೂ ತೆಗೀತಾರೆ. ಇದರಲ್ಲೇನಿದೆ ’ ಅಂತ ಕಾಜುವಲ್ಲಾಗಿ ಉತ್ತರ ಕೊಟ್ಟಿದ್ದ. ಆದರೆ ಸೋಜಿಗದ ಸಂಗತಿ ಎಂದರೆ ಮತ್ತೆ ಯಾವಾಗಲೂ ಅವನು ಅಷ್ಟು ಮಾರ್ಕು ತೆಗಿಯಲಿಲ್ಲ. ಬರೀ ಬೇಕಾಗುವಷ್ಟು ಮಾರ್ಕುಗಳಿಂದಲೇ ಟೆನ್ತ್ ಪಾಸಾದ. ಆಗಲೇ ಅವನ ತಂದೆ ತೀರಿಹೋದರು. ಮನೆ ನಡೆಯೋದೇ ಕಷ್ಟವಾಯಿತು. ಸರಿಯಾಗಿ ಆರು ತಿಂಗಳ ನಂತರ….. ಬೀದಿ ಕೊನೆಯ ಶಿವಾಲಯದಲ್ಲಿ ಪೂಜಾರಿಯಾಗಿ ಕಾಣಿಸಿಕೊಂಡ. ಅಲ್ಲಿಯವರೆಗೆ ಮಾತ್ರ ನನಗೆ ನೆನಪು. ಮತ್ತೆ ನಾನು ಆ ಊರು ಬಿಟ್ಟಿದ್ದೆ… ಅಲ್ಲಿಯ ನೆನಪುಗಳನ್ನು ಸಹ. ****** ಇದೆಲ್ಲ ನಲವತ್ತು ವರ್ಷಗಳ ಕೆಳಗಿನ ಮಾತು ! ಇವತ್ತು ಮತ್ತೆ ನೆನಪಿಗೆ ತಂದುಕೊಳ್ಳಬೇಕಾಗಿದೆ. ಎಲ್ಲಿಯ ಕರ್ನೂಲು ಎಲ್ಲಿಯ ಕೆನಡಾ. ತಾನು ಇಲ್ಲಿಗೆ ಹೇಗೆ ಬಂದದ್ದು ?… ತಾನು ಇಲ್ಲಿರುವುದು ಮೂರನೆಯ ಕಣ್ಣಿಗೆ ಗೊತ್ತಿರಲಿಲ್ಲ…. ಅಂಥಾದ್ರಲ್ಲಿ ಇವನಿಗೆ ಹೇಗೆ ಗೊತ್ತಾಯಿತು ? ರಿಷಿಗೆ ಸಿಟ್ಟು ಉಕ್ಕುಕ್ಕಿ ಬರುತ್ತಿತ್ತು …. ತನ್ನ ಮೇಲೆ…. ತನ್ನ ಬದುಕಿನ ಮೇಲೆ…. ಶಿವನ ಮೇಲೆ….. ಮಾತಾಡಿಸಲೇ ಬೇಕಾಗಿ ಬಂದ ಈ ಸಂದರ್ಭದ ಮೇಲೆ. ….. ಈಗೇನು ಮಾಡೋದು? ಮತ್ತೆ ಪ್ರಶ್ನೆ ಮೊದಲಿಗೇ ಬಂತು. ತಲೆ ಕೊಡವಿ ಎದ್ದ ಅನಿವಾರ್ಯವೆನ್ನುವಂತೆ. ******* ಐದೇ ನಿಮಿಷದ ಆತಿಥ್ಯ. ಅದೂ ಎಷ್ಟು ಬೇಕೋ ಅಷ್ಟು. “ ಹಾಯ್ ! ಹೇಗಿದ್ದಿಯಾ ?…. ಸಾರೀ ಹೇಗಿದ್ದೀರಿ? “ ರಿಷಿಯನ್ನು ನೋಡಿದ ಶಿವ ವಿಶ್ ಮಾಡಿದ. “ ಫರ್ವಾ ಇಲ್ಲ. ನೀನು ಹೇಗಿದ್ದೀಯಾ ?” ತುಟಿಯ ಮೇಲೆ ಬಲವಂತದ ನಗೆಯನ್ನು ಬಳೆದುಕೊಂಡ ರಿಷಿ. “ ಓ ಸೂಪರ್ ! ಎರಡು ವಾರದ ಹಿಂದೆ ಕೆನಡಾಗೆ ಬಂದೆ. ನನ್ನ ಅಣ್ಣನ ಮಗ ಇಲ್ಲಿ ಡಾಕ್ಟರ್. ಅವನೇ ತುಂಬಾ ಒತ್ತಾಯ ಮಾಡಿ ಎಳ್ಕೊಂಡು ಬಂದ… ಕೆನಡಾ ತೋರಿಸ್ತೇನೆ ಅಂತ.” ಶಿವ ತಮಾಷೆಯಾಗಿ ನಗುತ್ತಾ ಮಾತಾಡ್ತಿದ್ದರೆ ರಿಷಿ ನಿರ್ವಿಕಾರವಾಗಿ ನೋಡುತ್ತಿದ್ದ. ಅದೇ ನಗು.. ನಲವತ್ತು ವರ್ಷ ಕಳೆದರೂ ಮಾಸಿಲ್ಲ. ಅವನಲ್ಲಿ ನಗು ಹೇಗೆ ಹುಟ್ಟುತ್ತೋ ರಿಷಿಗೆ ಅರ್ಥವಾಗದ ವಿಷಯ. ತಾನು ದಿನಾಲೂ ಐದಾರು ಮೀಟಿಂಗ್ ಅಟೆಂಡ್ ಮಾಡ್ತಾನೆ. ಕಂಪೆನಿಗಳಿಗೆ ಸಂಬಂಧ ಪಟ್ಟ ಸೀರಿಯಸ್ ನಿರ್ಣಯಗಳನ್ನು… ನಿರ್ದಾಕ್ಷಿಣ್ಯ ನಿರ್ಣಯಗಳನ್ನು.. ಹೀಗೆ ಚಿಟಿಕೆ ಹೊಡೆಯೋದರಲ್ಲಿ ತೊಗೊಳ್ಳಬಲ್ಲ. ಆದರೆ ಈ ತರದ ನಗೆಗಾಗಿ ಎಂದೂ ಪ್ರಯತ್ನಿಸಿಲ್ಲ. ತನ್ನ ಪರ್ಸನಲ್ ಟ್ರೈನರ್ ನ ದೂರು ಇದೇ ! “ ಸರ್! ನೀವೆಲ್ಲ ಓಕೇ. ಆದರೆ ನಿಮ್ಮಲ್ಲಿ ಸ್ಮೈಲ್ ಈಸ್ ಮಿಸ್ಸಿಂಗ್ ! “ ಅಂತ. ಶಿವನ್ನ ನೋಡಿದಾಗ ಮತ್ತೆ ಆ ಮಾತುಗಳು ನೆನಪಿಗೆ ಬಂದವು. “ ಡಾಕ್ಟರಾ….” “ ಹೌದು. ಗೌರೀಪತಿ ವೇದುಲ….. ಆನ್ಕಾಲಜಿಸ್ಟ್. ಅವನ ಹೆಂಡತಿ ಹಾರಿಕಾ, ರೇಡಿಯಾಲಜಿಸ್ಟ್. “ ರಿಷಿ ತಲೆ ಅಲ್ಲಾಡಿಸಿದ. ಏನೂ ಮಾತಾಡಲಿಲ್ಲ. ಕಣ್ಣ ಹಿಂದೆ ಒಂದು ನೆರಳು ಹಾದು ಮರೆಯಾಯ್ತು. “ ನೀನು ಇಲ್ಲಿದ್ದೀಯಾ ಅಂತ ಗೊತ್ತಾಯ್ತು. ಕರ್ನೂಲಿನ ದೋಸ್ತನನ್ನು ಕೆನಡಾದಲ್ಲಿ ಭೇಟಿ ಮಾಡೋದು…. ಭಾರೀ ಗಮ್ಮತ್ತಾಗಿದೆ ಅಲ್ಲಾ …” ರಿಷಿ ಮುಜುಗರದಿಂದ ಮಿಸುಕಾಡಿದ. “ ಶಿವ…. ಸಾರೀ. ನನಗೆ ಪ್ರಿ ಫಿಕ್ಸ್ಡ್ ಷೆಡ್ಯೂಲ್ ಇದೆ… ಮತ್ತೆ ಸಿಗೋಣ… “ “ ಓ ಹೌದಾ… ಇಟ್ಸ್ ಒಕೆ.. ಖಂಡಿತಾ ಸಿಗೋಣ. “ “ ಹೇಗೆ ಹೋಗ್ತಿಯಾ ….ಇರು. ನನ್ನ ಡ್ರೈವರ್ ಡ್ರಾಪ್ ಮಾಡ್ತಾನೆ “ ಫೋನ್ ಮಾಡಲು ಹೋದ ರಿಷಿಯನ್ನು ಶಿವ ತಡೆದ. “ ಬೇಡ… ಬೇಡ. ಡಾಕ್ಟರ್ ನ ಕಾರಿದೆ. ಅವರಿಬ್ಬರೂ ಬರೋದ್ರಲ್ಲಿ ರಾತ್ರಿಯಾಗತ್ತೆ. ನಾನು ಸ್ವಲ್ಪ ಹಾಗೆ ಒಂದು ಸುತ್ತು ಹಾಕಿ ಮನೆ ಸೇರ್ತೀನಿ…..” ಬಾಗಿಲ ವರೆಗೆ ಹೋದ ಶಿವ ಹಿಂದಿರುಗಿದ. “ ರಿಷಿ! ಎಲ್ಲಾ ಸರಿಯಾಗಿದೆಯಾ.. “ ಒಂದು ಕ್ಷಣ ಕಾಲ ನಿಶ್ಶಬ್ದ… “ ಯಾ… ಯಾಕೆ ಹಾಗೆ ಕೇಳ್ತಿದ್ದಿ ?” ತಡವರಿಸುತ್ತಾ ಕೇಳಿದ ರಿಷಿ. “ಏನಿಲ್ಲ. ಜಸ್ಟ್ ಕೇಳಬೇಕೆನಿಸಿತು. ಇಂಡಿಯಾಗೆ ವಾಪಸ್ ಹೊಗೋದರಲ್ಲಿ ಮತ್ತೆ ಸಿಗ್ತೀನಿ.” ಶಿವ ಹೋದಮೇಲೆ ಸೋಫಾದ ಮೇಲೆ ಕುಸಿದ ನಿತ್ರಾಣವಾಗಿ. ************ ರಿಷಿ ತನ್ನ ಜೀವನದಲ್ಲಿ ಯಾವುದುಕ್ಕಾಗಿಯೂ ನಿಲ್ಲಲಿಲ್ಲ. ಧಾವಂತದಲ್ಲೇ ಐದು ದಶಕ ದಾಟಿದ್ದ. ಕೆಲಸಕ್ಕೆ ಸೇರಿದ್ದರಿಂದ ಹಿಡಿದು…. ನೂರಾರು ಜನಕ್ಕೆ ಕೆಲಸ ಕೊಡುವ ಹುದ್ದೆಗೆ ತುಂಬಾ ಸುಲಭವಾಗಿ ಸೇರಿದ್ದ. ಈ ಪಯಣದಲ್ಲಿ ಕಷ್ಟಗಳು ಇರಲಿಲ್ಲವೆಂತಲ್ಲ, ಬೇಕಾದಷ್ಟು.. ಅದರೆ ಅವುಗಳನ್ನು ಲೆಕ್ಕ ಮಾಡದಷ್ಟು ನಿರ್ಲಕ್ಷ್ಯ ಅಭ್ಯಾಸ ಮಾಡಿಕೊಂಡಿದ್ದ.  ಗುರಿ ಮುಟ್ಟ ಬೇಕಾದರೆ…. ಮುಟ್ಟುವ ವರೆಗೆ ಪ್ರಯತ್ನಿಸುವುದೇ … ಎನ್ನುವ ಸೂತ್ರವನ್ನು ನಂಬಿದ್ದ… ಮತ್ತೆ ಆಚರಿಸಿದ್ದ. ನಲವತ್ತರ ವಯಸ್ಸಿಗೆ ಉದ್ದಿಮೆದಾರ. ರಿಷಿ ಸೊಲ್ಯೂಷನ್ಸ್ ಅಂತ ಶುರುವಾಗಿ ಈಗ ರಿಷಿ ಗ್ರೂಪ್ ಆಫ್ ಇಂಡಸ್ಟ್ರೀಸ್ ವರೆಗೆ ಬೆಳೆಸಿದ್ದ. ಮಗಳಿಗೆ ಮದುವೆ ಮಾಡಿ ಅಳಿಯನಿಗೆ ಕಂಪೆನಿಯಲ್ಲಿ ಹೊಣೆಗಾರನನ್ನಾಗಿ ಮಾಡಿದ. ಮಗ ಎಂಡಿ ಯಾಗಿದ್ದು ಗ್ರೂಪಿನ ವ್ಯವಹಾರಗಳನ್ನೆಲ್ಲ ನೋಡಿಕೊಳ್ಳುತ್ತಿದ್ದ. ಆದರೆ ಜೀವನದಲ್ಲಿ ಮೊದಲನೆಯ ಸಲ ಬಹು ಆಶ್ಚರ್ಯವಾಗಿ ಸ್ವಲ್ಪ ನಿಲ್ಲಬೇಕಾಗಿ ಬಂತು. ಆರಾಮದ ಸಲುವಾಗಿ ಕೆನಡಾಗೆ ಬಂದಿದ್ದ. ರಿಷಿಗೆ ಕೆನಡಾ ಫೇವರೆಟ್ ಪ್ಲೇಸ್. ತನ್ನ ಹೆಂಡತಿ ಮಹಿತಾ ತೀರಿಕೊಂಡ ಮೇಲೆ ಪೇರಿಕೊಂಡ ಒಬ್ಬಂಟಿತನವನ್ನು ಹೋಗಲಾಡಿಸಲು ಪ್ರತಿ ವರ್ಷವೂ ಇಲ್ಲಿಗೆ ಬರುತ್ತಿದ್ದ. ರಿಷಿಗೆ ಮೊದಲಿನಿಂದಲು ಯಾವ ವಿಷಯವನ್ನಾದರೂ ಗೋಪ್ಯವಾಗಿ ಇಡುವುದು ಅಭ್ಯಾಸ. ಅದೂ ಕಂಪೆನಿಯ ವಿಷಯವೆಂದರೆ ಇನ್ನೂ ಸರಿ.. ತೀರ ಕಠಿಣವಾಗಿರುತ್ತಿದ್ದ. ತಾನು ಕೆನಡಾಗೆ ಬಂದಿರುವ ವಿಷಯ ಯಾರಿಗೂ ಗೊತ್ತಾಗಂತೆ ನೋಡಿಕೊಂಡಿದ್ದ. ಎಲ್ಲ ಪಕ್ಕಾ ಪ್ಲಾನ್ ಮಾಡಿಯೇ ತನ್ನ ಟೂರ್ ಕನ್ಪರ್ಮ್ ಮಾಡಿಕೊಂಡಿದ್ದ. ಬಂದು ಒಂದು ತಿಂಗಳಾಗಿದ್ದರು ತಾನು ಇಲ್ಲಿ ಇರುವುದು ಯಾರಿಗೂ ಗೊತ್ತಾಗದ ಹಾಗೆ ತನ್ನ ಪರ್ಸನಲ್ ಸ್ಟಾಫ್ ನೋಡಿಕೊಳ್ಳುತ್ತಿದ್ದರು. ಇಷ್ಟೆಲ್ಲಾ ಆದರೂ, ಶಿವ ಅದು ಹೇಗೆ ಕಂಡು ಹಿಡಿದ? ಸ್ವಲ್ಪ ಹೊತ್ತಿಗೆ ಏನೋ ಹೊಳೆಯಿತು. ಅವನಿಗೆ ವಿಷಯ ಹೇಗೆ ತಿಳಿಯಿತೋ ಅರ್ಥವಾಯಿತು. ********** “ ಹಾಯ್ ಸರ್……ಹೇಗಿದ್ದೀರಿ? “ ಎನ್ನುತ್ತ ಗೌರೀಪತಿ ನಗುತ್ತ ಒಳಬಂದ. “ ಯಾ ಫರ್ವಾ ಇಲ್ಲ….” ಧ್ವನಿ ಬಾವಿಯೊಳಗಿಂದ ಬಂದಂತೆ ನೀರಸವಾಗಿತ್ತು. “ ಒನ್ ಮಿನಿಟ್…. “ ಎನ್ನುತ್ತ ಪಲ್ಸ್, ಬಿಪಿ ಚೆಕ್ ಮಾಡಿದ. “ ಹಾ.. ಒಕೆ. ಹೇಳಿ. ತುಂಬಾ ನಿತ್ರಾಣ ಎನಿಸುತ್ತಿದೆಯೇ …” ’ ಹೌದು. ತುಂಬಾನೇ….ಒಮ್ಮೊಮ್ಮೆ ಏಳಲಿಕ್ಕೆ ಸಹ ಬರದ ಹಾಗೆ….” “ ವೆಲ್… “ ಯಾರಿಗೋ ಕಾಲ್ ಮಾಡಿದ. “ ಸರ್. ಇವತ್ತಿನಿಂದ ನಿಮಗೆ ಪರ್ಸನಲ್ ಡೈಟಿಷಿಯನ್ ಬರ್ತಾರೆ. ಷಿ ಈಜ್ ಬೃಂದಾ ಫ್ರಂ ಅವರ್ ಹಾಸ್ಪಿಟಲ್. ನಿಮ್ಮ ಆಹಾರದ ವಿಷಯ ಎಲ್ಲಾ ಪೂರ್ತಿಯಾಗಿ ತಾನೇ ನೋಡಿಕೊಳ್ತಾಳೆ. ಮೆಡಿಸಿನ್ ಕಂಟಿನ್ಯೂ ಮಾಡಿ. ಹೋಪ್ ಎವ್ರೀ ಥಿಂಗ್ ಗುಡ್..” . ಎದ್ದ. “ ಅಂದಹಾಗೆ ಚಿಕ್ಕಪ್ಪ ನಿಮ್ಮನ್ನ ಕೇಳಿದೆನೆಂದು ಹೇಳಲು ಹೇಳಿದ್ದಾರೆ. ಅವರು ನಿಮಗೆ ಕಾಲ್ ಮಾಡ್ತಾರಲ್ಲಾ..” “ ಯಾ.. ಜಿಡ್ಡು ಕೃಷ್ನಮೂರ್ತಿಯವರ ಪ್ರವಚನ ಕಳಿಸ್ತಾನೆ..” “ ಎಕ್ಸಲೆಂಟ್ ರಿಷಿಯವರೇ ! ಚಿಕ್ಕಪ್ಪ ನಂಥವರು ಒಬ್ಬರಿದ್ದರೆ ಸಾಕು ಎಷ್ಟು ಕಷ್ಟ ಬಂದರೂ ತಡೆದು ಕೊಳ್ಳಬಹುದು. ತುಂಬ ಕೂಲ್ ಪರ್ಸನಾಲಿಟಿ…. “ ಗೌರೀಪತಿಹೊರಟಿರಲು…“ ಡಾಕ್ಟರ್… ನಾನು ಇದರಿಂದ ಹೊರಬೀಳುತ್ತೀನಾ…. “ ರಿಷಿ ಅನೂಹ್ಯವಾಗಿ ಪ್ರಶ್ನಿಸಿದ. ಗೌರೀಪತಿಯ ಮುಖದಲ್ಲಿಯ ಬಣ್ಣಗಳು ಬದಲಾದವು. ಮತ್ತೆ ತಕ್ಷಣ ಸರಿಪಡಿಸಿಕೊಂಡ. “ ವೈನಾಟ್…ನಿಮ್ಮಲ್ಲಿ ಇಂಪ್ರೂವ್ ಮೆಂಟ್ ಕಾಣ್ತಿದೆ… ಡೋಂಟ್ ವರ್ರಿ ಸರ್. ನಾವಿದ್ದೀವಲ್ಲ “ ರಿಷಿಯ ಮುಖದಲ್ಲಿ ಒಂದು ನಿರ್ಲಿಪ್ತ ನಗೆ. “…. ಅದಕ್ಕೆ ನನಗೆ ಡಾಕ್ಟರ್ ಗಳೆಂದರೆ ಇಷ್ಟ. ಪ್ರಾಣಾನೇ ಹೊಗ್ತಾ ಇದ್ರೂ ಸರಿ… ನಿಮಗೇನೂ ಆಗಲ್ಲ ಅಂತ ಧೈರ್ಯಕೊಡ್ತಿರ್ತಾರೆ. “ “ ರಿಷಿಜೀ. ಈ ಸಮಯದಲ್ಲಿ ನೀವು ತುಂಬಾ ಯೋಚನೆ ಮಾಡಬೇಡಿ. ಜಸ್ಟ್ ಲಿವ್ ದಿಸ್ ಮೊಮೆಂಟ್. ದಟ್ಸಾಲ್. ಇಷ್ಟೆಲ್ಲ ಜೀವನಾನ್ನ ನೋಡಿದೀರಿ. ನಿಮಗೆ ಗೊತ್ತಿರದ ಫಿಲಾಸಫಿ ಏನಿರತ್ತೆ ಹೇಳಿ? ಆದ್ರೂ ನಿಮಗೇ ಗೊತ್ತಿದ್ದ ಹಾಗೆ…. ಎವೆರಿಬಡಿ ಷುಡ್ ಎಗ್ಜಿಟ್…. ಟುಡೇ ಆರ್ ಟುಮಾರೋ….. ರೈಟ್. ಹಾಗಾದ್ರೆ ನಾನು ಬರ್ಲಾ. ಟೇಕ್ ಕೇರ್. “ ಗೌರೀಪತಿ ಹೊರಟು ಹೋದ. ಒಂದಷ್ಟು ವಿಶ್ವಾಸ ಮತ್ತೊಂದಷ್ಟು ನಂಬಿಕೆಯನ್ನು ಬಿತ್ತುತ್ತಾ.. *************** ಪರಿಸ್ಥಿತಿಗಳು ಬದಲಾಗುವುದಕ್ಕೆ ವರ್ಷಗಳು ಬೇಕಾಗಿಲ್ಲ. ಕೆಲ ದಿನ, ಗಂಟೆಗಳು, ನಿಮಿಷಗಳು ಸಾಕು. ರಿಷಿಗೆ ಇತ್ತೀಚೆಗೆ ಇದು ಅನುಭವಕ್ಕೆ ಬರುತ್ತಿತ್ತು. ಸಮಯ ತುಂಬಾ ಭಾರವಾಗಿ ಸಾಗುತ್ತಿತ್ತು. ರೂಮ್ ಬಿಟ್ಟು ಹೊರಗೆ ಹೋಗಿ ಅದೆಷ್ಟು ದಿನವಾಗಿತ್ತೋ ? ಸದಾ ಲ್ಯಾಪ್ ಟಾಪಿನಲ್ಲಿ ಬ್ಯುಸಿಯಾಗಿರುತ್ತಿರುವ ರಿಷಿಯ ಕೈಯಲ್ಲಿ ಜಿಡ್ಡು ಕೃಷ್ಣಮೂರ್ತಿಯವರ ಪುಸ್ತಕ ಕಾಣುತ್ತಿದೆ. ಯಾರೂ ತನ್ನನ್ನು ಡಿಸ್ಟರ್ಬ್ ಮಾಡದಂತೆ ಏಕಾಂತ ಸೃಷ್ಟಿಸಿಕೊಂಡ ರಿಷಿ ಸದ್ಯ ಒಬ್ಬಂಟಿ ತನದಿಂದ ಒದ್ದಾಡುತ್ತಿದ್ದ. ಇಷ್ಟೂ ದಿನ ತನ್ನನ್ನು ಹಿಡಿದು ನಿಲ್ಲಿಸಿದ ಆತ್ಮ ನಿರ್ಭರತೆ ಮೆಲ್ಲಗೆ ಕರಗುತ್ತಿತ್ತು. ಯಾಕೋ ಪಯಣ ಮುಗಿಯುತ್ತದೆ ಎನ್ನುವ ಫೀಲಿಂಗ್. ಸಣ್ಣ ಸಣ್ಣ ವಿಷಯಗಳಿಗೇ ತುಂಬಾ ಎಮೋಷನಲ್ ಆಗ್ತಿದ್ದ.. ಕಣ್ಣು ತೇವವಾಗದ ದಿನಗಳೇ ಇಲ್ಲಾಂತ ಆಗಿತ್ತು. ಆ ಗಟ್ಟಿತನ… ಮೊಂಡುತನ…. ಪಾದರಸವನ್ನು ಮೀರಿಸುವ ಚುರುಕು ಮೇಧಾಶಕ್ತಿ ಎಲ್ಲಾ ಏನಾಗಿವೆ ? ಏನೋ! ಶಿವ ಆಗಾಗ ಫೋನ್ ಮಾಡಿ ಮಾತಾಡುತ್ತಿದ್ದ. ಶುರುವಿನಲ್ಲಿ

ಮಿಸ್ಟರ್ ಅನ್ ಫ್ರೆಂಡ್ Read Post »

ಕಥಾಗುಚ್ಛ

ಪಾರಿವಾಳ ರಾಣಿ

ಕಥೆ ಪಾರಿವಾಳ ರಾಣಿ ಹರೀಶ್ ಗೌಡ ಒಂದು ಪ್ರೇಮ ಕಥೆ ಕ್ರಿ ಶ ಮತ್ತು ಕ್ರಿ ಪೂ ದಲ್ಲಿ ಹಿಂದೆ ಜಗತ್ತು ಹೇಗಿತ್ತು? ಸ್ವಚ್ಚಂದ ಜಗತ್ತು ಪ್ರಕೃತಿಯ ಮಡಿಲಿನಲ್ಲಿ ಸರ್ವರು ಸಮಾನರೆಂಬ ಭಾವನೆ ಇದ್ದಂತ ಕಾಲ. ಮತ್ತು ಜಾತಿ ವರ್ಣ ಇದರ ತಕರಾರು ಇಂದಿನದಲ್ಲ ಹಿಂದಿನಿಂದಲೂ ಇದೆ ಅದೆಲ್ಲ ಬಿಡಿ ನಮ್ಮ ಕಥೆ ಶುರು ಮಾಡೊಣ ಓದೊಕೆ ನೀವ್ ರೇಡಿ ಅಲ್ವ ಮತ್ತೆ ಬನ್ನಿ ಯಾಕ್ ತಡ. ಸುತ್ತಲೂ ಬೆಟ್ಟ ಗುಡ್ಡಗಳು ಕಾಡು ನದಿಗಳ ಮಧ್ಯೆ ನೂರಾರು ಹಳ್ಳಿ ಸೇರಿದ ದೀನದತ್ತ ಎಂಬ ಮಹಾನ್ ಸಾಮ್ರಾಜ್ಯ ಸಕಲವೂ ಸರ್ವವೂ ಸಕಾಲಕ್ಕೆ ಸಿಗುವ ರಾಜ್ಯ ಅದು. ಅಲ್ಲಿ ದೀನದತ್ತ ಅರಳಿ ಮಹಾರಾಜ ಎಂಬ ದೊರೆ ಆಳುತ್ತಿದ್ದ ಮೊದಲ ಹೆಂಡತಿ ಮದುವೆಯ ಹೊಸದರಲ್ಲಿ ಅಕಾಲಿಕ ಮರಣದಿಂದ ರಾಜ ಎರಡನೆ ಮದುವೆ ಆದ ನಂತರ ಬಹುಕಾಲ ಕಾದರು ಮಕ್ಕಳಾಗಲಿಲ್ಲ ನಂತರ ಮೂರನೆಯ ಮದುವೆಯ ತೀರ್ಮಾನ ಮಾಡಿದ ಪಕ್ಕದ ರಾಜ್ಯದ ರಾಜಕುಮಾರಿ ಸುಗಂದಿಯನ್ನ ಅಪಹರಿಸಿ ಮದುವೆ ಆದ ಮಹಾನ್ ಪರಾಕ್ರಮಿಯಾಗಿದ್ದ ಅರಳಿರಾಜನನ್ನ ಸೋಲಿಸುವುದು ಅಷ್ಟು ಸುಲಭದ ಮಾತಲ್ಲ ಇದನ್ನು ತಿಳಿದಿದ್ದ ಪಕ್ಕದ ರಾಜ ತನ್ನ ಮಗಳ ಅಪಹರಣವನ್ನ ವಿರೋದಿಸದೆ ಚಾಣಕ್ಷತನದಿಂದ ಬಂಧವನ್ನ ಬೆಳಿಸಿದ ವರ್ಷ ತುಂಬುವುದರೊಳಗೆ ದೀನದತ್ತ ಸಾಮ್ರಾಜ್ಯದಲ್ಲಿ ಒಂದು ಕಳೆ ಬಂದಂತ್ತಾಗಿತ್ತು ಮಹಾರಾಣಿ ಸುಗಂದಿ ಗರ್ಭವತಿಯಾದ ಸುದ್ದಿ ನಗರದೆಲ್ಲೆಡೆ ಹಬ್ಬಿತ್ತು. ಮಹಾರಾಜ ಅರಳಿರಾಜನಿಗಂತು ಬಹುಕಾಲದ ಕನಸು ನೆರವೇರುವ ಕಾಲ ಕಣ್ಮುಂದೆ ಬಂದು ನಿಂತಂತೆ ಭಾಸವಾಗುತ್ತಿತ್ತು. ನವಮಾಸ ತುಂಬಿ ಪ್ರಸವದ ದಿನ ಬಂದೆ ಬಿಟ್ತು ಇಡಿ ರಾಜ್ಯದಲ್ಲಿ ಕೂತುಹಲ ಆತಂಕ ಅಹಮನೆಯ ತುಂಬ ವೈದಿಕ ಮಂದಿಗಳು ಸೂಲಗಿತ್ತಿಯರು ಮಹಾರಾಣಿಯ ಹೆರಿಗೆಯ ಜವಬ್ದಾರಿ ವಹಿಸಿಕೊಂಡಿದ್ದರೂ. ಸಕಲ ದೇವಾಲಯಗಳಲ್ಲಿ ಪೂಜಾ ಕೈಂಕರ್ಯಗಳು ನೆರವೇರತೊಡಗಿದವು. ಮಹಾರಾಜನಿಗೊಂದು ವರದಿ ತಲುಪಿತ್ತು ಗರ್ಭದಲ್ಲಿ ಮಗು ಅಡ್ಡಲಾಗಿದೆ ಹೆರಿಗೆ ಕಷ್ಠವಾಗುತ್ತಿದೆ ಎಂಬುದು. ಸುದ್ದಿ ಕೇಳಿ ಅರಳಿರಾಜನಿಗೆ ಭಯ ಮತ್ತು ಆತಂಕ ಕಳೆಗಟ್ಟಿತ್ತು. ಸಮಯಕಳೆದಂತೆ ಕೊಠಡಿಯ ಒಳಗಿಂದ ಮಗು ಅಳುವ ನಾದ ಕೇಳಿದೊಡನೆ ರಾಜನ ಮನದಲ್ಲಿ ಆನಂದ ಇಡೀ ರಾಜ್ಯವೇ ಕುಣಿದು ಕುಪ್ಪಳಿಸಿತ್ತು ರಾಜ ಬಲು ಆನಂದದಿಂದ ರಾಣಿಯ ಬಳಿ ಓಡಿ ಬಂದು ನೋಡ್ತಾನೆ ಮಗು ಕೈಕಾಲು ಆಡಿಸುತ್ತಾ ಮಲಗಿಸಿದ್ದಾರೆ ಸೂಲಗಿತ್ತಿಯರು ಮಹಾರಾಜ ನಿಮಗೆ ಹೆಣ್ಣುಮಗು ಜನನವಾಗಿದೆ ರಾಜನಿಗೆ ಬಹುಕಾಲ ಮಕ್ಕಳಿಲ್ಲದ ನೋವಿನಲ್ಲಿದ್ದವನಿಗೆ ಗಂಡು ಮಗುವಾದರೇನು ಹೆಣ್ಣಾದರೇನು ಒಟ್ಟಿನಲ್ಲಿ ಆನಂದವಾಗಿತ್ತು ಜೊತೆಗೆ ಮತ್ತೊಂದು ಸುದ್ದಿ ಹೃದಯ ಚೂರು ಮಾಡಿತ್ತು ಪ್ರಸವದ ಸಮದಲ್ಲಿ ಆದ ಅತಿಯಾದ ವೇದನೆ ಮತ್ತು ಅಧಿಕ ರಕ್ತಸ್ರಾವದಿಂದ ಮಹಾರಾಣಿ ಸುಂಗಧಿ ಇಹಲೋಕ ತೊರೆದಿದ್ದಳು. ಅಕ್ಷರಃಸಹಾ ರಾಜ ಕುಸಿದು ಹೋಗಿದ್ದ ಆಸೆಯಂತೆ ಮಗು ದೊರೆತ್ತಿತ್ತು ಆದರೆ ಮಡದಿ ದೂರವಾಗಿದ್ದಳು ನೋವಿನ ನಡುವೆ ರಾಜನ ಮುಂದಿನ ದಾರಿ ಎರಡನೇ ಹೆಂಡತಿಯ ಆಶ್ರಯದಲ್ಲಿ ಈ ಮಗಳನ್ನ ಬೆಳೆಸಬೇಕಾಗಿತ್ತು. ಮಲತಾಯಿಯಾದರೂ ಮಕ್ಕಳಿಲ್ಲದೆ ಬಂಜೆಯಾಗಿದ್ದ ಮಹಾರಾಜನ ಎರಡನೇ ಹೆಂಡತಿ ಆ ಮುದ್ದು ಮಗಳನ್ನ ಸಾಕಿ ಬೆಳೆಸಿ ತಾಯಿಯ ಸ್ಥಾನ ತುಂಬಿದಳು ಮಗಳು ಸುಂದರಳೂ ದೃಢಕಾಯಳೂ ಆಗಿ ಬೆಳೆಯತೊಡಗಿದಳು. ತನ್ನ ಮಗಳಿಗೆ ಯಾವ ಕುಂದು ಕೊರತೆಗಳು ಬರದಂತೆ ಅರಳಿ ಮಹಾರಾಜ ಸರ್ವವೂ ಅರಮನೆಯಲ್ಲಿ ಮಗಳಿಗೆ ಸಿಗುವಂತೆ ಆದೇಶ ಹೊರಡಿಸಿದ. ಆಡುವ ಆಟಿಕೆ ಇಂದ ಹಿಡಿದು ಗೆಳತಿಯರು ಶಿಕ್ಷಣವೂ ಎಲ್ಲ ಅರಮನೆಯಲ್ಲಿ ಸಿಗತೊಡಗಿತು ಮುದ್ದಾದ ಮಗಳಿಗೆ ಶುಭ ದಿನವನ್ನ ರಾಜ್ಯ ಜೋತಿಷಿಗಳ ಸಮಾಗಮದಲ್ಲಿ ನಾಮಕರಣ ಸಮಾರಂಭ ನೇರವೇರಿಸಿ ಯುವರಾಣಿ ವಸುಂದರಾ ಎಂಬ ಹೆಸರಿಟ್ಟರು. ಹೆಸರಿಗೆ ತಕ್ಕಂತೆ ಹರ್ಷಚಿತ್ತಳು ,ಗಮನ ಸೆಳೆಯ ಮೊಗವು,ಉದಾರತೆಯು ಆಕೆಯಲ್ಲಿ ತುಂಬಿತ್ತು. ಗಂಡು ಮಕ್ಕಳಿಗೆ ಕಲಿಸಬೇಕಾದ ಶಿಕ್ಷಣವೂ ಸೇರಿದಂತೆ ಸಕಲ ವಿಧ್ಯೆಗಳನ್ನ ಅರಳಿರಾಜ ತನ್ನ ಮಗಳಿಗೆ ಕಲಿಸತೊಡಗಿದ ಬಾಲ್ಯದಲ್ಲಿಯೇ ವಸುಂದರಾ ಗಂಭೀರವಾಗಿ ಸಮರ್ಥವಾಗಿ ವಿಧ್ಯೆಗಳನ್ನ ಕಲಿಯತೊಡಗಿದಳು. ಮಹಾ ಬುದ್ದಿವಂತೆಯಾದ ರಾಜಕುಮಾರಿ ವಸುಂದರಾ ಬಾಲ್ಯದಿಂದಲೇ ರಾಜ್ಯದ ನಾಗರೀಕರ ಕಷ್ಠಗಳನ್ನ ಅರಿಯತೊಡಗಿದಳು ಜಾತಿ ಬೇದವನ್ನ ಮಾಡಬಾರದು ಸರ್ವರೂ ಸಮಾನರು ನಾವೆಲ್ಲ ಮಾನವರೂ ಎಂಬ ಚಿತ್ತದಿಂದ ಆಡುತ್ತಾ ಕಲಿಯುತ್ತಾ ಬೆಳೆಯತೊಡಗಿದಳು. ಆದರೆ ಇಲ್ಲಿ ಇನ್ನೊಂದು ವಿಚಾರ ಹೇಳಲು ಮರೆತಿದ್ದೆ ಅರಳಿ ರಾಜ ತುಂಬಾ ಶಕ್ತಿಶಾಲಿ ರಾಜನೂ ಹೌದು ಅದರಂತೆ ಆತನಲ್ಲಿ ಜಾತಿಯತೇ ಮತ್ತು ಮೇಲು ಕೀಳು ಭಾವನೆ ಇತ್ತು ಅವರವರ ಜಾತಿ ಧರ್ಮಕ್ಕೆ ಅನುಸಾರವಾಗಿ ಬಾಳಬೇಕು,ದುಡಿಯಬೇಕು ಸದಾ ಉಳ್ಳವರ ಮುಂದೆ ತಲೆಬಾಗಿ ನಿಲ್ಲಬೇಕು ಇಂತಹ ಮನಸು ಅವನದಾಗಿತ್ತು ಆದರೂ ಪ್ರಜೆಗಳಿಗೆ ಸಲ್ಲಬೇಕಾದ ಸವಲತ್ತುಗಳನ್ನ ನೀಡಿ ಸಲಹುತ್ತಿದ್ದ. ವಸುಂದರಾ ಒಂದು ತರಹದಲಿ ಎಲ್ಲವೂ ದೊರೆತರೂ ಒಂಟಿತನ ಕಾಡತೊಡಗಿತು ಕಾರಣ ತಂದೆ ಅರಳಿರಾಜನ ಅತಿಯಾದ ಪ್ರೀತಿ ಅವಳನ್ನ ಅರಮನೆಯ ಪಂಜರದ ಗಿಳಿಯಂತೆ ಮಾಡಿತ್ತು. ಬೇಕಿದ್ದು ಬೇಡದ್ದು ಎಲ್ಲವನ್ನ ದೊರಕುವಂತೆ ಮಾಡಿದ್ದ ರಾಜ ತನ್ನ ಮಗಳನ್ನ ಅರಮನೆ ಇಂದ ಆಚೆ ಕಳಿಸುತ್ತಿರಲಿಲ್ಲ ಮಗಳ ಮೇಲಿನ ಅತಿಯಾದ ಕಾಳಜಿ ಸಹಾ ಇದಾಗಿತ್ತು ಮಗಳಿಗೆ ಯಾವ ತೊಂದರೆಯೂ ಬಾರದಿರಲಿ ಅವಳಿಗೆ ಯಾರಿಂದಲೂ ಯಾವ ಸನ್ನಿವೇಶದಲ್ಲಿಯೂ ಕೆಡುಕು ಬರದಿರಲಿ ಎಂಬ ಅತಿಯಾದ ಕಾಳಜಿ ವಸುಂದರಾ ಬಾಳಲ್ಲಿ ಒಂಟಿತನ ಮೂಡಿಸಿತ್ತು. ಬೆಳೆದು ದೊಡ್ಡವಳಾದ ವಸುಂದರಾ ಪ್ರತಿ ನಿತ್ಯ ಅರಮನೆ ಮೊಗಸಾಲೆಯ ಕಿಟಕಿಯಲಿ ಕುಳಿತು ಹೊರಜಗತ್ತನ್ನ ನೋಡುತ್ತ ಕುಳಿತುಕೊಳ್ಳುತ್ತಾಳೆ ದಿನ ಕಳೆದಂತೆ ಅರಮನೆಯ ಸಖಿಯರು ಪರಿಚಾಲಕರು ಅಂಗರಕ್ಷಕರು ಬೆಸರ ಅನಿಸತೊಡಗಿದೆ ದಿನ ನೋಡಿದ ಮುಖಗಳೆ ಇವೆಲ್ಲ ಹೊಸ ಜಗತ್ತು ಬೇಕು ಹೊರಗೆ ಸುತ್ತಾಡಬೇಕು ಎಂಬ ಆಸೆ ಮನಸಿನಲ್ಲಿ ಕಾಡತೊಡಗಿದೆ ತಂದೆಯ ಬಳಿ ಹಲವು ಸಲ ತಿಳಿಸಿದರೂ ಅರಳಿರಾಜ ನಿರಾಕರಿಸಿಬಿಟ್ಟಿದ್ದ. ಮೊಗಸಾಲೆಯ ಕಿಟಕಿಯಲ್ಲಿ ಏನನ್ನೊ ನೋಡುತ್ತಾ ಕುಳಿತಿದ್ದ ವಸುಂದರಾ ಹತ್ತಿರ ಜೊರಾಗಿ ಬಂದ ಪಾರಿವಾಳ ಕಿಟಕಿಗೆ ಬಡಿದು ಕೆಳಗೆ ಬಿದ್ದು ಬಿಟ್ಟಿತು ತಕ್ಷಣ ಗಮನಿಸಿದ ವಸುಂದರಾ ಭಟರಿಗೆ ಅದನ್ನು ಹಿಡಿದು ತರಲು ಹೇಳಿದರು ಅವಳ ಆಜ್ಞೆಯಂತೆ ತಂದು ಅವಳ ಕೈಗೆ ಇರಿಸಿದಳು ಹದ್ದಿನಿಂದ ತಪ್ಪಿಸಿಕೊಳ್ಳಲು ವೇಗವಾಗಿ ಹಾರಿಬಂದು ಅಚಾನಕ್ಕಾಗಿ ಕಿಟಕಿಗೆ ಬಡಿದಿದ್ದ ಪಾರಿವಾಳ ರೆಕ್ಕೆ ಮತ್ತು ಕಾಲಿಗೆ ಪೆಟ್ಟು ತಿಂದು ಹಾರದ ಸ್ತಿತಿಯಲ್ಲಿ ಇದ್ದದ್ದು ನೋಡಿ ರಾಜಕುಮಾರಿಗೆ ಮರುಕ ಹುಟ್ಟಿ ಬಂದಿತ್ತು ತಕ್ಷಣ ಅದರ ಉಪಚಾರವನ್ನ ಮಾಡಿ ಅದಕ್ಕೆ ಔಷದಿಗಳನ್ನ ಸಖಿಯರ ಮುಖಾಂತರ ತರಿಸಿ ಸಂತೈಸಿದಳು. ನೋವಿಗೆ ಮುಲಾಮು ತಾಗುತ್ತಿದ್ದಂತ್ತೆ ಪಾರಿವಾಳಕ್ಕೆ ಯಾರೋ ನನ್ನ ರಕ್ಷಿಸುತ್ತಿದ್ದಾರೆ ಎಂದು ಮನಸಿನಲ್ಲಿ ಅಂದುಕೊಳ್ಳುತ್ತಾ ಸುಮ್ಮನೆ ರಾಜಕುಮಾರಿಯ ಮಡಿಲಲ್ಲಿ ಕುಳಿತು ಬಿಟ್ಟಿತು. ಹೀಗೆ ಸುಮಾರು ಐದಾರು ದಿನಗಳ ತನಕ ಅರಮನೆಯಲ್ಲಿ ವಸುಂದರಾ ಚಿಕಿತ್ಸೆ ನೀಡಿ ಪಾರಿವಾಳವನ್ನ ರಕ್ಷಿಸತೊಡಗಿದಳು. ಇನ್ನೆರಡು ದಿನ ಕಳೆವ ಒತ್ತಿಗೆ ನಿಧಾನವಾಗಿ ಹಾರಲು ಶುರುಮಾಡಿದ ಪಾರಿವಾಳವ ಕಂಡ ರಾಜಕುಮಾರಿಗೆ ಏನೋ ಒಂದು ಸಂತಸ ಹಾರುತ್ತಾ ಹಾರುತ್ತಾ ಅವಳಿಗೆ ಸಂತೋಷವ ನೀಡುವ ಪಾರಿವಾಳ ಅವಳಿಗೆ ಅರಿವಿಲ್ಲದೆ ಹೊಸ ಜೊತೆಗಾರ ಸ್ನೇಹಿತನಾಗಿ ಹಿಡಿಸಿತ್ತು. ನಂತರದ ದಿನಗಳಲ್ಲಿ ರಾಜಕುಮಾರಿಯ ಜೊತೆ ಅರಮನೆಯಲ್ಲಿಯೇ ಕಾಯಂ ನೆಲೆಸಿತು ಅಲ್ಲಿಯೇ ಹಾರುತ್ತ ಅವಳ ಬಳಿಯೇ ಕುಳಿತುಕೊಂಡು ಕಾಳುಗಳ ತಿನ್ನುತ್ತಾ ಹೊರಗೆ ಹಾರಿ ಮರಳಿ ಮತ್ತೆ ಇವಳ ಬಳಿಯೇ ಬರತೊಡಗಿತು ಪಾರಿವಾಳವು ಇವಳನ್ನ ತುಂಬಾ ಹಚ್ಚಿಕೊಂಡು ಬಿಟ್ಟಿತು. ಅರಮನೆಯಲ್ಲಿ ಅಂದು ಬಣ್ಣಗಳ ಹಬ್ಬ ಸಖಿಯರ ಜೊತೆ ವಸುಂದರಾ ಬಣ್ಣಗಳಲ್ಲಿ ಬಣ್ಣವಾಗಿ ಪಾರಿವಾಳವನ್ನು ಬಣ್ಣಮಯವಾಗಿಸಿದ್ದಳು. ಸ್ವಲ್ಪ ಸಮಯದ ಬಳಿಕ ಪುರ್ ಎಂದು ಹೊರಗೆ ಹಾರಿದ ಪಾರಿವಾಳ ದೂರದ ಹೊಳೆಯ ದಡಕ್ಕೆ ಬಂದಿತ್ತು. ಬಟ್ಟೆ ತೊಳೆಯುತ್ತಾ ಎಂದಿನಂತೆ ಕೆಲಸದಲ್ಲಿ ನಿರತನಾಗಿದ್ದ ವಿಜಯರಾಮನಿಗೆ ಆ ಬಣ್ಣ ಬಳಿದ ಪಾರಿವಾಳವ ಕಂಡು ಮರುಕ ಬಂದಿತ್ತು ಯಾರೋ ಇದರ ಮೈಗೆಲ್ಲ ಹೀಗೆ ಹಿಂಸಿಸಿ ಬಣ್ಣ ಬಳಿದಿದ್ದಾರೆ ಎಂದು ಹಿಡಿದು ನಿಧಾನಕ್ಕೆ ಮೈಸವರಿ ನೀರಿನಿಂದ ತೊಳೆದು ಶ್ವೇತವರ್ಣಕ್ಕೆ ಬರಿಸಿದ್ದ. ಬಣ್ಣದ ಕಿರಿ ಕಿರಿ ಇಂದ ನೀರಿನಲ್ಲಿ ಸ್ನಾನಮಾಡಲು ಬಂದಿದ್ದ ತನ್ನ ಮೈತೊಳೆದ ರೀತಿ ನೋಡಿ ಪಾರಿವಾಳಕ್ಕೂ ಒಂದು ಬಗೆಯ ಹಿತವನಿಸಿತ್ತು. ಕೈಯಿಂದ ಹಠಾತ್ತಾನೆ ಹಾರಿ ಮತ್ತೆ ಅರಮನೆಗೆ ಮರಳಿ ಬಂದು ರಾಜಕುಮಾರಿಯ ಕೊಠಡಿ ಸೇರಿ ಕುಳಿತುಬಿಟ್ಟಿತು. ಮಜ್ಜನ ಮಗಿಸಿ ಬಂದ ವಸುಂದರಾ ಪಾರಿವಾಳವ ಕಂಡು ಆಶ್ಚರವಾಯಿತು ಅರೇ ಯಾರಿದರ ಮೈ ತೊಳೆದವರು ತಕ್ಷಣವೇ ಸಖಿಯರ ಕೂಗಿದಳು ಯಾರಲ್ಲು ಉತ್ತರವಿಲ್ಲ ಎಲ್ಲರದೂ ಒಂದೆ ಮಾತು ಗೊತ್ತಿಲ್ಲ ರಾಜಕುಮಾರಿ ನಾವು ನಿಮ್ಮೊಡನೆ ಇದ್ದೆವಲ್ಲ. ಅವಳಲ್ಲಿ ಉತ್ತರ ಸಿಗದಂತೆ ಈ ಪ್ರೆಶ್ನೆ ಉಳಿದು ಬಿಟ್ಟಿತು. ಜನರ ಬಾಯಿಂದ ಬಾಯಿಗೆ ರಾಜಕುಮಾರಿ ಮತ್ತು ಪಾರಿವಾಳದ ಗೆಳೆತನ ಅಬ್ಬತೊಡಗಿತು. ವಸುಂದರಾಳಷ್ಟೆ ಅರಮನೆಯಲ್ಲಿ ಪಾರಿವಾಳಕ್ಕೂ ಗೌರವ ಸಿಗತೊಡಗಿತು ಅವಳ ಅನುಮತಿ ಇಲ್ಲದೆ ಯಾರು ಅದನ್ನ ಮುಟ್ಟುವಂತೆ ಇರಲಿಲ್ಲ ಅದಕ್ಕೂ ಅಷ್ಟೆ ರಾಜಕುಮಾರಿಯ ಬಿಟ್ಟು ಮತ್ತೊಬ್ಬರ ಬಳಿ ಇರಲು ಇಷ್ಟವಿರಲಿಲ್ಲ. ವಸುಂದರಾ ಕೇಶ ಕಟ್ಟುವಾಗ ಪಕ್ಕದಲ್ಲೆ ಇದ್ದ ಪಾರಿವಾಳದ ಹಣೆಗೆ ಬೊಟ್ಟನ್ನ ಇಟ್ಟು ಕ್ಷಣಕಾಲ ಮುದ್ದಾಡಿದಳು ನಂತರ ಹೊರಗೆ ಹಾರಿದ ಆ ಹಕ್ಕಿ ನೇರವಾಗಿ ನದಿಯ ದಡದಲ್ಲಿ ಇಳಿಯಿತು ನೀರು ಕುಡಿದು ದಡದಲ್ಲಿ ಏನನ್ನೋ ತಿನ್ನುತ್ತಿದ್ದದ್ದನ್ನು ಗಮನಿಸಿದ ವಿಜಯರಾಮ ಇದು ಅಂದು ಬಂದ ಬಣ್ಣ ಬಳಿದ ಪಾರಿವಾಳ ಮತ್ತೆ ಯಾರೋ ಇದಕ್ಕೆ ಬೊಟ್ಟು ಇಟ್ಟಿದ್ದಾರೆ ಅನ್ನುತ್ತಾ ನೇರವಾಗಿ ಅದರ ಬಳಿಗೆ ಬಂದು ಕೈಯಲ್ಲಿ ಹಿಡಿದು ತೊಳೆದು ಬಿಟ್ಟ ಅಂದು ನನ್ನ ಮೈತೊಳೆದವನು ಇವನೆ ಎಂದು ಅರಿತಿದ್ದ ಪಾರಿವಾಳ ಭಯವಿಲ್ಲದೆ ಆತನ ಕೈ ಸೇರಿತ್ತು. ಈತನೂ ರಾಜಕುಮಾರಿ ತರಹ ಒಳ್ಳೆಯವನೆ ತೊಂದರೆ ಕೊಡದವನೆಂದು ಅದಕ್ಕೆ ನಂಬಿಕೆ ಬರಲಾರಂಭಿಸಿತು ಮತ್ತೆ ಅಂದಿನಂತೆ ಕಾ ಕೊಸರಿಕೊಂಡು ಅರಮನೆಗೆ ಹಾರಿ ಬಂದು ಬಿಟ್ಟಿತು. ಗೆಳೆಯ ಪಾರಿವಾಳ ಬಂದದ್ದು ಗಮನಿಸಿದ ವಸುಂದರಾ ಹಿಡಿದು ಮುದ್ದಾಡಲು ನೋಡಿದಾಗ ಹಣೆಯಲ್ಲಿ ಅವಳು ಇಟ್ಟ ಬೊಟ್ಟಿಲ್ಲ ಮತ್ತೆ ಆಶ್ಚರ್ಯ ಯಾರು ಇದರ ಹಣೆಯನ್ನು ತೊಳೆದು ಕಳಿಸಿದ್ದಾರೆ? ಕೂತುಹಲವೂ ಬರತೊಡಗಿತು ಮರುದಿನ ಮತ್ತೆ ಹಣೆಗೆ ಬೊಟ್ಟು ಇಟ್ಟು ಬಿಟ್ಟಳು ಕೆಲ ಸಮಯದ ಬಳಿದ ಹೊರಗೆ ಹಾರಿಹೋಯ್ತು ಮರಳಿ ಬಂದಾಗ ಶುಭ್ರವಾಗಿತ್ತು ಅವಳಿಗೆ ಇನ್ನಷ್ಟು ಕೂತುಹಲ ಬರಲಾರಂಭಿಸಿತು ಮತ್ತೆ ಮತ್ತೆ ಬಣ್ಣ ಬಳಿದಂತೆ ಹಾರಿ ಹೋಗುತ್ತಿತ್ತು ಮರಳಿ ಬಂದಾಗ ಮೈ ತೊಳೆದು ಕಳಿಸಿರುವುದು ಕಾಣುತ್ತಿತ್ತು. ಅರಮನೆಯ ಪಾಲಕರನ್ನ ಕರೆಸಿ ಇದರ ಗುಟ್ಟು ತಿಳಿಯಬೇಕು ಈ ಪಾರಿವಾಳ ಎಲ್ಲಿ ಹೋಗಿಬರುತ್ತದೆ ಎಂಬುದನ್ನು ಪತ್ತೆ ಮಾಡಲು ಹೇಳಿದಳು ವಸುಂದರಾಳ ಆಜ್ಞೆಯಂತೆ ಪಾರಿವಾಳದ ಜಾಡು ಹಿಡಿದ ಅರಮನೆ ಪಾಲಕರು ನದಿಯ ದಂಡೆಯಲ್ಲಿ ವಿಜಯರಾಮನ ಕಾಯಲ್ಲಿ ಪಾರಿವಾಳ ಇದ್ದದ್ದು ಗಮನಿಸಿದರು. ಅಲ್ಲಿಂದ ಅರಮನೆಗೆ ಬಂದ ಪಾಲಕರು ರಾಜಕುಮಾರಿಯ ಮುಂದೆ ನೆಡೆದ ಪ್ರಸಂಗವನ್ನ ತಿಳಿಸಿದರು ಕೂಡಲೆ ಆ ವ್ಯಕ್ತಿಯನ್ನ ನನ್ನೆದುರು ಕರೆತನ್ನಿ ಊ ಹೊರಡಿ ಎಂದ ವಸುಂದರಾ ಮಾತಿಗೆ ವಿಜಯರಾಮನ ಬಳಿ ಬಂದು ಅಯ್ಯ ಅಗಸನೇ ನೀನು ಕೂಡಲೆ ರಾಜಕುಮಾರಿಯನ್ನ ಕಾಣಬೇಕಿದೆ ಇದು ಅವರ ಆದೇಶ ಎಂದರೂ ನಾನು ಅರಮನೆಯ ರಾಜಕುಮಾರಿಯನ್ನ ಕಾಣಬೇಕೆ? ಯಾಕೆ ರಾಜಭಟರೇ ಎಂದಾಗ ಪಾರಿವಾಳದ ವಿಷಯ ತಿಳಿಸಿದರೂ ಕೂಡಲೆ ವಿಜಯರಾಮ ಅರಮನೆ ಪಾಲಕರ ಜೊತೆ ವಸುಂದರಾ ಮುಂದೆ ಬಂತು ನಿಂತ. ಪ್ರತಿ ನಿತ್ಯ ಬಿಸಿಲು ಮಳೆ ಎನ್ನದೆ ಬಟ್ಟೆಗಳನ್ನ ಒಗೆದು ಒಗೆದು ಮೈ ಬೆವರು ಕಾಲಿಯಾಗಿ ಮೈ ಕೈ ಕುಸ್ತಿಪಟುವಿನಂತೆ ದೃಢಕಾಯನಾಗಿದ್ದ ಇವನನ್ನ ಕಂಡ ವಸುಂದರಾ ಮನದಲ್ಲೆ ಆಹಾ ಅದೆಂತ ಯುವಕನೀತ ಸುಂದರನೂ ಮನಸೆಳೆವ ಮೈಕಟ್ಟು ಬೆಳೆಸಿರುವ ಯಾರು ಈತ

ಪಾರಿವಾಳ ರಾಣಿ Read Post »

ಕಥಾಗುಚ್ಛ

ಬಣ್ಣದ ಚಿಟ್ಟೆಗಳು

ಕಥೆ ಬಣ್ಣದ ಚಿಟ್ಟೆಗಳು ವಾಣಿ ಅಂಬರೀಶ ಈ ಊರಿನ ಕುವರ ಆ ಊರಿನ ಕುವರಿ ಅವಳೆಲ್ಲೋ ಇವನ್ನೇಲ್ಲೋ,, ಇನ್ನೂ ಇವರಿಬ್ಬರ ಪ್ರೀತಿ ಇನ್ನೇಲ್ಲೋ.. ಅದೇ ನಾ ಹೇಳ ಬಯಸುವ ಇವರಿಬ್ಬರ ನಡುವೆ ಪ್ರೀತಿ ಬೆಸೆಯುವ ಪ್ರೇಮದ ಕಥೆ.. ಮಲ್ನಾಡಿನ ಮುದ್ದು ಮನಸ್ಸಿನ ಬೆಡಗಿ, ಕೊಡಗಿನ ಕುವರಿ ಈ ಸ್ವಪ್ನ ಸುಂದರಿ, ಇವಳೇ ಈ ಕಥೆಯ ಕಥಾನಾಯಕಿ “ನಯನಶ್ರೀ “ ಈ ಭೂಮಿಯ ಮೇಲಿರುವ ಅದ್ಭುತಗಳಲ್ಲೊಂದಾದ ಆ ಮಲೆನಾಡಿನ ಹಸಿರ ಸಿರಿಯ ಸೊಬಗಿನಲ್ಲಿ ಚಂದದಿ ನಲಿದಾಡುತ ಬೆಳೆದಿರುವಳು ಈ ಕಥೆಯ ನಾಯಕಿ.. ಅನಂತಸ್ವಾಮಿ ಮತ್ತು ವೈದೇಹಿ ಎಂಬ ದಂಪತಿಗಳ ಪುತ್ರಿ ನನ್ನ ಕಥೆಯ ಸುಂದರಿ…ಇವರಿಗೆ ಆರತಿಗೂ ಒಬ್ಬಳೇ, ಕೀರುತಿಗೂ ಇವಳೊಬ್ಬಳೆ ಹಾಗಾಗಿ ಇನ್ನಷ್ಟು ಪ್ರೀತಿ, ಮಮತೆ, ಅಪ್ಯಾಯತೆಗಳ ಜೊತೆಗೆ ಚಿನ್ನದ ಗಣಿಯ ಹಾಗೇ ಜೋಪಾನ ಮಾಡುತ್ತಿದ್ದರು. ಈ ನಮ್ಮ ಕಥಾನಾಯಕಿಯ ಚೆಲುವ ಬಣ್ಣಿಸಲು ಅದೆಷ್ಟು ಮಣಿಮುತ್ತಿನ ಹಾರ ಪೋಣಿಸಿದರೂ ಸಾಲದು.. ಮೋಡದ ಮರೆಯ ಚಂದಿರನಂತೆ ಮುದ್ದು ಬಿಂಬ, ಪ್ರಕೃತಿಯ ಮಡಿಲಿನಲಿ ಆಕೃತಿಯ ರೂಪವಾಗಿ ನಮ್ಮ ಸಂಸ್ಕೃತಿಯೇ ಮೆಚ್ಚುವಂತಹ ಶ್ವೇತಾ ಸುಂದರಿ, ಚೆಲುವಿನ ಚಿತ್ತಾರದ ಚೈತ್ರ ಚಂದಿರನಂತೆ ಅವಳ ಚೆಲುವು, ಕಣ್ಣಿನೊಳಗೆ ಸೌಂದರ್ಯವೋ ಸೌಂದರ್ಯದೊಳಗೆ ಕಣ್ಣೋ ಎನ್ನುವಂತಹ ನಯನಗಳು, ಉದ್ದನೇಯ ರೇಷ್ಮೆಯ ನೂಲಿನಂತಹ ಕೇಶರಾಶಿಯಿಂದ ಸೌಂದರ್ಯ ದೇವತೆಗೆ ಸೆಡ್ಡು ಹೊಡೆಯುವಂತೆ ಇದ್ದಳು.. ಇನ್ನು ನಮ್ಮ ಕಥಾನಾಯಕನ ಬಗ್ಗೆ ಹೇಳುವುದಾದರೆ, ಇವನ್ನೊಬ್ಬ ಬಿಸಿಲನಾಡು ರಾಯಚೂರಿನ ಗಂಡೆದೆಯುವಕ, ಈ ಕಥೆಯ ಕಥಾನಾಯಕ “ಶತಾವರ “.. ರಾಮಮೂರ್ತಿ ಹಾಗೂ ಲಕ್ಷ್ಮೀ ಎಂಬ ದಂಪತಿಗಳ ಮೂವರು ಮಕ್ಕಳಲ್ಲಿ ನಮ್ಮ ಕಥೆಯ ನಾಯಕ ಕಿರಿಯ ಪುತ್ರನು. ಶ್ವೇತ ಮತ್ತು ಸ್ವಾತಿ ಎಂಬ ಸಹೋದರಿಯರ ಜೊತೆ ಆಟ, ಪಾಠ, ಚೇಷ್ಟೆಗಳ ಜೊತೆಗೆ ವಿದ್ಯಾ-ಬುದ್ದಿವಂತನಾಗಿ ಬೆಳೆಯುತ್ತಾನೆ. ನಮ್ಮ ನಾಯಕನೂ ಸಹ ಸುಂದರನಾಗಿರುತ್ತಾನೆ, ಎತ್ತರದ ಮೈಕಟ್ಟು, ಗೋದಿ ಬಣ್ಣದವನಾಗಿರುತ್ತಾನೆ.. ರೇಷ್ಮೆಯಂತಹ ಕೇಶರಾಶಿಯಡಿ ಚಂದನವನವೇ ನಾಚುವಂತ ಕೋಲ್ಮಿಂಚಿನ ಕಣ್ಣುವುಳ್ಳವ,, ಮರೆಯದಂತೆ ಮುಖದಲಿ ಮಂದಹಾಸ ಮೂಡಿಸುವ ಸುಂದರ ಮೊಗದ ಸೋಜಿಗ.. ಇವನೇ ಈ ಕಥೆಯ ಬಿಸಿಲಸಿಮೆಯ ಕಥಾನಾಯಕ “ಶತಾವರ “.. ಇವರಿಬ್ಬರ ಜೀವನದ ಗುರಿ, ತಲುಪಬೇಕಾದ ದಾರಿ ಒಂದೇ ಆಗಿದ್ದರೂ ಪ್ರಯಾಣಿಸುವ ದಿಕ್ಕು ಮಾತ್ರ ಬೇರೆ ಬೇರೆಯಾಗಿರುತ್ತದೆ. ಇಬ್ಬರು ಸಹ ಉತ್ತಮ ಸಮಾಜದ ನಿರ್ಮಾಣ, ಜನಸೇವೆ ಈ ಸಮಾಜದ ಬಗೆಗಿನ ಕಳಕಳಿ ಉಳ್ಳವರಾಗಿರುತ್ತಾರೆ. ಹಾಗಾಗಿ ಇಬ್ಬರು ಸಹ ಆಯ್ಕೆ ಮಾಡಿಕೊಂಡಿರುವುದು ಐ.ಎ.ಸ್ ಎಂಬ ಉನ್ನತವಾದ ಗೌರವಾನ್ವಿತ ಪದವಿ. ಇದರಿಂದ ಅವರ ಆಸೆಗಳ ಪೂರೈಸಿಕೊಳ್ಳುವ ನಿಟ್ಟಿನಲ್ಲಿರುತ್ತಾರೆ.. ನಂತರದ ದಿನಗಳಲ್ಲಿ ಶತಾವರ ರವರು ಐ.ಎ.ಸ್ ಪರೀಕ್ಷೆ ತೇರ್ಗಡೆಯಾಗಿ ಎರಡು ವರ್ಷದ ಪ್ರೋಬೆಷನರಿ ಅವಧಿ ಮುಗಿಸಿಕೊಂಡು ಕೊಡಗು ಜಿಲ್ಲೆಯ ಸಿ.ಇ.ಒ ಆಗಿ ನೇಮಕ ಹೊಂದುತ್ತಾರೆ. ಇನ್ನೂ ನಯನಶ್ರೀ ಅವರು ತಮ್ಮ ಕನಸನ್ನು ಪೂರೈಸುವ ಹಾದಿಯಲ್ಲಿರುತ್ತಾರೆ. ಶತಾವರ ರವರು ತಮ್ಮ ಮೊದಲ ದಿನದ ಕೆಲಸಕ್ಕೆ ಅತ್ಯಂತ ಉತ್ಸುಕರಾಗಿ ಸೇರುತ್ತಾರೆ. ಇವರಿಗೆ ಎಲ್ಲಾ ಜವಾಬ್ದಾರಿಗಳ ಅರಿವಿರುತ್ತದೆ ಹಾಗೂ ಅವರ ಕಾರ್ಯವೈಖರಿಯಿಂದ ಎಲ್ಲರ ಮನ ಗೆದ್ದಿರುತ್ತಾರೆ. ಹಾಗೆ ಒಂದು ದಿನ ಕೊಡಗಿನ ಒಂದು ಕಾಲೇಜಿನ ಇಪ್ಪತ್ತೈದನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಭಾಗಿಯಾಗಿರುತ್ತಾರೆ. ನಯನಶ್ರೀಯು ಕೂಡ ಅದೇ ಕಾಲೇಜಿನ ಹಳೆಯ ವಿದ್ಯಾರ್ಥಿನಿಯಾಗಿರುವುದರಿಂದ ಅವಳ ಸ್ನೇಹಿತೆಯರೊಡನೆ ಬಂದಿರುತ್ತಾಳೆ. ಇನ್ನೇನು ಕಾರ್ಯಕ್ರಮ ಶುರುವಾಗುತ್ತದೆ ಹಲವು ಗಣ್ಯರು ಸೇರಿ ಜ್ಯೋತಿ ಬೆಳೆಗಿಸುವ ಮೂಲಕ. ಕೆಲ ಗಣ್ಯರ ಭಾಷಣದ ನಂತರ ನೂತನ ಸಿ.ಇ.ಒ ಶತಾವರರವರ ಸರದಿ ಬಂದಾಗ ಅವರ ಮಾತುಗಳು ಯಾವ ವಾಕ್ ಚಾತುರ್ಯರಿಗೂ ಕಡಿಮೆ ಇಲ್ಲ ಎಂಬಂತೆ ಇದ್ದವು, ಕೇಳುಗರನ್ನು ಅವರ ಮಾತಿನಿಂದಲೇ ಮಂತ್ರ ಮುಗ್ಧರನ್ನಾಗಿಸುತ್ತಿದ್ದರು, ಅವರ ಸೂರ್ಯನ ಹೊಳಪಿನ ಕಣ್ಣುಗಳಿಂದ ಎಲ್ಲಾ ಜನರ ಚಿತ್ತವನ್ನು ಕಟ್ಟಿಹಾಕಿಕೊಂಡಿದ್ದರು. ಅವರ ಭಾಷಣ ಮುಗಿಯುವ ತನಕ ನಯನಶ್ರೀ ಅಂತು ಬೇರಾವುದೋ ಲೋಕದಲ್ಲಿ ಮಗ್ನಳಾಗಿರುತ್ತಾಳೆ. ಭಾಷಣ ಮುಗಿದ ನಂತರ ಚಪ್ಪಾಳೆಯ ಧ್ವನಿಯಿಂದ ಎಚ್ಚೆತ್ತುಕೊಂಡಳು.. ಶತಾವರರವರ ಮಾತುಗಳು ಕೇಳಿದ ಅವಳು ಮೊದಲ ನೋಟದಲ್ಲಿಯೇ ಅವರಿಗೆ ಮನಸೋತು ತನ್ನ ಪುಟ್ಟ ಹೃದಯದಲ್ಲಿ ದೊಡ್ಡದಾದ ದೇವಾಲಯವನ್ನೇ ನಿರ್ಮಿಸಲಾರಂಭಿಸಿದಳು. ನಂತರದ ದಿನಗಳಲ್ಲಿ ಇವರೇಕೆ ಹೀಗೆ ಈ ಸಮಾಜದ ಬಗ್ಗೆ ನನಗಿರುವ ಆಸೆ, ಕನಸುಗಳನ್ನು ಹೋತ್ತುಕೊಂಡಿದ್ದಾರಲ್ಲ, ಎಲ್ಲೋ ಇದ್ದ ನಾವಿಬ್ಬರು ಹೇಗೆ ಒಂದೇ ಹಾದಿಯಲ್ಲಿ ಯೋಚಿಸಲು ಹೇಗೆ ಸಾಧ್ಯ, ಹೀಗೆ ಹಲವಾರು ವಿಷಯಗಳು ನಮ್ಮ ಕಥಾನಾಯಕಿಯ ಮನಸ್ಸಿನ ನೆಮ್ಮದಿಗೆ ಅಡ್ಡಿಪಡಿಸುತ್ತಿದ್ದವು. ಹಾಗೆಯೇ ಶತಾವರರವರನ್ನು ಸೂಕ್ಷ್ಮವಾಗಿ ತೆರೆಮರೆಯಲ್ಲಿ ಗಮನಿಸುತ್ತಾ ಅವರ ಬಗ್ಗೆ ತನ್ನಲ್ಲೇ ಇರುವ ಪ್ರೀತಿಯ ಹೂವಿಗೆ ನೀರೆರೆದು ಜೋಪಾನ ಮಾಡುತ್ತಿದ್ದಳು. ಹಾಗೆ ಒಂದು ದಿನ ಗಾಢವಾದ ಯೋಚನೆಯಲ್ಲಿ ಮುಳುಗಿದ್ದ ನಯನಶ್ರೀಗೆ ನೆನಪಾಗುವುದೇ, ಪಾರಿವಾಳಗಳ ಮೂಲಕ ಸಂದೇಶ ರವಾನಿಸುತ್ತಿದ್ದ ಹಳೆಯ ದಿನಗಳು. ಆದರೆ, ಈಗ ನಾವಿರುವ ಕಾಲದಲ್ಲಿ ಅಂತಹ ಪಾರಿವಾಳಗಳು ಸಿಕ್ಕುವುದಿಲ್ಲವಲ್ಲವೇ…?? ಅದಕ್ಕಾಗಿ ಅವಳೊಂದು ಅನಾಮಧೇಯ ಪತ್ರದಲ್ಲಿ ಶತಾವರರವರ ಆಡಳಿತ ದಕ್ಷತೆ,ಕಾರ್ಯ ವೈಖರಿ, ಜನರ ಸಮಸ್ಯೆಗಳ ಅವಲೋಕಿಸುವ ಪರಿ, ಅವರ ಪ್ರಾಮಾಣಿಕತೆ, ಅವರೆಡೆ ಕೆಲಸ ನಿರ್ವಹಿಸುತ್ತಿದ್ದ ಉಳಿದ ನೌಕರರ ಕಡೆ ಅವರಿಗಿರುವ ಗೌರವ ಹಾಗೂ ಅವರು ಹಾಜರಾಗುವ ಎಲ್ಲಾ ಕಾರ್ಯಕ್ರಮಗಳ ಬಗ್ಗೆ, ಪಂಚಾಯಿತಿಗಳಿಗೆ ಭೇಟಿ ನೀಡಿದ ಸಂದರ್ಭದ ಬಗ್ಗೆ ಮತ್ತು ಹೀಗೆ ಹಲವಾರು ಅವರ ಚಟುವಟಿಕೆಗಳ ಬಗ್ಗೆ ಬರೆದು ಕಛೇರಿಯ ವಿಳಾಸಕ್ಕೆ ಕಳುಹಿಸುತ್ತಿದ್ದಳು.. ಹೀಗೆ ಸತತ ಕೆಲ ದಿನಗಳ ಕಾಲ ನಡೆಯುತ್ತಾ ಇರುತ್ತದೆ.. ಶತಾವರ ರವರಿಗೂ ಸಹ ದಿನಾಲೂ ಬರುವ ಪತ್ರಗಳನ್ನು ಓದುತ್ತಾ ಯಾರಿರಬಹುದು ಇವರು, ನನ್ನ ಬಗ್ಗೆ ಇಂತಹ ಒಳ್ಳೆಯ ಅಭಿಪ್ರಾಯವನ್ನಿಟ್ಟುಕೊಂಡು, ನಾ ಹೋಗಿ ಬಂದ ಕಡೆಗಳ ಬಗೆಗೂ ಹೇಳುತ್ತಿದ್ದಾರಲ್ಲ ಎಂಬ ಸಣ್ಣ ಕುತೂಹಲ ಹಾಗೆ ಬಂದು ಹೋಗುತ್ತದೆ. ಈಗಾಗಲೆ ಸಿ.ಇ.ಒ ರವರ ಮನದಲ್ಲಿ ಸಣ್ಣದೊಂದು ಕುತೂಹಲ ಮೂಡಿಸಿರುವ ನಯನಶ್ರೀ ಮುಂದಿನ ದಿನಗಳಲ್ಲಿ ಅವರ ಬಗ್ಗೆ ತನ್ನದೇ ಆದ ಮಾತುಗಳ ಸಾಲುಗಳನ್ನು ಬರೆಯುತ್ತಾಳೆ. ಅವರ ಚೆಲುವ ನೋಡಿ ಇವಳಾಗುತ್ತಾಳೆ ಕವಯಿತ್ರಿ, ಬರೆಯುತ್ತಾಳೇ ಬಣ್ಣಿಸಿ ಬರಹಗಾರ್ತಿಯಾಗಿ… ಇವನಾರವ ಸುಂದರ ಸೋಜಿಗ,, ಕಣ್ಣರಳಿಸಿ ನೋಡಿದಷ್ಟು ಸುಂದರ,, ಬಣ್ಣಿಸಲಾರೆ ನಾ ಇನ್ನೂ ಅವನ ಚೆಲುವ… ಮುಂಜಾನೆಯ ನಗುವಿನಲಿ ಪೂರ್ಣ ಸೂರ್ಯ ಪ್ರಕಾಶದಂತೆ,, ಇಳಿ ಸಂಜೆಯಲಿ ಸುಂದರ ಮುದ್ದು ಚಂದಿರನಂತೆ… ನಾನಾದೆ ಇವನಿಗೆ ಮೂಖವಿಸ್ಮಿತ… ಹೀಗೆ ಇನ್ನೂ ಹಲವಾರು ರೀತಿಯಲ್ಲಿ ಬಣ್ಣಿಸುತ್ತಾ ಅವಳು ಅನಾಮಧೇಯ ಪತ್ರಗಳ ಮೂಲಕ ತನ್ನ ಮನದ ಭಾವನೆಗಳನ್ನು ಬರೆದು ಕಛೇರಿಗೆ ಪತ್ರಗಳನ್ನು ಕಳಿಸುತ್ತಾ ಇರುತ್ತಾಳೆ. ಇನ್ನೂ ಇವೆಲ್ಲ ಗಮನಿಸುತ್ತಾ, ಎಲ್ಲಾ ಪತ್ರಗಳನ್ನು ಓದುತ್ತಾ ಯಾರೀ ಸ್ವಪ್ನ ಸುಂದರಿ, ಈ ರೀತಿಯಲಿ ನನ್ನ ಮನವ ಕಾಡುತಿಹಳು ಎಂದು ಆಕೆಯ ಮೊಗವ ನೋಡದೇನೆ ಇವರ ಮನಸ್ಸಿನಲ್ಲಿಯೂ ಸಣ್ಣದಾದ ಬಯಕೆ ಚಿಗುರು ಹೊಡೆಯುತ್ತದೆ.ಗ ಪ್ರೀತಿಯ ಆಸೆಯ ಕಂಗಳಿಂದ ಅವಳು ಕಳುಹಿಸುವ ಪ್ರತ್ರಕ್ಕಾಗಿ ಕಾಯುವ ತವಕವೂ ಬರುತ್ತದೆ. ಹೀಗಿರುವಾಗ ನಯನಶ್ರೀಯು ಒಮ್ಮೆ ತನ್ನ ಪತ್ರದಲ್ಲಿ ಆಕೆಯ ಹೆಸರು ಮತ್ತು ಅವಳ ಸಂಕ್ಷಿಪ್ತ ವಿವರಗಳೊಂದಿಗೆ ನಿಮ್ಮನ್ನೊಮ್ಮೆ ಭೇಟಿಯಾಗಬೇಕೆಂಬ ಬಯಕೆಯನ್ನು ವ್ಯಕ್ತಪಡಿಸುತ್ತಾಳೆ. ಹಾಗೆ ಆ ಪತ್ರದ ಹಿಂಬದಿಯಲ್ಲಿ ನಿಮಗೂ ನನ್ನೋಮ್ಮೆ ಭೇಟಿ ಮಾಡವ ಇಚ್ಛೆ ಇದ್ದಲ್ಲಿ ನನ್ನ ನಾಳೆಯ ಪತ್ರದಲ್ಲಿ ಸಮಯ ಮತ್ತು ಭೇಟಿ ಮಾಡುವ ಸ್ಥಳದ ಬಗ್ಗೆ ತಿಳುಸುತ್ತೇನೆ ಹಾಗೂ ನಿಮಗಾಗಿ ನಾ ಕಾಯುತ್ತಾ ಇರುತ್ತೇನೆ ಎಂದು ಬರೆಯುತ್ತಾಳೆ. ಶತಾವರರವರಿಗೂ ನಯನಶ್ರೀಯನ್ನೂ ನೋಡಬೇಕೆಂಬ ಇಚ್ಛೆ ಇದ್ದುದರಿಂದ ಮಾರನೇಯ ದಿನದ ಅವಳ ಪತ್ರಕ್ಕಾಗಿ ಕಾಯುತ್ತಿರುವಾಗ ಅವಳ ಪತ್ರ ಬರುತ್ತದೆ. ಅದರಲ್ಲಿ ಮೊದಲೇ ತಿಳಿಸಿದ ಹಾಗೆ ಸಮಯ ಮತ್ತು ಸ್ಥಳದ ಬಗ್ಗೆ ಬರೆದಿರುತ್ತಾಳೆ..ಆದೇ ದಿನದ ತಿಳಿ ಸಂಜೆಯಲಿ ಒಬ್ಬರನ್ನೊಬ್ಬರು ಭೇಟಿ ಮಾಡುವ ಸಂದರ್ಭ ಬರುತ್ತದೆ. ಒಬ್ಬರಿಗೆ ಇನ್ನೊಬ್ಬರು ಕಾಯುವ ರೀತಿಯೂಹೀಗಿರುತ್ತದೆ.. ಅನುರಾಗದ ಅಲೆಯಲಿ, ಪ್ರೀತಿಯ ಕೊಳಲನಿಡಿದು ನಿಂತ ಕೃಷ್ಣನ ಹಾಗೆ ಶತಾವರ ಕಾಯುತ್ತಿದ್ದರೆ,, ಅಂಬರದಾಚೆ ಇನ್ನೂ ಎತ್ತರಕ್ಕಿರುವ ಪ್ರೀತಿಯನು, ಸೇರಗ ತುದಿಯಲ್ಲಿಡಿದುಕೊಂಡ ರಾಧೆಯ ಹಾಗೆ,, ನಯನಶ್ರೀ ಕಾಯುತ್ತಾ ಕುಳಿತಿದ್ದಳು. ನಯನಶ್ರೀಯ ಮುಖವನ್ನೇ ನೋಡದೆ ಅವಳ ಬರಹಗಳಿಗೆ ಮನಸೋತು ಹೋದ ಶತಾವರರವರು ದಿಕ್ಕೇ ತೋಚದ ಹಾಗೆ ನಿಂತಿರುತ್ತಾರೆ. ಅಷ್ಟರಲ್ಲಿಯೇ ಅವರನ್ನು ಕಂಡ ನಯನಶ್ರೀಯು ಅತ್ತಿರ ಹೋಗಿ “ನಮಸ್ತೇ ಶತಾವರ ರವರೇ” ಎನ್ನಲು ಅವರು ” ನೀವು..??” ಎಂದು ಕೇಳಲು ಇವಳು ” ನಾ ನಯನಶ್ರೀ ” ಎಂದು ಹೇಳುತ್ತಾಳೆ. ಆಗ ಶತಾವರ ರವರು ” ಹೋ,,ಹೋ,, ನೀವೆನಾ..!! ಆ ಅನಾಮದಯ ಪತ್ರಗಳ ಹಿಂದಿರುವ ರುವರಿ” ಎನ್ನಲು, ಇವಳು ” ಹೌದು, ಆ ಬರವಣಿಗೆಯ ಹಿಂದಿನ ಕೈಗಳು ನನ್ನದೇ” ಎಂದು ಉತ್ತರಿಸುತ್ತಾಳೆ. ಹಾಗೆ ಇನ್ನೂ ಹಲವು ಮಾತುಗಳನ್ನಾಡತ್ತಾ ಅವರ ಮೊದಲ ಭೇಟಿಯುನ್ನು ಮುಕ್ತಾಯಗೊಳಿಸುತ್ತಾರೆ… ಒಬ್ಬರಿಗೆ ಇನ್ನೊಬ್ಬರ ಭೇಟಿ, ಕಣ್ಣು ಕಣ್ಣುಗಳ ಸಂಗಮ,, ಎರಡು ಹೃದಯಗಳ ಸಮಾಗಮ… ಈ ಬದುಕೆಂಬ ಬಣ್ಣದ ಆಟದಲಿ, ಅವಳ್ಯಾರೋ, ಇವನ್ಯಾರೋ ಆದರೂ ಬೆಸೆಯಿತು ಸುಂದರ ಅನುಭಂದ, ಹೀಗೆ ಇರಲಿ ಇವರಿಬ್ಬರ ಪ್ರೀತಿಯ ಬಂಧ, ಬಾರದಿರಲಿ ಎಂತಹದೇ ತೊಡಕಿನ ಬಂಧ.. ಇನ್ನೇನು ಶುರುವಾಯ್ತು ಇಬ್ಬರ ನಡುವಿನ ಪ್ರೀತಿಯ ಜೊತೆಗಿನ ಪಯಣ.. ಮನದ ಕದವ ಸರಿಸಿ ಮಾತನಾಡಿಕೊಂಡ ಅದೇಷ್ಟೋ ಮಾತುಗಳು, ಭೇಟಿಯಾದ ನೂರು ಜಾಗಗಳು, ಸಾವಿರಾರು ನೆನಪುಗಳ ಮೂಟೆಯೊಂದಿಗೆ ಸಾಗುತ್ತಿರುವ ಪ್ರೀತಿ ಬಾಳ ನೌಕೆಯ ಖಾಯಂ ಪ್ರಯಾಣಿಕರಾಗಿ ಬಿಡುತ್ತಾರೆ ಶತಾವರ ಹಾಗೂ ನಯನಶ್ರೀ… ಇವರಿಬ್ಬರ ಈ ಪ್ರೀತಿ ಶತಾವರ ರವರ ಕೆಲಸಕ್ಕೂ ಮತ್ತು ನಯನಶ್ರೀಯ ತಾನು ಕೂಡ ಐ.ಎ.ಸ್ ಅಗಬೇಕೆಂಬ ಕನಸಿಗೇನು ಅಡ್ಡಿಯಾಗಿರುವುದಿಲ್ಲ. ಹೀಗಿರುವಾಗ ಒಂದು ದಿನ ಅವರ ಪ್ರೀತಿಯ ಬಗ್ಗೆ ಅವರವರ ಪೋಷಕರಿಗೆ ಹೇಳುತ್ತಾರೆ. ಇಬ್ಬರ ಆಯ್ಕೆಯು ಸೂಕ್ತವಾಗಿ ಇದ್ದುದರಿಂದ ಯಾವುದೇ ಅಡ್ಡಿ-ಅಡಚಣೆ ಮಾಡದೇ ಎರಡೂ ಕುಟುಂಬದವರು ಇವರ ಪ್ರೀತಿಗೆ ಅಸ್ತು ಎನ್ನುತ್ತಾರೆ. ಇಬ್ಬರ ಪ್ರೀತಿಯು ಆಳವಾಗಿ ಬೇರೂರಿತ್ತು. ಇವರ ಮದುವೆಯ ಮಮತೆಯ ಕರೆಯೋಲೆಗೂ ಎರಡು ಕುಟುಂಬದವರು ಒಪ್ಪಿಗೆ ನೀಡಾಯಿತು. ಮೇಲಿರುವ ಎಲ್ಲಾ ದೇವಾನುದೇವತೆಗಳ ಆಶೀರ್ವಾದಗಳೊಂದಿಗೆ ನಮ್ಮ ನಯನಶ್ರೀಗೆ ಶತಾವರರಿಂದ ಮೂರು ಗಂಟುಗಳ ನಂಟಿನ ತಾಳಿ ಭಾಗ್ಯ ಮಾತ್ರ ನೇರವೇರಬೇಕಾಗಿತ್ತು. ಇನ್ನೇನು ಒಳ್ಳೆಯ ಅಳಿಯ ಸಿಕ್ಕಾಯಿತು, ಅವರಿಬ್ಬರಿಗೂ ಸಂಪ್ರದಾಯದ ಪ್ರಕಾರ ಜೋಡಿ ಮಾಡಿಸಿದರೆ ಆಯ್ತು ಎನ್ನುತ್ತಾ ನಯನಶ್ರೀಯ ಪೋಷಕರು ಒಂದು ಕಡೆ, ಈ ಕಡೆ ಶತಾವರರವರ ಪೋಷಕರು ಅವನ ಕನಸ್ಸಿನಂತಯೇ ಒಳ್ಳೆಯ ಉದ್ಯೋಗ ಮತ್ತು ಒಳ್ಳೆಯ ಮನಸ್ಸಿನ ಹುಡುಗಿಯು ಕೂಡ ಬಂದಾಯಿತು, ಮದುವೆಯೊಂದು ಮಾಡಿಸಿ ನಮ್ಮ ಜವಾಬ್ದಾರಿಯನ್ನು ಇಳಿಸಿಕೊಳ್ಳುವ ಬಗ್ಗೆ ಮಾತಾನಾಡುತ್ತಾ ಇರುತ್ತಾರೆ. ಆದರೆ, ಆಕಾಶದಲ್ಲಿ ಹಾರಾಡುವ ಪ್ರಣಯ ಪಕ್ಷಿಗಳಂತೆ, ಒಂದೇ ಜೀವ ಎರಡು ದೇಹದಂತಿರುವ ನಯನಶ್ರೀ ಮತ್ತು ಶತಾವರರವರಿಗೆ ಅವರ ಮದುವೆಗೂ ಮುನ್ನ ನಯನಶ್ರೀ ಯ ಕನಸ್ಸು ಕೂಡ ಮುಖ್ಯವಾಗಿ ಇರುವುದರಿಂದ ಇವರಿಗೆ ಅಷ್ಟೇನೂ ಮದುವೆಯ ಬಗ್ಗೆ ಆತುರ ಇರಲಿಲ್ಲ… ಇವರೆಲ್ಲರ ಇಚ್ಛೆ ಮತ್ತು ಯೋಚನೆಗಳು ಹೀಗಿರುವಾಗ ಆ ಕ್ರೂರ ವಿಧಿಯ ಸಂಚು ಬೇರೆಯದ್ದೇ ಆಗಿರುತ್ತದೆ. ಸುಖ ಸಂತೋಷಗಳು ತುಂಬಿದ್ದ ಇವರುಗಳ ಜೀವನದಲ್ಲಿ ನಡೆಯ ಬಾರದ ಘಟನೆ ನಡೆದೇ ಬಿಡುತ್ತದೆ . ಒಂದು ದಿನ ಸಂಜೆಯ ಸಮಯದಲ್ಲಿ ನಯನಶ್ರೀ ಮತ್ತು ಶತಾವರರಿಬ್ಬರು ಭೇಟಿಯಾಗುತ್ತಾರೆ. ಮಾತು ಮರೆತ ಮೌನಿಗಳಂತೆ, ಒಬ್ಬರ ಕಣ್ಣಲಿ ಒಬ್ಬರು ನೋಡುತ, ಈ ಜಗದ ಪರಿವೇ ಇಲ್ಲದೇ, ಪ್ರೀತಿಯ ತೋಟದಲ್ಲಿರುವ, ಬಣ್ಣದ ಚೀಟ್ಟೆಗಳಾಗಿರುತ್ತಾರೆ…. ಸಮಯ ಆಗಲೇ ರಾತ್ರಿ 8.15 ಆಗಿರುತ್ತದೆ, ಶತಾವರ: ಸರಿ ಹೋಗೊಣ ಮನೆಗೆ

ಬಣ್ಣದ ಚಿಟ್ಟೆಗಳು Read Post »

You cannot copy content of this page

Scroll to Top