ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಪ್ರಬಂಧ

ಅಪ್ಪ ಅಂದರೆ ಆಕಾಶ = ಅಮ್ಮ ಅಂದರೆ ಭೂಮಿ. ಬಸನಗೌಡ ಪಾಟೀಲ ಹೆಗಲಿಗೆ ಕೊಡಲಿ ಹಾಕಿಕೊಂಡು ಸೂರ್ಯೋದಯವಾಗುತ್ತಿದ್ದಂತೆ ಹೊಲದ ಕಡೆ ಹೋದಾತ ಮರಳಿ ಮನೆಗೆ ಬರುವುದು ಸೂರ್ಯ ತಾಯಿಯ ಮಡಿಲು ಸೇರಿದ ಮೇಲೆಯೆ. ಮುಳ್ಳು ಕಂಟಿ ಕಡಿಯೋದು ನೀರು ಹಾಯೊಸೋದು, ಗೊಬ್ಬರ ಹರವುವುದು ಮಣ್ಣು ಹದ ಮಾಡುವುದು ಒಂದಾ ಎರಡಾ ಅವನ ಕೆಲಸ. ಸುರಿಯುವ ಮಳೆಯಲ್ಲಿ ಇಕ್ಕೆಲದ ರಸ್ತೆಯಲ್ಲಿ ನೀರು ತುಂಬಿದ ಗುಂಡಿಗಳಲ್ಲಿ ನಡೆದುಕೊಂಡು ಮನೆ ಸೇರೋ ಕಷ್ಟ ಅವನಿಗೆ ಮಾತ್ರ ಗೊತ್ತು. ಅದಕ್ಕೆ ಅನ್ನೋದು ಅಪ್ಪ ಅಂದ್ರೆ ಆಕಾಶ ಅಂತ. ಸಾದಾ ಸೀದಾ ಚಪ್ಪಲಿ, ವರ್ಷಕ್ಕೆರಡು ಬನೀನು, ಕಡ್ಡಿ ಕಿತ್ತು ಅನೇಕ ಬಾರಿ ರಿಪೇರಿಗೊಳಗಾಗದ ಕೊಡೆ, ಟಾರ್ಚ, ಹೊಲ, ಎತ್ತು, ಕೆರೆ, ಕುಟುಂಬ ಅವನ ದಿನ ನಿತ್ಯದ ಸರ್ವಸ್ವಗಳು. ನನ್ನ ಮಕ್ಕಳು ಹೆಂಡತಿಯನ್ನ ಪ್ರೀತಿಯಿಂದ ಸಾಕಿ ಸಲಹಬೇಕು ಎಂಬ ಉದ್ದೇಶದಿಂದ ಹಗಲಿರುಳೆನ್ನದೆ ಗಾಳಿ,ಮಳೆ ಲೆಕ್ಕಿಸದೇ ಉರಿಯುವ ಬಿಸಿಲಿನಲ್ಲಿಯೂ ಬೆವರು ಹರಿಸುತ್ತ ದುಡಿದು ಮನೆಗೆ ಬೆಳಕಾಗುವ ಮೇಣವೇ ಅಪ್ಪ. ಪ್ರತಿ ಮನೆಯಲ್ಲಿ ಶಾಲೆಯ ವಾತಾವರಣ ಇರೋಕೆ ಕಾರಣ ತಾಯಿಯಾದರೇ ಶಿಸ್ತಿನ ಕಾರ್ಖಾನೆಯೆ ಅಪ್ಪ. ಹೆಂಡತಿಯೊಡನೆ ತನ್ನ ಕಷ್ಟ ಹೇಳಿಕೋಳ್ಳದ ಆತ ಅವಳನ್ನು ರಾಣಿಯಂತೆ ಮಕ್ಕಳನ್ನು ಯುವರಾಜ ಯುವರಾಣಿಯರಂತೆ ಸಾಕಲು ಪ್ರಯತ್ನಿಸುವ. ತಾನು ಒದ್ದೆಯಾದರೆ ತನ್ನ ಎದೆಯಡಿ ಮಕ್ಕಳ ಅಪ್ಪಿ ರಕ್ಷಿಸುವ. ತಾನು ಬಿಸಿಲಲ್ಲಿ ಬೆಂದರು ಪರವಾಗಿಲ್ಲ ಮಕ್ಕಳು ಬಿಸಿಲಿಗೆ ಬರಬಾರದು ಎಂದು ಅಂದುಕೊಳ್ಳುವ. ಅದರಂತೆಯೆ ಅವರನ್ನು ಶಿಕ್ಷಣದ ಹಾದು ತುಳಿಸುವ. ಇಂತಹ ಮಹಾನ್ ತ್ಯಾಗಿಯನ್ನು ಬಿಟ್ಟು ಅದೇಷ್ಟೋ ಮಕ್ಕಳು ವಿದೇಶಕ್ಕೇ ಹೋಗುವರು..! ಇನ್ನು ಅನೇಕ ಮಾಹಾನು ಭಾವರು ವೃದ್ಧಾಶ್ರಮಕ್ಕೆ, ಅನಾಥಾಶ್ರಮಕ್ಕೆ ನೂಕುವರು..! ನಿಜವಾಗಿಯೂ ಇವರು ಇಂದಿನ ಸಮಾಜದ ಅಪರಾಧಿಗಳಲ್ಲದೆ ಮತ್ತಿನ್ನೇನು..? ಜಾತ್ರೆಯಲ್ಲಿ ತೇರು ಕಾಣದೇ ಹೋದಾಗ ತನ್ನ ಹೆಗಲ ಮೇಲೆ ಹೊತ್ತು ಕೊಂಡು ದೇವರ ದರ್ಶನ ಮಾಡಿಸುವ. ಅದ್ಯಾಗು ನಮಗೂ ಅನೇಕ ಬಾರಿ ದೇವರೇ ಕಂಡಿರುವುದಿಲ್ಲ ಯಾಕೇ ಹೇಳಿ..? ನಾವು ಕುಳಿತಿರುವ ಹೆಗಲೆ ದೇವರದು ಅಂತಾ ನಮಗೆ ಆಗ ಗೊತ್ತಿರುವುದಿಲ್ಲ. ಇನ್ನೂ ಅಪ್ಪನ ಕೋಪಕ್ಕೆ ಕೆಲಬಾರಿ ತುತ್ತಾಗಿ ಬೆತ್ತದ ಪೆಟ್ಟು ತಿನ್ನುವಾಗ ಕಾಪಾಡುವವಳೆ ಅವ್ವ. ಅಲ್ಲಿ ಇಲ್ಲಿ ಸ್ವಲ್ಪ ಉಳಿಸಿ, ವ್ಯಾಪಾರದಲ್ಲಿ ಚೌಕಾಸಿ ಮಾಡಿ ಉಳಿಸಿದ ಹಣವನ್ನು ಹಂಡನಿಗೆ ಕಾಣದ ಹಾಗೆ ಮಕ್ಕಳಿಗೆ ನೀಡುವಳು. ಅವಳೆ ನಮ್ಮ ಭಾಲ್ಯದ ಮೊದಲ ಸ್ವಿಸ್ ಬ್ಯಾಂಕ್. ತಾನು ಮಾತ್ರ ಹರಿದ ಸೀರೆಗೆ ಹೊಲಿಗೆ ಹಾಕುತ್ತ ಅದರಲ್ಲೆ ದಿನಗಳ ಕಳೆಯುವಳು. ಅಪ್ಪ ಒಂದು ದಿನವೂ ಶೋಕಿ ಮಾಡಿದವನಲ್ಲ. ಮಧ್ಯ ಸೇವಿಸಿದವನಲ್ಲ. ಎಷ್ಟೇ ಕಷ್ಟ ಬಂದರು ಕುಸಿದಿಲ್ಲ ಇನ್ನು ಅವ್ವ ತಾನು ಒಂದು ತುತ್ತು ಕಡಿಮೆ ಉಂಡು ಮಕ್ಕಳ ಗಂಡನ ಹಸಿವಿ ನೀಗಿಸುವಳು. ಇವರ ಇಷ್ಟೇಲ್ಲ ಉಳಿತಾಯ ನಿಸ್ವಾರ್ಥ ಬದುಕು ನಮಗಾಗಿ ಅಲ್ಲದೇ ಮತ್ತಿನ್ಯಾರಿಗೇ ಸ್ವಲ್ಪ ಚಿಂತಿಸಿ..? ಮಕ್ಕಳು ಬೆಳೆದು ಯುವಕ ಯುವತಿಯರಾದಾಗ ನೋಡಬೇಕು ಅವರ ಜಂಬ. ಮುಖದ ಮೇಲೆ ಮೇಸೆ ಮೂಡಿರುವುದಿಲ್ಲ ಅವನಿಗೆ ಆಗಲೆ ತಾಯಿಗೆ ಏಕವಚನದಲ್ಲಿ ನಿಂದಿಸಲೂ ಶುರು ಮಾಡುವ. ಇನ್ನು ಮಗಳೋ ರಾತ್ರಿಯೆನ್ನದೆ ಸಮಯದ ಮೀತಿ ಮೀರಿ ಮನೆಗೆ ಬರುವಳು ಪ್ರಶ್ನಿಸಿದ ಪಾಲಕರಿಗೆ ನನಗೆ ಸ್ವಾತಂತ್ರö್ಯವೇ ಇಲ್ಲ ಎಂದ ಅವರನ್ನು ದೂರುವಳು. ತಂದೆ ತಾಯಿ ಬಾವನೆಗಳಿಗೆ ಬೆಲೆ ಕೊಡದೆ ಕಲಿಯುವ ವಯಸ್ಸಲ್ಲಿ ಪ್ರೀತಿ ಪ್ರೇಮ ಎಂದು ಮೋಹದ ಬಲೆಯೊಳಗೆ ಬೀಳುವರು. ತಮ್ಮನ್ನು ಇಲ್ಲಿಯ ತನಕ ಬೆಳೆಸಲು ತಂದೆ ತಾಯತಿ ಪಟ್ಟ ಕಷ್ಟ ಮರೆತು ಬೀಡುವರು. ಇನ್ನು ಹೆಂಡತಿಯ ಮಾತು ಕೇಳಿ ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೆ ಬಿಟ್ಟು ಬರುವುದು ಮಗನ ಮಹಾನ್ ಕಾರ್ಯವಾದರೇ ಬೇರೆ ಮನೆಗೆ ಸೊಸೆಯಾಗಿ ಹೋದಾಕೆ ಮಾವ ಅತ್ತೆಯರ ಸೇವೆ ಮಾಡದಾಕೇ ಎಂದಿಗೂ ಉತ್ತಮ ಮಗಳಾಗಲಾರಳು. ಎಲ್ಲ ತಂದೆ ತಾಯಿಗಳು ತಮ್ಮ ಕೊನೆಗಾಲದಲ್ಲಿ ತಮ್ಮ ಹತ್ತಿರ ಮಕ್ಕಳು ಇರಬೇಕು ಎಂದು ಬಯಸುವರು. ಏಕೇ ಹೇಲಿ ತಮ್ಮ ಶಕ್ತಿಯನ್ನು ಬಸಿದು ಅವರು ನಮ್ಮ ಸಾಕಿ ಸಲಹಿಹರು. ಅವರಿಗೂ ಆಸೆ ತಮ್ಮ ವದೃದ್ಧಾಪ್ಯದಲ್ಲಿ ಮಕ್ಕಳು ನಮ್ಮನ್ನು ಸಾಕುವರು ಎಂದು. ಒಂದು ಕ್ಷಣ ಯೋಚಿಸಿ ಆಡವಾಡಲು ಅಂಗಳಕ್ಕೆ ಹೋದಾಗ ಬಿದ್ದು ಮೋಣಕಾಲು ಕೆತ್ತಿಸಿಕೊಂಡಾಗ ಅವ್ವ ಓಡಿ ಬಂದು ತನ್ನ ಸೆರಗು ಹರಿದು ಕಟ್ಟಿಲ್ಲವೇ..? ಇನ್ನು ಅಪ್ಪ ನಮ್ಮ ಹೊತ್ತು ಕೂಸುಮರಿ ಮಾಡಿಲ್ಲವೇ..? ಯೌವ್ವನ ಬಂದು ನೌಕರಿ ತಗೊಂಡು ಹಣ ಜೇಬಲ್ಲಿ ಬಂದಾಕ್ಷಣ ತಂದೆ ತಾಯಿಗಳನ್ನು ಕಡೆಗಣಿಸುವುದು ಸರಿಯಲ್ಲ. ತಂದೆ ತಾಯಿಯನ್ನು ಆಶ್ರಮದಲ್ಲಿ ಬಿಟ್ಟು, ಹಳ್ಳಿಯಲ್ಲಿಯೇ ಇರಿಸಿ, ಇಲ್ಲಬೇರೆ ಮನೆ ಮಾಡಿ ಇರಿಸಿ ದಿನ ಕಳೆಯುವವರಿಗೆ ಒಂದು ಕಿವಿಮಾತು. ನೀವು ಗಳಿಸಿದ ಆಸ್ತಿ, ಕಾರು, ಮನೆ, ಅಂದು ಅವ್ವ ಅಪ್ಪನ ಒಂದು ದಿನದ ಕೂಲಿಗೆ ಸಮ. ನೆನಪಿರಲಿ ನಮಗೂ ವಯಸ್ಸಾಗುವುದು.

ಪ್ರಬಂಧ Read Post »

ಇತರೆ

ಮಕ್ಕಳ ದಿನ

ಅಣ್ಣ ಬಾರಣ್ಣ ಸಿಂದು ಭಾರ್ಗವ್ ಅಣ್ಣ ಅಣ್ಣ ನನ್ನ ಜೊತೆಗೆ ಆಡಲು ಬಾರಣ್ಣ ಬ್ಯಾಟು ಬಾಲು ತಂದು ಇಡುವೆನು ಬೇಗ ಬಾರಣ್ಣ ಸ್ಕೂಲ್ ಗೆ ಹೋಗುವೆ ನನ್ನನು ಬಿಟ್ಟು ಏಕೆ ಹೇಳಣ್ಣ ತಿರುಗಿ ಬರುವ ತನಕ ಕಾಯುವೆ ನಿನ್ನೀ ಹಾದಿಯನ್ನ ಅಣ್ಣ ಅಣ್ಣ ನನ್ನ ಜೊತೆಗೆ ಅಂಗಡಿಗೆ ಬಾರಣ್ಣ ಮಿಠಾಯಿ ಕೊಡಿಸು ಆಟಿಕೆ ಕೊಡಿಸು ಎಂದು ಕೇಳೆನಣ್ಣ. ನಿನ್ನ ಕೈಹಿಡಿದೇ ಸಾಗುವೆ ಪೂರ ಬೀದಿಯನ್ನ ಅಣ್ಣ ಅಣ್ಣ ನನ್ನ ಜೊತೆಗೆ ಊಟಕೆ ಬಾರಣ್ಣ ನಾನೊಂದು ತುತ್ತು ನೀನೊಂದು ತುತ್ತು ಊಟವ ಮಾಡೋಣ‌ ಅಣ್ಣ ಬೇಗ ಬಾರಣ್ಣ ತಟ್ಟೆ ಹಾಕಿ ಕಾಯುತಲಿರುವೆ ನಾ. ———————-

ಮಕ್ಕಳ ದಿನ Read Post »

ಇತರೆ

GO BLUE- ಗೋ ಬ್ಲೂ

ಅಂಜಲಿ ರಾಮಣ್ಣ ಇವತ್ತು ರಾಷ್ಟ್ರೀಯ ಮಕ್ಕಳ ದಿನಾಚರಣೆ. ೨೦ ನವೆಂಬರ್ ಅಂತರಾಷ್ಟ್ರೀಯ ಮಕ್ಕಳ ದಿನಾಚರಣೆ. ಮಕ್ಕಳ ಹಕ್ಕುಗಳ ವಿಷಯದಲ್ಲಿ ಈ ವರ್ಷಕ್ಕೆ ತನ್ನದೇ ಆದ ಮಹತ್ವ ಇದೆ. ೧೯೫೯ ರ ನವೆಂಬರ್ ೨೦ರಂದು ವಿಶ್ವಸಂಸ್ಥೆಯು ಜೆನೆರಲ್ ಅಸೆಂಬ್ಲಿಯಲ್ಲಿ ಮಕ್ಕಳ ಹಕ್ಕುಗಳ ಘೋಷಣೆ ಮಾಡಿತ್ತು. ನಂತರ ೧೯೮೯ರಲ್ಲಿ  ಹಲವಾರು ರಾಷ್ಟ್ರಗಳು ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಸಹಿ ಹಾಕಿದವು. ಒಡಂಬಡಿಕೆಗೆ ಸಹಿ ಹಾಕಿರುವ ರಾಷ್ಟ್ರಗಳು, ಈ ವರ್ಷ ೧೪ ರಿಂದ ೨೦ನೆಯ ತಾರೀಕಿನವರೆಗೂ ಪ್ರಪಂಚದಾದ್ಯಂತ ಮಕ್ಕಳ ಹಕ್ಕುಗಳ ಬಗ್ಗೆ ಸಮಾಜದಲ್ಲಿ ಪ್ರಜ್ಞ್ನೆ  ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಮಕ್ಕಳ ಸಹಾಯವಾಣಿಯ ಬಗ್ಗೆ ಸಾಮಾನ್ಯರಿಗೆ ತಿಳುವಳಿಕೆ ಮೂಡಿಸುವುದು, ಮಕ್ಕಳಿಗಾಗಿಯೇ ಇರುವ ಕಾನೂನುಗಳ ಜಾಗೃತಿ ಶಿಬಿರಗಳನ್ನು ಆಯೋಜಿಸುವುದು, ಮಕ್ಕಳಿಗೆ ಮನೋರಂಜನೆಯ ಮೂಲಕ  ಅವರ ಹಕ್ಕುಗಳ ಅರಿವು ಮೂಡಿಸುವುದು ಹೀಗೆ ಸಾಲು ಸಾಲು ಕಾರ್ಯಕ್ರಮಗಳು ನಮ್ಮ ಕರ್ನಾಟಕದಾದ್ಯಂತ ನಡೆಯುತ್ತಿವೆ. ಈ ಎಲ್ಲಾ ಕಾರ್ಯಕ್ರಮಗಳು “ UNCRC30 “  ಎನ್ನುವ ಉಪಸಾಲನ್ನು ಹೊತ್ತಿರುವುದು ಎಲ್ಲರ ಗಮನ ಸೆಳೆಯುತ್ತಿದೆ. ವಿಶ್ವಸಂಸ್ಥೆಯು ಈ ಬಾರಿಯ ಮಕ್ಕಳ ಹಕ್ಕುಗಳ ಸಪ್ತಾಹಕ್ಕಾಗಿ ಆಯ್ಕೆ ಮಾಡಿರುವ ಬಣ್ಣ ನೀಲಿ. ’GO BLUE ‘  ಈ ಘೋಷವಾಕ್ಯದಲ್ಲಿ ವಾರವಿಡೀ ಎಲ್ಲಾ ವಯಸ್ಕರು ನೀಲಿ ಬಣ್ಣದ ಬಟ್ಟೆಗಳನ್ನು ಹಾಕಿಕೊಳ್ಳಲು ಮನವಿ ಮಾಡಲಾಗಿದೆ. ಕಚೇರಿಗಳನ್ನು, ಮನೆಗಳನ್ನು, ಸರ್ಕಾರಿ ಕಟ್ಟಡಗಳನ್ನು, ಮಾರುಕಟ್ಟೆಗಳನ್ನು ನೀಲಿ ಬಣ್ಣದ ದೀಪಗಳಿಂದ ಅಲಂಕರಿಸಲು ಕೇಳಿಕೊಳ್ಳಲಾಗಿದೆ. ಸುತ್ತಮುತ್ತಲೂ ತಮ್ಮ ಕಣ್ಣುಗಳಿಂದ ‘ ನೀಲಿನೀಲಿ ‘ ನೋಡುವ ಅಪ್ರಾಯಸ್ಥರು ’ಯಾಕೆ ಹೀಗೆ?’ ಎಂದು ಪ್ರಶ್ನಿಸುವಾಗ ಅವರುಗಳಿಗೆ ತಮ್ಮ ಹಕ್ಕುಗಳ ಬಗ್ಗೆ ತಿಳಿಸಿಕೊಡುವ ಕೆಲಸವಾಗಲಿ ಎನ್ನುವ ಉದ್ದೇಶವಿದೆ ಈ ನೀಲಿ ಬಣ್ಣದ ಆಯ್ಕೆಗೆ. ಈ ವಾರವಿಡೀ ವಯಸ್ಕರೂ ಮಕ್ಕಳೆಡೆಗೆ ಸಂವೇದನಾಶೀಲರಾಗಲಿ, ಮಕ್ಕಳ ಸಮಾಜದೆಡೆಗೆ ಎಚ್ಚರಗೊಳ್ಳಲಿ ಎನ್ನುವ ನಿರೀಕ್ಷೆಯಿದೆ ಈ ನೀಲಿ ಬಣ್ಣಕ್ಕೆ. ನೀಲಿಯೇ ಯಾಕೆ ಬಣ್ಣಗಳ ಅಧ್ಯಯನದಲ್ಲಿ ನೀಲಿ ಬಣ್ಣ ನಂಬಿಕೆ ಮತ್ತು ವಿಶ್ವಾಸದ ಧ್ಯೋತಕವಾಗಿದೆ. ಧ್ವನಿಯ ಬಣ್ಣ ನೀಲಿ ಎಂದು ಗುರುತಿಸಲಾಗಿದೆ. ನಿಷ್ಠೆ, ಬುದ್ಧಿವಂತಿಕೆ, ಸತ್ಯ ಸಂಧತೆಗೆ ನೀಲಿ ಬಣ್ಣವನ್ನು ಪ್ರತಿನಿಧಿಸಲಾಗಿದೆ. ವೈದ್ಯಕೀಯವಾಗಿ ನೀಲಿ ಬಣ್ಣವು ಮನಸ್ಸು ಹಾಗು ದೇಹವು ಹೊಂದಾಣಿಕೆ ಸಾಧಿಸಲು ಸಾಕಷ್ಟು ಸಹಾಯಕಾರಿ ಎಂದು ಹೇಳಲಾಗಿದೆ. ಆಕಾಶ ನೀಲಿ, ಶರಧಿ ನೀಲಿ. ಅದಕ್ಕೇ ಆಳ ಮತ್ತು ಧೃಢತೆಯ ಸಂಕೀತವಾಗಿದೆ ನೀಲಿ. ಬೈಬಲ್‍ನಲ್ಲಿ ನೀಲಿ ಬಣ್ಣವನ್ನು ದೈವ ವಾಣಿಯ, ಸ್ವರ್ಗದ ಬಣ್ಣ ಎಂದು ಬಣ್ಣಸಲಾಗಿದೆ. ಯಹೂದಿಗಳು ನೀಲಿ ಬಣ್ಣವನ್ನು ದೈವತ್ವದ ಬಣ್ಣವೆಂದು ಭಾವಿಸುತ್ತಾರೆ. ಚಿತ್ತಸ್ಥಿಮಿತಕ್ಕೆ ನೀಲಿಯಾಕಾರ ಎನ್ನುತ್ತಾರೆ ಅವರು. ಹಿಂದು ದೇವರುಗಳಿಗೆ ನೀಲಿ ಬಣ್ಣವನ್ನು ಪರಿಕಲ್ಪಿಸಲಾಗಿದೆ. ಮಕ್ಕಳು ನರಳುತ್ತಿದ್ದಾರೆ. ಅವರ ನೋವಿನ ಕೂಗನ್ನು ಕೇಳಿಸಿಕೊಳ್ಳಲು ಸ್ವಲ್ಪವೇ ಸೂಕ್ಷ್ಮತೆಯೂ ಸಾಕು. UNCRC30 ಎನ್ನುತ್ತಾ ವಿಶ್ವಸಂಸ್ಥೆಯು ಕೊಟ್ಟಿರುವ ನೀಲಿ ಬಣ್ಣದಲ್ಲಿ ನಾವುಗಳೂ ತೊಡಗಿಕೊಳ್ಳೋಣ. ನಾವೂ ಎಲ್ಲೆಡೆಯಲ್ಲಿಯೂ ನೀಲಿಯಾಗೋಣ. ನಾವೇ ನಿರ್ಮಿಸಿದ ಧರ್ಮ, ಆಚರಣೆ, ನಂಬಿಕೆಗಳಿಂದ ನೀಲಿಗಟ್ಟುತ್ತಿರುವ ಮಕ್ಕಳಿಗೆ ಉಸಿರು ತುಂಬೋಣ. ಮನುಷ್ಯರಾಗೋಣ. ಜಗತ್ತಿಗೆಲ್ಲ ’GO BLUE’ ಎನ್ನೋಣ. ಅಂಜಲಿ ರಾಮಣ್ಣಅಧ್ಯಕ್ಷರು , ಮಕ್ಕಳ ಕಲ್ಯಾಣ ಸಮಿತಿ

GO BLUE- ಗೋ ಬ್ಲೂ Read Post »

ಇತರೆ

ಮಕ್ಕಳ ದಿನದ ಸಂಭ್ರಮ

ಅನು ಮಹಾಲಿಂಗ ಪುಟ್ಟ ನೀನು ಬಹಳ ಚೆಂದನಿನ್ನ ನಗುವ ಇನ್ನೂ ಅಂದ ಪುಟ್ಟ ಪುಟ್ಟ ಹೆಜ್ಜೆ ಇಟ್ಟು  ಬಂದಾಗಇಡುವೆ ನಿನಗೆ ದೃಷ್ಟಿ ಬೊಟ್ಟು ನಾನಗ ಬಿಸ್ಕೇಟ್ ಚಾಕೊಲೇಟ್ ಭಾರಿ ತರುವೆನೀನಿಗ ಬೇಗ ತಿನ್ನು ಊಟವನ್ನುಅ ಆ ಕಲಿಯೊ ಕಂದಾನಮ್ಮಯ ಭಾಷೆಯೆ ಚೆಂದ ಚೆಂದದಿ ನುಡಿಯೋ ಅಂದದಿ ಕುಣಿಯೊಚಂದ್ರವದನನೇ ಚುಕ್ಕಿ ಚಂದ್ರಮತಾರಲೋಕದ ಅಧಿಪತಿ ನೀನುತಾರ ಬಳಗದೀ ಹೋಳೆಯುವೆ ಏನು ನಿನ್ನಯ ಅಂಗಾಲು ಮುಂಗಾಲನೆಲ್ಲಮುದ್ದಿಸಿ ತೊಳೆದು ಮುತ್ತನ್ನು ಇಡುವೆನನ್ನಯ ಕನಸು ನಾಳೆಯ ನನಸುಜಗಕೆಲ್ಲ ಅಧಿಪತಿ ನೀನೆ ಕಂದಯ್ಯಾ —————————–

ಮಕ್ಕಳ ದಿನದ ಸಂಭ್ರಮ Read Post »

ಇತರೆ

ಅನಿಸಿಕೆ

ನಗರಗಳಲ್ಲಿ ದುಡಿಯುವ ಹುಡುಗರ ಕಷ್ಟ ಐಶ್ವರ್ಯ ಎಲ್ಲೇ ಹೋದ್ರು, ಎಷ್ಟೊತ್ತಿಗೆ ಮನೆಗೆ ಬಂದ್ರು ಯಾಕೆ, ಏನು ಅನ್ನೊ ಪ್ರಶ್ನೆಗಳನ್ನ ಹುಡ್ಗುರಿಗೆ ಮಾತ್ರ ಕೇಳಲ್ಲ ಅನ್ನೋದು ಪ್ರತಿಯೊಂದು ಮನೆಯಲ್ಲಿರೊ ಅಕ್ಕ ತಂಗಿಯರ ವಾದ. ನನ್ನನ್ನೂ ಸೇರ್ಸಿ…..ನಾವು ಅಪ್ಪ ಅಮ್ಮನ ಹತ್ರ ಜಾಸ್ತಿ ಜಗಳ ಮಾಡೋದು ಇದೊಂದೇ ವಿಷಯಕ್ಕೆ ಅನ್ಸತ್ತೆ. ನಮಗೂ ಹುಡ್ಗುರ ತರ ಫ್ರೀಡಂ ಬೇಕು ಅಂತ. ಹೆಣ್ಣು ಕೂಡ ಗಂಡಿನಷ್ಟೇ ಸಮಾನಳು, ಪ್ರತಿಯೊಂದು ಕ್ಷೇತ್ರದಲ್ಲೂ ಹೆಣ್ಣು ಗಂಡಿಗೆ ಸರಿ ಸಮನಾಗಿ ನಿಂತಿದ್ದಾಳೆ ಅಂತ ನಾವೆಷ್ಟೇ ಬಾಯ್ ಬಡ್ಕೊಂಡು ಮೊಂಡು ಹಠ ಮಾಡಿದ್ರು ಮನೆಲಿ ಮಾತ್ರ ನಮ್ಮ ಮಾತು ಕೆಳೋದೆ ಇಲ್ಲ. ಇದ್ನೆಲ್ಲ ನೋಡಿದ್ ನಾವು ಅನ್ಕೊಳೋದು‌ ಗಂಡ್ಮಗ ಅಂತ ತುಂಬಾ ಪ್ರೀಯಾಗಿ ಬೆಳೆಸ್ತಿದಾರೆ ಅನ್ಕೊತಿವಿ ಆದ್ರೆ ವಾಸ್ತವಾನೆ ಬೇರೆ ಇರತ್ತೆ. ಹೆಣ್ಣು ಗಂಡಿಗೆಷ್ಟೇ ಸರಿ ಸಮನಾಗಿ ದುಡುದ್ರು ಕೂಡ ಗಂಡಿನಷ್ಟು ಭಾವನೆಗಳ ಹಿಡಿತ, ತುಡಿತ ತಡೆದು ಹಿಡಿಯೊ ಶಕ್ತಿ ಹೆಣ್ಣಿಗಿಲ್ಲ. ಮದುವೆಯಾಗಿ ಹೋಗೊ ಹೆಣ್ಣು ತನ್ನವರನ್ನೆಲ್ಲ ಬಿಟ್ಟು ಹೊಗೊವಾಗ ಅಳ್ತಾಳೆ. ಆದ್ರೆ ವಯಸ್ಸಿಗೆ ಬಂದ ಹುಡುಗ್ರು ಹಾಗೆಲ್ಲ ಅಳೋಕಾಗತ್ತಾ?… ಹುಟ್ಟಿ ಬೆಳೆದ ಊರು, ಜೊತೆಗಿದ್ದ ಪ್ರೆಂಡ್ಸ್, ಕ್ರಶ್ ಎಲ್ಲವನ್ನೂ ಎಲ್ಲರನ್ನೂ ಬಿಟ್ಟು ಬೆಂಗಳೂರಿನಂತಹ ಮಹಾನಗರಗಳ ಅರಸಿ ಮನೆ ಜವಾಬ್ದಾರಿ ಹೊತ್ತು ಹೊರಡೊಕೆ ತಯಾರಾದ ಹುಡುಗನಿಗೂ ಭಾವನೆಗಳಿದಾವೆ ಕಣ್ಣು ರೆಪ್ಪೆ ಅಲ್ಲಾಡ್ಸಿದ್ರು ಕಣ್ಣೀರು ಬಿಳೋ ಹಾಗಿದ್ರು ಹೆತ್ತವರ ಮುಖದಲ್ಲಿ ನಗು ನೋಡೊಕೋಸ್ಕರ ಎನೂ ಆಗೇ ಇಲ್ಲ ಅನ್ನೊ ತರ ಎಲ್ಲ ಅದುಮಿಟ್ಟು ಹಿಂತಿರುಗಿ ನೋಡಿದ್ರೆ ಎಲ್ಲಿ ಅಳೋದು ಗೊತ್ತಾಗತ್ತೊ ಅಂತ ಹಿಂತಿರ್ಗಿನೂ ನೋಡದೆ ಹೋಗ್ತಾರೆ…… ಪ್ರತಿಯೊಂದು ಹುಡ್ಗನೂ ಒಂದಲ್ಲ ಒಂದು ಟ್ಯಾಲೆಂಟ್ ಹೊತ್ಕೊಂಡೆ ಹುಟ್ಟಿರ್ತಾನೆ. ಆದ್ರೆ ಅವನು ಎನೇ ಮಾಡಿದ್ರು  ಅಯ್ಯೊ ಅವನು ಬಿಡು ಹುಡ್ಗ ಹೇಗೋ ಬದುಕ್ತಾನೆ ಅನ್ನೊ ಸಮಾಜ ಒಂದು ಸಲ ಅವನೂ ಹೇಗೆ ಬದುಕ್ತಾನೆ ಅನ್ನೊ ಅನ್ವೇಷಣೆ ಮಾಡಿದ್ರೆ ಇವತ್ತು ವಿಶ್ವ ಮಹಿಳಾ ದಿನಾಚರಣೆ ಅಂತ ಇರೊ ಹಾಗೆ ವಿಶ್ವ ಪುರುಷರ ದಿನಾಚರಣೆನೂ ಇರ್ತಿತ್ತು…..ಗಂಡಿನಲ್ಲಿ ಕಾಮ ಅನ್ನೊದೊಂದು ಅವನನ್ನ ಹಾಳು ಮಾಡತ್ತೆ ಅನ್ನೊದೊಂದು ಬಿಟ್ರೆ ಅವನು ಹೆಣ್ಣಿನಷ್ಟು ಜಾಣಾಕ್ಷತನ, ಸಣ್ಣತನ, ಕೊಂಕುತನ ಇದ್ಯಾವುದು ‌ಇಲ್ಲ. ಇನ್ನೊಬ್ಬರ ನೋಡಿ ಉರ್ಕೊಳೊ ಜಾಯಮಾನವೇ ಅಲ್ಲ. ಅವರೂ ಕೂಡ ಚಿಕ್ಕ ವಯಸ್ಸಿಂದಾನೇ ಹತ್ತಾರು ಆಸೆ ಕನಸುಗಳನ್ನ ಕಟ್ಕೊಂಡೆ ಬಂದಿರ್ತಾರೆ. ಆದ್ರೆ ಈ ಫ್ಯಾಮಿಲಿ, ದುಡ್ಡು, ಅಡ್ಜೆಸ್ಟಮೆಂಟ್ ಅನ್ನೊ ಲೈಫಲ್ಲಿ ಅವರ ಕನಸಿನ ಕೂಸು ಕಾಲು ಮುರ್ಕೊಂಡು ಮೂಲೇಲಿ ಕೂತಿರತ್ತೆ. ಅವರಿಗೂ ಕೂಡ ಎಲ್ಲರಂತೆ ಕಲಿಯಬೇಕು ಅನ್ನೊ ಆಸೆ ಇರತ್ತೆ , ಹಸಿದ ಹೊಟ್ಟೆ ಖಾಲಿ ಜೇಬು ಅವರಿಗೆ ಪಾಠ ಕಲಿಸ್ತಿರತ್ತೆ, ಶ್ರೀಮಂತರ ಮನೆ ಮಕ್ಕಳ ತರ ಬೈಕಲ್ಲಿ ಊರೆಲ್ಲ ಸುತ್ಬೇಕು ಅನ್ಕೊಂಡ್ರು ಬಡತನ ಇವರ ಸುತ್ತಾನೇ ಸುತ್ತುತ್ತಿರತ್ತೆ, ಓದಿ ಕೆಲಸ ಗಿಟ್ಟಿಸ್ಕೊಂಡು ಸ್ವಂತ ದುಡಿಮೇಲಿ ಬೆಳಿಬೇಕು ಅಂತಿರತ್ತೆ ಅದ್ರೆ ಅಕ್ಕಂದಿರ ಮದುವೆಗೆ ಮಾಡಿದ ಸಾಲದ ಬಡ್ಡಿನೇ ಬೆಳಿತಿರತ್ತೆ. ಸಂಸಾರದ ಜಂಜಾಟದಲ್ಲಿ ಸಿಕ್ಕು ಒದ್ದಾಡ್ತಿರ್ತಾರೆ. SSLC ನೋ ಪಿಯುಸಿ ನೋ ಓದ್ಕೊಂಡು ಅವರಿವರ ಕೈಕಾಲು ಹಿಡ್ದು ಹೋಟೆಲ್ಲೊ, ಇನ್ನೆಲ್ಲೊ ಒಂದು ಕೆಲಸಕ್ಕೆ ಸೆರ್ಕೊಂಡು ಬರೊ ಚಿಕ್ಕ ಸಂಬಳದಲ್ಲೇ ಸಂಸಾರಾನ ಸಾಗ್ಸೊ ದೊಡ್ಡ ಕನಸು ಕಾಣ್ತಿರ್ತಾರೆ. ಸಿಂಗಲ್ ರೂಮಲ್ಲಿ ಶೇರಿಂಗ್ ಗೆ ಸೇರ್ಕೊಂಡು, ಬರೊ ಸಂಬಳದಲ್ಲಿ ಅಪ್ಪನ ಟ್ರೀಟ್ಮೆಂಟ್, ಅಮ್ಮನ ಮನೆ ಖರ್ಚು, ಅಕ್ಕನ ಮದುವೆ ಸಾಲ, ತಂಗಿ ತಮ್ಮಂದಿರ ಓದು ಅಂತ ಹೊಂದ್ಸಿ ಉಳಿಯೊದ್ರಲ್ಲಿ ತಾನ್ ಪ್ರಿತ್ಸೊ ಹುಡ್ಗಿಗೊಸ್ಕರ ಸೇವ್ ಮಾಡಿ ಅವಳ್ನ ಸುತ್ತಾಡ್ಸಿ ಅವಳ ಮುಖದಲ್ಲಿ ನಗು ನೋಡೋಕೆ ಅವಳಿಷ್ಟ ಪಟ್ಟಿದ್ನಾ ಕೊಡ್ಸಿ ದುಡ್ಡಿಲ್ದೆ ಟೀ ಬನ್ ತಿನ್ಕೊಂಡು ಬದುಕೊ ಜೀವಾನೇ ಗಂಡು. ಅವನ ಪ್ರತಿಯೊಂದು ನಿರ್ಧಾರದ ಹಿಂದೆ ಇನ್ಯಾರದ್ದೊ ಬಗ್ಗೆ ಯೊಚ್ನೆ ಮಾಡಿ ನಿರ್ಧಾರ ಮಾಡ್ತಾನೆ.. ಜಗತ್ತಿನ ಕಣ್ಣಿಗೆ ಅವನ್ಯಾವತ್ತೂ ಒರಟಾಗೇ ಕಾಣ್ತಾನೆ. ಯಾಕಂದ್ರೆ ಅವನ್ನಲ್ಲಿರೊ ನೋವು ಕಣ್ಣೀರು ಅಸಮಧಾನನ ಅವನು ಹೆಣ್ಣಿನ ತರ ಪ್ರಪಂಚದ ಮುಂದಿಡಲ್ಲ. ತನ್ನವರಿಗೋಸ್ಕರ ಅಂತಾನೆ ಒದ್ದಾಡ್ತಿರ್ತಾನೆ. ಇಷ್ಟೆಲ್ಲ ಜವಾಬ್ದಾರಿ, ಪ್ರೀತಿ ನಿಭಾಯಿಸೊ ಹೊತ್ತಲ್ಲಿ ಮತ್ತೊಂದು ನೋವು ಕೂಡ ಇವನ ಕಣ್ಣ ಮುಂದೆನೆ ಓಡಾಡ್ತಿರತ್ತೆ. ಅದೆನಂದ್ರೆ ತಾನು ಪ್ರೀತ್ಸಿದ ಹುಡ್ಗಿ ತನ್ನ ಕಣ್ಣೆದುರೆ ಇನ್ನೊಬ್ಬರ ಕೈ ಹಿಡಿದು ನಡೆಯೊದ್ನ ನೋಡೊಕ್ಕಿಂತ ದೊಡ್ಡ ನರಕ ಮತ್ತೊಂದಿಲ್ಲ ಹುಡ್ಗುರಿಗೆ. ಅಕ್ಕ ತಂಗಿರ ಮದುವೆ ಮಾಡಿ ಹಣ ಕೂಡಿಟ್ಟು ಮನೆ ಮಾಡಿ ಮದುವೆ ಅಗೋ ವರೆಗೆ ಇವನಿಗೆ ಕಾಯೊ option ಇದ್ದ ಹಾಗೆ ಹೆಣ್ಮಕ್ಳಿಗೆ ಇಲ್ಲ. ಅಂತ ಹೊತ್ತಲ್ಲಿ ಪ್ರೀತ್ಸಿದವಳು ಎಲ್ಲೆ ಇದ್ರು ಚೆನಾಗಿರ್ಲಿ ಅಂತ ಮನಸ್ಸಿಂದ ಹಾರೈಸಿ ಕೊರಗೊ ತ್ಯಾಗ ಜೀವಿ…. ಇಷ್ಟನೊ ಕಷ್ಟಾನೊ ಮನೆಲಿ ನೋಡೊ ಹೆಣ್ಣು ಮದುವೆ ಆಗಿ ಇನ್ನಾದ್ರು ನೆಮ್ಮದಿಯಿಂದ ಬದುಕ್ಬೇಕು ಅನ್ನೊ ಹೊತ್ತಲ್ಲಿ ಗಂಡ, ಅಪ್ಪ ಅನ್ನೊ extra ಜವಾಬ್ದಾರಿಗಳು ಹೆಗಲೇರಿ ಕೂತಿರತ್ತೆ. ಅಕ್ಕ ತಂಗಿಯರಿಗಾಗಿ ತನ್ನೆಲ್ಲ ಬಾಲ್ಯವನ್ನ, ಹೆಂಡತಿ ಮಕ್ಕಳಿಗಾಗಿ ತನ್ನೆಲ್ಲ ಯೌವ್ವನನ್ನ ಮುಡಿಪಿಟ್ಟು ದುಡಿಯೊ ಶ್ರಮಜೀವಿ. ಹೆಣ್ಣಿನ ತ್ಯಾಗ, ಸಹನೆ ಕಂಡಂತೆ ಗಂಡಿನ ಕಾಳಜಿ ಪ್ರೀತಿ ಜಗತ್ತಿನ ಕಣ್ಣಿಗೆ ಕಂಡಿದಿದ್ರೆ ಇವತ್ತು ಜಗತ್ತು ಹೆಣ್ಣನ್ನ ಇಟ್ಟು ತೂಗೊ ಜಾಗದಲ್ಲಿ ಗಂಡಿಗೂ ಸ್ವಲ್ಪ ಜಾಗ ಕೊಡ್ತಿತ್ತು. ಅಕ್ಕ ತಂಗಿಯರ ಮಾನ ಮುಚ್ಚೋಕೆ ಮೈ ತುಂಬಾ ಬಟ್ಟೆ ಕೊಡ್ಸೊಕೆ ಅದೆಷ್ಟೋ ಅಣ್ಣ ತಮ್ಮಂದಿರು ಹೋಟೆಲ್ ನಲ್ಲಿ ಉರಿಯೊ ಬೆಂಕಿ ಮುಂದೆ ಬಟ್ಟೆ ಬಿಚ್ಚಿ ನಿಂತು ಕೆಲ್ಸ ಮಾಡ್ತಿರ್ತಾರೆ. ಕೊನೆಗಾಲದಲ್ಲಿ ಅಪ್ಪ ಅಮ್ಮನ ಕೆಲಸ ಬಿಡ್ಸಿ ಕೈ ತುಂಬಾ ಕೂಳು ಸಿಗೊ ಹಾಗೆ ಮಾಡೋಕೆ ಅದೆಷ್ಟೋ ಗಂಡ್ಮಕ್ಕಳು ರೋಡ್ ಸೈಡ್ ಲಿ ಸಿಗೊ ತಳ್ಳೊ ಗಾಡಿಲಿ ಹಾಫ್ ಪ್ಲೇಟ್ ತಿನ್ಕೊಂಡು ಫುಲ್ ಡೇ ತಳ್ತಿದಾರೆ. ದಿನವೆಲ್ಲ ದುಡಿದು ದಣಿದು ಬಂದ ಗಂಡನಿಗೆ ರಾತ್ರಿಯೆಲ್ಲ ತಲೆ ತುಂಬೊ ಹೆಂಡ್ತಿ ಆಸೆಗಳನ್ನ ಈಡೇರಿಸೊದ್ಕೆ ರಾತ್ರಿ ಪಾಳಿಲೂ ಕೆಲಸ ಮಾಡೊ ಅದೆಷ್ಟೊ ಗಂಡಂದಿರು, ಮಕ್ಕಳ ಹೈಫೈ ಲೈಫಿನ ಹೈಹೀಲ್ಸ್ ಕೆಳಗೆ ಸಿಕ್ಕು ಒದ್ದಾಡ್ತಿರೊ ಅದೆಷ್ಟೊ ಅಪ್ಪಂದಿರ ಕಷ್ಟಗಳನ್ನ ಆದಷ್ಟು ಅರ್ಥ ಮಾಡ್ಕೊಳೋ ಪ್ರಯತ್ನ ಮಾಡೋಣ. ಹುಡ್ಗುರಿಗಿರೋ freedom ಅನ್ನೊ ರೆಕ್ಕೆ ಮೇಲಿರೊ ಜವಾಬ್ದಾರಿ ಅನ್ನೊ ಭಾರಾನೂ ನೋಡೋಣ

ಅನಿಸಿಕೆ Read Post »

ಇತರೆ

ಆರ್ಥಿಕತೆ.

ನೋಟು ರದ್ದತಿಗೆ ಮೂರು ವರ್ಷ ಗಣೇಶ್ ಭಟ್ ಶಿರಸಿ 2016 ರ ನವೆಂಬರ್ 08 ರಂದು ಭಾರತದಲ್ಲಿ ಆಂತರಿಕ ರ‍್ಥಿಕ ರ‍್ಜಿಕಲ್ ಸ್ಟ್ರೈಕ್ ನಡೆಯಿತು. ರೂ. 500 , 1000 ರ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದೆ ಪಡೆಯಲಾಯಿತು. ಕಪ್ಪು ಹಣವನ್ನು ಹೊರಗೆಡಹುವದು ಭ್ರಷ್ಟಾಚಾರ ನರ‍್ಮೂಲನೆ ಮಾಡಲು ಈ ಕಠಿಣ ನರ‍್ಣಯ ಕೈಗೊಳ್ಳಲಾಗಿದೆಯೆಂದು ಜನರಿಗೆ ಹೇಳಲಾಯಿತು. ಸ್ವಲ್ಪ ದಿನಗಳ ನಂತರ ನೋಟ ರದ್ದತಿಯ ಉದ್ದೇಶಗಳನ್ನು ಇನ್ನಷ್ಟು ವಿಸ್ತ್ರತಗೊಳಿಸಲಾಯಿತು. ಚಲಾವಣೆಯಲ್ಲಿರುವ ಖೋಟಾ ನೋಟುಗಳನ್ನು ಕಂಡು ಹಿಡಿಯುವುದು , ಭಯೋತ್ಪಾದಕರಿಗೆ ಹಣ ಸಿಗದಂತೆ ಮಾಡುವುದು ಹಾಗೂ ಅವರ ಚಟುವಟಿಕೆಗಳಿಗೆ ನಿಯಂತ್ರಣ ಹಾಕುವುದು ಸೇರಿದಂತೆ ದಿನಕ್ಕೊಂದು ಹೊಸ ಉದ್ದೇಶವನ್ನು ಸರ‍್ಪಡೆ ಮಾಡಲಾಯಿತು. ಇವುಗಳ ಜೊತೆಗೇ ನಗದು ರಹಿತ ಭಾರತದ ಕನಸನ್ನು ಬಿತ್ತಿ, ಚೀನಾದ ನಿಯಂತ್ರಣದ ಪೇಟಿಎಮ್ ಕಂಪನಿಯನ್ನು ಪ್ರೋತ್ಸಾಹಿಸಲು ಪ್ರಧಾನಿಯವರ ಚಿತ್ರಗಳನ್ನೇ ಬಳಸಿ ಜಾಹೀರಾತು ನೀಡಲಾಯಿತು. ಬ್ಯಾಂಕ್ ಖಾತೆಯನ್ನೇ ಹೊಂದಿರದ ಹಲವರನ್ನು ಒಳಗೊಂಡ ಗ್ರಾಮೀಣ ಭಾಗದ ಜನರು, ನಗರದ ಕೊಳಗೇರಿ ನಿವಾಸಿಗಳು, ಬ್ಯಾಂಕ್ ಖಾತೆ ಹೊಂದಿದ್ದರೂ ಕಂಪ್ಯೂಟರ್ , ಮೊಬೈಲ್, ಬಳಕೆಯನ್ನು ಅರಿಯದ ಜನಸಾಮಾನ್ಯರನ್ನೂ ಭಯಭೀತರನ್ನಾಗಿಸಲಾಯಿತು. ಎರಡು ದಿನಗಳ ಬ್ಯಾಂಕ್ ರಜೆಯ ನಂತರ ಉಳಿದೆಲ್ಲಾ ಕೆಲಸಗಳನ್ನು ಬದಿಗಿಟ್ಟು, ರದ್ದಾದ ನೋಟುಗಳ ಬದಲಾವಣೆಗಾಗಿ ಬ್ಯಾಂಕ್ ಎದುರಿಗೆ ಸರತಿ ಸಾಲಿನಲ್ಲಿ ನಿಲ್ಲುವದೇ ಜನಸಾಮಾನ್ಯರ ಕೆಲಸವಾಯಿತು. ನೋಟು ರದ್ದುಪಡಿಸಿದ ನಂತರ ಕೇವಲ 50 ದಿನಗಳು ಮಾತ್ರ ಕಷ್ಟಪಡಿ, ಮುಂದೆ ಎಂದೆಂದಿಗೂ ನೀವು ಸುಖವಾಗಿ ಬದುಕುವ ಸ್ಥಿತಿ ನರ‍್ಮಾಣ ಮಾಡುತ್ತೇನೆಂದು ಪ್ರಧಾನಿಯವರು ದೇಶದ ಜನತೆಗೆ ಭರವಸೆ ನೀಡಿದರು. ಕಪ್ಪು ಹಣದ ಮೇಲಿನ ಯುದ್ಧಕ್ಕಾಗಿ ಅದಕ್ಕೂ ಮೊದಲಿನ 10 ತಿಂಗಳುಗಳ ಕಾಲ ಪರ‍್ವ ತಯಾರಿ ನಡೆದಿದ್ದರಿಂದಾಗಿ ಎಲ್ಲವೂ ಸುಸೂತ್ರವಾಗಿ , ಸುಲಲಿತವಾಗಿ ನಡೆಯಲಿದೆಯೆಂದು ಭರವಸೆ ನೀಡಿದರು. ಆದರೆ , ಆಗ ಆದದ್ದೇ ಬೇರೆ. ಈ ವಿಷಯಕ್ಕೆ ಸಂಬಂಧಿಸಿ ದಿನಕ್ಕೊಂದು ಹೊಸ ನರ‍್ದೇಶನಗಳು ಬರಲಾರಂಭಿಸಿದವು. ಕೇವಲ 50 ದಿನಗಳಲ್ಲಿ, ಆರ್‍ಬಿಐ 63 ಸುತ್ತೋಲೆಗಳನ್ನು ಹೊರಡಿಸಿ ನಗೆಪಾಟಲಿಗೀಡಾಯಿತು. ಇದಕ್ಕೆ ಸಂಬಂಧಿಸಿದ ಅಧಿಕಾರಿಯೊಬ್ಬರು, ಎರಡು ಮೂರು ಸುತ್ತೋಲೆಗಳನ್ನು ಹೊರತುಪಡಿಸಿ ಉಳಿದವೆಲ್ಲವೂ ಪರ‍್ವಯೋಜಿತವೆಂದು ಹೇಳಿಕೆ ನೀಡಿ ತಮ್ಮ ನಡೆಯನ್ನು ಸರ‍್ಥಿಸಿಕೊಂಡರು. ಐವತ್ತು ದಿನಗಳಲ್ಲ. 500 ಅಲ್ಲ, ಸಾವಿರ ದಿನಗಳು ಕಳೆದರೂ, ನೋಟ ರದ್ದತಿಯಿಂದ ಸಿಗಬಹುದಾದ ಲಾಭದ ಕುರಿತು ಮಾಡಿದ ಘೋಷಣೆಗಳು ಬರೀ ಭಾಷಣದ ತುಣುಕುಗಳಾಗಿ ಉಳಿದಿವೆಯೇ ಹೊರತು, ಯಾವುದೂ ವಾಸ್ತವವಾಗಿಲ್ಲ. ಅಂದಿನ ಪ್ರಧಾನಿಯವರೇ ಇಂದೂ ಇದ್ದಾರೆ, ನೋಟು ರದ್ದತಿಯ ಕುರಿತು ಎದೆಯುಬ್ಬಿಸಿ ಕೊಚ್ಚಿಕೊಳ್ಳುತ್ತಿದ್ದ ಪ್ರಧಾನಿಯವರು, ಇಂದು ಆ ವಿಷಯವನ್ನು ಅಪ್ಪಿತಪ್ಪಿಯೂ ಪ್ರಸ್ತಾಪಿಸುವದಿಲ್ಲ. ನೋಟು ರದ್ದತಿಯಾಗಿ ಮೂರು ರ‍್ಷಗಳ ನಂತರ ದೇಶದ ಪರಿಸ್ಥಿತಿ ದಿನದಿಂದ ದಿನಕ್ಕೆ ಕೆಡುತ್ತಿದೆ. ನಿರುದ್ಯೋಗ ಸಮಸ್ಯೆಯ ಹೆಚ್ಚಳ, ಸಾಮಾಜಿಕ ಸಂರ‍್ಷ, ಜನಸಾಮಾನ್ಯರ ಅಸಹಾಯಕತೆ ಹೆಚ್ಚುತ್ತಿದೆ. ಭ್ರಷ್ಟಾಚಾರ ಯಾರ ನಿಯಂತ್ರಣಕ್ಕೂ ಸಿಗದೇ ವಿಕಾರ ರೂಪ ತಾಳುತ್ತಿದೆ. ಭಯೋತ್ಪಾದನೆ ಸಂಬಂಧಿತ ಚಟುವಟಿಕೆಗಳು ಹೆಚ್ಚುತ್ತಿವೆಯೇ ಹೊರತು ಕಡಿಮೆಯಾಗುವ ಯಾವ ಲಕ್ಷಣವೂ ಕಾಣುತ್ತಿಲ್ಲ. ದೇಶದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಜನರ ನಂಬಿಕೆ ನಷ್ಟವಾಗುತ್ತಿದೆ. ಇಡೀ ರ‍್ಥ ವ್ಯವಸ್ಥೆಯಲ್ಲಿ ಅಪನಂಬಿಕೆ ಮೂಡಿ ಜನರನ್ನು ಅಭದ್ರತೆಯ ಭಾವ ಕಾಡುತ್ತಿದೆ. ಅತಿ ಶ್ರೀಮಂತರು ಮತ್ತು ಆಳುವ ಬಿಜೆಪಿಯ ಉನ್ನತ ವಲಯದೊಂದಿಗೆ ನಿಕಟ ಸಂರ‍್ಕ ಹೊಂದಿರುವವರನ್ನು ಹೊರತುಪಡಿಸಿ, ಉಳಿದವರು ರ‍್ಥಿಕ ಭಯೋತ್ಪಾದನೆಗೆ ಗುರಿಯಾದವರ ರೀತಿಯಲ್ಲಿ ಚಡಪಪಡಿಸುವಂತಾಗಿದೆ. ಗಳಿಸಿದ ಹಣವನ್ನು ಸುರಕ್ಷಿತವಾಗಿ ಎಲ್ಲಿ ಇಡಬೇಕು, ಎಲ್ಲಿ ತೊಡಗಿಸಬೇಕು, ಯಾವ ರೂಪದಲ್ಲಿ ಇಟ್ಟುಕೊಳ್ಳಬೇಕು ಎಂಬ ಸಮಸ್ಯೆ ಜನಸಾಮಾನ್ಯರನ್ನು ಕಾಡುತ್ತಿದೆ. ಬ್ಯಾಂಕ್‍ಗಳಲ್ಲಿ ನಡೆಯುತ್ತಿರುವ ಮೋಸ, ವಂಚನೆಯಿಂದಾಗಿ ಠೇವಣಿದಾರರ ಮೇಲೆ ಕತ್ತಿ ಬೀಸಲಾಗುತ್ತಿದೆ. ಮೋಸ ಮಾಡಿದವರು, ಸಾಲ ನೀಡಿದವರು ಆರಾಮಾಗಿ ಓಡಾಡಿಕೊಂಡಿದ್ದರೆ, ಬಡಪಾಯಿ ಠೇವಣಿದಾರರು ತಮ್ಮದೇ ಹಣ ವಾಪಾಸು ಪಡೆಯದಂತೆ ಆರ್‍ಐಬಿ ನರ‍್ಬಂಧ ಹೇರುತ್ತದೆ. ಎಮ್ಮೆಗೆ ಜ್ವರ, ಎತ್ತಿಗೆ ಬರೆ ಎಂಬ ಗಾದೆಯನ್ನು ನೆನಪಿಸುವ ನಡತೆ. ಜನರನ್ನು ಮೋಸಗೊಳಿಸುವ ಬ್ಲೇಡ್ ಕಂಪನಿಗಳು ರಾಜಾರೋಷಾಗಿ ಕರ‍್ಯ ನರ‍್ವಹಿಸುತ್ತಿದೆ. ಯಾವುದೋ ಒಂದು ದಿನ ಬಾಗಿಲು ಮುಚ್ಚಿ ಅವರು ನಾಪತ್ತೆಯಾದ ನಂತರ ಪೋಲೀಸರ, ಅಧಿಕಾರಿಗಳ ಪ್ರವೇಶವಾಗುತ್ತದೆ. ಅಲ್ಲಿಯವರೆಗೆ ಅವುಗಳನ್ನು ತಪಾಸಣೆಗೊಳಪಡಿಸಬೇಕಾದ ಅಧಿಕಾರಿಗಳ ರ‍್ತವ್ಯ ಲೋಪಕ್ಕೆ ಮುಗ್ದ ಜನತೆ ಬಲಿಯಾಗುತ್ತಿದ್ದಾರೆ. ನೋಟ್ ರದ್ದತಿಯಾದ ಕೆಲವೇ ದಿನಗಳ ನಂತರ ಬಂಗಾರದ ಮೇಲೆ ಮಿತಿ ಹೇರಲಾಗುವುದೆಂಬ ಸುದ್ದಿಗೆ ಬಾರೀ ಪ್ರಚಾರ ನೀಡಲಾಯಿತು. ಮಾಧ್ಯಮಗಳು ಪೈಪೋಟಿಗೆ ಬಿದ್ದವರಂತೆ ಜನರಲ್ಲಿ ಭಯ, ಆತಂಕ ಸೃಷ್ಟಿಸಿದರು. ಕಳೆದ ಒಂದು ವಾರದ ಹಿಂದೆ ಇದರ ಪುನರಾರ‍್ತನೆಯಾಯಿತು. ಕಾಳ ಧನಿಕರನ್ನು ಮಟ್ಟ ಹಾಕುವ ಉದ್ದೇಶದಿಂದ ವ್ಯಕ್ತಿಯು ಹೊಂದಬಹುದಾದ ಬಂಗಾರದ ಮೇಲೆ ಕೇಂದ್ರ ರ‍್ಕಾರ ಮಿತಿ ಹೇರುತ್ತದೆ, ತಪಾಸಣೆ ನಡೆಸುತ್ತದೆ. ಮುಂತಾದ ಸುದ್ದಿಗಳನ್ನು ಹರಿಬಿಡಲಾಯಿತು. ಭವಿಷ್ಯದ ಅನುವು , ಆಪತ್ತಿಗಾಗಿ ಚೂರು, ಪಾರು, ಬಂಗಾರ ಖರೀದಿಸಿ ಇಟ್ಟುಕೊಳ್ಳುವ ಜನಸಾಮಾನ್ಯರು ಪುನಃ ಗೊಂದಲಕ್ಕೊಳಗಾದರು. ನಾಳಿನ ಭದ್ರತೆ ಯಾರಿಗೂ ಇಲ್ಲ. ನಮ್ಮ ದೇಶದ ಸಂವಿಧಾನವಾಗಲೀ, ರ‍್ಕಾರಗಳಾಗಲೀ ಭವಿಷ್ಯದ ಬದುಕಿನ ನಿಶ್ಚಿತತೆಯ ಭರವಸೆ ನೀಡುವುದಿಲ್ಲ. ರ‍್ಥಾತ್ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಹಾಗೂ ಅವಲಂಬಿತರ ಬದುಕಿನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ರ‍್ಕಾರವನ್ನು ನಂಬಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿ ನಾಳಿನ ಅನುವು- ಆಪತ್ತಿಗಾಗಿ, ಔಷದೋಪಚಾರಕ್ಕಾಗಿ ಉಳಿತಾಯ ಮಾಡುವುದು ಅನಿವರ‍್ಯ. ಎಲ್ಲಿಯವರೆಗೆ ಸಮಾಜ ಮತ್ತು ರ‍್ಕಾರ, ವ್ಯಕ್ತಿಯ ಬದುಕಿನ ಭದ್ರತೆಯ ಭರವಸೆ ನೀಡುವುದಿಲ್ಲವೋ ಅಲ್ಲಿಯವರೆಗೂ ಅಭದ್ರತೆಯ ಭಾವದಿಂದ ಸಮಾಜ ಮತ್ತು ವ್ಯಕ್ತಿ ಬಳಲುತ್ತಾರೆ. ಭ್ರಷ್ಟಾಚಾರಕ್ಕೆ ಇದೂ ಒಂದು ಕಾರಣ. ಬ್ಯಾಂಕ್‍ಗಳಲ್ಲಿ ಇಡುವ ಠೇವಣಿಗೆ ಕೇಂದ್ರ ರ‍್ಕಾರ ಜಾರಿಗೆ ತಂದಿರುವ ಡಿಸಾಸಿಟ್ ಇನ್ಶುರೆನ್ಸ್ ಯೋಜನೆ ಇದೆ. ಇದರನ್ವಯ ಠೇವಣಿ ಮತ್ತು ಬಡ್ಡಿ ಸೇರಿ ಒಟ್ಟೂ ಒಂದು ಲಕ್ಷ ರೂಪಾಯಿಯವರೆಗೆ ಮಾತ್ರ ಇನ್ಶುರೆನ್ಸ್ ಅನ್ವಯವಾಗುತ್ತದೆ. ಮೂರು ದಶಕಗಳ ಹಿಂದೆ ನಿಗದಿಪಡಿಸಿದ ಮೊತ್ತ ಈಗಲೂ ಅಷ್ಟೇ ಇದೆ ಎನ್ನುವುದು ಇಂತಹ ಯೋಜನೆಗಳ ಅವಾಸ್ತವಿಕತೆ ಮತ್ತು ಅಪ್ರಸ್ತುತತೆಯನ್ನು ಎತ್ತಿ ತೋರಿಸುತ್ತದೆ. ಡಿಪಾಸಿಟ್ ಇನ್ಶುರೆನ್ಸ್ ಯೋಜನೆಯಡಿ ಠೇವಣಿಯ ಮರುಪಾವತಿಗಾಗಿ ಬೇಡಿಕೆ ಸಲ್ಲಿಸಬೇಕೆಂದರೆ ಸಂಬಂಧಿಸಿದ ಬ್ಯಾಂಕ್ ದಿವಾಳಿಯಾಗಿರಬೇಕು! ಆದಾಯಕರ ಇಲಾಖೆಯನ್ನು ಜನಸ್ನೇಹಿ ಯಾಗಿಸುವ ಬದಲಿಗೆ ಜನವಿರೋಧಿಯನ್ನಾಗಿಸಲಾಗಿದೆ. ಮಧ್ಯಮ ರ‍್ಗದವರಲ್ಲಿ ಭಯ ಹುಟ್ಟಿಸುವ ಇಲಾಖೆಯಂತೆ ಇದು ಕರ‍್ಯನರ‍್ವಹಿಸುತ್ತಿದೆ. ಜನಸಾಮಾನ್ಯರಿಗೆ ಸಿಗಬೇಕಾದ ಸಂಪನ್ಮೂಲಗಳ ಮೇಲಿನ ಹಕ್ಕು ಬೆರಳೆಣಿಕೆಯ ಉದ್ಯಮಪತಿಗಳ ಪಾಲಾಗುತ್ತಿದೆ. ಉಳ್ಳವರಿಗೆ ಅನುಕೂಲ ಮಾಡಿಕೊಡುವ ರೀತಿಯ ಕಾನೂನುಗಳ ರಚನೆ, ( ಕಾರ‍್ಪೋರೇಟ್ ವಲಯಕ್ಕೆ ಇತ್ತೀಚೆಗೆ ನೀಡಿರುವ ತೆರಿಗೆ ವಿನಾಯಿತಿ ಒಂದು ಉದಾಹರಣೆ) ಉಳ್ಳವರಿಗೆ ಕೊಳ್ಳೆಹೊಡೆಯುವ ಅವಕಾಶ ಸೃಷ್ಟಿ , ರ‍್ಕಾರದ ಅತಿಯಾದ ಹಸ್ತಕ್ಷೇಪಗಳಿಂದಾಗಿ ರ‍್ಥಿಕ ವ್ಯವಸ್ಥೆ ಶಿಥಿಲಗೊಳ್ಳುತ್ತಿದೆ. ಜನಸಾಮಾನ್ಯರು ಅದರಲ್ಲೂ ವಿಶೇಷವಾಗಿ ಮಧ್ಯಮ ರ‍್ಗದವರು ಭಯಭೀತರಾಗಿದ್ದಾರೆ. ಮೂರು ರ‍್ಷಗಳ ಹಿಂದೆ ರೂ. 500 ಮತ್ತು 1000 ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿ 2000 ರೂ ಮುಖಬೆಲೆಯ ನೋಟನ್ನು ಚಲಾವಣೆಗೆ ತಂದಾಗಲೇ ಪ್ರಧಾನಿಯವರ ಘೋಷಣೆಯ ಟೊಳ್ಳುತನ ಬಯಲಿಗೆ ಬಂದಿತ್ತು. ಆರ್‍ಬಿಐಗೆ ಜಮಾ ಆಗುತ್ತಿದ್ದ ರದ್ದಾದ ನೋಟುಗಳ ಮೊತ್ತವನ್ನು ಬಹಿರಂಗಪಡಿಸಲು ಹಿಂಜರಿಯುತ್ತಿದ್ದ ಆರ್‍ಬಿಐ ಅಂತೂ ಅಗಸ್ಟ್ 2017 ರ ಅಂತ್ಯದಲ್ಲಿ ಬಿಡುಗಡೆ ಮಾಡಿದ ಅಂಕಿಅಂಶದಂತೆ 98.96% ನೋಟುಗಳು ವಾಪಾಸು ಬಂದಿದ್ದವು. 29-08-18 ರಂದು ಆರ್‍ಬಿಐ ನೀಡಿದ ಮಾಹಿತಿಯಂತೆ ಚಲಾವಣೆಯಲ್ಲಿದ್ದ 500, 1000 ರೂ. ನೋಟುಗಳ ಪೈಕಿ ರೂ. 15.42 ಲಕ್ಷ ಕೋಟಿ ರೂಪಾಯಿಗಳಲ್ಲಿ 15.31 ಲಕ್ಷ ಕೋಟಿ ರೂ.ಗಳು ( 99.35%) ವಾಪಾಸು ಬಂದಿತ್ತು. 10,720 ಕೋಟಿ ರೂಪಾಯಿ ಮೌಲ್ಯದ ನೋಟುಗಳು ವಾಪಾಸು ಬರದೇ ಉಳಿದವು. ಹಾಗಾದರೆ ಭಾರತದಲ್ಲಿ ಕಪ್ಪು ಹಣ ಇರಲೇ ಇಲ್ಲವೇ ಅಥವಾ ಈಗ ಇಲ್ಲವೋ? ದೊಡ್ಡ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ್ದು ತಪ್ಪೇ? ಎಂಬಂತಹ ಪ್ರಶ್ನೆಗಳು ಉದ್ಭವವಾಗುವುದು ಸಹಜ. ನೋಟುಗಳ ರದ್ದತಿ ಭಾರತಕ್ಕೆ ಹೊಸದಲ್ಲ. 1946 ರಲ್ಲಿಯೇ ರೂ. 1000, 5000 , 10,000 ಮುಖಬೆಲೆಯ ನೋಟುಗಳನ್ನು ರದ್ದುಪಡಿಸಲಾಗಿತ್ತು. ಎರಡನೇ ಮಹಾಯುದ್ಧದ ಸಮಯದಲ್ಲಿ ಕಾಳಸಂತೆ ಕೋರರು ಕಪ್ಪು ಹಣ ಸೇರಿಸಿಟ್ಟಿದ್ದಾರೆಂಬ ಕಾರಣಕ್ಕೆ ಕ್ರಮ ಕೈಗೊಳ್ಳಲಾಗಿತ್ತು. ಈ ಮುಖಬೆಲೆಯ ನೋಟುಗಳನ್ನು 1954 ರಲ್ಲಿ ಪುನಃ ಚಾಲನೆಗೆ ತರಲಾಯಿತು. 1978 ರಲ್ಲಿ ಇನ್ನೊಮ್ಮೆ ಈ ನೋಟುಗಳನ್ನು ರದ್ದುಪಡಿಸಲಾಯಿತು. ಆಗ ಕೂಡಾ ಕಪ್ಪು ಹಣ ನಿಯಂತ್ರಿಸುವ ಕಾರಣವನ್ನೇ ನೀಡಲಾಗಿತ್ತು. 1978 ರಲ್ಲಿ ದೊಡ್ಡ ಮುಖಬೆಲೆಯ ನೋಟುಗಳು ಶ್ರೀಮಂತರ ಕೈಯಲ್ಲಿ ಮಾತ್ರ ಇರುತ್ತಿದ್ದವು. ದೇಶದ ಹೆಚ್ಚಿನ ನಾಗರಿಕರು ರೂ. ಐದು , ಹತ್ತು ಸಾವಿರ ಮುಖಬೆಲೆಯ ನೋಟುಗಳನ್ನು ನೋಡಿಯೇ ಇರಲಿಲ್ಲ. ಆದರೆ 2016 ರಲ್ಲಿ ಜನಸಾಮಾನ್ಯರ ಕೈಯಲ್ಲಿ ಓಡಾಡುತ್ತಿದ್ದುದೇ 500, 1000 ರೂ. ನೋಟುಗಳು. ತಾವು ನ್ಯಾಯಯುತವಾಗಿ ಗಳಿಸಿದ ರದ್ದಾದ ನೋಟುಗಳನ್ನು ದಿನಕ್ಕೆ ನಾಲ್ಕು ಸಾವಿರ ರೂಪಾಯಿ ಬದಲಾಯಿಸಲು ಜನಸಾಮಾನ್ಯರು ಪರದಾಡುತ್ತಿರುವಾಗ ಶ್ರೀಮಂತರು ಮತ್ತು ಪ್ರಭಾವಿ ಕುಳಗಳು ಕೋಟಿಗಳ ಲೆಕ್ಕದಲ್ಲಿ ಹೊಸ 2000 ರೂ. ನೋಟುಗಳನ್ನು ಪಡೆಯುತ್ತಿದ್ದರು. ಕೆಲವು ಬ್ಯಾಂಕ್‍ಗಳಲ್ಲಿ ಭ್ರಷ್ಟಾಚಾರ ನಡೆದಿದೆಯೆಂದು ಆಪಾದಿಸಿ, ಕೆಲವು ಅಧಿಕಾರಿಗಳನ್ನು ಅಮಾನತು ಮಾಡಲಾಯಿತು. ಆರ್.ಬಿ.ಐನ ಕೆಲ ಅಧಿಕಾರಿಗಳು ಶಾಮೀಲಾಗಿದ್ದು ಬಹಿರಂಗವಾಯಿತು. ಆದರೆ ಅಷ್ಟರೊಳಗೆ ಧನಿಕರ ಕಾಳ ಸಂಪತ್ತು ಬಿಳಿಯಾಗಿ ಬಿಟ್ಟಿತ್ತು. ಬಯಲಿಗೆ ಬಂದ ಭ್ರಷ್ಟಾಚಾರದ ಪ್ರಕರಣಗಳು ಬೆರಳೆಣಿಕೆಯಷ್ಟು ಮಾತ್ರ. ನೋಟು ರದ್ದತಿಗಾಗಿ 10 ತಿಂಗಳಿನಿಂದಲೂ ಪರ‍್ವ ತಯಾರಿ ನಡೆಸಿದ್ದ ತಜ್ಞರ ತಂಡಕ್ಕೆ ಇಂತಹ ಸರಳ ವಿಚಾರ ಗೊತ್ತಿರಲಿಲ್ಲವೆಂದು ನಂಬುವುದು ಕಷ್ಟ. ಇದರೊಟ್ಟಿಗೇ ಬೆರಳೆಣಿಕೆಯ ದೊಡ್ಡ ಕುಳಗಳು, ಸಾವಿರ ಕೋಟಿಗಳ ಲೆಕ್ಕದಲ್ಲಿ ರದ್ದಾದ ನೋಟುಗಳನ್ನು ಕಡಿಮೆ ಬೆಲೆಗೆ ಖರೀದಿಸಿ, ಡಾಲರ್ ಖರೀದಿಸುವ ಮೂಲಕ ಹಾಗೂ ತಮ್ಮ ಛಾಯಾ ಕಂಪನಿಗಳ ಹೆಸರಿನಲ್ಲಿ ವಿದೇಶೀ ಹೂಡಿಕೆಯ ನಾಟಕವಾಡಿದವು. ಆ 50 ದಿನಗಳಲ್ಲಿ ಡಾಲರ್ ಎದುರು ರೂಪಾಯಿಯ ಏರಳಿತವನ್ನು ಗಮನಿಸಿ, ಡಾಲರ್ ಖರೀದಿಸಿದವರ ಹಾಗೂ ವಿದೇಶೀ ಬಂಡವಾಳದ ಒಳಹರಿವಿನ ಮೂಲವನ್ನು ತಪಾಸಣೆ ಮಾಡಿದರೆ, ಸತ್ಯ ಹೊರಬರುತ್ತದೆ. ಇಂದಿನ ಕೇಂದ್ರ ರ‍್ಕಾರಕ್ಕೆ ಇದನ್ನು ಕೈಗೊಳ್ಳುವ ಧರ‍್ಯವಿಲ್ಲ. ರೂ. 500 ಮತ್ತು 1000 ಮುಖಬೆಲೆಯ ನೋಟುಗಳನ್ನು ರದ್ದುಪಡಿಸುವುದರಿಂದ ಕಪ್ಪು ಹಣ ಮತ್ತು ಲೆಕ್ಕ ತಪ್ಪಿಸಿದ ಸಂಪತ್ತಿನ ಸೃಷ್ಟಿಯನ್ನು ನಿಯಂತ್ರಿಸಲು ಸಾಧ್ಯವೆಂದು ನಾನು ಇದೇ ಅಂಕಣದಲ್ಲಿ ( 27-10-2016) ಪ್ರತಿಪಾದಿಸಿದ್ದೆ. ದೊಡ್ಡ ನೋಟುಗಳನ್ನು ಭೂಮಿ ಖರೀದಿ, ಬಂಗಾರ ಖರೀದಿಗಳಲ್ಲಿ ಬಳಸಿ ಕಪ್ಪು ಸಂಪತ್ತು ಸೃಷ್ಟಿಯಾಗುವದಕ್ಕೆ ಇನ್ನಷ್ಟು ಸಹಾಯಕವಾಗಲು 2000 ದ ನೋಟು ಬಂತೆಂದು 17-11-16 ರಂದು ವಿವರಿಸಿದ್ದೆ. ನೋಟು ರದ್ದತಿಯನ್ನು ಮಾಡಿದ ರೀತಿ, ನಡೆಸಿದ ವಿಧಾನಗಳನ್ನು ಗಮನಿಸಿದಾಗ ಇದು ರ‍್ಕಾರ ಪೋಷಿತ, ಸಂಘಟಿತ ಲೂಟಿ, ಕಾನೂನಿನ ರಕ್ಷಣೆಯಲ್ಲಿ ಜನಸಾಮಾನ್ಯರ ಸುಲಿಗೆ ಎಂದು ಹಲವರು ಮಾಡಿರುವ ಟೀಕೆಯಲ್ಲಿ ತಪ್ಪಿಲ್ಲವೆನಿಸುತ್ತದೆ. ನೋಟು ರದ್ದತಿಯಾದಾಗಲೇ ಹಲವು ರ‍್ಥಿಕ ತಜ್ಞರು ರ‍್ಥಿಕ ಹಿಂಜರಿತದ ಮುನ್ಸೂಚನೆ ನೀಡಿದ್ದರು. ತಮ್ಮ ಆಪ್ತ ವಲಯದ ಹಿತಾಸಕ್ತಿಯನ್ನು ಮಾತ್ರ ಗಮನದಲ್ಲಿಟ್ಟುಕೊಂಡ ಪ್ರಧಾನಿ ಮತ್ತು ಅವರ ತಂಡದವರು ಇಂತಹ ಸಲಹೆ, ಮುನ್ಸೂಚನೆಗಳಿಗೆ ಬೆಲೆ ನೀಡಲೇ ಇಲ್ಲ. ಬದಲಿಗೆ ದೇಶದ ಮಧ್ಯಮ ರ‍್ಗದವರನ್ನೂ ಬೆದರಿಸುವ ಹೊಸ ಹೊಸ ತಂತ್ರಗಳನ್ನು ಬಳಸುತ್ತಿದ್ದಾರೆ. ಮಧ್ಯಮ ರ‍್ಗದವರ ಬಹುನಿರೀಕ್ಷಿತ ಆದಾಯ ತೆರಿಗೆಯ ಮಿತಿ ಏರಿಸುವುದನ್ನು ಮುಂದೂಡುವ ಸಲುವಾಗಿ ಬಂಗಾರದ ನಿಯಂತ್ರಣದ ನಾಟಕ ನಡೆಸಲಾಗುತ್ತಿದೆಯೆಂಬ ಅಭಿಪ್ರಾಯವನ್ನು ತಳ್ಳಿ ಹಾಕಲಾಗದು. ನೋಟು ರದ್ದತಿಯ ನಂತರದ ಮೂರು ರ‍್ಷಗಳಲ್ಲಿ ಆಗಿರುವ ಉದ್ಯೋಗ ನಷ್ಟ, ರ‍್ಥಿಕ ಹಿಂಜರಿತ, ಅಂದಿನ ನರ‍್ಣಯ ಸರಿ ಇರಲಿಲ್ಲವೆಂಬುದನ್ನು ಸೂಚಿಸುತ್ತದೆ. ಚಲಾವಣೆಗೆ ಬಂದಿರುವ ಹೊಸ

ಆರ್ಥಿಕತೆ. Read Post »

ಇತರೆ

ವರ್ತಮಾನ

“ಓಟದಿಂದ ಕಲಿಯುವ ಆಡಳಿತದ ಪಾಠ” ಗಜಾನನ ಮಹಾಲೆ  ಓಟದ ಸ್ಪರ್ಧೆಯಲ್ಲಿ ಬೇರೆ ಬೇರೆ ರೀತಿಯ ಓಟಗಳಿರುತ್ತವೆ. 5000 ಮೀಟರ್‌ ಹಾಗೂ 100 ಮೀಟರ್‌ ಓಟಗಳ ಎರಡು ವಿಭಾಗದ ಮಧ್ಯೆ ಬಹಳಷ್ಟು ವ್ಯತ್ಯಾಸವಿರುತ್ತದೆ. ವ್ಯತ್ಯಾಸ ಓಡುವ ದೂರದ ಬಗ್ಗೆ ಮಾತ್ರವಲ್ಲ. ಓಡುವ ವಿಧಾನದಲ್ಲಿಯೂ ವ್ಯತ್ಯಾಸವಿದ್ದು ಸರಿಯಾದ ವಿಧಾನದಲ್ಲಿ ಓಡಿದ ಸ್ಪರ್ಧಿ ಮೊದಲಿಗನಾಗುವ ಸಂಭವ ಹೆಚ್ಚಿರುತ್ತದೆ. 100 ಮೀಟರ್ ಓಟದಲ್ಲಿ ಪ್ರಾರಂಭದಿಂದ ಅತ್ಯಂತ ವೇಗವಾಗಿ ಓಡಿದವರು ಮತ್ತು ಆ ಸಾಮರ್ಥ್ಯವಿದ್ದವರು ಪ್ರಥಮ ಸ್ಥಾನ ಗಳಿಸುತ್ತಾರೆ. 5000 ಮೀಟರ್ ಓಟದಲ್ಲಿ ಈ ವಿಧಾನ ಪ್ರಯೋಜನಕಾರಿಯಲ್ಲ. ಈ ವಿಭಾಗದಲ್ಲಿ ಮೊದಲು ನಿಧಾನವಾಗಿ ಪ್ರಾರಂಭಿಸಿ, ನಿರಂತರವಾಗಿ ಓಡುತ್ತಿದ್ದು,ಗುರಿಗೆ ಸಮೀಪ ಬಂದಾಗ ವೇಗವನ್ನು ಹೆಚ್ಚು ಮಾಡಿ ಗುರಿ ತಲುಪಲು ಪ್ರಯತ್ನಿಸುವವರು ಯಶಸ್ವಿಯಾಗುತ್ತಾರೆ. 100 ಮೀಟರ್ ಓಟದಲ್ಲಿ ಓಡಿದಂತೆ ಮೊದಲೇ ವೇಗವಾಗಿ ಓಡಲು ಪ್ರಾರಂಭಿಸಿದರೆ, ಮಧ್ಯದಲ್ಲಿಯೇ ಸುಸ್ತಾಗಿ ಹೊರ ಹೋಗುವ ಸಂಭವ ಹೆಚ್ಚು. ಒಂದು ರಾಜ್ಯದ ಅಥವಾ ಒಂದು ದೇಶದ ಆಡಳಿತ ಚುಕ್ಕಾಣಿ ಹಿಡಿದವರಿಗೆ ಈ ಓಟದ ಸ್ಪರ್ಧೆಯ ಟೆಕ್ನಿಕ್ನ ಅರಿವಿದ್ದರೆ ತಮ್ಮ ಗುರಿ ತಲುಪುವುದರಲ್ಲಿ ಯಶಸ್ವಿಯಾಗುತ್ತಾರೆ. ದೇಶದ ಅಥವಾ ರಾಜ್ಯದ ಪ್ರಗತಿಯ ದೃಷ್ಟಿಯಿಂದ ಪ್ರಾರಂಭಿಸುವ ಯೋಜನೆಗಳು, ಜಾರಿಗೊಳಿಸುವ ಅಭಿವೃದ್ಧಿ ಕಾರ್ಯಗಳು,ಆಡಳಿತದ ವಿವಿಧ ಹಂತಗಳಲ್ಲಿ ಮಾಡುವ ಬದಲಾವಣೆಗಳು, ಕಾನೂನಿನಲ್ಲಿ ಅಥವಾ ಸಂವಿಧಾನದಲ್ಲಿ ಮಾಡುವ ತಿದ್ದುಪಡಿಗಳು ಇವು ಯಶಸ್ವಿಯಾಗಬೇಕಾದರೆ, ಓಟದ ಟೆಕ್ನಿಕ್ ನ ಅರಿವಿದ್ದರೆ ಯಶಸ್ಸು ಸಾಧ್ಯ.  ಯಾವುದನ್ನು ವೇಗವಾಗಿ ಮಾಡಬೇಕು ಹಾಗೂ ಯಾವುದನ್ನು ನಿಧಾನವಾಗಿ ಪ್ರಾರಂಭಿಸಿ ಅನಂತರ ವೇಗವನ್ನು ಹೆಚ್ಚಿಸಬೇಕು ಎಂಬ ಅರಿವಿಲ್ಲದಿದ್ದರೆ, ಅವಸರವೇ ಅಪಘಾತಕ್ಕೆ ಕಾರಣ ಎಂಬ ಮಾತು ಆಡಳಿತದ ವಿಷಯದಲ್ಲಿಯೂ ಅನ್ವಯಿಸುತ್ತದೆ… *********************************************************

ವರ್ತಮಾನ Read Post »

ಇತರೆ

ಶಿಕ್ಷಣ

ಶಿಕ್ಷಣದ ಸವಾಲುಗಳ ಬೆಟ್ಟು ಯಾರ ಕಡೆಗೆ? ಶೃತಿ ಮೇಲಿಸೀಮೆ ಶಿಕ್ಷಣ ಎನ್ನುವುದು ಸಾಮಾಜಿಕ ಸಂರಚನೆಯಲ್ಲಿ ಮಹತ್ವದ ಪರಿವರ್ತನೆ ತರುವ ದಿವ್ಯಾಸ್ತ್ರವಾಗಿದೆ. ಈ ಶಿಕ್ಷಣವು ಮುಂದಿನ ಪೀಳಿಗೆಗೆ ಹಿಂದಿನ ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ವಾಸ್ತವಿಕ ಮಾಹಿತಿಗಳನ್ನು ನೀಡುತ್ತಾ, ಯುವ ಪೀಳಿಗೆಯಲ್ಲಿ ಉತ್ತಮ ಆಲೋಚನೆ, ಭಾವನೆ, ನಿರಂತರತೆಯನ್ನು ಬೆಳೆಸುವ ಗುರುತರ ಜವಾಬ್ದಾರಿಯನ್ನು ಹೊತ್ತಿದೆ. ಪೂರ್ವ ಭಾರತದಲ್ಲಿ ವಿದ್ಯಾವಂತರಿಗಿಂತ ಹೆಚ್ಚಾಗಿ ಜ್ಞಾನವಂತರು,ಸುಶಿಕ್ಷಿತರು ಇದ್ದರು. ಪ್ರಸ್ತುತ ಎಷ್ಟೇ ಪದವಿಗಳನ್ನು ಹೊತ್ತಿದ್ದರೂ ಅವರು ಪಡೆದ ವಿದ್ಯೆ ಅವರಿಗೆ ವಿನಯವನ್ನು ನೀಡುತ್ತಿಲ್ಲ . ‘ಶಿಕ್ಷಣ’ ಎಂದರೇನು? ಬೀದಿಗೊಂದು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ, ಕಡ್ಡಾಯ ಶಿಕ್ಷಣವೆಂದು ಶಿಕ್ಷಣ ಕಲಿಯುವವರ ಪ್ರಮಾಣ ಹೆಚ್ಚಿಸಿ, ಹಣವನ್ನು ಕಿತ್ತು ಮಾರ್ಕ್ಸ್ ಕಾರ್ಡನಲ್ಲಿ ಡಿಗ್ರಿಗಳನ್ನು ಕೊಟ್ಟು ,ಸಂಬಳಕ್ಕಾಗಿ ವೃತ್ತಿ ಪಡೆಯುವಷ್ಟು ಸಾಕ್ಷರರನ್ನಾಗಿ ಮಾಡುವುದೇ? ಇಲ್ಲಾ ಅಲ್ಲವೇ ? ಯುವ ಪೀಳಿಗೆಯನ್ನು ವಿದ್ಯಾವಂತರಾಗಿಸುವ ಜೊತೆಗೆ ಜ್ವಲಂತ ಸವಾಲುಗಳನ್ನು ಅರಿತು, ತಮ್ಮ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಲು,ಒದಗಿದ ಸವಾಲುಗಳನ್ನು ಎದುರಿಸಲು ಅನುವಾಗುವ ಸಂರಕ್ಷಣಾತ್ಮಕವಾದ ಜ್ಞಾನವನ್ನೂ, ವಿಚಾರವಂತಿಕೆಯನ್ನು ಬೆಳೆಸುವುದಾಗಿದೆ. ಆಗಿನ ಗುರುಕುಲ ಪದ್ದತಿಯು ಶಿಕ್ಷಣಕ್ಕಿಂತ ಇಂದಿನ ಶಿಕ್ಷಣವು ವ್ಯಾಪಕವಾಗಿ ಬೆಳದಿದೆ. ಈ ವ್ಯಾಪಕತೆ ಅವ್ಯವಸ್ಥಿತವಾಗಿ ತನ್ನ ರೆಂಬೆ ಕೊಂಬೆಗಳನ್ನು ಚಾಚಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಅನೇಕ ಸವಾಲುಗಳು ನಮ್ಮೆದುರು ನಾಯಿಕೊಡೆಯಂತೆ ಬೆಳೆಯುತ್ತಿವೆ. ಶಿಕ್ಷಣ ವ್ಯವಸ್ಥೆಯು ಎದುರಿಸುತ್ತಿರುವ ಸವಾಲುಗಳಿಗೆ ಸರ್ಜರಿ ಮಾಡಲೇ ಬೇಕಾದ ತುರ್ತು ಇದೆ. ಯಾವುದೇ ಶಾಲೆಯಿರಲಿ ಅಲ್ಲಿರುವ ಮೂಲ ಸೌಲಭ್ಯಗಳನ್ನು ಹೇಗೆ ಉಪಯೋಗಿಸಿಕೊಳ್ಳಲಾಗಿದೆ,ಅವುಗಳ ಬಳಕೆಯನ್ನು ದಿನನಿತ್ಯದ ಬದುಕಲ್ಲಿ ಹೇಗೆ ಮಕ್ಕಳಲ್ಲಿ ರೂಢಿಸಿಕೊಳ್ಳಲಾಗಿದೆ ಎಂಬುದು ಮುಖ್ಯ. ಕೆಲವು ಕಡೆ ಕುಡಿಯುವ ನೀರಿನ ಸೌಲಭ್ಯಗಳಿದ್ದರೂ,ನೀರಿನ ಟ್ಯಾಂಕುಗಳಿದ್ದರೂ,ಅವುಗಳ ಶುದ್ಧತೆ ಎಷ್ಟರಮಟ್ಟಿಗಿದೆ? ಶಾಲೆಗೆ ಕಾಂಪೋಂಡ್ ಇದ್ದರಾಯಿತೇ!? ಆಟದ ಮೈದಾನ ವಿದ್ದರಾಯಿತೇ? ಕೇವಲ ಮೂಲಭೂತ ಸೌಲಭ್ಯಗಳ ಕೊರತೆ ಇದೆ ಎಂದು ಬೆಟ್ಟು ಮಾಡಿದರೆ ಸಾಲದು ಉಳಿದ ಸೌಲಭ್ಯದ ಬಳಕೆಯ ಮೇಲೂ ಬೆಳಕು ಬೀರಬೇಕಿದೆ. ಶಿಕ್ಷಕರೆಂದರೆ ಸಾಕು ‘ಗಂಟೆ ಹೊಡಿ, ಸಂಬಳ ತಗೋ’ ಎನ್ನುವ ಮಾತಿದೆ. ಇದು ಎಷ್ಟರಮಟ್ಟಿಗೆ ಸತ್ಯವೋ ತಿಳಿಯದು ಆದರೆ ಇಂದಿನ ಶಿಕ್ಷಕ ಸಮುದಾಯವು ಶಿಕ್ಷಣ ನೀಡುವುದನ್ನು ಒಂದು ಸಂಬಳ ದೊರೆಯುವ ಕೆಲಸವನ್ನಾಗಿಯಷ್ಟೇ ಮಾಡುತ್ತಿದ್ದಾರೆ. ಶಿಕ್ಷಕರಾಗುವವರೆಗೆ ಏನೆಲ್ಲಾ ಕಷ್ಟಪಟ್ಟು ಸ್ಪರ್ಧಾತ್ಮಕವಾಗಿ ಓದಿರುತ್ತಾರೆ. ಆದರೆ, ಶಿಕ್ಷಕರಾಗಿ ಸೇರಿದ ನಂತರ ನಮ್ಮ ವಿದ್ಯಾರ್ಥಿಗಳು ಸರಿಯಾಗಿ ಕಲಿಯುತ್ತಿಲ್ಲ, ತುಂಟಾಟ ಜಾಸ್ತಿ, ಶಾಲೆಗೆ ಸರಿಯಾಗಿ ಬರುತ್ತಿಲ್ಲ, ಶಾಲೆಯಲ್ಲಿ ಅದು ಇಲ್ಲ ಇದು ಇಲ್ಲ. ಅಬ್ಬಬ್ಬಾ! ಇಂತಹ ಸಾಲು ಸಾಲು ಸಬೂಬುಗಳನ್ನು ನೀಡಿ ತಮ್ಮ ಕರ್ತವ್ಯಗಳಿಂದ ನುಣಿಚಿಕೊಂಡು ತಮ್ಮ ಸುತ್ತಾ ರಕ್ಷಣಾತಂತ್ರ ಹೆಣೆದುಕೊಂಡು ಬಿಡುತ್ತಾರೆ.ಇಂತಹ ಸವಾಲುಗಳನ್ನು ಸ್ವೀಕರಿಸಿ ಮಗುವನ್ನು ಕಲಿಕೆಯಲ್ಲಿ ತೊಡಗುವಂತೆ ಹೇಗೆ ಮಾಡವುದು ಎಂದು ಪ್ರಾಥಮಿಕವಾಗಿಯು ಚಿಂತನೆ ನೆಡೆಸುವುದಿಲ್ಲ. ಇನ್ನೂ ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ತರುವ ಸವಾಲಿನ ಪ್ರಮುಖ ಕಾರಣ ‘ಪೋಷಕರ ನಿರಾಸಕ್ತಿ’ ಆಶ್ಚರ್ಯದಿಂದ ನೋಡದಿರಿ, ಶಾಲೆಗೆ ಕಳಿಸಲು ನಿರಾಸಕ್ತಿಯಂತೆ! ಇಡೀ ಸಮಾಜವೇ, ಬೆಳಗ್ಗೆ ಎದ್ದು ಮಕ್ಕಳಿಗೆ ಸ್ನಾನ ಮಾಡಿಸು, ಸಮವಸ್ತ್ರ ಹಾಕು, ಶಾಲೆಗೆ ಕಳುಹಿಸುವುದೇ ತಮ್ಮ ಬೆಳಗಿನ ಕರ್ತವ್ಯವೆನ್ನುವಂತೆ ಮಾಡುತ್ತಿರುವಾಗ ಪೋಷಕರ ನಿರಾಸಕ್ತಿಗೆ ಸಮಯವೆಲ್ಲಿದೆ ಹೇಳಿ? ಬಡತನ ವಿರಬಹುದು,ಮಕ್ಕಳಿಗೆ ಉಚಿತವಾಗಿ ಸಿಗುವ ಸೌಲಭ್ಯಗಳಿಂದ ಅವರನ್ನು ವಂಚಿಸುವ ಹಕ್ಕು ಪೋಷಕರಿಗಿಲ್ಲ. ಆದರೆ ಎಷ್ಟೋ ಪ್ರಕರಣಗಳಲ್ಲಿ ಮಗುವಿಗೆ ಕಲಿಯಲ್ಲಿ ಆಸಕ್ತಿ ಮೂಡುತಿಲ್ಲ. ‘ಕುದರೆಯನ್ನ ಕೆರೆವರೆಗೂ ಕರೆದುಕೊಂಡು ಬರಬಹುದು ಕೆರೆನೀರು ಕುಡಿಸೋಕೆ ಆಗುತ್ತಾ’,ಹಾಗೆಯೇ ಮಕ್ಕಳನ್ನು ಶಾಲೆಗೆ ಕರೆತರಬಹುದೇ ವಿನಃ ಹೆಚ್ಚಿನ ಆಸ್ಥೆ ವಹಿಸಿ ಶಾಲೆಯಲ್ಲಿ ಆ ಮಗುವನ್ನೇ ನೋಡಿಕೊಳ್ಳುವುದು ಸಾಧ್ಯವಿಲ್ಲ. ಇಂತಹ ವಿದ್ಯಾರ್ಥಿಗಳಿಗೆ ಸರ್ಕಾರ ವೃತ್ತಿ ಆಧಾರಿತವಾದ ಅಥವಾ ಕೌಶಲ್ಯ ಭರಿತ ಶಿಕ್ಷಣವನ್ನು ಪ್ರಾಥಮಿಕ ಹಂತದಿಂದಲೇ ಒದಗಿಸಿದ್ದೇ ಆದಲ್ಲಿ ಪೋಷಕರಿಗೂ, ಮಕ್ಕಳಿಗೂ ಅಔಪಚಾರಿಕ ಶಿಕ್ಷಣದ ನಿರಾಸಕ್ತಿ ಹೋಗಲಾಡಿಸ ಬಹುದಲ್ಲವೇ? ಎಷ್ಟೋ ಶಿಕ್ಷಕರು ಶಾಲೆಗಳಲ್ಲಿ ನಮಗೆ ಹೆಚ್ಚಿವರಿಯಾಗಿ ಜನಗಣತಿ,ಚುನಾವಣಾ ಕರ್ತವ್ಯ, ಮಗುವಿನ ವಿದ್ಯಾರ್ಥಿ ವೇತನ, ಆಧಾರ್ ಕಾರ್ಡ್, ಪಾಸ್ ಬುಕ್ ಮಾಡಿಸುವುದು ಸಾಲದಕ್ಕೆ ಇಲಾಖೆಗೆ ಮಾಹಿತಿ ನೀಡುವುದು, ವರದಿ ತಯಾರಿಸುವುದು ,ಬಿಸಿಯೂಟ ಹೀಗೆ ಸಮಯದ ವ್ಯರ್ಥವಾಗುತ್ತಿರುವುದರ ಬಗ್ಗೆ ದೂರುಗಳು ನೀಡುತ್ತಿರುತ್ತಾರೆ, ಆದರೇ ಎಷ್ಟು ಜನ ಶಿಕ್ಷಕರು ಶಾಲಾ ಸಮಯವನ್ನು ಶಾಲೆಗಾಗಿ ,ಮಕ್ಕಳಿಗಾಗಿ ಮೀಸಲಿಟ್ಟಿದ್ದಾರೆ? ಶಾಲೆಗೆ ಸಮಯಕ್ಕೆ ಸರಿಯಾಗಿ ಹಾಜರಿರುತ್ತಾರೆಯೇ? ಶಾಲಾ ವಿಶೇಷ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆಯೇ? ಪ್ರತಿ ವರ್ಷ ಶೈಕ್ಷಣಿಕ ಪ್ರಗತಿಯ ಬಗ್ಗೆ ಬೊಬ್ಬೆ ಹೊಡೆಯುವರು ತಮ್ಮ ಬೋಧನಾ ಕೌಶಲ್ಯಗಳಲ್ಲಿ ಮಾರ್ಪಾಡುಗಳನ್ನು ಮಾಡಿಕೊಳ್ಳುತ್ತಿದ್ದಾರೆಯೇ? ಎಂಬುದನ್ನೂ ಗಮನಿಸಬೇಕಿದೆ. ಗುಣಮಟ್ಟದ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುವ ಧಾವಂತದಲ್ಲಿ ದಿನಕ್ಕೊಂದು ಹೊಸ ನಿಯಮಗಳನ್ನು ತರುತ್ತಿರುವುದಲ್ಲದೆ, ಅನಿಯಮಿತ ನೇಮಕಾತಿಯಿಂದಾಗಿ ಎಲ್ಲಾ ಹಂತದಲ್ಲೂ ಭ್ರಷ್ಠತೆಗೆ ಮಣೆ ಹಾಕುತ್ತಿದೆ. ನೇಮಕವಾದ ಶಿಕ್ಷಕರು ವಿಷಯವಾರುವಾಗಿರದೆ ಮಕ್ಕಳ ಅನುಪಾತಕ್ಕೆ ಅನುಗುಣವಾಗಿದೆ.ಸಾಲದಕ್ಕೆ ದೈಹಿಕ ಶಿಕ್ಷಣ, ಕಲಾ ಶಿಕ್ಷಕರು, ಕಂಪ್ಯೂಟರ್ ಶಿಕ್ಷಣ ಇವುಗಳು ಕೇವಲ ಅಂಕಪಟ್ಟಿ ವಹಿಯ ದಾಖಲೆಗೆ ಸೀಮಿತವಾಗಿಯೇ ಉಳಿದಂತಿದ್ದು ಈ ವಿಷಯದ ಶಿಕ್ಷಕರ ನೇಮಕ ಕನ್ನಡಿಯೊಳಗಿನ ಗಂಟಂತಾಗಿದೆ. ಇನ್ನೂ ಶಿಕ್ಷರ ವರ್ಗಾವಣೆ ರಾಜ್ಯಾದ್ಯಂತ ಸುದ್ದಿಯಲ್ಲಿದ್ದ,ಸುದ್ದಿಯಲ್ಲಿರುವ ಸಂಗತಿಯಾಗಿದೆ. ನಿರ್ದಿಷ್ಟ ನಿಯಮ ನಿರೂಪಿಸಿ, ನಿಯಮಿತವಾಗಿ ಕ್ರಮಗಳನ್ನು ಕೈಗೊಂಡಿದ್ದೇ ಆದಲ್ಲಿ, ತನು ಮನ ಸಮರ್ಪಣಾ ಭಾವದಿಂದ ಕೆಲವಾರು ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಾರೆ. ಇದೆಲ್ಲದರ ಮಧ್ಯೆ ಮಾಹಿತಿ ತಂತ್ರಜ್ಞಾನದ, ಜಾಗತೀಕರಣದ, ಓಟದ ಜೊತೆ ಜೊತೆಗೆ ಗುಣಾತ್ಮಕ ಶಿಕ್ಷಣ ನೀಡುವ ಗುರುತರ ಜವಾಬ್ದಾರಿ ಹೊತ್ತ ಶಿಕ್ಷಣ ವ್ಯವಸ್ಥೆ ಭಾರಕ್ಕೆ ಬಾಗಿದೆ. ಒಟ್ಟಿನಲ್ಲಿ ಶಿಕ್ಷಣ ಎನ್ನುವುದು ಎಲ್ಲಕ್ಕಿಂತ ಭಿನ್ನ ಮತ್ತು ವಿಶಾಲ ವ್ಯಾಪ್ತಿ ಹೊಂದಿರುವ ವ್ಯವಸ್ಥೆ .ಭಾರತದ ಭವಿಷ್ಯ ತರಗತಿ ಕೋಣೆಗಳಲ್ಲಿ ಮೂಲೆಗುಂಪಾಗದೆ, ನ್ಯೂನತೆಗಳೊಂದಿಗೆ ಬೆಳೆದರೂ, ಕೇಸರಲ್ಲಿ ಬೆಳೆದ ಕಮಲದಂತೆ ತನ್ನ ಪ್ರಾಮುಖ್ಯತೆ ಗಳಿಸಿ ಉಳಿಸಿಕೊಳ್ಳಬೇಕಿದೆ. ******************************************************************* ಪರಿಚಯ: ಶೃತಿ ಮೇಲಿಸೀಮೆ, ಹವ್ಯಾಸಿ ಬರಹಗಾರರು. ಗೆಣಿಕೆಹಾಳು( ಪೋಸ್ಟ್), ಕುರುಗೋಡು ತಾಲೂಕು, ಬಳ್ಳಾರಿ ಜಿಲ್ಲೆ

ಶಿಕ್ಷಣ Read Post »

You cannot copy content of this page

Scroll to Top