ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಲೇಖನ

ಆಧ್ಯಾತ್ಮಕ್ಕೂ, ಅರ್ಥಶಾಸ್ತ್ರಕ್ಕೂ ಬಿಡಲಾರದ ನಂಟು….. ಗಣೇಶ ಭಟ್ ಶಿರಸಿ . ಆಧ್ಯಾತ್ಮದ ವಿಚಾರಗಳನ್ನು ಚರ್ಚಿಸುವಾಗ ದೈನಂದಿನ ಬದುಕಿನ ವಿಚಾರಗಳ ಕುರಿತು ಹೇಳುವದು, ಅರ್ಥಶಾಸ್ತ್ರದೊಡನೆ ಸಂಬಂಧ ಜೋಡಿಸುವದು ಸರಿಯಲ್ಲವೆಂದು ಹಲವರು ಅಭಿಪ್ರಾಯ ಪಡುತ್ತಾರೆ. ಭಾರತದ ದರ್ಶನಶಾಸ್ತ್ರದ, ಬದುಕಿನ ರೀತಿನೀತಿಗಳ ರಕ್ಷಣೆಯ ಗುತ್ತಿಗೆ ಪಡೆದವರಂತೆ ವರ್ತಿಸುವ ಹಲವರು ಆಧ್ಯಾತ್ಮಕ್ಕೂ , ಅರ್ಥಶಾಸ್ತ್ರಕ್ಕೂ ಸಂಬಂಧವೇ ಇಲ್ಲವೆಂದು ಬೊಬ್ಬೆ ಹೊಡೆಯುತ್ತಾರೆ. ಅವರ ಅರಿವಿನ ವ್ಯಾಪ್ತಿಯ ಸೀಮಿತತೆಯೇ ಇದಕ್ಕೆ ಕಾರಣ. ಮಾನವನ ಬದುಕಿನ ಗುರಿಯನ್ನು ಧರ್ಮ, ಅರ್ಥ, ಕಾಮ , ಮೋಕ್ಷಗಳೆಂಬ ಚತುರ್ವರ್ಗಗಳಾಗಿ ಗುರ್ತಿಸುತ್ತಾರೆ. ದೈಹಿಕ, ಮಾನಸಿಕ, ಆಧ್ಯಾತ್ಮಿಕ ಹೀಗೆ ಮೂರು ಸ್ತರಗಳಲ್ಲಿ ಅಸ್ತಿತ್ವವನ್ನು ಹೊಂದಿರುವ ಮಾನವರು ವಿಕಾಸ ಪಥದಲ್ಲಿ ಕ್ರಮಿಸುತ್ತಿರುವಾಗ ಯಾವ ಸ್ತರವನ್ನೂ ನಿರ್ಲಕ್ಷಿಸಲು ಸಾಧ್ಯವಾಗದು. ಪರಿಪೂರ್ಣತೆಯಿಂದ ಬಂದು ಪರಿಪೂರ್ಣತೆಯಲ್ಲಿ ಒಂದಾಗುವ ಸೃಷ್ಟಿ ಚಕ್ರದಲ್ಲಿ ಮಾನವ ಜೀವನ ಅಮೂಲ್ಯವಾದುದು. ಮಾನವನ ಭೌತಿಕ ಅಸ್ತಿತ್ವದ ಅವಶ್ಯಕತೆಗಳನ್ನು ಕಾಮ ಎಂದು ಸಂಸ್ಕೃತದಲ್ಲಿ ಹೇಳುತ್ತಾರೆ. ಮಾನಸಿಕ ತವಕ, ಚಡಪಡಿಕೆಗಳ ನಿವಾರಣೆಯಾಗುವುದು ಅರ್ಥದಿಂದ. ಮನೋ- ಆಧ್ಯಾತ್ಮಿಕ ಹಂಬಲದ ಪೂರೈಕೆಯ ಪ್ರಯತ್ನ ಧರ್ಮ. ಆಧ್ಯಾತ್ಮದ ಉತ್ಕಟ ಆಕಾಂಕ್ಷೆಯ ಪೂರ್ತಿಯೇ ಮೋಕ್ಷ. ಈ ನಾಲ್ಕು ವರ್ಗಗಳ ಅನುಸರಣೆ ಮಾನವ ಜೀವನದಲ್ಲಿ ಅನಿವಾರ್ಯ. ಸೀಮಿತತೆಯಿಂದ ಅನಂತತೆಯೆಡೆಗಿನ ಪಯಣವೇ ಜೀವನ ಎನ್ನುತ್ತಾರೆ. ಸಾಂತವೇ ಅನಂತವಾಗುವ ಪ್ರಕ್ರಿಯೆ ಮೋಕ್ಷ. ಇದು ಮಾನವ ಜೀವನದ ಅಂತಿಮ ಗುರಿ. ಮೋಕ್ಷದ ಹಲವು ಅವೈಜ್ಞಾನಿಕ , ಅತಾರ್ಕಿಕ ಕಲ್ಪನೆಗಳು ಪ್ರಚಾರದಲ್ಲಿವೆ. ಯಾವುದೋ ನದಿಯಲ್ಲಿ ಮುಳುಗು ಹಾಕುವುದರಿಂದ ಮೋಕ್ಷ ಪ್ರಾಪ್ತಿಯೆಂದು ಹಲವರನ್ನು ನಂಬಿಸಲಾಗಿದೆ. ವ್ಯಕ್ತಿ ಮರಣ ಹೊಂದಿದ ನಂತರ ಅವರ ಮಕ್ಕಳು ಅಥವಾ ಹತ್ತಿರದ ಸಂಬಂಧಿಗಳು ಪ್ರಾರ್ಥಿಸುವುದರಿಂದ ಅಥವಾ ನಿರ್ದಿಷ್ಟ ಪೂಜೆ, ಆಚರಣೆಗಳ ಮೂಲಕ ಮೃತರಿಗೆ ಮೊಕ್ಷ ಪ್ರಾಪ್ತಿಯಾಗುತ್ತದೆ ಎಂದು ಮುಂತಾದ ವಿವಿಧ ರೀತಿಯಲ್ಲಿ ಹಲವರು ನಂಬಿಕೊಂಡಿದ್ದಾರೆ. ಮೋಕ್ಷ ಎಂದರೆ ಆತ್ಮ-ಪರಮಾತ್ಮನಲ್ಲಿ ಒಂದಾಗುವುದು ಎಂದು ದರ್ಶನಶಾಸ್ತ್ರ ಹೇಳುತ್ತದೆ. ಹುಟ್ಟು- ಸಾವಿನ ಚಕ್ರದಿಂದ ಬಿಡುಗಡೆ ಪಡೆಯುವ ಹಂತವಿದು. ಬಿಂದು ಸಿಂಧುವಿನಲ್ಲಿ ಒಂದಾಗಿ ಪ್ರತ್ಯೇಕ ಅಸ್ತಿತ್ವವನ್ನು ಕಳೆದುಕೊಳ್ಳುವ ಸ್ಥಿತಿ. ವೈಜ್ಞಾನಿಕವಾಗಿ ವಿವರಿಸುವುದಾದರೆ ಜೀವ ವಿಕಾಸದ ಕೊನೆಯ ಹಂತವೇ ದಾರ್ಶನಿಕರು ವಿವರಿಸುವ ಮೋಕ್ಷ. ಏಕಕೋಶ ಜೀವಿಯಿಂದ ಬಹುಕೋಶ ಜೀವಿಯಾಗಿ ಸಸ್ಯ, ಗಿಡ, ಮರ, ಕ್ರಿಮಿ, ಕೀಟ, ಪಶು, ಪಕ್ಷಿ, ಪ್ರಾಣಿ, ಸಸ್ತನಿ, ಮಂಗ ಹಾಗೂ ಮಾನವನಾಗಿ ವಿಕಾಸ ನಡೆಯಿತೆಂದು ವಿಜ್ಞಾನ ಹೇಳುತ್ತದೆ. ಮಾನವನ ಹುಟ್ಟಿನೊಂದಿಗೆ ವಿಕಾಸ ಕ್ರಿಯೆ ನಿಂತು ಹೋಯಿತೇ? ಮಾನವನ ಹಂತದಿಂದ ಮುಂದೆ ವಿಕಾಸ ಇಲ್ಲವೇ? ವಿಕಾಸ ಪಥದಲ್ಲಿ ಕಾಣಿಸಿಕೊಂಡ ವಿವಿಧ ಜೀವಿಗಳ ನಡುವಿನ ಕೊಂಡಿ ಯಾವುದು ಮತ್ತು ವಿವಿಧ ಜೀವಿಗಳ ದೈಹಿಕ, ಮಾನಸಿಕ, ಬದಲಾವಣೆಗೆ ಕಾರಣಗಳೇನು? ಜೀವೋದ್ಭವ ಹೇಗಾಯಿತು? ಮನಸ್ಸು ಎಂದು, ಹೇಗೆ ಹುಟ್ಟಿಕೊಂಡಿತು? ಮುಂತಾದ ಪ್ರಶ್ನೆಗಳಿಗೆ ಉತ್ತರ ಕಂಡು ಹಿಡಿಯಲು ವಿಜ್ಞಾನಿಗಳು ಇನ್ನೂ ತಿಣುಕಾಡುತ್ತಿದ್ದಾರೆ. ಆದರೆ ಭಾರತೀಯ ದರ್ಶನ ಶಾಸ್ತ್ರದಲ್ಲಿ ಈ ಎಲ್ಲಾ ಪ್ರಶ್ನೆಗಳಿಗೆ ತಾರ್ಕಿಕ ಉತ್ತರವಿದೆ. ಪರಮಪ್ರಜ್ಞೆ ಅಥವಾ ಅನಂತತೆಯ ಇಚ್ಛೆಯಿಂದಲೇ ವಿಶ್ವಮನದ ರಚನೆಯಾಗಿ ಸೂಕ್ಷ್ಮದಿಂದ ಸ್ಥೂಲೀಕರಣ ಪ್ರಾರಂಭವಾಯಿತು. ಪಂಚ ಮಹಾಭೂತಗಳೆಂದು ಕರೆಯಲ್ಪಡುವ ಆಕಾಶ, ವಾಯು, ಅಗ್ನಿ, ಜಲ, ಪೃಥ್ವಿ , ತತ್ವಗಳ ಸೃಷ್ಟಿಯಾಯಿತು. ಅನಂತತೆಯ ಅತ್ಯಂತ ಜಡ ಸ್ಥಿತಿಯೇ ಪೃಥ್ವಿ ಅಥವಾ ಘನ ತತ್ವ. ಈ ಸ್ಥಿತಿಯೂ ಅದೇ ಅನಂತತೆಯ ಒಂದು ರೂಪವಾಗಿರುವುದರಿಂದಲೇ ಅದರಲ್ಲಿಯೂ ಚೇತನವಿದೆ, ಮನಸ್ಸು ಸುಪ್ತಾವಸ್ಥೆಯಲ್ಲಿದೆಯೆಂದು ಭಾರತೀಯ ಚಿಂತನೆ ಹೇಳುತ್ತದೆ. ಆದ್ದರಿಂದಲೇ ಅಣು, ರೇಣು, ತೃಣ, ಕಾಷ್ಠಗಳಲ್ಲಿಯೂ ಪರಮಾತ್ಮನನ್ನು ಕಾಣುವುದು ಈ ನೆಲೆದ ಸ್ವಭಾವ. ಕಲ್ಲಿನಲ್ಲಿಯೂ ಪರಮಾತ್ಮನಿದ್ದಾನೆ ಎಂಬುದನ್ನು ತಿರುಚಿ ಕಲ್ಲಿನಲ್ಲೇ ಪರಮಾತ್ಮನಿದ್ದಾನೆಂದು ನಂಬಿಸುವವರು ಆಧ್ಯಾತ್ಮ ರಂಗದ ಶೋಷಕರು. ಎಲ್ಲೆಡೆ ಪರಮಾತ್ಮನಿದ್ದಾನೆ ಎನ್ನುವುದು ತಾರ್ಕಿಕ. ಪರಮಾತ್ಮ ಇಲ್ಲೇ ಇದ್ದಾನೆ ಎನ್ನುವುದು ಅತಾರ್ಕಿಕ. ಜಡ ವಸ್ತುವಿನಲ್ಲಿ ಸುಪ್ತವಾಗಿರುವ ಚೈತನ್ಯ ಶಕ್ತಿಯೇ ಸೂಕ್ತ ಪರಿಸರ ದೊರಕಿದಾಗಿ ಏಕಕೋಶ ಜೀವಿಯಾಗಿ ರೂಪ ತಾಳುತ್ತದೆ. ಅದರಲ್ಲಿ ಕೂಡಾ ಸುಪ್ತ ಮನಸ್ಸಿರುತ್ತದೆ. ಇಡೀ ವಿಕಾಸ ಪ್ರಕ್ರಿಯೆಯ ಮೂಲ ಉದ್ದೇಶವೇ ಮನಸ್ಸಿನ ವಿಕಾಸ ಪರಮ ಪ್ರಜ್ಞೆ ಅಥವಾ ಅನಂತತೆಯ ಪ್ರತಿಫಲನದ ಸಾಮಥ್ರ್ಯ ವೃದ್ಧಿಯೇ ವಿಕಾಸದ ದಾರಿ. ವಿಕಸಿತವಾಗುತ್ತಿರುವ ಮನಸ್ಸಿಗೆ ಆಧಾರ ನೀಡುವ ಸಲುವಾಗಿ ಭೌತಿಕ, ಜೈವಿಕ ಬದಲಾವಣೆಗಳಾಗಿ ವಿವಿಧ ಜೀವಿಗಳು ರೂಪುಗೊಂಡವು. ಏಕಕೋಶ ಜೀವಿಯ ಮನಸ್ಸೇ ವಿಕಾಸ ಹೊಂದುತ್ತಾ ತನ್ನ ಮುಂದಿನ ವಿಕಾಸದ ಪಥದಲ್ಲಿ ಸಾಗಲು ಮಾನವ ದೇಹದಲ್ಲಿ ಆಶ್ರಯ ಪಡೆಯುತ್ತದೆ. ಇಂದಿನ ಮಾನವ ಹಿಂದೆ ಎಂದೋ ಒಂದು ಕಾಲದಲ್ಲಿ ಏಕಕೋಶ ಜೀವಿಯಾಗಿದ್ದು, ವಿಕಾಸದ ಎಲ್ಲ ಹಂತಗಳಲ್ಲಿ ಹಾದು ಬಂದಿರುವುದನ್ನು ವಿಜ್ಞಾನವೂ ದೃಢಪಡಿಸುತ್ತದೆ. ಕೋಟಿ, ಕೋಟಿ ಜನ್ಮಗಳ ನಂತರ ಮಾನವ ಜೀವನ ಲಭ್ಯವಾಗುತ್ತದೆಂದು ಭಾರತೀಯ ತತ್ವಶಾಸ್ತ್ರದಲ್ಲಿ ಹೇಳಿರುವುದು ಈ ಕಾರಣಕ್ಕಾಗಿ. ಮಿದುಳು ಮನಸ್ಸಿನ ಆಶ್ರಯ ತಾಣವೇ ಹೊರತು ಅದೇ ಮನಸ್ಸಲ್ಲ. ವ್ಯಕ್ತಿಯ ಮರಣದ ನಂತರವೂ ಆ ಮನಸ್ಸು ಅಸ್ತಿತ್ವದಲ್ಲಿರುತ್ತದೆ. ಮುಂದಿನ ವಿಕಾಸಕ್ಕಾಗಿ ಪುನರ್ಜನ್ಮ ತಾಳಲೇ ಬೇಕಾಗುತ್ತದೆ. ( ಟಿವಿಗಳಲ್ಲಿ ತೋರಿಸುವ ಪುನರ್ಜನ್ಮದ ಕಥೆ ಭಾರಿ ಬೊಗಳೆ ಹಾಗೂ ಅತಾರ್ಕಿಕ). ಸೂಕ್ಷ್ಮದಿಂದ ಜಡವಾಗುವ ಪ್ರಕ್ರಿಯೆಯನ್ನು ಸಂಚರ ಎಂದೂ ಜಡದಿಂದ ಸೂಕ್ಷ್ಮತೆಯೆಡೆಗಿನ ಚಲನೆಯನ್ನು ಪ್ರತಿ ಸಂಚರ ಎಂದೂ ಹೇಳುತ್ತಾರೆ. ಸಂಚರ- ಪ್ರತಿ ಸಂಚರಗಳೆರಡೂ ಸೇರಿ ಸೃಷ್ಟಿ ಚಕ್ರವಾಗುತ್ತದೆ. ಮಾನವನಾಗುವ ಹಂತದವರೆಗೆ ವಿಕಾಸದ ದಾರಿ ಪ್ರಕೃತಿ ನಿಯಂತ್ರಿತ. ಇದಕ್ಕೂ ಮುಂದಿನ ವಿಕಾಸದ ಪಥದಲ್ಲಿ ಸ್ವಪ್ರಯತ್ನದಿಂದಲೂ ಸಾಗುವ ಸಾಮಥ್ರ್ಯ ಮಾನವನಿಗೆ ಇದೆ. ಮನಸ್ಸನ್ನು ಏಕಾಗ್ರಗೊಳಿಸಿ ನಡೆಸುವ ಆಧ್ಯಾತ್ಮ ಸಾಧನೆಯಿಂದಲೇ ಮುಂದಿನ ವಿಕಾಸ ಸಾಧ್ಯ. ಆಧ್ಯಾತ್ಮವೆಂದರೆ ಜೀವನದಿಂದ ವಿಮುಖರಾಗಿ ಪಲಾಯನ ಮಾಡುವುದಲ್ಲ. ಆಧ್ಯಾತ್ಮದ ದಾರಿಯಲ್ಲಿ ಸಾಗಲು ಸಂಸಾರ ಬಿಟ್ಟು, ಖಾವಿ ತೊಟ್ಟು ಸನ್ಯಾಸಿಯಾಗಬೇಕೆಂಬುದು ತಪ್ಪು ಕಲ್ಪನೆ. ಮೂಲೆ ಸೇರಿ ಮೂಗು ಹಿಡಿದು, ಕಣ್ಮುಚ್ಚಿ ಕುಳಿತುಕೊಳ್ಳುವುದೇ ಆಧ್ಯಾತ್ಮ ಸಾಧನೆಯಲ್ಲ. ಬಾಹ್ಯ ಮತ್ತು ಆಂತರಿಕ ಪ್ರಪಂಚವನ್ನು ಒಂದೇ ಅಸ್ತಿತ್ವದ ಅಭಿವ್ಯಕ್ತಿಯ ವಿವಿಧ ರೂಪಗಳೆಂದು ಗ್ರಹಿಸಿ, ತನ್ನಂತೆಯೇ ಇತರರು ಎಂದು ಭಾವಿಸಿ, ಯೋಚಿಸಿ, ವ್ಯವಹರಿಸುವ ಮನಸ್ಥಿತಿಯೊಂದಿಗೆ ಮನಸ್ಸನ್ನು ಏಕಾಗ್ರಗೊಳಿಸಿ ಅನಂತತೆಯನ್ನು ಆರೋಹಿಸಿದಾಗ ಆಧ್ಯಾತ್ಮ ಸಾಧನೆಯಾಗುತ್ತದೆ. ಈ ಪ್ರಕ್ರಿಯೆ ಧರ್ಮಾಚರಣೆ ಎನಿಸಿಕೊಳ್ಳುತ್ತದೆ. ಧರ್ಮ ಎಂದರೆ ಸ್ವಭಾವ. ವಿಕಾಸ ಹೊಂದುವದು ಮಾನವನ ಸ್ವಭಾವ. ಮಾನವರ ಧರ್ಮ. ಆದ್ದರಿಂದಲೇ ಮಾನವರೆಲ್ಲರ ಧರ್ಮ ಒಂದೇ. ನಾವು ಧರ್ಮವೆಂದು ಕರೆಯುತ್ತಿರುವ ವಿವಿಧ ಆಚರಣೆ ಆಧಾರಿತ ನಂಬಿಕೆಗಳು ಮತ. ಉದಾ: ಹಿಂದೂ, ಕ್ರಿಶ್ಚಿಯನ್, ಇಸ್ಲಾಂ, ಬುದ್ಧ, ಜೈನ ಇತ್ಯಾದಿಗಳೆಲ್ಲವೂ ಮತಗಳೇ ಹೊರತು ನೈಜ ಅರ್ಥದಲ್ಲಿ ಧರ್ಮ ಎನಿಸಿಕೊಳ್ಳುವುದಿಲ್ಲ. ಧರ್ಮದ ಆಚರಣೆಗೆ ಬಾಹ್ಯ ಪರಿಕರಗಳ , ಬಾಹ್ಯ ಆಡಂಬರಗಳ ಅಗತ್ಯವಿಲ್ಲ. ಧರ್ಮಾಚರಣೆ ಅರ್ಥಾತ್ ಆಧ್ಯಾತ್ಮ ಸಾಧನೆ ಪ್ರತಿಯೋರ್ವ ಮಾನವನ ಹಕ್ಕು ಮತ್ತು ಕರ್ತವ್ಯ. ಇದರಲ್ಲಿ ಸ್ತ್ರೀ – ಪುರುಷ ಎಂಬ ಭೇದವಿಲ್ಲ. ಆಧ್ಯಾತ್ಮಿಕ ಸಾಧನೆಯ ಮೂಲ ಅವಶ್ಯಕತೆ ಮಾನವ ದೇಹ. ಆದ್ದರಿಂದ ದೇಹದ ಪಾಲನೆ, ಪೋಷಣೆಯನ್ನು ನಿರ್ಲಕ್ಷಿಸಲಾಗದು. ‘ಬ್ರಹ್ಮ ಸತ್ಯಮ್’ ಎನ್ನುವುದು ಸರಿ. ಆದರೆ ನಾವು ಬದುಕುತ್ತಿರುವ ಜಗತ್ತನ್ನು ಮಿಥ್ಯೆಯೆಂದು ನಿರಾಕರಿಸುವುದು ನಮ್ಮನ್ನೆ ನಾವು ಮೋಸಗೊಳಿಸಿಕೊಳ್ಳುವದಾಗಿದೆ. ದೇಹದಲ್ಲಿ ಜೀವ ಇರುವವರೆಗೂ ಆ ವ್ಯಕ್ತಿಯ ಪಾಲಿಗೆ ಬಾಹ್ಯ ಜಗತ್ತು ಕೂಡಾ ಹೋಲಿಕೆಯ ಸತ್ಯ ಅಥವಾ ಸಾಪೇಕ್ಷಿತ ಸತ್ಯ. ‘ಬ್ರಹ್ಮ ಸತ್ಯಂ ಜಗದಪಿ ಸತ್ಯಮಾಪೇಕ್ಷಿಕಂ’ ( ಆನಂದ ಸೂತ್ರಮ್ 2-14) ಎನ್ನುವುದೇ ಸಮಂಜಸ. ಆದ್ದರಿಂದ ಆಧ್ಯಾತ್ಮ ಸಾಧನೆಗೆ ಪೂರಕವಾದ ವಾತಾವರಣ ಎಲ್ಲರಿಗಾಗಿ ಕಲ್ಪಿಸುವುದು ಸಮಾಜದ ಹೊಣೆಗಾರಿಕೆ. ಒಪ್ಪತ್ತಿನ ಊಟಕ್ಕಾಗಿ ಪರದಾಡುವ, ಜೀವನದ ಕನಿಷ್ಠ ಅಗತ್ಯತೆಗಳನ್ನು ಪೂರೈಸಿಕೊಳ್ಳಲೋಸುಗವೇ, ದಿನವಿಡೀ ದುಡಿಯಲೇಬೇಕಾದ ಜನರಿಗೆ ಆಧ್ಯಾತ್ಮ ಸಾಧನೆಯ ಕುರಿತು ಭೋದಿಸುವದು ಕ್ರೂರ ವ್ಯಂಗ್ಯ. ಪ್ರತಿಯೋರ್ವ ವ್ಯಕ್ತಿಗೂ ಆಹಾರ, ಬಟ್ಟೆ, ವಸತಿ, ಶಿಕ್ಷಣ , ಔಷದೋಪಚಾರಗಳು ಲಭ್ಯವಾಗುವಂತಹ ಪರಿಸ್ಥಿತಿ ನಿರ್ಮಾಣ ಮಾಡಬೇಕಾದುದು ಸಮಾಜದ ಹಿತಚಿಂತಕರ ಕರ್ತವ್ಯ. ಇಂತಹ ವ್ಯವಸ್ಥೆಯನ್ನು ರೂಪಿಸುವ ಚಿಂತನೆ, ಕಾರ್ಯವಿಧಾನವೇ ಅರ್ಥಶಾಸ್ತ್ರ. ಅರ್ಥಶಾಸ್ತ್ರವೆಂದರೆ ಇಕೊನಿಮಿಕ್ಸ್ ( ಧನ ಶಾಸ್ತ್ರ) ಅಲ್ಲ. ಅರ್ಥ ಶಬ್ದಕ್ಕೆ ಎರಡು ವಿವರಣೆಗಳಿವೆ. ಮಾನವನ ಭೌತಿಕ ಅಸ್ತಿತ್ವದ ತೊಂದರೆಗಳನ್ನು ನಿವಾರಣೆ ಮಾಡುವ ಮಾಧ್ಯಮವೇ ಅರ್ಥ. ಈ ಸಂದರ್ಭದಲ್ಲಿ ಅರ್ಥಕ್ಕೆ ಹಣವೆನ್ನುವ ವಿವರಣೆ ಸಲ್ಲುತ್ತದೆ. ಮಾನಸಿಕ ಬೇಗುದಿಯನ್ನು , ತೋಳಲಾಟವನ್ನು ಪರಿಹರಿಸುವುದಕ್ಕೂ ಅರ್ಥ ಎನ್ನುತ್ತಾರೆ. ಅದು ಕೇವಲ ಹಣದಿಂದಲೇ ಆಗುವಂತಹುದಲ್ಲ. ಮಾನಸಿಕ ನೆಮ್ಮದಿಯನ್ನು ತಾತ್ಕಾಲಿಕವಾಗಿ ನೀಡುವುದು ಅರ್ಥ. ಶಾಶ್ವತವಾಗಿ ನೀಡುವುದು ಪರಮಾರ್ಥ. ಮಾನವನ ಭೌತಿಕ ಅಸ್ತಿತ್ವವನ್ನು ರಕ್ಷಿಸಿ ಉಳಿಸುವದು ಮತ್ತು ಮಾನಸಿಕ ಹಸಿವನ್ನು ನೀಗಿಸುವದು ಅರ್ಥಶಾಸ್ತ್ರದ ಗುರಿ. ಇಂದು ಪ್ರಚಲಿತವಿರುವುದು ಧನಶಾಸ್ತ್ರ; ಬೇಕಿರುವುದು ಅರ್ಥಶಾಸ್ತ್ರ. ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಚತುರ್ವಣಗಳನ್ನು ಮಾನವರು ಪಾಲಿಸಬೇಕೆಂದು ಭಾರತದ ದಾರ್ಶನಿಕರು ತಿಳಿಸಿದ್ದು ಈ ಅರ್ಥದಲ್ಲಿ. ಭೌತಿಕ ಅಸ್ತಿತ್ವವನ್ನು ಕಾಪಾಡಿಕೊಂಡು ಧರ್ಮಾಚರಣೆ ಮಾಡಲು ಅವಕಾಶ ಕಲ್ಪಿಸಿಕೊಡುವುದು ಅರ್ಥಶಾಸ್ತ್ರ. ಧರ್ಮಾಚರಣೆಯಿಂದ ಮೋಕ್ಷ ಪ್ರಾಪ್ತಿಯಾಗುತ್ತದೆಂದು ಅನುಭಾವಿಗಳು ಅರಿತಿದ್ದರು. ಹಣದಿಂದಲೇ ಧರ್ಮಾಚರಣೆ ಮಾಡುತ್ತೇವೆಂಬ ಭ್ರಮೆಗೆ ಹಲವರು ಸಿಲುಕಿದ್ದಾರೆ. ಬಡವರಿಗೆ, ದೇವಾಲಯ, ಚರ್ಚು, ಮಸೀದಿಗಳಿಗೆ ದೇಣಿಗೆ ನೀಡುವುದು, ಆಡಂಬರದ ಪೂಜೆಗಳನ್ನು ನೆರವೇರಿಸುವುದು, ಖಾವಿ ತೊಟ್ಟವರ ಸೇವೆ ಮಾಡುವುದೇ ಧರ್ಮಾಚರಣೆಯೆಂದು ಜನಸಾಮಾನ್ಯರನ್ನು ನಂಬಿಸಲಾಗಿದೆ. ಆಧ್ಯಾತ್ಮವೆಂದರೆ ಬದುಕಿನ ವಾಸ್ತವದ ನಿರಾಕರಣೆಯೆಂದು ತಪ್ಪಾಗಿ ಬಿಂಬಿಸಿ ಅದಕ್ಕಿಷ್ಟು ನಿಗೂಢತೆಯ ಲೇಪವನ್ನು ಹಚ್ಚಿ ಜನರನ್ನು ಭಯಭೀತರನ್ನಾಗಿಸಲಾಗಿದೆ. ಧನ ಗಳಿಕೆ ಮತ್ತು ಸಂಗ್ರಹಣೆಯೇ ಜೀವನದ ಗುರಿಯೆಂದು ನಂಬಿರುವವರ ಜೀವನದ ಬಹುಪಾಲು ಸಮಯ ಅದರಲ್ಲೇ ಕಳೆದು ಹೋಗುತ್ತದೆ. ಶ್ರೇಷ್ಠ ವಿಚಾರಗಳನ್ನು ಅರಿಯುವ, ಅಧ್ಯಯನ ಮಾಡುವ , ಆಧ್ಯಾತ್ಮ ಸಾಧನೆಯ ಆನಂದವನ್ನು ಅನುಭವಿಸುವುದರಿಂದ ಅವರು ವಂಚಿತರಾಗುತ್ತಿದ್ದಾರೆ. ಸ್ವಾರ್ಥ ಮತ್ತು ಸ್ವ ಕೇಂದ್ರಿತ ಧನಶಾಸ್ತ್ರದ ಚಿಂತನೆಗಳಿಂದ ಪ್ರಭಾವಿತವಾದ ಆರ್ಥಿಕ ವ್ಯವಸ್ಥೆಯಲ್ಲಿ ಸಿಲುಕಿ ಅಸಹಾಯಕತೆ ಅನುಭವಿಸುತ್ತಿರುವವರಿಗೆ ಆಧ್ಯಾತ್ಮದ ಕುರಿತು ಚಿಂತಿಸಲೂ ಸಮಯವಿಲ್ಲವಾಗಿದೆ. ಬಾಹ್ಯಾಡಂಬರ, ಬಾಹ್ಯ ಪೂಜೆ, ಪ್ರಾರ್ಥನೆಗಳಿಂದ ತಮ್ಮ ಕಷ್ಟಗಳು ಪರಿಹಾರ ತಮ್ಮ ಭೌತಿಕ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಸಾಧ್ಯವಾದಿತೆಂಬ ನಿರೀಕ್ಷೆಯಲ್ಲಿ ಅವರು ಇನ್ನಷ್ಟು ಮೌಢ್ಯಾಚರಣೆಗಳಿಗೆ ಬಲಿಯಾಗುತ್ತಿದ್ದಾರೆ. ಧನಶಾಸ್ತ್ರದ ಶೋಷಣಾ ಕುಣಿಕೆಗಳನ್ನು ಹರಿದೊಗೆಯಲು ಅರ್ಥಶಾಸ್ತ್ರದ ಅನುಷ್ಠಾನದಿಂದ ಮಾತ್ರ ಸಾಧ್ಯ. ಪ್ರತಿಯೋರ್ವ ವ್ಯಕ್ತಿಗೂ ಜೀವನದ ಕನಿಷ್ಠ ಅಗತ್ಯತೆಗಳನ್ನು ಪೂರೈಸುವ ಹೊಣೆಗಾರಿಕೆ ಸಮಾಜ ಅಂದರೆ ಸರ್ಕಾರಕ್ಕೆ ಇದೆ. ಸರ್ಕಾರದ ಅಥವಾ ಧನವಂತರ ಔದಾರ್ಯದ ಭಿಕ್ಷೆಯಿಂದ ಇದು ಆಗಬೇಕಿಲ್ಲ. ದುಡಿಯುವ ಸಾಮಥ್ರ್ಯವುಳ್ಳ ಪ್ರತಿಯೋರ್ವ ವ್ಯಕ್ತಿಗೂ ದುಡಿಮೆಯ ಅವಕಾಶ ನೀಡುವುದು, ದುಡಿಮೆಯ ಪ್ರತಿಫಲದಿಂದ ದುಡಿಮೆಗಾರ ಹಾಗೂ ಅವರ ಅವಲಂಬಿತರ ಜೀವನದ ಮೂಲಭೂತ ಅವಶ್ಯಕತೆಗಳಾದ ಆಹಾರ, ಬಟ್ಟೆ, ವಸತಿ, ಶಿಕ್ಷಣ, ಔಷಧೋಪಚಾರಗಳ ಅಗತ್ಯತೆಗಳನ್ನು ಪೂರೈಸಿಕೊಳ್ಳುವಂಥ ವ್ಯವಸ್ಥೆಯನ್ನು ನಿರ್ಮಾಣ ಮಾಡುವುದು ಸರ್ಕಾರದ ಹೊಣೆಗಾರಿಕೆ. ಇಂತಹ ವ್ಯವಸ್ಥೆಯ ನಿರ್ಮಾಣ ಬರೀ ಕನಸಲ್ಲ. ವಾಸ್ತವವಾಗಿಸಲು ಸಾಧ್ಯ. ಇಂದಿನ ಸ್ವಾರ್ಥ ಕೇಂದ್ರಿತ ವ್ಯವಸ್ಥೆಯನ್ನು ತೊಲಗಿಸಿ, ಆರ್ಥಿಕ ವಿಕೇಂದ್ರೀಕರಣವನ್ನು ಜಾರಿಗೊಳಿಸಿದಾಗ ಸಂಪನ್ಮೂಲಗಳ ಹತೋಟಿ ಜನಸಾಮಾನ್ಯರಿಗೆ ಸಿಗುತ್ತದೆ. ಲಾಭ ಗಳಿಕೆ, ಲಾಭ ಹೆಚ್ಚಳದ ಉದ್ದೇಶದಿಂದಲೇ ಕೈಗೊಳ್ಳುವ ಆರ್ಥಿಕ ಚಟುವಟಿಕೆಗಳ ಬದಲಿಗೆ, ಎಲ್ಲರಿಗೂ ಉದ್ಯೋಗ ನೀಡುವ, ಎಲ್ಲರಿಗೂ ಉತ್ತಮ ಬದುಕು ಕಟ್ಟಿಕೊಡುವ ಉದ್ದೇಶದಿಂದ ಆರ್ಥಿಕ ಚಟುವಟಿಕೆಗಳು ಪ್ರಾರಂಭವಾಗುತ್ತವೆ. ಖಾಸಗಿ ರಂಗವು ಸಹಕಾರಿ ರಂಗಕ್ಕೆ ಸ್ಥಾನ ಮಾಡಿಕೊಡುವುದು ಅನಿವಾರ್ಯವಾಗಲಿದೆ. ಇದು ಜನಾಧಿಕಾರ ಅರ್ಥ ವ್ಯವಸ್ಥೆ. ಇದರ ಉದ್ದೇಶ ಎಲ್ಲರ ಸುಖ ಮತ್ತು ಎಲ್ಲರ ಹಿತ. ಸಮಾಜದ ಪ್ರತಿಯೋರ್ವ ವ್ಯಕ್ತಿಗೂ ನೈಜ ಅರ್ಥದ ಧರ್ಮಾಚರಣೆಯಿಂದ ಆಧ್ಯಾತ್ಮದ ಪಥದಲ್ಲಿ ಸಾಗಿ ಯಶ ಪಡೆಯುವ ಅವಕಾಶ ಸೃಷ್ಟಿಸುವುದು. ಮಾನವನ ಅಸ್ತಿತ್ವದ ಶಾರೀರಿಕ, ಮಾನಸಿಕ, ಆಧ್ಯಾತ್ಮಿಕವೆಂಬ ಮೂರು ಸ್ತರಗಳಲ್ಲಿ ಉನ್ನತಿ ಸಾಧಿಸಲು ಅವಕಾಶ ನೀಡುವ ಅರ್ಥವ್ಯವಸ್ಥೆಯೇ ಜನಾಧಿಕಾರ ವ್ಯವಸ್ಥೆ.

ಲೇಖನ Read Post »

ಇತರೆ

ಸ್ಮರಣೆ

ಅರು #ಪ್ರಕಾಶನ ಸಹಯೋಗದಲ್ಲಿ ಶರೀಫರನ್ನು ಅವರ ೨೦೦ ನೇ ಜಯಂತಿ ಸಂದರ್ಭದಲ್ಲಿ ನೆನಪಿಸಿಕೊಳ್ಳುವ ಒಂದು ಪ್ರಯತ್ನ ನಿನ್ನೆ ನೆರವೇರಿತು. ಕನ್ನಡದ ಅಪರೂಪದ ಆಶು ಕವಿ ಶರೀಫರ ವ್ಯಕ್ತಿತ್ವ.. ಜೀವನಗಳ ಕುರಿತು ಒಂದಷ್ಟು ಮಾತು. ಜನಮಾನಸದಲ್ಲಿ ನೆಲೆಗೊಂಡಿರುವ ಅವರ ಆಯ್ದ ೧೦ ತತ್ವ ಪದಗಳನ್ನು ಗಾಯನ ತಂಡದವರಿಂದ ಸುಶ್ರಾವ್ಯವಾಗಿ ಪ್ರಸ್ತುತಪಡಿಸುವಿಕೆ.. ಜೊತೆಗೆ ಆ ಪದಗಳ ತಾತ್ವಿಕ ವಿಶ್ಲೇಷಣೆ.. ಕೊನೆಯಲ್ಲಿ ಪುಟ್ಟದೊಂದು ಉಪಹಾರದ ರೀತಿಯ ಪ್ರಸಾದ ಸೇವನೆ.. ಇಷ್ಟು ಕಾರ್ಯಕ್ರಮದ ಒಟ್ಟು ರೂಪುರೇಷೆ.

ಸ್ಮರಣೆ Read Post »

ಇತರೆ

ಅನುಭವ

ಬೆಳಗಿನ ಚಹಾ ಹೀರುತ್ತಾ…. ಎನ್.ಶಂಕರ್ ಗೌಡ ಶರತ್ಕಾಲದ ಕಾತೀ೯ಮಾಸವಿದು. ಆರಂಭಿಕ ಚಳಿಗಾಲವಾದರೂ ನಿಧಾನವಾಗಿ ತಣ್ಣನೆಯ ಸುಳಿಗಾಳಿಯನ್ನು ಕೂಡ ತರುತ್ತದೆ.ಸಾದಾರಣ ಆಹ್ಲಾದಕರ ಹವಾಮಾನ ಹೊಂದಿದ ದಿನಗಳಿವು. ದೈಹಿಕವಾಗಿ ಹಿಮ್ಮೆಟ್ಟಿಸುವ ಸಮಯವಿದು.ರಾತ್ರಿ ದೀರ್ಘ, ಹಗಲು ಕಡಿಮೆ.ಕೆಲವರಿಗೆ ಸೋಮಾರಿತನವನ್ನು ಹೆಚ್ಚಿಸುವ ಈ ಚಳಿಗಾಲ ,ಬೆಚ್ಚಗಿನ ನೆನಪುಗಳನ್ನು ಹೊಂದಿದವರವನ್ನು ತಂಪಾಗಿರಿಸುತ್ತದೆ. ವೃದ್ಧಾಪ್ಯರಿಗೆ ಪಾಪ ಚಳಿ ಹೊರೆಯಾದರೆ,ನವ ವಧು-ವರರಿಗೆ ವರವಿದು. ಹಿಮ ಭರಿತ ಪ್ರದೇಶಗಳು ಕವಿಗಳನ್ನು ಆಕಷಿ೯ಸುತ್ತವೆ.ಜಿ.ಪಿ.ರಾಜರತ್ನಂ ರವರ ಭೂಮಿ ತಬ್ಬಿದ್ ಮೋಡ್ ಇದ್ದಂಗೆ, ಬೆಳ್ಳಿ ಬಳಸಿದ್ ರೋಡ್ ಇದ್ದಂಗೆ…..”ಮಡಿಕೇರೀಲಿ ಮಂಜು”ಗ್ರಾಮ್ಯ ಸೊಗಡಿನ ಮನಸೆಳೆವ ಪದ್ಯ ನಾವು ಕೇಳಿದ್ದೀವಲ್ಲವೆ. ಚಳಿಗಾಲದ ಹಿಮ ಸೂಯೋ೯ದಯವನ್ನು ಕೊಂಚ ಹೊತ್ತು ಕಾಡಿದರೂ ನಂತರ ರವಿಯ ಕಿರಣಗಳು ಎಷ್ಟೊಂದು ಬೆಚ್ಚಗಿನ ಅನುಭವ ಕೊಡುತ್ತವೆ.ನಮ್ಮ ಮನೆಯ ಮುಖ್ಯ ದ್ವಾರದಿಂದ ಬರುವ ಸೂಯೋ೯ದಯದ ಕಿರಣಗಳಿಗೆ ಮೈಯೊಡ್ಡಿ, ಕನ್ನಡ ಪತ್ರಿಕೆಯನ್ನು ಓದುತ್ತಾ..ಅಧಾ೯ಂಗಿ ಕೊಟ್ಟ ಚಹಾವನ್ನು ಹೀರುವ ಕ್ಷಣವನ್ನು ವಣಿ೯ಸಲಸಾಧ್ಯವಾದುದು.ಗೈರುಹಾಜ ರಾಗದಂತೆ ಪ್ರತಿನಿತ್ಯ ಸವಿಯಬೇಕೆನಿಸಿತು.ಕವಿ ಬೇಂದ್ರೆಯವರು “ಬೆಳಗು ಜಾವ”ಕವನದಲ್ಲಿ “ಏಳು ಚಿನ್ನ, ಬೆಳಗಾಯ್ತು ಅಣ್ಣ, ಮೂಡಲವು ತೆರೆಯ ಕಣ್ಣ….. ಮಕ್ಕಳಿರ ಕೇಳಿ, ರಸ ಕುಡಿಯಲೇಳಿ, ಹುಸಿ ನಿದ್ದೆಗಿದ್ದೆ ಸಾಕು, ಈ ತುಂಬಿ ಬಾಳು ತುಂಬಿರುವ ತನಕ, ತುಂತುಂಬಿ ಕುಡಿಯಬೇಕು.. ಹೀಗೆ ಬೆಳಗಿನ ಸೌಂದರ್ಯವನ್ನು ವಣಿ೯ಸುತ್ತಾ ಸೂಯೋ೯ದಯ ಸುಂದರ ಸೊಬಗನ್ನು ಸವಿದು ಬದುಕನ್ನು ಸಾಥ೯ಕ ಪಡಿಸಿಕೊಳ್ಳಿ ಎಂದು ಕರೆ ಕೊಡುವರು. ಈ ಸೊಬಗಿನ ಸೌಂದರ್ಯಕ್ಕೆ ಮನಸೋಲದವರಿಲ್ಲ. ಈ ಸೌಂದರ್ಯವನ್ನು ಕೊಂಚ ಹೊತ್ತು ಬದಿಗಿಟ್ಟು ಚಳಿಗಾಲದ ಬಾಲ್ಯದ ನೆನಪುಗಳ ಹಿಂತಿರುಗಿದರೆ ಸರಿಯಾದ ಬೆಚ್ಚಗಿನ ಹೊದಿಕೆಗಳಿಲ್ಲದೆ ನಿದ್ರೆ ಬರದೆ ಅಬ್ಬಬ್ಬಾ…ಚಳಿ ಎಂದು ನಡುಗಿ “ನಿ”ಆಕಾರದಲ್ಲಿ ಮೈ ಮುದುರಿಕೊಂಡು ಮಲಗಿದ್ದು ಇನ್ನೂ ಅಚ್ಚ ಹಸಿರು.ತೀವ್ರ ಚಳಿಗೆ ಅಪ್ಪ ತಾಳಲಾರದೆ ಬೀಡಿಯನ್ನು ಚೂರು ಬಿಡದಂತೆ ಅಂಚಿನವರೆಗೂ ಸೇದಿ ಸೇದಿ ಬಿಸಾಡಿದ್ದು, ಅಮ್ಮ ಹಚ್ಚಿದ ಒಲೆ ಮುಂದೆ ಕೈಗಳನ್ನು ಬಿಸಿ ಮಾಡಿ ಕೆನ್ನೆಗಳನ್ನು ಬೆಚ್ಚಗೆ ಸವರಿಕೊಂಡಿದ್ದ ನೆನಪುಗಳು ಈಗಲೂ ಬೆಚ್ಚಗೆ ಕಾಡುತ್ತಲೇ ಇವೆ. ಕೆ, ಎಸ್, ನ ರವರ “ಚಳಿಗಾಲ ಬಂದಾಗ ಎಷ್ಟು ಚಳಿ ಎಂಬರು, ಬಂತಲ್ಲಾ ಬೇಸಿಗೆ ಕೆಟ್ಟ ಬಿಸಿಲೆಂಬರು….. ಹೀಗೆ ಜೀವನಪೂತಿ೯ ನಮ್ಮ ಗೊಣಗಾಟ ವಿದ್ದದ್ದೆ ಅಲ್ಲವೇ! ಏನೇ ಇರಲಿ ಪ್ರಕೃತಿಯ ಎಲ್ಲಾ ಕಾಲಮಾನಗಳ ಜತೆ ಹೊಂದಿಕೊಂಡು ಅದರ ಅನುಭವವನ್ನು ಸವಿದು ಬದುಕಿದಾಗಲೇ ಜೀವನಕ್ಕೆ ಒಂದು ಅಥ೯ವಿರುವುದು. (ಭಾನುವಾರ ನಮಗೆ ಬಿಡುವಾದರೂ “ಭಾನು”ರಜೆ ಪಡೆಯುವಂತಿಲ್ಲ.ಪೂತಿ೯ ರಜೆ ಹಾಕಿದರೆ ಅದರ ಪರಿಣಾಮವೇ ಬೇರೆ) ರಜೆ ಇದ್ದುದರಿಂದ ಬೆಳಗಿನ ಸೂಯೋ೯ದಯವನ್ನು ಸವಿಯುತ್ತಾ ಚಹಾ ಹೀರುತ್ತಾ ಒಂದಷ್ಟು ನೆನಪಿನ ಸಾಲುಗಳು.

ಅನುಭವ Read Post »

ಇತರೆ

ಮಕ್ಕಳು ಮತ್ತು ಸಾಹಿತ್ಯ

ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಬೆಳೆಸುವುದು. ಎನ್.ಶೈಲಜಾ ಹಾಸನ ಅಮ್ಮ ತನ್ನ ಮಗುವನ್ನು ಮಲಗಿಸುವಾಗ ತೊಟ್ಟಿಲು ತೂಗುತ್ತಾ ಹಾಡು ಹೇಳಿ ಮಗುವನ್ನು ಮಲಗಿಸಲು ಅನುವಾಗುತ್ತಾಳೆ. ” ಅತ್ತಿತ್ತ ನೋಡಿದಿರು, ಅತ್ತು ಹೊರಳಾಡದಿರು, ಕದ್ದು ಬರುವದು ನಿದ್ದೆ, ಮಲಗು ಮಗುವೇ, ಜೋ ಜೋಜೋ ” ಅಂತ ಲಾಲಿ ಹಾಡು ಹೇಳಿ ಮಲಗಿಸುತ್ತಾಳೆ. ಸಾಮಾನ್ಯವಾಗಿ ಎಲ್ಲಾ ಮಕ್ಕಳೂ ಅಮ್ಮನ ಲಾಲಿ ಹಾಡು ಕೇಳುತ್ತಲೇ ಬೆಳೆದಿರುತ್ತಾರೆ. ಅಮ್ಮನ ಲಾಲಿ ಹಾಡು ಕೇಳುತ್ತಾ ಕೇಳುತ್ತಾ ಹಾಡು, ಕವಿತೆ ಬಗ್ಗೆ ಮಕ್ಕಳಿಗೆ ಚಿಕ್ಕಂದಿನಿಂದಲೇ ಆಸಕ್ತಿ ಬೆಳೆದು ಬಂದಿರುತ್ತದೆ. ನಂತರ ಶಾಲೆಗೆ ಹೋದ ಮೇಲೆ ಮಕ್ಕಳು ಪಠ್ಯ ಪುಸ್ತಕದಲ್ಲಿರುವ ಪದ್ಯಗಳನ್ನು ಕಲಿತು ಹಾಡುತ್ತಾ ಕವಿತೆಗಳ ಬಗ್ಗೆ ತಿಳಿದುಕೊಂಡಿರುತ್ತಾರೆ. ಆ ಪದ್ಯಗಳ ಮೂಲಕ,ಕಥೆಗಳ ಮೂಲಕ ಮಕ್ಕಳಿಗೆ ಸಾಹಿತ್ಯದ ಸವಿ ಹತ್ತಿರುತ್ತದೆ. ಪುಟ್ಟ ಪುಟ್ಟ ಹಾಡು,ಕವಿತೆ ಹೇಳಿ ಕೊಡುವುದರ ಈ ಮೂಲಕವೂ ಮಕ್ಕಳಿಗೆ ಸಾಹಿತ್ಯದ ಪರಿಚಯವನ್ನು ,ಆಸಕ್ತಿಯನ್ನು ಪ್ರತ್ಯಕ್ಷವಾಗಿ ಮೂಡಿಸಬಹುದು.ಮಕ್ಕಳು ತಾವೇ ಪುಟ್ಟ ಪುಟ್ಟ ಪದ್ಯಗಳನ್ನು ಬರೆಯಲು ,ಅದನ್ನು ಹಾಡಲು ಪ್ರೇರೇಪಿಸುವ ಮೂಲಕ ಸಾಹಿತ್ಯಾಸಕ್ತಿ ಮೂಡಿಸಿದರೆ ಕವಿತೆ ಬರೆಯಲು ಬುನಾದಿ ಹಾಕಿದಂತಾಗುತ್ತದೆ.ಶಾಲೆಯಲ್ಲಿ ಕಲಿತ “ಬಣ್ಣದ ತಗಡಿನ ತುತ್ತೂರಿ, ಕಾಸಿಗೆ ಕೊಂಡನು ಕಸ್ತೂರಿ ಸರಿಗಮ ಪದನಿಸ ಊದಿದನು” ಈ ಕವಿತೆ ಮಕ್ಕಳಿಗೆ ಇಷ್ಟವಾಗುವ ತುತ್ತೂರಿ ಬಗ್ಗೆ ಇರುವ ಮನಸೆಳೆಯುವ ಪದ್ಯವಾಗಿದ್ದು, ಹಾಡಿನ ಪರಿಚಯ ಮಾಡಿಸಿ ಕೊಡುತ್ತದೆ. ಮಕ್ಕಳ ಅಚ್ಚುಮೆಚ್ಚಿನ ಮುದ್ದಿನ ಪ್ರಾಣಿಯಾದ ನಾಯಿಮರಿ ಬಗ್ಗೆ ಇರುವ ಪದ್ಯ ಯಾರಿಗೆ ಗೊತ್ತಿಲ್ಲ. “ನಾಯಿಮರಿ ನಾಯಿಮರಿ ತಿಂಡಿ ಬೇಕೆ ತಿಂಡಿ ಬೇಕು ತೀರ್ಥ ಬೇಕು ಎಲ್ಲಾ ಬೇಕು ನಾಯಿಮರಿ ನಿನಗೆ ತಿಂಡಿ ಏಕೆ ಬೇಕು ತಿಂಡಿ ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು” ಈ ಪದ್ಯವಂತೂ ಎಲ್ಲಾ ಮಕ್ಕಳಿಗೂ ತುಂಬಾ ಇಷ್ಟವಾಗಿರುವ ಪದ್ಯ. ಬೆಕ್ಕಿನ ಬಗ್ಗೆ ಇರುವ ಈ ಪದ್ಯ ಹೇಳಿಯೇ,ಕೇಳಿಯೇ ಮಕ್ಕಳೆಲ್ಲ ಬೆಳೆದವರು. “ಬೆಕ್ಕೆ ಬೆಕ್ಕೆ ಮುದ್ದಿನ ಸೊಕ್ಕೆ ಎಲ್ಲಿಗೆ ಹೋಗಿದ್ದೆ ಕರೆದರೂ ಇಲ್ಲ ಹಾಲು ಬೆಲ್ಲ ಕಾಯಿಸಿ ಇಟ್ಟಿದ್ದೆ” ಮಕ್ಕಳು ಮುದ್ದು ಮಾಡುವ ಪ್ರಾಣಿಗಳು ಇವು.ಮೇಲಿನ ಪದ್ಯಗಳ ಕಲಿತಿರುವ,ಅದನ್ನು ಹಾಡುವ ಮಕ್ಕಳಿಗೆ ಕವಿತೆ ಬರೆಯಲು ಇವು ಪ್ರೇರಣೆ ನೀಡುವಂತೆ ಮಾಡಿದರೆ ಮಕ್ಕಳಿಂದ ಸಾಹಿತ್ಯ ರಚನೆ ಸಾಧ್ಯವಾಗಬಹುದು.ಮೊದಲು ಕವಿತೆಗಳನ್ನು ಕೇಳಿಸಿಕೊಳ್ಳಲು ಅನುವಾಗ ಬೇಕು.ನಂತರ ಪುಟ್ಟ ಪುಟ್ಟ ಕವನವಿರುವ ಪುಸ್ತಕಗಳನ್ನು ಓದಲು ಪ್ರಯತ್ನ ನಡೆಸ ಬೇಕು.ಓದುತ್ತಾ ಓದುತ್ತಾ ಹಾಡಿಕೊಳ್ಳುತ್ತಾ ಹೋದರೆ ಕಾವ್ಯದ ರುಚಿ ಹತ್ತುತ್ತದೆ. ಆಗ ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸಬಹುದು. ಮಕ್ಕಳ ಮಾನಸಿಕ ಹಾಗೂ ಬೌದ್ಧಿಕ ಬೆಳೆವಣಿಗೆಯನ್ನು ಗಮನದಲ್ಲಿಟ್ಟುಕೊಂಡು ರಚಿತವಾದ ಸಾಹಿತ್ಯವನ್ನು ಮಕ್ಕಳ ಸಾಹಿತ್ಯವೆನ್ನಬಹುದು. ಮಕ್ಕಳ ಸಾಹಿತ್ಯ ಕಿವಿಯ ಮೂಲಕ ಗ್ರಹಿಸುವ ಲಾಲಿ ಹಾಡುಗಳಿಂದಲೇ ಮೊದಲಿಟ್ಟಿರಬಹುದು. ಅನಂತರ ಕಥೆಗಳಿಂದ ಬೆಳೆದಿರಬಹುದು. ಹಾಡುವ ಹಾಗೂ ಕಥೆ ಹೇಳುವವರ ಹಾವ ಭಾವಗಳನ್ನು ನೋಡಿಯೂ ಮಗು ಗ್ರಹಿಸಿರಬಹುದು. ಈ ಕಾರಣದಿಂದ ಮಾನವನ ಸಾಹಿತ್ಯದ ಬುನಾದಿ ಇದಾಗಿದೆ ಎಂದರೆ ತಪ್ಪಾಗಲಾರದು. ಇದರ ಮೂಲ ಜಾನಪದವಾಗಿರಬಹುದು. ಜಗತ್ತಿನಲ್ಲಿ ಇದು ಹೇಗೇ ಪ್ರಾರಂಭವಾಗಿರಲಿ ಮಕ್ಕಳಿಗೆ ಅತ್ಯಗತ್ಯವಾದುದು, ಉಪಯುಕ್ತವಾದುದು ಎನ್ನುವುದಕ್ಕೆ ಎರಡನೆಯ ಮಾತಿಲ್ಲ. ಹಿರಿಯರೂ ಇದನ್ನು ಸವಿಯಬಹುದು ಎನ್ನುವುದು ಇದರ ಒಂದು ವಿಶೇಷ ಲಕ್ಷಣ. ಮಕ್ಕಳು ಕವಿತೆ ರಚನೆ ಮಾಡಲು ಅನುಕೂಲವಾದ ವಾತಾವರಣ ಕಲ್ಪಿಸಿದರೆ ಮಕ್ಕಳಿಂದ ಕವಿತೆ ಸೃಷ್ಟಿ ಸಾಧ್ಯವಾಗುತ್ತದೆ. ತಮ್ಮ ಸುತ್ತಲಿನ ವಸ್ತುಗಳ ಮೇಲೆ ಸರಳ ಪದಗಳನ್ನು ಬಳಸಿ ಪುಟ್ಟ ಪುಟ್ಟ ಕವಿತೆಗಳನ್ನು ಬರೆಯಲು ಪ್ರಯತ್ನಿಸಬೇಕು.ಚಿಟ್ಟೆ, ಶಾಲೆ,ಮರ,ಅಪ್ಪ ,ಅಮ್ಮ ,ತಮ್ಮ , ತಂಗಿ ,ಗೊಂಬೆ, ನಾಯಿ,ಬೆಕ್ಕು,ಗಿಣಿ ,ಹಸು,ಕರು ಹೀಗೆ ತಮಗೆ ಪ್ರಿಯವಾದ,ತನಗೆ ಗೊತ್ತಿರುವ ,ತಿಳಿದಿರುವ ವಸ್ತುಗಳ ಮೇಲೆ ,ಪ್ರಾಸ ಹಾಕಿ ಆಕರ್ಷಣೆಯವಾಗಿ ಬರೆಯುವ ಪ್ರಯತ್ನ ನಡೆಸಿದರೆ ಮಕ್ಕಳಿಗೆ ಆಸಕ್ತಿ ಹುಟ್ಟುತ್ತಾ ಹೋಗುತ್ತದೆ. ಸಾಹಿತ್ಯವು ಮಕ್ಕಳಿಗೆ ನಲಿವು, ತಿಳಿವು ಎರಡನ್ನೂ ಕೊಡಬೇಕು. ಸಂಸ್ಕೃತಿ, ಶಿಕ್ಷಣ, ಕುಟುಂಬ, ಪರಿಸರ ಈ ನಾಲ್ಕರ ಪ್ರಭಾವವ ಅದರಲ್ಲಿ ಬರಬೇಕು. ಮಕ್ಕಳ ಮಾನಸಿಕ, ಬೌದ್ಧಿಕ, ಸಾಮಾಜಿಕ ಮತ್ತು ಭಾಷಿಕ ಬೆಳೆವಣಿಗೆಗೆ ಸಹಾಯಕವಾಗಬೇಕು ಮೊದಲಾದ ಅನೇಕ ಅಭಿಪ್ರಾಯಗಳು ಈ ಸಾಹಿತ್ಯ ಕುರಿತು ವ್ಯಕ್ತವಾಗಿವೆ. ಒಟ್ಟಾರೆ ಮಕ್ಕಳ ಸಾಹಿತ್ಯ ಮಕ್ಕಳಿಗೆ ಸಂತೋಷ ನೀಡಬೇಕು, ಭಾಷೆಯನ್ನು ಕಲಿಸಬೇಕು, ಆಲೋಚನಾ ಶಕ್ತಿಯನ್ನು ಬೆಳೆಸಬೇಕು, ಜೊತೆಗೆ ಬದುಕುವ ವಿವೇಕವನ್ನು ಹೊಳೆಯಿಸಬೇಕು. ಆಗ ಅದು ಸಾರ್ಥಕವಾದೀತು . ಮಕ್ಕಳು ಸಾಹಿತ್ಯ ರಚನೆ ಮಾಡುವಾಗ, ಹಿರಿಯರ,ತಂದೆ ,ತಾಯಿಯರ,ಶಿಕ್ಷಕರ, ಸಾಹಿತಿಗಳ ಮಾರ್ಗದರ್ಶನ, ಸಲಹೆ ,ಸೂಚನೆಗಳಿರುತ್ತವೆ. ಮಕ್ಕಳು ಕಥೆ, ಕವನ, ಲೇಖನಗಳು, ನಗೆ ಹನಿಗಳನ್ನು ಬರೆಯಬಹುದು. ಮಕ್ಕಳು ಕವಿಗಳ ಹಾಗೂ ಸಾಹಿತಿಗಳ ಪುಸ್ತಕಗಳನ್ನು ಓದಬೇಕು. ಮಕ್ಕಳ ಮನಸ್ಸು ಅತ್ಯಂತ ಸೂಕ್ಷ್ಮ ಮತ್ತು ಸಂವೇದನಾಶೀಲವಾಗಿದ್ದು, ಮಕ್ಕಳ ವಿಚಾರ ಮತ್ತು ಕಲ್ಪನಾ ಲೋಕದ ಸಾಹಿತ್ಯಕ್ಕೆ ಪ್ರೋತ್ಸಾಹ ಬೆಂಬಲ ನೀಡಬೇಕು . ಮಕ್ಕಳು ಬರೆದ ಕಾವ್ಯ ಸಾಹಿತ್ಯಕ್ಕೆ ಸೂಕ್ತ ಮಾರ್ಗದರ್ಶನದೊಂದಿಗೆ ಪ್ರೋತ್ಸಾಹ ನೀಡಿದಲ್ಲಿ ಬೆಳೆದ ಮನಸ್ಸುಗಳಿಂದ ಉತ್ತಮ ಸಾಹಿತ್ಯ ಹೊರಹೊಮ್ಮಲು ಸಾಧ್ಯವಿದೆ. ಮಕ್ಕಳ ಸಾಹಿತ್ಯವನ್ನು ಟೀಕಾತ್ಮಕವಾಗಿ ನೋಡುವ, ಮಕ್ಕಳ ಸಾಹಿತ್ಯವನ್ನು ವಿಮರ್ಶಾ ದಷ್ಠಿಯಿಂದ ನೋಡುವ ಬದಲು ಮಕ್ಕಳ ಸಾಹಿತ್ಯದಲ್ಲಿ ಹೊಸತನ್ನು ಕಾಣುವ ಕಾವ್ಯ ಗುಣಬೇಕು. ಅವರು ಏನೇ ಬರೆದರೂ ಉತ್ತೇಜಿಸಿ ಮತ್ತಷ್ಟು ಬರೆಯಲು ಪ್ರೇರೇಪಣೆ ನೀಡಿದ್ದಲ್ಲಿ ಅವರಿಂದ ಉತ್ತಮವಾದ ರಚನೆಯನ್ನು ನಿರೀಕ್ಷಿಸಬಹುದು. ಮಕ್ಕಳು ಪಠ್ಯಪುಸ್ತಕವಲ್ಲದೆ ಸಾಹಿತ್ಯ ಕೃತಿಗಳನ್ನು ಓದಬೇಕು.ಕೊಂಡು ಓದುವ ಹವ್ಯಾಸ ಮಕ್ಕಳಿಗೆ ಬೆಳಸಬೇಕು.ಹಬ್ಬಗಳಲ್ಲಿ, ಹುಟ್ಟು ಹಬ್ಬದ ಕಾಣಿಕೆಯಾಗಿ ಮಕ್ಕಳಿಗೆ ಪುಸ್ತಕಗಳನ್ನು ಕೊಡುವ ಸಂಸ್ಕೃತಿ ಬೆಳಸಬೇಕು.ಆಗ ಮಕ್ಕಳಿಗೆ ಓದುವ ಅಭಿರುಚಿ ಬೆಳೆಯುವುದರ ಜೊತೆಗೆ ,ಪುಸ್ತಕಗಳ ಸಂಗ್ರಹಿಸುವ ಹವ್ಯಾಸ ಕೂಡ ಮಕ್ಕಳಲ್ಲಿ ಉಂಟಾಗುತ್ತದೆ. ಕೆಲವು ಮಕ್ಕಳಿಗೆ ಪುಸ್ತಕಗಳನ್ನು ಕೊಂಡು ಕೊಳ್ಳಲು ಹಣವಿರುವುದಿಲ್ಲ. ಆಗ ಅವರು ಗ್ರಂಥಾಲಯದಲ್ಲಿ ಪುಸ್ತಕಗಳನ್ನು ತೆಗೆದುಕೊಂಡು ಓದಬಹುದು. ನಮಗೆ ಬೇಕಾದ ವಿಷಯಗಳನ್ನು ಗ್ರಂಥಗಳಿಂದ ಅರಿತುಕೊಳ್ಳಬಹುದು. ಗ್ರಂಥಾಲಯವು ಜ್ಞಾನಾಭಿವೃದ್ಧಿಯ ಮಹತ್ವದ ಪಾತ್ರವನ್ನು ವಹಿಸುತ್ತದೆ. ಮಕ್ಕಳು ಹಿರಿಯರ ಪುಸ್ತಕ ಓದಬಾರದು ಎಂಬ ನಿಯಮವೇನು ಇಲ್ಲಾ ಕೆಲವೊಮ್ಮೆ ದೊಡ್ಡವರ ಪುಸ್ತಕಗಳು ಮಕ್ಕಳಿಗೆ ಬೇಕಾಗುವ ಸಾಧ್ಯತೆಗಳಿವೆ ಹೀಗಾಗಿ ಇವು ಜ್ಞಾನ ಬಿತ್ತರಿಸುವ ವಿಸ್ತರಿಸುವ ಘಟ್ಟಗಳಾಗಿ ಮಕ್ಕಳ ಮೇಲೆ ಪರಿಣಾಮ ಬೀರುತ್ತವೆ. ಒಟ್ಟಿನಲ್ಲಿ ಮಕ್ಕಳಿಗೆ ಸಾಹಿತ್ಯ ಓದುವ ಮತ್ತು ಬರೆಯುವ ಸಾಮಾರ್ಥ,ಆಸಕ್ತಿ ,ಅಭಿರುಚಿ ಬೆಳೆಸಿ ಆ ಮೂಲಕ ಸಾಹಿತ್ಯವನ್ನು ಶ್ರೀಮಂತಗೊಳಿಸಿಲು ಪ್ರಯತ್ನ ಮಾಡಬಹುದು ಕಿರು ಪರಿಚಯ: ಎನ್.ಶೈಲಜಾ ಹಾಸನ ರಾಜ್ಯದ ಪ್ರಮುಖ ಕಾದಂಬರಿಗಾರ್ತಿಯಾಗಿದ್ದು ಇವರ ಅನೇಕ ಕಾದಂಬರಿಗಳು ಸುಧಾ,ತರಂಗ ವಾರ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಸಾರವಾಗಿ ಓದುಗರನ್ನು ಯಶಸ್ವಿಯಾಗಿ ತಲುಪಿ ಅಪಾರ ಮೆಚ್ಚುಗೆ ಪಡೆದಿವೆ.ಕಥಾ ಸಂಕಲನ,ಕಾದಂಬರಿ,ಲೇಖನಗಳ ಸಂಕಲನ,ಕವನ ಸಂಕಲನ ,ಪ್ರಬಂಧ ಸಂಕಲನ ಹೀಗೆ ಒಟ್ಟು 20 ಕೃತಿಗಳು ಪುಸ್ತಕ ರೂಪದಲ್ಲಿ ಹೊರಬಂದಿದೆ.ಅನೇಕ ಪ್ರಶಸ್ತಿ ಪುರಸ್ಕಾರಗಳು ಈ ಕೃತಿಗಳಿಗೆ ಲಭಿಸಿದೆ. ಇವರ ಸಾಹಿತ್ಯ ಸಮಾಜಮುಖಿಯಾಗಿದ್ದು, ಸಾಮಾಜಿಕ ಸಮಸ್ಯೆಗಳಾದ ವೃದ್ಯಾಪ್ಯ, ವೃದ್ಧಾಶ್ರಮ, ರೈತರ ಆತ್ಮಹತ್ಯೆ, ಅದಕ್ಕೆ ಪರಿಹಾರ,ಸಾವಯುವ ಕೃಷಿ ,ಅದರ ಮಹತ್ವ,ಶಿಕ್ಷಣದ ಜೊತೆಗೆ ವೃತ್ತಿ ಕೌಶಲ ಹದಿಹರೆಯದ ಮಕ್ಕಳ ಸಮಸ್ಯೆಗಳು,ಮಾನಸಿಕ ಅಸ್ವಸ್ಥರ ಬಗ್ಗೆ, ಹೆಣ್ಣು ಮಕ್ಕಳ ಶಿಕ್ಷಣ,ಭ್ರೂಣ ಹತ್ಯೆಯಂತಹ ಪ್ರಸ್ತುತ ವಿಚಾರದ ಬಗ್ಗೆ, ಸರಳ ವಿವಾಹ,ಹೆಣ್ಣು ಮಕ್ಕಳ ಸಬಲೀಕರಣ ಹೀಗೆ ಹಲವಾರು ಗಂಭೀರ ವಿಚಾರಗಳ ಬಗ್ಗೆ ಕಾದಂಬರಿಯ ವಸ್ತುವಾಗಿಸಿ ಬರೆದಿರುವ ಶೈಲಜಾ ಹಾಸನ ಅವರ ಸಾಹಿತ್ಯ, ಸಮಾಜವನ್ನು ಬದಲಾವಣೆ ತರುವ ನಿಟ್ಟಿನಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ.

ಮಕ್ಕಳು ಮತ್ತು ಸಾಹಿತ್ಯ Read Post »

ಇತರೆ

ಚರ್ಚೆ

ನಿನ್ನೆ ಸಂಪಾದಕರು ಬರೆದ ‘ಜನರನ್ನತಲುಪುವ ಮಾರ್ಗ’ ಬರಹಕ್ಕೆಕವಿಮಿತ್ರರಾದ ಡಿ.ಎಸ್.ರಾಮಸ್ವಾಮಿಯವರು ನೀಡಿರುವ ಉತ್ತರ ಇಲ್ಲಿದೆ. ಈ ಚರ್ಚೆಯಲ್ಲಿ ನೀವೂ ಪಾಲ್ಗೊಳ್ಳಬಹುದು ಡಿ.ಎಸ್.ರಾಮಸ್ವಾಮಿ ಇವತ್ತಿನ ನಿಮ್ಮ ಬರಹ ನೋಡಿದೆ. ಸಾಹಿತ್ಯ ಪತ್ರಿಕೆಗಳು ಏಕೆ ನಿಲ್ಲಲಾರದೇ ಸೋಲುತ್ತಿವೆ ಎಂದು ಹೇಳ ಹೊರಟ ಬರಹ ಕಡೆಗೆ ಹತ್ತು ರೂಪಾಯಿಗೆ ಮುದ್ರಿಸಿ ಹಂಚುವ “ಜನಪ್ರಿಯ ಸಾಹಿತ್ಯ” ಪ್ರಸರಣದ ಲಾಭದವರೆಗೆ ಬಂದು ನಿಂತಿದೆ. ಕೆಲವು ವರ್ಷಗಳ ಕಾಲ ಎಡವೂ ಅಲ್ಲದ ಬಲಕ್ಕೂ ವಾಲದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಗತಿಗಳಿಗಳಿಗೆ ಮೀಸಲಾದ ಖಾಸಗೀ ಪ್ರಸಾರದ ಪತ್ರಿಕೆಯೊಂದರ ಜೊತೆ ಗುರ್ತಿಸಿಕೊಂಡು ಆ ಪತ್ರಿಕೆಯು ವಿಶೇಷವಾಗಿ ತಂದ ಅದರ ೭೫ ಮತ್ತು ೧೦೦ ನೇ ಸಂಚಿಕೆಯ ಕಾವ್ಯ ವಿಶೇಷ ಸಂಚಿಕೆಗಳಿಗೆ ನಾಡಿನ ಖ್ಯಾತನಾಮರ ಕವಿತೆಗಳನ್ನು ಹೆಕ್ಕಿ ಓರಣಗೊಳಿಸಿ ನಿಜಕ್ಕೂ ನಿಲ್ಲುವಂಥ ಸಮೃದ್ಧ ಸಂಚಿಕೆ ಮಾಡಿದೆವು. ನಾವು ಆಯ್ಕೆ ಮಾಡಿದ ಕವಿಗಳಲ್ಲಿ ಕೆಲವರು ಸಂಭಾವನೆ ಕೊಡಲ್ಲವೆ ಅಂತ ಕೇಳಿದರೆ ಹಲವು ಕಾರಣಗಳಿಂದ ಹೊರಗುಳಿದ ಕವಿಗಳ ಖಾಯಂ ಶತೃತ್ವ ನನಗೊದಗಿತು. ಕವಿತೆಯೇ ಮುಖ್ಯ ಕವಿ ಆಮೇಲೆ ಅನ್ನುವ ಕಾರಣಕ್ಕೆ ಪರಿವಿಡಿಯಲ್ಲಿ ಬರೀ ಕವಿತೆಗಳನ್ನು ಅಕಾರಾದಿ ವಿಭಾಗಿಸಿ ಕಡೆಯಲ್ಲಿ ಕವಿಯ ವಿಳಾಸ ಕೊಟ್ಟಿದ್ದೆವು. ಅದಕ್ಕೂ ಪ್ರತಿರೋಧ ಬಂತು. ಅದಕ್ಕಿಂತ ಮುಖ್ಯವಾಗಿ ಎಡದವರು ನೀವು ಬಲಕ್ಕೆ ವಾಲುತ್ತೀರ ಅಂತ ನಮ್ಮನ್ನು ಹೊರಗಿಟ್ಟರೆ ಬಲದವರದು ಬಿಡಿ ಕಾಸು ಖರ್ಚಾಗದೇ ಬಿಟ್ಟಿ ಪ್ರಚಾರ ಬಯಸುವ ಅವರಿಗೆ ನಾವು ಸಂಸ್ಕೃತಿಯ ಮೇಲಣ ದಂಗೆಕೋರರಂತೆ ಕಂಡೆವು. ಸರಿಸುಮಾರು ಮೂವತ್ತು ವರ್ಷ ಆ ಪತ್ರಿಕೆಯನ್ನು ತಮ್ಮೆಲ್ಲ ಸಮಯ ಶ್ರಮ ಮತ್ತು ದುಡಿಮೆಗಳಿಂದ ನಡೆಸುತ್ತಿದ್ದ ಆ ಸಂಪಾದಕರನ್ನು ಅಷ್ಟೂ ದಿನ ಯಾವ ಯಾವ ಕಾರಣಕ್ಕೋ ಸಂಪರ್ಕ ಇರಿಸಿಕೊಂಡಿದ್ದ ಮಹಾಮಹಿಮರೆಲ್ಲ ಆ ಪತ್ರಿಕೆ ಇತ್ತು ಅನ್ನುವುದನ್ನೇ ಮರೆತು ಬಿಟ್ಟರು. ಇನ್ನೂ ಆಸಕ್ತಿಯ ವಿಚಾರವೆಂದರೆ ಆ ಪತ್ರಿಕೆ ಕನ್ನಡದ ಹೊಸ ಬರಹಗಾರರನ್ನು ಕಾಸು ಪೀಕದೇ ಪುಸ್ತಕ ಪ್ರಕಟಿಸುವುದರ ಮೂಲಕ ಬೆಳಸಿತ್ತು ಕೂಡ. ಯಾವತ್ತೂ ಈ ಖಾಸಗೀ ಪ್ರಸಾರಕ್ಕೆ ಅಥವ ಗುಂಪಿಗೆ ನಡೆಸುವ ಮುದ್ರಣವಾಗುವ ಪತ್ರಿಕೆಗಳಿಗೆ ಜಾಹೀರಾತು ಅಥವ ಕೊಡುಗೆಯ ಬೆಂಬಲ ಬೇಕೇ ಬೇಕು. ಇಲ್ಲವಾದರೆ ನಡೆಸೋದಾದರೂ ಹೇಗೆ? ಇನ್ನು ಪೋರ್ಟಲ್ ಮೂಲಕ ಸದ್ಯ ಲಭ್ಯವಿರುವ ಕನ್ನಡದ ಪತ್ರಿಕೆಗಳಿಗೆ ಓ(ನೋ)ದುಗರಿದ್ದಾರ ಪರಿಶೀಲಿಸಿದರೆ ನಿರಾಸೆ ಗ್ಯಾರಂಟಿ. ಆ ಕುರಿತು ಮತ್ತೊಮ್ಮೆ ಬರೆಯುವೆ. ಏಕೋ ನೀವು ಸುರುವಿನಲ್ಲೇ ನಿರಾಸೆಗೊಂಡಂತಿ‍ದೆ. ಮೊದಲು ತಿಳಿಯಬೇಕಾದ ಸತ್ಯ ಎಂದರೆ ಸಾಹಿತ್ಯ ಸಂಸ್ಕೃತಿ ಸಂಗೀತ ಇವೆಲ್ಲವೂ ಯಾವತ್ತೂ ಅಲ್ಪಸಂಖ್ಯಾತರು ಬಯಸುವಂಥವು. ಆದರೆ ಧರ್ಮ ಜಾತಿ ರಾಜಕೀಯ ಮತ್ತು ಮುಖ್ಯವಾಗಿ ಮನರಂಜನೆ ಬಹುಸಂಖ್ಯಾತರ ಇಷ್ಟದ ವಲಯ. ಹಾಗಾಗಿ ಅವನ್ನು ಪ್ರಸರಿಸುವ ಪತ್ರಿಕೆ ಗುಂಪು ಅಥವ ವಾಹಿನಿ ಯಾವತ್ತೂ TRP ಯಲ್ಲಿ ಮೇಲಿರುತ್ತದೆ. ಒಂದು ಬದ್ಧತೆಗೆ ಮತ್ತು ವ್ಯವಸ್ಥೆಯ ವಿಮರ್ಶೆಗೆ ನಿಂತವರು ನಿರಂತರ ಹೊಡೆದಾಡಲೇ ಬೇಕಾದ ಅನಿವಾರ್ಯತೆ ಇರುತ್ತದೆ. ದಯವಿಟ್ಟು ಕೈ ಚಲ್ಲದೇ ಮುಂದುವರೆಯಿರಿ. ಬೇರೆ ಯಾರಿಗೂ ಅಲ್ಲದಿದ್ದರೂ ನಿಮಗೆ ಇಷ್ಟವಾದ ಬರಹಗಳನ್ನು ಕೆಲವರಿಗಾದರೂ ಮುಟ್ಟಿಸಬಹುದೆನ್ನುವ ಅವಕಾಶಕ್ಕಾದರೂ ಮುನ್ನಡೆಯಿರಿ (ನೀವೂ ಈ ಚರ್ಚೆಯ ಭಾಗವಾಗಿಬರೆಯಬಹುದು)

ಚರ್ಚೆ Read Post »

ಇತರೆ

ಅನುಭವ

ಕಾಯುವವರು ಹಲವರಾದರೆ ಕೊಲುವವ ಒಬ್ಬನೇ ! ಗೌರಿ.ಚಂದ್ರಕೇಸರಿ          ಕೆಲ ದಿನಗಳ ಹಿಂದೆ ಮಗಳೊಂದಿಗೆ ದ್ವಿಚಕ್ರ ವಾಹನದಲ್ಲಿ ಪೇಟೆಗೆಂದು ಹೊರಟಿದ್ದೆ. ಸ್ವಲ್ಪ ದೂರ ಕ್ರಮಿಸುವುದರಲ್ಲಿ ರಸ್ತೆಯ ಮಧ್ಯದಲ್ಲಿ ಹಾವೊಂದು ಕಂಡಿತು. ಆ ಬದಿಯಿಂದ ಈ ಬದಿಯ ರಸ್ತೆಯನ್ನು ಅದು ದಾಟುತ್ತಿತ್ತು. ತಕ್ಷಣವೇ ಸ್ಕೂಟಿಯನ್ನು ಬದಿಗೆ ನಿಲ್ಲಿಸಿದ್ದೆವು. ಎದುರು ಬದುರಿನಿಂದ ಬರುತ್ತಿದ್ದ ವಾಹನ ಸವಾರರು ಹಾವಿನ ಮೇಲೆ ವಾಹನಗಳನ್ನು ಹತ್ತಿಸದಂತೆ ಮಗಳು ಎಲ್ಲರ ಗಮನವನ್ನು ಹಾವಿನತ್ತ ಸೆಳೆಯುತ್ತಿದ್ದಳು. ಅದನ್ನು ಕಂಡ ವಾಹವ ಸವಾರರೆಲ್ಲ ತಮ್ಮ ವಾಹನಗಳ ವೇಗವನ್ನು ತಗ್ಗಿಸಿ ಹಾವಿಗೆ ಯಾವುದೇ ಹಾನಿಯಾಗದಂತೆ ಬದಿಯಿಂದ ಹೋಗುತ್ತಿದ್ದರು. ಇನ್ನು ಕೆಲವರು ಹಾವು ರಸ್ತೆ ದಾಟುವುದನ್ನು ಕುತೂಹಲದಿಂದ ವೀಕ್ಷಿಸುತ್ತ ನಿಂತಿದ್ದರು. ಅಷ್ಟರಲ್ಲಿ ಪ್ರಯಾಣಿಕರನ್ನು ಹೊತ್ತ ಆಟೋ ರಿಕ್ಷಾವೊಂದು ಅತೀ ವೇಗದಲ್ಲಿ ಬರುತ್ತಿತ್ತು. ತಕ್ಷಣ ಪರಿಸ್ಥಿತಿಯನ್ನು ಊಹಿಸಿದ ಆಟೋಚಾಲಕ ತನ್ನ ಸಮಯ ಪ್ರಜ್ಞೆಯನ್ನು ಮೆರೆದು ಆಟೋವನ್ನು ಅದೇ ವೇಗದಲ್ಲಿ ರಸ್ತೆಯಿಂದ ಕೆಳಗಿಳಿಸಿದ. ಆದರೆ ನಿಯಂತ್ರಣ ತಪ್ಪಿದ ಆಟೋ ರಸ್ತೆಯ ಪಕ್ಕಕ್ಕೆ ವಾಲಿಕೊಂಡು ಬಿಟ್ಟಿತು. ಆಟೋದಲ್ಲಿದ್ದ ಪ್ರಯಾಣಿಕರಿಗೆ ಹಾಗೂ ಚಾಲಕನಿಗೂ ಸಣ್ಣ ಪುಟ್ಟ ಗಾಯಗಳಾದವು. ಅಲ್ಲಿದ್ದ ಕೆಲವರು ಆಟೋವನ್ನು ಮೇಲಕ್ಕೆತ್ತಿ ಅದರಲ್ಲಿದ್ದವರನ್ನು ಉಪಚರಿಸುತ್ತಿದ್ದರು. ಅಷ್ಟರಲ್ಲಿ ಆ ಹಾವು ರಸ್ತೆಯ ಮುಕ್ಕಾಲು ಭಾಗವನ್ನು ದಾಟಿತ್ತು. ಅಷ್ಟರಲ್ಲಿ ವೇಗವಾಗಿ ಬಂದ ಬೈಕ್ ಸವಾರನೊಬ್ಬ ಇನ್ನೇನು ರಸ್ತೆಯಿಂದ ಕೆಳಗಿಳಿಯುತ್ತಿದ್ದ ಹಾವಿನ ಹಿಂಭಾಗದ ಮೇಲೆ ಬೈಕನ್ನು ಹತ್ತಿಸಿಕೊಂಡು ವೇಗವಾಗಿ ಹೋಗಿಬಿಟ್ಟ. ಗಾಯಗೊಂಡ ಹಾವು ಸ್ವಲ್ಪ ಹೊತ್ತು ಜೀವನ್ಮರಣದ ಜೊತೆ ಹೋರಾಡಿ ತನ್ನ ಪ್ರಾಣವನ್ನು ಬಿಟ್ಟಿತ್ತು. ಅಪಾಯವನ್ನೂ ಲೆಕ್ಕಿಸದೇ ಹಾವನ್ನು ಉಳಿಸಲೆಂದು ಆಟೋ ಸಮೇತ ಬಿದ್ದು ಗಾಯಗೊಂಡ ಚಾಲಕ ಒಂದು ಕಡೆಯಾದರೆ ಕಂಡೋ ಅಥವಾ ಕಾಣದೆಯೋ ಹಾವಿನ ಸಾವಿಗೆ ಕಾರಣನಾದ ಆ ಬೈಕ್ ಸವಾರ ಇನ್ನೊಂದು ಕಡೆ. ಒಂದು ಜೀವವನ್ನು ಕಾಯುವವರು ಹಲವರಾದರೆ ಅದೇ ಜೀವವನ್ನು ಕೊಲುವವ ಇನ್ನೊಬ್ಬ. ಅದಕ್ಕೇ ಹೇಳುವುದೇನೋ. ಕಾಯುವವ ಒಬ್ಬನಾದರೆ ಕೊಲುವವ ಇನ್ನೊಬ್ಬ ಎಂದು. ಕಾಪಾಡುವ ದೇವರುಗಳು ಎಷ್ಟೇ ಇದ್ದರೂ ಕುಣಿಕೆ ಹಾಕುವವ ಮಾತ್ರ ಒಬ್ಬನೇ ಎಂದು ಮನಸ್ಸು ಹೇಳುತ್ತಿತ್ತು. ಆ ಹಾವು ಸುರಕ್ಷಿತವಾಗಿ ರಸ್ತೆಯನ್ನು ದಾಟಲು ಅಲ್ಲಿದ್ದವರೆಲ್ಲ ಮಾಡಿದ ಪ್ರಯತ್ನವೆಲ್ಲ ನಿರರ್ಥಕವಾಗಿತ್ತು.

ಅನುಭವ Read Post »

ಇತರೆ

ಕಾವ್ಯಯಾನ

ಅಪ್ಪನೊಡನೆ ಒಂದಿಷ್ಟು ಮೋಹನ ಗೌಡ ಹೆಗ್ರೆ ಒರಿಗೆಯವರೆಲ್ಲ ಬಾಲ್ಯಕ್ಕೆ ಬಣ್ಣ ತುಂಬುವಾಗ ನನ್ನ ಪಂಜರದ ಗಿಳಿಯಾಗಿ ಮಾಡಿದ ಸದಾ ನಾ ಶಪಿಸುವವ ನೀನಾಗಿದ್ದೆ ಊರ ಜಾತ್ರೆಯಲಿ ಅಮ್ಮ ಕೈ ಹಿಡಿದು ನಿಂತರೂ ದೂರದ ಕಣ್ಣುಗಳ ಕಾವಲುಗಾರನಾದ ನಿನ್ನ ಶಪಿಸುವವಳು ನಾನಾಗಿದ್ದೆ. ಎಲ್ಲೋ ಯಾರೋ ಓಡಿಹೋದ ಸುದ್ದಿಗೆಲ್ಲಾ ಸುಮ್ಮನೆ ಮುಂದಾಲೋಚನೆಯಿಂದ ಅಮ್ಮನ ಬೈಯುವಾಗ ನಾ ಕಂಡ ನಕ್ಸಲೈಟ್ ನೀನಾಗಿದ್ದೆ…. ನಿನ್ನಿಷ್ಟದಂತೆ ಓದಿದೆ ಕೆಲಸಕ್ಕೂ ಸೇರಿದೆ ಇಷ್ಟು ವರ್ಷ ಬೆವರಿಳಿಸಿದ ನೀನು ನಾ ಮೆಚ್ಚಿದ ಗಂಡಿಗೆ ನನ್ನ ಒಪ್ಪಿಸಿದೆ….. ಅಂದು ನಿನ್ನ ಕಣ್ಣಲ್ಲಿದ್ದ ಸಂತೃಪ್ತಿ ಎಲ್ಲವನ್ನೂ ಒಂದೇ ನೋಟ ಪ್ರೀತಿಯ ಕಣ್ಣೀರಲ್ಲಿ ಹೇಳಿದ ಪಾಠೋಪಕರಣ ನನಗೆ ಪ್ರಶ್ನಾರ್ಥಕವಾಗಿತ್ತು… ಅಂದು ನೀನು ನನಗೆ ಕ್ರೂರಿ, ಕೋಪಿಷ್ಟ, ಸ್ವಾರ್ಥಿ, ಎಲ್ಲವೂ ಆಗಿದ್ದೆ.. ನಿನ್ನ ದ್ವೇಷಿಸಿ ತಿರಸ್ಕರಿಸಿದಾಗಲೆಲ್ಲ ಅದೆಷ್ಟು ಕಣ್ಣೀರಿಟ್ಟಿರುವೆಯೋ ಆದರೆ ಇಂದು ನಾನು ತಾಯಿಯಾಗಿರುವೆ ನನ್ನ ಮಗಳಿಗೆ ಮತ್ತೆ ಕ್ರೂರಿಯಾಗಲು……

ಕಾವ್ಯಯಾನ Read Post »

ಇತರೆ

ಶರೀಫರ ನೆನೆಯುತ್ತಾ…

ಶಿಶುನಾಳ ಶರೀಫ ಶಿವಯೋಗಿಗಳ ಜಯಂತ್ಯೋತ್ಸವ 200ನೇ ವರ್ಷಾಚರಣೆ ಮರೆವು ಮನುಷ್ಯನಿಗೆ ದೇವರು ಕೊಟ್ಟ ವರ ಎಂಬ ಮಾತು ಇದೆ. ಒಂದರ್ಥದಲ್ಲಿ ಅದು ನಿಜವೂ ಹೌದು. ಆದರೆ ಉದಾತ್ತ ಸಂಗತಿಗಳನ್ನು, ಅಂಥದನ್ನು ಆಚರಣೆ ಮೂಲಕ ತನಗೆ ಹೇಳಿ ಕೊಟ್ಟ ಮಹಾ ಮಾನವರನ್ನು ಮರೆತು ಬಿಡುವ ಕೃತಘ್ನತೆ ತೋರುವುದು ಲೋಕದ ರೂಢಿ. ಸರಿಯಾಗಿ ೨೦೦ ವರ್ಷದ ಹಿಂದೆ ಕನ್ನಡ ನಾಡಿನಲ್ಲಿ ಹುಟ್ಟಿ ೭೦ ವರ್ಷ ಕಾಲ ಏಳು ಬೀಳಿನ ಜೀವನ ನಡೆಸಿದ ಅತ್ಯುನ್ನತ ಆಧ್ಯಾತ್ಮ ಸಾಧಕರು ಶಿಶುನಾಳದ ಶರೀಫ ಶಿವಯೋಗಿಗಳು. ೨೦೧೯ ಅವರ ಜನನದ ದ್ವಿಶತಮಾನೋತ್ಸವ ವರ್ಷ.. ಯಾರೊಬ್ಬರಿಗೂ ಆ ನೆನಪಿಲ್ಲ. ಅಕ್ಕ ಅನುಪಮಾ (ಡಾ.ಎಚ್.ಎಸ್.ಅನುಪಮಾ) ಒಮ್ಮೆ ಈ ಕುರಿತು ಗಮನ ಸೆಳೆದರು.. ಅಷ್ಟೇ ಅಲ್ಲ, ತಮ್ಮ ಗಾಂಧಿ ೧೫೦ ಕಾರ್ಯಕ್ರಮದಲ್ಲಿ ಗಾಯಕರನ್ನು ಕರೆಸಿ ಶರೀಫರ ತತ್ವ ಪದಗಳನ್ನು ಹಾಡಿಸುವ ಮೂಲಕ ಅವರನ್ನು ನೆನೆಯುವ ಪ್ರಯತ್ನ ಮಾಡಿದರು. ಆ ಕಾರ್ಯಕ್ರಮಕ್ಕೆ ಸಾಕ್ಷಿಯಾದ ನನ್ನನ್ನು ಅಪರಾಧಿ ಭಾವವೊಂದು ಸತಾಯಿಸತೊಡಗಿತು.. ಶರೀಫರ ನಾಡಲ್ಲೇ ಇದ್ದು ಏನೂ ಮಾಡಲಾರದವರಾದ ನಾವು ಉಪಕಾರಗೇಡಿ ಅಲ್ಲವೇ.. ಎಂಬ ಭಾವದಿಂದ ಹೊರಬರಲಾಗದೆ ಕೊನೆಗೆ ಸಮಾನ ಮನಸ್ಕರಲ್ಲಿ ಹಂಚಿಕೊಂಡಾಗ ಹುಟ್ಟಿದ್ದು ಶರೀಫ್ ಬಳಗ . ಅದು ದೀಪಾವಳಿ ಪ್ರತಿಪದೆಯ ದಿನವಾಗಿತ್ತು. ಆದಷ್ಟು ಬೇಗ ಕಾರ್ಯಕ್ರಮ ಮಾಡುವುದೆಂದು ತೀರ್ಮಾನವಾಯ್ತು. ಒಂದೊಂದಾಗಿ ಕೆಲಸ ಆರಂಭಿಸಿದೆವು. ನಮಗಿದು ಮೊದಲ ಹೆಜ್ಜೆಯಾದ್ದರಿಂದ ಮನಸ್ಸು ಗೊಂದಲಗಳ ಗೂಡು.. ಎಲ್ಲವನ್ನೂ ಸರಿಸುತ್ತ ಸಾಗಿದಾಗ ಅಂತಿಮವಾಗಿ ರೂಪುಗೊಂಡ ಕಾರ್ಯಕ್ರಮ ಇದೇ ಶನಿವಾರ ದಿನಾಂಕ ೨೩/೧೧/೨೦೧೯ ರಂದು ಬನಹಟ್ಟಿಯಲ್ಲಿ ಜರುಗುವುದು. ಈ ಪ್ರಯತ್ನವನ್ನು ಇನ್ನೂ ಬೇರೆ ಕಡೆಗಳಿಗೆ ಕೊಂಡೊಯ್ಯುವ ಹಂಬಲವೂ ಇದೆ.. ಅದೆಲ್ಲ ಕೂಡಿ ಬರಲು ಆಸಕ್ತರು ಮನಸ್ಸು ಮಾಡಬೇಕು.. ಜತೆಗೂಡಬೇಕು.. ಶರೀಫರ ಆಯ್ದ ೧೦ ಜನಪ್ರಿಯ ಗೀತೆಗಳನ್ನು ಗಾಯಕರು ಪ್ರಸ್ತುತ ಪಡಿಸುವರು. ಅದಕ್ಕೂ ಮುನ್ನ ಶರೀಫರ ಕುರಿತು ಸಂಕ್ಷೇಪವಾಗಿ ಮಾತು. ಪ್ರತಿಯೊಂದು ಗೀತೆಯನ್ನು ಆ ಗೀತೆಯ ಅರ್ಥ ವಿವರಣೆ ಹಿಂಬಾಲಿಸುವುದು. ನಮ್ಮದೇ ವಿಶಿಷ್ಟವಾದೊಂದು ರೀತಿಯಲ್ಲಿ ಸಂತರನ್ನು ನೆನೆಯುವ ಒಂದು ಪ್ರಯತ್ನ ಸಾಕಾರಗೊಳ್ಳುತಿರುವುದು ಹೀಗೆ.. ನೀವೂ ಬನ್ನಿ… ನಿಮ್ಮ ಬಳಗವನ್ನು ಕರೆ ತನ್ನಿ.. ಶರಣು ಶರಣಾರ್ಥಿ ಚಂದ್ರ ಪ್ರಭ ದಿನಾಂಕ:23-11-2019,ಶನಿವಾರ ಸಮಯ:ಸಂಜೆ5.30 ಹಿರೇಮಠದ ಆವರಣ,ಬನಹಟ್ಟಿ ಸರ್ವರಿಗೂ ಸ್ವಾಗತ

ಶರೀಫರ ನೆನೆಯುತ್ತಾ… Read Post »

ಇತರೆ

ವಿಶ್ಲೇಷಣೆ

ರಾಮ-ರಾಮಾಯಣ ಅಯೋಧ್ಯಾರಾಮ. ಗಣೇಶ ಭಟ್ ಶಿರಸಿ ..       ಅಯೋಧ್ಯೆಯಲ್ಲಿ  ರಾಮಮಂದಿರ  ನಿರ್ಮಾಣಕ್ಕೆ  ಹಸಿರು  ನಿಶಾನೆ ಸಿಕ್ಕಿರುವುದರಿಂದ    ಜನಸಾಮಾನ್ಯರು ನಿರಾಳವಾಗಿದ್ದರೆ, ರಾಜಕೀಯ  ಪಕ್ಷಗಳಿಗೆ   ಚಿಂತೆ  ಶುರುವಾಗಿದೆ.   ಬಹಳಷ್ಟು ವರ್ಷಗಳಿಂದ ಸಮಸ್ಯೆಯನ್ನು ಜೀವಂತವಾಗಿಟ್ಟು,  ಜನರನ್ನು  ಮರುಳು ಮಾಡಿ ಮತ ಗಳಿಸುತ್ತಿದ್ದವರಿಗೆ  ಇನ್ನೊಂದು ಹೊಸ ಸಮಸ್ಯೆ  ಹುಟ್ಟು ಹಾಕುವ  ಕುರಿತು   ಯೋಚಿಸುವ  ಪರಿಸ್ಥಿತಿ  ಎದುರಾಗಿದೆ.  ಇನ್ನು ರಾಮನನ್ನು  ಬಹುಬೇಗ  ನೇಪಥ್ಯಕ್ಕೆ ಸರಿಸಲಾಗುತ್ತದೆ.  ರಾಮಾಯಣದ  ಅಯೋಧ್ಯೆಯ  ರಾಮಚಂದ್ರನಿಗೂ, ಭಾರತೀಯ  ದರ್ಶನಶಾಸ್ತ್ರದ  ರಾಮನಿಗೂ ಏನಾದರೂ ಸಂಬಂಧವಿದೆಯೇ ಎಂಬ ಕುರಿತು ಪುನಃ ಚಿಂತನೆ  ನಡೆಸಬೇಕಾದ  ಸಮಯವಿದು.      ಭಾರತೀಯ ಚಿಂತನೆಯನ್ವಯ ರಾಮ ಎಂದರೆ ಪರಮ ಪುರುಷ,   ಪುರುಷೋತ್ತಮ, ಪರಮಪ್ರಜ್ಞೆ; ಜನಸಾಮಾನ್ಯರ ಭಾಷೆಯ  ದೇವರು.  ಸಂಸ್ಕೃತದ  ಮೂಲಧಾತು  ‘ರಮ್’  ಗೆ  ಗಂಯ್  ಪ್ರತ್ಯಯ ಸೇರಿಸಿದಾಗ  ರಾಮ ಎಂದಾಗುತ್ತದೆ.   ಯಾವ  ಅಸ್ತಿತ್ವವು  ಸಂತೋಷವನ್ನು ನೀಡುತ್ತದೋ, ಮನಕ್ಕೆ  ಆನಂದವನ್ನು  ಒದಗಿಸುತ್ತದೋ ಅದುವೇ ರಾಮ.  ಅಮಿತ ಆನಂದದ ಮೂರ್ತ ರೂಪವೇ ರಾಮ.    ರಾಮ ಶಬ್ದಕ್ಕೆ   ಮೂರು ರೀತಿಯ  ಪ್ರಮುಖ ವ್ಯಾಖ್ಯೆಗಳಿವೆ. ‘ರಮಂತೇ ಯೋಗಿನ ಯಸ್ಮಿನ್’ ಅಂದರೆ  ಯಾವುದರಿಂದ  ಯೋಗಿಗಳು  ಆನಂದ ಪಡೆಯುತ್ತಾರೋ  ಅದು ರಾಮ.  ಯೋಗ ಎಂದರೆ ಜೀವಾತ್ಮ ಪರಮಾತ್ಮನಲ್ಲಿ  ಒಂದಾಗುವುದು;  ಈ ಉದ್ದೇಶವನ್ನು  ಗುರಿಯಾಗಿಟ್ಟುಕೊಂಡು ಬದುಕುವವರು ಯೋಗಿಗಳು. ಯೋಗಿಯಾದವರು  ಅಲ್ಪಸುಖದಿಂದ ಅಥವಾ ತಾತ್ಕಾಲಿಕ ಸಂತೋಷದಿಂದ  ತೃಪ್ತರಾಗುವುದಿಲ್ಲ.  ಅವರಿಗೆ ಬೇಕಾದುದು ಮಿತಿಯಿಲ್ಲದಷ್ಟು  ಸುಖ; ಸುಖ ಅನಂತವಾದಾಗ ಅದು ಆನಂದ  ಎನಿಸಿಕೊಳ್ಳುತ್ತದೆ.  ಅನಂತವಾದ  ಸುಖವನ್ನು  ನೀಡುವ  ಸಾಮಥ್ರ್ಯ ಅನಂತವಾದ  ಅಸ್ತಿತ್ವಕ್ಕೆ  ಮಾತ್ರ ಇರಲು ಸಾಧ್ಯ. ಈ ಅನಂತತೆಯನ್ನೇ ದಾರ್ಶನಿಕರು ಪರಮಾತ್ಮ, ಪರಮಪ್ರಜ್ಞೆ ಮುಂತಾಗಿ ಕರೆದಿದ್ದಾರೆ.  ಆದ್ದರಿಂದ ಯೋಗಿಗಳಿಗೆ  ಪರಮಾನಂದವನ್ನು ನೀಡುವ ಅಸ್ತಿತ್ವವೇ ರಾಮ.     ರಾಮನ ಇನ್ನೊಂದು ವ್ಯಾಖ್ಯೆಯೆಂದರೆ ‘ರಾತಿ ಮಹೀಧರಮ್  ರಾಮ’. ರಾತಿ ಎಂದರೆ  ಅತ್ಯಂತ  ಉಜ್ವಲವಾದದ್ದು.  ತಾನು ಸ್ವತಃ  ಪ್ರಕಾಶಿಸುವದರ  ಜೊತೆಗೆ  ಇತರರಿಗೂ ಪ್ರಭೆ ಬೀರುವ  ಸಾಮಥ್ರ್ಯವನ್ನು   ಒದಗಿಸುವ  ಅಸ್ತಿತ್ವವೇ ರಾಮ. ಚಂದ್ರನ  ಪ್ರಭೆಗೆ  ಪೃಥ್ವಿ ಕಾರಣ, ಪೃಥ್ವಿಯ ಪ್ರಭೆಗೆ  ಸೂರ್ಯ, ಸೂರ್ಯನ ಪ್ರಕಾಶಕ್ಕೆ ಕಾರಣ ಸೃಷ್ಟಿಕರ್ತ  ಅಥವಾ ಪರಮಾತ್ಮ. ಈ ವ್ಯಾಖ್ಯೆಯನ್ವಯವೂ  ರಾಮ ಎಂದರೆ  ಪರಮ ಪುರುಷ. ರಾತಿಯ  ರಾ+ ಮಹೀಧರದ ‘ಮ’ ಸೇರಿದಾಗ ರಾಮ.    ‘ರಾವಣಸ್ಯ ಮರಣಮ್  ರಾಮ’  ಎಂಬುದು ರಾಮ ಶಬ್ದದ ಇನ್ನೊಂದು  ವ್ಯಾಖ್ಯೆ.   ರಾವಣನ  ಮರಣಕ್ಕೆ ಕಾರಣವಾಗುವುದೇ ರಾಮ.  ರಾವಣ ಎಂದರೆ ಭ್ರಷ್ಟಮನ. ರೌ+ಅಣ =ರಾವಣ. ಯಾವುದರಿಂದ ಮನಸ್ಸು ಅಧಃಪತನದತ್ತ ಚಲಿಸುತ್ತದೋ ಅದು ರಾವಣ.  ರಾವಣ ದಶಕಂಠ.  ಯಾಕೆಂದರೆ ಮನಸ್ಸು ನಾಲ್ಕು ದಿಕ್ಕುಗಳು, ನಾಲ್ಕು ಉಪದಿಶೆಗಳು,  ಮೇಲೆ  ಮತ್ತು ಕೆಳಗೆ ಹೀಗೆ ಒಟ್ಟೂ ಹತ್ತು ದಿಕ್ಕುಗಳಲ್ಲಿ ಚಲಿಸುತ್ತದೆ. ಇಂತಹ ಮನಸ್ಸಿನ ಮರಣ ಎಂದರೆ ಅದು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವುದು. ಮಾನವನ  ಮನಸ್ಸು ಪರಮಾತ್ಮನಲ್ಲಿ ಒಂದಾದಾಗ ಮಾತ್ರ  ಅದರ ಅಸ್ತಿತ್ವ ಇಲ್ಲವಾಗುತ್ತದೆ. ಮನಸ್ಸನ್ನು  ಏಕಾಗ್ರಗೊಳಿಸಿ, ಅನಂತತೆಯ ಭಾವಧಾರಣೆಯಿಂದ ಸಾಧನೆ ಮಾಡಿದಾಗ ಇದು ಸಾಧ್ಯ.  ದಶದಿಕ್ಕುಗಳಲ್ಲಿ  ಚಲಿಸುವ  ಚಂಚಲ ಮನವನ್ನು  ಸ್ಥಿರಗೊಳಿಸಿ ಅದನ್ನು  ಉನ್ನತಿಯತ್ತ  ನಡೆಸುವ  ಅಸ್ತಿತ್ವವೇ ರಾಮ.  ಇಲ್ಲಿ ಕೂಡಾ ರಾವಣದ ರಾ+ ಮರಣದ   ಮ ಸೇರಿ ರಾಮ.   ರಾಮಾಯಣ ಎಂದರೆ ರಾಮನ ಆಶ್ರಯ ತಾಣ.  ಉದಾಹರಣೆಗಾಗಿ ನಾರಾಯಣ. ನಾರ+ ಅಯನ. ಎಲ್ಲಿ ನಾರ ಆಶ್ರಯ ಪಡೆಯುತ್ತದೋ ಅದುವೇ ನಾರಾಯಣ. ನಾರ ಶಬ್ದಕ್ಕೆ  ಸಂಸ್ಕೃತದಲ್ಲಿ  ನೀರು , ಪ್ರಕೃತಿ , ಭಕ್ತಿ  ಎಂಬ ಮೂರು  ಅರ್ಥಗಳಿವೆ.  ಪ್ರಕೃತಿಯ  ಆಶ್ರಯ ಪರಮಾತ್ಮ, ಪರಮ ಪುರುಷನ ಕುರಿತಾದ  ಅನನ್ಯ ಪ್ರೀತಿಯೇ ಭಕ್ತಿ.  ಆದ್ದರಿಂದಲೇ  ನಾರಾಯಣ ಎಂದರೆ ನಾರಕ್ಕೆ  ಆಶ್ರಯದಾತ. ಸಂಸ್ಕೃತ ಶಬ್ದದ ಈ ವಿಶ್ಲೇಷಣೆಯಂತೆ  ರಾಮನಿಗೆ  ಆಶ್ರಯ ನೀಡಿರುವುದು  ರಾಮಾಯಣ.  ರಾಮ ಶಬ್ದದ ಅರ್ಥವೇ ಪರಮಾತ್ಮ ಎಂದಿರುವಾಗ , ಸಕಲ ಚರಾಚರಗಳ ಆಶ್ರಯದಾತನೂ, ಆಧಾರವೂ ಆಗಿರುವ  ಪರಮ   ಪುರುಷನಿಗೂ ಆಶ್ರಯವನ್ನು ನೀಡುವ  ವಿಚಾರವೇ ಅಸಂಬದ್ಧ.     ಹಾಗಾದರೆ ರಾಮಾಯಣದ  ಹುಟ್ಟು ಹೇಗಾಯಿತು? ಮಹರ್ಷಿ ವಾಲ್ಮೀಕಿಯು ತನ್ನ ಕಲ್ಪನೆಯಲ್ಲಿ  ಮಾಡಿದ ಆದರ್ಶ ರಾಜ, ಆದರ್ಶ  ವ್ಯಕ್ತಿ ರಾಮ. ಅವನಿಗೆ  ಆಶ್ರಯ ನೀಡಿದ ಕಥಾನಕ ಗ್ರಂಥವೇ ರಾಮಾಯಣ.  ರಾಮಾಯಣದಲ್ಲಿ ಬರುವ  ರಾಮ   ಒಬ್ಬ ಕಾಲ್ಪನಿಕ  ವ್ಯಕ್ತಿ.      ರಾಮಾಯಣದ  ಕುರಿತಾದ   ಇನ್ನೊಂದು ಪ್ರಸಿದ್ಧ ಗ್ರಂಥವೆಂದರೆ  ತುಳಸಿದಾಸರ  ರಾಮಚರಿತ  ಮಾನಸ.  ಹೆಸರೇ ಸೂಚಿಸುವಂತೆ  ತುಳಸಿದಾಸರ  ಕಲ್ಪನೆಯಲ್ಲಿ  ಮೂಡಿದ  ರಾಮನ ಚರಿತ್ರೆ.     ರಾಮಾಯಣದಲ್ಲಿ  ವಿವರಿಸಿದ  ಘಟನೆಗಳು,  ಇತಿಹಾಸ ಎನ್ನುವುದಕ್ಕಿಂತ  ನೀತಿ ಕಥೆ ಎಂಬ ವಾದವನ್ನೇ  ಪುರಸ್ಕರಿಸುತ್ತವೆ.  ಇಡೀ ರಾಮಾಯಣದಲ್ಲಿ ಎದ್ದು ಕಾಣುವುದು ಪುರುಷ ಪ್ರಧಾನ ಮತ್ತು ಪಿತೃ ಪ್ರಧಾನ ವ್ಯವಸ್ಥೆಯ ವಿವರಣೆ. ರಾಜನ  ಹಿರಿಯ  ಮಗನಿಗೆ ಪಟ್ಟದ  ಹಕ್ಕು , ಸೀತೆಯ  ಪಾತಿವೃತ್ಯದ  ಪರೀಕ್ಷೆ, ಶುರ್ಪನಖಿ ಪ್ರಕರಣ ಮುಂತಾಗಿ ಪ್ರತಿಯೊಂದೆಡೆಯೂ ಪುರುಷ  ಪ್ರಧಾನತೆಯೇ ಎದ್ದು ತೋರುತ್ತದೆ.    ಮಹರ್ಷಿ ವಾಲ್ಮೀಕಿಯ ಕಲ್ಪನೆಯಂತೆ ಒಬ್ಬ  ಆದರ್ಶ ರಾಜನನ್ನಾಗಿ ಅಯೋಧ್ಯೆಯ  ರಾಮಚಂದ್ರನನ್ನು  ರೂಪಿಸಲಾಗಿದೆ.  ಇದರರ್ಥ ಆ ಸಮಯದಲ್ಲಾಗಲೇ  ರಾಜನ ಆಳ್ವಿಕೆಯ  ಪದ್ಧತಿ ಜಾರಿಯಲ್ಲಿತ್ತು.   ಗುಂಪಾಗಿ ಬದುಕುತ್ತಿದ್ದ ಮಾನವರು, ಶೂರನೊಬ್ಬನ ಆಡಳಿತಕ್ಕೆ  ಒಳಪಟ್ಟಿದ್ದು,  ರಾಜ್ಯದ  ಗಡಿಗಳನ್ನು ಗುರ್ತಿಸಿಕೊಂಡದ್ದು, ಗುರುಕುಲ ಶಿಕ್ಷಣ ಪದ್ಧತಿ ರೂಢಿಯಲ್ಲಿ ಬಂದಿದ್ದು,  ಮುಂತಾದವುಗಳು ಮಾನವನ ವಿಕಾಸ ಪಥದ  ಇತ್ತೀಚಿನ  ಕೆಲವು ಸಾವಿರ  ವರ್ಷಗಳ  ಬೆಳವಣಿಗೆ.   ಮಾನವ ಸಮಾಜದಲ್ಲಿ  ಮೊದಮೊದಲಿಗೆ  ಮಾತೃ ಪ್ರಧಾನ ವ್ಯವಸ್ಥೆಯೇ ಜಾರಿಯಲ್ಲಿತ್ತು.  ಸುಮಾರು ಮೂರುವರೆ ಸಾವಿರ ವರ್ಷಗಳ ಹಿಂದಿನ ಮಹಾಭಾರತದ ಕಾಲಘಟ್ಟದಲ್ಲಿ, ಎರಡು ಸಾವಿರ  ವರ್ಷಗಳ ಹಿಂದಿನ ಬುದ್ಧನ ಸಮಯದಲ್ಲಿ  ಕೂಡ  ತಾಯಿಯ ಹೆಸರಿನಿಂದಲೇ ಮಕ್ಕಳನ್ನು  ಗುರ್ತಿಸುವ  ಪದ್ಧತಿ  ಅಸ್ತಿತ್ವದಲ್ಲಿತ್ತು.  ಅಂದಿನ ದಿನಗಳಲ್ಲಿ  ಪುರುಷ ಪ್ರಧಾನ ವ್ಯವಸ್ಥೆ ಕೂಡಾ ಪ್ರಚಲಿತವಿದ್ದು,  ನಿಧಾನಕ್ಕೆ  ಬೇರೂರತೊಡಗಿತ್ತು.  ಗುಂಪಿನ  ನೇತಾರನಾಗಿ ಗೋಷ್ಠಿ ಮಾತೆಯ  ಬದಲಿಗೆ  ಗೋಷ್ಠಿ ಪಿತನನ್ನು  ಒಪ್ಪಿಕೊಂಡ ನಂತರವೇ ಪಿತೃ ಪ್ರಧಾನ ವ್ಯವಸ್ಥೆ  ಗಟ್ಟಿಗೊಳ್ಳತೊಡಗಿತ್ತು.  ರಾಮಾಯಣದಲ್ಲಿ  ವಿವರಿಸಿರುವ  ಘಟನೆಗಳು ಮಾತೃ ಪ್ರಧಾನ ವ್ಯವಸ್ಥೆಯ  ಯಾವ ಕುರುಹನ್ನು ಒಳಗೊಂಡಿರದ ಕಾರಣ ಆ ಕಥಾನಕದ ಕಾಲಘಟ್ಟವನ್ನು ತುಂಬಾ ಪ್ರಾಚೀನ ಎನ್ನಲಾಗದು.    ರಾಮಾಯಣವನ್ನು  ಇತಿಹಾಸವೆಂದು  ಸಾಧಿಸುವ,  ಅದರ ಕಾಲಘಟ್ಟವನ್ನು  ತೀರಾ  ಹಿಂದಕ್ಕೆ  ಒಯ್ಯುವ ಪ್ರಯತ್ನಗಳು ಇಂದಿಗೂ ಮುಂದುವರಿದಿದೆ.  ಸುಂದರಾಂಗ ರಾಮಚಂದ್ರನು ದಕ್ಷಿಣ ಭಾರತಕ್ಕೆ  ಬಂದಾಗ, ಅವನ ಅನುಯಾಯಿಗಳೆಲ್ಲರೂ ವಾನರ ಸಂತಾನರು.  ಕಿಷ್ಕಿಂದೆಯ ದಕ್ಷಿಣಕ್ಕೆ  ವಾಸಿಸುವವರನ್ನು   ವಾನರರೆಂದು  ಬಿಂಬಿಸಿರುವುದಕ್ಕೆ  ಎರಡು ಕಾರಣಗಳು ಎದ್ದು ಕಾಣುತ್ತವೆ.  ಮೊದಲನೆಯದು ಆರ್ಯರ ಶ್ರೇಷ್ಠತೆಯನ್ನು ದಾಖಲಿಸುವ    ಪ್ರಯತ್ನ. ಇನ್ನೊಂದು ಈ ಕಥಾನಕಕ್ಕೆ  ಪ್ರಾಚೀನತೆಯನ್ನು  ಆರೋಹಿಸುವುದು.    ಸುಮಾರು  ಎಂಟು ಸಾವಿರ  ವರ್ಷಗಳ ಹಿಂದೆ ಆರ್ಯರು ಭಾರತಕ್ಕೆ  ಬಂದವರೆಂದು  ಹೇಳಲಾಗುತ್ತದೆ.  ಪಶು ಸಂಗೋಪನೆ ಮಾಡುತ್ತಾ ಅಲೆಮಾರಿಗಳಾಗಿದ್ದ ಶೀತ ಪ್ರದೇಶದ  ನಿವಾಸಿಗಳಾದ  ಆರ್ಯರು  ಸಮೃದ್ಧಿಯ  ಈ  ಪ್ರದೇಶಕ್ಕೆ  ಕಾಲಿಟ್ಟ  ನಂತರವೇ ಭಾರತ ವರ್ಷವೆಂಬ  ಹೆಸರು  ಬಂತು.  ಭಾರತ ಶಬ್ದಕ್ಕೆ  ಭರ್+ತನ್+ಅಲ್  ಎಂದರೆ ಮಾನವನ ಅಸ್ತಿತ್ವವನ್ನು  ಕಾಪಾಡುವವ, ಮಾನವನ ಉನ್ನತಿಗೆ  ಅಗತ್ಯವಾದವುಗಳನ್ನು  ನೀಡುವವನು ಎಂಬ ಅರ್ಥವಿದೆ.  ಅಂತಹ ಪ್ರದೇಶಕ್ಕೆ  ಭಾರತ  ವರ್ಷ ಎನ್ನುತ್ತಾರೆ.  ಅರ್ಜುನನಿಗೆ  ಭಾರತ ಎಂದು ಹಲವು ಬಾರಿ  ಸಂಬೊಧಿಸಿರುವುದನ್ನು   ಭಗವದ್ಗೀತೆಯಲ್ಲಿ ಕಾಣುತ್ತೇವೆ.  ಆದರ್ಶ  ರಾಜ ಎಂಬುದು  ಇದರ ಅರ್ಥ. ಭಾರತ ವರ್ಷೇ, ಭಾರತ ಖಂಡೇ… ಎಂಬುದು ತನ್ನನ್ನು  ಗುರ್ತಿಸಿಕೊಳ್ಳಲು  ಮಂತ್ರಗಳಲ್ಲಿ ಇಂದಿಗೂ ಬಳಕೆಯಲ್ಲಿರುವ  ಶಬ್ದ.    ಆರ್ಯರು ಭಾರತಕ್ಕೆ  ಬರುವ ಮೊದಲೇ ಇಲ್ಲಿ  ನಾಗರಿಕತೆ  ವಿಕಾಸ ಹೊಂದಿತ್ತು.  ಇಲ್ಲಿನ ಮೂಲ  ನಿವಾಸಿಗಳು  ತಮ್ಮೊಳಗಿನ  ಅನಂತತೆಯನ್ನು  ಅರಿಯುವ ದಾರಿಯಲ್ಲಿ ಸಾಗುವ ವಿಧಾನಗಳನ್ನು ಅನುಸರಿಸುತ್ತಿದ್ದರು.  ಮನಸ್ಸನ್ನು  ಅಂತರ್ಮುಖಿಯಾಗಿಸಿ, ಏಕಾಗ್ರತೆಯಿಂದ  ಧ್ಯಾನ ಮಾಡುವ  ಕಲೆ ಇವರಿಗೆ ಸಿದ್ದಿಸಿತ್ತು.  ಆದರೆ, ಆರ್ಯರು ಇನ್ನೂ ಬಾಹ್ಯ ಪೂಜೆಯಲ್ಲೇ ನಿರತರಾಗಿದ್ದರು.  ಯಜ್ಞ, ಯಾಗಾದಿಗಳು ಅವರೊಂದಿಗೇ ಭಾರತಕ್ಕೆ ಬಂದವು.    ಭಾರತದ ಮೂಲ ನಿವಾಸಿಗಳು ದ್ರಾವಿಡ, ಮಂಗೋಲಿಯನ್ ಜನಾಂಗ ಸೇರಿದವರಾಗಿದ್ದು,  ಆರ್ಯರಿಗೆ   ಹೋಲಿಸಿದರೆ ಇವರ ದೇಹ ಸಣ್ಣದಾಗಿತ್ತು.  ಎತ್ತರದ  ನಿಲುವಿನ , ಬಲಿಷ್ಠ ದೇಹದ  ಆರ್ಯರು, ಕುದುರೆಯನ್ನೂ ಪಳಗಿಸಿ, ಬಳಸುತ್ತಿದ್ದುದರಿಂದಾಗಿ,  ಭಾರತದ  ಮೂಲ ನಿವಾಸಿಗಳನ್ನು  ಸೋಲಿಸಲು ಸಾಧ್ಯವಾಯಿತು.  ಗಂಗಾನದಿಯ  ಬಯಲು ತಟ ಮತ್ತು  ಉತ್ತರ ಭಾರತದ  ಗುಡ್ಡಗಾಡು  ಪ್ರದೇಶವನ್ನು  ಆರ್ಯರು ಆಕ್ರಮಿಸಿಕೊಂಡು, ಅಲೆಮಾರಿ  ಬದುಕಿಗೆ  ವಿದಾಯ ಹೇಳಿ  ಒಂದೇ ಸ್ಥಳದಲ್ಲಿ  ವಾಸಿಸತೊಡಗಿದ್ದು ಇತಿಹಾಸ.       ಆರ್ಯರು  ನಡೆಸುತ್ತಿದ್ದ ಯಜ್ಞ,  ಯಾಗಗಳಲ್ಲಿ  ಅಮೂಲ್ಯವಾದ  ಆಹಾರ ವಸ್ತುಗಳನ್ನು  ಸುಡುತ್ತಿದ್ದುದು ಇಲ್ಲಿನ ಮೂಲ ನಿವಾಸಿಗಳಿಗೆ  ಒಪ್ಪಿಗೆಯಾಗುತ್ತಿರಲಿಲ್ಲ.  ಆದ್ದರಿಂದಲೇ ಅವರ ಯಜ್ಞಗಳನ್ನು   ಕೆಡಿಸುವ ಕೂಟ ನೀತಿಯಿಂದ  ಆರ್ಯರನ್ನು  ಮಣಿಸುವ , ಆಹಾರ ಪದಾರ್ಥಗಳನ್ನು  ಪುನಃ ಒಯ್ಯುವ  ಕೆಲಸಕ್ಕೆ  ಮುಂದಾಗುತ್ತಿದ್ದರು. ಆರ್ಯರು  ಮತ್ತು ಮೂಲ ನಿವಾಸಿಗಳ  ನಡುವೆ  ಸಾಕಷ್ಟು  ಸಂಘರ್ಷಗಳಾಗುತ್ತಿದ್ದವು. ಮೂಲ ನಿವಾಸಿಗಳನ್ನು ರಾಕ್ಷಸರು, ದುಷ್ಟರು, ಮಾಯಾವಿಗಳು ಎಂದೇ ಆರ್ಯರು ಕರೆಯುತ್ತಿದ್ದರು.    ವಿಶ್ವಾಮಿತ್ರರು ನಡೆಸುವ  ಯಜ್ಞದ ರಕ್ಷಣೆ ಹೊರುವ  ರಾಮಚಂದ್ರ , ಯಜ್ಞವನ್ನು   ಕೆಡಿಸುವ  ಮಾರೀಚ ಮುಂತಾದ ವರ್ಣನೆಗಳು  ಆರ್ಯರ   ಶ್ರೇಷ್ಠತೆಯನ್ನು ಬಿಂಬಿಸುವ  ಕಥಾನಕ ಎನ್ನುವುದಕ್ಕೆ  ಸಾಕ್ಷಿ. ಇದಕ್ಕೆ  ಪೂರಕವಾಗಿ  ವಾನರ  ರಾಜರಾದ  ವಾಲಿ, ಸುಗ್ರೀವ ಅವರ  ಆಕಾರ, ರೀತಿ, ರಿವಾಜುಗಳನ್ನು ಆರ್ಯರಿಗಿಂತ  ಕನಿಷ್ಠವೆಂದು   ತೋರಿಸುವುದನ್ನು ಕಾಣಬಹುದು.     ರಾವಣನನ್ನು  ಶಿವಭಕ್ತನೆಂದು  ಬಿಂಬಿಸಲಾಗಿದೆ.  ಸುಮಾರು ಏಳು ಸಾವಿರ ವರ್ಷಗಳ ಹಿಂದೆ ಇದೇ ಭರತಭೂಮಿಯ ಮೇಲೆ ಆವಿರ್ಭವಿಸಿದ  ಸದಾಶಿವನ ಅನುಯಾಯಿಗಳಾದ  ದ್ರಾವಿಡರು,  ಅಂತರ್ಮುಖಿಯಾಗಿ ಪರಮಾತ್ಮನನ್ನು  ಕಾಣುವ   ವಿದ್ಯಾತಂತ್ರವನ್ನು  ತಮ್ಮದಾಗಿಸಿಕೊಂಡರು. ಎಲ್ಲರೊಂದಿಗೆ  ಬೆರೆಯುವ , ಸರಳ ಆಧ್ಯಾತ್ಮಿಕ ಬದುಕನ್ನು  ಬೋಧಿಸುತ್ತಿದ್ದ ಶಿವನನ್ನು ಆರ್ಯರು  ವಿರೋಧಿಸುತ್ತಿದ್ದರು.   ರಾವಣನ ವ್ಯಕ್ತಿತ್ವವನ್ನು ಕಟ್ಟಿಕೊಡುವಾಗ ಕೂಡಾ ಆರ್ಯರ ಮತ್ತು  ಅವರ ನಂಬಿಕೆ , ಆಚರಣೆಗಳೇ  ಶ್ರೇಷ್ಠವೆಂಬ  ವಿಚಾರ ಸ್ಪಷ್ಟ ಗೋಚರ.    ಭಾರತದ  ರಾಜಕಾರಣಿಗಳಿಗೆ  ಆಧ್ಯಾತ್ಮಿಕ ದಾರಿ ಬೇಕಿಲ್ಲ. ಮಂದಿರ,  ಮಸೀದಿಗಳ ಜಗಳದಲ್ಲಿ  ಜನರನ್ನು ತೊಡಗಿಸಿ,  ತಾವು ರಾಜಕೀಯ ಅಧಿಕಾರ ಪಡೆಯುವದೇ ಅವರ ಗುರಿ.  ಆಧ್ಯಾತ್ಮದ ರಾಮ ಅವರಿಗೆ  ಬೇಕಿಲ್ಲ.  ಅಯೋಧ್ಯೆಯ   ಕಾಲ್ಪನಿಕ ರಾಮಚಂದ್ರನೇ ಅವರಿಗೆ  ಪ್ರಿಯ.  ಪುರುಷ ಪ್ರಧಾನ ಸಮಾಜವನ್ನು ಇನ್ನಷ್ಟು  ಗಟ್ಟಿಗೊಳಿಸುವ  ಚಿಂತನೆಯೂ ಈ   ರಾಜಕಾರಣಿಗಳ ಇತರ  ಸ್ವಾರ್ಥದೊಂದಿಗೆ  ಸೇರಿಕೊಂಡಿದೆ.      ದೈನಂದಿನ  ಬದುಕನ್ನು  ಸಾಗಿಸುವುದೇ ಕಷ್ಟದಾಯಕವಾಗಿರುವ  ಜನಸಾಮಾನ್ಯರು ಅಯೋಧ್ಯೆಯ ರಾಮಚಂದ್ರನಲ್ಲೇ  ದಾರ್ಶನಿಕ ರಾಮನನ್ನು ನೋಡುವ  ಪ್ರಯತ್ನ ಮಾಡುತ್ತಿದ್ದಾರೆ.  ಆಧ್ಯಾತ್ಮದ ದಾರಿ ಅವರಿಗೆ ರುಚಿಸುವುದಿಲ್ಲ. ಅತಾರ್ಕಿಕತೆ, ಅವೈಚಾರಿಕ ನಂಬಿಕೆಗಳು, ಪಾಪ, ಪುಣ್ಯಗಳ ತಪ್ಪು ತಿಳುವಳಿಕೆ ನೀಡಿ,  ಕಾಣದ ಜಗತ್ತಿನ ಭಯ ಹುಟ್ಟಿಸಿ,  ಪುರೋಹಿತಶಾಹಿ  ಶೋಷಣಾ ವಿಧಾನದಿಂದ  ಜನರನ್ನು  ದಿಕ್ಕು ತಪ್ಪಿಸಿ,  ಅಸಹಾಯಕ ಭಾವವನ್ನು  ಮೂಡಿಸಿ,  ಗಟ್ಟಿಗೊಳಿಸಲಾಗುತ್ತಿದೆ.  ಆಧುನಿಕ  ಬಂಡವಾಳಶಾಹಿಗಳು ಈ ಸಂದರ್ಭವನ್ನು ತಮ್ಮ ಲಾಭ ಹೆಚ್ಚಳಕ್ಕಾಗಿ ಬಳಸಿಕೊಳ್ಳಲು  ಮೂಢನಂಬಿಕೆಗಳನ್ನು  ನೀರೆರೆದು  ಪೋಷಿಸುತ್ತಿದ್ದಾರೆ.  ಮಾಧ್ಯಮಗಳಲ್ಲಿ  ಪ್ರಸಾರವಾಗುತ್ತಿರುವ  ಮೂಢನಂಬಿಕೆಗಳನ್ನೇ ಬಿತ್ತುವ,  ಬೆಳೆಸುವ  ಧಾರವಾಹಿ, ಜ್ಯೋತಿಷಿ ಮುಂತಾದವುಗಳ   ಪ್ರಾಯೋಜಕತ್ವ  ವಹಿಸಿ,  ತಮ್ಮ   ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ.  ಬುದ್ದಿಜೀವಿಗಳನ್ನು,  ಕಲಾಕಾರರನ್ನು, ರಾಜಕಾರಣಿಗಳನ್ನು ತಮ್ಮ ಧನಬಲದಿಂದ  ಗುಲಾಮರನ್ನಾಗಿಸಿಕೊಂಡು  ಬಂಡವಾಳಶಾಹಿಗಳು ಶೋಷಣೆ  ನಡೆಸುತ್ತಿದ್ದಾರೆ.  ಇದಕ್ಕೂ

ವಿಶ್ಲೇಷಣೆ Read Post »

You cannot copy content of this page

Scroll to Top