ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಪ್ರಸ್ತುತ

ಸಾಂಸ್ಕೃತಿಕ ಲೋಕದ ದಲ್ಲಾಳಿಗಳು. ಮಲ್ಲಿಕಾರ್ಜುನ ಕಡಕೋಳ ಬೆಂಗಳೂರು, ಒಂದಾನೊಂದು ಕಾಲಕ್ಕೆ ಗುಲಾಬಿ ನಗರ ಎಂದು ಪ್ರಸಿದ್ದವಾಗಿತ್ತು. ಗುಲಾಬಿಯ ಆರಂಭದ ಅಕ್ಷರ “ಗು” ಎಂಬುದೆಲ್ಲೋ, ಎಂದೋ ಉದುರಿ ಬಿದ್ದು ಅದು ಲಾಬಿ ನಗರವಾಗಿ ಬಹಳೇ ವರ್ಷಗಳು ಉರುಳುತ್ತಿವೆ. ಆಗಿನ ಕಾಲದಲ್ಲಿ “ಲಾಬಿ” ಅನ್ನಲಾಗದಿದ್ದರೂ ನಿತ್ಯ ಜೀವನಾಗತ್ಯದ ಸಣ್ಣಪುಟ್ಟ ಕೆಲಸ ಕಾರ್ಯಗಳಿಗೆ ಬಲ್ಲವರ ಮೂಲಕ ಹೇಳಿಸಿ ಈಡೇರಿಸಿಕೊಳ್ಳುವ ತುರ್ತುಅಗತ್ಯದ ಶಿಫಾರಸು ಅವಾಗಿರ್ತಿದ್ದವು. ಹಳ್ಳಿಗಳಲ್ಲಿ ಚೆಂದಗೆ ಹಾರ್ಮೋನಿಯಂ ನುಡಿಸಿ, ಸಂಗೀತ, ನಾಟಕ ಕಲಿಸುವ ಮಾಸ್ತರ, ಬಯಲಾಟ, ಕೋಲಾಟ ಆಡುವ ಹಿರೀಕ ಕಲಾವಿದರು, ದಿನಗಟ್ಟಲೇ ಸೋಬಾನೆ ಪದ, ಬೀಸುವಕಲ್ಲು ಪದಹಾಡುವ ಮಹಿಳೆಯರು ಇರ್ತಿದ್ರು. ಪ್ರತಿಭಾಶಾಲಿಗಳಾದ ಅಂಥವರನ್ನು ಸ್ಥಳೀಯ ಶಾಲಾ ಮಾಸ್ತರನೋ, ಮಠದ ಅಯ್ಯನವರೋ ಬೆಂಗಳೂರಿನ ಸರಕಾರದ ಗಮನಕ್ಕೆ ತಂದು ಅಂಥವರನ್ನು ಗುರುತಿಸಿ ಗೌರವಿಸುವ, ಸಾಧ್ಯವಾದರೆ ಅಂಥವರಿಗೆ ಮಾಸಾಶನ ಕೊಡಿಸುವ ಸತ್ಕಾರ್ಯಗಳು ಮುಗ್ದತೆಯಿಂದ ಜರುಗುತ್ತಿದ್ದವು. ಎಲ್ಲಿ ಹೋದವೋ ಜವಾರಿತನದ ಮತ್ತು ಯತಾರ್ಥ ಪ್ರೀತಿಯ ಆ ದಿನಗಳು ಎಂದು ವರ್ತಮಾನದಲ್ಲಿ ಹಳಹಳಿಸುವಂತಾಗಿದೆ. ಅಷ್ಟೇ ಯಾಕೆ ಅದಕ್ಕಾಗಿ ಅಂದು ಅಧಿಕಾರಿ ಮತ್ತು ರಾಜಕೀಯ ವಲಯಗಳಲ್ಲಿ ಸುಮಧುರ ಸಂಸ್ಕೃತಿ ಬೆಸೆಯುವ, ನಿಸ್ವಾರ್ಥದ ಶುದ್ಧಜವಾರಿ ಕಾಲಮಾನ ಅದಾಗಿತ್ತು. ಸಂಸ್ಕೃತಿ ಕುರಿತು ಮಾತನಾಡುವುದೆಂದರೆ ಪಾವಿತ್ರ್ಯತೆಯ ಸಂಬಂಧಗಳ ಕುರಿತು ಮಾತನಾಡುವ ಗೌರವಭಾವ ತುಂಬಿ ತುಳುಕುತ್ತಿತ್ತು. ಹಾಗೇನೇ ಸಾಹಿತಿ, ಕಲಾವಿದರೆಂದರೆ ಆಗ ನಮಗೆಲ್ಲ ಲೈವ್ ಕ್ಯಾರಕ್ಟರುಗಳು. ಎಂಥವರಲ್ಲೂ ಅನನ್ಯತೆ ಉಕ್ಕಿಸುವ, ಸಾತ್ವಿಕತೆ ಸೂಸುವ ಆದರದ ಭಾವ ತುಂಬಿ ತುಳುಕುತ್ತಿದ್ದವು. ಬರಬರುತ್ತಾ ಅದೆಲ್ಲ ಕ್ಷೀಣಿಸಿ ಅದರ ಸಾಧ್ಯತೆಯ ಕ್ಷಿತಿಜಗಳು ಯದ್ವಾತದ್ವಾ ಹರಡಿಕೊಳ್ಳುತ್ತಾ ಅದರ ಹಿಡಿತಗಳು ಸಾಂಸ್ಕೃತಿಕ ಲೋಕವನ್ನೂ ಬಿಡದೇ ಅಕ್ಟೋಫಸ್ ತರಹ ಆವರಿಸಿಕೊಂಡು ಬಿಟ್ಟಿವೆ. ನೋವಿನ ಸಂಗತಿಯೆಂದರೆ ಅದೊಂದು ರಿಯಲ್ ಎಸ್ಟೇಟ್ ಬಿಜಿನೆಸ್ಸಿನಂತೆ ಹೆಸರು ಮತ್ತು ಆಮದಾನಿ ತರುವಂತಾಗಿದೆ. ನೇರವಾಗಿ ರಿಯಲ್ ಎಸ್ಟೇಟ್ ಎಂದು ಕರೆದು ಬಿಟ್ಟರೆ ಸಹಜವಾಗಿ “ದಲ್ಲಾಳಿಗಳೆಂದೇ” ಅರ್ಥೈಸಿ, ಸಾರ್ವಜನಿಕವಾಗಿ ಉತ್ತಮ ಅಭಿಪ್ರಾಯ ಮೂಡುವುದಿಲ್ಲ. ಅಂತೆಯೇ ಲಾಬಿಕೋರರು ಅದರ ಬದಲು ಸಾಂಸ್ಕೃತಿಕ ಲೋಕದಸೇವೆ ಎಂದು ಕರೆದುಕೊಂಡಿದ್ದು. ಅವರದು ಕಲ್ಚರಲ್ ಎಸ್ಟೇಟ್ ದಂಧೆ ಎಂಬ ಬನಾವಟಿ ಯಾರಿಗೂ ತಿಳಿಯಲ್ಲ. ಎಷ್ಟಾದರೂ ಸಾಹಿತ್ಯ, ಸಂಗೀತ, ಕಲೆ, ಪರಂಪರೆ, ಜಾನಪದ, ನಾಡು, ನುಡಿ, ಇವುಗಳನ್ನೊಳಗೊಂಡ ಸಂಸ್ಕೃತಿ ದಿಗ್ಗಜರ ಒಡನಾಟದ ಲೋಕವದು. ಅದರಿಂದಾಗಿ ಯಾರಿಗಾದರೂ ಎಳ್ಳರ್ಧ ಕಾಳಿನಷ್ಟೂ ಅಪಾರ್ಥ ಮಾಡಿಕೊಳ್ಳದ ಒಂದು ಗೌರವಯುತವಾದ ಸ್ಟೇಟಸ್. ಲೋಕದ ಕಣ್ಣಲ್ಲಿ ಕನ್ನಡ ಸಂಸ್ಕೃತಿಯ ಪರಿಚಾರಿಕೆ. ಯಾವುದೇ ರಿಸ್ಕ್ ಇಲ್ಲದೇ ಹಣ, ಹೆಸರು, ಕೀರ್ತಿ ವಗೈರೆಗಳು ಸಲೀಸಾಗಿ ಸಿಗುವ ಬಂಡವಾಳರಹಿತ ಹೈಟೆಕ್ ಬಿಜಿನೆಸ್. ಇದು ಕೆಲವರ ಪಾಲಿಗೆ ಪ್ರತಿಷ್ಠಿತ ಉದ್ದಿಮೆಯೇ ಆಗಿದೆ. ಆದರೆ ಮೇಲ್ನೋಟದಲ್ಲಿ ಇದೊಂದು ಲಾಬಿ ಮತ್ತು ಲಾಭಕೋರತೆಯ ಕಲ್ಚರಲ್ ಟ್ರೇಡಿಂಗ್ ಟ್ರೆಂಡ್ ಅಂತ ಅನ್ನಿಸೋದೇ ಇಲ್ಲ. ಅದೊಂಥರ ಕಾರ್ಪೊರೇಟ್ ವ್ಯವಹಾರ. ಅದರ ನೇಪಥ್ಯ ಹುನ್ನಾರ ಯಾರಿಗೂ ತಿಳಿಯುವುದೇ ಇಲ್ಲ. ಹಾಂಗಂತ ಸಾಂಸ್ಕೃತಿಕ ಲೋಕಿಗರಿಗೆ ರಾಜಕೀಯಪ್ರಜ್ಞೆ ಬೇಡವೆಂಬುದು ಖಂಡಿತವಾಗಿಯೂ ನನ್ನ ಅಭಿಪ್ರಾಯವಲ್ಲ. ಸಂಸ್ಕೃತಿ ಚಿಂತಕರಿಗೆ ಪರಿಪೂರ್ಣವಾದ ರಾಜಕೀಯ ಮತ್ತು ಸಾಮಾಜಿಕಪ್ರಜ್ಞೆ, ಪರಿಜ್ಞಾನ ಇರಬೇಕು. ಆದರೆ ಚಾಲ್ತಿಯಲ್ಲಿರುವ ಭಟ್ಟಂಗಿಗಳ ಒಳಹೇತು, ಕೊಳಕು ಹುನ್ನಾರದ ದ್ರಾಬೆ ರಾಜಕಾರಣದಿಂದ ಸಂಸ್ಕೃತಿ ಚಿಂತಕರು ದೂರವಿರಬೇಕಿದೆ. ದುರಂತದ ಸಂಗತಿ ಎಂದರೆ ಇಲ್ಲಿ ಯಾವುದಕ್ಕೆ ದೂರ, ಯಾವುದಕ್ಕೆ ಹತ್ತಿರ ಇರಬೇಕಾಗಿದೆ ಎಂಬುದರ ತದ್ವಿರುದ್ಧದ ವೈರುಧ್ಯಗಳದ್ದೇ ಅಟ್ಟಹಾಸ. ಸರಕಾರ ಯಾವುದೇ ಪಕ್ಷದ್ದಿರಲಿ, ಅವಕಾಶವಾದಿ ದಲ್ಲಾಳಿಗಳದ್ದೇ… ಕ್ಷಮಿಸಿ, ಕ್ಷಮಿಸಿ ಲಾಬೀಕೋರರದ್ದೇ ಯಾವಾಗಲೂ ಮೇಲುಗೈ. ವಿಧಾನಸೌಧದ ಮೂರನೇ ಮಹಡಿಯಲ್ಲಿ ‘ಅಂಥವರು’ ಎಲ್ಲಪಕ್ಷಗಳ ಸರಕಾರಗಳಲ್ಲೂ ಸಲ್ಲುತ್ತಲೇ ಇರ್ತಾರೆ. ಯಾಕಂದರೆ ಅವರು ಎಲ್ಲ ಕಾಲಕ್ಕೂ ಸಲ್ಲುವಂತಹ ಚಾಲಾಕಿತನದ ರಕ್ಷಾಕವಚ ಧರಿಸಿರುತ್ತಾರೆ. ಇಂಥವರ ನೆರವಿಗೆ ಜಾತಿ, ಮತ, ಮಠ, ಐಭೋಗ ಎಲ್ಲವೂ ಮೇಳೈಸಿರುತ್ತವೆ. ಜತೆಗೆ ಸಾಂಸ್ಕೃತಿಕ ಲೋಕಜ್ಞಾನವು ರವಷ್ಟಿದ್ದರೆ ಸಾಕು. ರಾಜಕೀಯ ಪಕ್ಷಗಳ ಪಾಲಿಗೆ ಇಂತಹ ಲಾಬಿಕೋರರು ಇವನಾರವ, ಇವನಾರವ ಎಂದೆನಿಸದೇ ಎಂದಿಗೂ ಇವ ನಮ್ಮವನೆಂದೆನಿಸಯ್ಯ ಎಂಬ ಅನುಕೂಲಸಿಂಧು ಪ್ರಮಾಣಪತ್ರ ಪಡಕೊಂಡಿರುತ್ತಾರೆ. ಹೀಗೆ ಇವರು ವಿಧಾನಸೌಧದ ಮೂರನೇ ಮಹಡಿಯ ಬೃಹಸ್ಪತಿಗಳನ್ನು ತಲೆದೂಗಿಸುತ್ತಾರೆಂದರೆ ಅರೆ ಸರಕಾರಿ, ಸರಕಾರಿ ಇಲಾಖೆಗಳ ಮಹಡಿ, ಬಹುಮಹಡಿ ಕಟ್ಟಡಗಳವರದ್ದು ಇನ್ಯಾವಲೆಕ್ಕ.? ಅಷ್ಟಕ್ಕೂ ಇವರು ಅದೆಂಥ ಚಾಲಾಕಿಗಳೆಂದರೆ ಆಯಕಟ್ಟಿನ ಇಲಾಖೆಗಳಲ್ಲಿ ಅಂತಸ್ತಿಗನುಗುಣವಾಗಿ ಸಾಹೇಬ್ರೇ, ಧಣಿ, ಅಕ್ಕಾ, ಅಣ್ಣಾ ಅನ್ನುತ್ತಲೇ ಕೈ ಬಿಸಿ ಮಾಡುತ್ತಾ ಕೆಲಸ ಮಾಡಿಸಿಕೊಳ್ಳುವ ಮಹಾ ಬೆರಕಿಗಳು. ಇವರ ಚಾಲಾಕಿತನಕ್ಕೆ ಸರ್ಕಾರದ ಅನುದಾನಗಳು ಮಾತ್ರ ಗುರಿಯಲ್ಲ. ಸಾಂಸ್ಕೃತಿಕ ಲೋಕದ ಉತ್ಸವ, ವಿಶ್ವಮೇಳ, ಪರಿಷೆ, ಪ್ರಾಧಿಕಾರ, ಪ್ರತಿಷ್ಠಾನ, ಅಕಾಡೆಮಿಗಳ ನೇಮಕಾತಿ, ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಪಡಕೊಳ್ಳುವ ಇಲ್ಲವೇ ಹೊಡಕೊಳ್ಳುವಲ್ಲಿ ಇವರದು ಎತ್ತಿದ ಕೈ. ಸರಕಾರದ ವಿಶೇಷ ಸೌಲಭ್ಯ, ಸವಲತ್ತುಗಳನ್ನು ಕೊಡಿಸುವಲ್ಲೂ, ಪಡೆಯುವಲ್ಲೂ ಇವರದು ಮುಂಚೂಣಿ ನಾಯಕತ್ವ. ಒಮ್ಮೊಮ್ಮೆ ವಂದಿಮಾಗಧರಾಗಿ, ಮತ್ತೊಮ್ಮೆ ಪ್ರತಿಭಟನೆಯ ಪೋಷಾಕು ಧರಿಸುವ ಇವರು ಯಾವುದೇ ಸಾಂಸ್ಕೃತಿಕ ಬದ್ಧತೆ ಹೊಂದಿರಲಾರರು. ಸಮಯಕ್ಕೆ ತಕ್ಕವೇಷ, ಸಭೆಗೆ ತಕ್ಕರಾಗ ಹಾಡುವ ನಿಪುಣಕಲೆ ರೂಢಿಸಿ ಕೊಂಡಿರುತ್ತಾರೆ. ಎಡಚ, ಎಬಡನಂತಹ ಮಂತ್ರಿಯೇನಾದರು ಸಿಕ್ಕರೆ ಸಾಕು ಅವನನ್ನು ಆಟ ಆಡಿಸುವಲ್ಲಿ ಇವರನ್ನು ಮೀರಿಸುವವರೇ ಇರಲ್ಲ. ಅಷ್ಟಕ್ಕೂ ಈ ಹೊಲಬುಗೇಡಿಗಳು ಅಡ್ಡಕಸುಬಿಗಳೇನಲ್ಲ. ಎಲ್ಲ ಕಲೆಗಳ ತಟಕು ತಟಕು ಪರಿಚಯವುಳ್ಳ ಸಕಲಕಲಾ ಪರಾಕ್ರಮಿ ಗೋಸುಂಬೆಗಳು. ಆದಾಗ್ಯೂ ಎಮರ್ಜೆನ್ಸಿಗೆ ಇರಲೆಂದು ಕಲೆಯ ಯಾವುದಾದರೊಂದು ಪ್ರಕಾರದಲ್ಲಿ ಸಣ್ಣದೊಂದು ಸಾಧನೆಯ ಸರ್ಟಿಫಿಕೆಟ್, ಆಧಾರ್ ಕಾರ್ಡಿನಂತೆ ಇಟ್ಟುಕೊಂಡಿರುತ್ತಾರೆ. ಒಂದೆರಡು ಸಂಘ ಸಂಸ್ಥೆ, ಟ್ರಸ್ಟ್, ಪ್ರತಿಷ್ಠಾನಗಳ ಅಧಿಕೃತ ನೊಂದಣಿ ಮಾಡಿಟ್ಟುಕೊಂಡು ತಪ್ಪದೇ ಅವುಗಳ ಹೆಸರಲ್ಲಿ ಇಲ್ಲಿಯ ಮತ್ತು ದಿಲ್ಲಿಯ ಸರಕಾರದ ಖಜಾನೆಗಳಿಂದ ಬಳಬಳ ಅಂತ ಅನುದಾನ ಉದುರಿಸಿ ಕೊಳ್ಳುತ್ತಾರೆ. ಅದಕ್ಕೆಲ್ಲ ಜಿಎಸ್ಟಿ ಸಮೇತವಾದ ಬಿಲ್ಲು ಬಾಣಗಳನ್ನು ಅತ್ಯಂತ ವ್ಯವಸ್ಥಿತವಾಗಿ ತಯಾರಿಸಿ ಕೊಡುವಲ್ಲಿ ಇವರು ಸಿಕ್ಕಾಪಟ್ಟೆ ಶ್ಯಾಣೇರು. ಈ ಕಠಿಣ ಪರಿಶ್ರಮವನ್ನು ಸಾಂಸ್ಕೃತಿಕ ಸಂಘಟನೆ ತಮಗೆ ದಶಕಗಳಿಂದ ಕಲಿಸಿ ಕೊಟ್ಟಿದೆಯೆಂದು ವಿಧಾನಸೌಧದ ಕಾರಿಡಾರುಗಳಲ್ಲೂ ಪುಂಗಿ ಊದುತ್ತಾರೆ. ಮೊದ ಮೊದಲು ಬೆಂಗಳೂರಿನಲ್ಲಿ ಕಾಣಿಸಿಕೊಂಡ ಈ ರೋಗ ಬೆಂಗಳೂರಿಗಷ್ಟೇ ಸೀಮಿತಗೊಳ್ಳಲಿಲ್ಲ. ಇದು ಕೊರೊನಾ ವೈರಾಣು ತರಹ ಎಲ್ಲ ಕಡೆಗೂ ಸಾಂಕ್ರಾಮಿಕ ರೋಗವಾಗಿ ಹಬ್ಬಿದೆ. ಕೆಲವರು ತಮ್ಮ ಸಾರಿಗೆ ಸಂವಹನದ ಅನುಕೂಲ ಸರಳಗೊಳ್ಳಲೆಂದು ಅಂಥವರು ಬೆಂಗಳೂರಿಗರಾಗಿದ್ದು, ಮತ್ತೆ ಕೆಲವರು ಅನಿವಾಸಿ ಬೆಂಗಳೂರಿಗರು. ರಾಜಧಾನಿಯ ಈ ಲಾಬಿಕೋರರು ಜಿಲ್ಲೆ, ತಾಲೂಕುಗಳಲ್ಲೂ ಶಾಖಾಮಠಗಳಂತೆ (ಗೆಳೆಯರೊಬ್ಬರ ಪ್ರಕಾರ ಅಲಿಬಾಬಾ ಮತ್ತು ೪೦…) ತಮ್ಮ ಶಿಷ್ಯಬಳಗ ಸಾಕಿ ಕೊಂಡಿರುತ್ತಾರೆ. ಆ ಮೂಲಕ ಅವರ ಬಿಜಿನೆಸ್ ನಾಡಿನ ತುಂಬೆಲ್ಲ ಹರಡಲು ಅನುಕೂಲ. ಸಿರಿಗನ್ನಡದ ಪ್ರಾಂಜಲ ಕಲೆ, ಸಂಸ್ಕೃತಿಗೆ, ಬೋಳೆತನದ ಕಲಾವಿದರಿಗೆ ಇಂಥವರಿಂದ ಬಿಡುಗಡೆಯೇ ಇಲ್ಲ ಎನ್ನುವಷ್ಟು ಇವರ ಕಬಂಧ ಬಾಹುಗಳು ಬಲಾಢ್ಯಗೊಂಡಿವೆ. ಕೆಲವು ಮಠಾಧೀಶರು, ಪತ್ರಕರ್ತರು ಇಂತಹ ಲಾಬಿಕೋರರ ಪರನಿಂತು ಲಾಬಿಮಾಡುವುದು, ಆಶೀರ್ವದಿಸುವುದು ಅಷ್ಟೇನು ನಿಗೂಢವಲ್ಲದ ಸಾಂಸ್ಕೃತಿಕ ದುರಂತ. ಅನರ್ಹರಿದ್ದೂ ತಮ್ಮ ಪಾಲಿನ ಸಂಘ, ಸಂಸ್ಥೆಗಳ ಅನುದಾನ, ಪ್ರಶಸ್ತಿ ಹೊಡಕೊಂಡಿದ್ರೆ ಮುಂಡಾ ಮೋಚಲೆನ್ನಬಹುದಿತ್ತು. ಆದರೆ ರಾಜ್ಯ ಮತ್ತು ಕೇಂದ್ರ ಸರಕಾರಗಳಿಂದ ಅನುದಾನ, ಸಹಾಯಧನ, ಆಪದ್ಧನ, ಪ್ರಶಸ್ತಿಗಳನ್ನು ಇತರೆ ಅನರ್ಹರಿಗೇ ಕೊಡಿಸುವ ದಲ್ಲಾಳಿತನದಲ್ಲಿ ಇವರದು ಹೆಸರಾಂತ ಹೆಸರು. ಕೆಲವರ ಪಾಲಿಗದು ಕಾಯಕವೇ ಆಗಿಬಿಟ್ಟಿದೆ. ಸರಕಾರದ ಎಲ್ಲ ಮಜಲುಗಳ ಒಳಕೀಲು, ಕೀಲಿಕೈಗಳ ದಟ್ಟಪರಿಚಯ ಇವರಿಗೆ ಕರತಲಾಮಲಕ. ಏನೊಂದು ಅನುಮಾನಕ್ಕೆಡೆ ಇಲ್ಲದಂತೆ, “ಪುಣ್ಯಾತ್ಮರಿವರು” ಎಂಬ ತಮ್ಮ ಇಮೇಜಿಗೆ ಧಕ್ಕೆ ಬಾರದಂತೆ ಹವಾ ಮೇನ್ಟೇನ್ ಮಾಡುವಲ್ಲಿ ಇವರನ್ನು ಮೀರಿಸುವವರೇ ಇಲ್ಲ. ಸಂಸ್ಕೃತಿಯ ಗಂಧಗಾಳಿಯಿಲ್ಲದ ಭ್ರಷ್ಟ ಅಧಿಕಾರಿಗಳು, ಕೀರ್ತಿಕಾಮುಕ ರಾಜಕಾರಣಿಗಳಿಗೆ ಸಹಜವಾಗಿ ಇಂತಹ ಕಲರ್ಫುಲ್ ಪುಂಗೀದಾಸರೇ ಬೇಕು. ಇಂಥವರ ಪುಂಗಿದಾಸನಿಷ್ಠೆ ಮೆಚ್ಚಿ ಯಾವನಾದರು ಹುಚಪ್ಯಾಲಿ ಮಂತ್ರಿ ಮಹಾಶಯ ಇವರನ್ನು ವಿಧಾನ ಪರಿಷತ್ತಿಗೋ, ರಾಜ್ಯಸಭೆಗೋ ನೇಮಕ ಮಾಡುವ ಸಾದೃಶ್ಯ ಪವಾಡಗಳು ಜರುಗಿದರೇನು ಅಚ್ಚರಿ ಪಡಬೇಕಿಲ್ಲ.! ಆಗ ಜೈ ಹೋ ಲಾಬಿ, ಜೈಹೋ..! ಎನ್ನವುದೊಂದೇ ಬಾಕಿ. ಜೋಕಲ್ಲ ಇವರನ್ನು ದಲ್ಲಾಳಿಗಳು ಅನ್ನುವಂಗಿಲ್ಲ ಜೋಕೆ…!! *******

ಪ್ರಸ್ತುತ Read Post »

ಇತರೆ

ಪ್ರಸ್ತುತ

೧೯೭೫ ರ ತುರ್ತು ಪರಿಸ್ಥಿತಿ ಮತ್ತು ಇಂದಿನ ಲಾಕ್ ಡೌನ್…   ಅಂದಿಗೆ ಹೋಲಿಸಿದರೆ ಇಂದಿನ ಸ್ಥಿತಿ ಭೀಕರ, ಭಯಾನಕ. ಅಂದಿನ ಪ್ರಧಾನಿಯ ಖುರ್ಚಿ ಅಲುಗಾಡ ತೊಡಗಿದಾಗ ತುರ್ತು ಪರಿಸ್ಥಿತಿ ಹೇರಲಾಗಿತ್ತು. ರಾಜಕೀಯ ವಿರೋಧಿಗಳನ್ನು ಜೈಲಿಗೆ ಹಾಕಲಾಯಿತು, ಸರ್ಕಾರದ ವಿರುಧ್ಧ ಯಾರೂ ಮಾತನಾಡುವಹಾಗಿರಲಿಲ್ಲ. ಆದರೆ, ಜನಸಾಮನ್ಯರ ಬದುಕು ಎಂದಿನಂತೆ ಸಾಗಿತ್ತು, ಆರ್ಥಿಕ ಚಟುವಟಿಕೆಗಳನ್ನು ನಡೆಸಲು ಯಾವುದೇ ತೊಂದರೆ ಇರಲಿಲ್ಲ;  ಬದುಕಿನ ಆರ್ಥಿಕ ಅಭದ್ರತೆ ಯಾರನ್ನೂ ಕಾಡಿರಲಿಲ್ಲ.  ಇಂದಿನ ಸ್ಥಿತಿಯ ಹೆಸರು ಲಾಕ್ ಡೌನ್, ಜನರ ಜೀವ ಉಳಿಸಲು ಅನುಸರಿಸುವ ವಿಧಾನವೆಂದು ಹೇಳಿ ನಂಬಿಸಲಾಗುತ್ತಿದೆ.ಜನರ ವೈಯುಕ್ತಿಕ ಬದುಕನ್ನೂ ನಿಯಂತ್ರಿಸುತ್ತಿರುವ ಇದು ಅಂತರಾಷ್ಟ್ರೀಯ ಸಂಚಿನ ಒಂದು ಭಾಗ ಎಂಬುದು ಜನಸಾಮನ್ಯರಿಗೆ ತಿಳಿಯದ ರೀತಿಯಲ್ಲಿ ಭಯ ಸೃಷ್ಟಿಸಲಾಗಿದೆ. ದಿಕ್ಕೆಟ್ಟಿರುವ ದೇಶದ ಆರ್ಥಿಕ ಪರಿಸ್ಥಿತಿ, ನುಚ್ಚು ನೂರಾಗಿರುವ ವೈಯುಕ್ತಿಕ ಅರ್ಥಿಕ ಬದುಕು, ಕೋಟ್ಯಾಂತರ ಕಾರ್ಮಿಕರ ವಲಸೆಯ ಮಹಾಪರ್ವ ಮುಂತಾದ ಸಂಕಷ್ಟಗಳಿಗಿಂತ ಬೆರಳೆಣೆಕಿಯ ಶ್ರೀಮಂತರ ಹಿತರಕ್ಷಣೆಯೇ ಸರ್ಕಾರದ ಆದ್ಯತೆಯಾಗಿದೆ. ಎರಡು ತಿಂಗಳಿನಿಂದ ಸ್ಥಗಿತಗೊಂಡಿರುವ ಆರ್ಥಿಕ ಚಟುವಟಿಕೆಗಳು  ಮಧ್ಯಮ ವರ್ಗದವರನ್ನು ನಾಳಿನ ಬದುಕಿನ ಕುರಿತು ಭಯ ಭೀತರಾಗುವಂತೆ ಮಾಡಿದೆ. ಹಳ್ಳಿಗಳಿಂದ ನಗರಗಳಿಗೆ ವಲಸೆ ಬಂದ ಕಾರ್ಮಿಕರು ಉದ್ಯೋಗವಿಲ್ಲದೇ, ಆದಾಯದ ಮೂಲವೂ ಇಲ್ಲದೇ ಬಳಲುತ್ತಿದ್ದಾರೆ. ಅಂದು ಉತ್ತರ ಭಾರತದ ಕೆಲೆವೆಡೆ ಜನಸಾಮನ್ಯರ ಮೇಲೆ ಸಂತಾನ ನಿಯಂತ್ರಣದ ಬಲತ್ಕಾರದ ಹೇರಿಕೆ ನಡೆದಿತ್ತು, ಇಂದು   ಮಿತಿಮೀರಿರುವ ಅಧಿಕಾರಿಗಳ ದರ್ಪ, ಭ್ರಷ್ಟಾಚಾರಗಳನ್ನು ತಮ್ಮ ಜೀವ ರಕ್ಷಣೆಯ ಕಸರತ್ತು ಎಂದು  ಜನರು ನಂಬುವಂತೆ ಮಾಡಲಾಗಿದೆ. ತಮ್ಮ ಆರೋಗ್ಯ ರಕ್ಷಣೆಗಾಗಿ ಶುದ್ಧ ವಾಯು ಸೇವನೆಗೂ ಅವಕಾಶ ನೀಡದೇ ವಯಸ್ಕರನ್ನು, ಮಕ್ಕಳನ್ನು ಅಮಾನವಿಯ ರೀತಿಯಲ್ಲಿ ಗೃಹಬಂಧಿಯಾಗಿಸಲಾಯಿತು. ಮನೆಯಿಂದ ಹೊರಬಂದರೆ ಕೊರೊನಾ ಪೀಡಿತರಾಗುತ್ತರೆಂಬ ಅತಾರ್ಕಿಕ, ಅನಗತ್ಯ ಭಯ ಪ್ರಚಾರ ಮಾಡಲು ಮಾಧ್ಯಮಗಳೂ ಕೈ ಜೋಡಿಸಿವೆ.  ಅಂದು ಮಾಧ್ಯಮಗಳನ್ನು ಬೆದರಿಸಿ ನಿಯಂತ್ರಿಸಲಾಗಿತ್ತು; ಇಂದು  ಅವರನ್ನು ಖರೀದಿಸಲಾಗದಿದ್ದರೆ ಬೆದರಿಕೆ ಒಡ್ಡಲಾಗುತ್ತಿದೆ,ಸಾಮಾಜಿಕ ಜಾಲತಾಣಗಳ ಮೂಲಕ ಅಪಹಾಸ್ಯ, ಬೆದರಿಕೆಯ ತಂತ್ರದ ಬಳಕೆ ನಡೆದಿದೆ.  ಅಂದು ಉದ್ಯಮಿಗಳಿಗೆ ಭೂಮಿ ನೀಡುವ ಸಲುವಾಗಿ ಜನರಿಂದ ಒತ್ತಾಯದಿಂದ ಕಸಿದುಕೊಳ್ಳಲಾಯಿತು; ಇಂದು ನೊಂದ ಜನರಿಗೆ ಸಹಾಯ ಮಾಡುವ ಸೋಗಿನಲ್ಲಿ ದೇಶದ ಅರ್ಥ ವ್ಯವಸ್ಥೆಯ ಹಿಡಿತವನ್ನು ಕೆಲವೇ ವ್ಯಕ್ತಿಗಳ ಹತೋಟಿಗೆ ನೀಡಲು ಅಗತ್ಯವಾದ ಕಾನೂನು ತಿದ್ದುಪಡಿಗಳನ್ನು, ಘೋಷಣೆಗಳನ್ನು ಈ ಅವಧಿಯಲ್ಲೇ ಮಾಡಲಾಗುತ್ತಿದೆ.     ಬ್ಯಾಂಕುಗಳಿಂದ ಸಾಲನೀಡಿಕೆಯ ಹೆಚ್ಛಳವೇ ಸರ್ಕಾರದ ಸಹಾಯ, ಸ್ವಾವಲಂಬನೆಯ ಕನಸನ್ನು ಘೋಷಣೆಗೆ ಸೀಮಿತಗೊಳಿಸಿ, ವಿದೇಶಿ ಕಂಪನಿಗಳಿಗೆ ಸ್ವಾಗತ ಕೋರುತ್ತಾ, ದೇಶದ ಸಂಪತ್ತನ್ನು ಲೂಟಿ ಹೊಡೆಯುವ ಅವಕಾಶವನ್ನು ಬೆರೆಳೆಣಿಕೆಯ ವ್ಯಕ್ತಿಗಳಿಗೆ ನೀಡುತ್ತಿರುವದನ್ನು ಕಂಡೂ ಜೈಕಾರ ಹಾಕುತ್ತಿರುವವರು ತಮ್ಮ ಬುದ್ಧಿಗೂ ಲಾಕ್ ಡೌನ್ ವಿಧಿಸಿಕೊಡಿದ್ದರೆನೋ?   ಅಂದು ಅಧಿಕಾರಿಗಳ ದರ್ಪ ಮತ್ತು ಕಾಂಗ್ರೆಸ್ ಪುಢಾರಿಗಳ ಹಾರಟದ ಹೊರತಾಗಿ ಹೆಚ್ಚಿನ ಬಿಸಿ ದಕ್ಷಿಣ ಭಾರತದಲ್ಲಿ ತಗಲಲೇ ಇಲ್ಲ. ಇಂದು ದೇಶದ ಪ್ರತಿಯೋರ್ವ ವ್ಯಕ್ತಿಯೂ ಲಾಕ್ ಡೌನ್ ನಿಂದ ಪೀಡಿತನಾಗಿದ್ದಾನೆ.   ಕೊರೊನಾದೊಂದಿಗೆ ಬದುಕಲು ಕಲಿಯಬೇಕೆಂಬ ಉಪದೇಶ ನೀಡಲು ಇಷ್ಟೊಂದು ಅನಾಹುತ ಘಟಿಸಬೇಕಿತ್ತೇ?    ಇದೂ ಕೂಡಾ ಬಂಡವಾಳಶಾಹಿ ಶೋಷಣೆಯ ಒಂದು ವಿಧ;ಯಾಕೆಂದರೆ, ಭಾರತದ ಸರ್ಕಾರವನ್ನು ಇಂದು ನಡೆಸುತ್ತಿರುವವರು ಕೆಲವೇ ಕೆಲವು ಉದ್ಯಮಿಗಳು /ಬಂಡವಾಳಶಾಹಿಗಳು ಹಾಗೂ ಅವರಿಂದ ಖರೀದಸಲ್ಪಟ್ಟ ಅಧಿಕಾರಿಗಳು; ಎದುರಿಗೆ ಕಾಣುವ ರಾಜಕಾರಣಿಗಳು ಸೂತ್ರದ ಗೊಂಬೆಗಳು ಹಾಗೂ ಲೂಟಿಯ ಚಿಕ್ಕ ಪಾಲುದಾರರು. *************** ಗಣೇಶ ಭಟ್ ಶಿರಸಿ

ಪ್ರಸ್ತುತ Read Post »

ಇತರೆ

ನಾನೇಕೆ ಬರೆಯುತ್ತೇನೆ?

ಬದುಕಿನ ಉತ್ಸಾಹ ಕಾಪಿಟ್ಟುಕೊಳ್ಳಲು ನಾನೇಕೆ ಬರೆಯುತ್ತೇನೆ? ಈ ಪ್ರಶ್ನೆಗೆ ನನಗಿನ್ನೂ ಸಮಾಧಾನಕರ ಉತ್ತರ ದೊರೆತಿಲ್ಲ.  ಯಾಕೆಂದರೆ ನಾನು ಬರೆಯುವಾಗ ಯಾವುದೇ ಉದ್ದೇಶವನ್ನಿಟ್ಟುಕೊಂಡು ಬರೆಯುವುದಿಲ್ಲ. ನನ್ನಬರವಣಿಗೆಯಿಂದಸಮಾಜದಲ್ಲಿಮಹತ್ತರಬದಲಾವಣೆ ತರಬಹುದೆಂಬ ಭ್ರಮೆ ನನಗಿಲ್ಲ.  ನನ್ನ ಬರವಣಿಗೆಗಳಿಂದ ರಾತ್ರಿ ಕಳೆದು ಬೆಳಗಾಗುವುದರಲ್ಲಿ ನಾನೊಬ್ಬ ಮಹಾನ್ ಲೇಖಕ ನಾಗ ಬೇಕೆಂಬ ಮಹತ್ವಾಕಾಂಕ್ಷೆ ನನಗಿಲ್ಲ.ನನ್ನ ಜ್ಞಾನದ, ಪ್ರತಿಭೆಯ ಪರಿಮಿತಿಯಲ್ಲಿ ಬರೆಯುವ ನಾನು ಯಾವುದೆ ಇಸಂ ಗಳಿಗೆ,ರಾಜಕೀಯಸಿಧ್ಧಾಂತಗಳಿಗೆ, ಜಾತಿ ಮತಗಳಿಗೆ ಬದ್ಧನಾಗಿ ಬರೆಯುವುದಿಲ್ಲ. ವೈಶಾಖದುರಿಬಿಸಿಲಮಧ್ಯಾಹ್ನ ಸುರಿವ ಮಳೆಹನಿಗಳ ಸ್ಪರ್ಷಕ್ಕೆ ಅರಳುವ ಮಣ್ಣಿನ ಕಣಗಳ ಕಂಪು ನನ್ನಲ್ಲಿ ಕಾವ್ಯ ಸ್ಪಂದನೆಯನ್ನುಂಟುಮಾಡುತ್ತದೆ.ನಮ್ಮೂರ ಮಲ್ಲಿಕಾರ್ಜುನ ಬೆಟ್ಟದೆತ್ತರದಲ್ಲಿ ಕಾಡು ಹೂವುಗಳ ಕಂಪನ್ನು ಹೊತ್ತು ಬೀಸುವ ತಂಗಾಳಿ ನನ್ನಲ್ಲಿ ಪುಳಕವೆಬ್ಬಿಸುತ್ತದೆ.  ಮುಂಜಾನೆ ಅಂಗಳದಲ್ಲರಳಿದ ಮಲ್ಲಿಗೆ, ಗುಲಾಬಿ, ದಾಸವಾಳ, ಮಂದಾರ ಹೂವುಗಳ ಮೇಲೆ ಮೃದುವಾಗಿ ಕುಳಿತು ನೇಸರನ ಎಳೆಕಿರಣಗಳನ್ನು ಪ್ರತಿಫಲಿಸುವ ಮಂಜು ನನಗೆ ಆನಂದ ನೀಡುತ್ತದೆ. ನನ್ನ ಸುತ್ತಲಿನ ಪರಿಸರದ, ಹಾಗೂ ವಿಶ್ವದ ಆಗು ಹೋಗುಗಳು ನನ್ನಲ್ಲಿ ಸ್ಪಂದನೆಯುಂಟುಮಾಡುತ್ತವೆ. ನನಗೇ ಅರಿವಾಗದಂತೆ ನನ್ನೊಳಗಿನೊಳಗೆಲ್ಲೋ ಈ ಎಲ್ಲವೂ ತುಂಬಿಕೊಂಡು ಬಿಡುತ್ತವೆ.. ಸುಖ ದುಃಖಗಳ ಬದುಕಿನ ಚಕ್ರ, ಅದನ್ನುರುಳಿಸುವ ಕಾಲ, ಮಾನವೀಯ ಸಂಬಂಧಗಳ ನಿಗೂಢಜಾಲ,ನನ್ನನ್ನು ಸದಾ ಕಾಡುತ್ತವೆ.  ವೃತ್ತಿ ಜೀವನದ ಬೆನ್ನು ಹತ್ತಿ ಹಲವು ಹತ್ತು ಊರುಗಳ ಸುತ್ತಿ ಬರುವಾಗ ದಕ್ಕಿದ ಅನುಭವಗಳ ಸರಕು ನನ್ನೊಳಗಿನ ಗೊಡೋನಿನಲ್ಲಿ ಭದ್ರವಾಗಿವೆ.ಸೂಕ್ಷ್ಮ ಸಂವೇದಿ ಮನಸ್ಸಿನ ಸ್ನೇಹಿತರೊಂದಿಗಿನ ಮಾತು ಕತೆ, ಚರ್ಚೆ, ಜತೆಗೆ ಉತ್ತಮ ಸಾಹಿತ್ಯ ಕೃತಿಗಳ ಓದು ನನ್ನೊಳಗೊಬ್ಬಕವಿಯನ್ನು ಸೇರಿಸಿವೆ.ಕೆಲವೊಮ್ಮೆ ಮನಸ್ಸು ತಳಮಳದಬೀಡಾದಾಗ , ಬದುಕು ದುರ್ಭ್ಹರವೆನಿಸಿದಾಗ ನನ್ನೊಳಗಿನ ಕವಿಯನ್ನು ಕರೆಯುತ್ತೇನೆ.  ಶಿಥಿಲ ಗೊಂಡ ಮನಸ್ಸನ್ನು ಪುನಹ ಕಟ್ಟಿಕೊಳ್ಳಲು , ಕಾಲದ ಉರುಳಿಗೆ ಸಿಕ್ಕು ಸವೆದು ಹೋದ ಬದುಕನ್ನು ಪುನರ್ನಿರ್ಮಿಸಿಕೊಳ್ಳಲು, ಬದುಕಿನಉತ್ಸಾಹವನ್ನು ಸದಾ ಕಾಪಿಟ್ಟುಕೊಳ್ಳಲು, ಮತ್ತು ಕಾವ್ಯ ನಿರ್ಮಿತಿಯಿಂದ ದೊರಕುವ ಆನಂದವನ್ನು ಅನುಭಿಸಲು – ನಾನು ಕವಿತೆಗಳನ್ನು ಬರೆಯುತ್ತೇನೆ. ******* ಮೇಗರವಳ್ಳಿ ರಮೇಶ್   RA

ನಾನೇಕೆ ಬರೆಯುತ್ತೇನೆ? Read Post »

ಇತರೆ

ಲಹರಿ

ಎಮ್ಮೆ ಮತ್ತು ಜೋತಿಷ್ಯ ಅನುಸೂಯ ಎಂ.ಆರ್. ನಮ್ಮ ಅಮ್ಮ ಗಟ್ಟಿ ಮುಟ್ಟಾಗಿರುವ ತನಕ ನಾವು ಹಾಲು ಕೊಂಡು ಕೊಳ್ಳುತ್ತಿರಲಿಲ್ಲ.ನಮ್ಮ ಮನೆಯಲ್ಲಿ ಹಾಲು ಕರೆಯುವ ಒಂದು ಎಮ್ಮೆ ಸದಾ ಇದ್ದೇ ಇರುತ್ತಿತ್ತು. ಬೆಳಿಗ್ಗೆ ನಾಲ್ಕೈದು  ಲೀಟರ್ ಮತ್ತು ಸಂಜೆ ಅಷ್ಟೇ ಪ್ರಮಾಣದಹಾಲು ಕೊಡುವಂತಹವು.ಆಗ ನಮ್ಮ ಮನೆಯಲ್ಲಿ ಸದಾಹಾಲು,ಮೊಸರು,ತುಪ್ಪಗಳ ಸಮೃದ್ಧಿಯ ಸುವರ್ಣಯುಗ. ನಮ್ಮಮ್ಮ ಹಸುಗಳನ್ನು ಸಾಕುತ್ತಿರಲಿಲ್ಲ,ಹಸು ನಮಗೆ ಆಗಿ ಬರುವುದಿಲ್ಲ ಎಂದು ಹೇಳುತ್ತಿದ್ದರು. ನಮ್ಮಮ್ಮನ ದಿನಚರಿ ಆರಂಭವಾಗುವುದೆ,  ಹಾಲು ಕರೆಯುವುದರಿಂದ ಸೌದೆ ಒಲೆಯ ಸಣ್ಣ ಉರಿಯಲ್ಲಿ ಹಾಲು ಕಾಯಿಸುತ್ತಿದ್ದ ಕಾರಣ ರೊಟ್ಟಿಯಂತೆ ಕೆನೆ ಕಟ್ಟುತ್ತಿತ್ತು.ನಂತರ ಮಜ್ಜಿಗೆ ಕಡೆಯುವುದು.ಪ್ರತಿದಿನ ಒಂದು ಮುದ್ದೆ ಗಾತ್ರದ ಬೆಣ್ಣೆ ತೆಗೆಯುತ್ತಿದ್ದರು.ನಮ್ಮ ಅಕ್ಕ ಪಕ್ಕದ ಮನೆಯವರಿಗೆಲ್ಲಾ ಮಜ್ಜಿಗೆ ದಾನ. ನಮ್ಮ ಮನೆಯಲ್ಲಿ ಇಡ್ಲಿ, ರೊಟ್ಟಿ, ಚಟ್ನಿ ಯೊಂದಿಗೆ ಬೆಣ್ಣೆಸಹಾ.ಬೆಣ್ಣೆ ಕಾಯಿಸುವಾಗ ಮನೆಯೆಲ್ಲಾ ಘಮಘಮ. ಬೆಣ್ಣೆ ಕಾಸುವಾಗ ಹಾಕುವ ವೀಳ್ಯದೆಲೆಗೆ  ಭಾರಿ ಬೇಡಿಕೆ. ಹಾಗಾಗಿ ನಮ್ಮ ಮನೆಯಲ್ಲಿ ತುಪ್ಪವಿಲ್ಲದೆ  ತುತ್ತು ಎತ್ತುತಿರಲಿಲ್ಲ.ನಮ್ಮಮನೆಯಲ್ಲಿದ್ದ ಮಹಿಷಿಯರು ಸದಾ ಹೆಣ್ಗರುಗಳನ್ನೇ ಕೊಡುತ್ತಿದ್ದುದ್ದು ನಮ್ಮಮ್ಮನಿಗೆ ಒಂದು ರೀತಿಯ ಹೆಮ್ಮೆ. ನಮ್ಮಮನುಷ್ಯ ಜಾತಿಯ ಲೆಕ್ಕಚಾರವೇ ಹಾಗೆ,ಹಸು, ಎಮ್ಮೆಗಳಲ್ಲಿ ಮಾತ್ರ ಹೆಣ್ಗರು ಬೇಕು.ಏಕೆಂದರೆ ಅದರಿಂದ ಹಾಲು ತುಪ್ಪಗಳ ಜೊತೆಗೆ ಕರುಗಳ ಲಾಭ.ಆದರೆ ಇದನ್ನು ಮಾನವ ಕುಲಕ್ಕೆಅನ್ವಯಿಸುವಾಗ ಗಂಡೇ ಬೇಕು ! ನನ್ನ ಮಗ ಹುಟ್ಟುವ ಮುಂಚೆ ಅಂದರೆ ಒಂದು ವಾರದ ಮುಂಚೆ ಕೊಟ್ಟಿಗೆಯಲ್ಲಿ ಎಮ್ಮೆ ಹೆಣ್ಗರು ಹಾಕಿತ್ತು. ಆಗ ನಮ್ಮತೋಟದ ಕೆಲಸಗಾರ ಹಟ್ಟೀಲಿ ಹೆಣ್ಣು ಮನೇಲೀ ಗಂಡು ಹುಟ್ಟುತ್ತೆ ಅಂದಿದ್ದರು. ಅದು ನಿಜವಾದರೂ ಕಾಕತಾಳೀಯವಿರಬಹುದು. ಇಷ್ಟೆಲ್ಲ ಸಮೃದ್ಧವಾದ  ಕ್ಷೀರಧಾರೆ  ಹರಿಸುತ್ತಿದ್ದ ನಮ್ಮ ಮನೆಯ ಮಹಿಷಿಯರು  ಮತ್ತೇರಿದಾಗ ಕೆಲವೊಮ್ಮೆ ನಮಗೆ ತಲೆ ನೋವಾಗುತ್ತಿದ್ದ ಪ್ರಸಂಗಗಳೇನು ಕಡಿಮೆಯಿಲ್ಲ. ನಮ್ಮಮನೆ ಪಕ್ಕದ ತೋಟದಲ್ಲೆ ಮೇಯಲು ಬಿಡುತ್ತಿದ್ದು ದರಿಂದ ಅವುಗಳ ಹಸಿರು ಮೇವಿಗೇನು ಕೊರತೆಯಿಲ್ಲ. ಆದರೂ ಈ ಮಹಿಷಿಯರು  ಒಮ್ಮೊಮ್ಮೆಅದ್ಯಾವ ಮಾಯದಲ್ಲೋ ತೋಟದಿಂದ ಪರಾರಿಯಾಗುತ್ತಿದ್ದವು. ಕೆಲವೂಮ್ಮೆ ಸಂಜೆ ಆದರೂ ಸುಳಿವಿರುತ್ತಿರಲಿಲ್ಲ. ರಾತ್ರಿ ಕಳೆದು ಬೆಳಗಾದರೂ ಬರದಿದ್ದರೆ ನಮ್ಮಮ್ಮ ಮೊರೆ ಹೋಗುತ್ತಿದ್ದುದು ಕೇವಲ ಇಬ್ಬರಲ್ಲಿ ಮಾತ್ರ. ಒಬ್ಬರು ಧರ್ಮಸ್ಥಳದ ಮಂಜುನಾಥಸ್ವಾಮಿ. ಆ ದೇವರಲ್ಲಿ ನಮ್ಮಮ್ಮನಿಗೆ ವಿಶೇಷ ನಂಬಿಕೆ. ಇನ್ನೊಬ್ಬರು ಸಂಗೀತ ಮೇಷ್ಟ್ರು ಅಂದ್ರೆ ಅವರು ಹೇಳುವ ಜ್ಯೋತಿಷ್ಯ.ಅವರು ಸ.ಹಿ. ಪ್ರಾ. ಶಾಲೆಯಲ್ಲಿ ಸಂಗೀತ ಮೇಷ್ಟ್ರಾಗಿದ್ದರಿಂದ ಅದೇ ಅವರ ಅನ್ವರ್ಥನಾಮವಾಗಿತ್ತು. ಅವರಲ್ಲಿ ತುಂಬಾ ಜನರು ಜೋತಿಷ್ಯ ಕೇಳಲು, ಜಾತಕ ಬರೆಸಲು ಹೋಗುತ್ತಿದ್ದರು. ಸದಾ ಗಿಜಿಗುಡುವ ಜನರು. ನಮ್ಮ ತಾಯಿ ಎಮ್ಮೆ ಓಡಿ ಹೋದಾಗಲೆಲ್ಲಾ  ಎಲೆ,ಅಡಿಕೆ . ಬಾಳೆ ಹಣ್ಣು ದಕ್ಷಿಣೆಯನ್ನು ಕೊಟ್ಟು  ಯಾರನ್ನಾದರೂ ನಂಬಿಕಸ್ಥರನ್ನು ದೂತನನ್ನಾಗಿಸಿ  ಎಮ್ಮೆಯ ಅನ್ವೇಷಣಾ  ಕಾರ್ಯಕ್ಕೆ ಕಳಿಸುತ್ತಿದ್ದರು.  ಸಂಗೀತ ಮೇಷ್ಟ್ರು ನಮಗೆ ಗುರುಗಳಾಗಿದ್ದವರು.  ಮನೆ ಬಿಟ್ಟು  ಓಡಿಹೋಗುತ್ತಿದ್ದ ಮಹಿಷಿಯನ್ನು ಪತ್ತೆ ಹಚ್ಚುವಲ್ಲಿ ಅವರು ಹೇಳುತ್ತಿದ್ದ ಶಾಸ್ತ್ರ 90 % ನಿಖರವಾಗಿರುತ್ತಿತ್ತು. ಒಮ್ಮೆ ಅವರು ಒಂದು ನಿರ್ದಿಷ್ಟವಾದ ದಿಕ್ಕನ್ನು ಸೂಚಿಸಿ ಆ ಕಡೆ ಹೋದರೆ ನಿಮ್ಮ ಎಮ್ಮೆ ಸಿಗುತ್ತದೆ ಎಂದು ಹೇಳಿದಾಗ ನಮ್ಮ ದೂತರು ಆ ಜಾಡನ್ನಿಡಿದು ಹೊರಟಾಗ ಅಲ್ಲಿದ್ದ ದೊಡ್ಡಿಯೊಂದರಲ್ಲಿ ಕೂಡಿ ಹಾಕಿದ್ದರು. ದೂತರು ದಂಡ ಕಟ್ಟಿ ಬಿಡಿಸಿಕೊಂಡು ಸೆರೆವಾಸದಿಂದ  ಮುಕ್ತಗೊಳಿಸಿದರು. ಮಹಿಷಿ ಮರಳಿ ಮನೆಗೆ ಬಂದಳು. ಮತ್ತೊಮ್ಮೆ ಮಹಿಷಿ ಮನೆ ಬಿಟ್ಟಾಗ ಸಂಗೀತ ಮೇಷ್ಟ್ರು ಹೇಳಿದ  ಶಾಸ್ತ್ರ ನಿಜವಾಯಿತು. ನಿರ್ದಿಷ್ಟ ದಿಕ್ಕಿನಲ್ಲಿರುವ ಹಳ್ಳಿಯ ರೈತರೊಬ್ಬರ ತೋಟದ ಮನೆಯಲ್ಲಿದೆಯೆಂದು ಹೇಳಿದರು. ಹಳ್ಳಿ ಹಾಗೂ ರೈತರಹೆಸರಿನ ಪ್ರಸ್ತಾಪವಿರಲಿಲ್ಲ. ಈ ಬಾರಿ ನಮ್ಮ ದೂತರು ಬಾತ್ಮಿದಾರರೊಂದಿಗೆ ಬೇಹುಗಾರಿಕೆ ನಡೆಸಿ  ಹಳ್ಳಿಯ ತೋಟದ  ಮನೆಯಲ್ಲಿದ್ದ ಮಹಿಷಿಯನ್ನು ಅಶೋಕ ವನದಲ್ಲಿದ್ದ ಸೀತೆಯನ್ನು ಕರೆತರುವಂತೆ ಕರೆತರಲಾಯಿತು ಆ ರೈತರು ಹೊಟ್ಟೆ ತುಂಬಾ ಮೇವನ್ನು ಹಾಕಿ ಹಾಲನ್ನು ಕರೆದು ಕುಡಿದಿದ್ದರು. ಕಟ್ಟಿ ಹಾಕಿ ಮೇಯಿಸುವಂತೆ ಬಿಟ್ಟಿ ಸಲಹೆ ನೀಡಿ ಬೀಳ್ಕೊಟ್ಟಿದ್ದರು. ಮಗದೊಮ್ಮೆ ಮಹಿಷಿ ಕಣ್ಮರೆಯಾದಾಗ ಯಥಾ ಪ್ರಕಾರ ಸಂಗೀತ ಮೇಷ್ಕ ಮನೆ ಬಾಗಿಲಿಗೆ ಹೋದಾಗ ಎಲ್ಲಿ ಹುಡುಕಿದರೂ ಸಿಗುವುದಿಲ್ಲ.ತಾನೆ ತಾನಾಗಿ ಮನೆಗೆ ಮರಳುವುದೆಂದು ಹೇಳಿದರು.  ಮನಸ್ಸು ತಡೆಯದೆ ನಮ್ಮಮ್ಮ ಮಂಜುನಾಥ ಸ್ವಾಮಿಗೆ ಹರಕೆ ಕಟ್ಟಿಕೊಂಡಿದ್ದು ಆಯ್ತು. ಎರಡು ದಿನ ಕಳೆದರೂ ಬಾರದಿದ್ದಾಗ ಈ ಬಾರಿ ಸಿಕ್ಕಿದರೆ ಮಾರಾಟ ಮಾಡಿ  ಕೈತೊಳೆದುಕೊಳ್ಳಬೇಕು ಅನ್ನುವಷ್ಟರ ಮಟ್ಟಿಗೆ ಮಾತುಕತೆ ನಡೆಯಿತು. ಮೂರನೆ ದಿನ ಮಹಿಷಿ ಸೋತು ಸುಣ್ಣವಾಗಿ ಮೇವಿಲ್ಲದೆ ಸೊರಗಿ ಬಂದಿದ್ದಳು. ಕದ್ದು ಓಡಿ ಹೋಗಿದ್ದ ಕಾರಣ ಒಂದು ವಾರ ಗೃಹ ಬಂಧನದಲ್ಲಿದ್ದಳು. ಆಗಲೇ ಧರ್ಮಸ್ಥಳದ  ಮಂಜುನಾಥ ಸ್ಟಾಮಿಗೆ ಹರಕೆಯ ಹಣ ಸಂದಾಯವಾಯಿತು. ವರ್ಷಕ್ಕೆರಡು ಮೂರು ಬಾರಿ ಮನೆ ಬಿಡುವ ಚಾಳಿ ಅವಳದು. ಕರು ದೊಡ್ಡವಾದ ಮೇಲೆಯೇ ಇಂತಹ ಪ್ರಸಂಗಗಳು ಹೆಚ್ಚು   ಎಳೆಗರುವನ್ನು ಬಿಟ್ಟು ಹೋಗುವಂಥ ಕೆಟ್ಟ ತಾಯಿ  ಅವಳಂತೂ ಅಲ್ಲ ! ಕರು ಹಾಕಿದ ಎರಡನೆ ದಿನದ  ಹಾಲಿನಿಂದ ಮಾಡುವ ಗಿಣ್ಣು ಈಗ ನಮಗೆ  ಅಪರೂಪ.  ಹಾಲು ಕರೆಯುವ ಮುನ್ನ ಎಳೆಗರುವಿಗೆ ಕುಡಿಸಿ, ತಾಯಿ ಮುಂದೆ ಕರುವನ್ನು ಕಟ್ಟಿದಾಗ  ಕರುವಿನ ಮೈಯನ್ನು ನಾಲಿಗೆಯಿಂದ ನೆಕ್ಕುವ ಆ ಮಮತೆಗೆ ಸಾಟಿ ಇಲ್ಲವೇ ಇಲ್ಲ.  ಹಾಲು ಕರೆದ ನಂತರ ಕರುವಿಗಾಗಿ ಬಿಡುವ  ಹಾಲನ್ನು ಇನಿತೂ ಬಿಡದೆ ಕುಡಿದ  ಆ ಎಳೆಗರುವಿನ  ನೆಗೆದಾಟ, ಕುಣಿದು ಕುಪ್ಪಳಿಸುವಾಟ ಓಡುವ  ಚಿನ್ನಾಟದ ಸೊಗಸನ್ನು ಕಂಡವರು ಮರೆಯಲು ಸಾಧ್ಯವೇ !  ಕರು  ಕುಡಿಯುವ ತನ್ನ ತಾಯಿ  ಹಾಲಲ್ಲೂ ಪಾಲು ಕೇಳುವ ನಾವು ನಮ್ಮ ಮಕ್ಕಳಿಗೆ ಸ್ತನ್ಯ ಪಾನ ಅತಿ ಶ್ರೇಷ್ಟವೆಂದೂ ಸಾರಿ ಸಾರಿ ಹೇಳುತ್ತೇವೆ !   ಅಮ್ಮನಿಗೆ ಶಕ್ತಿಗುಂದಿದ ಮೇಲೆ  ತೋಟದ ಕೆಲಸಗಾರರ ಕೊರತೆಯ ನಂತರ  ಎಮ್ಮೆಗಳ ಪಾಲನೆಗೆ ಪೂರ್ಣ ವಿರಾಮ ಬಿತ್ತು *********

ಲಹರಿ Read Post »

ಇತರೆ

ಪ್ರಸ್ತುತ

ಲಾಕ್ಡೌನ್ ತೆರವಿನ ಪರಿಣಾಮಗಳು ರೇಶ್ಮಾ ಗುಳೇದಗುಡ್ಡಾಕರ್ ಕೊರೊನಾ ಸಾವಿರದ ಗಡಿದಾಟಿದೆ ಇಂತ ಆತಂಕದ ಸ್ಥಿತಿ ಯಲ್ಲಿ ಸರ್ಕಾರ ಲಾಕ್ಡೌನ್ ಹಂತ ಹಂತವಾಗಿ ತೆರವು ಗೊಳಿಸುವದು ಎಷ್ಟು ಸರಿ? ಸಾರಿಗೆ ಸಂಚಾರ ಆರಂಭವಾದರೆ ಸಾಮಾಜಿಕ ಅಂತರ ಸಾದ್ಯವೆ ನಮ್ಮ  ಜನರ ಇಗಿನ ಮನಸ್ಥಿತಿ ಯಲ್ಲಿ  ರಾಜ್ಯದ ಲ್ಲಿ ?ಶಾಲೆ ಪುನಾರಂಭ ಎರಡು ಪಾಳಿಯಲ್ಲಿ ಮಾಡಲು ಸಚಿವರು ಹೇಳಿದರು ಇಂತಹ ಸಂಧರ್ಭದಲ್ಲಿಕೊರೊನಾ ತಡೆಗಟ್ಟಲು ಸೂಕ್ತ ವ್ಯವಸ್ಥೆ ಇದೆಯೇ ಶಾಲೆಯಲ್ಲಿ  ಎಂಬುದನ್ನು ಪರೀಶೀಲಸ ಬೇಕು . ಶಾಲಾ ಅವರಣದಲ್ಲಿ ಮಕ್ಕಳು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾದ್ಯವೇ ಎಂಬ ಪ್ರಶ್ನೆ ಉದ್ಬವಾಗುತ್ತದೆ . ಪೂರ್ವ ಪ್ರಾಥಮಿಕ ಮಕ್ಕಳ ಆರೋಗ್ಯ ಭದ್ರತೆಗೆ ಸ್ಯಾನಿಟೈಸರ್ ಬಳಕೆ ನೆಚ್ಚಿಕೊಂಡು ಮಕ್ಕಳನ್ನು ಕಾಪಾಡಲು ಸಾದ್ಯವಿಲ್ಲ ಇಷ್ಟು ದಿನ ಕಷ್ಟ ಪಟ್ಟು ಹಿಡಿದಿಟ್ಟ ಮಕ್ಕಳು ಒಮ್ಮೆಲೆ ಶಾಲೆಗೆ ಪ್ರವೇಶಿಸುತ್ತವೆ.ಅಲ್ಲಿ ಅವರದ್ದೆ ಆದ ಪ್ರಪಂಚ ರಚನೆಯಾಗುತ್ತದೆ ಮಕ್ಕಳು ಆಟ ಆಡುವಾಗ ,ಊಟಮಾಡುವಾಗ ತಮ್ಮದೇ ಆದ ಗುಂಪನ್ನು ರಚಿಸಿಕೊಂಡು ನಲಿಯುವ ಮಕ್ಕಳು ಬ್ರೇಕ್ ಸಮಯದಲ್ಲಿ ಒಬ್ಬರಿಗೊಬ್ಬರು ಕೈಹೀಡಿದು ಎಳೆದಾಡುತ ಓಡಾಡುವ ಚಿಣ್ಣರನ್ನು ಸಾಮಾನ್ಯ ಸಮಯದಲ್ಲೇ  ನಿಗ್ರಹಿಸುವದು ಶಿಕ್ಷಕರಿಗೆ ಸವಾಲಿನ ಸಂಗತಿ . ಇನ್ನು ಇಂತಹ ಕಠಿಣ ಸಂದರ್ಭದಲ್ಲಿ ಪಾಲನೆ ಸಾದ್ಯವೇ ಎಂಬುದನ್ನು ಅವಲೋಕಿಸ ಬೇಕಿದೆ .   ಕೊಠಡಿಯಲ್ಲಿ ಅಂತರ ಸಾದ್ಯ ಆದರೆ ಆವರಣದಲ್ಲಿ ಪಾಲಿಸುವದು ಕಷ್ಟ ದ ಸಂಗತಿ . ಇಂತಹ ಸಮಯದಲ್ಲಿ ಶಾಲೆ ಪುನರಾರಂಭವಾದರೆ .ವೈದ್ಯಕೀಯ ಸಿಬ್ಬಂದಿಯ ಅಗತ್ಯ ಮತ್ತುಪ್ರತಿ ತಾಲೂಕಿನಲ್ಲಿ ಮಕ್ಕಳ ತಜ್ಞ ವೈದ್ಯರು ಇದ್ದರಾಯೇ? ಎಂಬುದನ್ನು ಸರ್ಕಾರ ಪರೀಕ್ಷಸ ಬೇಕು .ಇಷ್ಟುದಿನ ನಮ್ಮನ್ನು ಕಾದ ಪೋಲಿಸ್  ಸಿಬ್ಬಂದಿ, ವೈದ್ಯಕೀಯ ಸಿಬ್ಬಂದಿಗಳು ಕೊರೊನಾ ಪೀಡಿತರಾದರು! .ಹೀಗಿರುವಾಗ ಇನ್ನು ಈ ಸರದಿ ಶಿಕ್ಷಕರು ,ಮಕ್ಕಳು,ಶಾಲಾ ಸಿಬ್ಬಂದಿದಾಗುತ್ತದೆ ಹೊರತು ಶೈಕ್ಷಣಿಕ ಆರಂಭವಾಗುವದಿಲ್ಲ . ಕೊರೊನಾ ದೆಸೆಯಿಂದ ಕೆಲಸ ಕಳೆದುಕೊಂಡು  ನಗರಗಳಿಂದ ಆಗಾಧ ಪ್ರಮಾಣದಲ್ಲಿ ಜನರು ತಮ್ಮ ಸ್ವಗ್ರಾಮಗಳಿಗೆ ತೆರಳಿದ್ದಾರೆ.ಈ ಗ್ರಾಮಗಳಲ್ಲಿಯೂ ಶಾಲೆಗಳಿವೆ,ಹೊಸ  ಹೊಸ ದಾಖಲಾತಿಯೂ ಶೈಕ್ಷಣಿಕ ವರ್ಷದಲ್ಲಿ  ಅಗುತ್ತದೆ  ಮಕ್ಕಳ ಸಂಖ್ಯೆ ಸಾಮಾನ್ಯ ವಾಗಿ ಏರುತ್ತದೆ .ಅಗ ಇಲ್ಲಿನ ಮಕ್ಕಳ, ಶಿಕ್ಷಕರ ಆರೋಗ್ಯ ವು .ನಾವು ಗಮನಿಸಬೇಕು ಈಗ ನಗರಗಳಿಗಿಂತ ಜನರ , ಪ್ರಮಾಣ ಗ್ರಾಮದಲ್ಲಿ ಹೆಚ್ಚಿದೆ .ಇಗ ಅಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು ,ಅವುಗಳ ಸಾಮರ್ಥ್ಯ, ಅಲ್ಲಿ ವೈದ್ಯಕೀಯ ಸೌಲಭ್ಯ ಎಲ್ಲವು ಮುಖ್ಯ ಪಾತ್ರ ವಹಿಸುತ್ತವೆ .ಇಗಿನ ಪರಿಸ್ಥಿತಿ ಯಲ್ಲಿ ತಾಲೂಕು ಆಸ್ಪತ್ರೆಗಳಲ್ಲೆ ವೈದ್ಯ ರು ಲಭ್ಯವಿಲ್ಲ ಕೊರೊನಾ ಕಾರಣದಿಂದ ಇಂತಹ ಸಂದರ್ಭಗಳಲ್ಲಿ ಗ್ರಾಮೀಣ ಮಕ್ಕಳ ಆರೋಗ್ಯ ಕಾಪಾಡುವದು ಹೇಗೆ? > ಇದನ್ನು ಗಂಭಿರವಾಗಿ ಯೋಚಿಸ ಬೇಕಿದೆ. ಲಾಕ್ಡೌನ್ ತೆರವಿಗೆ ಚಿಂತಿಸುವದಕ್ಕಿಂತ .ಕೊರೊನಾ ಬಗ್ಗು ಬಡಿಯಲುಚಿಂತಿಸ ಬೇಕು .ದಿನೆ ದಿನೆ ವ್ಯಾಪಕವಾಗಿ ಹರಡುತ್ತಿರುವ ಸೋಂಕು,ಒಂದೆಡೆ ಸಾಮಾಜಿಕ ಅಂತರ ಕಾಯ್ದು ಕೊಳ್ಳದೆ ಮಾರ್ಕೇಟ್, ಅಂಗಡಿ, ಯಲ್ಲಿ ಮುಗಿ ಬಿದ್ದ ಜನ . ಇಂತಹ ಸೂಕ್ಷ್ಮ  ಪರಿಸ್ಥಿತಿಯಲ್ಲಿ ಲಾಕ್ಡೌನ್   ಪರಿಣಾಮಕಾರಿ ಯಾಗಿ ಜಾರಿಗೊಳಿಸುವ ಅಗತ್ಯವಿದೆ.    ತೆರವು ಮತ್ತಷ್ಟು ಕೊರೊನಾ ಅಟ್ಟಹಾಸಕ್ಕೆ ದಾರಿ ಮಾಡಿದಂತಾಗುತ್ತದೆ.ಮುಂದಾಗುವ ಅಪಾಯವನ್ನು ಗಮನದಲ್ಲಿ ಇಡ್ಟುಕೊಂಡು ನಿಯಮ ರೂಪಿಸಿ ಜನರ ಬದುಕನ್ನು ಉಳಿಸ ಬೇಕದ ತುರ್ತು ಅಗತ್ಯವಿದೆ ಇಲ್ಲವಾದಲ್ಲಿ ರಾಜ್ಯದ ಲ್ಲಿ ಮಹಾ ಮರಣ ಮೃದಂಗ ಬಾರಿಸುವದರಲ್ಲಿ ಸಂಶಯವಿಲ್ಲ . ( ಬರಹವನ್ನು ನೀವು ಓದುವ ಸಮಯದಲ್ಲಿ ರಾಜ್ಯದಾದ್ಯಂತೆಕೊರೋನಾ ಸೋಂಕಿತರ ಸಂಖ್ಯೆ ಮಮತ್ತಷ್ಟು ಏರಿಕೆಯಾಗಿದೆ) *****************************

ಪ್ರಸ್ತುತ Read Post »

ಇತರೆ

ಪ್ರಸ್ತುತ

ಗ್ರಾಮಮಟ್ಟದಿಂದ ರಾಜ್ಯ ಮಟ್ಟದವರೆಗೂ ಸ್ವಾವಲಂಬನೆ ಗಣೇಶಭಟ್ ಮಾನ್ಯ ಪ್ರಧಾನಿಯವರು ಸ್ವಾವಲಂಬಿ ಭಾರತ, ಗ್ರಾಮಮಟ್ಟದಿಂದ ರಾಜ್ಯ ಮಟ್ಟದವರೆಗೂ ಸ್ವಾವಲಂಬನೆಯ ಕುರಿತು ಟ್ವೀಟಿಸಿದ್ದಾರೆ. https://twitter.com/PMOIndia/status/1253562403544915970 ಇಂದು ದೇಶ ಅನುಸರಿಸುತ್ತಿರುವ ಬಂಡವಾಳವಾದ ನೀತಿಯಿಂದ ಈ ಉದ್ದೇಶ ಈಡೇರಲು ಸಾಧ್ಯವಿಲ್ಲ.ಲಕ್ಷ ಲಕ್ಷ ಕೋಟಿ ಹಣ ಸುರಿದರೂ ಅಷ್ಟೇ. ಮಿಶ್ರ ಆರ್ಥಿಕನೀತಿ, ಗಾಂಧೀವಾದ,ಸರ್ವೋದಯ,ಜೆಪಿ ಚಿಂತನೆ,ಸಮಾಜವಾದ ಮುಂತಾದವುಗಳೆಲ್ಲವೂ ಬಂಡವಾಳವಾದದ ವಿವಿಧ ರೂಪಗಳು. ಕಮ್ಯೂನಿಸಮ್ ಎಂಬುದು state capitalism. ಪ್ರಾದೇಶಿಕ ಸ್ವಾವಲಂಬನೆಗೆ ಬೇಕಾದುದು ನವ ಆರ್ಥಿಕ ಚಿಂತನೆ, ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಆಧರಿಸಿ ರೂಪುಗೊಳ್ಳುವ ತಳ ಮಟ್ಟದ ಯೋಜನೆಗಳು. ಕಳೆದ ಹಲವು ವರ್ಷಗಳಿಂದಲೂ ಪ್ರಾದೇಶಿಕ ಆರ್ಥಿಕ ಸ್ವಾವಲಂಬನೆಯ ಕುರಿತು ಪ್ರಉತ(ಪ್ರಗತಿಶೀಲ ಉಪಯೋಗ ತತ್ವ)ದ ಅಧಾರದ ಮೇಲೆ ಬರೆಯುತ್ತಿದ್ದೇನೆ. ಒಂದೆರಡು ಸ್ಯಾಂಪಲ್ ಗಳು: ಆಗಸ್ಟ್ 10, 2018 · ಪ್ರಾದೇಶಿಕ ಅಸಮಾನತೆ ದೂರೀಕರಿಸುವ ಪರಿ ಪ್ರತಿಯೊಂದು ಪ್ರದೇಶದ ಭೌಗೋಳಿಕ ಪರಿಸ್ಥಿತಿ, ನದಿ ಕೊಳ್ಳಗಳ ಸ್ಥಿತಿ, ಪರಿಸರ, ಮಣ್ಣಿನ ಗುಣ ಲಕ್ಷಣ, ಮಳೆ, ಹವಾಮಾನ ಮುಂತಾದವುಗಳ ಜೊತೆಗೆ ಜನರ ಮಾನಸಿಕತೆಯನ್ನು ಪರಿಗಣಿಸಿ ಯೋಜನೆಗಳು ರೂಪುಗೊಳ್ಳಬೇಕು. ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ, ಸ್ಥಳೀಯರಿಗೆ ಉದ್ಯೋಗ ಸೃಷ್ಟಿಸುವ ಯೋಜನೆಗಳು ತಾಲೂಕು ವಾರು ರೂಪುಗೊಂಡು, ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಕ್ರೋಢೀಕೃತಗೊಳ್ಳಬೇಕು. ಪ್ರತಿಯೊಂದು ರಾಜ್ಯವೂ ತನ್ನ ಎಲ್ಲ ನಾಗರಿಕರಿಗೆ ಉದ್ಯೋಗ ಸೃಷ್ಟಿಸುವ, ತಾನು ಆರ್ಥಿಕವಾಗಿ ಸ್ವಾವಲಂಬಿಯಾಗುವಂತಹ ಪ್ರಯತ್ನ ನಡೆಸಬೇಕು. ಈ ಉದ್ದೇಶದಿಂದಲೇ ಅಭಿವೃದ್ಧಿ ಯೋಜನೆಗಳು ರೂಪುಗೊಳ್ಳಬೇಕು. 13 ಫೆಬ್ರವರಿ · ಡಾ. ಸರೋಜಿನಿ ಮಹಿಷಿ ವರದಿಯಾಚೆಗೆ .. ಈ ಸಮಸ್ಯೆಗಳಿಗೆ ಪರಿಹಾರವೆಂದರೆ ವಿಕೇಂದ್ರೀಕೃತ ಅರ್ಥವ್ಯವಸ್ಥೆಯ ಅನುಷ್ಠಾನ. ಇದರ ಮೊದಲ ಹಂತವೆಂದರೆ ಆರ್ಥಿಕವಾಗಿ ಸ್ವಯಂ ಸ್ವಾವಲಂಬಿಯಾಗಬಲ್ಲ ಭೌಗೋಳಿಕ ಕ್ಷೇತ್ರಗಳನ್ನು ಗುರ್ತಿಸುವುದು. 2 ಏಪ್ರಿಲ್ 2020 ಹೊಸ ಮನ್ವಂತರ ದಾರಿ ತೋರಲಿರುವ ಕೊರೋನಾ ಪಿಡುಗು ಕೊರೊನಾ ಭಯದಿಂದ ಹೊರಬಂದು ಪುನಃ ದೇಶದ ಹಾಗೂ ವೈಯಕ್ತಿಕ ಆರ್ಥಿಕತೆಯನ್ನು ಬಲಪಡಿಸುವುದು ಈಗ ಅನುಸರಿಸುತ್ತಿರುವ ಅಭಿವೃದ್ಧಿಯ ಮಾದರಿ ಎಂದರೆ ಬಂಡವಾಳವಾದ ಆಧಾರಿತ ಕೇಂದ್ರೀಕೃತ ಅರ್ಥನೀತಿಯನ್ವಯ ಸಾಧ್ಯವಾಗದ ಕೆಲಸ. ಈ ನಿರಾಶಾದಾಯಕ ಸ್ಥಿತಿಯಲ್ಲಿ ಅಭಿವ್ಯದ್ಧಿಯ ಪರ್ಯಾಯ ಮಾದರಿಗಳ ಕುರಿತು ಚಿಂತಿಸುವುದು ಅನಿವಾರ್ಯವಾಗಲಿದೆ. 24 ಏಪ್ರಿಲ್ ರಂದು, 10:31 ಪೂರ್ವಾಹ್ನ ಸಮಯಕ್ಕೆ · ಕೊರೊನಾ ಮುಖಾಂತರ ಪ್ರಕೃತಿ ಹೇಳಿದ ಪಾಠ ಪೃಥ್ವಿಯ ಎಲ್ಲೆಡೆ ಪ್ರಕೃತಿ ಸಂಪನ್ಮೂಲಗಳನ್ನು ಹಂಚಿದೆ. ಅವನ್ನು ಗುರ್ತಿಸಿ ಬಳಸುವ ಬುದ್ದಿಮತ್ತೆಯನ್ನು ಮಾನವನಿಗೆ ನೀಡಿದೆ. ಸ್ಥಳೀಯ ಸಂಪನ್ಮೂಲಗಳನ್ನು ಆಧರಿಸಿ ಆರ್ಥಿಕ ಚಟುವಟಿಕೆಗಳು ನಡೆದು ಜನರು ತಾವಿರುವ ಊರಿನಲ್ಲಿ ಉದ್ಯೋಗ ಪಡೆದು ಬದುಕು ಕಟ್ಟಿಕೊಳ್ಳಲು ಪ್ರಕೃತಿ ಅವಕಾಶ ಸೃಷ್ಟಿಸಿದೆ .. ಮಾನವತೆಯ ಹಿತ ಬಯಸುವವರು ಪರ್ಯಾಯ ವ್ಯವಸ್ಥೆಯ ಕುರಿತು ಚಿಂತಿಸಲೇಬೇಕಾದ ಸಂದರ್ಭವಿದು. ********

ಪ್ರಸ್ತುತ Read Post »

ಇತರೆ

ಪ್ರಸ್ತುತ

ಅವಕಾಶ  –   ವಂಚಿತರ ಗೆಲುವಿನ ಹೆಬ್ಬಾಗಿಲು! ವಸುಂಧರಾ ಕದಲೂರು   ಜನರು ಅವಕಾಶ ವಂಚಿತರಾಗಲು ಇರುವ ಕಾರಣಗಳು ಬಹಳ ಸಲ ಕ್ಷುಲ್ಲಕವಾಗಿರುತ್ತವೆ. ಅದರಲ್ಲೂ ಬಣ್ಣ, ಹಣ, ಅಧಿಕಾರ, ಜಾತಿ- ಇತರೆ ತಾರತಮ್ಯಗಳು ಪ್ರಮುಖವಾದವು. ಆದರೆ ಕೇವಲ ‘ಹೆಣ್ಣು’ ಎಂಬ ಕಾರಣಕ್ಕೇ ಅವಕಾಶ ವಂಚಿತರಾಗುವುದು ಇದೆಯಲ್ಲಾ ಇದಕ್ಕೆ ಏನೆನ್ನುವುದು..?            ತಮಗೆ ದೊರಕಿದ ಒಂದು ಸದಾವಕಾಶದಿಂದ ಎತ್ತರದ ಸಾಧನೆ ಮಾಡಿರುವ ಸುಧಾಮೂರ್ತಿ, ಕಿರಣ್ ಮಜುಂದಾರ್, ಹಿಮಾದಾಸ್ ಗುಪ್ತಾ, ಸಾನಿಯಾ ಮಿರ್ಜಾ, ಪಿ ಟಿ ಉಷಾ, ಪಂಢರೀಬಾಯಿ, ಲಕ್ಷ್ಮೀ, ಮಾಧವಿ, ಮಾಧುರಿ ದೀಕ್ಷಿತ್, ವೈದೇಹಿ, ತ್ರಿವೇಣಿ, ಬಿ. ಜಯಶ್ರೀ, ಎಸ್. ಜಾನಕಿ, ಬಿ ಆರ್ ಛಾಯಾ, ಡಾ. ಆಶಾ ಬೆನಕಪ್ಪ, ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ, ಡಾ. ಮಲ್ಲಿಕಾ ಘಂಟಿ, ಡಾ. ಲೀಲಾ ಅಪ್ಪಾಜಿ, ಡಾ. ಉಷಾದಾತಾರ್, ಮಂಜುಭಾರ್ಗವಿ… ಹೀಗೆ ನಾನಾ ಬಗೆಯ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದವರನ್ನು ಜಗತ್ತು ಹೆಮ್ಮೆಯಿಂದ ಮೆಚ್ಚುತ್ತದೆ. ಆದರೆ, ಅದೆಷ್ಟೋ ಹೆಣ್ಣು ಜೀವಗಳು ಬದುಕುವ ಅವಕಾಶವೇ ಸಿಗದೆ, ತಾವು ಜೀವಂತ ಇರುವ ಕುರುಹನ್ನು ಬಿಟ್ಟುಕೊಡಲಾಗದೇ ಹೇಗೋ ದಿನದೂಡುತ್ತಿರುವುದನ್ನು ನಿರಾಕರಿಸಲಾಗುವುದೇ?   ತಾವೂ ಸಹ ಇತರರಂತೆಯೇ ಅಪಾರ ಸಾಮರ್ಥ್ಯ- ಸಾಧ್ಯತೆಗಳನ್ನು ಹೊಂದಿರುವವರು, ಅನನ್ಯ ಪ್ರತಿಭೆಗಳ ಪ್ರತಿನಿಧಿಗಳಾಗಿರುವವರು, ತಮಗೂ ಸಹ ಸೂಕ್ತ ವೇದಿಕೆ ದೊರೆತರೆ ಜಗಮಗಿಸಿ ಮಿಂಚಬಲ್ಲೆವು ಎನ್ನುವ ಹಲವಾರು ಪ್ರತಿಭಾನ್ವಿತರು ನಮ್ಮೊಡನಿದ್ದಾರೆ. ಆದರೆ ಅವರು ಅವಕಾಶ ವಂಚಿತರಾಗಿ ಅಜ್ಞಾತವಾಸ ಮಾಡುತ್ತಿದ್ದಾರೆ.  ಹೀಗೆ ಕತ್ತಲಲ್ಲಿ ಕೊಳೆಯುತ್ತಿರುವ ಚೈತನ್ಯಗಳನ್ನು ಬೆಳಕಿನ ಬಯಲಿಗೆ ತರುವುದು ಹೇಗೆ?             ನಮ್ಮ ನಡುವೆಯೇ ಹಲವು ಬಗೆಯಲ್ಲಿ ಅವಕಾಶ ವಂಚಿತರಾಗಿರುವವರಿದ್ದಾರೆ. ಒಂದಷ್ಟು ತಾಳ್ಮೆ ಹಾಗೂ ಅಂತಃಕರುಣೆಯಿಂದ ನೋಡಿದರೆ ಅಂತಹವರು ಕಣ್ಣಿಗೆ ಕಂಡಾರು…     ಆಕೆ ನನ್ನ ಅಕ್ಕನ ಕಾಲೇಜು ಗೆಳತಿ. ಆಕೆಗೆ ಸಂಬಂಧದಲ್ಲೇ ಮದುವೆಯಾಗಿ ಊರಿನಲ್ಲೇ ಉಳಿದವಳು. ಕಾಲೇಜಿನ ಸಾಂಸ್ಕೃತಿಕ ವೇದಿಕೆಗಳಲಿ ಮಿಂಚುತ್ತಿದ್ದವಳಿಗೆ ಪದವಿ ಶಿಕ್ಷಣ ಮುಗಿಸಿ, ಮುಂದೆಯೂ ಹೆಚ್ಚು ಓದಿ, ಉದ್ಯೋಗ ಹಿಡಿಯುವ ಮಹದಾಸೆ ಇತ್ತು. ಅದೇನಾಯಿತೋ ತಿಳಿಯದು, ಪದವಿಯ ಕೊನೆಯ ವರ್ಷದಲ್ಲಿ ಮದುವೆಯಾಗಿ ಹೋಯಿತು. ವರ್ಷ ಕಳೆಯುವಷ್ಟರಲ್ಲಿ ಒಂದು ಮಗುವಿನ ತಾಯಿಯೂ ಆದಳು. ಇನ್ನು ಪದವಿ ಮುಗಿಸುವುದಂತೂ ಅವಳ ಕನಸಾಗಿ ಉಳಿಯಿತು. ಕಳೆದ ವರ್ಷ ಯಾವುದೋ ಸಮಾರಂಭದಲ್ಲಿ  ಭೇಟಿಯಾದಾಗ ಆಕೆ ಹೇಳಿದ್ದಿಷ್ಟಿ, “ಮಗು ಬೆಳೆದು ದೊಡ್ಡದಾಯ್ತು. ಈಗಷ್ಟೇ ಎಜುಕೇಷನ್ ಕಂಪ್ಲೀಟ್ ಆಯ್ತು.  ಇನ್ನು ದೊಡ್ಡ ನಗರಕ್ಕೆ ಹೋಗಿ ಉದ್ಯೋಗ ಹಿಡಿದು ಲೈಫ್ ಸೆಟಲ್ ಮಾಡಿಕೊಳ್ಳಬೇಕನ್ನೋ ಹುಮ್ಮಸ್ಸಿನಲ್ಲಿದೆ. ನಂಗೆ ಖುಷಿ. ಆದರೆ ಮನೇಲಿ ನಾನು ಒಬ್ಬಳೇ ಉಳಿದೆ. ಈಗ ನನಗೂ ಏನಾದ್ರು ಮಾಡಬೇಕನ್ನೋ ಆಸೆಯಾಗ್ತಿದೆ. ಅಟ್ ಲೀಸ್ಟ್ ಡಿಗ್ರೀನಾದ್ರೂ ಕಂಪ್ಲೀಟ್ ಮಾಡ್ಕೊಳ್ಳೋಣ ಅಂತ” ಎಂದಳು.            ಆ ದಿನವೆಲ್ಲಾ ಆಕೆಯದ್ದೇ ಗುಂಗು ನನಗೆ. ಆಕೆಯ  ಪಾಸಿಟೀವ್ ನೇಚರ್ ನೋಡಿ ಖುಷಿ. ಆದರೆ ಅಪಾರ ಉತ್ಸುಕಳಾಗಿರುವ ಆಕೆಗೆ, ಹಿಂದೆ ಎಂದೋ ಅರ್ಧಕ್ಕೇ ಕೊನೆಗೊಂಡಿದ್ದ ಪದವಿ ಶಿಕ್ಷಣವನ್ನು ಪೂರ್ಣಗೊಳಿಸುವ ಚಿಗುರಿದ ಕನಸು ಹೆಮ್ಮರವಾಗಲು ಸಾಧ್ಯವಾದರೆ…! ಅದಕ್ಕಾಗಿ ಆಕೆಗೊಂದು ಅವಕಾಶ ಬೇಕಿದೆ.            ನಾಗರತ್ನ ನನ್ನ ಹೈಸ್ಕೂಲಿನ ಸಹಪಾಠಿ. ಉತ್ತಮ ಕ್ರೀಡಾಪಟು. ಓಟದಲ್ಲಂತೂ ಚಿಗರೆಯೇ. ಶಾಲೆಯನ್ನು ಪ್ರತಿನಿಧಿಸಿ ರಾಜ್ಯಮಟ್ಟದವರೆಗೆ ಹೋಗಿದ್ದವಳು..!ಮುಂದೇನಾಯಿತೋ ಗೊತ್ತಿಲ್ಲ. ಆಕೆ ಪಿ ಯು ಸಿ ಗೂ ಸಹ ಕಾಲೇಜಿನ ಮೆಟ್ಟಿಲು ಹತ್ತಲಿಲ್ಲ. ಡಾಕ್ಟರಳಾಗಲು ಆಕೆಗೆ ಬಹಳ ಆಸೆಯಿತ್ತು. ಸಾಧನೆಯ ಮೆಡೆಲುಗಳಿಗೆ ತಲೆಬಾಗಬೇಕಾದವಳು ಅದಾವ ಜವಾಬ್ದಾರಿಯ ನೊಗ ಎಳೆಯಲು ತನ್ನ ಹೆಗಲು ನೀಡಿದಳೋ..  ಮನೆಯ ಬಡತನ, ನೆರವು- ಅರಿವು- ಅವಕಾಶದ ಕೊರತೆಯೋ ತಿಳಿಯದು. ಆ ಚೇತನ ಈಗ ಅಸಮಾಧಾನದ ನಿಟ್ಟುಸಿರಿಡುತ್ತಾ ಅದೆಲ್ಲಿ ಬೇಯುತ್ತಿದೆಯೋ. ಪ್ರತಿಭಾವಂತ ಹುಡುಗಿಯೊಬ್ಬಳು ಅವಕಾಶ ವಂಚಿತಳಾಗಿ ಇತಿಹಾಸ ನಿರ್ಮಿಸುವುದನ್ನು ನಾವು ಕಾಣದಾದೆವು.                  ಸುಗುಣಾಗೆ ಇಬ್ಬರು ಹೆಣ್ಣುಮಕ್ಕಳು. ಸಾಕಷ್ಟು ಸ್ಥಿತಿವಂತರಾಗಿದ್ದ ಆಕೆಯ ಮನೆಯವರಿಗೆ ತಮ್ಮ ವಂಶೋದ್ಧಾರಕ್ಕಾಗಿ ಒಂದು ಗಂಡು ಮಗು ಬೇಕೆಂದು ಮುಂದಿನ ಮೂರು ಗರ್ಭಧಾರಣೆಯಲ್ಲೂ ನಿಷೇಧಿತ ಭ್ರೂಣಲಿಂಗಪತ್ತೆ ಮಾಡಿಸುವ ಮೂಲಕ ಆ ಭ್ರೂಣ ಹೆಣ್ಣೆಂದು ತಿಳಿದುಕೊಂಡು  ಸತತ ಮೂರು ಗರ್ಭಪಾತ ಮಾಡಿಸಿದ್ದರು. ಇದರಲ್ಲಿ ಆಕೆಯ ತಾಯಿ ಮನೆ ಹಾಗೂ ಅತ್ತೆ ಮನೆಯವರ ಪಾಲು ಸಮವಾಗಿತ್ತು. ಮನೆತನದ ಮರ್ಯಾದೆಗಾಗಿ, ಆರ್ಥಿಕ ಸ್ವಾವಲಂಬನೆಯಿಲ್ಲದೆ, ಹೆಚ್ಚಿನ ವಿದ್ಯಾನುಕೂಲವಿಲ್ಲದೆ ಸುಗುಣಾ ನಿರಂತರ ಗರ್ಭಧರಿಸುವಿಕೆ ಹಾಗೂ ಅವೈಜ್ಞಾನಿಕ ಗರ್ಭಾಪಾತಗಳಿಂದಾಗಿ, ತನ್ನ ಎರಡು ಹೆಣ್ಣುಮಕ್ಕಳನ್ನು ಇದೀಗ ಮಲತಾಯಿಯ ವಶಕ್ಕೊಪ್ಪಿಸಿ ತಾನು ಯಮನ ಪಾಲಾದಳು. ಸಹಜವಾಗಿ ಬದುಕುವ ಅವಕಾಶದಿಂದಲೇ ವಂಚಿತಳಾದಳು.     ಇಂತಹ ಹಲವು ವಿಚಾರಗಳನ್ನು ಎಲ್ಲಿಯೋ ನೋಡಿದಾಗ, ಕೇಳಿದಾಗ, ಓದಿದಾಗ ನಮ್ಮಹೃದಯಭಾರವಾಗುವುದು ಸಹಜ. ಮನಸ್ಸು ಸಹಾಯಕ್ಕೆ ತುಡಿಯುವುದೂ ಉಂಟು. ಹಾಗೆಂದ ಮಾತ್ರಕ್ಕೆ ಅವಕಾಶ ವಂಚಿತರಾಗಿರುವ ಎಲ್ಲರಿಗೂ ನಾವೊಬ್ಬರೇ ಅವಕಾಶ ಕಲ್ಪಿಸಿ ಕೊಡಲಾಗದು. ನಿಜ, ಆದರೆ, ಯಾರಿಗೆ ಅವಕಾಶವಾಗುವುದೋ ಅವರು ಇತರರಿಗೆ ಸಹಾಯ ಮಾಡಬಹುದಲ್ಲವೇ? ಯಾರು ತಮಗೆ ಈಗಾಗಲೇ ಸಿಕ್ಕಿರುವ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ಮೇಲೇರಿದ್ದಾರೆಯೋ ಅವರ ಬಗ್ಗೆ ವೃಥಾ ಕರುಬದೇ ಅವರ ಸಾಧನೆಗೆ  ಸಹೃದಯ ಮೆಚ್ಚುಗೆಯನ್ನು ನೀಡಬಹುದಲ್ಲವೇ! ಯಾರು ಇನ್ನೂ ಬದುಕಿನಲ್ಲಿ ಮೇಲೆ ಬರುವ ಪ್ರಯತ್ನದಲ್ಲಿದ್ದಾರೆಯೋ ಅವರಿಗೆ ನಿರ್ವಂಚನೆ ಭರವಸೆಯನ್ನು ತುಂಬಬಹುದಲ್ಲವೇ? ಬನ್ನಿ ಈ ಶುಭಕಾರ್ಯಕ್ಕೆ ಕೈಜೋಡಿಸೋಣ. **************

ಪ್ರಸ್ತುತ Read Post »

ಇತರೆ

ಪ್ರಸ್ತುತ

ಆರೋಗ್ಯ ಸಹಾಯಕರ ಸೇವೆ ಗುರುತಿಸುವ ಕಣ್ಣುಗಳಿಲ್ಲ ಮಲ್ಲಿಕಾರ್ಜುನ ಕಡಕೋಳ ಕೊರೊನಾ ಎಂಬ ಕರಾಳ ನೆರಳಿನಲ್ಲಿ ಯುದ್ಧೋಪಾದಿ ಕೆಲಸ ಮಾಡುತ್ತಿರುವವರು ಆರೋಗ್ಯ ಇಲಾಖೆಯ ವೈದ್ಯರು, ಶುಶ್ರೂಷಕರು, ಆಶಾ ಕಾರ್ಯಕರ್ತೆಯರು. ಇವರನ್ನು ಹೆಲ್ತ್ ವಾರಿಯರ್ಸ್ ಎಂದೇ ಬಣ್ಣಿಸಿ ಎಲ್ಲ ಕಡೆಗೂ ಅವರ ಸೇವಾ ಬಾಹುಳ್ಯ ಕೊಂಡಾಡಿ ಗೌರವಿಸುವುದನ್ನು ನಿತ್ಯವೂ ಕಾಣುತ್ತಿದ್ದೇವೆ. ಇದು ಸಂತಸ ಪಡುವ ವಿಷಯವೇ. ಆದರೆ ಇದೇ ಸಂದರ್ಭದಲ್ಲಿ ಅದೇ ಕೊರೊನಾ ಯುದ್ಧ ಭೂಮಿಯೊಳಗೆ ಅಕ್ಷರಶಃ ರಣರಂಗದ ಯೋಧರಂತೆ ಕೆಲಸ ಮಾಡುತ್ತಿರುವ ಬಹು ದೊಡ್ಡದಾದ ಮತ್ತೊಂದು ಆರೋಗ್ಯ ಸಮುದಾಯವೇ ಇಲ್ಲಿದೆ ಎಂಬುದನ್ನು ನಾವು ಮರೆತಿದ್ದೇವೆ. ನಾವು ಮರೆತ ಆ ಸಮುದಾಯದ ಹೆಸರು ಆರೋಗ್ಯ ಸಹಾಯಕರು. ಪ್ರಸ್ತುತ ಕೊರೊನಾ ಸಮರ ಭೂಮಿಯಲ್ಲಿ ಆರೋಗ್ಯ ಇಲಾಖೆಯ ಹದಿನೈದು ಸಾವಿರ ಮಹಿಳಾ ಮತ್ತು ಆರೇಳು ಸಾವಿರ ಪುರುಷ ಆರೋಗ್ಯ ಸಹಾಯಕರು ಸಂಪೂರ್ಣವಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಜನಾರೋಗ್ಯ ಕಾಪಾಡುವ, ಅದರಲ್ಲೂ ವಿಶೇಷವಾಗಿ ಸಾಂಕ್ರಾಮಿಕ ರೋಗಗಳ ಹುಟ್ಟು, ಬೆಳವಣಿಗೆ, ರೋಗ ಹರಡುವಿಕೆಯ ವಿವಿಧ ಹಂತಗಳ ಕುರಿತಾಗಿ ಮೂರು ವರ್ಷಗಳ ಅವಧಿಯ ನಿಪುಣ ತರಬೇತಿಯನ್ನು ಇವರು ಸರಕಾರದ ತರಬೇತಿ ಕೇಂದ್ರಗಳಲ್ಲಿ ಪಡೆದಿರುತ್ತಾರೆ. ಐದುಸಾವಿರ ಜನಸಂಖ್ಯೆಗೆ ಓರ್ವ ಮಹಿಳಾ, ಓರ್ವ ಪುರುಷ ಆರೋಗ್ಯ ಸಹಾಯಕರನ್ನು ಸರಕಾರ ಜನಾರೋಗ್ಯ ಸೇವಾ ರಕ್ಷಣೆಗೆಂದು ನೇಮಿಸಿರುತ್ತದೆ. ಅದು ಎಂದಿನಂತೆ ಅವರ ದಿನನಿತ್ಯದ ರುಟೀನ್ ಡ್ಯೂಟಿ. ಸಾಂಕ್ರಾಮಿಕ ರೋಗಗಳು ಬಾರದಂತೆ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಂದು ಹಳ್ಳಿಗಳ ಮನೆ ಮನೆ ಭೆಟ್ಟಿಮೂಲಕ ಸೇವೆಮುಟ್ಟಿಸುವಲ್ಲಿ ಇವರು ಕರ್ತವ್ಯನಿರತರಾಗಿರುತ್ತಾರೆ. ಹೀಗಾಗಿ ಸಾಂಕ್ರಾಮಿಕ ರೋಗಗಳ ಪಿಡುಗಿನ ತೀವ್ರತೆ ಬಗ್ಗೆ ಆರೋಗ್ಯ ಸಹಾಯಕರಿಗೆ ಅಗತ್ಯ ಮಾಹಿತಿ, ಜ್ಞಾನ ಇರುವುದು ಸಹಜ. ಈ ಆರೋಗ್ಯ ಸಹಾಯಕರು ಈಗ ಹಳ್ಳಿ, ನಗರ, ಪಟ್ಟಣಗಳೆನ್ನದೇ ತಳಮಟ್ಟದಲ್ಲಿ ಮನೆ, ಮನೆ ಭೆಟ್ಟಿ ಕೊಟ್ಟು ಕೊರೊನಾ ಸಮೀಕ್ಷೆ ಮಾಡುವ ಕಾರ್ಯದಲ್ಲಿ ತೀವ್ರವಾಗಿ ತೊಡಗಿಸಿಕೊಂಡಿದ್ದಾರೆ. ಜೀವದ ಹಂಗು ತೊರೆದು ಹಗಲು ರಾತ್ರಿಗಳನ್ನು ಲೆಕ್ಕಿಸದೇ ನಿಸ್ಪೃಹ ಕೆಲಸವಲ್ಲ ಸೇವೆಯನ್ನೇ ಮಾಡುತ್ತಿದ್ದಾರೆ. ಕೊರೊನಾ ರೋಗದ ತಪಾಸಣೆ, ಕ್ವಾರಂಟೈನ್ ಡ್ಯೂಟಿ, ಹಾಟ್ ಸ್ಪಾಟ್ ಡ್ಯೂಟಿ, ಚೆಕ್ ಪೋಷ್ಟ್, ರಾಷ್ಟ್ರೀಯ ಹೆದ್ದಾರಿ ಡ್ಯೂಟಿ… ಹೀಗೆ ಒಂದಲ್ಲ ಎರಡಲ್ಲ ಹತ್ತು ಹಲವು ರಿಸ್ಕಗಳ ನಡುವೆ ವಯಕ್ತಿಕ ರಕ್ಷಾಕವಚ(ಪಿ.ಪಿ.ಇ. ಕಿಟ್)ಗಳಿಲ್ಲದೇ ಗಲ್ಲಿ, ಮೊಹಲ್ಲಾಗಳೆನ್ನದೇ, ತಮ್ಮ ಕುಟುಂಬಗಳ ಹಿತಾಸಕ್ತಿ ಮರೆತು ಕೊರೊನಾ ನಿರ್ಮೂಲನಾ ಸೈನಿಕರಂತೆ ಕೆಲಸ ಮಾಡುತ್ತಿದ್ದಾರೆ. ಎಷ್ಟೋ ಮಂದಿ ಕರ್ತವ್ಯನಿರತ ಆರೋಗ್ಯ ಸಹಾಯಕರು ಸಾರ್ವಜನಿಕರ, ಪೋಲೀಸರ ಲಾಠಿ ಏಟುಗಳಿಗೆ ತಮ್ಮ ಕೈ ಕಾಲುಗಳನ್ನು ಬಲಿ ಕೊಟ್ಟಿದ್ದಾರೆ. ಉದಾ: ಬೆಳಗಾವಿ ಮತ್ತು ಕಲಬುರ್ಗಿ ಜಿಲ್ಲೆಯ ಸೇಡಂ, ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಘಟನೆಗಳು. ಇದು ಆರೋಗ್ಯ ಸಹಾಯಕರ ಪಾಲಿನ ವರ್ತಮಾನದ ಕೊರೊನಾ ಯುದ್ಧ ಮಾತ್ರವಲ್ಲ. ಶತಮಾನದಷ್ಟು ಹಳತಾದ ಸಾಮಾಜಿಕ ಪಿಡುಗುಗಳಾಗಿಯೂ ಮನುಷ್ಯ ಕುಲವನ್ನು ಕಾಡಿದ, ಮನುಷ್ಯರ ಅಂಗವಿಕಲತೆಗೆ ಕಾರಣವಾಗುತ್ತಿದ್ದ ಸಿಡುಬು, ಕುಷ್ಠ, ನಾರುಹುಣ್ಣು, ಪೋಲಿಯೊ ಹೀಗೆ ಹತ್ತಾರು ಭಯಾನಕ ಮತ್ತು ಸಾಮಾಜಿಕವಾಗಿ ಕಳಂಕ ಭಾವಗಳ ಮೊತ್ತವೇ ಆಗಿದ್ದ ಅನೇಕ ಸಾಂಕ್ರಾಮಿಕ ರೋಗಗಳ ನಿರ್ಮೂಲನೆಯಲ್ಲಿ ಆರೋಗ್ಯ ಸಹಾಯಕರ ಪಾತ್ರ ಅಕ್ಷರಶಃ ಪ್ರಾತಃಸ್ಮರಣೀಯ. ಹೀಗೆ ನೂರೈವತ್ತಕ್ಕೂ ಹೆಚ್ಚು ವರ್ಷಗಳಿಂದ ಜನಾರೋಗ್ಯ ರಕ್ಷಣಾ ಕಾರ್ಯದಲ್ಲಿ ತಮ್ಮ ಆರೋಗ್ಯದ ಕಡೆಗೂ ಹೆಚ್ಚು ನಿಗಾವಹಿಸದೇ ಆರೋಗ್ಯ ಸಹಾಯಕರು ನಿರಂತರವಾಗಿ ವೈರಸ್, ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಿದ ಇತಿಹಾಸವಿದೆ. ಅದೇರೀತಿ ಇವತ್ತು ಸೈನಿಕರೋಪಾದಿಯಲ್ಲಿ ಕೊವಿಡ್-19 ರ ವಿರುದ್ಧ ಹೋರಾಡುತ್ತಿದ್ದಾರೆ. ಈ ಆರೋಗ್ಯ ಸಹಾಯಕ ಸೇನಾನಿಗಳು ಯಾವೊಂದು ಪ್ರಶಸ್ತಿ, ಸನ್ಮಾನ, ಶ್ಲಾಘನೆಗಳ ನಿರೀಕ್ಷೆಗಳಿಲ್ಲದೇ ಇಲಾಖೆಯ ಹುಟ್ಟಿನಿಂದಲೂ ತಮ್ಮ ಸೇವಾ ಅಸ್ಮಿತೆಯನ್ನು ಕಾಪಿಟ್ಟುಕೊಂಡಿದ್ದಾರೆ. ಇಂಥವರ ಕುರಿತು ಹೊಗಳಿಕೆ, ಗೌರವ, ಸನ್ಮಾನಗಳು ಒತ್ತಟ್ಟಿಗಿರಲಿ. ಮಾಧ್ಯಮಗಳಿಂದಾಗಲಿ, ಮಂತ್ರಿಗಳಿಂದಾಗಲಿ ಸಣ್ಣದೊಂದು ಶಹಬ್ಬಾಶ್ ಎನ್ನುವ ಸ್ಪೂರ್ತಿ, ಪ್ರೋತ್ಸಾಹದಾಯಕ ಮಾತುಗಳು ಕೇಳಿ ಬರುತ್ತಿಲ್ಲ. ಆರೋಗ್ಯ ಸಹಾಯಕರ ಸಮರೋಪಾದಿ ಸೇವಾ ಕೈಂಕರ್ಯ ಗುರುತಿಸುವ ಕಣ್ಣುಗಳೇ ಮಾಯವಾದವೇ? ಆರೋಗ್ಯ ಇಲಾಖೆ ಎಂದೊಡನೆ ಮಂತ್ರಿಗಳಿಗೆ ಮತ್ತು ಮಾಧ್ಯಮಗಳಿಗೆ ಥಟ್ಟಂತ್ ಕಾಣಿಸೋದು ಡಾಕ್ಟರ್ಸ್ ಮತ್ತು ನರ್ಸಸ್ ಹೆಚ್ಚೆಂದರೆ ಕಂಪೌಂಡರ್ಸ್. ಈ ಕಾಣುವಿಕೆ ನಾಲ್ಕು ಗೋಡೆಗಳ ನಡುವಿನ ಆಸ್ಪತ್ರೆಯ ಜಗತ್ತು. ಗುಡ್ಡಗಾಡು, ಹಳ್ಳಿ, ಮೊಹಲ್ಲಾ, ನಗರ, ಪಟ್ಟಣಗಳಲ್ಲಿ ಎಲ್ಲೆಲ್ಲಿ ಮನುಷ್ಯರು ವಾಸವಾಗಿರುವರೋ ಅಲ್ಲೆಲ್ಲ ಆರೋಗ್ಯ ಸಹಾಯಕರ ಸೇವಾ ಕೈಂಕರ್ಯ ನಾಡಿನ ಸಮಸ್ತ ಸಮುದಾಯಕ್ಕೆ ಸಲ್ಲುತ್ತಲಿದೆ. ಆದರೆ ಇತ್ತೀಚಿನ ದಿನಮಾನಗಳಲ್ಲಿ (೨೦೦೫ ರಿಂದ) ಹೊರಗುತ್ತಿಗೆಯಾಗಿ ನೇಮಕಗೊಂಡಿರುವ ಆಶಾ ಕಾರ್ಯಕರ್ತೆಯರು ಮಾತ್ರ ಸಮುದಾಯದ ನಿಕಟ ಸಂಪರ್ಕದ ಫ್ರಂಟ್‌ಲೈನ್ ಸೇನಾನಿಗಳು ಎಂಬಂತೆ ಮಾಧ್ಯಮಗಳಲ್ಲಿ, ಪ್ರಭುತ್ವದ ಕಣ್ಣುಗಳಲ್ಲಿ ಬಿಂಬಿತವಾಗಿ ಆರೋಗ್ಯ ಸಹಾಯಕರ ಚರಿತ್ರಾರ್ಹ ಸೇವಾ ಕೈಂಕರ್ಯವು ನೇಪಥ್ಯಕ್ಕೆ ಸರಿದಿರಬಹುದು.? ಕಾರಣ ಏನೇ ಇರಲಿ ಆರೋಗ್ಯ ಸಹಾಯಕರು ಸಲ್ಲಿಸುತ್ತಿರುವ ಗುಣಮಟ್ಟದ ಸೇವೆಗಳನ್ನು ಮಾಧ್ಯಮಗಳು, ಮಂತ್ರಿ ಮಹೋದಯರು ಗುರುತಿಸದಿದ್ದರೆ ಹೇಗೆ? ಆರೋಗ್ಯ ಇಲಾಖೆಯ ಬಹುದೊಡ್ಡ ಸೇವಾವಲಯ ಕುರಿತು ಯಾಕೆ ಮೀನಾ ಮೇಷ…? ಇದೇ ಕಾಲಘಟ್ಟದಲ್ಲಿ ಆರೋಗ್ಯ ಮಂತ್ರಿಗಳು ಶುಶ್ರೂಷಕರ ಸೇವೆಮೆಚ್ಚಿ ಭಕ್ಷೀಸೆಂಬಂತೆ “ಶುಶ್ರೂಷಾಧಿಕಾರಿ” ಎಂದು ಅವರ ಪದನಾಮ ಬದಲಾವಣೆ ಮಾಡುವ ಬೇಡಿಕೆ ಕುರಿತು ಸುದ್ದಿ ಕೇಳಿಬಂದ ಮರುದಿನವೇ ಶುಶ್ರೂಷಾ ದಿನಾಚರಣೆಯಂದು ಸರ್ಕಾರ “ಶುಶ್ರೂಷಾಧಿಕಾರಿ” ಎಂದು ಪದನಾಮ ಬದಲಾಯಿಸಿ ಆದೇಶ ಹೊರಡಿಸಿದೆ. ಆದರೆ ಕಳೆದೊಂದು ವರ್ಷದಿಂದ ” ಸಮುದಾಯ ಆರೋಗ್ಯಾಧಿಕಾರಿ ” ಎಂದು ತಮ್ಮ ಪದನಾಮ ಬದಲಾವಣೆ ಮಾಡುವ ಕುರಿತು ಆರೋಗ್ಯ ಸಹಾಯಕರು ಬೇಡಿಕೆ ಸಲ್ಲಿಸಿದ್ದರೂ ಆರೋಗ್ಯ ಮಂತ್ರಿಗಳು ಇದುವರೆಗೆ ಯಾವುದೇ ಪ್ರತಿಕ್ರಿಯೆ ತೋರಿಲ್ಲ. ಹೀಗಾಗಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿರುವ ಆರೋಗ್ಯ ಸಹಾಯಕರಿಗೆ ತಾವು ಸಲ್ಲಿಸುತ್ತಿರುವ ಸೇವೆಗಳ ಕುರಿತಾಗಲಿ ಅವರ ಅಸ್ತಿತ್ವ ಕುರಿತಾಗಲಿ ಪ್ರಭುತ್ವಕ್ಕೆ ಯಾಕಿಂಥ ಉದಾಸೀನ ಎಂಬುದು ಅನಾರೋಗ್ಯದ ಪ್ರಶ್ನೆಯಾಗಿ ಕಾಡತೊಡಗಿದೆ. **********

ಪ್ರಸ್ತುತ Read Post »

ಇತರೆ

ಲಹರಿ

ಅಮ್ಮ,ನಾವೂ ನಾಯಿ ಸಾಕೋಣ ಶೀಲಾ ಭಂಡಾರ್ಕರ್ ನಿನ್ನೆ ರಾತ್ರಿಯಿಂದಲೂ ನಮ್ಮ ಮನೆಯಲ್ಲಿ ಏನೋ ಗುಸುಗುಸು ಪಿಸುಪಿಸು ಕೇಳಿಸುತ್ತಿದೆ. ಇಡೀ ದಿನ ಬಿಡುವಿಲ್ಲದೇ ಮನೆಯ ಸ್ವಚ್ಛತೆಯಲ್ಲಿ ತೊಡಗಿದ್ದುದರಿಂದ ಅದರೆಡೆಗೆ ಅಷ್ಟಾಗಿ ಗಮನ ಕೊಡುವ ‌ಮನಸ್ಸಾಗಲಿಲ್ಲ ನನಗೆ. ಇವತ್ತು ಬೆಳಗಿನಿಂದಲೂ ಅತ್ಯಂತ ಶಾಂತ ವಾತಾವರಣ. ಯಾವುದೇ ಏರು ಧ್ವನಿಯ ಮಾತಿಲ್ಲ, ಜಗಳ ಕದನಗಳಿಲ್ಲ. ಕಿರುಚಾಟಗಳಿಲ್ಲ. ಮದ್ಯಾಹ್ನದವರೆಗೆ ಆರಾಮೋ ಆರಾಮ್. ಮದ್ಯಾಹ್ನ ಊಟದ ಸಮಯದಲ್ಲೂ ಒಬ್ಬರಿಗೊಬ್ಬರು ಸಹಕರಿಸಿಕೊಂಡು, ತಟ್ಟೆ, ನೀರು ಇಡುವುದರಿಂದ ಹಿಡಿದು ಮಾಡಿದ ಅಡುಗೆಯನ್ನು ಒಂದೊಂದಾಗಿ ಬಡಿಸುವಾಗಲೂ ಅದೇನು ಶಿಸ್ತು, ಅದೆಷ್ಟು ಸಂಯಮ. ತಟ್ಟೆಯಲ್ಲಿ ಬಡಿಸಿದ ಕೂಡಲೇ ಹುಡುಗಿಯರಿಬ್ಬರೂ ನಾವು ಬಾಲ್ಕನಿಗೆ ಹೋಗ್ತೇವೆ ಅಮ್ಮಾ ನೀನೂ ಅಲ್ಲಿಗೇ ಬಾ. ಅದೆಲ್ಲಿಂದ ಇಷ್ಟು ಪ್ರೀತಿ ಸುರೀತಿದೆ!? ಮೇಲೆ ಕೆಳಗೆ ನೋಡಿದೆ. ನಾನಿಷ್ಟು ಹೊತ್ತು ಹೇಳುತ್ತಾ ಇದ್ದ ಗುಸುಗುಸು, ಪಿಸುಪಿಸು, ಜಗಳ ಕದನ, ಶಾಂತಿ ಸಂಯಮ ಎಲ್ಲಾ ನಮ್ಮ ಮನೆಯ ಎರಡು ಹುಡುಗಿಯರ ಬಗ್ಗೆ. ದಿನ ಬೆಳಗಾದಲ್ಲಿಂದ ರಾತ್ರಿ ಮಲಗುವವರೆಗೆ ಒಂದಲ್ಲ ಒಂದು ಕಾರಣಕ್ಕೆ, ಒಂದಲ್ಲ ಒಂದು ಸಮಯದಲ್ಲಿ ಅರಚುವಿಕೆ, ಕಿರುಚುವಿಕೆ ಮತ್ತೆ ಸ್ವಲ್ಪ ಹೊತ್ತಿನಲ್ಲೇ ಅವರಿಬ್ಬರೂ ಜೊತೆಯಲ್ಲೇ ಕೂತು ಯಾವುದಾದರೂ ಸಿನೆಮಾ ನೋಡುತ್ತಾ ಜೋರಾಗಿ ಅಥವಾ ಕಿಲಕಿಲನೆ ನಗುತ್ತಾ ಇರುವುದು ನಮ್ಮ ಮನೆಯ ದಿನಚರಿ . ನಾನೂ ನನ್ನ ಊಟದ ತಟ್ಟೆಯೊಂದಿಗೆ ಬಾಲ್ಕನಿಗೆ ಬಂದೆ. ಮತ್ತದೇ ಗುಸುಗುಸು. ಗಮನಿಸದ ಹಾಗೆ ನಾನು ನನ್ನ ಪಾಡಿಗೆ ಊಟ ಮಾಡಲು ತೊಡಗಿದೆ. ಅಮ್ಮಾ.. ಏನೋ ಕೇಳಬೇಕಿತ್ತು. ಏನು? ಅಂದೆ. ನಾವು ಇಷ್ಟರವರೆಗೆ ಏನಾದರೂ ನಮಗೆ ಇಂಥದ್ದು ಬೇಕು ಎಂದು ಕೇಳಿದ್ದೇವಾ? ಇನ್ಯಾರು ಕೇಳಿದ್ದು ನಿಮ್ಮ ಪರವಾಗಿ, ಪಕ್ಕದ ಮನೆಯವರಾ!? ಅಲ್ಲಮ್ಮಾ.. ಬೇಕೇಬೇಕು ಅಂತ ಯಾವತ್ತಾದರೂ ಹಠ ಮಾಡಿದಿವಾ? ಇವತ್ತು ಹಠ ಮಾಡುವ ಯೋಚನೆಯಾ? ಕೇಳಿದೆ. ಹಾಗಂತ ಅಲ್ಲ. ಆದರೆ ಒಂದು ಆಸೆ. ನಿನಗೆ ಏನೂ ತೊಂದರೆ ಕೊಡಲ್ಲ. ನಾವೇ ಕೆಲಸ ಎಲ್ಲಾ ಮಾಡುತ್ತೇವೆ. ಏನು ವಿಷಯ? ವಿಷಯ ಏನು? ಅಂದೆ. ನೀನು ಹೇಳು ಅಂತ ಒಬ್ಬಳು ಇನ್ನೊಬ್ಬಳಿಗೆ. ದೊಡ್ಡವಳು ಅತ್ಯಂತ ಹಸನ್ಮುಖಿಯಾಗಿ ಕೂತಿದ್ದಳು. ಚಿಕ್ಕವಳು ಬಲು ಉತ್ಸಾಹದಿಂದ, ನಾನೇ ಹೇಳ್ತೇನೆ. ಎಂದು ಭಾಷಣ ಶುರು ಮಾಡುವ ಹಾಗೆ ನೆಟ್ಟಗೆ ಕೂತಳು. ನೀನು ಚಿಕ್ಕವಳಿದ್ದಾಗ ನಿಮ್ಮನೆಯಲ್ಲಿ ಒಂದು ಬೆಕ್ಕು ಇತ್ತು ಅಂತ ಹೇಳಿದ್ದೆ ಅಲ್ವಾ? ಅದರ ಹೆಸರು ಮೀನಾಕ್ಷಿ ಅಂತ ಇತ್ತು ಅಂತ ಕೂಡ.. ಅನ್ನುವುದರೊಳಗೆ, ನಾನು ಕೇಳಿದೆ, ಈಗ ಏನು ಬೆಕ್ಕು ತರ್ತೀರಾ? ಅಲ್ಲ. ನಾಯಿ. ಎಲಾ!! ಮತ್ತೆ ನಮ್ಮ ಮನೆಯ ಮೀನಾಕ್ಷಿ ವಿಷಯ ಯಾಕೆ ಬಂತು? ನಿಂಗೂ ಪ್ರಾಣಿಗಳನ್ನು ಸಾಕಿ ಗೊತ್ತಲ್ವಾ? ಮರೆತಿದ್ರೆ ಅಂತ ನೆನಪಿಸಿದ್ದು. ಅಂದಳು. ನಾಯಿ ಸಾಕಿದ್ರೆ ಎಷ್ಟು ಕೆಲಸ ಇದೆ ಗೊತ್ತಾ? ಅಂದೆ. ನಾವೇ ಮಾಡ್ತಿವಿ, ನಾವೇ ಮಾಡ್ತೀವಿ. ನಾನು ದಿನಾ ವಾಕಿಂಗ್ ಕರಕೊಂಡು ಹೋಗ್ತಿನಿ ಅಂದಳು ಚಿಕ್ಕವಳು. ಇಷ್ಟು ಹೊತ್ತೂ ಮಾತಾಡಿದ್ದೆಲ್ಲಾ ಚಿಕ್ಕವಳೆ. ನನ್ನ ಫ್ರೆಂಡ್ ಸಿಂಚನಾ ಹತ್ರನೂ ನಾಯಿ ಇದೆ. ಅವಳೇ ವಾಕ್ ಕರಕೊಂಡು ಹೋಗ್ತಾಳೆ. ನಾನೂ ಅವಳ ಜತೆ ಹೋಗ್ತೀನಿ. ನಾವಿಬ್ರೂ ಪಾಠದ ಬಗ್ಗೆ ಚರ್ಚೆ ಮಾಡಬಹುದು. ಯಾಕಂದ್ರೆ ಅವಳೂ ಕಾಮರ್ಸ್. ನಿಂಗೆ ಖುಷಿ ಆಗ್ತದೆ ಅಲ್ವಾ! ಮತ್ತೆ ನನಗೂ ವ್ಯಾಯಾಮ ಆಗುತ್ತೆ. ಬಡಬಡ ಹೇಳಿ ನಿಲ್ಲಿಸಿದಳು. ನೋಡಮ್ಮ, ಎಷ್ಟೆಲ್ಲಾ ಒಳ್ಳೆಯದಾಗುತ್ತೆ ಅದರಿಂದ. ದೊಡ್ಡವಳು ಬಾಯಿ ಬಿಟ್ಟಳು. ಮತ್ತೆ.. ಚಿಕ್ಕವಳದು ಶುರುವಾಯಿತು. ಅದರ ಎಲ್ಲಾ ಕೆಲಸ ನಾವೇ ಮಾಡ್ತೇವೆ. ಒಂದು ಎರಡು ಎಲ್ಲಾ ನಾವೇ ಕ್ಲೀನ್ ಮಾಡ್ತೇವೆ. ಹೋ… ನಾನು ಸ್ವಲ್ಪ ಎತ್ತರದ ದನಿಯಲ್ಲಿ , ಹೌದೌದು ಮಾಡೋ ಸಣ್ಣ ಪುಟ್ಟ ಕೆಲಸಕ್ಕೂ ದಿನಾ ಹೇಳಬೇಕು ನಿಮಗೆ. ಇನ್ನು ಇದೂ ನನ್ನ ತಲೆಗೆ ಬರುತ್ತೆ. ಚಿಕ್ಕವಳಿಗೆ ವಾಷಿಂಗ್ ಮೆಷಿನ್ ಗೆ ಬಟ್ಟೆ ಹಾಕೋ ಕೆಲಸ. ಹೇಗೆ ಹಾಕೋದು ಅಂತ ಹೇಳಿ ಕೊಡ್ತೀನಿ ಬಾ ಅಂತ ಕರೆದಾಗ ಕಿವಿಯೊಳಗೆ ವಯರ್ ಸಿಗಿಸಿಕೊಂಡು ಬಂದು ನಿಂತಳು. ಅದೆಷ್ಟು ಕೇಳಿಸಿತೋ ಅವಳಿಗೇ ಗೊತ್ತು. ವಯರ್ ಕಿತ್ತು ಎಳೆದೆ, ನೀನು ಹೇಳು. ನಂಗೆ ಕೇಳಿಸುತ್ತೆ ಅಂತ ಮತ್ತೆ ಸಿಕ್ಕಿಸಿಕೊಂಡು ಅದರ ಜೊತೆಗೆ ಹಾಡುತ್ತಾ ನಿಂತಳು. ಗೊತ್ತಾಯ್ತಾ? ಅಂತ ಸನ್ನೆ ಮಾಡಿದ್ರೆ. ಗೊತ್ತಾಯ್ತೂ ಅಂತ ಕಿರುಚಿದಳು. ಯಾಕಂದ್ರೆ ಜೋರಾಗಿ ಹಾಡು ಹಾಕಿದ್ದಳಲ್ಲ ಕಿವಿಯೊಳಗೆ. ಸರಿಯಾದ ಸಮಯಕ್ಕೆ ವಾಷಿಂಗ್ ಕೆಲಸ ಆಗ್ತಾ ಇದೆ. ಖುಷಿಯಾಯ್ತು. ಆದರೆ.. ಬಟ್ಟೆ ಏನೋ ಒಂಥರಾ ವಾಸನೆ. ಘಮ್ ಅನ್ನುತಿಲ್ಲ. ಅವಳನ್ನು ಕರೆದು ಕೇಳಿದೆ. ಕಂಫರ್ಟ್ ಹಾಕ್ತಿದ್ದಿಯಲ್ವಾ? ಇಲ್ಲ.. ಅದೆಲ್ಲಾ ಹಾಕಬೇಕಾ? ಕೇಳ್ತಾಳೆ. ಅಯ್ಯೋ ಸೋಪಿನ ಪುಡಿ ಜೊತೆ ಕಂಫರ್ಟ್ ಕೂಡ ಹಾಕಬೇಕು ಅಂದಿಲ್ವಾ ಅಂದೆ. ಆಟೋಮೆಟಿಕ್ ಅಲ್ವಾ ಅದೆಲ್ಲಾ ನಾವು ಹಾಕ್ಕೋಬೇಕಾ? ಬರೀ ಸ್ವಿಚ್ ಮಾತ್ರ ನಾವು ಹಾಕೋದಲ್ವಾ? ಮತ್ತೆಲ್ಲಾ ಅದೇ ಮಾಡ್ಕೊಳ್ಳುತ್ತೆ ಅಂತ ತಾನೇ ಆಟೋಮೆಟಿಕ್ ಅಂದ್ರೆ. ತಲೆ ಚಚ್ಚಿಕೊಂಡೆ. ಇಂಥವಳು ನಾಯಿ ತಂದ್ರೆ ಒಂದು ಎರಡು ಮೂರು ಎಲ್ಲಾ ಕೆಲಸನೂ ತಾನು ಮಾಡುತ್ತಾಳಂತೆ. ಸ್ವಲ್ಪ ವ್ಯಂಗ್ಯವಾಗಿ ನೆನಪಿಸಿದೆ. ಆಗ ಗೊತ್ತಿರಲಿಲ್ಲ. ಈಗ ಸರಿ ಮಾಡ್ತಿದಿನಿ ಅಲ್ವಾ? ಅದೆಲ್ಲಾ ಕೆಲಸ ಮಾಡಿದ್ರೆ ನಾಳೆ ನಾವು ದೊಡ್ಡವರಾಗಿ ಮದುವೆ ಆಗಿ ಮಕ್ಕಳಾದಾಗ, ಮಕ್ಕಳ ಕೆಲಸ ಮಾಡಲು ಸುಲಭ ಆಗುತ್ತೆ. ಆಗ ಕಷ್ಟ ಅನಿಸಲ್ಲ. ಅಲ್ವಾ ಅಂತ ದೊಡ್ಡವಳನ್ನು ನೋಡಿದಳು. ಅವಳು ಹಲ್ಲು ಕಚ್ಚಿ ಹಿಡಿದು, ನಿಂಗೆ ಎಷ್ಟು ಮಾತಾಡಕ್ಕೆ ಹೇಳಿದ್ನೋ ಅಷ್ಟೇ ಮಾತಾಡು. ಜಾಸ್ತಿ ಬೇಡ. ಅಂದಳು. ಚಿಕ್ಕವಳು ತಲೆ ತಗ್ಗಿಸಿ ಊಟ ಮಾಡಲು ತೊಡಗಿದಳು. ದುಡ್ಡು ಎಷ್ಟು ಬೇಕು ಅದಕ್ಕೆ? ಆಮೇಲೆ ಖರ್ಚು ಎಷ್ಟಿದೆ ಗೊತ್ತಾ ಅದರದ್ದು? ಅಂದೆ. ಚಿಕ್ಕವಳು ಏನಂತಾಳೆ ಗೊತ್ತಾ.. ನಾನು ಸೈನ್ಸ್ ತಗೊಂಡಿದ್ರೆ ಟ್ಯೂಷನ್, ಪೆಟ್ರೋಲ್ ಅಂತ ಎಷ್ಟೊಂದು ದುಡ್ಡು ಖರ್ಚಾಗ್ತಿರಲಿಲ್ವಾ? ಅದು ಉಳಿದಿಲ್ವಾ? ಹಾಗಾದ್ರೆ ನಾಯಿ ತರೊ ಯೋಚನೆ ನೀನು ಕಾಮರ್ಸ್ ತಗೊಳ್ತಿನಿ ಅನ್ನುವಾಗಲೇ ಇತ್ತಾ? ಕೇಳಿದೆ. ಇಲ್ಲಾ ನಿನ್ನೆ ಶುರುವಾಯ್ತು. ತುಂಬಾ ಆಸೆ ಮಾಡುತ್ತಮ್ಮ ಅದು. ನಿಂಗೂ, ಅಪ್ಪನಿಗೂ ಎಷ್ಟು ಖುಷಿಯಾಗುತ್ತೆ ಗೊತ್ತಾ ಆಮೇಲೆ. ದೊಡ್ಡವಳು ಕೂಡಲೇ ಕಣ್ಣು ಇಷ್ಟು ದೊಡ್ಡದು ಮಾಡಿ, ಅವಳನ್ನು ಕಣ್ಣಲ್ಲೇ ಕಿರುಚಿ ಗದರಿಸಿದಳು. ಆಮೇಲೆ ಮೆಲ್ಲ ಅತ್ಯಂತ ಮೃದುವಾಗಿ ತಂಗಿಗೆ, “ನೀನಿನ್ನು ಹೋಗು. ಇಷ್ಟೇ ಇದ್ದಿದ್ದು ನಿಂಗೆ ಮಾತಾಡ್ಲಿಕ್ಕೆ.” ಅವಳು ಎದ್ದು ಹೋಗುವಾಗ ತಿರುಗಿ ನೋಡಿ. ಹೆಂಗೆ? ನಾನಲ್ವಾ ಒಪ್ಪಿಸಿದ್ದು. ಅಂದಳು. ಯೇಯ್ ಬಾ.. ಇಲ್ಲಿ. ನಾನು ಯಾವಾಗ ಒಪ್ಪಿದೆ? ನಾನಿನ್ನೂ ಯೋಚನೆನೂ ಮಾಡಿಲ್ಲ ಅಂದೆ. ಒಪ್ಪಿಲ್ವಾ? ಛೆ! ಇಷ್ಟು ಹೊತ್ತು ಎಷ್ಟು ಕಷ್ಟ ಪಟ್ಟು ಏನೇನೋ ಹೇಳಿದೆ. ಒಪ್ಪಲ್ವಾ!?? ಅಂದಳು. ಕಣ್ಣಲ್ಲಿ ನೀರು ತುಂಬಿ ತುಳುಕುತ್ತಿದೆ. ದೊಡ್ಡವಳನ್ನು ನೋಡಿದರೆ ಅವಳೂ ಅತ್ಯಂತ ದೀನಳಾಗಿ ನೋಡುತಿದ್ದಾಳೆ. ಪಾಪ ಅನಿಸಿತು. ಆಯ್ತು ಅಂದಿದಿನಿ. ಹೊಸದರಲ್ಲಿ ಅಗಸ ಗೋಣಿ ಒಗೆದಂತೆ, ಆಮೇಲೆ ನನ್ನ ತಲೆಗೆ ಕಟ್ಟುತ್ತಾರೆ. ನನ್ನ ಪರವಾಗಿ ಸಾಕ್ಷಿಗೆ ಬೇಕಾಗಬಹುದು ಅಂತ ನಿಮಗೆ ತಿಳಿಸಿದೆ. ನೋಡೋಣ ಯಾರೆಲ್ಲಾ ಬರ್ತೀರಿ ಅಂತ. **********************************

ಲಹರಿ Read Post »

ಇತರೆ

ನೆನಪುಗಳು

ಹಲಸಿನ ಹಪ್ಪಳ ಸಂಧ್ಯಾಶೆಣೈ ಇವತ್ತು ನಮ್ಮ ಕೆಳಗಿನ ಮನೆಯವರು ಒಂದು ಸಣ್ಣ ತುಂಡು ಹಲಸಿನ ಗುಜ್ಜೆ ಕೊಟ್ಟಿದ್ದರು ..ಅದನ್ನು ಅಕ್ಕಿಯ ಆಳಾವಣದಲ್ಲಿ ಹಾಕಿ ಫ್ರೈ ಮಾಡಿದೆ ..ಆಗ ನನಗೆ ಸೋಮೇಶ್ವರದ ದಿನಗಳು ನೆನಪಾದವು.. ಹೀಗೆ ಬೇಸಿಗೆ ದಿನಗಳಲ್ಲಿ ಮನೆಗೆ ಆಗಾಗ ಹಲಸಿನ ಕಾಯಿ ಬರುತ್ತಿತ್ತು..ಉಪಿಗೆ ಸೋಳೆ ಹಾಕಲು.. ಹಪ್ಪಳ ಮಾಡಲು ಎಂದು.. ಆಗೆಲ್ಲ ಅಮ್ಮ ಹಲಸಿನ ಕಾಯಿಯ ವೈವಿಧ್ಯಮಯ ಪಲ್ಯಗಳನ್ನು ಮಾಡುತ್ತಿದ್ದರು.. ಸೋಳೆ ಹಾಕಲು ತಂದ ಹಲಸಿನ ಕಾಯಿಯ ಉಪಕ್ಕರಿ .ಅದರ ಒಟ್ಟಿಗೆ ಸೌತೆ ಕಾಯಿ ಹಾಕಿ ಮಾಡಿದ ಗುಜ್ಜ.. ಹಲಸಿನ ಕಾಯಿ ಮತ್ತೆ ಧಾನ್ಯ ಹಾಕಿ ಕೊದ್ದೆಲು.. ಎಳೇಕಡಗಿ ಸಣ್ಣ ಸಣ್ಣ ಬೀಜ ಆಗುತ್ತಾ ಇರುವಂತಹ ಹಲಸಿನ ಕಾಯಿಯಿಂದ ಪೋಡಿ.. ಒಂದೇ ಎರಡೇ .. ಹಣ್ಣು ಸಿಕ್ಕಿದರೆ ದೋಸೆ ..ಇಡ್ಲಿ.. ಪಾತ್ತೋಳಿ. ಪಾಯಸ.. ಮೂಳಿಕ ಎಂದು ಎಷ್ಟೆಲ್ಲ ಬಗೆ ಮಾಡುತ್ತಿದ್ದರು.. ಈಗ ನೋಡಿದ್ರೆ ಅನ್ನಿಸ್ತಾ ಇದೆ ಪಾಪ! ನಮ್ಮ ಬಾಯಿ ರುಚಿಗಾಗಿ ಎಷ್ಟೆಲ್ಲ ಕಷ್ಟಕರ ಕೆಲಸವನ್ನು ಮಾಡುತ್ತಿದ್ದರು ..ನಾವಂತೂ ಬಕಾಸುರರು ಏನು ಮಾಡಿಟ್ಟರು ಸ್ವಾಹ ಎನ್ನುತ್ತಿದ್ದೆವು. ನಾವು ಬೆಳಿಗ್ಗೆ ಎದ್ದು ಬರುವಾಗಲೇ ಅಜ್ಜಿ ಹಲಸಿನ ಹಣ್ಣನ್ನು ಕೊಯ್ದು ಗೋಣಿಯ ಮೇಲೆ ಶೇಡು ಶೇಡು ಮಾಡಿ ಇಟ್ಟಿರುತ್ತಿದ್ದರು .ನಾವು ಎದ್ದವರೇ ಬೇಕಾದಷ್ಟು ತಿಂದು ಸ್ವಲ್ಪ ಹಣ್ಣನ್ನು ಬಿಡಿಸಿ ಸೊಳೆ ಬೇರೆ ಬೀಜ ಬೇರೆ ಮಾಡಿ ಬಿಡುತ್ತಿದ್ದೆವು . ಅಮ್ಮ ಹೇಳುತ್ತಿದ್ದರು ಹಸಿದ ಹಲಸು ಉ೦ಡ ಮಾವು ಎಂದು.. ಅಂದ್ರೆ ಹಸಿದಿರುವಾಗ ಹಲಸಿನ ಹಣ್ಣು ತಿನ್ನಬೇಕು ಊಟ ಆದ ಮೇಲೆ ಮಾವಿನ ಹಣ್ಣು ತಿನ್ನಬೇಕು ಎಂದು. ಇಷ್ಟು ಮಾತ್ರವೇ ಆ ದಿನಗಳಲ್ಲಿ ನಮ್ಮ ಬೇಸಿಗೆ ರಜೆಯಲ್ಲಿ ಹಲಸಿನ ಹಪ್ಪಳದ ಫ್ಯಾಕ್ಟರಿಯೇ ನಮ್ಮಲ್ಲಿ ನಡೆಯುತ್ತಿತ್ತು. ರಾತ್ರಿ ದೊಡ್ಡ ದೊಡ್ಡ ಹಲಸಿನ ಕಾಯಿಗಳನ್ನು ಕರ್ಕು ಎಂಬ ಹೆಸರಿನ ಹೆಂಗಸು ತಲೆಯ ಮೇಲೆ ಹೊತ್ತು ತಂದು ನಮ್ಮ ಮನೆಯಲ್ಲಿ ಹಾಕಿ ಅದನ್ನು ಕೊಡಲಿಯಿಂದ ನಾಲ್ಕು ನಾಲ್ಕು ಭಾಗ ಮಾಡಿ ಹಾಕಿ ಹೋಗುತ್ತಿದ್ದಳು.. ಈಗ ಎಣಿಸಿದರೆ ಅವಳ ಆ ಶಕ್ತಿ ವಿಸ್ಮಯಕಾರಿ ಅನ್ನಿಸುತ್ತಾ ಇದೆ. ಒಂದಲ್ಲ ಎರಡಲ್ಲ ಕೆಲವೊಮ್ಮೆ ಮೂರು ನಾಲ್ಕು ಹಲಸಿನ ಕಾಯಿಯನ್ನು ತಲೆಯ ಮೇಲೆ ಹೊತ್ತುಕೊಂಡು ಎರಡು ಮೂರು ಮೈಲು ನಡೆದುಕೊಂಡು ಬರುತ್ತಿದ್ದಳು.. ಪಾಪ ಅದನ್ನು ನಮ್ಮಲ್ಲಿ ಹಾಕಿ ಒಡೆದು ಕೊಟ್ಟು ಅಮ್ಮ ಕೊಟ್ಟ ಕಾಫಿಯನ್ನು ಕುಡಿದು ಹೋಗುತ್ತಿದ್ದಳು. ಆಮೇಲೆ ಅಜ್ಜಿಯಾಗಿ ಕೆಲಸದವರಾಗಲಿ ಅದನ್ನು ಶಾಡ್ ಶಾಡ್ ಮಾಡಿ ತುಂಡು ಮಾಡಿ ಹಾಕುತ್ತಿದ್ದರು. ನಾವೆಲ್ಲರೂ. ತುಳಸಿ ಕಟ್ಟೆಯ ಎದುರಿನ ದಂಡೆ ಮೇಲೆ ಕುಳಿತುಕೊಂಡು ಆ ಹಲಸಿನಕಾಯಿಯನ್ನು ಬಿಡಿಸುತ್ತಿದ್ದೆವು. ಆಗ ಅಮ್ಮನಾಗಲೀ ಅಕ್ಕನಾಗಲೀ ಏನಾದರೂ ಕಥೆಯನ್ನು ನಮಗೆ ಹೇಳುತ್ತಿದ್ದರು.. ಅದನ್ನು ಕೇಳುತ್ತಾ ಕೇಳುತ್ತಾ ಹಲಸಿನ ಕಾಯಿ ಬಿಡಿಸಿದ್ದೇ ನಮಗೆ ತಿಳಿಯುತ್ತಿರಲಿಲ್ಲ.. ಬೆಳಿಗ್ಗೆ ನಾವು ಏಳುವಾಗ ಕಾಫಿ ತಿ೦ಡಿಯಾದ ಮೇಲೆ ಇಡ್ಲಿ ಬೇಯಿಸುವ ಪಾತ್ರೆಯಲ್ಲಿ ಹಲಸಿನ ಕಾಯಿ ಹದವಾಗಿ ಬೆಂದು ತಯಾರಾಗುತ್ತಿತ್ತು.. ಅದನ್ನು ಒರಳು ಕಲ್ಲಿನಲ್ಲಿ ಹಾಕಿ ಮರದ ಗುದ್ದಲಿಯಿಂದ ಗುದ್ಧಿ ಗುದ್ಧಿ ನಮ್ಮ ಕೆಲಸದ ಹೆಂಗಸು ಹಿಟ್ಟು ಮಾಡಿ ಕೊಡುತ್ತಿದ್ದರು.. ಕೆಲವೊಮ್ಮೆ ಅಜ್ಜಿಯೇ ಹಿಟ್ಟು ಮಾಡುತ್ತಿದ್ದರು ..ಅದರೊಂದಿಗೆ ಹದವಾಗಿ ಗುದ್ದಿಟ್ಟ ಮೆಣಸು.. ಕೊತ್ತಂಬರಿ ..ಉಪ್ಪು ..ಹಾಕಿ ಹದವಾಗಿ ಹಿಟ್ಟು ತಯಾರಾಗುತ್ತಿತ್ತು.. ತಯಾರಾದ ಹಿಟ್ಟನ್ನು ಒಂದು ಪಾತ್ರೆಯಲ್ಲಿ ಹಾಕಿ ಸುಮಾರು ಹತ್ತು ಹನ್ನೊಂದು ಗಂಟೆ ಹೊತ್ತಿಗೆ ನಾವೆಲ್ಲರೂ ಕೂತು ಹಲಸಿನ ಹಪ್ಪಳ ಮಾಡುವ ಕಾರ್ಯಾಗಾರವನ್ನು ಶುರು ಮಾಡುತ್ತಿದ್ದೆವು ..ಹೆಚ್ಚಾಗಿ ಅಜ್ಜಿ ಅಥವಾ ಅಮ್ಮ ಉರುಟುರುಟು ಉಂಡೆ ಕಟ್ಟಿ ಇಡುತ್ತಿದ್ದರು.. ಅದನ್ನು ನಾವು ಮಕ್ಕಳು ಎರಡು ಪ್ಲಾಸ್ಟಿಕ್ಕಿನ ನಡುವೆ ಇಟ್ಟು ಒತ್ತುತ್ತಿದ್ದೆವು ಅದನ್ನು ಅಮ್ಮನಾಗಲೀ ಅಜ್ಜಿಯಾಗಲೀ ತಟ್ಟಿ ತಟ್ಟಿ ದೊಡ್ಡ ಹಪ್ಪಳವನ್ನಾಗಿ ಮಾಡುತ್ತಿದ್ದರೆ ಅದನ್ನು ನಾವು ಯಾರಾದರೊಬ್ಬರು ಚಾಪೆಗೆ ಹಚ್ಚುತ್ತಿದ್ದೆವು.. ಚಾಪೆ ತುಂಬಿದ ಮೇಲೆ ಹೊರಗೆ ಅಂಗಳದಲ್ಲಿ ಚಾಪೆಯನ್ನು ತೆಗೆದುಕೊಂಡು ಹೋಗಿ ಹಾಕುತ್ತಿದ್ದೆವು ..ಆ ಕೆಲಸ ಭಹುಷ್ಯ ಮಧ್ಯಾಹ್ನದೊಳಗೆ ಮುಗಿಯುತ್ತಿತ್ತು.. ಹಪ್ಪಳ ತಟ್ಟುತ್ತಾ ತಟ್ಟುತ್ತಾ ನಾವು ಅದೆಷ್ಟು ಹಿಟ್ಟನ್ನು ಎಣ್ಣೆಯಲ್ಲಿ ಮುಳುಗಿಸಿ ಮುಳುಗಿಸಿ ತಿನ್ನುತ್ತಿದ್ದೆವು ಲೆಕ್ಕವೇ ಇಲ್ಲ .ಆ ಹಿಟ್ಟು ಎಷ್ಟು ರುಚಿಯಾಗಿರುತ್ತದೆ ಎಂದರೆ ನಾವೆಲ್ಲರೂ ದೊಡ್ಡವರಾದ ಮೇಲೆ ಕೇವಲ ಹಿಟ್ಟು ತಿನ್ನುವುದು ಗೋಸ್ಕರ ಹಲಸಿನ ಹಪ್ಪಳದ ಹಿಟ್ಟನ್ನು ಅಮ್ಮ ಮಾಡುತ್ತಿದ್ದರು.ನಮ್ಮ ಭಾಗ್ಯಕ್ಕೆ ಅಮ್ಮನಿಗೂ ಇಂಥದ್ದೆಲ್ಲ ತಿನ್ನುವುದೆಂದರೆ ತುಂಬಾ ಇಷ್ಟ ..ಹಾಗಾಗಿ ಅಮ್ಮ ಇದನ್ನೆಲ್ಲ ಬಹಳ ಉತ್ಸಾಹದಿಂದಲೇ ಮಾಡುತ್ತಿದ್ದರು .ಅಜ್ಜಿಗೆ ಅದನ್ನೆಲ್ಲ ತಿನ್ನುವ ಆಸಕ್ತಿ ಇಲ್ಲದಿದ್ದರೂ ನಮ್ಮೆಲ್ಲರ ಸಂತೋಷಕ್ಕಾಗಿ ನಿಷ್ಠೆಯಿಂದ ತಮ್ಮ ಕೆಲಸವನ್ನು ಮಾಡುತ್ತಿದ್ದರು . ಹಪ್ಪಳ ಹೊರಗೆ ಹಾಕಿದ ಮೇಲೆ ಇರುವುದು ಇನ್ನೂ ದೊಡ್ಡ ಕೆಲಸ .ಅದೇನೆಂದರೆ ಹಪ್ಪಳವನ್ನು ಕಾಗೆ ..ನಾಯಿ ತೆಗೆದುಕೊಂಡು ಹೋಗದಂತೆ ಕಾಯುವುದು. ಅದಕ್ಕಂತೂ ನಾವ್ಯಾರೂ ಸುತಾರಾಂ ಒಪ್ಪುತ್ತಿರಲಿಲ್ಲ .ಭಯಂಕರ ಬೋರಿಂಗ್ ಕೆಲಸ ಅದು.ಇದಕ್ಕಿಂತ ಈಗ ಲಾಕ್ ಡಾನ್ ಅವಧಿಯಲ್ಲಿ ಮನೆಯಲ್ಲಿ ಇರುವುದೇ ಎಷ್ಟೋ ಉತ್ತಮ.. ನಾವಂತೂ ಮಕ್ಕಳು.. ಆಡುವುದರಲ್ಲೇ ತಲೆ ನಮಗೆ ..ಎಷ್ಟು ಹಪ್ಪಳ ಕಾಯುತ್ತೇವೆ ..ಕೆಲವೊಮ್ಮೆ ಅಲ್ಲಿ ಜಗಲಿಯ ಮೇಲೆ ಆಡಿಕೊಂಡು ಹಪ್ಪಳದ ಕಡೆ ನೋಡುತ್ತಾ ಇರುತ್ತಿದ್ದೆವು.. ಆದರೂ ನಮ್ಮ ಕಣ್ತಪ್ಪಿಸಿ ಕಾಗೆ ಬಂದೇ ಬಿಡುತ್ತಿತ್ತು.. ಹಾಗಾಗಿ ಮಧ್ಯಾಹ್ನ ನಂತರ ಹೆಚ್ಚಾಗಿ ಅಜ್ಜಿ ಒಂದು ಚಂದಮಾಮವನ್ನೋ ಮಯುರವನ್ನೋ ಹಿಡಿದುಕೊಂಡು ಓದುತ್ತ ಒಂದು ಉದ್ದಕೋಲನ್ನು ಹಿಡಿದುಕೊಂಡು ಕಾಗೆಯನ್ನು ಓಡಿಸುತ್ತಿದ್ದದ್ದು ಇವತ್ತಿಗೂ ಕಣ್ಣೆದುರು ಕಾಣಿಸುತ್ತಿದೆ .. ಇಷ್ಟೇ ಮಾತ್ರವಲ್ಲ ಅರ್ಧ ಒಣಗಿದ ಹಲಸಿನ ಹಪ್ಪಳವನ್ನು ತೆಂಗಿನೆಣ್ಣೆಯಲ್ಲಿ ಮುಳುಗಿಸಿ ತಿನ್ನುವ ಇನ್ನೊಂದು ರುಚಿಯೂ ವರ್ಣಿಸಲಸಾಧ್ಯ. ಹಾಗಾಗಿ ಕೆಲವೊಮ್ಮೆ ನಾವೆಲ್ಲರೂ ಸೇರಿ ಅರ್ಧ ಚಾಪೆಯನ್ನೇ ಖಾಲಿ ಮಾಡಿ ಬಿಡುತ್ತಿದ್ದೆವು. ಅಮ್ಮ ಸುಳ್ಳು ಸುಳ್ಳೇ ಬೈಯುತ್ತಿದ್ದರು. ಯಾಕೆಂದರೆ ಅವರಿಗೂ ಅಂಥದ್ದೆಲ್ಲ ತಿನ್ನುವುದೆಂದರೆ ಬಹಳ ಇಷ್ಟ. ಹಾಗಾಗಿ ಅವರ ಬೈಗಳನು ನಾವೇನು ಬಹಳ ಸೀರಿಯಸ್ಸಾಗಿ ತೆಗೆದುಕೊಳ್ಳುತ್ತಿರಲಿಲ್ಲ ..ನಮ್ಮ ಕೆಲಸ ನಾವು ಮಾಡುತ್ತಾನೆ ಹೋಗ್ತಿದ್ದೆವು. ಎರಡು ಮೂರು ದಿನ ಒಣಗಿ ಬಂದ ಹಪ್ಪಳ ಇಪ್ಪತ್ತೈದು ಇಪ್ಪತ್ತೈದು ಲೆಕ್ಕ ಮಾಡಿ ಕೊಡುವುದೇ ನಮ್ಮ ಸಂಭ್ರಮದ ಕೆಲಸ.. ಆಗ ಪ್ಲಾಸ್ಟಿಕ್ ಯುಗ ಅಲ್ಲದ ಕಾರಣ ಹಪ್ಪಳವನ್ನು ಬಾಳೆನಾರಿನ ಹಗ್ಗದಲ್ಲಿ ಚೆಂದವಾಗಿ ಕಟ್ಟಿ ಪುನಃ ಮತ್ತೊಂದು ದಿನ ಬಿಸಿಲಿನಲ್ಲಿಟ್ಟು ಆಮೇಲೆ ಡಬ್ಬಿಯಲ್ಲಿ ಹಾಕಿಟ್ಟರೆ ಹಪ್ಪಳದ ಮಹಾಕಾರ್ಯ ಮುಗಿದಂತೆ . ಮತ್ತೆ ಮಳೆಗಾಲದಲ್ಲಿ ನಮ್ಮೂರ ಎಡೆಬಿಡದ ಮಳೆಯಲ್ಲಿ ನಮಗೆ ಶಾಲೆಗೆ ರಜೆ ಇದ್ದೇ ಇರುತ್ತಿತ್ತು.. ಆ ಸಮಯದಲ್ಲಿ ಕೆಂಡದ ಮೇಲೆ ಸುಟ್ಟು ಅಥವಾ ತೆಂಗಿನ ಎಣ್ಣೆಯಲ್ಲಿ ಕರಿದು ತಿನ್ನುವ ಈ ಹಪ್ಪಳದ ರುಚಿ ಇದೆಯಲ್ಲ ಅದು ಭಹುಷ್ಯ ಅಮೃತ ಸಮಾನ ನಿಮ್ಮೆಲ್ಲರಿಗೂ ಇದನ್ನು ಓದುವಾಗ ಎಣ್ಣೆಯಲ್ಲಿ ಕರಿದ ಹಲಸಿನ ಹಪ್ಪಳ ಮತ್ತೆ ತೆಂಗಿನಕಾಯಿ ಚೂರು ತಿಂದ ಅನುಭವ ಆಗುತ್ತಾ ಇದೆಯಲ್ಲವೇ ********

ನೆನಪುಗಳು Read Post »

You cannot copy content of this page

Scroll to Top