ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಲಾಕ್ ಡೌನ್ ದುರಿತಗಳು..

ದಾಖಲಿಸಿದ್ದ ಲಾಕ್ ಡೌನ್ ದುರಿತಗಳು ನಂದಿನಿ ಹೆದ್ದುರ್ಗ ದಾಖಲಿಸಿದ್ದ ಲಾಕ್ ಡೌನ್ ದುರಿತಗಳು.. ಕಳೆದ ವಾರ ನನ್ನ ಮೊಬೈಲ್ಲು ಬೆಂಗಳೂರಿಗರು ಕಳಿಸುತ್ತಿದ್ದ ಹೂ ಉದುರಿದ ಖಾಲಿ ರಸ್ತೆಗಳಿಂದಲೇ ತುಂಬಿಹೋಯ್ತು. ಒಂದು ರಸ್ತೆ ಹಳದಿ,ಮತ್ತೊಂದು ನೀಲಿ,ಮಗದೊಂದು ಕಡುಗೆಂಪು…ಇನ್ನೊಂದು ತಿಳಿಗುಲಾಬಿ.. ಆಹಾ… ಊರಿಗೆ ಊರೇ ಯಾರದೋ ಸ್ವಾಗತಕ್ಕೆ  ಕಾದವರಂತೆ ತೋರಣ ಕಟ್ಟಿಕೊಂಡಿದೆ… ಯಾವ ರಸ್ತೆಯಲ್ಲಿ ಯಾರು ನಡೆದರೂ ಎಲ್ಲಿ ನಲುಗುತ್ತದೊ ಎಂಬಂಥ ಪಕಳೆಗಳ ಹಾಸು. ಬೆಂಗಳೂರು ಎನ್ನುವ ಹೆಸರು ಬದಲಿಸಿ ಹೂವೂರು ಎನುವಷ್ಟು  ಹೂಮರಗಳು.. ಯಾರೊ ಇನ್ನೊಂದು ಜೋಕು ಕಳಿಸಿದ್ರು…ಮಹಾನಗರದ ನಾಯಿಗಳೆಲ್ಲಾ ಮೀಟಿಂಗ್ ಸೇರಿ  ಅಲ್ಲಿ ಚರ್ಚೆ ಆಗ್ತಿದೆಯಂತೆ…  ‘ಮನುಷ್ಯರೆಲ್ರನ್ನೂ ಪಾಲಿಕೆಯವರು ಬಂದು ಎತ್ತಾಕೊಂಡು ಹೋಗಿರಬಹುದೇ…!?’ ಒಂಥರ ಸೊಗಸೇ ಇದೆಲ್ಲಾ ಓದಲಿಕ್ಕೆ.. ಅಳಿಲಿನ ಯೋಗಕ್ಷೇಮ ವಿಚಾರಿಸುವ ನೀಳಕತ್ತಿನ ನವಿಲೂ. ಜಯನಗರ,ಫೋರಮ್, ಕಮರ್ಷಿಯಲ್ಲು ಅಂತ ಶಾಪಿಂಗ್ ಬಂದು ಹೋದ ಸಣ್ಣ ಪುಟ್ಟ ಪ್ರಾಣಿ ಪಕ್ಷಿಗಳು.. ಒಂದುಕಾಲದಲ್ಲಿ ಅತಿ ನಿಬಿಡವಾಗಿದ್ದ ದಾರಿ ಮಧ್ಯದಲ್ಲಿ ಹಾಯಾಗಿ ಮಲಗಿ ಮೆಲುಕುತ್ತಿರುವ ದೊಡ್ಡ ಹೊಟ್ಟೆಯ ಹಸುಗಳು..!! ಮಹಾನಗರದ ಹೃದಯ ಭಾಗದಲ್ಲಿರುವ ಸ್ನೆಹಿತರೊಬ್ಬರು “ನೋಡಿಲ್ಲಿ…‌ಎಂತೆಂತಾ ಹಕ್ಕಿಗಳು ‌ಬಂದಿದಾವೆ ನಮ್ಮೂರಿಗೆ “ ಎನ್ನುತ್ತಾ ಪಕ್ಕದ ಖಾಲಿಸೈಟಿನ ಪೊದೆಯಲ್ಲಿ  ಚಿಲಿಪಿಲಿಗುಡುವ ಹೊಸ ಹಕ್ಕಿಗಳ ಫೋಟೋ ಕಳಿಸಿದ್ದೇ ಕಳಿಸಿದ್ದು… ಆಹಾ ಓಹೋ ಹೇಳಿ‌ ನಂಗೆ ಆಯಾಸವಾದರೂ ಅವರ ಆಸಕ್ತಿ ಮಾತ್ರ ಕುಂದಲೇ ‌ಇಲ್ಲ.. ಮನುಷ್ಯನೇ ಹಾಗಲ್ಲವೇ…? ತಾನೇ ವಿರೂಪ ‌ಮಾಡಿದ  ಪ್ರಕೃತಿ ಮತ್ತೆ  ಸ್ವರೂಪ ಪಡೆಯುತ್ತಿದೆ ಎನುವಾಗ ಅವನ ಸಂತೋಷ ಉಕ್ಕಿ ಹರಿಯುತ್ತದೆ. ನಿಮಿತ್ತವಾಗಿ ಮಹಾನಗರದಲ್ಲಿದ್ದರೂ ಮನಸ್ಸು‌ ತನ್ನ ನಾಲ್ಕು ಮನೆಯ ಬಾಲ್ಯದ ಹಳ್ಳಿಯ ಚಿತ್ರಣವನ್ನೇ ಸದಾ ತುಂಬಿಕೊಂಡಿರ್ತದೆ. ಹಾಗಾಗಿಯೇ ಸಣ್ಣ ಪಲ್ಲಟ,ಪರಿವರ್ತನೆಯಲ್ಲೂ ಮೂಲ ಕಾಣಬಹುದೇ ಎನ್ನುವ ಹುಡುಕಾಟದಲ್ಲೇ ಇರ್ತನೆ. ಮೂಲದಲ್ಲಿ ಬಹುತ್ವ ಎನುವುದೇ ಮನುಷ್ಯನ ಗುಣ. ಆದರೆ…ಆಧುನಿಕತೆ,ಜಾಗತೀಕರಣ ಮುಂತಾದ ಅತಿಮಾನುಷ ಪದಗಳು  ಮನುಷ್ಯನ ಮೂಲ ಗುಣವನ್ನು ತಿರುಚಿ  ಏಕಾಂಗಿಯಾಗುವುದೇ ಚಂದ ಎನುವ ಭಾವ ಸೃಷ್ಟಿಸುತ್ತಿವೆ. ಇರಲಿ..  ಅತಿಯೆಲ್ಲಾ ಅವನತಿಗೇ… ತುಂಬಿಕೊಳುವುದು ಖಾಲಿಯಾಗುವುದಕ್ಕೆ… ಆರಂಭವೆಲ್ಲಾ ಮುಗಿಯಲಿಕ್ಕೆ.. ಅಟ್ಯಾಚುಗಳೆಲ್ಲಾ ಡೀಟ್ಯಾಚ್ ಆಗುವುದಿಕ್ಕೇ ಎನ್ನುತ್ತದೆ ಕಾಲ ಧರ್ಮ. ‘ಈ ದಾರಿಯಲ್ಲಿ ಒಮ್ಮೆ ನಿನ್ನ ಕಿರುಬೆರಳು ಹಿಡಿದು ನಡೆಯುವಾಸೆ !” ಹೂದಾರಿ ಕ್ಲಿಕ್ಕಿಸಿ ಹೀಗೆ ಮೆಸೇಜಿಸದ ಅವನು…! ಹಳ್ಳಿಯಲ್ಲಿ ‌ಕುಳಿತು ಲಾಕಿನ ಹೆಚ್ಚಿಗೇನೂ ಎಫೆಕ್ಟಿಲ್ಲದೆ ,ಪ್ರೀತಿಯ ಓದೂ ಸಾಗದೆ /ಆಗದೆ ಒದ್ದಾಡುತ್ತಿದ್ದವಳ‌ ಮುಖಕ್ಕೆ ಒಂದು ಮಂದಸ್ಮಿತ ಮೂಡಲು ಇಷ್ಟು ಸಾಕಾಗದೇ..? “ಮಾತು ತಪ್ಪಬಾರದು” ಎನ್ನುವ ಮರು ಸಂದೇಶದೊಂದಿಗೆ ಕಡುಗೆಂಪಿನ ಗುಲಾಬಿ ಕಳಿಸಿ ಮತ್ತೆ ಮೌನಕ್ಕೆ ಜಾರಿದೆ.. _ ಬದುಕು ಕೊರೊನಾಮಯವಾಗಿದೆ. ಲಾಕಡೌನೆಂಬ ಪದ‌ ಮೊದಲು ಕೇಳಿದಾಗ ಅಷ್ಟೇನೂ ದಿಗಿಲು‌ ಬೀಳದೆ ‘ಮಾಮೂಲು ಬದುಕು ನಮ್ಮದು.ನಾವು ಭೂಮಿ ನಂಬಿರುವವರು.ಉಳುವ ಯೋಗಿಯ ನೋಡಲ್ಲಿ ಅಂತ ರಾಷ್ಟ್ರಕವಿ ಸುಮ್ಮನೇ ಬರೆದದ್ದಲ್ಲ’ ಅಂದುಕೊಂಡಿದ್ದೆ.. ಆದರೆ ಮೂರೇ ದಿನಕ್ಕೆ ನನ್ನ ನೂರು ಮನೆಯ ಊರಿನಲ್ಲೂ ಆರು ಮಂದಿ ಒಟ್ಟಿಗೆ ನಿಂತು ಕೊರೊನಾ ಹಾಡು ಪಾಡು ಮಾತಾಡ್ತಿದ್ದರೆ ಅದೆಲ್ಲಿಂದಲೋ ಪೋಲಿಸರು ಬಂದು ಅವರ ಕೈ ಸೋಲುವವರೆಗೂ ಬಿಗಿದು ಹೋಗುತ್ತಿದ್ದರು… ನಾಕು ದಿನ ಬಾಯಾಡಲಿಕ್ಕೆ ಆ ಮಾತಾದರೂ ‌ನಡೆದೀತು  ಅಂದುಕೊಂಡರೂ  ಕೇಳಲಿಕ್ಕೆ ಜೋಡಿ ಕಿವಿಯಿಲ್ಲದೆ ಅಕ್ಷರಶಃ ಈ ಲಾಕು ಸಾಕು ಎನಿಸತೊಡಗಿತು. ನಿಕ್ಕಿಯಾಗಿದ್ದ ಮದುವೆಯೊಂದು ಕೊರೊನಾ ಕಾರಣಕ್ಕೆ  ಅತ್ಯಾಪ್ತರು‌ ಮಾತ್ರ ನಿಂತು‌ ನೆರವೇರಿಸುವ ಹಾಗಾಯ್ತು.. ಯಾಕೋ ಗೊತ್ತಿಲ್ಲ.ಅದರಿಂದ ಒಳಗೊಳಗೆ ಖುಷಿ ಪಟ್ಟವರಲ್ಲಿ ನಾನೂ ಒಬ್ಬಳು. ನಮ್ಮ ಭಾರತೀಯರಲ್ಲಿ ಮಾತ್ರ ಕಾಣುವ ಈ ಬಿಗ್ ಫ್ಯಾಟ್ ಮದುವೆಗಳು  ಮಗದೊಂದು ಕಾರಣದಲ್ಲಿ ನೇಚರನ್ನು ನುಂಗಿ ನೊಣೆಯುತ್ತಿವೆಯೇನೊ ಅನಿಸ್ತದೆ.. ಒಂದು ಸಾಧಾರಣ ಕುಟುಂಬದ ಮದುವೆಗೂ ಒಂದು ಸಣ್ಣ ಬೆಟ್ಟದಷ್ಟು ಕಸದ ಉತ್ಪಾದನೆ ಆಗ್ತದೆ. ಅದರಲ್ಲೂ ಹೆಚ್ಚಿನದು ವಿಘಟನೆಯಾಗದ ಕಸ. ತಮ್ಮ ಸ್ಟೇಟಸ್ಸು ತೋರಿಸಿಕೊಳ್ಳುವ ಸಲುವಾಗಿ ಪ್ರತಿ ಊಟ ತಿಂಡಿಗೂ  ಪ್ಲಾಸ್ಟಿಕ್ ಬಾಟಲಿಯಲ್ಲೇ‌ ನೀರು ಪೂರೈಕೆ.. ಇಟ್ಟ ಬಾಳೆಲೆ ಒರೆಸಿಕೊಳ್ಳಲು ಪುಟ್ಟದೊಂದು ಪ್ಲಾಸ್ಟಿಕ್ ಕುಡಿಕೆ .ಅದರೊಳಗೆ ನೀರು ಹಾಕಿದರೆ ಊದಿಕೊಳ್ಳುವ ಟಿಷ್ಯೂ. ಮುಕ್ಕಾಲು ಮೂರು ಪಾಲು ಸಕ್ಕರೆ ರೋಗಿಗಳಿರುವ ಕಾಲದಲ್ಲಿ ಒಂದು ಹೊತ್ತಿನ ಊಟಕ್ಕೆ ನಾಲ್ಕು ನಾಲ್ಕು ಬಗೆಯ ಸಿಹಿ. ಉಂಡದ್ದಕ್ಕಿಂತ ಒಗೆದದ್ದೇ ಹೆಚ್ಚು.. ಸಾಯಲಿ ,ನಾಯಿ ನರಿಯಾದರೂ ತಿಂದುಕೊಳ್ತವೆ ಅಂದುಕೊಂಡರೆ ಪ್ರತಿ ಸಿಹಿಗೂ ಪ್ರತ್ಯೇಕ ಪ್ಲಾಸ್ಟಿಕ್ ಬಟ್ಟಲು.ಜೊತೆಗೆ ಚಮಚ. ಬರೆಯುತ್ತಾ ಹೋದರೆ ಸಂ ವಿಧಾನವೇ ಆಗಬಹುದು… ಕೊರೊನಾದ ಪಾಸಿಟಿವ್ ಪರಿಣಾಮವಾಗಿ ಪ್ರಮುಖವಾಗಿ ಊರಲ್ಲಿ ನಡೆದ ಸರಳ ಮದುವೆ ಹೆಸರಿಸಬಹುದು. ನೆಲ ,ಮುಗಿಲು ನೀರು,ನಿಡಿ  ತಿಳಿಯಾಗಿದ್ದು, ಮನಸ್ಸುಗಳು ತಿಳಿದದ್ದು, ವೃದ್ದಾಶ್ರಮಗಳಾಗಿದ್ದ ಹಳ್ಳಿಗಳೆಲ್ಲಾ ಸಂಜೆ ಮುಂಜಾನೆ ಲಕಲಕಿಸಿದ್ದು. ಕ್ರಿಕೆಟ್ಟು ,ಶಟಲ್ಲುಗಳು ನಮ್ಮ ಸಗಣಿಸಾರಿಸಿದ ಅಂಗಳಕ್ಕೂ ಬಂದು  ನಮ್ಮ ಹೊಲ ತೋಟಗಳು ದಿಗಿಲಾಗಿದ್ದು.. ಓದು ವೃತ್ತಿಯ ಕಾರಣಕ್ಕಾಗಿ ವರ್ಷಾನುಗಟ್ಟಲೆ ಮನೆಯಿಂದ ಹೊರಗಿದ್ದು,ಬಂದರೂ ನೆಂಟರ ಹಾಗೆ ಬಂದು ಹೋಗುತ್ತಿದ್ದ ಮಕ್ಕಳೇ ಅಪ್ಪ ಅಮ್ಮನಿಗೆ ಹೊಸದಾಗಿ ಕಂಡದ್ದು.. ಊರಿನಲ್ಲಿ ಜೊತೆಗಿರುವ ಸೊಸೆಗಿಂತ  ನಗರ ಸೇರಿ ವಾರಕ್ಕೊಮ್ಮೆ ವಿಡಿಯೊ ಕಾಲು ಮಾಡಿ  ‘ಆರೋಗ್ಯ ನೋಡಿಕೊಳ್ಳಿ,ನಾವಿದ್ದೆವೆ ಜೊತೆಗೆ ‘ ಎನ್ನುವ  ಸೊಸೆಯೇ ಬಲು ಪ್ರೀತಿಸುವುದು ತಮ್ಮನ್ನು ಎಂದುಕೊಂಡಿದ್ದ ಅತ್ತೆಮಾವನಿಗೆ‌ ಸತ್ಯ ದರ್ಶನವಾಗಿ ಬೆಸ್ತು‌ಬಿದ್ದಿದ್ದು. ಊರ ಕಾಲುಹಾದಿಗಳಲ್ಲೂ ವಾಕಿಂಗ ಹೋಗುವವರು ಹೆಚ್ಚಾಗಿದ್ದು… ಇನ್ನೂ ಮುಂತಾದವು ಕೊರೊನಾ ಕಾಲದ ಕೊಡುಗೆ ಎನಬಹುದು. ನಿಜ.. ಸಾಮಾಜಿಕವಾಗಿ,ರಾಜಕೀಯವಾಗಿ,ಸಾಂಸ್ಕ್ರತಿಕವಾಗಿ ಇದು ಇತಿಹಾಸದ ಪುಟ ಸೇರಿದ ವರ್ಷ.ನಾವಿದಕ್ಕೆ ಸಾಕ್ಷಿಯಾಗಿದ್ದೇವೆ. ಲಘುವಾಗಿ ತೆಗೆದುಕೊಳ್ಳುವ ವಿಚಾರ ಅಲ್ಲವೇ ಅಲ್ಲ. ಕೊರೊನಾ ಕಾಲವನ್ನು ಹಿಂದೂಡಿದೆ. ನಷ್ಟ ವಾಗಿರುವ ಆರ್ಥಿಕತೆಯ ರಿಪೇರಿಗೆ ಯಾವ ಸೂತ್ರವೂ ಏನು ಮಾಡಲಾರದಂತಾಗಿದೆ.  ಕಲಿತ ಮಕ್ಕಳನ್ನು ಕನಲುವಂತೆ ಮಾಡಿದೆ. ಬೆಳೆದ ಬೆಳೆಗೆ ತಗುಲಿದಷ್ಟೂ ಬೆಲೆ ಸಿಗದೆ ರೈತ ಹೈರಾಣಾಗಿದ್ದಾನೆ.. ಒಮ್ಮೆ ಕೆಮ್ಮಿದರೂ  ಸಾಕು.ಮನೆಯವರೇ ಮುಖ ಸಿಂಡರಿಸುತ್ತಾರೆ. ಇನ್ನೇನು ಮರೆಯಾಗುತ್ತಿದೆ ಎಂದುಕೊಂಡಿದ್ದ ಅಸ್ಪರ್ಶ್ಯತೆ ಹೊಸ ಫ್ಯಾಷನ್ ಆಗಿ  ಜಗವನ್ನಾಳತೊಡಗಿದೆ. ನಮ್ಮ ಸಂಸ್ಕೃತಿಯ ಮೇರುವೆನಿಸಿದ್ದ ಅತಿಥಿ ದೇವೋಭವ ಇನ್ನೂ ಅರ್ಥ‌ಕಳೆದುಕೊಳ್ಳಬಹುದೆನಿಸುತ್ತಿದೆ.. ಮೊದಲೆ ಮುಖ ತಪ್ಪಿಸಿ ಓಡಾಡುತ್ತಿದ್ದ ‌ಮಂದಿಗೆ ಕೇವಲ ಕಣ್ಣು‌ಮಾತ್ರ ಕಾಣುವಂತೆ ಬಂದ ಮಾಸ್ಕಿನ ಯುಗ ವರದಾನವಾಗಿದೆ. ಮಾದ್ಯಮಗಳ ಬೇಳೆಬೇಯಿಸಿಕೊಳ್ಳುವ ಗುಣದಿಂದ ಧರ್ಮ ಧರ್ಮಗಳ ನಡುವೆ ಶೀತಲ ಸಮರ ನಡೆಯುತಿದೆ. ಯಾರೋ ಹತ್ತು ‌ಕಿಡಿಗೇಡಿಗಳ ಕೊಳಕು ಮನ ಸ್ಥಿತಿಯಿಂದಾಗಿ ಒಂದು ವರ್ಗದ ಮನುಷ್ಯರನ್ನೇ ಜಗತ್ತು ಸಂದೇಹದ ಕನ್ನಡಕ ದಿಂದ ನೋಡುವ ವಾತವರಣ ಸೃಷಿಯಾಗಿದೆ. ದುಡಿದು ನಿತ್ಯದ ಅನ್ನ ಉಣ್ಣುತ್ತಿದ್ದ ಶ್ರಮಜೀವಿ ನಿತ್ಯದ ಕೂಳಿಗೆ ಸ್ವಾಭಿಮಾನ ಬದಿಗಿಟ್ಟು ದಾನಿಗಳ ಕೈ ನೋಡುತ್ತಿದ್ದಾನೆ. ಮೂರು ಟೊಮ್ಯಾಟೊ ,ಎರಡು ಆಲೂಗೆಡ್ಡೆ ಕೊಟ್ಟು ಫೋಟೋ ಕ್ಲಿಕ್ಕಿಸಿಕೊಂಡು ಒಳಗಿನ ಮನ್ನಣೆಯ ದಾಹಕ್ಕೆ ನೀರೆರುಯುವವರ ಸಂಖ್ಯೆ ಅತಿಯಾಗುತ್ತಿದೆ. ಆದರೆ.. ಇವೆಲ್ಲದರ ನಡುವೆ ನಮ್ಮ ನೇಗಿಲಯೋಗಿ,ಭಾರತದ ಬೆನ್ನೆಲುಬು ಮಾತ್ರ ಎಂದಿನಂತೆ  ಉತ್ತಿಬಿತ್ತುತ್ತಿದ್ದಾನೆ.. ಒಂದು ಸಮೀಕ್ಷೆಯ ಪ್ರಕಾರ ಕೊರೊನಾ ಕಾಲಕ್ಕೆ ಭಾರತದಲ್ಲಿ ತರಕಾರಿ ಸೊಪ್ಪು ಗಳ ಅವಕ ಮಾರುಕಟ್ಟೆಯಲ್ಲಿ ಅತಿಯೆನಿಸುವಷ್ಟೇ ಆಗಿದೆ. ಆದರೆ ವ್ಯವಸ್ಥೆ ಇಲ್ಲೂ ಒಂದು ತಪ್ಪೆಸಗಿದೆ..ರೈತನ ಸರಕನ್ನು ಎಪಿಎಮ್ ಸಿಯ ಒಳ ತರಿಸಿಕೊಂಡ ಅಧಿಕಾರಿಗಳು ಕೇವಲ ವ್ಯಾಪಾರಿ ವರ್ಗವನ್ನು ಮಾತ್ರ ಒಳಬಿಟ್ಟುಕೊಂಡಿದೆ. ರೈತರಿಂದ ನೇರ ಗ್ರಾಹಕ ವ್ಯವಸ್ಥೆ ಮಾತ್ರ ಇಂದಿನ ಕಂಗೆಟ್ಟ ಕೃಷಿಕನ ಬದುಕನ್ನು ನೇರೂಪು‌ ಮಾಡಬಲ್ಲದು ಎನುವುದು ಗೊತ್ತಿದ್ದರೂ ಜಾಣಗುರುಡು ತೋರಿದೆ. ಯಾರೊ ಹುಸಿದೈರ್ಯ ಇರುವ ರೈತಾಪಿ ಮಂದಿ ಇದನ್ನು ಪ್ರಶ್ನಿಸಿದ್ದಾರೆ. ಎಲ್ಲೊ ನಾಲ್ಕು ಮಂದಿಗೆ ನ್ಯಾಯ ಸಿಕ್ಕಿದೆ.. ಉಳಿದವರು ಮತ್ತದೆ‌ ಮಹಾನಗರದ  ತಮ್ಮ ಬಾಂಧವರು ಅಪ್ಲೋಡಿಸಿದ ತಮ್ಮದೆ ಹೊಲಗದ್ದೆಗಳಿಂದ ಹೋದ ತರಕಾರಿ ಹಣ್ಣುಗಳ ಬಗೆಬಗೆಯ ಅಡುಗೆಗಳನ್ನು ನೋಡಿ ಉಗುಳು ನುಂಗಿಕೊಳ್ಳುತ್ತಿದ್ದಾರೆ.‌ ಯಾಕೋ  ಇದೆಲ್ಲವನ್ನೂ ನೋಡುವಾಗ ಇನ್ನು ಕೃಷಿ ಕ್ಷೇತ್ರಕ್ಕೆ ಯಾವುದೇ ಭವಿಷ್ಯ ವಿಲ್ಲ ಎನುವುದು ಖಚಿತವಾಗುತ್ತದೆ. ಆದರೆ.. ಈ ಸಮಾಜದ ಅಥವಾ ಈ ವ್ಯವಸ್ಥೆಯ ಒಂದು ವೃತ್ತದಲ್ಲಿ ಮೂಲದಲ್ಲಿ ರೈತನಿದ್ದರೆ ಕೊನೆಯಲ್ಲಿ ಟೆಕ್ನಾಲಜಿ ಇದೆ ಎನುವುದು ಎಲ್ಲರಿಗೂ ತಿಳಿದ ವಿಚಾರವೇ. ಮೂಲದ ಬೇರನ್ನೇ ಗೆದ್ದಲು ಹಿಡಿಸಿದರೆ ವೃತ್ತ ಪೂರ್ತಿಯಾಗುವುದಾದರೂ ಹೇಗೆ.? ತೆರಿಗೆ ಕೇಂದ್ರೀಕೃತ ದೃಷ್ಟಿಯಿಂದ ನೋಡುವ  ಎಲ್ಲಾ ಸರ್ಕಾರಗಳು ರೈತನ ಬಾಯಿಗೆ ಬೆಣ್ಣೆ ಹಚ್ಚುವಂತೆ ಆಡುವ ನಾಟಕಗಳನ್ನು ಇನ್ನಾದರೂ ನಿಲ್ಲಿಸಬೇಕು.  ಸಾವಿರ ರೈತರ ಬದುಕು ಹಸನಾಗುವುದಕ್ಕೆ ಕೊಡಬಲ್ಲ  ಒಂದು ಬೆಂಬಲ ಬೆಲೆಯ ಮೊತ್ತವನ್ನು  ಹೊಟ್ಟೆ ತುಂಬಿದ ಉದ್ಯಮಿಯೊಬ್ಬನ ಬ್ಯಾಂಕ್ ಸಾಲ ಮನ್ನಾ ಮಾಡುವುದಕ್ಕೆ ಬಳಸುವುದನ್ನು ಸರ್ಕಾರಗಳು ನಿಲ್ಲಿಸಬೇಕು. ಕಾಲಕಾಲಕ್ಕೆ ರೈತೋಪಯೋಗಿ ಕಾಯ್ದೆ ಕಾನೂನುಗಳಿಗೆ ತಿದ್ದುಪಡಿ ಮಾಡಿಕೊಂಡು ಗ್ರಾಮೀಣ ಬದುಕಿನ ಹಿತಕಾಯಬೇಕು. ವೈಯಕ್ತಿಕ ಆದಾಯವನ್ನು ಇಲ್ಲೂ ಹೆಚ್ಚಿಸುವ,ವೃತ್ತಿ ಘನತೆ ಎತ್ತಿಹಿಡಿಯುವ ಮನಸ್ಥಿತಿ ಅಧಿಕಾರಿಗಳಲ್ಲೂ ಬರಬೇಕು.  ಬೀಜ ಗೊಬ್ಬರ ನೀರಾವರಿಗೆ ಪ್ರಾದೇಶಿಕವಾಗಿ ಭಿನ್ನ ರೂಪುರೇಷೆಗಳನ್ನು ಕೈಗೊಂಡು  ರೈತರ ಗೌರವದ ಬದುಕಿಗೆ ಅನುವು ಮಾಡಬೇಕು. ಬ್ಯಾಂಕುಗಳು,ಅಧಿಕಾರಿಗಳು ರೈತನನ್ನು ಕೇವಲ ನೆಪಮಾತ್ರಕ್ಕೆ ಎತ್ತರದಲ್ಲಿರಿಸದೆ ವಾಸ್ತವದಲ್ಲೂ ಹಾಗೇ ನಡೆದುಕೊಳ್ಳಬೇಕು ಕೊರೊನಾ ಕಾಲದಲ್ಲಿ ಜಗತ್ತಿಗೊಂದು ಹೊಸ ಪಾಠ ದೊರಕಿದೆ. ಮಹಾನಗರದ ಮೋಹ ತುಸುವಾದರೂ ಕಡಿಮೆಯಾಗಿದೆ. ಹಳ್ಳಿಗಳೂ ಬದುಕಲು ಅರ್ಹ ಎನುವುದನ್ನು ಮಂದಿ ತಿಳಿದುಕೊಳ್ತಿದ್ದಾರೆ. ಅಯ್ಯೋ..ಊರಲ್ಲೊಂದು‌ ಮನೆಯಿದ್ದಿದ್ದರೆ,ತುಂಡು ನೆಲವಿದ್ದಿದ್ದರೆ ಎನ್ನುವ ಜನ ಹೆಚ್ಚಾಗ್ತಿದ್ದಾರೆ.. ಸರ್ಕಾರ ಇಂತಹ ಸನ್ನಿವೇಶಗಳ ಉಪಯೋಗ ಪಡೆಯಬೇಕು.. “ಕೆಟ್ಟಡುಗೆ ಅಟ್ಟವಳೇ ಜಾಣೆ’ ಎನ್ನುವ ಮಾತಿದೆ. ಗುಣಮಟ್ಟದ ಬದುಕನ್ನು ರೂಪಿಸುವಲ್ಲಿ , ಹಳ್ಳಿಗಳಲ್ಲೂ ಉದ್ಯೋಗಗಳನ್ನು ಸೃಷ್ಟಿಸುವಲ್ಲಿ ವ್ಯವಸ್ಥೆ ಗಮನ ಹರಿಸಲೇಬೇಕಾದ ದುರಿತ ಕಾಲ ಇದಾಗಿದೆಯಲ್ಲವೇ.? ************

ಲಾಕ್ ಡೌನ್ ದುರಿತಗಳು.. Read Post »

ಇತರೆ

ಪ್ರಸ್ತುತ

ವಿಶ್ವಾಸದ್ರೋಹಿ ನೇಪಾಳ ಸಂಗಮೇಶ ಎನ್ ಜವಾದಿ ವಿಶ್ವಾಸದ್ರೋಹಿ ನೇಪಾಳದಲ್ಲಿ ಭಯಂಕರ ಪ್ರಕೃತಿ ವಿಕೋಪ ಆದಾಗ ಇದರ ಸಂಕಷ್ಟಕ್ಕೆ ಕೈಜೋಡಿಸಲು ಮೊದಲು ಬಂದಿದ್ದು ಮತ್ತು ನೆರವಾಗಿದ್ದು ಭಾರತ ದೇಶ. ನೇಪಾಳಕ್ಕೆ ಭಾರತದ ಸಹಾಯ, ಸಹಕಾರ ಬೇಕು ಜೊತೆಗೆ ಆರ್ಥಿಕ ಸಹಾಯ ಸಹ ಬೇಕೇ ಬೇಕು, ಇವರ ಯುವಕ ಯುವತಿಯರಿಗೆ ದುಡಿಯಲು ಭಾರತ ಬೇಕು.ಇವರ ವಿದ್ಯಾರ್ಥಿಗಳಿಗೆ ಶಿಕ್ಷಣ ಕಲಿಯಲು ಭಾರತ ದೇಶ ಬೇಕು.ಭಾರತದಲ್ಲಿ ಸೀಗುವ ಪ್ರತಿಯೊಂದು ವಸ್ತುಗಳ ಸಹಾಯದ ಅಗತ್ಯತೆ ನೇಪಾಳ ಜನರಿಗೆ ಬೇಕು ಹಾಗೂ ಭಾರತದ ಸಹಾಯ ಇವರಿಗೆ ಯಾವತ್ತೂ – ಯಾವಾಗಲೂ ಅವಶ್ಯಕತೆ ಇದ್ದೆ ಇರುತ್ತದೆ ಎನ್ನುವುದು ಅಲ್ಲಿನವರಿಗೆ ಗೊತ್ತು ಆದರೆ ಇದಕ್ಕಿದಂತೆ ನಮ್ಮ ಸಹಾಯವನೆಲ್ಲಾ ನೇಪಾಳದವರು ಮರೆತು ಕೆಲವು ದಿನಗಳಿಂದ ಭಾರತದ ವಿರುದ್ಧವಿಚಿತ್ರವಾಗಿ ವರ್ತನೆ ಮಾಡುತ್ತಿದ್ದಾರೆ ಎನ್ನುವುದು ಪ್ರತಿಯೊಬ್ಬ ಭಾರತೀಯರು ಗಂಭೀರವಾಗಿ ಪರಿಗಣಿಸಬೇಕು ಮತ್ತು ಪರಿಗಣಿಸುವುದು ಅತಿ ಅವಶ್ಯಕತೆ ಇದೆ. ಹಾಗೆ ನೇಪಾಳದವರ ಚೈನೀಸ್ ಫಾಸ್ಟ್ ಫುಡ್ ವೆಂಬ ಹೆಸರಿನ ಗೂಡಂಗಡಿ ಭಾರತದ ಯಾವ ರಾಜ್ಯ ಯಾವ ಜಿಲ್ಲೆ ಯಾವ ನಗರದಲ್ಲಿ ಇಲ್ಲ ಹೇಳಿ? ಬ್ಯುಟಿ ಪಾರ್ಲರ್ ಮಾಸಾಜ್ ಪಾರ್ಲರ್ ಗಳಲ್ಲಿ ಇವರ ಯುವತಿಯರದ್ದೇ ಕಾರುಬಾರು.ಇವರ ಯುವಕ ಯುವತಿಯರು ಭಾರತಕ್ಕೆ ಬಂದು ಇಲ್ಲಿ ದುಡಿದು ಇಲ್ಲೇ ತಮ್ಮ ಜೀವನವನ್ನ ಸಾಗಿಸುತ್ತಿದ್ದಾರೆ, ಅಂದು ನೇಪಾಳದಲ್ಲಿ ಭೂಕಂಪ ಆದಾಗ ಸಹಾಯಕ್ಕೆ ಮೊದಲು ಧಾವಿಸಿದು ಭಾರತ ದೇಶವೇ ಎನ್ನುವುದು ನೇಪಾಳದ ಇಂದಿನ ಕುತಂತ್ರಿ ಸ್ವಾರ್ಥ ರಾಜಕೀಯ ಮುಖಂಡರಿಗೆ ಮರೆತು ಹೋಗಿದೆ ಎನ್ನಬಹುದು,ಮರೆತು ಭವ್ಯ ಭಾರತದ ಬಗ್ಗೆ ಹಗುರವಾಗಿ ಅಲ್ಲಿನ ನೀಚ ರಾಜಕೀಯ ಪುಂಡರು ಮಾತನಾಡುತ್ತಿದ್ದಾರೆ. ಸಧ್ಯ ಈಗ ಸುನಾಮಿಯಂತೆ ಅಪ್ಪಳಿಸುತ್ತಿರುವ ಕೊರೋನಾ ವೈರಸ್ ಹಾವಳಿಯನ್ನು ತಡೆಗಟ್ಟಲು ಭಾರತದಿಂದ ಸುಮಾರು 571 ಟನ್ ಗಳಷ್ಟೂ ವೈದ್ಯಕೀಯ ಉಪಕರಣ,ವೈದ್ಯಕೀಯ ಸವಲತ್ತು,ಆಹಾರ ಸಾಮಗ್ರಿ,ನೀರು, ಹಾಗೂ ಸಿಬ್ಬಂದಿಗಳನ್ನ ಕಳುಹಿಸಿ ಕೊಟ್ಟು ನೇಪಾಳಕ್ಕೆ ಮಾನವೀಯ ನೆಲೆಗಟ್ಟಿನಲ್ಲಿ ಸಹಾಯಸ್ತ ಚಾಚಿದೆ. ಇಷ್ಟೆಲ್ಲಾ ನಿಸ್ವಾರ್ಥದಿಂದ ಸೇವೆ ಮಾಡಿರುವ ಮತ್ತು ನಿರಂತರವಾಗಿ ಸಹಾಯ ಮಾಡುತ್ತಿರುವಸಹಾಯವನ್ನು ಉಪಯೋಗಿಸಿಕೊಂಡು – ಉಪಯೋಗಿಸಿಕೊಳ್ಳುತ್ತಿರುವ ಇವರು ಇದೀಗ ಭಾರತದ ವಿರುದ್ಧವೇ ಹೀನ ಬುದ್ಧಿ ನೇಪಾಳ ಪ್ರದರ್ಶನ ಮಾಡುತ್ತಿದೆ. ಭಾರತದಿಂದ ನೀಡಿರುವ ಸಕಲ ಸೌಲಭ್ಯಗಳನ್ನು ಉಪಯೋಗಿಸಿ ಮೈಮರೆತು ಈಗ ನೇಪಾಳ ಇಂದು ಪ್ರಜಾಪ್ರಭುತ್ವ ವಿರೋಧಿ ದೇಶ ಚೀನಾದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ.ಚೀನಾ ಯಾವ ರೀತಿಯಲ್ಲಿ ನೇಪಾಳಕ್ಕೆ ಹೇಳುತ್ತದೇಯೂ ಹಾಗೆ ಅದೇ ತರಹ ನಮ್ಮ ವಿರುದ್ಧ ಕೆಲಸ ಮಾಡುತ್ತಿದ್ದೆ.ಯಾವುದೇ ರೀತಿಯಲ್ಲಿಯೂ ಚೀನಾ,ನೇಪಾಳಕ್ಕೆ ಸಹಾಯ ಹಾಗೂ ಸಹಕಾರವಂತೂ ಖಂಡಿತಾ ಮಾಡಲ್ಲಾ ಆದರೆ ಚೀನಾದ ಕಪಟದಿಂದ  ಭಾರತದ ಮೇಲೆ ವೈಷಮ್ಯ ಕಾರುತ್ತಿದೆ ನೇಪಾಳ.ಇದಲ್ಲದೆತನ್ನ ದೇಶದ ಹೊಸ ಭೂಪಟವನ್ನ ಪ್ರಕಟಿಸಿ ಭಾರತದ ಸೀಮೆಯ ಕಾಲಪಾನಿ,ಹಾಗೂ ಲೆಪುಲೆಕ್ ತನ್ನದು ಭಾರತ ಇದನ್ನ ಅಕ್ರಮವಾಗಿ ಆಕ್ರಮಿಸಿ ಕೊಂಡಿದೆ ಹಾಗೂ ತಾನು ಇದನ್ನ ಭಾರತದಿಂದ ವಶಪಡಿಸಿಕೊಳ್ಳುತ್ತೇನೆ ಎಂದು ಹೇಳಿದೆ ಎಷ್ಟೇಲ್ಲಾ ಸಹಾಯ ಮಾಡಿದರು ನೇಪಾಳಕ್ಕೆ ಮಾನವೀಯತೆ ಗೊತ್ತಿಲ್ಲ ಅಂತಾ ಕಾಣುತ್ತದೆ. ಜೊತೆಗೆ ಸಹಕಾರತತ್ವದ,ಮಾನವೀಯ ಮೌಲ್ಯಗಳ, ಮೌಲ್ಯಾಧಾರಿತ ಸಿದ್ದಾಂತಗಳ ಕುರಿತು ಎಳಷ್ಟು ಕಾಳಜಿ ಇಲ್ಲವೆಂದು ನಮಗೆ ತೋರುತ್ತದೆ. ಇಂದಿನ ನೇಪಾಳದ ಪ್ರಧಾನಿ ಕೋರೋನಾ ವೈರಸ್ ಹರಡಿದ್ದು ಚೀನಾದ ವುಹಾನ್ ಅಲ್ಲ ಬದಲಾಗಿ ಭಾರತ ಹಾಗೂ ಇದು ಆತಿ ವೇಗವಾಗಿ ಸಮಾಜಕ್ಕೆ ಹರಡಿಸುತ್ತಿದೆ ಎಂದು ನೇಪಾಳದ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದಾರೆ. ನೋಡಿ ಇದು ಎಂತಹ ಅವಿವೇಕದ ಮಾತು, ವಿಶ್ವ ವಿಶ್ವವೇ ಇಂದು ಚೀನಾದ ಮೇಲೆ ಕಿಡಿಕಾರುತ್ತಿದ್ದಾಗ (ಕಿಡಿಕಾರುತ್ತಿರುವಾಗ)ಈ ವಿಶ್ವಾಸದ್ರೋಹಿ ನೇಪಾಳ ಮಾತ್ರ ಭಾರತದ ವೈರಸ್ ಎಂದು ಬೊಬ್ಬೆ ಹಾಕುತ್ತಿದೆ. ಇದು ಹೀಗೆ ಹೇಳಿದರೆ ಭಾರತಕ್ಕೆ ಯಾವುದೇ ರೀತಿಯಲ್ಲಿಯೂ ಹಾನಿಯಾಗಲ್ಲ,ಯಾಕೆಂದರೆ ಕೊರೋನಾ ವೈರಸ್ ಚೀನಾದ ಕುತಂತ್ರದಿಂದ ಜನ್ಮಪಡೆದ ವೈರಸ್ ಎಂಬುದು ಜಗತ್ತಿಗೆ ಗೊತ್ತಿದೆ. ಆದಕಾರಣ ನೇಪಾಳ ಏಷ್ಟೇ ನೀಚ ಬುದ್ಧಿ ತೋರಿಸಿದರು ಫಲಪ್ರದ ಖಂಡಿತಾವಾಗುದಿಲ್ಲ.ಇದರ ಹಿಂದೆ ಯಾರು ಇದ್ದಾರೆ ಅನ್ನುವುದು  ಜಗತ್ತಿಗೆ ಹಾಗೂ ನಮ್ಮಗೆಲ್ಲರಿಗೂ ಗೊತ್ತು ಅದೇ ಕುತಂತ್ರೀ ಚೀನಾ ಎಂಬುದು.ಆದರೆ ಚೀನಾದ ಬಗೆ ಒಂದೇ ಒಂದು ಮಾತನಾಡುತ್ತಿಲ್ಲ, ಯಾಕೇ ! ಎನ್ನುವುದೇ ದೊಡ್ಡ ಯಕ್ಷ ಪ್ರಶ್ನೆ ? ಚೀನಾವು ಯಾವ ಕುತಂತ್ರಿ ಬುದ್ಧಿ ಉಪಯೋಗಿಸಿ ನೇಪಾಳವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ ಎನ್ನುವುದೇ ತಿಳಿಯದ ವಿಚಾರವಾಗಿದೆ ಮತ್ತು ಯಾವುದೇ ರೀತಿಯಲ್ಲಿಯೂ (ನೇಪಾಳಕ್ಕೆ) ಸಹಾಯ ಮಾಡದ ಜನವಿರೋಧಿ ದೇಶವಾದ ಚೀನಾದ ಬಗೆ ಮಾತನಾಡದೇ ಭಾರತ ದೇಶದ ಬಗ್ಗೆ ಮಾತನಾಡುತ್ತಿರುವ ನೇಪಾಳಕ್ಕೆ ಸಧ್ಯ ಬುದ್ಧಿ ಭ್ರಮೆ ಯಾಗಿದೆ ಎನ್ನಬಹುದು. ಭಾರತದಂತಹ ಬಲಿಷ್ಠ ದೇಶ ಮುಂದೆ ನೇಪಾಳ ಯಾವ ಲೆಕ್ಕ,ಯಾವುದೇ ರೀತಿಯಲ್ಲಿಯೂ ಭಾರತದ ಎದುರಿಗೆ ನಿಲ್ಲುವ ತಾಕತ್ತು ನೇಪಾಳಕ್ಕೆ ಖಂಡಿತಾ ಇಲ್ಲ,ಚೀನಾದ ಬೆಂಬಲದಿಂದ ಇಷ್ಟೊಂದು ಹಾರಡುತ್ತಿರುವ ನೇಪಾಳಕ್ಕೆ ಬುದ್ಧಿ ಕಲಿಸುವ ದಿನಗಳು ದೂರವಿಲ್ಲ ಎನ್ನುವುದು ಅಲ್ಲಿನ ಹೀನ ರಾಜಕೀಯ ಮುಖಂಡರು ಅರಿತು ನಡೆದರೆ ಉತ್ತಮ ಇಲ್ಲವಾದಲ್ಲಿ ನೀವು ಮಾಕಾಡೆ ಮಲಗುವ ದಿನ ದೂರವಿಲ್ಲ ಎನ್ನುವುದು ಮರೆಯಬೇಡಿ.———

ಪ್ರಸ್ತುತ Read Post »

ಇತರೆ

ಲಹರಿ

ಆತ್ಮಸಾಕ್ಷಿಯಾಗಿ… ಸುರೇಶ ಎನ್ ಶಿಕಾರಿಪುರ. ಸತ್ತ ವ್ಯಕ್ತಿಯನ್ನು ಶ್ರೀಗಂಧ, ಒಣ ಕೊಬ್ಬರಿ, ತುಳಸಿಯನ್ನು ರಾಶಿ ಒಟ್ಟಿ, ಮೇಲೆ ತುಪ್ಪವ ಸುರಿದು ಸುಟ್ಟರೆ ಅದು ಕಡೆಯ ಪಕ್ಷ ಹೆಣದ ವಾಸನೆಯನ್ನು ಮರೆ ಮಾಚಬಹುದು ಇಲ್ಲವೇ ಸತ್ತ ವ್ಯಕ್ತಿಯ ಶ್ರೀಮಂತಿಕೆಯ ಪ್ರದರ್ಶನ ವಾಗಬಹುದು ಅಷ್ಟೆ. ಅದು ಗುಣದ ಮಾನದಂಡವಲ್ಲ. ಅದರಿಂದ ಮೃತ ವ್ಯಕ್ತಿಯ ಗುಣ ಮಾತ್ರ ಸುಡುವುದಿಲ್ಲ. ಅದು ಒಳ್ಳೆಯ ಗುಣವಾಗಿದ್ದರೂ ಕೆಟ್ಟ ಗುಣವಾಗಿದ್ದರೂ ಹುಟ್ಟು ಗುಣ ಸುಟ್ಟರೂ ಹೋಗುವುದಿಲ್ಲ… ಸದ್ಗುಣವಾಗಿದ್ದರೆ ಜನತೆಯ ನಾಲಗೆಯ ಮೇಲೆ ಸ್ತುತಿಯಾಗಿಯೂ ದುರ್ಗುಣವಾಗಿದ್ದರೆ ಅದೇ ಜನರ ನಾಲಗೆಯ ಮೇಲೆ ನಿಂದೆಯಾಗಿಯೂ ತಲೆಮಾರುಗಳು ಕಳೆದರೂ ಹಾಗೆಯೇ ಉಳಿಯುತ್ತದೆ‌. “ಉಂಡರೆ ಉಟ್ಟರೆ ಸೇರ ಮಂಡೆ ಬಾಚಿದರೆ ಸೇರ | ಕುಂತಲ್ಲಿ ಸೇರ ದುಸ್ಮಾನ | ಸತ್ತಾರೆ | ಉಂಡ್ಹೋಗಿ ಹೆಣವ ತಗುದೇವೊ||“ ಇದು ದುಷ್ಟರ ಸಾವಿಗೆ ಜನಪದ ಪ್ರತಿಕ್ರಿಯಿಸಿದ ರೀತಿ. ಬೂತಯ್ಯ ಸತ್ತಾಗ ಊರು ಪ್ರತಿಕ್ರಿಯಿಸಿದ ರೀತಿಯೂ ಹಾಗೇ. ಆದರೆ ಒಳ್ಳೆಯವರ ಸಾವನ್ನೂ ಪಟಾಕಿ ಹೊಡೆದು ಸಂಭ್ರಮಿಸುವ, ಕೇಕೆ ಹಾಕಿ ಕುಣಿಯುವ, ನಿಂದೆಗಳ ಮಳೆಗರೆದು ವಿಕೃತ ಆನಂದ ಅನುಭವಿಸುವ ವಿಕಾರಿಗಳೇ ತುಂಬಿರುವ ಅಸಹನೀಯ ವಾತಾವರಣದಲ್ಲಿ ನಾವೀಗ ಬದುಕುತ್ತಿದ್ದೇವೆ. ದುಷ್ಟರ ಸಾವು ನೋವು ಸಮಾಜದ ದೃಷ್ಟಿಯಲ್ಲಿ ಯಾವ ಸಹಾನುಭೂತಿಯನ್ನೂ ಗೌರವವನ್ನೂ ಪಡೆದುಕೊಳ್ಳುವುದಿಲ್ಲ. ಸಾವು ಸಾರ್ಥಕವಾಗಬೇಕಾದರೆ ಬದುಕು ಸಾರ್ಥಕವಾಗಿರಬೇಕು. ಆ ಸಾರ್ಥಕತೆ ನಮ್ಮಷ್ಟಕ್ಕೆ ನಮ್ಮದೇ ಆಗಿರದೆ ಅದು ನಾಲ್ಕು ಜನರೂ “ಸಾರ್ಥಕವಾಗಿ ಬದುಕಿದ್ನಪ್ಪ ಆ ಮನುಷ್ಯ ಪುಣ್ಯಾತ್ಮ” ಎನಿಸಿಕೊಳ್ಳುವಂತಿರಬೇಕು. ಅದಕ್ಕೇ ಯಾರೋ ಒಬ್ಬ ಕವಿ ಬರೆದುಬಿಟ್ಟ, “ಒಳಿತು ಮಾಡು ಮನುಸಾ… ನೀ ಇರೋದು ಮೂರು ದಿವಸ…” ಎಂದು. ನಾವು ಸರಳವಾಗಿ ಬದುಕಬೇಕು. ಕಪಟವಿಲ್ಲದ ನೆಡೆ ನುಡಿ ನೋಟ ಹೊಂದಿರಬೇಕು. ನನಗೆ ಸಾಲದೆಂದು ನನ್ನ ಮಕ್ಕಳಿಗೂ ಮೊಮ್ಮಕ್ಕಳಿಗೂ ಮರಿಮಕ್ಕಳಿಗೂ ಅವರ ಮರಿ ಮಕ್ಕಳಿಗೂ ಆಗುವಷ್ಟು ಕೂಡಿಡುವ ದುರಾಸೆ ಸಲ್ಲದು. ಸಂಪತ್ತು ಹೆಚ್ಚಿದಷ್ಟೂ ಮನುಷ್ಯ ನೆಮ್ಮದಿ ಕಳೆದುಕೊಳ್ಳುತ್ತಾ ಹೋಗುತ್ತಾನೆ ಮಾತ್ರವಲ್ಲ ಮನುಷ್ಯತ್ವವನ್ನೂ ಕಳೆದುಕೊಳ್ಳುತ್ತಾ ಹೋಗುತ್ತಾನೆ. ದರ್ಪ, ಅಹಂ, ಮದ, ಉದಾಸೀನತೆ, ಕ್ರೌರ್ಯ ಅವನಲ್ಲಿ ಮನೆ ಮಾಡುತ್ತಾ ಹೋಗುತ್ತದೆ‌. ಅವನೊಬ್ಬ ಶೋಷಕನೂ ನಾಶಕನೂ ಆಗಿ ಮಾರ್ಪಾಡಾಗುತ್ತಾನೆ‌. ಮಾನವ ದಾನವನಾಗುವ ಪರಿ ಇದು. ಇಂಥವರ ಸಾವು ನೊಂದವರ ಸಂಭ್ರಮವಾಗುತ್ತದೆ. ಸಾವು ಅರ್ಥಪೂರ್ಣವಾಗಬೇಕು ಸತ್ತ ಮೇಲೂ ಬದುಕಬೇಕು ಎಂದರೆ ನಾವು ಹಣವನ್ನು ಸಿರಿಯನ್ನು ಕೀರ್ತಿಯನ್ನು ಅಧಿಕಾರವನ್ನು ಮೋಹಿಸುವುದನ್ನು ಸ್ವಾರ್ಥವನ್ನು ಸ್ವಪ್ರತಿಷ್ಟೆಯನ್ನು ಬಿಡಬೇಕು. ಮನದ ಮುಂದಣ ಆಸೆಯೆಂಬ ಮಾಯೆ ನಮ್ಮನ್ನು ಎಂದೂ ಶಾಂತಿ ಮತ್ತು ನೆಮ್ಮದಿಯಿಂದ ಬದುಕಲು ಬಿಡದು. ಮನುಷ್ಯನಿಗೆ ಹಂಚಿ ತಿನ್ನುವ ಗುಣ ಇರಬೇಕೋ ಹೊರತು ಹೊಂಚಿ ಹೊಡೆದು ತಿನ್ನುವ ಗುಣ ಅಲ್ಲ. ಯಾವನು ಅಂತರಂಗವೂ ಬಹಿರಂಗವೂ ಶುದ್ಧನಾಗಿರುತ್ತಾನೋ ಅವನು ಜಗತ್ತಿನ ಯಾವ ಶ್ರೀಮಂತನಿಗೂ ಕೆಳಗಿನವನಲ್ಲ. ಗುಣಶ್ರೀಯೇ ಮನುಷ್ಯನ ಶ್ರೀಮಂತಿಕೆ. ಗುಣವನ್ನು ಹಣ ಕೊಟ್ಟು ಕೊಳ್ಳಲು ಆಗುವುದಿಲ್ಲ. ಅದು ನಮ್ಮೊಳಗೇ ಹುಟ್ಟಿ ಹರಿಯುವ ಅಮೃತವಾಹಿನಿ ಅದನ್ನು ಮನುಷ್ಯನಿಂದ ಮನುಷ್ಯನಿಗೆ ಹರಿಸಬೇಕು.. ಮಾನವತೆಯ ಬೀಜವನ್ನು ಬಿತ್ತಿ ಬೆಳೆಯಬೇಕು. ನಮ್ಮ ದೇಹ ಹೊರಟುಹೋಗುವ ಹಕ್ಕಿಯನ್ನು ಕೂಡಿಹಾಕಿಕೊಂಡಿರುವ ತೊಗಲು ಮಾಂಸ ಮೂಳೆಯ ಪಂಜರ. ಹಕ್ಕಿಯು ಒಂದಲ್ಲಾ ಒಂದು ದಿನ ಬಂಧನದಿಂದ ಮುಕ್ತವಾಗಿ ಹಾರಿ ಹೋಗುತ್ತದೆ. ಅಸ್ತಿತ್ವ ಕಳೆದುಕೊಂಡ ದೇಹವೆಂಬ ಪಂಜರ ಕೊಳೆಯಲು ಆರಂಭಿಸುತ್ತದೆ. ಇದು ಸಕಲ ಪ್ರಾಣಿ ಜಗತ್ತಿನ ಬಾಳಿನ ಅಂತಿಮ ಸತ್ಯ. ಆದರೆ ಮನುಷ್ಯನನ್ನು ಹೊರತು ಪಡಿಸಿ ಬೇರಾವ ಪ್ರಾಣಿಗಳೂ ಅಪ್ರಾಕೃತಿಕವಾಗಿ ಬದುಕಲಾರವು ಅವುಗಳ ವರ್ತನೆಯಲ್ಲಿ ನಮ್ಮ ಸಣ್ಣತನಗಳಿಲ್ಲ. ನಮ್ಮ ದುರಾಸೆಗಳಿಲ್ಲ, ನಮ್ಮ ಧರ್ಮ ಜಾತಿಯ ಕಿತ್ತಾಟಗಳಿಲ್ಲ‌. ನಾಳೆಗೆ ಕೂಡಿಸಿಟ್ಟುಕೊಳ್ಳಬೇಕೆಂಬ ಸ್ವಾರ್ಥ ದಾಹವಿಲ್ಲ. ಗುಣದಲ್ಲಿ ಅವೇ ಮೇಲು ನಾವೇ ಕೀಳು. ಸದಾ ಅತೃಪ್ತಿಯಲ್ಲೇ ಬದುಕುವಾತ ಎಂದೂ ಸುಖವಾಗಿರಲಾರ ಮತ್ತು ಆತ ಇತರರನ್ನೂ ಸುಖವಾಗಿರಲು ಬಿಡಲಾರ. ಯಯಾತಿಯ ದಾಹ ಯಯಾತಿಯನ್ನೇ ಬಲಿ ಪಡೆಯಿತು. ಕಂಡಕಂಡ ಹೆಣ್ಣುಗಳನ್ನೆಲ್ಲಾ ಭೋಗಿಸಿದ, ಚಿರ ಯೌವ್ವನಕ್ಕಾಗಿ ಹಪಹಪಿಸಿದ, ಅವನ ದುರಾಸೆ ಅವನ ಅತೃಪ್ತಿ ಅವನ ದಾಹಕ್ಕೆ ತೃಷೆಗೆ ಎಲ್ಲೆಯೇ ಇರಲಿಲ್ಲ. ಮನುಷ್ಯತ್ವ ಕಳೆದುಕೊಂಡ ಕಾಮದ ಪುತ್ಥಳಿಯಾಗಿದ್ದ. ತನ್ನ ತೆವಲು ತನ್ನ ಸುಖಕ್ಕಾಗಿ ನಿಸರ್ಗದ ಧರ್ಮದ ವಿರುದ್ಧವಾದ ಹಾದಿಯಲ್ಲಿ ಗೂಳಿ ದನದಂತೆ ನುಗ್ಗುತ್ತಿದ್ದ ಆತ; ಅಕಾಲಿಕ ಮುಪ್ಪಿನ ಶಾಪಕ್ಕೆ ಗುರಿಯಾದ. ಕಡೆಗೆ ಮಗನ ಯೌವ್ವನಕ್ಕೂ ಕನ್ನ ಹಾಕಿದ. ಎಲ್ಲವೂ ಆದಮೇಲೆ ಅವನಿಗೆ ಬದುಕಿನ ಅಂತಿಮ ಸತ್ಯದ ಅರಿವಾಯಿತು ದರ್ಶನವಾಯಿತು. ತಪ್ಪಿಗಾಗಿ ಪರಿತಪಿಸಿದ ಪಶ್ಚಾತ್ತಾಪಬಟ್ಟ. ಆದರೆ ಶಿಕ್ಷೆಯಿಂದ ಆತನಿಗೆ ಮುಕ್ತಿಯಿಲ್ಲ. ಬಂದ ಮುಪ್ಪನ್ನು ನಿರಾಕರಿಸಲು ತಪ್ಪಿಸಿಕೊಳ್ಳಲು ದಾರಿಗಳಿಲ್ಲವೆಂಬ ಜೀವನ ಸತ್ಯದ ಅರಿವಾದಾಗ ಎಲ್ಲವನ್ನೂ ಬಿಟ್ಟುಕೊಟ್ಟು ನಿರಾಳನಾದ ಆತ “ಮಹಾತ್ಮ” ಎನಿಸಿಕೊಂಡ. ‌ನಾವು ನಮ್ಮೊಳಗಿನ ಯಯಾತಿಯ ದಾಹವನ್ನು ಕೊಂದುಕೊಳ್ಳಬೇಕು. ಸನ್ಮಾರ್ಗದ ಆಯ್ಕೆಯೇ ನಮ್ಮನ್ನು ಸುಖವಾಗಿ ಸುಂದರವಾಗಿ ಇಡುವುದು. ಬಾಳು ಇರುವುದು ಸ್ವೀಕರಣೆಗೋ ಹೊರತು ನಿರಾಕರಣೆಗಲ್ಲ. ಎಲ್ಲರಿಂದಲೂ ಕಲ್ಲು ಹೊಡೆಸಿಕೊಳ್ಳುವ ಕಾಬಾದ ಶಿಲೆಯಾಗಿ ಬಾಳುವುದಕ್ಕಿಂತ ಎಲ್ಲರೂ ಮೆಚ್ಚವ ಮನುಷ್ಯನಾಗಿ ನಾಲ್ಕು ಕಾಲ ಬಾಳಿದರೆ ಸಾಕು.. **************************

ಲಹರಿ Read Post »

ಇತರೆ

ಪ್ರಸ್ತುತ

ಕ್ವಾರಂಟೈನ್ ರಜೆ ಯಲ್ಲಿ ಆತ್ಮಾವಲೋಕನ.. ವಿದ್ಯಾಶ್ರೀ. ಎಸ್.ಅಡೂರ್ ಹಿಂದೆಂದೂ ಕಂಡು, ಕೇಳಿ ಅರಿಯದ…..ಮುಂದೆಂದೂರ ಈ ರೀತಿಯೂ ಆಗಬಹುದೇ ಎಂದು ಖಾತ್ರಿಯೇ ಇಲ್ಲದಂತಹ ವಿದ್ಯಮಾನವೊಂದು ಜಗತ್ತಿನಾದ್ಯಂತ ತಾಂಡವವಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಹೌದು…ನಾನು ಕೊರೊನ ಬಗೆಗೆಯೇ ಹೇಳುತ್ತಿರುವುದು.         ಯಾರಿಗೆ ಪಥ್ಯವಾದರೂ…ಆಗದಿದ್ದರೂ…ಪ್ರಕೃತಿಯ ಮುಂದೆ ಹುಲುಮಾನವ ತೃಣಕ್ಕೆ ಸಮಾನವಾಗಿದ್ದಾನೆ.ಜಗತ್ತಿನ ದೊಡ್ಡಣ್ಣ ಎನ್ನಲಾಗುವ ಅಮೇರಿಕಾದಂತಹ ದೇಶವೇ ಸೋತು ಸುಣ್ಣವಾಗಿದೆ. ವೈಜ್ಞಾನಿಕವಾಗಿ,… ವೈಚಾರಿಕವಾಗಿ….ಯೋಚಿಸುವಾಗ ಅನೇಕ ತರ್ಕಬದ್ಧ ವಿಚಾರಗಳನ್ನು ಪುಟಗಟ್ಟಲೆ ಮಂಡಿಸಬಹುದು..ಚರ್ಚಿಸಬಹುದು. ನಾನು..ನೀನು ಎಂದು ಅನೇಕ ತಾಕಲಾಟ-ಮೇಲಾಟ ಗಳನ್ನು ಮಾಡಬಹುದು. ದೊಂಬಿ-ಗಲಾಟೆಗಳನ್ನು ಎಬ್ಬಿಸಬಹುದು.           ಆದರೆ ವೈಯಕ್ತಿಕವಾಗಿ ಕೂತು ಮೌನವಾಗಿ ಯೋಚಿಸಿದರೆ  ಮನುಷ್ಯನ ಅಲ್ಪತನದ ಅನಾವರಣವಾಗಿತ್ತ ಹೋಗುತ್ತದೆ. ದೊಡ್ಡ ದೊಡ್ಡ ವಿಚಾರಗಳ ಮಾತೇ ಬೇಡ;ನಮ್ಮ ನಿತ್ಯದ ಜೀವನದ ಮಗ್ಗಲುಗಳನ್ನು ವಿಮರ್ಶಿಸಿದಾಗಲೇ ನಮಗೆ ಅರಿವಾಗುತ್ತದೆ, “ನಮ್ಮ ನಿಜವಾದ ಅಗತ್ಯವೇನು??ಮತ್ತು ನಾವು ನಮಗೆ ಏನೆಲ್ಲಾ ಅಗತ್ಯ ಎಂದುಕೊಂಡಿದ್ದೇವೆ??”ಎಂದು.           ಈ ಕ್ವಾರಂಟೈನ್ ರಜೆಗಳಲ್ಲಿ ನಾನು ಅನೇಕ ಹಳೆ ಕಾಲದ  ತಿಂಡಿ ತಿನಿಸು ಗಳನ್ನು ಮಾಡಲು ಪ್ರಯತ್ನಿಸಿದೆ. ಚೆನ್ನಾಗಿ ಬಂತು ಕೂಡ. ಆದರೆ ದುರದೃಷ್ಟವಶಾತ್ ನಮ್ಮ ಮಕ್ಕಳಿಗೆಅವುಗಳ ಹೆಸರುಗಳೇ ಗೊತ್ತಿಲ್ಲ. ಆದರೆ  ಅದು  ಅವರ ತಪ್ಪಲ್ಲವೆಂದು ಸ್ಪಷ್ಟವಾಗಿ ನನಗೆ ಗೊತ್ತು.ಬಗೆ ಬಗೆಯ, ರುಚಿ ರುಚಿಯಾದ ತಿಂಡಿ ತಿನಿಸು ಗಳು ಮಾರ್ಕೆಟ್ ನಲ್ಲಿ ಹೋಗುವಾಗ,ಮಕ್ಕಳಿಗೂ ಮೋಹ ಆಚೆ ಕಡೆಗೆಯೇ ..ಜಾಸ್ತಿ. ನಮ್ಮಂತಹ ದೊಡ್ಡವರಿಗೂ ಸುಲಭವಾಗಿ ಕೆಲಸ ಆಗುತ್ತದಲ್ಲ ಎನ್ನುವ ಭಾವ. ಅದರಿಂದ ಆರೋಗ್ಯ ಹಾಳಾಗುತ್ತದೆ ಎಂದು ಗೊತ್ತಿದ್ದರೂ ದಿವ್ಯ ನಿರ್ಲಕ್ಷ್ಯವನ್ನು ತಳೆದುಬಿಡುತ್ತೇವಲ್ಲ. ಈ ರಜೆ ಗಳಲ್ಲಿ ಇದಕ್ಕೆ ಕಡಿವಾಣ ಬಿದ್ದಿದೆ ತಾನೇ….??        ಎಷ್ಟೋ ಜನ ನನ್ನ ಗೆಳೆಯ, ಗೆಳತಿಯರ ವಾಟ್ಸಾಪ್ ಸ್ಟೇಟಸ್ ಗಳಲ್ಲಿ ನಾನು ಅವರವರ ಮಕ್ಕಳು ಮಾಡಿದ ಅಡಿಗೆಯದ್ದಿರಬಹುದು,ರಂಗೋಲಿ-ಪೇಂಟಿಂಗ್ ಗಳದ್ದಿರಬಹುದು,ಅವರು ಆಡುವ ಆಟಗಳದ್ದಿರಬಹುದು,…ಫೋಟೋ-ವಿಡಿಯೋ ಗಳನ್ನು ಹೆಚ್ಚಾಗಿ ನೋಡುತ್ತಿದ್ದೇನೆ. ಇದನ್ನು ನೋಡಿದ ನಿಮಗೆ ಏನನ್ನಿಸುತ್ತದೆ?ಮಕ್ಕಳು ಮೊದಲು ಪೇಂಟಿಂಗ್..ರಂಗೋಲಿ ಗಳನ್ನು ಮಾಡದೆ, ಈಗ ಮಾತ್ರ ಮಾಡುತ್ತಿದ್ದಾರೆ ಎಂದೇ..?? ಮೊದಲು ಮಾಡುತ್ತಿದ್ದರೂ ಈಗ ಮಾಡುತ್ತಿರುವುದು ಮಾತ್ರ ರಜೆಯಲ್ಲಿ ಕೆಲಸವಿಲ್ಲದೆ ಖಾಲಿ ಕೂತ ಅಪ್ಪ-ಅಮ್ಮಂದಿರಿಗೆ ಕಾಣಿಸುತ್ತಿದೆ ಎಂದೇ..??ಅಲ್ಲ..ಎಲ್ಲರ ಹಾಗೆ ತಾನೂ ಏನಾದರೂ ಮಾಡಿ ಎಲ್ಲರ ಗಮನ ಸೆಳೆಯಬೇಕೆಂದು ಮಗು ಬಯಸುತ್ತಿದೆ ಎಂದೇ..?? ಯಾವ ರೀತಿಯಲ್ಲಿ ಅಳೆದು ತೂಗಿ ನೋಡಿದರೂ ಇದರಲ್ಲಿ ಎಳ್ಳಷ್ಟೂ ತಪ್ಪು ಕಾಣಿಸುತ್ತಿಲ್ಲವಲ್ಲ. ಈಗ …ಈ ರಜೆ ಗಳಲ್ಲಿ ಮಾತ್ರ ಮಕ್ಕಳು, ಈ ಎಲ್ಲಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆಂದರೆ…ಅವರು ಇಷ್ಟು ಸಮಯದ ತಮ್ಮ ಶೈಕ್ಷಣಿಕ “ಜೀತದಿಂದ”ಬಿಡುಗಡೆಹೊಂದಿ,ತಮ್ಮ ತನವನ್ನು ಅರಸುತ್ತಿದ್ದಾರೆಂದು ಅರ್ಥವಲ್ಲವೇ??? ಈ ಹಿಂದೆ ಶಾಲಾಸಮಯಗಳಲ್ಲಿ ಶಿಕ್ಷಕರ,ಪೋಷಕರ ಕಣ್ಣು ತಪ್ಪಿಸಿ ತಮ್ಮ ಇಷ್ಟ ವಿಷಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದು,ಈಗ ಈ ರಜೆ ಗಳಲ್ಲಿ ತಮ್ಮ ತಮ್ಮ ಪೋಷಕರ ಪ್ರೋತ್ಸಾಹದಿಂದ ಆ ಕಾರ್ಯ ಗಳಲ್ಲಿ ತೊಡಗಿಸಿಕೊಂಡಿದ್ದಾರಾದರೆ, ಆ ಮಕ್ಕಳ ಆತ್ಮಸ್ತೈರ್ಯ ಅದೆಷ್ಟು ಪಟ್ಟು ಹೆಚ್ಚಾಗಿರಬೇಡ??ಯೋಚಿಸಿ ನೋಡಿ.            ನಮ್ಮ ಕಾಲದ ಕುಂಟೆಬಿಲ್ಲೆ,ಲಗೋರಿ ಇತ್ಯಾದಿ ಆಟಗಳನ್ನೆಲ್ಲ ಮಕ್ಕಳಿಗೆ ಹೇಳಿಕೊಟ್ಟ,ಅವರು ಖುಷಿಯಿಂದ ಅವುಗಳನ್ನು ಆಡುವಾಗ ಅದೆಷ್ಟು ಪುಳಕಿತಳಾಗಿದ್ದೇನೆ. ಮುಸ್ಸಂಜೆಯ ವೇಳೆಯಲ್ಲಿ ಅವರನ್ನು ಕೈ-ಕಾಲು ತೊಳೆದು,ದೇವರ ಮುಂದೆ ಕೂರಿಸಿ,ಭಜನೆ-ಶ್ಲೋಕ ಗಳನ್ನು ಹೇಳಿಸುವಾಗ ಅದೆಷ್ಟು ಧನ್ಯತಾಭಾವ ಆವರಿಸುತ್ತದೆ. ಮಕ್ಕಳಿಗೆ ರಜಯಲ್ಲಿ ಪೇಟೆ ಸುತ್ತುವುದು,ಪ್ರವಾಸ ಕರೆದುಕೊಂಡು ಹೋಗುವುದು ಇತ್ಯಾದಿ ಯಾವುದೂ ಇಲ್ಲದೆ ತೋಟದಲ್ಲಿ ವಾಕಿಂಗ್ ಹೋಗಿ ಬರುವುದು , ಅಡಿಕೆ-ತೆಂಗಿನಕಾಯಿ ಹೆಕ್ಕಿ ತರುವುದು , ಗುಡ್ಡೆಗೆ ಹೋಗಿ ಗೇರುಹಣ್ಣು ಕೊಯ್ಯುವುದು ಇತ್ಯಾದಿ ಸಣ್ಣ ಸಣ್ಣ ಚಟುವಟಿಕೆಗಳನ್ನು ಮಾಡುವುದರಿಂದ ದೈಹಿಕ ವ್ಯಾಯಾಮ ದೊಂದಿಗೆ ಹಳ್ಳಿ ಜೀವನದ ಕಿರುಪರಿಚಯ ಮಾಡಿ ಕೊಟ್ಟಂತೆ ಆಗುವುದಿಲ್ಲವೇ? ಈ ತರಹದ ಬೇಸತ್ತು ಹೋಗುವ ದೀರ್ಘ ರಜೆಗಳಿಲ್ಲದೇ ಹೋಗಿದ್ದರೆ ಮಕ್ಕಳಿಂದ ಇದನ್ನೆಲ್ಲ ಮಾಡಿಸಲು ಸಾಧ್ಯವಿತ್ತೇ..            ಅಂದಾಜು ಮೂವತ್ತರಿಂದ ಮೂವತ್ತೈದು ವರ್ಷಗಳನ್ನು ಹಳೆಯ ರಾಮಾಯಣ, ಮಹಾಭಾರತದ ಬಗೆಗಿನ ಟಿವಿ ಧಾರಾವಾಹಿ ಗಳ ಮರುಪ್ರಸಾರದ ಒಂದು ಎಪಿಸೋಡು ಗಳನ್ನೂ ತಪ್ಪಿಸದೇ ಅತ್ಯಂತ ಆಸಕ್ತಿಯಿಂದ ನಮ್ಮ ಮಕ್ಕಳು ನೋಡುವ ಹಾಗೆ ಮಾಡಿದ ಈ ಕ್ವಾರಂಟೈನ್ ರಜೆಗೆ ಅದ್ಹೇಗೆ ಧನ್ಯವಾದ ಹೇಳಲಿ. ಟಿವಿ ಯಲ್ಲಿ ಬರುವ ಹಾಳು ಮೂಳು ಧಾರಾವಾಹಿ, ರಿಯಾಲಿಟಿ ಷೋ ಗಳನ್ನು ಕಣ್ಣು ಎವೆಯಿಕ್ಕದೆ ನೋಡುವ ನಮ್ಮ ಮಕ್ಕಳು, ಅಷ್ಟೇ ಶ್ರದ್ಧೆಯಿಂದ ರಾಮಾಯಣ, ಮಹಾಭಾರತವನ್ನೂ ನೋಡುತ್ತಾರೆಂದರೆ ಇದರ ಅರ್ಥ ಏನು?? ನಾವು ಆದರ್ಶವಂದು ಬೋಧಿಸುವ ವಿಚಾರಗಳಲ್ಲೇ ದೋಷವಿದೆ ಎಂದಲ್ಲ?? ಒಳ್ಳೆಯ ವಿಚಾರಗಳು ನಮಗ್ಯಾರಿಗೂ ಬೇಡವಾಗಿದೆ ಎಂದಲ್ಲವೇ ?? ನೈತಿಕತೆಯ ವ್ಯಾಖ್ಯಾನ ವೇ ಬದಲಾಗಿದೆ ಎಂದಲ್ಲವೇ?? ಸುಮ್ಮನೆ ನಮ್ಮ ಮಕ್ಕಳನ್ನು ದೂರಿ ಪ್ರಯೋಜನವಿಲ್ಲ. ದುಡ್ಡು ಮಾಡುವ ದಂಧೆಕೋರರ ನಡುವೆ ಅವರ ಬಾಲ್ಯ ಮಾರಾಟವಾಗುತ್ತಿದೆ ,ಅಷ್ಟೇ .. ಇದನ್ನೆಲ್ಲ ಅರಿತುಕೊಳ್ಳಲು ಇದಕ್ಕಿಂತ ಒಳ್ಳೆಯ ಸುವರ್ಣ ಅವಕಾಶ ಬೇರೆ ಸಿಕ್ಕೀತೇ??        ನಮ್ಮ ಬಾಲ್ಯದಲ್ಲಿ ಮತ್ತು ತೀರ ಇತ್ತೀಚಿನ ವರೆಗೂ ಊರು ಬಿಟ್ಟು ಪೇಟೆ-ಪಟ್ಟಣ ಗಳಲ್ಲಿ ವಾಸಿಸುವ,ದೇಶ ಬಿಟ್ಟು  ವಿದೇಶದಲ್ಲಿರುವವರು, ಉದ್ಯೋಗ ನಿಮಿತ್ತವೇ ಹೋಗಿದ್ದರೂ ಅಪರೂಪಕ್ಕೊಮ್ಮೆ ಊರಿಗೆ ಮರಳುವಾಗ ಅವರಿಗೆ ಸಿಗುವ ಮರ್ಯಾದೆ ನೋಡಿದರೆ, ಊರಿನ ದೇವರ  ಜಾತ್ರೆ ಸುರುವಾಗಿದೆಯೇನೋ ಎಂದೆನಿಸುತ್ತದೆ.ಅಂತಹವರಲ್ಲಿ ಅನೇಕರು ಇಂದು ಪೇಟೆ-ಪಟ್ಟಣಗಳೆಂಬ ಕಾಂಕ್ರೀಟ್ ಕಾಡಿನಲ್ಲಿ,ಒಂಟೊಂಟಿ ಮನೆಗಳಲ್ಲಿ, ಬಾಗಿಲು ಜಡಿದು ಅಕ್ಷರಷಃ ಬಂಧಿಗಳಂತಾಗಿರುವ ಈ ಸಮಯದಲ್ಲಿ ತೋಟ,ಗುಡ್ಡ, ಹಸು,ಕರು ಇತ್ಯಾದಿ ವಿಶಾಲ ವ್ಯಾಪ್ತಿ ಯಲ್ಲಿರುವ ನಮ್ಮ ಹಳ್ಳಿಗರು ಅದೆಷ್ಟು ಧನ್ಯರು ಎಂದೆನಿಸದೇ ಇದ್ದರೆ ಖಂಡಿತ ಆತವಂಚನೆಯಾಗುತ್ತದೆ          ಆದರೂ ಕೂಳ್ಳುಬಾಕತನದಿಂದ ಹಳ್ಳಿಗರೂ ಹೊರಗುಳಿದಿಲ್ಲ. ಯಾವುದು ಬೇಕು, ಯಾವುದು ಬೇಡ ಎಂದು ಕಿಂಚಿತ್ತೂ ಯೋಚಿಸದೆ ಸ್ಪರ್ಧೆಗೆ ಬಿದ್ದಂತೆ ಕೊಂಡು ತಂದು ಮನೆಯಲ್ಲಿ ರಾಶಿ ಹಾಕಿದ ಯಾವುದೇ  ನಿರ್ಜೀವ ವಸ್ತುಗಳಿಗೂ ಬೆಲೆಯೇ ಇಲ್ಲ ಎಂದು ಕೊರೊನ ಹೇಳಿ ಕೊಟ್ಟಿದೆ. ತೋಟಕ್ಕೆ,ಹಟ್ಟಿಗೆ ಹೋಗುವಾಗ ಬಳಸುವ ಸ್ಲಿಪ್ಪರ್ ಒಂದನ್ನು ಬಿಟ್ಟು, ಆಸೆಬುರುಕುತನದಿಂದ ಕೊಂಡು ರಾಶಿ ಹಾಕಿದ ಎಂಟ್ಹತ್ತು ಜತೆ ಚಪ್ಪಲಿ ಗಳು ಉಪಯೋಗಕ್ಕೇ ಬರುತ್ತಿಲ್ಲ. ಮನೆಯಲ್ಲಿ ದಿನವೂ ಧರಿಸುವ ಉಡುಪುಗಳನ್ನು ಬಿಟ್ಟು ಕಪಾಟುಗಳಲ್ಲಿ ಪೇರಿಸಿಟ್ಟ ಬಣ್ಣ ಬಣ್ಣದ, ಬಗೆ ಬಗೆಯ ರಾಶಿ ರಾಶಿ ಉಡುಪುಗಳಿಗೆ ಕೆಲಸವೇ ಇಲ್ಲವಾಗಿದೆ.          ಕಾಂಕ್ರೀಟು ಹಾಕಿ ಹಾಕಿ ಕಟ್ಟಿದ ಬಿಲ್ಡಿಂಗ್ ಗಳಾಗಲೀ…ಅಪಾರ ಸಂಖ್ಯೆಯಲ್ಲಿ ಮರಗಳ ಮಾರಣಹೋಮ ಮಾಡಿ ರಚಿಸಿದ ರಸ್ತೆಗಳಾಗಲೀ…ಇವತ್ತು ನಮ್ಮ ಉಪಯೋಗಕ್ಕೆ ಬರುತ್ತಿಲ್ಲ. ಉಪಯೋಗಕ್ಕೆ ಬರುತ್ತಿರುವುದೇನಿದ್ದರೂ, ಮಣ್ಣಿನಲ್ಲಿ ಬೆಳೆದ ಹಣ್ಣು, ತರಕಾರಿ, ದವಸ,ಧಾನ್ಯ ಮಾತ್ರ.ಹಾಗಾದರೆ ನಮಗೆ ನಿಜವಾಗಿಯೂ ಏನು ಬೇಕು, ಏನು ಬೇಡ ಎಂದು ಯೋಚಿಸುವುದರಲ್ಲಿ ನಾವು ಸೋತಿದ್ದೇವೆ ಎಂದರ್ಥವಲ್ಲವೇ??          ಈ ಕೊರೊನ ರಜೆ ಯೋಚಿಸಲು ನಮಗೊಂದು ಉತ್ತಮ ಸಮಯಾವಕಾಶ ವನ್ನು ಕೊಟ್ಟಿದೆ. ಹಿಂದಿನ ತಪ್ಪುಗಳನ್ನು  ಸರಿಪಡಿಸಿ, ಬಲಹೀನರನ್ನು ಎತ್ತಿ ಎಬ್ಬಿಸಿ ಹೆಗಲು ಕೊಡುವುದಕ್ಕಾಗಿ ಒಳ್ಳೆಯ ಅವಕಾಶ ವನ್ನು ಒದಗಿಸಿದೆ. ನಮ್ಮ ಮುಂದಿನ ಪೀಳಿಗೆಗೆ ನಿಜಕ್ಕೂ ನಾವು ಮಾಡಬೇಕಾದ ದ್ದೇನು ಎಂದು ಯೋಚಿಸಿ ಕಾರ್ಯಗತಗೊಳಿಸುವ ಮೈದಾನ ವನ್ನು  ಒದಗಿಸಿದೆ. ನಾಡು,ಅಥವಾ ದೇಶ ಕಾಯಲು ಸೈನಿಕನಾಗಿ ಗಡಿಗೇ ಹೋಗಬೇಕಿಲ್ಲ, ನಮ್ಮ ನಮ್ಮ ಮಿತಿಯನ್ನರಿತು ವ್ಯಾಪ್ತಿಯನ್ನು ಬಳಸಿ ಪರೋಪಕಾರಾರ್ಥಂ ಇದಂ ಶರೀರಂ ಎಂಬಂತೆ ಬದುಕಿ “ಅನನ್ಯ”ರಾಗಬಹುದೆಂಬ ಬಹುದೊಡ್ಡ ಪಾಠವನ್ನೇ ಕಲಿಸಿದೆ.

ಪ್ರಸ್ತುತ Read Post »

ಇತರೆ

ಪ್ರಸ್ತುತ

ಮರುವಲಸೆಯ ಮಹಾಪರ್ವಕ್ಕೆ ಪರಿಹಾರ ಯಾರೂ ಊಹಿಸಿರದ ಪ್ರಮಾಣದಲ್ಲಿ ಕಾರ್ಮಿಕರ ಮರುವಲಸೆ ಪ್ರಾರಂಭವಾಗಿದೆ. ತಮ್ಮ ಊರಿನಲ್ಲಿ ದುಡಿಮೆಯ ಅವಕಾಶವಿಲ್ಲದೆ ನಗರಗಳಿಗೆ ಉದ್ಯೋಗ ಹುಡುಕಿಕೊಂಡು ವಲಸೆ ಬಂದವರು ಕೊರೊನಾ ಲಾಕ್ಡೌನ್ನಿಂದಾಗಿ ಕಂಗಾಲಾಗಿದ್ದಾರೆ. ಪೂರ್ವಾಪರ ಯೋಚಿಸದೆ, ಶತ್ರು ದೇಶದ ಮೇಲೆ ದಾಳಿ ಮಾಡುವ ರೀತಿಯಲ್ಲಿ ದಿಢೀರ್ ಎಂದು ಘೋಷಣೆಯಾದ ಲಾಕ್-ಡೌನ್ ಹಿನ್ನೆಲೆಯಲ್ಲಿ ಕಾರ್ಮಿಕರು ತಮ್ಮ ಊರುಗಳಿಗೆ ನೂರಾರು ಕಿಲೋ ಮೀಟರ್ ನಡೆದುಕೊಂಡೇ ಹೊರಟರು. ಕೊರೊನಾ ಭಯಕ್ಕಿಂತ ಹಸಿವಿನ ಭಯ ಅವರನ್ನು ಕಾಡುತ್ತಿತ್ತು. ಪೋಲೀಸರ ಲಾಠಿಗೆ ಹೆದರಿ, ನಗರ ತೊರೆಯಲಾರದವರು ಈಗ ಅವಕಾಶ ಸಿಕ್ಕೊಡನೆ ತಮ್ಮ ಊರುಗಳಿಗೆ ಧಾವಿಸುತ್ತಿದ್ದಾರೆ. ಈ ಮರುವಲಸೆ ಕೇವಲ ದೈಹಿಕ ಶ್ರಮಿಕರಿಗೆ ಮಾತ್ರ ಸೀಮಿತವಾಗಿಲ್ಲ ಅಥವಾ ದೇಶದ ನಗರಗಳಿಂದ ಮಾತ್ರ ನಡೆದಿಲ್ಲ. ಪ್ರತಿಯೊಂದು ರಾಜ್ಯದಿಂದಲೂ ಜನರು ಇತರೆಡೆಗೆ ವಲಸೆ ಹೋಗಿದ್ದಾರಾದರೂ ಉತ್ತರ ಭಾರತದಿಂದ ದೈಹಿಕ ಶ್ರಮಿಕರು ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಹೋಗಿರುವದು ನಿಚ್ಚಳವಾಗಿ ಕಾಣುತ್ತಿದೆ. ದೇಶದೊಳಗಡೆ ಮಾತ್ರವಲ್ಲ, ಇತರ ದೇಶಗಳಿಗೂ ದೈಹಿಕ ಶ್ರಮಿಕರು ವಲಸೆ ಹೋಗಿದ್ದು, ಅವರಲ್ಲಿ ಹೆಚ್ಚಿನವರು ವಾಪಸು ಬರುವುದು ನಿಶ್ಚಿತ. ಆರ್ಥಿಕ ಹಿಂಜರಿತ ಇಡೀ ಜಗತ್ತನ್ನು ಕಾಡುತ್ತಿದೆ. ಎಲ್ಲೆಡೆ ಉದ್ಯೋಗ ಕಡಿತ ಪ್ರಾರಂಭವಾಗಿದೆ. ಪ್ರತಿಯೊಂದು ದೇಶವೂ ತನ್ನ ನಾಗರಿಕರ ಉದ್ಯೋಗಾವಕಾಶ ರಕ್ಷಣೆಗೆ ಮುಂದಾಗುತ್ತಿದೆ. ಇದರ ಪರಿಣಾಮದಿಂದಾಗಿ ಉದ್ಯೋಗಕ್ಕಾಗಿ ಹೊರದೇಶಗಳಿಗೆ ಹೋಗಿರುವವರಲ್ಲಿ ಹಲವರು ಉದ್ಯೋಗ ಕಳೆದುಕೊಂಡು ತಮ್ಮ ದೇಶಗಳಿಗೆ ಹಿಂದಿರುಗಬೇಕಾಗಿದೆ. ಇವರಲ್ಲಿ ದೈಹಿಕ ಶ್ರಮಿಕರು ಹಾಗೂ ಬೌದ್ಧಿಕ ಶ್ರಮಿಕರು ( ತಂತ್ರಜ್ಞರು, ಇಂಜಿನಿಯರ್, ವೈದ್ಯರು ಇತ್ಯಾದಿ) ಸೇರಿದ್ದಾರೆ. ಮರುವಲಸೆ ಕೇವಲ ಭಾರತದಲ್ಲಿ ಮಾತ್ರವಲ್ಲ, ಎಲ್ಲಾ ದೇಶಗಳಲ್ಲೂ ನಡೆಯಲಿದೆ. ಆದರೆ ಮರುವಲಸಿಗರಲ್ಲಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಯಾಕೆಂದರೆ ಜಗತ್ತಿನ ಬಹುತೇಕ ಎಲ್ಲಾ ದೇಶಗಳಿಗೂ ಉದ್ಯೋಗ ಹುಡುಕಿಕೊಂಡು ಭಾರತೀಯರು ಹೋಗಿದ್ದಾರೆ. ತಾವು ವಾಸಿಸುವ ಪ್ರದೇಶದಲ್ಲಿ ದುಡಿಮೆಯ ಅವಕಾಶ ಇಲ್ಲದ ಕಾರಣಕ್ಕೆ ಬೇರೆಡೆ ವಲಸೆ ಹೋದವರು, ತಮ್ಮ ದೇಶ ಅಥವಾ ಊರಿಗೆ ವಾಪಸು ಬಂದೊಡನೆ ಅವರಿಗೆ ಉದ್ಯೋಗವಕಾಶ ಸಿಗಲು ಸಾಧ್ಯವೇ? ಕೃಷಿ ಭೂಮಿ ಉಳ್ಳವರು ಬೇಸಾಯ ಪ್ರಾರಂಭಿಸುವ ಕುರಿತು ಚಿಂತನೆ ನಡೆಸಬಹುದು. ಕೆಲವರು ಚಿಕ್ಕ ಪುಟ್ಟ ವ್ಯವಹಾರ , ಚಿಲ್ಲರೆ ಮಾರಾಟ ಮಳಿಗೆ ತೆಗೆಯಬಹುದು. ಆದರೆ ಹೆಚ್ಚಿನವರಿಗೆ ಯಾವುದೇ ದುಡಿಮೆಯ ಅವಕಾಶ ಸಿಗಲಾರದು. ಆಧಾರ ರಹಿತ, ಅವೈಚಾರಿಕ,ಅತಾರ್ಕಿಕ ಮಾಹಿತಿ ಸೃಷ್ಟಿಸಿ, ಮಾಧ್ಯಮಗಳ ಮೂಲಕ ಬಿತ್ತರಿಸುತ್ತಿರುವ ಕೊರೊನಾ ಜೀವ ಭಯದಿಂದ ಬೆದರಿರುವ ಜನರು ಪೋಲೀಸರ ಲಾಠಿ ಏಟಿಗೆ ಹೆದರಿ ಲಾಕ್-ಡೌನ್ ಪಾಲಿಸುತ್ತಿದ್ದಾರೆ. ಲಾಕ್ಡೌನ್ ಸಡಿಲಿಕೆಯ ನಂತರ ಆರ್ಥಿಕ ವ್ಯವಹಾರಗಳು ಸಾಮಾನ್ಯ ಸ್ಥಿತಿಗೆ ಬರಲು ವರ್ಷಗಳೇ ತಗಲಬಹುದು. ನಗರಗಳಲ್ಲಿರುವ ಉದ್ಯೋಗದಾತರು ಕರೆದರೂ, ಅಲ್ಲಿಂದ ವಾಪಸ್ಸು ಬಂದವರು ಪುನಃ ಹೋಗುವ ಧೈರ್ಯ ಮಾಡಲಾರರು. ಯಾಕೆಂದರೆ ಮತ್ತೆ ಪುನಃ ಏಕಾಏಕಿಯಾಗಿ ಲಾಕ್ಡೌನ್ ಹೇರಿಯಾರೆಂಬ ಭಯ ಅವರನ್ನು ಕಾಡುತ್ತಿದೆ. ತಮ್ಮನ್ನು ಯಾವ ರೀತಿಯಲ್ಲಿ ಉದ್ಯಮಿಗಳು ಬಳಸಿ ಬಿಸಾಡುತ್ತಾರೆಂಬುದನ್ನು ಲಾಕ್ಡೌನ್ ಅವಧಿಯ ನರಕಯಾತನೆಯಿಂದ ಕಾರ್ಮಿಕರು ಅರಿತಿದ್ದಾರೆ. ಇನ್ನೊಂದೆಡೆ ಆದಾಯದ ಕೊರತೆ ಅನುಭವಿಸುತ್ತಿರುವ ಮಧ್ಯಮ ವರ್ಗ, ಖರೀದಿ ಶಕ್ತಿಯಿಲ್ಲದ ಬಡವರಿಂದಾಗಿ ಉದ್ಯಮಗಳ ಉತ್ಪನ್ನಗಳು ಮಾರಾಟವಾಗದೇ ಅವು ಹಿನ್ನೆಡೆ ಅನುಭವಿಸುತ್ತಿವೆ. ಇದರಿಂದಾಗಿ ಮೊದಲಿನಂತೆ ಪೂರ್ತಿ ಸಂಖ್ಯೆಯಲ್ಲಿ ಕಾರ್ಮಿಕರನ್ನು ನಿಯೋಜಿಸಿಕೊಳ್ಳುವ ಅಗತ್ಯವೂ ಅವರಿಗಿಲ್ಲ. ಒಂದೆಡೆ ನಗರ ಕೇಂದ್ರಿತ ಉದ್ದಿಮೆಗಳು, ಕಾರ್ಮಿಕರ ಅಭಾವ ಎದುರಿಸುವ, ಮರುವಲಸೆ ಹೋಗಿರುವ ಕಾರ್ಮಿಕರು ತಮ್ಮ ಊರುಗಳಲ್ಲಿ ನಿರುದ್ಯೋಗ ಪೀಡಿತರಾಗಿರುವ ವಿಷಮ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ನಿಭಾಯಿಸುವ ಯಾವ ಯೋಚನೆ ಅಥವಾ ಯೋಜನೆ ಯಾವ ರಾಜಕೀಯ ಪಕ್ಷದ ಬಳಿಯೂ ಇಲ್ಲ. ಈ ಸಮಸ್ಯೆಯ ಸರಳ ಪರಿಹಾರವೆಂದರೆ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ, ಜನರ ಸಹಭಾಗಿತ್ವದಿಂದ ಕೈಗೊಳ್ಳಬೇಕಾದ ಅಭಿವೃದ್ಧಿ ಯೋಜನೆಗಳು ಅರ್ಥಾತ್ ಜನಾಧಿಕಾರ ವ್ಯವಸ್ಥೆಯ ಅನುಷ್ಠಾನ. ಉದ್ದಿಮೆಗಳು ಕೇಂದ್ರೀಕೃತವಾಗಿ ಸ್ಥಾಪಿತವಾಗಲು ಮೂಲ ಕಾರಣ ಬಂಡವಾಳವಾದಿ ಚಿಂತನೆಗಳು. ಲಾಭಗಳಿಕೆಯ ಹೆಚ್ಚಳದ ತವಕದಲ್ಲಿ ಸ್ಥಳೀಯ ಸಂಪನ್ಮೂಲಗಳ ಕುರಿತಾದ ನಿರ್ಲಕ್ಷ್ಯ , ಸಂಪನ್ಮೂಲಗಳ ದುರ್ಬಳಕೆ, ಕೇಂದ್ರಿಕೃತ ಉತ್ಪಾದನೆಯಿಂದ ವೆಚ್ಚ ತಗ್ಗಿಸುವ ದಿಸೆಯಲ್ಲಿ ನಡೆಯುತ್ತಿರುವ ಉದ್ಯಮಿಗಳ ನಡೆಯನ್ನೂ ಬೆಂಬಲಿಸುವ ಸರ್ಕಾರದ ಆರ್ಥಿಕ ನೀತಿಗಳೇ ನಗರಾಭಿಮುಖಿ ವಲಸೆಗೆ ಕಾರಣ. ಪೃಥ್ವಿಯ ಎಲ್ಲೆಡೆಗೂ ಸಂಪನ್ಮೂಲಗಳು ಇಲ್ಲವೆಂಬ ಬಂಡವಾಳವಾದಿ ಚಿಂತನೆಗೆ, ಸಂಪನ್ಮೂಲಗಳ ಕುರಿತಾದ ಸೀಮಿತ ಚಿಂತನೆಯೇ ಕಾರಣ. ಪೃಥ್ವಿಯ ಎಲ್ಲಾ ಭಾಗಗಳಲ್ಲಿಯೂ ಪ್ರಕೃತಿ ಒಂದಿಲ್ಲೊಂದು ವಿಧದ ಸಂಪನ್ಮೂಲಗಳನ್ನು ನೀಡಿದೆ. ಹಾಗೆ ಅದನ್ನು ಗುರ್ತಿಸಿ, ಬಳಸುವ ಬುದ್ಧಿಶಕ್ತಿಯನ್ನು ಮಾನವನಿಗೂ ನೀಡಿದೆ. ತಾಯಿಯಲ್ಲಿ ಎದೆ ಹಾಲು ಸೃಷ್ಟಿ ಮಾಡಿ, ಭೂಮಿಗೆ ಬರುವ ಮುನ್ನವೇ ಮಗುವಿನ ಕುರಿತಾಗಿ ಪ್ರಕೃತಿ ಕಾಳಜಿ ತೋರುತ್ತದೆ. ಅಂದರೆ ಯಾವುದೇ ಪ್ರದೇಶದಲ್ಲಿ ಜನವಸತಿ ಇದೆಯೆಂದಾದರೆ ಅವರ ಬದುಕಿಗೆ ಬೇಕಾಗುವಷ್ಟು ಸಂಪನ್ಮೂಲಗಳು ಆ ಪ್ರದೇಶದಲ್ಲಿ ಇದೆಯೆಂದೇ ಅರ್ಥ. ಸ್ಥಳೀಯ ಸಂಪನ್ಮೂಲಗಳ ಲಭ್ಯತೆಯನ್ನು ಆಧರಿಸಿ, ಜನರಸಹಭಾಗಿತ್ವದೊಂದಿಗೆ ,ಆ ಪ್ರದೇಶದಲ್ಲಿ ವಾಸಿಸುವ ಹೆಚ್ಚಿನ ಜನರಿಗೆ ದುಡಿಮೆಯ ಅವಕಾಶ ಸೃಷ್ಟಿಸುವ ರೀತಿಯಲ್ಲಿ ಆರ್ಥಿಕ ಚಟುವಟಿಕೆಗಳನ್ನು ( ಕೃಷಿ, ಉದ್ದಿಮೆ, ವ್ಯಾಪಾರ, ಸೇವೆ ಇತ್ಯಾದಿ) ನಡೆಸುವ ಯೋಜನೆಗಳು ರೂಪುಗೊಳ್ಳಬೇಕು. ಬ್ಲಾಕ್ ಮಟ್ಟದಲ್ಲಿ ಅಂದರೆ ತಳಮಟ್ಟದಲ್ಲಿ ಯೋಜನೆಗಳು ರೂಪಿತವಾಗಿ, ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಕ್ರೋಢೀಕೃತಗೊಳ್ಳಬೇಕು. ಮೇಲಿನಿಂದ ಕೆಳಗೆ ಹರಿದು ಬರುವ ಯೋಜನೆಗಳು ನಿಷ್ಪ್ರಯೋಜಕ. ಇಂದು ಅನುಸರಿಸುತ್ತಿರುವ ಕೇಂದ್ರೀಕೃತ ಅರ್ಥವ್ಯವಸ್ಥೆಯ ಬದಲಿಗೆ ವಿಕೇಂದ್ರೀಕೃತ ಆರ್ಥಿಕ ವ್ಯವಸ್ಥೆಯನ್ನು ಅನುಷ್ಟಾನಗೊಲಿಸಬೇಕು ಅಂದರೆ ಜನಾಧಿಕಾರದ ವ್ಯವಸ್ಥೆಯಿಂದ ಹೊಸ ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕ ಪ್ರಗತಿ ಸುಲಭ ಸಾಧ್ಯ. ಹೊರ ದೇಶಗಳ ಹೂಡಿಕೆದಾರರಿಂದ ಅಥವಾ ಬೇರೆ ದೇಶಗಳನ್ನ ಬಿಟ್ಟು ಬರುತ್ತಿರುವ ಕಂಪನಿಗಳಿಂದ ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆಂಬ ಭ್ರಮೆಯಲ್ಲೇ ಇದ್ದರೆ, ಮರು ವಲಸೆಯ ಪರಿಣಾಮದಿಂದಾಗಿ ಉಂಟಾಗುವ ನಿರುದ್ಯೋಗ, ಕಳ್ಳತನ, ದರೋಡೆ, ಹಿಂಸಾಚಾರ, ಸಾಮಾಜಿಕ ಸಂಘರ್ಷಗಳನ್ನು ಎದುರಿಸುವುದು ಅನಿವಾರ್ಯ. ********* ಗಣೇಶ ಭಟ್ಟ ಶಿರಸಿ

ಪ್ರಸ್ತುತ Read Post »

ಇತರೆ

ಟಂಕಾ

ಟಂಕಾ ತೇಜಾವತಿ.ಹೆಚ್.ಡಿ.   ಟಂಕಾ ಇದು ಪರ್ಷಿಯನ್ ಸಾಹಿತ್ಯ ಪ್ರಕಾರ. ಇದನ್ನು ಕನ್ನಡಕ್ಕೆ ಉತ್ತರ ಕರ್ನಾಟಕದಲ್ಲಿ ಪ್ರಚಾರಕ್ಕೆ ತಂದು ಹಲವಾರು ಕವಿಗಳು ಇದರಲ್ಲಿ ಕೃಷಿ ಕೈಗೊಂಡ ಈ ಪ್ರಕಾರಕ್ಕೆ ಮಾನ್ಯತೆ ಕೊಟ್ಟು ಬರೆಯುತ್ತಿದ್ದಾರೆ. ಇದು ಹೈದರಾಬಾದ್ ಕರ್ನಾಟಕದಲ್ಲೂ ಈ ಪ್ರಕಾರ ಚಾಲ್ತಿಯಲ್ಲಿದೆ. ನಿಯಮಗಳು:- ಇದು ಐದು ಸಾಲುಗಳ ಒಂದು ಸಾಹಿತ್ಯದ ಪ್ರಕಾರ. 1 ಮತ್ತು 3 ನೇ ಸಾಲುಗಳು ಐದೈದು ಅಕ್ಷರಗಳನ್ನು ಹೊಂದಿರಬೇಕು. 2,4,5  ನೇ ಸಾಲುಗಳಲ್ಲಿ ಏಳೇಳು ಅಕ್ಷರಗಳನ್ನು ಹೊಂದಿರಬೇಕು. ಇದು ಒಟ್ಟು 31 ಅಕ್ಷರ ಜೋಡಣೆಯ ಛಂದಸ್ಸಿನ ಗುಚ್ಛ ಇಲ್ಲಿ ಅಕ್ಷರಗಳ ಲೆಕ್ಕ ಗಣನೆಗೆ ಬರುತ್ತದೆ ಟಂಕಾ-01 ನಿನ್ನ ಹೃದಯ ನನ್ನರಮನೆಯಾಗಿ ಅಧಿಪತ್ಯವ ಕೈಸೆರೆ ಹಿಡಿದಿದೆ ಕೈಜಾರಿ ಬೀಳದಂತೆ!! ಟಂಕಾ-02 ಹಸಿರಾಗಿದೆ ತ್ರಾಣ ಹೃದಯದಲ್ಲಿ ನಿನ್ನೊಲುಮೆಯ ಧಾರೆಯಲ್ಲಿ ಮಿಂದಿದೆ ಹಸಿರಿನ ಉಸಿರು ! ಟಂಕಾ-03 ಟಂಕಾ ಕಲಿಕೆ ಹೊಸತನದ ಅಲೆ ಕವಿಯ ಭಾವ ಬರಹಗಳೆಲ್ಲವೂ ನಿನ್ನ ಅಲಂಕಾರವೇ!! ಟಂಕಾ -04 ವರ್ಷಸಿಂಚನ ಧರೆಯಾಗಸ ಮಿಂದು ಹೃದಯ ರಾಗ ಒಲವ ಕಾತುರತೆ ಹನಿಗಳಲ್ಲಿ ಲೀನ !!

ಟಂಕಾ Read Post »

ಇತರೆ

ಅನಿಸಿಕೆ

ಬರೆಯುವ ಕಷ್ಟ ಮತ್ತು ಬರೆಯದೇ ಇರುವ ಕಷ್ಟ ರಾಮಸ್ವಾಮಿ ಡಿ.ಎಸ್. ಬರೆಯುವ ಕಷ್ಟ ಮತ್ತು ಬರೆಯದೇ ಇರುವ ಕಷ್ಟ . . . . ‘ನಾನೇಕೆ ಬರೆಯುತ್ತೇನೆ?’ ಎನ್ನುವ ಪ್ರಶ್ನೆಗೆ ಉತ್ತರ ಕೊಡುವುದು ಎಣಿಸಿದಷ್ಟು ಸುಲಭವಲ್ಲವಲ್ಲವೆಂಬುದು ಎಲ್ಲ ಬರಹಗಾರರಿಗೂ ಅರಿವಾಗುವುದೇ ಅವರು ಇಂಥ ಪ್ರಶ್ನೆಗೆ ಉತ್ತರ ಕೊಡಲು ಕೂತಾಗ ಮಾತ್ರ! ಹೇಗೆ ಬರೆದರೆ ತನ್ನ ಬರಹಗಳಿಗೂ ಪತ್ರಿಕೆಗಳಲ್ಲಿ ಒಂದಿಷ್ಟು ಜಾಗ ಸಿಕ್ಕಬಹುದೆನ್ನುವ ಯೋಚನೆಯಲ್ಲೇ ಬರೆಯುತ್ತಿದ್ದ ದಿನಗಳು ಹೋಗಿ ಅನ್ನಿಸಿದ್ದೆಲ್ಲವನ್ನೂ ಫೇಸ್ಬುಕ್ಕಲ್ಲೋ ವಾಟ್ಸಪ್ಪಿನ ಗುಂಪಲ್ಲೋ ಬರೆದು ಬಿಸಾಕುತ್ತಿರುವ ಈ ಹೊತ್ತಿನ ಬರಹಗಾರ ಹೊಳೆದದ್ದನ್ನು ಬರೆಯುವದಕ್ಕಿಂತಲೂ ಅನ್ಯರನ್ನು ಮೆಚ್ಚಿಸಲು ಬರಹದ ಹಿಂದೆ ಬಿದ್ದ ಅಕ್ಷರ ಬೇಟೆಗಾರನ ಹಾಗೆ ನನಗೆ ಕಾಣುತ್ತಿದ್ದಾನೆ. ಇದರ ಜೊತೆಗೇ ನಾವು ಮೆಚ್ಚಿದ ಹಿರಿಯ ಬರಹಗಾರರನ್ನು ಕೇಳಹೋದರೆ ಅವರೂ ನಮ್ಮದೇ ಗೊಂದಲದಲ್ಲಿ ಬಿದ್ದವರ ಹಾಗೇ ಮಾತಾಡ ತೊಡಗುತ್ತಾರೆ. ಜೊತೆಗೇ ಇತರ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ಮಿಂಚುತ್ತಿರುವ ತಮ್ಮ ಸಮಕಾಲೀನರ ಬಗ್ಗೆ ಫೇಸ್ಬುಕ್ಕಲ್ಲಿ ಪಟ ಹಾಕಿ ಗಂಟೆಯಲ್ಲಿ ಸಾವಿರ ಲೈಕು ಪಡೆದವರ ಬಗ್ಗೆ ಕೊಂಚ ಹೊಟ್ಟೆಕಿಚ್ಚಿನ ಮಾತೇ ಸೇರಿಸುತ್ತಾರೆ. ಹೇಗೆ ಹೇಗೆ ಬರೆಯಬೇಕೆಂದು ಹೇಳುವವರ ಹಿಂದೆ ಅವರು ಮೆಚ್ಚಿಕೊಂಡ ಬರಹಗಳ ಹಿನ್ನೆಲೆ ಇದ್ದೇ ಇರುತ್ತದೆ. ಆದರೆ ಸದ್ಯೋವರ್ತಮಾನದ ತವಕ ತಲ್ಲಣಗಳನ್ನು ‘ಹೀಗೇ’ ಬರೆಸುವುದರಿಂದ ಹಿಡಿದಿಡುವುದು ಸಾಧ್ಯವೇ ಎನ್ನುವುದು ಇಲ್ಲಿ ಪ್ರಶ್ನೆ. ನಮ್ಮ ತಲೆಮಾರಿಗೆ ಬರಹದ ಮಾಧ್ಯಮವೇ ಮೊದಲ ಸಮಸ್ಯೆಯಾಗಿದೆ. ವಿವಿಧ ಕಾಲಘಟ್ಟಗಳಲ್ಲಿ ಉಜ್ವಲವಾಗಿ ಬೆಳಗುತ್ತಿದ್ದ ಸಾಹಿತ್ಯ ಪ್ರಕಾರಗಳು ಆಯಾ ಕಾಲದ ಲೇಖಕರ/ಕವಿಗಳ ಪಾಲಿಗೆ ವರದಾನವಾಗಿದ್ದವು. ಆದರೆ ಯಾವುದೇ ಚಳುವಳಿಗಳ ಹಂಗಿಲ್ಲದ ಆದರೆ ಎಲ್ಲೆಲ್ಲೂ ಅತೃಪ್ತಿಗಳೇ ತಾಂಡವವಾಡುತ್ತಿರುವ ಈ ದಿನಗಳಲ್ಲಿ ಎಲ್ಲ ಕ್ಷೇತ್ರಗಳಂತೆ ಕಾವ್ಯಕ್ಷೇತ್ರವನ್ನೂ ‘ವೇಗ’ ಮತ್ತು ‘ಸ್ಪರ್ಧೆ’ಗಳೇ ಆಳುತ್ತಿವೆ. ಮೊದಲ ಸಂಕಲನದಲ್ಲಿ ಹುಬ್ಬೇರಿಸುವಂತೆ ಬರೆದವರೆಲ್ಲ ಏಕೋ ಎರಡನೆಯ ಸಂಕಲನ ತರುವ ಹೊತ್ತಿಗೆ ಮತ್ತದೇ ಸವೆದ ಜಾಡುಗಳಲ್ಲಿ ತಮ್ಮ ರೂಪಕ, ಪ್ರತಿಮೆಗಳನ್ನು ನೆಡಲು ತಹತಹಿಸುತ್ತಿರುವುದರ ಕಾರಣಗಳೂ ಸ್ಪಷ್ಟವಾಗುತ್ತಿವೆ. ಸರಿಯಾಗಿ ಉಸಿರಾಡಲೂ ಪುರುಸೊತ್ತಿಲ್ಲದ ದಿನಗಳಲ್ಲಿ ‘ಟೈಮ್ ಮ್ಯಾನೇಜ್’ ಮಾಡುತ್ತಿರುವ ನಾವೆಲ್ಲ ಕಛೇರಿಯ ಕಡತಗಳಲ್ಲಿ, ಆನ್ ಲೈನ್ಗಂಟಿದ ಮೋಹದ ಬಲೆಗಳಲ್ಲಿ ನಮ್ಮನ್ನೇ ತೆತ್ತುಕೊಳ್ಳುತ್ತಿದ್ದೇವೆ. ಈ ನಡುವೆ ಓದು ಬರಹ ತಿಳಿದವರೆಲ್ಲ ಅವಸರದಲ್ಲಿ ಬರೆದೋ, ಅನ್ಯರದ್ದನ್ನು ಕದ್ದು ತಮ್ಮದೆಂದು ಹಾಕಿ ಕೊಳ್ಳುವ ಫೇಸ್ಬುಕ್ಕಿನಲ್ಲಂತೂ ಬರಹಗಳಿಗಿಂತಲೂ ಸ್ಟೆಟಸ್ಸಿನ ಪಟಗಳೇ ಭಾರೀ ಸದ್ದು ಮಾಡುತ್ತಿವೆ.  ಏಕಾಂತದಲ್ಲಿ ಮತ್ತು ಶಾಂತ ಮನಸ್ಥಿತಿಯಲ್ಲಿ ಸೃಜಿಸಬೇಕಾದ ಕಾವ್ಯವೂ ಕೂಡ ತಕ್ಷಣದ ಕ್ಷಿಪ್ರ ‘ದರ್ಶಿನಿ ಸಂಸ್ಕೃತಿ’ಯಂತಾಗುತ್ತಿದ್ದರೂ, ಬರೆಯಲೇಬೇಕೆಂದು ಹಟತೊಟ್ಟವರಿಗೆ, ಸಾಹಿತ್ಯ ರಚನೆ ಎಂಬುದು ಘನಸ್ತಿಕೆಯ ಕೆಲಸವೆಂದು ನಂಬಿದವರಿಗೆ  ಈ ಬಗೆಯ ಚಟುವಟಿಕೆಗಳಿಂದಾದ ಪರಿಣಾಮ ಘೋರವಾದುದು. ಕವಿತೆಗಳ ಬಗ್ಗೆ ಚರ್ಚಿಸುವವರಿಲ್ಲ ಎಂಬ ಮಾತು ಆಗೀಗ ತೂರಿ ಬರುತ್ತಲೇ ಇರುತ್ತದೆ. ಈಗ ಬರೆಯುತ್ತಿರುವವರ ಆತ್ಮ ವಿಶ್ವಾಸ ಕೂಡ ಪ್ರಶ್ನಾರ್ಹವೇ ಆಗಿದೆ. ಹಾಗೆಂದು ಸದ್ಯ ಬರೆಯುತ್ತಿರುವವರೆಲ್ಲ ತಮ್ಮ ಸಮಕಾಲೀನರನ್ನು ಓದಿಕೊಳ್ಳುತ್ತಿದ್ದಾರೆಯೇ ಎನ್ನುವುದೂ ಇಲ್ಲಿ ಬಹು ಮುಖ್ಯ ವಿಚಾರವಾಗಿದೆ. ಸಣ್ಣ ಪುಟ್ಟ ವಿಷಯಗಳಿಗೂ ಒಳಗಿರುವ ‘ಗಿಲ್ಟ್’ನ್ನು ತಟ್ಟೆಬ್ಬಿಸುವ ವ್ಯವಸ್ಥೆಯಲ್ಲಿ ಆತ್ಮ ವಿಶ್ವಾಸ ಶ್ವಾಸ ಕಳೆದುಕೊಳ್ಳುವುದೂ ಮಾಮೂಲಿ ಖಾಯಿಲೆಯೇ ಆಗುತ್ತಿದೆ. ಆದರೂ ನಮ್ಮ ಪುಣ್ಯಕ್ಕೆ ಸಾಕಷ್ಟು ಕಿರುಪತ್ರಿಕೆಗಳಲ್ಲಿ ಬ್ಲಾಗುಗಳಲ್ಲಿ ಈ ಕೆಲಸ ನಡೆಯುತ್ತಿರುವುದನ್ನು ನಾವು ಗಮನಿಸಿಲೇ ಬೇಕು. ಈವತ್ತು ಬರೆಯುತ್ತಿರುವವರೆಲ್ಲ ತಾವು ನಿಜಕ್ಕೂ ಮೆಚ್ಚಿಕೊಂಡಿದ್ದರ ಬಗ್ಗೆಯೇ ಬರೆಯುತ್ತಿದ್ದಾರೆ. ಇನ್ನು ಈ ಹೊತ್ತಿನ ಪದ್ಯಗಳನ್ನು ಹಾಡಲು ಸಾಧ್ಯವಿಲ್ಲವಲ್ಲ ಎಂಬ ಕ್ಯಾತೆಯ ಮಾತು ಆಗೀಗ ಪ್ರತಿಧ್ವನಿಸುತ್ತಲೇ ಇರುತ್ತದೆ. ಆದರೆ ಕವಿತೆ ಹಾಡಾದಾಗ ರಾಗ ಸಂಯೋಜನೆಯಷ್ಟೇ ಮುಖ್ಯವಾಗುತ್ತದೆ. ಅಡಿಗರ ‘ಮೋಹನ ಮುರಳಿ’ ಓದಿದಾಗ ದಕ್ಕುವ ತಾತ್ವಿಕ ದರ್ಶನ ಅದನ್ನೇ ಭಾವಗೀತೆಯಾಗಿ ಕೇಳಿದಾಗ ಮೈಸೂರು ಅನಂತ ಸ್ವಾಮಿಗಳು ವಿರಹಗೀತೆಯೊಂದಕ್ಕೆ ರಾಗ ಜೋಡಿಸಿದಂತೆಯೇ  ಕೇಳಿಸುತ್ತದೆ. ಆಕಾಶವಾಣಿ ಕೆಂದ್ರಗಳ ‘ತಿಂಗಳ ಹೊಸ ಹಾಡು’ ನವಸುಮಗಳ ಕೊಡುಗೆ ಎಂಬುದು ನಿತ್ಯ ರೇಡಿಯೋ ಕೇಳುವವರಿಗಷ್ಟೇ ಗೊತ್ತಿರುವ ಸಂಗತಿ. ಅಂತೆಯೇ ಸುಗಮ ಸಂಗೀತದ ಕ್ಯಾಸೆಟ್ಟುಗಳಿಗೂ ನಮ್ಮ ಯುವಕವಿಗಳ ಕೊಡುಗೆಯೂ ಇದೆ. ಭಾಷೆ ಬದಲಾಗಿದೆ. ಬದುಕಿನ ರೀತಿ ಬದಲಾಗಿದೆ. ಹಾಗೆಯೇ ಇವೆರಡರ ನಡುವೆ ಹುಟ್ಟಿ ಉಳಿಯಬೇಕಾದ ಸಾಹಿತ್ಯಕ-ಸಾಂಸ್ಕೃತಿಕ ಸಂಗತಿಗಳೂ ಬದಲಾಗುತ್ತಿವೆ. ಆಧುನಿಕ ಸಂದರ್ಭದಲ್ಲಿ ಸಾಹಿತ್ಯದ ಓಟ ಎತ್ತಕಡೆಗಿದೆ ಎಂದು ಗಮನಿಸಬೇಕಾದ ಮೀಮಾಂಸಕರು ತಮ್ಮ ಕರ್ತವ್ಯವನ್ನೇ ಮರೆತು ಓಟಕ್ಕೊಂದು ದಿಕ್ಕು ತೋರಿಸುವ ಸಲುವಾಗಿ ಮತ್ತದೇ ಪರಂಪರೆಯೆಂಬ ಕಾಗದದ ಹುಲಿಯನ್ನು ನಮ್ಮ ಮುಂದಕ್ಕೆ ಚಾಚುತ್ತಿದ್ದಾರೆ. ಅಂಥವರೇ ಕಾವ್ಯ ಈ ಕಾಲದ ಮಾಧ್ಯಮವಲ್ಲವೆಂದೂ ಘೋಷಿಸಿಯೂ ಬಿಡುತ್ತಾರೆ. ಯಾವುದನ್ನೂ ಪರಿಪೂರ್ಣ ಅರಿಯಲು ಬಿಡದ ಆದರೆ, ಎಲ್ಲವನ್ನೂ ತಿಳಿದಿರಲೇಬೇಕೆಂದು ಒತ್ತಾಯಿಸುವ ನಮ್ಮ ಶಿಕ್ಷಣ ವ್ಯವಸ್ಥೆಯೇ ‘ಕಿಚಡಿ’ಯಾಗಿರುವುದನ್ನು ಅವಸರದಲ್ಲಿ ಮರೆತೂ ಬಿಡುತ್ತಾರೆ. ಜೀ.ಪಿ.ರಾಜರತ್ನಂ, ಪಂಜೆ, ಹೊಯ್ಸಳರೇ ಗೊತ್ತಿಲ್ಲದ ಪೀಳಿಗೆ ಹೇಗೆ ತಾನೆ ಸಾಹಿತ್ಯ ಚರಿತ್ರೆಯನ್ನು ಅಭ್ಯಸಿಸಿ ಬರೆಯಲು ಸಾಧ್ಯ? ಜ್ಞಾನವೆಂಬುದು ಆಳವಾಗಿ ಉಳಿಯದೇ ಬರಿಯ ಮೇಲ್ನೋಟದ ತಿಳುವಳಿಕೆಯಾಗುತ್ತಿರುವ ಹೊತ್ತಲ್ಲಿ ಹೊಸಕವಿಗಳು ಕಟ್ಟಿಕೊಡುತ್ತಿರುವ ರೂಪಕ, ಪ್ರತಿಮೆಗಳು ಅವರ ಕವಿಮನದ ವ್ಯುತ್ಪತ್ತಿಯಿಂದಲೇ ಮೂಡಿದವೆಂಬುದನ್ನು ಏಕೋ ಯಾರೂ ಗಮನಿಸುತ್ತಿಲ್ಲ. ಹೆಸರಾಂತ ಪತ್ರಿಕೆಗಳು ಕಂಡರಿಯದ ಮೊತ್ತದ ನಗದು ಬಹುಮಾನಗಳನ್ನು ಕಥಾ ಸ್ಪರ್ಧೆಗಳಿಗೆ ಕೊಡುತ್ತಿವೆ, ನಿಜ. ದುರಂತವೆಂದರೆ ಬಹುಮಾನ ಗಿಟ್ಟಿಸುತ್ತಿರುವವರೆಲ್ಲ ಅದೇ ಅದೇ ಕತೆಗಾರರು. ಬಿಗಿ ಬಂಧ, ಪರಂಪರೆ ತುಂಬಿದ ಸಾಂದ್ರತೆ, ಸಾಂಸ್ಕೃತಿಕ ತಲ್ಲಣಗಳ ಮೆರವಣಿಗೆ ಎಂಬೆಲ್ಲ ತೀರ್ಪುಗಾರರ ಷರಾ ಪಡೆದ ಈ ಕತೆಗಾರರು ಸುತ್ತಿದಲ್ಲೇ ಸುತ್ತುತ್ತಿದ್ದಾರೆ. ಹೇಳಿದುದನ್ನೇ ಮತ್ತೆ ಮತ್ತೆ ತಂತ್ರ ಪೂರ್ವಕವಾಗಿ ಪಠಿಸುತ್ತಿದ್ದಾರೆ. ಏಕೆಂದರೆ ಪತ್ರಿಕೆಗಳು ತೀರ್ಪುಗಾರರೆಂದು ನೇಮಿಸಿದವರೆಲ್ಲ ಈಗಾಗಲೇ ಈ ರಂಗದಿಂದ ಕಡ್ಡಾಯ ನಿವೃತ್ತಿ ಪಡೆಯಬೇಕಾಗಿದ್ದೂ ಇನ್ನೂ ವಯಾಗ್ರ ಸೇವಿಸಿ ತಾವಿನ್ನೂ ಫಾರಂನಲ್ಲಿ ಇದ್ದೇವೆಂದು ಬೀಗುತ್ತಿರುವವರು. ಈ ಎಲ್ಲದರ ನಡುವೆ ಅಪವಾದವೆಂಬಂತೆ ಕ್ರೈಸ್ಟ್ ಕಾಲೇಜು, ಸಂಚಯ ಸಾಹಿತ್ಯ ಪತ್ರಿಕೆಯ ಸಾಹಿತ್ಯ ಸ್ಪರ್ಧೆಗಳು, ಸಾಹಿತ್ಯ ಅಕಾಡೆಮಿಯ ಕಮ್ಮಟಗಳು ಹೊಸಬರನ್ನು ಗುರುತಿಸಿವೆ, ಪೋಷಿಸಿವೆ ಮತ್ತು ಸಂರಕ್ಷಿಸಿವೆ. ಎಂ.ಎನ್.ಜಯಪ್ರಕಾಶ್, ವಿಭಾ ತಿರಕಪಡಿ, ಕಾ.ಸು.ರಾಮಚಂದ್ರ ಸತ್ತ ನಂತರವೂ ನಮಗೆ ಸಿಗುವ ಹಾಗೆ ಮಾಡಿವೆ. ಕಾವ್ಯ ಯಾವತ್ತೂ ಕೆಲವೇ ಜನರಿಗೆ ಬೇಕಾದದ್ದು. ಸಂಪೂರ್ಣ ಹಸಿದಿರುವವರಿಗೆ ಮತ್ತು ಪೂರ್ಣ ಹೊಟ್ಟೆ ತುಂಬಿದವರಿಗೆ-ಹಸಿವನ್ನು, ಅವಮಾನವನ್ನು ಕಾವ್ಯ ಮರೆಸಬಲ್ಲ ಶಕ್ತಿಯುಳ್ಳದ್ದು. ಹಾಗೆಯೇ ಮೆರೆಸಬಲ್ಲ ತಾಕತ್ತಿರುವಂಥದು. ಈ ಎರಡೂ ಅತಿಗಳ ನಡುವೆ ಇರುವ ಕಂದಕದೊಳಗೇ ಹೆಚ್ಚಿನ ಜನಸಮುದಾಯ ಇರುವುದರಿಂದ ಕಾವ್ಯ ಯಾವತ್ತೂ ಸಾಮಾನ್ಯರಿಗೆ ಸಹ್ಯವಾಗುವುದೇ ಇಲ್ಲ. ಹಾಗಾಗಿ ಕಾವ್ಯ ಈ ಕಾಲದ ಮಾಧ್ಯಮವಲ್ಲ ಎಂಬ ಹೇಳಿಕೆ ಅವಸರದ್ದಾಗುತ್ತದೆ, ರದ್ದಾಗುತ್ತದೆ. ನೆಲವೇ ಕಾಣದ ಹಾಗೆ ತಲೆ ಎತ್ತಿರುವ ಕಟ್ಟಡಗಳು, ಭೂಮಿಯಗೆದು ಅದಿರ ತರುವ ಕೆಲಸ ತಪ್ಪಿಸಿವೆ. ಹಗಲು ಇರುಳುಗಳ ವ್ಯತ್ಯಾಸವೇ ತಾಕದ ಹಾಗೆ ವಿಜೃಂಬಿಸುತ್ತಿರುವ ಬೆಳಕು ತನ್ನ ಮೂಲವನ್ನೇ ಮರೆಮಾಚಿ ವಂಚಿಸುತ್ತಿದೆ. ಲೋಹ ತಂದು ಇಷ್ಟ ದೇವತೆಯ ವಿಗ್ರಹಕ್ಕೆ ಒಗ್ಗಿಸುವ ಅಸಲು ಅಕ್ಕಸಾಲಿಯ ಗುಣ ನೆಲದ ಸ್ಪರ್ಶವೇ ಸಿಕ್ಕದಿರುವ ಹೊತ್ತಲ್ಲಿ, ಪರಿತಪಿಸುತ್ತಿದೆ. ಇದರ ಮೂಲ ಕಾರಣವಾದ ಬದುಕಿನ ವೇಗವನ್ನು ನಿಯಂತ್ರಿಸಲು ಸಾಧ್ಯವಿದೆಯೇ?  ಇದು ನಮ್ಮ ಮುಂದಿರುವ ಸವಾಲೆಂದರೆ ಹೌದು. ಇಲ್ಲವೆಂದರೆ ಇಲ್ಲ. ದೂರದಲ್ಲೆಲ್ಲೋ ಕೂತು ತಾಯ್ನೆಲದ ಬಗ್ಗೆ ಬರೆಯುವವರು, ಆತ್ಮ ವಂಚಿಸಿಕೊಂಡು ಮೌಲ್ಯಗಳ ಬಗ್ಗೆ ಕೊರೆಯುವವರು, ಸಂಸ್ಕೃತಿಯೆಂದರೆ ಕ್ಯಾಸೆಟ್ಟುಗಳ ಸಂಗೀತಕ್ಕೆ ಕೈ, ಕಾಲು ಕುಣಿಸುವವರು, ಅನ್ಯರ ಮೇಲಣ ದ್ವೇಷವನ್ನೇ ಸಂವೇದನೆಯೆಂದು ವಾದಿಸುವವರೂ ಇರುವ ಕಾಲದಲ್ಲಿ ಕಾವ್ಯದ ಶುದ್ಧತೆಯ ಕುರಿತು ಮಾತನಾಡುವುದೇ ವ್ಯಂಗ್ಯವಾಗುತ್ತದೆ. ಬರೆಯುವವರೆಂದರೆ ವಿಶ್ವ ವಿದ್ಯಾಲಯಗಳಲ್ಲಿ ಪಾಠಹೇಳುವವರೆನ್ನುವ ಹುಸಿಯನ್ನಳಿಸುವಂತೆ ಈ ಹೊತ್ತಿನ ಬರಹಗಾರರು ಜ್ಞಾನದ ಹಲವು ಸೆಲೆಗಳಿಂದ, ಜೀವನ ದರ್ಶನದ ಹಲವು ಸ್ತರಗಳಿಂದ ಬಂದವರಾಗಿದ್ದಾರೆನ್ನುವುದೇ ಅತಿ ಖುಷಿಯ ಸಂಗತಿಯಾಗಿದೆ. ಬಹು ವಿಸ್ತಾರವಾದ ಬಟಾಬಯಲಿನಲ್ಲಿ ಹಿಂದಿನವರಿಗೆ ಇದ್ದಂಥ ಸ್ಪಷ್ಟ ದಾರಿಗಳೂ, ಸಿದ್ಧಾಂತಗಳ ಗೋಜಲುಗಳೂ ಇಲ್ಲದ ಗಾಢ ಆತಂಕದ ಸನ್ನಿವೇಶದಲ್ಲಿ ಇವತ್ತಿನ ಕವಿ ಇದ್ದಾನೆ. ತೀರ ಯಾಂತ್ರಿಕವೂ, ಕೃತಕವೂ, ವೇಗವೂ ಆಗುತ್ತಿರುವ ನಿತ್ಯ ಬದುಕಿನ ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳುವ ಸಲುವಾಗಿ ಓದು, ಬರಹ, ಚರ್ಚೆ ಅತ್ಯಗತ್ಯವೆಂದು ನಂಬಿದ್ದಾನೆ.ಅದು ಪತ್ರಿಕೆಗಳ ಅಂಕಣದ ಮೇಲಣ ಸಂವಾದವೋ, ಪರಸ್ಪರರ ಈ-ಮೇಲೋ, ಅಥವ ಬ್ಲಾಗೋ, ಎಸ್.ಎಂ.ಎಸ್ಸೋ, ತನ್ನ ಅನ್ನಿಸಿಕೆಗಳನ್ನು ಹಂಚಿಕೊಳ್ಳುತ್ತಲೇ ಇದ್ದಾನೆ. ಅದು ಬದುಕಿಗೆ ಕೊಂಚ ನೆಮ್ಮದಿಯನ್ನು ಕೊಡುತ್ತಿರುವುದರಿಂದ, ಬರೆಯದಿದ್ದರೆ ತಲೆ ಸಿಡಿದು ಹೋಳಾಗಬಹುದೆಂಬ ಭಯದಿಂದ, ಒತ್ತಡಗಳಿಂದ ಕೊಂಚಕಾಲವಾದರೂ ದೂರವಾಗುವ ಆಸೆಯಿಂದ, ತನ್ನ ಸುತ್ತಣ ಒತ್ತಡಗಳಿಗೇ ಕಾವ್ಯದ ಪೋಷಾಕು ತೊಡಿಸುತ್ತಿದ್ದಾನೆ. ಆದುದರಿಂದಲೇ ‘ಇದಮಿಥ್ಥಂ’ ಪಂಡಿತರಿಂದ ಮೂತಿಗಿಕ್ಕಿಸಿಕೊಳ್ಳುತ್ತಿದ್ದಾನೆ. ಹಾಗಾಗಿಯೇ ಇಂದು ಬರೆಯುವುದು ಕಷ್ಟವಾಗಿದೆ. ಬರೆಯದೇ ಇರುವುದು ಅದಕ್ಕಿಂತ ಹೆಚ್ಚಿನ ಯಾತನೆಗೆ ದೂಡುತ್ತಿದೆ. ಹೊರಬಂದ ಮಾತುಗಳಿಗೆ ಒಂದೆರೆಡಾದರೂ ಕಿವಿಗಳಿರಬಹುದೆಂಬ ಆಶಾವಾದದಲ್ಲಿ ಬರೆಯುತ್ತಿದ್ದಾನೆ. ಅಷ್ಟೆ! *********

ಅನಿಸಿಕೆ Read Post »

ಇತರೆ

ಪ್ರಸ್ತುತ

ಬಸವಣ್ಣನವರು ಉಮೇಶ ಮುನವಳ್ಳಿ ಶಿಕ್ಷಿತರಲ್ಲಿ ಅನೇಕರು ನಾವು ಬಸವಣ್ಣನವರನ್ನು ಕೇವಲ ಸಮಾಜ ಸುಧಾರಕ, ಕ್ರಾಂತಿಕಾರಿ, ದಾರ್ಶನಿಕ ಇದೇ ಪರಿಧಿಗೆ ಸೀಮಿತಗೊಳಿಸಿದ್ದೇವೆ. ಇದರಾಚೆ ಅವನನ್ನು ಕಂಡುಕೊಳ್ಳುವ ಒಳಗಣ್ಣಿನ ಕೊರತೆ ನಮ್ಮಲ್ಲಿ ಎದ್ದುಕಾಣುತ್ತದೆ. ಅದೇ ನಮ್ಮ ಗ್ರಾಮೀಣ ಜನಕ್ಕೆ ಬಸವಣ್ಣ ಒಬ್ಬ ದೇವ, ದೈವ, ಕೇಳಿದ್ದನ್ನು ಕೊಡುವ ಕಲ್ಪವೃಕ್ಷ! ಕೇವಲ ಶಬ್ದಗಳಲ್ಲಿ ಹಿಡಿದಿಡಲಾಗದ ‘ಅಗಮ್ಯ, ಅಗೋಚರ, ಅಪ್ರತಿಮ’ ವ್ಯಕ್ತಿತ್ವ ಅವನದು. ಅವನ ಆ ಘನ ವ್ಯಕ್ತಿತ್ವವನ್ನು ಒಳಗೊಳ್ಳದಷ್ಟು ಚಿಕ್ಕವಾದವೇ ನಮ್ಮ ಮನಸ್ಸಿನ ಪಾತ್ರೆಗಳು? ದೋಷ ನಮ್ಮ ಪಾತ್ರೆಯಲ್ಲಿದೆ. ಮೇಲಾಗಿ ಅವನನ್ನು ವಿಶ್ಲೇಷಿಸಿ ನಾವು ದೊಡ್ಡವರಾಗಹೊರಟಿದ್ದೇವೆ. ಅವನನ್ನು ಬಂಡವಾಳವಾಗಿಸಿಕೊಂಡು ಬದುಕುತ್ತಿದ್ದೇವೆ. ಯಾವಾಗಲೂ ಯಾವ ಮಹಾಪುರುಷನ ಆಶಯವು ಅದಾಗಿರುವುದಿಲ್ಲವೋ ಅದರ ತದ್ವಿರುದ್ಧದ ಕಾರ್ಯ ಅವನ ಅನುಯಾಯಿಗಳಿಂದ ನಡೆಯುತ್ತದೆ. ಬಸವಣ್ಣ, ‘ಲಿಂಗವನ್ನು ಪೂಜಿಸಿ ಲಿಂಗವೇ ಆದ’ ಮಹಾಮಹಿಮ. ಆದರೆ ‘ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ’ ಎನ್ನುವ ಕಿಂಕರ ಭಾವ. ದೇಹವೇ ದೇವಾಲವಾದ ಪರಿ: “ಎನ್ನ ಕಾಲೇ ಕಂಬ, ದೇಹವೇ ದೇಗುಲ”. “ಅಂಬುದಿಯೊಳಗೆ ಬಿದ್ದ ಆಲಿಕಲ್ಲಂತೆ” ಜೀವ ಶಿವರಾದ ಪರಿ. “ಭಿನ್ನಭಾವವರಿಯದೇ ‘ಶಿವ ಶಿವಾ’ ಎನುತಿರ್ದೆನಯ್ಯ.” “ಕೂಡಲ ಸಂಗಮದೇವರಲ್ಲಿ ತಾನೇ ಪ್ರಸಾದಿ” “ಬೆಳಗಣೊನಳಗಣ ಬೆಳಗು ಮಹಾಬೆಳಗು” “ಪರಮಾನಂದವನೇನೆಂದುಪಮಿಸುವೆನಯ್ಯ” ಎನ್ನುವ ನುಡಿಯಲ್ಲಿ ಪರಬ್ಬಹ್ಮ ಸ್ಥಿತಿ ತಲುಪಿದ ಭಾಸವಾಗುತ್ತದೆ. ಬಸವಣ್ಣನವರು ವಚನ ಸಾಹಿತ್ಯವನ್ನು ದಾಸೋಹ ಭಾವನೆಯಿಂದ ರಚಿಸಿದ್ದಾರೆ. ಲೋಕೋದ್ಧಾರಕ್ಕೆಂದು ರಚಿಸಿದ್ದಾರೆ ಇಲ್ಲದೇ ಹೋದರೆ ಅವುಗಳನ್ನು ರಚಿಸುವ ಅಗತ್ಯತೆ ಅವರಿಗಿರಲಿಲ್ಲ. ಅವರು ಮೌನಸ್ಥಿತಿಯನ್ನು ಯಾವಾಗಲೋ ಧರಿಸಿದ್ದರು. ಕೃಷ್ಣ ಅರ್ಜುನನಿಗೆ ಭಗವದ್ಗೀತೆ ಬೋಧಿಸುವ ಅನಿವಾರ್ಯತೆ ಬಂದೊದಗಿದಂತೆ ಅವರಿಗೂ ಲೋಕದ ಜನರ ಉದ್ಧಾರ ಪ್ರಮುಖವೆನಿಸಿತು. ಎಲ್ಲ ಮಹಾತ್ಮರ ವಿಷಯದಲ್ಲೂ ಇದು ಸತ್ಯ. ಬುದ್ಧನಿಗೆ ಕಾಡಿನಿಂದ ಮರಳಿ ಬರುವ ಅವಶ್ಯಕತೆ ಇರಲಿಲ್ಲ, ಆದರೆ ಜನರು ದುಃಖದಲ್ಲಿ ತೊಳಲಾಡುವುದನ್ನು ಅವನಿಂದ ನೋಡಲಾಗಿಲ್ಲ. ಆತ್ಮಮೋಕ್ಷಾರ್ತಂ ಜಗತ್ ಹಿತಾಯಚ ಎಂಬ ಮಾತಿದೆ: ಆತ್ಮ ಸಾಕ್ಷಾತ್ಕಾರಗೊಂಡಮೇಲೆ ಜಗತಿನ ಹಿತಚಿಂತನೆ ಮಾಡುವುದು. ‘ಭಾವದಲ್ಲಿ ವೃತಗೆಟ್ಟುದಾಗಿ, ಆ ಭಾವದಲ್ಲಿ ಜೀವಸಂಹಾರಿ ಕೂಡಲ ಸಂಗಮದೇವ ಸರ್ವನಿವಾಸಿಯಾಗಿ”.” ಸ್ವಯಂ ಲಿಂಗದನುಭಾವ ದೊರಕೊಂಡ ಬಳಿಕ” “ಏನೆಂಬೆ, ಏನೆಂಬೆ ಒಂದೆರಡಾದುದ, ಏನೆಂಬೆ ಏನೆಂಬೆ ಎರಡೊಂದಾದುದ” ಜೀವ-ಶಿವ ಒಂದಾದ ಜೀವನ್ಮುಕ್ತ ಸ್ಥಿತಿ. “ಭಾವ ಭಾವಿಸಲು ನಿರ್ಭಾವ” ಸ್ಥಿತಿ. ಘನಗಂಭೀರ ಮಹಾಘನದೊಳಗಿನ ಘನಕ್ಕೆ ಘನವಾಗಿದ್ದೆನಯ್ಯಾ. ಕೂಡಲ ಸಂಗಮದೇವಯ್ಯನೆಂಬ ಮಹಾಬೆಳಗಿನ ಬೆಳಗಿನೊಳಗಿದ್ದೇನೆಂಬ ಶಬ್ದ ಮುಗ್ಧವಾದುದೇನೆಂಬೆನಯ್ಯ. ” ಆರೂಢದ ಕೂಟದ ಸುಖವ ಕೂಡಲ ಸಂಗಯ್ಯ ತಾನೇ ಬಲ್ಲ ” ಲಿಂಗಾಂಗ ಸಾಮರಸ್ಯವನ್ನು ಸಾಧಿಸಿ, ಜೀವ-ಶಿವನಾದ ಶಿವೈಕ್ಯ ಸ್ಥಿತಿ. ಬಸವಣ್ಣನು ನಮಗೆ ಮುಕ್ತಿದಾತ, ಶಕ್ತಿದಾತ, ಅವನು ನೆಲೆಸಿದ ಕ್ಷೇತ್ರ, ಅವಿಮುಕ್ತ ಕ್ಷೇತ್ರ. ಕಲ್ಯಾಣ ಕ್ಷೇತ್ರ.” ಬಸವನ ಆರಾಧಕರೆಷ್ಟೋ ಜನ ದೈವೀ ಪುರುಷರಾದದ್ದನ್ನು ನಾವು ಕಣ್ಣಾರೆ ನೋಡಿದ್ದೇವೆ. ಆದರೆ ಬಸವಣ್ಣನವರ ವಿಶ್ಲೇಷಣೆಯಲ್ಲಿ ನಮಗೆ ಮಿತಿ ಮೀರಲಾಗಲಿಲ್ಲ. ಇದು, ನಮ್ಮ ಇತಿಮಿತಿ. ಹನ್ನೊಂದು ಜನ ಅಂಧರು ಆನೆಯನ್ನು ವಿಶ್ಲೇಷಿಸಿದಂತೆ. *********

ಪ್ರಸ್ತುತ Read Post »

ಇತರೆ

ಪ್ರಸ್ತುತ

ಮಾತಾಡುವ ಮರಗಳು ಮೋಹನ್ ಗೌಡ ಹೆಗ್ರೆ ಬೆಳವಣಿಗೆ ಮತ್ತು ಬದಲಾವಣೆ ಪ್ರಕೃತಿ ನಿಯಮಗಳಲ್ಲೊಂದು. ಈ ಬೆಳವಣಿಗೆ ಮತ್ತು ಬದಲಾವಣೆಯನ್ನು ದೈಹಿಕವಾಗಿಯೂ, ಮಾನಸಿಕವಾಗಿಯೂ ಕಂಡುಕೊಳ್ಳಬಹುದಾಗಿದೆ. ಈ ಪ್ರಕ್ರಿಯೆ ಕೇವಲ ಮನುಷ್ಯನಿಗೆ ಮಾತ್ರ ಸಂಬಂಧಿಸಿದ್ದಲ್ಲ. ಮನುಷ್ಯನೊಡಗೂಡಿ ಬದುಕುವ ಚರಾಚರ ಜೀವರಾಶಿಗಳು ಬೆಳವಣಿಗೆ ಮತ್ತು ಬದಲಾವಣೆಯ ಪ್ರಕ್ರಿಯೆಯಲ್ಲಿ ಒಳಗೊಳ್ಳಲೇಬೇಕು. ಪಿಳಿಪಿಳಿ ಕಣ್ಣುಬಿಟ್ಟು ತಾಯಿಯ ತೊಡೆ ಮೇಲೆ ಮಲಗಿದ ಮಗು ಬೆಳವಣಿಗೆಯಾಗಿ, ಮಗುವಿನ ತೊದಲು ಮಾತಿಗೆ ಕೈತಟ್ಟಿ ಕುಣಿದ ಮುದಿ ಜೀವಗಳು ಮಗು ಬೆಳವಣಿಗೆಯಾದ ನಂತರದಲ್ಲಿ ಅಂತಹದೇ ಮಗ್ದ ಪ್ರೇಮದ ನುಡಿಗಳ ಕೇಳಿರಬಹುದು ಅಥವಾ ಕೇಳಲಾಗದ ಮಾತು ವರ್ತನೆಗಳ ನಡುವೆ ಅನಿವಾರ್ಯವಾಗುವಷ್ಟು ಹೊಂದಾಣಿಕೆಯನ್ನು ಅನುಸರಿಸಿಕೊಳ್ಳಲೂಬಹುದು. ಹಕ್ಕಿಯ ಕೊಕ್ಕಿನಲಿ ಹೆಕ್ಕಿ ತಂದ ಹಣ್ಣೊಂದು ಜಾರಿಬಿದ್ದೊ, ಅದು ತಿಂದುಬಿಟ್ಟದ್ದೋ, ಹಿಕ್ಕೆಯಿಂದಲೋ ಇಲ್ಲವೇ ಬೇಕೆಂದೇ ತಂದು ಹಿತ್ತಲಿನಲ್ಲಿ ನೆಟ್ಟ ಗಿಡಗಳು ಬೆಳೆಯುತ್ತಾ ಮನುಷ್ಯನೊಂದಿಗೆ ಭಾವನಾತ್ಮಕ ಸಂಬಂಧಗಳನ್ನು ಬೆಳೆಸಿಕೊಳ್ಳುತ್ತಾ ಮನುಷ್ಯ ಸಂಬಂಧದಂತೆ ಭಾಸವಾಗಬಹುದಾದ ಸಂದರ್ಭಗಳು ನನ್ನ ಪಾಲಿನ ಅವಿನಾಭಾವಿ ಅನುಭವವಾಗಿ ನನ್ನ ಆವರಿಸಿಕೊಂಡ ಕ್ಷಣವೇ ರೋಮಾಂಚನಕಾರಿಯಾದಂತದ್ದು. ಅಂದು ಮನೆ ಹಿತ್ತಲಿನಲ್ಲಿ ಚಿನ್ನಿದಾಂಡು ( ಹಾಣೆ – ಗೆಂಡೆ ) ಪ್ಲಾಸ್ಟಿಕ್ ಬಾಲ್, ಕ್ರಿಕೆಟ್, ಒಡ್ಲಮುಂಡೆ, ಗೇರುಬೀಜದ ಆಟ, ಗೋಲಿ, ಕಣ್ಣಮುಚ್ಚಾಲೆ, ಶಾಲೆ ಆಟ, ಅಡುಗೆಮನೆ ಆಟ ಮುಂತಾದವುಗಳೆಲ್ಲ ಸಲೀಸಾಗಿ ಆಡುವಷ್ಟು ಅವಕಾಶಗಳಿದ್ದವು. ಸಾವಕಾಶವಾಗಿ ಆ ಅವಕಾಶದ ಸ್ಥಳಗಳಲ್ಲಿ ಅಕ್ಕ ನೆಟ್ಟ ತೆಂಗು, ಅಡಿಕೆ ಸಸಿಗಳು ಬೆಳೆದು ಈಗ ಎತ್ತರವಾಗಿ ಆಡಿದ ಬಾಲ್ಯದ ಆಟಗಳಿಗೆ ಏಣಿಹಾಕಿದಂತೆ ಖುಷಿಗೊಳಿಸುತಿವೆ. ಮುಂದೆ ಆ ಜಾಗ ಖಾಲಿಯೇ ಇದ್ದರೂ ಅಲ್ಲಿ ಟಿ.ವಿ, ಮೊಬೈಲ್‌ ಗಳ ದಾಸರಾದ ಮಕ್ಕಳು ಆ ಜಾಗವ ಕಿಂಚಿತ್ತೂ ತುಂಬಲಾರರೆಂಬ ಮುನ್ಸೂಚನೆಯಲ್ಲೋ ಅಥವಾ ಶ್ರಮೀಕ ಬದುಕಿನ ಅಲ್ಪ ಗಳಿಕೆಗೋ, ಆತ್ಮಸಂತೃಪ್ತಿಗೋ ಅಕ್ಕ ಹಿತ್ತಲ ತುಂಬಾ ಅಡಿಕೆ, ಬಾಳೆ, ತೆಂಗಿನ ಸಸಿಗಳ ನೆಟ್ಟಿದ್ದಿರಬೇಕು. ಇವುಗಳ ಹೊರತಾಗಿ ನನ್ನ ವಂಶದವರ ಕಂಡ ಆ ಹಿತ್ತಲಲ್ಲಿ ಅಂದು ಇದ್ದ ಮೂರು ಮರಗಳೊಂದಿಗೆ ಮಾತಾಡುವ ಅವಕಾಶ ನನ್ನದೀಗ… ಬುಡದಿಂದ ಮರವನ್ನು ಏರುವುದು ವಾಡಿಕೆ. ಆದರೆ ತನ್ನ ಕೊಂಬೆಯನ್ನು ತಲೆಕೆಳಗೆ ಇಳಿಬಿಟ್ಟ ಹಿತ್ತಲಿನ ಗೇರು ಮರವನ್ನು ಏರಿ ಅದರಲ್ಲಿರುವ ಉದ್ದುದ್ದದ ಗೇರು ಹಣ್ಣು ಕೊಯ್ದು ಅದನ್ನು ಸರಿಯಾಗಿ ಕತ್ತರಿಸಿ ಉಪ್ಪು ಹಾಕಿ ತಿನ್ನುವ ಮಜವೇ ಬೇರೆ. ದಿನಕ್ಕೆ ಏನಿಲ್ಲವೆಂದರೂ ಮೂರು ನಾಲ್ಕು ಬಾರಿಯಾದರೂ ಏರುವುದು ದಿನಚರಿಯಂತೆ. ಕೆಳಗಡೆ ನಿಂತಾಗ ಕಾಣುವ ಹಣ್ಣುಗಳು ಮರವೇರಿದ ನಂತರ ಅಡಗಿಕೊಂಡಂತೆ ಅನಿಸುತ್ತಿತ್ತು. ಕೂಲಿಗೆ ಹೋದ ನನ್ನವ್ವ ಮನೆಗೆ ಬಂದಾಗ ನನ್ನನ್ನು ಕರೆಯಬೇಕೆಂದರೆ ಮೊದಲು ಮರದಲ್ಲಿ ನಾನು ಇರುವೆನೇ ಎಂಬುದನ್ನು ಖಾತ್ರಿಪಡಿಸಿಕೊಂಡೇ, ನಮ್ಮೂರ ಬಯಲ ಕಡೆ ಮುಖಮಾಡಿ ಕರೆಯುತ್ತಿದ್ದರೆ, ನಮ್ಮೂರ ಹಳ್ಳದಲ್ಲಿ ಸಟ್ಲೆಯೋ, ಕಂಯ್ ಜಬ್ಬೋ, ಏಡಿಯೋ ಹಿಡಿಯುತ್ತಿರುವ ನಾವುಗಳು ಒಂದೇ ಕೂಗಿಗೆ ಉದ್ದುದ್ದದ ದಾಪು ಹಾಕಿ ಮನೆ ಸೇರುತ್ತಿದ್ದದ್ದು ಮಜದ ಸಂಗತಿ. ಈ ಮರ ಅಕ್ಷಯಪಾತ್ರೆಯಂತೆ ಎಂದರೆ ತಪ್ಪಾಗದೇನೋ, ಏಕೆಂದರೆ ದಿನಕ್ಕೆ ಮೂರ್ನಾಲ್ಕು ಸಲ ಮರವೇರಿ ಹಣ್ಣು ಕೊಯ್ಯುವುದು, ಕಲ್ಲಿನಿಂದ ಹೊಡೆದು ಹಣ್ಣು ಬೀಳಿಸುವುದು, ಕೊಕ್ಕೆಯಿಂದ ಕೊಯ್ದರೂ ಮತ್ತೆ ಗೇರುಬೀಜಕ್ಕಾಗಿ ಬೆಳ್ಳಂಬೆಳಗ್ಗೆ ಮರದ ಹತ್ತಿರ ಹುಡುಕಾಟ ನಡೆಯುವುದು ಕೂಡಾ ಸ್ಪರ್ದೆಯಂತೆ ನಡೆಯುತಲೇ ಇತ್ತು‌. ಕನ್ನಡ ( ಪ್ರಾಥಮಿಕ) ಶಾಲೆ ಮತ್ತು ಹೈಸ್ಕೂಲ್ ಗಳಲ್ಲಿ ಒಂದಕ್ಕೆ ಮತ್ತು ಊಟಕ್ಕೆ ಬಿಟ್ಟಾಗ ಶಾಲೆಯ ಹತ್ತಿರವಿರುವ ಇಬ್ಬರ ಬೇಣದಲ್ಲಿ ಗೇರು ಬೀಜವನ್ನು ಕಳ್ಳತನ ಮಾಡಿ ಶಾಲೆ ಗಂಟೆ ಬಾರಿಸಿದರೆ ಅರೆಬರೆ ಸುಲಿದ ಬೀವವನ್ನೂ ಚಡ್ಡಿಕಿಸೆಗೆ ಹಾಕಿಕೊಂಡು ಗೇರುಬೀಜದ ಸೋನೆಯಿಂದ ಸದಾ ತೊಡೆಮೇಲೆ ಸುಟ್ಟಗಾಯಗಳು ಇರುತ್ತಿದ್ದದ್ದೂ ನೆನಪು ಮಾತ್ರ. ಈ ಗೇರು ಮರದ ನಂಟು ನನ್ನೊಬ್ಬನದಲ್ಲ. ಓಣಿಯ, ಶಾಲೆಯ ಎಲ್ಲಾ ವಾನರ ಸೇನೆಯ ಸ್ನೇಹಿತರ ಖುಷಿಯೂ ಕೂಡಾ. ಇಂದಿಗೂ ಎಂದಿಗೂ ದಾರಿ ಮದ್ಯ ಆದರೂ ಗೇರು ಗಿಡಗಳು ಹಣ್ಣು ತುಂಬಿಕೊಂಡರೆ ಹಾಗೇ ನೆನಪುಗಳ ಹಸಿಗೊಳಿಸಿ ನಗಿಸಿ ಕಳಿಸುತ್ತವೆ. ರಸ್ತೆಯಂಚಿನ ಪಾಗರದ ಮಧ್ಯದಿಂದ ಹುಟ್ಟಿ ಬೆಳೆದು ನಿಂತ ಹಿರಿಯ ಹಲಸಿನ ಮರಕ್ಕೆ ಮೈತುಂಬಾ ಅಂಬಲಿಯ ಹಣ್ಣುಗಳು. ಸುಮಾರು ೨ ಮೀಟರ್ ಗಿಂತ ಹೆಚ್ಚಿನ ಘೇರಿ ಇರುವ ಈ ಮರವನ್ನು ಏರಲು ಕಷ್ಟ. ಕಷ್ಟಪಟ್ಟು ಏರಿದರೂ ಸುಲಭವಾಗಿ ಹಣ್ಣುಗಳನ್ನು ಕೊಯ್ಯಲಾಗದು. ಜೊತೆಗೆ ವಿದ್ಯೂತ್ ತಂತಿಗಳ ಭಯ. ಈ ಕಾರಣಕ್ಕಾಗಿಯೇ ಹಲಸಿನ ಮರವನ್ನು ಯಾರೂ ಗುತ್ತಿಗೆಯನ್ನೇ ಪಡೆಯುತ್ತಿರಲಿಲ್ಲ. ಹಲಸಿನ ಮರದಲ್ಲಿ ಹಣ್ಣು ಆಯಿತೆಂದರೆ ಓಣಿ ತುಂಬಾ ಪರಿಮಳ. ಅಷ್ಟೇ ಅಲ್ಲ ಮರದಲ್ಲೇ ಹಣ್ಣಾಗಿ ಬೀಳುತ್ತಿದ್ದುದರಿಂದ ಓಣಿಯ ಬಹುತೇಕರ ದನಕರುಗಳು ರಾತ್ರಿ ಅಲ್ಲಿಯೇ ಠಿಕಾಣಿ ಹೂಡುತ್ತಿದ್ದವು. ಮನೆಯಲ್ಲಿ ನಾವಿರುವಾಗ ಹಣ್ಣು ಬಿದ್ದರೆ ಗೋಣಿಚೀಲವನ್ನು ತೆಗೆದುಕೊಂಡು ಹೋಗಿ, ಕೆಮ್ಮಣ್ಣಿನ ರಸ್ತೆಯಲ್ಲಿ ಹಾಸಿ, ಬಿರಿದು ಬಿದ್ದ ಹಣ್ಣನ್ನ ತುಂಬಿ ಅಕ್ಕ ನಾನು ಅವ್ವೆ ಅಂಗಳದಲ್ಲಿ ಕುಳಿತು ಹಲಸಿನ ಹಣ್ಣು ತಿನ್ನುವಾಗ ಓಣಿಯಲ್ಲಿ ಯಾರಿಗಾದರೂ ತಿರುಗಾಡಿದರೂ ಅವರನ್ನೂ ಕರೆದು ಎಲ್ಲಾ ಸೇರಿ ಹಣ್ಣು ತಿಂದು ಸಣ್ಣ ಪಾರ್ಟಿಯೇ ಆದಂತಾಗುತ್ತಿತ್ತು. ಅಷ್ಟೇ ಅಲ್ಲ ಹಣ್ಣು ತಿಂದು ಅದರ ಬೀಜವನ್ನು ಚೆನ್ನಾಗಿ ತೊಳೆದು ಒಣಗಿಸಿ, ಶಾಲಾ ವಾರ್ಷಿಕೋತ್ಸವಕ್ಕೆ, ಪಕ್ಕದೂರಿನ ನಾಟಕ, ಯಕ್ಷಗಾನಕ್ಕೂ ಮತ್ತು ಊರ ಒಂದೆರಡು ಮನೆಗಳಲ್ಲಿ ಮಾತ್ರ ಟಿವಿ ಇರುವ ಆ ದಿನಗಳಲ್ಲಿ ಊರಲ್ಲಿ ಕೇಲವು ಧಾರ್ಮಿಕ ಕಾರ್ಯ ಹಬ್ಬದ ದಿನಗಳಲ್ಲಿ ಯಕ್ಷಗಾನ ಗಳಂತೆ ಟಿವಿ ತೋರಿಸುವುದು ಕೂಡ ನಡೆಯುತ್ತಿತ್ತು. ಚಂದದ ಸಿನಿಮಾದ ಕ್ಯಾಸೆಟ್ಟುಗಳನ್ನು ಹಾಕುತ್ತಿದ್ದರು ಅದನ್ನು ನೋಡಲು ಹೋಗುವಾಗ ಬಿಸಿ ಕೆಂಡ ಬೂದಿಯಲಿ ಸುಟ್ಟ ಹಲಸಿನ ಬ್ಯಾಳೆ ( ಬೀಜ ) ಯನ್ನೇ ಸ್ನ್ಯಾಕ್ಸ್ ಗಳಂತೆ ತಿನ್ನುವ ರುಚಿಯೇ ಬೇರೆ. ಮಳೆಗಾಲದಲ್ಲಂತೂ ಇದರ ರುಚಿಯೇ ಇಮ್ಮಡಿ. ಇಂದು ಆ ಮರವಿಲ್ಲ ಆದರೆ ಹಲಸಿನ ಮರದ ಬುಡದ ಚಕ್ಕೆಯನ್ನು ಪೂಜಾಕಾರ್ಯಕ್ಕೆ ಯಾರಾದರೂ ಒಡೆದು ಒಯ್ಯಲು ಬರುತ್ತಿದ್ದು ಅವರು ಮರದ ಹಣ್ಣಿನ ಗುಣಗಾನ ಮಾಡಿದ ನಂತರ ಅದರೊಂದಿಗಿನ ಅವಿನಾಭಾವತೆ ಕಣ್ತೆರೆದುಕೊಳ್ಳುತ್ತದೆ. ಈ ಎರಡು ಮರಗಳ ಆಚೆ ನಿಂತ ಹಿತ್ತಲಿನ ಶೀರ್ಷಿಕೆಯಂತಿರುವ ಮರ ಮುರುಗಲ ಮರ. ಕೇಲವು ಕಡೆ ಕೋಕಂ ಮರ ಎನ್ನುವ ಇದರ ಸಸ್ಯ ವೈಜ್ಞಾನಿಕ ಹೆಸರು ಗಾರ್ಸಿನಿಯಾ ಇಂಡಿಕಾ. ಅತ್ಯಂತ ಪ್ರೀತಿ ಮತ್ತು ವಿಶ್ವಾಶದಾಯಕವಾಗಿದೆ. ಹಿತ್ತಲಿನ ಎಲ್ಲಾ ಮರಗಳಿಗಿಂತ ಅತಿ ಎತ್ತರಕ್ಕೆ ತಲೆಯೆತ್ತಿ ನಿಂತ ಈ ಮರದ ವಿಶೇಷವೆಂದರೆ ಎಲ್ಲಾ ಮುರುಗಲ ಮರದಂತೆ ಇದು ಕಡಿಮೆ ಎತ್ತರ ಇದ್ದು, ಕೊಂಬೆಗಳನ್ನು ಅಗಲವಾಗಿ ಹರಡಿಕೊಳ್ಳದೇ ತೀರಾ ಎತ್ತರಕ್ಕೆ ಏರಿ ನಿಂತಿತ್ತು. ಮುರುಗಲು ಹಣ್ಣು ಕಾಯಿಗಳನ್ನು ಸೂಕ್ತ ಸಮಯದಲ್ಲಿ ಕೊಕ್ಕೆಯಿಂದ ಬಡಿದು ಅದರ ಕಾಯಿ ಹಣ್ಣುಗಳಿಂದ ಹುಳಿಸೊಪ್ಪು ( ಹುಳಿ ) ತಯಾರಿಸಿ ಅದನ್ನು ಮೀನು ಸಾರಿಗೆ ಬಳಸುವುದು ವಾಡಿಕೆ. ಆದರೆ ಆಯುಷ್ಯದಲ್ಲಿಯೇ ತನ್ನ ಮೈಗೆ ಕೊಕ್ಕೆಯನ್ನು ತಾಗಿಸಿಕೊಳ್ಳದ ಈ ಮರ ನನಗಂತೂ ಹೆಚ್ಚು ವಿಶೇಷವೇ ಸರಿ. ಆಟ ಆಡಿದ ನಂತರ ಎತ್ತರದಲ್ಲಿ ಹಣ್ಣು ಬಿಟ್ಟಿರುವ ಮರಕ್ಕೆ ನಾವೆಲ್ಲ ಕಲ್ಲು ಹೊಡೆದು ಹಣ್ಣು ಬಿಳಿಸಿ ಅದರ ಪಾನಕ ಮಾಡಿ ಕುಡಿಯುತ್ತಿದ್ದದ್ದು ಇವತ್ತಿನ ಯಾವ ನಿರುಪಯುಕ್ತ ಕೋಲ್ಡ್ ಡ್ರಿಂಕ್ಸ್ ಗೂ ಸಾಟಿಯಾಗಲಾರದು. ಇನ್ನೊಂದು ವಿಶೇಷವೇನೆಂದರೆ ಶಾಲಾ ಸಹಪಠ್ಯ ಚಟುವಟಿಕೆ,ಪ್ರತಿಭಾಕಾರಂಜಿ ಕಾರ್ಯಕ್ರಮಗಳಿಗೆ ಹೋಗುವ ಮುನ್ನಾದಿನಗಳಲ್ಲಿ ಆ ಸಮಯದಲ್ಲಿ ಮುರುಗಲ ಹಣ್ಣು ಬಿಡುವ ಸೀಜನ್ ಆಗಿದ್ದರೆ ಪ್ರತಿ ಸ್ಪರ್ಧೆಯ ಹೆಸರು ಹೇಳಿ ಮೂರು ಕಲ್ಲುಗಳನ್ನು ಆಯ್ದು ಯಾವ ಕಲ್ಲಿಗೆ ಹಣ್ಣು ಬೀಳುತ್ತದೆಯೋ ಆ ಕಲ್ಲಿನ ಸ್ಥಾನ ಅಂದರೆ ಮೊದಲನೇ ಕಲ್ಲಿಗೆ ಹಣ್ಣು ಬಿದ್ದರೆ ಪ್ರಥಮ, ಎರಡನೇ ಕಲ್ಲಿಗಾದರೆ ದ್ವಿತಿಯ, ಮೂರನೆಯದಕ್ಕೆ ಆದರೆ ತೃತೀಯ, ಹಾಗೇ ಈ ಮೂರು ಕಲ್ಲಿಗೂ ಹಣ್ಣು ಬೀಳದಿದ್ದರೂ ನಿರಾಶೆಯಾಗುತಿರಲಿಲ್ಲ ಯಾಕೆಂದರೆ ಈ ಆಟ ಮೂರು ಕಲ್ಲುಗಳಿಂದ ಹಣ್ಣು ಕಾಯಿ ಬೀಳೋವರೆಗೂ ಪುನರಾವರ್ತನೆ ಆಗುತ್ತಲೇ ಇತ್ತು‌. ಇದು ಬಹುಪಾಲು ಸತ್ಯವೇ ಆಗುತ್ತಿತ್ತು. ಎಸೆಸೆಲ್ಸಿ ಫಲಿತಾಂಶದ ದಿನ ಶಾಲೆಗೆ ಪ್ರಥಮ ಸ್ಥಾನ ಪಡೆದು ಆ ಮರದ ಫಲಿತಾಂಶದ ಕುರಿತಾದ ಭವಿಷ್ಯ ಸತ್ಯವಾದಾಗ ಮರವನ್ನು ಅಪ್ಪಿ ಮುತ್ತಿಟ್ಟು ಅದರ ಬುಡದಲ್ಲಿ ಮೈಸೂರುಪಾಕು ಇಟ್ಟು “ನಿನಗೆ ಮೊದಲು ಕೊಟ್ಟಿದ್ದು ಹಾ ” ಅಂತ ಹೇಳಿ ಬಂದದ್ದು ನೆನಪಾಗುವಾಗ ಈಗ ಕೆನ್ನೆಗಳು ಅರಳುತ್ತವೆ. ಆದರೆ ನಿಷ್ಕಪಟ ಈ ಜ್ಯೋತಿಷಿ ಮರ ವಯಸ್ಸಾಗಿ ನಿಂತಾಗ ಜೋರಾದ ಮಳೆಗೆ ಗಾಳಿಗೆ ತನ್ನ ಎತ್ತರಕ್ಕೆ ತೂರಾಡುವುದು ಭಯಾನಕವಾಗುತ್ತಿತ್ತು. ಮರ ಬಿದ್ದರೆ ವಿದ್ಯುತ್ ತಂತಿ , ಕಂಬಗಳಿಗೆ , ಪಕ್ಕದ ಮನೆಯ ಕೊಟ್ಟಿಗೆಗೆ, ಹಾನಿಯಾಗುವ ಸಂಭವವು ಹೆಚ್ಚಾಗಿರುವ ಕಾರಣಕ್ಕೆ ಅದನ್ನು ಕಡಿಯುವಂತೆ ಹೆಚ್ವಿನ ಒತ್ತಡಗಳು ಬಹುದಿನದಿಂದ ಇದ್ದರೂ ಆ ಮರದೊಂದಿಗಿನ ಆಪ್ತತೆಯಿಂದ ಅದನ್ನು ಮುಂದೂಡುತ್ತಲೇ ಬರಲಾಗುತ್ತಿತ್ತು. ನನ್ನೆಲ್ಲಾ ಶಾಲಾ-ಕಾಲೇಜಿನ ಸ್ಪರ್ಧೆ, ಫಲಿತಾಂಶಗಳು, ಸ್ನೇಹ ಆತ್ಮೀಯತೆಗಳು ಕುರಿತಾದ ನಂಬಿಕೆಗಳು, ನೋವು-ನಲಿವುಗಳು, ಕೊನೆಗೆ ನೌಕರಿಯಂತಹ ವಿಷಯಗಳಲ್ಲಿ ಕೂಡಾ ಸತ್ಯ ಭವಿಷ್ಯವನ್ನೇ ನುಡಿದ ಈ ಮರ ನನ್ನೆದುರೇ ಕೊಡಲಿ ಪೆಟ್ಟು ತಿನ್ನುವುದನ್ನು ನೆನಪಿಸಿಕೊಂಡು ರಾತ್ರಿ ಅಪ್ಪಿ ಮುತ್ತಿಟ್ಟು ಮಾತಾಡಿ ಕ್ಷಮೆ ಕೇಳಿ ಬಂದೆ. ಬೆಳ್ಳಂಬೆಳಿಗ್ಗೆ ಮರ ಕಡಿಯುವವರು ಬಂದರು. ಯಾವುದೋ ಭಾವುಕತೆ. ಆಂತರ್ಯದಲ್ಲಿ ಈಜಲಾಗದೆ ಮುಳುಗುತ್ತಿರುವಂತೆ ಹಾದು ಹೋದಂತಾಯಿತು. ಕೇಲವೇ ತಾಸುಗಳಲ್ಲಿ ಹಲವಾರು ದಶಕಗಳನ್ನು ಕಂಡ ನನ್ನ ಪ್ರೀತಿಯ ಮುರುಗಲ ಮರ ನೆಲಕ್ಕುರುಳಿತು. ಇರುವಾಗ ಯಾರ ಶಾಪಕ್ಕೂ ಗುರಿಯಾಗದೇ, ನಾನು ನಿನ್ನೆದುರೇ ಈಗಲೂ ಯಾರಿಗೂ ತೊಂದರೆ ಕೊಡಲಾರೆನೆಂದು ಹೇಳುವಂತೆ ತನ್ನ ಬುಡದ ಕೆಳಗಿರುವ ಚಿಕ್ಕ ತೆಂಗಿನ ಸಸಿಗಳಿಗೂ ನೋವು ಕೊಡದೆ ನೆಲಕ್ಕುರುಳಿದ ಮರವನ್ನು ಕಿಟಕಿಯಲ್ಲಿ ಕಣ್ಣೀರಿಡುತ್ತಾ ನೋಡುತ್ತಿದ್ದ ನನಗೆ ಅದೇ ಅಚ್ಚಳಿಯದ ಮೊದಲ ಕಳೆದುಕೊಂಡ ನೋವಾಗಿ ಉಳಿಯಿತು. ಕತ್ತರಿಸಿದ ಮರದಿಂದ ಉದುರಿದ ಕಾಯಿ ಹಣ್ಣುಗಳನ್ನು ಆಯ್ದು ಅಕ್ಕಪಕ್ಕದ ಮನೆಯವರಿಗೆ ಪಾನಕ ಮಾಡಲು ನೀಡಿ ನಾವು ಪಾನಕ ಮಾಡಿ ಕುಡಿದೆವು. ವಿಷಾದದ ಅಲೆಯೊಂದು ಹಾಗೆ ಸುಳಿದಾಡುತ್ತಲೇ ಸಂಜೆಯವರೆಗೆ ಅದರ ಸ್ವಚ್ಛತೆ ಕಾರ್ಯ ಮುಂದುವರಿಯಿತು. ಆದರೂ ಇಂದಿಗೂ ತುಂಬಾ ನೋವಾದಾಗ ಅದು ನಿಂತ ಜಾಗದಲ್ಲೇ ನಿಂತು ಇಂದಿಗೂ ಕಣ್ಣೀರಿಡುವ ರೂಢಿ ಇದೆ. ಅಕ್ಕನ ಮದುವೆ ಮಾಡಿ ಕೊಟ್ಟು ಗಂಡನ ಮನೆತನಕ ಕಳಿಸಿಕೊಟ್ಟು ಬಂದ ನಂತರ ಒಮ್ಮೇಲೆ ಉಕ್ಕಿ ಬಂದ ಕಣ್ಣೀರಿಗೆ ಅವ್ಯಕ್ತವಾಗಿ ಆಪ್ತವಾಗಿ ಮರ ತಲೆನೇವರಿಸಿದಂತ ಅನಾಮಿಕ ಅನುಭವ ಆದದ್ದೂ ಇದೆ. ನಾವು ಎಷ್ಟೇ ಎತ್ತರಕ್ಕೆ ಇರುತ್ತೇವೆ ಎಂಬುದು ಮುಖ್ಯವಲ್ಲ ಎತ್ತರ ಏರಿದಾಗಲೂ ನಮ್ಮೊಡನೆ ನಾವು ನಮ್ಮವರೊಡನೆ ಹೇಗಿರಬೇಕು ಎಂದು ಪ್ರತ್ಯಕ್ಷ ಪರೋಕ್ಷವಾಗಿ ಪಾಠ ಬೋಧಿಸಿದ ಈ ಮರಗಳು ನೆನಪಿನ ಬದುಕಿನ ಸಂಚಾರದಲ್ಲಿ ಸಹಪಾಠಿಗಳಂತೆ ನಡೆದ ದಾರಿಯೇ ಒಳ್ಳೆಯದು ಅಂತ ಅಂದುಕೊಳ್ಳುವುದೊಂದೇ ಅಂತಿಮ ನಿರ್ಧಾರ.

ಪ್ರಸ್ತುತ Read Post »

ಇತರೆ

ಸಂತಾಪ

ಕನ್ನಡದ ಪ್ರಮುಖ ಕಥೆಗಾರ್ತಿ ಶಾಂತಾದೇವಿ ಕಣವಿಯವರು ಕನ್ನಡ ನಾಡಿನ ಪ್ರಮುಖ ಕಥೆಗಾರ್ತಿ,ಶುದ್ಧ ಕನ್ನಡ ಜನಪದ ಹೃದಯ ಶ್ರೀಮಂತಿಕೆಯ ಸಹಕಾರ ಮೂರ್ತಿ, ಲೇಖಕಿ,⁣ಹಿರಿಯ ಕವಿ, ವಾತ್ಸಲ್ಯಮಯಿ, ಸಮರಸವೇ ಜೀವನ ಎಂದು ಬಾಳು ಬದುಕಿದ ಕವಯಿತ್ರಿ. ಉತ್ತರ ಕರ್ನಾಟಕದ ದೇಸಿ ಸೊಬಗು, ಧ್ವನಿಪೂರ್ಣ ಭಾಷೆ, ತಂತ್ರಗಾರಿಕೆ, ಕಸರತ್ತಿಲ್ಲದ ಬರವಣಿಗೆ ವೈಶಿಷ್ಟ್ಯ ಸಾಕ್ಷಿಕರಿಸಿದ್ದ ಸಾಹಿತಿ ಶಾಂತಾದೇವಿ ಕಣವಿಯವರು.ಹಾಗಾಗಿ ಕನ್ನಡ ಸಾಹಿತ್ಯ ಲೋಕದ ಅನುಪಮ ದಂಪತಿಗಳಲ್ಲಿ ಪ್ರಮುಖವಾಗಿ ಬಂದು ನಿಲ್ಲುವ ಹೆಸರು ಶಾಂತಾದೇವಿ ಕಣವಿ ಮತ್ತು ಚನ್ನವೀರ ಕಣವಿಯವರು ಬಂಧುಗಳೆ. ಜನನ/ಜೀವನ : ವಿಜಾಪುರದಲ್ಲಿ 12-01-1933 ರಂದು ಸಿದ್ಧಬಸಪ್ಪ ಮತ್ತು ಭಾಗೀರಥಿದೇವಿ ದಂಪತಿಗಳ ಮಗಳಾಗಿ ಶಾಂತಾದೇವಿಯರು ಜನಿಸಿದರು. ಇವರ ಶಿಕ್ಷಣ ಪ್ರಾಥಮಿಕ ವಿದ್ಯಾಭ್ಯಾಸ ವಿಜಾಪುರದಲ್ಲಿ, ಮಾಧ್ಯಮಿಕ ವಿದ್ಯಾಭ್ಯಾಸ ರೋಣ ಹಾಗೂ ರಾಣಿ ಬೆನ್ನೂರು, ಬೈಲಹೊಂಗಲಗಳಲ್ಲಿ ಆಗಿರುತ್ತಿದೆ. ಶಾಂತಾದೇವಿಯವರಿಗೆ ಮನೆಯಲ್ಲಿದ್ದ ಸಾಂಸ್ಕೃತಿಕ ವಾತಾವರಣದಿಂದ ಸಹಜವಾಗೆಂಬಂತೆ ಸಾಹಿತ್ಯದ ಹುಚ್ಚು ಹೆಚ್ಚತೊಡಗಿತ್ತು. ಹಾಗಾಗಿ ಸಾಹಿತ್ಯದ ಹೆಚ್ಚಿನ ಒಲವು ಇದ್ದ ಕಾರಣದಿಂದ. ಮನೆಯಲ್ಲಿ ಇಂಗ್ಲಿಷ್, ಕನ್ನಡ ಪುಸ್ತಕಗಳ ದೊಡ್ಡ ಭಂಡಾರವನ್ನೇ ಹೊಂದಿದ್ದರು ಮತ್ತು ಶಾಂತಾದೇವಿ ಅವರಿಗೆ ತಂದೆಯಿಂದಲೇ ‘ಜೇನ್ ಆಸ್ಟಿನ್’ಳ ಕಾದಂಬರಿ ಕುರಿತು ಓದು – ಬರವಣಿಗೆಯ ಪರಿಚಯ ಬಹಳ ಆಗಿತ್ತು ಹಾಗೂ ಸಾಹಿತ್ಯ ಮತ್ತು ಅಧ್ಯಾತ್ಮ ಕೃತಿಗಳಿಗೆ ಮೊದಲ ಪ್ರಾಶಸ್ತ್ಯ ನೀಡುವ ಜೊತೆಗೆ ಹಿರಿಯ ಸಾಹಿತಿಗಳ ಮಾರ್ಗದರ್ಶನ ಸಹ ಇವರಿಗೆ ಲಭಿಸಿತು. ಹೀಗಾಗಿ ಸಾಹಿತ್ಯ ಕ್ಷೇತ್ರದಲ್ಲಿ ಅಪ್ರತಿಮ ಸಾಧನಾ ಸೇವೆ ಮಾಡಲು ಉತ್ತೇಜನ ಪಡೆದರು ಎನ್ನಬಹುದು. ಇದಲ್ಲದೆ ಚಿಕ್ಕವರಿದ್ದಾಗ ತಂದೆ ತಾಯಿಯರಂತೆ ಭಾವಗೀತೆಗಳನ್ನು ಹಾಡುತ್ತಿದ್ದರು. ಧಾರವಾಡಕ್ಕೆ ಬಂದ ಮೇಲೆ ಆಕಾಶವಾಣಿಯಲ್ಲಿಯೂ ಹಾಡಿದರು. “ಭಾವಗೀತೆಯನ್ನು ಹಾಡಿದರೂ ಭಾವಜೀವಿಯಲ್ಲ ನಾನು ಎನ್ನುತ್ತಿದ್ದರು. ಹೀಗಾಗಿ ಕಥೆ ಬರೆಯುವುದನ್ನು ರೂಢಿಸಿಕೊಂಡೆ” ಎಂಬುದು ಅವರ ಸ್ವಯಂ ನುಡಿಯಾಗಿತ್ತು.ಇದೆ ಸಮಯದಲ್ಲಿ ಚನ್ನವೀರ ಕಣವಿಯವರೊಡನೆ ಮದುವೆ ನಿಶ್ಚಯ. ಓದಿಗೆ ವಿರಾಮ ನೀಡಿದರು.1952ರಲ್ಲಿ ಮದುವೆಯಾದ ನಂತರ ಪ್ರೇರಣೆ-ಬರವಣಿಗೆ. ಶಾಂತಾದೇವಿಯವರು ಬರೆದ ಹಲವಾರು ಕಥೆಗಳು ಪ್ರಕಟಿತ. ಓದುಗರಿಂದ ಪ್ರಶಂಸೆ, ಕಥೆಗಾರ್ತಿಯ ಉದಯ. ಉತ್ತರ ಕರ್ನಾಟಕದ ದೇಸಿ ಸೊಬಗು, ಧ್ವನಿಪೂರ್ಣ ಭಾಷೆ, ತಂತ್ರಗಾರಿಕೆ, ಕಸರತ್ತಿಲ್ಲದ ಬರವಣಿಯಲ್ಲಿ ವೈಶಿಷ್ಟ್ಯಕಾಣುತ್ತೇವೆ. ಹಾಗೆ ಜಿ.ಬಿ. ಜೋಶಿಯವರ ಮನೋಹರ ಗ್ರಂಥಮಾಲೆಯ ‘ನಡೆದು ಬಂದ ದಾರಿ’ ಸಂಪುಟಕ್ಕಾಗಿ ಕೀರ್ತಿನಾಥ ಕುರ್ತಕೋಟಿಯವರು ಶಾಂತಾದೇವಿ ಅವರನ್ನು ಕಥೆ ಕೇಳಿದರು. ‘ಮಂಜು ಕರಗಿತು’ ಎಂದು ಕಥೆ ಕಳಿಸಿದರು. ದೊಡ್ಡ ದೊಡ್ಡ ಲೇಖಕರ ಜೊತೆಗೆ ತಮ್ಮ ಫೋಟೊ ಸಮೇತ ಕಥೆ ಪ್ರಕಟಗೊಂಡಾಗ ಶಾಂತಾದೇವಿ ಅವರಿಗೆ ಆದ ಆನಂದಕ್ಕೆ ಲಕ್ಕವಿಲ್ಲ. ಇದು ಅವರ ಪ್ರಥಮ ಹೆಜ್ಜೆ. ಅದೇ ಕಥೆಯನ್ನು ಮೈಸೂರು ವಿಶ್ವವಿದ್ಯಾಲಯದ ಹಿಂದಿ ವಿಭಾಗದ ಡಾ.ಎನ್. ನಾಗಪ್ಪ ಅವರು ಹಿಂದಿಯಲ್ಲಿ ‘ಹಿಮ್ ಚಲ್ ಗಯಾ’ ಎಂದು ಅನುವಾದಿಸಿದ್ದು ಕೊಲ್ಕತ್ತದ ‘ಅಣಿಮಾ’ ಪತ್ರಿಕೆಯ ಪ್ರೇಮಾಂಕ ಎಂಬ ವಿಶೇಷ ಸಂಚಿಕೆಯಲ್ಲಿ ಫೋಟೊ ಸಹಿತ ಪ್ರಕಟಗೊಂಡಿತ್ತು. ಹೀಗೆ ಪ್ರಥಮ ಹೆಜ್ಜೆಯಲ್ಲೇ ಅವರ ಸಾಹಿತ್ಯ ಸೇವೆ ವಿಶಾಲವ್ಯಾಪ್ತಿ ಹರಡಿತ್ತು ಎಂದರೆ ತಪ್ಪಾಗಲಾರದು. ಸಾಹಿತ್ಯ ಸೇವೆ : ಸಾಮಾನ್ಯ ಮಹಿಳೆಯರ ಬದುಕನ್ನು ಕಥೆಗಳಲ್ಲಿ ಅನಾವರಣಗೊಳಿಸುತ್ತ, ಉತ್ತರ ಕರ್ನಾಟಕದ ಆಡುಭಾಷೆಯನ್ನು ಹಿಡಿದಿಟ್ಟವರು ಶಾಂತಾದೇವಿ ಕಣವಿರವರು.ಹಿಂದೆ ಮಹಿಳಾ ಸಾಹಿತ್ಯ ಎಂದು ಪ್ರತ್ಯೇಕಿಸುತ್ತಿದ್ದರು. ಈಗ ಪುರುಷರ ಸಮಾನವಾಗಿ ಲೇಖಕಿಯರು ಬರೆಯುತ್ತಿದ್ದಾರೆ. ಹೀಗಾಗಿ ಮಹಿಳಾ ಸಾಹಿತ್ಯ ಎನ್ನಬೇಕಿಲ್ಲ. ಜೊತೆಗೆ ಪ್ರತ್ಯೇಕವಾಗಿ ನೋಡಬೇಕಾದ ಅಗತ್ಯವಿಲ್ಲ ಎಂಬುದು ಶಾಂತಾದೇವಿ ಅವರ ಖಚಿತ ದೃಡ ನಿಲುವಾಗಿತ್ತು.ಸಾಹಿತ್ಯ ಕ್ಷೇತ್ರದಲ್ಲಿ ಶಾಂತಾದೇವಿ ಅವರ ಮೊದಲ ಕಥಾ ಸಂಕಲನ ‘ಸಂಜೆಮಲ್ಲಿಗೆ’ 1967ರಲ್ಲಿ ಪ್ರಕಟವಾಯಿತು. ಆಮೇಲೆ ‘ಬಯಲು ಆಲಯ’, ‘ಮರುವಿಚಾರ’, ‘ಜಾತ್ರೆ ಮುಗಿದಿತ್ತು’, ‘ಕಳಚಿ ಬಿದ್ದ ಪೈಜಣ’, ‘ನೀಲಿಮಾ ತೀರ’, ‘ಗಾಂಧಿ ಮಗಳು’ ಹಾಗೂ ‘ಈಚಿನ ಕಥೆಗಳು’ ಸಂಕಲನ ಪ್ರಕಟಗೊಂಡವು. ಸಮಗ್ರ ಕಥೆಗಳು ‘ಕಥಾಮಂಜರಿ’ (2002) ಹಾಗೂ ‘ಇನ್ನೊಂದು ಸಂಪುಟ’ (2005) ಎರಡು ಸಂಪುಟಗಳಲ್ಲಿ ಪ್ರಕಟಗೊಂಡವು. ಧಾರವಾಡ ಆಕಾಶವಾಣಿಯಲ್ಲಿ ಅವರ ಕಥೆ, ರೂಪಕ, ಕಿರುನಾಟಕ, ಹಾಸ್ಯ, ಕಥೆಗಳು ಪ್ರಸಾರಗೊಂಡವು. ಜೊತೆಗೆ ಹರಟೆಗಳ ಸಂಕಲನ ‘ಅಜಗಜಾಂತರ’ ಪ್ರಕಟಗೊಂಡಿತು. ನಿಜಗುಣ ಶಿವಯೋಗಿ ಮಕ್ಕಳ ಪುಸ್ತಕವಾಗಿ ಪ್ರಕಟಿತಗೊಂಡಿತು. ಹಾಗಾಗಿ ಅವರ ಕಥೆಗಳಲ್ಲಿ ತುಂಬ ಇಷ್ಟವಾದ ಕಥೆಗಳು, ಅವರು ಬರಹದಲ್ಲೂ ಕೂಡ ಕಾಣಬಹುದಾಗಿದೆ, ಪ್ರತಿ ಪಾತ್ರ, ಹಳ್ಳಿಯ ಹೆಣ್ಣು ಮಕ್ಕಳ ನೈಜ ಮುಗ್ಧತೆ, ಕಷ್ಟ, ಸಂಕಷ್ಟ, ಹೆಚ್ಚು ಕನಸಿರದ ಇದ್ದೊಂದು ಕನಸೂ ಕೈಗೂಡದ, ಈಗಲೂ ಜೀವಂತ ಪ್ರಸ್ತುತ ಅನ್ನುವ ಕಥೆಗಳಾಗಿವೆ ಜೊತೆಗೆ ಹಲವಾರು ಕಥೆಗಳು ಹಿಂದಿ, ಇಂಗ್ಲಿಷ್, ಮಲೆಯಾಳಂಗಳಿಗೆ ಭಾಷಾಂತರಗೊಂಡಿವೆ. ಪ್ರಮುಖ ಕೃತಿಗಳು ಹೀಗಿವೆ : ಕಥಾಸಂಕಲನ – ಸಂಜೆಮಲ್ಲಿಗೆ,ಬಯಲು—ಆಲಯ, ಮರುವಿಚಾರ,ಜಾತ್ರೆ ಮುಗಿದಿತ್ತು,ಕಳಚಿ ಬಿದ್ದ ಪೈಜಣ, ನೀಲಿ ಮಾ ತೀರ,ಗಾಂಧೀ ಮಗಳು. ಲಲಿತ ಪ್ರಬಂಧ – ಅಜಗಜಾಂತರ,ಮಕ್ಕಳ ಸಾಹಿತ್ಯ ನಿಜಗುಣಿ ಶಿವಯೋಗಿ. ಸಂಪಾದನೆ – ಪ್ರಶಾಂತ ಎನ್ನುವ ಕೃತಿಗಳು ನಾಡಿಗೆ ಅರ್ಪಣೆ ಮಾಡಿದ್ದಾರೆ. ಸಂಧ ಪ್ರಶಸ್ತಿ /ಗೌರವಗಳು : ಶಾಂತಾದೇವಿ ಕಣವಿ ಅವರ ‘ಬಯಲು-ಆಲಯ’ ಕಥಾಸಂಕಲನಕ್ಕೆ 1974ರ ಸಾಹಿತ್ಯ ಅಕಾಡಮಿ ಬಹುಮಾನ. 1987ರಲ್ಲಿ ಅಕಾಡಮಿ ಪ್ರಶಸ್ತಿ ಪುರಸ್ಕಾರ, ದಾನಚಿಂತಾಮಣಿ ಅತ್ತಿಮಬ್ಬೆ ಪುರಸ್ಕಾರವೂ ಸೇರಿದಂತೆ ಇನ್ನೂ ಇವರ ಸಾಹಿತ್ಯ ಸೇವೆಗೆ ಅನೇಕ ಗೌರವ ಸನ್ಮಾನಗಳು ದೊರಕಿವೆ. ಕೊನೆಯದಾಗಿ : ಶಾಂತದೇವಿಯವರ ಸಾಹಿತ್ಯದಲ್ಲಿ ಪ್ರಖರವಾಗಿ ಗುರುತಿಸಿಕೊಳ್ಳಬಹುದಾದ ಮೌಲ್ಯಾಧಾರಿತ ವೈಜ್ಞಾನಿಕ ವೈಚಾರಿಕ ಚಿಂತನೆಗಳ ವಿಚಾರಗಳು ಅವರ ಕೃತಿಗಳಲ್ಲಿ ನಾವೆಲ್ಲರೂ ಕಾಣಬಹುದಾಗಿದೆ.ಹೀಗಾಗಿ ಅವರ ಕೃತಿಗಳು ಇಂದಿನ ಸಮಾಜಕ್ಕೆ ಅತಿ ಅವಶ್ಯ ಹಾಗೂ ಮಾರ್ಗದರ್ಶನವಾಗಿವೆ. ಭಕ್ತಿಯ ನಮನ : ಕನ್ನಡ ಸಾಹಿತ್ಯ ಲೋಕಕ್ಕೆ ಶಾಂತಾದೇವಿ ಕಣವಿಯವರು ಬಹು ದೊಡ್ಡ ಶಕ್ತಿಯಾಗಿದ್ದರು.ಶಾಂತಾದೇವಿ ಕಣವಿಯವರ ಅಗಲಿಕೆ ದುಃಖ ತಂದಿದೆ. ಈ ದುಃಖವನ್ನು ತಾಳಿಕೊಳ್ಳುವ ಶಕ್ತಿ ಹಿರಿಯ ಸಾಹಿತಿ ಚೇತನರಾದ ಚನ್ನವೀರ ಕಣವಿಯವರಿಗೂ ಮತ್ತು ಕುಟುಂಬಕ್ಕೆ ಬರಲಿ. ಅಗಲಿದ ಮಹಾನ್ ಚೇತನಕ್ಕೆ ಅಂತರಾಳದ ಭಕ್ತಿಯ ನಮನಗಳು ಸಲ್ಲಿಸುತ್ತೇವೆ. ******** ಸಂಗಮೇಶ ಎನ್ ಜವಾದಿ

ಸಂತಾಪ Read Post »

You cannot copy content of this page

Scroll to Top