ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಶೋಭಾ ನಾಯ್ಕರ ಅವ್ವ ಮತ್ತು ಅಬ್ಬಲಿಗೆ ಕೃತಿಗೆ `ಸರಳಾ ರಂಗನಾಥರಾವ್ ಪ್ರಶಸ್ತಿ

ಪ್ರಶಸ್ತಿ ಶೋಭಾ ನಾಯ್ಕರ ಅವ್ವ ಮತ್ತು ಅಬ್ಬಲಿಗೆ ಕೃತಿಗೆ `ಸರಳಾ ರಂಗನಾಥರಾವ್ ಪ್ರಶಸ್ತಿ ಸರಳಾ ರಂಗನಾಥರಾವ್ ಸ್ಮಾರಕ ಪ್ರತಿಷ್ಠಾನವು ಕೊಡುವ ೨೦೧೯ನೇ ಸಾಲಿನ ಸರಳಾ ರಂಗನಾಥರಾವ್ ಪ್ರಶಸ್ತಿಗೆ ಶಿರಸಿಯ ಕವಯಿತ್ರಿ ಶೋಭಾ ಹಿರೇಕೈ ಕೊಂಡ್ರಾಜಿ ಅವರು ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯನ್ನು ಲೇಖಕಿಯರ ಚೊಚ್ಚಲ ಕೃತಿಗೆ ಕೊಡಲಾಗುತ್ತಿದ್ದು, ಶೋಭಾ ಅವರ ಅವ್ವ ಮತ್ತು ಅಬ್ಬಲಿಗೆ ಕವನ ಸಂಕಲನ  ಈ ಪ್ರಶಸ್ತಿಗೆ ಆಯ್ಕೆಯಾಗಿದೆ. ಶೋಭಾ ಹಿರೇಕೈ ಕೊಂಡ್ರಾಜಿ ಅವರು  ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಂಡ್ರಾಜಿಯವರು. ಪ್ರಸ್ತುತ ಸಿದ್ದಾಪುರ ತಾಲ್ಲೂಕಿನಲ್ಲಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಮೊದಲ ಕವನ ಸಂಕಲನ `ಅವ್ವ ಮತ್ತು ಅಬ್ಬಲಿಗೆ’ ೨೦೧೯ರಲ್ಲಿ ಪ್ರಕಟಣೆ ಕಂಡಿದೆ. ಗ್ರಾಮೀಣ ಪರಿಸರ, ತಾಯ್ತನ ಈ ಸಂಕಲನದ ಪ್ರಧಾನ ಧಾರೆ. ಹಾಗೆ ಯುದ್ಧವಿರೋಧಿ ಧೋರಣೆ, ಬುದ್ಧನ ಕರುಣೆ ಹಾಗೂ ಅಯ್ಯಪ್ಪನನ್ನು ತಾಯಿಯ ಮಗನಾಗಿ ನೋಡುವ ಪ್ರಮುಖ ಕವಿತೆಗಳು ಅವ್ವ ಮತ್ತ ಅಬ್ಬಲಿಗೆ ಸಂಕಲನದಲ್ಲಿವೆ. ಅಲ್ಲದೇ ಹೆಣ್ಣಿನ ಕನಸು, ಪ್ರೀತಿಯ ಹಂಬಲ, ಬಂಜೆತನ ಹಾಗೂ ಶ್ರಮಿಕವರ್ಗದ ಬಗ್ಗೆ ಇರುವ ಕಳಕಳಿಯ ಕವಿತೆಗಳಿದ್ದು, ಕನ್ನಡ ಕಾವ್ಯ ಪರಂಪರೆಯನ್ನು ಶೋಭಾ ನಾಯ್ಕ ಹಿರೇಕೈ ಕವನಗಳಲ್ಲಿ ಕಾಣಬಹುದಾಗಿದೆ. ಕವಿ ಡಾ.ಎಚ್.ಎಸ್. ವೆಂಕಟೇಶಮೂರ್ತಿ, ಚಿಂತಾಮಣಿ ಕೊಡ್ಲೇಕೆರೆ ಮತ್ತು ವಿಮರ್ಶಕರಾದ ಜಿ. ಎನ್. ರಂಗನಾಥ್ ರಾವ್ ಅವರು ತೀರ್ಪುಗಾರರಾಗಿದ್ದರು. ೨೦೨೧ರ ಜನವರಿಯಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಂತೋಷವಾಗಿದೆ :  ಅವ್ವ ಮತ್ತು ಅಬ್ಬಲಿಗೆ ಕೃತಿಗೆ `ಸರಳಾ ರಂಗನಾಥರಾವ್ ಪ್ರಶಸ್ತಿ’ ಪ್ರಶಸ್ತಿ ಘೋಷಣೆಯಾದ ಕ್ಷಣದ ಕುರಿತು ಕವಯಿತ್ರಿ ಶೋಭಾ ನಾಯ್ಕ ಅವರು ಪ್ರತಿಕ್ರಿಯಿಸಿದ್ದು, ನನಗೆ ಸಂತೋಷವಾಗಿದೆ. ನನ್ನ ಮೊದಲ ಸಂಕಲನಕ್ಕೆ ಪ್ರಶಸ್ತಿ ಬಂದದ್ದು ಇನ್ನೂ ಖುಷಿಯ ಸಂಗತಿ. ನನ್ನ ಹಳ್ಳಿಯ ಸಂಬಂಧ ಗಟ್ಟಿಯಾಗಿದೆ. ನಾನು ಬರೆಯುವುದು ಸಹ  ವಿರಳ. ಶಾಲಾ ಶಿಕ್ಷಕಿಯಾಗಿರುವ ನನಗೆ ಮಕ್ಕಳ ಜೊತೆಗಿನ ಒಡನಾಟ, ನನ್ನ ಪರಿಸರ ಹಾಗೂ ಕನ್ನಡ ಪಠ್ಯಗಳಲ್ಲಿನ ವಚನಗಳು ಸೇರಿದಂತೆ ಕನ್ನಡ ಕವಿಗಳ ಕವಿತೆಗಳನ್ನು ಓದುತ್ತಾ, ಕಲಿಸುತ್ತಾ ನನಗೂ ಬರೆಯುವ ಹಂಬಲ ಹುಟ್ಟಿತು. ಅದೇ ಅವ್ವ ಅಬ್ಬಲಿಗೆಯಾಗಿದೆ. ಮುಂದೆ ನನ್ನೂರಿನ ಚಿತ್ರಗಳನ್ನು ಗದ್ಯ ರೂಪದಲ್ಲಿ ಬರೆಯುವ ಕನಸಿದೆ. ನನ್ನ ಮೇಲೆ ದೇವನೂರು ಮಹಾದೇವ ಅವರ ಬರಹಗಳು, ಎದೆಗೆ ಬಿದ್ದ ಅಕ್ಷರ ತುಂಬಾ ಪ್ರಭಾವ ಬೀರಿವೆ. ಕನ್ನಡದ ಸೌಹಾರ್ದ, ಮಾನವೀಯ ಪರಂಪರೆ ನನ್ನ ಪ್ರಜ್ಞೆಯಲ್ಲಿದೆ ಎಂದರು. *******************************

ಶೋಭಾ ನಾಯ್ಕರ ಅವ್ವ ಮತ್ತು ಅಬ್ಬಲಿಗೆ ಕೃತಿಗೆ `ಸರಳಾ ರಂಗನಾಥರಾವ್ ಪ್ರಶಸ್ತಿ Read Post »

ಇತರೆ

ಆಕಾಶದೀಪದ ಪ್ರಾಧಾನ್ಯತೆ

ಲೇಖನ ಆಕಾಶದೀಪದ ಪ್ರಾಧಾನ್ಯತೆ ವೀಣಾ. ಎನ್. ರಾವ್. ದೀಪಾವಳಿ ಬಂತೆಂದರೆ ಮಕ್ಕಳಿಂದ ಹಿಡಿದು ಎಲ್ಲಾ ವಯಸ್ಸಿನವರಿಗೂ ವಿನೂತನವಾದ ಸಂತಸ. ಹಾಗೆಯೇ ದೀಪಾವಳಿಯ ಸಮಯದಲ್ಲಿ ಅದರಲ್ಲೂ ವಿಶೇಷವಾಗಿ ಹಳ್ಳಿಗಳಲ್ಲಿ “ಆಕಾಶದೀಪ”ವನ್ನು ಮನೆಯ ಮುಂದೆ ತೂಗು ಹಾಕುತ್ತಾರೆ.  ಈ ‘ಆಕಾಶದೀಪ’ವು, “ಗೂಡುದೀಪ”,”ನಕ್ಷತ್ರದೀಪ”,ಎಂದು ಪರಿಚಿತವಾದರೆ, ಹಳ್ಳಿಗಳಲ್ಲಿ “ಯಮದೀಪ”,”ವ್ಯೋಮದೀಪ”  ಎಂದು ಕೂಡಾ ಕರೆಯುತ್ತಾರೆ.            ಬಿದಿರಿನ ಕಡ್ಡಿಗಳಿಂದ ಎಂಟು ಮೂಲೆಗಳಿರುವಂತೆ ಯಾವ ಆಕಾರಕ್ಕೆ ಬೇಕೊ ಆ ರೀತಿಯಾಗಿ ಕಟ್ಟಿ ಅದರ ಸುತ್ತಲೂ ಬಣ್ಣದ ಪೇಪರನ್ನು ಅಂಟಿಸಿ ಬಾಲಂಗೋಚಿಯನ್ನು ಇಳಿಬಿಟ್ಟು ಮನೆಯಲ್ಲೆ ತಯಾರಿಸುವ ಈ ‘ಆಕಾಶದೀಪ’ವು ಮನೆಯಂಗಳದಲ್ಲಿ ಕಾಣಸಿಗುತ್ತದೆ. ಸಾಂಪ್ರದಾಯಿಕವಾಗಿ ಬೆಳೆದು ಬಂದ ಈ ಆಕಾಶದೀಪ ಅದರ ಮೂಲ ರೂಪ ಆಧುನೀಕರಣತೆಯಿಂದ ಬದಲಾಗಿದೆ.              ಕೃಷಿಕರು ಸಂಧ್ಯಾಕಾಲದಲ್ಲಿ ಗದ್ದೆಗಳಿಗೆ ಹೋಗಿ ಅಲ್ಲಿ ರಂಗೋಲಿ ಹಾಕಿ ಕಾಡುಪುಷ್ಪದಿಂದ ಭೂಮಿಯನ್ನು ಪೂಜಿಸಿ ‘ನೆನೆಕೋಲು’ ಮಾಡಿ, ” ತನ್ನ ರಾಜ್ಯಕ್ಕೆ ತಾನು ಓಡೋಡಿ ಬಾ ಓ ಬಲೀಂದ್ರ ಕುಹೂ” ಎಂದು ಎಲ್ಲರೂ ಬೊಬ್ಬೆ  ಹಾಕಿ ದೀಪ ಹಚ್ಚುತ್ತಾರೆ. ಹಾಗೆಯೇ ಮನೆಗೆ ಬಂದು ಅಂಗಳದಲ್ಲಿ ಬಲೀಂದ್ರನ ಸ್ವಾಗತಕ್ಕಾಗಿ ನವಗ್ರಹ ಮಂತ್ರವನ್ನೋ, ಅಥವಾ “ದಾಮೋದರಾಯ ನಭಸಿ ತುಲಾಯಾಂ ದೋಲಯಾ ಸಹ “(ಗೊತ್ತಿರುವವರು ಈ ಮಂತ್ರ ಹೇಳುತ್ತಾರೆ) ಎಂದು ಹೇಳಿ ವ್ಯೋಮದೀಪವನ್ನು ಏರಿಸುತ್ತಾರೆ. ಪಾತಾಳಕ್ಕಿಳಿದ ಬಲೀಂದ್ರನು ಸಮುದ್ರ ಮಂಥನ ಮಾಡುವಾಗ ದೇವತೆಗಳಿಗೆ ಸಹಾಯ ಮಾಡಿದಕ್ಕಾಗಿ, ಅಲ್ಲದೆ ಬಲಿ ಚಿರಂಜೀವಿಯಾಗಿರುವುದರಿಂದ ಈ ಭೂಮಿಯ ಮೇಲೆ ಒಂದು ದಿನ ಭೂಮಿಯನ್ನಾಳುವ ಅವಕಾಶವನ್ನು ದೇವತೆಗಳ ಬಳಿ ಬೇಡಿದ್ದರಿಂದ ದೀಪಾವಳಿಯ ಅಮವಾಸೆಯಲ್ಲಿ ಬಲಿ ಚಕ್ರವರ್ತಿ ಮೇಲಕ್ಕೆ ಬಂದು ರಾಜ್ಯಾಡಳಿತ ಮಾಡುತ್ತಾನೆಂದು.           ಮತ್ತೊಂದೆಡೆ ಈ ‘ಯಮದೀಪ’ವು ಆಕಾಶತತ್ವ ಮತ್ತು ವಾಯುತತ್ವ ಆಗಿರೋದರಿಂದ ಮನೆಯಲ್ಲಿರುವವರೆಲ್ಲರಿಗೂ ಆಯುಷ್ಯ ವೃದ್ಧಿಸಲಿ ಎಂಬ ಆಶಯವೂ ಇದೆ.            ಒಟ್ಟಿನಲ್ಲಿ ಅದೇನೆ ಆದರೂ ಈ ‘ಆಕಾಶದೀಪ’ವನ್ನು ಇಡುವ ಸಂಪ್ರದಾಯ ಇಂದಿಗೂ ಹಳ್ಳಿಗಳಲ್ಲಿ ಮರೆಯಾಗದೆ  ಇರುವುದು ಈ ನೆಲದ ಸಂಸ್ಕೃತಿಯನ್ನು ಎತ್ತಿ ತೋರಿಸುತಿದೆ.

ಆಕಾಶದೀಪದ ಪ್ರಾಧಾನ್ಯತೆ Read Post »

ಇತರೆ

ಕಾದಂಬರಿ ಕುರಿತು ಮರಳಿ ಮಣ್ಣಿಗೆ ಡಾ.ಶಿವರಾಮ ಕಾರಂತ ಮರಳಿ ಮಣ್ಣಿಗೆ  ಲೇಖಕರು :ಡಾ. ಕೆ‌. ಶಿವರಾಮ ಕಾರಂತ ನಾನು ಶಿವರಾಮ ಕಾರಂತರ ಎಲ್ಲಾ ಕಾದಂಬರಿಗಳನ್ನು ಓದಿಲ್ಲವಾದರೂ ಕೆಲವೊಂದನ್ನು ಓದಿದ್ದೇನೆ.  ಅದರಲ್ಲಿ ನನಗಿಷ್ಟವಾದ ಕಾದಂಬರಿ ” ಮರಳಿ ಮಣ್ಣಿಗೆ”    ಈ ಕೃತಿಯನ್ನು ಓದುವಾಗ ಓದಿ ಮುಗಿಸುವ ತನಕ ಪುಸ್ತಕ ಮುಚ್ಚಿಡಲು ಆಗದಷ್ಟು ಆಸಕ್ತಿ ನಮ್ಮನ್ನು ಓದಿಸಿ ಕೊಂಡು ಹೋಗುತ್ತದೆ. ಇಡೀ ಕಥೆಯೆ ನಮ್ಮ ಕಣ್ಮುಂದೆ ಹಾದು ಹೋಗುವ ಅನುಭವವಾಗುತ್ತದೆ. ಇದಕ್ಕೆ ಕಾರಣ ಅಲ್ಲಿನ ಘಟನೆಗಳು, ಮಾತುಕತೆಗಳು ಹಾಗು ಪಾತ್ರಗಳು ವಾಸ್ತವಿಕ ನೆಲೆಯಲ್ಲೇ ನಡೆಯುವಂತೆ ಭಾಸವಾಗುತ್ತವೆ. ಇಲ್ಲಿನ ಪಾತ್ರಗಳೆಲ್ಲಾ ಗಟ್ಟಿತನದಿಂದ ಕೂಡಿರುವ ಕಾರಣ ನಮ್ಮ ಮನಸ್ಸಿನಲ್ಲಿ ನೆಲೆಸುತ್ತವೆ. ಇಲ್ಲಿನ ಸ್ತ್ರೀ ಪಾತ್ರಗಳು ಅಂದರೆ ಮುಖ್ಯವಾಗಿ ಸರಸೋತಿ, ಪಾರೋತಿ ಹಾಗೂ ನಾಗವೇಣಿ ಪಾತ್ರಗಳು ತಮ್ಮ ಬದುಕಿನ ಇತಿಮಿತಿಯಲ್ಲೇ ಕಷ್ಟಗಳೊಂದಿಗೆ ಹೋರಾಟದ ಬದುಕನ್ನು ನಿಭಾಯಿಸಿದ ರೀತಿಯಿಂದಾಗಿ ಈಗಿನ ಆಧುನಿಕ ಹೆಣ್ಣಿಗಿಂತ ಯಾವುದೇ ರೀತಿಯಲ್ಲೂ ಕಡಿಮೆಯಿಲ್ಲ. ಸ್ತ್ರೀ ಪಾತ್ರಗಳ ಮಾನಸಿಕ ತುಮುಲಗಳು ಅಂದಿನ ಕಾಲಘಟ್ಟದ ಎಲ್ಲ ಹೆಣ್ಣುಮಕ್ಕಳ ಸ್ಥಾನಮಾನದ ಕೈಗನ್ನಡಿಯಾಗಿದೆ. ಪಾರೋತಿ ಶೋಷಿತ  ಬದುಕನ್ನು  ತಲೆತಗ್ಗಿಸಿ ಸ್ವೀಕರಿಸಿದರೆ, ಸರಸೋತಿಯು ತನ್ನ ದುರಂತ ಬದುಕನ್ನು ಅಣ್ಣನ ಸಂಸಾರಕ್ಕೆ ಅರ್ಪಿಸಿ ಕೊಂಡರೂ ನಿರ್ಲಕ್ಷಿಸಲ್ಪಟ್ಟಾಗ ದೌರ್ಜನ್ಯದ ವಿರುದ್ಧ ಸಿಡಿದೇಳುವ ಮೂಲಕ ತನ್ನ ಅಸ್ಥಿತ್ವದ ಛಾಪನ್ನು ಎಲ್ಲರ ಮೇಲೂ ಒತ್ತಿದರೆ, ನಾಗವೇಣಿ ಗಂಡನ ದೌರ್ಜನ್ಯವನ್ನು ತನ್ನ ಇತಿಮಿತಿಯಲ್ಲಿ ತಿರಸ್ಕರಿಸಿ ಮಗನಿಗಾಗಿ ತಾನೆಂದೂ ಕಂಡರಿಯದ ಕಡುಬಡತನದ ಬದುಕನ್ನ ಅನುಭವಿಸುವ ಮೂಲಕ ಸ್ವಾಭಿಮಾನಿ ಹೆಣ್ಣಾಗಿ ನೆನಪಲ್ಲುಳಿಯುತ್ತಾಳೆ ನಾಗವೇಣಿಯು ಅಜ್ಜಿ ಸರಸೋತಿ ವ್ಯಕ್ತಿತ್ವದ ಮುಂದಿನ ಮುಂದುವರಿಕೆಯಾಗಿದೆ ಎನ್ನಲಡ್ಡಿಯಿಲ್ಲ. ರಾಮ ಐತಾಳ ಲಚ್ಚ, ರಾಮ ಈ ಮೂರು ಪಾತ್ರಗಳಲ್ಲಿ ಮೊದಲೆರಡು ಪಾತ್ರಗಳು ಸ್ತ್ರೀ ಶೋಷಣೆಯ ವಿಭಿನ್ನ ಮುಖಗಳಾಗಿ ಕಂಡು ಬಂದರೆ,ರಾಮನ ಪಾತ್ರವು ಹೆಂಗರುಳಿನದ್ದಾಗಿದೆ. ಇಡೀ ಕಾದಂಬರಿಯೇ ವಾಸ್ತವದ ನೆಲೆಯಲ್ಲಿ ಸಾಗುತ್ತ ಮುನ್ನೆಡೆಯುವುದರಿಂದ ಓದುಗರ ಮನದಾಳಕ್ಕಿಳಿದು ಸ್ಥಾಪಿತವಾಗಿ ಬಿಡುವುದು. ಕಾರಂತರ ಬರವಣಿಗೆಯ ವೈಶಿಷ್ಟ್ಯತೆಯಿರುವುದೇ ಇಲ್ಲಿ. ಈ ಕೃತಿಯಲ್ಲಿ ಮೂರು ತಲೆಮಾರಿನ ಕಥೆಯ ಚಿತ್ರಣವಿದ್ದರೂ ಎಲ್ಲಾ ಪಾತ್ರಗಳು  ಜೀವಂತಿಕೆಯಿಂದ ಕಣ್ಮುಂದೆ ನಿಲ್ಲುತ್ತವೆ. ಕಲ್ಪನಾ ವಿಲಾಸ ಪ್ರಸಂಗಗಳಿಲ್ಲದೆ ನೈಜತೆಗೆ ಹತ್ತಿರವಾಗಿ ನಾವು ನೋಡಿದ ಒಂದು ಸತ್ಯಕಥೆಯಂತೆ ನಿಲ್ಲುತ್ತದೆ. ಇಲ್ಲಿ ಕಡಲೂ ಸಹ ಜೀವನದ ಒಂದು ಪಾತ್ರವಾಗಿ ಜನಪದರ ಬೇರಾಗಿದೆ.  ಒಟ್ಟಾರೆ “ಮರಳಿ ಮಣ್ಣಿಗೆ”ಕಾದಂಬರಿಯು ಈ ಮಣ್ಣಿನ ಸೊಗಡುಳ್ಳ ಅಸದೃಶವಾಗಿದ್ದು ಶಿವರಾಮ ಕಾರಂತರ ಅನನ್ಯ ಕೃತಿಯಾಗಿದೆ. *****************************

Read Post »

ಇತರೆ

ಅಕಾರಣ ಅಕಾಲ

ಕವಿತೆಯ ಕುರಿತು ಅಕಾರಣ ಅಕಾಲ ನಾಗರೇಖಾ ಗಾಂವಕರ್ ಸಾಹಿತ್ಯದ ನಿಲುವುಗಳು ಭಿನ್ನ ರೀತಿಯಲ್ಲಿ ಎಂದಿಗೂ ಅಭಿವ್ಯಕ್ತಿಗೊಳ್ಳುತ್ತಲೇ ಇರುವುವು. ಸಮಾಜದ ಓರೆಕೋರೆಗಳಿಗೆ ಕನ್ನಡಿ ಹಿಡಿಯುವ ಸಾಹಿತಿಗಳು, ಕವಿಗಳು ತಮ್ಮ ವ್ಯಕ್ತಿತ್ವವನ್ನು ಅಷ್ಟೇ ಶುದ್ಧ ಪಾರದರ್ಶಕತೆಗೆ ಒಗ್ಗಿಕೊಂಡು, ನಡೆದಂತೆ ನುಡಿಯುವ  ಛಾತಿಯುಳ್ಳವರಾಗಿರಬೇಕು. ಇಲ್ಲವಾದಲ್ಲಿ ಅದು ಅಪಹಾಸ್ಯಕ್ಕೆ ಗುರಿಯಾದ ಸಂದರ್ಭಗಳಿವೆ. ಹಾಗೇ ಕವಿತೆಯಲ್ಲಿ ಕವಿಯನ್ನು ಹುಡುಕುವ ಪ್ರಯತ್ನ ಸಲ್ಲ ಎಂಬ ವಾದವೂ ಇದೆ. ಆದರೆ ಇದು ಕೂಡಾ ಎಲ್ಲ ಸಂದರ್ಭಗಳಿಗೆ ಸರಿಯಾಗದು. ಕವಿತೆ ಭಾವನೆಗಳ ಪದಲಹರಿ. ಹಾಗಾಗಿ ಅನ್ಯರ ಅನುಭವಗಳ ಮೇಲೆ ಬರೆದ ಕವಿತೆಗಳು ಆಪ್ತವಾಗಲಾರವು. ಕವಿ ತನ್ನ ನಿಕಷಕ್ಕೆ ಒಡ್ಡಿಕೊಳ್ಳಬೇಕು. ಅನುಭವಗಳಿಗೆ ತೆರೆದುಕೊಳ್ಳಬೇಕು. ಕಂಡಿದ್ದನ್ನು ನೋಡಿದ್ದನ್ನು  ರಸಾನುಭವ ನೀಡುವಂತೆ ಕಟ್ಟಿಕೊಡಬೇಕು. ಹೀಗೆ ಹತ್ತಾರು ಬಗೆಯ ನಿಲುವುಗಳು  ಅಭಿಪ್ರಾಯಗಳು  ಆಗಾಗ ಅಭಿವ್ಯಕ್ತವಾಗಿದ್ದನ್ನು ನಾನು ಗ್ರಹಿಸಿದ್ದೆ. ಇತ್ತೀಚಿನ ಸಮಕಾಲೀನ ಕವಿಗಳು ಅವರ ಭಾವತೀವ್ರತೆ, ಮುಕ್ತಛಂದದ ರೀತಿ ಎಲ್ಲವೂ ಹೆಚ್ಚು ಹೆಚ್ಚು ಪ್ರಚಲಿತವಾಗುತ್ತ ಅದರಲ್ಲಿಯೇ ಹೊಸ ಚಿಂತನೆಗಳು, ನೋವು ನಲಿವುಗಳು, ಬದುಕಿನ ಖುಷಿ, ಆಕ್ರೋಶಗಳು ವ್ಯಕ್ತವಾದ ಬಗೆಯಿಂದ ಹೃದಯಕ್ಕೆ ಆಪ್ತ ಎನ್ನಿಸಿಬಿಡುತ್ತಿವೆ. ಆ ಪಾತ್ರಗಳೇ ನಾವಾದಂತೆ, ಆ ನೋವು ಇಲ್ಲ ನಲಿವು ನನ್ನದೂ ಕೂಡಾ ಆಗಿರುವ ಸಾಧ್ಯತೆ. ಸಮಾಜಮುಖಿ ಎನ್ನುವುದಕ್ಕಿಂತ ತನ್ನನ್ನು ತೆರೆದುಕೊಳ್ಳುವುದು, ಇಲ್ಲ ಅವ್ಯಕ್ತಕ್ಕಿಂತ ವ್ಯಕ್ತ ನಿಲುವಲ್ಲಿ ಪಾರದರ್ಶಕವಾಗುವುದು ಇತ್ತೀಚಿನ ಬರಹಗಳಲ್ಲಿ ಹೆಚ್ಚು ಹೆಚ್ಚಾಗಿ ಕಂಡುಬರುತ್ತಿದೆ. ಅಂತಹ ಒಂದು ಆಪ್ತ ಕವಿತೆ ಸಮಕಾಲೀನ ಕವಯತ್ರಿ ನಂದಿನಿಯ –“ಅಕಾರಣ ಅಕಾಲ”  ಕವಯತ್ರಿ ನಂದಿನಿಯ ಭಾವಜಗತ್ತನ್ನು ಒಮ್ಮೆ ನವಿರಾಗಿ ಸ್ಪರ್ಷಿಸುವ ಪ್ರಯತ್ನ ಮಾಡಿದ್ದೇನೆ. ಅಕಾರಣವಾಗಿ ಈ ಕವಿತೆಯನ್ನು ಇಷ್ಟಪಟ್ಟಿದ್ದೇನೆ. ಅಕಾರಣ ಅಕಾಲದಲ್ಲಿ ನನ್ನ ಹುಡುಕಿ ಬಂತು ಅದು ಧಗೆಯ ಧೂಳು ತುಂಬಿದ ಒಂದು ಕಡು ಮಧ್ಯಾಹ್ನ.. ಗಿಜುಗುಡುವ ಮೌನ, ಗವ್ವೆನ್ನುವ ಸದ್ದು. ವಿರಾಮದ ಕಾಲವಿರಬೇಕು ಜಗದ ವಿದೂಷಕನಿಗೆ ಚಿಟ್ಟೆ ಹಾರಿಬಿಟ್ಟು ಹೂವ ಬಟ್ಟಲಲಿ ಬಯಕೆ ತುಂಬಿಟ್ಟ ತುಂಬಿದ ಬಿಂದಿಗೆಯಂಥ ಕಂಗಳು ಸಂಪಿಗೆ ಎಸಳಂಥ ಬೆರಳು ಭೇಟಿ ಆದವು ಸದ್ದಿನ ಸೂರಿನಡಿಯಲ್ಲಿ.. ತುಸು ಹೊತ್ತು ಸುಖವಾದ ಮೌನ ಬಿಟ್ಟಸ್ಥಳಕ್ಕೆ ಹುಟ್ಟಿಕೊಂಡವು ಮಾತು … ಗೊತ್ತಿಲ್ಲ ನನಗೆ.. ಅದು ಹೇಗೆ ಬಂತೆಂದು: ಕಡುಧಗೆಯ ದಿನದ ದಣಿವಿಂದ ಬಂತೇ? ಮಾಗಿಯಿರುಳಿನ ಮುಗಿಲ ಬೆಳಕಿಂದ ಬಂತೇ? ನೆಲಮುಗಿಲು ಒಲಿದಾಗ ಅಳುಕಾಗಿ ಬಂತೇ? ಗೊತ್ತಿಲ್ಲ ನನಗೆ ಅದು ಯಾಕೆ ಬಂತೆಂದು: ಬರದ ದಿನಗಳ ಬದುಕ ನೆರೆಯಾಗಿ ಬಂತೇ? ಬಯಲೆದೆಯ ಮೇಲೊಂದು ನವಿಲಾಗಿ ಬಂತೇ? ಬದಲಾಗದ ನೆಲೆಯ ಸೊಬಗಾಗಿ ಬಂತೇ..? ಬಂದೇ ಬಂತು.. ಹಗಲುಗಳ ಕಸಿಯಿತು..ಹಸಿವನ್ನೆ ಕೊಂದಿತು ಹರಿವನ್ನು ತೊರೆಯಿಸಿತು.. ಹುಡುಕಾಟ ಕೊನೆಯಾಯ್ತು ಬಂದೇ ಬಂತು ಸೊನ್ನೆಯಾಗಿಸಿತು ನನ್ನತನ ಚಂದವೆನಿಸಿತು ಒಂದುತನ ಬಂಧವೆಂದರೆ ಇದೇ ಎನಿಸಿ ಬಂಧನವೂ ಇದೇ..? ಬದಲಾದೆನೇ ನಾನು.. ಬೆಳಕಾದೆನೇ? ಮುಂದಿನದೆಲ್ಲಾ ಇತಿಹಾಸ ತಪ್ಪಿತು ದಿನಚರಿಯ ಪ್ರಾಸ. ಕತ್ತಲಾಯಿತೆಂದು  ಹಕ್ಕಿ ಬಿಚ್ಚಿಟ್ಟ ರೆಕ್ಕೆಗಳು ನನ್ನ ಪಕ್ಕೆ ಪಕ್ಕದಲ್ಲಿ.. ಚೆಲ್ಲಿದವು ಚುಕ್ಕಿ ಹೆಕ್ಕಿಕೋ ಎನ್ನುತ್ತಾ… ಒಳಗೊಳಗೆ ಹದ ಬೇಗೆ.. ಬೆಂಕಿ ಕೆನ್ನಾಲಿಗೆ…. ಇಲ್ಲವೆನ್ನುವುದೇ ಸುಖವೆನುವ ಕಾಲದಲ್ಲಿ ಇದೆ.. ಇದು ಅದೇ.. ಎನ್ನುತ್ತಾ ಬಂದೇ ಬಂತು ಅಕಾಲದಲ್ಲಿ ಅಕಾರಣ ಕಿರುಬೆರಳ ನೆರವಿಟ್ಟು ಕರೆಯಿತು ಹೊರಗೆ ಎಷ್ಟು ಬಾಯಿಗೆ ಹಾಕಬೇಕಿತ್ತು ಹೊಲಿಗೆ ಎಷ್ಟು ನೋಟಗಳಿಗೆ ಕಟ್ಟಬೇಕಿತ್ತು ಬಟ್ಟೆ ಅಡಿಯಿಟ್ಟೆ ನಡುಗುತ್ತಾ.. ಇದು ಬೆಂಕಿ ಜಾಡು ಎದೆಯೊಳಗೆ ಬೆಳಕ ಹಾಡು ಒಂದು ಪ್ರೇಮದಲ್ಲಿ ಮುಳುಗುವುದೆಂದರೆ ..! ಎಷ್ಟು ಅಸ್ಪಷ್ಟ ಸಾಲುಗಳ ಬರೆದೆ.. ಅರ್ಥವಿರಲಿಲ್ಲ.. ವ್ಯರ್ಥವಾಗಲೂ ಇಲ್ಲ.. ತೂಗಿ ಆಡಲಿಲ್ಲ.. ಸೋಗು ನಟಿಸಲಿಲ್ಲ. ಎಷ್ಟು ದಕ್ಕಿದೆವು ನಾವು ಒಬ್ಬರಿಗೊಬ್ಬರು ಏನೆಲ್ಲಾ ಕಳೆದದ್ದು? ಕೂಡುವಾಸೆಗೆ ಬೇಡಿದ್ದು ಯಾರು ಮೊದಲು? ಯಾವುದೀ ಬೆರಗು? ಹೇಗೆ ತೆರೆದೆವು ನಾವು ಹೃದಯದ  ಬಾಗಿಲು ಇದು.. ಇದುವೇ ತವಕ.. ನಾನು ಕಾಣದ ಲೋಕ.. ಎದೆಯೊಳಗೆ ಎದೆ ಬೆರೆತು,ಭವವೆಲ್ಲಾ ಬೆವೆತು ಮತ್ತೆಮತ್ತೆ ಎಚ್ಚೆತ್ತು,. ಏರುವಾಗಲೂ ಇರುವನ್ನೆ ಅರಿತು ಕಳೆದುಹೋದೆನು ನಾನು ಪರಿಚಿತದ ಹಾದಿಯಲಿ ಸಂತೆಯಲ್ಲೇ ಒಂಟಿ ತಿರುಗಿ.. ನಾಳೆಯ ಮೊಗ್ಗಿಗೆ ಈ ಸಂಜೆಯೇ ಬೆಂಕಿ ಬೇರು ಉರಿವಾಗ ಚಿಗುರಲ್ಲಿ ಹೂವು ಮೀಯದೆ ಮಡಿಯುಟ್ಟು ಮಂಡಿಯೂರಿ ಬಿಡಿಸಿ ಅರ್ಪಿಸದ ಹೊರತು ಬದುಕಿಲ್ಲ ಇಲ್ಲಿ ಅಕಾಲ, ಅಕಾರಣ ಜನನಕ್ಕೆ ಹಸಿವು ಹೆಚ್ಚು. ಎಲ್ಲಿತ್ತು ಈ ಅಳಲು? ದಿನದಿನವೂ ಹೊಸ ಅರಳು ಸುಖವೆನಿಸುತ್ತದೆ ಅಸೂಯೆ ಹುಸುಹುಸಿ ದ್ವೇಷ ಬಯಸಿ ಮಾಡುವ ಮೋಸ ಸಂಜೆಗೊಂದಿಷ್ಟು ಮುನಿಸು ನಾಳೆಗೇನಿದೆ ಹೊಸ ಜಗಳ? ಅಕಾರಣ ಅಕಾಲದಲ್ಲಿ ಬಂದ ನನ್ನ ಅಂತರಂಗ ಸಂಚಲನವೇ.. ನಾನು ನಿಟ್ಟುಸಿರಾದೆ ನೀನಲ್ಲಿ ನರಳಿ ನಾನು ನಕ್ಕರೆ ನಿನ್ನ ನೀಲಿಮರವೂ ಹೊರಳಿ ನೀನು ಕರೆದರೆ ಸಾಕು ಇಲ್ಲಿ ದೇವಕಣಗಿಲೆ ಅರಳಿ ನನ್ನ ಹಿತವಾದ ನೋವೇ. ಕಾಯದ ಕಾವೇ ಕಾಯುವ ಸಾವೇ ಇನ್ನೆಷ್ಟು ಸರಕುಗಳ ಪೇರಿಸಿವೆ ಇಲ್ಲಿ ಹೇಗೆ ಅಡಗಿಸಲಿ ಎದೆಯಡಿಯ ನದಿಯನ್ನು? ಯಾವ ಹಾದಿಯಿದು, ಎಲ್ಲಿ ತಲುಪಿಸುವುದು ನಮ್ಮನ್ನು? ನನ್ನ ಆತ್ಮದ ತುಂಬಾ ನಿನ್ನವೇ ಬೇರುಗಳು ಚಿಗುರು, ಮುಗುಳು, ಎಸಳು  ಪರಿಮಳವೂ ನೀನೇ ನನ್ನೊಲವಿನ ಅಕಾರಣವೇ ಸುಖವಾದ ದುಃಖಿ ನಾನು ಗಾಳಿಯಲಿ ಹಾಡು ಹೇಳಬೇಡ ದಯಮಾಡಿ ಹಂಬಲಿಸುವೆ ನಾನು ಇನ್ನೂ ಇದು ಧಗೆಯ ಧೂಳು ತುಂಬಿದ ಒಂದು ಕಡು ಮಧ್ಯಾಹ್ನ.. ಆರಂಭವಾಗಿಲ್ಲ.. ನನ್ನ ಪ್ರೀತಿಯಿನ್ನೂ.. ಇದೊಂದು ದೀರ್ಘ ಕವನ. ಇಡೀ ಒಂದು ಚಿತ್ರಣವನ್ನು ನಮ್ಮ ಕಣ್ಣಮುಂದೆ ಬೆಳ್ಳಿಪರದೆಯ ಮೇಲೆ ಚಿತ್ರ ಮೂಡಿಸಿದಂತೆ ಚಿತ್ರಿಸುತ್ತಾ ಹೋಗಬಲ್ಲದು. ಕಾವ್ಯ ಮೋಹಿ ಹೆಣ್ಣೊಬ್ಬಳ ಅಂತರಂಗದ ಅಂತಪುರದ ಗೀತೆ. ತೀವ್ರ ಭಾವವೇ ಇಲ್ಲಿ ಸ್ಥಾಯಿ. ಕವಿತೆಯ ಪ್ರಾರಂಭದಲ್ಲಿ  ಅಕಾರಣವಾಗಿ ಅಕಾಲದಲ್ಲಿ ಬಂದದ್ದು ಏನೆಂದು ಹೊಳೆಯದೇ ವಿರಹಿಣಿಯೊರ್ವಳ ಹುಡುಕಾಟದ ಹಾಗೆ ಕಾಣುವ ಕವಿತೆ ಮಧ್ಯಭಾಗಕ್ಕೆ ಬರುತ್ತಲೇ, ಪ್ರೇಮವನ್ನು ಭಿನ್ನವಾಗಿ ಗ್ರಹಿಸುವಂತೆ ಮಾಡುತ್ತದೆ. ಕಾವ್ಯವನ್ನೆ ಪ್ರಿಯಕರನ ರೂಪದಲ್ಲಿ ಕಾಣುವ ಉತ್ಕಟತೆ ಇಲ್ಲಿದೆ. ಪ್ರಿಯ ಬೇರೆಯಲ್ಲ, ಕವಿತೆ ಬೇರೆಯಲ್ಲ.. ಅಕಾರಣ ಅಕಾಲದಲ್ಲಿ ನನ್ನ ಹುಡುಕಿ ಬಂತು ಅದು ಧಗೆಯ ಧೂಳು ತುಂಬಿದ ಒಂದು ಕಡು ಮಧ್ಯಾಹ್ನ.. ಗಿಜುಗುಡುವ ಮೌನ, ಗವ್ವೆನ್ನುವ ಸದ್ದು. ಇದು ಬಯಸಿದ್ದೂ ಅಲ್ಲ, ಪಡೆದದ್ದು ಅಲ್ಲ. ಕಾರಣವಿಲ್ಲದೇ ಬಂದಿದ್ದು, ಕಾಲವಲ್ಲದ ಕಾಲದಲ್ಲಿ ಹತ್ತಿರವಾದದ್ದು. ಕಾರ್ಯಕಾರಣ ಎನ್ನುವುದು ಎಲ್ಲರಿಗೂ ಸಮ್ಮತವಾಗಿಯೇ ಇರುವಂತಹದ್ದು. ಆದರೆ ಇದು ಎಲ್ಲ ಸಂಗತಿಗೆ ಹೊರತಾದದ್ದು. ನಡು ಮಧ್ಯಾಹ್ನ, ನಡು ವಯಸ್ಸಿನ ಹೊತ್ತು, ಮನಸ್ಸು ಬೇಗೆಯಲ್ಲಿ ಬೆಂದು ಧೂಳು ತುಂಬಿಕೊಂಡ ಹೊತ್ತು, ಮೌನದ ಅಭ್ಯಾಸವಾಗಿ ಅದೇ ಮಾತಿಗಿಂತ ಹೆಚ್ಚು ಸದ್ದು ಮಾಡುತ್ತಿದ್ದ ಹೊತ್ತು, ಜಗದ ನಿಯಾಮಕ ತನ್ನ ಖುಷಿಯ ಕ್ಷಣದಲ್ಲಿ ವಿರಾಮದ ಅವಧಿಯಲ್ಲಿ ಇದ್ದ ಹೊತ್ತು, ಚಿತ್ತಾಕರ್ಷಕ ಚಿಟ್ಟೆಯನ್ನ ಇತ್ತ ಹಾರಿ ಬಿಟ್ಟ, ಬಯಕೆಯನ್ನೆ ಮನದ ಬಟ್ಟಲಲ್ಲಿ ತುಂಬಿಟ್ಟ ಎಂದು ತೀವ್ರವಾಗಿ ಅನುಭವಿಸುತ್ತಾ ಹೇಳುವ ಕವಯತ್ರಿ ಆಹ್ಲಾದದ ಜಗತ್ತಿನಲ್ಲಿ ಸಹೃದಯನ ಮನಸ್ಸನ್ನು ಸೆರೆ ಹಿಡಿಯುತ್ತಾರೆ. ತುಂಬಿದ ಬಿಂದಿಗೆಯಂಥ ಕಂಗಳು ಸಂಪಿಗೆ ಎಸಳಂಥ ಬೆರಳು. ಇಲ್ಲಿ ವ್ಯಕ್ತವಾಗುವ ಭಾವವೇ ಇಡೀ ಕವಿತೆಯ ಘನತೆಯನ್ನು ತೋರಿಸುತ್ತದೆ. ಕಂಗಳು ಬೆಳಕಾಗಿ, ಜ್ಞಾನವಾಗಿ ಕಂಡರೆ, ಬೆರಳು ಅರಿವನ್ನು ಪದಕ್ಕಿಳಿಸುವ ಬೆರಗಾಗಿ ಬಂದಿದೆ. ಅವರಿಬ್ಬರ ನಡುವಿನ ಭೇಟಿ, ಬಿಟ್ಟಸ್ಥಳಕ್ಕೆ ಹುಟ್ಟಿಕೊಂಡ ಮಾತು, ಎಂತಹ ಚಂದದ ಆಲೋಚನೆ. ಬಂದೇ ಬಂತು ಎನ್ನುವ ಈ ಪ್ರೀತಿ ನವಿಲಾಗಿ, ಬದುಕಿನ ನೆರೆಯಾಗಿ,ನೆಲೆಯ ಸೊಬಗಾಗಿ ಬಂತೆನ್ನುವುದು  ಈ ಪ್ರೇಮದ ಮೇಲಿನ  ವ್ಯಾಮೋಹಕ್ಕೆ ಉತ್ಪ್ರೇಕ್ಷೆಯಾಗಿದೆ. ಬಂದ ದಿನದಿಂದ ನಿತ್ಯದ ಹರಿವನ್ನೆ ತೊರೆಯಿಸಿದೆ, ಹಗಲುಗಳೇ ಇಲ್ಲ ಈಗ, ಹಸಿವೆನ್ನುವುದು ದೂರ, ಇದು ಬಂಧವಾಗಷ್ಟೇ ಉಳಿಯದೇ ಬಂಧನವೂ ಆಗಿದೆ. ಆದರೆ ಕವಯತ್ರಿಗೆ .ಬೆಳಗಾಗುವ ದಾರಿಯಲ್ಲಿ ಈ ಬಂಧನವೂ ಹಿತವಾಗಿದೆ. ಮುಂದಿನದೆಲ್ಲಾ ಇತಿಹಾಸ ತಪ್ಪಿತು ದಿನಚರಿಯ ಪ್ರಾಸ. ಬೆಂಕಿಯ ಕೆನ್ನಾಲಿಗೆಗೆ ಬಳಲಿದ ಹೊತ್ತು,ಹೊಸ ಕನಸುಗಳು ಮೂಡಿದ್ದು, ಹಕ್ಕಿ ಬಿಚ್ಚಿಟ್ಟ ರೆಕ್ಕೆಗಳು. ಚುಕ್ಕಿಗಳು ಅವಳ ಜೊತೆಯಾದದ್ದು,  ಆ ಸುಂದರತೆಯನ್ನು ಜೊತೆ ಮಾಡಿದ್ದು ಈ ಪ್ರೇಮ.  ಈ ಪ್ರೇಮ ಅವಳನ್ನು ಎಷ್ಟು ಬೆಂಬಲಿಸುತ್ತಿದೆ ಎಂದರೆ ನಡೆವ ಹಾದಿಗೆ ತನ್ನ  ಕಿರುಬೆರಳನ್ನು ನೀಡಿ ಹೊರಗೆ ಬರುವುದು ಕಲಿಸಿದೆ. ಆದರೆ ಜಗದ ಬಾಯಿಗೆ  ಹೊಲಿಗೆ ಹೇಗೆ ಹಾಕಲಿ ಎಂಬ ಚಿಂತೆ,  ವಿಕಾರ ನೋಟಗಳ ಹೇಗೆ ಎದುರಿಸಲಿ ಎಂಬ ಭಯ, ಆದರೂ ಧೃತಿಗೆಡದ ಈ ಕವಿತೆ ಬೆಂಕಿಯ ಜಾಡೆನ್ನುವುದ ತಿಳಿದೂ ಬೆಳಕಾಗುವ ಹಂಬಲ ಹೊತ್ತಾಕೆ. ಈ ಪ್ರೇಮ, ಕಾವ್ಯ ಪ್ರೇಮ ಅವಳಲ್ಲಿ ಅಂತರಂಗದ ಸಂಚಲನೆಯೇ ಆಗಿದೆ. ದ್ವೇಷ, ಅಸೂಯೆ, ಮೋಸ, ಮುನಿಸು, ಜಗಳ ಕಾವ್ಯಲೋಕದ  ನಿತ್ಯ ಕಾಯಕಗಳೆ ಆಗಿ ಮೆರದಿವೆ. ಒಂದು ಪ್ರೇಮದಲ್ಲಿ ಮುಳುಗುವುದೆಂದರೆ ..! ಎಷ್ಟು ಅಸ್ಪಷ್ಟ ಸಾಲುಗಳ ಬರೆದೆ.. ಅರ್ಥವಿರಲಿಲ್ಲ.. ವ್ಯರ್ಥವಾಗಲೂ ಇಲ್ಲ.. ಆ ಪುರುಷನಲ್ಲಿ, ಕಾವ್ಯ ಪುರುಷನ ಪ್ರೇಮದಲ್ಲಿ ಮುಳುಗಿದ ಸಂದರ್ಭ ಎಷ್ಟು ಅಸ್ಪಷ್ಟ ಸಾಲುಗಳಿಗೆ ಕಾರಣವಾಯಿತು ಎನ್ನುತ್ತಾಳೆ. ಆದರೆ ಅವೆಲ್ಲ ವ್ಯರ್ಥವಾಗಲಿಲ್ಲ. ಕಳೆದುಕೊಳ್ಳುತ್ತಲೇ ದಕ್ಕಿಸಿಕೊಂಡಿದ್ದು ಬಹಳಷ್ಟಿದೆ.ತೂಗಿ ಆಡಲಿಲ್ಲ.. ಸೋಗು ನಟಿಸಲಿಲ್ಲ. ಎಷ್ಟು ದಕ್ಕಿದೆವು ನಾವು ಒಬ್ಬರಿಗೊಬ್ಬರು ಏನೆಲ್ಲಾ ಕಳೆದದ್ದು? ಪ್ರೀತಿಯಲ್ಲಿ ಸ್ವಾರ್ಥ ವ್ಯಕ್ತಿತ್ವರಳಿಸುವ ಬದಲು ಸಂಕುಚಿತಗೊಳಿಸುತ್ತದೆ. ಒಳಗಿನ ಸೆಲೆ ಉಕ್ಕುತ್ತಲೆ ಇರಬೇಕು. ಬರಿದಾಗದಂತೆ. ಲೌಕಿಕದ ಸುತ್ತ ನೆರೆದ ಬಯಕೆಗಳು, ಹೆಣ್ಣಿನ ಮನಸ್ಸು ಬಯಸುವ ಸುಕೋಮಲ ಪ್ರೀತಿ. ಕಾರಣವಿಲ್ಲದೇ ಬಂದ ಈ ಸಂಗತಿ ಕಾಲವಲ್ಲದ ಕಾಲದಲ್ಲಿ ಹತ್ತಿರವಾದದ್ದು,  ಅತಿರೇಕದ ಭಾವಗಳು ಎನ್ನಿಸಿದರೂ ಉತ್ಕಟತೆಯನ್ನೆ ಪ್ರೇಮದ ಮದಿರೆಯನ್ನೇ ಕವಿತೆ ಹೇಳಿದ್ದು ಮನಸ್ಸು ಅದರೊಳಗೆ ನಾನೆ ಆಗಿ, ನನ್ನೊಳಗೆ ಕವಿ ಕಂಡಂತಾಗಿ, ಬಹುಶಃ  ಒಬ್ಬ ಆರ್ದ್ರ ಮನಸ್ಸಿನ ಹೆಣ್ಣುಗಳ ಪ್ರತೀಕವಾಗಿ      ಕವಯತ್ರಿ ಕಾಣುತ್ತಾರೆ. ನಿತ್ಯದ ಬದಲಾಗದ ದಿನಚರಿಯಲ್ಲಿ ಏಕತಾನತೆಯನ್ನೆ ಉಂಡು ನರಳಿ ಮೌನದ ಸದ್ದಿಗೆ ಮಸುಕಾಗುತ್ತಿದ್ದ ಜೀವವೊಂದರ ಬದಲಾದ ನಿಲುವು, ಹೊಸತನ, ಅದಕ್ಕೆ ಕಾರಣವಾದ ಸಂಗತಿಯೊಂದರ ಸುತ್ತ ಸುತ್ತುವ ಕವಿತೆ, ಬದುಕನ್ನೆ ತೆರೆದಿಟ್ಟದೆ. ಕಾವ್ಯ ಅವಳೊಳಗಿನ ಚೇತನವನ್ನು ಬಡಿದೆಬ್ಬಿಸಿದೆ,  ಜನರ ನುಡಿಗಳಿಗೆ ಭಯಗೊಳ್ಳುತ್ತಿದ ಆಕೆ ಈಗದನ್ನು ಮೀರಿದ್ದಾಳೆ. ಅವರ ವಕ್ರ ದೃಷ್ಟಿ ಅವಳಿಗೆ ಅಭ್ಯಾಸವಾಗುತ್ತಾ, ಹೆಜ್ಜೆಗಳು ದೃಢವಾಗುತ್ತಿವೆ. ಆದರೂ ಯಾವುದೂ ಸ್ಥಿರವಲ್ಲ ಎಂಬ ಪ್ರಜ್ಞೆ ಆಕೆಗಿದೆ. “ಗಾಳಿಯಲ್ಲಿ ಹಾಡು ಹೇಳಬೇಡ” ಎನ್ನುವ ಕವಯತ್ರಿ  ಇನ್ನೂ ಅಸ್ಥಿರತೆಯನ್ನು ಎದುರಿಸುತ್ತಿರುವ ಸಾಂಕೇತಿಕ. ಎಲ್ಲಿ ಪ್ರಾರಂಭವೋ ಅಲ್ಲೆ ಕೊನೆ ಎಂಬ ದರ್ಶನ ನೀಡುವಂತೆ ಮತ್ತೆ ಕೊನೆಯ ಸಾಲುಗಳು ಓದುಗನ ವ್ಯಾಕುಲ ಗೊಳಿಸುತ್ತವೆ. ಪೇಮದ ಹಾದಿಯಲ್ಲಿ ಕಾಣುವ ಎಲ್ಲ ಏಳುಬೀಳುಗಳು, ನೋವು ನಲಿವುಗಳು ಇಲ್ಲಿ ಸಹಜವಾಗಿ ಬಂದಿವೆ. ಇದು ಬರೀ ಪ್ರಿಯನ ಕುರಿತಾದ ಕನವರಿಕೆಯಲ್ಲ. ಅದಕ್ಕೂ ಮೀರಿ ತನ್ನ ತಾನು ಕಂಡುಕೊಳ್ಳುವ ದಾರಿಯಲ್ಲಿನ ಗತಿ ಈ  ಕವಿತೆ ಅತಿಯಾದ ವಿವರಣೆಗಳ ಭಾರದಿಂದ ನಲುಗಿದೆ. ಸೂಕ್ಷ್ಮತೆಯೂ, ಕಿರಿದರಲ್ಲಿ ಹಿರಿದರ್ಥವನ್ನೂ ಹೇಳುವುದು ಕವಿತೆಯ  ಶ್ರೇಷ್ಟತೆ.ಇಲ್ಲಿ ಆ ಸಂಗತಿಗಳ ಕೊರತೆ ಕಾಣುತ್ತಿದೆ.ಆದರೂ ಕವಿತೆ ಹೃದಯವನ್ನು ಗೆದ್ದಿದೆ. *****************

ಅಕಾರಣ ಅಕಾಲ Read Post »

ಇತರೆ

ಕಾದಂಬರಿ ಕುರಿತು ಚೋಮನ ದುಡಿ ಡಾ.ಶಿವರಾಮ ಕಾರಂತ ತಿಲಕ ನಾಗರಾಜ್ ಹಿರಿಯಡಕ ಚೋಮನ ದುಡಿಯ ಮೋಡಿಗೆ ಮನಸೋತಿರುವೆ…  ಯಾವುದೇ ಕೃತಿ ಓದಿದರೂ ನನ್ನನ್ನು ಮತ್ತೆ ಮತ್ತೆ ಕಾಡುವುದು ನೆಚ್ಚಿನ ಸಾಹಿತಿ ಕಾರಂತಜ್ಜರ ‘ಚೋಮನ ದುಡಿ’ ಅಂದಿನ ಕಾಲದ ಕಾರ್ಗತ್ತಲ ಸ್ವರೂಪ, ಆ ಕತ್ತಲನ್ನು ಲೆಕ್ಕಿಸದೆ ಜನರು ಊರ ಜಾತ್ರೆಯನ್ನು ಸಂಭ್ರಮಿಸುತ್ತಿದ್ದ ಪರಿ, ಇಂದು ಹಗಲಿನಂತೆ ಬೆಳಗುವ ರಾತ್ರಿಯ ಕಾಣುವ ನಮನ್ನು ಬೇರಾವುದೋ ಲೋಕಕ್ಕೆ ಕೊಂಡೊಯ್ಯುತ್ತದೆ. ಚೋಮನ ದುಡಿಯಲ್ಲಿ ಬರುವ ಪ್ರತಿಯೊಂದು ಪಾತ್ರಗಳು ಮನಸ್ಸಿಗಿಳಿಯುತ್ತವೆ. ನಮಗಿವತ್ತು ಕೇವಲವೆನಿಸುವ  ಇಪ್ಪತ್ತು ರೂಪಾಯಿ ಈ ಕಾದಂಬರಿಯಲ್ಲಿ ಒಗ್ಗಟ್ಟಾಗಿದ್ದ ಚೋಮನ ಸಂಸಾರವನ್ನು ಛಿದ್ರಗೊಳಿಸಿಬಿಡುತ್ತದೆ. ಹೇಗೋ ಗಂಜಿ,ಉಪ್ಪು, ಕಾಳುಕಡಿ ತಿಂದುಂಡಿದ್ದ ಸಂಸಾರ ಚೋಮ ಮಾಡಿದ್ದ ಸಾಲದ ಸುಳಿಯೊಳಗೆ ಸಿಲುಕಿ ನಲುಗುತ್ತದೆ. ಅಪ್ಪನ ಸಾಲ ತೀರಿಸ ಹೊರಟ ಗುರುವ, ಚನಿಯರಲ್ಲಿ ಗುರುವ ತನ್ನ ವಯೋ ಸಹಜ ಬಯಕೆಯಿಂದ ಅವಳಾರನ್ನೋ ಕಟ್ಟಿಕೊಳ್ಳುತ್ತಾನೆ. ಚನಿಯ ಜ್ವರಕ್ಕೆ ಬಲಿಯಾಗುತ್ತಾನೆ. ಇಷ್ಟಾಗಿದ್ದರೆ ಸಾಕಿತ್ತೇನೋ ಇಪ್ಪತ್ತು ರೂಪಾಯಿ ಯಿಂದ ಇಪ್ಪತ್ತೈದಕ್ಕೇರಿದ ಅಪ್ಪನ ಸಾಲದ ಹೊರೆಯನ್ನು ಬೆಳ್ಳಿ ಹೊರುತ್ತಾಳೆ , ಕೊನೆಗೆ ತೀರಿಸುತ್ತಾಳೆ ಕೂಡ. ಆದರೆ ಅಲ್ಲೊಂದಷ್ಟು ನಡೆಯುವ ಘಟನಾವಳಿಗಳು ಮನ ಕಲಕುತ್ತವೆ‌. ಎಷ್ಟಂದರೂ ಹೆಣ್ಣುಮಗಳಲ್ಲವೇ? ನೀಲನ ಘೋರ ಅಂತ್ಯಕ್ಕೆ ಛೆ! ಎಂಬ ಉದ್ಗಾರ ನಮಗರಿವಿಲ್ಲದೆ ಹೊರಬರುತ್ತದೆ. ಇಲ್ಲಿ ಬೆಳ್ಳಿ ಮತ್ತು ಚೋಮನ ಪಾತ್ರಗಳು ಬಹುವಾಗಿ ಕಾಡುತ್ತವೆ. ತಂದೆಯನ್ನು, ಅಣ್ಣತಮ್ಮಂದಿರನ್ನು ಬಹುವಾಗಿ ಪ್ರೀತಿಸುವ, ತಾಯಿ, ತಂಗಿ,ಅಕ್ಕ , ಜವಾಬ್ದಾರಿಯುತ ಹೆಣ್ಣುಮಗಳು ಹೀಗೆ ವಿವಿಧ ಪಾತ್ರಗಳನ್ನು ನಿಭಾಯಿಸುವ ಬೆಳ್ಳಿ ಹಾದಿ ತಪ್ಪಿದಳೆ? ಎಂದುಕೊಳ್ಳುವಾಗ ಇಲ್ಲ ವಯೋ ಸಹಜ ಬಯಕೆಗೆ ಬಲಿಯಾದಳೆ? ಎಂಬ ಪ್ರಶ್ನೆ ಹುಟ್ಟುತ್ತದೆ. ಆದರೂ ಬೆಳ್ಳಿಯ ಬಗ್ಗೆ ಮನಸ್ಸಿನ ಮೂಲೆಯಲ್ಲಿ ಮರುಕವೊಂದು ಹುಟ್ಟಿಕೊಳ್ಳುತ್ತದೆ. ಇನ್ನು ಚೋಮನೇನಾದರೂ ಸಿಕ್ಕಿದರೆ ” ಅಯ್ಯೋ ಚೋಮ ಹೆಂಡದಂಗಡಿಗೆ ಹಾಕೊ ದುಡ್ಡಿಂದ ಸಾಲಾನಾದ್ರು ತೀರಿಸ್ಬಾರ್ದಾ? ” ಅಂತ ಕೇಳಿಬಿಡಬೇಕು ಎನ್ನುವಷ್ಟು ನೈಜವಾಗಿ ಮೂಡಿಬಂದಿರುವ ಪಾತ್ರ ಚೋಮನದು. ಮೊದಲಿನಿಂದ ಕೊನೆಯವರೆಗೂ ಚೋಮನ ಜೊತೆಗಾರನಾಗಿ ಕಾದಂಬರಿಯುದ್ದಕ್ಕೂ ಸದ್ದು ಮಾಡೋ  ದುಡಿ ಕೊನೆಯಲ್ಲಿ  ತನ್ನ ಸದ್ದಿನೊಂದಿಗೆ ಚೋಮನ ಉಸಿರನ್ನೂ ಜೊತೆಗೆ ಚೋಮನ ಬೇಸಾಯದ ಕನಸನ್ನೂ ಕರೆದೊಯ್ದು ಕಣ್ಣಂಚನ್ನು ತೇವಗೊಳಿಸುತ್ತದೆ. ಬದುಕಿನುದ್ದಕ್ಕೂ ಚೋಮನ ದುಡಿಯ “ಡಮ ಡಮ್ಮ ಢಕ ಢಕ್ಕ” ಸದ್ದು ಸದಾ ಕರ್ಣಗಳಲ್ಲಿ  ಅನುರಣಿಸುತ್ತಲೇ ಇರುತ್ತದೆ. ******************************* ತಿಲಕ ನಾಗರಾಜ್ ಹಿರಿಯಡಕ

Read Post »

ಇತರೆ

ಕಾದಂಬರಿ ಕುರಿತು ಮಲೆಗಳಲ್ಲಿ ಮದುಮಗಳು ಕುವೆಂಪು ಚಂದ್ರಿಕಾ ನಾಗರಾಜ್ ಹಿರಿಯಡಕ ಮಲೆಯ ಝೇಂಕಾರಗಳಿಗೆ ಕಿವಿಯಾಗುತ್ತಾ… ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಅನೇಕ ಕಾದಂಬರಿಗಳು ಜೀವಂತಿಕೆ ಪಡಕೊಂಡಿವೆ. ಅನೇಕ ಸಾಹಿತಿಗಳು ತಮ್ಮ ಕೃತಿಗಳ ಮೂಲಕಾನೇ ಉಸಿರಾಡುತ್ತಿದ್ದಾರೆ. ಅಂತಹ ಮೇರು ಸಾಹಿತಿಗಳಲ್ಲಿ ಪ್ರಮುಖರು ಕುವೆಂಪು. ಪ್ರಕೃತಿಯೊಂದಿಗಿನ ನಂಟಿನಲ್ಲೇ ಸಂಬಂಧಗಳನ್ನು ಅರಳಿಸುತ್ತಾ ಸಾಗಿಸುವ ಶ್ರೇಷ್ಠ ಕವಿ ಕುವೆಂಪು. ಅವರ ಕೃತಿಗಳಲ್ಲಿ ನನ್ನನ್ನು ಬಹುವಾಗಿ ಕಾಡಿದ್ದು “ಮಲೆಗಳಲ್ಲಿ ಮದುಮಗಳು”. ಕಣ್ಣಿಗೆ ದಣಿವೇ ನೀಡದೆ ಓದಿಸಿಕೊಂಡು ಹೋಗುವ ಕಾದಂಬರಿ. ಮಲೆಗಳಲ್ಲಿ ಕಾಡುವ ಮದುಮಗಳ ಬರಹ ಕಾವ್ಯವಿದು.ಕಾದಂಬರಿಯ ಪ್ರತೀ ಪಾತ್ರವೂ ಮುಖ್ಯವೇ…ಒಂದೊಂದೂ ಕವಿತೆಯಂತೆ ಇಳಿಯುತ್ತವೆ. ಗುತ್ತಿ – ತಿಮ್ಮಿಯ ಪ್ರೇಮ, ಐತ – ಪೀಂಚಲುವಿನ ಮೋಹ, ಮುಕುಂದಯ್ಯ – ಚಿನ್ನಮ್ಮರ ಒಲವ ಚೆಲುವು ಎಲ್ಲವೂ ಇಲ್ಲಿ ದೊಡ್ಡ ಸೊಬಗು…ಈ ಸೊಬಗ ಹಿಂದೆ ಹಿಂದೆ ಹೋದಷ್ಟು ಎಲ್ಲಿಯೂ ನಿಲ್ಲಲಾಗುವುದಿಲ್ಲ…ದಾರಿ ಸಾಗಿದಂತೆ ಸಾಗುತ್ತಿರಬೇಕಷ್ಟೇ…ಪ್ರೇಮಕ್ಕೆ ಕೊನೆ ಎಂಬುವುದಿಲ್ಲ…ಅದು ಯಾರನ್ನೂ ಸೆಳೆಯಬಲ್ಲ ಸೂಜಿಗಲ್ಲು…ಪ್ರಕೃತಿಯಂತೆ….ಇಲ್ಲಿ ಪ್ರೇಮ ಹಾಗೂ ಪ್ರಕೃತಿ ಒಂದಾಗಿ ಮೇಳೈಸಿದೆ..ಹಾಗಂದ ಮೇಲೆ ಬೇರೆ ದಿಗ್ಭ್ರಮೆಗಳು ಬೇಕೇ…! ಪ್ರೀತಿಯೊಂದಿಗೆ ಬೆಸೆದ ಬಂಧಗಳ ನಡುವೆ ಜಾತಿಯ ನರಳಾಟ ಕಿವಿಗೆ ಕರ್ಕಶವಾಗುತ್ತದೆ.ಜಾತಿ ಭೇದದ ವಾಸನೆ ಮೂಗಿಗೆ ಬಡಿಯುತ್ತದೆ. ದೈಹಿಕ ವಾಂಛೆಗಳಿಗೆ ಬಲಿಯಾದ ಮುಗ್ಧ ಪ್ರೇಮದ ಕಿರುಚಾಟ ಕಿವಿಗೆ ಅಡರುತ್ತದೆ. ಇಲ್ಲಿ ಕಾಡುವ ದುರಂತಗಳಿವೆ..ಒಂದು, ಎಳಸು ಪ್ರೇಮವೊಂದರ ದುರ್ಮರಣ, ಮತ್ತೊಂದು ಮೂಕ ಪ್ರೇಮದ ಸಾವು…ಸಿರಿವಂತನಾದ ದೇವಯ್ಯನಿಗೆ ಇಟ್ಟುಕೊಂಡವಳಾಗಿಯಾದರೂ ಜೊತೆಯಾಗ ಬೇಕೆಂಬೋ ಕಾವೇರಿಯ ಉತ್ಕಟ ಪ್ರೇಮವಿಲ್ಲಿ ಭಯಂಕರ ಅಂತ್ಯ ಕಾಣುತ್ತದೆ ನೋಡಿ…ಅದು ಹೆಣ್ಣು ಬಾಕತನವನ್ನು ತೋರಿಸಿದೆ. ಆಕೆಗೆ ಬೇಕಾಗಿದ್ದು ದೇವಯ್ಯ…ಪ್ರೇಮ…ಅದಕ್ಕಾಗಿ ಚೀಂಕ್ರನೆಂಬೋ ನಂಬಿಕೆಯ ಹಿಂದೆ ಹೊರಡುತ್ತಾಳೆ. ಹೆಣ್ಣೆಂಬ ಕಾರಣಕ್ಕೆ ಭಕ್ಷಣೆಗೊಳ ಪಡುತ್ತಾಳೆ…ತನ್ನನ್ನು ತಾನು ಕೊಂದು ಕೊಳ್ಳುತ್ತಾಳೆ…ಕಾದಂಬರಿಯ ಆರಂಭ ಭಾಗದಲ್ಲಿ ಬರೋ ‘ಹುಲಿಯಾ’ ನಾಯಿಗುತ್ತಿಯ ಬದುಕಿನ ಪ್ರತೀ ಹೆಜ್ಜೆಗಳನ್ನು ಮೂಸುತ್ತಾ ಹಿಂಬಾಲಿಸುವ ನಿಯತ್ತಿನ ಜೀವಿ…ಒಂದರ್ಥದಲ್ಲಿ ಈ ಕಾದಂಬರಿಯಲ್ಲಿ ಅದರ ಪಾತ್ರವೂ ಖುಷಿ ಕೊಡುತ್ತದೆ…ಕೊನೆಗೆ ನೋಯಿಸುತ್ತದೆ…ನಿಯತ್ತು…ಪ್ರೀತಿ ಎಲ್ಲದಕ್ಕೂ ಹುಲಿಯಾ ಸಾಕ್ಷಿ…ಮಲೆ ಪ್ರೇಮದ ಗಂಧ ಹುಲಿಯಾನ ಏದುಸಿರಿನೊಂದಿಗೆ ಬೆರೆತಂತೆ ಭಾಸವಾಗುತ್ತದೆ. ಅದೊಂದು ಪ್ರೇಮಭರಿತ ಒಡನಾಟವಲ್ಲದೇ ಮತ್ತೇನು…ಅಕ್ಕಣಿಯ ಮೇಲೆ ಅಕ್ಕರೆ ಹೊಂದಿದ್ದ ಚೀಂಕ್ರ ಪಿಜಿಣನ ಸಾವನ್ನು ಬಯಸಿ ಸ್ವಾರ್ಥಿಯಾದ…ಆದರೆ….ಮೂಕ ಪ್ರಾಣಿ ಹುಲಿಯಾದು ಯಾವ ಸ್ವಾರ್ಥವಿರದ, ನಿಷ್ಕಲ್ಮಶ ನಿಷ್ಠೆಯ ಪ್ರೇಮದ ಕುರುಹಾಗಿ ಉಳಿಯುತ್ತದೆ. ಕೊನೆಗೊಂದು ಪ್ರೇಮಮಯ ಅಂತ್ಯ…ಕ್ಷಮಿಸಿ, ಅಂತ್ಯವೆಲ್ಲಿಂದ ಬಂತು..! ಒಂದಷ್ಟು ವಿಚಾರಗಳನ್ನ, ಪಾತ್ರಗಳನ್ನು ಒಳಗೆ ಕಾಡಲು ಬಿಟ್ಟ ಮೇಲೆ ಅಲ್ಲಿ ಅಂತ್ಯವೆಂಬುದು ಇರುತ್ತದೆಯೇ…ಕೊನೆ ಎಲ್ಲಿಂದ ಅಲ್ಲವೇ…ಒಂದರ ಅಂತ್ಯವೆಂಬಂತೆಯೇ ಮತ್ತೊಂದರ ಆರಂಭ…ಇಲ್ಲೂ ಕಾದಂಬರಿ ಕೊನೆಯ ಪುಟ ತಲುಪಿದೆಯಷ್ಟೇ ಮಳೆಯಲ್ಲಿ ಮಿಂದು ಎದ್ದ ಮಲೆಯ ಹಸಿರೊಂದಿಗೆ ಬೆರೆತ ಝೀರುಂಡೆಗಳ ಸದ್ದಿನಂತೆ ಸದಾ ಅನುರಣಿಸುತ್ತದೆ…ನಮ್ಮನ್ನೂ ಮಲೆಯ ದೃಶ್ಯ ಕಾವ್ಯದೊಳಗೆ ಬಂಧಿಸುತ್ತದೆ. ********************************* ಚಂದ್ರಿಕಾ ನಾಗರಾಜ್ ಹಿರಿಯಡಕ

Read Post »

ಇತರೆ

ಕಾದಂಬರಿ ಕುರಿತು ಕರ್ವಾಲೊ ಪೂರ್ಣಚಂದ್ರ ತೇಜಸ್ವಿ ಅರುಣಾ ರಾವ್ [10:21 AM, 11/7/2020] ARUNA RAO: ಪೂರ್ಣ ಚಂದ್ರ ತೇಜಸ್ವಿ ನನ್ನ ಯಾವತ್ತಿನ ಫೇವರೇಟ್ ರೈಟರ್. ಅವರ ಎಲ್ಲ ಕಾದಂಬರಿಗಳೂ ನನ್ನ ಬಳಿ ಇವೆ ಎಂದು ಹೇಳಿಕೊಳ್ಳಲು ನನಗೆ ಖುಷಿ. ಪ್ಯಾಪಿಲಾನ್, ಚಿದಂಬರ ರಹಸ್ಯ, ಅಬಚೂರಿನ ಫೋಸ್ಟ ಆಫೀಸ್, ತಬರನ ಕತೆ, ಅಡ್ವೆಂಚರ್ ಸೀರೀಸ್, ಅಲೆಮಾರಿ ಅಂಡಮಾನ್ ಎಲ್ಲವೂ ನನ್ನ ಪುಸ್ತಕ ಖಜಾನೆಯನ್ನು ಶ್ರೀಮಂತಗೊಳಿಸಿವೆ.ತೇಜಸ್ವಿಯವರ ಕಾದಂಬರಿಗಳು ಕೇವಲ ಮನರಂಜನಾ ಸಾಧನವಾಗಿರದೆ ಬುದ್ದಿಗೆ, ಮಂಥನಕ್ಕೆ ಆಹಾರವನ್ನು ಒದಗಿಸುತ್ತದೆ.ತೀರ ಇತ್ತೀಚೆಗಷ್ಟೇ ಅಂದರಡ ಲಾಕ್ ಡೌನ್ ನ ಅವಧಿಯಲ್ಲಿ ಮೂರನೇ ಬಾರಿಗೆ ಓದಿ ಮುಗಿಸಿದ ‘ಕರ್ವಾಲೋ’ ಕಾದಂಬರಿಯ ಬಗ್ಗೆ ಒಂದಷ್ಟು ಅನಿಸಿಕೆ. ಕರ್ವಾಲೋ ಹೆಸರೇ ಬಹಳ ವಿಚಿತ್ರ. ಕಾದಂಬರಿ ಓದಲು ಕೈಗೆತ್ರುಕೊಳ್ಳುವ ಮೊದಲು ಅದು ಒಂದು ಊರೇ? ಪ್ರಾಣಿಯೇ? ಸಸ್ಯವೇ? ಇವೆಲ್ಲ ಕುತೂಹಲವನ್ನು ಮೂಡಿಸುತ್ತದೆ. ಕಾದಂಬರಿ ಕಾಲು ಭಾಗ ಮುಗಿದ ನಂತರವೇ ನಮಗೆ ಕರ್ವಾಲೋರವರನ್ನು ಪರಿಚಯಿಸುತ್ತಾರೆ ಲೇಖಕರಾದ ತೇಜಸ್ವಿ. ಕಾದಂಬರಿಯ ಆರಂಭದಲ್ಲಿ ಮೂಡುಗೆರೆಯ ಮಲೆ,ಮಳೆ, ಜೇನು ಸಾಕಾಣಿಕೆ, ಆಗಾಗ ಕೆಟ್ಟು ನಿಲ್ಲುವ ಜೀಪು, ಯಾವಾಗಲೂ ಜೊತೆಗಿರುವ ಕಿವಿ( ನಾಯಿ) ಇವೆಲ್ಲದರ ಮಧ್ಯೆ ತಮ್ಮ ಜಮೀನನ್ನು ಮಾರಿಬಿಡಬೇಕೆಂಬ ಲೇಖಕರ ಪ್ರಯತ್ನ ಸಾಗುತ್ತಿರುವಾಗಲೇ ‘ಮಂದಣ್ಣ ಎಂಬ ಪಾತ್ರದ ಪರಿಚಯವಾಗುತ್ತದೆ. ಈತ ಕಾದಂವರಿಯುದ್ದಕ್ಕೂ ಒಬ್ಬ ರಹಸ್ಯ ವ್ಯಕ್ಕಿಯಾಗಿ ಉಳಿದು ಕುತೂಹಲ ಮೂಡಿಸತೊಡಗುತ್ತಾನೆ. ಸಾಮಾನ್ಯ ಜೀನು ಸಾಕಾಣಿಕಾ ಕೆಲಸಗಾರನಾಗಿ, ಸರ್ಕಾರಿ ಪ್ನ್ಯೂನ್ ಕೆಲಸಕ್ಕಾಗಿ ಗೋಗರೆಯುವ ಈತನ ಬಗ್ಗೆ ಸ್ವತ: ತೇಜಸ್ವಿಯವರಿಗೇ ಜಿಗುಪ್ಸೆ. “ಮದುವೆಯಾಗದ ಹೊರತು ಹುಚ್ಚು ಬಿಡದು, ಹುಚ್ಚು ಹೋಗದ ಹೊರತು ಮದುವರಯಾಗದು” ಎಂಬ ಗಾದೆಯಂತೆ ಕೆಲಸ ಸಿಗದ ಹೊರೆತು ರಾಮಣ್ಣನ ಮಗಳು ರಾಮಿಯನ್ನು ಮದುವೆಯಾಗಲಾರದ ಪರಿಸ್ಥಿತಿ ನಿರ್ಮಾಣವಾಗಿ,ಮಂದಣ್ಣ ಯಾವ ಕೆಲಸದಲ್ಲೂ ಆಸಕ್ತಿ ತೋರದೆ ಹೋದುದರಿಂದ ಕರ್ವಾಲೋರಂತಹ ವಿಜ್ಞಾನಿಯೇ ಮುಂದೆ ನಿಂತು ಮಂದಣ್ಣನ ಮದುವೆ ಮಾಡಿಸಬೇಕಾಗುತ್ತದೆ. ಮಂದಣ್ಣನ ಜೊತೆ ಊರು, ಕಾಡುಗಳನ್ನು ಅಲೆಯುವ ತಮ್ಮ ಬಗ್ಗೆ ಜನರು ತಪ್ಪು ತಿಳಿಯುತ್ತಿದ್ದಾರೆಂದು ಗೊತ್ತಿದ್ದರೂ ತಲೆ ಕೆಡಸಿಕೊಳ್ಳದೆ ತಮ್ಮ ಕೆಲಸದ ಕಡೆ ಗಮನ ಹರಿಸುವ ಕರ್ವಾಲೋರ ನಡತೆ ಅನುಕರಣೀಯ.ಮದುವೆಯಾದ ಮಂದಣ್ಣ ಬಟ್ಟಿ ಸಾರಾಯಿ ಕೇಸಿನಲ್ಲಿ ಜೈಲು ಪಾಲಾದಾಗಲೂ ಅವನ ನೆರವಿಗೆ ನಿಲ್ಲುತ್ತಾರೆ ಕರ್ವಾಲೋ. ಇದು ಕಾದಂಬರಿಕಾರರಿಗೆ ಮತ್ತು ಕರ್ವಾಲೋರ ಖಾಸಾ ಫೋಟೋಗ್ರಾಫರ್ .ಪ್ರಭಾಕರನಿಗೂ ಬಹಳ ಸೋಜಿಗವನ್ನುಂಟು ಮಾಡುತ್ತದೆ. ಸ್ವತಃ ಲಾಯರ್ ಗೊನ್ಸಸಾಲ್ ವೆನ್ಸ್, ಕರ್ವಾಲೋರಂತಹ ಗೌರವಾನ್ವಿತ ವ್ಯಕ್ತಿಯನ್ನು ಇಂತಹ ಕೇಸಿನಲ್ಲಿ ಇನ್ವಾಲ್ವ್ ಮಾಡೋದು ಹೇಗೆ? ಎಂದು ಮುಜುಗತ ಪಡುತ್ತಾರೆ. ಆದರೆ ಕರ್ವಾಲೋ ಈ ಬಾರಿಯೂ ಸ್ವಲ್ಪವೂ ಹಿಂಜರಿಯದೆ ಕೋರ್ಟಿಗೆ ಬಂದು ಮಂದಣ್ಣನ ಪರವಾಗಿ ಸಾಕ್ಷಿ ಹೇಳಿ ಅವನನ್ನು ಬಿಡಿಸುತ್ತಾರೆ.ಮಂದಣ್ಣನಿಗೂ ಕರ್ವಾಲೋರಿಗೂ ಇರುವ ಈ ಗಾಢ ಸಂಬಂಧ “ಎತ್ತಣ ಮಾಮರ ಎತ್ತಣ ಕೋಗಿಲೆ” ಎಂದು ಎಲ್ಲರೂ ಹುಬ್ಬೇರಿಸುವಂತಾಗುತ್ತದೆ. ಹಳ್ಳಿ ಗಮಾರನಾದ ಮಂದಣ್ಣನಿಗಾಗಿ ವಿಜ್ಞಾನಿಯಾದ ಕರ್ವಾಲೋ ಎಂತಹ ಸಹಾಯಕ್ಕೂ ಸಿದ್ಧರಾಗಿರುವ ಸಂಗತಿ ಸ್ವತಃ ತೇಜಸ್ವಿಯವರಲ್ಲಿ ಕೂಡ ಆಶ್ಚರ್ಯದ ಜೊತೆಜೊತೆಗೆ ಅನುಮಾನವನ್ನೂ ಹುಟ್ಟಿಸುತ್ತದೆ. ಆದರೆ ಕರ್ವಾಲೋ ನಂತರ ಹೇಳುವ ವಿಷಯವನ್ನು ಕೇಳಿದ ಮೇಲೆ ಅವರು ಮಂದಣ್ಣನ ಬಗ್ಗೆ ಹೊಂದಿರುವ ಆಸಕ್ತಿಗೆ ಕಾರಣ ಸಿಗುತ್ತದೆ. ಅದೇನೆಂದರೆ ಈಗ್ಗೆ ಸಾವಿರದ ಎಂಟುನೂರ ಹದಿನೇಳರಲ್ಲಿ ಒಬ್ಬ ಪಾದ್ರಿ ಆಫ್ರಿಕಾದ ಅರಣ್ಯದಲ್ಲಿ ಕಂಡಿದ್ದ ‘ಫ್ಲೇಯಿಂಗ್ ಲಿಸರ್ಡ’ ನ್ನು ಇತ್ತೀಚೆಗಷ್ಟೇ ನಾರ್ವೆ ಕಾಡುಗಳಲ್ಲಿ ಕಂಡಿದ್ದ ಮಂಜಣ್ಣ. ಈ ವಿಷಯವನ್ನು ಕರ್ವಾಲೋರಿಗೆ ತಿಳಿಸಿದಾಗ ಅವರು ರುಮೇನಿಯಾದ ಫ್ರೊಫೆಸರ್ ರೂವಸ್ಕಿ ಹಾಗೂ ಅಮೇರಿಕೆಯ ಸಂಶೋಧನಾ ಸಂಸ್ಶೆಗಳ ಜೊತೆ ಪತ್ರ ವ್ಯವಹಾರ ನಡೆಸಿದ್ದರು. ಕೂಡಲೇ ಹಲವಾರು ಜಾಗತಿಕ ಸಂಸ್ಥೆಗಳು ಈ ಸಂಶೋಧನೆಗೆ ಧನ ಸಹಾಯ ಮಂಜೂರು ಮಾಡಲು ಮುಂದಾಗಿರುವ ವಿಷಯವನ್ನು ತಿಳಿಸಿದರು. ಆಗ ಲೇಖಕರೂ ಸೇರಿ, ಎಲ್ಲರ ಬಾಯಿಂದ ಮಾತೇ ಹೊರಡುವುದಿಲ್ಲ. ನಂತರ ಅರಣ್ಯದಲ್ಲಿ ಆ ‘ಹಾರುವ ಓತಿ’ ಯ ಅನ್ವೇಷಣೆಗೆ ಬೇಕಾಗುವ ಸಕಲ ಸಿದ್ಧತೆಗಳನ್ನು ಮಾಡಿಕೊಂಡು ಕರ್ವಾಲೋ, ಮಂಜಣ್ಣ, ಲೇಖಕರು, ಶೀನಪ್ಪ, ಪ್ರಭಾಕರ ಜೊತೆಗೆ ಕಿವಿ, ನಾರ್ವೆಯ ಕಾಡಿಗೆ ಹೊರಡುತ್ತಾರೆ. ಅತ್ಯಂತ ಸುದೀರ್ಘವಾದ ಈಚಲು ಕಾಡನ್ನು‌ ಪ್ರಯಾಸದಿಂದ ದಾಟಿ ,ಓತಿಯ ಹುಡುಕಾಟ ಆರಂಭವಾಗುತ್ತದೆ. ಈ ಮಧ್ಯೆ ಕಾಡಿನಲ್ಲಿ ಹಾವಾಡಿಗರ ಎಂಗ್ಟ ಸಹ ಇವರ ತಂಡವನ್ನು ಸೇರಿಕೊಳ್ಲುತ್ತಾನೆ.ಹಲವಾರು ದಿನಗಳ ನಂತರ ಒಮ್ಮೆ ಲೇಖಕರೊಬ್ಬರೇ ಕುಳಿತಿರುವಾಗ ಅಚಾನಕ್ ‘ಹಾರುವ ಓತಿ’ ಇವರ ಕಣ್ಣಿಗೆ ಬೀಳುತ್ತದೆ. ಇದನ್ನು ಇತರರಿಗೆ ತೋರಿಸಲು ಲೇಖಕರು ಬಹಳ ಪ್ರಯಾಸ ಪಡಬೇಕಾಗುತ್ತದೆ‌. ಏಕೆಂದರೆ ಅದು ಮರದ ಮೇಲೆ ಕುಳಿತಿದ್ದಾಗ ಮರದ ತೊಗಟೆಯ ಬಣ್ಣವನ್ನು ಹೊಂದಿ, ಮರಕ್ಕೂ ಮತ್ತು ಅದಕ್ಕೂ ಕಿಂಚಿತ್ ಕೂಡ ವ್ಯತ್ಯಾಸವೇ ಇರುತ್ತಿರಲಿಲ್ಲ. ಕೊನೆಗೆ ಮಂದಣ್ಣ, ಶೀನಪ್ಪ, ಎಂಗ್ಟನ ಹರಸಾಹಸದ ನಡುವೆಯೂ ಆ ಹಾರುವ ಓತಿ ಅವರ ಕೈಗೆ ಸಿಗದೆ, ತಪ್ಪಿಸಿಕೊಂಡು ಕಾಡಿನ ಅನಂತದಲ್ಲಿ ಲೀನವಾಗಿಬಿಡುತ್ತದೆ. ಪ್ರಭಾಕರ ತನ್ನ ಕ್ಯಾಮರಾನಲ್ಲಿ ಒಂದಷ್ಟು ಫೋಟೋಗಳನ್ನು ತೆಗೆದದಷ್ಟೇ ಲಾಭವಾಗುತ್ತದೆ. ಒಟ್ಟಾರೆಯಾಗಿ ಇಡೀ ಕಾದಂಬರಿಯ ಉದ್ದಕ್ಕೂ ಕುತೂಹಲವನ್ನು ಕಾಯ್ದುಕೊಂಡು ಓದುಗರನ್ನು ತುದಿಗಾಲಲ್ಲಿ ನಿಲ್ಲಿಸುವ ಕುತೂಹಲಕಾರಿ ಕಾದಂಬರಿಯಲ್ಲಿ ಮಂದಣ್ಣನ ಮದುವೆಯ ಹಾಸ್ಯವೂ ಸೇರಿ ಓದುಗರನ್ನು ರಂಜಿಸುತ್ತದೆ. ********************** ಅರುಣ ರಾವ್

Read Post »

ಇತರೆ, ಲಹರಿ

ಲಹರಿ ಅಕ್ಕ , ನೀನು ಯಾರಿಗೆ ಮಗಳಾಗಿದ್ದೆ ? ವೀಣಾ ದೇವರಾಜ್   ಮಗಳೇ ನೀನು ಯಾರಿಗೆ ಮಗಳಾಗಿದ್ದೆ. ಮಗಳ ಪ್ರೀತಿ ನಿನಗೆ ಗೊತ್ತೇ. ಅದನ್ನು ಎಂದಾದರೂ ಅನುಭವಿಸಿದ್ದೀಯಾ. ಹೇಗಿರಬಹುದೆಂದು ಯೋಚಿಸಿದ್ದೀಯ ಅಥವಾ ಬಯಸಿದ್ದೆಯ? ಒಮ್ಮೆ ಯೋಚಿಸಿ ನೋಡೋಣ… ಹಾಂ,ಸಿನೆಮಾದಲ್ಲಿ,, ಪುಟಾಣಿ ಪಾಪು , ಅದೇನು ಚೆಂದ,ಅಪ್ಪ ಅಮ್ಮನ ಮುದ್ದು ಮಗು ತಮ್ಮಿಷ್ಟದಂತೆ  ಅದನ್ನು ಸಿಂಗರಿಸಿದ್ದಾರೆ ನೋಡಿದವರೆಲ್ಲಿ ಕಣ್ಣುಬಿಟ್ಟು ದೃಷ್ಟಿ ತಾಗುವುದೋ ಎಂದು ದೃಷ್ಟಿಬೊಟ್ಟನ್ನೂ  ಇಟ್ಟಿದ್ದಾರೆ. ಒಂದು ನಿಮಿಷವೂ ಒಂಟಿಯಾಗಿ ಬಿಟ್ಟಿಲ್ಲ. ಇನ್ನೇನು ಶಾಲೆಗೆ ಸೇರಿಸುವ ವಯಸ್ಸು ಬಂತು, ಪೋಷಕರು ಗಟ್ಟಿ ಧೈರ್ಯಮಾಡಿ ಶಾಲೆಗೆ ಕಳಿಸುತ್ತಾರೆ. ಅವಳ ಒಂದೊಂದೇ ಹೊಸಹೊಸ ಕಲಿಕೆಗಳನ್ನು ನೋಡಿ ಬೀಗುತ್ತಾರೆ. ಅಪ್ಪ, ಇವಳು ಎಲ್ಲಾ ನನ್ನಂತೆ ಅಂತಾನೆ , ಅಮ್ಮ ಇಲ್ಲ ಅವ್ಳು ನನ್ನಂತೆ ಅನ್ನುತ್ತಾಳೆ. ಮನೆಗೆ ಬಂಡ ಕೂಡಲೇ ಅಪ್ಪ, ಅಮ್ಮ ತುತ್ತು ಮಾಡಿ ಉಣಿಸುತ್ತಾರೆ ಆಟವಾಡಿಸುತ್ತಾರೆ , ಅವಳಾಡುವ ಆಟದಲ್ಲಿ ತಾವೂ ಭಾಗಿಯಾಗಿ ಖುಷಿಪಡುತ್ತಾರೆ. ಅವಳು ಆಟವಾಡುತಿದ್ದರೆ, ಮನೆ ಪಾಠ ಮಾಡುತಿದ್ದರೆ, ಬರೆಯುತ್ತಿದ್ದರೆ  ಅವಳಿಗೆ ತೊಂದರೆಯಾಗಬಾರದೆಂದು ತಾವೇ ಉಣಿಸುತ್ತಾರೆ. ನಸುಕಿನಲ್ಲೇ ಎದ್ದು ಮಗಳಿಗಿಷ್ಟವಾದ ತಿಂಡಿ ತಿನಿಸುಗಳನ್ನು ಅಮ್ಮ ಮಾಡಿದರೆ , ಅಪ್ಪ ಬೇಗಬೇಗನೆ ತನ್ನೆಲ್ಲ ಕೆಲಸಗಳನ್ನು ಮುಗಿಸಿ ಶಾಲೆಗೆ ತಾನೇ ಹೋಗಿ ಬಿಟ್ಟುಬರುತ್ತಾನೆ. ಮಗಳಿಗಾಗಿ ತಮ್ಮೆಲ್ಲವನ್ನೂ    ವ್ಯಯಿಸುತ್ತಾರೆ. ಅವ್ಳು ಕೇಳಿದ್ದನ್ನೆಲ್ಲ ತಂದು  ಕೊಡುತ್ತಾರೆ , ಪ್ರೀತಿಯ ಸುರಿಮಳೆಗರೆಯುತ್ತಾರೆ. ನೋಡಲು ಎಷ್ಟು ಚೆಂದ. ಮಗಳು ಮದುವೆಗೆ ಬಂದಾಗ ವಿಜೃಂಭಣೆಯಿಂದ ಮದುವೆ ಮಾಡುತ್ತಾರೆ ಕರುಳಕುಡಿಯನ್ನು ಬೇರೆಯವರ ಮನೆಗೆ ಕಳಿಸುವಾಗ ಅವಳ ಅತ್ತೆ ಮಾವ ಗಂಡನನ್ನು ತನ್ನ ಕೂಸನ್ನು ಚೆನ್ನಾಗಿ ನೋಡಿಕೊಳ್ಳಿರೆಂದು ಬೇಡಿಕೊಳ್ಳುತ್ತಾರೆ , ಬಿಕ್ಕಿಬಿಕ್ಕಿ ಅಳುತ್ತಾರೆ. ಅಂದಿಗೆ ಆ ಮನೆಯ ಋಣ ಮುಗಿಯಿತೇ ಗೊತ್ತಿಲ್ಲ.     ಎಂದೋ ಒಮ್ಮೆ ತವರಿಗೆ ಬರುವ ಮಗಳು ಅತಿಥಿಯಾಗಿಬಿಟ್ಟಿರುತ್ತಾಳೆ. ಮೊದಲಿನಂತೆ ಸಲೀಸಾಗಿ ಏನೊಂದನ್ನೂ ಮಾಡಲು ಹಿಂಜರಿಯುತ್ತಾಳೆ, ಅದು ತಾ ಹುಟ್ಟಿ ಬೆಳೆದ ಮನೆ, ಅಪ್ಪಅಮ್ಮನ ಕೈ ತುತ್ತು ತಿಂದು ಬೆಳೆದ ಮನೆ ಎನ್ನುವುದನ್ನು  ಮೆಲುಕುಹಾಕಿಕೊಂಡು ಸಂಕಟಪಡುತ್ತಾಳೆ. ತನ್ನ ಗೆಳತಿಯರ ಮನೆಗೆ ಹೋದರೆ ಅಲ್ಲಿ ಅವರೂ ಇಲ್ಲ ಎಲ್ಲ ತಮ್ಮ ಗಂಡನ ಮನೆಯಲ್ಲಿದ್ದಾರೆ. ಎಲ್ಲಾ ಹೆಣ್ಣು ಮಕ್ಕಳದೂ ಹೀಗೆಯೇ ಮನಸ್ಥಿತಿಯೇ ಎಂದು ಕೊರಗುತ್ತಾಳೆ. ಅಪ್ಪಅಮ್ಮನ ಹೇಳಿಕೊಳ್ಳಲಾರದೆ ಮನಸ್ಸಿನಲ್ಲೇ ಕೊರಗುತ್ತಾಳೆ. ಅಮ್ಮ ಮಾತುಮಾತಿಗೂ ಅತ್ತಿಗೆಯ ಹೆಸರನ್ನೇ ಕರೆಯುತ್ತಾರೆ ,ಅಪ್ಪ ನಾನು ಬಂದ್ದಿದ್ದೇನೆಂದು ಮನೆಗೆ ಬೇಗನೆ ಬರುವುದು ಹೋಗಲಿ, ಬಂದವರೇ ತನ್ನ ಗೆಳೆಯರನ್ನು ನೋಡಲು ಹೋಗುತ್ತಾರೆ. ಅಣ್ಣನೂ  ಮೊದಲಿನಂತೆ ಚೇಷ್ಟೆಯ ಮಾತುಗಳಿಲ್ಲ ,ಕೆಣಕುವುದೂ ಇಲ್ಲ.ಅಮ್ಮನ ಬಳಿ ಏನಾದರು ಏಕಾಂತದಲ್ಲಿ ಹೇಳಿಕೊಳ್ಳಬೇಕೆಂದರೆ ಯಾವಾಗಲೂ ಅತ್ತಿಗೆಯೋ ಅಣ್ಣನೋ ಇರುತ್ತಾರೆ.  ಯಾಕೆ ಹೀಗಾಯಿತು, ತವರಿನ ಪ್ರೀತಿ ಕಡಿಮೆಯಾಯಿತೇ, ತನ್ನ ಮೇಲಿನ ಹೆತ್ತವರ ಜವಾಬ್ದಾರಿ ಮುಗಿಯಿತೇ? ಈಗ ಅಪ್ಪಅಮ್ಮನಿಗೆ ನಾನು ಮಗಳಲ್ಲವೇ ಏಕೆ ಹೀಗೆ? ತನ್ನಿಂದಾದ ತಪ್ಪೇನು, ಇದನ್ನು ಹೇಗೆ ಸರಿ ಮಾಡುವುದು, ತಾನೇನು ಮಾಡಿದರೆ ತನ್ನ ತವರು ಮೊದಲಿನಂತಾಗುತ್ತದೆ , ದೇವರೇ ಏನು ಮಾಡಲಿ. ಇನ್ನು ಅಲ್ಲಿರುವುದು ಬೇಡವೆನಿಸಿ ತನ್ನಿನಿಯನ ಆಸರೆ ಬಯಸಿ  ಹೊರಡುತ್ತಾಳೆ. ತನ್ನಿನಿಯನ ತೋಳ್ತೆಕ್ಕೆಯಲ್ಲೇ ಅಪ್ಪಅಮ್ಮನ,ಅಣ್ಣನ ಪ್ರೀತಿ,ವಾತ್ಸಲ್ಯವನ್ನೂ , ತನ್ನ ಸಖಿಯರ ಸಂಗವನ್ನೂ ಕಾಣುತ್ತಾಳೆ. ಜಗವನ್ನೇ ಮರೆಯುತ್ತಾಳೆ. ಅವನೇ ತನ್ನ ಜಗತ್ತು, ಅವನಿಲ್ಲದೆ ತಾನಿಲ್ಲ. ಅವನುಸಿರೇ ತನ್ನುಸಿರು ಎಂದುಕೊಳ್ಳುತ್ತಾಳೆ. ಆದರೆ ಆ ಒಂದು ಕರಾಳ  ದಿನ ವಿಧಿಯ ದೃಷ್ಟಿತಾಗಿ ,ಅವಳ ಉಸಿರೇ ಅವಳ ಜೊತೆಗಿಲ್ಲ , ಅವಳ ಜಗತ್ತೇ ಇಲ್ಲವಾದಾಗ ,,,,,,,,  ಎಲೆ, ಹಾರುವ ಹಕ್ಕಿಗಳೇ ನೀವು “ನನ್ನುಸಿರ”ನ್ನು ಕಂಡಿರಾ? ಎಲೆ ಸಂಪಿಗೆಮರವೇ, ಎಲೆ ಹೊಂಗೆ ಮರವೇ ನೀವು ಬೀಸುವ ತಂಗಾಳಿಯಲ್ಲಿ  ದೇವನ ಬಿಸಿಯುಸಿರಿನ ಅನುಭವವಾಯಿತೇ? ಎಲೈ ಭೂಮಿ ತಾಯಿಯೇ ನೀನೆ ಬ್ರಹ್ಮಾಂಡವೆನ್ನುತ್ತಾರೆ. ನಿನ್ನ  ಮಡಿಲಲ್ಲೇನಾದರೂ ಬಚ್ಚಿಟ್ಟುಕೊಂಡು ನನ್ನೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿರುವನೋ ಒಮ್ಮೆ ನೋಡುವಿಯ ತಾಯೆ? ತಾನಿಲ್ಲದ ಜಗತ್ತು ಅವಳಿಗೆ ದುಸ್ತರವೆಂದು ತಿಳಿದೂ ದೇವನೇಕೆ ನನ್ನ ಕಣ್ಣಿಗೆ ಕಾಣುತಿಲ್ಲ. ಅವಳೆಲ್ಲಿಗೆ ಹೋಗುವುದು,ಯಾರ ಬಳಿಗೆ ತನ್ನ  ನೋವನಿವೇದಿಸಿಕೊಳ್ಳುವುದು,,,,,?,,,,,? ನೀವೂ ಹೇಳಲಾರಿರೆ,,,,,,,,,?,,,,,     ಅವಳು ಯಾರ ಮಗಳು? ,,,,,,,,,,? “ಇಂದು ನಾನು ಒಂಟಿ ! ನೀನು ಅದ್ಹೇಗೆ ಬಿಟ್ಟು ಹೋದೆ ಎಂದಿಗೂ ಒಬ್ಬಳನ್ನು ಬಿಡಲಾರದ ನಿನಗೆ ಹೇಗೆ ಮನಸ್ಸು ಬಂತೋ ನಾ ಕಾಣೆ ,ನಾನೀಗ ಇನ್ನೊಬ್ಬರಿಗೆ ಭಾರವಾದೆ. ನಾನೊಂದು ಚೆಂಡಿನಂತಾದೆ. ನಾನು ನಿನ್ನದೇ ವಸ್ತುವೆಂದು ನನ್ನ ಪೋಷಕರು ನಿನ್ನ ಸುಪರ್ದಿಗೆ ವಹಿಸಿದ್ದರು. ನಿನಗೂ ನಾನು ಬೇಡವಾಗಿಬಿಟ್ಟೆ. ಈಗ ಚೆಂಡು ಯಾರ ಬಳಿ ಇದೆಯೋ ಗೊತ್ತಿಲ್ಲ. ನನಗೊಂದು ಸ್ಥಿರವಾದ ಜಾಗವಿಲ್ಲವೇ ದೇವರೇ? ಎಲ್ಲೆಲ್ಲಿಗೆ ಅಂತ ಓಡಾಡಬೇಕು ತಿಳಿಯುತ್ತಿಲ್ಲ ಈ ಯಕ್ಷ ಪ್ರಶ್ನೆಗೆ ಉತ್ತರವಿಲ್ಲವೇ? *************************

Read Post »

ಇತರೆ

ಕಾದಂಬರಿ ಕುರಿತು` ಬೆಟ್ಟದ ಜೀವ ಡಾ.ಶಿವರಾಮ ಕಾರಂತ ಶಾಂತಲಾ ಮಧು ನನ್ನ ನೆಚ್ಚಿನ “ಬೆಟ್ಟದ ಜೀವ”ಕಾದಂಬರಿಯ ಒಂದು ನೋಟ” “”ಬಾನಿನಲ್ಲಿ ಸೂರ‍್ಯನು ತುಸುವಾಗಿ ಮೇಲಕ್ಕೇರುತ್ತಾನೆ- ಎಂದಂತೆ ಒಮ್ಮೆಗೇ ಅವನ ರಶ್ಮಿಗಳು ಬೆಟ್ಟದ ತೆಂಕು ಮಗ್ಗುಲಿನ ಹಸುರನ್ನೆಲ್ಲ ಬೆಳಕಿಂದ ತೊಯ್ಯಿಸಿಬಿಟ್ಟವು! ಆ ಅಪೂರ್ವದ ನೋಟವು ಎಂದೂ ಮರೆಯುವಂಥದಲ್ಲ. ಆ ತನಕ- ಕಠಿಣವೂ ನಿರ‍್ದಾಕ್ಷಿಣ್ಯವೂ ಆಗಿ ನಿಂತ ಬೆಟ್ಟಕ್ಕೆ ಒಂದು ಬದಿಯಲ್ಲಿ ಮೃದುವಾದ ಹೃದಯವಿದ್ದಂತೆ ಕಂಡಿತು. ನೋಡುತ್ತಾ ನಿಂತಂತೆ, ಕೆಂಪಡರಿದ ಬಾನಿನ ಕಣ್ಣು ಕ್ರೂರವಾಗುತ್ತ ಬೆಂದ ಕಬ್ಬಿಣವನ್ನು ಕರಗಿಸಲು ಬಂದಂತೆ ಕಾಣಿಸಿತು. ಆ ಬಾನಿನ ಮುಂದೆ, ಬೆಟ್ಟವು ಗಂಡುಗಲಿಯಂತೆ ಈ ತನಕ ಕಂಡುದು, ನಮ್ರತೆಯ ಮುದ್ದೆಯಾದ ಹೆಣ್ಣಾಯಿತು. ಹಸುರು ಕವಚದ ಮೇಲೆ ನೀರ ಸೀರೆ ತೊಟ್ಟು ಬೇಟಕ್ಕೆ ನಿಂತ ಅಂಗನೆಯಾಯಿತು, ಆದರೆ ದಿಗಂಗನೆಯ ಧಿಮಾಕಿನ ಮುಂದೆ ಬೆಟ್ಟದಂಗನೆ, ಅತ್ತೆಯ ಮುಂದೆ ನಾಚಿಕೊಂಡು ನಿಂತ ಸೊಸೆಯಾದಳು. “ “ಹಿಂದಿನ ದಿನ ಅದೇ ಬೆಟ್ಟ ನನಗೆ ಮೊಸರು ಗದ್ದೆಯಲ್ಲಿ ನಿಂತ ನೀಲ ಕಡೆಗೋಲಿನಂತೆ ಕಾಣಿಸಿತ್ತು. ಇಂದು ಹಿಮದ ಮೊಸರಿರಲಿಲ್ಲ. ನನ್ನೆದುರಿನ ಬೆಟ್ಟ ತನ್ನ ದಿಟ್ಟತನದಿಂದ, ಔನ್ನತ್ಯದಿಂದ ನನ್ನಂಥ ಎಷ್ಟೆಲ್ಲಾ ವ್ಯಕ್ತಿಗಳ ಎದೆಯನ್ನು ಭೀತಿಗೊಳಿಸಿ ತಲ್ಲಣಿಸಿರಬೇಕೋ ತಿಳಿಯೆ.” ಪ್ರಸಿದ್ಧ ಕಾದಂಬರಿಕಾರರೆಂದೇ ಹೆಸರಾದ ಕೋಟ ಡಾ|| ಶಿವರಾಮ ಕಾರಂತರ (೧೯೦೨-೧೯೯೭) ‘ಬೆಟ್ಟದ ಜೀವ’ ಕಾದಂಬರಿಯ ಅವಿಸ್ಮರಣೀಯ ಸಾಲುಗಳು ಇವು. ಶಿವರಾಮಕಾರಂತರ ಬೆಟ್ಟದ ಜೀವ ಕಾದಂಬರಿಯಲ್ಲಿ ಬರುವ ಪ್ರಕೃತಿಯ ವರ್ಣನೆ ಬಣ್ಣಿಸಲಸದಳ, ಅದೆಷ್ಟು ಬಾರಿ ಓದಿದರೂ ಕಾದಂಬರಿಯ ಆ ಅಪೂರ್ವ ಚೆಲುವು ಚಿರನೂತನವೆ. ಬೆಟ್ಟದಲ್ಲಿ ಜೀವಿಸುತ್ತಿರುವ, ಜೀವಿಗಳ ಉಸಿರಿಗೆ ಉಸಿರಾದ ಪ್ರಕೃತಿಯನ್ನು ಭಾವನೆಗೆ ಭಾವಚಿತ್ರವಾಗಿಯೂ ಪ್ರತಿಬಿಂಬಿಸಿರುವುದು ನಮ್ಮ ಮಲೆನಾಡಿನ ಹೆಮ್ಮೆಯ ಕಾದಂಬರಿಕಾರರಾದ ಕಾರಂತರ ವಿಶೇಷ. ಇವರು ಸಮಾಜ ಚಿಂತಕರು, ಪರಿಸರವಾದಿಗಳು, ಯಕ್ಷಗಾನ ತಜ್ಞರು, ಚಿತ್ರ ನಿರ್ದೇಶಕರು ಹಾಗೂ ಚಿಂತಕರು ಎಂದು ಹೆಸರಾಗಿದ್ದಾರೆ. ಸಾಹಿತ್ಯದ ಹಲವು ಪ್ರಕಾರದಲ್ಲಿ ಕೆಲಸ ಮಾಡಿದ ಇವರ, ವಿಜ್ಞಾನ ಸಾಹಿತ್ಯ ಮಕ್ಕಳ ಸಾಹಿತ್ಯಗಳು ವಿಶೇಷ ಮನ್ನಣೆ ಪಡೆದಿವೆ. ತಮ್ಮ ‘ಮೂಕಜ್ಜಿಯ ಕನಸುಗಳು’ ಕಾದಂಬರಿಗೆ ‘ಜ್ಞಾನಪೀಠ ಪ್ರಶಸ್ತಿ’ ಪಡೆದು ಕನ್ನಡ ಹಿರಿಮೆಯನ್ನು ಹೆಚ್ಚಿಸಿದ ಮಹನೀಯ ಈತ, ಇತಿಹಾಸಕಾರ ‘ರಾಮಚಂದ್ರ ಗುಹ’ ಅವರು ಕಾರಂತರನ್ನು ಸ್ವಾತಂತ್ರ್ಯೋತ್ತರ ಭಾರತದ ‘ರವೀಂದ್ರನಾಥ ಠಾಕೂರ್’ ಎಂದು ಕರೆದಿರುವುದರಲ್ಲಿ ಅತಿಶಯೋಕ್ತಿಯಿಲ್ಲ. ಅವರ ಎಲ್ಲಾ ಕೃತಿಯನ್ನು ಓದಿ ಆನಂದಿಸಿದ ನನಗೆ ‘ಮರಳಿ ಮಣ್ಣಿಗೆ’ ಮತ್ತು  ‘ಬೆಟ್ಟದ ಜೀವ’ ಹೆಚ್ಚು ಅಪ್ಯಾಯಮಾನವಾಯಿತು. ಕನ್ನಡ ಸಾಹಿತ್ಯಕ್ಕೆ ಕೊಡುಗೆಯಾದ ಅವರ, ‘ಚೋಮನ ದುಡಿ’ ‘ಅಳಿದ ಮೇಲೆ’ ಬಹು ಚರ್ಚಿತ ಕಾದಂಬರಿಗಳು. ಮಲೆನಾಡಿನ ಅಂಗಳದಲ್ಲಿ ಬೆಳೆದ ನನಗೆ ಅವರ ಯಕ್ಷಗಾನ ಕುಣಿತ, ನೋಡುವ ಹಾಗೂ ಅವರ ಒಡನಾಟ, ಮಾತುಗಳನ್ನು ಕೇಳುವ ಅವಕಾಶ ದೊರೆಕಿದ್ದು ನನ್ನ ಪುಣ್ಯ ಎನ್ನಬೇಕು. ‘ಬೆಟ್ಟದ ಜೀವ’ ಕಾದಂಬರಿಯಲ್ಲಿ ಬರುವ ಪಾತ್ರಗಳ ಮಾತು, ನಡೆ-ನುಡಿಗಳು, ಕಥೆಯ ಹರಿವು ನನಗೆ ನನ್ನ ಅಕ್ಕಪಕ್ಕದ ಮನೆಯ ದಿನನಿತ್ಯ ಜೀವನದ ಚಿತ್ರಣ ಎನ್ನುವಂತೆ ಭಾಸವಾಗುತ್ತದೆ. ಓದುತ್ತ ಓದುತ್ತಾ. ನಾನೂ ಅದರಲ್ಲಿ     ಒಬ್ಬಳಾಗಿ ಬಿಡುತ್ತೇನೆ. ಬೆಟ್ಟದ ಜೀವ ಒಂದು ಸಣ್ಣ ಹವ್ಯಕ ಸಂಸಾರದ ಬಗ್ಗೆ ಡಾ! ಶಿವರಾಮ ಕಾರಂತರು ಬರೆದ ಅಪರೂಪದ ಕೃತಿ. ಈ ಕುಟುಂಬ ಒಂದು ಬೆಟ್ಟದ ಮೇಲೆ ವಾಸವಾಗಿರುತ್ತದೆ. ಪೂರ‍್ತಿ ಕಾದಂಬರಿ, ಈ ಕುಟುಂಬದ ಅತಿಥಿ ಸತ್ಕಾರ, ಅವರ ಕಷ್ಟಗಳು, ಜೀವನ ಕ್ರಮ, ಅವಿರತ ಶ್ರಮದ ಮೇಲೆ ಮೂಡಿಬಂದಿದೆ. ಸುಬ್ರಹ್ಮಣ್ಯದ ಕಾಡಿನಲ್ಲಿ ನಡೆಯುವಾಗ ದಾರಿತಪ್ಪಿ ಹೋದ ಲೇಖಕರು ಅದೇ ಕಾಡಿನ ಮೂಲೆಯಲ್ಲಿ ವಾಸವಿದ್ದ ಗೋಪಾಲಯ್ಯ ಹಾಗೂ ಶಂಕರಮ್ಮ ಎನ್ನುವ ಹವ್ಯಕ ದಂಪತಿಗಳ ಆದರ ಆತಿಥ್ಯಗಳಿಗೆ ಕಟ್ಟುಬಿದ್ದು, ನಾಲ್ಕುದಿನ ತಂಗಿ, ಅವರ ಮಾತುಗಳಿಂದ ಆ ಕುಟುಂಬದ ಕಥೆಯನ್ನು ತಿಳಿದುಕೊಳ್ಳುತ್ತಾರೆ. ಆ ಕುಟುಂಬದಲ್ಲಿ ಇರುವುದು ಇಬ್ಬರೇ. ಮಗ ಇಂಗ್ಲೀಷ್ ವಿದ್ಯಾಭ್ಯಾಸ ಮುಗಿಸಿ ಪೇಟೆಗೆ ಹೋಗಿ ಮರಳಿ ಎಂದೂ ಬಾರದೆ ಹೋಗುತ್ತಾನೆ. ಅವನ ದಾರಿಯನ್ನು ಕಾಣುವ ಈ ವೃದ್ಧ ದಂಪತಿಗಳ ಮುಗ್ಧತೆ ಹಾಗು ಶುದ್ಧ ಜೀವನ ಪ್ರಕೃತಿ ದತ್ತವಾಗಿ ಬಂದದನ್ನು ಎದುರಿಸುವ ದಿಟ್ಟತನ ಕಾದಂಬರಿಯಲ್ಲಿ  ಅತ್ಯಂತ ಸಹಜವಾಗಿ ಮೂಡಿಬಂದಿದೆ. ಎಲ್ಲಿಂದಲೋ ಬಂದ ಅಪರಿಚಿತ ವ್ಯಕ್ತಿಯನ್ನು ಆಧರಿಸಿ ಯಾವುದೇ ಅನುಮಾನಗಳಿಗೆಡೆಗೊಡದೆ ಗೋಪಾಲಯ್ಯ ದಂಪತಿಗಳು ತಮ್ಮ ಸಕಲ ಕಷ್ಟ ಕಾರ‍್ಪಣ್ಯಗಳನ್ನು, ಜೀವನದ ಸುಖದ ರಸಘಳಿಗೆಗಳನ್ನು ಲೇಖಕನ ಜೊತೆಗೆ ಹಂಚಿಕೊಳ್ಳುತ್ತಾರೆ. ವೃದ್ಧಾಪ್ಯದಲ್ಲಿ ಅವರನ್ನು ಅತಿಯಾಗಿ ಕಾಡುವ ಮಗನ ಅಗಲಿಕೆ, ಗೋಪಾಲಯ್ಯ – ದಂಪತಿಗಳ ಮಗನ ಅಗಲಿಕೆಯ ನೋವು ಇಡೀ ಕಾದಂಬರಿಯ ವಸ್ತು. ‘ಎಲ್ಲಾ ಇದ್ದೂ ಏನೂ ಇಲ್ಲ’ ವಿಧಿಯ ಈ ಆಟಕ್ಕೆ ಆತಂಕ, ದುಃಖ ಇದ್ದರೂ ಅದನ್ನು ಎದುರಿಸುವ ದಿಟ್ಟತನ, ‘ಪಾಲಿಗೆ ಬಂದದ್ದು ಪಂಚಾಮೃತ’ ಎಂದು ಸ್ವೀಕರಿಸುವ ಅವರ ಮನಸ್ಥಿತಿಯಲ್ಲಿ ಎದ್ದು ಕಾಣುತ್ತದೆ. “ನಿಜ, ನನಗೆ ಈ ನೆನಪು ಬಂತೆಂದರೆ – ಗಳಿಗೆಯಲ್ಲ, ದಿನವೇ ಕಣ್ಮರೆಯಾಗುತ್ತದೆ. ಗಂಡುಸಾದ ನನಗೇ ಹೀಗಾದ ಮೇಲೆ, ಅವಳ ಹೃದಯ ಏನಾಗಬೇಡ! ಆದರೆ ಫಲವೇನು? ಅವನು ತಿರುಗಿ ನಮ್ಮ ಮನೆಗೆ ಬಂದಾನು ಎಂದು ಅನಿಸುವುದಿಲ್ಲ”. “ಆದರೆ ದೇವರ ಇಚ್ಛೆಯೇ ಹಾಗಿದ್ದರೆ ಯಾರೇನು ಮಾಡಿಯಾರು?” ಅವರ ಈ ಮಾತುಗಳು ಅವರ ಪೂರ್ತಿ ಜೀವನದ ದರ್ಶನ ಮೂಡಿಸುತ್ತದೆ. ಇಳಿ ವಯಸ್ಸಿನಲ್ಲೂ ಬತ್ತದ ಜೀವನೋತ್ಸಾಹ, ಅತಿಥಿಯನ್ನು ಆದರಿಸುವ ಪರಿ, ಮಲೆನಾಡಿನ ಕೌಟುಂಬಿಕ ವ್ಯವಸ್ಥೆ, ಜನರಿಗೆ ಹಿಡಿದ ಇಂಗ್ಲಿಷ್ ವಿದ್ಯಾಭ್ಯಾಸದ ಹುಚ್ಚು, ಮಲೆನಾಡಿನ ಕೃಷಿವ್ಯವಸ್ಥೆ, ಬೇಟೆ ಪದ್ಧತಿ ಎಲ್ಲವೂ ಕಾದಂಬರಿಯಲ್ಲಿ ಅತೀ ಸುಂದರವಾಗಿ ಹಾಗು ಸಾದೃಶ್ಯವಾಗಿ ಚಿತ್ರಿತವಾಗಿದೆ. ಗೋಪಾಲಯ್ಯ, ಶಂಕರಮ್ಮ, ಶಿವರಾಮ, ದೇರಣ್ಣ, ಬಟ್ಯ, ಕಾಟು ಮೂಲೆ ನಾರಾಯಣ ಮೊದಲಾಗಿ ನಾಮಾಂಕಿತರಾದ ಕಾಡುವ ಪ್ರಾದೇಶಿಕ ವ್ಯಕ್ತಿ ಚಿತ್ರಗಳು; ಹುಲಿ ಬೇಟೆ, ಪಂಜ, ಗಿಡ್ಡಿನ ಕಾಫಿ, ಮಜ್ಜಿಗೆ ಹುಳಿ, ಎಣ್ಣೆ ಸ್ನಾನ, ಕುಮಾರಪರ‍್ವತವೇ ಮೊದಲಾದ ಬೆಟ್ಟಗಳ ದೃಶ್ಯ ಚಿತ್ತಾರ; ಆ ಬೆಟ್ಟಗಳಿಂದ ಹಳ್ಳಿಗಳ ಹೊಲಗದ್ದೆಗಳಿಗೆ ನುಗ್ಗುವ ಆನೆ, ಕಾಟಿ, ಕ್ರೂರ ಹುಲಿ, ಕಾಡುಹಂದಿಗಳ ದಾಂಧಲೆ; ಇವೇ ಮೊದಲಾಗಿ ಸುತ್ತಲಿನ ಹಳ್ಳಿಗಳಿಗೆ ಜೀವನಾಡಿಯಾಗಿರುವ ನದಿ ಕೆರೆಗಳ ಪರಿಚಯ; ಹಳೆಯ ಕಾಲದ ಕಾಡಿನ ಜೀವನವನ್ನು ಕಣ್ಣಮುಂದೆ ಬಿತ್ತರಿಸುತ್ತದೆ. ಕಾದಂಬರಿ ಓದುತ್ತಾ ಹೋದಂತೆ ಅದರಲ್ಲಿನ ಶಿವರಾಮನ ಪಾತ್ರದಾರಿಯೇ ನಾವಾಗುತ್ತೇವೆ. ಅದುವೇ ಈ ಕಾದಂಬರಿಯ ಶಕ್ತಿ. ಕಾರಂತರ ಯಾವುದೇ ಕಾದಂಬರಿಗಳಿರಲಿ ಅದರಲ್ಲಿ ಸರ‍್ವಕಾಲಕ್ಕೂ ಸಲ್ಲುವ ಕತೆಯ ಓಘಕ್ಕೆ ತಡೆ ಒಡ್ಡದೆ ಸಹಜವಾಗಿ ಹರಿದು ಬರುವ ನುಡಿ ಮುತ್ತುಗಳಿರುತ್ತವೆ. ಆಗಿನ ಸಮಾಜದ ಸ್ಥಿತ್ಯಂತರಗಳನ್ನು, ತವಕ-ತಲ್ಲಣಗಳನ್ನು, ನೈತಿಕ ಮೌಲ್ಯ, ಪ್ರಜ್ಞೆಗಳನ್ನು ಕಟ್ಟಿಕೊಡುವ ಸಾಲುಗಳಿರುತ್ತವೆ. ಬೆಟ್ಟದ ಜೀವವು ಇದಕ್ಕೆ ಹೊರತಲ್ಲ. ಕಾದಂಬರಿಯಲ್ಲಿ ಬರುವ ನನ್ನ ನೆಚ್ಚಿನ ಸಾಲುಗಳಿವು “ನಿಮ್ಮ ಊರಲ್ಲಿ ಹೆಣ ಸುಡುವುದಾದರೂ ಕಷ್ಟವೇ! ನಮ್ಮಲ್ಲಿ ಸಾಯುವುದಂತೂ ತೀರ ಸುಲಭ; ಹೆಣ ಸುಡುವುದು ಮತ್ತೂ ಸುಲಭ. ಇಲ್ಲಿ ಬದುಕುವುದೇ ಕಷ್ಟ ನೋಡಿ” “ಮನುಷ್ಯನಿಗೆ ತಾನು ಬದುಕಿದ ಮೇಲಲ್ಲವೇ ವೇದಾಂತದ ಪಾಠ, ಬದುಕುವುದಕ್ಕೇನೆ ಮೊದಲು ವೇದಾಂತವನ್ನು ಹೇಳಿ ಫಲವಿಲ್ಲ…” “ಯಾರು ಸಾವಿಗೆ ಅಂಜುವುದಿಲ್ಲವೋ ಅಂಥವರು ಬದುಕಿಗೆ ಹೆದರಬೇಕಿಲ್ಲ, ಅಂಥವನು ಬದುಕಬಲ್ಲ” ***************************** ಶಾಂತಲಾ ಮಧು

Read Post »

ಇತರೆ

ಕಾದಂಬರಿ ಕುರಿತು ಕರ್ವಾಲೊ ಪೂರ್ಣಚಂದ್ರ ತೇಜಸ್ವಿ ಚೈತ್ರಾ ಶಿವಯೋಗಿಮಠ “ಜೀವ ವಿಕಾಸಕ್ಕೆ ಎಲ್ಲಿದೆ ಕೊನೆ!” ಬರವಣಿಗೆ ಕೊಡುವ ಆನಂದಕ್ಕಿಂತ ಓದು ಕೊಡುವ ಸುಖವೇ ಆಪ್ಯಾಯಮಾನ. ಅಗಾಧವಾದ ಪ್ರಕಾರಗಳನ್ನು ಹೊಂದಿರುವಂತಹ ಸಾಹಿತ್ಯ, ಕನ್ನಡ ಸಾಹಿತ್ಯ. ಜನರಿಂದ ಹೆಚ್ಚು ಓದಲ್ಪಡುವ ಪ್ರಕಾರವೆಂದರೆ ಅದು ಕಾದಂಬರಿಗಳು. ಸಮಯ ಸವೆಸುವುದಕ್ಕೊ, ಜ್ಞಾನಾರ್ಜನೆಗೊ, ಮನೊರಂಜನೆಗೋ ಹೀಗೇ ವಿವಿಧ ಕಾರಣಕ್ಕಾಗಿ ಜನ ಕಾದಂಬರಿಗಳನ್ನು ಓದುತ್ತಾರೆ. ತೇಜಸ್ವಿಯವರ ಕಾದಂಬರಿಗಳ ವೈಶಿಷ್ಟ್ಯವೆಂದರೆ ಮನೋರಂಜನೆಯ ಜೊತೆಗೆ ವಿಜ್ಞಾನವನ್ನು, ಪ್ರಪಂಚ ಜ್ಞಾನವನ್ನು ವಿಫುಲವಾಗಿ ನೀಡುತ್ತವೆ. ತೇಜಸ್ವಿಯವರ ಕಾದಂಬರಿಗಳಲ್ಲಿ ಎಲ್ಲರೂ ಸಾಮಾನ್ಯವಾಗಿ ಮೊದಲು ಓದುವುದು ಅವರ ‘ಕರ್ವಾಲೊ’ ಕಾದಂಬರಿಯನ್ನೆ. ಧ್ಯಾನ, ತಪಸ್ಯೆಗಳಂತೆ ವಿಜ್ಞಾನವೂ ಆತ್ಮಸಾಕ್ಷಾತ್ಕಾರದ ದಾರಿ ಎಂದು ಪ್ರತಿಪಾದಿಸುವ ಕೃತಿ ಕರ್ವಾಲೊ. ಹೆಸರೇ ಸೂಚಿಸುವಂತೆ ಇದು ‘ಕರ್ವಾಲೊ’ ಎಂಬ ವಿಜ್ಞಾನಿ, ಅವನ ಅನ್ವೇಷಣೆಗಳು ಮತ್ತು ಇವೆಲ್ಲದರೊಟ್ಟಿಗೆ ತೇಜಸ್ವಿಯವರ ಅನುಭವಗಳ ಕುರಿತಾದ ಕೃತಿ. ಜೇನು ಸಾಕಾಣಿಕೆಯಿಂದ ಪ್ರಾರಂಭವಾಗುವ ಕಾದಂಬರಿ ಜೇನುಗಳ ಬಗ್ಗೆ,ಅವುಗಳ ಸಾಕಾಣಿಕೆಯ ಬಗೆಗೆ ಸಾಕಷ್ಟು ಬೆಳಕು ಚೆಲ್ಲುತ್ತದೆ. ಜೇನು ನೊಣಗಳು ಗೂಡನ್ನು ಕಟ್ಟಿ ಮಕರಂದ ಸಂಗ್ರಹಿಸೋಕೆ ಹೋದಾಗ ಗೂಡಿನ ಸ್ಥಳ ಪಲ್ಲಟ ಮಾಡಿದಾಗ ಅವಕೆ ಆಗುವ ಗೊಂದಲಗಳು, ನಾಗರಹಾವಿನಂತೆ ಬುಸುಗುಡುವ ಕರಿತುಡುವೆ ಜೇನುಗಳು ಹೀಗೇ ಹಲವಾರು ವಿಷಯಗಳನ್ನು ಬಹಳ ಸ್ವಾರಸ್ಯಕರವಾಗಿ ಹೆಣೆಯುತ್ತಾ ಹೋಗುತ್ತಾರೆ. ಕಾದಂಬರಿಯಲ್ಲಿ ಬರುವ ಪ್ಯಾರ, ಮಂದಣ, ಪ್ರಭಾಕರ, ಕರ್ವಾಲೋ, ಲೇಖಕರು ಹೀಗೇ ಎಲ್ಲಾ ಪಾತ್ರಗಳು. ಬಹಳಷ್ಟು ಆಪ್ತವೆನಿಸುತ್ತವೆ. ಕಿವಿ ಮತ್ತು ಪ್ಯಾರನ ಸನ್ನಿವೇಶಗಳು, ಮಂದಣನ ಮದುವೆಯ ಸನ್ನಿವೇಶಗಳು ಹಾಸ್ಯಭರಿತವಾಗಿದ್ದು ಓದುಗರಲ್ಲಿ ನಗೆ ಉಕ್ಕಿಸಿ ಹಗುರಾಗಿಸುತ್ತವೆ. ತನಗೇ ಅರಿವಿಲ್ಲದೆಯೇ ಮಂದಣ ಒಬ್ಬ ಒಳ್ಳೆಯ ಪರಿಸರ ವಿಜ್ಞಾನಿ ಎಂದು ಕರ್ವಾಲೋರವರು ಹೇಳಿದಾಗ ನಂಬದ ತೇಜಸ್ವಿಯವರು, ನಂತರ ಹಾಗೆ ಹೇಳುವ ಹಿಂದಿನ ಕಾರಣಗಳನ್ನು ತಿಳಿದು ನಂಬುತ್ತಾರೆ. ಹೀಗಿರುವಾಗ ಕಳ್ಳಭಟ್ಟಿಯ ವಿಚಾರದಲ್ಲಿ ಜೈಲಿಗೆ ಸೇರಿದ ಮಂದಣನನ್ನು ಬಿಡಿಸಲು ಪಡುವ ಪ್ರಯತ್ನಗಳು ಸ್ವಾರಸ್ಯಕರವಾಗಿದ್ದು ಜೊತೆಗೆ ಅಲ್ಲಲ್ಲಿ ಮಂದಣನ ನಡುವಳಿಕೆಗಳು ನಗು ತರಿಸುತ್ತವೆ. ಇಡೀ ಕಾದಂಬರಿಯ ಕೇಂದ್ರ ಬಿಂದು, ಮೂರರ ಮುಂದೆ ಏಳು ಸೊನ್ನೆ ಹಾಕಿದಾಗ ಎಷ್ಟು ವರ್ಷಗಳಾಗುತ್ತೊ ಅಷ್ಟು ವರುಷಗಳ ಹಿಂದೆ ಇದ್ದ ಹಾರುವ ಓತಿಯನ್ನ ಅನ್ವೇಷಣೆ ಮಾಡಲು ಕರ್ವಾಲೋರ ನೇತೃತ್ವದಲ್ಲಿ ಪ್ಯಾರ, ಮಂದಣ, ಪ್ರಭಾಕರ, ಕಿವಿ (ತೇಜಸ್ವಿಯವರ ಸಾಕು ನಾಯಿ) ಮತ್ತು ತೇಜಸ್ವಿಯವರು ಹೊರಡುವುದು. ಸುಮಾರು ೩೦ ಪುಟಗಳಷ್ಟು ಅನ್ವೇಷಣೆಯ ಕಥೆ ಬಹಳಷ್ಟು ರೋಚಕವಾಗಿದ್ದು ಕೊನೆಗೆ ಬೆಟ್ಟದ ತುದಿಯಲ್ಲಿ ಕೋಡುಗಲ್ಲ ಮೇಲಿಂದ ಹಾರಿ ಕೈತಪ್ಪಿಸಿಕೊಳ್ಳುವ ಹಾರುವ ಓತಿಯ ಇಡೀ ಕಥಾನಕ ಕಣ್ಣೆವೆಯಿಕ್ಕದೆ ಓದಿಸಿಕೊಳ್ಳುತ್ತದೆ. “ಜೀವ ವಿಕಾಸಕ್ಕೆ ಎಲ್ಲಿದೆ ಕೊನೆ!” ಎನ್ನುವ ಕರ್ವಾಲೊರ ನುಡಿಗಳೊಂದಿಗೆ ಕಾದಂಬರಿ ಮುಗಿಯುತ್ತದೆ. ಜೇನುನೊಣಗಳು, ಗ್ಲೋ ವರ್ಮ್, ಮಂಗಟೆ ಹಕ್ಕಿ, ಹಾರುವ ಓತಿ ಹೀಗೇ ಪರಿಸರದ ಬಗೆಗಿನ ಕೌತುಕಗಳೊಂದಿಗೆ, ಓದುಗನನ್ನು ಹಿಡಿದಿಡುವ ಕೌಶಲ್ಯ ಈ ಕಾದಂಬರಿಯ ವೈಶಿಷ್ಟ್ಯ ಮತ್ತು ಹಿರಿಮೆ. ಚಿದಂಬರ ರಹಸ್ಯ, ತಬರನ ಕಥೆ, ಸುಶ್ಮಿತಾ ಮತ್ತು ಹಕ್ಕಿ ಮರಿ, ಕುಬಿ ಮತ್ತು ಇಯಾಲ, ಮಿಲೇನಿಯಂ ಸಿರೀಸ್ (೧೬ ಪುಸ್ತಕಗಳು) ಹೀಗೆ ಇನ್ನೂ ಅನೇಕ ಅಮೂಲ್ಯ ಕೃತಿಗಳನ್ನು ನೀಡಿರುವ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರಿಗೆ ನಮನಗಳು ************************************ ಚೈತ್ರಾ ಶಿವಯೋಗಿಮಠ

Read Post »

You cannot copy content of this page

Scroll to Top