ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಅಂಬೇಡ್ಕರ್ ಜಯಂತಿ ವಿಶೇಷ

ಬಾಬಾ ಸಾಹೇಬ್ರಿಗೊಂದು ಪತ್ರ.

ಲಲಿತಾ ಪ್ರಭು ಅಂಗಡಿ

Read Post »

ಇತರೆ

ಅಂಬೇಡ್ಕರ್ ಜಯಂತಿ ವಿಶೇಷ ಸುಜಾತಾ ರವೀಶ್ ಮಾನವತಾವಾದಿ ಇಂದಿಗೂ ನಾವು ಜೀವಿಸುತ್ತಿರುವ ಸಮಕಾಲೀನ ಜಗತ್ತು ಅನೇಕ ಸಾಮಾಜಿಕ ಆರ್ಥಿಕ ಸಮಸ್ಯೆಗಳ ಸುಪ್ತ ಜ್ವಾಲಾಮುಖಿ. ಧರ್ಮಾಂಧತೆ ಕೋಮುವಾದ ಭಯೋತ್ಪಾದನೆ ಜಾತೀಯತೆಗಳಂತಹ ಧರ್ಮ ಸಂಬಂಧಿ ಭುಗಿಲುಗಳು,  ಅಸಮಾನತೆ ವರ್ಗಸಂಘರ್ಷ ಮೌಢ್ಯತೆ ಭ್ರಷ್ಟಾಚಾರ ಮೊದಲಾದ ಸಾಮಾಜಿಕ ತಲ್ಲಣಗಳು, ನಿರುದ್ಯೋಗ ಸಂಪತ್ತಿನ ಕ್ರೋಢೀಕರಣದಂತಹ ಆರ್ಥಿಕ ಸಮಸ್ಯೆಗಳು, ಮಕ್ಕಳ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಈ ಎಲ್ಲ ಉರಿಗಳು ಸುತ್ತುವರಿದು ಸಮಾಜವನ್ನು ದಹಿಸುತ್ತಿವೆ. .ಮನುಕುಲ ಮುಂದುವರಿದಷ್ಟೂ ವಿದ್ಯಾಭ್ಯಾಸ ಹೆಚ್ಚಾದಷ್ಟೂ ಕಡಿಮೆ ಆಗಬೇಕಿದ್ದ ಈ ಎಲ್ಲವೂ ನಾಗರಿಕತೆಯ ನಾಗಾಲೋಟದಲ್ಲಿ ಬೇರೆ ರೀತಿಯ ಆಯಾಮವನ್ನು ಪಡೆದುಕೊಂಡು ಮತ್ತಷ್ಟು ವಿಜೃಂಭಿಸ ತೊಡಗಿವೆ. ಸಮಾನತೆ ಹಾಗೂ ಮಾನವತೆಯ ಹರಿಕಾರರಾದ  ಅಂಬೇಡ್ಕರರು ಬರೀ ವ್ಯಕ್ತಿಯಾಗದೆ ವ್ಯಕ್ತಿತ್ವವಾಗಿ ರೂಪುಗೊಂಡು ಸಮಾಜದ ಪರಿವರ್ತನೆಗೆ ಮಾರ್ಗ ಪ್ರವರ್ತಕರಾದದ್ದು ಇತಿಹಾಸ ನಿರ್ಮಿಸಿದ ಮಹಾ ಚರಿತ್ರೆ.  ಇಂತಹವರ ಜೀವನವನ್ನು ಅರಿಯುವುದು ಸಾಧನೆಯ ಬಗ್ಗೆ ತಿಳಿಯುವುದು ಮತ್ತು ಅವರ ವಿಚಾರಗಳ ಬೆಳಕಿನಲ್ಲಿ ಮುಂದಡಿ ಇಡುವುದು ಇಂದಿನ ಈ ಪ್ರಕ್ಷುಬ್ಧತೆಯ ವಾತಾವರಣದಲ್ಲಿ ಹೆಚ್ಚು ಪ್ರಸ್ತುತ ಹಾಗೂ ಅನಿವಾರ್ಯತೆಯೂ ಹೌದು . ಈ ನಿಟ್ಟಿನಲ್ಲಿ ಅಂಬೇಡ್ಕರರ ಜೀವನ ಆದರ್ಶ ಮತ್ತು ತತ್ವಗಳ ಕಡೆ ಗಮನ ಹರಿಸೋಣವೇ? ಡಾಕ್ಟರ್ ಬಿ ಆರ್ ಅಂಬೇಡ್ಕರ್ ಮಧ್ಯಪ್ರದೇಶದ ಮಾಹೋ ಮಿಲಿಟರಿ ಕ್ಯಾಂಪಿನಲ್ಲಿ ಮಹಾರ ಜಾತಿಯಲ್ಲಿ ಹುಟ್ಟಿದರು. ಕೀಳು ಜಾತಿ ಎಂಬ ಕಾರಣಕ್ಕೆ ಶಾಲೆಯಲ್ಲಿ ಬಾಗಿಲಿನಾಚೆ ಕುಳಿತುಕೊಂಡು ಶಿಕ್ಷಣ ಪಡೆದರು. ಪ್ರಾಥಮಿಕ ಶಾಲೆಯಲ್ಲಿದ್ದಾಗ ಫೆಂಡ್ಸೆ ಅಂಬೇಡ್ಕರ್ ಎಂಬ ಬ್ರಾಹ್ಮಣ ಶಿಕ್ಷಕರು ಇವರ ಪ್ರತಿಭೆ ಗುರುತಿಸಿ ಊಟ ಬಟ್ಟೆ ಕೊಟ್ಟು ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಿದರು.ಅವರ ಮೇಲಿನ ಗೌರವದಿಂದ ಅಂಬೇಡ್ಕರ್ ಎಂಬ ಅವರ ಹೆಸರನ್ನು ತಮ್ಮ ಹೆಸರಿಗೆ ಸೇರಿಸಿಕೊಂಡರು ಪ್ರೌಢಶಾಲೆಯಲ್ಲಿ ಸಂಸ್ಕೃತ ಕಲಿಯಲು ಇವರಿಗೆ ಅವಕಾಶ ಸಿಗುವುದಿಲ್ಲ ಅಲ್ಲಿಯೂ ಇವರಿಗೆ ಅಸ್ಪೃಶ್ಯತೆಯ ಅನುಭವವಾಗುತ್ತದೆ. ಹತ್ತನೆಯ  ತರಗತಿಯಲ್ಲಿ ಉತ್ತೀರ್ಣರಾದ ಇವರಿಗೆ ಬುದ್ಧ ಚರಿತೆ ಎಂಬ ಪುಸ್ತಕ ಸಿಗುತ್ತದೆ ಮತ್ತು ಅದನ್ನು ಓದಿ ಪ್ರಭಾವಿತರಾಗುತ್ತಾರೆ. ಹದಿನೇಳನೇ ವಯಸ್ಸಿನಲ್ಲಿ ರಮಾಬಾಯಿ ಅವರೊಂದಿಗೆ ವಿವಾಹವಾಗುತ್ತದೆ.  . ಆನಂತರ ಬಿಎ ಮುಗಿಸಿ  ಬರೋಡ ಸಂಸ್ಥಾನದಲ್ಲಿ ಲೆಫ್ಟಿನೆಂಟ್ ಆಗಿ ಸೇರುತ್ತಾರೆ.  ನಂತರ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಓದಲು ವಿದ್ಯಾರ್ಥಿ ವೇತನ ಪಡೆದು ಎಂಎ ಪದವಿ ಪಡೆಯುತ್ತಾರೆ. ಮತ್ತು ಅಂತಾರಾಷ್ಟ್ರೀಯ ಸಮಾಜಶಾಸ್ತ್ರೀಯ ವಿಚಾರ ಸಂಕಿರಣದಲ್ಲಿ ಭಾರತೀಯ ಜಾತಿಗಳು ಎಂಬ ಪ್ರಬಂಧ ಮಂಡಿಸುತ್ತಾರೆ. ನಂತರ ಮರಳಿ ಬಂದು ಕಾಲೇಜು ಉಪನ್ಯಾಸಕರಾಗಿದ್ದು ಕೂಡಿಟ್ಟ ಹಣ ಮತ್ತು ವಿದ್ಯಾರ್ಥಿ ವೇತನ ಪಡೆದು ಲಂಡನ್ನಿನಲ್ಲಿ ಅಧ್ಯಯನ ಮಾಡುತ್ತಾರೆ ಹೀಗೆ ಲಾ ಪದವಿಯನ್ನು ಪಡೆಯುತ್ತಾರೆ ಅವರು ಪಡೆದ ಸ್ನಾತಕೋತ್ತರ ಪದವಿಗಳು ಮತ್ತು ಮಂಡಿಸಿದ ಪಿಎಚ್ಡಿ ಪ್ರಬಂಧಗಳು ಅಸಂಖ್ಯಾತ. ಇಷ್ಟೆಲ್ಲಾ ಆದರೂ ಅಂಬೇಡ್ಕರ್ ಅವರು ಅತ್ಯಂತ ಸ್ಮರಣೀಯರಾಗುವುದು ಅಸ್ಪೃಶ್ಯತೆಯ ವಿರುದ್ಧದ ಹೋರಾಟ ಹಾಗೂ ಸಂವಿಧಾನ ರಚನೆಯಲ್ಲಿ. ೧೯೨೭ ರಿಂದ ೧೯೩೨ವರೆಗೆ ಅಹಿಂಸಾತ್ಮಕ ಆಂದೋಲನಗಳ ಮುಂದಾಳತ್ವ ವಹಿಸಿ ಅಸ್ಪೃಶ್ಯರ ದೇವಾಲಯ ಪ್ರವೇಶದ ಹಕ್ಕು ಸಾರ್ವಜನಿಕ ಕೆರೆ ಬಾವಿಗಳಿಂದ ನೀರು ಸೇದುವ ಹಕ್ಕು ಇತ್ಯಾದಿಗಳಿಗೆ ಹೋರಾಡಿದರು. “ಬಹಿಷ್ಕೃತ ಭಾರತ” ಎಂಬ ಪತ್ರಿಕೆಯನ್ನು ಪ್ರಾರಂಭಿಸುತ್ತಾರೆ . ಲಂಡನ್ನಲ್ಲಿ ನಡೆದ ದುಂಡು ಮೇಜಿನ ಸಮ್ಮೇಳನದಲ್ಲಿ ದಲಿತ ಪ್ರತಿನಿಧಿಯಾಗಿ ಭಾಗವಹಿಸಿ ದಲಿತರಿಗೆ ಮತದಾನದ ಸೌಲಭ್ಯ ದೊರಕಿಸಿ ಕೊಡುತ್ತಾರೆ ಮುಂದೆ ಹಿಂದೂ ಧರ್ಮದಲ್ಲಿ ಉಳಿಯುವುದಿಲ್ಲವೆಂದು ಬೌದ್ಧ ಧರ್ಮಕ್ಕೆ ಮತಾಂತರ ಹೊಂದುತ್ತಾರೆ.  ಸಂವಿಧಾನದ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ನಂತರ ನೆಹರು ಸಚಿವ ಸಂಪುಟದಲ್ಲಿ ಕಾನೂನು ಸಚಿವರಾಗಿದ್ದಾಗ ಸಂವಿಧಾನ ರಚಿಸುವ ಜವಾಬ್ದಾರಿ ಹೊತ್ತು ಸಂವಿಧಾನ ಶಿಲ್ಪಿ ಎಂಬ  ಮನ್ನಣೆಗೆ ಪಾತ್ರರಾದರು.  ಸಮಾನತೆಯ ತತ್ವದಲ್ಲಿ ಶೋಷಿತ ವರ್ಗವನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜೀವನವಿಡೀ ಶ್ರಮಪಟ್ಟರೂ ತಾವೇ ಶೋಷಿತರಾಗಿದ್ದ ಅನುಭವದ ಹಿನ್ನೆಲೆಯಲ್ಲಿ ಅಂಬೇಡ್ಕರರಿಗಿಂತ ಸಮಾನತೆಯ ಅವಶ್ಯಕತೆ ಅನಿವಾರ್ಯತೆ ಅರಿತವರು ಇನ್ಯಾರಿದ್ದಾರೆ? ಇಲ್ಲಿ ಶೋಷಿತರೆಂದರೆ ಜಾತಿ ಮುಖೇನ ಶೋಷಿತರು ಮಾತ್ರವಲ್ಲದೆ ಆರ್ಥಿಕ ಕೆಳಮಟ್ಟದವರನ್ನು ಮತ್ತು ಮಹಿಳೆಯರನ್ನು   ಸಮಾನತೆಯ ಸ್ತರಕ್ಕೆ ಕೊಂಡೊಯ್ಯುವ ಕೆಲಸ ನಡೆಯಿತು. ಮಹಿಳೆಯರಿಗೆ ಸಮಾನ ವೇತನದ ಪರಿಕಲ್ಪನೆ ಆಚರಣೆ ಅಂಬೇಡ್ಕರರ ದೂರದೃಷ್ಟಿಯ ಫಲವೇ.  ಹಾಗೆಯೇ ಆರ್ಥಿಕವಾಗಿ ಕೆಳಮಟ್ಟದಲ್ಲಿದ್ದವರಿಗೆ ಕೆಲವೊಂದು ವಿನಾಯಿತಿ ವಿಶೇಷ ಸೌಲಭ್ಯಗಳು ಸಹ ಇವರದೇ ಪುರೋಗಾಮಿ ಯೋಚನೆಗಳ ಫಲ.  ೨೧ ವೈಚಾರಿಕ ಪ್ರಬಂಧಗಳು ೮ ಪ್ರಮುಖ ಕೃತಿಗಳು ೨ ಸಂಶೋಧನಾ ಪ್ರಬಂಧಗಳನ್ನು ಸಾರಸ್ವತ ಲೋಕಕ್ಕೆ ಕೊಡುಗೆ ಕೊಟ್ಟರು.  “ಪ್ರಜಾಪ್ರಭುತ್ವ ಎಂದರೆ ಸರ್ಕಾರದ ಒಂದು ರೂಪವಲ್ಲ ಅದು ಪ್ರಮುಖವಾಗಿ ಸಹಬಾಳ್ವೆಯ ಸೊಗಸು ಮತ್ತು ಅನುಭವವನ್ನು ಪರಸ್ಪರ ದಟ್ಟೈಸುವ ಜೋಡಣೆ ಮೂಲಭೂತವಾಗಿ ಅದು ಸಹವರ್ತಿಗಳೇ ತೋರುವ ಗೌರವಾದರ ಭಾವನೆ” ಎಂಬುದು ಇವರ ಅಭಿಪ್ರಾಯ ಜೀವನದ ಕಡೆ ಕ್ಷಣದಲ್ಲಿಯೂ ಅಂದುಕೊಂಡದ್ದನ್ನು ಸಾಧಿಸಲಾಗಲಿಲ್ಲವೆಂದು ನೊಂದು ತಮ್ಮ ತತ್ವ ಆದರ್ಶಗಳಿಗಾಗಿ ತುಡಿಯುತ್ತಾ ಕೊನೆಯುಸಿರು ಎಳೆದವರು ಈ ಮಹಾನ್ ಮಾನವತಾವಾದಿ ಭಾರತ ಸರ್ಕಾರ ಇವರಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ಕೊಟ್ಟಿದೆ. ಇವರು ಬರೀ ವ್ಯಕ್ತಿಯಾಗದೇ ಒಂದು ಸಂಸ್ಥೆಯಾಗಿ ಬೆಳೆದ ವಿಸ್ಮಯ ಲೋಕದೆದುರು ಅನಾವರಣವಾಗಿದೆ.  ಬುದ್ಧ ಹಾಗೂ ಬಸವಣ್ಣನವರು ಶೋಷಿತ ವರ್ಗ ಆಗದಿದ್ದರೂ ತುಡಿವ ಹೃದಯವಿದ್ದವರು . ಇನ್ನು ಅಂಬೇಡ್ಕರರು ಶೋಷಿತ ವರ್ಗದ ಪ್ರತಿನಿಧಿಯಾಗಿ ಆ ತುಮುಲವನ್ನು ಸ್ವತಃ ಅನುಭವಿಸಿ ಅರ್ಥೈಸಿ ಕೊಂಡವರಾಗಿದ್ದರು.  ಬುದ್ಧ ವ್ಯಕ್ತಿ ಅಂತರಾತ್ಮನ ಕರೆಯನ್ನು ಆಲಿಸಿ ತನ್ನೊಳಗಿನಿಂದ ಜಾಗೃತನಾಗಿ ಸಮಾಜದ ಅಭಿವೃದ್ಧಿಗೆ ಕಾರಣನಾಗಬೇಕೆಂದು ಹೇಳುತ್ತಾನೆ .ಬಸವಣ್ಣನವರು ತಾರತಮ್ಯ ಭಾವ ನೀಗಿಸಿ ಸಮಾನತೆ ತರುವ ನಿಟ್ಟಿನಲ್ಲಿ ಸಮಾಜದ ಒಳಿತಿಗಾಗಿ ಕರೆ ನೀಡಿ ಸಮುದಾಯವನ್ನು ತಮ್ಮೊಂದಿಗೆ ಕರೆದೊಯ್ಯುವ ಪ್ರಯತ್ನ ಪಡುತ್ತಾರೆ.  . ದಮನಿತ ವರ್ಗದ ರಾಯಭಾರಿಯಾಗಿ ಪ್ರಸ್ತುತ ಸಮಾಜದಲ್ಲಿ ಸಮಾನತೆಯ ಹಕ್ಕು ಕಲ್ಪಿಸಲು ಸೈದ್ಧಾಂತಿಕವಾಗಿ ಅಂಬೇಡ್ಕರರು ಪ್ರಯತ್ನಿಸುತ್ತಾರೆ.  ವ್ಯಕ್ತಿ ಸಮಾಜ ಹಾಗೂ ಸಮಷ್ಥಿಗಳ ಕ್ರೋಢೀಕೃತ ಪ್ರಯತ್ನದಿಂದಲೇ ಸಫಲತೆ ಸಾಧ್ಯ . ಉನ್ನತ ವಿಚಾರ ಮಟ್ಟವಿದ್ದರೂ ರಾಜ ಕೃಪೆ ಇರದೆ ಬಸವ ಧರ್ಮ ಗೆಲುವು ಸಾಧಿಸಲಾಗಲಿಲ್ಲ . ಹಾಗಾಗಿಯೇ ಅಂಬೇಡ್ಕರರು ಬರೀ  ಜನಜಾಗೃತಿಯಲ್ಲಿ ಇದು ಅಸಾಧ್ಯವೆಂದು ಮನಗಂಡು ಸರಕಾರದ ಕಾನೂನಿನ ಸಹಕಾರವೂ ಅಗತ್ಯವೆಂದು ತಿಳಿದೇ ಈ ಸಮಾನತೆಯನ್ನು ಸಂವಿಧಾನಿಕ ಚೌಕಟ್ಟಿನಲ್ಲಿಯೇ ತರುವ ಪ್ರಯತ್ನ ಮಾಡಿ ಸಫಲರಾಗಿದ್ದು. ಅವರ ಕಾರ್ಯದ ಫಲ ಇಂದಿನ ಸಾಮಾಜಿಕ ಆರ್ಥಿಕ ಹಾಗೂ ರಾಜಕೀಯ ವಲಯಗಳಲ್ಲಿ ಪ್ರತಿಬಿಂಬಿತ ವಾಗುತ್ತಿರುವುದನ್ನು ಎಲ್ಲರೂ ಕಾಣುತ್ತಿದ್ದೇವೆ ಹಾಗೂ ಮನಗಂಡಿದ್ದೇವೆ ಅಲ್ಲವೇ ?  ಹೀಗಾಗಿ  ಈ ಪ್ರಾತಃಸ್ಮರಣೀಯರ ಸಾಧನೆ ಬಾಳಿಗೊಂದು ಪಾಠವಾಗಲಿ ಎಂದು ಬಯಸುತ್ತಾ “ಸರ್ವೇ ಜನಾಃ ಸುಖಿನೋ ಭವಂತು” ಎಂಬ ಆಶಯ. 

Read Post »

ಇತರೆ, ಪ್ರಬಂಧ

‘ರಸ್ತೆಯ ಆತ್ಮಕತೆ’ ಲಲಿತ ಪ್ರಬಂಧ ಜಿ.ಎಸ್.ಹೆಗಡೆ

ಪ್ರಬಂಧ ಸಂಗಾತಿ ಜಿ.ಎಸ್.ಹೆಗಡೆ ರಸ್ತೆಯ ಆತ್ಮಕತೆ’ ನಾನು ಮತ್ತು ಮರ ಹಿಂದಿನ ಜನ್ಮದಲ್ಲಿ ಒಂದೇ ಆಗಿದ್ದವೋ ಏನೋ? ಗೊತ್ತಿಲ್ಲ. ಸುಭಾಷಿತವೊಂದು ವೃಕ್ಷದ ಕುರಿತು ಹೇಳುತ್ತದೆ.‘ಪರೋಪಕಾರಾಯ ಫಲಂತಿ ವೃಕ್ಷಾಃ’ ಎಂದು. ನಾನೂ ಸಹ ಪರೋಪಕಾರಕ್ಕಾಗಿಯೇ ಜೀವವನ್ನು ಸವೆಸುತ್ತಿದ್ದೇನೆ. ವೃಕ್ಷಗಳು ಅನೇಕ ಜೀವಿಗಳಿಗೆ ಆಶ್ರಯ‌ ನೀಡುತ್ತವೆ. ಅವುಗಳ ಜೊತೆಗೆ ಬಂದಳಿಕೆಯಂತಹ ಜೀವಿಗೆ ಆಶ್ರಯ ‌ನೀಡಿ ಕೊನೆಗೆ ತಾವೇ ನಾಶ ಹೊಂದುತ್ತವೆ. ನಾನೂ ಸಹ ಹಾಗೆಯೇ. ಹೇಗೆ ಬಂದಳಿಕೆಗಳು ವೃಕ್ಷಗಳಿಗೆ ಬೇಡವಾಗಿದ್ದವೋ ಅದೇ ರೀತಿ ನನಗೆ ಬಂದಳಿಕೆಯಂತೆ ವಕ್ಕರಿಸುವಂತಹ ಅನೇಕ ಅವಸ್ಥೆ, ವ್ಯವಸ್ಥೆಗಳು ನನ್ನನ್ನು ಬೆಂಬಿಡದೇ ಕಾಡುತ್ತಿವೆ. ಅದರಲ್ಲೂ ವಿದ್ಯುತ್ ಗೂ ನನಗೂ ಯಾಕೋ ಏನೋ ಎಡಬಿಡದ ಬಂಧ? ಬಂಧನ! ನಾನು ಹಿರಿದಿರಲಿ, ಕಿರಿದಿರಲಿ, ರಾಜ ಪಥವೇ ಇರಲಿ, ಮಣ್ಣಿನಿಂದ ಕೂಡಿರಲಿ ನನ್ನ ಪಕ್ಕದಲ್ಲಿ ಕರೆಂಟ್ ಕಂಬಗಳ ಸಾಲು ಸಾಲು‌.ನನ್ನನ್ನು ನನ್ನ ಪಾಡಿಗೆ ಜನರು ಬಿಡಲೊಲ್ಲರು ಎಂದೆನಿಸುತ್ತದೆ.ನಾನು ಮೊದಲೋ, ವಿದ್ಯುತ್ ಮಾರ್ಗ ಮೊದಲೋ ಎಂದು ಪ್ರಶ್ನಿಸವ ಸಂದರ್ಭವಿಲ್ಲ. ಕೋಳಿ‌ ಮೊದಲೋ ಮೊಟ್ಟೆ ಮೊದಲೋ ಎಂದು ಕೇಳುವ ರೀತಿ ಇಲ್ಲಿಲ್ಲ. ನಾನೇ ಮೊದಲು ನಂತರ ವಿದ್ಯುತ್ ಕಂಬಗಳು ಮತ್ತು ತಂತಿಗಳು ಎಂದು ಸಾಕ್ಷಿ ಸಹಿತ ತೋರಿಸಬಹುದು.ನಾನು ಹೋದಲ್ಲೆಲ್ಲಾ ನನ್ನ ಬೆನ್ನು ಬಿಡದ ಬೇತಾಳನಂತೆ ಈ ವಿದ್ಯುತ್ ಕಂಬಗಳು ಧುತ್ತೆಂದು! ಬಂದು ಪ್ರತಿಷ್ಠಾಪಿಸಲ್ಪಡುತ್ತವೆ. ನನ್ನ ಎಡಕ್ಕಿರಲಿ, ಬಲಕ್ಕಿರಲಿ ಇವರ ಅತಿಕ್ರಮಣ ಸದಾ ಇದ್ದದ್ದೇ. ಕೆಲವೊಮ್ಮೆ ನನ್ನ ಎರಡೂ ಕಡೆ ಬಂದು ಸ್ಥಿರವಾಗಿ ನಿಂತು ಬಿಡ್ತಾವೆ ನೋಡಿ. ಈ ತಂತಿಗಳು ಮತ್ತು ಕಂಬದ ಮೆಲಿನ ಬಿರಡೆಗಳು ನನ್ನ ಅವಸ್ಥೆಯನ್ನು ಕಂಡು ಕುಹಕವಾಡುತ್ತವೆ. ನನ್ನ ಮೇಲೆ ಪ್ರತೀ‌ ನಿತ್ಯ ಎಷ್ಟೊಂದು ಭಾರವಾದ ಲಾರಿಗಳು, ಬಸ್ ಗಳು ಚಲಿಸುತ್ತವೆಂದು ಊಹಿಸಲೂ ಅಸಾಧ್ಯ. ಅಷ್ಟೊಂದು ಭಾರವನ್ನು ನಾನು ಹೊರಬೇಕು. ಆದರೆ ಆ ವಿದ್ಯುತ್ ಕಂಬವನ್ನು‌ ಲೈನ್ ಮ್ಯಾನ್ ಬಿಟ್ಟು ಮತ್ತೆ ಯಾರೂ ಏರಲಾರರು.ಇನ್ನು ಏರಿದರೆ ಕೋತಿಗಳು ಏರಬಹುದು. ಅಥವಾ ಅಕಸ್ಮಾತ್ ಹಾರಿಬಿಡಬಹುದು. ಅವನ್ನೂ ಕ್ಷಣಮಾತ್ರದಲ್ಲಿ ಭಸ್ಮಮಾಡಿ ನನ್ನೆಡೆಗೆ ಎಸೆಯುವ ಕ್ರೂರತೆ ಈ ವಿದ್ಯುತ್ ತಂತಿಗಳದ್ದು.ಆದರೆ ಇವು ಮಾತ್ರ ಹಾಯಾಗಿ ನನ್ನ ಪಕ್ಕದಲ್ಲಿ ನಿಂತು ನಿದ್ರಿಸುತ್ತವೆ. ನಿದ್ದೆಗಣ್ಣಿನಲ್ಲೂ ಈ ಕಂಬಗಳು ಬೀಳಬಾರದೆಂದು ನೆಲದಿಂದ ಕಂಬದ ತುದಿಗೆ ಕಬ್ಬಿಣ ತಂತಿಯಿಂದ ಎಳೆತದ ವ್ಯವಸ್ಥೆ ಬೇರೆ ಇದೆ. ಹಾಗಾಗಿ ವಿದ್ಯುತ್ ಕಂಬ ಹಾಯಾಗಿ ಇದೆ. ಅಪರೂಪಕ್ಕೆಲ್ಲಾದ್ರೂ ನಾಯಿ ಅಪವಿತ್ರ ಮಾಡಿ ಹೋದೀತು ಅಷ್ಟೆ!.ನನ್ನ ಪಕ್ಕದಲ್ಲಿ ಬೇಲಿಗುಟ್ಟದಂತೆ ನಿಂತಿರುವ ವಿದ್ಯುತ್ ಕಂಬಗಳು ನನ್ನಲ್ಲಿ ಚಲಿಸುವ ವಾಹನ ಸವಾರರ ಕಡೆಗೆ ಸ್ವಲ್ಪವೂ ಕಾಳಜಿ ತೋರಿಸಲಾರವು. ಆದರೆ ನಾನು ಹಾಗಲ್ಲ. ಮೈ ಮೇಲೆ ಹೊಂಡಬಿದ್ದಿದ್ದರೆ ಸವಾರರ ವಾಹನಗಳನ್ನು ಏರಿಸುತ್ತಾ ಇಳಿಸುತ್ತಾ ನಿಧಾನ ಚಲಿಸು ಎನ್ನುವ ಸಂಜ್ಞೆ ನೀಡಿ ನಿಧಾನವಾಗಿ ಚಲಿಸುವಂತೆ ನೋಡಿಕೊಳ್ಳುತ್ತೇನೆ.ನನ್ನ ಪಕ್ಕದಲ್ಲಿ ನಿಂತಿರುವ ಈ ವಿದ್ಯುತ್ ತಂತಿಗಳಿಗೆ ನನ್ನ ಮೇಲೆ ಯಾಕೆ ಅಷ್ಟೊಂದು ಆಕ್ರೋಶವೋ ಗೊತ್ತಿಲ್ಲ. ನಾನು ಬಿಸಿಲಲ್ಲಿ ಬೆಂದು ಕರಗುತ್ತಿದ್ದರೂ ಸ್ವಲ್ಪವಾದರೂ ನೆರಳನ್ನು ನೀಡುವ ಕೃತಜ್ಞತೆ ತೋರುವುದಿಲ್ಲ. ಅಕಸ್ಮಾತ್ ಮರವೇನಾದರೂ ನನ್ನ ಪಕ್ಕದಲ್ಲಿ ಬೆಳೆಯಲು ಪ್ರಾರಂಭಿಸಿದರೆ ವಿದ್ಯುತ್ ನಿರ್ವಹಣಾ ಘಟಕದವರು ಬಂದು ಮರ ಕಡಿಯುವವರೆಗೂ ಛಲ ಬಿಡದೆ ನನಗೆ ಸ್ವಲ್ಪವಾದರೂ ಸಿಗುವ ನೆರಳನ್ನು ತಪ್ಪಿಸಿಬಿಡುವ ಹುಳುಕು ಬುದ್ಧಿ ಅವರದ್ದು.ನನ್ನಲ್ಲಿ ಚಲಿಸುವ ವಾಹನ ಸವಾರರು ಏನಾದರೂ ನಿಯಂತ್ರಣ ತಪ್ಪಿ ನನ್ನ ಪಕ್ಕಕ್ಕೆ ಹೋದರಂತೂ ಸವಾರರ ಆಪೋಷಣೆಗೆಂದೇ ಕಾಯುತ್ತಿರುವಂತಿವೆ ಈ ವಿದ್ಯುತ್ ಕಂಬಗಳು. ಈ ವಿದ್ಯುತ್ ಕಂಬಗಳು ಅಕಸ್ಮಾತ್ ಅವಘಡಕ್ಕೆ ಸಿಲುಕಿದರೆ ತಾವೇ ಬಾಗಿ ತಂತಿಗಳನ್ನು ವಾಹನಗಳಿಗೆ ಸ್ಪರ್ಶಿಸಿಯಾದರೂ ಸುಟ್ಟು ಹಾಕಲು ಕಾಯುತ್ತಿರುತ್ತವೆ. ಕೇವಲ ನನ್ನ ಬದಿಯಲ್ಲಿ ಮಾತ್ರ ಇವರ ಅಸ್ತಿತ್ವವಲ್ಲ. ನನ್ನ ಮಧ್ಯದಲ್ಲೂ ತಮ್ಮ ಜೋಲು ತಂತಿಗಳನ್ನು ಹಾಯಿಸುವುದುಂಟು. ಈ ಜೋಲು ತಂತಿಗಳು ಅದೆಷ್ಟೋ ಹುಲ್ಲು ಲಾರಿಯನ್ನು ಭಸ್ಮಗೈದವೋ ತಿಳಿಯದು.ನಾನು ಅಗಲೀಕರಣಕ್ಕೆ ಒಳಪಟ್ಟರೆ ಈ ಕಂಬಗಳೂ ಇನ್ನೂ ಪಕ್ಕಕ್ಕೆ ಸರಿದು ನಿಲ್ಲುತ್ತವೆಯೇ ಹೊರತು ಅಲ್ಲಿಂದ ಏಳಲಾರರು. ನಾನು ಎಲ್ಲಿ ತಿರುವುನ್ನು ಪಡೆಯುತ್ತೇನೋ ಅವೂ ಸಹ ಅಲ್ಲೇ ತಿರುವನ್ನು ಪಡೆಯುವವು. ಎಲ್ಲಿಯೂ ನನ್ನೊಂದಿಗಿನ ನಂಟನು ಬಿಡಲಾರವು.ನಾನು ಮೊದಲೋ ವಿದ್ಯುತ್ ಮಾರ್ಗ ಮೊದಲೋ ಅಂದಾಗ ಹೇಳುವುದನ್ನು ಮರೆತೆ. ಮಾನವ ನಾಗರೀಕತೆಯ ಕಡೆಗೆ ಒಲವು ತೋರಿದಾಗ ಒಂದೆಡೆ ಸ್ಥಿರವಾಗಿ ನಿಂತು ಮನೆ ಕಟ್ಟಿಕೊಂಡ, ನಂತರ ಊರು ಕೇರಿಗಳು ಬೆಳೆದವು. ನಂತರ ದಾರಿ ಅನಿವಾರ್ಯವಾಯಿತು. ಅದೇ ಅಗಲವಾಗಿ ನಾನು ರೂಪುಗೊಂಡೆ ಆವಿಷ್ಕಾರದಿಂದಾಗಿ ವಿದ್ಯುತ್ ಕಂಡುಹಿಡಿಯಲ್ಪಟ್ಟಾಗ ಅದು ಮನೆ ಮನೆಗೆ ಸಂಪರ್ಕ ಕಲ್ಪಿಸಲು ದಾರಿಯನ್ನು ಹುಡುಕಿ ಹೊರಟಿತು.ನನ್ನ ಪಕ್ಕದಲ್ಲೇ ನನ್ನನ್ನು ಅನುಸರಿಸಿತು. ವಿದ್ಯುತ್ ತಂತಿ ನನ್ನ ಪಕ್ಕವನ್ನು ಆಕ್ರಮಿಸಿದ್ದನ್ನು ಕಂಡು OFC ಕೇಬಲ್ಗಳೂ ಸಹ ನನ್ನ ಪಕ್ಕದಲ್ಲೇ ಸಾಗಿದವು. ಅವಂತೂ ನನ್ನ ಸೌಂದರ್ಯ ಮತ್ತು ಆರೋಗ್ಯವನ್ನೂ ಹದಗೆಡಿಸಿದವು‌. ನುಣುಪಾದ ಮೈಯನು ಹೊಂದಿದ್ದ ನನ್ನನ್ನು ಜೆ‌.ಸಿ.ಬಿಯ ಚೈನು ಗಾಲಿಗಳು ಹಿಂದೆ ಮುಂದೆ ಎಳೆದಾಡಿ ಮತ್ತೊಂದಿಷ್ಟು ಗಾಯವನ್ನು ಮಾಡಿದವು. ನನ್ನ ಒಂದು ಕಡೆ ಈ ಕೇಬಲ್ ಹಾದು ಹೋದರೆ ನನ್ನ ಇನ್ನೊಂದು ಪಾರ್ಶ್ವದಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಗಳು ಹಾದು ಹೋದವು. ಇವರ್ಯಾರೂ ನನ್ನ ಒಂದು ಮಾತನ್ನೂ ಕೇಳದೆ ಪಕ್ಕದಲ್ಲಿ ಅಗೆದು, ಧೂಳೆಬ್ಬಿಸಿ ಅನಾಚಾರಗೈದವು. ನಾನು ಮಾತ್ರ ಮೂಕವಾಗಿ ರೋಧಿಸಿದೆ. ಈ ಜೆ.ಸಿ.ಬಿ ಯೆನ್ನುವ ಭೂ ರಕ್ಕಸನ ಉಗಮದಿಂದಾಗಿ ನನ್ನ ಪಕ್ಕದಲ್ಲಿಯ ಗುಡ್ಡವನ್ನೇ ಅಗೆಯಲಾರಂಭಿಸಿದರು ಈ‌ ಮಾನವರೆನ್ನುವ ಉದ್ದಾರಕರು. ಈ‌ ಮಣ್ಣನ್ನು ಅಗೆದು ನನ್ನ ಅಗಲೀಕರಣವನ್ನೇನೋ ಮಾಡಿದರು. ಆದರೆ ಮಳೆಗಾಲದಲ್ಲಿ ಭೂ ಕುಸಿತ ಉಂಟಾಗುವುದನ್ನು ಮಾತ್ರ ತಪ್ಪಿಸಲು ಮರೆತು ಬಿಟ್ಟರು. ಮಳೆಗಾಲ ಪ್ರಾರಂಭವಾದೊಡನೆ ಬಹಳ ಕಡೆ ಕಲ್ಲು ಬಂಡೆಗಳು, ಮಣ್ಣಿನ ರಾಶಿ ನನ್ನ ಮೇಲೆ ಬಿದ್ದಿದ್ದೇ ಬಿದ್ದಿದ್ದು. ಇನ್ನು ಜನರೋ ನನಗೆ ಹಿಡಿ ಶಾಪ ಹಾಕಿದ್ರು. ಈ ರಸ್ತೆ ಸರೀ ಇಲ್ಲ. ಅವೈಜ್ಞಾನಿಕ ಇತ್ಯಾದಿ, ಇತ್ಯಾದಿ. ಮಾನವರ ಧನದಾಹದಿಂದಾಗಿ ನಾನು ಬೈಸಿಕೊಂಡೆ.ಧನದಾಹಿ ಮಾನವ ನನ್ನ ಹೆಸರಲ್ಲಿ ಎಷ್ಟೊಂದು ಭ್ರಷ್ಟಾಚಾರ ಎಸಗಿದ ಎನ್ನುವುದು ತಿನ್ನಲು ಸರಿಯಾದ ಮೇವು ಸಿಕ್ಕದ ಬಡಕಲು ಆಕಳಿನಂತೆ ನನ್ನ ಪರಿಸ್ಥಿತಿ. ಆದರೆ ಅದರ ಪಕ್ಕದ ವಿದ್ಯುತ್ ತಂತಿ ಹಾಗಲ್ಲ ಎಲ್ಲೂ ಕಲಬೆರಕ ಇಲ್ಲದ ವಿದ್ಯುತ್ ನ್ನೇ ಸಾಗಿಸುತ್ತಿದೆ‌. ಇನ್ನು ಕಂಬದ ಲೆಕ್ಕದಲ್ಲೋ ಅಥವಾ ಕಂಬ ತಯಾರಿಕೆಯ ಸಾಮಗ್ರಿಯಲ್ಲೋ, ಹೊಂಡ ತೆಗೆಯುವ ಲೆಕ್ಕದಲ್ಲೋ ಹಣ ನುಂಗಬಹುದು. ಆದರೆ ನನ್ನ ಪಾಡು ಅದಲ್ಲ. ಅದೊಂತರ open secret ಇದ್ದ ಹಾಗೆ. ನನ್ನ ಒಂದು ಪಕ್ಕದಲ್ಲಿ ಈಗ ವಿದ್ಯುತ್ ಕಂಬಗಳದ್ದು, ತಂತಿಗಳದ್ದು,ವಿದ್ಯುತ್ ಪರಿವರ್ತಕಗಳದ್ದೇ ಕಾರುಬಾರಾದರೆ ಇನ್ನೊಂದು ಪಕ್ಕದಲ್ಲಿ OFC ಗಳದ್ದು ಮತ್ತು ನೀರುಸರಬರಾಜು ಮಂಡಳಿಯವರದ್ದು ಅಗೆಯುವುದು ಕತ್ತರಿಸುವುದು, ಕೂಡಿಸುವದು ಇದು ನಿತ್ಯ ನಿರಂತರ. ಇವಿಷ್ಟು ಸಾಲದೇ? ನನಗೆ ಚಿತ್ರಹಿಂಸೆ ನೀಡಲು. ಊಹೂಂ ಸಾಕಾಗದು ಎನಿಸುತ್ತದೆ. ಈಗ‌ ಮಾನವ ಒಳಚರಂಡಿ ಎನ್ನುವ ನೆಪದಲ್ಲಿ ನನ್ನ ಸರೀ ಮಧ್ಯದಲ್ಲಿ ಒಡಲಾಳವನ್ನೇ ಅಗೆಯಲು ಜೆ.ಸಿ.ಬಿ ಯಿಂದ ಪ್ರಾರಂಭಿಸಿದ್ದಾನೆ. ಅದರಲ್ಲಿ ಕೊಳವೆಗಳನ್ನು ಶಾಶ್ವತವಾಗಿರಿಸಿ ನನ್ನನ್ನೇ ಬಲಹೀನಗೊಳಿಸಿದ್ದಾನೆ. ಅದರಲ್ಲೂ ಅವು ಮಾನವನ ತ್ಯಾಜ್ಯ ಸಾಗಿಸುವ ಕೊಳವೆಗಳು. ಇಂತಹ ನಾವುಗಳು ನಗರ, ಪಟ್ಟಣಗಳಲ್ಲಿ ಸಿದ್ದಗೊಂಡು ಒಡಲಾಳದಲ್ಲಿ ಮಲಿನ ಕೊಳವೆಗಳನ್ನು ಅಳವಡಿಸಿಕೊಂಡೆವು.ಕೆಲವು ಕಡೆ ಕೊಳವೆಗಳಲ್ಲಿ ತ್ಯಾಜ್ಯ ಸಾಗಿಸುವ ವ್ಯವಸ್ಥೆ ಉದ್ಘಾಟನೆಗೆಂದು ಕಾಯ್ದು ಕುಳಿತಿದೆ.'(ಹಣ ನುಂಗುವ) ಕಾಮಗಾರಿ ಪ್ರಗತಿಯಲ್ಲಿದೆ’ ಎನ್ನುವ ಬೋರ್ಡು ನನ್ನ ಕಿವಿಯ ರಿಂಗಿನಂತೆ ನೇತಾಡುತ್ತಿರುತ್ತದೆ. ಈ ದೃಷ್ಟಿಯಿಂದ ಯೋಚಿಸಿದಾಗ ಗ್ರಾಮಾಂತರದಲ್ಲಿರುವ ನನ್ನ ಸಹೋದರರ ಒಡಲಾಳ ಮಲಿನಗೊಂಡಿಲ್ಲ. ಆದರೆ ಸ್ವಚ್ಛಭಾರತ ಅಭಿಯಾನಕ್ಕಿಂತ‌ ಮೊದಲು ಗ್ರಾಮಾಂತರದಲ್ಲಿದ್ದ ನಮ್ಮ ಬದಿಗಳೇ ಅತ್ಯಂತ ಮಲಿನವಾಗಿದ್ದವು. ಸೂರ್ಯೋದಯಕ್ಕಿಂತ ಸ್ವಲ್ಪ‌ ಮುಂಚೆ ನಮ್ಮ ಪಕ್ಕದಲ್ಲೇ ಪುರುಷ, ಮಹಿಳೆ ಮಕ್ಕಳೆನ್ನುವ ಬೇಧವಿಲ್ಲದೇ‌ ಮಲಿನಗೈಯುತ್ತಿದ್ದರು. ಆದರೆ ಈಗ ಸ್ವಚ್ಛ ಭಾರತವಿರಲಿ, ಇರದೇ ಇರಲಿ ನಗರ ಪ್ರದೇಶದಲ್ಲಿರುವ ನಾವುಗಳು ಒಡಲಾಳದಲ್ಲಿ ಮಲಿನ ಕೊಳವೆಗಳನ್ನು ಮಾನವನ ಹೊಟ್ಟೆಯಲ್ಲಿ ಹೊಂದಿರುವಂತೆ ಶಾಶ್ವತ ಸ್ಥಾನ ಪಡೆದಿವೆ.ನಾವು ಮತ್ತು ವಿದ್ಯುತ್ ಕಂಬಗಳು ಒಂದು ವಿಷಯದಲ್ಲಿ ಮಾತ್ರ ಸಹಬಾಳ್ವೆ ನಡೆಸುತ್ತಿದ್ದೇವೆ. ರಾತ್ರಿ ಹೊತ್ತಿನಲ್ಲಿ ವಿದ್ಯುತ್ ಕಂಬಗಳು ದಾರಿದೀಪವನ್ನು ನನ್ನೆಡೆಗೆ ಬೀಳಿಸುತ್ತಿವೆ. ಅಪರೂಪಕ್ಕೆ ಅಲ್ಲಲ್ಲಿ ಪಕಪಕ ಎಂದು ಅಸ್ಪಷ್ಟ ಬೆಳಕನ್ನು ತೋರಿ ನನ್ನ ಕಣ್ಣುಕುಕ್ಕಬಹುದು ಬಿಟ್ಟರೆ ಉಳಿದ ಕಡೆ ಸಹಬಾಳ್ವೆ ಕಾಣಬಹುದಾಗಿದೆ. ನಾವು ಅದೆಷ್ಟೋ ಕುಟುಂಬವನ್ನು ಧನಿಕರನ್ನಾಗಿ‌ ಮಾಡಿದೆವೋ ನಮಗೇ ತಿಳಿಯದು.ಈಗಲೂ ಮಾಡುತ್ತಿದ್ದೇವೆ. ಜೊತೆಗೆ ಅತೀ ಹೆಚ್ಚಿನ ವಾಹನ ಸವಾರರ ಅಂತ್ಯವೂ ಸಹ ನನ್ನ ಮೇಲೇ ಆಗಿದೆ. ನಮ್ಮಿಂದ ಧನಿಕರಾದವರಿಂದಲೇ ನಮಗೆ ಕೆಟ್ಟ ಹೆಸರು. ನಮ್ಮ ನಿರ್ಮಿಸಲು ಹಾಕಬೇಕಾದ ಸಾಮಗ್ರಿ ಸರಿಯಾಗಿ ಹಾಕಿದ್ದರೆ ಇಂತಹ ದುರವಸ್ಥೆ ನಮಗೆ ಬರುತ್ತಿರಲಿಲ್ಲ. ಮಾನವನೇ ನಮ್ಮನ್ನು ವೈಜ್ಞಾನಿಕವಾಗಿ ನಿರ್ಮಿಸಿದ್ದರೆ ನಮ್ಮ ಬದಿಯಲ್ಲಿ ತಲೆ ಬುರುಡೆಯ ಚಿತ್ರ ಹಾಕಿ ಭಯ ಹುಟ್ಟಿಸುವ ಪ್ರಮೇಯವೂ ಇರುತ್ತಿರಲಿಲ್ಲ. ಆದರೂ ಹೆಸರು ಹಾಳಾದದ್ದು ನಮ್ಮದೆ. ನಮ್ಮನ್ನು ಈ ಸ್ಥಿತಿಯಲ್ಲಿ ಹುಟ್ಟಿಸಿದವರು ನಮ್ಮಲ್ಲಿ ಓಡಾಡಲಿಲ್ಲ. ಆಗಸ ಮಾರ್ಗದಲ್ಲಿ ಓಡಾಡಿದರು ಎನ್ನುವುದನ್ನು ಬೇರೆ ಹೇಳಬೇಕಾಗಿಲ್ಲ.ನಮ್ಮನ್ನು ಗತಿಸಿದ ಮಹಾನ್ ವ್ಯಕ್ತಿಗಳನ್ನು ನೆನಪಿಸಲು ಮಾನವ ಬಹುವಾಗಿ ಉಪಯೋಗಿಸಿಕೊಂಡ. ಉದಾಹರಣೆಗೆ ಮಹಾತ್ಮಾ ಗಾಂಧಿ ರಸ್ತೆ ಎಂದು ಹೆಸರು ಇಟ್ಟ. ಗಾಂಧಿಯವರನ್ನು ನೆನಪಿಸಲು ಅಷ್ಟೇ ಬಿಡಿ.ಆದರ್ಶಕ್ಕಂತೂ ಅಲ್ಲವೇ ಅಲ್ಲ. ಅಂತೂ ಅಲ್ಲಿಯೂ ನಮ್ಮ ಬಳಕೆಯಾದಷ್ಟು ಮತ್ತೆಲ್ಲೂ ಆಗಿಲ್ಲ.ಇನ್ನು ಪ್ರತಿಭಟನೆ ವಿಷಯಕ್ಕೆ ಬಂದಾಗ ನಡೆದ ಪ್ರತಿಭಟನೆಗಳೆಲ್ಲವೂ ನಮ್ಮ‌ ಮೇಲೆಯೇ.ಅಪರೂಪಕ್ಕೆ ಅಲ್ಲಲ್ಲಿ ಮೈದಾನದಲ್ಲಿ ನಡೆದಿರಬಹುದು. ಈ ಪ್ರತಿಭಟನೆಗಳು ನಮ್ಮಂತವರಿಗಾಗಿ, ನೀರಿಗಾಗಿ ಇತ್ಯಾದಿ ಇತ್ಯಾದಿ. ರೊಚ್ಚಿಗೆದ್ದ ಜನ ಟೈರಗಳಿಗೆ ಬೆಂಕಿ ಹಚ್ಚಿದ್ದು ನಮ್ಮ ಮೈ‌ ಮೇಲೇ. ಬಸ್ ನ ಗಾಜು ಒಡೆದದ್ದೂ ಸಹ ನಮ್ಮಲ್ಲೇ. ಇಂತಹ ಘಟನೆಗಳೆಲ್ಲವನ್ನೂ ಮೂಕ ಪ್ರೇಕ್ಷಕನಾಗಿ ನೋಡಿದ್ದು ನಾವು. ಜೊತೆ ಜೊತೆಗೆ ಲಾಂಗು ಮಚ್ಚುಗಳ ಝಳಪನ್ನು ಕಂಡಿದ್ದು ನಾವೇ ಮೊದಲು ನೋಡಿದ್ದು. ಬೇಡವೆಂದರೂ ನೆತ್ತರಾಭಿಷೇಕ ನಿತ್ಯ ನಡೆಯುತ್ತದೆ.ನಾವು ಏಳು ಬೀಳುಗಳನ್ನು ಕಂಡಂತವರು. ರೂಪಾಂತರಗೊಂಡಿದ್ದೇವೆ. ನಮ್ಮಿಂದಲೇ ಮಾನವನ ಬದುಕು ರೂಪುಗೊಂಡಿದೆ.ನಾಗರೀಕತೆ ಬೆಳೆದಿದೆ. ನಮ್ಮ ಅಭಿವೃದ್ಧಿ ದೇಶದ ಅಭಿವೃದ್ಧಿಯ ಸಂಖೇತವಾಗಿದೆ. ಉರುಳು ಸೇವೆಗೆ, ಹೊರಳು ಸೇವೆಗೆ, ಪಾದಯಾತ್ರಗೆ ಬನ್ನಿ. ರಕ್ತಾಭಿಷೇಕ ನಿಲ್ಲಿಸಿ. ಪದೇ ಪದೇ ಅಗೆದು ನನ್ನ ನೋಯಿಸದಿರಿ. ನನ್ನ ನಿರ್ಮಾಣದಲ್ಲಿ ಪ್ರಾಮಾಣಿಕತೆ ಮೆರೆಯಿರಿ. ನಿಮ್ಮ ಜೇಬನ್ನು ನಾನು ಕಾಯುವೆ. ಜಿ.ಎಸ್.ಹೆಗಡೆ

‘ರಸ್ತೆಯ ಆತ್ಮಕತೆ’ ಲಲಿತ ಪ್ರಬಂಧ ಜಿ.ಎಸ್.ಹೆಗಡೆ Read Post »

You cannot copy content of this page

Scroll to Top