‘ಖಂಡಿತಾ ಜಾಗ್ರತೆ ಮಾಡುತ್ತೇವೆ ನಾರಾಯಣಣ್ಣ. ಇನ್ನು ಮುಂದೆ ನಮ್ಮಿಂದ ಯಾರೀಗೂ ಯಾವ ತೊಂದರೆಯೂ ಆಗದಂತೆ ನೋಡಿಕೊಳ್ಳುತ್ತೇವೆ!’ ಎಂದು ಗೋಪಾಲನೂ ಭರವಸೆ ನೀಡಿದ. ಆಗ ನಾರಾಯಣರು ಸುಮಿತ್ರಮ್ಮನತ್ತ ತಿರುಗಿ, ‘ಇದಕ್ಕೇನಂತೀರಿ ಸುಮಿತ್ರಮ್ಮಾ ಆಗಬಹುದಲ್ಲ…?’ ಎಂದು ನಗುತ್ತ ಪ್ರಶ್ನಿಸಿದರು.
ದಾರಾವಾಹಿ ಆವರ್ತನ ಅದ್ಯಾಯ-27 ಗುರೂಜಿಯ ಮನೆಯಿಂದ ಹಿಂದಿರುಗಿದ ಸುಮಿತ್ರಮ್ಮ ಆತುರಾತುರವಾಗಿ ಮನೆಗೆ ಬಂದವರು ಕೈಕಾಲು ಮುಖ ತೊಳೆಯಲು ಬಚ್ಚಲಿಗೆ ಹೋದರು. ಆಹೊತ್ತು ಲಕ್ಷ್ಮಣಯ್ಯ ವರಾಂಡದಲ್ಲಿ ಕುಳಿತುಕೊಂಡು ಜೈಮಿನಿ ಭಾರತದ ಚಂದ್ರಹಾಸನ ಪ್ರಸಂಗವನ್ನು ಓದುತ್ತಿದ್ದರು. ಅದರಲ್ಲಿ, “ಮಂತ್ರಿ ದುಷ್ಟಬುದ್ಧಿಯು ಕುಳಿಂದನನ್ನು ಸೆರೆಯಲ್ಲಿಟ್ಟು ಕುಂತಳಪುರಕ್ಕೆ ಬರುವಾಗ ಹಾವೊಂದು ಅವನೆದುರು ಬಂದು, ನಿನ್ನ ಮನೆಯಲ್ಲಿದ್ದ ನಿಧಿಯನ್ನು ಕಾಯುತ್ತಿದ್ದೆ. ಆದರೆ ನಿನ್ನ ಮಗ ಅದೆಲ್ಲವನ್ನೂ ವೆಚ್ಚ ಮಾಡಿದ! ಎಂದು ಹೇಳಿ ಹೊರಟು ಹೋಯಿತು” ಎಂಬ ಕಥೆಯ ಕೊನೆಯಲ್ಲಿದ್ದರು. ಅಷ್ಟೊತ್ತಿಗೆ ಸುಮಿತ್ರಮ್ಮ ನಗುತ್ತ ಬಂದು ‘ಉಸ್ಸಪ್ಪಾ…!’ ಎಂದು ಗಂಡನ ಹತ್ತಿರ ಕುಳಿತರು. ಲಕ್ಷ್ಮಣಯ್ಯನಿಗೆ ಮರಳಿ ಆತಂಕ ಶುರುವಾಯಿತು. ‘ಹೋದ ಕೆಲಸ ಏನಾಯ್ತು ಮಾರಾಯ್ತೀ…? ಎಂಬ ಮಾತು ನಾಲಗೆಯ ತುದಿಯಲ್ಲಿ ಬಂದು ನಿಂತಿತು. ಆದರೆ ಹಾಗೆ ಕೇಳಿದರೆ ಇವಳು ಇನ್ನೇನಾದರೂ ರಾಮಾಯಣ ತೆಗೆದರೆ ಕಷ್ಟ! ಎಂದುಕೊಂಡು ಮತ್ತಷ್ಟು ಆಳವಾಗಿ ಓದಿನಲ್ಲಿ ಮುಳುಗಿರುವಂತೆ ನಟಿಸಿದರು. ಗಂಡನ ಉದಾಸೀನವನ್ನು ಕಂಡ ಸುಮಿತ್ರಮ್ಮ, ‘ರೀ, ನಮ್ಮ ವಠಾರದಲ್ಲಿ ನಾಗರಹಾವು ಕಾಣಿಸಿಕೊಳ್ಳಲು ಆ ದರಿದ್ರದ ರಾಧಾಳ ಕುಟುಂಬವೇ ಕಾರಣವಂತೆ ಮಾರಾಯ್ರೇ! ಆ ಹೊಲಸು ಜನರಿಂದಾಗಿ ನಾವೆಲ್ಲ ಇನ್ನೂ ಏನೇನು ಅನುಭವಿಸಲಿಕ್ಕುಂಟೋ ದೇವರೇಬಲ್ಲ…!’ ಎಂದು ಸಿಡುಕಿದರು. ಅರೆರೇ! ನಮ್ಮ ಮನೆಯೊಳಗೆ ಹಾವು ಕಾಣಿಸಿಕೊಳ್ಳುವುದಕ್ಕೆ ಗೋಪಾಲನ ಕುಟುಂಬ ಹೇಗೆ ಕಾರಣವಾಗುತ್ತದೆ? ಇದೆಂಥ ತಮಾಷೆಯಪ್ಪಾ ಎಂದು ಅಚ್ಚರಿಪಟ್ಟ ಲಕ್ಷ್ಮಣಯ್ಯ, ‘ಹೌದಾ…? ಅದು ಹೇಗೆ ಮಾರಾಯ್ತೀ…?’ ಎಂದು ಕಣ್ಣಗಲಿಸಿ ಕೇಳಿದರು. ‘ಹ್ಞೂಂ ಮತ್ತೆ! ನಾನೂ ಅದಕ್ಕೇ ನಿಮ್ಮಲ್ಲಿ ಮೊನ್ನೆಯಿಂದಲೂ ಜೋಯಿಸರ ಹತ್ತಿರ ಹೋಗಿ ಬರುವ ವಿಚಾರ ಎತ್ತುತ್ತಿದ್ದುದು. ನೀವು ದುಡ್ಡು ಕೊಡುವುದಿಲ್ಲ ಎಂದಿರಿ. ಆದರೆ ನಿಮಗೆ ಬೇಡವಾದ್ರೂ ನನಗೆ ಸಂಸಾರ ಬೇಕಲ್ಲವಾ ಮಾರಾಯ್ರೇ…ಅದಕ್ಕೆ ಹೋಗಿ ಬಂದೆ!’ ಎಂದು ವ್ಯಂಗ್ಯವಾಗಿ ಹೇಳಿದರು. ಆದರೆ ಅದಕ್ಕೆ ಲಕ್ಷ್ಮಣಯ್ಯನ ಉತ್ತರ, ಮತ್ತೆ ಜೈಮಿನಿ ಭಾರತದತ್ತ ಗಮನ ಹರಿಸುವುದಾಗಿತ್ತು. ಅದನ್ನು ಕಂಡ ಸುಮಿತ್ರಮ್ಮ, ‘ಇಷ್ಟೊಂದು ನೇಮನಿಷ್ಠೆಯಿಂದ ಇರುವ ನಮ್ಮ ಮನೆಯೊಳಗೇ ಹಾವು ಕಾಣಿಸಿಕೊಳ್ಳುವುದೆಂದರೇನು? ಎಂದು ಆ ಹಾವು ಬಂದಂದಿನಿಂದ ನನ್ನನ್ನು ಅನುಮಾನ ಕಾಡಲು ಶುರುವಾಗಿತ್ತು. ಆದರೆ ಅದನ್ನು ನಿವಾರಿಸಿಕೊಳ್ಳದೆ ನಿಮ್ಮೊಡನೆ ಯಾವುದನ್ನು ಮಾತಾನಾಡುವುದೂ ವ್ಯರ್ಥ ಅಂದುಕೊಂಡಿದ್ದೆ. ಇವತ್ತು ಗುರೂಜಿಯವರಲ್ಲಿಗೆ ಹೋದ ಮೇಲೆ ಹಾಲು ಯಾವುದು ನೀರು ಯಾವುದು ಅಂತ ಸ್ಪಷ್ಟವಾಯಿತು. ಅಷ್ಟು ಮಾತ್ರವಲ್ಲ, ಆ ಗುರೂಜಿಯವರ ಶಕ್ತಿ ಎಂಥದ್ದೆಂಬುದೂ ತಿಳಿಯಿತು!’ ಎಂದರು ಹಮ್ಮಿನಿಂದ. ‘ಓಹೋ ಹೌದಾ ಮಾರಾಯ್ತೀ…ಹಾಗಾದರೆ ಅದೇನೆಂದು ನನಗೂ ಸ್ವಲ್ಪ ಹೇಳು…!’ ಎಂದು ಲಕ್ಷ್ಮಣಯ್ಯ ತಮ್ಮ ಕುತೂಹಲವನ್ನು ತೋರಿಸಿಕೊಳ್ಳದೆ ಕೇಳಿದರು. ಆಗ ಸುಮಿತ್ರಮ್ಮ, ಗುರೂಜಿ ತನಗೆ ಹೇಳಿದ ಸಂಗತಿಯನ್ನೆಲ್ಲ ಗಂಡನಿಗೆ ವಿಸ್ತಾರವಾಗಿ ವಿವರಿಸಿದವರು, ಅದಕ್ಕೆ ಅವರು ಸೂಚಿಸಿದ ಪರಿಹಾರ ಕಾರ್ಯವನ್ನೂ ಮೃದುವಾಗಿ ತಿಳಿಸಿದರು. ಏನೋ ಗಹನವಾದ ವಿಚಾರವೇ ಇರಬೇಕು ಎಂದು ಆಸಕ್ತಿಯಿಂದ ಕೇಳಿಸಿಕೊಂಡ ಲಕ್ಷ್ಮಣಯ್ಯನ ಉತ್ಸಾಹಕ್ಕೆ ಗುರೂಜಿಯ ಪರಿಹಾರ ಸೂತ್ರವು ರಪ್ಪನೆ ತಣ್ಣೀರೆರಚಿದಂತಾಯಿತು. ಥೂ! ಇಷ್ಟೆನಾ…! ಇಂಥ ಕಟ್ಟುಕಥೆಯನ್ನು ಬುದ್ಧಿಯಿರುವವರು ಯಾರಾದರೂ ನಂಬಲಿಕ್ಕುಂಟಾ…? ಆ ಖದೀಮ ಗುರೂಜಿ ಇಂಥ ಮಾಟದ ಮಾತುಗಳಿಂದ ಇನ್ನೆಷ್ಟು ಮಂದಿಯ ಮಂಡೆ ಗಿರ್ಮಿಟ್ ಮಾಡಿ ಹಣ ಮಾಡಲು ಹೊರಟಿದ್ದಾನೋ ದೇವರಿಗೇ ಗೊತ್ತು! ಎಂದು ಜಿಗುಪ್ಸೆಯಿಂದ ಅಂದುಕೊಂಡರು. ಆದರೆ ಹೆಂಡತಿಯೆದುರು ಆ ಅಸಹನೆಯನ್ನು ತೋರಿಸಿಕೊಳ್ಳಲಿಲ್ಲ. ಒಂದು ವೇಳೆ ತಾವೀಗ ಇವಳ ಮಾತನ್ನು ತಿರಸ್ಕರಿಸಿದರೆ ಇವಳು ಅದನ್ನು ಖಂಡಿತಾ ಒಪ್ಪುವ ಜಾತಿಯವಳಲ್ಲ. ಬದಲಿಗೆ ನನ್ನ ಮೇಲಿನ ಕೋಪಕ್ಕಾದರೂ ಇನ್ನಷ್ಟು ಖರ್ಚಿನ ದಾರಿ ಹುಡುಕಲೂ ಹಿಂಜರಿಯಲಿಕ್ಕಿಲ್ಲ ಹಾಳಾದವಳು. ಇರಲಿ. ಏನಾದರೇನು, ತಮ್ಮ ಮನೆಯ ಸಮಸ್ಯೆಯೊಂದು ತಮ್ಮದಲ್ಲ ಎಂದು ಇವಳಿಗೂ ತಿಳಿಯಿತಲ್ಲ ಅಷ್ಟು ಸಾಕು ಎಂದುಕೊಂಡು ನೆಮ್ಮದಿಪಟ್ಟರು. ಆದರೆ ನಾಗಪೂಜೆಯನ್ನೂ ಮತ್ತು ಷಣ್ಮುಖಕ್ಷೇತ್ರದ ಪ್ರಯಾಣವನ್ನೂ ಮಾಡಬೇಕೆಂದು ಹೆಂಡತಿಯ ಕಟ್ಟಪ್ಪಣೆಯಾದಾಗ ಮಾತ್ರ ಗುರೂಜಿಯೇ ತಮ್ಮ ಹೊಟ್ಟೆಗೆ ಕೊಳ್ಳಿಯಿಟ್ಟಂತಾಯಿತು. ಆದ್ದರಿಂದ ಗುರೂಜಿಯ ಮೇಲೆ ಅವರಿಗೆ ಕೆಟ್ಟ ಸಿಟ್ಟು ಬಂತು. ಇವನಂಥ ಕಪಟಿ ಜ್ಯೋತಿಷ್ಯರಿಂದಾಗಿ ಇಡೀ ಜ್ಯೋತಿಷ್ಯ ಕುಲಕ್ಕೇ ಅವಮಾನ! ಇಂಥವರನ್ನು ಯಾರಾದರೂ ಹಿಡಿದು ಸರಿಯಾಗಿ ಶಿಕ್ಷಿಸುವುದಿಲ್ಲವಲ್ಲಾ ಥತ್!’ ಎಂದು ಶಪಿಸಿಕೊಂಡರು. ಆದರೆ ಸುಮಿತ್ರಮ್ಮ ಗಂಡನ ನೋವಿಗೆ ಸ್ಪಂದಿಸುವ ಸ್ಥಿತಿಯಲ್ಲಿರಲಿಲ್ಲ. ಏಕೆಂದರೆ ಆಹೊತ್ತು ಅವರ ತಲೆಯೊಳಗೆ ಗುರೂಜಿಯ ಮಾರ್ಮಿಕ ನುಡಿಮುತ್ತುಗಳೇ ಅನುರಣಿಸುತ್ತಿದ್ದವು. ಹಾಗಾಗಿ ಅವರಿಗೆ ಗೋಪಾಲನ ಕುಟುಂಬದ ಮೇಲೆ ತಿರಸ್ಕಾರ ಹುಟ್ಟಿಬಿಟ್ಟಿತು. ಆದಷ್ಟು ಬೇಗನೇ ಈ ವಿಷಯವನ್ನು ರಾಧಾಳಿಗೆ ತಿಳಿಸಿ ಅವರನ್ನು ಈ ವಠಾರದಿಂದಲೇ ಓಡಿಸಿಬಿಡಬೇಕು. ಅದಾಗದ್ದರೆ ಇದೇ ನೆಪ ಹಿಡಿದುಕೊಂಡು ಅವರೂ ನಮ್ಮಂತೆ ಶುದ್ಧಾಚಾರದಿಂದ ಬದುಕುವಂತೆ ಮಾಡಬೇಕು! ಎಂದು ನಿರ್ಧರಿಸಿ ತಟ್ಟನೆದ್ದು, ‘ಈಗ ಬಂದೆ ಮಾರಾಯ್ರೇ…’ ಎಂದು ಗಂಡನಿಗೆ ಹೇಳಿ ಸರಸರನೇ ಗೋಪಾಲನ ಮನೆಯತ್ತ ಹೊರಟರು. *** ರಾಧಾಳ ಮನೆತನವೂ ತಮ್ಮ ಪೂರ್ವಜರು ಆರಾಧಿಸಿಕೊಂಡು ಬಂದಂಥ ಅನೇಕ ದೈವದೇವರುಗಳ ಅತೀವ ಭಕ್ತರಾಗಿದ್ದವರು. ಹಾಗಾಗಿ ರಾಧಾಳಲ್ಲೂ ಅದರ ಪ್ರಭಾವವಿತ್ತು. ಅವಳು ತನ್ನ ಸುತ್ತಮುತ್ತಲಿನ ಜನರು ಯಾವ ದೇವರು ದಿಂಡರುಗಳನ್ನು ‘ಬಹಳ ಕಾರಣಿಕದ ಶಕ್ತಿಗಳು!’ ಎಂದು ಬಣ್ಣಿಸುತ್ತಾರೋ ಅವರನ್ನೆಲ್ಲ ಮರು ಮಾತನಾಡದೆ ನಂಬಿ ಪೂಜಿಸಿಕೊಂಡು ಬರುವಂಥ ಮುಗ್ಧೆ. ಆದರೆ ಗೋಪಾಲ ಹಾಗಲ್ಲ. ಅವನಿಗೆ ತನ್ನ ಮನೆತನದ ಆರಾಧ್ಯಶಕ್ತಿಗಳ ಕುರಿತು ಸ್ಪಷ್ಟವಾದೊಂದು ಕಲ್ಪನೆಯಾಗಲಿ ಅದಕ್ಕೆ ತಕ್ಕಂಥ ನಂಬಿಕೆಯಾಗಲಿ ಇರಲಿಲ್ಲ. ಕಾರಣ, ಅವನು ಹುಟ್ಟುವ ಕಾಲಕ್ಕೆ ಅವನಪ್ಪ ಸಂಜೀವಣ್ಣನಿಗೆ ದುಡಿಮೆಯೇ ಜೀವನದ ಮುಖ್ಯ ಅಂಗವಾಗಿತ್ತು. ಹಾಗಾಗಿ ಅವರು ತಮ್ಮ ಮನೆತನದ ದೈವಾರಾಧನೆಗೆ ಅಷ್ಟಾಗಿ ಒಲವು ತೋರದೆ ವರ್ಷಕ್ಕೊಂದು ಬಾರಿ ಮೂಲದ ಮನೆಯಲ್ಲಿ ನಡೆಯುವ ದೈವಾಚರಣೆಗೆ ಮಾತ್ರವೇ ಒಂದು ರಾತ್ರಿಯ ಮಟ್ಟಿಗೆ ಹೋಗಿ ಕುಟುಂಬಿಕರೊಡನೆ ಬೆರೆತು ಪಾಲ್ಗೊಂಡು ಹಿಂದಿರುಗುವ ರೂಢಿಯಿಟ್ಟುಕೊಂಡಿದ್ದರು. ಹೀಗಾಗಿ ಗೋಪಾಲನೂ ಆ ನಂಬಿಕೆ, ಸಂಪ್ರದಾಯಗಳಿಂದ ದೂರವೇ ಉಳಿದುಬಿಟ್ಟ. ಆದ್ದರಿಂದ ಆ ವಿಷಯಗಳು ಅವನಲ್ಲಿ ಅಷ್ಟೊಂದು ಮಹತ್ವವನ್ನು ಸೃಷ್ಟಿಸುತ್ತಿರಲಿಲ್ಲ. ಆದರೆ ತನ್ನ ಅಗತ್ಯಕ್ಕೋ ಅಥವಾ ಯಾವುದಾದರೂ ತಕ್ಷಣದ ಸಮಸ್ಯೆ, ಅಂಜಿಕೆಗಳ ನಿವಾರಣೆಗೋ ಅವನು ತನ್ನ ಮನೆತನದ ದೈವಶಕ್ತಿಗಳಿಗೆ ಮೊರೆ ಹೋಗುವ ಅಭ್ಯಾಸವಿಟ್ಟುಕೊಂಡಿದ್ದ. ಜೊತೆಗೆ ನಾಡಿನ ನಾಗ ಕಟಾಕ್ಷದ ಬಗ್ಗೆಯೂ ಅವನಲ್ಲಿ ವಿಶೇಷ ಭಯಭಕ್ತಿಯಿತ್ತು. ಆದರೆ ಅದು ಅವನಿಗೆ ತನ್ನ ಸುತ್ತಮುತ್ತಲಿನ ಸಮಾಜದಿಂದ ಬಂದ ಬಳುವಳಿಯಾಗಿತ್ತು. ಹಾಗಾಗಿ ನಾಗನ ವಿಚಾರದಲ್ಲಿ ಯಾರು ಏನು ಹೇಳಿದರೂ ಎಲ್ಲರಂತೆ ಅವನೂ ಕಣ್ಣುಮುಚ್ಚಿ ನಂಬುವವನಾಗಿದ್ದ. ಇಂದು ಗೋಪಾಲ ಮನೆಯಲ್ಲಿರುವ ಹೊತ್ತಲ್ಲೇ ಸುಮಿತ್ರಮ್ಮ ದುಗುಡದಿಂದ ಬಂದವರು, ಅವರ ಮನೆಯ ಗೇಟು ದಾಟಿ ಒಳಗಡಿಯಿಡಲಿಲ್ಲ. ಬೇಲಿಯ ಹೊರಗೆಯೇ ನಿಂತುಕೊಂಡು, ‘ರಾಧಾ, ಹೇ ರಾಧಾ…!’ ಎಂದು ಅಸಹನೆಯಿಂದ ಕೂಗಿದರು. ಆಹೊತ್ತು ರಾಧಾಳ ನಾಯಿ ಮೋತಿಯು ತನ್ನ ಕಾಲುಗಳನ್ನು ಉದ್ದನೆ ಚಾಚಿ ಮಗ್ಗುಲು ಮಲಗಿಕೊಂಡು ತನ್ನ ಎಂಟು ಮರಿಗಳಿಗೆ ಹಾಲುಣಿಸುತ್ತ ಅರೆನಿದ್ರೆಯಲ್ಲಿತ್ತು. ಆದರೆ ಅದು ತನ್ನ ಯಜಮಾನ್ತಿಯ ಹೆಸರಿನ, ‘ರಾ…’ ಎಂಬ ಅಕ್ಷರ ಸುಮಿತ್ರಮ್ಮನ ಬಾಯಿಯಿಂದ, ಅದೂ ಅಸಹನೆಯಿಂದ ಹೊರಗೆ ಬೀಳುತ್ತಲೇ ತಟ್ಟನೆ ಅದುರಿ ಎಚ್ಚೆತ್ತಿತು. ತನ್ನ ಹೊಟ್ಟೆಯನ್ನು ಮೃದುವಾಗಿ ಗುದ್ದಿ ಗುದ್ದಿ ಹಾಲು ಕುಡಿಯುತ್ತಿದ್ದ ಮರಿಗಳನ್ನು ಮೊಲೆ ತೊಟ್ಟುಗಳಿಂದ ನಯವಾಗಿ ಬಿಡಿಸಿಕೊಂಡು ಕರ್ಕಶವಾಗಿ ಬೊಗಳುತ್ತ ಅವರತ್ತ ಧಾವಿಸಿತು. ತಾಯಿ ಎದ್ದು ಹೋದ ಅಸಹನೆಯಿಂದ ಮರಿಗಳೂ ತಟಪಟನೆದ್ದು ಕೀರಲು ಧ್ವನಿಯಿಂದ ಅರುಚುತ್ತ ಅಮ್ಮನನ್ನು ಹಿಂಬಾಲಿಸಿದವು. ನಾಯಿಗಳ ದೊಡ್ಡ ಹಿಂಡೊಂದು ತಮ್ಮತ್ತ ನುಗ್ಗಿ ಬರುತ್ತಿದ್ದುದನ್ನು ಕಂಡ ಸುಮಿತ್ರಮ್ಮನ ಜೀವ ಹೌಹಾರಿತು. ಜೊತೆಗೆ ತಮ್ಮ ಕೋಪಕ್ಕೆ ನಾಯಿಗಳ ಭಯವೂ ಬೆರೆತು ಏನೇನೋ ಆಗಿಬಿಟ್ಟಿತು. ಅಷ್ಟರಲ್ಲಿ, ‘ಬೊಗಳುವ ನಾಯಿ ಕಚ್ಚುವುದಿಲ್ಲ!’ ಎಂಬ ಹಳೆಯ ನಂಬಿಕೆ ಅವರಿಗೆ ನೆನಪಿಗೆ ಬಂದು ಸ್ವಲ್ಪ ಧೈರ್ಯ ಬಂತು. ಆದರೆ ಕೆಲವು ನಾಯಿಗಳು ತಮ್ಮ ಮರಿಗಳ ರಕ್ಷಣೆಗೂ ಮತ್ತು ತಮ್ಮನ್ನು ಸಾಕಿ ಸಲಹಿದ ಮನೆಮಂದಿಗೆ ಆಗದವರನ್ನು ಕಂಡಾಗಲೂ ಬೊಗಳು ಬೊಗಳುತ್ತಲೇ ಕಚ್ಚುತ್ತವೆ ಎಂಬ ಪ್ರಾಣಿ ಮನಃಶಾಸ್ತ್ರವು ಅವರಿಗೆ ತಿಳಿದಿರಲಿಲ್ಲ. ಆದ್ದರಿಂದ, ‘ಹೇ, ಹೇ, ಹೇ, ಹಚೀ, ಹಚೀ…!’ ಎಂದು ಅವನ್ನು ಬೆದರಿಸುತ್ತ ಇನ್ನಷ್ಟು ಹಿಂದೆ ಸರಿದು ನಿಂತರು. ಸುಮಿತ್ರಮ್ಮನ ಧ್ವನಿ ಕೇಳಿದ ರಾಧಾಳ ಹೇಟೆಯೂ ತನ್ನ ಮರಿಗಳತ್ತ ಅಪಾಯ ಸೂಚಕ ಕೂಗೆಬ್ಬಿಸುತ್ತ ರಪ್ಪನೆ ಅವುಗಳನ್ನು ಮನೆಯ ಇಳಿ ಮಾಡಿನ ಮಡಲಿನೆಡೆಗೆ ಕರೆದೊಯ್ದು ಮರೆಮಾಚಿತು. ಅಂಗಳದಲ್ಲಿ ಕಟ್ಟಿದ್ದ ದನಕರುಗಳು ದಿಢೀರನೇ ಅಪಾಯದ ಜೀವಿಯೊಂದನ್ನು ಕಂಡಂತೆ ಬೆದರಿ ಹಗ್ಗವನ್ನು ಬಿಡಿಸಿಕೊಂಡು ದೂರ ಓಡಲು ಹವಣಿಸುವಂತೆ ವರ್ತಿಸಿದವು. ಆದರೆ ಅಂಥ ಸಂದರ್ಭದಲ್ಲೂ ಸುಮಿತ್ರಮ್ಮನಿಗೆ ಆ ಸಣ್ಣ ಸಣ್ಣ ನಾಯಿ ಮರಿಗಳು, ಒಂದು ರಾಶಿ ಕೋಳಿಗಳು, ಅಂಗಳದಲ್ಲೆಲ್ಲ ಮೆತ್ತಿಕೊಂಡಿದ್ದ ಅವುಗಳ ಹೇಲು ಹೇಸಿಗೆಯ ದುರ್ನಾತವು ಮತ್ತದರ ಮೇಲೆಲ್ಲಾ ಥಕಥೈ ಥಕಥೈ! ಎಂದು ಕುಣಿಯಲಾರಂಭಿಸಿದ ಹಸುಗಳನ್ನೂ ಕಂಡು ವಾಕರಿಕೆ ಬಂದುಬಿಟ್ಟಿತು. ಥೂ, ಥೂ! ಅಸಹ್ಯ ಮನುಷ್ಯರು. ಇಂಥ ಹೊಲಸು ಜನರು ಯಾವ ವಠಾರದಲ್ಲಿದ್ದರೂ ನಾಗಧೂತನು ಕಾಣಿಸಿಕೊಳ್ಳುವುದು ಖಂಡಿತಾ!’ ಎಂದುಕೊಂಡು ಮತ್ತಷ್ಟು ಅಶಾಂತರಾದರು. ಅಷ್ಟರಲ್ಲಿ ಮೋತಿಯು ತನ್ನ ಮರಿಗಳ ಸಮೇತ ಗೇಟು ತೂರಿಕೊಂಡು ಹೋಗಿ ಸುಮಿತ್ರಮ್ಮನನ್ನು ಕಡಿಯಲು ಮುಂದಾಯಿತು. ಅದನ್ನು ಕಂಡ ಅವರಿಗೆ ತಮ್ಮ ನಂಬಿಕೆ ಪೂರ್ತಿ ಹುಸಿಯಾಗುವುದು ಖಚಿತವೆನಿಸಿತು. ‘ಅರೇರೇ, ಹೇ…ರಾಧಾ, ಗೋಪಾಲ ಎಲ್ಲಿದ್ದೀರಿ ಮಾರಾಯಾ… ಒಮ್ಮೆ ಹೊರಗೆ ಬನ್ನಿಯಾ…! ನಿಮ್ಮ ಹಾಳಾದ ನಾಯಿಗಳು ಏನು ಮಾಡುತ್ತಿದೆ ನೋಡಿಲ್ಲೀ…!?’ ಎಂದು ಜೋರಾಗಿ ಅರಚಿದರು. ಸುಮಿತ್ರಮ್ಮನ ಕೀರಲು ಧ್ವನಿಯು ರಪ್ಪನೆ ಗೋಪಾಲ ದಂಪತಿಯ ಕಿವಿಗಪ್ಪಳಿಸಿದ್ದರಿಂದ ಅವರು ಬೆಚ್ಚಿಬಿದ್ದು, ಅಯ್ಯಯ್ಯೋ ದೇವರೇ…! ಇವತ್ತು ತಮಗೇನೋ ಆಪತ್ತು ಕಾದಿದೆ! ಎಂದು ಆತಂಕದಿಂದ ಅಂದುಕೊಂಡರು. ಏಕೆಂದರೆ, ಸುಮಿತ್ರಮ್ಮ ಯಾವತ್ತೂ ಯಾರ ಮನೆಯಂಗಳಕ್ಕೂ ವಿನಾಕಾರಣ ಹೆಜ್ಜೆಯಿಟ್ಟವರಲ್ಲ. ತಮಗೆ ಯಾರಿಂದಲಾದರೂ ಕೆಲಸವಾಗಬೇಕಿದ್ದರೂ ಅಂಥವರನ್ನು ತಮ್ಮ ಮನೆ ಬಾಗಿಲಿಗೇ ಕರೆಸಿಕೊಂಡು ಮಾತಾಡುತ್ತಿದ್ದರು. ಅಂಥ ಸುಮಿತ್ರಮ್ಮ ರಾಧಾಳ ವಿಷಯದಲ್ಲಿ ಇಂದು ತಮ್ಮ ನಿಯಮವನ್ನು ಮುರಿದಿದ್ದರು. ಕಾರಣ, ಅವಳು ಕೆಳಜಾತಿಯವಳೆಂದೋ ಅಥವಾ ತಾವೇ ಅವಳ ಮನೆ ಬಾಗಿಲಿಗೆ ಹೋಗಿ ಗುರೂಜಿಯವರು ತಿಳಿಸಿದ ವಿಷಯವನ್ನು ವಿವರಿಸಿ ಅವಳ ನೆಮ್ಮದಿಯನ್ನು ಕೆಡಿಸಬೇಕೆಂಬ ಕೆಟ್ಟ ಆಸೆಯಿಂದಲೋ ತಾವೇ ಹೊರಟು ಬಂದಿದ್ದರು. ‘ಸುಮಿತ್ರಮ್ಮ ಬಂದಿದ್ದಾರೆ ಹೋಗಿ ನೋಡು ಮಾರಾಯ್ತಿ…!’ ಎಂದು ಗೋಪಾಲ ಹೆಂಡತಿಗೆ ಆತಂಕದಿಂದ ಸೂಚಿಸಿದ. ಅವಳು ದಡಬಡಿಸಿ ಎದ್ದು ಹೊರಗ್ಹೋಡಿ ಬಂದಳು. ಯಜಮಾನ್ತಿಯನ್ನು ಕಂಡ ಮೋತಿ ಇನ್ನಷ್ಟು ರೋಷದಿಂದ ಸುಮಿತ್ರಮ್ಮನ ಮೇಲೆರೆಗಲು ಹವಣಿಸಿತು. ಅದನ್ನು ಕಂಡ ರಾಧಾಳಿಗೆ ಆಘಾತವಾಯಿತು! ಛೇ, ಛೇ! ಈ ನಾಯಿಗೇನಾಗಿದೆ ಈವತ್ತು…! ಎಂದೆನ್ನುತ್ತ ಅದರತ್ತ ನುಗ್ಗಿ ಬೆನ್ನಿಗೊಂದೇಟು ಗುದ್ದಿ ಓಡಿಸಿದಳು. ಅದು ‘ಕೊಂಯ್ಯ್ಕ್…!’ ಎಂದು ಅರಚಿ ದೂರ ಓಡಿ ಹೋಗಿ ಮತ್ತೂ ಬೊಗಳುತ್ತಲೇ ಇತ್ತು. ಆಗ ಸುಮಿತ್ರಮ್ಮನಿಗೆ ಜೀವ ಬಂದಂತಾಯಿತು. ಆದರೆ ಮೋತಿಯ ದೆಸೆಯಿಂದ ರಾಧಾಳ ಕುಟುಂಬದ ಮೇಲಿದ್ದ ಅಸಹನೆಯು ಮತ್ತಷ್ಟು ಹೆಚ್ಚಾಯಿತು. ‘ಅಯ್ಯೋ, ಸುಮಿತ್ರಮ್ಮ ಕ್ಷಮಿಸಿ ಮಾರಾಯ್ರೇ…! ಈ ದರಿದ್ರದ ನಾಯಿ ಇವತ್ತು ಯಾಕೆ ನಿಮ್ಮ ಗುರುತವೇ ಹತ್ತದಂತೆ ಆಡಿತೋ ಗೊತ್ತಾಗುತ್ತಿಲ್ಲ ನಂಗೆ!’ ಎಂದು ಬೇಸರದಿಂದ ಅಂದವಳು, ‘ಅದು ಮರಿಯಿಟ್ಟಿದೆಯಲ್ಲ ಹಾಗಾಗಿ ಹೆದರಿರಬೇಕು. ಕಚ್ಚುವ ಜಾತಿಯದ್ದಲ್ಲ!’ ಎಂದು ಅಂಜುತ್ತ ಹೇಳಿ ಅವರನ್ನು ಸಮಾಧಾನಿಸಲು ನೋಡಿದಳು. ಆದರೆ ಸುಮಿತ್ರಮ್ಮನ ಮುಖ ಕೆಟ್ಟದಾಗಿ ಕಪ್ಪಿಟ್ಟಿತ್ತು. ‘ಎಂಥದು ಕಚ್ಚುವ ಜಾತಿಯದ್ದಲ್ಲ ಮಾರಾಯ್ತೀ…? ನೀನು ಬರುವುದು ಸ್ವಲ್ಪ ತಡವಾಗಿದ್ದರೆ ಅದು ನನ್ನನ್ನು ಹರಿದೇ ಹಾಕುತ್ತಿತ್ತು ಹಾಳಾದ್ದು!’ ಎಂದು ಬಿರುಗಣ್ಣುಗಳಿಂದ ಅವಳನ್ನು ದಿಟ್ಟಿಸಿದರು. ರಾಧಾ ಭಯದಿಂದ ತಲೆತಗ್ಗಿಸಿ, ‘ಕ್ಷಮಿಸಿ ಸುಮಿತ್ರಮ್ಮಾ, ಏನು ವಿಷಯ…? ಒಳಗೆ ಬನ್ನಿಯಲ್ಲವಾ…!’ ಎಂದು
ದಾರಾವಾಹಿ ಆವರ್ತನ ಅದ್ಯಾಯ-25 ಸುಮಿತ್ರಮ್ಮನ ಭಯಭಕ್ತಿಯ ಪ್ರಾರ್ಥನೆಗೆ ಒಲಿದು ನಾಗರಹಾವು ಮಾಯವಾದುದು (ವಾಸ್ತವದಲ್ಲಿ ಆ ಹಾವು ಅವರೆಲ್ಲರ ಕಣ್ಣು ತಪ್ಪಿಸಿ ಹೊರಗೆ ಹೊರಟು ಹೋದುದು) ವಠಾರದವರಿಗೆಲ್ಲ ವಿಸ್ಮಯವನ್ನು ತರಿಸಿತು! ಜೊತೆಗೆ ಸುಮಿತ್ರಮ್ಮನ ಮೇಲೆ ಅವರೆಲ್ಲರಲ್ಲಿ ಆವರೆಗೆ ಇದ್ದಂಥ ಅಸಹನೆ, ಅಸಡ್ಡೆಗಳೂ ತುಸು ಮರೆಯಾಗಿ ಅದರ ಬದಲಿಗೆ ಯರ್ರಾಬಿರ್ರಿ ಗೌರವಾದರಗಳು ಮೂಡಿಬಿಟ್ಟವು. ಇತ್ತ ತಮ್ಮ ಪ್ರಾರ್ಥನೆಗೆ ಬೆಲೆಕೊಟ್ಟು ನಾಗದೇವನು ಹೊರಟು ಹೋದುದು ಸುಮಿತ್ರಮ್ಮನನ್ನೂ ರೋಮಾಂಚನಗೊಳಿಸಿತು. ಅದೇ ಕಾರಣದಿಂದ ಅವರಲ್ಲಿ ನಾಗರಹಾವಿನ ಬಗ್ಗೆ ಸ್ವಲ್ಪ ಧೈರ್ಯವೂ ಹುಟ್ಟಿತು. ಆದರೆ ಲಕ್ಷ್ಮಣಯ್ಯನ ಮನಸ್ಸು ಹಾಳಾಗಿತ್ತು. ಸುಂದರಯ್ಯ ಮತ್ತು ತಮ್ಮ ಹೆಂಡತಿ ಜೋಯಿಸರಲ್ಲಿ ಪ್ರಶ್ನೆಯಿಡುವ ವಿಚಾರ ಎತ್ತಿದಾಗಿನಿಂದ ಅವರು, ಅಯ್ಯೋ, ದೇವರೇ…ಮುಂದೇನಾಗುತ್ತದೋ…? ಎಂಬ ಚಿಂತೆಯಿಂದ ಒದ್ದಾಡುತ್ತಿದ್ದವರು, ಈ ನೆರಕರೆಯವರನ್ನು ನಮ್ಮ ಆಪತ್ಕಾಲದಲ್ಲಿ ಯಾಕಾದರೂ ಕರೆಯುತ್ತೇವೆ? ನಮ್ಮಿಂದಾಗದ ಸಮಸ್ಯೆಯನ್ನು ಅವರಾದರೂ ಬಗೆಹರಿಸಿಕೊಡಲಿ ಎಂದಲ್ಲವಾ? ಆದರೆ ಅವರು ಬಂದು ಮಾಡಿದ್ದಾದರೂ ಏನು? ಆ ಫಟಿಂಗ ಸುಂದರಯ್ಯನಿಗೆ ಯಾಕಾದರೂ ಬೇಕಿತ್ತು ನಾಗದೋಷ ಮಣ್ಣು ಮಸಣ ಅಂತ ಇವಳ ತಲೆಗೆ ಹುಳ ಬಿಡುವ ಕೆಲಸ? ಛೇ! ಛೇ! ಅಧಿಕ ಪ್ರಸಂಗಿ ಮನುಷ್ಯನನ್ನು ತಂದು! ಎಂದು ಬೈದುಕೊಂಡರು. ಮತ್ತೆ ಯೋಚನೆ ಬಂತು. ಅಲ್ಲಾ, ಇನ್ನು ಇವಳಾದರೂ ಸುಮ್ಮನಿರುತ್ತಾಳಾ…? ಇವಳಿಂದ ಇನ್ನೇನೇನು ಅನುಭವಿಸಲಿಕ್ಕುಂಟೋ ಕೃಷ್ಣ, ಕೃಷ್ಣಾ…! ತಮ್ಮ ಕೈಕಾಲು ಗಟ್ಟಿ ಇರುವವರೆಗೆ ತಾವು ಯಾರ ಹಂಗಿಗೂ ಬೀಳಬಾರದು ಅಂತ ಕೇವಲ ಪೆನ್ಷನ್ ಹಣದಿಂದಲೇ ಜೀವನ ನಡೆಸುತ್ತಿರುವುದೂ ಈ ಕತ್ತೆಗೆ ತಿಳಿಯುವುದಿಲ್ಲವಾ? ಕಷ್ಟಪಟ್ಟು ಉಳಿಸಿರುವ ಇನ್ಷೂರ್ ಹಣವನ್ನೂ ಈ ತಲೆ ಕೆಟ್ಟವಳು ಇಂತಹದ್ದೇ ಹರಕೆ ಕರ್ಮಗಳಿಗೆ ಸುರಿದು ಹಾಳು ಮಾಡುತ್ತಾಳೋ ಏನೋ? ಇನ್ನು ಇವಳು ಆ ಜೋಯಿಸನ ಹತ್ತಿರ ಹೋದಳೆಂದರೆ ಅವನು ಸುಮ್ಮನಿರುತ್ತಾನಾ? ಅವನ ಅಪರ ಕರ್ಮಗಳಿಗೆ ತಾವೆಷ್ಟು ಸಾವಿರ ಬಿಚ್ಚಬೇಕೋ…?’ ಎಂದು ತೀವ್ರ ಚಿಂತೆಯಿಂದ ತಮ್ಮ ಅರೆ ಬಕ್ಕ ತಲೆಯನ್ನು ಪರಪರನೇ ಕೆರೆದುಕೊಂಡರು. ಬಳಿಕ ಸುಂದರಯ್ಯನನ್ನೂ ಹೆಂಡತಿಯನ್ನೂ ಕೆಕ್ಕರಿಸಿ ನೋಡಿ ರಪ್ಪನೆ ಒಳಗೆ ನಡೆದುಬಿಟ್ಟರು. ಗಂಡ ನೆರಕರೆಯವರೆದು ತಮ್ಮನ್ನು ಗುರಾಯಿಸಿ ಹೊರಟು ಹೋದುದು ಸುಮಿತ್ರಮ್ಮನಿಗೆ ಕೆಟ್ಟ ಅವಮಾನವೆನಿಸಿ ಅವರನ್ನು ಸರಿಯಾಗಿ ಬೈದು ಬಿಡಬೇಕೆಂದುಕೊಂಡರು. ಆದರೆ ಇಂಥ ಹೊತ್ತಲ್ಲಿ ಕೋಪಿಸಿಕೊಂಡರೆ ನಂತರ ಈ ಮನುಷ್ಯ ಜೋಯಿಸರ ಹತ್ತಿರ ಹೋಗಲು ನಯಾಪೈಸೆ ಬಿಚ್ಚಲಾರರು. ಹಾಗಾಗಿ ಕಾರ್ಯವಾಸಿ ಮುದಿ ಕತ್ತೆ ಕಾಲನ್ನೂ ಹಿಡಿಯಲೇಬೇಕು ಎಂದು ಯೋಚಿಸಿ ತಮ್ಮ ಸಿಟ್ಟನ್ನು ಹತೋಟಿಗೆ ತಂದುಕೊಂಡರು. ಆದರೆ ಸುಂದರಯ್ಯ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತಮ್ಮ ಕಾರ್ಯಸಿದ್ಧಿಯ ಖುಷಿಯಿಂದ ನಗುತ್ತ ಎಲ್ಲರೊಡನೆ ಹೊರಟು ಹೋದರು. ಅಂದು ರಾತ್ರಿ ಊಟವಾದ ಮೇಲೆ ಸುಮಿತ್ರಮ್ಮ ಗಂಡನ ಸಮೀಪ ಬಂದು ಕುಳಿತುಕೊಂಡು ಎಲೆಯಡಿಕೆ ನೀಡುತ್ತ ತಾವೂ ಒಂದಿಷ್ಟು ಬಾಯಿಗೆ ತುರುಕಿಸಿಕೊಂಡು ಮಾತಿಗೆ ಪೀಠಿಕೆ ಹಾಕಿದರು. ‘ಅಲ್ಲ ಮಾರಾಯ್ರೇ ನಾವು ಇಲ್ಲಿಗೆ ಬಂದು ಎಷ್ಟು ವರ್ಷವಾಯ್ತು ಹೇಳಿ…?’ ಎಂದು ಆತಂಕದಿಂದ ಕೇಳಿದರು. ಲಕ್ಷ್ಮಣಯ್ಯನಿಗೆ ಹೆಂಡತಿಯ ಉದ್ದೇಶ ಅರ್ಥವಾಯಿತು. ಆದರೂ ತೋರಿಸಿಕೊಳ್ಳದೆ, ‘ಯಾಕೆ ಮಾರಾಯ್ತೀ… ನೀನೂ ನನ್ನ ಜೊತೆಯಲ್ಲೇ ಬಂದವಳಲ್ಲವಾ. ನಿನಗೂ ಗೊತ್ತಿರಬೇಕಲ್ವಾ…?’ ಎಂದು ತಿರುಗೇಟು ಕೊಟ್ಟು ಸುಮ್ಮನಾದರು. ‘ಅಯ್ಯೋ, ಹಾಗಲ್ಲ ಮಾರಾಯ್ರೇ. ನಾವಿಲ್ಲಿಗೆ ಬಂದ ನಂತರ ಈ ವಠಾರದೊಳಗೆ ಯಾವತ್ತಾದರೂ ನಾವು ನಾಗರಹಾವನ್ನು ನೋಡಿದ್ದುಂಟಾ ಹೇಳಿ?’ ‘ಇಲ್ವಲ್ಲ ಯಾಕೇ…?’ ‘ಹಾಗಿದ್ದರೆ ಇವತ್ತು ಅಂಥ ಹಾವು ಏಕಾಏಕಿ ನಮ್ಮನೆಯೊಳಗೆಯೇ ಕಾಣಿಸಿಕೊಂಡಿದೆ ಅಂದರೆ ಏನರ್ಥ? ಯೋಚಿಸಿದಿರಾ…?’ ಎಂದು ಅಸಹನೆಯಿಂದ ಗಂಡನ ಮುಖ ನೋಡಿದರು. ‘ಓಹೋ, ಇದಾ ವಿಷಯಾ? ಅರ್ಥವಾಯಿತು ಬಿಡು. ಹೌದು ಅದರ ಬಗ್ಗೆ ನಾನೂ ಯೋಚಿಸಿದೆ. ನಮ್ಮನೆಯೊಳಗೆ ಇಲಿಯೋ ಕಪ್ಪೆಯೋ ಸೇರಿಕೊಂಡಿರಬೇಕು. ಅವುಗಳನ್ನು ಹಿಡಿಯಲು ಆ ಹಾವು ಬಂದಿರಬೇಕು ಅಂತ ಆಮೇಲೆ ಅರ್ಥವಾಯಿತು. ಯಾಕೆ ಇದು ಸರಿಯಾದ ಯೋಚನೆ ಅಲ್ಲವಾ?’ ಎಂದರು. ಆಗ ಸುಮಿತ್ರಮ್ಮನ ಮುಖ ಇನ್ನಷ್ಟು ಬಿಗುವಾಯಿತು. ಅದನ್ನು ಗಮನಿಸಿದ ಲಕ್ಷ್ಮಣಯ್ಯ, ‘ಅಲ್ಲ ಮಾರಾಯ್ತೀ ಹಾವು ಬಂದೂ ಆಯ್ತು. ನಿನ್ನ ಪ್ರಾರ್ಥನೆಗೆ ಓಗೊಟ್ಟು ಹೊರಗೆ ಹೋಗಿಯೂ ಆಯ್ತು. ಆದರೆ ನಿನ್ನ ತಲೆಯೊಳಗೆ ಹೊಕ್ಕಿರುವ ಹಾವಿನ್ನೂ ನಿನ್ನನ್ನು ಬಿಟ್ಟು ಹೋಗಲಿಲ್ಲವಲ್ಲ…!’ ಎಂದು ನಗುತ್ತ ಅಂದವರು, ‘ಆ ವಿಷಯವನ್ನು ಅಷ್ಟೊಂದು ದೊಡ್ಡದು ಮಾಡಿ ಆಲೋಚಿಸುವ ಅಗತ್ಯ ಉಂಟಾ ಹೇಳು? ಹಾವುಗಳ ಆಹಾರದ ಜೀವಿಗಳು ಇದ್ದರೆ ಮಾತ್ರ ಅವು ಮನೆಯೊಳಗೆ ಬರುತ್ತವೆ ಅಂತ ನನ್ನ ಸ್ನೇಹಿತ ಶ್ರೀಪತಿ ಬೆಳಿಗ್ಗೆನೇ ಹೇಳಿದ್ದ. ನೀನು ಮೊದಲು ಮನೆಯನ್ನು ಸ್ವಚ್ಛವಾಗಿಟ್ಟುಕೋ. ಆಮೇಲೆ ಯಾವ ಹಾವು ಬರುತ್ತದೆ ಅಂತ ನೋಡುವ. ಯಾರೋ ಬುದ್ಧಿ ಕೆಟ್ಟವರು ಏನೇನೋ ಕಥೆ ಕಟ್ಟಿ ಹೇಳುತ್ತಾರೆಂದರೆ ನೀನೂ ಅದನ್ನೆಲ್ಲ ನಂಬಿ ಮಂಡೆ ಹಾಳು ಮಾಡಿಕೊಳ್ಳುವುದು ಎಷ್ಟು ಸರಿ ಹೇಳು?’ ಎಂದು ಬೇಸರದಿಂದ ಹೇಳಿದರು. ಸುಮಿತ್ರಮ್ಮನಿಗೆ ತಟ್ಟನೆ ರೇಗಿತು. ‘ನಿಮ್ಮ ಮಂಡೆ! ಇಲಿ, ಕಪ್ಪೆಗಳು ಇರಲು ಈ ಮನೆಯೇನು ಮಸಣದಗುಡ್ಡೆಯ ಡಂಪಿಂಗ್ಯಾರ್ಡ್ ಅಂತ ತಿಳಿದುಕೊಂಡ್ರಾ…? ನಿಮ್ಮ ಶ್ರೀಪತಿಗೆ ಮೊದಲೇ ತಲೆಕೆಟ್ಟಿದೆ. ಹಾಗಾಗಿಯೇ ಅವನು ಹೆಂಡತಿ ಮಕ್ಕಳನ್ನು ಓಡಿಸಿ ಒಂಟಿ ಭೂತದಂತೆ ಬದುಕುತ್ತಿರುವುದು. ನೀವು ಅವನ ಮಾತುಕಟ್ಟಿಕೊಂಡು ನನಗೆ ಬುದ್ಧಿ ಹೇಳಲು ಬರಬೇಡಿ ಗೊತ್ತಾಯಿತಾ!’ ಎಂದು ಸಿಡುಕಿದರು. ಆಗ ಲಕ್ಷ್ಮಣಯ್ಯ, ‘ಅಯ್ಯೋ ದೇವರೇ…ಇವಳಿಗೆ ಬುದ್ಧಿ ಹೇಳುವುದು ವ್ಯರ್ಥ!’ ಎಂದು ಸುಮ್ಮನಾದರು. ಅದನ್ನು ಗಮನಿಸಿದ ಸುಮಿತ್ರಮ್ಮ ಸೌಮ್ಯವಾಗಿ, ‘ಸ್ವಲ್ಪ ಸರಿಯಾಗಿ ಯೋಚಿಸಿ ನೋಡಿ ಮಾರಾಯ್ರೇ. ಆಗ ನಿಮಗೂ ಸುಂದರಯ್ಯನ ಮಾತು ಸತ್ಯ ಅಂತ ಅನ್ನಿಸುತ್ತದೆ. ನಮಗೇ ಗೊತ್ತಿರದ ಯಾವುದೋ ದೋಷ, ಸಮಸ್ಯೆ ಇದ್ದರೆ ಮಾತ್ರ ನಾಗರಹಾವು ಕಾಣಿಸಿಕೊಳ್ಳುವುದು ಅಂತ ನಮ್ಮ ಅಜ್ಜಿ ಪಿಜ್ಜಂದಿರ ಕಾಲದಿಂದಲೂ ನಾವು ನಂಬಿಕೊಂಡು ಬಂದವರಲ್ಲವಾ! ಆ ನಂಬಿಕೆಯನ್ನು ಅಷ್ಟುಬೇಗ ಬಿಟ್ಟು ಬಿಡಲು ನಿಮ್ಮಿಂದಾಗಬಹುದು. ನನ್ನಿಂದ ಸಾಧ್ಯವಿಲ್ಲ. ನಾವು ಹೆಂಗಸರು ನಿಮ್ಮಷ್ಟು ಗಟ್ಟಿ ಮನಸ್ಸಿನವರಲ್ಲ…ಹಾಗಾಗಿ ಅದು ಹೌದೋ ಅಲ್ಲವೋ ಅಂತ ತಿಳಿದುಕೊಳ್ಳುವುದಕ್ಕೇ ನಾಳೆ ಬೆಳಿಗ್ಗೆ ಜೋಯಿಸರ ಹತ್ತಿರ ಹೋಗುತ್ತಿದ್ದೇನೆ. ನೀವು ಒಂದೈನ್ನೂರು ರೂಪಾಯಿ ಕೊಡುತ್ತೀರಿ ಅಷ್ಟೆ. ಬೇರೇನೂ ಮಾತಾಡಬೇಡಿ!’ ಎಂದು ಗದರಿಸುವ ಧ್ವನಿಯಲ್ಲೇ ಆಜ್ಞಾಪಿಸಿದರು. ಅಷ್ಟು ಕೇಳಿದ ಲಕ್ಷ್ಮಣಯ್ಯನ ಹೊಟ್ಟೆ ಚುರುಕ್ಕೆಂದಿತು. ‘ಅಲ್ಲ ಮಾರಾಯ್ತೀ, ನೀನಿಷ್ಟೊಂದು ಹೆದರು ಪುಕ್ಕೆಲಿ ಆದದ್ದು ಯಾವಾಗ? ಹಿಂದೆಲ್ಲಾ ಎಂಥೆಂಥ ಸಮಸ್ಯೆಗಳು ಬಂದರೂ ಡೋಂಟ್ ಕೇರ್! ಅನ್ನುತ್ತಿದ್ದವಳು ಈಗ ವಯಸ್ಸಾಗುತ್ತ ಬಂದಂತೆ ಏನೇನೋ ಯೋಚಿಸುತ್ತ, ಆ ಮುಠ್ಠಾಳ ಸುಂದರಯ್ಯನ ಮಾತನ್ನೂ ಕಟ್ಟಿಕೊಂಡು ನಿನ್ನ ನೆಮ್ಮದಿ ಕೆಡಿಸಿಕೊಂಡಿರುವುದಲ್ಲದೇ ನನ್ನ ಹಣವನ್ನೂ ಪೋಲು ಮಾಡುವುದು ಸರಿಯಾ ಹೇಳು…?’ ಎಂದು ಹತಾಶೆಯಿಂದ ಅಂದವರು, ‘ಸಾಯುವತನಕ ಯಾರ ಹಂಗಿನಲ್ಲೂ ಬೀಳದೆ ಬದುಕಬೇಕೆಂದಿರುವ ನನ್ನ ಸ್ವಾಭಿಮಾನವನ್ನು ಹಾಳು ಮಾಡಬೇಡ ಮಾರಾಯ್ತೀ…ಒಮ್ಮೆ ತಾಳ್ಮೆಯಿಂದ ಯೋಚಿಸಿನೋಡು, ನೀನು ಹೇಳುವಂತೆ ನಮ್ಮಲ್ಲಿ ಇಲಿ, ಕಪ್ಪೆಗಳಿಲ್ಲದಿರಬಹುದು. ಆದರೆ ಹೊರಗೆ ಬೇರೆ ಯಾವುದೋ ಪ್ರಾಣಿಗೆ ಹೆದರಿಯೂ ಆ ಹಾವು ಒಳಗೆ ಓಡಿ ಬಂದಿರಬಹುದಲ್ಲಾ? ಸುಮ್ಮನೆ ಏನೇನೋ ಚಿಂತಿಸಿ ಕೊರಗಬೇಡ. ಬಾ ಹೋಗಿ ಆರಾಮವಾಗಿ ಮಲಗಿಕೊಳ್ಳುವ!’ ಎಂದು ಮೃದುವಾಗಿ ಕರೆದರು. ಸುಮಿತ್ರಮ್ಮನಿಗೆ ಮರಳಿ ರೇಗಿತು, ‘ಅಂದರೆ ನಿಮ್ಮ ಈ ಉಪದೇಶದ ಅರ್ಥ ನಾಳೆ ನೀವು ಹಣ ಕೊಡುವುದಿಲ್ಲವೆಂದಾ…? ಸರಿ. ಆಯ್ತು ಮಾರಾಯ್ರೇ. ನೀವೇನಾದರೂ ಮಾಡಿಕೊಳ್ಳಿ. ಆದರೆ ಮುಂದೇನಾದರೂ ಹೆಚ್ಚುಕಮ್ಮಿಯಾದರೆ ಅದಕ್ಕೆಲ್ಲ ನೀವೇ ಹೊಣೆಯಾಗುತ್ತೀರಿ ಎಂಬುದನ್ನೂ ನೆನಪಿಟ್ಟುಕೊಳ್ಳಿ ಅಷ್ಟೇ!’ ಎಂದು ಸಿಡುಕಿ ಮುಖ ತಿರುವಿ ಕುಳಿತುಬಿಟ್ಟರು. ‘ಆಯ್ತು. ಆಯ್ತು. ಅದೇನಾಗುತ್ತದೋ ನಾನೇ ನೋಡಿಕೊಳ್ಳುತ್ತೇನೆ. ಆದರೆ ಇನ್ನು ಮುಂದೆ ಇಂಥ ಕಳಪೆ ವಿಷಯಗಳನ್ನೆಲ್ಲ ನನ್ನ ತಲೆಗೆ ಕಟ್ಟುವುದನ್ನು ನೀನೂ ನಿಲ್ಲಿಸಿಬಿಡಬೇಕು ಅಷ್ಟೇ!’ ಎಂದು ಲಕ್ಷ್ಮಣಯ್ಯನೂ ಒರಟಾಗಿ ಹೇಳಿ ಎದ್ದು ಹೋಗಿ ಮಲಗಿಕೊಂಡರು. *** ಮರುದಿನ ಬೆಳಿಗ್ಗೆ ಸುಮಿತ್ರಮ್ಮ ಎಂದಿನಂತೆ ಬೇಗನೆದ್ದವರು, ಎದುರಿನ ಗುಡ್ಡೆಯತ್ತ ಹೋಗಿ ಗೋಮಯ ತಂದು ನಿನ್ನೆ ನೆರೆಕರೆಯವರು ಹೊಕ್ಕಿದ್ದ ಕೋಣೆಗಳಿಗೆಲ್ಲ ಸಿಂಪಡಿಸಿ ಅಶುದ್ಧ ನಿವಾರಿಸಿಕೊಂಡರು. ನಂತರ ಉಪಾಹಾರ ತಯಾರಿಸಿ, ಕಾಫಿ ಮಾಡಿ ಗಂಡನಿಗೆ ಕೊಟ್ಟು ತಾವೂ ಸೇವಿಸಿದರು. ಅಷ್ಟರಲ್ಲಿ ಮರಳಿ ಅವರನ್ನು ಹಾವಿನ ಚಿಂತೆ ಕಾಡಿತು. ಅಯ್ಯೋ ದೇವರೇ! ಆ ಹಾವು ಮತ್ತೆ ಬಂದರೇನಪ್ಪಾ ಮಾಡುವುದು! ಎಂದುಕೊಂಡು ಭಯಪಟ್ಟರು. ಅದೇ ಹೊತ್ತಿಗೆ ಲಕ್ಷ್ಮಣಯ್ಯನೂ ಪೇಟೆಗೆ ಹೊರಡುತ್ತಿದ್ದರು. ಅವರನ್ನು ಕಂಡ ಸುಮಿತ್ರಮ್ಮನಿಗೆ ಸಿಟ್ಟು ಬಂತು. ‘ಏನ್ರೀ, ಎಲ್ಲಿಗೆ ಹೊರಟಿದ್ದೀರೀ…?’ ಎಂದರು ಸಿಡುಕಿನಿಂದ. ‘ಪೇಟೆಯಲ್ಲಿ ಸ್ಪಲ್ಪ ಕೆಲಸವಿದೆ ಮಾರಾಯ್ತೀ…!’ ಎಂದು ಲಕ್ಷ್ಮಣಯ್ಯ ಹೊರಡುವ ಗಡಿಬಿಡಿಯಲ್ಲೇ ಉತ್ತರಿಸಿದರು. ‘ಕೆಲಸವಿದ್ದರೆ ಅಲ್ಲೇ ಇರಲಿ. ಇವತ್ತು ನೀವು ಎಲ್ಲಿಗೂ ಹೋಗುವುದು ಬೇಡ. ನಿನ್ನೆ ನೀವೇ ಹೇಳಿದಿರಲ್ಲ, ಮನೆಯೊಳಗೆ ಇಲಿ, ಕಪ್ಪೆಗಳಿರಬಹುದು ಅಂತ. ಇದ್ದರೆ ನನ್ನೊಬ್ಬಳಿಂದಲೇ ಅವುಗಳನ್ನು ಹಿಡಿಯಲು ಆಗಲಿಕ್ಕಿಲ್ಲ. ಇಬ್ಬರೂ ಸೇರಿಯೇ ಹಿಡಿದು ಹೊರಗೆ ಹಾಕುವ. ಸ್ವಲ್ಪ ಸಹಾಯ ಮಾಡಿ!’ ಎಂದು ಒರಟಾಗಿ ಆಜ್ಞಾಪಿಸಿದರು. ಅಷ್ಟು ಕೇಳಿದ ಲಕ್ಷ್ಮಣಯ್ಯನಿಗೆ ಒಳಗೊಳಗೇ ನಗು ಬಂತು. ‘ಹ್ಞೂಂ, ಆಯ್ತು ಮಾರಾಯ್ತೀ…’ ಎಂದುತ್ತರಿಸಿ ಉದಾಸೀನದಿಂದ ಕುಳಿತುಕೊಂಡರು. ಸುಮಿತ್ರಮ್ಮ, ಗಂಡನೊಂದಿಗೆ ಮನೆಯ ಮೂಲೆ ಮೂಲೆಗಳನ್ನು ಗುಡಿಸಿ ಒರೆಸಿ ಹಳೆಯ ಸಾಮಾನುಗಳನ್ನೆಲ್ಲ ಹೊತ್ತೊಯ್ದು ಹಿತ್ತಲಿನ ಶೆಡ್ಡಿನೊಳಗೆಸೆದು ಬಂದು ಸ್ನಾನ ಮಾಡಿದ ನಂತರ ನೆಮ್ಮದಿಯ ಉಸಿರುಬಿಟ್ಟರು. ಅಷ್ಟಾಗುವ ಹೊತ್ತಿಗೆ ಮಧ್ಯಾಹ್ನ ಸಮೀಪಿಸಿತು. ಆದ್ದರಿಂದ ಹಿಂದಿನ ರಾತ್ರಿಯ ಅಡುಗೆಯನ್ನೇ ಬಿಸಿ ಮಾಡಿ ಇಬ್ಬರೂ ಉಂಡು ಒಂದು ಸುತ್ತು ನಿದ್ದೆ ತೆಗೆದರು. ಸುಮಿತ್ರಮ್ಮ ಎದ್ದು ಗಂಡನಿಗೆ ಕಾಫಿ ಮಾಡಿ ಕೊಟ್ಟು ಹಿಂದಿನ ದಿನ ನಾಗರಹಾವಿನ ರಂಪಾಟದ ಕಥೆಯಿಂದಾಗಿ ಮೂಲೆ ಸೇರಿದ್ದ ಬಟ್ಟೆಬರೆಗಳನ್ನು ಗಂಡನಿಂದಲೇ ಕೊಡವಿ ಕೊಡವಿ ಪರೀಕ್ಷಿಸಿ ಹಾವಿಲ್ಲ ಎಂದು ಖಚಿತವಾದ ನಂತರ ಅವನ್ನೆಲ್ಲ ಒಗೆದು ಹಾಕಿದರು. ಅಷ್ಟೊತ್ತಿಗೆ ಸಂಜೆಯಾಯಿತು. ಕಾಲು ಸೇರಕ್ಕಿಯ ಅನ್ನ ಮಾಡಿಟ್ಟು ಅದಕ್ಕೊಂದು ಮೆಂತೆ ಸಾರು ಮಾಡುವ ಎಂದುಕೊಂಡು ತಯಾರಿ ನಡೆಸಿದರು. ಗ್ಯಾಸಿನ ಒಂದು ಒಲೆಯಲ್ಲಿ ಸಾರು ಕುದಿಯುತ್ತಿತ್ತು. ಇನ್ನೊಂದರ ಮಂದಾಗ್ನಿಯಲ್ಲಿ ಸಾರಿಗೆ ಹುಯ್ಯುವ ಒಗ್ಗರಣೆಯೆಣ್ಣೆ ಬಿಸಿಯೇರುತ್ತಿತ್ತು. ಸುಮಿತ್ರಮ್ಮ ಅದಕ್ಕೆ ಸಾಸಿವೆ ಸುರಿದು ಸಿಡಿದ ನಂತರ ಕರಿಬೇವಿನ ಸೊಪ್ಪು, ಬೆಳ್ಳುಳ್ಳಿ, ಉದ್ದು ಮತ್ತು ಒಣಮೆಣಸಿನ ಚೂರುಗಳನ್ನು ಸುರುವಿದರು. ಸ್ವಲ್ಪ ಹೊತ್ತು ತಿರುವಿದ ನಂತರ ಇನ್ನೇನು ಸೌಟನ್ನೆತ್ತಿ ಸಾರಿನ ಪಾತ್ರೆಗೆ ಹುಯ್ಯಬೇಕು ಎಂಬಷ್ಟರಲ್ಲಿ ಒಗ್ಗರಣೆಯಂಥದ್ದೇ ಶಬ್ದವೊಂದು ಸುಮಿತ್ರಮ್ಮನ ಪಕ್ಕದಲ್ಲೇ ಗಟ್ಟಿಯಾಗಿ ಹೊಮ್ಮಿತು! ಅವರು ಬೆಚ್ಚಿಬಿದ್ದರು. ಶಬ್ದವು ಕಾಲ ಬುಡದಲ್ಲೇ ಬಂದಿದ್ದಲ್ಲವಾ ಎಂದುಕೊಂಡವರು, ಆ ಹೆದರಿಕೆಯ ನಡುವೆಯೂ ಕೈಯಲ್ಲಿದ್ದ ಸೌಟನ್ನು ರಪ್ಪನೆ ಸಾರಿನ ಪಾತ್ರೆಗೆಸೆದು ಮಾರು ದೂರ ನೆಗೆದು ನಿಂತರು. ಅದು ಜುಂಯ್ಯೀ…! ಎಂದು ಅರಚಿ ಸ್ತಬ್ಧವಾಯಿತು. ಆದರೆ ಕಾಲ ಹತ್ತಿರದಿಂದ ಬರುತ್ತಿದ್ದ ಶಬ್ದವು ಇನ್ನೂ ಜೋರಾಗಿ ಬಂತು. ಹೆದರುತ್ತ ಅತ್ತ ಇಣುಕಿದರು. ಆದರೆ ಅಲ್ಲಿ ಉಪ್ಪಿನಕಾಯಿಯ ಜಾಡಿಗಳ ಎಡೆಯಲ್ಲಿ ನಿನ್ನೆಯ ಫಣಿರಾಜನು ಇವತ್ತೂ ಅದೇ ಭಂಗಿಯಲ್ಲಿ ನಿಂತುಕೊಂಡು ಬುಸುಗುಟ್ಟುತ್ತಿದ್ದ! ಸುಮಿತ್ರಮ್ಮನ ಹೃದಯ ನಡುಗಿಬಿಟ್ಟಿತು. ‘ಅಯ್ಯಯ್ಯೋ ದೇವರೇ…ಹಾವು, ಹಾವು…!’ ಎಂದು ಕೂಗುತ್ತ ಹೊರಗೆ ಓಡಿದರು. ಅದೇ ಹೊತ್ತಿಗೆ ಶೌಚಕ್ಕೆ ಹೋಗಿ ಪಂಚೆ ಸುತ್ತಿಕೊಳ್ಳುತ್ತ ಬರುತ್ತಿದ್ದ ಲಕ್ಷ್ಮಣಯ್ಯ ಹೆಂಡತಿಯ ಬೊಬ್ಬೆ ಕೇಳಿ ಅದುರಿಬಿದ್ದು ಪಂಚೆಯನ್ನು ಅರ್ಧಂಬರ್ಧ ಸುತ್ತಿಕೊಂಡು ಹೊರಗೆ ಧಾವಿಸಿದರು. ಸುಮಿತ್ರಮ್ಮ ಇನ್ನೇನು ವರಾಂಡ ದಾಟಿ ಅಂಗಳಕ್ಕೆ ಜಿಗಿಯಬೇಕು ಎಂಬಷ್ಟರಲ್ಲಿ ಗಬಕ್ಕನೇ ಅವರ ರಟ್ಟೆ ಹಿಡಿದು ನಿಲ್ಲಿಸಿ, ‘ಹೇ, ಹೇ, ಎಲ್ಲಿಗೆ ಓಡುತ್ತಿ ಮಾರಾಯ್ತಿ… ಹೆದರಬೇಡ. ನಿಲ್ಲು ನಿಲ್ಲು! ಎಲ್ಲಿದೆ ಹಾವು…? ನೋಡುವ ಬಾ!’ ಎಂದು ಸಾಂತ್ವನಿಸಿದರು. ಆಗ ಸುಮಿತ್ರಮ್ಮ ಸ್ವಲ್ಪ ಹತೋಟಿಗೆ ಬಂದರು.
ಈಗ ಏಕನಾಥರು ಹತೋಟಿಗೆ ಬಂದರು. ‘ಆದರೆ ನಮಗೀಗ ಅಂಜನದಲ್ಲಿ ಇನ್ನಷ್ಟು ಸಂಗತಿಗಳು ಕಂಡು ಬಂದಿವೆ ಮಾರಾಯಾ ಅದನ್ನೂ ಹೇಳುತ್ತೇವೆ ಕೇಳು!’ ಎಂದರು ಗಂಭೀರವಾಗಿ. ಅಷ್ಟು ಕೇಳಿದ ಶಂಕರನ ಚಡಪಡಿಕೆ ಇಮ್ಮಡಿಯಾಗಿ ಏಕನಾಥರ ಮೇಲೆ ಅವನಲ್ಲಿ ಅಸಹನೆ ಹುಟ್ಟಿತು. ಆದರೆ ಅದರ ನಡುವೆಯೂ ‘ಅದೇನಿರಬಹುದು…?’ ಎಂಬ ಆಸಕ್ತಿಯೂ ಕೆರಳಿತು. ‘ಹೌದಾ ಗುರೂಜಿ, ಏನದು ಹೇಳಿ…?’ ಎಂದ ಅವರನ್ನೇ ದಿಟ್ಟಿಸುತ್ತ.
ದಾರಾವಾಹಿ ಆವರ್ತನ ಅದ್ಯಾಯ-19 ಬ್ಯಾಂಕರ್ ನಾರಾಯಣರು ಕೆನರಾ ಬ್ಯಾಂಕ್ ನಿವೃತ್ತ ಉದ್ಯೋಗಿ. ಅವರ ಹೆಂಡತಿ ಗಿರಿಜಕ್ಕ. ಇವರ ಮೂವರು ಮಕ್ಕಳೂ ವಿದ್ಯಾಭ್ಯಾಸ ಮುಗಿಸಿ ಉದ್ಯೋಗ ಮತ್ತು ಸಂಸಾರದ ನಿಮಿತ್ತ ಹೊರದೇಶದಲ್ಲೂ, ಪರವೂರಿನಲ್ಲೂ ನೆಲೆಸಿದ್ದರು. ಆದ್ದರಿಂದ ಈಗ ಎರಡೂವರೆ ಸಾವಿರ ಚದರಡಿಯ ಮಾಳಿಗೆ ಮನೆಯಲ್ಲಿ ಗಂಡ ಹೆಂಡತಿ ಇಬ್ಬರೇ ಇರುವುದು. ಮನೆಗೆಲಸದ ವೆಂಕಮ್ಮ ದಿನಾ ನಿಶ್ಶಬ್ದವಾಗಿ ಬಂದು ತನಗೆ ನಿಗದಿಪಡಿಸಲಾದ ಕೆಲಸಕಾರ್ಯಗಳನ್ನು ಚೊಕ್ಕವಾಗಿ ಮಾಡಿಕೊಟ್ಟು ಹೊರಟು ಹೋಗುತ್ತಾಳೆ. ಹಬ್ಬ ಹರಿದಿನಗಳಲ್ಲೂ ಇನ್ನಿತರ ಶುಭದಿನಗಳಲ್ಲೂ ನಾರಾಯಣ ದಂಪತಿಯ ಮಕ್ಕಳು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು ಅಪ್ಪ ಅಮ್ಮಂದಿರೊಂದಿಗೆ ನಾಲ್ಕು ದಿನ ಖುಷಿಯಿಂದಿದ್ದು ಹೊರಟು ಹೋಗುವ ಪರಿಪಾಠವನ್ನು ನಿಭಾಯಿಸುತ್ತಿದ್ದಾರೆ. ಉಳಿದ ದಿನಗಳಲ್ಲಿ ‘ನನಗೆ ನೀನು, ನಿನಗೆ ನಾನು!’ ಎಂಬಂತಿರುತ್ತದೆ ಈ ಮುದಿಜೀವಗಳ ಬದುಕು. ತೀರಾ ಬಡತನದಿಂದ ಬಂದಂಥ ನಾರಾಯಣರು, ಕೆಳದರ್ಜೆಯ ಗುಮಾಸ್ತನಾಗಿ ಉದ್ಯೋಗ ಆರಂಭಿಸಿದವರು. ಆದರೆ ಕಾಯಕವೇ ಕೈಲಾಸ! ಎಂಬ ದೃಢ ನಂಬಿಕೆಯಿಂದ ತಮ್ಮ ಜೀವಮಾನವಿಡೀ ಮಿಲಿಟರಿ ಶಿಸ್ತಿನಂಥ ವ್ಯಕ್ತಿತ್ವವನ್ನು ರೂಢಿಸಿಕೊಂಡು, ಕಣ್ಕಾಪು ಕಟ್ಟಿದ ಕುದುರೆಯಂತೆ ಅತ್ತಿತ್ತದ ಯಾವ ವಿಷಯಗಳ ಕುರಿತಾಗಿಯೂ ಆಸಕ್ತಿವಹಿಸಿದೆ ಬರೇ ಬ್ಯಾಂಕಿಗಾಗಿಯೇ ಅವಿರತವಾಗಿ ದುಡಿಯುತ್ತ ಹಂತಹಂತವಾಗಿ ಮೇಲ್ದರ್ಜೆಗೆ ಭಡ್ತಿ ಹೊಂದಿ ಮ್ಯಾನೇಜರ್ ಹುದ್ದೆಗೆ ಏರಿದವರು. ಆದ್ದರಿಂದ ಆ ಉದ್ಯೋಗಕ್ಕಿರಬೇಕಾದ ಗತ್ತು, ಬಿಗುಮಾನಗಳನ್ನು ತುಸು ಹೆಚ್ಚೇ ತಮ್ಮ ಮೇಲೆ ಹೇರಿಕೊಂಡು ಅಧಿಕಾರದ ವರ್ಚಸ್ಸಿನಿಂದ ಮುಂದುವರೆದು ಬಹುಬೇಗನೇ ದಕ್ಷ ಅಧಿಕಾರಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿ ನಿವೃತ್ತರಾದವರು. ಇಂಥ ಸ್ವಭಾವದ ನಾರಾಯಣರು ನಿವೃತ್ತರಾಗುವವರೆಗೆ ಯಾವ ದೈವದೇವರುಗಳನ್ನೂ ನಂಬದೆ, ಪೂಜಿಸದೆ ಕಟ್ಟಾ ನಾಸ್ತಿಕರಾಗಿ ಬದುಕುತ್ತ ಯಶಸ್ಸಿನ ಗುರಿ ತಲುಪಿದವರು. ಆದರೆ ನಿವೃತ್ತರಾದ ಕೆಲವೇ ವರ್ಷದೊಳಗೆ ಇದ್ದಕ್ಕಿದ್ದಂತೆ ಒಮ್ಮೆ ಅವರು ದೈವ ದೇವರಗಳ ಅತೀವ ಭಕ್ತರಾಗಿ ಬದಲಾಗಿಬಿಟ್ಟರು. ಅದಕ್ಕೆ ಮುಖ್ಯ ಕಾರಣವೂ ಇತ್ತು. ನಾರಾಯಣರು ಆವರೆಗೆ ಆರೋಗ್ಯವಂತರಾಗಿ ಘನ ಗಾಂಭೀರ್ಯದಿಂದ ಬದುಕಿದವರು. ಆದರೆ ಯಾವತ್ತು ಅವರನ್ನು ಮಧುಮೇಹ, ರಕ್ತದೊತ್ತಡ ಮತ್ತು ಅಸ್ತಮದಂಥ ವಯೋಸಹಜ ಕಾಯಿಲೆಗಳು ಆವರಿಸಿಕೊಂಡಿತೋ ಅಂದಿನಿಂದ ಅವರು ಒಳಗೊಳಗೇ ದುರ್ಬಲರಾಗತೊಡಗಿದರು. ಆವರೆಗೆ ಹಠ ಹಿಡಿದು ಕಾಪಾಡಿಕೊಂಡು ಬಂದಂಥ ಅವರ ಆತ್ಮಸ್ಥೈರ್ಯವೆಂಬ ಭದ್ರಕೋಟೆಯು ಒಡೆದು ನುಚ್ಚುನೂರಾಯಿತು. ಆ ಕಾಯಿಲೆಗಳ ಹಿಂಸೆಗಿಂತಲೂ ಅವು ತನ್ನಂಥ ಆರೋಗ್ಯವಂತ ಆತ್ಮ ಸಂಯಮಿಯನ್ನೇ ಹಿಡಿದುಕೊಂಡಿವೆ ಎಂದರೆ ಅರ್ಥವೇನು? ಎಂಬ ಆಘಾತವೇ ಅವರನ್ನು ಹಣ್ಣು ಮಾಡತೊಡಗಿತ್ತು. ಹಾಗಾಗಿ ಬರಬರುತ್ತ ಅವರಿಗೆ ಬದುಕೇ ನಶ್ವರವೆನ್ನಿಸತೊಡಗಿತು. ಅಸ್ತಮವೊಂದನ್ನುಳಿದು ಮತ್ತೆರಡು ಕಾಯಿಲೆಗಳು ಗಿರಿಜಕ್ಕನಿಗೂ ಇದ್ದವು. ಆದರೆ ಅವರು ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳುವ ಹೆಂಗಸಲ್ಲ. ಕಾರಣ ಅದಾಗಲೇ ಅವರಲ್ಲಿ ವಯೋಸಹಜ ಪ್ರಬುದ್ಧತೆ ಮೂಡಿತ್ತು. ಹಾಗಾಗಿ ಆಕೆ ತಮ್ಮ ಇಷ್ಟದ ದೈವದೇವರುಗಳ ಪೂಜೆ ಪುನಸ್ಕಾರಗಳಲ್ಲೂ ದೈನಂದಿನ ಚಟುವಟಿಕೆಗಳಲ್ಲೂ ತೊಡಗಿಕೊಂಡು ನೆಮ್ಮದಿಯಿಂದ ಬದುಕುತ್ತಿದ್ದರು. ಆದರೆ ಗಂಡನ ನಿರುತ್ಸಾಹ ಮತ್ತು ಅವರು ಸದಾ ತಮ್ಮ ಕಾಯಿಲೆಗಳ ಬಗ್ಗೆಯೇ ಕೊರಗುತ್ತ ಕೃಶರಾಗುತ್ತಿದ್ದುದನ್ನು ಕಾಣುತ್ತಿದ್ದವರಿಗೆ ಆತಂಕವಾಗುತ್ತಿತ್ತು. ಆದ್ದರಿಂದ ದಿನಾಲು ಗಂಡನಿಗೆ ಬಗೆಬಗೆಯಿಂದ ಸಾಂತ್ವನ ಹೇಳುತ್ತ ಒತ್ತಾಸೆಯಾಗಿರಲು ಪ್ರಯತ್ನಿಸುತ್ತಿದ್ದರು. ಆದರೂ ನಾರಾಯಣರಿಗೆ ಹೆಂಡತಿಯ ಬುದ್ಧಿಮಾತುಗಳು ಹಿಡಿಸುತ್ತಿರಲಿಲ್ಲ. ಹೀಗಿದ್ದ ಸಮಯದಲ್ಲೇ ಒಮ್ಮೆ ನಾರಾಯಣರ ದೊಡ್ಡ ಕುಟುಂಬದ ಮೂಲದ ಮನೆಯಲ್ಲಿ ವರ್ಷಾವಧಿ ‘ಭೂತ’ ಕ್ಕೆ ನಡೆಯುವ ದಿನವನ್ನು ಗೊತ್ತು ಪಡಿಸಲಾಯಿತು. ಅದರ ಹೇಳಿಕೆ ನೀಡಲು ಅವರ ಹಿರಿಯ ಮಾವ ಸಂಜೀವಣ್ಣ ಮನೆಗೆ ಬಂದರು. ಸಂಜೀವಣ್ಣ ಮತ್ತು ನಾರಾಯಣರು ತೀರಾ ಹತ್ತಿರದ ಬಂಧುಗಳೇನಲ್ಲ. ಚಿಕ್ಕಮ್ಮ, ದೊಡ್ಡಮ್ಮನ ಮಕ್ಕಳಿಂದ ಸಂಬಂಧಿಗಳಾದವರು. ಹಿಂದೆಲ್ಲ ತಮ್ಮ ಬಂಧುಗಳು ಅಥವಾ ಸ್ನೇಹಿತರು ಎಂಬ ಭೇದಭಾವವಿಲ್ಲದೆ ಎಲ್ಲರೊಡನೆಯೂ ಖಡಕ್ಕಾಗಿ ವ್ಯವಹರಿಸುತ್ತಿದ್ದ ನಾರಾಯಣರು ಇಂದು ಕುಂದಿದ ಜೋಲು ಮುಖ ಹೊತ್ತುಕೊಂಡು ತಮ್ಮನ್ನು ಸ್ವಾಗತಿಸಿದ್ದನ್ನು ಕಂಡ ಸಂಜೀವಣ್ಣನಿಗೆ ಅನುಕಂಪವೂ ಅನುಮಾನವೂ ಒಟ್ಟೊಟ್ಟಿಗೆ ಮೂಡಿತು. ‘ಅರೇರೇ, ಏನೋ ನಾಣು…ಹೀಗಾಗಿಬಿಟ್ಟಿದ್ದೀಯಾ ಹುಷಾರಿಲ್ಲವನಾ…?’ ಎಂದು ಕೇಳಿಯೇ ಬಿಟ್ಟರು. ತಮ್ಮನ್ನು ಕಂಡ ಕೂಡಲೇ ಮಾವನ ಬಾಯಿಯಿಂದ ಹೊರಟ ಅಂಥ ಆತ್ಮೀಯತೆಯ ಮಾತುಗಳು ನಾರಾಯಣರೊಳಗಿನ ಹತಾಶೆಯ ತಂತಿಯನ್ನು ರಪ್ಪನೆ ಮೀಟಿದಂತಾಯಿತು. ‘ಅಯ್ಯೋ, ಮಾವಾ ನನ್ನ ಅವಸ್ಥೆಯನ್ನು ಏನೂಂತ ಕೇಳುತ್ತೀರಿ…? ಜೀವನದಲ್ಲಿ ಎಷ್ಟೊಂದು ಕಷ್ಟಪಟ್ಟು ಮೇಲೆ ಬಂದವನು ನಾನು ಅಂತ ನಿಮಗೆಲ್ಲರಿಗೂ ಗೊತ್ತುಂಟಲ್ಲವಾ? ನನ್ನ ಹೆತ್ತವರ ಅಂದಿನ ಬಡತನಕ್ಕೂ ನಾನು ಬೆಳೆದು ಬಂದ ರೀತಿಗೂ ಏನಾದರೂ ಸಂಬಂಧವಿದೆ ಅಂತ ನಿಮಗಾದರೂ ಅನಿಸುತ್ತದಾ ಹೇಳಿ!’ ಎಂದು ತಮ್ಮ ಕಳೆಗುಂದಿದ ಕಣ್ಣುಗಳಲ್ಲಿ ಹಿಡಿತ ತಪ್ಪಿ ತೊಟ್ಟಿಕ್ಕುತ್ತಿದ್ದ ನೀರನ್ನು ಬೈರಾಸಿನಿಂದ ಒರೆಸಿಕೊಳ್ಳುತ್ತ ಅಂದರು. ಮಾವನಿಗೆ ಸೋದರಳಿಯನ ಅಳು ನೋಡಿ ಇನ್ನೂ ಸೋಜಿಗವಾಯಿತು. ಹೌದು ಅವರು ನಾರಾಯಣರ ಕುಟುಂಬದ ಬಡತನವನ್ನು ಕಣ್ಣಾರೆ ಕಂಡಿದ್ದರು. ಅಲ್ಲದೇ ಅಂದು ಅವರ ಕುಟುಂಬವೂ ಅನುಕೂಲಸ್ಥವಾಗಿತ್ತು. ಹಾಗಾಗಿ ಆವತ್ತು ಅವರು ನಾರಾಯಣರ ಕುಟುಂಬಕ್ಕೆ ಸಹಾಯ ಮಾಡಲು ಮನಸ್ಸು ಮಾಡಿದ್ದರೆ ನೈಜ ಬಂಧುತ್ವವನ್ನು ಇನ್ನಷ್ಟು ಗಟ್ಟಿಯಾಗಿ ಉಳಿಸಿಕೊಳ್ಳಬಹುದಿತ್ತು. ಆದರೆ, ‘ಉಳ್ಳವರ ಬಹುತೇಕ ಸಹಾಯ ತಮ್ಮ ಪ್ರತಿಷ್ಠೆಯ ಪ್ರದರ್ಶನಕ್ಕಾಗಿಯೇ ಇರುತ್ತದೆ. ಅದು ನಿಜವಾದ ಬಡತನವನ್ನೆಂದೂ ಅಳಿಸುವ ಪ್ರಯತ್ನ ಮಾಡದು!’ ಎಂಬ ಮಾತಿನಂತೆಯೇ ಸಂಜೀವಣ್ಣನ ಮನಸ್ಥಿತಿಯೂ ಇತ್ತು. ಆದ್ದರಿಂದ ಅವರು, ‘ಅವರೇನೂ ತಮ್ಮ ಹತ್ತಿರದ ಸಂಬಂಧಿಗಳಲ್ಲ. ಅವರ ರಕ್ತ ಸಂಬಂಧಿಕರೇ ಸುಮಾರು ಜನ ಅನುಕೂಲಸ್ಥರಿದ್ದು ಅವರೆಲ್ಲರೂ ಸುಮ್ಮನಿರುವಾಗ ನಾವೇಕೆ ಮೇಲೆ ಬಿದ್ದುಕೊಂಡು ಹೋಗಿ ಉದ್ಧಾರ ಮಾಡಬೇಕು?’ ಎಂಬ ಧೋರಣೆಯಿಂದ ದೂರವೇ ಇದ್ದವರು. ಹೀಗೆ ಅಂದು ನಾರಾಯಣರ ಎಲ್ಲ ಬಂಧುಗಳೂ ಅವರ ಕುಟುಂಬವನ್ನು ಅಸ್ಪ್ರಶ್ಯರಂತೆ ಕಾಣುತ್ತ ದೂರದಿಂದಲೇ ಸಂಬಂಧವನ್ನು ನಿಭಾಯಿಸಿಕೊಂಡು ಬಂದಿದ್ದರು. ಆದರೆ ನಾರಾಯಣರು ಬೆಳೆದು ಬ್ಯಾಂಕ್ ಅಧಿಕಾರಿಯಾಗಿ ಹೆಸರು ಮಾಡಿದ ಮೇಲೆ ಇತರರಂತೆ ಸಂಜೀವಣ್ಣನ ಧೋರಣೆಯೂ ಬದಲಾಯಿತು ಮತ್ತು ವಯೋಸಹಜ ಪ್ರಬುದ್ಧತೆಯೂ ಅವರನ್ನು ಮೃದುವಾಗಿಸಿತ್ತು. ಪರಿಣಾಮ, ಅವರು ಈಗೀಗ ರಕ್ತ ಸಂಬಂಧಿಗಳೊಂದಿಗೆ ಹೆಚ್ಚೆಚ್ಚು ಅನ್ಯೋನ್ಯವಾಗಿರಲು ಪ್ರಯತ್ನಿಸುತ್ತ ಎಲ್ಲರ ಮನೆಗಳಿಗೂ ಆಗಾಗ ಭೇಟಿ ನೀಡುತ್ತ ಒಂದು ಮಟ್ಟದ ಬಾಂಧವ್ಯವನ್ನು ಹೊಸದಾಗಿ ಚಿಗುರಿಸುವಲ್ಲಿ ಸಫಲರಾಗಿದ್ದಾರೆ. ಇಂಥ ಸಂಜೀವಣ್ಣ ಇಂದು ನಾರಾಯಾಣರ ಮಾತಿಗೆ, ‘ಹೌದು ಹೌದು ಮಾರಾಯಾ ನಿನ್ನ ಅಪ್ಪ, ಅಮ್ಮ ಆವಾಗ ಇದ್ದ ಪರಿಸ್ಥಿತಿಯನ್ನು ನೆನೆದರೆ ನೀನಿಷ್ಟೊಂದು ಎತ್ತರಕ್ಕೆ ಬೆಳೆಯುತ್ತಿ ಅಂತ ನಾವ್ಯಾರೂ ಕನಸು ಮನಸಿನಲ್ಲೂ ಎಣಿಸಲಿಲ್ಲ ನೋಡು!’ ಎಂದು ತಾವೂ ಅವರ ಮಾತನ್ನು ಅನುಮೋದಿಸಿದರು. ಅಷ್ಟು ಕೇಳಿದ ನಾರಾಯಣರು ಸ್ವಲ್ಪ ಗೆಲುವಾದರು. ‘ಹ್ಞೂಂ, ಹೌದಲ್ಲವಾ ಮಾವ. ಹಾಗಿರುವಾಗ ಅಂಥ ಸ್ಥಾನಮಾನವನ್ನು ನಾನು ಗಳಿಸಲು ಮತ್ತದನ್ನು ಉಳಿಸಿಕೊಳ್ಳಲು ಜೀವನದ ಎಂಥೆಂಥ ಸಂಗತಿಗಳನ್ನೂ ಸುಖ ಸಂತೋಷಗಳನ್ನೂ ಕಣ್ಣೆತ್ತಿಯೂ ನೋಡದೆ ಇಷ್ಟು ವರ್ಷಗಳ ಕಾಲ ರಾಜ ಸಿಪಾಯಿಯಂತೆ ಬದುಕಿದೆನೆಂದರೆ ಸಣ್ಣ ವಿಷಯವಾ ಹೇಳಿ? ಆದರೆ ಇಷ್ಟೆಲ್ಲ ಆದ ಮೇಲೆ ರಿಟಾಯರ್ಮೆಂಟ್ನ ನಂತರವಾದರೂ ಸ್ವಲ್ಪ ನೆಮ್ಮದಿಯಿಂದ ಜೀವನ ಸಾಗಿಸುವ ಎಂದು ಕನಸು ಕಂಡಿದ್ದರೆ ಇದೇನಾಗಿ ಹೋಯಿತು ಮಾವಾ! ಇಷ್ಟರವರೆಗೆ ಎಲ್ಲಿದ್ದವೋ ಹಾಳು ಕಾಯಿಲೆಗಳೆಲ್ಲ ನನ್ನನ್ನು ನುಂಗಿ ನೀರು ಕುಡಿಯುತ್ತಿವೆಯಲ್ಲ? ಇವು ನನ್ನನ್ನು ಹಿಂಸಿಸುವುದನ್ನು ನೋಡಿದರೆ ಬಹಳ ಬೇಗನೇ ಸತ್ತು ಹೋಗುತ್ತೇನೇನೋ ಅಂತ ಟೆನ್ಷನ್ ಆಗಿಬಿಟ್ಟಿದೆ!’ ಎಂದು ನಾರಾಯಣರು ನೋವು ತೋಡಿಕೊಂಡರು. ಅವರ ಮಾತಿಗೆ ಸಂಜೀವಣ್ಣ ಮೌನವಾಗಿ ತಲೆಯಲ್ಲಾಡಿಸಿದರು. ಅಷ್ಟರಲ್ಲಿ ಗಿರಿಜಕ್ಕ ಇಬ್ಬರಿಗೂ ಕಾಫಿ ತಂದು ಕೊಟ್ಟು ತಾನೂ ಗಂಡನ ಪಕ್ಕದಲ್ಲಿ ಕುಳಿತವರು, ‘ಅಲ್ಲ ಸಂಜೀವಣ್ಣಾ, ಇವರ ಕಥೆ ಏನು ಮಾರಾಯ್ರೇ…! ಯಾವಾಗಲೂ ಇವರಿಗೆ ಬರೇ ಕಾಯಿಲೆಯದ್ದೇ ಚಿಂತೆಯಾಗಿಬಿಟ್ಟಿದೆಯಲ್ಲ? ಆ ಸಣ್ಣಪುಟ್ಟ ರೋಗಗಳು ನನಗೂ ಇವೆ. ಆದರೆ ನಾನ್ಯಾಕೆ ಟೆನ್ಷನ್ ಮಾಡಿಕೊಳ್ತಾ ಇಲ್ಲ! ಅದಾದರೂ ಅರ್ಥವಾಗಬೇಕಲ್ಲವಾ ಇವರಿಗೆ? ದಯವಿಟ್ಟು ಹೆಚ್ಚು ಚಿಂತೆ ಮಾಡ್ಕೋಬೇಡಿ. ಅದರಿಂದ ಇರುವ ಆರೋಗ್ಯವೂ ಕೆಟ್ಟು ಹೋಗುತ್ತದೆ. ಅಂತ ನಂಗಂತೂ ಹೇಳಿ ಹೇಳಿ ಸಾಕಾಗಿ ಹೋಯ್ತು. ಇನ್ನು ನೀವೇ ಇವರಿಗೆ ಬುದ್ಧಿ ಹೇಳಬೇಕಷ್ಟೇ!’ ಎಂದರು ನೋವಿನಿಂದ. ‘ಆಯ್ತು, ಆಯ್ತಮ್ಮಾ. ನಾನೇ ಹೇಳುತ್ತೇನೆ. ಇನ್ನು ನೀನೂ ಮಂಡೆಬಿಸಿ ಮಾಡ್ಕೊಂಡು ನಿನ್ನ ಆರೋಗ್ಯವನ್ನೂ ಕೆಡಿಸಿಕೊಳ್ಳಬೇಡ. ಒಳಗೆ ನಡಿ. ಏನಾದರೂ ಅಡುಗೆ ಮಾಡು. ಊಟ ಮಾಡಿಕೊಂಡೇ ಹೋಗುತ್ತೇನೆ’ ಎಂದು ಸಂಜೀವಣ್ಣ ಹಿರಿಯನ ಅಧಿಕಾರದಿಂದ ಆಜ್ಞಾಪಿಸಿದವರು ಸೋದರಳಿಯನ ಸಮಸ್ಯೆಗೂ ಅದಾಗಲೇ ಪರಿಹಾರವನ್ನು ಹುಡುಕಿಯಾಗಿತ್ತು. ಅದನ್ನು ತಿಳಿಸಲೂ ಇದೇ ಸುಸಂದರ್ಭವೆಂದುಕೊಂಡವರು, ‘ನೋಡು ನಾಣೂ ನಿನಗಿಂತ ಹಿರಿಯನಾಗಿ ಒಂದೆರಡು ಮಾತು ಹೇಳುತ್ತೇನೆ. ಅದನ್ನು ತಾಳ್ಮೆಯಿಂದ ಕೇಳಬೇಕು ನೀನು…?’ ಎಂದರು ಗಂಭೀರವಾಗಿ. ‘ಆಯ್ತು ಮಾವ, ಹೇಳಿ…!’ ಎಂದರು ನಾರಾಯಣರೂ ಆಸಕ್ತಿಯಿಂದ. ‘ನಮ್ಮ ದೇಹದಲ್ಲಿ ತ್ರಾಣ ಇರುವಾಗ ಮತ್ತು ರಕ್ತವೂ ಬಿಸಿಯಿರುವಾಗ ನಾವು ಯಾರು? ಈ ಭೂಮಿಯಲ್ಲಿ ಯಾಕೆ ಹುಟ್ಟಿದೆವು? ಮನುಷ್ಯ ಜೀವನ ಎಂದರೇನು? ನಮ್ಮ ಬದುಕಿನಲ್ಲಿ ತಾಪತ್ರಯಗಳು ಯಾಕೆ ಬರುತ್ತವೆ? ಸಂಸಾರ, ಬಂಧು ಬಳಗ, ಆಸೆ ದುರಾಸೆಗಳಿಗೆ ಅರ್ಥವೇನು? ಇಲ್ಲಿ ಯಾವುದು ಸತ್ಯ ಯಾವುದು ಮಾಯೆ? ಸತ್ತ ನಂತರ ಎಲ್ಲಿಗೆ ಹೋಗುತ್ತೇವೆ?’ ಎಂಬ ಯಾವ ಪ್ರಶ್ನೆಗಳೂ ನಮ್ಮಲ್ಲಿ ಹುಟ್ಟುವುದಿಲ್ಲ ಅಥವಾ ಹುಟ್ಟಿದರೂ ಅದಕ್ಕೆ ತಕ್ಕ ಉತ್ತರವೂ ನಮ್ಮ ಆಗಿನ ತಿಳಿವಿಗೆ ಸಿಗುವುದಿಲ್ಲ. ಹಾಗಾಗಿ ಸಮಾಜದ ಸಂಸ್ಕಾರ ಸಂಪ್ರದಾಯಗಳಿಗೆ ತಕ್ಕಂತೆ ಬದುಕನ್ನು ರೂಪಿಸಿಕೊಳ್ಳುತ್ತ ಹೋಗುತ್ತೇವೆ. ಆ ಪ್ರಯತ್ನದಲ್ಲಿ ಗೆಲ್ಲುತ್ತೇವೋ ಸೋಲುತ್ತೇವೋ ನಮಗೆ ಮುಖ್ಯವಾಗುವುದಿಲ್ಲ. ಆದರೆ ಕೊನೆಯಲ್ಲಿ ನಮ್ಮ ದಾರಿಯೇ ಸರಿ ಎಂಬ ನಿರ್ಧಾರಕ್ಕೆ ಬಂದು ಜೀವನ ಇಷ್ಟೇ ಎಂಬ ಭ್ರಮೆಯಲ್ಲಿ ಬದುಕುತ್ತೇವೆ. ಅಂಥ ಜೀವನದ ಅನುಭವಗಳಿದಿಂದಾಗಿ ಮುಂದೆ ಬರುವ ವೃದ್ಧಾಪ್ಯದ ಬಗ್ಗೆಯಾಗಲಿ ದೇಹವನ್ನು ಕೊನೆ ಮುಟ್ಟಿಸಲು ಎಡತಾಕುವ ರೋಗರುಜಿನಗಳ ಕುರಿತಾಗಲಿ ಸರಿಯಾದ ತಿಳುವಳಿಕೆ, ಕಾಳಜಿ ನಮಲ್ಲಿ ಹೆಚ್ಚಿನವರಿಗಿರುವುದಿಲ್ಲ. ಆದರೆ ಕೊನೆಯವರೆಗೆ ಬದುಕಿದ ಎಲ್ಲರಿಗೂ ಮುದಿತನ ಬಂದೇ ಬರುತ್ತದಲ್ಲ! ಒಂದು ದಿನ ಅದು ಬಂದು ಇನ್ನೇನು ಎಲ್ಲವೂ ಮುಗಿಯುತ್ತದೆ ಎಂಬಷ್ಟರಲ್ಲಿ ಆ ಕಠೋರ ಸತ್ಯವನ್ನು ಸ್ವೀಕರಿಸಲಾಗದೇ, ಎದುರಿಸಲಾಗದೇ ಸಣ್ಣ ಮಕ್ಕಳಂತೆ ಕೈಕಾಲು ಬಡಿದುಕೊಂಡು ಅಳತೊಡಗುತ್ತೇವೆ ಮತ್ತು ಕೊನೆಯಲ್ಲಿ ಮನಸ್ಸಿನ ಸ್ವಾಸ್ಥ್ಯವನ್ನು ಕಳೆದುಕೊಂಡು ನರಳುತ್ತೇವೆ. ಇಂಥ ಅವಸ್ಥೆಯಲ್ಲಿ ಒದ್ದಾಡುವವನು ನಿನ್ನೊಬ್ಬನೇ ಅಲ್ಲ ಮಾರಾಯಾ. ನನ್ನನ್ನೂ ಸೇರಿಸಿ ಹೆಚ್ಚಿನ ಮುದುಕರ ಅವಸ್ಥೆಯೇ ಹೀಗಾಗಿ ಬಿಟ್ಟಿದೆ. ಇವುಗಳ ಜೊತೆಯಲ್ಲಿ ಇನ್ನೊಂದು ದೊಡ್ಡ ದುರಂತವೆಂದರೆ ಸಾಯುವವರೆಗೂ ನಾವು ಈ ಜೀವನ ನಶ್ವರ ಎಂಬುದನ್ನು ಒಪ್ಪಿಕೊಳ್ಳುವುದೇ ಇಲ್ಲ! ಆದ್ದರಿಂದ ನೀನು ಈ ಎಲ್ಲಾ ವಿಚಾರಗಳನ್ನು ಅರ್ಥ ಮಾಡಿಕೊಂಡೆಯೆಂದರೆ ನಿನ್ನ ರೋಗರುಜಿನವೆಲ್ಲವೂ ಅರ್ಧಕ್ಕರ್ಧ ಗುಣವಾಗುತ್ತವೆ ನೋಡು!’ ಎಂದು ಗಂಭೀರವಾಗಿ ಹೇಳಿದರು. ಆದರೆ ಇನ್ನೂ ಕಣ್ಕಾಪು ಕಿತ್ತೊಗೆಯದ ನಾರಾಯಣರ ಮನಸ್ಸೆಂಬ ಮುದಿ ಕುದುರೆಗೆ ಆ ವಿಚಾರವು ಸ್ವಲ್ಪವೂ ಅರ್ಥವಾಗಲಿಲ್ಲ. ‘ಏನೋ ಮಾವಾ, ನನಗೊಂದೂ ತಿಳಿಯುವುದಿಲ್ಲ!’ ಎಂದು ಉದಾಸೀನ ತಾಳಿದರು. ಅವರ ಪ್ರತಿಕ್ರಿಯೆಯನ್ನು ಕಂಡ ಸಂಜೀವಣ್ಣನಿಗೆ ತಾನು ಬೋರ್ಗಲ್ಲ ಮೇಲೆ ನೀರೆರೆದಂತಾಯಿತಲ್ಲ ಎಂದೆನ್ನಿಸಿತು. ಆದರೂ ಸೋಲೊಪ್ಪಿಕೊಳ್ಳದೆ, ‘ಹಾಗೆಲ್ಲ ನಿರಾಶೆ ಮಾಡಿಕೊಳ್ಳಬಾರದು ಮಾರಾಯಾ. ನಿನ್ನ ತೊಂದರೆಗಳಿಗೆಲ್ಲಾ ಪರಿಹಾರ ಇದ್ದೇ ಇದೆ. ಸ್ವಲ್ಪ ತಾಳ್ಮೆಯಿಂದಿರು!’ ಎಂದು ಮೃದುವಾಗಿ ಅಂದವರು, ‘ಅದೆಲ್ಲ ಹಾಗಿರಲಿ ಮಾರಾಯಾ… ನೀನು ನಮ್ಮ ಮನೆತನದ ದೈವಗಳನ್ನು ನೋಡಲು ಬರದೆ ಎಷ್ಟು ವರ್ಷವಾಯಿತು ಹೇಳು? ಇಷ್ಟು ಕಾಲ ದುಡಿಮೆ ದುಡ್ಡು ಸಂಸಾರ ಅಂತ ಓಡುತ್ತಲೇ ಇದ್ದೆ. ಆದರೆ ಈಗ ನೋಡಿದರೆ ಅದರಿಂದ ನಿಜವಾದ ಸುಖ ಏನು ಪಟ್ಟೆ ಹೇಳು? ಅಷ್ಟಲ್ಲದೇ ನಿನ್ನ ಇಲ್ಲಿಯವರೆಗಿನ ದೊಡ್ಡ ಗೆಲುವಿಗೆ ಕಾರಣವಾದವರು ಯಾರು ಅಂತ ಒಮ್ಮೆಯಾದರೂ ಯೋಚಿಸಿದ್ದೀಯಾ? ಹತ್ತಾರು ತಲೆಮಾರಿನಿಂದಲೂ ನಮ್ಮ ಸಂತಾನವನ್ನು ಕಾಪಾಡಿಕೊಂಡು ಬಂದಂಥ ನಮ್ಮ ದೈವ, ಭೂತಗಳೇ ನಿನ್ನನ್ನು ಈ ಮಟ್ಟಕ್ಕೆ ಬೆಳೆಸಿದ್ದು ಅಂತ ಇನ್ನಾದರೂ ಅರ್ಥ ಮಾಡಿಕೋ ಮಾರಾಯಾ! ನೀನು

