ಅಂಕಣ ಸಂಗಾತಿ ಚಾಂದಿನಿ ಅನಾಫಿಲೀಸ್ ಎಂಬ ಹೆಣ್ಣು ಸೊಳ್ಳೆಯೂ . ಸೊಳ್ಳೆಗು ನನಗೂ ಬಿಡಿಸಲಾರದ ಬಂಧ-ಸಂಬಂಧ. ಹಾಗೆ ನೋಡಿದರೆ, ಒಂದಾನೊಂದು ಕಾಲದಲ್ಲಿ ನಾನು ಹುಟ್ಟುವ ಮುಂಚೆ ನನ್ನೂರು ಮಲೇರಿಯಾ ಫೇಮಸ್ ಆಗಿತ್ತಂತೆ. ಇದು ನಂಗೆ ಗೊತ್ತಾದ್ದು ನಾನು ಹುಟ್ಟಿ ಎಷ್ಟೂ ವರ್ಷಗಳ ಬಳಿಕ, ಯಾವುದೋ ಪುಸ್ತಕ ಓದಿದಾಗ. ಎಲ್ಲೇ ಹೋದರೂ ಹೋಗಿ ಬೀಳುವುದು ಸೊಳ್ಳೆ ಕೊಂಪೆಗೆ. ನಾನು ಪಿ.ಜಿ ಮಾಡೋವಾಗ ಇದ್ದ ಊರು ಸೊಳ್ಳೆ ಖ್ಯಾತಿಯದ್ದು. ಸೊಳ್ಳೆ ಬಂದು, ಕಿವಿಯಲ್ಲಿ ಗುಂಯ್ಗುಡುತ್ತಾ ಗುಡ್ನೈಟ್ ಹೇಳಿದರೆ ಮಾತ್ರ ನಿದ್ರೆ ಅನ್ನೊವಷ್ಟು ನಾನವುಗಳಿಗೆ ಎಡಿಕ್ಟ್ ಆಗಿದ್ದೆ. ಇಂಥ ಸೊಳ್ಳೆ ಸಂಭ್ರಮದಲ್ಲಿ ನಾನು ಗಡದ್ದಾಗಿ ನಿದ್ದೆ ಹೊಡೆಯುವುದನ್ನು ಕಂಡ ಸ್ನೇಹಿತೆಯರು ನನ್ನನ್ನು ಛೇಡಿಸುತ್ತಿದ್ದರು. ಸೊಳ್ಳೆಯೂ ನಿನ್ನ ಬಳಿ ಸುಳಿಯುವುದಿಲ್ಲ ಎಂದಾದರೆ, ನೀನು ಅದ್ಯಾವ ಪರಿ ಕೊಳಕಿ ಇರಬಹುದು ಎಂಬುದು ಗೆಳತಿ ರುಕ್ಮಿಣಿಯ ಸ್ಟೇಟ್ಮೆಂಟ್. ನನ್ನ ರೂಂಮೇಟ್ ಮಲೇರಿಯಾ ಬಂದು ಮಲಗಿದ್ದರೂ ನಾನು ಸೊಳ್ಳೆ ಪರದೆ ಉಪಯೋಗಿಸದೆ ಇರುವುದನ್ನು ಕಂಡ ಜ್ಯೋತಿ, ಅನಾಫಿಲೀಸ್ ಹೆಣ್ಣು ಸೊಳ್ಳೆಯಾದ ಕಾರಣ ಈಕೆ ಬಳಿ ಸುಳಿಯುವುದಿಲ್ಲ ಎಂಬ ಹೇಳಿಕೆ ನೀಡಿದ್ದಳು. ನನ್ನ ಗೆಳತಿಯೊಬ್ಬಳಿದ್ದಾಳೆ. ಅವ್ಳದ್ದು ಮಲೇರಿಯಾ ಫ್ಯಾಮಿಲಿ. ಅವಳ ಎರಡರ ಹರೆಯದ ಮಗುವನ್ನೂ ಬಿಡದೇ, ಅವರ ಮನೆಯಲ್ಲಿ ಎಲ್ಲರಿಗೂ, ತಿರುತಿರುಗಿ ಮಲೇರಿಯಾ ಅಟ್ಯಾಕ್ ಆಗಿತ್ತು. ಹೀಗೆ ಆಕೆಯ ತಂಗಿಗೊಂದು ಬಾರಿ ಮಲೇರಿಯಾ ಆಗಿದ್ದಾಗ ನಾನು ಆಸ್ಪತ್ರೆ ಡ್ಯೂಟಿ ಮಾಡಿದ್ದೆ. ಮಲೇರಿಯಾ ಪೇಶಂಟ್ಗೆ ನಾನು ವಾಚ್ವುಮನ್ ಅಗಿರುವ ಸುಳಿವು ಸಿಕ್ಕಿದ್ದ ನನ್ನ ಬಾಸ್ ಅದೊಮ್ಮೆ “ನೀವೂ ಒಂದು ಆಂಟಿ ಮಲೇರಿಯಾ ವ್ಯಾಕ್ಸಿನೇಷನ್ ಮಾಡ್ಸಿಕೊಳ್ಳಿ” ಅಂದಿದ್ದರು. ಅದು ನನ್ನ ಮೇಲಿನ ಕಾಳಜಿಗೋ ಅಥವಾ ಈಕೆಗೆ ಮಲೇರಿಯಾ ತಗುಲಿಬಿಟ್ರೆ ರಜೆಕೊಡಬೇಕೆಂಬ ಅವರ ಚಿಂತೆಗೋ! ಬೇಕಿಲ್ಲ ಸಾರ್, ಎಷ್ಟೇ ಸೊಳ್ಳೆ ಕಡಿದರೂ ನನ್ನನ್ನು ಮಲೇರಿಯಾ ಬಾಧಿಸುವುದಿಲ್ಲ ಎಂಬ ಸಮಜಾಯಿಷಿ ನೀಡಿದ್ದೆ ಅವರಿಗಾಗ. ಮರುಮಾತಾಡದ ಅವರು ನಾನೇ ಒಂದು ಸೊಳ್ಳೆ ಎಂಬಂತಹ ಲುಕ್ ಕೊಟ್ಟಿದ್ದರು. ಈ ಅನಾಫಿಲೀಸ್ ಎಂಬ ಹೆಣ್ಣು ಸೊಳ್ಳೆ ನನ್ನನ್ನು ಇನ್ನೊಮ್ಮೆ ನಗೆಪಾಟಿಲಿಗೀಡಾಗಿಸಿತ್ತು. ಮಡಿಕೇರಿ ಆಕಾಶವಾಣಿಯಲ್ಲಿ ಉದ್ಘೋಷಕರ ಹುದ್ದೆಗೆ ಅರ್ಜಿ ಕರೆದಿದ್ದರು. ಇದಕ್ಕೆ ಅರ್ಜಿ ಸಲ್ಲಿಸಿ ಕೆಲವು ತಿಂಗಳ ಬಳಿಕ ಲಿಖಿತ ಪರೀಕ್ಷೆಗೆ ಹಾಜರಾಗಲು ಆದೇಶ ಬಂದಿತ್ತು. ಒಂದು ಹುದ್ದೆಗೆ 80ಕ್ಕಿಂತಲೂ ಅಧಿಕ ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನದ ಕುರಿತೇ ಹೆಚ್ಚು ಪ್ರಶ್ನೆಗಳು. ಅದರಲ್ಲೊಂದು ಪ್ರಶ್ನೆ ಮಲೇರಿಯಾ ರೋಗ ಹರಡುವ ಸೊಳ್ಳೆಯಾವುದು ಎಂಬುದಾಗಿ. ಕೌನ್ ಬನೇಗಾ ಕರೋಡ್ಪತಿಯಲ್ಲಿ ಅಮಿತಾಭ್ ಬಚ್ಚನ್ ನೀಡಿದಂತೆ ‘ಚಾರ್ ಆಪ್ಷನ್’ ಇರಲಿಲ್ಲ, ‘ಕಂಪ್ಯೂಟರ್ ಸಾಬೂ’ ಇರಲಿಲ್ಲ. ಪರೀಕ್ಷೆ ಮುಗಿಸಿ ನನ್ನೂರಿಗೆ ತಲುಪುವ ಧಾವಂತದಲ್ಲಿ ದೊಡ್ಡದೊಡ್ಡ ಹೆಜ್ಜೆ ಹಾಕುತ್ತಾ ಹೋಗುತ್ತಿದ್ದೆ. ದಾರಿಯಲ್ಲಿ ಸಿಕ್ಕ ಸಹ ಅಭ್ಯರ್ಥಿಯೊಬ್ಬಾತ, ಹಲೋ ಮೇಡಂ ಹೇಗೆ ಮಾಡಿದ್ದೀರಿ ಅಂತ ವಿಚಾರಿಸಿದ. ಪರವಾಗಿಲ್ಲ ಅಂದೆ. ಆತನ ಹೆಸರು ಶರತ್ಚಂದ್ರ ಎಂತಲೂ, ಕುಮುಟಾದಲ್ಲಿ ವಕೀಲನೆಂದೂ ಗೊತ್ತಾಯಿತು. ನನ್ನ ಜತೆ ಹೆಜ್ಜೆ ಹಾಕಿದ ಆತ ಪ್ರಶ್ನೆಗಳ ಬಗ್ಗೆ ಚರ್ಚಿಸಿದ. ಎಲ್ಲದಕ್ಕೂ ಸರಿಯುತ್ತರ ಬರೆದಿದ್ದೇನೆಂಬ ಹಂಡ್ರೆಡ್ ಪರ್ಸೆಂಟ್ ನಂಬುಗೆಯಲ್ಲಿದ್ದ ನಾನು ಎಲ್ಲ ಪ್ರಶ್ನೆಗಳಿಗೂ ಚಟಪಟ ಉತ್ತರ ಹೇಳುತ್ತಾ ಹೋದೆ. ಸೊಳ್ಳೆಯ ಪ್ರಶ್ನೆಗೂ ಉತ್ತರಿಸುತ್ತಾ, ‘ಸಿಫಿಲೀಸ್’ ಅಂದೆ. ಆತ ಒಮ್ಮೆಗೇ ಮುಖವನ್ನು ಒಂದಿಂಚು ಹಿಂದೆ ಸರಿಸಿ, ಹೆಜ್ಜೆ ನಿಧಾನಿಸಿದನಾದರೂ ಮತ್ತೆ ಸರಾಗವಾಗೇ ವರ್ತಿಸಿದ. ಪರೀಕ್ಷೆ ಮುಗಿಸಿ ಹಾಸ್ಟೆಲ್ಗೆ ಮರಳಿದಾಗ, ಲೆಕ್ಚರರ್ ಆಗಿದ್ದ ಗೆಳತಿ ಅನಿತಾ ಪ್ರಶ್ನೆ ಪತ್ರಿಕೆ ಇಸಿದುಕೊಂಡಳು. ಅದರ ಕುರಿತು ದೊಡ್ಡ ಚರ್ಚೆಯೇ ಆಯಿತು. ಸೊಳ್ಳೆ ಪ್ರಶ್ನೆ ಬಂದಾಗ, ಹೇಳು ನೋಡೋಣ ಇದ್ಯಾವ ಸೊಳ್ಳೆ ಅಂತ ಪ್ರಶ್ನಿಸಿದಳು. ಅಷ್ಟೂ ಗೊತ್ತಿಲ್ವ ಸಿಫಿಲೀಸ್ ಅಂತ ಮತ್ತಷ್ಟು ದೃಢವಾಗಿ ಅಂದೆ. ಎಲ್ಲರೂ ಬಿದ್ದುಬಿದ್ದು ನಗಲಾರಂಭಿಸಿದರು. ಯೇ…. ಕತ್ತೆ ಇದು ಅನಾಫಿಲೀಸ್. ಸಿಫಿಲೀಸ್ ಅಂದರೆ ಲೈಂಗಿಕ ಕಾಯಿಲೆ ಅಂದಳು. ಶರತ್ಚಂದ್ರನೆಂಬ ಕುಮುಟಾದ ವಕೀಲ ನನ್ನ ಉತ್ತರ ಕೇಳಿ ಯಾಕೆ ಮುಖವನ್ನು ಒಂದಿಂಚು ಹಿಂದೆ ಸರಿಸಿದನೆಂದು ಆಗ ಹೊಳೆಯಿತು! ಇದಾದ ಬಳಿಕ ನನ್ನ ಗೆಳತಿಯರಿಗೆ ಈ ಸಿಫಿಲೀಸ್ ವಿಚಾರ ಎತ್ತಿ ದಿನಕೊಮ್ಮೆಯಾದರೂ ನನ್ನನ್ನು ಲೇವಡಿಮಾಡದಿದ್ದರೆ ಸೂರ್ಯ ಮುಳುಗುತ್ತಿರಲಿಲ್ಲ. ವಿಷಯ ತಿಳಿದ ಜ್ಯೋತಿ ನಿಂಗಂತೂ ಆ ಕೆಲಸ ಖಂಡಿತ ಸಿಗುವುದಿಲ್ಲ ಎಂದು ಷರಾ ಬರೆದಿದ್ದಳು. ನಾಳೆ ನೀನು ಹೀಗೆ ಗಡಿಬಿಡಿಯಲ್ಲಿ ಒಂದರ ಬದಲು ಇನ್ನೊಂದರ ಪ್ರಕಟಣೆ ಮಾಡಿದರೆ ಗೋ……ವಿಂದ ಅಂತ ಟಿಪ್ಪಣಿಯನ್ನೂ ಸೇರಿಸಿದ್ದಳು. ಕೊನೆಗೆ ನಾನೇ, ಹೋಗಲಿ ಕೊನೆಯ ಮೂರು ಅಕ್ಷರಗಳು ಸರಿ ಇವೆಯಲ್ವೇ, ಅರ್ಧ ಮಾರ್ಕಾದರೂ ಕೊಟ್ಟಾರು ಅಂತ ಹೇಳಿಕೊಂಡಿದ್ದೆ. ಇದಾದ ಬಳಿಕ ಕ್ರಮೇಣ ಆ ವಿಷಯವನ್ನೂ, ಆ ಪರೀಕ್ಷೆಯನ್ನೂ ನಾವೆಲ್ಲರೂ ಮರೆತಿದ್ದೆವು. ಆದರೆ, ಒಂದು ದಿನ ನನಗೆ ಆಶ್ಚರ್ಯ ಹುಟ್ಟುವಂತೆ, ಲಿಖಿತ ಪರೀಕ್ಷೆಯಲ್ಲಿ ಪಾಸಾಗಿರುವ ನನ್ನನ್ನು ಆಡಿಯೋ ಟೆಸ್ಟ್ಗೆ ಕರೆದಿದ್ದರು. ನನ್ನ ಸ್ನೇಹಿತೆಯರಿಗೆ ಇದು ಇನ್ನೊಮ್ಮೆ ನಗುವಿನ ವಿಷಯವಾಗಿತ್ತು. 20 ಮಂದಿಯಲ್ಲಿ ಆಯ್ಕೆಗೊಂಡ ಐದು ಮಂದಿಯಲ್ಲಿ, ನನ್ನ ಹೆಸರಿದ್ದು ಅಂತಿಮ ಸುತ್ತಿನ ಸಂದರ್ಶನಕ್ಕೆ ಅರ್ಹತೆ ಗಳಿಸಿದ್ದೆ. ಅದೇದಿನ ಅಪರಾಹ್ನ ಸಂದರ್ಶನ. ಶರತ್ಚಂದ್ರನೂ ಬಂದಿದ್ದನಾದರೂ, ಧ್ವನಿ ಪರೀಕ್ಷೆಯಲ್ಲಿ ಫೇಲಾಗಿದ್ದ. ಹೀಗೆ ಮೌಖಿಕ ಸಂದರ್ಶನಕ್ಕೆ ಅವಕಾಶ ಸಿಗದ ಸಹ ಅಭ್ಯರ್ಥಿಗಳು ಸಂದರ್ಶನದಲ್ಲಿ ಆಯ್ಕೆಯಾಗಲಿ ಅಂತ ಹಾರೈಸಿ ಹೋಗಿದ್ದರು. ಶರತ್ಚಂದ್ರ ಸ್ವಲ್ಪ ಹೆಚ್ಚೇ ಹಾರೈಸಿದ್ದ. ಮುಕ್ಕಾಲು ಗಂಟೆ ಸಂದರ್ಶನ ಮಾಡಿದ್ದರು. ಅದಾಗ ಓದು ಮುಗಿಸಿದ್ದೆ ಅಷ್ಟೆ ನೋಡಿ, ಉತ್ಸಾಹದ ಮೂಟೆಯಾಗಿದ್ದ ನಾನು ಅದಮ್ಯ ಆತ್ಮವಿಶ್ವಾಸದಲ್ಲಿ ಪ್ರಶ್ನೆಗಳನ್ನು ಎದುರಿಸಿ ಕಂಡಾಪಟ್ಟೆ ಉತ್ತರ ಕೊಟ್ಟಿದ್ದೆ. ಸಂದರ್ಶನ ಮುಗಿಸಿ ತೆರಳುವ ವೇಳೆಗೆ ಅನಿತ ಮತ್ತು ಇತರ ಗೆಳತಿಯರು ನಗುವಿಗೇನಾದರೂ ಹೊಸ ಸರಕಿದೆಯಾ ಎಂಬಂತೆ ಕಾಯುತ್ತಿದ್ದರು. ಜ್ಯೋತಿ ಮಾತ್ರ ಗಂಭೀರವಾಗಿ, ನಿಂಗೆ ಅರ್ಹತೆ ಇತ್ತೂ ಅಂತ ನೀನು ಧ್ವನಿಪರೀಕ್ಷೆಯಲ್ಲಿ ಪಾಸಾಗಿಲ್ಲ. ಸ್ನೇಹಿತೆಯೆಂಬ ದಾಕ್ಷಿಣ್ಯಕ್ಕೆ ನಿನ್ನ ಗೊರಗೊರ ಧ್ವನಿಯನ್ನು ಸುಮಧುರ ಅಂತ ನಾವು ಸಹಿಸಿಕೊಳ್ಳುತ್ತೇವೆ. ಆದರೆ ಅನಾಫಿಲೀಸನ್ನು ಸಿಫಿಲೀಸ್ ಅಂತ ಬರೆದವರ್ಯಾರು ಎಂಬ ನಿನ್ನ ಮೂತಿ ನೋಡುವ ಒಂದೇ ಉದ್ದೇಶದಿಂದ ನಿನ್ನನ್ನು ಸಂದರ್ಶನಕ್ಕೆ ಆಯ್ಕೆ ಮಾಡಿರಬಹುದೆಂದಳು!! (ಇರಬಹುದಾ?) ಚಂದ್ರಾವತಿ ಬಡ್ಡಡ್ಕ ಚಂದ್ರಾವತಿ ಬಡ್ಡಡ್ಕ ಹಿರಿಯ ಪತ್ರಕರ್ತೆ, ಅಂಕಣಕಾರರು ಹಾಗೂ ವೃತ್ತಿಪರ ಅನುವಾದಕಿ
ಅಂಕಣ ಬರಹ
ಸಾಧಕಿಯರ ಯಶೋಗಾಥೆ
ಕರ್ನಾಟಕದ ಮೊದಲ ಇಂಜಿನಿಯರ
ರಾಜೇಶ್ವರಿ ಚಟರ್ಜಿ (1922-2010
ಅಂಕಣ ಸಂಗಾತಿ
ಹೊತ್ತಿಗೆಯೊಂದಿಗೊಂದಿಷ್ಟುಹೊತ್ತು
ಗೋಕುಲ ನಿರ್ಗಮನ ಗೀತ ರೂಪಕ
ಪುತಿ ನರಸಿಂಹಾಚಾರ್
ಅಂಕಣ ಸಂಗಾತಿ ಪ್ರಸ್ತುತ ಆಚರಣೆ ಅರ್ಥಪೂರ್ಣವಾಗಿರಲಿ ಆಚರಣೆ ಅರ್ಥಪೂರ್ಣವಾಗಿರಲಿ ಇನ್ನೇನು ಬಹುತೇಕ ಈ ಸಲದ ಪ೦ಚವಾಣಿ ತಲುಪಿದ ಒಂದೆರಡು ದಿನಗಳಲ್ಲೆ ನಾಗರ ಪಂಚಮಿ ಬ೦ದೇ ಬಿಡ್ತು , ಈ ಮಾಸದಲ್ಲಿ ಎಲ್ಲಾ ಹೆಣ್ಣುಮಕ್ಕಳು ಅತ್ಯಂತ ಸಡಗರದಿಂದ ಒಂದಾಗಿ ನಾಗರಕಲ್ಲು ಅರಸಿಕೊ೦ಡು ಹೋಗಿ ಅಳ್ಳಿಟ್ಟು, ಎಳ್ಳು ಚಿಗಳಿ ,ತಂಬಿಟ್ಟು , ಸಜ್ಜಿ ರೊಟ್ಟಿ . ಕಡ್ಲೆ ಕಾಳು , ಅಳ್ಳು ಎಲ್ಲವನ್ನೂ ಮಕ್ಕಳು ಮುಟ್ಟದಂತೆ ಶುಧ್ಧಿಯಿಂದ ಮಾಡಿಕೊಂಡು ತಲೆ ಸ್ನಾನ ಮಾಡಿ ಹೊಸ ಸೀರೆ ಉಟ್ಟುಕೊಂಡು ಮಕ್ಕಳೊಂದಿಗೆ ಹೋಗಿ ಆ ಕಲ್ಲಿಗೆ ತಣಿ ಎರೆದು ಪೂಜೆ ಮಾಡಿ ಎಲ್ಲಾ ಸಿಹಿ ಖಾದ್ತಗಳ ನೈವೇದ್ತ ಮಾಡುತ್ತಾರೆ . ನೊತರ ಕೊಬ್ಬರಿ ಬಟ್ಟಲಲ್ಲಿ ಹಾಲು ಹಾಕಿಕೊಂಡು ಆಕಲ್ಲಿ ಎರೆಯುತ್ತಾ …ಅಮ್ಮನ ಪಾಲು , ಅಪ್ಪನ ಪಾಲು , ಗುರುವಿನ ಪಾಲು , ಎಂದು ಇದ್ದವರ , ಇಲ್ಲದವರ ಪಾಲು ಎಲ್ಲರ ಪಲು ಎಂದು ಹಾಕುತ್ತೀರಲ್ಲವೇ ? ಅಲ್ಲಿ ನೋಡಿ ಗೆಳತಿಯರೇ …ಕಲ್ಲು ನೆನೆದು ಕೆಳಗೆ ಹರಿದು , ನೀವು ಎರೆದ ಹಾಲು ಮಣ್ಣಿನ ಪಾಲಾಗುತ್ತಿದೆ . ಹೌದು ತಾನೆ ? ನಿಜ ಹೇಳಿ ನೀವು ಎರೆದ ಹಾಲು ಯಾರ ಪಾಲಾಯಿತೂ ? ಅಲ್ಲಿ ಹಳ್ಳಿಗಳಲ್ಲಿ ಹಾಲಿಲ್ಲದೆ ಕೊಳ್ಳಲಾಗದೆ(ಹಳ್ಳಿಗಳಲ್ಲಿ ಹೈನು ಬಹಳ ಅನ್ನೊದು ಆ ಕಾಲ ಈಗೆಲ್ಲ ತುಂಬ ಕಡಿಮೆ) ಕರಿ (ಕಪ್ಪು) ಚಹ ಕುಡಿಯುವ ಜನರಿದ್ದಾರೆ ಅಲ್ಲಿ ಮಗುವಿಗೆ ಅನ್ನ ಕಲೆಸಲು ಹಾಲಿಲ್ಲದೆ ಕಣ್ಣೀರಿಡುವ ಅಮ್ಮಂದಿರಿದ್ದಾರೆ ,ನಿಮ್ಮ ಊರ ಆಸ್ಪತ್ರ್ರೆಯಲ್ಲೇ ಹಾಲು ಕಾಣದ ರೋಗಿಗಳಿದ್ದಾರೆ, ಅಂತಹದರಲ್ಲಿ ನಾವು ಹೀಗೆ ಈತರ ಹಾಲು ಎರೆಯುವ, ಅಂತಹ ಆಚರಣೆಯ ನೆವದಲ್ಲಿ ಹಾಲು ಮಣ್ಣಿಗೆ ಚೆಲ್ಲುವುದು ಸರಿಯೆ ? ಹೌದು ಇದು ಹಿಂದಿನಿಂದ ಬಂದ ಸಂಪ್ರದಾಯ ಪದ್ದತಿ ಆದರೆ ಇಂದು ನಾವು ವಿಜ್ಞಾನ ಯುಗದಲ್ಲಿದ್ದು ಒಂಚೂರು ವೈಜ್ಞಾನಿವಾಗಿ ಯೋಚಿಸದಿದ್ದರೆ ನಾವು ಮುಂದುವರೆದವರೆAದು ಹೇಳೀಕೊಳ್ಳಲು ನಾಚಿಕೆ ಎನಿಸುವುದಿಲ್ಲವೇ ? ಒಂದೆ ಸಾರಿ ತಿರುಗಿ ನೋಡಿ ಅಲ್ಲಿ ನೀವು ಎರೆದ,ಹರಿದ ಹಾಲು ನೆಕ್ಕಿ ನೀವಿತ್ತ ಆ ರುಚಿಯಾದ ಪೌಷ್ಠಿಕವಾದ ಖಾದ್ಯವನ್ನು ನಾಯಿಗಳು ತಿಂದು ಮತ್ತೆ ಹಾಲು ಹಾಕಲು ಬರುವ ಪೆದ್ದು ಹೆಂಗಸರ ದಾರಿ ನೋಡುತ್ತಿವೆ ಅಲ್ಲವೇ ? ಈಗ ಎನು ಅನಿಸುತ್ತೆ ? ನೀವು ಮಾಡಿದ್ದೆ ಸರಿ ಅಂತಾನ ? ಅಥವಾ ಛೇ! ಅಂತಾನ ? ಹಾಲು ಹಾಕದಿದ್ದರೆ ಏನಾಗುತ್ತೋ ? ಹಾವು ಕಾಡುತ್ತೋ ?, ಕಚ್ಚುತ್ತೋ ? ಅನ್ನೊ, ಭಯ ಹಿಂದಿನಿAದ ಬಂದ ಪದ್ದತಿ ಹೇಗೆ ಬಿಡುವುದು ವರ್ಷಕ್ಕೋಮ್ಮೆ ಹಾಲು ಹಾಕಿದರೆನಾಯಿತು ? ಅನಿಸಿದರೆ ನೀವು ಮೂರ್ತಿಯಾಗದ ಕಲ್ಲು ಅಂತಾಯ್ತು. ಕಲ್ಲ ನಾಗರ ಕಂಡರೆ ಹಾಲನೆರೆ ಎಂಬರಯ್ಯ ದಿಟದ ನಾಗರ ಕಂಡರೆ ಕೊಲ್ಲು ಕೊಲ್ಲೆಂಬರಯ್ಯ….. ಬಸವಣ್ಣನವರು ಆಕಾಲಕ್ಕೆ ಅಂದರೆ ೯೦೦ವರ್ಷಗಳ ಹಿಂದೆಯೇ ಈ ಮೂಢ ನಂಬಿಕೆಯನ್ನು ತಡೆಯಲು ಯತ್ನಿಸಿದರೂ ಇಂದಿಗೂ ಆ ಮೌಢ್ಯತೆಯಿಂದ ಹೊರ ಬಂದಿಲ್ಲ ಎನ್ನುವುದು ವಿಷಾದನೀಯ ಹೌದು ಹಾಲು ನೆಕ್ಕಿ ಎಲ್ಲಾ ನೈವೆದ್ಯ ತಿನ್ನುವ ನಾಯಿಗೆ ಹಾವು ಏನೂ ಮಾಡುವುದಿಲ್ಲ ಯಾಕೆ ? ಹಸಿದವರಿಗೆ ಅನ್ನವಿಕ್ಕಿ ಅವರುಂಡು ತೇಗಿಬಿಟ್ಟ ತೃಪ್ತಿ ನಿಮ್ಮ ಕಾವುದು ಏನು ಕೊಟ್ಟರೆಸಿಕ್ಕಿತು ಆ ಹಾರೈಕೆ ಹೇಳು ಗುರುದೇವ ಹಸಿದವರಿಗೆ ಅನ್ನ ಕೊಡಿ ಬಂದವರಿಗೆ ನೀರು ಕೊಡಿ ಅವರು ತಿಂದು ಕುಡಿದು ತೃಪ್ತಿಗೊಂಡು ಖುಷಿಯಾಗಿ’ ಒಳ್ಳೆಯದಾಗಲಿ ನನ್ನವ್ವ’ ಎನ್ನುವ ಆ ಮನಸು ಅದೇನು ಕೊಟ್ಟರೆ ಸಿಕ್ಕೀತು ಹೇಳಿ…ಆ ಕೊಡುವ ಖುಷಿಗೆ ಸಾಟಿಯೆ ಇಲ್ಲ. ಆ ಧನ್ಯತಾ ಭಾವವೇ ಆರೋಗ್ಯ . ಇದೊಂದೆ ಅಲ್ಲ ನಾವು ಮಾಡುವ ಎಲ್ಲಾ ಆಚರಣೆಗಳೂ ಅರ್ಥಪೂರ್ಣವಾಗಿರಬೇಕು ಮುಂದೆ ಬರುವ ದಸರಾ ಹಬ್ಬ…… ಅವಾಗ ಬಹುತೇಕ ಹೆಣ್ಣು ಮಕ್ಕಳು ನಸುಕಿನಲ್ಲೆ ಎದ್ದು , ಹತ್ತು ದಿನಗಳು ಬನ್ನಿ ಗಿಡಕ್ಕೆ ಪೂಜೆ ಮಡಿ ದಿನಾಲು ಒಂದು ಸಹಿ ಅಡುಗೆ ನೈವೇದ್ಯ ಮಾಡಿ ,ಆ ಗಿಡದ ಕೆಳಗಿಟ್ಟು ನಾಲ್ಕೆöÊದು ಸುತ್ತು ಹಾಕಿ ಏನೋ ಒಂದು ಶಾಂತಿ ಹೊಂದಿದ ಭಾವದಲ್ಲಿ ಬರುತ್ತಾರೆ . ಅವರಿನ್ನು ಮನೆ ಮುಟ್ಟಿರುವುದಿಲ್ಲ ನಾಯಿ ಹಂದಿಗಳು ಆ ಸಿಹಿ ತಿಂದು ಉಚ್ಚೆ ಮಾಡಿ ಮರುದಿನದ ನಸುಕಿಗಾಗಿ ಕಾಯುತ್ತವೆ . ಏನಿದೆಲ್ಲಾ ? ಒಂದು ವಿಚಾರ , ಬನ್ನಿ ಗಿಡದ ಕೆಳಗೆ ಪಾಂಡವರು ತಮ್ಮ ಆಯುಧಗಳನ್ನು ಅಡಗಿಸಿಟಿದ್ದ್ಟರೆಂದು ಪ್ರತೀತಿ , ಅದಕ್ಕೆ ಅದನ್ನು ಪೂಜಿಸಿ ತಮ್ಮ ಆಯುಧಗಳನ್ನು ಇಷ್ಟು ದಿನ ಕಾಯ್ದದಕ್ಕೆ ಕೃತಜ್ಞತೆ ತೋರಿರಬಹುದು . ನಸುಕಿನಲ್ಲಿ ಒಳ್ಳೆ ಶುಧ್ಧ ವಾತಾವರಣದಲ್ಲಿ ಗಿಡ ಸುತ್ತುವದರಿಂದ ಶುಧ್ಧ ಆಮ್ಲಜನಕ ದೊರೆತು ಆರೋಗ್ಯ ಸುದಾರಿಸುವುದು . ಸುತ್ತುವ ನಡಿಗೆಯಿಂದ ವ್ಯಾಯಾಮ ವಾಗುವುದು . ಬೇಗ ಏಳುವ ಅಭ್ಯಾಸವಾಗುವುದು . ಮೌನವಾಗಿ ಬಂದು ಹೋಗುವುದರಿಂದ ಶಕ್ತಿ ಸಂಗ್ರಹವಾಗುವುದು . ಈ ವ್ರತದ ಅನುಕೂಲತೆಗಳು ಇದ್ದಾವು . ಇದು ಹೋಗ್ಲಿ ಬಿಡಿ , ಕೊನೆಯ ದಿನ ಅಂದರೆ ವಿಜಯದಶಮಿಯ ಹತ್ತನೆಯ ದಿನ ಬಹುತೇಕರು ಬನ್ನಿಗಿಡಕ್ಕೆ ಸೀರೆ ಉಡಿಸಿ ಪೂಜಿಸಿ ವ್ರತ ಸಂಪನ್ನಗೊಳಿಸುತ್ತಾರೆ . ಇದೆಂತಹ ಮೌಢ್ಯ ? ಕಳೆದ ವರ್ಷ ಉಡಿಸಿದ ಸೀರೆ ಬಿಸಿಲು ಗಾಳಿ ಮಳೆಗೆ ಸುಟ್ಟು ಸವೆದು ಹರಿದು ಹಾಳಾಗಿದೆ . ಮತ್ತೆ ಈಗ ಹೊಸ ಸೀರೆ . ಮನೆಯಲ್ಲಿ ಅತ್ತೆ ಅಥವಾ ಅಮ್ಮ ಹರಿದ ಸೀರೆ ಕಾಲಿಗೆ ತೊಡರಿ ಎಡವಿದ್ದು ಕಾಣುವುದಿಲ್ಲ , ತಲೆಯ ಮೇಲೆ ಸೆರಗು ಹರಿದು ಬಿಳಿ ತಲೆ ನಗುವುದು ಕಾಣುವುದುಲ್ಲವೇ ? ಅದು ಬಿಡಿ ಎಲ್ಲಾ ಸರಿ ಇದೆ . ಮನೆಗೆ ಹಾಲು ತರುವ ಅಜ್ಜಿ ಯ ಹರಿದ ಸೀರೆ , ಅವಳ ಜೊತೆ ಬರುವ ಆ ಹುಡಿಗಿಯ ಹರಿದ ಅಂಗಿ ಕಾಣುವುದಿಲ್ಲವೇ ? ಅವರಲ್ಲಿ ಒಬ್ಬರಿಗೆ ಆ ಬಟ್ಟಿ ಕೊಟ್ಟರೆ …? ಅನುಕೂಲವಾಗುತ್ತಲ್ಲವಾ ? ಗೆಳತಿಯರೇ ನಾನು ವೇದಾಂತ ಹೇಳುತಿಲ್ಲ ಸತ್ಯ ಅನಾವರಣಗೊಳಿದೆ ಅಷ್ಟೆ , ಬದಲಾಗೋಣ ಗೆಳತಿಯರೇ …ಸರಿ ತಪ್ಪುಗಳ ಪರಾಮರ್ಶಿಸಿ ನಡೆಯೋಣ . ಏನಂತೀರಿ ? ಕಲ್ಲು ದೇವರೂ ದೇವರಲ್ಲ ಮಣ್ಣು ದೇವರು ದೇವರಲ್ಲ ಮರ ದೇವರು ದೇವರಲ್ಲ ….. ತನ್ನ ತಾನರಿದು ತಾನಾರೆಂದು ತಿಳಿದೊಡೆ ತಾನೆ ದೇವ ಅಪ್ರಮಾಣ ಕೂಡಲ ಸಂಗಮದೇವ . ನಿಂಗಮ್ಮ ಭಾವಿಕಟ್ಟಿ . ನಿಂಗಮ್ಮ ಭಾವಿಕಟ್ಟಿ ಅವರು ಪಂಚ ವಾಣಿ ಪತ್ರಿಕೆಯಲ್ಲಿ ಅಂಕಣ ಬರಹಗಾರ್ತಿ. ‘ಕುಶಲೋಪರಿ’ ‘ಹಾರೈಕೆ’ ಅವರ ಕವನ ಸಂಕಲನಗಳು ‘ವಚನ ಸಂಭ್ರಮ ಆಧುನಿಕ ವಚನಗಳು’ ಎಂಬ ಪುಸ್ತಕಗಳನ್ನು ಬರೆದಿದ್ದಾರೆ. ಹೈಕುಗಳು, ಹನಿಗಳನ್ನು ಮನಮುಟ್ಟುವಂತೆ ಕಟ್ಟುವ ಲೇಖಕಿ ಬಾಗಲಕೋಟೆ ಜಿಲ್ಲೆಯ ಹುನಗುಂದದವರು. ಓದು, ಬರಹ, ಪ್ರವಾಸ ಅವರ ಹವ್ಯಾಸಗಳಾಗಿದ್ದು ಅವರಿಗೆ ‘ಕಾವ್ಯಶ್ರೀ’ ‘ರಾಜ್ಯೋತ್ಸವ ಪ್ರಶಸ್ತಿ’ ‘ಆಜೂರ್’ ಪ್ರಶಸ್ತಿಗಳು ಅರಸಿ ಬಂದಿವೆ ಆಕಾಶವಾಣಿಯಲ್ಲಿ ಅವರ ಚಿಂತನ ಸಂದರ್ಶನಗಳು ಮೂಡಿಬಂದಿವೆ.
ಒಂದಲ್ಲ ಎರಡಲ್ಲ-ಸಿನಿಮಾ
ಅಂಕಣ ಸಂಗಾತಿ ಸಿನಿ ಸಂಗಾತಿ ಒಂದಲ್ಲ ಎರಡಲ್ಲ. ಅದೊಂದು ಪುಟ್ಟ ಪೇಟೆ, ಪೇಟೆಯ ಹೊರ ಭಾಗದಲ್ಲಿ ಪುಟ್ಟ ಮನೆ, ಅಲ್ಲೊಬ್ಬ ಪುಟ್ಟ ಹುಡುಗ ಸಮೀರ, ಅವನ ಮುದ್ದಿನ ಹಸು ಬಾನು, ಸಮೀರನೊಂದಿಗೆ ಅವನ ಅಕ್ಕ ತಂದೆ ತಾತ ಎಲ್ಲರೂ ಇದ್ದಾರೆ, ಸಮೀರನ ಜೀವ ಬಾನು, ಬಾನುವೆಂದರೆ ಮನೆಯವರಿಗೆಲ್ಲ ಅಚ್ಚು ಮೆಚ್ಚು, ಸಮೀರನ ಆಟವೆಲ್ಲ ಅವನ ಹಸುವಿನ ಜೊತೆಗೆ, ಒಂದು ದಿನ ಬಾನುವಿನೊಂದಿಗೆ ಕಣ್ಣಾ ಮುಚ್ಚಾಲೆ ಆಡುವಾಗ ಆಕಸ್ಮಿಕವಾಗಿ ಬಾನು ನಿಂತಿದ್ದ ರಿಕ್ಷಾದೊಂದಿಗೆ ಏರಿ ಪೇಟೆ ಸೇರಿಬಿಡುತ್ತದೆ…! ಕಂಗಾಲಾದ ಸಮೀರ ಬಾನುವನ್ನ ಅರಸುತ್ತಾ ಪೇಟೆಗೆ ಬರುತ್ತಾನೆ. ಅಲ್ಲಿ ಅವನ ಪರದಾಟದ ಚಿತ್ರಣವೇ ಈ ಚಿತ್ರ. ಹಾಗೆ ಅವನು ಭೇಟಿಯಾಗುವ ವ್ಯಕ್ತಿಗಳು ಸನ್ನಿವೇಶಗಳು ಒಂದಲ್ಲ ಎರಡಲ್ಲ, ಅಂತೆಯೇ ಈ ಸಿನಿಮಾದ ಹೆಸರು “ಒಂದಲ್ಲ ಎರಡಲ್ಲ” ಚಿತ್ರದ ನಿರ್ದೇಶನ ಸತ್ಯ ಪ್ರಕಾಶ್ ಅವರಿಂದ. ಚಿತ್ರದ ನಾಯಕ ಪುಟ್ಟ ಬಾಲಕ ಸಮೀರ, ಇವನು ಮುಸ್ಲಿಂ ಸಮುದಾಯಕ್ಕೆ ಸೇರಿದವನು, ಅವನು ಭೇಟಿಯಾಗುವ ವ್ಯಕ್ತಿಗಳು ಇತರ ಸಮುದಾಯಗಳಿಗೆ ಸೇರಿದವರು. ಅವರೆಲ್ಲ ಇವನ ನಿಷ್ಕಲ್ಮಶ ಶುದ್ಧ ಮುಗ್ಧ ಮನಸ್ಸಿನ ಮುಂದೆ ತಮ್ಮಲ್ಲಿನ ಸಣ್ಣತನ ಮೋಸ ಕಪಟಗಳನ್ನು ಕಳೆದುಕೊಳ್ಳುತ್ತಾ ಜಾತಿ ಧರ್ಮವನ್ನು ಮೀರಿದ ಮನುಷ್ಯತ್ವಕ್ಕೆ ತಲೆಬಾಗಿ ಸಮೀರನ ಬಾನುವನ್ನು ಹುಡುಕುವ ಕೆಲಸದಲ್ಲಿ ಹೇಗೆ ಜೊತೆಯಾಗುತ್ತಾರೆ ಎಂಬುದು ಚಿತ್ರದ ತಿರುಳು. ಸಮೀರನ ಹುಡುಕಾಟದ ಯಾನದಲ್ಲಿ ಭೇಟಿಯಾಗುವ ವ್ಯಕ್ತಿ ಹುಲಿ, ಅವನಾದರೋ ಆ ಪೇಟೆಯಲ್ಲಿ ನಡೆಯುತ್ತಿರುವ ಚುನಾವಣೆಯ ಒಂದು ಪಕ್ಷದ ಚಿನ್ಹೆಯ ವೇಷಧಾರಿ, ಮುಂದಿನ ನಾಟಕೀಯ ಸನ್ನಿವೇಶದಲ್ಲಿ ಸಮೀರನು ಸಹ ಹಸುವಿನ ವೇಷದಾರಿಯಾಗುತ್ತಾನೆ, ಹುಲಿ ಹಾಗೂ ಹಸುವಿನ ವೇಷದಾರಿಗಳು ಮುಖಾಮುಖಿಯಾಗುತ್ತಾರೆ. ಇಲ್ಲಿ ಹುಲಿ ದಂಪತಿಗಳಿಗೆ ಮಕ್ಕಳಿಲ್ಲ, ಹುಲಿಯನ ಹೆಂಡತಿ ಸಮೀರನಲ್ಲಿ ತನ್ನ ಮಗನನ್ನು ಕಾಣುತ್ತಾಳೆ, ತಾಯಿ ಪ್ರೀತಿಯನ್ನು ತೋರುತ್ತಾಳೆ. ಮತ್ತೊಂದು ಕಡೆ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ “ಡೇವಿಡ್”ಎಂಬ ಪಾತ್ರ ಬರುತ್ತದೆ. ವಯಸ್ಸಾದ ಈ ವ್ಯಕ್ತಿ ತನ್ನ ಮಗನನ್ನು ಅವನು ಏಳು -ಎಂಟು ವರ್ಷದ ಬಾಲಕನಾಗಿದ್ದಾಗ ಕಳೆದುಕೊಂಡಿರುತ್ತಾನೆ, ಕಂಡ ಕಂಡ ಬಾಲಕರನ್ನೆಲ್ಲ ತನ್ನ ಮಗನೆಂದು ಅವನು ಭ್ರಮಿಸುತ್ತಾನೆ.ಯ, ಅವನು ಸಹ ಸಮೀರನನ್ನು ಮಗನೆಂದು ತಿಳಿಯುತ್ತಾನೆ. ತನ್ನ ಹಸು ಬಾನುವಿನ ಹುಡುಕಾಟದಲ್ಲಿ ಸಮೀರ ದೇವಸ್ಥಾನವನ್ನು ಪ್ರವೇಶಿಸುತ್ತಾನೆ, ಅವನನ್ನು ಪ್ರೀತಿಯಿಂದ ಕಾಣುವ ಅಲ್ಲಿನ ಪುರೋಹಿತರು ಅವನಿಗೆ ಅವನ ಹಸು ಸಿಗುವುದೆಂಬ ಭರವಸೆಯನ್ನು ನೀಡಿ ಸಮಾಧಾನ ಮಾಡುತ್ತಾರೆ. ಹೀಗೆ ಹಲವು ಸಣ್ಣ ಸಣ್ಣ ಪಾತ್ರಗಳು ಚಿತ್ರದ ಮುಖ್ಯ ಪಾತ್ರ ಸಮೀರನನ್ನುಮುಖಾಮುಖಿಯಾಗುತ್ತವೆ. ಇಲ್ಲಿ ಕೆಲವು ಪಾತ್ರಗಳು ತಮ್ಮ ಮುಗ್ಧತೆ ಒಳ್ಳೆಯತನಗಳಿಂದ ಅವನಿಗೆ ಜೊತೆಯಾದರೆ ಕೆಲವು ಪಾತ್ರಗಳು ಹಾಗಲ್ಲ. ಸಾಲ ಮಸೂಲಿ ಮಾಡುವ ಯಜಮಾನ, ಸಾಲಕ್ಕೆ ಸಿಕ್ಕ ಆಟೋ ಚಾಲಕ, ಇವರೆಲ್ಲ ಸಮೀರನಿಗೆ ಮೋಸ ಮಾಡಲು ಪ್ರಯತ್ನಿಸುತ್ತಾರೆ. ಆದರೆ ಸಮೀರನ ಮುಗ್ದತೆಗೆ ಅವರು ಕರಗುತ್ತಾರೆ. ಇಷ್ಟು ಒಳ್ಳೆಯತನ, ಒಳ್ಳೆಯದು ಸಾಧ್ಯವೇ ಎಂಬ ಭಾವ ನಮ್ಮಲ್ಲಿ ಮೂಡುತ್ತದೆ, ಹೌದು ಅದು ಇಂದಿನ ಸಮಾಜದ ಅಗತ್ಯವು ಆಗಿದೆ, ಅದು ನಿರ್ದೇಶಕರ ಆಶಯವು ಆಗಿರುವುದರಿಂದ ಚಿತ್ರವು ಜಾತಿ ಧರ್ಮಗಳಿಗಿಂತ ಮನುಷ್ಯ ಧರ್ಮವೇ ಮೇಲೆಂಬುದನ್ನು ಎತ್ತಿ ಹಿಡಿಯುತ್ತದೆ. ಈ ಪ್ರಯತ್ನದಲ್ಲಿ ಕೆಲವೊಂದು ದೃಶ್ಯಗಳು ನಾಟಕೀಯವೆನಿಸುತ್ತದೆ. ಚಿತ್ರವು ಹಾಸ್ಯಭರಿತ ಸನ್ನಿವೇಶಗಳಿಂದ ಕೂಡಿದ್ದು ಬಹಳ ಲವಲವಿಕೆಯಿಂದ ಮೂಡಿದೆ. ಒಂದೆಡೆ ಹಾಸ್ಯ, ವಿಡಂಬನೆ, ಭಾವುಕತೆ ಎಲ್ಲವುಗಳ ಸಮ್ಮಿಲನ ಇಲ್ಲಿದೆ, ಗಂಭೀರ ಸಂದೇಶವನ್ನು ಹೊಂದಿದ್ದರೂ ಚಿತ್ರ ಶುದ್ಧ ಮನರಂಜನೆಯದ್ದಾಗಿದೆ. ಚಿತ್ರದ ಮುಖ್ಯ ಪಾತ್ರ ಸಮೀರನಾಗಿ ಬಾಲ ನಟ ರೋಹಿತ್ ಅತ್ಯುತ್ತಮ ನಟನೆ ನೀಡಿದ್ದಾರೆ, ಚಿತ್ರದಲ್ಲಿ ಹಲವಾರು ಪಾತ್ರಧಾರಿಗಳಿದ್ದಾರೆ, ಎಲವೂ ಹೊಸ ಮುಖಗಳು, ಎಲ್ಲರ ನಟನೆ ಬಹಳ ಸಹಜ. ಕಥೆ, ಚಿತ್ರಕಥೆ ಅಚ್ಚುಕಟ್ಟಾಗಿದೆ, ಚಿತ್ರದಲ್ಲಿ ಸಂಗೀತ ಅತ್ಯುತ್ತಮವಾಗಿದೆ, ನೋಬಿನ್ ಪೌಲ್ ಹಾಗೂ ವಾಸುಕಿ ವೈಭವ್ ಜೊತೆಯಾಗಿ ನೀಡಿರುವ ಸಂಗೀತ ಚೆನ್ನಾಗಿದೆ. ಉಮಾಪತಿಯವರ ನಿರ್ಮಾಣದಲ್ಲಿ ಸತ್ಯಪ್ರಕಾಶ್ ಅವರ ನಿರ್ದೇಶನದಲ್ಲಿ ಈ ಚಿತ್ರ ತಯಾರಾಗಿದ್ದು ಶ್ರೇಷ್ಠ ಚಿತ್ರವೆಂದು ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದೆ. ಇದೊಂದು ಅತ್ಯುತ್ತಮ ಮಕ್ಕಳ ಚಿತ್ರವು ಆಗಿದೆ. ಈ ಚಿತ್ರದ ಅಭಿನಯಕ್ಕಾಗಿ ಮಾಸ್ಟರ್ ರೋಹಿತ್ ಗೆ ಶ್ರೇಷ್ಠ ಬಾಲ ನಟ ಪುರಸ್ಕಾರ ದೊರೆತಿದೆ. ಜಾತಿ ಜಾತಿಗಳ ನಡುವೆ ಧರ್ಮ ಧರ್ಮಗಳ ನಡುವೆ ಈಗ ಎದ್ದಿರುವ ಸಂಘರ್ಷಗಳನ್ನು ನೋಡುವಾಗ ಇಂತಹ ಸಿನಿಮಾಗಳು ಗಾಯಕ್ಕೆ ಮುಲಾಮು ಹಚ್ಚುವಂತೆ ಕಾಣುತ್ತವೆ. ಭರವಸೆಯನ್ನು ಮೂಡಿಸುತ್ತವೆ… ಕುಸುಮಾ ಮಂಜುನಾಥ್ ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ಕುಸುಮಾ ಮಂಜುನಾಥ್ ರವರು ಪ್ರವೃತ್ತಿಯಲ್ಲಿ ಸಾಹಿತ್ಯಾಸಕ್ತಿ ಯನ್ನು ಹೊಂದಿದ್ದಾರೆ. ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರಿಗೆ “ಸಾಧನ ವಿದ್ಯಾ” ಮಾಸ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ನಾಲ್ಕೈದು ವರ್ಷಗಳು ಕೆಲಸ ಮಾಡಿದ ಅನುಭವವಿದೆ. ರೋಟರಿ ಸಹಯೋಗದಲ್ಲಿ ಸಾಕ್ಷರತಾ ಮಿಷನ್ ಕಾರ್ಯಕ್ರಮದಡಿ ಕೂಲಿ ಕಾರ್ಮಿಕರಿಗೆ ಅಕ್ಷರ ಕಲಿಸುವ ಸೇವೆ ಮಾಡಿದ್ದಾರೆ. ಕಥೆ ,ಕವನ, ಲೇಖನ ಬರೆಯುವುದು ಇವರ ಹವ್ಯಾಸ. ಹಲವು ಬ್ಲಾಗ್ ಗಳಲ್ಲಿ ,ನಿಯತ ಕಾಲಿಕೆಗಳಲ್ಲಿ ಇವರ ಲೇಖನ ಪ್ರಕಟವಾಗಿದೆ. ಸಂಗೀತ ಕೇಳುವುದು ,ಪತ್ರಿಕೆ ಓದುವುದು ಇವರ ಇತರೆ ಹವ್ಯಾಸ.
ಒಂದಲ್ಲ ಎರಡಲ್ಲ-ಸಿನಿಮಾ Read Post »





