ಮೂರನೇ ಆಯಾಮ
ಸುಪ್ತಮನದೊಳಗಿನ ಗುಪ್ತತೆಗಳ ಅನಾವರಣ ಸುಪ್ತಲೇಖಕರು- ಡಾ. ಕೆಬಿ ಶ್ರೀಧರಬೆಲೆ- ೨೦೦ ತ್ರೀ ಈಡಿಯೆಟ್ಸ್ ನೋಡಿದ್ದೀರಲ್ಲ? ಅಲ್ಲಿನ ಒಂದು ದೃಶ್ಯ. ಇಂಜಿನಿಯರ್ ಕಾಲೇಜಿನ ರಿಸಲ್ಟ್ ಬಂದಿರುತ್ತದೆ. ಸ್ನೇಹಿತರಾದ ಫರ್ಹಾನ್ ಖಾನ್ ಮತ್ತು ರಾಜು ತಮ್ಮ ತಮ್ಮ ರಿಸಲ್ಟ್ ನೋಡಲು ಅಂಕಪಟ್ಟಿಯ ಕೆಳಗಿನಿಂದ ಮೇಲಕ್ಕೆ ನೋಡುತ್ತಿರುತ್ತಾರೆ. ಅಲ್ಲೆಲ್ಲೋ ಮಧ್ಯದಲ್ಲಿ ಅವರ ಹೆಸರುಗಳು ಕಾಣಿಸುತ್ತವೆ. ತಮ್ಮ ಹೆಸರು ಸಿಕ್ಕ ಖುಷಿಯಲ್ಲಿ ಕುಣಿದು ಕುಪ್ಪಳಿಸುತ್ತಾರೆ. ಆದರೆ ತಮಗಿಂತ ಒಂದಿಷ್ಟು ಮೇಲಿನವರೆಗೆ ನೋಡಿದರೂ ರಾಂಚೋ ನಂಬರ್ ಸಿಕ್ಕುವುದೇ ಇಲ್ಲ. ಗೆಳೆಯರಿಗೆ ಬೇಸರ. ತಮ್ಮದೇ ಜೊತೆ ತಮ್ಮೆಲ್ಲ ಕೀಟಲೆಯಲ್ಲಿದ್ದ ರಾಂಚೋ ಫೇಲ್ ಆದ ಎನ್ನುವುದು. ಆದರೆ ಮತ್ತೊಮ್ಮೆ ನೋಡಿದರೆ ಚತುರ್ನನ್ನೂ ಹಿಮದೆ ಹಾಕಿ ರಾಂಚೋ ಟಾಪರ್ ಆಗಿರುತ್ತಾನೆ. ಲೀಸ್ಟ್ನ ಮೊಟ್ಟ ಮೊದಲಲ್ಲಿ ಅವನ ಹೆಸರಿರುತ್ತದೆ. ಆಗ ಒಂದು ಮಾತು ಬರುತ್ತದೆ. ‘ತಮ್ಮ ಸ್ನೇಹಿತ ಫೇಲ್ ಆದ ಎನ್ನುವುದು ಎಷ್ಟು ಬೇಸರ ಕೊಡುತ್ತದೆಯೋ, ಅದಕ್ಕಿಂತ ಹೆಚ್ಚು ಬೇಸರ ಆತ ಕಾಲೇಜಿಗೇ ಮೊದಲಿಗೆ ಎಂದು ತಿಳಿದಾಗ ಆಗುತ್ತದೆ’ ಎನ್ನುವುದು. ನನಗೆ ಈ ಮಾತು ಪದೆಪದೇ ನೆನಪಾಗುತ್ತದೆ. ನಾವು ಯಾರನ್ನೋ ನಮ್ಮವರು ಎಂದುಕೊಳ್ಳುತ್ತಲೇ ಇರುತ್ತೇವೆ. ಜೀವಕ್ಕಿಂತ ಹೆಚ್ಚು, ಪ್ರಾಣಸ್ನೇಹಿತ ಎನ್ನುವ ಮಾತುಗಳನ್ನು ಆಡಿಕೊಳ್ಳುತ್ತಲೇ ಇರುತ್ತೇವೆ. ಆದರೆ ಎಷ್ಟೇ ಜೀವಕ್ಕೆ ಜೀವ ಎಂದರೂ ಎದೆಯ ಮೂಲೆಯಲ್ಲೊಂದು ಸಣ್ಣ ಅಸೂಯೆ ಇದ್ದೇ ಇರುತ್ತದೆಯೇ? ನಾವು ಎರಡು ಜೀವ ಒಂದು ಪ್ರಾಣ ಎನ್ನುವ ಮಾತುಗಳೆಲ್ಲ ಕಷ್ಟದಲ್ಲಿದ್ದಾಗ ನಿಜವೇ. ಕಷ್ಟಕ್ಕೆ ಹೆಗಲು ಕೊಡುವಾಗ ಹೆಚ್ಚಿನ ಸ್ನೇಹಿತರಿಗೆ ಯಾವ ಬೇಸರವೂ ಆಗುವುದಿಲ್ಲ. ನೋವನ್ನು ತಮ್ಮದೇ ಎಂದು ತಿಳಿದು ಅದನ್ನು ನಿವಾರಿಸಲು ಓಡಾಡುವ ಸ್ನೇಹಿತರಿಗೇನೂ ಕೊರತೆ ಇರುವುದಿಲ್ಲ. ಖುಷಿಯ ಜೊತೆಗೆ ಸಾವಿರಾರು ಗೆಳೆಯರಿರಬಹುದು. ಯಶಸ್ಸಿನ ಜೊತೆಗೆ ಇನ್ನೂ ಬಹಳಷ್ಟು ಸ್ನೇಹಿತರು ಹುಟ್ಟಿಕೊಳ್ಳಬಹುದು. ಆದರೆ ಕೊರತೆಯಿರುವುದು ಯಶಸ್ಸನ್ನು ಅಷ್ಟೇ ದೊಡ್ಡ ಮನಸ್ಸಿನಿಂದ ಒಪ್ಪಿಕೊಳ್ಳುವ ಸ್ನೇಹಿತರದ್ದು. ಡಾ. ಶ್ರೀಧರ ಕೆ.ಬಿಯವರ ಸುಪ್ತ ಕಾದಂಬರಿಯನ್ನು ಓದುವಾಗ ನನಗೆ ಇದೆಲ್ಲ ನೆನಪಾಯ್ತು. ಕೆ. ಬಿ. ಶ್ರೀಧರ ಹೆಸರಾಂತ ವೈದ್ಯರು. ವೈದ್ಯರೇಕೆ ಸಾಹಿತ್ಯಲೋಕದೊಳಗೆ ಕಾಲಿಡಲು ಮನಸ್ಸು ಮಾಡಿದರೋ ಗೊತ್ತಿಲ್ಲ. ಅದರಲ್ಲೂ ಕಾದಂಬರಿಯನ್ನು ಬರೆಯುವ ಹುಮ್ಮಸ್ಸು ಮೂಡಿದ್ದೇಕೆ? ಅವರೇ ಅದಕ್ಕೆ ಉತ್ತರ ಹೇಳಬೇಕು. ‘ಸುಪ್ತ’ ಎನ್ನುವುದು ವೈದ್ಯರೊಬ್ಬರು ಬರೆದಿರುವುದರಿಂದ ಸಹಜವಾಗಿಯೇ ವೈದ್ಯಲೋಕಕ್ಕೆ ಸಂಬಂಧಪಟ್ಟ ಕಾದಂಬರಿ. ಇದು ಬಾಲ್ಯ ಸ್ನೇಹಿತ ಸ್ನೇಹ, ಅಸೂಯೆ, ಅಸಮಧಾನ ಅವರ ಖುಷಿ, ಕುಡಿತದ ಕುರಿತಾಗಿ ಹೇಳುವಂತೆಯೇ ಪ್ರಮುಖವಾಗಿ ಆ ಸ್ನೇಹಿತರಲ್ಲಿ ಒಬ್ಬನ ಕ್ಯಾನ್ಸರ್ನ ಕುರಿತಾಗಿ ಹೇಳುತ್ತ ಹೋಗುತ್ತದೆ. ಕ್ಯಾನ್ಸರ್ನ ಮೂಲಕವಾಗಿಯೇ ಇವರ ಬಾಲ್ಯ, ಯೌವನದ ದಿನಗಳು, ಇವರ ವಿದ್ಯಾಭ್ಯಾಸದ ಕುರಿತಾಗಿ ಪರ್ಯಾವರಣದ ಕ್ರಮದಲ್ಲಿ ವಿಷದಪಡಿಸುತ್ತದೆ. ಇಲ್ಲಿ ಕ್ಯಾನ್ಸರ್ ಪೇಷಂಟ್ ಕೂಡ ಒಬ್ಬ ವೈದ್ಯನೇ. ಕಾದಂಬರಿಕಾರ ಕೂಡ ವೈದ್ಯನೇ ಆಗಿರುವುದರಿಂದ ಕ್ಯಾನ್ಸರ್ಗೆ ಸಂಬಂಧಪಟ್ಟ ಹೆಚ್ಚಿನ ವಿವರಣೆಗಳನ್ನು ಇಲ್ಲಿ ಯಥಾವತ್ತಾಗಿ ದಾಖಲಿಸಲು ಸಾಧ್ಯವಾಗಿದೆ ಎಂದುಕೊಳ್ಳುತ್ತೇನೆ. ಕೆಲವು ದಿನಗಳಿಂದ ಫ್ರೆಂಚ್ ಲೇಖಕರ ಬಗ್ಗೆ ಹಿಂದೊಮ್ಮೆ ನಾನೇ ಬರೆದ ಲೇಖನಗಳನ್ನು ತಿದ್ದಿ ಬರೆಯಲೆಂದು ಮತ್ತೊಮ್ಮೆ ಮಾಹಿತಿ ಕಲೆಹಾಕುತ್ತಿದ್ದೆ. ಗೆಳೆಯ ವಿ. ಆರ್ ಕಾರ್ಪೆಂಟರ್ ತನ್ನ ನವಿಲು ಪತ್ರಿಕೆಗಾಗಿ ಒತ್ತಾಯದಿಂದ ವಿಕ್ಷಿಪ್ತ ಲೇಖಕರು ಎಂಬ ಮಾಲಿಕೆಯನ್ನು ಬರೆಸಿದಾಗ ಬರೆದ ಲೇಖನಗಳು ಅವು. ಅನುಭವಕ್ಕಾಗಿಯೇ ಪಾಪದ ಕೂಪದಲ್ಲಿ ಬಿದ್ದು ಹೊರಳಾಡಿದ ಬಹಳಷ್ಟು ಲೇಖಕರ ಬಗ್ಗೆ ಓದಿದಾಗ ನಿಜಕ್ಕೂ ಅಚ್ಚರಿಯಾಗಿತ್ತು. ಬೋದಿಲೇರ್, ಸೆಂಡಾರ್ಸ್, ಪೌಲ್ ವರ್ಲೆನ್ ಮುಂತಾದವರು ತಮ್ಮ ಬರವಣಿಗೆಗಾಗಿಯೇ ಪಾಪಲೋಕದ ಒಳಹೊಕ್ಕು ಆ ಬದುಕನ್ನು ಅನುಭವಿಸಿದರು ಎಂಬುದೇ ಒಂದು ವಿಶೇಷ. ಒಂದು ಕಾದಂಬರಿಗಾಗಿ ತಮ್ಮನ್ನೇ ತಾವು ನಿಕಷಕ್ಕೊಡ್ಡಿಕೊಳ್ಳುತ್ತಾರೆಯೇ? ಹಾಗೆ ಮಾಡಿದರೆ ಅನುಭವಗಳು ದಟ್ಟವಾಗುತ್ತವೆಯೇ ಎಂಬ ಅನುಮಾನ ಕೂಡ ನನಗೆ ಆ ಸಮಯದಲ್ಲಿತ್ತು. ಆದರೆ ಸುಪ್ತ ಕಾದಂಬರಿಯನ್ನು ಓದಿದಾಗ ಅದು ನಿಜ ಎನ್ನಿಸುತ್ತದೆ. ಒಬ್ಬ ವೈದ್ಯ, ವೈದ್ಯಲೋಕದ ಸವಾಲುಗಳ ಬಗ್ಗೆ ಬರೆಯುವುದಕ್ಕೂ, ಇಂಗ್ಲೀಷ್ ಶಿಕ್ಷಕಿಯಾದ ನಾನು ವೈದ್ಯಲೋಕದ ಕುರಿತು ಬರೆಯುವುದಕ್ಕೂ ಅಜಗಜಾಂತರ ವ್ಯತ್ಯಾಸವಿರಬಹುದು. ಹೀಗಾಗಿಯೇ ಗೆಳತಿ ದೀಪ್ತಿ ಭದ್ರಾವತಿಗೆ ನಾನು ಪದೇಪದೇ ಹೇಳುತ್ತಿರುತ್ತೇನೆ. ಅದೆಷ್ಟು ಸಮೃದ್ಧ ಅನುಭವಗಳು ಆಕೆಗೆ ದಕ್ಕುತ್ತವೆಯೆಂದು. ಇಲ್ಲಿ ಕೂಡ ಅವಿನಾಶ ಮತ್ತು ಗಿರೀಶ ಇಬ್ಬರೂ ಬಾಲ್ಯ ಸ್ನೇಹಿತರು. ಇಲ್ಲಿ ಬರುವ ಸೂರಿ, ಪ್ರವೀಣ ಮುಂತಾದ ಪಾತ್ರಗಳು ಕೂಡ ಇದೇ ಸ್ನೇಹದ ಪರಿಧಿಯೊಳಗೇ ಬರುವಂತಹುದ್ದು. ಆದರೆ ಗಿರೀಶ ಸಿ ಇ ಟಿ ಪರೀಕ್ಷೆಯಲ್ಲಿ ಪ್ರವೀಣ ಮತ್ತು ಅವಿನಾಶನ ಕಾಪಿ ಹೊಡೆದು ಮೆಡಿಕಲ್ ಸೇರಿದ್ರೆ ಅವಿನಾಶನಿಗೆ ಮೆಡಿಕಲ್ ಸಿಗದೇ ಇಂಜಿನಿಯರ್ ಕಾಲೇಜಿಗೆ ಹೋಗಬೇಕಾಗಿತ್ತು. ಅವಿನಾಶ ಮತ್ತು ಪ್ರವೀಣರ ಪೇಪರ್ ನೋಡಿಕೊಂಡು ತಾನು ಬರೆದಿದ್ದರೂ, ‘ನಿನ್ನ ರ್ಯಾಂಕ್ಗೆ ಮೆಡಿಕಲ್ ಸೀಟು ಸಿಕ್ಕೋದು ಡೌಟೇ’ ಎಂದು ಅಣಕಿಸುತ್ತಿದ್ದ ಗಿರೀಶನ ಬಗ್ಗೆ ಒಳಗೊಳಗೇ ಇರುವ ಅಸೂಯೆ, ಅದಕ್ಕಿಂತ ಹೆಚ್ಚಾಗಿ ‘ಅವರೇ ತಮ್ಮ ದೊಡ್ಡಸ್ತಿಕೆ ತೋರಿಸೋದಕ್ಕೋಸ್ಕರ ನೋಡ್ಕೊಂಡು ಬರಿ ಅಂತ ಪೇಪರ್ ತೋರಿಸಿದ್ದರು’ ಎನ್ನುವ ಗಿರೀಶನ ಪಾಪಪ್ರಜ್ಞೆಯನ್ನೂ ಇಲ್ಲಿ ಗಮನಿಸಬೇಕು ಗೆಳೆಯರ ನಡುವಣ ಈ ತಾಕಲಾಟದ ಕಥೆಗಳು ಇಡೀ ಪುಸ್ತಕದೊಳಗೆ ಅಂತರಗಂಗೆಯಂತೆ ಹರಿದಿದೆ. ಕ್ಯಾನ್ಸರ್ ಎಂದರೆ ಸುಲಭವಲ್ಲ. ನಮಗೆ ಕ್ಯಾನ್ಸರ್ ಆಗಿದೆ ಎಂದು ಒಪ್ಪಿಕೊಳ್ಳುವುದಕ್ಕೇ ಬಹಳಷ್ಟು ಸಮಯ ಬೇಕು. ಬಡಪೆಟ್ಟಿಗೆ ಮನಸ್ಸು ಅದನ್ನು ಒಪ್ಪಿಕೊಳ್ಳುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಕ್ಯಾನ್ಸರ್ ಬಂದರೆ ಸತ್ತೇ ಹೋಗುತ್ತಾರೆಂಬ ಸುಳ್ಳು ನಂಬಿಕೆಗಳು, ದೇವರು ಯಾವುದೋ ವಿಷಯಕ್ಕೆ ಶಿಕ್ಷೆ ಕೊಡೋದಕ್ಕೇ ಈ ರೋಗ ಕೊಟ್ಟಿದ್ದಾನೆ ಅಂತ ಅಂದುಕೊಳ್ಳುವ ಮೂಢನಂಬಿಕೆಗಳಿಂದಾಗಿ ಕ್ಯಾನ್ಸರ್ ರೋಗಿ ಎಂದು ಕರೆಯಿಸಿಕೊಳ್ಳಲು ಯಾರೂ ಇಷ್ಟ ಪಡುವುದೇ ಇಲ್ಲ. ಅದಕ್ಕಿಂತ ಹೆಚ್ಚಾಗಿ ಲಕ್ಷಣಗಳು ಕಾಣಿಸಿದರೂ ಅದಲ್ಲ ಎಂದು ತಮ್ಮನ್ನು ತಾವು ನಂಬಿಸಿಕೊಳ್ಳುವುದೇ ಹೆಚ್ಚು ಎಂಬ ಜನರ ಮನಸ್ಥಿತಿಗೆ ಈ ಕಾದಂಬರಿ ಕನ್ನಡಿ ಹಿಡಿದಿದೆ. ಅದು ಅಗಷ್ಟ್ನ ಸಮಯ. ಅಮ್ಮ ಅಪ್ಪ ಎರಡು ದಿನಗಳ ಮಟ್ಟಿಗೆ ನಮ್ಮ ಮನೆಗೆ ಬಂದಿದ್ದರು. ‘ಇಲ್ನೋಡು ಪಟ್ಟಿ. ಏನೋ ಗಂಟಿದೆ.’ ಅಮ್ಮ ಒಂದು ದಿನ ತನ್ನ ಎದೆಯ ಮೇಲಾದ ಚಿಕ್ಕ ಕಡಲೇ ಕಾಳಿನಷ್ಟು ಗಾತ್ರದ ಗಂಟನ್ನು ಮುಟ್ಟಿಸಿದ್ದರು. ನನ್ನ ಎದೆ ಧಸಕ್ಕೆಂದಿತ್ತು. ‘ಯಾವಾಗ ಆಯ್ತು ಇದು?’ ಗಡಬಡಿಸಿ ಕೇಳಿದ್ದೆ. ‘ಎರಡು ಮೂರು ತಿಂಗಳಾಗಿರಬಹುದು’ ಅಮ್ಮ ಹೇಳಿದ್ದರು. ‘ಆಗಲೇ ಹೇಳೋದಲ್ವಾ? ಇಷ್ಟು ದಿನ ಯಾಕೆ ತಡಮಾಡಿದೆ?’ ನಾನು ಮತ್ತಿಷ್ಟು ಕಂಗಾಲಾದಂತೆ ಕೇಳಿದ್ದೆ. ‘ಏನಾಗಲ್ಲ ಬಿಡು.’ ಅಮ್ಮ ಹೇಳಿದ ಸಮಾಧಾನ ನನಗೋ ಸ್ವತಃ ಅವರಿಗೋ ಅರ್ಥವಾಗಿರಲಿಲ್ಲ. ಮಾರನೇ ದಿನವೇ ಎಲ್ಲ ಅನಾರೋಗ್ಯಕ್ಕೂ ಓಡುವ, ಕುಟುಂಬದವರೇ ಆದ ಕುಮಟಾದ ಪ್ರಸಿದ್ಧ ವೈದ್ಯರಾದ ವಿ ಆರ್ ನಾಯಕರ ಬಳಿ ಕರೆದೊಯ್ದೆ. ಬಯಾಪ್ಸಿಯ ರಿಪೋರ್ಟ್ ತಿಳಿಯಲು ಒಂದು ವಾರ- ಹತ್ತು ದಿನಗಳ ಸಮಯ ಬೇಕಿತ್ತು. ಅಷ್ಟರಲ್ಲಿ ನನಗೆ ಸುಮಾರು ೧೫೦ಕಿಮಿ ದೂರದ ಊರಲ್ಲಿ ತರಬೇತಿ ಪ್ರಾರಂಭವಾಗಿತ್ತು. ಅದು ಸಂಪನ್ಮೂಲ ವ್ಯಕ್ತಿಗಳಿಗೆ ನೀಡುವ ತರಬೇತಿಯಾದ್ದರಿಂದ ಮತ್ತು ಪುನಃ ನಾವು ಬಂದು ನಮ್ಮ ಜಿಲ್ಲೆಯಲ್ಲಿ ತರಬೇತಿ ನಡೆಸಬೇಕಾದ್ದರಿಂದ ಹೆಚ್ಚಿನ ಒತ್ತಡವಿತ್ತು. ಹೀಗಾಗಿ ಅಪ್ಪ ಅಮ್ಮ ತಾವೇ ಹೋಗಿ ರಿಪೋರ್ಟ್ ತರುವುದಾಗಿ ಹೇಳಿದ್ದರು. ನನಗೋ ಬೆಳಗಿನಿಂದ ಅಂಡು ಸುಟ್ಟ ಬೆಕ್ಕಿನ ಒದ್ದಾಟ. ಅದೇ ಸಮಯಕ್ಕೆ ಅಪ್ಪ ಫೋನ್ ಮಾಡಿ, ‘ಡಾಕ್ಟರ್ ನಮ್ಮ ಬಳಿ ಏನೂ ಹೇಳಲಿಲ್ಲ, ನಿನಗೇ ಫೋನ್ ಮಾಡಲು ಹೇಳಿದ್ದಾರೆ’ ಎಂದಿದ್ದರು. ಅವರು ಹಾಗೆಂದದ್ದೇ ನನಗೆ ಅರ್ಥವಾಗಿತ್ತು. ಆದರೂ ಮಾತನಾಡಲೇ ಬೇಕಲ್ಲ. ಡಾ. ವಿ ಆರ್ ನಾಯಕರಿಗೆ ಫೋನಾಯಿಸಿದ್ದೆ ಹೆದರುತ್ತಲೇ. ಯಾಕೋ ಸ್ವಲ್ಪ ಅನುಮಾನ ಅನ್ನಸ್ತಿದೆ. ಡಾಕ್ಟರ್ ಹೇಳಿದಾಗ ಜಂಘಾಬಲವೇ ಅಡಗಿಹೋದಂತೆ. ಏನಾಯ್ತು? ಕ್ಲೀಯರಾಗಿ ಹೇಳಿಬಿಡು. ನಾನು ಡಾಕ್ಟರ್ನ್ನು ಒತ್ತಾಯಿಸಿದ್ದೆ. ಈಗ ಮೊದಲನೇ ಸ್ಟೇಜ್ಗೆ ಹೋಗ್ತಿದೆ. ತಕ್ಷಣ ಬೆಂಗಳೂರಿಗೆ ಹೊರಟು ಬಿಡಿ. ಉಲ್ಲಾಸನಿಗೆ ಫೋನ್ ಮಾಡಲು ಹೇಳು. ಎಂದಿದ್ದರು. ಕಣ್ಣಲ್ಲಿ ಸುರಿಯಬೇಕಾಗಿದ್ದ ನೀರನ್ನು ಕಣ್ಣಲ್ಲೇ ಇಂಗಿಸುತ್ತ ಅಣ್ಣ ಉಲ್ಲಾಸನಿಗೆ ಫೋನ್ ಮಾಡಿದ್ದೆ. ಅಪ್ಪ ಅಮ್ಮನನ್ನು ತಕ್ಷಣ ಬರಲು ಹೇಳಿ ಮಾರನೇ ದಿನವೇ ಇಬ್ಬರನ್ನೂ ಅಣ್ಣನ ಮನೆಗೆ ಕಳುಹಿಸಿದೆ. ಅಮ್ಮನಿಗೆ ಹೇಳಬಾರದು ಎಂದುಕೊಂಡರೂ ನನ್ನ ಗಡಿಬಿಡಿಗೆ ಅಮ್ಮನಿಗೆ ಅರ್ಥವಾಗಿತ್ತು. ಆದರೂ ಕಿದ್ವಾಯಿಯಲ್ಲಿ ತೋರಿಸುವವರೆಗೂ ಅದಲ್ಲ, ಹಾಗೇನೂ ಆಗಿರುವುದಿಲ್ಲ ಎಂಬ ನಂಬಿಕೆ. ಆದರೆ ರಿಪೋರ್ಟ್ ಬಂದಾಗ ನಾವು ಬೇಡಿಕೊಂಡಂತೇನು ಆಗಿರಲಿಲ್ಲ. ಆದರೆ ಸಮಾಧಾನವೆಂದರೆ ಮೊದಲ ಸ್ಟೇಜ್ಗೆ ಎಂಟರ್ ಆಗುವುದರಲ್ಲಿತ್ತು. ಈ ಕಾದಂಬರಿಯಲ್ಲೂ ಹೀಗೇ. ಗಿರೀಶ ತನ್ನ ಕಣ್ಣಿನ ಕೆಳಗಾದ ಗುಳ್ಳೆಯನ್ನು ಏನೂ ಅಲ್ಲವೆಂದು ನಿರ್ಲಕ್ಷ ಮಾಡಿದ್ದ. ಮೂರನೇ ಸ್ಟೇಜಿಗೆ ಬರುವವರೆಗೂ, ಸ್ವತಹ ತಾನೇ ವೈದ್ಯಕೀಯ ವಿದ್ಯಾರ್ಥಿಯಾಗಿದ್ದಾಗಲೂ. ಇಲ್ಲಿ ಬರುವ ವೈದ್ಯಕೀಯ ವಿವರಣೆಗಳು ಎಷ್ಟು ಆಸಕ್ತಿ ಹುಟ್ಟಿಸುತ್ತವೆಯೋ ಅಷ್ಟೇ ಆಸಕ್ತಿಯನ್ನು ಇಲ್ಲಿನ ಸ್ನೇಹಿತರ ಒಡನಾಟವೂ ಹುಟ್ಟಿಸುತ್ತದೆ. ಗೆಳೆಯರ ನಡುವಣ ಅಸೂಯೆ, ಪ್ರೀತಿ, ಪರಸ್ಪರ ಸಹಾಯ ಮಾಡುವ ಮನಸ್ಸಿದ್ದಾಗಲೂ ಕಾಡುವ ಅಪನಂಬಿಕೆಗಳನ್ನು ತುಂಬಾ ಚಂದವಾಗಿ ನಿರೂಪಿಸಿದ್ದಾರೆ. ಬಾಲ್ಯದಲ್ಲಿ ಎಂದೋ ಮಾಡಿದ ಅವಮಾನ ಧುತ್ತನೆ ಎದುರು ನಿಂತು ಸ್ನೇಹದ ನಡುವೆ ಕಟ್ಟಿಬಿಡುವ ಗೋಡೆಯ ಕುರಿತಾಗಿ ಹೇಳಿದ್ದಾರೆ. ಗಿರೀಶನಿಗೆ ಕ್ಯಾನ್ಸರ್ ಆದದ್ದರ ಕುರಿತು ಬೇಸರಿಸಿಕೊಳ್ಳುವ ಅವಿನಾಶನಿಗೂ ಆತ ಹಿಂದೆ ಇವನ ದೇಹಾಕೃತಿಯ ಕುರಿತು ಆಡಿಕೊಂಡಿದ್ದ ಮಾತು ನಿದ್ದೆಯ ಕನವರಿಕೆಯಾಗಿಯೂ ಆಚೆ ಬರುತ್ತದೆ. ಇವೆಲ್ಲದರ ನಡುವೆ ಇಂಜಿನಿಯರಿಂಗ್ ಹಾಗೂ ಮೆಡಿಕಲ್ ಓದುವ ಯುವ ಮನಸ್ಸುಗಳ ತಾಕಲಾಟ, ತಿಕ್ಕಲುಗಳು, ಸಣ್ಣತನದ ಜೊತೆಜೊತೆಗೇ ಸ್ನೇಹವನ್ನು ಬಿಟ್ಟುಕೊಡಲಾಗದ ಆತ್ಮೀಯತೆ ಮನಸ್ಸು ತಟ್ಟುವಂತಿದೆ. ತನ್ನ ಕಿಮೋ ಮಾಡುವಾಗ ಪೂರ್ತಿಯಾಗಿ ತನ್ನದೇ ರೂಮಿನಲ್ಲಿ ಇಟ್ಟುಕೊಂಡ ಅವಿನಾಶನಿಗೂ ಗಿರೀಶ ಕೊನೆಗೆ ಕೆಟ್ಟದಾಗಿಯೆ ಮಾತನಾಡುತ್ತಾನೆ. ‘ಡಿಕ್ಟೇಟರ್ ತರಹ ಮಾಡ್ತಾನೆ. ಅದು ಮುಟ್ಟಬೇಡ, ಇದು ಮುಟ್ಟಬೇಡ ಅಂತಾನೆ. ಅವನು ಟಿ.ವಿ ಹಾಕಿದಾಗಲೇ ನೋಡಬೇಕು.’ ಎಂಬಂತಹ ಮಾತುಗಳು ಅವಿನಾಶನ ಕಿವಿಗೂ ತಲುಪುತ್ತದೆ. ಅವಿನಾಶನ ಕೂದಲಿಲ್ಲದ ತಲೆಯ ಕುರಿತೂ ತಮಾಷೆ ಮಾಡುತ್ತ ಅಪಹಾಸ್ಯ ಮಾಡುವ ಗಿರೀಶ ಸತ್ತ ದಿನವೇ ಅವಿನಾಶನ ಮದುವೆ. ಆತನ ಕೊನೆಯ ದರ್ಶನವನ್ನೂ ಮಾಡಲಾಗದಂತಹ ಪರಿಸ್ಥಿತಿ. ಒಂದು ಖುಷಿಯ ಬದುಕಿನ ಪ್ರಾರಂಭದೊಂದಿಗೆ ಜೀವನವನ್ನು ತೀರಾ ಹಗುರವಾಗಿ ಪರಿಗಣಿಸಿ ತಾನೆ ತನ್ನ ಕೈಯ್ಯಾರೆ ಹಾಳು ಮಾಡಿಕೊಂಡವನ ಜೀವನ ಮುಗಿಯುವುದು ನಿಜಕ್ಕೂ ವಿಪರ್ಯಾಸ. ಕಾದಂಬರಿ ಕೇವಲ ಯುವ ಮನಸುಗಳ ಅನಾವರಣ, ವೈದ್ಯಕೀಯ ವಿಷಯಗಳನ್ನಷ್ಟೇ ಹೇಳುವುದಿಲ್ಲ. ಅದೊಂದು ಮನೋವೈಜ್ಞಾನಿಕ ಕಥೆಯಾಗಿಯೂ ನಮ್ಮೆದುರು ತೆರೆದುಕೊಳ್ಳುತ್ತದೆ. ಅವಿನಾಶನ ತಂದೆಗೆ ಪಾರ್ಶ್ವವಾಯುವಾದಾಗಿನ ಘಟನೆಗಳನ್ನು ಆತ ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಾನೆ. ಆ ಕಠಿಣ ಸಮಯದಲ್ಲಿ ಯಾರೂ ಸಹಾಯಕ್ಕೆ ಬರದೇ ಅನುಭವಿಸಿದ ಯಾತನೆ ಮತ್ತೆ ಮತ್ತೆ ಅವಿನಾಶನ ಕಣ್ಣೆದುರಿಗೆ ಹಾದು ಹೋಗುತ್ತದೆ. ಚಿಕ್ಕವನಿರುವಾಗ ಮಗ ಹಾದಿ ತಪ್ಪಬಾರದೆಂದು ಅವಿನಾಶನ ತಂದೆ ತೀರಾ ಕಠಿಣವಾಗಿ ವರ್ತಿಸುತ್ತಿದ್ದರು. ಒಮ್ಮೆ ಅವಿನಾಶನ ಸ್ನೇಹಿತರೆಲ್ಲ ಶಾಲೆಗೆ ಚಕ್ಕರ್ ಹಾಕಿ ಸುತ್ತಾಡಲು ಹೋಗಿದ್ದರು. ಅವಿನಾಶನೂ ಅದೇ ಗುಂಪಿನಲ್ಲಿರುವ ಹುಡುಗನಾದ್ದರಿಂದ ಅವನು ಹೋಗದಿದ್ದರೂ ಅವನೂ ಮಕ್ಕಳ ಜೊತೆ ಶಾಲೆಗೆ ಚಕ್ಕರ್ ಹಾಕಿ ಸುತ್ತಾಡಲು ಹೋಗಿದ್ದಾನೆಂದು ಅನುಮಾನಿಸಿ ಶಿಕ್ಷೆ ನೀಡಿದ್ದರು. ತಾನು ಚಿಕ್ಕೋನು ಎಂದೇ ತನ್ನನ್ನು ಹೀಗೆ ನಿಯಂತ್ರಣದಲ್ಲಿಡುತ್ತಾರೆ ಎಂದು ಭಾವಿಸಿದ್ದ ಅವಿನಾಶ ತಾನು ದೊಡ್ಡವನಾದ ಮೇಲೆ ಅಪ್ಪನನ್ನು ಕಂಟ್ರೋಲ್ ಮಾಡ್ತೇನೆ ಎನ್ನುವ ಮಾತು ಮತ್ತು ಅಪ್ಪನಿಗೆ ಪಾರ್ಶ್ವವಾಯುವಾಗಿ ಅವರು ಪೂರ್ತಿಯಾಗಿ ಇನ್ನೊಬ್ಬರ ಮೇಲೆ ಅವಲಂಭಿಸುವಂತಾದಾಗ ತಾನೀಗ ಅವರ ಮೇಲೆ ರೇಗಾಡಬಹುದು ಎಂದು ಯೋಚಿಸಿ ನಂತರ ತನ್ನ ಯೋಚನೆಗೆ ತಾನೇ ಹೇಸಿ ಅಪ್ಪನನ್ನು ಕಣ್ಣ ರೆಪ್ಪೆಯಂತೆ ನೋಡಿಕೊಂಡಿದ್ದ. ಹೀಗಾಗಿ







