ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ನಾಗರೀಕತೆಯನ್ನು ಆರಂಭಿಸಿದ ಮಿತ್ರರು

ನಾಗರೀಕತೆಯನ್ನು ಆರಂಭಿಸಿದ ಮಿತ್ರರು

ಅಂಕಣ ಬರಹ-01 ಶಾಂತಿ ವಾಸು ರೇಡಿಯೋ ಸಾಮ್ರಾಜ್ಯ ಸುಮಾರು ಎಪ್ಪತ್ತು ವರ್ಷಗಳ ಹಿಂದೆ ಬೆಂಗಳೂರು ಎಂಬುದು ಬಹು ನೆಮ್ಮದಿಯ ತಾಣವಾಗಿತ್ತು. ಕರ್ನಾಟಕದ ಬೇರೆ ಬೇರೆ ಹಳ್ಳಿಗಳು, ದೇಶದ ನಾನಾ ರಾಜ್ಯಗಳಿಂದ ಉದ್ಯೋಗ, ಜೀವನವನ್ನರಸಿ ಬಂದವರಿಗೆ ಬದುಕು ಸೃಷ್ಟಿಸುತ್ತಾ, ವಿವಿಧ ಸಂಸ್ಕೃತಿಯ ಜೊತೆಗೆ ಎಲೆಕ್ಟ್ರಿಕಲ್ಸ್ ಹಾಗೂ ಎಲೆಕ್ಟ್ರಾನಿಕ್ಸ್ ಎಂಬ ಆಧುನಿಕತೆಯನ್ನು ಅಳವಡಿಸಿಕೊಳ್ಳುತ್ತಿದ್ದ ಬೆಂಗಳೂರಿನಲ್ಲಿ, ಬೆಳಕಿನ ಮೂಲವಾಗಿ ಪರಿಚಯವಾದ ಮನೆಗಳ ಬಲ್ಬುಗಳು, ಬೀದಿ ದೀಪಗಳು, ಸೈಕಲ್ಲಿಗೆ ಡೈನಾಮ ಲೈಟ್, (ಸೈಕಲ್ಲು ತುಳಿಯುವಾಗ ಪುಟ್ಟ ಬಲ್ಬ್ ಹೊತ್ತಿಕೊಳ್ಳುತ್ತಿತ್ತು.) ಈ ಡೈನಾಮ ಲೈಟುಗಳು ಬರುವ ಮೊದಲು ಬೆಳಕಿನ ಉದ್ದೇಶಕ್ಕಾಗಿ ದೀಪ ಆರಿಹೋಗದಿರಲು ಸೀಮೆಎಣ್ಣೆ ಜೊತೆಗೆ ಎರಡು ಮೂರು ತರಹದ ಎಣ್ಣೆಯನ್ನು ಮಿಶ್ರ ಗೊಳಿಸಿ, ಹಸಿರು ಹಾಗೂ ಕೆಂಪು ಗಾಜಿನ ವಿಭಜಕಗಳಿದ್ದ  ಸಣ್ಣ ಬಡ್ಡಿ ದೀಪದಲ್ಲಿ ತುಂಬಿಸಿ, ರಾತ್ರಿ ಹೊತ್ತು ರಸ್ತೆಗಳಲ್ಲಿ ದೀಪ ಉರಿಸಿಕೊಂಡು ಹೋಗುತ್ತಿದ್ದುದನ್ನು ಹಾಗೂ ಈ ವ್ಯವಸ್ಥೆ ಆಗಿನ ಕಾಲಕ್ಕೆ ಕಡ್ಡಾಯವಾಗಿತ್ತು ಎಂಬುದನ್ನು ಹಿರಿಯರು ಈಗಲೂ ನೆನಪಿಸಿಕೊಳ್ಳುತ್ತಾರೆ. ಇದು ಈ ಶೀರ್ಷಿಕೆಗೆ ಅನ್ವಯವಾಗದಿದ್ದರೂ, ನಮ್ಮಂಥ ಎಷ್ಟೋ ಜನರಿಗೆ ಇದು ಹೊಸ ವಿಷಯವಾದ್ದರಿಂದ ಹೇಳುತ್ತಿದ್ದೇನೆ ಅಷ್ಟೇ. 70ರ ದಶಕದಲ್ಲಿ ಮಧ್ಯಮ ವರ್ಗದವರಿಗೆ ಸ್ಕೂಟರು, ಕ್ಯಾಮೆರಾಗಳು, ಲೈಟರಿನಲ್ಲಿ ಉರಿಯುವ ಗ್ಯಾಸ್ ಸ್ಟವುಗಳು ಕೈಗೆಟುವ ಹಾಗಾದುವಲ್ಲದೆ,  ಎಲೆಕ್ಟ್ರಾನಿಕ್ ಹಾಗೂ ಎಲೆಕ್ಟ್ರಿಕಲ್ಲಿನ ವಸ್ತುಗಳಾದ ಟ್ಯೂಬ್ ಲೈಟು, ಜನರೇಟರ್, ಆಂಟೆನಾ ಇದ್ದ ಟ್ರಾನ್ಸಿಸ್ಟರ್, ಎಲೆಕ್ಟ್ರಿಕ್ ಇಸ್ತ್ರಿಪೆಟ್ಟಿಗೆ, ಮಿಕ್ಸಿ, ನೀರು ಕಾಯಿಸುವ ಕಾಯಿಲ್, ಗೀಸರ್, ಕ್ಯಾಸೆಟ್ಟುಗಳಲ್ಲಿ ಹಾಡು ಕೇಳಬಹುದಾದ ಸ್ಟೀರಿಯೋ, , ಗ್ರಾಮಾಫೋನ್, ಕಾರ್ಯಕ್ರಮ ಹಾಗೂ ಸಮಾರಂಭದಲ್ಲಿ ಎತ್ತರದ ಕಂಬ, ಮರಗಳು, ಕಟ್ಟಡಗಳ ಮೇಲೆ ಕಟ್ಟುವ ಸ್ಪೀಕರುಗಳು, ನೀರಿನ ಮೋಟರು, ಟೇಬಲ್ ಫ್ಯಾನುಗಳು, ಸೀಲಿಂಗ್ ಫ್ಯಾನುಗಳು, ಗ್ರೈಂಡರ್, ಮನೆಯ ಮೇಲೆ ಆಂಟೆನಾ ಕಟ್ಟಬೇಕಿದ್ದ ಟೆಲಿವಿಷನ್, ಆಂಟೆನಾ ಇದ್ದ ಫೋನು, ಮೈಕುಗಳು, ಹೀಗೆ ಒಂದೊಂದಾಗಿ ಪರಿಚಯವಾಗುತ್ತಾ 20 ರೂಪಾಯಿಗೆ ಒಂದು ಆಟೋಮ್ಯಾಟಿಕ್ ಕೈಗಡಿಯಾರ ಎಂಬುದಂತೂ ಆಗಿನ  ಒಂದು ದೊಡ್ಡ ಕ್ರಾಂತಿಕಾರಿ ಬೆಳವಣಿಗೆಯಾಗಿ ಹೋಯಿತು. ಮೇಲೆ ಹೇಳಿದ ವಿಷಯವು, ಬೆಂಗಳೂರಿನ ಜನಸಾಮಾನ್ಯರು 70ರ ದಶಕದಲ್ಲಿ, ಹಲವಾರು ಹೊಸತುಗಳನ್ನು ಹಂತಹಂತವಾಗಿ ಅಳವಡಿಸಿಕೊಳ್ಳುತ್ತಾ  ಜೀವನಶೈಲಿಯನ್ನು  ಉನ್ನತವಾಗಿಸಿಕೊಂಡು, ಬೆಳವಣಿಗೆಗೆ ಒಗ್ಗಿಕೊಂಡ ಸಂಕ್ಷಿಪ್ತ ಪಕ್ಷಿನೋಟಕ್ಕೆ ಸಾಕ್ಷಿಯಾದರೆ, ಅದೇ ದಶಕಕ್ಕೆ ಎಂಟು ಅಥವಾ ಹತ್ತು ವರ್ಷದ ಮಕ್ಕಳಾಗಿದ್ದವರಿಗೆ ಅಥವಾ ಅದಕ್ಕೂ ಹೆಚ್ಚಿನ ವಯಸ್ಸಾದವರಿಗೆ ರೇಡಿಯೋದಲ್ಲಿ ಬಿತ್ತರವಾಗುತ್ತಿದ್ದ ಜಾಹೀರಾತು ಎಂದಾಕ್ಷಣ ಇಂದಿಗೂ, ಎಂದಿಗೂ ನೆನಪಾಗುವುದು ಬಿನಾಕ ಹಲ್ಲುಪುಡಿ, ಗೋಪಾಲ್ ಹಲ್ಲುಪುಡಿ, ಕೋಲ್ಗೇಟ್ ಹಲ್ಲುಪುಡಿ, ವೀಕೋ ವಜ್ರದಂತಿ, ಲೈಫಬಾಯ್ ಸೋಪು ಎನ್ನುವುದು ಆಗಾಗ ಮೇಲುಕುಹಾಕುವ ವಿಚಾರ. ಆಗೆಲ್ಲ ಸುದ್ದಿ ಹಾಗೂ ಜಾಹೀರಾತಿನ ಮಾಧ್ಯಮವಾಗಿ ಬಾವುಟಗಳು, ಪೋಸ್ಟ್ ಕಾರ್ಡುಗಳು, ಟೆಲಿಗ್ರಾಂ ಹಾಗೂ ಪತ್ರಿಕೆಗಳು ಮಾತ್ರ ಪ್ರಚಲಿತದಲ್ಲಿದ್ದು, ಏನೇ ಸುದ್ದಿ ಇದ್ದರೂ ಮಾರನೇ ದಿನವೋ ಅಥವಾ ಎಂದಿಗೂ ತಿಳಿಯುತ್ತಿತ್ತು. ಎಷ್ಟೋ ವಿಷಯಗಳು ಕೆಲವೊಮ್ಮೆ ತಿಳಿಯುತ್ತಲೇ ಇರಲಿಲ್ಲವೆಂಬುದು ಸಾರ್ವಕಾಲಿಕ ವಿಪರ್ಯಾಸವೇ ಹೌದು. ಟೆಲಿಗ್ರಾಂ ಎಂದರೆ ಅಳಿಸುವುದಕ್ಕೇ ಬರುವುದು ಎನ್ನುವುದು ಆಗಿನ ಜನರ ನಂಬಿಕೆಯಾಗಿತ್ತು. ಹೀಗಿರುವಾಗ ಕಡಿಮೆ ವಿದ್ಯುತ್ತನ್ನು ಬಳಸಿ, ಆಗಿಂದಾಗ್ಗೆ ಸುದ್ದಿ ತಿಳಿದುಕೊಳ್ಳವ ಹಾಗೂ ಜನರ ಮನರಂಜನೆಗಾಗಿ ಬಂದ ಮೊದಲ ಹೆಜ್ಜೆ ಗುರುತಾದ ರೇಡಿಯೋವನ್ನು ಶ್ರೀಸಾಮಾನ್ಯರು ಸಂತಸದಿಂದಲೇ ಸ್ವಾಗತಿಸಿದ್ದರು. ಕರ್ನಾಟಕದ ಜನಸಾಮಾನ್ಯರಿಗೆ ಹಿಂದಿ ಭಾಷೆಯ ಪರಿಚಯ ಮಾತ್ರ ರೇಡಿಯೋ ಬಂದ ನಂತರವೇ ಆದದ್ದು ಸುಳ್ಳಲ್ಲ. ಹಾಗಾಗಿಯೇ 1940 ರಿಂದ 1980 ರವರೆಗಿನ ಕಾಲಘಟ್ಟವನ್ನು ಹಿಂದಿ ಹಾಡುಗಳ “ಸುವರ್ಣ ಯುಗ” ಎಂದು ಕರೆಯಬಹುದು. “ಮರ್ಫಿ” ಸಂಸ್ಥೆಯ ರೇಡಿಯೋಗಳು ಆಗಿನ ಕಾಲದ ಹೆಮ್ಮೆಯ ಉತ್ಪನ್ನವಾಗಿತ್ತು. ಶೆಲ್ಲಿನ ಸಹಾಯದಿಂದ ಚಲಾಯಿಸಬಹುದಾಗಿದ್ದ ಟ್ರಾನ್ಸಿಸ್ಟರುಗಳಿಗೆ ವಿದ್ಯುತ್ ಬೇಕಿರಲಿಲ್ಲವೆಂಬುದು ಆ ದಿನಗಳ ವಿಶೇಷ. ಪೆಟ್ಟಿಗೆ ಗಾತ್ರದ ರೇಡಿಯೋನಲ್ಲಿ ಮುಂದೆ ಇದ್ದ ಬ್ಯಾಂಡಿನ ಸಹಾಯದಿಂದ ಅತ್ತಿತ್ತ ಓಡಾಡುತ್ತಿದ್ದ ಮುಳ್ಳನ್ನು ನಿರ್ದಿಷ್ಟ ಸಂಖ್ಯೆಯ ಮೇಲೆ ನಿಲ್ಲಿಸಿದರೆ  ಹಾಡುಗಳು, ವಾರ್ತೆಗಳು ಹಾಗೂ ಕ್ರಿಕೆಟ್ಟಿನ ಕಾಮೆಂಟರಿಯನ್ನು ಕೇಳಬಹುದಿತ್ತು. ತರಂಗಾಂತರದ ಮೂಲಕ ಪ್ರಸಾರವಾಗುತ್ತಿದ್ದ ಕಾರ್ಯಕ್ರಮ ಹಲವಾರು ಅಡಚನೆಗಳಿಂದ ಕೂಡಿರುತ್ತಿದ್ದು, ಮಧ್ಯೆ ಅಲೆಯ ಶಬ್ದ ಕೇಳುತ್ತಿತ್ತು. ಅನೇಕ ಸಂಧರ್ಭಗಳಲ್ಲಿ ಏನೂ ಕೇಳಿಸದೆಯೂ ನಿಂತು ಹೋಗುತ್ತಿತ್ತು. ಆಗ ಅಕ್ಕಪಕ್ಕದ ಮನೆಗಳಲ್ಲಿ ಪ್ರಸಾರವಾಗುತ್ತಿದ್ದ ಬಾನುಲಿಯನ್ನು ಜನ ಅರಸಿ ಹೋಗುತ್ತಿದ್ದುದು ಆ ಕಾಲದ ಜನರಿಗೆ ರೇಡಿಯೋ ಪ್ರೀತಿ ಎಷ್ಟಿತ್ತು ಎಂದು ತಿಳಿಯುತ್ತದೆ. ಇಷ್ಟೇ ಅಲ್ಲ, ಉದ್ಯಾನವನಗಳಲ್ಲಿ ಪ್ರತಿ ಸಂಜೆ (ಭಾನುವಾರ ಹೊರತುಪಡಿಸಿ) ಒಂದು ನಿರ್ಧಿಷ್ಟ ಸಮಯದಲ್ಲಿ ಪ್ರಸಾರವಾಗುತ್ತಿದ್ದ ರೇಡಿಯೋ ಕಾರ್ಯಕ್ರಮ ಕೇಳಲು ಜನರು ತಂಡೋಪತಂಡವಾಗಿ ಜಮಾಯಿಸಿರುತ್ತಿದ್ದರು. ಉದ್ಯಾನದ ಮಧ್ಯೆ, ರೇಡಿಯೋ ಹಾಕಿ ಎತ್ತರದ ಕಂಬಗಳ ಮೇಲೆ ಸ್ಪೀಕರುಗಳನ್ನು ಕಟ್ಟಿ ಆ ಮೂಲಕ ಜನರಿಗೆ ಸುದ್ದಿಗಳು, ಹಾಡು, ಕ್ರಿಕೆಟ್ ಕಾಮೆಂಟರಿ, ಶಾಸ್ತ್ರೀಯ ಸಂಗೀತ ಹೀಗೆ ಅನೇಕ ಕಾರ್ಯಕ್ರಮಗಳನ್ನು ಕೇಳಿಸಲಾಗುತ್ತಿತ್ತು.   ಕೆಲವೊಮ್ಮೆ ರೇಡಿಯೋಗಳ ಜೊತೆಜೊತೆಗೆ ಆಗ ತೆರೆಕಂಡ ಕಪ್ಪುಬಿಳುಪು ಸಿನಿಮಾಗಳನ್ನು, ಆ ದಿನಗಳಲ್ಲಿ ರಾತ್ರಿ ಹೊತ್ತು ರಸ್ತೆಗಳಲ್ಲಿ ಪ್ರೊಜೆಕ್ಟರ್ ಮೂಲಕ ಎತ್ತರದ ಪರದೆ ಮೇಲೆ ಪ್ರದರ್ಶಿಸುತ್ತಿದ್ದರು. ಮಕ್ಕಳಿಗಾಗಿ ಮೌಲ್ಯಾಧಾರಿತ ಕನ್ನಡದ ಸಿನಿಮಾಗಳನ್ನು ಶಾಲೆಗಳಲ್ಲಿಯೂ ಪ್ರದರ್ಶಿಸುತ್ತಿದ್ದರು. ಮಿಕ್ಕಂತೆ  ಚಿತ್ರಮಂದಿರಗಳಿಗೆ, ಟೆಂಟುಗಳಿಗೆ  ಹೋಗಿ ದುಡ್ಡು ಕೊಟ್ಟು ನೋಡಬೇಕಾಗಿತ್ತಾಗಲೀ, ಈಗಿನಂತೆ ಟಿವಿಯ ವಿವಿಧ ಚಾನೆಲ್ಲುಗಳು, ಕಂಪ್ಯೂಟರ್, ಲ್ಯಾಪ್ ಟಾಪ್ ಮೊಬೈಲ್ ಅಥವಾ ಟ್ಯಾಬ್ಲೆಟ್ಟುಗಳು ಆಗ ಇರಲಿಲ್ಲ. ಹಾಗಾಗಿ ಸಿನಿಮಾ ಹಾಡುಗಳನ್ನು ಕೇಳಲು ರೇಡಿಯೋ ಎಂಬುದು, ಆಗಿನ ಕಾಲದ ಜನರ ಆಪ್ತಮಿತ್ರ ಎಂದರೆ ತಪ್ಪಾಗದು. *************************************************

ನಾಗರೀಕತೆಯನ್ನು ಆರಂಭಿಸಿದ ಮಿತ್ರರು Read Post »

ಅಂಕಣ ಸಂಗಾತಿ, ಮುಖಾಮುಖಿ

ಅಂಕಣ ಬರಹ ಡಾ ಶ್ರೀಧರ್ ಗೌಡ ಉಪ್ಪಿನ ಗಣಪತಿ ಲೇಖಕರ ಪರಿಚಯ : ಡಾ ಶ್ರೀಧರ್ ಗೌಡ ಉಪ್ಪಿನ ಗಣಪತಿ ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕ.ಸಾಹಿತ್ಯ ಬರಹ ಹವ್ಯಾಸ.“ಕಡಲಿಗರ ಸಂಸ್ಕೃತಿ” ಸಂಶೋಧನ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಡಾಕ್ಟರ್ ಪ್ರದಾನ ಮಾಡಿದೆ. ಡಾಕ್ಟರ್ ಸೈಯದ್ ಜಮೀರುಲ್ಲಾ ಷರೀಫ್ ಮಾರ್ಗದರ್ಶಕರು.ಸಂಶೋಧನಾ ಮಹಾಪ್ರಬಂಧ ಪುಸ್ತಕ ರೂಪದಲ್ಲಿ ಪ್ರಕಟವಾಗಿದೆ. ಕುಮಟಾತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆಮೂರು ತಾಲೂಕು ಸಾಹಿತ್ಯ ಸಮ್ಮೇಳನ ಸಂಘಟನೆಪ್ರತಿ ತಾಲ್ಲೂಕು ಸಾಹಿತ್ಯ ಸಮ್ಮೇಳನವನ್ನು ಎರಡು ದಿನಗಳ ಕಾಲ ಸಂಘಟಿಸಿ ದ್ದು ಹೆಗ್ಗಳಿಕೆ ಇವರದ್ದು.ಎರಡು ತಾಲೂಕು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಸಂಘಟಿಸಿದ್ದಾರೆ. ಕಳೆದ ವರ್ಷ ಅವರು ಕರ್ತವ್ಯ ನಿರ್ವಹಿಸುವ ಶಾಲೆಯ ಇನ್ಸ್ಪೈರ್ ಅವಾರ್ಡ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗೆ ಮಾರ್ಗದರ್ಶನ ನೀಡಿ ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ದೆಹಲಿಯಲ್ಲಿ ನಡೆಯಲಿರುವ ಆ ಕಾರ್ಯಕ್ರಮಕ್ಕೆ ಈ ವರ್ಷ ಭಾಗವಹಿಸಲಿದ್ದಾರೆ.2019 20 ರಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.“ಹಾಲಕ್ಕಿ ರಾಕು” ಕಥಾಸಂಕಲನ ಅಚ್ಚಿನಲ್ಲಿದೆ.‌ ಡಾ.ಶ್ರೀಧರ ಗೌಡ ಅವರ ಜೊತೆ ಮುಖಾಮುಖಿ ” ಮನಸ್ಸಿನ ತುಮುಲತೆ ಸಾಕ್ಷಿಕರಿಸಲು ಕವಿತೆಗೆ ಮೊರೆ “ ಕವಿತೆಗಳನ್ನು ಏಕೆ ಬರೆಯುವಿರಿ? ನನ್ನ ಮನಸ್ಸಿನ ತುಮುಲತೆ, ದುಗುಡುತೆ ಗಳನ್ನು ಸಾಕ್ಷಿ ಕರಿಸಲು ಕವಿತೆಗಳಿಗೆ ಮೋರೆ ಹೋಗಿ , ಕವಿತೆ ಬರೆಯುತ್ತಿದ್ದೇನೆ. ಕವಿತೆ ಹುಟ್ಟುವ ಕ್ಷಣ ಯಾವುದು ? ಕವಿತೆ ಹುಟ್ಟಲ್ಲ ಇಂತಹದ್ದೆ ಸಮಯ ಅಂತಿಲ್ಲ.ಒಂದು ಘಟನೆ ಮತ್ತೆ ಮತ್ತೆ ಮನಸ್ಸನ್ನು ಕಾಡುತ್ತಿದ್ದಾಗ ಅದರ ತೀವ್ರತೆಯನ್ನು ಹತ್ತಿಕ್ಕಲಾಗದೆ ಅಸಹಾಯಕ ಸ್ಥಿತಿಗೆ ತಲುಪಿದಾಗ ಅದರಿಂದ ಪರಿಹಾರ ಕಂಡುಕೊಳ್ಳಲು ಹೊಸ ಹೊಸ ಆಲೋಚನೆಗಳಿಂದ ಹೊರಬರುವ ಸಂದರ್ಭದಲ್ಲಿ ಕವಿತೆ ಹುಟ್ಟುತ್ತ ದೇ. ಕೆಲವೊಮ್ಮೆ ಬೈಕ್ ರೈಡಿಂಗ್ ಮಾಡುವಾಗಲು ಕವಿತೆ ಹುಟ್ಟಿದ್ದು ಇದೆ. ಕವಿತೆಯ ವಸ್ತು ಏನು? ಪದೇ ಪದೇ ಕಾಡುವ ವಿಷಯ ಯಾವುದು? ನನ್ನ ಕವಿತೆಗಳಲ್ಲಿ ವಸ್ತು ನನ್ನ ಸುತ್ತಲ ಪರಿಸರ. ನಮ್ಮ ಜನಾಂಗ .‌ನನ್ನನ್ನು ಮತ್ತೆ ಮತ್ತೆ ಕಾಡುವ ವಿಷಯವೇನೆಂದರೆ ,ಬಾಲ್ಯ ಕಳೆದು ಹರೆಯಕ್ಕೆ ಕಾಲಿಟ್ಟ ಯುವಜನತೆ ಹೆತ್ತು ಹೊತ್ತು ಸಾಕಿದ ತಂದೆತಾಯಿಗಳನ್ನು ವೃದ್ಧಾಶ್ರಮದಲ್ಲಿ ಬಿಟ್ಟು ಅವರ ಆಸ್ತಿಗೆ ಮಾತ್ರ, ವಾರಸುದಾರರಾಗಿ ರುವ ಸಂಗತಿ ನಿಮ್ಮ ಕವಿತೆಗಳಲ್ಲಿ ಬಾಲ್ಯ ಹರೆಯ ಇಣುಕಿದೆಯೇ ? ನನ್ನ ಕವಿತೆಗಳಲ್ಲಿ ಬಾಲ್ಯ ಹರೆಯ ಎರಡರ ಜೊತೆ ಮುಪ್ಪು ಕೂಡ ಇಣುಕಿದೆ. ಪ್ರಸ್ತುತ ರಾಜಕೀಯ ಸನ್ನಿವೇಶಕ್ಕೆ ನಿಮ್ಮ ಪ್ರತಿಕ್ರಿಯೆ ಏನು? ಪ್ರಸ್ತುತ ಸಂದರ್ಭದ ರಾಜಕೀಯ ಸನ್ನಿವೇಶಗಳು ನ್ಯಾಯಾಂಗ ಮತ್ತು ಕಾರ್ಯಾಂಗ ವನ್ನು ಮೀರಿ ಪ್ರಾಮುಖ್ಯತೆ ಪಡೆದು ಕೊಂಡಂತೆ ಭಾಸವಾಗುತ್ತದೆ. ಧರ್ಮ ಮತ್ತು ದೇವರ ವಿಷಯದಲ್ಲಿ ನಿಮ್ಮ ನಿಲುವೇನು? ಜಾತಿಗೊಂದು ಧರ್ಮ ವಾಗದೆ ಮನುಷ್ಯ-ಮನುಷ್ಯರ ನಡುವಿನ ಧರ್ಮ ಒಂದಾಗಬೇಕು.ಪ್ರಕೃತಿಯಲ್ಲಿ ಅಗೋಚರವಾಗಿರುವ ಅತೀಂದ್ರಿಯವಾದ ಒಂದು ಶಕ್ತಿ ಇದೆ ಎಂದು ಭಾವಿಸಿ ಕೊಳ್ಳುವುದಾದರೆ, ಅದನ್ನು ದೇವರು ಎಂಬ ಮೂರ್ತ ಸ್ವರೂಪದಲ್ಲಿ ನೋಡಬಹುದು. ದೇವರ ಕಲ್ಪನೆ ಅವರವರ ಭಾವಕ್ಕೆ ಬಿಟ್ಟದ್ದು. ಆದಾಗ್ಯೂ ದೇವರು ಎಂಬ ಭಾವನೆ ನಮ್ಮ ಒಳಗೆ ಒಂದಿಷ್ಟು ಭಕ್ತಿಯನ್ನು ಹುಟ್ಟಿಸುತ್ತದೆ ಭಕ್ತಿ ಮನಸ್ಸಿನ ಏಕಾಗ್ರತೆ ಯಾಗುತ್ತದೆ.ಅದು ಸಂಸ್ಕಾರದ ಮೂಲವಾಗುತ್ತದೆ. ಪ್ರಸ್ತುತ ಸಾಂಸ್ಕೃತಿಕ ವಾತಾವರಣ ಹೇಗಿದೆ ? ಸಂಸ್ಕೃತಿಯ ಕುರುಹುಗಳು ಸಾಂಸ್ಕೃತಿಕ ವಾತಾವರಣವನ್ನು ನಿರ್ಮಿಸುತ್ತದೆ. ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಕೇವಲ ಮನರಂಜನೆಗೆ ಸೀಮಿತಗೊಳಿಸುತ್ತಿರುವುದು ವಿಷಾದನೀಯ.ಮೈಸೂರು ದಸರಾ ಹಂಪಿ ಉತ್ಸವ ಅವೆಲ್ಲ ಬಿಡಿ ,ಕರಾವಳಿ ಉತ್ಸವದಲ್ಲಿ ಕೂಡ ಜನಾಂಗಿಕ ವಾಗಿರುವ ಕಲೆ ಸಂಪ್ರದಾಯಗಳು ಮುಖ್ಯವಾಹಿನಿಯಿಂದ ದೂರ ಸರಿಸಲು ಪಟ್ಟಿರುತ್ತದೆ. ಉದಾಹರಣೆಗೆ ಹಾಲಕ್ಕಿಗಳ ಸುಗ್ಗಿ ಕುಣಿತ ತಾರ್ಲೆ ಕುಣಿತ ಗುಮಟೆ ಪಾಂಗ್ ಮರಗಾಲ ಕುಣಿತ ಇತ್ಯಾದಿ ಸಾಂಸ್ಕೃತಿಕ ಕುರುಹುಗಳಿಗೆ ಜಾಗವಿಲ್ಲ.ಸಂಸ್ಕೃತಿಕ ಸಂಜೆ ಎಂದರೆ ಸಿನಿಮಾನಟರನ್ನು ರಾಜ್ಯ ರಾಷ್ಟ್ರ ಮಟ್ಟದ ಗಾಯಕರನ್ನು ಕರೆಯಿಸಿ ಕುಣಿಸುವುದು ಹಾಡಿಸುವುದು ಎಂಬ ಕಲ್ಪನೆ ಆಯೋಜಕ ರಿಗೂ ಬಂದಿರುವುದು ದುರಂತ. ಸಾಹಿತ್ಯದ ರಾಜಕೀಯ ಹೇಗಿದೆ? ನಿಮ್ಮ ಪ್ರತಿಕ್ರಿಯೆ ಏನು? ಸಾಹಿತ್ಯದಲ್ಲಿ ಪ್ರತ್ಯೇಕತೆ ಬೇಕು, ಆದರೆ ಸಾಹಿತಿಗಳ ನಡುವೆ ಅಲ್ಲ. ಸಾಹಿತ್ಯದಲ್ಲಿ ವಲಯದ ರಾಜಕಾರಣ ಅಂದರೆ ಅಚ್ಚರಿ ಪಡಬೇಕಾದ ದಿನಗಳು ಇದ್ದವು. ಅಂದರೆ ಸಾಹಿತ್ಯದಲ್ಲಿ ರಾಜಕಾರಣವೇ ಅದು ಹೇಗೆ ಎಂದು ಪ್ರಶ್ನಿಸುತ್ತಿದ್ದರು.ಆದರೆ ಇವತ್ತು ರಾಜಕೀಯದ ರಾಜಕಾರಣ ಗಿಂತಲೂ , ಸಾಹಿತ್ಯದ ರಾಜಕಾರಣದಲ್ಲಿ ಹೆಚ್ಚು ರಾಡಿ ತುಂಬಿಕೊಂಡಿದೆ. ಚುನಾವಣೆಗಳು ಬಂದಾಗ ಅವರವರ ವ್ಯಕ್ತಿಗೆ ಅವರ ಇಷ್ಟಕ್ಕೆ ಸಂಬಂಧಪಟ್ಟಂತೆ ಬೆಂಬಲ ನೀಡುವುದು ಸಹಜ ಗುಣ. ಆದರೆ ಅದನ್ನೇ ನೆಪ ಮಾಡಿಕೊಂಡು ಚುನಾವಣೆಯಲ್ಲಿ ನಮ್ಮ ವಿರುದ್ಧ ಮಾಡಿದವರು ಎಂದು ಭಾವಿಸಿ ಅಂತರ ಕಾಯ್ದುಕೊಳ್ಳುವುದು ಸಾಹಿತ್ಯದ ಬೆಳವಣಿಗೆ ಯಂತೂ ಅಲ್ಲ.ಸಾಹಿತ್ಯ ವಲಯ ಒಂದಿಷ್ಟು ಚುರುಕುತನದಿಂದ ಕೆಲಸ ಮಾಡುತ್ತಿರುವುದು ಸಂತೋಷದ ವಿಷಯ. ದೇಶದ ಚಲನೆಯ ಬಗ್ಗೆ ಏನನಿಸುತ್ತದೆ ? ಈ ದೇಶದ ಚಲನ ಶೀಲ ವಾಗಿರದೆ , ಎಲ್ಲೋ ಒಂದು ಕಡೆ ಕೇಂದ್ರೀಕೃತವಾಗಿ ನಿಂತುಬಿಟ್ಟಿದೆ ಎಂಬ ಭಾವನೆ ಬರುತ್ತಿದೆ. ಬಹುಶಃ ಚುನಾವಣೆಗಳು ನಡೆಯದಿದ್ದರೆ ಪ್ರಜಾಪ್ರಭುತ್ವ ಮರೆತು ಮತ್ತೆ ವ್ಯಕ್ತಿ ಆಧಾರಿತ ಸರ್ಕಾರದಲ್ಲಿ ನಾವಿದ್ದೆವು ಎಂಬ ಭಾವನೆ ಬಂದರು ಅಚ್ಚರಿಯಿಲ್ಲ. ನಿಮ್ಮ ಮುಂದಿನ ಕನಸೇನು? ಈ ನೆಲ ಮಣ್ಣಿನ ಸಂಸ್ಕೃತಿಯ ಬೆವರಿನ ಹೊದಿಕೆ ಹೊದ್ದುಕೊಂಡಿರುವ ನಮ್ಮ ಜನಾಂಗದ ಕುರಿತು ಒಂದು ಅದ್ಭುತ ಕೃತಿ ಹೊರತರಬೇಕು ಎಂಬ ಕನಸಿದೆ. ನಿಮ್ಮ‌ ಇಷ್ಟದ ಲೇಖಕರು ಯಾರು? ಕನ್ನಡದಲ್ಲಿ ಕುವೆಂಪು ,ಭೈರಪ್ಪ, ದೇವನೂರು ಮಹದೇವ ಮತ್ತು ಸೈಯದ್ ಜಮೀರುಲ್ಲಾ ಷರೀಫ್.ಇಂಗ್ಲಿಷ್ ಕವಿಗಳ ಬಗ್ಗೆ ಅಷ್ಟೊಂದು ಆಳವಾದ ಅಧ್ಯಯನ ನನ್ನಿಂದ ನಡೆದಿಲ್ಲ. ಷೇಕ್ಸ್ ಪಿಯರ್ ನನ್ನಿಷ್ಟದ ಕವಿ ಅವರ Mid summer Night ನನ್ನನ್ನು ಬಹಳ ಕಾಡಿದ ಕೃತಿ. ಈಚೆಗೆ ಓದಿದ ಕೃತಿಗಳಾವವು? ಶಾಮಿಯಾನ ಕವಿ ಇದು ಡಾಕ್ಟರ್ ಸೈಯದ್ ಜಮೀರುಲ್ಲಾ ಷರೀಫ್ ಅವರ ಸಮಗ್ರ ಸಾಹಿತ್ಯದ ಕೃತಿ . ಡಾ. ಸುರೇಶ ನಾಯಕ್ ಸಂಪಾದಕತ್ವದಲ್ಲಿ ಮೂಡಿಬಂದಿದೆ.“ಹುಡುಕಿ ಕೊಡುವಿರಾ ಕಾಣೆಯಾಗಿರುವ ದರ್ಜೆಯವನ ಹೊಲಿಯಲು ಬೇಕಾಗಿದೆ ಕೇಸರಿ ಬಿಳಿ ಹಸಿರು ಕೆಂಪು ಗುಲಾಬಿ ಬಣ್ಣದ ತುಂಡು ಬಟ್ಟೆಗಳ ಶಾಮಿಯಾನ “ಮನುಷ್ಯ-ಮನುಷ್ಯರ ನಡುವಿನ ಸಂಬಂಧವನ್ನು ಕವಿ ಶರೀಫರು ಮಾರ್ಮಿಕವಾಗಿ ಚಿತ್ರಿಸಿದ್ದು ಭಟ್ಕಳದಲ್ಲಿ ಕೋಮುದಳ್ಳುರಿ ಹೊತ್ತಿ ಉರಿಯುತ್ತಿದ್ದ ಸಂದರ್ಭದಲ್ಲಿ. ಸಾಹಿತ್ಯದಿಂದ ಸೌಹಾರ್ದತೆ ಸಾಧಿಸಿದ ಸಾಲುಗಳು. ನಿಮಗೆ ಇಷ್ಟದ ಕೆಲಸ ಯಾವುದು? ನನಗೆ ಇಷ್ಟವಾದ ಕೆಲಸ ತರಗತಿಯಲ್ಲಿ ಪಾಠ ಬೋಧನೆ. ಇಷ್ಟದ ಸ್ಥಳ ಯಾವುದು ? ನನಗೆ ಇಷ್ಟವಾದ ಸ್ಥಳ ನನ್ನೂರು ಉಪ್ಪಿನ ಗಣಪತಿ. ನಿಮ್ಮ ಇಷ್ಟದ ಸಿನಿಮಾ ಯಾವುದು? ನನ್ನ ಇಷ್ಟವಾದ ಸಿನಿಮಾ ಶಂಕರ್ ನಾಗ ಅಭಿನಯದ ಮೂಗನ ಸೇಡು ನಿಮ್ಮ ಜೀವನದಲ್ಲಿ ಮರೆಯಲಾಗದ ಘಟನೆ ಯಾವುದು ? ನಾನು ಪ್ರಾಥಮಿಕ ಶಾಲಾ ಶಿಕ್ಷಕನಾಗಿ ನೇಮಕಗೊಂಡ ಹೊನ್ನಾವರದ ಜನ್ನ ಕಡಕಲ್ ಶಾಲೆ ಹುಡುಕಲು ಹರಸಾಹಸ ಪಟ್ಟಿದ್ದು ಎಂದು ಮರೆಯದ ಘಟನೆಯಾಗಿಇಂದಿಗೂ ಉಳಿದುಕೊಂಡಿದೆ. ಅಂತಿಮವಾಗಿ ನಿಮಗೆ ಏನು ಹೇಳಬೇಕು ಅನ್ಸತದ ? ಇಂದು ಸಾಹಿತ್ಯ ವ್ಯಾಪಾರವಾಗುತ್ತಿದೆ ಎಂಬ ಭಾವನೆ ಎಲ್ಲೆಡೆ ಭಾಸವಾಗು ತ್ತಿದೆ . ಶಾಲೆಯಲ್ಲೂ ಕೂಡ ಅಂಕಗಳಿಗೆ ಸೀಮಿತವಾಗಿ ಪಠ್ಯವನ್ನು ಸಿದ್ಧಪಡಿಸಿರುವುದು ಸಾಹಿತ್ಯದ ಬೆಳವಣಿಗೆ ಯಂತೂ ಅಲ್ಲಾ. ಮಕ್ಕಳ ಬೌದ್ಧಿಕ ಬೆಳವಣಿಗೆ ವಾಕ್ ಚಾತುರ್ಯಕ್ಕೆ ವಿಷಯ ವಿಶ್ಲೇಷಣೆಗೆ ಪಠ್ಯದಲ್ಲಿ ಅವಕಾಶಗಳು ತುಂಬಾನೇ ಕಡಿಮೆ.ಕುವೆಂಪು ಬೇಂದ್ರೆ ಕಾರ್ನಾಡ್ ಕಂಬಾರ್ ಮಾಸ್ತಿ ಕಾರಂತ ಸೇರಿದಂತೆ ನಾಡಿನ ಸಾಹಿತಿಗಳ ಸಾಹಿತ್ಯದ ಚರ್ಚೆ ವಿಮರ್ಶೆಗಳಿಗೆ ಪಠ್ಯ ದಲ್ಲಿ ಅವಕಾಶ ನೀಡಬೇಕು.ಸಾಹಿತ್ಯದ ವಿಚಾರ ಕಮ್ಮಟಗಳು ಹೆಚ್ಚೆಚ್ಚು ಪ್ರತಿ ಗ್ರಾಮಮಟ್ಟದಿಂದ ನಡೆಯಬೇಕು. ಕರ್ನಾಟಕ ಸಾಹಿತ್ಯ ಅಕಾಡೆಮಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಕನ್ನಡಪರ ಸಂಘಟನೆಗಳು ಒಂದೆಡೆ ಸೇರಿ ಕನ್ನಡ ಸಾಹಿತ್ಯದ ಕುರಿತು ಚರ್ಚೆ ವಿಮರ್ಶೆ ನಡೆಸಿ ಸಾಹಿತ್ಯ ಕುರಿತು ಆಸಕ್ತಿ ಮೂಡುವಂತೆ ಮಾಡಬೇಕು.******************* ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.‌

Read Post »

ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಅಂಕಣ ಬರಹ ಸೋತು ಗೆದ್ದ ಮನುಷ್ಯ ಸೋತು ಗೆದ್ದ ಮನುಷ್ಯತೆಲುಗು ಮೂಲ : ಮಲ್ಲಾರೆಡ್ಡಿಅನುವಾದ : ಕಸ್ತೂರಿಪ್ರ : ನವಕರ್ನಾಟಕ ಪಬ್ಲಿಕೇಷನ್ಸ್ಪ್ರಕಟಣೆಯ ವರ್ಷ : ೨೦೧೭ಬೆಲೆ : ರೂ.೧೦೪ ¥ಪುಟಗಳು :೧೫೨ ಇದು ತೆಲುಗು ಮೂಲದ ಮಲ್ಲಾರೆಡ್ಡಿಯವರ ಆತ್ಮಕಥೆ. ವಿಷಮ ಪರಿಸ್ಥಿತಿಗಳು ತಂದ ನೋವು-ಸಂಕಷ್ಟಗಳಿಂದಾಗಿ ಮಾನಸಿಕವಾಗಿ ನೊಂದು ಬದುಕಿನಲ್ಲಿ ಭರವಸೆಯನ್ನೇ ಕಳೆದುಕೊಂಡು ಮಾನಸಿಕವಾಗಿ ಅಸ್ವಸ್ಥನಾದ ವ್ಯಕ್ತಿಯೊಬ್ಬ ತನ್ನ ಎಲ್ಲಾ ಅನುಭವಗಳನ್ನು ಇಲ್ಲಿ ವಿವರವಾಗಿ ಮನಮುಟ್ಟುವಂತೆ ಹೇಳುತ್ತಾನೆ. ತೀರಾ ಎಳೆಯ ಹುಡುಗನಾಗಿದ್ದಾಗಲೇ ಸೂಕ್ಷ್ಮ ಸಂವೇದನೆಯುಳ್ಳವನಾಗಿದ್ದರಿಂದ ತನ್ನ ಸುತ್ತ ಮುತ್ತ ನಡೆಯುವ ಎಲ್ಲಾ ವಿದ್ಯಮಾನಗಳನ್ನು ಆತ ತಣ್ಣಗೆ ಗಮನಿಸುತ್ತಾನೆ. ಅವನದ್ದು ಅವಿಭಕ್ತ ಕುಟುಂಬ. ಅವನು ತಂದೆಗೆ ಎರಡನೆಯ ಹೆಂಡತಿಯ ಮಗ. ತನ್ನ ತಂದೆ ತನ್ನ ತಾಯಿಗೆ ಹೆಚ್ಚು ಪ್ರೀತಿಯನ್ನು ಕೊಟ್ಟು ಮೊದಲ ಹೆಂಡತಿಯನ್ನು ಕಡೆಗಣಿಸುವುದನ್ನು ಪುಟ್ಟ ಹುಡುಗ ನೋಡುತ್ತಾನೆ. ಮುಂದೆ ಮೊದಲ ಹೆಂಡತಿ ತನ್ನ ಪಾಲಿನ ಆಸ್ತಿಯನ್ನು ಕೇಳಿ ಕುಟುಂಬವನ್ನು ಬಿಟ್ಟು ತನ್ನ ಮಕ್ಕಳೊಂದಿಗೆ ಬೇರೆಡೆಗೆ ಹೋಗಿದ್ದು ಅವನನ್ನು ಅಪಾರವಾಗಿ ನೋಯಿಸುತ್ತದೆ. ಅವನು ದೊಡ್ಡಮ್ಮನ ಮಗನನ್ನು ಅಪಾರವಾಗಿ ಪ್ರೀತಿಸಿದ್ದ . ಚಿಕ್ಕವನಾಗಿದ್ದಾಗ ನೆರೆಮನೆಯ ರಾಮು ಅವನ ಆತ್ಮೀಯ ಗೆಳೆಯನಾಗಿದ್ದ. ಆದರೂ ಅವನಿಗೆ ಗೊತ್ತಿಲ್ಲದೆಯೇ ಅವನು ಒಮ್ಮೆ ರಾಮುವಿನ ಪೆನ್ನನ್ನು ಕದ್ದಿದ್ದ. ಮುಂದೆ ಹೈಸ್ಕೂಲು ಮುಗಿಸಿ ಹೈದರಾಬಾದಿನಲ್ಲಿ ಕಾಲೇಜು ಶಿಕ್ಷಣಕ್ಕಾಗಿ ಅವನು ಹೋಗುತ್ತಾನೆ. ಅಲ್ಲಿ ಸೀಟು ಸಿಕ್ಕದೆ ಅವನು ತುಂಬಾ ಅಡೆತಡೆಗಳನ್ನು ಅನುಭವಿಸಬೇಕಾಗುತ್ತದೆ. ಅದರ ಪರಿಣಾಮವಾಗಿ ಅವನು ಮನೋರೋಗಕ್ಕೆ ತುತ್ತಾಗುತ್ತಾನೆ. ಆರಂಭದಲ್ಲಿ ವೈದ್ಯರ ಬಳಿಗೆ ಹೋಗಲು ಯಾವುದೋ ಕೀಳರಿಮೆಯಿಂದಾಗಿ ಅವನು ಹಿಂದೇಟು ಹಾಕುತ್ತಾನೆ. ಆದರೆ ಸರಿಯಾದ ಸಮಯಕ್ಕೆ ಯಾರದ್ದೋ ಉಪದೇಶದಿಂದ ಸೂಕ್ತ ಚಿಕಿತ್ಸೆ ಪಡೆದು ಗುಣಮುಖನಾಗುತ್ತಾನೆ . ದೈಹಿಕವಾಗಿ ಗಟ್ಟಿಮುಟ್ಟಾಗಿದ್ದ ಅವನು ಮುಂದೆ ತನ್ನ ಶಿಕ್ಷಣವನ್ನು ಮುಂದುವರೆಸಿ ಭಾರತದ ವಿವಿಧ ರಾಜ್ಯಗಳಲ್ಲಿ ಮಾತ್ರವಲ್ಲದೆ ಅಲ್ಜೀರಿಯಾಗೂ ಹೋಗಿ ಅಲ್ಲಿ ಇಂಗ್ಲಿಷ್ ಅಧ್ಯಾಪಕನಾಗಿ ಉದ್ಯೋಗ ಗಳಿಸಿ ಜೀವನದಲ್ಲಿ ಯಶಸ್ವಿಯಾಗುತ್ತಾನೆ. ಅನೇಕರು ತಮಗೆ ರೋಗವಿದೆಯೆಂದು ಗೊತ್ತಿದ್ದೂ ಮಾನಸಿಕ ತಜ್ಞರನ್ನು ಭೇಟಿಯಾಗಲು ಹಿಂದೇಟು ಹಾಕಿ ತಮ್ಮ ರೋಗ ಉಲ್ಬಣಗೊಳ್ಳುವುದಕ್ಕೆ ತಾವೇ ಕಾರಣರಾಗುತ್ತಾರೆ, ಅಂಥವರಿಗೆ ಮಾರ್ಗದರ್ಶನ ನೀಡುವಂಥ ಒಂದು ಕೃತಿಯಿದು. ಕೃತಿಯ ವಸ್ತು ಪ್ರಸ್ತುತತೆಯುಳ್ಳದ್ದಾಗಿದೆ. ಭಾಷೆ, ನಿರೂಪಣಾ ಶೈಲಿಗಳು ಸರಳವೂ ಸುಲಲಿತವೂ ಆಗಿದ್ದು ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ******************************** ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Read Post »

ಅಂಕಣ ಸಂಗಾತಿ, ರಹಮತ್ ತರೀಕೆರೆ ಬರೆಯುತ್ತಾರೆ

ಅಂಕಣ ಬರಹ ಪ್ರಶ್ನೆಯ ಜರೂರಿ ಕೆಲವು ವರ್ಷಗಳ ಹಿಂದೆ ಎರಡು ವಿದ್ಯಮಾನ ಜರುಗಿದವು. ಒಂದು- ತಾನು ಓದುವ ಶಾಲೆಯನ್ನು ತಾಲಿಬಾನಿಗಳು ಯಾಕೆ ಕೆಡವಬೇಕು ಎಂದು ಪ್ರಶ್ನಿಸಿದ ಪುಟ್ಟಬಾಲೆ ಮಲಾಲಳದು. ಎರಡು-ಬಾಳಾಸಾಹೇಬ್ ಠಾಕರೆ ತೀರಿಕೊಂಡರೆ ಮುಂಬೈ ಬಂದ್ ಯಾಕೆ ಮಾಡಬೇಕು ಎಂದು ಚರ್ಚಿಸಿದ ಇಬ್ಬರು ತರುಣಿಯರದು. ಸುತ್ತಮುತ್ತ ಬದುಕುತ್ತಿರುವ ಲಕ್ಷಾಂತರ ಜನರಲ್ಲಿ ಹುಟ್ಟದ ಪ್ರಶ್ನೆಗಳು ಈ ಹುಡುಗಿಯರಲ್ಲಿ ಸಹಜವಾಗಿ ಹೇಗೆ ಹುಟ್ಟಿಕೊಂಡವು? ನಮಗೇತಕ್ಕೆ ಇಲ್ಲದ ರಗಳೆ ಎಂದು ಬಹುಸಂಖ್ಯಾತ ಸಾರ್ವಜನಿಕರು ಸುರಕ್ಷಿತಮೌನ ತಾಳಿರುವಾಗ ಕೆಲವರೇಕೆ ಕೇಳುವ ದಿಟ್ಟತನ ತೋರುತ್ತಾರೆ? ಪ್ರಶ್ನೆ ಕೇಳುವುದು ಆಲೋಚನ ಶಕ್ತಿಯುಳ್ಳ ಎಲ್ಲ ವ್ಯಕ್ತಿಗಳಲ್ಲೂ ಇರುವ ಸಹಜ ಗುಣ. ಆದರೆ ಹಾಗೆ ಕೇಳದಂತೆ ತಡೆಯಲು ನೂರಾರು ಅಂಕುಶಗಳು ಸಮಾಜದಲ್ಲಿರುತ್ತವೆ. ಆದರೆ ಈ ತಡೆಗಳ ಒಳಗೂ ಪ್ರಶ್ನೆಯನ್ನು ಹುಟ್ಟಿಸಿಕೊಳ್ಳುವುದು ಮುಖ್ಯ; ಅದನ್ನು ಬಹಿರಂಗವಾಗಿ ಕೇಳುವುದು ಮತ್ತು ಅದರ ಪರಿಣಾಮ ಅನುಭವಿಸಲು ಸಿದ್ಧವಾಗುವುದು ಇನ್ನೂ ಮುಖ್ಯ. ಇದನೇ ಕುವೆಂಪು ನಿರಂಕುಶಮತಿತ್ವ ಎಂದು ಕರೆದಿದ್ದು. ಈ ನಿರಂಕುಶಮತಿತ್ವದ ಮಾರಣಾಂತಿಕ ಪರಿಣಾಮವನ್ನು ಸಾಕ್ರೆಟಿಸ್ ಎದುರಿಸಿದ; ಅನೇಕ ಸೂಫಿಗಳು, ಚಾರ್ವಾಕರು ಎದುರಿಸಿದರು; ಭಗತ್‍ಸಿಂಗ್ ಮುಂತಾದ ಹೋರಾಟಗಾರರು ಮುಖಾಮುಖಿ ಮಾಡಿದರು; ಈಗ ಪತ್ರಕರ್ತರು ಚಿಂತಕರು ಎದುರಿಸುತ್ತಿದ್ದಾರೆ. ನಮ್ಮ ಮನೆಗಳಲ್ಲಿ ಎಷ್ಟೊ ಮಹಿಳೆಯರು ಇದರ ಕಹಿಫಲವನ್ನು ಉಂಡಿದ್ದಾರೆ. ಪ್ರಶ್ನೆಗಳು ಕೇವಲ ಸ್ಥಾಪಿತ ವ್ಯವಸ್ಥೆಯನ್ನು ವಿರೋಧಿಸುವ ಕಾರಣದಿಂದ ಹುಟ್ಟುತ್ತವೆ ಎಂದು ತಿಳಿಬೇಕಿಲ್ಲ. ಅವು ಕುತೂಹಲದ ದೆಸೆಯಿಂದಲೂ ಹುಟ್ಟಬಹುದು. ಮಕ್ಕಳು ಸಹಜ ವಿಸ್ಮಯದಿಂದ ಎಷ್ಟೊಂದು ಪ್ರಶ್ನೆ ಕೇಳುತ್ತಿರುತ್ತವೆ? ಯಾಕೆ ಸಂಜೆ ಮುಂಜಾನೆ ಸೂರ್ಯ ಕೆಂಪಗೆ ಕಾಣುತ್ತದೆ? ಹೂವುಗಳಿಗೆ ಏಕಿಷ್ಟು ಬಣ್ಣಗಳಿವೆ? ನೀರೇಕೆ ಹರಿಯತ್ತದೆ? -ಹೀಗೆ ನೂರಾರು. ಇವನ್ನು ಕೇಳಿಸಿಕೊಳ್ಳುವ ಸಹನೆ ಮತ್ತು ಉತ್ತರಿಸುವ ತಿಳಿವು ಬಹುತೇಕ ಹಿರಿಯರಲ್ಲಿ ಇರುವುದಿಲ್ಲ. ತಿಳಿವನ್ನು ಕೊಡುವ ಜಾಗಗಳಾಗಿರುವ ತರಗತಿಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಎಷ್ಟೊಂದು ಪ್ರಶ್ನೆಗಳನ್ನು ಹೊಸಕಿ ಹಾಕಿರಬಹುದು ಎಂದು ನೆನೆದರೆ ಭಯವಾಗುತ್ತದೆ. ಸಹಜ ಪ್ರಶ್ನೆಯನ್ನು ದಮನಿಸುವುದು, ಕೇಳುವವರ ಚೈತನ್ಯವನ್ನೇ ದಮನಿಸಿದಂತೆ. ನಿಜವಾದ ಗುರುಗಳೂ ಕೇವಲ ಪ್ರಶ್ನೆಗೆ ಉತ್ತರಿಸುವುದಿಲ್ಲ. ಪ್ರಶ್ನೆ ಕೇಳುವ ಮನೋಭಾವವನ್ನೂ ನಿರ್ಮಿಸುತ್ತಿರುತ್ತಾರೆ. ತಂದೆತಾಯಿಗಳು ಆದರ್ಶರಾಗುವುದು, ಮಕ್ಕಳಿಗೆ ಸರಿಯಾದ ಆಹಾರ ಬಟ್ಟೆ ವಸತಿ ಕೊಡುವ ಸಾಮಾಜಿಕ ಹೊಣೆಗಾರಿಕೆ ನಿಭಾಯಿಸುವುದರಿಂದ ಮಾತ್ರವಲ್ಲ, ಅವರ ಪ್ರಶ್ನೆ, ಕುತೂಹಲ, ನಿರ್ದಿಷ್ಟ ಕ್ಷೇತ್ರದಲ್ಲಿ ಕೆಲಸ ಓದುವ ಸಹಜ ಹಕ್ಕುಗಳನ್ನು ನಾಶಮಾಡಿದ್ದಾರೊ ಇಲ್ಲವೊ ಎಂಬುದರ ಮೇಲೆ. ತನ್ನ ಪ್ರಶ್ನೆಯನ್ನು ಹೊಸಕಿಹಾಕಿದ ಅಪ್ಪನ ವಿರುದ್ಧ ಬಂಡೆದ್ದ ಪುರಾಣದ ನಚಿಕೇತ ನೆನಪಾಗುತ್ತಾನೆ. ಬಹುತೇಕ ಧರ್ಮಗಳು ಹೊಸ ಪ್ರಶ್ನೆಗಳನ್ನು ಕೇಳುವ ಧೀಮಂತರಿಂದಲೇ ಹುಟ್ಟಿವೆ. ಮುಂದೆ ಅವೇ ಧರ್ಮಗಳು ಪ್ರಶ್ನೆಗಳನ್ನು ಹತ್ತಿಕ್ಕಿಯೇ ಬೆಳೆದಿವೆ. ಬುದ್ಧನಂತಹ ಕೆಲವರು ಮಾತ್ರ ಪ್ರಶ್ನೆ ತಿಳಿವಿನ ಮೂಲವೆಂದು ನಂಬಿದ್ದರು. ನಾನು ಹೇಳಿದ್ದು ಒಪ್ಪಿಗೆಯಾಗದಿದ್ದರೆ ನಿನ್ನ ದಿಟವನ್ನು ನೀನೇ ಹುಡುಕಿಕೊ ಎಂದು ಬುದ್ಧ ನೇರವಾಗಿ ಹೇಳಿದನು. ಹೀಗೆ ಹೇಳಲು ಒಬ್ಬ ಗುರುವಿಗೆ ಬಹಳ ಧೈರ್ಯ ಬೇಕು. ಮಗುವೊಂದು ಹುಟ್ಟುವ ಜೈವಿಕಕ್ರಿಯೆ ಬಲ್ಲ ಎಲ್ಲರಿಗೂ ಅದಕ್ಕೆ ಜಾತಿ ಧರ್ಮಗಳಿರುವುದಿಲ್ಲ ಎಂಬುದು ಗೊತ್ತಿದ್ದರೂ, ಅದು ಹುಟ್ಟಿ ಲೋಕಕ್ಕೆ ಬಂದ ಕೂಡಲೇ ಅದಕ್ಕೆ ಜಾತಿ ಧರ್ಮಗಳು ಯಾಕೆ ಸುತ್ತಿಕೊಳ್ಳುತ್ತವೆ? ಹುಟ್ಟಿನಿಂದ ಯಾಕೆ ಕೆಲವರು ಕೀಳು ಅಥವಾ ಮೇಲು ಅನಿಸಿಕೊಳ್ಳಬೇಕು? ಕೆಲವರು ಯಾಕಷ್ಟು ದುಡಿದರೂ ಬಡವರಾಗಿ ಉಳಿದಿದ್ದಾರೆ? ಯಾಕೆ ವಾಸದ ಪರಿಸರವನ್ನು ಚೊಕ್ಕಟವಾಗಿ ಇರಿಸಿಕೊಳ್ಳಲು ನಮಗೆ ಸಾಧ್ಯವಾಗಿಲ್ಲ? ಯಥೇಚ್ಛವಾದ ನಿಸರ್ಗ ಸಂಪತ್ತಿದ್ದರೂ ಭಾರತದಲ್ಲೇಕೆ ಬಡತನವಿದೆ? ಎಲ್ಲರಿಗೂ ಸೇರಬೇಕಾದ ಸಂಪತ್ತನ್ನು ಲೂಟಿಹೊಡೆದವರು ಹೇಗೆ ಆರಾಮಾಗಿ ಬದುಕುತ್ತಿದ್ದಾರೆ? ದುಷ್ಟರು ಕಳ್ಳರು ಎಂದು ಗೊತ್ತಿದ್ದರೂ ಜನ ಯಾಕೆ ಕೆಲವರನ್ನು ಚುನಾವಣೆಯಲ್ಲಿ ಆರಿಸುತ್ತಾರೆ? ಸ್ತ್ರೀಯರನ್ನು ನಿಕೃಷ್ಟವಾಗಿ ಚಿತ್ರಿಸುವ ಲೇಖಕರಿಗೆ ಯಾಕೆ ಮಹಿಳಾ ಓದುಗರೇ ಹೆಚ್ಚಿದ್ದಾರೆ? ಹೀಗೆ ನೂರಾರು ಪ್ರಶ್ನೆಗಳಿವೆ. ಪ್ರ್ರಶ್ನೆ ಹುಟ್ಟುವುದು ಮತ್ತು ಪ್ರಕಟವಾಗುವುದು ಮಾತ್ರವಲ್ಲ, ಅವು ಕ್ರಿಯೆಗೂ ಕಾರಣವಾಗಬೇಕು. ಈ ಕ್ರಿಯೆ ತಪ್ಪಾದ ವ್ಯವಸ್ಥೆಯನ್ನು ಬದಲಿಸಬೇಕು. ಮಲಾಲಾ ಎತ್ತಿದ ಪ್ರಶ್ನೆ ತಾಲಿಬಾನಿಗಳನ್ನು ಪ್ರತಿರೋಧಿಸುವ ಹೊಸಅಲೆಯನ್ನು ಹುಟ್ಟಿಸಿತು. ಲೋಕದಲ್ಲಿ ಸ್ವತಂತ್ರವಾಗಿ ವಿಚಾರಮಾಡುವ ಪ್ರವೃತ್ತಿಯೇ ಹೊಸ ಪ್ರಶ್ನೆಗಳ ತಾಯಿ; ಪ್ರಶ್ನೆಗಳು ನಿಸರ್ಗ ರಹಸ್ಯಗಳನ್ನು ಶೋಧಿsಸುವ ವಿಜ್ಞಾನವನ್ನು ಬೆಳೆಸಿವೆ; ಹಳೆಯ ಸಮಾಜವನ್ನು ಹೊಸ ಸಮಾಜವಾಗಿ ಬದಲಿಸಿವೆ. ನಮ್ಮ ಪೂರ್ವಿಕರು ಪ್ರಶ್ನೆ ಕೇಳಿಕೊಳ್ಳದಿದ್ದರೆ ಬೆಂಕಿ ಅಥವಾ ಬೇಸಾಯ ಶೋಧ ಆಗುತ್ತಿರಲಿಲ್ಲ. ವಿಜ್ಞಾನ ತಂತ್ರಜ್ಞಾನದ ಫಲವಾಗಿ ನಾವಿಂದು ಅನುಭವಿಸುತ್ತಿರುವ ಸೌಲಭ್ಯಗಳು ಇರುತ್ತಿರಲಿಲ್ಲ. ಪ್ರಶ್ನೆಯಿಲ್ಲದೆ ಸ್ಥಾಪಿತಸತ್ಯಗಳ ಒಳಗಿನ ಹುಸಿ ಹೊರಬರುವುದಿಲ್ಲ; ಹೊಸ ಚಿಂತನೆ ಹುಟ್ಟುವುದಿಲ್ಲ. ನಾವೇಕೆ ಹೀಗಿದ್ದೇವೆ ಎಂಬ ಪ್ರಶ್ನೆ ಹುಟ್ಟಿರದಿದ್ದರೆ, ಅಮೆರಿಕೆಯ ಕಪ್ಪುಜನ ಗುಲಾಮಗಿರಿಯಿಂದ ಸ್ವತಂತ್ರರಾಗುತ್ತಿರಲಿಲ್ಲ; ಭಾರತೀಯರು ಬ್ರಿಟಿಶರ ವಿರುದ್ಧ ಹೋರಾಡುತ್ತಿರಲಿಲ್ಲ; ಮಹಿಳೆಯರು ಬಿಡುಗಡೆಯ ಹಾದಿ ಹುಡುಕುತ್ತ್ತಿರಲಿಲ್ಲ. ದಲಿತರು ಸ್ವಾಭಿಮಾನ ಗಳಿಸುತ್ತಿರಲಿಲ್ಲ; ಸರ್ವಾಧಿಕಾರಿಗಳು ನಾಶವಾಗುತ್ತಿರಲಿಲ್ಲ.ಚರಿತ್ರೆಯಲ್ಲಿ ಸಮಾಜಗಳನ್ನು ಬದಲಿಸಿರುವುದು ಪ್ರಶ್ನೆಗಳೇ. ರಾಜಸಭೆಗೆ ತನ್ನನ್ನು ಬಲಾತ್ಕಾರವಾಗಿ ಎಳೆದು ತಂದಾಗ ದ್ರೌಪದಿ `ತನ್ನನ್ನೇ ಪಣಕ್ಕಿಟ್ಟು ಸೋತ ವ್ಯಕ್ತಿಗೆ ತನ್ನ ಹೆಂಡತಿಯನ್ನು ಪಣಕ್ಕಿಡಲು ಹಕ್ಕಿದೆಯೇ?’ ಎಂಬ ಪ್ರಶ್ನೆ ಮುಂದಿಡುತ್ತಾಳೆ. ಉತ್ತರಿಸಲು ಸಭೆ ಒದ್ದಾಡುತ್ತದೆ. ಪ್ರಶ್ನೆಯ ಮೂಲಕ ಆಕೆ ತನ್ನ ಆಕ್ರೋಶ ವೇದನೆಗಳನ್ನಷ್ಟೆ ಹೊರಗೆಡಹುವುದಿಲ್ಲ, ಹೆಣ್ಣೊಬ್ಬಳ ಅಪಮಾನವನ್ನು ಸಹಿಸಿಕೊಂಡಿರುವ ಸಭೆಯ ಅಮಾನವೀಯತೆ ಮತ್ತು ಅವಿವೇಕವನ್ನೂ ಬಯಲಿಗೆಳೆಯುತ್ತಾಳೆ. ಪ್ರಶ್ನಿಸುವ ಪ್ರವೃತ್ತಿ ಅಧಿಕಾರಸ್ಥರ ಕೆರಳಿಕೆಗೂ ದಮನಕ್ಕೂ ಕಾರಣವಾಗುತ್ತದೆ. ಪ್ರಶ್ನೆಯೆತ್ತಿದ ಮಲಾಲಾಗೆ ತಾಲಿಬಾನಿಗಳು ಗುಂಡು ಹೊಡೆದು ಉತ್ತರಿಸಿದರು; ಮುಂಬೈ ತರುಣಿಯರಿಗೆ ಪೋಲಿಸರು ಬಂಧಿಸುವ ಮೂಲಕ ಪ್ರತಿಕ್ರಿಯಿಸಿದರು. ಧರ್ಮರಾಯನು ಯುದ್ಧದಲ್ಲಿ ಗೆದ್ದು ಅರಮನೆ ಪ್ರವೇಶಿಸುವಾಗ, `ಜ್ಞಾತಿಬಂಧುಗಳನ್ನು ಕೊಂದ ನಿನಗೆ ರಾಜ್ಯವಾಳುವ ನೈತಿಕತೆಯಿದೆಯೇ’ ಎಂದು ಪ್ರಶ್ನಿಸಿದ ಚಾರ್ವಾಕನನ್ನು ಕೊಂದರು. ಶಿಷ್ಯ ದಾರಾಶುಕುವನ್ನು ಕೊಂದ ಔರಂಗಜೇಬನ ವಿರುದ್ಧ ಸೂಫಿ ಸರ್ಮದ್ ನಗ್ನನಾಗಿ ನಿಂತು ಇಂತಹುದೇ ಪ್ರಶ್ನೆಯನ್ನೆತ್ತಿ ತಲೆದಂಡ ತೆತ್ತನು. ಸಾಂಪ್ರದಾಯಿಕ ನಂಬಿಕೆಗಳನ್ನು ಪ್ರಶ್ನಿಸಿದ ಅನೇಕ ವಿಜ್ಞಾನಿಗಳನ್ನು ಯೂರೋಪಿನ ಚರ್ಚುಗಳು ದಮನ ಮಾಡಿದ್ದಂತೂ ಸರ್ವವಿದಿತ. ಧಾರ್ಮಿಕ ಮೂಲಭೂತವಾದಿಗಳು ಮತ್ತು ರಾಜಕೀಯ ಸರ್ವಾಧಿಕಾರಿಗಳು ಇಂತಹ ದಮನವನ್ನು ಮಾಡುತ್ತಲೇ ಬಂದಿರುವರು. ಸಾಂಪ್ರದಾಯಿಕ ಕುಟುಂಬ ವ್ಯವಸ್ಥೆಯಲ್ಲಿ ಹಿರಿಯರು ಕಿರಿಯರ, ಪುರುಷರು ಮಹಿಳೆಯರ ಪ್ರಶ್ನೆಗಳನ್ನು ಹೀಗೇ ಹೊಸಕಿ ಹಾಕಿರುವರು. ಆದರೂ ಪ್ರಶ್ನಿಸುವ ಪ್ರವೃತ್ತಿಯನ್ನು ನಿಲ್ಲಿಸಲು ಸಾಧ್ಯವಾಗಿಲ್ಲ. ಸಾಧ್ಯವಾಗುವುದೂ ಇಲ್ಲ. ಪ್ರಶ್ನೆಯಿಲ್ಲದೆ ಚರಿತ್ರೆ ಚಲಿಸುವುದಿಲ್ಲ; ಲೋಕ ಬದಲುವುದಿಲ್ಲ. ಪ್ರಶ್ನೆಗಳು ಸಂಸ್ಕøತಿ ನಾಗರಿಕತೆಗಳನ್ನು ಕಟ್ಟಿಬೆಳೆಸಿದ ಶಕ್ತಿಗಳು. ಅವುಗಳ ಗಾತ್ರ ಚಿಕ್ಕದಿರಬಹುದು. ಪರಿಣಾಮ ಚಿಕ್ಕದಲ್ಲ. ಸಮಾಜದಲ್ಲಿ ಮಹತ್ವದ ಪಲ್ಲಟ ಸಂಭವಿಸಿದ್ದರೆ, ಅದರ ಹಿಂದೆ ಕೆಲವರು ಎತ್ತಿದ ಪ್ರಶ್ನೆಗಳಿವೆ; ಅವು ಹುಟ್ಟಿಸಿದ ಕ್ರಿಯೆ-ಪ್ರತಿಕ್ರಿಯೆಗಳಿವೆ. ನಮ್ಮ ಧರ್ಮದಲ್ಲಿ ಮಹಿಳೆಯರೇಕೆ ಹಿಂದುಳಿದ್ದಾರೆ, ದಲಿತರೇಕೆ ಅಸ್ಪøಶ್ಯರಾಗಿದ್ದಾರೆ, ನಿರ್ದಿಷ್ಟ ಜನರೇಕೆ ಶ್ರೇಷ್ಠರೆನಿಸಿಕೊಂಡಿದ್ದಾರೆ, ನಮ್ಮ ಮತಧರ್ಮಗಳೇಕೆ ದ್ವೇಷ ಹುಟ್ಟಿಸುತ್ತಿವೆ, ನಾನೇಕೆ ಇಷ್ಟು ನೀಚನಾಗಿದ್ದೇನೆ-ಹೀಗೆ ನಿಷ್ಠುರ ಪ್ರಶ್ನೆಗಳನ್ನು ಹುಟ್ಟಿಸಿಕೊಳ್ಳಲಾಗದ, ಅದನ್ನು ಲೋಕದ ಮುಂದಿಡಲಾರದ, ಮತ್ತು ಅಂತಹ ಪ್ರಶ್ನೆ ಕೇಳಿಸಿಕೊಳ್ಳುವ ಸಹನೆಯಿಲ್ಲದ ಯಾವ ವ್ಯಕ್ತಿ, ಸಮುದಾಯ ಮತ್ತು ಸಮಾಜವೂ ಚರಿತ್ರೆಯಲ್ಲಿ ದೊಡ್ಡದನ್ನು ಸಾಧಿಸಿಲ್ಲ. ನಾಗರಿಕ ಮತ್ತು ಮಾನವೀಯ ಕೂಡ ಆಗಿಲ್ಲ. ********************************************* ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

Read Post »

ಅಂಕಣ ಸಂಗಾತಿ, ಕಬ್ಬಿಗರ ಅಬ್ಬಿ

ಅಂಕಣ ಬರಹ ಕಬ್ಬಿಗರ ಅಬ್ಬಿ ಹಣತೆ ಹಚ್ಚಿದ ಅಕ್ಷರ ದೀಪ ನಮ್ಮ ಅಜ್ಜಿ ಹಚ್ಚಿ  ಹಣತೆ ಬೆಳಕಲ್ಲಿ ತೆರೆದಳು ರಾಮಾಯಣ. ಹಣತೆ ಸಣ್ಣಗೆ ಬೆಳಗುವಾಗ ರಾಮ ಪುಟು ಪುಟು ಹೆಜ್ಜೆ ಹಾಕುತ್ತಿದ್ದ.ಜತೆಗೆ ಇನ್ನೂ ಮೂರು ತಮ್ಮ ತಮ್ಮ ತಮ್ಮಂದಿರು. ಎಷ್ಟು ಪ್ರೀತಿ ಮುಗ್ಧ ಬೆಳಕಿತ್ತು. ಕತೆ ಕೇಳುತ್ತಾ ನಮಗೆಲ್ಲ ಪುಳಕ. ಹಣತೆಯ ಬೆಳಕೂ ರಾಮನೂ ಜತೆ ಜತೆ ಬೆಳೆದರು. ವಿಶ್ವಾಮಿತ್ರನ ಕೈ ಹಿಡಿದು ಅಣ್ಣ ತಮ್ಮ ಗುರು ತೋರಿದ ಕಾಡುಹಾದಿಯಲ್ಲಿ ತಿಳಿವಿನ ಬೆಳದಿಂಗಳಿತ್ತು. ಕೆಂಗಣ್ಣ ದೈತ್ಯೆ ತಾಟಕಿಯ ಘೋರ ಆರ್ಭಟಕ್ಕೆ ಹಣತೆಯ ಪುಟ್ಟ ಜ್ವಾಲೆ ಕೆಂಪು ಕೆಂಪು ಓಲಾಡಿತು.ಅಜ್ಜಿ ಚಾಳೀಸು ಸರಿಪಡಿಸಿ ಪುಸ್ತಕದೊಳಗೇ ನೋಟ ನೆಟ್ಟರು. ಆ ಪುಸ್ತಕದೊಳಗೆ ಯಜ್ಞವಿತ್ತು. ಮಾರೀಚನಿದ್ದ, ಯಜ್ಞಕ್ಕೆ ನೆತ್ತರು ಸುರಿಯುತ್ತ ಆಗಸದಲ್ಲಿ. ಹಣತೆಯ ಬೆಳಕಲ್ಲಿ ಆತ ತುಂಬಾ ಭಯಾನಕನಂತೆ ಕಂಡ. ಅಜ್ಜೀ ಅಜ್ಜೀ..ಭಯವಾಗುತ್ತಿದೆ ಅಂದು ಮಕ್ಕಳು ಅಜ್ಜಿಯ ಮಡಿಲಲ್ಲಿ ಮುಖಮುಚ್ಚಿ ರಕ್ಷಣೆ ಪಡೆದರು.ರಾಮ ಬಾಣ ಹೂಡಿ, ಮಾರೀಚ ಯೋಜನ ದೂರ ಸಮುದ್ರಕ್ಕೆ ಬಿದ್ದ. ಹಣತೆಯ ಬೆಳಕೂ ಶಾಂತವಾಯಿತು. ಜನಕನ ರಾಜ ಭವನ ಬೆಳಗಿತು ಪುಟ್ಟ ಹಣತೆ. ಸೀತೆ ಬೆಳಗಿದಳು ಎಷ್ಟು ಚಂದ, ರಾಮ ಸ್ವಯಂವರದೀಪದ ಬೆಳಕಲ್ಲಿ. ಕತೆ ಕೇಳುತ್ತಾ ಹುಡುಗಿಯರು ಸೀತೆಯಂತೇ ಕಂಡರು. ರಾಗರತಿಯ ಮತ್ತೇರಿದ ದೀಪ ಜ್ವಾಲೆ ನಡು ಬಳುಕಿಸಿ ನಲಿಯಿತು. ಪರಶುರಾಮನ ಕೋಪಾಗ್ನಿಗೆ, ಪುಸ್ತಕದ ಅಕ್ಷರಗಳು ಅಜ್ಜಿಯ ವರ್ಣನೆಗೆ ಕೆಂಪಡರಿದ್ದವು. ಸಮಚಿತ್ತ  ವಿನಯದ ತಂಪಿಗೆ ಬೆಳಕು ನಂದಲಿಲ್ಲ. ರಾಮ! ರಾಮ! ಮಂಥರೆ ಮೇಲೆ ದೀಪದ ಬೆಳಕು ಹೊಗೆ ಸುತ್ತಿ ಪುಸ್ತಕದೊಳಗೆಲ್ಲ ನೆರಳು ಹೊಗೆಯಾಡಿತು ರಾಮ ಕಾಡಿಗೆ ಹೊರಟ. ಅಜ್ಜಿ ದೀಪದ ಬತ್ತಿ ಸರಿಪಡಿಸಿದರು. ಬೆಳಕು ಸ್ಪಷ್ಟವಾದಾಗ ಕೈಕೇಯಿ ಮನಸ್ಸು ಹೊಗೆ ಮುಕ್ತ. ದಶರಥನ ಜೀವ ಅಕ್ಷರಗಳಿಂದ ಮುಕ್ತವಾದಾಗ ಅಜ್ಜಿ ದೀಪದ ಉಸಿರು ಆರಿಸಿದರು. ಮಲಗಿ ಮಕ್ಕಳೇ!. ಮುಂದಿನ ಕತೆ ನಾಳೆಗೆ. ಅಜ್ಜಿ ಪುನಃ ಹಚ್ಚಿದರು ಹಣತೆ. ಸುತ್ತಲೂ ಅಂಧಕಾರ. ಪುಸ್ತಕದೊಳಗೆ ದಂಡಕಾರಣ್ಯದ ಚಿತ್ರ. ಅಜ್ಜಿ ಓದುತ್ತಿದ್ದಂತೇ ದೀಪದ ಬೆಳಕಲ್ಲಿ ಋಷಿ ಮುನಿಗಳ ಆಶ್ರಮ, ತಪಸ್ಸು, ಅಕ್ಷರಗಳಾದವು. ಕುಣಿಯುತ್ತ ಬಂತು ಚಿನ್ನದ ಜಿಂಕೆ. ಚಂಚಲವಾಯಿತು ಹಣತೆ. ರಾಮನ ಕಳಿಸಿದಳು ಸೀತೆ, ಜಿಂಕೆಯ ಬಣ್ಣದ ಹಿಂದೆ. ‘ಹಾ ಸೀತೇ..ಹಾ ಲಕ್ಷ್ಮಣಾ’.. ಮರಣಾಕ್ರಂದನ, ಬೆಳಕು ಮುಗ್ಧವಾಗಿತ್ತು ಸೀತೆ ಲಕ್ಷ್ಮಣರೇಖೆ ದಾಟಿದ್ದಳು ಸೀತಾಪಹರಣ ಮಾಡಿದ ರಾವಣನ ಮೇಲೆ ಬೆಳಕಿನ ನೆರಳು ಕರ್ರಗೆ ಚೆಲ್ಲಿತ್ತು. ಅಜ್ಹಿಯ ಕಣ್ಣು ತೇವವಾಗಿ ಅಕ್ಷರಗಳು ಮಂದವಾದವು. ಕಿಷ್ಕಿಂಧೆಯಲ್ಲಿ ವಾಲಿ ಸುಗ್ರೀವ ನಡುವೆ ಎಷ್ಟೊಂದು ಪ್ರೀತಿಯಿತ್ತು. ಕಿಟಿಕಿಯಿಂದ ಗಾಳಿ ಬೀಸಿ, ಹಣತೆ ಬೆಳಕು ತುಯ್ದಾಡಿತು. ವಾಲಿಯ ಮನಸ್ಸಿನ ಮೇಲೆ ಶಂಕೆಯ ನೆರಳು ಬಿತ್ತು.ಸಹೋದರದ ಪದಸಂಧಿ ವಿಂಗಡಿಸಿತು. ಹನುಮನ ಮೇಲೆ ಬೆಳಕು ಚೆಲ್ಲಿತು ಹಣತೆ. ಸೀತಮ್ಮನ ಹುಡುಕುತ್ತ ಸಾಗರ ಹಾರಿದ ಕತೆ ಕೇಳುತ್ತಾ ನಾನೂ ನನ್ನ ಹಿಂಭಾಗ ಸವರಿದೆ! ಬಾಲ ಸಿಗಲಿಲ್ಲ. ಅಜ್ಜಿ ಅಂದರು..ದೀಪಕ್ಕೆ ಎಣ್ಣೆ ತುಂಬಲು, ಬತ್ತಿ ನೇರ ಮಾಡಲು. ಬೆಳಕ ಏಕಾಗ್ರ ಚಿತ್ತ. ಸಂಕ ಕಟ್ಟುವತ್ತ ಕೋಟಿ ಮರ್ಕಟ ಮನಸ್ಸು ಏಕಾಗ್ರ, ರಾಮ! ರಾಮ!. ರಾಮ ರಾವಣ ಪದಗಳು  ಸಮಸಮ ಹೊಳೆಯುತ್ತಿದ್ದವು. ಎರಡೂ ಪಾತ್ರಗಳು ಹಣತೆಯ ಬೆಳಕ ಹೀರಿ ಬೆಳೆಯುತ್ತಿದ್ದವು. ಅಸ್ತ್ರ ಶಸ್ತ್ರ ಶಾಸ್ತ್ರಗಳು ಪುಸ್ತಕದೊಳಗೆ ಸಾಲುಗಳು ದೀಪ ದೀಪ್ತಿಯಲ್ಲಿ ಬೆಳಗಿದವು. ರಾಮ ತೆರೆದ ತನ್ನ ಆದಿತ್ಯ ಹೃದಯ.ಒಳಗೆ ತುಂಬಾ ಬೆಳಕು ತುಂಬಲು. ರಾವಣನ ಹೃದಯ ಉಕ್ಕಿನ ಕವಚ. ಒಳಗೆ ಬೆಳಕು ತಲಪಲಿಲ್ಲ. ರಾವಣನ ಕತೆ ಮುಗಿಯಿತು. ರಾಮ ಲಕ್ಷ್ಮಣ ಸೀತೆ ಪುಷ್ಪಕ ವಿಮಾನವೇರಿ ಅಯೋಧ್ಯೆಗೆ ಬಂದಾಗ, ಅಜ್ಜಿಯ ರಾಮಾಯಣ ಪುಸ್ತಕದೊಳಗೆ ಸಾಲು ಸಾಲು ಹಣತೆ ಬೆಳಗಿ ಪುಟ್ಟ, ಮಕ್ಕಳ ಕಣ್ಣೊಳಗೆ ದೀಪಾವಳಿ!. ದೀಪ ಮತ್ತು ಬೆಳಕನ್ನು ಸೃಜನಶೀಲ ಮನಸ್ಸು ಹಲವು ಪ್ರತಿಮೆಗಳಾಗಿ ಕಾಣುತ್ತವೆ. ಬೆಳಕು ಮನಸ್ಸನ್ನು ಬೆಳಗುವಾಗ ಅದರ ಆಯಾಮಗಳು ನೂರಾರು. ಮನಸ್ಸಿನ ಕ್ಯಾನುವಾಸ್ ನಲ್ಲಿ ಚಿತ್ರಗಳು ಮೂಡಲು ಬೆಳಕು ಸಾಧನ ತಾನೇ. ನಾಟಕದ ಪಾತ್ರಗಳ ಭಾವಾಭಿವ್ಯಕ್ತಿಯೂ ಬೆಳಕಿನ ಬಣ್ಣಗಳನ್ನು ಸಂಯೋಜಿಸಿ ಅದಕ್ಕೆ ಹೊಸ ರೂಪ ಕೊಡುವುದೂ ಒಂದು ಕಲೆಯೇ. ಹಾಗಾಗಿ, ವಸ್ತುವನ್ನು ನಾವು ನೋಡುವ ಬಗೆಯಲ್ಲಿ ಬೆಳಕಿನ ಪಾತ್ರ ಅತ್ಯಂತ ಪ್ರಮುಖವಾದದ್ದೂ ಹೌದು,ಸಾಪೇಕ್ಷವಾದದ್ದೂ ಹೌದು. ಹಾಗೆ ಅಚಾನಕ್ಕಾಗಿ ಫ್ಲಾಷ್ ಆಗುವ ಬೆಳಕಲ್ಲಿ ರೂಪ ಹೇಗಿರಬಹುದು?. ಬೇಂದ್ರೆಯವರ “ಸ್ವರೂಪ ದೀಪ” ಕವಿತೆಯ ಸಾಲುಗಳು ಹಣತೆಯ ಬೆಳಕಲ್ಲಿ ಹೀಗೆ ಹೊಳೆಯುತ್ತವೆ. “ಬೆಳಕೀಗೆ ಕತ್ತಲೆ ಕೊಟ್ಟಾಗ ಮುದ್ದು ಮೂಡ್ಯಾನೋ ಚಂದಿರ ಹಗಲು ಹೋಯಿತು ಜಾರಿ ಬಟಾ ಬಯಲೆಲ್ಲಾ ಚುಕ್ಕಿಯ ಮಂದಿರ ಚಕಮಕ್ಕಿ ಹಾರೀ ಕಂಡಿತೋ ಮಾರಿ ಎಂದಿನದೀ ನೋಟ ಮೈಯೊಳಗ ಮೈಯೋ ಕೈಯೊಳಗ ಕೈಯೋ ಕರುಳಾಟ ಮರುಳಾಟ” ರಾತ್ರೆಯ ಕತ್ತಲಲ್ಲಿ ಆಗಸದ ಚಿತ್ತಾರದ ಅಡಿಯಲ್ಲಿ,  ಚಕಮಕ್ಕೀ ಹಾರಿದಾಗ ನೋಟದೊಳಗೆ ಮೂಡುವ ಚಿತ್ರಕ್ಕೆ ಪ್ರಾಪ್ತವಾಗುವ ಸ್ವರೂಪ ದೀಪದ ಮೇಲೆ ಅವಲಂಬಿತ,ಅಲ್ಲವೇ. ಒಲವು, ಜ್ಞಾನ ಎಲ್ಲವೂ ಬೆಳಕೇ. ದೀಪ ಹಚ್ಚುವುದೆಂದರೆ ಪ್ರಕಾಶಿಸುವುದೆಂದರೆ ಅದರಲ್ಲಿ ಋಣಾತ್ಮಕ ಅಂಶಗಳಿಗೆ ಎಡೆಯೇ ಇಲ್ಲ.  “ನೀ ಬಂದು ನಿಂದಿಲ್ಲಿ ದೀಪ ಹಚ್ಚಾ..” ಎಸ್ ವಿ ಪರಮೇಶ್ವರ ಭಟ್ಟ ಅವರು ಬರೆದ ಕವನದ ಪ್ರತೀ ಸಾಲುಗಳು ಸಾಲುದೀಪಾಕ್ಷರಗಳು. “ಪ್ರೀತಿಯ ಕರೆಕೇಳಿ  ಆತ್ಮನ ಮೊರೆಕೇಳಿ ನೀ ಬಂದು ನಿಂದಿಲ್ಲಿ ದೀಪ ಹಚ್ಚಾ ನಲ್ಲ ನೀ ಬಂದಂದು ಕಣ್ಣಾರೆ ಕಂಡಂದು ಮನೆಯೆಲ್ಲ ಹೊಳೆದಂತೆ ದೀಪ ಹಚ್ಚಾ ದೇಹದ ಗೂಡಲಿ ನಿನ್ನೊಲವು ಮೂಡಲಿ ಜಗವೆಲ್ಲ ನೋಡಲಿ ದೀಪ ಹಚ್ಚಾ ಬಾನಿನಂಗಳದಲ್ಲಿ ಚುಕ್ಕಿ ಹೊಳೆದೆಸೆವಂತೆ ನನ್ನ ಮನದಂಗಳದಿ ದೀಪ ಹಚ್ಚಾ ಹಳೆಬಾಳು ಸತ್ತಿತ್ತು ಕೊನೆಬಾಳು ಸುಟ್ಟಿತ್ತು ಹೊಸಬಾಳು ಹುಟ್ಟಿತ್ತು ದೀಪ ಹಚ್ಚಾ ಪ್ರೀತಿಯ ರತಿಗೆ ನೀ ಬೆಳಕಿನ ಆರತಿ ಬೆಳಗಿ ಕಲ್ಲಾರತಿ ದೀಪ ಹಚ್ಚಾ ಮೋಹದ ಮತಿಗೆ ನೀ ಸುಟ್ಟು ತೋರುವ ದೀಪ ಸುಜ್ಞಾನಪ್ರದೀಪ ದೀಪ ಹಚ್ಚಾ ಜ್ಯೋತಿಸ್ವರೂಪನೆ ಸ್ವಯಂಪ್ರಕಾಶನೆ ತೇಜೋರೂಪನೆ ದೀಪ ಹಚ್ಚಾ ವಿಶ್ವಮೋಹಿತಚರಣ ವಿವಿಧವಿಶ್ವಾಭರಣ ಆನಂದದ ಕಿರಣ ದೀಪ ಹಚ್ಚಾ” ಪ್ರೀತಿ, ಒಲವು, ಆತ್ಮಜ್ಯೋತಿ, ಮನಸ್ಸೊಳಗಿನ ಭಾವ, ಬದುಕು, ಜ್ಞಾನ, ಆನಂದ, ಇವೆಲ್ಲ ಕವಿಗೆ ದೀಪದ ಬೆಳಕಾಗಿ ಹಬ್ಬವಾಗುತ್ತೆ. ಅಕ್ಷರಗಳು ಜ್ಞಾನದ,ಕಲೆಯ, ಚಿಂತನೆಯ, ಸೃಜನಾತ್ಮಕ ಪ್ರಕ್ರಿಯೆಯ ಜೀವಕೋಶಗಳು ತಾನೇ. ಹಾಗಾದರೆ ಭಾಷೆ?. – ಡಿ. ಎಸ್. ಕರ್ಕಿ ಅವರ ಈ ಪದ್ಯದಲ್ಲಿ ಕನ್ನಡವೂ ದೀಪವೇ. “ಹಚ್ಚೇವು ಕನ್ನಡದ ದೀಪ ಕರುನಾಡ ದೀಪ ಸಿರಿನುಡಿಯ ದೀಪ ಒಲವೆತ್ತಿ ತೋರುವ ದೀಪ” ಭಾಷೆಯೂ ದೀಪ, ಅದರ ಸಿರಿವಂತಿಕೆಯೂ ದೀಪ ಅದರೊಳಗೆ, ಅದರ ಮೂಲಕ ಮತ್ತು ಅದರತ್ತ ಇರುವ ಒಲವೂ ದೀಪವೇ. ಉರಿಸಿದಾಗ ಕರ್ಪೂರದಂತೆ ಭಾಷೆಯ ಕಂಪೂ ಹರಡುತ್ತದೆ,ಅಲ್ಲವೇ. ನರನರವನೆಲ್ಲ ಹುರಿಗೊಳಿಸಿ ಭಾಷೆಯ ಮುಲಕ ಹೊಸತನ ತುಂಬುವುದು ದೀಪೋಜ್ವಲನವೇ. “ಕರುಳೆಂಬ ಕುಡಿಗೆ ಮಿಂಚನ್ನೆ ಮುಡಿಸಿ ಹಚ್ಚೇವು ಕನ್ನಡದ ದೀಪ” ಎಂಬ ಸಾಲುಗಳು ಅಸ್ಮಿತೆಯ ದೀಪ ಹಚ್ಚುತ್ತೆ. ಬೇಂದ್ರೆಯವರ “ಚೈತನ್ಯದ ಪೂಜೆ” ಎಂಬ ಕವನದಲ್ಲಿ ದೀಪದೊಳಗಿನ ವಿಶ್ವಾತ್ಮ ಚೈತನ್ಯದ ಜ್ಯೋತಿಯಿದೆ. “ಚೈತನ್ಯದ ಪೂಜೆ ನಡೆದSದ ನೋಡS ತಂಗಿ।। ಅಭಂಗದ ಭಂಗೀS ।। ಪ ।। ಸತ್ಯ ಎಂಬುವ ನಿತ್ಯದ ದೀಪ ಸುತ್ತೆಲ್ಲಾ ಅವನದೇ ರೂಪ ಪ್ರೀತಿ ಎಂಬುವ ನೈವೇದ್ಯ ಇದು ಎಲ್ಲರ ಹೃದಯದ ಸಂವೇದ್ಯ.” ಸತ್ಯ ಎಂಬುವ ನಿತ್ಯದ ದೀಪ, ಸುತ್ತೆಲ್ಲ ಅವನದೇ ರೂಪ ಎನ್ನುತ್ತಾ, ಬೇಂದ್ರೆಯವರು ಚೈತನ್ಯದ ಆರಾಧನೆಯ ಮಾರ್ಗ ಕ್ಕೆ ಬೆಳಕು ಚೆಲ್ಲುತ್ತಾರೆ. ಕೆ.ಎಸ್ ನರಸಿಂಹ ಸ್ವಾಮಿಯವರು ಬರೆದ “ದೀಪವು ನಿನ್ನದೆ,ಗಾಳಿಯೂ ನಿನ್ನದೆ,ಆರದಿರಲಿ ಬೆಳಕು ” ಎನ್ನುವ ಸಾಲುಗಳು, ದೀಪವನ್ನು ಏಳು ಬೀಳುಗಳನ್ನು ಅನುಭವಿಸುತ್ತಾ ಸಾಗುವ ಬದುಕಿಗೆ ಪ್ರತಿಮೆಯಾಗಿಸುತ್ತಾರೆ. ಅವರ ದೀಪಾವಳಿ ಕವನವೂ ಹಾಗೆಯೇ ದೀಪವನ್ನು ಹಲವು ರೂಪಕವಾಗಿ ಬೆಳಗಿಸುತ್ತೆ. ಹೂವು ಬಳ್ಳಿಗೆ ದೀಪ ; ಹಸಿರು ಬಯಲಿಗೆ ದೀಪ ; ಅನ್ನುತ್ತಾ ಅವರು ದೀಪಕ್ಕೆ ಹೊಸ ವ್ಯಾಖ್ಯಾನ ಕೊಡುವ “ಬಲ್ಮೆ ತೋಳಿಗೆ ದೀಪ” ಎಂಬ ಸಾಲು ಬರೆಯುತ್ತಾರೆ. ಅವರ ಈ ಸಾಲುಗಳನ್ನು ಗಮನಿಸಿ!. “ಸಹನೆ ಅನುಭವ – ದೀಪ ಬದುಕಿನಲ್ಲಿ ಕರುಣೆ ನಂದಾದೀಪ ಲೋಕದಲ್ಲಿ” ಅಕ್ಷರಗಳನ್ನು ದೀಪವಾಗಿ ಕಾಣುತ್ತಾ ಅವರು ಬರೆಯುತ್ತಾರೆ.. “ಕತ್ತಲೆಯ ಪುಟಗಳಲಿ ಬೆಳಕಿನಕ್ಷರಗಳಲಿ, ದೀಪಗಳ ಸಂದೇಶ ಥಳಥಳಿಸಲಿ !” ದೀಪದ ಬಗ್ಗೆ ಎನ್.ಎಸ್.ಲಕ್ಷ್ಮೀ ನಾರಾಯಣ ಭಟ್ಟರು ಬರೆದ ಕವನ ಅನನ್ಯ ಭಾವದ ಒಲುಮೆಯ ದೀಪವೇ. “ಮಾನವನೆದೆಯಲಿ ಆರದೆ ಉರಿಯಲಿ. ದೇವರು ಹಚ್ಚಿದ ದೀಪ ರೇಗುವ ದನಿಗೂ ರಾಗವು ಒಲಿಯಲಿ ಮೂಡಲಿ ಮಧುರಾಲಾಪ” ಹಮ್ಮು ಬಿಮ್ಮುಗಳ ಮರುಳುಗಾಡಿನಲಿ ಎಲ್ಲೋ ಥಣ್ಣನೆ ಚಿಲುಮೆ ತಾಪವ ಹರಿಸಿ ಕಾಪಾಡುವುದು ಒಳಗೇ ಸಣ್ಣಗೆ ಒಲುಮೆ.” ಇವುಗಳಿಗೆಲ್ಲ ಭಿನ್ನವಾಗಿ ಶಿವರುದ್ರಪ್ಪನವರು ಬರೆದ ಕವನ  “ನನ್ನ ಹಣತೆ” “ಹಣತೆ ಹಚ್ಚುತ್ತೇನೆ ನಾನೂ. ಈ ಕತ್ತಲನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ; ಲೆಕ್ಕವೇ ಇರದ ದೀಪಾವಳಿಯ ಹಡಗುಗಳೇ ಇದರಲ್ಲಿ ಮುಳುಗಿ ಕರಗಿರುವಾಗ ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ. ಆದರೂ ಹಣತೆ ಹಚ್ಚುತ್ತೇನೆ ನಾನೂ; ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ, ಇರುವಷ್ಟು ಹೊತ್ತು ನಿನ್ನ ಮುಖ ನಾನು, ನನ್ನ ಮುಖ ನೀನು ನೋಡಬಹುದೆಂಬ ಒಂದೇ ಒಂದು ಆಸೆಯಿಂದ; ಹಣತೆ ಆರಿದ ಮೇಲೆ, ನೀನು ಯಾರೋ, ಮತ್ತೆ ನಾನು ಯಾರೋ.”    ಹಣತೆಯ ಬೆಳಕಲ್ಲಿ, ನಿನ್ನ ಮುಖ ನಾನು, ನನ್ನ ಮುಖ ನೀನು ನೋಡಬಹುದೆಂಬ ಒಂದೇ ಆಸೆಯಿಂದ, ಹಣತೆ ಹಚ್ಚುವ ಕವಿ, ಜೀವಪ್ರೇಮವನ್ನೂ ಜೀವನಪ್ರೇಮವನ್ನೂ, ವಾಸ್ತವಾನುಭವದ ಸತ್ಯವನ್ನು ಮಾತ್ರ ಅವಲಂಬಿಸುತ್ತಾರೆ. ಅಕ್ಷರಗಳ ಮೂಲಕ ಅನುಭೂತಿ ಹುಡುಕುವ, ನಮ್ಮ ಈ ಪ್ರಯತ್ನದಲ್ಲಿ,  ಅಕ್ಷರಮಾಲೆ, ದೀಪದ ಸಾಲುಗಳು. ಈ ಅಕ್ಷರ ದೀಪಾವಳಿಯ ಶುಭಾಶಯಗಳು, ನಿಮಗೆಲ್ಲರಿಗೂ. ****************************************** ಹುಟ್ಟಿದ್ದು, ಗಡಿನಾಡ ಜಿಲ್ಲೆ,ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, “ಮೆಟೀರಿಯಲ್ಸ್ ಸೈನ್ಸ್” ನಲ್ಲಿ ಸ್ನಾತಕೋತ್ತರ ಪದವಿ, ಐ.ಐ.ಟಿ. ಮದರಾಸು, ವಿನಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಕಳೆದ ಎರಡು ದಶಕದಲ್ಲಿ, ಡಿ.ಆರ್.ಡಿ.ಒ. ಹೈದರಾಬಾದ್ ನಲ್ಲಿ, ವಿಜ್ಞಾನಿಯಾಗಿ ವೃತ್ತಿ. ಸಾಹಿತ್ಯ, ಓದು ಬರಹ, ಹಾಗೂ ಸಂಗೀತ ಹೃದಯಕ್ಕೆ,ಹತ್ತಿರ

Read Post »

ಅಂಕಣ ಸಂಗಾತಿ, ಚಿತ್ತ ಜನ್ಯ

ಅಂಕಣ ಬರಹ ಹವ್ಯಾಸವೆಂಬ ಮಂದಹಾಸ… ಹವ್ಯಾಸಗಳಿಲ್ಲದ ಮನುಷ್ಯನೆಂದರೆ ಎಲೆ ಹೂವು ಹಣ್ಣು ಏನೊಂದೂ ಇಲ್ಲದ ಬೋಳು ಮರವೇ ಸರಿ. ಬದುಕು ದುರ್ಬರವೆನಿಸಿದ ಹೊತ್ತಲ್ಲೂ ಸಹನೀಯತೆ ತರುವ ಶಕ್ತಿ ಇದ್ದರೆ ಅದು ಹವ್ಯಾಸಗಳಿಗೆ ಮಾತ್ರ. ಹೊತ್ತು ಕಳೆಯಲು ವ್ಯರ್ಥ ಅಭ್ಯಾಸಗಳನ್ನು ಮಾಡಿಕೊಳ್ಳುವ ಬದಲು ಸಮಯವನ್ನು ಗೌರವಿಸುವಂತ ಅರ್ಥಪೂರ್ಣ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಹವ್ಯಾಸಗಳು ಬರಿದೆ ಮೂರ್ತಿಗೆ ಮಾಡಿದ ಅಲಂಕಾರದಂತೆ ನಮ್ಮನ್ನು ಚೆಂದಗಾಣಿಸುತ್ತದೆ. ಹವ್ಯಾಸವೆನ್ನುವ ಟಾರ್ಚು ನಮ್ಮ ಕೈಯಲ್ಲಿದ್ದರೆ ಅದು ದಟ್ಟ ಕಾಡಿನ ನಡುವೆಯೂ ಕೈಹಿಡಿದು ನಡೆಸಿ ಗುರಿ ಮುಟ್ಟಿಸಬಲ್ಲದು, ಮನಸ್ಸನ್ನು ಪ್ರಫುಲ್ಲಗೊಳಿಸಬಲ್ಲದು, ನೋವನ್ನು ಮರೆಸಿ ಮಾಯಿಸಬಲ್ಲದು. ವ್ಯಕ್ತಿಯೊಬ್ಬನ ವ್ಯಕ್ತಿತ್ವವನ್ನು ಹವ್ಯಾಸಗಳ ಒರೆಗೆ ಹಚ್ಚುವುದರಿಂದ ಪುಟಕ್ಕಿಟ್ಟ ಚಿನ್ನವೆಂದು ಸಾಬೀತಾಗುತ್ತದೆ. ಸಾಯಲು ನಿಂತವನಲ್ಲೂ ಒಂದು ಸಣ್ಣ ಹಾಡು, ಒಂದು ಸಣ್ಣ ಕವಿತೆ, ಚೆಂದದ ಚಿತ್ರ ಬದುಕುವ ಆಸೆಯನ್ನು ಹುಟ್ಟಿಸುತ್ತದೆಯೆಂದರೆ ಅದರ ಶಕ್ತಿಯನ್ನು ಯಾರಾದರೂ ಊಹಿಸಬಹುದು. ಹವ್ಯಾಸಗಳೆಂದಾಕ್ಷಣ ನಾವದರಲ್ಲಿ ಅತೀತವಾದ್ದೇನನ್ನೋ ಸಾಧಿಸಲೇ ಬೇಕಂತಿಲ್ಲ. ಅದು ನಮ್ಮ ಆತ್ಮ ಸಂತೋಷಕ್ಕೆ ಒದಗಿ ಬಂದರೂ ಸಾಕು. ಹಳ್ಳಿಗಳಲ್ಲಿ ಅದೆಷ್ಟೋ ಅನಕ್ಷರಸ್ಥರು ತಮಗರಿವಿಲ್ಲದೇ ತಮ್ಮ ವಿರಾಮದ ವೇಳೆಯಲ್ಲಿ ಸೋಬಾನೆ ಪದ ಹಾಡಿಕೊಳ್ಳುವುದು, ಹಸೆ ಹೊಯ್ಯುವುದು, ಜಾನಪದ ಕತೆಗಳನ್ನು ಹೇಳುವುದು, ಕೌದಿ, ದಟ್ಟ ಹೊಲೆಯುವುದು, ಹೊಲಿಗೆ, ಕಸೂತಿ, ರಂಗೋಲಿ, ಹಗ್ಗ ಹೆಣೆಯುವುದು, ಬುಟ್ಟಿ ಹೆಣೆಯುವುದು, ಮನೆ ಮುಂದೆ ಕೈತೋಟ ಮಾಡಿ ಅದರಲ್ಲಿ ನಾನಾ ಬಗೆಯ ಗಿಡಗಳನ್ನು ತಂದು ನೆಟ್ಟು ಬೆಳೆಸುವುದು…. ಇಂತಹ ಅದೆಷ್ಟೋ ಚಟುವಟಿಕೆಗಳಲ್ಲಿ ನಿರತರಾಗಿರುತ್ತಾರೆ. ಇದರಿಂದ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯವೂ ಚೆನ್ನಾಗಿರುತ್ತದೆ. “ಖಾಲಿ ಮೆದುಳು, ದೆವ್ವದ ಮನೆ” ಎನ್ನುವ ಹಾಗೆ ಖಾಲಿ ಕುಳಿತಾಗ ಅನವಶ್ಯಕ ಚಿಂತೆಗಳು ಮುತ್ತಿ ಆರೋಗ್ಯ ಹಾಳುಮಾಡುತ್ತವೆ. ಇಲ್ಲಾ ದೈಹಿಕ ಮತ್ತು ಮಾನಸಿಕ ನಿಷ್ಕ್ರಿಯತೆಯಿಂದಾಗಿ ದೇಹ ರೋಗಗಳ ಗೂಡಾಗುತ್ತದೆ. ಹವ್ಯಾಸಗಳನ್ನು ಬೆಳೆಸಿಕೊಳ್ಳಲು ವಯಸ್ಸಿನ ಮಿತಿ ಅಂತ ಏನೂ ಇಲ್ಲ. ನಮ್ಮ ಆಸಕ್ತಿ ಅಭಿರುಚಿಗೆ ಅನುಗುಣವಾಗಿ ಯಾವುದಾದರೂ ಸರಿ ಹವ್ಯಾಸಗಳನ್ನು ಬೆಳೆಸಿಕೊಳ್ಳಬಹುದು. ಯಾವುದೇ ವಯಸ್ಸಿನವರಾಗಲೀ ತಮ್ಮ ವಿರಾಮದ ವೇಳೆಯಲ್ಲಿ ಅನವಶ್ಯಕವಾಗಿ ಸಮಯ ಹಾಳುಮಾಡುವ ಬದಲು ಹವ್ಯಾಸಕ್ಕೆಂದು ಬಳಸಿಕೊಂಡರಾಯಿತು. ಈ ಅಭ್ಯಾಸ, ರೂಢಿ, ಚಟ ಎನ್ನುವ ಪದಗಳು ಹವ್ಯಾಸಕ್ಕೆ ಸಮೀಪದಲ್ಲಿದ್ದರೂ ಹವ್ಯಾಸವನ್ನು ಸರಿಯಾಗಿ ಅರ್ಥೈಸಿಕೊಂಡು ಅಳವಡಿಸಿಕೊಳ್ಳಬೇಕಿದೆ ನಾವು. ಮಕ್ಕಳು ಏನನ್ನಾದರೂ ಸುಲಭವಾಗಿ ಬಹಳ ಬೇಗ ಕಲಿತುಬಿಡುತ್ತರೆ. ಹಾಗಾಗಿ  ರಜೆಯಲ್ಲಿ ಅವರು ವಿವಿಧ ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡಬಹುದು. ಸ್ವಲ್ಪ ದೊಡ್ಡ ಮಕ್ಕಳಿಗೆ ಸಣ್ಣ ಪುಟ್ಟ ತಿನಿಸು ಪಾನೀಯ ತಯಾರಿಸುವುದನ್ನೂ ಹೇಳಿಕೊಡಬಹುದು. ಮನೆಯನ್ನು ಸ್ವಚ್ಛವಾಗಿ ಒಪ್ಪವಾಗಿ ಇಟ್ಟುಕೊಳ್ಳುವುದು, ಹಿರಿಯರಿಗೆ ಸಹಾಯ ಮಾಡುವುದು, ಸಂಗೀತ,  ಚಿತ್ರಕಲೆ, ಕರಕುಶಲ ವಸ್ತುಗಳ ತಯಾರಿಕೆ,  ಕತೆ-ಕವನ ಬರೆಯುವುದು, ಉತ್ತಮ ಪುಸ್ತಕಗಳನ್ನು ಓದುವುದು, ಆಟ ಆಡುವುದು, ಕೃಷಿ, ತೋಟಗಾರಿಕೆ, ಈಜು, ನಾಟಕ, ಯೋಗ, ಭಾಷಣ, ಗೀತಾ ಪಠಣ, ಕರಾಟೆ ಹೀಗೆ ನಾನಾ ಹವ್ಯಾಸಗಳಲ್ಲಿ ಮಕ್ಕಳು ತೊಡಗಿಕೊಳ್ಳಬಹುದು. ಮಕ್ಕಳಿಗೆ ಸ್ಫೂರ್ತಿ ಮತ್ತು ಮಾದರಿಯಾಗುವಂತೆ ಹಿರಿಯರೂ ಸಹ ಹವ್ಯಾಸಗಳಲ್ಲಿ ತೊಡಗಿಕೊಳ್ಳಬಹುದು. ಇಂದಿನ ಜಗತ್ತು ನಮ್ಮ ಹವ್ಯಾಸಗಳನ್ನೇ ವೃತ್ತಿಯಾಗಿಸಿಕೊಳ್ಳಲು ಅನುಕೂಲಕರವಾಗಿದೆ. ಅದೆಷ್ಟೋ ಜನ ಹಾಗೆ ತಮ್ಮ ಹವ್ಯಾಸವನ್ನೇ ವೃತ್ತಿಯಾಗಿಸಿಕೊಂಡು ಯಶಸ್ಸೂ ಕಂಡಿದ್ದಾರೆ. ಕರಕುಶಲ ವಸ್ತು ತಯಾರಿಕೆ, ಹೊಲಿಗೆ ಮತ್ತು ಕಸೂತಿ ಕೆಲಸ, ಸಂಗೀತ, ನೃತ್ಯ, ನಟನೆ, ಬರಹ, ಅಡುಗೆಯಂತಹ ಹವ್ಯಾಸಗಳು ಜೀವನದ ನಿರ್ವಹಣೆಗೂ ಆಧಾರವಾಗಿವೆ. ಅದೆಷ್ಟೋ ಮಹಿಳೆಯರು ಇಂತಹ ಗೃಹಾಧಾರಿತ ಉದ್ದಿಮೆಗಳಿಂದಾಗಿ ಸಾಕಷ್ಟು ಸಾಧನೆ ಮಾಡಿ ಹೆಸರುವಾಸಿಯಾಗಿದ್ದಾರೆ ಕೂಡ. ಇದಲ್ಲದೆ ಆರೋಗ್ಯದ ದೃಷ್ಟಿಯಿಂದ ಪ್ರತಿ ನಿತ್ಯ ಮುಂಜಾನೆ ಮತ್ತು ಸಂಜೆಗಳಲ್ಲಿ ನಡಿಗೆ, ಓಟ, ವ್ಯಾಯಾಮ, ಹಗ್ಗದಾಟ, ಶಟಲ್, ಟೆನ್ನಿಕಾಯ್ಟ್ ನಂತಹ ಅಲ್ಪ ದೈಹಿಕ ಶ್ರಮ ಬೇಡುವಂತಹ ಕೆಲಸಗಳಲ್ಲಿ ತೊಡಗಿಕೊಳ್ಳಬಹುದು. ಇದು ಬದಲಾದ ನಮ್ಮ ಜೀವನ ಶೈಲಿಗೆ ಮತ್ತು ಕೋವಿಡ್ 19 ನಂತಹ ಪ್ಯಾಂಡಾಮಿಕ್ ಕಾಯಿಲೆಗಳ ವಿರುದ್ಧ ಪರಿಹಾರವಾಗಿಯೂ ತೋರುತ್ತದೆ. ನಾವಿರುವ ಪ್ರದೇಶದಲ್ಲೇ ಸಣ್ಣ ಪುಟ್ಟ ಸಂಘ ಮಾಡಿಕೊಂಡು ಸ್ವಚ್ಛತೆ, ನೀರಿನ ಸಂರಕ್ಷಣೆ, ಪರಿಸರ ಸಂರಕ್ಷಣೆ ಹೀಗೆ ಹಲವಾರು ಅಂಶಗಳನ್ನಿಟ್ಟುಕೊಂಡು ಜನರನ್ನು ಒಟ್ಟಾಗಿ ಸೇರಿಸಿ ರಚನಾತ್ಮಕ ಕಾರ್ಯಗಳಲ್ಲಿಯೂ ತೊಡಗಿಕೊಳ್ಳಬಹುದು. ಹವ್ಯಾಸಹಳಿಂದ ಚಿಂತೆ ದೂರವಾಗುತ್ತದೆ. ಆತ್ಮವಿಶ್ವಾಸ ಬೆಳೆಯುತ್ತದೆ. ಬುದ್ಧಿ ಮನಸ್ಸು ವಿಕಸನಗೊಳ್ಳುತ್ತದೆ. ಬದುಕಿನಲ್ಲಿ ಹೊಸ ಜೀವನೋತ್ಸಾಹ ತುಂಬಿಕೊಳ್ಳುತ್ತದೆ. ಧನಾತ್ಮಕ ಚಿಂತನೆ, ಪ್ರೀತಿ, ನಂಬಿಕೆ, ವಿಶ್ವಾಸ, ಸಹಕಾರದಂತಹ ಮೌಲ್ಯಗಳು ಬೆಳೆದು ಮನುಷ್ಯ ಪ್ರಬುದ್ಧನಾಗುತ್ತಾನೆ. ಹಾಗಾಗಿ ಯಾರೇ ಆಗಲಿ ಮನುಷ್ಯರಾಗಿ ಹುಟ್ಟಿದ ಮೇಲೆ ಒಂದಾದರೂ ಹವ್ಯಾಸ ಇಟ್ಟುಕೊಳ್ಳಲೇ ಬೇಕು. ಇತ್ತೀಚಿನ ದಿನಗಳಲ್ಲಿ ಶಾಲೆಗಳು, ಶಿಕ್ಷಕರು, ಹಾಗೂ ಪೋಷಕರು ಮಕ್ಕಳ ಹವ್ಯಾಸಗಳ ಕಡೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಶಾಲೆಗಳಲ್ಲಿ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ಅಳವಡಿಸಿಕೊಂಡ ಮೇಲೆ ಸಹಪಠ್ಯ ಚಟುವಟಿಕೆಗಳು ಮತ್ತು ಪಠ್ಯೇತರ ಚುಟುವಟಿಕೆಗಳೂ ಸಮಾನ ಪ್ರಾಶಸ್ತ್ಯ ಪಡೆದುಕೊಳ್ಳುತ್ತಿವೆ. ಇದರಿಂದಾಗಿ ಎಳೆವಿನಲ್ಲೇ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಉತ್ತೇಜನ ನೀಡುವುದು ಸಾಧ್ಯವಾಗಿದೆ. ಪ್ರತಿಭಾ ಕಾರಂಜಿಯಂತಹ ವೇದಿಕೆಗಳೂ ಸಹ ಮಕ್ಕಳ ಹವ್ಯಾಸಗಳನ್ನು ಬೆಳೆಸುತ್ತಿವೆ. ಮಾಧ್ಯಮಗಳು ಮತ್ತು ವಿವಿಧ ಚ್ಯಾನಲ್ಲುಗಳೂ ಸಹ ಹಲವಾರು ಬಗೆಯ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಮಕ್ಕಳು ಮತ್ತು ಹಿರಿಯರಿಬ್ಬರ ಪ್ರತಿಭೆಗೂ ಪ್ರಚಾರ ಮತ್ತು ವೇದಿಕೆ  ಕಲ್ಪಿಸಿಕೊಡುತ್ತಿವೆ. ಅಕ್ಬರನ ಆಸ್ಥಾನದಲ್ಲಿದ್ದ ಸಂಗೀತ ವಿದ್ವಾಂಸರಾದ ತಾನಸೇನರು ತಮ್ಮ ಗುರು ಹರಿದಾಸರು ತಮಗಿಂತಲೂ ಶ್ರೇಷ್ಠ ಗಾಯಕರು ಎಂದು ಹೇಳುತ್ತಿದ್ದರು. ಕಾರಣ ತಾನಸೇನರು ಅಕ್ಬರರನ್ನು ಮೆಚ್ಚಿಸಲು ಹಾಡುವವರಾಗಿದ್ದರು. ಆದರೆ ಹರಿದಾಸರು ಆತ್ಮ ಸಂತೋಷಕ್ಕಾಗಿ ಮಾತ್ರ, ಜಗತ್ತಿನಲ್ಲಿ ನಾದ ಹುಟ್ಟುವಷ್ಟೇ ಸಹಜವಾಗಿ ಹಾಡುತ್ತಿದ್ದರು. ಇಬ್ಬರೂ ಶ್ರೇಷ್ಠರೇ. ಆದರೆ ನಮ್ಮ ಲಕ್ಷ್ಯ ಯಾವುದು ಎಂಬುದು ನಮಗೆ ಸ್ಪಷ್ಟವಿರಬೇಕು. ಇನ್ನಾದರೂ ಸಮಯವಿಲ್ಲ, ಕೆಲಸ ಜಾಸ್ತಿ, ನಂಗ್ಯಾವುದರಲ್ಲೂ ಆಸಕ್ತಿ ಇಲ್ಲ ಅಂತೆಲ್ಲ ಸಬೂಬು ಹೇಳುವ ಬದಲು ಯಾವುದಾದರೊಂದು ಹವ್ಯಾಸವನ್ನು ಬೆಳೆಸಿಕೊಂಡು ಜೀವನ್ಮುಖಿಯಾಗಿ ಹವ್ಯಾಸದ ಮಂದಹಾಸ ಬೀರಬೇಕಿರುವುದು ಈ ಕಾಲದ ತುರ್ತು. **************************************** ಆಶಾಜಗದೀಶ್ ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.

Read Post »

ಅಂಕಣ ಸಂಗಾತಿ, ಹೊಸ ದನಿ-ಹೊಸ ಬನಿ

ಅಂಕಣ ಬರಹ ಹೊದಬನಿ-ಹೊಸದನಿ-14 ಅಗತ್ಯಕ್ಕಿಂತ ಲಂಬಿಸಿಯೂ ಹ್ರಸ್ವವಾಗೇ ಉಳಿಯುವ ಆಸ್ಪರಿಯವರ ಕವಿತೆಗಳು ಚನ್ನಬಸವ ಆಸ್ಪರಿ . ಅವ್ವನೂ ಕಸೂತಿ ಹಾಕುತ್ತಿದ್ದಳು ಅಪ್ಪನ ತೂತುಬಿದ್ದ ಬನಿಯನ್ನಿನ ಮೇಲೆ ಉಟ್ಟರೆ ಅಂಡು ಕಾಣಿಸುವ ನನ್ನ ದೊಗಲೆ ಚಡ್ಡಿಗೆ ಅಲ್ಲಲ್ಲಿ ಹರಿದ ಪಾಟೀಚೀಲಕ್ಕೆ ಎಂದು ತನ್ನೊಳಗಿನ ಸಂಕಟಗಳನ್ನು ಕವಿತೆಯಾಗಿಸುವ ಚನ್ನಬಸವ ಆಸ್ಪರಿ ಫೇಸ್ಬುಕ್ಕಿನಲ್ಲಿ ಬರೆಯುತ್ತಿರುವ ಹಲವು ಹೆಸರುಗಳ ನಡುವೆ ಅನುಭವದ ಆಧಾರ ಪಡೆದ ಸಶಕ್ತ ಕವಿತೆಗಳನ್ನು  ಅಪರೂಪಕ್ಕೆ ಪ್ರಕಟಿಸುತ್ತಿರುತ್ತಾರೆ. ನಾವೆಲ್ಲ ಅವ್ವ ಎನ್ನುವ ಕವಿತೆಯ ಸರ್ವ ಸ್ವಾಮ್ಯವನ್ನೂ ಲಂಕೇಶರಿಗೆ ಅರ್ಪಿಸಿಬಿಟ್ಟಿರುವಾಗಲೂ ಒಬ್ಬೊಬ್ಬರಿಗೆ ಒಂದೊಂದು ಬಗೆಯಲ್ಲಿ ಕಾಡುವ ಕಾಪಾಡಿದ ಅವ್ವನ ನೆನಪು ಅನನ್ಯ. ಅಸ್ಪರಿಯವರ ಈ ಕವಿತೆ ಅವಧಿಯಲ್ಲೂ ಪ್ರಕಟವಾಗಿತ್ತು. ಈ ಪದ್ಯದಲ್ಲೇ ಕವಿ ತಾಯಿಯನ್ನು ಹೀಗೂ ಕಾಣುತ್ತಾನೆ; ನಂಜನೇ ಬಳುವಳಿಯಾಗಿ ಕೊಟ್ಟವರ ಅಳುವ ಕೊರಳಿಗೂ ಸಾಂತ್ವನದ ಹೆಗಲೊಡ್ಡಿದ ಅವ್ವ ಶಿಲುಬೆಗಂಟಿದ ಹನಿ ಹನಿ ರಕ್ತದಲೂ ಅಂತಃಕರಣದ ಕಡುಲಿಕ್ಕಿಸಿದ ಏಸು ಅವರಿವರ ಬದುಕು ಸಿಂಗರಿಸುತ್ತಲೇ ಕಾಲನ ಪಾದದಡಿ ನರಳಿದ ಪಾಪದ ಹೂ ಎಂದು ಬರೆಯುವಾಗ “ಪಾಪದ ಹೂ” ಎಂದು ಯಾಕಾಗಿ ಬರೆದರೋ ಏನೋ, ಹೊಸ ಕಾಲದ ಹುಡುಗರು ತಾವು ಬಳಸಿದ ಶಬ್ದಗಳ ಬಗ್ಗೆ ತುಂಬಾ ಎಚ್ಚರದಲ್ಲಿರುವ ಅಗತ್ಯತೆ ಇದ್ದೇ ಇದೆ. ಪ್ರಾಯಶಃ ಲಂಕೇಶರು ಬೋದಿಲೇರನನ್ನು ಅನುವಾದಿಸಿದ್ದ ಪಾಪದ ಹೂ ಎನ್ನುವ ಶೀರ್ಷಿಕೆ ಈ ಕವಿಗೆ ತಕ್ಷಣಕ್ಕೆ ಹೊಳೆದಿರಬೇಕು. ಶ್ರೀ ಚನ್ನಬಸವ ಆಸ್ಪರಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕಾರಟಗಿಯವರು. ವೃತ್ತಿಯಿಂದ ಪ್ರೌಢ ಶಾಲಾ ಆಂಗ್ಲ ಭಾಷಾ ಶಿಕ್ಷಕ. ಪ್ರಸ್ತುತ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಇಂಗ್ಲಿಷ್‌ ವಿಭಾಗದಲ್ಲಿ ಸಂಶೋಧನಾ ವಿದ್ಯಾರ್ಥಿ.ಅನುವಾದದಲ್ಲಿ ವಿಶೇಷ ಆಸಕ್ತಿ.ವಿಶ್ವವಾಣಿ, ವಿಜಯ ಕರ್ನಾಟಕ, ಅವಧಿ ಪತ್ರಿಕೆಗಳಲ್ಲಿ ಬಿಡಿ ಕವಿತೆಗಳು ಪ್ರಕಟವಾಗಿವೆ.ಸಂಕ್ರಮಣ ಕಾವ್ಯ ಪುರಸ್ಕಾರ ಹಾಗೂ ಪ್ರತಿಲಿಪಿ ಕವನ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದಾರೆ. ಇಲಾಖೆಯಿಂದ ಪೂರ್ವಾನುಮತಿ ಪಡೆದು ಪಾರ್ಟ್ ಟೈಮ್ ಕ್ಯಾಂಡಿಡೇಟ್ ಆಗಿ ಪಿ.ಹೆಚ್.ಡಿ.ಮಾಡುತ್ತಿರುವ ಇವರು ಪಿ.ಯು.ಉಪನ್ಯಾಸಕರ ನೇಮಕಾತಿಗಾಗಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಗಂಗಾವತಿ ತಾಲೂಕಿನ ಶ್ರೀರಾಮನಗರದ ಸರಕಾರಿ ಪ.ಪೂ.ಕಾಲೇಜನ್ನು ಆಯ್ಕೆ ಮಾಡಿಕೊಂಡಿದ್ದು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಇಂಗ್ಲಿಷ್ ವಿಷಯದಲ್ಲಿ ರಾಜ್ಯಕ್ಕೆ ನಾಲ್ಕನೇ ರ್ಯಾಂಕ್ ಹಾಗೂ ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ಮೊದಲನೇ ರ್ಯಾಂಕ್ ಪಡೆದ ಪ್ರತಿಭಾಶಾಲಿ,  ಸರ್ಕಾರಿ ನೌಕರಿ ಸೇರಿದ ಕೂಡಲೇ ಸಂಬಳ ಸಾರಿಗೆ ಇಂಕ್ರಿಮೆಂಟೆಂದು ಲೆಕ್ಕ ಹಾಕುತ್ತ ಕಳೆದೇ ಹೋಗುವ ಬದಲು ಇಲಾಖೆಯು ಒದಗಿಸಿರುವ ಅವಕಾಶವನ್ನು ಉಪಯೋಗಿಸಿಕೊಂಡ ಮಾದರಿ ಯುವಕ. ಕವಿತೆ ಬರೆಯುವುದೆಂದರೆ ಶಬ್ದದ ಧಾರಾಳ ಬಳಕೆ ಮತ್ತು ವಾಚಾಳಿತನವೇ ಆಗುತ್ತಿರುವ ಹೊತ್ತಲ್ಲಿ ಈ ಕವಿ ಶಬ್ದಗಳ ಶಬ್ದದ ಸಂತೆಯೊಳಗೂ ಮೌನವನ್ನು ಹುಡುವುದು ವಿಶೇಷ ಲಕ್ಷಣವೇ ಆಗಿದೆ. ಮಾತಾಗದೇ ಹೊರಬರಲು ಕಾತರಿಸಿ ಮಾತಾಗಿ ಹೆಗಲು ನೀಡದ ಮೌನವಾಗಿ ತಬ್ಬಿ ರಮಿಸದ ಎಡಬಿಡಂಗಿ ಶಬ್ದಗಳ ಹಡೆದ ಮನಸಿಗೆ ಗೊತ್ತಾಗಲಿಲ್ಲವೇ ಗಂಡಾಗಿ ಗುಡುಗದ ಹೆಣ್ಣಾಗಿ ಮರುಗದ ತನ್ನ ಸಂತಾನ ಕೇವಲ ಚಟದ ಫಲವೆಂದು? ಎಂದೆನ್ನುವಾಗ ಮಾತ ಪಾತಳಿಯ ಅಸ್ತಿವಾರವನ್ನೇ ಅಲುಗಿಸಿ ಆಳದಾಳದ ಗೊಂದಲವನ್ನು ಹೊರಹಾಕುತ್ತಾರೆ ಮತ್ತು ಕವಿತೆಯ ಅಂತ್ಯದಲ್ಲಿ ಶಬ್ದಕೆ ಅಂಟದ ಮಾತು ನಿಶ್ಯಬ್ದ ಮೀರಿದ ಮೌನ ದಾಟಬಹುದು ಅಂತಃಕರಣದ ನಾವೆ ಎದೆಯಿಂದ ಎದೆಗೆ ಎನ್ನುತ್ತಾರಲ್ಲ ಅದು ಸುಲಭಕ್ಕೆ ಸಿಗದ ಸಾಮಾನ್ಯ ಸಂಗತಿಗೆ ನಿಲುಕದ ವಸ್ತುವೂ ಆಗಿದೆ. ಬೋಧಿಯಿಂದ ಬುದ್ಧನಿಗೆ ಜ್ಞಾನವೋ ಬುದ್ಧನಿಂದ ಬೋಧಿಗೆ ಮುಕ್ತಿಯೋ ! ಹಸನು ದಾರಿಯಲಿ ನಡೆದವನದಿರಲಿ ನಡೆದ ದಾರಿಯನೇ ಹಸನುಗೊಳಿಸಿದವನ ಪಾದ ಧೂಳಿಗೂ ಮುಕ್ತಿ ಎಂದು “ಮುಕ್ತಿ ಮಾಯೆ” ಎನ್ನುವ ಕವಿತೆಯಲ್ಲಿ ಕಚ್ಚಾ ರಸ್ತೆಯಲ್ಲಿ ನಡೆದೂ ಅದನ್ನೇ ಹಸನು ಮಾಡಿದವನ ಪಾದದ ಧೂಳಿಗೂ ಮುಕ್ತಿ ಸಿಕ್ಕಿತು ಎನ್ನುವಾಗ ಪದ್ಯದ ಆಶಯವನ್ನೇ ಗೊಂದಲದ ಗೂಡಾಗಿಸಿಬಿಟ್ಟಿದ್ದಾರೆ. ಇದು ಸಹಜವಾಗಿ ಆಗುವ ತಪ್ಪು. ಕವಿಯೊಬ್ಬ ತಾನು ಬರೆದುದನ್ನು ಕೆಲವು ದಿನ ಹಾಗೇ ಬಿಟ್ಟು ಕೆಲ ದಿದ ನಂತರ ಅದು ತನ್ನ ರಚನೆಯೇ ಅಲ್ಲವೆಂದುಕೊಂಡು ಓದಿದರೆ ತಪ್ಪು ಕಾಣಿಸುತ್ತದೆ. ಬರೆದ ಕೂಡಲೇ ಪ್ರಕಟಿಸಿ ಬಿಡುವ ಅವಸರ ಈ ಬಗೆಯ ತಪ್ಪನ್ನು ಮಾಡಿಸಿ ಬಿಡುತ್ತದೆ. ನನ್ನ ಮುಖದ ಮೇಲೆ ಥೇಟ್ ಅಪ್ಪನದೇ ಮೂಗು ತುಟಿಗಳಿಗೆ ಅವ್ವನದೇ ನಗು ಅವೇ ಚಿಕ್ಕ ಕಣ್ಣುಗಳು ಚಿಕ್ಕಪ್ಪನಿಗಿರುವಂತೆಯೇ ಮಾತಿನಲಿ ಅಜ್ಜನದೇ ಓಘ ನಡೆದರೆ ಸೋದರಮಾವನ ಗತ್ತು ನನ್ನದೇನಿದೆ? ಎನ್ನುವ ಕವಿತೆಯ ಸಾಲುಗಳು ಈ ಕವಿಯ ಭಿನ್ನ ಧ್ವನಿಗೆ ಪುರಾವೆಯಾಗಿವೆ. ಈ ನಡುವೆ ಅದರಲ್ಲೂ ಈ ಎಫ್ಬಿಯಲ್ಲಿ ಪದ್ಯಗಳೆಂದು ಪ್ರಕಟವಾಗುವ ೯೦% ಪದ್ಯಗಳು ಸ್ವಕ್ಕೆ ಉರುಳು ಹಾಕಿಕೊಳ್ಳುತ್ತಿರುವಾಗ ಈ ಕವಿ ತನ್ನ ಅಸ್ತಿತ್ವ ಅನ್ಯರ ಪ್ರಭಾವದಿಂದ ಆದುದು ಎಂಬ ಪ್ರಜ್ಞೆಯಿಂದ ಆದರೆ ಅದನ್ನು ನೆಗೆಟೀವ್ ಅರ್ಥದಲ್ಲಿ ಹೇಳದೇ ಇರುವುದು ಭಿನ್ನತೆ ಅಲ್ಲದೇ ಮತ್ತಿನ್ನೇನು? ಹುಟ್ಟು ಪಡೆವ ಜೀವಕ್ಕೆ ನೀಗದ ಪರಿಪಾಟಲು ಜೀವ ಪಡೆವ ಕವಿತೆಗೆ ಸಾವಿರ ಸವಾಲು ಎಂದು ಸ್ಪಷ್ಟವಾಗಿ ಅರಿತಿರುವ ಈ ಕವಿಗೆ ಕವಿತೆಯ ರಚನೆ ಸುಲಭದ್ದೇನೂ ಅಲ್ಲ ಎನ್ನುವ ಸತ್ಯ ಗೊತ್ತಿದೆ. ಇದು ಕೂಡ ಅಪರೂಪವೇ. ಸದ್ಯದ ಬಹುತೇಕರು ಪದವೊಂದಕ್ಕೆ ಇರುವ ಅರ್ಥವನ್ನೇ ಅರಿಯದೇ ಚಡಪಡಿಸುತ್ತ ಇರುವಾಗ ಚನ್ನಬಸವ ಆಸ್ಪರಿಯವರು ತಮ್ಮನ್ನು ತಾವೇ ನಿಕಷಕ್ಕೆ ಒಡ್ಡಿ ಕೊಳ್ಳುತ್ತ ಪದ್ಯರಚನೆಯ ಸಂದರ್ಭ ಮತ್ತು ಸಮಯ ಅರಿತವರೂ ಹೌದೆಂದು ಇದು‌ ಪುರಾವೆ ನೀಡಿದೆ. ಬುದ್ಧ ಕತ್ತಲು ಮತ್ತು ದೀಪಗಳ ಜೊತೆಗೆ ತನ್ನ ಒಳಗನ್ನು ತೋಯಿಸಿದ ಕುರಿತೇ ಪದ್ಯವನ್ನಾಗಿ ಬೆಳಸುವ ಆಸ್ಪರಿ ಒಮ್ಮೊಮ್ಮೆ ತೀವ್ರ ವಿಷಾದದ ಸುಳಿಗೂ ಸಿಕ್ಕಿ ಬೀಳುತ್ತಾರೆ ಮತ್ತು ಆ ಅಂಥ ಸುಳಿಯಿಂದ ಹೊರಬರುವುದು ದುಸ್ತರ ಎನ್ನುತ್ತಲೇ ಕಡು ಕಷ್ಟದ ಬದುಕು ತೋರುಗಾಣಿಸಿದ ಬೆಳಕ ದಾರಿಯನ್ನೂ ಸ್ಮರಿಸುತ್ತಾರೆ. ತನ್ನೊಳಗನ್ನೇ ಶೋಧಿಸದೇ ಅನ್ಯರ ಹುಳುಕನ್ನು ಎತ್ತಿಯಾಡುವ ಕಾಲದಲ್ಲಿ ಇದು ಭಿನ್ನ‌. ಆದರೂ ಅಗತ್ಯಕ್ಕಿಂತ ಹೆಚ್ಚು ವಿಸ್ತರಿಸುವ ಇವರ ಕವಿತೆಗಳಿಗೆ  ಸಂಕಲನಕ್ಕೆ (ಕತ್ತರಿ ಪ್ರಯೋಗ) ಅಂದರೆ ಅಗತ್ಯಕ್ಕಿಂತ ಉದ್ದವಾದುದನ್ನು ಹ್ರಸ್ವಗೊಳಿಸುವ ಅಗತ್ಯತೆ ಇದ್ದೇ ಇದೆ. ನಿಜದ ಕವಿತೆಗಳು ಈ ಕವಿಯ ಒಳಗೇ ಉಳಿದಿವೆ. ಪ್ರಾಯಶಃ ಕಂಡ ಕಷ್ಟಗಳು ಉಂಡ ಸಂಕಟಗಳಾಚೆಯೂ ಇರುವ ಸಂತಸವನ್ನೂ ಇವರು  ಹೊರತಾರದೇ ಇದ್ದರೆ ಬರಿಯ ವಿಷಾದದಲ್ಲೇ ಈ ಕವಿತೆಗಳು ನರಳಬಹುದು. ಬದುಕೆಂದರೆ ವಿಷಾದ ಸಂತಸ ಭರವಸೆ ಆಸೆ ನಿರಾಸೆಗಳ ಒಟ್ಟು ಮೊತ್ತ. ಬರಿಯ ದುಃಖಾಗ್ನಿಯೇ ಅಲ್ಲದೆ ಸಂತಸದ ಸಂಭ್ರಮದ ಘಳಿಗೆಯ ದಾಖಲೆಯಾಗಿಯೂ ಇವರ ಕವಿತೆಗಳು ಹೊಮ್ಮಲೇ ಬೇಕಾದ ಅನಿವಾರ್ಯವನ್ನು ಈ ಕವಿ ಅರಿಯುವ ಅಗತ್ಯತೆ ಇದೆ. ಚನ್ನಬಸವ ಆಸ್ಪರಿಯವರ ಉದ್ದೇಶಿತ ಸಂಕಲನ ಸದ್ಯವೇ ಹೊರ ಬರಲಿದೆಯಂತೆ. ಅದಕ್ಕೂ ಮೊದಲು ಅವರು ಅದರ ಹಸ್ತಪ್ರತಿಯನ್ನು ಪುಸ್ತಕ ಪ್ರಾಧಿಕಾರವು ಪ್ರತಿವರ್ಷ ಕೊಡುವ ಸಹಾಯಧನದ ಯೋಜನೆಯಲ್ಲಿ ಪ್ರಕಟಿಸಿದರೆ ಅವರ ಹೆಸರು ಕರ್ನಾಟಕದ ಉದ್ದಗಲಕ್ಕೂ ಗೊತ್ತಾಗುತ್ತದೆ ಎನ್ನುವ ಆಶಯದೊಂದಿಗೆ ಅವರ ಪದ್ಯಗಳನ್ನು ಕುರಿತ ಈ ಟಿಪ್ಪಣಿಗೆ ಅವರದೇ ಐದು ಕವಿತೆಗಳನ್ನು ಸೇರಿಸಿ ಮುಗಿಸುತ್ತೇನೆ. ೧. ಶಬ್ದ ಸಂತೆಯಲಿ ಮೌನದ ಮೆರವಣಿಗೆ ಕೆಲವು ಶಬ್ದಗಳು ತುಂಬ ವಿಚಿತ್ರ ಹೊರಬಂದು ಮಾತಾಗುವುದೇ ಇಲ್ಲ ! ಕೇವಲ ತುಟಿ ಕಿನಾರೆಗಳ ಅರಳಿಸಿಯೋ ಮೂಗು ಮುರಿದೋ ಹಣೆಗೆರೆಗಳ ಬರೆದೋ ಕೆನ್ನೆಗುಳಿಗಳಲಿ ನರ್ತಿಸಿಯೋ ಕಣ್ ಹುಬ್ಬು ಕೊಂಕಿಸಿಯೋ ಇಲ್ಲಾ ಕಣ್ಣು ತಿರುವಿಯೋ ಹೊತ್ತು ತಂದ ಸಂದೇಶ ರವಾನಿಸಿಬಿಡುತ್ತವೆ ಅಖಂಡ ಮೌನದಲಿ… ನಿರುಮ್ಮಳ ನಿದ್ದೆಗೆ ಹಿತದಿಂಬು ಕೆಲವು ಸಲ ಮತ್ತೆ ಹಲವು ಸಲ ಬೂದಿ ಮುಚ್ಚಿದ ಕೆಂಡ ಕೆಲವೊಮ್ಮೆ ಶಬ್ದಗಳು ಅಬ್ಬರಿಸುತ್ತವೆ ಮಾತು ಸೋಲುತ್ತದೆ ಆದರೂ ಉದುರುತ್ತಲೇ ಹೋಗುತ್ತವೆ ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಅಹಂಕಾರದ ಕಣ್ಣಾಮುಚ್ಚಾಲೆಯಲಿ ಮೈಮರೆವ ಮನಸಿಗೆ ಚಾಟಿ ಏಟು ಯಾವ ಲೆಕ್ಕ? ಒಮ್ಮೊಮ್ಮೆ ಶಬ್ದಗಳು ಜಾರುತ್ತವೆ ನಾಲಗೆಯಿಂದ ಚಿಮ್ಮುತ್ತವೆ ಬಾಯಿಂದ ತಿವಿಯುತ್ತವೆ ಒಲವ ಹನಿಗೆ ಬಾಯ್ದೆರೆದ ದೈನೇಸಿ ಎದೆಯನು ಇಂಥ ಶಬ್ದಗಳ ಅನಾಯಾಸವಾಗಿ ಹಡೆದು ಧ್ವನಿಬಟ್ಟೆ ತೊಡಿಸಿ ಸಿಂಗರಿಸಿ ಮಾತು ಎಂದು ಹೆಸರಿಟ್ಟು ತೇಲಿಬಿಟ್ಟ ಮನಸಿಗೆ ವೇಗ ರಭಸ ದಾರಿ ಗುರಿ ಯೇ ಗೊತ್ತಿಲ್ಲದಿರುವಾಗ ಅವು ಹಾದರಕ್ಕೆ ಹುಟ್ಟಿದ ಮಕ್ಕಳಲ್ಲದೆ ಮತ್ತೇನು? ಇನ್ನೂ ಕೆಲ ಶಬ್ದಗಳು ಮೈಮುರಿಯುತ್ತವೆ ಆಕಳಿಸುತ್ತವೆ ತೂಕಡಿಸುತ್ತವೆ ಜೋಲಿ ಹೊಡೆಯುತ್ತಲೇ ನಾಲಿಗೆ ಪಲ್ಲಂಗದಲ್ಲಿ ಪವಡಿಸುತ್ತವೆ ಮತ್ತೆ ಕೆಲವು ಗಂಟಲ ಕಣಿವೆಯಲ್ಲಿ ಜಾರಿ ಬೀಳುತ್ತವೆ ತುಟಿಸರಹದ್ದುಗಳಲಿ ಸಿಕ್ಕಿ ನರಳುತ್ತವೆ ಹಲ್ಲುಗಂಬಗಳಿಗೆ ನೇಣು ಬಿಗಿದುಕೊಳ್ಳುತ್ತವೆ ಮಾತಾಗಿ ಹೆಗಲು ನೀಡದ ಮೌನವಾಗಿ ತಬ್ಬಿ ರಮಿಸದ ಎಡಬಿಡಂಗಿ ಶಬ್ದಗಳ ಹಡೆದ ಮನಸಿಗೆ ಗೊತ್ತಾಗಲಿಲ್ಲವೇ ಗಂಡಾಗಿ ಗುಡುಗದ ಹೆಣ್ಣಾಗಿ ಮರುಗದ ತನ್ನ ಸಂತಾನ ಕೇವಲ ಚಟದ ಫಲವೆಂದು? ಹೀಗೂ ಉಂಟು- ಶಬ್ದಗಳನ್ನು ಒದ್ದು ಹೋದ ಬುದ್ಧ ಲೋಕದ ಮಾತಾದ ಬಹುಶಃ ಈ ಲೋಕದ ಪಾಪಗಳೆಲ್ಲ ತೀರಿದ ದಿನ ಅಥವಾ ಮಾಡಿದ ಮಾಡುವ ಪ್ರತಿ ಪಾಪಕ್ಕೂ ವಿಮೋಚನಾ ಪತ್ರ ದೊರೆತೀತೆಂಬ ಭರವಸೆ ದಕ್ಕಿದ ದಿನ ಅಥವಾ ಪಾಪ ಪುಣ್ಯಗಳಾಚೆಯ ನಿರ್ವಾತದಲ್ಲಿ ನೆಲೆಯಾದ ದಿನ ಉದುರಬಹುದು ಶಬ್ದಗಳು ನಿಶ್ಯಬ್ದದ ಕೂಸುಗಳಾಗಿ ಮಾರ್ದನಿಸಬಹುದು ಆತ್ಮಗರ್ಭದಿಂದ ಶಬ್ದಕೆ ಅಂಟದ ಮಾತು ನಿಶ್ಯಬ್ದ ಮೀರಿದ ಮೌನ ದಾಟಬಹುದು ಅಂತಃಕರಣದ ನಾವೆ ಎದೆಯಿಂದ ಎದೆಗೆ             -ಚನ್ನಬಸವ ಆಸ್ಪರಿ ೨.ಮುಕ್ತಿ ಮಾಯೆ ಕವಿತೆ ಒಡಲಿಂದ ಹಠಾತ್ತನೆ ಕಳಚಿದ ಅನಾಥ ಸಾಲು ಭಾವಕ್ಕೆ ಭಾರವೇ? ಮುಕ್ತಿ ಕವಿತೆಗೋ ದೈನೇಸಿ ಪದಗಳಿಗೋ ! ಟೊಂಗೆ ತೋಳಿಂದ ಹಗುರ ಕುಸಿದ ಹಣ್ಣೆಲೆ ಮರಬಸಿರಿಗೆ ಭಾರವೇ? ಮುಕ್ತಿ ಟೊಂಗೆಗೋ ಹಣ್ಣೆಲೆಯ ಜೀವಕೋ ! ಗಾಳಿ ಉಸಿರಿಂದ ಸರಕ್ಕನೆ ಸೂತ್ರ ಹರಿದ ಗಾಳಿಪಟ ದಾರಕ್ಕೆ ಭಾರವೇ? ಮುಕ್ತಿ ಆಕಾಶಕ್ಕೋ ತಲೆಮರೆಸಿಕೊಂಡ ಗಾಳಿಪಟಕ್ಕೋ ! ಬಾನಗೊಂಚಲಿಂದ ಧುತ್ತನೆ ಉದುರಿದ ನಕ್ಷತ್ರ ಬೆಳಕಿಗೆ ಭಾರವೇ? ಮುಕ್ತಿ ಬೆಂಕಿಗೋ ಕುದಿಕುದಿದು ಆರಿದ ನಕ್ಷತ್ರದೊಡಲಿಗೋ ! ಬೋಧಿಯಿಂದ ಬುದ್ಧನಿಗೆ ಜ್ಞಾನವೋ ಬುದ್ಧನಿಂದ ಬೋಧಿಗೆ ಮುಕ್ತಿಯೋ ! ಹಸನು ದಾರಿಯಲಿ ನಡೆದವನದಿರಲಿ ನಡೆದ ದಾರಿಯನೇ ಹಸನುಗೊಳಿಸಿದವನ ಪಾದ ಧೂಳಿಗೂ ಮುಕ್ತಿ                            -ಚನ್ನಬಸವ ಆಸ್ಪರಿ ೩. ಅವ್ವ ಎಂಬ ರೇಖಾಚಿತ್ರ ಅವ್ವ ಆಡಿ ಬಂದ ನನ್ನ ಅಂಗಾಲ ತೊಳೆಯಲಿಲ್ಲ ಕೇಕು ಕತ್ತರಿಸಿ ಮೋಂಬತ್ತಿ ಆರಿಸುವ ನನ್ನ  ಸಂಭ್ರಮಕ್ಕೆ ಸಾಕ್ಷಿಯಾಗಲಿಲ್ಲ ಅಪ್ಪ ಮನೆ ಕಟ್ಟಲಿಲ್ಲ ಅವ್ವ ಮನೆಯ ಗೌಡತಿ ಆಗಲಿಲ್ಲ ಗುಳೇ ಹೊರಟ ಅಪ್ಪನ ಹಿಂದೆ ಗಂಟು ಮೂಟೆ ಕಟ್ಟಿ ಊರೂರು ಅಲೆದಳು ಮರುಮಾತನಾಡದೆ ಸಾಕಿದ ನಾಯಿ ಯಜಮಾನನ್ನು ಹಿಂಬಾಲಿಸಿದಂತೆ ಸುಮ್ಮನೆ ಬಾಲ ಅಲ್ಲಾಡಿಸಿಕೊಂಡು ಅಪ್ಪನಿಗೆ ಬಣ್ಣ ಬಣ್ಣದ ನಿಲುವಂಗಿ ತೊಡಿಸಿ ತಾನೇ ಬಣ್ಣದ ಪತಂಗವಾಗುತ್ತಿದ್ದ ಅವ್ವನ ಮಾಸಿದ ಸೀರೆ ಸೆರಗಿನ ತುಂಬ ಹಳಸಿದೆದೆಯ ಕನಸುಗಳು ಉಳಿದರ್ಧ ಬದುಕು ನೀರ ಮೇಲೆ ತೇಲಿ ಬಿಟ್ಟ ಬಾಗಿನಕ್ಕೆ ಮಾಡಿದ ಸಿಂಗಾರ ಅವ್ವನೂ ಕಸೂತಿ ಹಾಕುತ್ತಿದ್ದಳು ಅಪ್ಪನ ತೂತುಬಿದ್ದ ಬನಿಯನ್ನಿನ ಮೇಲೆ ಉಟ್ಟರೆ ಅಂಡು ಕಾಣಿಸುವ ನನ್ನ ದೊಗಲೆ ಚಡ್ಡಿಗೆ ಅಲ್ಲಲ್ಲಿ ಹರಿದ ಪಾಟೀಚೀಲಕ್ಕೆ ಪುಸ್ತಕದಲ್ಲಿಟ್ಟ ನವಿಲುಗರಿ ಇನ್ನೂ ಮರಿ ಹಾಕಿಲ್ಲ ಪಾಟೀಚೀಲದ ಹೊಲಿಗೆಗಂಟಿದ ಅವ್ವನ ಬೆರಳ ತುದಿಯ ಬಿಸಿ ಇನ್ನೂ ಆರಿಲ್ಲ ನಂಜನೇ ಬಳುವಳಿಯಾಗಿ ಕೊಟ್ಟವರ ಅಳುವ ಕೊರಳಿಗೂ ಸಾಂತ್ವನದ ಹೆಗಲೊಡ್ಡಿದ ಅವ್ವ ಶಿಲುಬೆಗಂಟಿದ ಹನಿ ಹನಿ ರಕ್ತದಲೂ ಅಂತಃಕರಣದ ಕಡುಲಿಕ್ಕಿಸಿದ ಏಸು ಅವರಿವರ ಬದುಕು ಸಿಂಗರಿಸುತ್ತಲೇ ಕಾಲನ ಪಾದದಡಿ ನರಳಿದ ಪಾಪದ ಹೂ ವಿಚಿತ್ರ ನರಳಿಕೆಗಳನುಂಡು ತೇಗುವ ವಾರ್ಡಿನ ಬಿಳಿ ಗೋಡೆಗಳ ಮಧ್ಯೆ

Read Post »

ಅಂಕಣ ಸಂಗಾತಿ, ಮುಖಾಮುಖಿ

ಅಂಕಣ ಬರಹ ಒಮ್ಮೊಮ್ಮೆ ಪಾತ್ರೆ ತಿಕ್ಕುವಾಗಲೂ ಕವಿತೆಯ ಹೊಳಹುಗಾಣುತ್ತದೆ ಹೇಮಲತಾ ವಸ್ತ್ರದ. ಪರಿಚಯ: ಎಂಎ, ಎಂಇಡಿ, ಪಿಜಿ ಡಿಪ್ಲೋಮಾ ಇನ್ ಇಂಗ್ಲಿಷ್. ವಿಜಯಪುರ ಗ್ರಾಮೀಣ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿದ್ದಾರೆ. ಊರು: ಸಿಂದಗಿ.  ಜಿಲ್ಲೆ: ವಿಜಯಪುರ. ಕೃತಿಗಳು: ಅವ್ವನಿಗೊಂದು ಪತ್ರ (ಕವನಸಂಕಲನ). ಪೃಥ್ವಿಯೊಡಲು(ಕಥಾಸಂಕಲನ)(ಅಚ್ಚಿನಲ್ಲಿದೆ). ಗಜಲ್ ಸಂಕಲನಅಚ್ಚಿನಲ್ಲಿದೆ. ಅಕ್ಕನಾಗಮ್ಮ (ನಾಟಕ)(ಅಚ್ಚಿನಲ್ಲಿ) ಶೈಕ್ಷಣಿಕ, ಸಾಹಿತ್ಯಕ ಲೇಖನಗಳು. ಮಕ್ಕಳ ಕಥೆಗಳು, ಕವನಗಳು. ಕ್ರೀಯಾಸಂಶೋದನೆ (ಬಾಲಕಾರ್ಮಿಕಪದ್ಧತಿ). ಗುಲ್ಬರ್ಗಾ ವಿಶ್ವವಿದ್ಯಾಲಯ ದ ಎಂಎ ಮೂರನೇ ಸೆಮ್ (ಆಧುನಿಕ ಕಾವ್ಯ ಸಂಗ್ರಹ-೨೦೧೨) ಗೆ ಕನ್ನಡಗಜಲ್ಗಳು, ಕವನಗಳು ಪಠ್ಯವಾಗಿವೆ.  ಪ್ರಜಾವಾಣಿ, ಮಯೂರ, ವಿಜಯಕರ್ನಾಟಕ ಇತ್ಯಾದಿ ಪತ್ರಿಕೆಗಳಲ್ಲಿ ಕವನ, ಗಜಲುಗಳು ಮತ್ತು ಲೇಖನಗಳು ಪ್ರಕಟವಾಗಿವೆ. ಚಂದನ ದೂರದರ್ಶನದ  ಕವಿಗೋಷ್ಠಿಗಳಲ್ಲಿ ಕವನ ವಾಚನ ಮಾಡಿದ್ದಾರೆ.‌ ಅಕ್ಕಮಹಾದೇವಿ ವಿ.ವಿ, ಗುಲ್ಬರ್ಗ ವಿ.ವಿ, ಕನ್ನಡ ಸಾಹಿತ್ಯ ಪರಿಷತ್ತು, ಶರಣ ಸಾಹಿತ್ಯ ಪರಿಷತ್ತು ಇತ್ಯಾದಿಗಳಲ್ಲಿ ಉಪನ್ಯಾಸ. ವಿಜಯಪುರ ಆಕಾಶವಾಣಿಯಲ್ಲಿ ಚಿಂತನಗಳ ಪ್ರಸಾರ. ಕಥೆ, ಕವನಗಳ ಪ್ರಸಾರವಾಗಿವೆ. ಸಂದ ಗೌರವಗಳು : ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ (2018). ಹಾಗೂ ಶಿಕ್ಷಣ ಕ್ಷೇತ್ರದ ‘ಗುರುಶ್ರೇಷ್ಠ ‘ ಪುರಸ್ಕಾರ.(2017) ಸಂದರ್ಶನ: ಧಮಿನಿಸಲ್ಪಟ್ಟ ಎಲ್ಲದಕ್ಕೂ ದನಿಯಾಗುವ ಹಂಬಲ ನನ್ನ ಕವಿತೆಗೆ ನೀವು ಕವಿತೆಗಳನ್ನು ಯಾಕೆ ಬರೆಯುವಿರಿ?  ಬರೆದಾದ ಮೇಲಿನ ನನ್ನ ತುಡಿತ ಕಡಿಮೆಯಗುವುದಕ್ಕೆ.  ಸಿಗುವ ತೃಪ್ತಿ, ಸಮಾಧಾನಕ್ಕೆ,. ಕಿಂಚಿತ್ ಆದರೂ ಸಮಾಜದ ಋಣ ತೀರಿಸಬಹುದು(ಭ್ರಮೆ) ಎಂಬುದಕ್ಕೆ. ಮುಖ್ಯವಾಗಿ ದಮನಿಸಲ್ಪಟ್ಟ ಎಲ್ಲದಕ್ಕೂsss ದನಿಯಾಗುವ ಹಂಬಲಕ್ಕೆ ಬರೆಯುತ್ತೇನೆ. ಕವಿತೆ ಹುಟ್ಟುವ ಕ್ಷಣ ಯಾವುದು?  ಇಂಥಹದ್ದೆ  ಕ್ಷಣ ಎನ್ನಲಾಗದು. ಒಮ್ಮೊಮ್ಮೆ ಪಾತ್ರೆ ತಿಕ್ಕುವಾಗಲೂ ಹೊಳಹುಗಾಣುತ್ತದೆ. ನಿಮ್ಮ ಕವಿತೆಗಳಲ್ಲಿ ‌ಪದೇ ಪದೇ ಕಾಡುವ ವಿಷಯ ಯಾವುದು? ಕವಿತೆಗಳ ವಸ್ತು ಯಾವುದು? ಬದುಕಿನ ಎಲ್ಲ ಮೂರ್ತ ಮತ್ತು ಅಮೂರ್ತಗಳು. ಸ್ವಲ್ಪ ಹೆಚ್ಚು ಅನ್ನುವಂತಿರುವುದು ಸ್ತ್ರೀ ಸಂವೇದನೆಗಳ ಅಭಿವ್ಯಕ್ತಿ. ಗೊತ್ತಿದ್ದೂ ಏನೂ ಮಾಡಲಾಗದ ಅಸಹಾಯಕತೆ, ನೋವಿಗೆ ತುತ್ತಾದ ಜೀವಗಳ ಕಣ್ಣೋಟ ತುಂಬ ಕಾಡುತ್ತವೆ. ಕವಿತೆಗಳಲ್ಲಿ ಬಾಲ್ಯ,ಹರೆಯ ಇಣುಕಿದೆಯಾ? ಇಣುಕಿದೆ. ಬಾಲ್ಯ ಮತ್ತು ಹರೆಯದ ಪ್ರಭಾವವೇ ಅಂತಹದ್ದು. ಪ್ರಸ್ತುತ ರಾಜಕೀಯ ಸನ್ನಿವೇಶಕ್ಕೆ ಕವಿಯಾಗಿ ಹೇಗೆ ಪ್ರತಿಕ್ರಿಯಿಸುವಿರಿ? ಸ್ವಾರ್ಥ, ದುರಾಸೆ ಮತ್ತು ನಿರ್ಲಜ್ಯ ರಾಜಕಾರಣವಿಂದು ವಿಜ್ರಂಭಿಸುತ್ತಿದೆ. ಪ್ರಜಾಪ್ರಭುತ್ವದಲ್ಲಿ ವ್ಯಕ್ತಿ ಪೂಜೆ ಯಾವತ್ತಿಗೂ ಅಪಾಯಕಾರಿಯೇ. ಇದರಿಂದ ದೋಷಗಳು ಕಾಣಿಸದೇ ಹೋಗುತ್ತವೆ. ರಾಷ್ಟ್ರದ ಬೆಳವಣಿಗೆಗಾಗಿ ಮೌಲ್ಯಯುತ ದೂರಾಲೋಚನೆಗಳಿರುವ ಯೋಜನೆಗಳು ಮತ್ತು ಪ್ರಾಮಾಣಿಕ ಪ್ರಯತ್ನದ ಕೊರತೆ ಕಾಣುತ್ತಿದೆ. ಬರಿ ಕಲ್ಯಾಣ ಯೋಜನೆಗಳಿಂದ ಬಲಿಷ್ಠ ರಾಷ್ಟ್ರ ಕಟ್ಟಲಾಗದು. ಪ್ರಸ್ತುತ ರಾಜಕೀಯ ವ್ಯವಸ್ಥೆಯೆ ಅಪಮೌಲ್ಯಗೊಂಡಿದೆ. ದೇವರು ಧರ್ಮದ ಬಗ್ಗೆ ನಿಮ್ಮ ನಿಲುವೇನು?  ಶರಣ ಧರ್ಮ ನನ್ನದು. ಜಾತಿಯಲ್ಲಿ ನಂಬಿಕೆಯಿಲ್ಲ. ಮೂರ್ತ ಕಲ್ಪನೆಗಳಲ್ಲ ನನ್ನ ದೇವರು. ಮಾನವೀಯತೆಯ ಸಾಕಾರವನ್ನು ದೇವರೆನ್ನಬಹುದೇನೊ. ಪ್ರಸ್ತುತ ಸಾಂಸ್ಕೃತಿಕ ವಾತಾವರಣ ಹೇಗಿದೆ? ಪ್ರಸ್ತುತ ಸಾಂಸ್ಕೃತಿಕ ವಾತಾವರಣ ಪರವಾಗಿಲ್ಲ ಅನಿಸುವಂತಿದೆ ಅಷ್ಟೆ. ತಾರತಮ್ಯದ ಕಸ ತೆಗೆಯಬೇಕಿದೆ. ಸಾಂಸ್ಕೃತಿಕ ಶ್ರೀಮಂತಿಕೆ ಕರಗಿದೆ. ಸಾಹಿತ್ಯದ ರಾಜಕೀಯದ ಬಗ್ಗೆ ನಿಮಗೆ ಏನನಿಸುತ್ತದೆ? ರಾಜಕಾರಣದಲ್ಲಿ ಸಾಹಿತ್ಯ ಇರಬೇಕೆ ವಿನಾ ಸಾಹಿತ್ಯದಲ್ಲಿ ರಾಜಕಾರಣವಿರಬಾರದು. ಸಾಹಿತಿ ಮಾತ್ರ ಮುನ್ನೆಲೆಗೆ ಬರುತ್ತಾನೆ. ಸಾಹಿತ್ಯ ದಿವಾಳಿಯಾಗುತ್ತದೆ. ಇಂದು ಸಾಹಿತ್ಯ ವಲಯದ ರಾಜಕಾರಣದ ಕುರಿತು ವಿಷಾದವಿದೆ. ದೇಶದ ಚಲನೆಯ ಬಗ್ಗೆ ನಿಮಗೇ‌ನನಿಸುತ್ತಿದೆ?   ನಿಜಕ್ಕೂ ದೇಶದ ಚಲನೆ ಹಿಮ್ಮುಖವಾಗಿದೆ ಎನಿಸುತ್ತಿದೆ. ಬಂಡವಾಳಶಾಹಿ ಗಹಗಹಿಸುತ್ತಿದೆ. ಅಸಹಿಷ್ಣುತೆ ಎಲ್ಲ ವಲಯಗಳಲ್ಲಿ ಹೆಚ್ಚಾಗಿದೆ. ಇಂಥ ಮನಸ್ಥಿತಿ ದೇಶಕ್ಕೆ ಮಾರಕ. ಸಾಮಾನ್ಯರ ಬದುಕು ಅಸಹನೀಯವಾಗಿದೆ. ವ್ಯವಸ್ಥೆ ಹದಗೆಟ್ಟಿದೆ.ಅಶನ ವಸನಕ್ಕೂ ಪರದಾಡುವಂತಾಗಿದೆ. ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು?  ಮನಸ್ಸುಗಳನ್ನು ಕಟ್ಟುವ ಕೃತಿ ರಚಿಸಬೇಕು ಎಂಬ ಕನಸಿದೆ. ಕನ್ನಡ ಇಂಗ್ಲಿಷ್ ಭಾಷೆಯಲ್ಲಿ ನಿಮ್ಮ ಇಷ್ಟದ ಕವಿಗಳಾರು?  ಕನ್ನಡದಲ್ಲಿ  ಕವಿಯಾಗಿ ಜಿ ಎಸ್ ಎಸ್, ನಿಸಾರ್ ಅಹಮ್ಮದ ಅವರು ಇಷ್ಟ. ಸಾಹಿತಿಯಾಗಿ ಶಿವರಾಮ ಕಾರಂತ, ಪೂರ್ಣಚಂದ್ರ ತೇಜಸ್ವಿ, ತ್ರಿವೇಣಿ, ಕೊಡಗಿನ ಗೌರಮ್ಮ ಇಷ್ಟ. ಶರ್ಲಾಕ್ ಹೋಮ್, ಟಾಲ್ಸ್ಟಾಯ್,  ಕೀಟ್ಸ್ ಇಷ್ಟ. ರವೀಂದ್ರನಾಥ ಟ್ಯಾಗೋರ, ಗಾಲಿಬ್, ರೂಮಿ, ಕಮಲಾದಾಸ ಅವರ ಸಾಹಿತ್ಯ ಹೆಚ್ಚು ಆಕರ್ಷಿಸುತ್ತದೆ. ನೀವು ಓದಿದ ಪುಸ್ತಕಗಳಾವವು? ಅಮೇರಿಕಾದ ಕಪ್ಪುಗುಲಾಮ ಫ್ರೆಡೆರಿಕ್ ಡಗ್ಲಾಸ್ ನ ಆತ್ಮಕಥೆ ಕಪ್ಪುಕುಲುಮೆ, ಅಮೃತ ನೆನಪುಗಳು ಮತ್ತು ಸಿಂಗಾರೆವ್ವ ಮತ್ತು ಅರಮನೆ ಇನ್ನೊಮ್ಮೆ ಓದಿದೆ. ನಿಮಗೆ ಇಷ್ಟದ ಕೆಲಸ ಯಾವುದು?  ಕಲಿಸುವುದು ಮತ್ತು ಕೃಷಿಯಲ್ಲಿ ತೊಡಗುವುದು. ನಿಮ್ಮ ಇಷ್ಟದ ಸ್ಥಳಯಾವುದು ?   ಸಮುದ್ರ ಮತ್ತು ಹೊಲದಲ್ಲಿರುವ ಪುಟ್ಟಮನೆ. ನಿಮ್ಮ ಇಷ್ಟದ ಸಿಮಿಮಾ ಯಾವುದು?  ಬೆಟ್ಟದ ಜೀವ, ಕರಾಟೆ ಕಿಡ್ ಮರೆಯಲಾಗದ ಘಟನೆಯಾವುದು ? ಅವ್ವ ಮತ್ತು ಪತಿಯ ಸಾವು. ************************************************************************ ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.‌

Read Post »

ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಅಂಕಣ ಬರಹ ದಂಗೆಯ ದಿನಗಳುಇಂಗ್ಲಿಷ್ ಮೂಲ : ಮನೋಹರ ಮಳಗಾಂವ್‌ಕರ್ ಕನ್ನಡಕ್ಕೆ : ರವಿ ಬೆಳಗೆರೆಪ್ರ : ಭಾವನಾ ಪ್ರಕಾಶನಪ್ರಕಟಣೆಯ ವರ್ಷ : ೨೦೦೮ಬೆಲೆ : ರೂ.೧೮೫ಪುಟಗಳು : ೩೦೪ ಪ್ರಸಿದ್ಧ ಭಾರತೀಯ ಆಂಗ್ಲ ಲೇಖಕ ಮನೋಹರ ಮಳಗಾಂವ್‌ಕರ್ ಅವರ ಐತಿಹಾಸಿಕ ಕಾದಂಬರಿಯ ಅನುವಾದವಿದು. ಬ್ರಿಟಿಷರು ಭಾರತವನ್ನು ಆಕ್ರಮಿಸಿಕೊಂಡ ನಂತರ ಈಸ್ಟ್ ಇಂಡಿಯಾ ಕಂಪೆನಿಯು ವ್ಯಾಪಾರದ ಹೆಸರಿನಲ್ಲಿ ಭಾರತದ ಒಂದೊಂದೇ ರಾಜ್ಯಗಳನ್ನು ಕಬಳಿಸಿಯಾದ ಮೇಲೆ ಭಾರತೀಯರನ್ನು ಹಿಂಸಿಸ ತೊಡಗಿದಾಗ ಅವರ ವಿರುದ್ಧ ಸೇಡು ತೀರಿಸಿ ಅವರನ್ನು ಭಾರತದಿಂದ ಹೊಡೆದೋಡಿಸಲು ೧೮೫೭ರಲ್ಲಿ ನಡೆಸಿದ ಐತಿಹಾಸಿಕ ‘ಮೊದಲ ಸ್ವಾತಂತ್ರ್ಯ ಸಮರ’ದ ಸಂದರ್ಭದಲ್ಲಿ ಸಂಭವಿಸಿದ ಘಟನಾವಳಿಗಳ ಆರ್ದ್ರ ಚಿತ್ರಣ ಇಲ್ಲಿದೆ. ಸಮರದ ಪ್ರಮುಖ ರೂವಾರಿಯಾಗಿ ಕಾರ್ಯ ನಿರ್ವಹಿಸಿದ ನಾನಾ ಸಾಹೇಬನೇ ಇಡೀ ಕಾದಂಬರಿಯ ಕಥನ ಕ್ರಿಯೆಯ ನಿರೂಪಕನಾಗಿದ್ದಾನೆ. ಆಗ ಭಾರತದ ಬಹು ದೊಡ್ಡ ಭಾಗವನ್ನು ಆಳುತ್ತಿದ್ದ ಮರಾಠಾ ಸಾಮ್ರಾಜ್ಯದ ಎರಡನೇ ಪೇಶ್ವೆ ಬಾಜಿರಾಯನ ದತ್ತು ಪುತ್ರ ನಾನಾಸಾಹೇಬ ವಿಶಾಲ ಮನೋಭಾವದ ಸಂವೇದನಾಶೀಲ ವ್ಯಕ್ತಿ. ಇಂಗ್ಲಿಷ್ ವಿದ್ಯಾಭ್ಯಾಸ ಪಡೆದು ಸುಸಂಸ್ಕೃತ ವ್ಯಕ್ತಿಯಾಗಿ ರೂಪುಗೊಂಡ ನಾನಾಸಾಹೇಬನಿಗೆ ಬ್ರಿಟಿಷರು ಮತ್ತು ಭಾರತೀಯರ ನಡುವೆ ಸೌಹಾರ್ದಯುತ ಸಂಬಂಧ ನೆಲೆಗೊಳ್ಳಬೇಕೆಂಬ ಹಂಬಲ. ಆದರೆ ಅವನ ತಂದೆಯ ಕಾಲದಲ್ಲೇ ಅವರ ಮನೆತನಕ್ಕಿದ್ದ ಪೇಶ್ವೆಯೆಂಬ ಬಿರುದನ್ನೂ ವಿಶಾಲವಾದ ರಾಜ್ಯವನ್ನೂ ಕಸಿದುಕೊಂಡು ಅಂಥೋರವೆಂಬ ಚಿಕ್ಕ ಪ್ರದೇಶದ ಒಡೆತನವನ್ನು ಮಾತ್ರ ಬ್ರಿಟಿಷರು ಅವರಿಗೆ ಉಳಿಸಿಕೊಟ್ಟದ್ದು ನಾನಾಸಾಹೇಬನ ಅಸಮಾಧಾನಕ್ಕೆ ಕಾರಣವಾಗುತ್ತದೆ. ಇದು ಅವನ ಬದುಕನ್ನು ಬರಿಯ ಹೋರಾಟವನ್ನಾಗಿಸುತ್ತದೆ. ಈ ಕಾದಂಬರಿಯಲ್ಲಿ ಕೇವಲ ಐತಿಹಾಸಿಕ ಘಟನೆಗಳ ನಿರೂಪಣೆ ಮಾತ್ರವಲ್ಲದೆ ಹಲವು ಪ್ರಮುಖ ಪಾತ್ರಗಳ ಸೃಜನಶೀಲ ಚಿತ್ರಣವಿದೆ. ನಾನಾಸಾಹೇಬನ ಮನೋಭೂಮಿಕೆಯಲ್ಲಿ ನಡೆಯುವ ಎಲ್ಲ ವ್ಯಾಪಾರಗಳ ವಿವರಣೆಯಿದೆ. ದೇಶಭಕ್ತಿ ಮತ್ತು ಧಾರ್ಮಿಕ ದ್ವೇ಼ಷದ ಜ್ವಾಲೆಗಳಿಗಿಂತಲೂ ಮನುಷ್ಯ ಸಂಬಂಧಗಳನ್ನು ಅರ್ಥಪೂರ್ಣವಾಗಿ ಬೆಸೆಯುವುದೇ ಹೆಚ್ಚು ಮಹತ್ವದ ಕೆಲಸವೆಂಬುದನ್ನು ತನ್ನ ಮಾತು, ಯೋಚನೆ ಮತ್ತು ಕೃತಿಗಳ ಮೂಲಕ ತೋರಿಸಿ ಕೊಡುವ ನಾನಾಸಾಹೇಬ ಓರ್ವ ಆದರ್ಶ ವ್ಯಕ್ತಿಯಾಗಿ ನಮ್ಮ ಮುಂದೆ ಬಂದು ನಿಲ್ಲುತ್ತಾನೆ. ಆತನ ವ್ಯಕ್ತಿತ್ವದಲ್ಲಿ ಅಡಕವಾಗಿರುವ ಸದ್ಗುಣಗಳು ಮತ್ತು ಸದಾಚಾರಗಳು ನಮ್ಮ ಮೆಚ್ಚುಗೆಯನ್ನು ಪಡೆಯುತ್ತವೆ ಮಾತ್ರವಲ್ಲದೆ ರಾಜ ಮನೆತನದ ಅನೇಕರಲ್ಲಿರುವ ಲೈಂಗಿಕ ದೌರ್ಬಲ್ಯಗಳ ಬಗ್ಗೆ ಮುಚ್ಚುಮರೆಯಿಲ್ಲದೆ ಹೇಳುವ ನಾನಾಸಾಹೇಬನ ಕಥನವು ಒಂದು ಆತ್ಮ ನಿವೇದನೆಯಂತಿದೆ.ವಸಾಹತೀಕರಣದ ಕಾಲದಲ್ಲಿ ಭಾರತೀಯರು ಅನುಭವಿಸಿದ ಸಂಕಷ್ಟಗಳ ಯಥಾವತ್ತಾದ ಚಿತ್ರಣವೀಯುವ ಈ ಕಾದಂಬರಿ ದಾಖಲೆಯ ದೃಷ್ಟಿಯಿಂದ ಅತ್ಯಂತ ಪ್ರಸ್ತುತವಾಗಿದೆ. ರವಿ ಬೆಳಗೆರೆಯವರ ಅನುವಾದದ ಶೈಲಿಯು ಸುಂದರವೂ ಹೃದ್ಯವೂ ಆಗಿದ್ದು ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ************************************* ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Read Post »

You cannot copy content of this page

Scroll to Top