ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ರಂಗ ರಂಗೋಲಿ

ಅಂಕಣ ಬರಹ-01 ನಾಂದಿ ಪದ್ಯ ತೆಂಗಿನ ಮಡಲಿನಿಂದ ನೇಯ್ದ ತಟ್ಟಿ ಆ ಮನೆಯ ಹೊರ ಆವರಣದ ತಡೆ ಗೋಡೆ. ಮಣ್ಣಿನ ನೆಲಕ್ಕೆ ಮಣ್ಣಿನದ್ದೇ ಪರಿಮಳ. ಮಳೆಗಾಲದಲ್ಲಿ ಆ ಮನೆಯ ನೆಲವು ನೀರ ಒಸರಿಗೆ ಹಸಿ ಹಸಿಯಾಗುತ್ತದೆ. ಹೊರಗೆ ಧೋ ಎನ್ನುವ, ಹನಿಹನಿ ಟಪಟಪ ಹನಿಸಿ ಮರ್ಮರಿಸುವ, ಗುನುಗುವ, ಆರ್ಭಟಿಸುವ ಹಠಮಾರಿ ಮಳೆ.  ಚಾಪೆಯಂತೆ ಹೆಣೆದ ಆ ತಟ್ಟಿಯನ್ನು ನನ್ನ ಪುಟ್ಟ ಬೆರಳಿನಲ್ಲಿ ಅಗಲಿಸಿ ಒಂದು ಕಣ್ಣನ್ನು ಆ ಖಾಲಿಗೆ ಹೊಂದಿಸಿ..ಇನ್ನೊಂದು ಕಣ್ಣ ಮುಚ್ಚಿ ಹೊರಗೆ  ಸುಯ್ಯುತ್ತಿದ್ದ ಮಳೆಯೊಂದಿಗೆ ಮುಗ್ಧ ಮನಸ್ಸಿನ ಅವ್ಯಕ್ತ ಅನುಸಂಧಾನ ನಡೆಯುತ್ತಿತ್ತು. ಎದೆಗೆ ಹೊಯ್ಯತ್ತಿದ್ದ ಭಾವಗಳಿಗೆ ಅಕ್ಷರದ ರೂಪವಿಲ್ಲ. ಆದರೆ ಕಣ್ಣುಗಳಲ್ಲಿ ಚುಕ್ಕಿಗಳ ಹೊಳಪು. ಸ್ಪಷ್ಟವಾಗದ ಅವರ್ಣನೀಯ ಮಾತುಗಳು ಗಿರಕಿ ಹೊಡೆಯುತ್ತಿದ್ದವು. ಅದೇ ಭಾವವನ್ನು ಹೊತ್ತು ಮುಖ ತಿರುಗಿಸುತ್ತಿದ್ದೆ. ಮಗ್ಗದ ಸೀರೆ ಉಟ್ಟ, ಉದ್ದದ ಮೂಗುತಿ, ನತ್ತು ಮೂಗಿಗೇರಿಸಿಕೊಂಡು, ಹಣೆಯಲ್ಲಿ ದೊಡ್ಡದಾಗಿ  ಹುಣ್ಣಿಮೆಯ ಚಂದ್ರನಂತ ಕುಂಕುಮ ತಂಪಾಗಿ ನಗುತ್ತಿದ್ದರೆ ..ಅದರದೇ ಬೆಳಕು ಹೊದ್ದಂತೆ ಕಣ್ಣು ಮುಖದಲ್ಲಿ ಮಿಂಚಿನಂತಹ ಬೆಳಕು ಹಾರಿಸಿ ಎದುರಿನ ಕೆಳತುಟಿ ಕಚ್ಚಿ ಕೂತ ಎರಡು ಹಲ್ಲು ಬಿಡುತ್ತಿದ್ದಳು ನನ್ನಜ್ಜಿ.   ನಾನು ಮತ್ತೆ ಕಣ್ಣನ್ನು ಹೊರಗಿನ ಮಳೆಗೆ ಸಿಲುಕಿಸುತ್ತಿದ್ದೆ.  “ಇನ್ನು ಸ್ವಲ್ಪ ದಿನ ಆಮೇಲೆ ಆಟ ಶುರು..ಈ ಮಳೆ ನಿಲ್ಲುತ್ತಲೇ ಒಂದೊಂದೇ ಮೇಳ ಹೊರಡಲು ಶುರುವಾಗುತ್ತದೆ”. ಒಂದೇ ನೆಗೆತಕ್ಕೆ ಆಕೆಯ ತೆಕ್ಕೆಗೆ ಜೋತು ಬೀಳುತ್ತಿದ್ದೆ. ಮಳೆಯ ಸದ್ದಿನಾಚೆ ಅದನ್ನೂ ಮೀರಿಸುವಂತೆ ಚಂಡೆಯ ಸದ್ದು ಕಿವಿಯೊಳಗೆ ಅನುರಣಿಸಿದಂತೆ ತೊನೆಯುತ್ತಿದ್ದೆ. ಬಣ್ಣಬಣ್ಣದ ವಸ್ತೃ, ಕಿರೀಟ. ಅಬ್ಬಾ!ಆ ಶಕರನ ಮುಖ, ತೆರೆದುಕೊಂಡ ಕಣ್ಣು. ಅದರ ಸುತ್ತ.ಬಣ್ಣದ ರೇಖೆಗಳು. ಅದು ರಾಕ್ಷಸ ವೇಷ.  ಎದೆಯಲ್ಲಿ ಬಂದು ಕೂತ ಉರೂಟು ಭಯ..ಶಕಾರ ಎದ್ದ.  ಹೋಓಓಓಒ…ಥೈ ಥೈಥೈ…  “ಎಲ್ಲೀ…ಆ ವಶಂತ ಶೇನೆ”  ದೇಹದೊಳಗೆ ತುಂಬಿಕೊಳ್ಳುವ ಅದು ಯಾವುದೋ ಆವೇಶ. ನಾಯಿ ಓಡಿಸಲು ಮೂಲೆಯಲ್ಲಿ ಕೂತ ಕೋಲು ಬಿಲ್ಲು ಬಾಣವಾಗಿ ಮನಸಿನೊಳಗಿನ ಆ ಪುರುಷಾಕೃತಿ ಮುಖಕ್ಕೆ ಕಟ್ಟಿದ ಕಂಗಿನ ಹಾಳೆಯ ತುಂಡಿನ ಮುಖವಾಡದಿಂದ ಅನಾವರಣಗೊಳ್ಳುತ್ತಿತ್ತು. ನನ್ನ ಪುಟ್ಟ ದೇಹವನ್ನು ತನ್ನ ಆಧೀನಕ್ಕೆ ತಂದು ಕುಣಿಸುತ್ತಿತ್ತು.  “ಶಕರ” ಹೂಂಕರಿಸುತ್ತಿದ್ದ.  “ಹ್ಹೇ…ವಶಂತಶೇನೆ..ಎಲ್ಲಿರುವೆ. ಬಂದೆ ನಾನು… “ ಕೇವಲ ಎರಡು ಹಲ್ಲಿನ ಬೊಜ್ಜುಬಾಯಿ ಅಗಲಿಸಿ ಈ ಸೂತ್ರಧಾರಿ ನನ್ನಜ್ಜಿ ನಗುತ್ತಿದ್ದಳು…ನಗು ನಗು.. ” ಅಬ್ಬಬ್ಬಾ..ಈ ಶಕರನ ಧಾಳಿ ತಡಕೊಳ್ಳುವುದು ಕಷ್ಟ. ಏ.. ನಿಲ್ಲಿಸು..ನಿನ್ನ ವಶಂತ..ಶೇನೆ ಬರುತ್ತಾಳೆ..ಇಲ್ಲದಿದ್ರೆ ಈಗ ಕೋಲು ಬರ್ತದೆ.” ಮತ್ತೆ ನಗು. ಆ ನಗುವಿನಿಂದ ಮತ್ತಷ್ಟು ಹುಮ್ಮಸ್ಸು ಏರಿ ತೆಂಗಿನ ಕಾಯಿಯ ತುದಿ ಸಿಪ್ಪೆ ಸಮೇತ  ( ಅದು ವಸಂತಸೇನೆಯ ಮುಡಿ) ಹಿಡಿದು ಎಳೆತರುತ್ತಿದ್ದೆ. ಕುಣಿತ..ಸುತ್ತುಸುತ್ತಿ ಸುತ್ತಿ ಗಿರ್ ಗಿಟಿ ಹಾಕಿ ಒದ್ದೆ ನೆಲದಲ್ಲಿ ಕುಸಿಯುತ್ತಿದ್ದೆ. ನನ್ನೊಳಗೆ ಚಂಡೆಯ ಅಬ್ಬರ  ಏರುತ್ತಲೇ ಇತ್ತು.  ವಸಂತಸೇನೆ ಆರ್ತಳಾಗಿ ಅಜ್ಜಿಯತ್ತ ನೋಡುವಂತೆ ಭಾಸವಾಗುತ್ತಿತ್ತು.  “ರಕ್ಷಿಸಿ..ಎಲ್ಲಿ ನನ್ನ ಚಾರುದತ್ತ..” “ತರ್ತೇನೆ ಈಗ ಕೋಲು..ನಿನ್ನ ಪಾಠ ಪುಸ್ತಕ ಎಲ್ಲುಂಟು. ಅದು ಚೀಲದಿಂದ ಹೊರ ಬರಲಿಕ್ಕೆ ಉಂಟಾ.. ಆಟದ ಸುದ್ದಿ ತೆಗೆದದ್ದೇ ದೊಡ್ಡ ತಪ್ಪಾಯ್ತು. ನೋಡ್ತೇನೆ ನಿನ್ನ ಮಾರ್ಕು.ಕುಂಡೆಗೆ ಬಿಸಿ ಬರೆ ಹಾಕಲಿಕ್ಕುಂಟು..ಆಮೇಲೆ ಶಕಾರ,ವಸಂತಸೇನೆ.” ಅವಳ ಜೋರು ಕಿವಿಯ ಬದಿಯಿಂದ ಹಾದುಹೋದರೆ ಒಳಗಿಳಿದು ಸದ್ದು ಮಾಡುವುದು ಯಕ್ಷಗಾನದ ಆ ಪಾತ್ರಗಳು. ಶುರುವಾಗುತ್ತಿತ್ತು. ಪುಟ್ಟ ಮನಸ್ಸಿನೊಳಗೆ ರಂಗಿನಾಟ..ಬಣ್ಣ ಗಾಢವಾಗುತ್ತಲೇ ಹೋಗುತ್ತಿತ್ತು. ಕಲ್ಪನಾಲೋಕದೊಳಗಿನ ಒಡ್ಡೋಲಗ. ರಾಜ, ರಾಣಿ ರಾಜಕುಮಾರ, ರಾಕ್ಷಸ  ಅವತರಿಸಿ ನನ್ನಲ್ಲಿ ನಶೆ ಏರಿಸುತ್ತಿದ್ದ ಪರಿ.  ಹನಿದ ಮಳೆ ಕ್ಷೀಣವಾಗುತ್ತಾ,ಆಗುತ್ತಾ, ಮಾಯಾ ಲೋಕದೆಡೆಗೆ ಸರಿದು ಹೋದರೆ..ಬಿಳಿಬಿಳಿ ಚಳಿ ಧರೆಗಿಳಿಯುತ್ತಿತ್ತು. ಪೆಟ್ಟಿಗೆ ಸೇರಿದ್ದ ಪುರಾಣದ ಪಾತ್ರಗಳ ರಂಗಸಜ್ಜಿಕೆ ಮೈ ಕೊಡವಿ ಎದ್ದು..ಮೇಳಗಳು ಸಂಚಾರಕ್ಕೆ ಹೊರಡುತ್ತಿದ್ದವು.  ಇರುಳು ಕವಿಯುತ್ತಲೇ ಯುಗ ಬದಲಾಗಿ ತ್ರೇತಾ ,ದ್ವಾಪರ ತೆರೆದುಕೊಂಡು ರಾಮ,ಕೃಷ್ಣ ಎಲ್ಲರೂ ಧರೆಗಿಳಿಯುತ್ತಿದ್ದರು. ಅಜ್ಜಿಯ ಸೊಂಟದಲ್ಲಿ ಕೂತು ಆರಂಭವಾದ ನನ್ನ ಅವಳ ಈ ಯಕ್ಷಲೋಕದೆಡೆಗಿನ ಪಯಣ ಅವಳ ಕೈ ಹಿಡಿದು ನಾನು ನಡೆಸುವವರೆಗೂ ಸಾಗಿತ್ತು.  ರಾತ್ರಿ ಬಯಲಾಟದ ವೀಕ್ಷಣೆ.. ಹಗಲಿಗೆ ಅರೆಮಂಪರಿನಲ್ಲಿ ಒಳಗಡೆಯ ಚಂಡೆಯ ಸದ್ದಿಗೆ ಸಿಕ್ಕಿದ ಕೋಲು ಹಿಡಿದು ಕುಣಿತ..ಅಮ್ಮನ ಹಳೆಯ ಸೀರೆ ತುಂಡು, ಸೋದರ ಮಾವನ ಲುಂಗಿಗಳು..ಒಡ್ಡೋಲಗದ ಪರದೆ, ಬಗೆಬಗೆಯ ವಸ್ತ್ರಗಳಾಗಿ ಕಲ್ಪನಾಲೋಕದ ಭ್ರಮರವು ಮನಸೋ ಇಚ್ಛೆ ಹಾರುತ್ತಲೇ ಇತ್ತು. ಶಾಲೆಗೆ ಹೋಗಿ ಕೂತರೂ ವೇಷ ಎದುರುಬಂದಂತೆ.. “ಬಂದಳು..ಚೆಲು..ವೆ ಚಿತ್ರಾಂಗದೆ.”  ಅದೆಷ್ಟು ಹೊಸ ಹೊಸ ಪಾತ್ರಗಳು ಮನಃಪಟಲದಲ್ಲಿ ಅರಳಿ ನಾನೇ ಅದಾಗಿ ರೂಪುಗೊಳ್ಳುವ ಚೆಂದವೆಂತಹುದು…ಆಹಾ..ನನಗೋ ಅವರನ್ನು ಅಲ್ಲಿಂದ ಬಿಡುಗಡೆಗೊಳಿಸಿ ಹೊರತರಬೇಕಾದ ತುರ್ತು. ಪಕ್ಕದಲ್ಲಿ ಕೂತ ಗೆಳತಿಯರಿಗೆ ಸ್ಲೇಟಿನಲ್ಲಿ ಟೀಚರ್ ಕೊಟ್ಟ ಲೆಕ್ಕ ಬಿಡಿಸಿ, ಮಗ್ಗಿ ಬರೆದು ಆಮಿಷ ಹುಟ್ಟಿಸುತ್ತಿದ್ದೆ. ಆಮೇಲೆ ನಾನು ಕಥೆ ಹೇಳುವುದನ್ನು ನೀನು ಕೇಳಬೇಕು. ಮನೆಗೆ ಓಡಬಾರದು ಹೀಗೆ ಹಲವು ಒಳ ಒಪ್ಪಂದಗಳು. ಹೊಸ ಹೊಸ ಪಾತ್ರಗಳು ನನ್ನಲ್ಲಿ ಬಣ್ಣ ಹಚ್ಚಿಕೊಳ್ಳುತ್ತಿದ್ದವು. ರಾತ್ರಿ ಎದೆಗಿಳಿದ ಅವುಗಳ ಮಾತುಗಳು ಚೂರು ಪಾರು ಮಾರ್ಪಾಡು ಹೊಂದಿ ಬಣ್ಣದ ಚಿತ್ತಾರದ ಗ್ಲಾಸಿನಲ್ಲಿ ತುಂಬಿದ ಶರಭತ್ತಿನ ರುಚಿಯಂತೆ ವ್ಯಕ್ತವಾಗುತ್ತಿದ್ದವು. ಮತ್ತೆ ಆ ಪಾತ್ರಗಳಿಗೆ  ಹೆಸರು ಹುಡುಕುವ ಪರದಾಟ.  ಸೌದಾಮಿನಿ, ಧಾರಿಣಿ, ಮೈತ್ರೇಯಿ, ವೈದೇಹಿ..ಎಲ್ಲರೂ ಬಿಂಕ ಲಾಸ್ಯದಿಂದ ಗೆಜ್ಜೆ ಕಟ್ಟಿ ಮನೆ ಕದ ತೆರೆದು ಹೊರಗಡೆ ಹಾರುತ್ತಿದ್ದರು.  ಅದೊಂದು ಅದ್ಭುತ ಲೋಕ. ಅರಿವಿನ ಜಗತ್ತು ಮೊಳಕೆಗೊಳ್ಳುವ ಮುನ್ನವೇ ಅಜ್ಜಿಯೆಂಬ ಅಚ್ಚರಿಯ ಮಾಂತ್ರಿಕಳು ನನ್ನೊಳಗೆ ಕಲ್ಪನೆಯ ಪ್ರಪಂಚ ತೆರೆದು ತೋರಿಸಿ ನನ್ನನ್ನು ಅಲ್ಲಿ ಕೂರಿಸಿದ್ದಳು. ತನ್ನ ಚಿರಿಟಿ ಹೋದಂತಹ ಸೊಂಟದಲ್ಲಿ ನನ್ನ ಕೂರಿಸಿ ಥಂಡಿ ಗಾಳಿಯ ಒರೆಸುತ್ತ ದೇವಾಲಯದ ಎದುರಿನ ಗದ್ದೆ, ಶಾಲೆಯ ಎದುರಿನ ಬಯಲು, ಯಾರದೋ ಮನೆಯಂಗಳದಲ್ಲಿ ನಡೆವ ಹರಕೆಯ ಬಯಲಾಟ ಒಂದನ್ನೂ ಬಿಡದೆ ರಾತ್ರಿ ತೆಂಗಿನೆಣ್ಣೆ, ಉಪ್ಪು ಬೆರೆಸಿದ ಕುಚುಲಕ್ಕಿ ಗಂಜಿ ಉಣಿಸಿ ಕಂಡೊಯ್ಯುತ್ತಿದ್ದಳು. ಅಲ್ಲೇ ಆ ಮಣ್ಣಿನ ನೆಲದಲ್ಲಿ  ಕಣ್ಣು ಬಾಯಿ ಕಿವಿ,ಮೂಗು, ಮೈಯೆಲ್ಲ ಅರಳಿಸಿ ಕೂತು ಆಟ ನೋಡುತ್ತಿದ್ದೆ. ಈ ಜಗದ ತಂತು ಕಡಿದು ಅಲ್ಲೆಲ್ಲೋ ಸೇರಿದಂತೆ..ಎಂತಹ ವಿಸ್ಮಯ ಪ್ರಪಂಚವದು. ದೇವತೆಗಳು ಬರುತ್ತಿದ್ದರು. ಸುಂದರ ಉದ್ಯಾನವನ, ಅತಿ ಸುಂದರ ರಾಜಕುಮಾರಿ, ಆ ರಾಜ..ಈ ರಾಕ್ಷಸ.. ಮತ್ತೆ ಯುದ್ದ..ಆರ್ಭಟ. ಅತ್ಯಂತ ಮನೋಜ್ಞವಾಗಿ, ಚಾಕಚಕ್ಕತೆಯಿಂದ ,ಕೌಶಲ್ಯದ  ಮಾತುಗಳ ಕೊಂಡಿಗಳು ಕ್ಕೋ ಕೊಟ್ಟಂತೆ,ಅರಳು ಅರಳಿದಂತೆ ಹರಡಿಕೊಳ್ಳುತ್ತಿದ್ದವು.  ರಾಜಕುಮಾರಿಯ ಜೊತೆಗಿನ  ಸಖಿಯಾಗಿ, ಆ ರಾಜಕುಮಾರಿಯೇ ನಾನಾಗಿ ಅಲೆದಾಟ,ನಗು,ಅಳು, ವಿರಹದ ಅರ್ಥವೇ ಇಣುಕದ ವಯಸ್ಸಿನಲ್ಲಿ ವಿರಹ ಶೃಂಗಾರ ಎಲ್ಲವೂ ತಣ್ಣಗೆ ಮುಗ್ಧ ಮನಸ್ಸಿನ ಒಳಗಿಳಿಯುತ್ತಿತ್ತು. ಆಗೆಲ್ಲ ರಾಮಾಯಣ, ಮಹಾಭಾರತದ ಕಥೆಗಳು ಹಾಗೂ ಅಲ್ಲಿ ಸಿಗುವ ಉಪಕಥೆಗಳು ಬಯಲಾಟದ ಪ್ರಸಂಗಗಳಾಗಿರುತ್ತಿದ್ದವು. ಭಕ್ತಿಪ್ರಧಾನ,ನೀತಿಭೋದಕ ಕಥೆಗಳು. ಇಂತಹ ಸಂದರ್ಭದಲ್ಲೇ ಆ ಪುಟ್ಟ ವಯಸ್ಸಿನಲ್ಲಿ ನೋಡಿದ ವಸಂತಸೇನೆ ಎಂಬ ಪ್ರಸಂಗ ಬಹಳ ಆಳಕ್ಕಿಳಿದು ನನ್ನ ಕುಣಿಸುತ್ತಿತ್ತು. ನಿಜವೆಂದರೆ ನಂತರದ ದಿನಗಳಲ್ಲಿ ಕಥೆ ಮಾಸಿದರೂ, ಅದರಲ್ಲಿ ಬರುವ ವಸಂತಸೇನೆಯ ಪ್ರೀತಿ ಹಾಗೂ ಖಳನಾಯಕ ಶಕರನ  ಗಟ್ಟಿ ಸೀಳುಧ್ವನಿಯ ಮಾತು ಉಳಿದುಬಿಟ್ಟಿತು. ಶಕರ ಬಂದ ಎಂದರೆ ಹೆದರಿಬಿಡುತ್ತಿದ್ದೆ. ಮತ್ತೆ ನಾನೇ ಶಕರನಾಗಿ ಕುಣಿಕುಣಿದು.. ‘ಎಲ್ಲಿ ಆ ವಶಂತ ಶೇನೆ ‘ ಎನ್ನುತ ಅದೇ ಶೈಲಿಯಲ್ಲಿ ದೊಡ್ಡ ಹೆಜ್ಜೆ ಇರಿಸಿ ಸಂಭ್ರಮಿಸುತ್ತಿದ್ದೆ. ಹಗಲಲ್ಲಿ ಶಕರನಾಗಿ ಬದಲಾಗುವ ನಾನು ರಾತ್ರಿ ಊಟದ ಸಮಯ ಬಂದು ಶಕರ ಎಂದರೆ ಹೆದರಿ ಗಬಗಬ ಉಣ್ಣುತ್ತಿದ್ದೆ. ರಾತ್ರೆಯಾದರೆ ನಾನು ಥೇಟು ವಸಂತಸೇನೆ!. ರಂಗ ಏರುವ ಆಸೆ,ನಶೆ..ತೀರದ ಹುಚ್ಚಿಗೆ ಈ ಬಯಲಾಟಗಳೇ ಮೊದಲ ಸಜ್ಜಿಕೆ. ನಿಂತಲ್ಲಿ,  ಕೂತಲ್ಲಿ ಶಕರ, ವಸಂತಸೇನೆ, ಶ್ವೇತಕುಮಾರ, ದ್ರೌಪದಿ, ದಮಯಂತಿ,..ಸಾಲು ಸಾಲು ಪಾತ್ರಗಳು  ನನ್ನನ್ನು ಗಟ್ಟಿಯಾಗಿ ಆವರಿಸಿಕೊಳ್ಳತೊಡಗಿದವು. ಎಲ್ಲೋ ಒಂದಿನಿತು ಮರೆಗೆ ಹೋಗಲು ಯತ್ನಿಸಿದರೆ ಈ ಜಾದೂಗಾರಿಣಿ ಅಜ್ಜಿ‌ ಮತ್ತೆ ಮತ್ತೆ ತುತ್ತು ಇಡುವಾಗ, ತಲೆಗೆ ನೀರು ಹೊಯ್ಯುವಾಗ, ಎಣ್ಣೆಯಿಟ್ಟು ಜಡೆ ಹೆಣೆಯುವಾಗ, ಬೇಸರದ ಕ್ಷಣಗಳಲ್ಲಿ ಮುದ್ದಿಸುವಾಗ ಕಥೆಯ ಮಾಲೆ ಹೊರತೆಗೆದು ಒಂದೊಂದಾಗಿ ಬಿಡಿಸುತ್ತಿದ್ದಳು. ಓಹ್..ಎಂತಹ ಶ್ರೀಮಂತ ದಿನಗಳವು. ಆ ದಿನಗಳು ನನ್ನ ನಾಟಕ ಬದುಕಿನ ಮೊದಲ ಪುಟಗಳು ಅನ್ನಲೇ,ಅಥವಾ ಮುನ್ನುಡಿ ಬರಹ ಅನ್ನಲೇ. ************************************************************************ ರಂಗಭೂಮಿ ಹಾಗೂ ಕಿರುತೆರೆ ಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿ ಭಾಷೆ ಯ ಸಿನೇಮಾಗಳಲ್ಲಿ ಅಭಿನಯ. ಕೊಂಕಣಿ ಸಿನೇಮಾ ” ಅಂತು” ವಿನ ಅಭಿನಯಕ್ಕೆ ರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿ ಪ್ರಸ್ತುತಿ 29 ಯಶಸ್ವೀ ಪ್ರದರ್ಶನ ಕಂಡಿದೆ.ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸದಸ್ಯೆ. ಪ್ರಸ್ತುತ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯೆ. “ಅಮೋಘ ಎಂಬ ಸಂಸ್ಥೆ ಹುಟ್ಟುಹಾಕಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ. ಆಕಾಶವಾಣಿ ಕಲಾವಿದೆ.ಇದುವರೆಗೆ 3 ಕವನ ಸಂಕಲನ ಸೇರಿದಂತೆ 6 ಪುಸ್ತಕಗಳು ಪ್ರಕಟಗೊಂಡಿವೆ. GSS ಕಾವ್ಯ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ,GS Max ಸಾಹಿತ್ಯ ಪ್ರಶಸ್ತಿ. ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸುವಿಕೆ.

Read Post »

ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಅಂಕಣ ಬರಹ ಗುರುತುಗಳು ಗುರುತುಗಳುಮೂಲ ಮಲೆಯಾಳ ; ಸೇತು ಕನ್ನಡಕ್ಕೆ : ಡಾ.ಅಶೋಕ್ ಕುಮಾರ್ಪ್ರಕಾಶನ : ಕೇಂದ್ರಸಾಹಿತ್ಯ ಅಕಾಡೆಮಿಪ್ರಕಟಣೆಯ ವರ್ಷ : ೨೦೧೧ಬೆಲೆ : ರೂ.೨೦೦ಪುಟಗಳು : ೩೪೬ ಇದು ಮುಖ್ಯವಾಗಿ ಸಿಂಗಲ್ ಪೇರೆಂಟ್ ಆಗಿರುವ ಒಬ್ಬ ತಾಯಿ ಮತ್ತು ಮಗಳ ಸುತ್ತ ಹೆಣೆಯಲಾದ ಕತೆ.  ತಾಳ ತಪ್ಪಿದ ವೈವಾಹಿಕ ಜೀವನದಿಂದ ನೊಂದು ಸ್ವತಂತ್ರವಾಗಿ ಬಾಳುತ್ತೇನೆಂದು ಸಬರ್‌ವಾಲ್ ಕುಟುಂಬವು ನಡೆಸುತ್ತಿರುವ ಒಂದು ಕಂಪೆನಿಯ ಹೆಚ್.ಆರ್.ಮುಖ್ಯಸ್ಥೆಯಾಗಿ ಸೇರುತ್ತಾಳೆ ಪ್ರಿಯಂವದಾ ಮೆನೋನ್.  ಬುದ್ಧಿವಂತೆಯಾದ ಆಕೆ ಪರಿಶ್ರಮ ಪಟ್ಟು ದುಡಿಯುವವಳು.   ತನ್ನ ಪ್ರೀತಿಯ ಮಗಳು ನೀತುವನ್ನು ಎಂ.ಬಿ.ಎ.ಓದಿಸುತ್ತಿದ್ದಾಳೆ. ಅಪ್ಪನ ಪ್ರೀತಿಯೆಂದರೆ ಏನೆಂದು ತಿಳಿಯದ ನೀತು ವಾಚಾಳಿಯಾಗಿ ಬೆಳೆಯುತ್ತಾಳೆ ಒಮ್ಮೆ ತನ್ನ ಉದ್ಯೋಗದ ಒಂದು ಭಾಗವಾಗಿ ಗೋವಾದಲ್ಲಿ ನಡೆಯುವ ಉದ್ಯಮಿಗಳ ಸೆಮಿನಾರಿನಲ್ಲಿ ಪ್ರಿಯಂವದಾ ಪ್ರಬಂಧ ಮಂಡಿಸುತ್ತಾಳೆ. ಅಲ್ಲಿ ಆಕೆ ಬಹಳ ಹಿಂದಿನಿಂದಲೂ ತನ್ನ ಗುರುವೆಂದು ಭಾವಿಸಿ ಗೌರವಿಸುತ್ತಿದ್ದ ಡಾ.ರಾಯ್ ಚೌಧುರಿಯನ್ನು ಭೇಟಿಯಾಗುತ್ತಾಳೆ.  ಮಾತನಾಡುತ್ತ ಆತನಿಗೆ ಮಾನಸಿಕವಾಗಿ ತುಂಬ ಹತ್ತಿರವಾಗುತ್ತಾಳೆ. ಅವರ ಸಂಬಂಧ ಊರಿಗೆ ಮರಳಿದ ನಂತರವೂ ಮುಂದುವರಿಯುತ್ತದೆ.  ಆದರೆ ಆತನೊಂದಿಗಿನ ಅಮ್ಮನ ಈ ಆತ್ಮೀಯತೆ ನೀತುವಿಗೆ ಇಷ್ಟವಾಗುವುದಿಲ್ಲ. ನೀತುವಿನ ತಿರಸ್ಕಾರವು ಪ್ರಿಯಂವದೆಯ ಔದ್ಯೋಗಿಕ ಮತ್ತು ಕೌಟುಂಬಿಕ ಜೀವನದ ಸಂತೋಷಕ್ಕೆ ಭಂಗ ತರುತ್ತದೆ.  ತನ್ನ ಮನೆಗೆ ಬರುವ ನೀತುವಿನ ಗೆಳತಿಯರ ಮೂಲಕ ಅವಳ ಜತೆಗೆ ರಾಜಿ ಮಾಡಿಕೊಳ್ಳಲು ಪ್ರಿಯಂವದಾ ಪ್ರಯತ್ನಿಸುತ್ತಾಳೆ.  ನೀತು ಹರಿನಾರಾಯಣನೆಂಬ ತನ್ನ ಬುದ್ಧಿಜೀವಿ ಸಹಪಾಠಿಯ ಸ್ನೇಹ ಬೆಳೆಸುತ್ತಾಳೆ.  ಗೆಳತಿಯರು ಬೇಡವೆಂದು ಉಪದೇಶಿಸಿದರೂ ಉಪಯೋಗವಾಗುವುದಿಲ್ಲ. ನೀತು ಅಮ್ಮನನ್ನು ನಿರ್ಲಕ್ಷಿಸಿ ವಿದೇಶದಲ್ಲಿದ್ದ ತನ್ನ ಅಪ್ಪ ರಂಜಿತ್‌ಗೆ ಹತ್ತಿರವಾಗಲು ಪ್ರಯತ್ನಿಸುತ್ತಾಳೆ. ಹತಾಶಳಾದ ಪ್ರಿಯಂವದಾಳ ಕನಸುಗಳಲ್ಲಿ ಅವಳು ಗೋವಾದಲ್ಲಿ ಕಂಡ ಪಾತ್ರಗಳು ಮತ್ತೆ ಮತ್ತೆ ಬರುತ್ತವೆ.   ತನ್ನ ಮನೆಯಲ್ಲಿ ಸಹಾಯಕ್ಕೆಂದು ಪ್ರಿಯಂವದಾ ನಿವೇದಿತಾ ಎಂಬ ಪರ್ಸನಲ್ ಮ್ಯಾನೇಜರ್‌ನ್ನು ನೇಮಿಸಿಕೊಳ್ಳುತ್ತಾಳೆ. ರೇವತಿ ಎಂಬ ನಿಜನಾಮಧೇಯವುಳ್ಳ ಆಕೆಯನ್ನು ಕಂಪೆನಿಯಲ್ಲೂ ತನ್ನ ಜೂನಿಯರಾಗಿ ನೇಮಿಸಿಕೊಳ್ಳುತ್ತಾಳೆ. ರೇವತಿಯ ಜತೆ ಸೇರಿ ಪ್ರಿಯಂವದಾ ಕಂಪೆನಿಯಲ್ಲಿ ಹಲವಾರು ಬದಲಾವಣೆಗಳನ್ನು ತರುತ್ತಾಳೆ. ಮಗಳ ಬಗ್ಗೆ ಚಿಂತೆಯಿಂದಾಗಿ ಕೆಲಸ ಮಾಡಲಾಗದೆ ಕಂಪೆನಿಯಿಂದ ದೀರ್ಘಕಾಲದ ರಜಕ್ಕಾಗಿ ಅರ್ಜಿ ಹಾಕುತ್ತಾಳೆ. ಇದರೆಡೆಯಲ್ಲಿ  ನೀತುವಿನ ಮನಃಪರಿವರ್ತನೆಯಾಗಿ  ಅವರಿಬ್ಬರೂ ಊರಲ್ಲಿ ನೆಲೆಸಲು ಬರುತ್ತಾರೆ.  ಉಳಿದದ್ದನ್ನು ಓದುಗರ ಕಲ್ಪನೆಗೆ ಬಿಟ್ಟು ಕಾದಂಬರಿ ಇಲ್ಲಿಗೆ ಮುಕ್ತಾಯವಾಗುತ್ತದೆ. ಕಾದಂಬರಿಯಲ್ಲಿ ಅಲ್ಲಲ್ಲಿ ಬರುವ ಮಳೆಗೆ ಅತೀವ ಸೌಂದರ್ಯವೂ ಆಕರ್ಷಣೆಯೂ ಇದೆ.  ಬದುಕಿನ ಸಂಕೀರ್ಣ ಸಮಸ್ಯೆಗಳು, ಮನುಷ್ಯ ಸಂಬಂಧಗಳ ವಾಸ್ತವ ಸತ್ಯ ಹಾಗೂ ಟೊಳ್ಳುತನ, ಸ್ವಪ್ನ ಸದೃಶ ನಿರೂಪಣೆಯೊಂದಿಗೆ  ಇಲ್ಲಿ ತಾಯಿ-ಮಗಳ ಬದುಕು ಚಿತ್ರಣಗೊಂಡಿದೆ. ಅದಮ್ಯವೂ ಸಂಕೀರ್ಣವೂ ಆದ ಮನುಷ್ಯ ಮನಸ್ಸು ಅನುಭವಿಸುವ ಸಂಕಟಗಳಿಗೆ ಸರಳ ಉತ್ತರಗಳನ್ನು ಪಡೆಯುವ ಬಗೆಯನ್ನು ಕಾದಂಬರಿ ಹೇಳುತ್ತದೆ.  ಒಂದು ಊರಿನ ಎಲ್ಲಾ ಸುಖ-ದುಃಖಗಳನ್ನು ಕಪ್ಪು-ಬಿಳುಪುಗಳೊಂದಿಗೆ ಶರೀರದ ಮೇಲೆ ಗುರುತುಗಳಾಗಿಸಿದ ಹಿಮ-ಧ್ರುವಗಳಲ್ಲಿ ಏಕಾಂತ ಧ್ಯಾನದಲ್ಲಿ ಮುಳುಗಿದ ಪೆಂಗ್ವಿನ್‌ಗಳು ಪೂರ್ವಜನ್ಮದಲ್ಲಿ ವಿಧವೆಗಳಾಗಿದ್ದವೆಂದೂ ಅವುಗಳ ಕುಲದಲ್ಲಿ ಹುಟ್ಟಿದ ಪ್ರಿಯಂವದಾಳ ಹಾಗೂ ಮಗಳು ನೀತುವಿನ ಕತೆಗಳನ್ನು ಪ್ರಕೃತಿಯೊಂದಿಗೆ ಮಿಳಿತಗೊಳಿಸಿ ಸೇತು ಅವರು ಮನೋಜ್ಞವಾಗಿ ಪ್ರಸ್ತುತಗೊಳಿಸಿದ್ದಾರೆ.  ನಗರೀಕರಣಕ್ಕೊಳಗಾದ ಬದುಕಿನಲ್ಲಿ ಮನುಷ್ಯ ಮನಸ್ಸುಗಳ ಆತಂಕ, ತಲ್ಲಣ,  ಕೌಟುಂಬಿಕ ಬದುಕಿನ ಸಂಘರ್ಷಗಳು,ಹಾಗೂ ಎಡೆಬಿಡದೆ ಅನುಭವಿಸುವ ನೋವು ಈ ಕಾದಂಬರಿಯಲ್ಲಿವೆ.  ಭೌತಿಕ ಜಗತ್ತಿನ ಆಂತರಿಕ ಸಂಘರ್ಷಗಳ ನಡುವೆ  ವ್ಯಕ್ತಿಯ ಮನಸ್ಸುಗಳು ಸೃಷ್ಟಿಸುವ ವಿಚಿತ್ರ ಅನುಭವಗಳು ಓದುಗರಲ್ಲಿ ಹೊಸ ಕುತೂಹಲವನ್ನು ಹುಟ್ಟಿಸುತ್ತವೆ.  ಮೂಲ ಮಲೆಯಾಳದ ಸುಭಗ ಶೈಲಿಗೆ ನಿಷ್ಠರಾಗಿ ಅಶೋಕ ಕುಮಾರ್ ಅವರು ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ************************************************* ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Read Post »

ಅಂಕಣ ಸಂಗಾತಿ, ಚಿತ್ತ ಜನ್ಯ

ಅಂಕಣ ಬರಹ “ಸಿಕ್ಕಿತಾ ಎಂದರೆ ಸಿಕ್ಕಿಲ್ಲ ಎಂಬುದೇ ಉತ್ತರ…” ಆಗಾಗ ಕೆಲವರು ಬರಹವನ್ನೂ ಮತ್ತು ಬರೆದ ಬರಹಗಾರನನ್ನೂ ಒಂದೆನ್ನುವಂತೆ ಭಾವಿಸಿ ಅನುಮಾನದಿಂದ ನೋಡುವುದನ್ನು ನೋಡುತ್ತಿರುತ್ತೇವೆ. ಗೆಳೆಯರು ಇದನ್ನು ಬಾರಿ ಬಾರಿ ಹೇಳಿಕೊಳ್ಳುತ್ತಿರುತ್ತಾರೆ. ಅಲ್ಲದೆ ಇದು ಪ್ರತಿಯೊಬ್ಬ ಬರಹಗಾರನಿಗೂ ಒಂದಲ್ಲಾ ಒಂದು ಬಾರಿ ಎದುರಿಸಬೇಕಾಗಿ ಬರುವ ಸಾಮಾನ್ಯ ಸನ್ನಿವೇಶವೂ ಆಗಿರುತ್ತದೆ. ಆದರೆ ಓದುಗರು ಒಂದು ಮಾತನ್ನು ನೆನಪಿನಲ್ಲಿಡಬೇಕು. ಅವನು ಬರಹಗಾರ… ತನಗೆ ಕಂಡ, ಅನುಭವಿಸಿದ, ಇರರ ಅನುಭವದಿಂದ ಅರಿತ ಎಲ್ಲವನ್ನೂ ಒಂದಾಗಿಸಿ ಬರಹದ ಮೂಲತತ್ವದ ಅಚ್ಚಿಗೆ ಸುರಿದು ಓದುಗರಿಗೆ ಮೆಚ್ಚುಗೆಯಾಗುವಂತೆ ಉಣಬಡಿಸುತ್ತಾನೆ. ಸದಾ ತನ್ನದೇ ವ್ಯಯಕ್ತಿಕ ಅನುಭವವನ್ನು ಬರೆಯುವುದಾದರೆ ಅದು ಅವನ ಆತ್ಮಚರಿತ್ರೆ ಆಗುತ್ತದೆ ಹೊರತು ಸಾಹಿತ್ಯ ನಿಸಿಕೊಳ್ಳುವುದಿಲ್ಲ. ಹೆಣ್ಣೊಬ್ಬಳು ಲೈಂಗಿಕ ವಿವರಗಳನ್ನು ತನ್ನ ಬರಹಗಳಲ್ಲಿ ಬಳಸಿದಾಕ್ಷಣ ಅವಳ ಚಾರಿತ್ರ್ಯವಧೆಗೆ ನಿಂತುಬಿಡುವುದು ಎಷ್ಟು ಸಮಂಜಸ. ಹಾಗಂತ ಪುರುಷ ಲೇಖಕರ ಸ್ಥಿತಿಯೂ ಚನ್ನಾಗೇನೂ ಇಲ್ಲ. ಆದರೆ ಸಮಾಜ ಅವರಿಗೆ ಒಂದು ಸಣ್ಣ ಮಾರ್ಜೀನನ್ನು ಕೊಡುತ್ತದೆ ಅಷ್ಟೇ. ಇವತ್ತಿಗೆ ಪರಿಸ್ಥಿತಿ ಒಂಚೂರು ಸುಧಾರಿಸಿಕೊಂಡಿದೆ ಆದರೂ ಕುಹಕದ ನಗು ಮತ್ತು ಅನುಮಾನದ ದೃಷ್ಟಿ ಸಂಪೂರ್ಣ ಮರೆಯಾಗಿಲ್ಲ. ನವರಸ ಎಂದರೆ ಶೃಂಗಾರ, ಹಾಸ್ಯ, ವೀರ, ಅದ್ಭುತ, ಭಯಾನಕ, ಶಾಂತ, ಕರುಣಾ, ರೌದ್ರ, ಭೀಭತ್ಸ… ಎಲ್ಲವೂ ಸೇರಬೇಕು. ಅದೇ ರೀತಿ ಪ್ರತಿ ಕಲೆಯೂ ನವರಸಗಳಿಂದಲೇ ತುಂಬಿ ಪರಿಪೂರ್ಣವಾಗಬೇಕು. ಅದಕ್ಕೆ ಸಾಹಿತ್ಯವೂ ಹೊರತಲ್ಲ. ಹೀಗಿರುವಾಗ ಅದರಲ್ಲಿನ ಒಂದು ಭಾವವನ್ನೇ ನಿರಾಕರಿಸಿಬಿಡುವುದು ಪರಿಪೂರ್ಣತೆಗೆ ಧಕ್ಕೆಯಾದಂತಲ್ಲವೇ… ಒಮ್ಮೆ ನನ್ನ ಒಂದು ಕತೆಯನ್ನು ಓದಿದ ಗೆಳತಿಯೊಬ್ಬಳು “ಅವನು ಯಾರು, ಈಗ ಎಲ್ಲಿದ್ದಾನೆ” ಎಂದೆಲ್ಲಾ ಕೇಳಲು ಶುರುಮಾಡಿದಳು. “ಇಲ್ಲ ಮಾರಾಯ್ತಿ, ಹಾಗೆಲ್ಲ ಎಂತದ್ದೂ ಇಲ್ಲ. ಯಾರದ್ದೋ ಕತೆ ಅದಕ್ಕೆ ಸ್ಫೂರ್ತಿ ಅಷ್ಟೇ… ಮತ್ತೆ ಉಳಿದದ್ದೆಲ್ಲ ಕಟ್ಟುಕತೆ ಅದು…” ಎಂದು ಎಷ್ಟು ಹೇಳಿದರೂ ಅವಳು ನಂಬಲು ಸಿದ್ಧಳಾಗಲೇ ಇಲ್ಲ! ಇರಲಿ, ನಮ್ಮ ಸುತ್ತಮುತ್ತಲ ಬದುಕು, ಸಮಾಜ ನಮ್ಮನ್ನು ಬಹಳಷ್ಟು ಪ್ರಭಾವಿಸುತ್ತವೆ. ಆ ಪ್ರಭಾವವೇ ನಮ್ಮನ್ನು ಬೆಳೆಸುತ್ತವೆ. ಅದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಕೆಲವೊಮ್ಮೆ ತೀರಾ ಹತ್ತಿರದ ಸಂಬಂಧಿಗಳೇ ನಮ್ಮ ಕತೆ ಅಥವಾ ಕವಿತೆಯ ನಾಯಕರೂ ಆಗಿಬಿಡುತ್ತಾರೆ. ಅದು ಇನ್ನೊಂಥರದ ಬಿಸಿತುಪ್ಪ. ಅದು ಅವರು ಇಷ್ಟಪಡುವಂತಹ ರೀತಿಯಲ್ಲಿದ್ದರೆ ಸರಿ, ಇಲ್ಲವಾದರೆ ಅವರ ವಿರಸವನ್ನೂ ಕಟ್ಟಿಕೊಳ್ಳಬೇಕಾದ ಪರಿಸ್ಥಿತಿ. ಇದೆಲ್ಲವನ್ನೂ ಮೀರಿ ಬರಹಗಾರ ಬರಹವನ್ನು ಉಳಿಸಬೇಕಿರುತ್ತದೆ. ಮನುಷ್ಯರು ಅಳಿಯುತ್ತಾರೆ. ಪಾತ್ರಗಳು ಉಳಿಯುತ್ತವೆ. ಬರಹಗಾರ ಅಳಿಯುತ್ತಾನೆ ಪುಸ್ತಕಗಳಷ್ಟೇ ಉಳಿಯುತ್ತವೆ. ಬರಹ ಒಂದಿಡೀ ಕಾಲಮಾನದ ಧ್ಯೋತಕವಾಗಿರುತ್ತದೆ. ಒಬ್ಬ ವ್ಯಕ್ತಿಯ ವಿವರ ಬರಹದ ಮೂಲಕ ಸಾಮಾನ್ಯೀಕಣಗೊಳ್ಳುತ್ತದೆ. ಇಲ್ಲವಾದರೆ ಓದುವ ಬಹಳಷ್ಟು ಮಂದಿ ಇದು ನನ್ನದೇ ಮಾತು, ಇದು ನನ್ನದೇ ವಿವರ, ಇದು ನನ್ನದೇ ಪರಿಸ್ಥಿತಿ ಎನ್ನುವಂತೆ ಓದಿಕೊಳ್ಳುವರಲ್ಲ ಹೇಗೆ… ಮತ್ತೆ ಬರಹಗಾರನಿಗೂ ತಾನು ಕಂಡುಂಡ ವಿಚಾರವನ್ನು ಕತೆ ಅಥವಾ ಕವಿತೆಗೆ ಬ್ಲೆಂಡ್ ಮಾಡುವ ಕಲೆ ತಿಳಿದಿರಬೇಕಿರುತ್ತದೆ.  ಆದರೆ ಒಂದು ಭಾವತೀವ್ರತೆಯಲ್ಲಿ ಬರೆಯ ಹೊರಟ ಹುಮ್ಮಸ್ಸಿನಿಂದಾಗಿ ಬರಹ ವಾಚ್ಯವಾಗುವುದನ್ನು ತಪ್ಪಿಸುವುದು ಕಷ್ಟವಾಗಿಬಿಡುತ್ತದೆ. ಆಗ ಪು.ತಿ.ನ.ರು ಹೇಳಿದ ಭವನಿಮಜ್ಜನ ಮತ್ತು ಲಘಿಮಾ ಕೌಶಲ ನೆನಪಾಗಬೇಕು ಮತ್ತು ಈ ಕಷ್ಟದಿಂದ ಪಾರಾಗುವುದನ್ನು ಪ್ರತಿಯೊಬ್ಬ ಬರಹಗಾರನೂ ಕಲಿಯಬೇಕು. ಎಲ್ಲವನ್ನೂ ವಾಚ್ಯವಾಗಿ ಹೇಳುವುದಾದರೆ ಕತೆ, ಕವಿತೆ, ಪ್ರಬಂಧ… ಎನ್ನುವ ಯಾವ ಸಾಹಿತ್ಯ ಪ್ರಕಾರಗಳ ಅವಶ್ಯಕತೆಯೂ ಇರುವುದಿಲ್ಲ. ಯಾವುದೇ ಬರಹ ವಾಚ್ಯವಾಗುತ್ತಾ ಹೋದಂತೆ ಓದುಗರ ಚಿಂತನೆಗೆ, ವಿಚಾರಕ್ಕೆ ಅವಕಾಶವೇ ಇಲ್ಲದಂತೆ ಆಗಿಬಿಡುತ್ತದೆ. ಎಲ್ಲವನ್ನೂ ಬರಹಗಾರನೇ ಹೇಳಿಬಿಟ್ಟ ಮೇಲೆ ವಿಚಾರ ಮಾಡಲಿಕ್ಕೆ ಇನ್ನೇನುಳಿಯುತ್ತದೆ?! ವಾಚ್ಯತೆ ಬರಹಗಾರನ ಬಹು ದೊಡ್ಡ ಶತ್ರು. ಅದನ್ನು ಮೀರುವುದೆಂದರೆ, ಮೊಸರನ್ನಕ್ಕೆ ಬಿದ್ದ ಕಲ್ಲನ್ನು ಎತ್ತಿ ಪಕ್ಕಕ್ಕಿಟ್ಟು ಸೇವಿಸುವಷ್ಟೇ ನಾಜೂಕಾಗಿ ಮಾಡಬೇಕಾದ ಕೆಲಸ. ಆ ನಾಜೂಕುತನ ಅಭ್ಯಾಸ ಮತ್ತು ಅಧ್ಯಯನ ಬಲದಿಂದ ಸಾಧ್ಯ. ಅವಸರದಿಂದ ಬರೆಯಲು ಹೊರಡುವ ಇಂದಿನ ಬರಹಗಾರರಿಗೆ ಸಾಹಿತ್ಯದ ಇತಿಹಾಸ ಬೇಕಿಲ್ಲ. ಹಿರಿಯರನ್ನು ಓದುವುದು ಬೇಡವಾಗುತ್ತಿದೆ. ಒಂದಷ್ಟು ಬರಹಗಳು ಪ್ರಕಟವಾದ ಕೂಡಲೇ ಅಹಮ್ಮಿಗೆ ಗುರಿಯಾಗಿಬಿಡುತ್ತೇವೆ. ಅದು ನಮ್ಮ ವಯಸ್ಸಿಗೆ ಸಹಜವಾದ ಕಾರಣ ಅದನ್ನು ಮೀರುವುದು ಸುಲಭವಲ್ಲ. ಆದರೆ ಹೆಚ್ಚು ಹೆಚ್ಚು ಓದುತ್ತಾ ಹೋದಂತೆ ಆ ಪೊರೆ ತನ್ನಿಂತಾನೆ ತನ್ನ ಅಸ್ತಿತ್ವವನ್ನು ಕಳಚಿಕೊಳ್ಳುತ್ತದೆ. ಯಾವುದೇ ಕಲೆಯಿರಲಿ ಅದು ಮನಸ್ಸನ್ನು ತಟ್ಟುವಂತಹ ಶಕ್ತಿಯನ್ನು ಹೊಂದಿರುತ್ತದೆ. ಅದು ಮೊದಲು ಕಲಾವಿದನನ್ನೇ ತನ್ನ ಹತೋಟಿಗೆ ತೆಗೆದುಕೊಳ್ಳುತ್ತದೆ. ನಂತರವೇ ಅದು ಅದರ ಆರಾಧಕನನ್ನು ತಲುಪುವುದು. ಒಮ್ಮೆ ಅದು ತನ್ನ ಹಿಡಿತಕ್ಕೆ ಯಾರನ್ನಾದರೂ ಸಿಲುಕಿಸಿಕೊಂಡುಬಿಟ್ಟಿತೆಂದರೆ ಅದು ಆ ವ್ಯಕ್ತಿಯನ್ನು ವಿನೀತನನ್ನಾಗಿಸಿಬಿಡುತ್ತದೆ. ಅಹಂಕಾರ ಇನ್ನಿಲ್ಲ ಅವನಲ್ಲಿ! ಸಾಹಿತ್ಯದ ಅಂತಿಮ ಪ್ರಭಾವವೂ ಅದೇ ಆಗಬೇಕಿದೆ. ಸಾಹಿತ್ಯ ಒಟ್ಟಾರೆ ನಮ್ಮ ವ್ಯಕ್ತಿತ್ವವನ್ನು ಪ್ರಭಾವಿಸಬೇಕು, ಮತ್ತದು ಧನಾತ್ಮಕವಾಗಿಯೇ… ಅದೇ ಅದರ ನಿಜವಾದ ಶಕ್ತಿ. ಹೀಗೆ ಇಷ್ಟೆಲ್ಲಾ ಸಾಹಿತ್ಯದ ಧ್ಯಾನ, ಗುಣಗಾನ… ಮಾಡಿಯಾದ ನಂತರವೂ ಅದರ ನಾಡಿ ಮಿಡಿತ ಸಿಕ್ಕಿತಾ ಎಂದರೆ ಸಿಕ್ಕಿಲ್ಲ ಎಂಬುದೇ ಉತ್ತರ… ************************************************************ –ಆಶಾ ಜಗದೀಶ್ ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.

Read Post »

ಅಂಕಣ ಸಂಗಾತಿ, ಹೊಸ ದನಿ-ಹೊಸ ಬನಿ

ಅಂಕಣ ಬರಹ ಹೊಸ ದನಿ ಹೊಸ ಬನಿ ೧೬ ಹುಚ್ಚು ಆದರ್ಶಗಳಿಲ್ಲದ ಭಾವ ಭಿತ್ತಿಯ ಸಹಜ ನಿರೂಪಣೆ ನಾಗರೇಖಾ ಗಾಂವಕರ್ ಕವಿತೆಗಳು ಅವಳ ಮಾಂಸ ಮಜ್ಜೆಯ ನೆರಳು, ಮುಟ್ಟಿನ ವಾಸನೆಬಡಿಯದೇ, ಪೊಗರಿದ ಅವನೆಂಬವನ  ಹುಡುಕಿ ಸೋತಿದ್ದೇನೆ, ಹುಡುಕಿ ಕೊಡು ಹೇ! ಪ್ರಭು. ಎಂದು ಗಟ್ಟಿಯಾಗಿ ಪ್ರಶ್ನಿಸುತ್ತಲೇ ಸುರುವಾಗುವ ಈ ಕವಿತೆ ಗಂಡಿನ ಅಹಮ್ಮನ್ನು ಗುರಾಯಿಸುತ್ತಲೇ ಕಡೆಗೆ ಆದರವನ ದೇವರಿಗೆ ಅವಳ ಮಾಂಸ ಮಜ್ಜೆಯ ನೆರಳು, ಮುಟ್ಟಿನ ವಾಸನೆ ಮೈಲಿಗೆಯಂತೆ. ಆ ದೇವನೆಂಬವನ ಹುಡುಕಿ ಕೊಡು ಹೇ! ಪ್ರಭು (ಹುಡುಕಿ ಕೊಡು) ಎನ್ನುವಾಗ ಸಾಮಾನ್ಯವಾಗಿ “ಅವನು” ಎಂದರೆ “ದೇವರು” ಎಂದೇ ಅರ್ಥೈಸಲಾಗುವ “ಅವನನ್ನೇ” ಹುಡುಕಿಕೊಡು ಎಂದು ಕೇಳುವ ಗತ್ತು ತೋರುತ್ತಲೇ ಒಟ್ಟೂ ಸಾಮಾಜಿಕ ವ್ಯವಸ್ಥೆಯ ಅಸ್ತಿತ್ವನ್ನೇ ಅಲುಗಾಡಿಸುವ ಉತ್ತರವೇ ಇಲ್ಲದ ಪ್ರಶ್ನೆಯನ್ನೆತ್ತುವ ಈ ಕಾವ್ಯಧ್ವನಿ ಶ್ರೀಮತಿ ನಾಗರೇಖಾ ಗಾಂವಕರ ಅವರದ್ದು. ನಾಗರೇಖಾ ಗಾಂವಕರ್ ಸಂಗಾತಿಯ ಓದುಗರಿಗೆ ಪರಿಚಿತ ಹೆಸರು. ಈಗಾಗಲೇ ಸಂಗಾತಿಯೂ ಸೇರಿದಂತೆ ಹಲವು ವೆಬ್ ಪತ್ರಿಕೆಗಳಲ್ಲದೇ ಮಯೂರ, ಕನ್ನಡಪ್ರಭ, ಉದಯ ವಾಣಿ ಪತ್ರಿಕೆಗಳಲ್ಲೂ ಇವರ ಕವಿತೆಗಳು ಆಗಾಗ ಪ್ರಕಟವಾಗುತ್ತಲೇ ಇರುತ್ತವೆ. ದಾಂಡೇಲಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿರುವ ಇವರು ಕಳೆದ ವರ್ಷ ಪ್ರಕಟಿಸಿದ್ದ “ಬರ್ಫದ ಬೆಂಕಿ” ಕವನ ಸಂಕಲನಕ್ಕೆ ಕರ್ನಾಟಕ ಲೇಖಕಿಯರ ಸಂಘದ ಬಹುಮಾನ ನಿನ್ನೆಯಷ್ಟೇ ಘೋಷಣೆಯಾಗಿದೆ. ಏಣಿ ಮತ್ತು ಪದಗಳೊಂದಿಗೆ ನಾನು, ಬರ್ಫದ ಬೆಂಕಿ[ ಕವನ ಸಂಕಲನಗಳು,] ಪಾಶ್ಚಿಮಾತ್ಯ ಸಾಹಿತ್ಯ ಲೋಕ, ಆಂಗ್ಲ ಸಾಹಿತ್ಯ ಲೋಕ[ಅಂಕಣ ಬರಹ ಕೃತಿ] ಸಮಾನತೆಯ ಸಂಧಿಕಾಲದಲ್ಲಿ [ಮಹಿಳಾ ಸಮಾನತೆಯ ಕುರಿತ ಅಂಕಣ ಬರಹ ಕೃತಿ] ಪ್ರಕಟಿಸಿರುವ ಇವರ ಸಂಕಲನಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾರಾಮಲಿಂಗಪ್ಪದತ್ತಿ ಪ್ರಶಸ್ತಿ,  ಡಾ. ಬೆಟಗೇರಿ ಕೃಷ್ಣಶರ್ಮ ಕಾವ್ಯ ಪ್ರಶಸ್ತಿ ಮತ್ತು ಕರ್ನಾಟಕ ಲೇಖಕಿಯರ ಸಂಘದ ಪ್ರಶಸ್ತಿಗಳು ಲಭಿಸಿವೆ. ಆಯತಪ್ಪಿ ಫಳಾರನೇ ಕೆಳಗುರುಳಿದಾಗ; ಬಿದ್ದರೂ, ಗುದ್ದಿದರೂ ಲೋಹದ ಹಣತೆ ನೆಗ್ಗಬಹುದು, ಮತ್ತೆದ್ದು ನಗಲೂಬಹುದು ಆದರೆ  ಚೂರಾದದ್ದು ಮೆದು ಮೈಯ  ಮಣ್ಣಹಣತೆ ಎಂದೂ ಈ ಕವಿಗೆ ಗೊತ್ತಿರುವ ಕಾರಣಕ್ಕೇ ಇವರ ಪದ್ಯಗಳು ಅನುಭವ ವಿಸ್ತರಣದ ಚೌಕಟ್ಟಿನಾಚೆಗೆ ಉಕ್ಕದೇ ಹಾಗೆಯೇ ಸೀಮಿತ ವ್ಯಾಸದ ಪರಿವೃತ್ತದೊಳಗಿದ್ದೂ ಒತ್ತಡದ ಹೇರನ್ನು ನಿಭಾಯಿಸುವ ಪರಿ ಅಪರೂಪದ್ದಷ್ಟೇ ಅಲ್ಲ ಅದು ನಿಜ ಬದುಕಿನಲ್ಲೂ ಹೆಣ್ಣು ಅಡವಳಿಸಿಕೊಳ್ಳಲೇ ಬೇಕಾದ ಸಹಜ ದಾರಿಯೂ ಆಗಿದೆ. ಇಂಥ ಚಿಂತನೆಯ ಮುಂದುವರೆದ ಶೋಧವಾಗಿ ಒಂದಿಷ್ಟು ಆಚೀಚೆ ಜರುಗಿಸಹೋದರೂ ಕೈಗೆ ಹತ್ತಿದ ಕಬ್ಬಿಣದ ಮುಳ್ಳು ರಕ್ತ ಬಸಿಯಿತು… ಅಂದಿನಿಂದ ಬೇಲಿಯಲ್ಲಿ ಚಿಗುರ ಕಾಣುವ ಕನಸೂ ಕುಸಿಯಿತು.. ಎಂದು ಈ ಕವಿ “ಬೇಲಿಗಳು” ಎನ್ನುವ ಕವಿತೆಯಲ್ಲಿ ಒಟ್ಟೂ ನಾಶವಾಗುತ್ತಲೇ ಇರುವ ಸಂಬಂಧಗಳನ್ನು ಬೇಲಿಯೆಂಬ  ಪ್ರತಿಮೆಯ ಮೂಲಕವೇ ವಿಷಾದಿಸುತ್ತಾರೆ. ಪದಗಳೊಂದಿಗೆ ನಾನು ಎನ್ನುವ ಕವಿತೆಯಲ್ಲಿ ಪದಗಳೆಂದರೆ ನನಗೆ ಅಚ್ಚುಮೆಚ್ಚು ದಿನಂಪ್ರತಿಯ ಅಭ್ಯಾಸವೂ ಪದಗಳ ಹೊಸೆಯುವುದರಲ್ಲಿ, ಮಸೆಯುವುದರಲ್ಲಿ: ಆದರೆ ಆ ಪದಗಳಿಗೆ ಶಬ್ದಕೋಶದಿ ಅರ್ಥಗಳ ಹುಡುಕಿ ಸೋತಿದ್ದೇನೆ. ಎಂದು ಶಬ್ದಾಡಂಬರದ ವೈಯಾರವನ್ನು ಶಬ್ದಗಳು ಶಬ್ದ ಮಾಡುವ ಪರಿಯನ್ನು ಅರುಹುತ್ತಲೇ ಪದಗಳೆಂದರೆ ನನಗೆ ಅಲರ್ಜಿ ನನ್ನೊಳಗಿನ ನನ್ನನ್ನು ಹೊರಗಟ್ಟಿ ಅಣಕಿಸಿ ನಗುತ್ತವೆ. ಹಾಡಾಗುವ ಬದಲು ಹಾವಾಗಿ ಹಗೆಯ ಹೊಗೆ ಹಬ್ಬಿಸುತ್ತವೆ ಪದಗಳೆಂದರೆ ನನಗೆ ಅಲರ್ಜಿ ಪಟ್ಟಾಂಗದಲ್ಲಿ ಪದಗಳ ಭರ್ಜರಿ ಬೇಟೆಯಾಡುವ ನಾನು ಕಾರ್ಯಹೀನ ಕೆಲಸಗೇಡಿಯಾಗುತ್ತೇನೆ. ಎನ್ನುವಾಗ ಹುಟ್ಟಿದ ದ್ವಿತ್ವವನ್ನು ಕಾಣಿಸುತ್ತಾರೆ. ಒಮ್ಮೆ ಹಿತವಾದದ್ದು ಮುಂದಿನ ಕ್ಷಣದಲ್ಲೇ ಬೇಡವೆಂದೆನಿಸುವ ಮನುಷ್ಯನ ಮಿತಿಯನ್ನು ಈಪದ್ಯ ಹೇಳುತ್ತಿದೆಯೋ ಅಥವ ಕವಿಯು to be or not to be ಎಂಬ ಗೊಂದಲದ ದ್ವಂದ್ವ ಮೀರದ ambiguity ಯೆಂಬ ಪಾಶ್ಚಿಮಾತ್ಯರ ಕಾವ್ಯ ಮೀಮಾಂಸೆಯ ಪ್ರತಿಪಾದಕರಾಗಿಯೂ ಕಾಣುತ್ತಾರೆ. ಹಾಗೆಂದು ಈ ಕವಿ ಬರಿಯ ಒಣ ತರ್ಕ ಮತ್ತು ಸಿದ್ಧಾಂತಗಳ ಗೋಜಲಲ್ಲೇ ನರಳದೆ ಅಪರೂಪಕ್ಕೆ ಈ ಮಳೆಗೂ ಕರುಣೆಯಿಲ್ಲ ಹಸಿಮನಗಳಲಿ ಹುಸಿ ಬಯಕೆಗಳ ಕುದುರಿಸಿ ಕಾಡುತ್ತದೆ ಎಂದೂ ಒಲವನ್ನು ಕುರಿತು ಧೇನಿಸುತ್ತಲೇ ಆ ಹುಡುಗನಿಗೆ ಇದೆಲ್ಲವನೂ ಹೇಗೆ ಉಲಿಯಲಿ? ಕಂಪು ಹೆಚ್ಚಾಗಿ ಜೋಂಪು ಹತ್ತಿದೆ, ಕಣ್ಣುಗಳು ಮತ್ತೇರಿ ಪಾಪೆಯೊಳಗೆ ಮುದುರಿದೆ ಕಣ್ಣ್ಗತ್ತಲ ಗುಹೆಯಲ್ಲಿ ಮಿಣುಕು ಹಚ್ಚುವ ನಿನ್ನ ಬಿಂಬವ ಹೇಗೆ ಮರೆಮಾಚಲಿ ಹುಡುಗ? ಎಂದು ರೊಮ್ಯಾಂಟಿಕ್ ಮೂಡಿನಲ್ಲಿ ಕೇಳುತ್ತಾರಲ್ಲ ಆಗ ಆ ಪದ್ಯ ಮು(ಹು)ಟ್ಟಿಸಿದ ಬಿಸಿಯನ್ನು ಓದುಗ ಸುಲಭದಲ್ಲಿ ಮರೆಯಲಾರ!! ಈ ಮುದುಕಿಯರೇ ಹೀಗೆ ಮನೆಯ ಸಂದುಹೋದ ಬಣ್ಣಕ್ಕೆ ಸಾಕ್ಷಿಯಾಗುತ್ತಾರೆ…. ಎಂದೆನುವ ಪದ್ಯದ ಶೀರ್ಷಿಕೆ ಈ ಹಿಂದೆ ಇದೇ ಶೀರ್ಷಿಕೆಯಲ್ಲಿ ಪ್ರತಿಭಾ ನಂದಕುಮಾರ ಪದ್ಯವಾಗಿಸಿದ್ದನ್ನು ಓದಿದ್ದವರಿಗೆ ಸಪ್ಪೆ ಎನಿಸುವುದು ಸುಳ್ಳೇನಲ್ಲ. ದೇಹವೊಂದು ಪದಾರ್ಥವಾಗದೇ ಕಲ್ಪಿತ ಭ್ರಮೆಗಳಲ್ಲಿ ಹುಟ್ಟುವ ಅವನನ್ನು ಆವಾಹಿಸಿಕೊಳ್ಳುತ್ತಾಳೆ ಆಘ್ರಾಣಿಸುತ್ತಾಳೆ, ಬಿಚ್ಚಿ ಹರಹಿದ ಹೆರಳುಗಳ ನಡುವೆ ಬಂಧಿಸುತ್ತಾಳೆ ಪರವಶಳಾಗುತ್ತಾಳೆ ಅವಳು ಅವನಿಲ್ಲದೇ ಅವಳ ದೇವರು ಇರುವುದಾದರೂ ಹೇಗೆ? ಆ ದೇವನಿಗಾಗಿ ಕಾಯುತ್ತಾಳೆ ಅವಳು ಕಾಯತ್ತಲೇ ಇರುತ್ತಾಳೆ ಅವಳು. ಎನ್ನುವ ತುಂಬು ಭರವಸೆಯ ಈ ಕವಿ ಒಂದೇ ಧಾಟಿಯಲ್ಲಿ ಬರೆದುದನ್ನೇ ಬರೆಯುತ್ತಿರುವವರ ನಡುವೆ ವಿಭಿನ್ನತೆಯನ್ನೇ ಮುಖ್ಯ ಸ್ಥಾಯಿಯಾಗಿರಿಸಿಕೊಂಡ ಮತ್ತು ಮಹಿಳಾ ಕಾವ್ಯ ಎನ್ನುವ ಹೆಸರಲ್ಲಿ ಹಾಕಿಕೊಂಡಿದ್ದ ಬೇಲಿಯನ್ನು ಸರಿಸಿ ಆ ಅದೇ ಮಹಿಳಾ ಕಾವ್ಯವು ಸಂಕೀರ್ಣತೆಯನ್ನು ಮೀರಿದ ಅನುದಿನದ ಅಂತರಗಂಗೆಯ ಗುಪ್ತಗಾಮಿನೀ ಹರಿವಿನ ವಿಸ್ತಾರ ಮತ್ತು ಆಳದ ಪ್ರಮಾಣವನ್ನು ಗುರ್ತಿಸುತ್ತಾರೆ. “ತರಗೆಲೆ” ಶೀರ್ಷಿಕೆಯ ಪದ್ಯವೇ ಈ ಕವಿಯು ನಂಬಿರುವ  ಒಟ್ಟೂ ಜೀವನ ಮೌಲ್ಯವನ್ನು ಪ್ರತಿನಿಧಿ ಸುತ್ತಿ ದೆ. ಆ ಸಾಲು ಹಾರುವ ಪುಟ್ಟ ಗುಬ್ಬಿಯ ಬಾಯೇರಿ ಮೊಟ್ಟೆಗೆ ಮಂದರಿಯಾಗಿ, ಪುಟಪುಟ ನೆಗೆತದ ಮರಿಗುಬ್ಬಿಗಳ ಕಾಲಡಿಗೆ ರೋಮಾಂಚನಗೊಳ್ಳಬೇಕು ಚಿಲಿಪಿಲಿಯೂದುವ ತೊದಲು ನುಡಿಗಳಿಗೆ ಕಿವಿಯಾಗಬೇಕು. ಜೀವವಿಲ್ಲದ ಒಣ ಎಲೆಯೆಂದವರ ಕಡೆಗೊಮ್ಮೆ ನಲ್ಮೆಯ ನಗೆ ಬೀರಬೇಕು ಇಂಥ ಭಾವ ಭಿತ್ತಿಯ ಮತ್ತು ಹುಚ್ಚು ಆದರ್ಶಗಳಿಲ್ಲದ ಇದ್ದುದನ್ನೇ ಸರಿಯಾಗಿ ಸ್ಪಷ್ಟವಾಗಿ ಸದುದ್ದೇಶದ ಚಿಂತನೆಯ ಈ ಕವಿಯ ಐದು ಕವಿತೆಗಳ ಪೂರ್ಣ ಪಾಠ ನಿಮ್ಮ ಓದಿಗೆ ಶಿಫಾರಸು ಮಾಡುತ್ತೇನೆ. —————————————————————————————– ೧. ಎದೆ ಬೆಳಕು ಮತ್ತು ಕಣ್ಣ ಕಾಡಿಗೆ ನಿನ್ನ ಉತ್ತರೀಯಕ್ಕೆ ಅರಿವಿಲ್ಲದೇ ಬಳಿದ ನನ್ನ ಕೆಂಪು ತುಟಿರಂಗು ಇನ್ನೂ ಹಸಿಹಸಿ ಆಗಿಯೇ ಇದೆ ಇಳಿಸಂಜೆಗೆ ಹಬ್ಬಿದ ತೆಳು ಮಂಜಿನಂತಹ ಹುಡುಗ ಮಸುಕಾಗದ ಕನಸೊಂದು ಕಣ್ಣಲ್ಲೇ ಕಾದು ಕೂತಿದೆ ನೀನೊಲಿದ ಮರುಗಳಿಗೆ ಭವದ ಹಂಗು ತೊರೆದೆ ಮುಖ ನೋಡದೇ ಮಧುರಭಾವಕ್ಕೆ ಮನನೆಟ್ಟು ಒಳಹೃದಯದ ಕವಾಟವ ಒಪ್ಪಗೊಳಿಸಿ ಮುಗ್ಧಳಾದೆ ಈಗ ನೆನಪುಗಳ ಮುದ್ದಾಡುತ್ತಿರುವೆ ಮುದ್ದು ಹುಡುಗ, ನಿನ್ನ ಒಲವಿಂದ ಬರಡಾದ ಒರತೆಗೂ ಹಸಿಹಸಿ ಬಯಕೆ ಒಣಗಿದ ಎದೆಗೂ ಲಗ್ಗೆ ಇಡುವ ಹನಿ ಜಿನುಗಿನ ಕುಪ್ಪಳಿಸುವಿಕೆ ಗೊತ್ತೇ ನಿನಗೆ? ಈ ತಂಗಾಳಿಯೂ ತೀರದ ದಿಗಿಲು ಹತ್ತಿಸಿಕೊಂಡ ಏಕಾಂಗಿ ಮೃಗದಂತೆ ಸುಂಯ್ಯನೇ ಹಾಗೇ ಬಂದು ಹೀಗೆ ಹೊರಟುಹೋಗುತ್ತದೆ ಮರೆತ ಕನಸುಗಳಿಗೆ ಕಡ ಒದಗಿಸಿ ಬೆನ್ನು ಹತ್ತುತ್ತದೆ ಈ ಮಳೆಗೂ ಕರುಣೆಯಿಲ್ಲ ಹಸಿಮನಗಳಲಿ ಹುಸಿ ಬಯಕೆಗಳ ಕುದುರಿಸಿ ಕಾಡುತ್ತದೆ ಇದೆಲ್ಲವನೂ ಹೇಗೆ ಉಲಿಯಲಿ? ಕಂಪು ಹೆಚ್ಚಾಗಿ ಜೋಂಪು ಹತ್ತಿದೆ, ಕಣ್ಣುಗಳು ಮತ್ತೇರಿ ಪಾಪೆಯೊಳಗೆ ಮುದುರಿದೆ ಕಣ್ಣ್ಗತ್ತಲ ಗುಹೆಯಲ್ಲಿ ಮಿಣುಕು ಹಚ್ಚುವ ನಿನ್ನ ಬಿಂಬವ ಹೇಗೆ ಮರೆಮಾಚಲಿ ಹುಡುಗ? ನೀನಾದರೋ ಭೂವ್ಯೋಮಗಳ ತಬ್ಬಿ ನಿಂತ ಬೆಳಕ ಕಿರಣ ಕಣ್ಣ ಕಾಡಿಗೆಯ ಕಪ್ಪು, ಅದಕ್ಕೆ ಎದೆಯೊಳಗೆ ಬೆಳಕ ಹಚ್ಚಿದೆ, ಕಣ್ಣ ಮುಂದೆ ಇಲ್ಲದೆಯೂ ಕಣ್ಣ ಕಾಡಿಗೆಗೆ ಬಣ್ಣ ಬಳಿದೆ. ಮುದ್ದು ಹುಡುಗ, ಹೀಗಾಗೇ ದಿನಗಳೆದಂತೆ ನನ್ನ ಕಣ್ಣ ಕೆಳಗಡೆ ಕಪ್ಪು ಬರೀ ಕಪ್ಪು ೨.  ಶತಶತಮಾನಗಳ ತಲೆಬರಹ ತಪ್ಪುವ ಹಾದಿಗಳ ಗುಂಟ ಅರಿವಿನ ಸೂಡಿ ಸಿಗಬಹುದೇ ಎಂದು ಕಾಯುತ್ತಲೇ ಇದ್ದಾರೆ ಜನ ದಂಧುಗಗಳ ಸಾಲೇ ಸಾಲು ಎದುರಾಗುತ್ತ ಬೇಸತ್ತ ಮನಸ್ಸುಗಳು ಒಂದನ್ನೊಂದು ಹದತಪ್ಪುತ್ತಲೇ ಬದುಕ ಹದಕ್ಕೆ ಕಾಯಿಸಿಕೊಳ್ಳುವ ಕನಸು ನನಸಾಗದ ಹಾದಿಯ ಮೇಲೆ ಸೌಧಕಟ್ಟುತ್ತಿದ್ದಾರೆ ಶತಶತಮಾನಗಳಿಂದ ಜನ ಹಾವಿನ ಹಾದಿಯನ್ನು ಹೂವೆಂದುಕೊಂಡು ನಂಜಿಗೆ ಬಲಿಯಾಗುತ್ತಿದ್ದಾರೆ ಜನ ಮಧ್ಯದ ಕಡಲಿಗೆ ಮುಗಿಬಿದ್ದು ಮದ್ದೆ ಸಿಗದೇ ಮಾರಿಕೊಂಡ ಮನಸ್ಸಿನ ಕೂಪದೊಳಗಿನ ನೆನಪುಗಳ ಒಂದೊಂದಾಗಿ ಗೋರಿಯೊಳಗೆ ಹೂತು ಹಾಕುತ್ತಲೇ ಮರೆತು ಅದನ್ನೆ ಎದೆಯ ಹಾಡಾಗಿಸಿಕೊಳ್ಳುತ್ತಿದ್ದಾರೆ ಶತಶತಮಾನಗಳಿಂದ ಜನ ಯಾವ ಎತ್ತರಕ್ಕೆ ಏರಿದರೂ ಜಾರುವ ಭಯದಲ್ಲಿಯೇ ಬಸವಳಿಯುತ್ತಾರೆ ಜನ ಬೆಳಕನ್ನು ಮುತ್ತಿಕ್ಕುವ ಆಸೆಗೆ ಬಲಿಬಿದ್ದು ಕೈತಪ್ಪಿ ಬೆಂಕಿಯನ್ನು ಅಪ್ಪಿ ಸುಟ್ಟಗಾಯದ ನೋವಿಗೆ ಮುಲಾಮು ಹಚ್ಚುತ್ತ ಮುಲುಗುಡುತ್ತಿದ್ದಾರೆ ಜನ ಪರಂಪರೆಯ ಮೊರದಲ್ಲಿ ಬದಲಾವಣೆಯ ಅಕ್ಕಿ ಆರಿಸುತ್ತಾ ಕಸವರವನ್ನು ಕಸವೆಂದು ತೆಗೆತೆಗೆದು ಚೆಲ್ಲುತ್ತಿದ್ದಾರೆ ಜನ ನೆಮ್ಮದಿಯ ಹುಡುಕುತ್ತಾ ದೇಗುಲಗಳ ಘಂಟೆಗಳ ಬಾರಿಸುತ್ತ ಪರಮಾತ್ಮ ಎನ್ನುತ್ತ ಪಂಥಗಳ ಕಟ್ಟಿಕೊಳ್ಳುತ್ತಲೇ ನಡೆದಿದ್ದಾರೆ ಶತಶತಮಾನಗಳಿಂದ ಜನ ೩. ಗುಪ್ತಗಾಮಿನಿ ಅಲ್ಪ ನುಡಿಯಲ್ಲಿ ತತ್ವ ವಿಚಾರ ಪುರಾಣಗಳ ಪಠಣ, ನಿತ್ಯ ವಾಚನ ವಾಚಾಳಿತನವಿಲ್ಲ-ವಚನ ಬಲು ಭಾರ ಮಿತ ಭಾಷಿ ನಾನೆಂಬ ಕೀಟಕೊರೆತ-ಮೆದುಳು ಊತ ಎಲ್ಲ ದುರ್ಗಮ ದಾರಿ ಕ್ರಮಿಸಿ ಬಂದಿಹೆ ಏರುವ ಮೊದಲು ಗದ್ದುಗೆ ನನಗಾರು ಸಮನಿಲ್ಲ ನನ್ನಿಂದಲೆ ಎಲ್ಲ ಸರ್ವಥಾ ಸಲ್ಲ ಅಲ್ಲೂ ವಾಸನೆ ನಾ ಸರಳ, ಸಜ್ಜನ ನೀತಿ ನೇಮಗಳ ಪರಿಪಾಲಕ, ಸತ್ಯ ಶಾಂತಿಗಳ ಪೂಜಕ, ಎನಗಿಂತ ಹಿರಿಯರಿಲ್ಲ ನನ್ನಂತೆ ಯಾರಿಲ್ಲ, ಕನವರಿಕೆ ಬೇರೆನಿಲ್ಲ, ಒಳಬೆರಗು-ಅದೇ ಯಾವ ಧನ್ವಂತರಿಯ ಬಳಿಯಿಲ್ಲ ಮದ್ದು ಬಿಳಿಯ ಜುಬ್ಬದ ಒಳಗೆ ಕರಿಯ ಕೋಟಿನ ಗುಂಡಿಯಲ್ಲಿ ರೇಷ್ಮೇ ಮಕಮಲ್ಲಿನ ನುಣುಪಲ್ಲಿ ಸದ್ದಿಲ್ಲದೇ ಠೀಕಾಣಿ ಜರಡಿ ಹಿಡಿದರೂ ಜಾರದಂತೆ ಅಂಟಿಕೂತಿದೆ ನಾನು ಹೋದರೆ ಹೋದೇನು ಕನಕನಿಗಾದ ಉದಯಜ್ಞಾನ ನಮಗೇಕಿಲ್ಲ ಬಿಡು ಆ ಹಂತ ಏರಿಲ್ಲ ಆ ಮರ್ಮ ಸರಳಿಲ್ಲ. ೪. ಪದಗಳೊಂದಿಗೆ ನಾನು ಪದಗಳೆಂದರೆ ನನಗೆ ಅಚ್ಚುಮೆಚ್ಚು ದಿನಂಪ್ರತಿಯ ಅಭ್ಯಾಸವೂ ಪದಗಳ ಹೊಸೆಯುವುದರಲ್ಲಿ, ಮಸೆಯುವುದರಲ್ಲಿ: ಆದರೆ ಆ ಪದಗಳಿಗೆ ಶಬ್ದಕೋಶದಿ ಅರ್ಥಗಳ ಹುಡುಕಿ ಸೋತಿದ್ದೇನೆ. ಹೊಸ ಹಾಡಿಗೆ ಕುಣಿದಾಡುವ ನವಿಲುಗಳ ದಾರಿ ಕಾಯುತ್ತ, ನಾನೇ ನವಿಲಾಗಬಯಸುತ್ತೇನೆ. ಮತ್ತೆ ಕುಕಿಲದ ಗಾನಕ್ಕೆ ಪದ ಜೋಡಿಸಿ ಶ್ರುತಿ ಕೂಡಿಸಿ ಹಾಡಾಗ ಬಯಸುತ್ತೇನೆ. ಪದಗಳು ಪರಾರಿಯಾಗುತ್ತವೆ ಆಗೊಮ್ಮೆ ಈಗೊಮ್ಮೆ ಸುಳಿವುಕೊಡದೆ, ಪಕ್ಕಾ ಪರದೇಶಿಯಂತೆ. ಹಳಹಳಿಸಿ ನೋಡುತ್ತೇನೆ: ಪದಗಳ ಜೋಡಿಸಿ ಇಡಲಾಗದ್ದಕ್ಕೆ. ನಡುರಾತ್ರಿಯಲ್ಲಿ ಕಂದೀಲ ಬೆಳಕಿನಲ್ಲಿ ನಡಗುವ ಕೈಗಳು ಆಡಿಯಾಡುತ್ತವೆ ಕೆತ್ತಿದ ಪದಗಳ ಮೇಲೆ, ಕಂಗಳಿಂದ ಉದುರಿದ ಮುತ್ತೊಂದು ಕರ ಸೋಕಿದಾಗ ಎಚ್ಚರ ಗೊಳ್ಳುತ್ತ ಸಡಿಲವಾಗಿಲ್ಲ ಎಲ್ಲಪದಗಳು ಅವಕ್ಕೆ ಸಂದೂಕದ ಪೆಟ್ಟಿಗೆಯಲ್ಲಿಟ್ಟು ಕಾಪಿಡು ಎನ್ನುತ್ತದೆ ಮನಸ್ಸು. ಪದಗಳೆಂದರೆ ನನಗೆ ಅಲರ್ಜಿ ನನ್ನೊಳಗಿನ ನನ್ನನ್ನು ಹೊರಗಟ್ಟಿ ಅಣಕಿಸಿ ನಗುತ್ತವೆ. ಹಾಡಾಗುವ ಬದಲು ಹಾವಾಗಿ ಹಗೆಯ ಹೊಗೆ ಹಬ್ಬಿಸುತ್ತವೆ ಪದಗಳೆಂದರೆ ನನಗೆ ಅಲರ್ಜಿ ಪಟ್ಟಾಂಗದಲ್ಲಿ ಪದಗಳ ಭರ್ಜರಿ ಬೇಟೆಯಾಡುವ ನಾನು ಕಾರ್ಯಹೀನ ಕೆಲಸಗೇಡಿಯಾಗುತ್ತೇನೆ. ಪದಗಳೆಂದರೆ ಅಚ್ಚುಮೆಚ್ಚು ಅಲರ್ಜಿ ನನಗೆ ಪರಪರನೆ ಕೆರೆದುಕೊಳ್ಳುವ ಚಟವಿದ್ದ ಹಾಗೆ. ೫. ಹುಡುಕಿ ಕೊಡು ಅವಳ ಮಾಂಸ ಮಜ್ಜೆಯ ನೆರಳು, ಮುಟ್ಟಿನ ವಾಸನೆಬಡಿಯದೇ, ಪೊಗರಿದ ಅವನೆಂಬವನ  ಹುಡುಕಿ ಸೋತಿದ್ದೇನೆ, ಹುಡುಕಿ ಕೊಡು ಹೇ! ಪ್ರಭು. ಒಡಲ ಮಾಂಸದ ಹೊದಿಕೆಯೊಳಗೆ ಜೀವವ ಹದವಾಗಿ ಕಾಪಿಟ್ಟು ಅವನುಸಿರ ಹಸಿರ ಮಾಡಿ ಹಣ್ಣಾದವಳು ರಕ್ತ ಹೀರಿದ ಬಟ್ಟೆಯ ಹಿಂಡಿ ನಿಂತವಳ ಸೆರಗು ಹಿಡಿದು ಕಾಡಿದವನ ಎದೆಗವುಚಿಕೊಂಡವಳು ಮಾಂಸಕಲಶದ ತೊಟ್ಟು ಬಾಯಿಗಿಟ್ಟೊಡನೆ ಕಿರುನಕ್ಕು ಕಣ್ಣುಮಿಟುಕಿಸಿದವನ ಲೊಚಲೊಚ ರಕ್ತ ಹೀರುವವನ ಕಣ್ಣೊಳಗೆ ತುಂಬಿಸಿಕೊಂಡವಳು ಅವಳಿಲ್ಲದೇ ಜಗದ ಬೆಳಕಿಗೆ ಕಣ್ಣು

Read Post »

ಅಂಕಣ ಸಂಗಾತಿ, ಮುಖಾಮುಖಿ

ಅಂಕಣ ಬರಹ ಮೆಹಬೂಬ್ ಮುಲ್ತಾನಿ ಪರಿಚಯ: ಮೆಹಬೂಬ್ ಮುಲ್ತಾನಿ ಬೆಳಗಾವಿ ಜಿಲ್ಲೆಯ ಖಾನಾಪುರ ‌ತಾಲೂಕಿನ‌ ಚಿಕ್ಕನದಿಕೊಪ್ಪ‌ ಶಾಲೆಯಲ್ಲಿ ‌ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಮಕಾಲಿನ ಓದು ಬರಹ ವೇದಿಕೆ ಕಟ್ಟಿಕೊಂಡು ಸಾಹಿತ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಹಿಂದಿ,ಉರ್ದು, ಮರಾಠಿ, ಆಂಗ್ಲ ಭಾಷೆಯ ಸಾಹಿತ್ಯ ಅನುವಾದ, ವಿಶೇಷವಾಗಿ ಕವಿತೆಗಳ ಅನುವಾದ ಇವರ ಇಷ್ಟದ ಕೆಲಸ. ಕವಿತೆ ಬರೆಯಲು ಪ್ರಾರಂಭಿಸಿದ್ದಾರೆ. ತುಂಬಾ ಜೀವನ ಪ್ರೀತಿಯ ಮನುಷ್ಯ ನಮ್ಮ ಮೆಹಬೂಬ್ ಮುಲ್ತಾನಿ ಈ ವಾರದ ಮುಖಾಮುಖಿಯಲ್ಲಿ ಕವಿ ಮೆಹಬೂಬ್ ಮುಲ್ತಾನಿಯನ್ನು ಮಾತಾಡಿಸಿದ್ದಾರೆನಾಗರಾಜ ಹರಪನಹಳ್ಳಿ ” ನನ್ನ ಕವಿತೆಯ ವಸ್ತು ಪ್ರೀತಿ ಮತ್ತು ಧರ್ಮ “ “ ದೇವರು -ಧರ್ಮದಲ್ಲಿ ನನಗೆ ಅಷ್ಟಾಗಿ ನಂಬಿಕೆಯಿಲ್ಲ “ ಕವಿತೆಗಳನ್ನು ಯಾಕೆ ಬರೆಯುತ್ತೀರಿ ? ಕವಿತೆ ಯಾಕೆ ಬರೆಯುತ್ತೇನೆ ಎನ್ನುವುದಕ್ಕೆ ನಿರ್ದಿಷ್ಟ ಉತ್ತರ ಹೇಳಲಾಗದು. ಮನಸ್ಸಿನ ಬೇಗುದಿ ಹೊರಹಾಕಲು ನಾನು ಕವಿತೆಯ ಮೊರೆ ಹೋಗುತ್ತೇನೆ. ಕವಿತೆ ಹುಟ್ಟುವ ಕ್ಷಣ ಯಾವುದು ? ನಿರ್ದಿಷ್ಟ ಸಮಯ ಅಂತೆನೂ ಇಲ್ಲ .ಯಾವುದೋ ಒಂದು ಕ್ಷಣದಲ್ಲಿ ಹೊಳೆದ ಸಾಲುಗಳು ಆಗಾಗ ಕವಿತೆಯ ರೂಪ ತಾಳುತ್ತವೆ ನಿಮ್ಮ ಕವಿತೆಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ ಯಾವುದು ? ಪದೇ ಪದೇ ಕಾಡುವ ವಿಷಯ ಯಾವುದು ? ಪ್ರೀತಿ ಮತ್ತು ಧರ್ಮ ಕವಿತೆಗಳಲ್ಲಿ ಬಾಲ್ಯ, ಹರೆಯ ಇಣುಕಿದೆಯೇ ? ಹಾ..ಬಾಲ್ಯಕ್ಕೆ ಅಷ್ಟು ಅವಕಾಶವಿಲ್ಲ , ಹರೆಯ ಕವಿತೆಗಳಲ್ಲಿ ಆವರಿಸಿದೆ. ಪ್ರಸ್ತುತ ರಾಜಕೀಯಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ? ತಲ್ಲಣದ ದಿನಗಳಿವು. ಕಾಯಬೇಕಾದವರೆ ಕೊಲ್ಲುವವರಾಗಿರುವ ಸನ್ನಿವೇಶ ಇದೆ. ಸಮಚಿತ್ತದಿಂದ ಇರುವುದು ಈ ಕ್ಷಣದ ಅವಶ್ಯಕತೆ. ಧರ್ಮ ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು ? ಇವೆರಡರಲ್ಲೂ ನನಗೆ ಅಷ್ಟಾಗಿ ನಂಬಿಕೆಯಿಲ್ಲ. ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ ? ಸಾಂಸ್ಕೃತಿಕ ವಾತಾವರಣ ಹದೆಗೆಟ್ಟಿದೆ. ಇಸಂಗಳು ಸಾಂಸ್ಕೃತಿಕ ಲೋಕವನ್ನು ಆಳುತ್ತಿವೆ. ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ? ಇದು ಸಾಹಿತ್ಯದ ಎಲ್ಲರಿಗೂ ತಿಳಿದಿರು ವಿಷಯ. ಬಾಲ ಬಡಿಯುವವರು ಮುಂದಿದ್ದಾರೆ. ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ? ಅತೃಪ್ತಿ ಇದೆ ಅಷ್ಟೇ.. ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು ? ಬೇರೆ ಬೇರೆ ದೇಶದ,ಭಾಷೆಯ ಭಿನ್ನ ಸಂವೇದನೆಯ ಸಾಹಿತ್ಯಿಕ ಕೃತಿಗಳನ್ನು ಅನುವಾದಿಸುವುದು.. ಕನ್ನಡ ಹಾಗೂ ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ, ಸಾಹಿತಿ ಯಾರು ? ಕನ್ನಡದಲ್ಲಿ ಎಚ್ ಎಸ್ ಶಿವಪ್ರಕಾಶ ನನ್ನಿಷ್ಟದ ಕವಿ.ಆಂಗ್ಲಭಾಷೆಯಲ್ಲಿ ರೈನರ್ ಮಾರಿಯಾ ರಿಲ್ಕ ನನ್ನ ಪ್ರೀತಿಯ ಕವಿ . ಈಚೆಗೆ ಓದಿದ ಕೃತಿಗಳಾವವು? ಕೆಂಪು ಮುಡಿಯ ಹೆಣ್ಣು, ಪದ ಕುಸಿಯೆ ನೆಲವಿಲ್ಲ, ಬದುಕು ಮಾಯೆಯ ಆಟ, ಚಿಲಿ ಕೆ ಜಂಗಲೊಸೆ( ಹಿಂದಿ), ಖುಷಿಯೊಂಕೆ ಗುಪ್ತಚರ ( ಹಿಂದಿ), ನಿಮಗೆ ಇಷ್ಟವಾದ ಕೆಲಸ ಯಾವುದು? ಶಿಕ್ಷಕ ವೃತ್ತಿ ನಿಮಗೆ ಇಷ್ಟವಾದ ಸ್ಥಳ ಯಾವುದು ? ನಮ್ಮ ಮನೆ ಮತ್ತು ಶಾಲೆ ನಿಮ್ಮ ಪ್ರೀತಿಯ, ತುಂಬಾ ಇಷ್ಟ ಪಡುವ ಸಿನಿಮಾ ಯಾವುದು? ಮಿಲನ( ಕನ್ನಡ), ರಬ್ ನೇ ಬನಾ ದಿ ಜೋಡಿ( ಹಿಂದಿ) ನೀವು ಮರೆಯಲಾರದ ಘಟನೆ ಯಾವುದು? ಒಮ್ಮೆ ನಮ್ಮ ಮೇಲೆ ಹೆಜ್ಜೆನು ದಾಳಿ ಮಾಡಿದವು. ಇನ್ನೆನೂ ಸಾಯುತ್ತೇವೆ ಎನ್ನುವಾಗ ಭಾಷೆ,ಜಾತಿ, ಧರ್ಮಗಳನ್ನು ಮೀರಿದ ಮಾನವೀಯ ವ್ಯಕ್ತಿ ಯೊಬ್ಬ ನಮಗೆ ಸಹಾಯ ಮಾಡಿದ. ಅವತ್ತು ನನಗೆ ಪ್ರೀತಿ ಮತ್ತು ಮಾನವೀಯತೆಯ ಅವಶ್ಯಕತೆ ಎಷ್ಟಿದೆ ಎನ್ನುವ ಅರಿವು ಮೂಡಿತು. ಇದು ನನ್ನ ಜೀವನದ ಮರೆಯಲಾರದ ಘಟನೆ. ************************************************** ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ

Read Post »

ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಅಂಕಣ ಬರಹ ಹೂಕೊಂಡ ಹೂಕೊಂಡತಮಿಳು ಮೂಲ : ಪೆರುಮಾಳ್ ಮುರುಗನ್ಅನುವಾದ : ನಲ್ಲತಂಬಿಪ್ರ : ಲಂಕೇಶ್ ಪ್ರಕಾಶನಪ್ರಕಟಣೆಯ ವರ್ಷ : ೨೦೧೭ಬೆಲೆ : ರೂ.೧೨೫ಪುಟಗಳು : ೧೪೪ ಪುರುಷ ಪ್ರಧಾನ ಸಮಾಜದಲ್ಲಿ ಸ್ತಿçಯು ಶೋಷಣೆಗೊಳಗಾಗುವ ದುರಂತ ಕಥಾವಸ್ತುವನ್ನು ಹೊಂದಿದ ಕಾದಂಬರಿ ಇದು. ಜಾತಿ ಸಮಸ್ಯೆಯೂ ಇದರ ವಿನ್ಯಾಸದ ಇನ್ನೊಂದು ಮುಖ. ಅಲ್ಲದೆ ಸರಳ ಸ್ವಭಾವದ ಮಂದಿ ಎಂದು ಎಲ್ಲರೂ ಭಾವಿಸುವ ಗ್ರಾಮೀಣರಲ್ಲೂ ಎಂಥ ಕ್ರೌರ್ಯವಿರಬಹುದು ಎನ್ನುವ ಕಹಿ ಸತ್ಯವನ್ನು ಈ ಕಾದಂಬರಿ ಕಟ್ಟಿಕೊಡುತ್ತದೆ. ಮದುವೆಯಾಗಿ ಕೇವಲ ಎರಡು ವರ್ಷಗಳಲ್ಲೇ ಗಂಡನನ್ನು ಕಳೆದುಕೊಂಡ ಮಾರಾಯಿ ಕಡು ದಾರಿದ್ರö್ಯದ ಕಷ್ಟಗಳನ್ನೆದುರಿಸುತ್ತಲೇ ಮಗ ಕುಮರೇಶನನ್ನು ಬೆಳೆೆಸಿ ದೊಡ್ಡವನನ್ನಾಗಿಸುತ್ತಾಳೆ. ಉದ್ಯೋಗವನ್ನರಸಿ ಪಕ್ಕದ ತೋಲೂರಿಗೆ ಹೋಗುವ ಕುಮರೇಶ ಅಲ್ಲಿ ಸೋಡಾ ಉತ್ಪಾದನೆಯ ಕೆಲಸದಲ್ಲಿ ತೊಡಗುತ್ತಾನೆ. ಆ ಊರಿನಲ್ಲಿ ಪರಿಚಯವಾದ ಸರೋಜಳನ್ನು ಪ್ರೀತಿಸಿ ತನ್ನ ತಾಯಿಗಾಗಲಿ, ಅವಳ ಅಪ್ಪ-ಅಣ್ಣನಿಗಾಗಲಿ ತಿಳಿಸದೆ ದೇವಸ್ಥಾನದಲ್ಲಿ ಸರಳ ವಿವಾಹವಾಗಿ ಅವಳನ್ನು ಊರಿಗೆ ಕರೆತರುತ್ತಾನೆ. ಆದರೆ ಅಲ್ಲಿ ಕುಮರೇಶನ ತಾಯಿ ಸೊಸೆಯನ್ನು ಸ್ವೀಕರಿಸಲು ಸುತರಾಂ ಒಪ್ಪುವುದಿಲ್ಲ. ಹುಡುಗಿ ಸುಂದರಿಯಾದರೂ ಯಾವ ಜಾತಿಯವಳೋ ಎಂಬುದು ಅವಳ ಆತಂಕ. ಆದ್ದರಿಂದ ದಿನವಿಡೀ ಸೊಸೆಯನ್ನು ಬಾಯಿಗೆ ಬಂದAತೆ ಬೈಯುತ್ತ ಮನ ನೋಯಿಸುತ್ತ ಇರುತ್ತಾಳೆ. ಸರೋಜಳಿಗೆ ಹೊಸ ವಾತಾವರಣ ಭಯಾನಕವೆನ್ನಿಸುತ್ತದೆ. ಊರಿನ ಹೆಂಗಸರೆಲ್ಲರೂ ಆಗಾಗ ಬಂದು ಅವಳ ಕುಲ-ಗೋತ್ರಗಳನ್ನು ವಿಚಾರಿಸುತ್ತ, ಕೆಲವೊಮ್ಮೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತ ಇರುತ್ತಾರೆ. ತೋಲೂರಿನ ಪಟ್ಟಣದ ಜೀವನಕ್ಕೆ ಒಗ್ಗಿಕೊಂಡಿದ್ದ ಸರೋಜಳಿಗೆ ಹಳ್ಳಿಯ ಬಡ ಮನೆಯ ಸರಳ ಜೀವನಕ್ಕೆ ಹೊಂದಿಕೊಳ್ಳುವುದು ಮತ್ತು ಅವರೆಲ್ಲರ ನಿಂದನೆಗಳನ್ನು ಸಹಿಸಿಕೊಳ್ಳುವ ನರಕ ಯಾತ£ಗಳುÉ ಅಸಹನೀಯವೆನ್ನಿಸುತ್ತದೆ. ಅವಳು ಕುಮರೇಶನನ್ನು ವಶೀಕರಿಸಿಕೊಂಡ ಮಾಟಗಾತಿಯೆಂದು ಎಲ್ಲರೂ ವ್ಯಂಗ್ಯ ಮಾತನಾಡಿದಾಗ ಅಲ್ಲಿಂದ ಎಲ್ಲಾದರೂ ಓಡಿ ಹೋಗಬೇಕು ಅನ್ನಿಸುತ್ತದೆ. ಒಮ್ಮೆ ಕುಮರೇಶ್ ಹೊಸದಾಗಿ ಸೋಡಾ ಫ್ಯಾಕ್ಟರಿ ಆರಂಭಿಸುವ ಬಗ್ಗೆ ಮಾತನಾಡಲು ಪಕ್ಕದ ಊರಿಗೆ ಹೋಗಿರುತ್ತಾನೆ. ಅವನು ಆ ರಾತ್ರಿ ಮನೆಗೆ ಬರುವುದಿಲ್ಲವೆಂದು ತಿಳಿದ ಅವನ ತಾಯಿ ಮಾರಾಯಿ ಊರಿನ ಕೆಲವು ಮಂದಿಯನ್ನು ಕೂಡಿಕೊಂಡು ಸರೋಜಳನ್ನು ಕೊಲ್ಲುವ ಯೋಜನೆ ಹಾಕುತ್ತಾಳೆ. ಆದರೆ ಆ ಸಂಚನ್ನು ಅಡಗಿ ಕೇಳಿದ ಸರೋಜ ಅಲ್ಲಿಂದೆದ್ದು ಮುಳ್ಳು ಪೊದೆಗಳ ಹಿಂದೆ ಅಡಗಲು ಹೋಗುತ್ತಾಳೆ. ಅಪಾಯಕಾರಿಯೂ ಭಯಾನಕವೂ ಆದ ಆ ಜಾಗದಲ್ಲಿ ಒಳಗೊಳಗೆ ಜಾರುವ ಸರೋಜಾಳ ಮೈಕೈಗಳಿಗೆ ಗಂಭೀರ ಗಾಯಗಳಾಗುತ್ತವೆ. ಕೊಲೆ ಪಾತಕಿಗಳು ಅವಳನ್ನು ಹೇಗಾದರೂ ಮಾಡಿ ಅಲ್ಲಿಂದ ಹೊರಗೆಳೆದು ಕೊಲ್ಲಲು ಪ್ರಯತ್ನಿಸುತ್ತಾರೆ. ಆದರೆ ಅವರ ಪ್ರಯತ್ನ ಫಲಕಾರಿಯಾಗುವುದಿಲ್ಲ. ಸರೋಜಾ ಭಯದಿಂದ ತತ್ತರಿಸುತ್ತಿದ್ದಂತೆ ಕಿವಿಯ ಮೇಲೆ ಬಿದ್ದ ಕುಮರೇಶನ ಸೈಕಲ್ ಬೆಲ್ಲಿನ ಶಬ್ದ ಅವಳಿಗೆ ಮರುಜೀವ ಕೊಡುತ್ತದೆ. ಹೆಣ್ಣನ್ನು ವಿನಾಕಾರಣ ಪೀಡಿಸುವ ನಮ್ಮ ಸಮಾಜ ಎಂದು ಬದಲಾಗುತ್ತದೋ ಎಂಬ ಆತಂಕವನ್ನು ಈ ಕಾದಂಬರಿ ನಮ್ಮಲ್ಲಿ ಹುಟ್ಟಿಸುತ್ತದೆ. ನಲ್ಲತಂಬಿಯವರ ಅನುವಾದ ಆಡುಭಾಷೆಯ ಬಳಕೆಯಿಂದ ಆಪ್ತವಾಗುತ್ತದೆ. ************************************* ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Read Post »

ಅಂಕಣ ಸಂಗಾತಿ, ಕಬ್ಬಿಗರ ಅಬ್ಬಿ

ಅಂಕಣ ಬರಹ ಕಬ್ಬಿಗರ ಅಬ್ಬಿ ನೆಲದವ್ವನ ಒಡಲ ಜೀವಜಲ ಆ ಬಾವಿ ನೀರಿಗೆ ಅಷ್ಟೊಂದು ರುಚಿ. ಆಸರಾದ ಗಂಟಲಿಗರ ಆಸರೆಯೇ ಆ ಬಾವಿ. ನಮ್ಮ ಮನೆಯಿಂದ ಶಾಲೆ ತಲಪಲು ನಾಲ್ಕುಮೈಲಿಯ ಹೆಜ್ಜೆ. ನಡುದಾರಿಯಲ್ಲಿ ದೇವಸ್ಥಾನ. ಅದರ ಪಕ್ಕದಲ್ಲಿ ಈ ಬಾವಿ. ನಾನು ತುಂಬಾ ಚಿಕ್ಕವನಿದ್ದಾಗ, ನನ್ನ ಅಕ್ಕನ ಜತೆಗೆ ಶಾಲೆಗೆ ನಡೆದು ಬಾಯಾರಿದರೆ ಈ ಬಾವಿಯಿಂದ ಅಕ್ಕ ನೀರು ಸೇದುತ್ತಿದ್ದಳು. ಬಾವಿಯಾಳಕ್ಕೆ ಹಳೆಯ ಅಲ್ಯುಮಿನಿಯಮ್ ಬಿಂದಿಗೆ ಇಳಿಸಿ ನೀರು ನಿಧಾನವಾಗಿ ತುಂಬುವಾಗ ಗುಳು ಗುಳು ಶಬ್ಧ ಬಾವಿಯ ಪಾತ್ರದೊಳಗಿಂದ ಅನುರಣಿಸುವ ಶಬ್ಧ, ಬಾವಿಯ ಜತೆಗೆ ಬಿಂದಿಗೆ ಪಿಸುಮಾತಲ್ಲಿ ಸಲ್ಲಪಿಸುವಂತೆ ಆಪ್ತವೂ ನೈಜವೂ ಆಗಿತ್ತು. ತೆಂಗಿನ ಹುರಿಹಗ್ಗ ಹಿಡಿದು ಒಂದೊಂದೇ ಉಸಿರಿನ ಜತೆಗೆ ಒಂದೊಂದೇ ಕೈಯಳತೆಯಷ್ಟು ಎಳೆಯುತ್ತಾ ಬಾವಿಯ ಆಕರ್ಷಣೆಗೆ ವಿರುದ್ಧವಾಗಿ ಕೊರಳಿಗೆ ಉರುಳು ಸಿಕ್ಕಿಸಿದ ಬಿಂದಿಗೆ ಮೇಲೇರುತ್ತಿತ್ತು. ಅಕ್ಕ ಕೊಡ ಬಗ್ಗಿಸಿ ನನ್ನ ಪುಟ್ಟ ಬೊಗಸೆ ತುಂಬಾ ನೀರು ಸುರಿದಾಗ ಅವಳ ಸ್ತ್ರೀ ಸಹಜ ಪ್ರೀತಿಯೇ ಬೊಗಸೆ ತುಂಬಾ. ನೀರೂ ಅಷ್ಟೇ, ನೆಲದವ್ವನ ಒಡಲ ಜೀವ ಜಲವದು. ವೃತ್ತಾಕಾರದ ಕಟ್ಟೆ, ಬಾವಿಯ ಮುಖಪರಿಚಯ. ಬಾವಿಯೊಳಗೆ ಇಣುಕಿದರೆ, ನಿಶ್ಚಲವಾಗಿ ಶಾಂತವಾಗಿ ನೀರು, ಆಗಸಕ್ಕೂ, ಬಾವಿಯ ಒಳ ಅಂಚಿಗೂ ಕನ್ನಡಿಯಾಗುತ್ತೆ.  ಬಾವಿಯೊಳಗೆ ಇಣುಕಿದರೆ ಅದು ನಿಮಗೆ ನಿಮ್ಮದೇ ಮುಖವನ್ನು ತೋರಿಸುತ್ತದೆ, ಗಗನದ ಬಿಂಬದ ಹಿನ್ನೆಲೆಯಲ್ಲಿ. ತಿಳಿನೀರಿಗೆ ಕಡಲೇ ಗಾತ್ರದ ಕಲ್ಲೆಸೆದರೆ, ಅಷ್ಟೂ ಬಿಂಬಗಳು ವಕ್ರ ವಕ್ರವಾಗಿ, ಅಲೆಗಳ ಹಿಂದೆ ಅಲೆಯತ್ತವೆ. ಬಾವಿಯ ಇನ್ನೊಂದು ವಿಶೇಷತೆ, ಶಬ್ಧದ ಪುನರಾವರ್ತನೆ( ಇಖೋ) ಮತ್ತು ತತ್ಪರಿಣಾಮವಾಗಿ ಸ್ವರವರ್ಧನೆ. ಮಕ್ಕಳು ಬಾವಿಯ ಮುಖಕ್ಕೆ ಮುಖ ಹಚ್ಚಿ, ಹೂಂ.. ಅಂದರೆ, ಬಾವಿಯೊಳಗಿಂದ ಯಾರೋ ಹೂಂ…ಹೂಂ.. ಅಂತ ಸ್ವರಾನುಕರಣೆ ಮಾಡಿದಂತೆ, ಮಕ್ಕಳಿಗೆ ಬಾವಿಯೊಳಗೆ ರಾಕ್ಷಸ ಇದ್ದಾನೋ ಎಂಬ ಕಲ್ಪನೆ ಮೂಡಿ, ಬಾವಿಯೊಳಗಿಂದ ಕಥೆಯ ಕವಲುಗಳು ಚಿಗುರುತ್ತವೆ. ಬಾವಿಯೊಳಗೆ ನೀವು ಇಳಿದು ಮೇಲೆ ನೋಡಿದರೆ, ನಿಮಗೆ ಕಾಣಿಸುವುದು ಆಗಸದ ಒಂದು ಚಿಕ್ಕ ತುಂಡು ಮಾತ್ರ.  ಬಾವಿ ಆಳವಾಗಿದ್ದರೆ, ಬಾವಿಯೊಳಗಿಂದ ಹೊರಜಗತ್ತಿನತ್ತ ನೋಟದ ವ್ಯಾಪ್ತಿ, ನಿಮ್ಮ ಕಣ್ಣಿನ ಕ್ಷಮತೆಗಿಂತ ಹೆಚ್ಚು, ಬಾವಿಯ ಹೊರಬಾಯಿಯ ಅಳತೆಯ ಮೇಲೆಯೇ ಅವಲಂಬಿಸಿರುತ್ತೆ. ಬಾವಿಯ ಅಂಚಿನಲ್ಲಿಯೂ  ಜರಿಗಿಡಗಳಂಥಹಾ ಹತ್ತು ಹಲವು ಸಸ್ಯ ಪ್ರಬೇಧಗಳು ಬೇರಿಳಿಸಿ ಜೀವನೋತ್ಸಾಹದ ದ್ಯೋತಕವಾಗಿ ತೊನೆಯುತ್ತವೆ.  ನೀರ ಸೆಲೆಯೇ ಜೀವಸಂಕುಲದ ನೆಲೆ ಎನ್ನುವ ಪ್ರಪಂಚವದು. ಬಾವಿಯೊಳಗೆ ಅಂಚುಗಳಲ್ಲಿ ಪಾಚಿಯೂ ಬೆಳೆಯುತ್ತೆ.  ಬಾವಿಯೊಳಗೆ ಕಪ್ಪೆ, ಅದರ ಮಕ್ಕಳು ಮರಿಗಳು ಎಲ್ಲಾ ಸೇರಿ ಸುಖೀ ಸಂಸಾರ ಕಟ್ಟುತ್ತವೆ. ಬಾವಿಯಲ್ಲಿ ಜೀವಜಲದ ಒರತೆಯಿದೆಯಷ್ಟೇ. ಅದರ ಜತೆಗೇ ಬಾವಿಯಿಂದ ನೀರು ಯಾವುದೋ ಸೆರೆಯಲ್ಲಿ ಹೊರ ಹರಿಯುವ ದಾರಿಯೂ ಇದೆ. ಈ ಒಳಹರಿವು ಮತ್ತು ಹೊರ ಹರಿವಿನ ಚಲನಶೀಲತೆಯಿಂದಾಗಿ ಬಾವಿಯ ಜಲಜ್ಞಾನಸಂಗ್ರಹ ಒಂದು ಮಟ್ಟದಲ್ಲಿರುತ್ತೆ ಮತ್ತು, ನೀರು ಸದಾ ಸ್ವಚ್ಛ ನೂತನವಾಗಿರುತ್ತೆ. ಬಾವಿ ನೀರು ನೆಲದಮ್ಮನ ಮೊಲೆಹಾಲಿನಂತೆ. ಮಣ್ಣಿನ ಖನಿಜ ಸಾರಗಳು, ಅದರ ವಿಶಿಷ್ಠವಾದ ಪರಿಮಳ ನೀರಿಗೆ ರುಚಿ ಆರೋಪಿಸುತ್ತೆ. ಬಾವಿನೀರು ನಮ್ಮ ನೋಟಕ್ಕೆ ಸಿಗದ ಲಕ್ಷಾಂತರ ಜೀವಾಣುಗಳ  ಸಾಮ್ರಾಜ್ಯವೂ ಹೌದು. ಲಂಗದಾವಣಿ ತೊಟ್ಟ  ಹುಡುಗಿಯರು ಬಿಂದಿಗೆ ಹಿಡಿದು ಬಾವಿಯ ನೀರು ಕೊಂಡೊಯ್ಯಲು ಬಂದರೆ ಅದನ್ನು ನೋಡಿ ಹಳ್ಳಿಗೆ ಹಳ್ಳಿಯೇ ಗಜಲ್ ಬರೆಯುತ್ತೆ. ಬಾವಿ ಕಟ್ಟೆಯ ಸುತ್ತಮುತ್ತ, ಪ್ರಣಯಗೀತೆಗಳ ಗುಂಜಾರವ ಗುನುಗುನಿಸುತ್ತೆ. ಜತೆ ಜತೆಗೆ ಬಾವಿಯ ನೀರು ಕೊಂಡೊಯ್ಯಲು ಬಂದ ಗೃಹಿಣಿಯರು ಬಾವಿಯೊಳಗಿನ ದರ್ಪಣದಲ್ಲಿ, ಪರಸ್ಪರ ತಮ್ಮ ಭಾವವನ್ನೂ ಬಿಂಬಿಸಿ ಹಂಚಿಕೊಳ್ಳುವಾಗ ಕೆಲವೊಮ್ಮೆ ಕಣ್ಣೀರ ಬಿಂದುಗಳು, ಆನಂದ ಭಾಷ್ಪಗಳು ಬಾವಿ ನೀರಿನಲ್ಲಿ ತಂಪು ಕಾಣುತ್ತವೆ. ಬೇಂದ್ರೆಯವರ ಪುಟ್ಟ ಮಗಳು ಒಂದು ಸಂಜೆ ಬಿಂದಿಗೆ ಹಿಡಿದು, ಬಾವಿಯತ್ತ ಹೆಜ್ಜೆ ಹಾಕುವ ದೃಶ್ಯ ನೋಡಿದ ನಡಿಗೆಯ ಹೆಜ್ಜೆಯ ಗೆಜದಜೆಯ ಲಯದಂತಹಾ ” ಸಂಜೆಯ ಜಾವಿಗೆ ಹೊರಟಾಳ ಬಾವಿಗೆ” ಅಂತ ಬರೆಯುತ್ತಾರೆ!. “ಸಂಜೆಯ ಜಾವಿಗೆ | ಹೊರಟೀದಿ ಬಾವಿಗೆ || ಕಿರಗೀಯ ನೀರಿಗೆ | ಒದೆಯೂತ ದಾರಿಗೆ || ಗೆಜ್ಜೀಯು ಗೆಜ್ಜಿಗೆ | ತಾಕ್ಯಾವ ಹೆಜ್ಜಿಗೆ || ಏನಾರ ನಡಿಗೆ | ಯಾವೂರ ಹುಡಿಗೆ || ಸಂಜೆಯ ಜಾವಿಗೆ | ಹೊರಟಾಳ ಬಾವಿಗೆ ||” ಬೇಂದ್ರೆಯವರ ಪದಗಳು ನಾಟ್ಯಾಂಗನೆಯ ಪದಗಳು. ಹುಡುಗಿ, ಪುಟ್ಟ ಸೀರೆಯುಟ್ಟು, ನಡೆಯೋದಲ್ಲ, ಹಾದಿಗೆ ಪುಟ್ಟ ಪಾದಗಳಿಂದ ಹಾದಿಯನ್ನು ಒದಿಯೂತ ನಡೆಯುವಾಗ, ಆಕೆಯ ಗೆಜ್ಜೆ, ಹೆಜ್ಜೆ ಮತ್ತು ನಡಿಗೆಯಲ್ಲಿ ಸಂಭ್ರಮ ಪದ್ಯವಾಗಿದೆ.  ಆಕೆ ಬಿಂದಿಗೆಯಲ್ಲಿ ಜಲತುಂಬಿ ಹಿಂತಿರುಗಿ ನಡೆಯುವ ಭಂಗಿ ಈ ಕೆಳಗಿನ ಸಾಲುಗಳು.  “ಮೂಗಿನ ನೇರಿಗೆ | ಹೊರಳೀದೆ ಊರಿಗೆ || ತಲಿಮ್ಯಾಲ ಬಿಂದಿಗೆ | ಕಾಲಾಗ ಅಂದಿಗೆ || ತುಂ ತುಮುಕು ತುಂಬಿದೆ | ಬಿಂದೀಗೆ ಅಂತಿದೆ || ಝಣ್‍ಝಣ ಅಂದಿಗೆ | ಅಂದಾವ ಹೊಂದಿಗೆ || ಸಂಜೀಯ ಜಾವಿಗೆ | ಹೋಗಿದ್ದೆ ಬಾವಿಗೆ || ” ಪು.ತಿ.ನರಸಿಂಹಾಚಾರ್ ಅವರು ಬಾವಿಯ ಮೂಲಕ ತತ್ವದರ್ಶನ ಮಾಡುತ್ತಾರೆ. ” ಬಾಯಾರಿಕೆಯೊಳು ಬೇಯುತ ಬಂದಿತು ಬುದ್ಧಿ ಎದೆಯ ಬಾವಿಯ ಬಳಿಗೆ ಹೇರಾಳದ ಕಗ್ಗತ್ತಲ ತಳದೊಳು ಅಮೃತ ರುಚಿಯ ತಿಳಿನೀರೆಡೆಗೆ “ ತರ್ಕಿಸುವ ಮನಸ್ಸು ಚಿಂತನೆಯ ಬೆಂಕಿಯಲ್ಲಿ ಕಾದು, ಬಾಯಾರಿ ಬರುವುದು ಎದೆಯ ಬಾವಿಯ ಬಳಿಗೆ. ಕಾವ್ಯದ ಭಾಷೆಯಲ್ಲಿ, ಎದೆ ಎಂದರೆ ಭಾವ, ಕಲ್ಪನ , ಪ್ರೀತಿ. ಆ ಬಾವಿಯ ತಳದಲ್ಲಿದೆ ತಿಳಿಯಾದ ನೀರು, ತಿಳಿವಿನ ನೀರು. ಆ ಅರಿವಿಗೆ ಅಮೃತದ ರುಚಿಯಿದೆ, ಬುದ್ಧಿ ಕೆತ್ತುವ ಲಾಜಿಕ್ ನ ವಾಸ್ತುಶಿಲ್ಪಕ್ಕೆ ಆ ರುಚಿಯಿಲ್ಲ. ಗೋಪಾಲಕೃಷ್ಣ ಅಡಿಗರ ಕವನ, ‘ ಭೂತ’ ಎಂಬ ಕವನದಲ್ಲೂ ಬಾವಿ ಪ್ರತಿಮೆಯ ಅಪೂರ್ವ ಪ್ರಯೋಗವಿದೆ. “ಬಾವಿಯೊಳಗಡೆ ಕೊಳವೆ ನೀರು ; ಮೇಲಕ್ಕಾವಿ ; ಆಕಾಶದುದ್ದವೂ ಅದರ ಕಾರಣ ಬೀದಿ ; ಕಾರ್ಮುಗಿಲ ಖಾಲಿಕೋಣೆಯ ಅಗೋಚರ ಬಿಂದು ನವಮಾಸವೂ ಕಾವ ಭ್ರೂಣರೂಪಿ— ಅಂತರಪಿಶಾಚಿ ಗುಡುಗಾಟ, ಸಿಡಿಲಿನ ಕಾಟ— ಭೂತರೂಪಕ್ಕೆ ಮಳೆ ವರ್ತಮಾನ ; ಅಗೆದುತ್ತ ಗದ್ದೆಗಳ ಕರ್ಮಭೂಮಿಯ ವರಣ ; ಭತ್ತಗೋಧುವೆ ಹಣ್ಣುಬಿಟ್ಟ ವೃಂದಾವನ, ಗುಡಿಗೋಪುರಗಳ ಬಂಗಾರ ಶಿಖರ.” ಬಾವಿಯೊಳಗೆ ಭೂತಕಾಲದ ನೀರೊರತೆ, ವರ್ತಮಾನದಲ್ಲಿ ಆವಿ, ಮೋಡವಾಗಿ ಮಳೆ ಸುರಿಯುತ್ತೆ. ಕಾಲಾಂತರ ಮತ್ತು ರೂಪಾಂತರಗಳು ಸಮಾನಾಂತರವಾಗಿ ಸಂಭವಿಸುವ ಪ್ರಕ್ರಿಯೆ ಶುರುವಾಗುವುದು ಬಾವಿಯಿಂದ. ಬಾವಿಯ ಬಗ್ಗ  ಲಂಕೇಶ್ ಅವರು ಬರೆಯುವ ಈ ಸಾಲನ್ನು ಗಮನಿಸಿ! ” ಕವಿಯ ಊರಿಗೆ ಹೋದಾಗ ಅಲ್ಲಿಯ ಬಾವಿಯಲ್ಲಿ ಪಾಚಿಗಟ್ಟಿತ್ತು” ಶಿವರುದ್ರಪ್ಪನವರು ಬಾವಿಯನ್ನು ಭಾವದ ಬಾವಿಯಾಗಿ ಕಾಣುತ್ತಾರೆ. ” ಅದೂ ಬೇಕು ಇದೂ ಬೇಕು ಎಲ್ಲವೂ ಬೇಕು ನನಗೆ. ದಾರಿ ನೂರಾರಿವೆ ಬೆಳಕಿನರಮನೆಗೆ! ಬೇಡ ನನಗೆ ಸಿದ್ಧಾಂತಗಳ ರಾದ್ಧಾಂತ; ನನಗಿಲ್ಲ, ಇದೇ ಸರಿ ಇಷ್ಟೇ ಸರಿ ಎನುವ ಪಂತ. ನಾ ಬಲ್ಲೆ, ಇವು ಎಲ್ಲ ಏರುವೆಯ ಒಂದೊಂದು ಹಂತ. ನೂರಾರು ಭಾವದ ಬಾವಿ; ಎತ್ತಿಕೋ ನಿನಗೆ ಬೇಕಾದಷ್ಟು ಸಿಹಿನೀರ. ಪಾತ್ರೆಯಾಕಾರಗಳ ಕುರಿತು ಏತಕೆ ಜಗಳ? ನಮಗೆ ಬೇಕಾದದ್ದು ದಾಹ ಪರಿಹಾರ.” ನೂರಾರು ಭಾವದ ಬಾವಿಯಿಂದ ಬೇಕಾದಷ್ಟು ಸಿಹಿನೇರನ್ನು ಎತ್ತಿಕೋ. ಯಾವ ಪಾತ್ರೆಯಲ್ಲಿ ನೀರು ತುಂಬುತ್ತೇವೋ ಆ ಪಾತ್ರೆಯ ಆಕಾರ ನೀರಿನದ್ದು!. ಸಿದ್ಧಾಂತದ ಬಂಧ ಮತ್ತು ಪೂರ್ವನಿರ್ಧಾರಿತ ಆಕಾರ, ಅಂಚುಗಳು, ಚೂಪುಗಳು ಅಗತ್ಯವೇ?. ಬಾವಿಯ ನೂರು ಭಾವಗಳ ಸಿಗಿನೀರಿನ ಮೂಲ ಉದ್ದೇಶ ಆಕಾರ ಪಡೆಯುವುದೇ? ಅಥವಾ ದಾಹ ತಣಿಸುವುದೇ?. ಹೀಗೆ ಹಲವು ಪ್ರತಿಮೆಗಳಿಗೆ ಆಕಾರ ಕೊಡುವ ಬಾವಿಯನ್ನು ವರ್ತಮಾನದ ಕವಯಿತ್ರಿ ಸ್ಮಿತಾ ಅಮೃತರಾಜ್ ಸಂಪಾಜೆ ಅವರು ತುಂಬಾ ವಿಭಿನ್ನವಾಗಿ ಕವಿತೆಗಿಳಿಸಿದ್ದಾರೆ. **   **    **   **  ಬಾವಿ ಕಟ್ಟೆ “ಗುದ್ದಿ ಗುದ್ದಿ ಆಳಕ್ಕೆ ಅಗೆದು ಸಿಕ್ಕ ಜೀವ ಜಲಕ್ಕೆ ಅತ್ತ ಇತ್ತ ಮಿಸುಕಾಡದಂತೆ ಕಟ್ಟಿದ್ದು ಕಟ್ಟೆ. ನೆಟ್ಟ ದಿಟ್ಟಿಗೆ ಒಂದು ಹಿಡಿ ಆಗಸ ಬಿಟ್ಟರೆ ಆಕೆ ತರುವ ಕೊಡದೊಂದಿಗಷ್ಟೇ ಹೇಗೋ ಬೆಳೆದದ್ದು ನಂಟು. ಅದೆಂತಹ ಆತುರ ಬಿಂದಿಗೆಗೆ ಕಂಠಕ್ಕೆ ಹಗ್ಗ ಬಿಗಿಸಿಕೊಳ್ಳುತ್ತಾ ಹಾಗೇ ಇಳಿಬಿಡುವ ಹೊತ್ತಿಗೆ ಕೈಯ ಹಿಡಿತವನ್ನೇ ಸಡಿಲಿಸಿ ರೊಯ್ಯನೆ ಡುಬುಕಿ ಹೊಡೆದಾಗ ಕೊಡ ಸೇರಿ ಜಗತ್ತು ನೋಡುವ ಕಾತರಕ್ಕೆ ಬಾವಿಯ ಮೈ ತುಂಬಾ ಅಲೆ. ಅನ್ನಕ್ಕೆ ಸಾಂಬಾರಿಗೆ ಕಾಫಿಗೆ ಚಹಕ್ಕೆ ನೀರು ಸದ್ದಿಲ್ಲದೇ ಕಲಬೆರಕೆಯಾಗುವ ಸಂಕಟಕ್ಕೆ ಕುದಿ ಮತ್ತಷ್ಟು ಹೆಚ್ಚುತ್ತಿದೆ. ಖಾಲಿಯಾಗುವ ಖುಷಿಗೆ ಕೊಡ ಇಂಚಿಂಚೇ ಮೈ ಅಲಗಿಸಿ ಕೊಳ್ಳುತ್ತಿದೆ ಇತ್ತ ಬಾವಿ ಹೆಜ್ಜೆ ಸಪ್ಪಳಕ್ಕೆ ಕಿವಿ ತಾಗಿಸಿ ಕುಳಿತಿದೆ. ಈ ಕೊಡದ ನೀರು ಗಿಡದ ಬುಡಕ್ಕೋ ಅಡುಗೆ ಮನೆಯ ವ್ಯಂಜನಕ್ಕೋ? ಕುತೂಹಲ ತಣಿದ ದಿನ ಕಣ್ಣು ಹೊಳಪು ಕಳೆದುಕೊಂಡು ಬಿಡುತ್ತದೆ. ಮತ್ತೆ ಕೊಡ ತುಂಬಿಕೊಳ್ಳುತ್ತಿದೆ ಡುಬು ಡುಬು ಎದೆಬಡಿಯುವ ಒಡಲಾಳದ ಸದ್ದು ಎಲ್ಲಿಯದ್ದು .? ಬಿಂದಿಗೆಯದ್ದಾ..? ಬಾವಿಯದ್ದಾ..? ಅರೆ! ನನ್ನೆದೆಯೇಕೆ ಹೀಗೆ ಬಡಿದುಕೊಳ್ಳುತ್ತಿದೆ ಈ ಹೊತ್ತು .” **  **     **  ** ಬಾವಿ ತೋಡುವ ಕಠಿಣ ಕೆಲಸ ಮಾಡಿ,ಸಿಕ್ಕಿದ ನೀರು ಹೊರಗೆ ಹರಿಯಬಾರದಲ್ಲಾ. ಅದನ್ನು ಹರಿಯದಂತೆ ಬಂಧಿಸಲು ಬಾವಿಗೆ ಕಟ್ಟೆ ಕಟ್ಟಬೇಕು. ಬಾವಿ, ನೀರು, ಕಟ್ಟೆ ಇವುಗಳು ಏನನ್ನು ಪ್ರತಿನಿಧಿಸುತ್ತವೆ? ಓದುಗರಿಗೆ ಬಿಡುವೆ. ಈ ಕವಿತೆಯಲ್ಲಿ, ಬಾವಿ ಮತ್ತು ಬಿಂದಿಗೆ ಎರಡು ಪ್ರಮುಖ ಪಾತ್ರಗಳು. ಅವುಗಳು ಪರಸ್ಪರ ಸಂವಾದಿಸುತ್ತಾ ಕವಿತೆ ಸಾಗುತ್ತೆ. ಬಾವಿ ಆಗಸದತ್ತ ಕಣ್ಣು ನೆಟ್ಟರೆ ಅದಕ್ಕೆ ಕಾಣಸಿಗುವುದು ತುಂಡು ಆಗಸ ಮಾತ್ರ. ಬಾಹ್ಯಪ್ರಪಂಚಕ್ಕೆ ಅದರ ಸಂಬಂಧ ಹೊಂದಿಸುವುದು ಬಿಂದಿಗೆಯೇ. ಅಷ್ಟೇ ಪ್ರೀತಿ, ಆತುರ ಬಿಂದಿಗೆಗೆ. ಬಾವಿಯನ್ನು ಹೇಗೆ ಕಟ್ಟೆ ಬಂದಿಯಾಗಿಸಿದೆಯೋ, ಹಾಗೆಯೇ ಬಿಂದಿಗೆಯ ಕೊರಳಿಗೆ ಹಗ್ಗ ಬಿಗಿದಿದೆ. ಬಾವಿಯ ನೀರಿನ ಜತೆಗೆ ಬಿಂದಿಗೆಯ ಸಮಾಗಮ, ಪ್ರೇಮಜಲ ಸಿಂಚನ, ಸ್ಪರ್ಶದ ಪುಳಕ, ಅಲೆ ಎಲ್ಲವೂ ಇದೆ.  ಹಾಗೆ ತುಂಬಿದ ಕೊಡ, ಬಾವಿಯಿಂದ ಹೊರಬಂದ ನಂತರವೂ ಸ್ವತಂತ್ರವಲ್ಲ, ಅದರೊಳಗಿನ ನೀರು, ಅನ್ನಕ್ಕೆ, ಸಾಂಬಾರಿಗೆ ಉಪಯೋಗವಾಗುತ್ತೆ. ಇಲ್ಲಿ ಕವಯಿತ್ರಿ ‘ಕಲಬೆರಕೆ’ ಪದ ಪ್ರಯೋಗ ಮಾಡಿದ್ದಾರೆ. ನೀರಿನ ಇಚ್ಛೆ ಸಾಂಬಾರು ಆಗುವುದು ಅಂತಿಲ್ಲ. ತಿಳಿಯಾದ ನೀರು ಸಾಂಬಾರ್ ಆದಾಗ ಅದೂ ಕಲಬೆರಕೆಯೇ. ರುಚಿಹಿಡಿದ ಆಸ್ವಾದಕನಿಗೆ ಸಾಂಬಾರ್ ರುಚಿ, ತಿಳಿಯಾಗಿದ್ದ ನೀರಿನ, ಬಾವಿಯ ಫ್ರೇಮ್ ಆಫ್ ರೆಫರೆನ್ಸ್ ನಲ್ಲಿ ಅದು ಕಲಬೆರಕೆ. ಬಿಂದಿಗೆ ತುಂಬಿದ್ದ ನೀರನ್ನು ಹೊಯ್ದಂತೆ, ಖಾಲಿಯಾಗುವ ಅನುಭವ ಕೂಡಾ ಒಂದು ಅನೂಹ್ಯ  ಪ್ರಕ್ರಿಯೆಯ ಪ್ರತಿಮೆಯೇ. ಕವಿತೆಯ ಕೆಳಗಿನ ಸಾಲುಗಳು ಖಂಡಿತಾ ಹಿಂದಿ ಶಾಯರಿಗಳಲ್ಲಿ ಕಾಣಸಿಗುವ ಪಂಚ್ ಲೈನ್ ಗಳು. ” ಮತ್ತೆ ಕೊಡ ತುಂಬಿಕೊಳ್ಳುತ್ತಿದೆ ಡುಬು ಡುಬು ಎದೆಬಡಿಯುವ ಒಡಲಾಳದ ಸದ್ದು ಎಲ್ಲಿಯದ್ದು .? ಬಿಂದಿಗೆಯದ್ದಾ..? ಬಾವಿಯದ್ದಾ..? ಅರೆ! ನನ್ನೆದೆಯೇಕೆ ಹೀಗೆ ಬಡಿದುಕೊಳ್ಳುತ್ತಿದೆ ಈ ಹೊತ್ತು .” ಅಂದರೆ ಬಾವಿ, ಕೊಡ, ಬಾವಿಯೊಳಗಿನ ನೀರು, ಸಮಾನಾಂತರವಾಗಿ ನಡೆಯುವ  ಒಡಲಾಳದ ಸದ್ದು ಮತ್ತು ಎದೆ ಬಡಿತ, ಕವಿತೆಯ ಮೇಲಿನ ಅಷ್ಟೂ ಸಾಲುಗಳಿಗೆ ಒಂದು ಇತ್ಯಾತ್ಮಕ ಅರ್ಥದತ್ತ ಮಾರ್ಗ ಸೂಚಿಯಾಗುತ್ತವೆ. ಸದಾ ಹೊರಜಗತ್ತಿನತ್ತ ಸಂಬಂಧ ಬೆಳೆಸುವ ಹಂಬಲ, ಕಾತರ,ಹಸಿವು ಬಾವಿಗಿದೆ. ತಿಳಿಯಾದ ಸ್ವಂತಿಕೆ ಸಮಾಜದ ಅಳವಡಿಕೆಯಲ್ಲಿ ಕಲಬೆರಕೆಯಾಗುವ ನೋವಿದೆ. ಅದು ತನ್ನ ಇಚ್ಛೆಗೆ ವಿರುದ್ಧವಾಗಿ ನಡೆಯುವ ಅಸಹನೆಯೂ ಇದೆ. ಒಡಲಾಳದ ಪ್ರೀತಿಯನ್ನು ಬಿಂದಿಗೆಯಲ್ಲಿ ಮೊಗೆ ಮೊಗೆದು ಕೊಡುವಾಗ ತುಂಬುವ ಖುಷಿಯೂ, ಹಂಚುವಾಗಿನ ಖಾಲಿಯಾಗುವ ಸಂತೃಪ್ತಿಯೂ ಕವಿತೆಯಲ್ಲಿ ಕಾಣಿಸುತ್ತೆ.

Read Post »

ಅಂಕಣ ಸಂಗಾತಿ, ರಹಮತ್ ತರೀಕೆರೆ ಬರೆಯುತ್ತಾರೆ

ಅಂಕಣ ಬರಹ ಕಣ್ಣು-ಕಣ್ಕಟ್ಟು ರೋಣ ತಾಲೂಕಿನ ಗಜೇಂದ್ರಗಡಕ್ಕೆ ಗೆಳೆಯರ ಭೇಟಿಗೆಂದು ಹೊರಟಿದ್ದೆ. ಹಾದಿಯಲ್ಲಿ ಯಲಬುರ್ಗಾ ತಾಲೂಕಿನ ಪುಟ್ಟಹಳ್ಳಿ ನೆಲಜೇರಿ ಎಡತಾಕಿತು. ಗೋಧಿ ಉಳ್ಳಾಗಡ್ಡೆ ಸುರೇಪಾನ ಮೆಣಸು ಮೊದಲಾಗಿ ಮಳೆಯಾಶ್ರಯದ ಪೀಕು ತೆಗೆಯುವ ಎರೆಸೀಮೆಯಿದು. ಹೆಚ್ಚಿನ ತರುಣರು ಕೊಪ್ಪಳದ ಬಗಲಲ್ಲಿ ಬೀಡುಬಿಟ್ಟಿರುವ ಉಕ್ಕಿನ ಕಾರ್ಖಾನೆಗಳಿಗೆ ದಿನಗೂಲಿಗಳಾಗಿ ಹೋಗುತ್ತಾರೆ. ನೆಲಜೇರಿ ಆರ್ಥಿಕವಾಗಿ ಬಡಕಲಾದರೂ ಸಾಂಸ್ಕøತಿಕವಾಗಿ ಸಮೃದ್ಧ ಹಳ್ಳಿ. ಈ ವೈರುಧ್ಯ ಉತ್ತರ ಕರ್ನಾಟಕದ ಬಹಳಷ್ಟು ಹಳ್ಳಿಗಳ ಲಕ್ಷಣ.  ನೆಲಜೇರಿಯ ತಟ್ಟಿ ಹೋಟೆಲಿನಲ್ಲಿ ಚಹಾಪಾನ ಮಾಡುತ್ತ ಇಲ್ಲಿ ಯಾರಾದರೂ ಜನಪದ ಗಾಯಕರು ಇದ್ದಾರೆಯೇ ಎಂದು ಕೇಳಿದೆ. ಅಲ್ಲೊಬ್ಬ ಮೂಲೆಯಲ್ಲಿ ಟೀಯನ್ನೂ ಬೀಡಿಯನ್ನೂ ಒಟ್ಟಿಗೆ ಸವಿಯುತ್ತ ಕಾಲುಚಾಚಿ ಕುಳಿತವನು ಅವಸರವಿಲ್ಲದ ದನಿಯಲ್ಲಿ `ಅದಾನಲ್ಲ ಅಂದಾನಪ್ಪ. ರಿವಾಯತ್ ಪದ ಜಗ್ಗಿ ಹಾಡ್ತಾನ’ ಎಂದನು. ಅಂದಾನಪ್ಪನವರನ್ನು ನೋಡೋಣವೆಂದು ಮನೆಗೆ ಹೋದರೆ ಹೊಲಕ್ಕೆ ಹೋಗಿದ್ದರು. ಅವರು ಬರುವವರೆಗೆ ಜಗುಲಿಯಲ್ಲೇ ಬೀಡುಬಿಟ್ಟೆ. ಒಕ್ಕಲುತನದ ಹಳೇ ಮಾಳಿಗೆಮನೆ. ಹೊರಬಾಗಿಲ ಆಜುಬಾಜು ದೊಡ್ಡದಾದ ಎರಡು ಜಗುಲಿ. ಅವುಗಳ ಮೇಲೆ ಚೀಲಗಳಲ್ಲಿ ದವಸ. ಅವುಗಳ ಬದಿಗೆ ಕೌದಿಹಾಸಿ ದಿಂಬಿಟ್ಟು ಯಜಮಾನ ಕೂರಲು ಸಿದ್ಧಗೊಳಿಸಿದ ಆಸನ. ಗೋಡೆಯ ಮೇಲೆ ದಿವಂಗತರಾದ ಕುಟುಂಬದ ಹಿರಿಯರ ಪಟಗಳು. ಅವಕ್ಕೆ ಹುಲಿಯು ಪಂಜದಿಂದ ಗೆಬರಿದಂತೆ ಎಳೆದಿರುವ ವಿಭೂತಿ ಪಟ್ಟೆ. ಮನೆಯೊಳಗೆ ಇಣುಕಿದರೆ, ಸಿನುಗು ವಾಸನೆಯ ದನದ ಕೊಟ್ಟಿಗೆ. ತಾಯಿ ಮೇಯಲು ಹೋಗಿರುವುದರಿಂದ ಒಂಟಿಯಾಗಿದ್ದು ಅಂಬಾ ಎನ್ನುತ್ತಿರುವ ಎಳೆಗರು. ಅಟ್ಟಕ್ಕೆ ಕಟ್ಟಿರುವ ಉಳ್ಳಾಗಡ್ಡಿ ಬೆಳ್ಳುಳ್ಳಿ ಸಿವುಡು; ಒಣಗಿದ ಹೀರೇಕಾಯಿ ಗೊಂಚಲು. ಕೊಟ್ಟಿಗೆಯ ಬಳಿಕ ತುಸು ಎತ್ತರದಲ್ಲಿ ಮಬ್ಬು ಬೆಳಕಿನಲ್ಲಿ ಕಾಣುವ ಉಣ್ಣುವ ಜಗುಲಿ. ನಂತರ ಹೊಗೆಯಿಂದ ಕಪ್ಪಗಾಗಿ ಇದ್ದಬದ್ದ ಬೆಳಕನೆಲ್ಲ ಕುಡಿದು ಮತ್ತಷ್ಟು ಕತ್ತಲಾಗಿರುವ ಅಡುಗೆಕೋಣೆ.  ಹೀಗೆ ಪಂಚೇಂದ್ರಿಯಗಳಿಗೆ ಕೆಲಸ ಹಚ್ಚಿ ಆರಾಮಾಗಿ ಕೂತಿರುವಾಗ ಅಂದಾನಪ್ಪನವರ ಸವಾರಿ ಬಂತು. ಆರಡಿ ಎತ್ತರದ 75 ವರ್ಷದ ಹಿರಿಯ. ದಪ್ಪನೆಯ ಬಿಳಿಪಟಗ ಎದ್ದು ಕಾಣುತ್ತಿತ್ತು. ಕೈಬೆರಳು ಕುಷ್ಠದಿಂದ ಕರಗಿಹೋಗಿದ್ದರೂ ಮೋಟು ಬೆರಳಲ್ಲಿ ಸೈಕಲ್ ಹ್ಯಾಂಡಲನ್ನು ಹಿಡಿದು, ಬೀದಿಗೆ ಬೈತಲೆ ತೆಗೆದಂತೆ ಹರಿದ ಬಚ್ಚಲು ನೀರಿನ ಅಂಕುಡೊಂಕುಗಳಲ್ಲಿ ಬೀಳದಂತೆ ಸವಾರಿಸುತ್ತ ಬಂದರು. ಅಂಗಳದಲ್ಲಿ ನಿಂತ ಕಾರು ಅವರಿಗೆ ಗಲಿಬಿಲಿ ತಂದಂತಿತ್ತು. ನಮಸ್ಕಾರ ಮಾಡಿ ಭೇಟಿಯ ಉದ್ದೇಶ ತಿಳಿಸಿದೆ. ತನ್ನ ಹಾಡುಪ್ರತಿಭೆಗೆ ಪರಸ್ಥಳದ ಜನ ಬಂದಿರುವುದು ಅರಿತು ಮುಖದಲ್ಲಿ ಅಭಿಮಾನ ಮೂಡಿದಂತೆ ತೋರಿತು. ಲಗುಬಗೆಯಿಂದ ಅಡುಗೆ ಮನೆಯೊಳಗೆ ನುಗ್ಗಿ ಬಿಸಿರೊಟ್ಟಿ ಮಾಡಲು ಹೇಳಿದರು. ದೊಡ್ಡ ಚರಿಗೆಯಲ್ಲಿ ಮುಂಜಾನೆಯಷ್ಟೆ ಕಡೆದ ಮಜ್ಜಿಗೆ ತಂದುಕೊಟ್ಟರು. ಹಳತಾದ ನೋಟುಬುಕ್ಕನ್ನು ನಾಗಂದಿಯ ಮೇಲಿಂದ ತೆಗೆದು, ಧೂಳು ಝಾಡಿಸಿ, ಅದರಲ್ಲಿದ್ದ ರಿವಾಯತ್ ಪದವನ್ನು ಹಾಡಲು ಶುರುಮಾಡಿದರು. ಅವರ ಭಾರಿಕಾಯದೊಳಗೆ ಈ ಹೆಣ್ದನಿ ಹೇಗಾದರೂ ಅಡಗಿಕೊಂಡಿದೆಯೊ ಎಂದು ಅಚ್ಚರಿಸುತ್ತಿದ್ದ ನನಗೆ ಪೈಲವಾನರಂತಿರುವ ಬಡೇಗುಲಾಮಲಿ ಖಾನರು ಜೇನಲ್ಲಿ ಅದ್ದಿತೆಗೆದಂತೆ ಹಾಡಿದ `ಕ್ಯಾಕರ್ಞೂ ಸಜನೀ ಸಾಜನ್ ನ ಆವೆ’ ಠುಮ್ರಿಯ ನೆನಪಾಯಿತು. ರಿವಾಯತ್ ಹಾಡಿಕೆಯಲ್ಲಿ ಹಿಮ್ಮೇಳವಿದ್ದರೇ ಚಂದ. ಒಂಟಿದನಿ ಬೇಗ ದಣಿಯುತ್ತದೆ. ಅಂದಾನಪ್ಪ ಎರಡು ಹಾಡಿಗೆ ನಿಲ್ಲಿಸಿದರು. ಕೆಲವೇ ತಿಂಗಳುಗಳಲ್ಲಿ ತಮ್ಮೂರಿನಲ್ಲಿ ರಾಜಪ್ಪಸ್ವಾಮಿಯ ಉರುಸು ನಡೆಯಲಿದೆಯೆಂದೂ, ಅಲ್ಲಿ ಕೊಪ್ಪಳ ಸೀಮೆಯ ಬಹುತೇಕ ಗಾಯಕರು ಸೇರುವರೆಂದೂ ಆಗ ಖಂಡಿತ ಬರಬೇಕೆಂದೂ ತಿಳಿಸಿದರು. ಇದಾದ ಐದಾರು ತಿಂಗಳಿಗೆ ಅಂದಾನಪ್ಪನವರ ಫೋನು ಬಂತು. ಉರುಸು ಫಲಾನೆ ದಿನವಿದೆಯೆಂದೂ ತಪ್ಪದೇ ಬರಬೇಕೆಂದೂ ಊಟ ವಸತಿಗೆ ಚಿಂತೆ ಮಾಡಬಾರದೆಂದೂ ತಿಳಿಸಿದರು. ಸ್ಕೂಟರಿನಲ್ಲಿ ಹೋದೆ. ಸಂಜೆಯಾಗಿತ್ತು. ಸುತ್ತಮುತ್ತಲ ಗ್ರಾಮದವರು ಓದಿಕೆ ಮಾಡಿಸಿಕೊಂಡು ಕೈಯಲ್ಲಿ ವಸ್ತ್ರಹೊದಿಸಿದ ಪ್ರಸಾದದ ತಟ್ಟೆ ಹಿಡಿದು ಗುಂಪಾಗಿ ಮನೆಗೆ ಮರಳುತ್ತಿದ್ದರು. ಅಂದಾನಪ್ಪ, ಹೆಸರಿಗೆ ತಕ್ಕಂತೆ ಅನ್ನದಾನಿ. ಶಿಷ್ಯನ ಮನೆಯಲ್ಲಿ ಬಿಸಿರೊಟ್ಟಿ ಮೊಸರು ಬದನೆಪಲ್ಯ ಮಾಲ್ದಿಯಿರುವ ಊಟ ಹಾಕಿಸಿದರು. ರಾತ್ರಿ ಹತ್ತಕ್ಕೆ ಮೆರವಣಿಗೆ ಕುರುಬರ ಮನೆಯಿಂದ ರಾಜಪ್ಪನ ದರ್ಗಾಕ್ಕೆ ಹೊರಟಿತು. ಅದರ ಮುಂದೆ ಮನೆಯ ಹಿರೀಕರೊಬ್ಬರು ಮೈದುಂಬಿದ್ದರು. ಅವರ ಜತೆ ಬೇಡ ಸಮುದಾಯಕ್ಕೆ ಸೇರಿದ ಹನುಮಂತದೇವರ ಗುಡಿಯ ಪೂಜಾರಿ ಜತೆಗೂಡಿದನು. ಮೆರವಣಿಗೆಯಲ್ಲಿ ಮುಸ್ಲಿಮರನ್ನೂ ಒಳಗೊಂಡಂತೆ ಊರಿನ ಎಲ್ಲ ಜಾತಿ ಸಮುದಾಯಗಳಿಗೆ ಸೇರಿದ್ದರು. ಅಂದಾನಪ್ಪನವರು ದೊಡ್ಡದೊಂದು ಕೋಲಿನ ತುದಿಗೆ ಹಾಡುಗಾರರಿಗೆ ಕೊಡುವ ಬಹುಮಾನದ ಬೆಳ್ಳಿಬಳೆಗಳನ್ನು ಸಿಕ್ಕಿಸಿಕೊಂಡು ಮುಂಚೂಣಿಯಲ್ಲಿದ್ದರು. ಮೆರವಣಿಗೆ ಹಿಂಭಾಗದಲ್ಲಿ `ಕಂದೂರಿ’ಗೆ ಬಲಿಯಾಗಲಿರುವ ಕುರಿಗಳನ್ನು ಹಿಡಿದುಕೊಂಡು ಬರುತ್ತಿದ್ದ ಭಕ್ತರ ಸೈನ್ಯವೇ ಇತ್ತು.ಊರಹೊರಗೆ ದೊಡ್ಡ ಬಯಲಿನಲ್ಲಿ ಮರಗಳ ಗುಂಪಿನ ನಡುವೆ ರಾಜಪ್ಪಜ್ಜನ ಸಮಾಧಿಯಿದೆ. ಅದು ಸೂಫೀ ಗೋರಿಯಂತೆ ಉತ್ತರ ದಕ್ಷಿಣಮುಖಿಯಾಗಿದೆ. ಒಬ್ಬ ಮುಜಾವರ್ ಅಲ್ಲಿ ಫಾತೆಹಾ ನೆರವೇರಿಸುತ್ತಿದ್ದನು. ರಾಜಪ್ಪಜ್ಜನ ಪುಣ್ಯತಿಥಿಗೆ `ಉರುಸು’ ಎಂದು ಕರೆಯುವುದರಿಂದ, ಇದು ಸೂಫಿಸಂತನಿಗೆ ಸಂಬಂಧಪಟ್ಟಿದ್ದು ಎಂದು ನನ್ನ ಊಹೆಯಾಗಿತ್ತು. ಆದರೆ ರಾಜಪ್ಪಜ್ಜ ಎಂಬತ್ತು ವರ್ಷಗಳ ಹಿಂದೆ ಬದುಕಿದ್ದ ಆರೂಢನಾಗಿದ್ದರು. ಹಿಂದುಳಿದ ಜಾತಿಗೆ ಸೇರಿದ್ದ ಆತನ ಶಿಷ್ಯರಲ್ಲಿ ಹೆಚ್ಚಿನವರು ದಲಿತರಾಗಿದ್ದು, ಅವರ ಸಮಾಧಿಗಳು ಆಸುಪಾಸಿನಲ್ಲಿದ್ದವು. ರಾಜಪ್ಪಜ್ಜನ ಸಮಾಧಿ ಪೌಳಿದ್ವಾರದಲ್ಲಿ ಮೊಹರಂ ಚಿಹ್ನೆಗಳಾದ ಹುಲಿ ಹಾಗೂ ಹಸ್ತದ ಚಿತ್ರಗಳೂ ಇವುಗಳ ಜತೆ ಗಣಪತಿ ಹಾಗೂ ಹನುಮಂತನ ಚಿತ್ರಗಳೂ ಬರೆಯಲ್ಪಟ್ಟಿದ್ದವು. ಅಂದು ನಡೆಯಲಿದ್ದ ರಿವಾಯತ್ ಪದಗಳ ಹಾಡಿಕೆ ಸಹ ಮೊಹರಂ ಸಂಪ್ರದಾಯಕ್ಕೆ ಸೇರಿತ್ತು. ರಾತ್ರಿ ಹತ್ತರ ಸುಮಾರಿಗೆ ಗಾಯಕರು ಕಲೆತರು. ಕಂಬಕ್ಕೆ ಕಟ್ಟಿದ ಮೈಕಿನ ಸುತ್ತ ಗಾಯಕರು ತಮ್ಮ ಮೇಳದ ಜತೆ ಪ್ರದಕ್ಷಿಣೆ ಹಾಕುತ್ತ ಹಾಡಿದರು. ಹಾಡಿಕೆ ಬೆಳಗಿನ ಜಾವಕ್ಕೆ ಮುಗಿಯಿತು. ಚೀಲ ಚಾಪೆ ಹಾಸಿಕೊಂಡು ಕೌದಿ ಹೊದ್ದು ಕುಳಿತ ಜನ ಕೇಳಿತು. ಗಾಯಕರನ್ನು ಹಾಡಲು ಕರೆಯುವುದು, ಚೆನ್ನಾಗಿ ಹಾಡಿದಾಗ ಉತ್ತೇಜಿಸುವುದು, ಗೆದ್ದವರಿಗೆ ಬೆಳ್ಳಿಯ ಬಳೆ ಬಹುಮಾನವಾಗಿ ಕೊಡುವುದು ಮುಂತಾದ ಕಾರ್ಯಗಳನ್ನು ಅಂದಾನಪ್ಪ ಹರೆಯದವರಂತೆ ಓಡಾಡುತ್ತ ಮಾಡಿದರು. ಉರುಸಿನ ವಿಶೇಷ `ಕಂದೂರಿ’ ಎನ್ನಲಾಗುವ ಮಾಂಸದೂಟ. ರಾತ್ರಿ ಹತ್ತರ ಸುಮಾರಿಗೆ ಮೆರವಣಿಗೆಯಲ್ಲಿ ಆಗಮಿಸಿದ್ದ ಕುರಿಗಳನ್ನು ಮುಲ್ಲಾ ಹಲಾಲ್ ಮಾಡಿದನು. ಅವನ್ನು ಜನ ಬೀಡುಬಿಟ್ಟಲ್ಲೆ ದೊಂದಿಯ ಗ್ಯಾಸ್‍ಲೈಟಿನ ಬೆಳಕಲ್ಲಿ ಹಸಿಗೆ ಮಾಡಿದರು. ನಡುರಾತ್ರಿಯ ಹೊತ್ತಿಗೆ ಅಡುಗೆ ಶುರುವಾಯಿತು. ಇಡೀ ಬಯಲು ಒಲೆಗಳ ಬೆಂಕಿಯಿಂದ ಬೀಡುಬಿಟ್ಟ ಸೈನಿಕ ಶಿಬಿರವಾಯಿತು. ಬೆಳಗಿನ ಜಾವ ಪೂಜಾರಿ ಮೈದುಂಬಿ ವರ್ಷದ ಮಳೆಬೆಳೆಯ ಕಾರ್ಣೀಕ ಹೇಳಿದನು. ಇದಾದ ಬಳಿಕ ಊಟ ಶುರು. ಜಾತ್ರೆಗೆ ಬಂದವರನ್ನು ಎಲ್ಲರೂ ಕರೆದು ಉಣ್ಣಿಸುವವರೇ. ಮಾಡಿದ ಅಡುಗೆ ಬೆಳಕು ಕಣ್ಬಿಡುವ ಮೊದಲು ಖಾಲಿಯಾಗಬೇಕು. ಮನೆಗೆ ಒಯ್ಯುವಂತಿಲ್ಲ. ಊಟದ ಜತೆ ಉರುಸು ಮುಕ್ತಾಯ ಕಂಡಿತು. ಜನ ಟಂಟಂ, ಬಂಡಿಗಳಲ್ಲಿ ಊರುಗಳಿಗೆ ತೆರಳಿದರು. ಬಿಸಿಲೇರುವ ಹೊತ್ತಿಗೆ ದರ್ಗಾ ನಿರ್ಜನವಾಯಿತು. ನೇಲಜೇರಿಯಲ್ಲಿ ಉರಿಸಿದೆ, ಸೂಫಿ ಪರಂಪರೆಯಿಲ್ಲ; ರಿವಾಯತ್ ಹಾಡಿನ ಪರಂಪರೆಯಿದೆ, ಮೊಹರಂ ಅಲ್ಲ; ಮುಸ್ಲಿಮರ ಭಾಗವಹಿಸುವಿಕೆಯಿದೆ, ಸಾಂಪ್ರದಾಯಿಕ ಇಸ್ಲಾಮಲ್ಲ; ಹತ್ತಕ್ಕೆ ಒಂಬತ್ತರÀಷ್ಟು ಹಿಂದುಗಳ ಭಾಗವಹಿಸುವಿಕೆಯಿದೆ, ಜಾತ್ರೆಯಲ್ಲ; ಅವಧೂತ ಪರಂಪರೆಯ ಲಕ್ಷಣಗಳಿವೆ, ಗುರುದೀಕ್ಷೆ ಕೊಡುವ ಪದ್ಧತಿಯಿಲ್ಲ; ಹಾಗಾದರೆ ಇದನ್ನು ಯಾವ ಧರ್ಮ ಅಥವಾ ಪಂಥದ ಚೌಕಟ್ಟಿನಲ್ಲಿಟ್ಟು ನೋಡುವುದು? ನಿರ್ದಿಷ್ಟ ಚೌಕಟ್ಟಿನಲ್ಲಿಟ್ಟು ನೋಡುವ ಅಥವಾ ಅದಕ್ಕೆ ಹೆಸರು ಕೊಡುವ ತುರ್ತು ಉರುಸಿನಲ್ಲ್ಲಿ ಭಾಗವಹಿಸಿದ ಯಾರಲ್ಲೂ ಇರಲಿಲ್ಲ. ಅವರಿಗೆ ತಾವು ಮಾಡುವ ಉರುಸು, ಹಾಡುವ ಹಾಡು, ಉಣ್ಣುವ ಊಟ ಯಾವ ಧರ್ಮಕ್ಕೆ ಸಂಬಂಧಿಸಿದವು ಎಂಬುದು ಪ್ರಶ್ನೆಯಾಗಿ ಕಾಡದಿರುವಾಗ, ನನಗೇಕೆ ಚೌಕಟ್ಟಿನ ಪ್ರಶ್ನೆ ಕಾಡುತ್ತಿದೆ? ಯಾವುದೇ ಧಾರ್ಮಿಕ ಆಚರಣೆಯನ್ನು ಈಗಾಗಲೇ ನಿರ್ವಚನಗೊಂಡಿರುವ ಜಾತಿ ಧರ್ಮ ಇಲ್ಲವೇ ಪಂಥದ ಚೌಕಟ್ಟಿನಲ್ಲಿ ಇಟ್ಟುನೋಡಬೇಕು ಎಂಬುದು ನನ್ನ ಬೌದ್ಧಿಕ ತುರ್ತೇ? ನೆಲಜೇರಿಯ ಉರುಸು ತನಗೆ ತಾನೇ ಸ್ಥಳೀಯವಾಗಿ ರೂಪುಗೊಂಡಿರುವ ಜನತೆಯ ಧರ್ಮ. ಇದರಲ್ಲಿ ಸೂಫಿಗಳ ಅವಧೂತರ ಮೊಹರಮ್ಮಿನ ಇಸ್ಲಾಮಿನ ಚಹರೆಗಳೆಲ್ಲ ಸಹಜವಾಗಿ ಒಗ್ಗೂಡಿವೆ. ಇಂತಹ ಅನೇಕ ತಾಣ ಮತ್ತು ಸಮುದಾಯಗಳು ನಾಡಲ್ಲಿವೆ. ಈ ಲೋಕಗಳನ್ನು ಅರಿಯಲು ಸದ್ಯ ಚಾಲ್ತಿಯಲ್ಲಿರುವ ಚೌಕಟ್ಟು ಸಾಲುವುದಿಲ್ಲ. ರಾಜಕೀಯವಾಗಿ ಧರ್ಮವನ್ನು ನೋಡಲು ರೂಪುಗೊಂಡಿರುವ ಕಣ್ಕಟ್ಟುಗಳಂತೂ ಯಾತಕ್ಕೂ ಬಾರವು. ಈ ಲೋಕಗಳನ್ನು ನೋಡಲು ತೆರೆದಮನಸ್ಸಿನ ಕಣ್ಣನ್ನು ಪಡೆದುಕೊಳ್ಳುವ ಅಗತ್ಯವಿದೆ. ಹಿಂದೆ ಕಲಿತಿದ್ದನ್ನು ಮಾತ್ರ ನೋಡುವ ಕಣ್ಕಟ್ಟುಗಳನ್ನಲ್ಲ.  ಹಂಪಿಗೆ ತೆರಳುವ ಮುನ್ನ ಅಂದಾನಪ್ಪನವರಿಗೆ ವಿದಾಯ ಹೇಳಲೆಂದು ಹುಡುಕಿದೆ. ಜಂಗುಳಿಯಲ್ಲಿ ಸಿಗಲಿಲ್ಲ. ಅವರ ಮನೆಗೆ ಬಂದು ಕೇಳಿದೆ. ಅಷ್ಟುಹೊತ್ತಿಗೆ ಅವರು ಸೈಕಲ್ ಹತ್ತಿ ಹೊಲಕ್ಕೆ ಹೋಗಿಬಿಟ್ಟಿದ್ದರು. **************************** ರಹಮತ್‌ ತರೀಕೆರೆ ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

Read Post »

ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಅಂಕಣ ಬರಹ ಫ್ರಾಂಕಿನ್‌ಸ್ಟೆನ್ ಫ್ರಾಂಕಿನ್‌ಸ್ಟೆನ್ಮೂಲ ಇಂಗ್ಲಿಷ್ : ಮೇರಿ ಷೆಲ್ಲಿ ಕನ್ನಡಕ್ಕೆ : ಶ್ಯಾಮಲಾ ಮಾಧವಪ್ರ : ಅಂಕಿತ ಪುಸ್ತಕಪ್ರಕಟಣೆಯ ವರ್ಷ :೨೦೦೭ ಅನುವಾದಕ್ಕಾಗಿ ಸದಾ ಇಂಗ್ಲಿಷ್ ಕ್ಲಾಸಿಕ್‌ಗಳನ್ನೇ ಆರಿಸಿಕೊಳ್ಳುವ ಶ್ಯಾಮಲಾ ಮಾಧವ ಅವರು ಸಾರ್ವಕಾಲಿಕ ಪ್ರಸ್ತುತಿಯುಳ್ಳ ಮೇರಿ ಷೆಲ್ಲಿಯ ‘ಫ್ರಾಂಕಿನ್‌ಸ್ಟೆöನ್’ ಎಂಬ ಅದ್ಭುತ ವಸ್ತುವುಳ್ಳ ಕಾದಂಬರಿಯನ್ನು ಅನುವಾದಿಸಿದ್ದಾರೆ. ನಿಸರ್ಗ ನಿಯಮಗಳ ವಿರುದ್ಧ ಹೋಗುವ ಅಹಂಕಾರವನ್ನು ಮನುಷ್ಯ ತೋರಿಸಿದರೆ ಪರಿಣಾಮವೇನಾಗಬಹುದು ಎಂಬ ವಿಷಯದ ಕುರಿತುಳ್ಳ ಈ ಕಾದಂಬರಿತನ್ನ ನಿರೂಪಣೆಗೆ ಫ್ಯಾಂಟಸಿ ಶೈಲಿಯನ್ನು ಆಯ್ದುಕೊಂಡಿದೆ ಮಾತ್ರವಲ್ಲದೆ ಅದು ಒಂದು ಭಯಾನಕ ವಾತಾವರಣವನ್ನೂ ಸೃಷ್ಟಿಸುತ್ತದೆ. ಹಿಮಾಚ್ಛಾದಿತ ಉತ್ತರ ಧ್ರುವದತ್ತ ಅನ್ವೇಷಕನಾಗಿ ಸಾಹಸ ಯಾತ್ರೆ ಕೈಗೊಳ್ಳುವ ವಾಲ್ಟನ್ ತನ್ನ ಪ್ರಿಯ ಸೋದರಿ ಮಾರ್ಗರೆಟ್‌ಗೆ ಬರೆಯುವ ಪತ್ರಗಳೇ ಇಲ್ಲಿ ಇಡೀ ಕಥೆಯನ್ನು ಹೇಳುತ್ತವೆ. ವಾಲ್ಟನ್ ಹಿಮ ಸಾಗರದಲ್ಲಿ ಭೇಟಿಯಾಗುವ ಫ್ರಾಂಕಿನ್‌ಸ್ಟೆöನ್ ಎಂಬ ವ್ಯಕ್ತಿ ಅವನಲ್ಲಿ ತನ್ನ ಭೀಭತ್ಸ ಅನುಭವಗಳನ್ನು ಹೇಳಿಕೊಳ್ಳುತ್ತಾನೆ. ಪ್ರಾಕೃತಿಕ ವಿಜ್ಞಾನದ ಅವ್ಯಕ್ತ ಸೆಳೆತಕ್ಕೊಳಗಾಗಿ ಆತ ಹಗಲು-ರಾತ್ರಿ ಪರಿಶ್ರಮ ಪಟ್ಟು ಆ ವಿಷಯದ ಆಳಕ್ಕಿಳಿದು ಅಧ್ಯಯನ ನಡೆಸಿ ಅದುವರೆಗೆ ಯಾವ ಮಾನವನೂ ಮಾಡದಿರುವ, ಮೈ ನವಿರೇಳಿಸುವ ಒಂದು ವಿಶಿಷ್ಟ ಪ್ರಯೋಗವನ್ನು ಕೈಗೊಳ್ಳುತ್ತಾನೆ. ಸತ್ತ ಮನುಷ್ಯರ ಶವಗಳಿಂದ ಪ್ರತಿಯೊಂದು ಬಿಡಿ ಭಾಗಗಳನ್ನು ತೆಗೆದು ಅವೆಲ್ಲವನ್ನೂ ಪುನಃ ಸುಸ್ಥಿತಿಯಲ್ಲಿ ಜೋಡಿಸಿ ಒಂದು ದೈತ್ಯಾಕೃತಿಯನ್ನು ನಿರ್ಮಿಸಿ ಅದರೊಳಗೆ ಜೀವ ತುಂಬುವ ಒಂದು ಭಯಾನಕ ಕೃತ್ಯವದು. ರಾಕ್ಷಸನಂತೆ ವಿಕಾರನೂ ಭಯಂಕರನೂ ಆಗಿ ಬರುವ ಆ ದೈತ್ಯ ಮುಂದೆ ಬಂದು ನಿಲ್ಲುತ್ತಲೇ ಫ್ರಾಂಕಿನ್‌ಸ್ಟೆöನ್ ಭಯಗೊಂಡು ಓಡಿ ಹೋಗಿ ತನ್ನ ಊರು ಸೇರುತ್ತಾನೆ. ಆದರೆ ಆ ದೈತ್ಯ ಅವನನ್ನು ಅಲ್ಲಿಗೂ ಬಿಡದೆ ಹಿಂಬಾಲಿಸುತ್ತಾನೆ. ತನ್ನ ಸೃಷ್ಟಿಕರ್ತನನ್ನು ತಾನು ಮುಂದೇನು ಮಾಡಬೇಕೆಂದು ಕೇಳುವ ಅವಕಾಶಕ್ಕಾಗಿ ಕಾಯುತ್ತಾನೆ. ಮನುಷ್ಯ ಸಂಪರ್ಕದಲ್ಲಿ ಇರಲು ಅವನಿಂದ ಸಾಧ್ಯವಾಗುವುದಿಲ್ಲ. ಯಾಕೆಂದರೆ ಅವನನ್ನು ಕಂಡ ಕೂಡಲೇ ಎಲ್ಲರೂ ಕಿಟಾರನೆ ಕಿರುಚಿ ಓಡಿ ಹೋಗುತ್ತಾರೆ, ಇಲ್ಲವೇ ಎಲ್ಲರೂ ಜೊತೆ ಸೇರಿ ಅವನಿಗೆ ಹೊಡೆದು ಹಿಂಸಿಸಿ ಓಡಿಸುತ್ತಾರೆ. ಹೀಗೆ ಒಂಟಿತನದ ನೋವಿನ ಕ್ಷಣಗಳಲ್ಲಿ ದೈತ್ಯನು ತನ್ನ ಸೃಷ್ಟಿಕರ್ತನ ಬಗ್ಗೆ ಸಿಟ್ಟಾಗುತ್ತಾನೆ. ಕೋಪದ ಆವೇಶದಲ್ಲಿ ಅವನು ಫ್ರಾಂಕಿನ್‌ಸ್ಟೆöನ್‌ನ ಪುಟ್ಟ ತಮ್ಮನ ಕತ್ತು ಹಿಚುಕಿ ಅವನನ್ನು ಕೊಲ್ಲುತ್ತಾನೆ. ಆ ಕುರಿತು ಫ್ರಾಂಕಿನ್‌ಸ್ಟೆöನ್ ದುಃಖಿಸುತ್ತಿರುವಾಗ ಒಂದು ದಿನ ಕಾಡು ಪ್ರದೇಶವೊಂದರಲ್ಲಿ ಅವರಿಬ್ಬರು ಭೇಟಿಯಾಗಿ ದೈತ್ಯನು ತನ್ನ ಸೃಷ್ಟಿಕರ್ತನಲ್ಲಿ ತನ್ನ ನೋವನ್ನು ತೋಡಿಕೊಳ್ಳುತ್ತಾನೆ. ತನ್ನನ್ನು ಒಂಟಿತನ ಕಾಡುತ್ತಿದೆಯಾದ್ದರಿಂದ ತನಗೆ ತನ್ನಂತಯೇ ಇರುವ ಹೆಣ್ಣು ಜೀವವೊಂದನ್ನು ಸೃಷ್ಟಿಸಿ ಕೊಡಬೇಕಾಗಿ ದೈತ್ಯನು ಕೇಳಿಕೊಳ್ಳುತ್ತಾನೆ. ಆದರೆ ಇದರಿಂದ ಮಾನವ ಸಮುದಾಯಕ್ಕೆ ಅಪಾಯವಿದೆ ಎಂಬುದನ್ನರಿತ ಫ್ರಾಂಕಿಸ್ಟೆöನ್ ಅದಕ್ಕೊಪ್ಪುವುದಿಲ್ಲ. ರೋಷಗೊಂಡ ದೈತ್ಯನು ಫ್ರಾಂಕಿನ್‌ಸ್ಟೆöನ್‌ನ ಪ್ರೀತಿಪಾತ್ರರೆಲ್ಲರನ್ನೂ ಕೊಂದು ಕೊನೆಗೆ ಅವನನ್ನೂ ಕೊಲ್ಲಲು ಹೊರಡುತ್ತಾನೆ. ಕೊನೆಯ ಹಂತದಲ್ಲಿ ವಾಲ್ಟನ್‌ನ ಮುಂದೆ ಕಾಣಿಸಿಕೊಳ್ಳುವ ಫ್ರಾಂಕಿನ್‌ಸ್ಟೆöನ್ ತಾನಿನ್ನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಹೇಳಿ ಅಲ್ಲಿಂದ ಹೊರಟು ಹೋಗುತ್ತಾನೆ. ವಿಜ್ಞಾನವನ್ನು ಒಂದು ಮಿತಿಗಿಂತ ಆಚೆ ಬಳಸುವವರಿಗೆ ತಮ್ಮ ಸಾಮಾಜಿಕ ಜವಾಬ್ದಾರಿಯ ಅರಿವು ಇರಬೇಕೆಂದು ಈ ಕಾದಂಬರಿ ಎಚ್ಚರಿಸುತ್ತದೆ. ಶ್ಯಾಮಲಾ ಅವರ ಅನುವಾದ ಆಕರ್ಷಣೀಯವಾಗಿದೆ. ********************************** “ ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Read Post »

ಅಂಕಣ ಸಂಗಾತಿ, ಚಿತ್ತ ಜನ್ಯ

ಅಂಕಣ ಬರಹ ಎಲ್ಲಾ ಒಳ್ಳೆಯದೇ ಆಗುತ್ತೆ… ಈ ಥರದ ಮಾತುಗಳನ್ನ ನಾವು ಬಹಳಷ್ಟು ಸಾರಿ ಕೇಳಿರ್ತೇವೆ. “ಒಳ್ಳೇವ್ರಿಗೆ ಒಳ್ಳೆಯದೇ ಆಗುತ್ತೆ”, “ನಾವು ಒಬ್ರಿಗೆ ಒಳ್ಳೇದು ಮಾಡಿದ್ರೆ ದೇವರು ನಮಗೆ ಒಳ್ಳೇದು ಮಾಡ್ತಾನೆ”, “ತಾತ ಮಾಡಿದ ಪಾಪ ಮೊಮ್ನೊಗನಿಗೆ”… ಹೀಗೆ ಹಲವಾರು ಮಾತುಗಳು… ಇವೆಲ್ಲ ಬರಿಯ ಮಾತುಗಳಲ್ಲ, ಅದೊಂದು ದೈತ್ಯ ಶಕ್ತಿಯ ನಂಬಿಕೆ, ನಮ್ಮ ಬದುಕನ್ನು ಮುನ್ನಡೆಸುವ ಶಕ್ತಿ. ನನ್ನ ತಂದೆ ಒಬ್ಬ ಪ್ರಾಮಾಣಿಕ ಹೈಸ್ಕೂಲ್ ಗಣಿತದ ಮೇಷ್ಟ್ರು. ತಮ್ಮ ವಿದ್ಯಾರ್ಥಿಗಳಿಗೆ ಸ್ವಂತ ಮಕ್ಕಳ ರೀತಿಯಲ್ಲೇ ಭಾವಿಸಿ ಪಾಠ ಹೇಳಿಕೊಟ್ಟವರು. ಅವರ ಬದುಕಿನುದ್ದಕ್ಕೂ ಅವರು ನಂಬಿದ್ದು ಒಂದೇ ಒಂದು. ನಾನು ಈ ಮಕ್ಕಳಿಗೆ ಚೆನ್ನಾಗಿ ಪಾಠ ಮಾಡಿದರೆ ದೇವರು ಮುಂದೆ ನನ್ನ ಮಕ್ಕಳನ್ನ ಚನ್ನಾಗಿಟ್ಟಿರ್ತಾನೆ ಎನ್ನುವುದು. ಅದಕ್ಕೆ ಸರಿಯಾಗಿ ನಾನು ನನ್ನ ತಮ್ಮ ಓದಿ ನೌಕರಿಗೆ ಸೇರಿದ ಮೇಲೆ ಅವರಿಗೆ ಅವರ ನಂಬಿಕೆ ಮತ್ತೂ ಬಲವಾಯ್ತು. ಆದರೆ ನಮಗೆ ನಿಜ ಗೊತ್ತಿತ್ತು. ನನ್ನ ತಂದೆ ನಮಗೆ ತಿಳಿದ ಹಾಗೆ,  ನಮಗೆ ಬುದ್ಧಿ ಬಂದಾಗಿನಿಂದಲೂ ಎಂದೂ ಸಂಜೆ ಮತ್ತು ಬೆಳಗಿನ ಹೊತ್ತು, ಸಮಯವನ್ನು ವ್ಯರ್ಥವಾಗಿ ಕಳೆದವರಲ್ಲ. ಬೆಳಗ್ಗೆ ಮನೆ ಪಾಠಕ್ಕೆ (ಒತ್ತಯಕ್ಕೆ ಮಣಿದು ಉಚಿತವಾಗಿ ಪಾಠ ಮಾಡುತ್ತಿದ್ದರೇ ಹೊರತು, ಅವರೆಂದೂ ಫೀಸಿಗೆ ಮನೆ ಪಾಠ ಮಾಡಿದವರಲ್ಲ… ಯಾರೋ ಕೆಲವರು ಒತ್ತಾಯ ಪೂರ್ವಕವಾಗಿ ಉಡುಗೊರೆ ಕೊಡುತ್ತಿದ್ದರಷ್ಟೇ..) ಬರುತ್ತಿದ್ದ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದರು, ಸಂಜೆ ನಾವಿಬ್ಬರು ಮಕ್ಕಳಿಗೆ. ಅವರು ನಾನು ಮತ್ತು ನನ್ನ ತಮ್ಮ ಬೆಳೆದು ಪಿಯುಸಿ ದಾಟುವವರೆಗೂ ಎಂದೂ ಟೀವಿಯನ್ನೇ ನೋಡಲಿಲ್ಲ, ಯಾವ ಮೋಜು ಅದು ಇದು ಎಂದು ಕಾಲಾಯಾಪನೆಯನ್ನೇ ಮಾಡಲಿಲ್ಲ. ಅವರು ಮೊದಲ ಬಾರಿ ನಿರುಮ್ಮಳವಾಗಿ ಟೀವಿ ನೋಡಲು ಶುರು ಮಾಡಿದ್ದೇ, ನಾನು ನೌಕರಿ ಸೇರಿ ಮತ್ತು ನನ್ನ ತಮ್ಮ ತನ್ನ ಹೆಚ್ಚಿನ ಓದಿಗಾಗಿ ಅಂತ ಮನೆ ತೊರೆದಾಗಲೇ. ಅವರ ಈ ಶ್ರಮ ವ್ಯರ್ಥವಾಗಲಿಲ್ಲ. ಆದರೆ ತಮ್ಮ ಇಡೀ ಬದುಕನ್ನೇ ಅವರ ವೃತ್ತಿ (ಸೇವೆ) ಮತ್ತು ಮಕ್ಕಳ ಬದುಕಿಗಾಗಿ ಮುಡುಪಾಗಿಟ್ಟ ರೀತಿ ಮಾತ್ರ ಈಗಲೂ ನನಗೊಂದು ಅಚ್ಚರಿ. ನನಗೂ ಸಹ ನನ್ನ ಮಕ್ಕಳಿಗೆ ಅಷ್ಟು ಸಮಯ ಕೊಡಲು ಒಮ್ಮೊಮ್ಮೆ ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ನಾನು ನನ್ನ ಮಕ್ಕಳನ್ನು ಸರಿಯಾಗಿ ಬೆಳೆಸುತ್ತಿಲ್ಲವಾ ಎನ್ನುವ ಅನುಮಾನವೂ ನನಗೆ ಕಾಡಿಬಿಡುತ್ತದೆ. ಆದರೆ ಅವರ ಒಟ್ಟಾರೆ ಬದುಕೇ ಒಂದು ಪಾಠವಾಗಿ ನನ್ನ ಮುಂದಿದೆ. ನನ್ನ ಅವಶ್ಯಕತೆ ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಅದನ್ನು ಬಳಸುತ್ತಾ ನಡೆಯಬೇಕಿದೆ. ಒಂದಂತೂ ನಿಜವಾಯಿತು. ನನ್ನಪ್ಪ ಮಹತ್ವಾಕಾಂಕ್ಷಿಗಳಾಗಿರಲಿಲ್ಲ. ಅವರಿಗೆ ಏನನ್ನೋ ಸಾಧಿಸಬೇಕು ಎನ್ನುವ ಹಂಬಲವಿರಲಿಲ್ಲ. ಆದರೆ ತಮ್ಮ ಮಕ್ಕಳು ಸನ್ನಡತೆಯುಳ್ಳವರಾಗಿರಬೇಕು, ಸದ್ಗುಣಗಳನ್ನು ಕಲಿತಿರಬೇಕು, ಸನ್ಮಾರ್ಗದಲ್ಲಿ ನಡೆಯಬೇಕು ಎನ್ನುವುದಷ್ಟೇ ಅವರಿಗೆ ಮುಖ್ಯವಾಗಿತ್ತು. ಬೇರೆಯವರ ಒಂದು ಸಣ್ಣ ಐದು ಪೈಸೆಯನ್ನೂ ಮುಟ್ಟಬಾರದು ಎಂಬ ಪಾಠ ನಮಗೆ ಸಿಕ್ಕಿದ್ದು ಅತಿ ಸಣ್ಣ ವಯಸ್ಸಿನಲ್ಲಿ. ಇವತ್ತಿಗೂ ನಮಗಿರುವುದರಲ್ಲಿ ನಾವು ತೃಪ್ತರೇ ವಿನಃ ಮತ್ತೊಬ್ಬರ ಹಣಕ್ಕೆ ಆಸೆ ಪಡಬೇಕು ಎಂದು ಯಾವತ್ತು ಅನಿಸಿಯೇ ಇಲ್ಲ ನಮಗೆ. ಅವರು ಕೊಟ್ಟಿರುವ ಸಂಸ್ಕಾರ ಅಷ್ಟು ಗಟ್ಟಿಯಾದದ್ದು. ಇವತ್ತು ಅಪ್ಪ ಅಮ್ಮನಿಂದ ಬಹಳ ದೂರದಲ್ಲಿದ್ದು ಬದುಕುತ್ತಿದ್ದರೂ ಅವರು ಕಲಿಸಿದ ಗುಣಗಳು ಸದಾ ನಮ್ಮನ್ನು ಕಾಯುತ್ತಿವೆ, ನಡೆಸುತ್ತಿವೆ. ಕೆಟ್ಟದ್ದರ ನಡುವೆಯೂ ಒಳ್ಳೆಯದನ್ನು ಆರಿಸಿಕೊಂಡು ನಡೆಯುವುದನ್ನು ಹೇಳಿಕೊಡುತ್ತಿವೆ. ಅದರೆ ಈಗಲೂ ಅಪ್ಪ ನಂಬುತ್ತಾರೆ, “ನಾನು ನನ್ನ ವಿದ್ಯಾರ್ಥಿಗಳಿಗೆ ನಿಸ್ವಾರ್ಥದಿಂದ ಹೇಳಿಕೊಟ್ಟ ನಾಲ್ಕು ಅಕ್ಷರಗಳಿಂದಾಗಿಯೇ ದೇವರು ನನ್ನ ಮಕ್ಕಳನ್ನ ಕಾಪಾಡಿದಾನೆ” ಅಂತ. ಆದರೆ ನಾನು ನಂಬುವುದು ಮಾತ್ರ ಅವರ ಪ್ರಾಮಾಣಿಕತೆ, ನಿಸ್ವಾರ್ಥತೆ, ಪರಿಶ್ರಮ, ತ್ಯಾಗ, ಮುಗ್ಧತೆ ಮತ್ತು ಪ್ರಂಜಲ ಮನಸಿನ ಪ್ರೀತಿಯನ್ನು ಮಾತ್ರ…. ಈಗ ಯೋಚಿಸುವುದಿಷ್ಟೇ ನಾನು ನನ್ನ ಮಕ್ಕಳನ್ನು ಎಷ್ಟರ ಮಟ್ಟಿಗೆ ಪ್ರಭಾವಿಸಿದ್ದೇನೆ?! ಅವರ ಒಂದಿಡೀ ಘನ ಬದುಕಿಗಾಗುವಷ್ಟು ದಟ್ಟ ಅನುಭವಗಳನ್ನು ನಾನು ಕಟ್ಟಿಕೊಡುತ್ತಿರುವೆನಾ?! ಅವರಿಗೆ ಎಂತಹ ಮಾರ್ಗವನ್ನು ತೋರಿಸುತ್ತಿದ್ದೇನೆ ನಾನು?! ಇವತ್ತಿನ ಅಂತರ್ಜಾಲದ ಯುಗದಲ್ಲಿ ನಮಗೆ ಮೊಬೈಲಿಗಿಂತಲೂ ಪ್ರಿಯವಾದದ್ದು ಬೇರೊಂದಿಲ್ಲ. ಕಂಪ್ಯೂಟರ್, ಟೀವಿಯನ್ನೂ ಹಿಂದಿಕ್ಕಿದೆ ಈ ಮೊಬೈಲು. ಅದು ನಮ್ಮ ಜೀವನದ ಅವಿಭಾಜ್ಯ ಅಂಗವೆನಿಸತೊಡಗಿದೆ. ಊಟ ನಿದ್ರೆಯ ಜೊತೆಗೆ ನಮ್ಮ ಆಯುಷ್ಯವನ್ನೂ ಕಸಿಯುತ್ತಿವೆ ಈ ಮೊಬೈಲುಗಳು. ಸಾಮಾಜಿಕ ತಾಣಗಳೆನ್ನುವ ವರ್ಚುವಲ್ ಪ್ರಪಂಚವನ್ನೇ ಅತಿಯಾಗಿ ಹಚ್ಚಿಕೊಂಡು ಅದನ್ನೇ ಸತ್ಯ ಎನ್ನುವಂತೆ ಬದುಕುತ್ತಿದ್ದೇವೆ ನಾವು. ಮೊನ್ನೆ ಒಂದು ಕತೆ ಓದಿದೆ. ಅದು ಬಹಳಷ್ಟು ಕಡೆ ಬಹಳಷ್ಟು ಸಮಯದಿಂದ ಹರಿದಾಡುತ್ತಿದ್ದು ನನ್ನ ಗಮನಕ್ಕೂ ಬಂದಿತ್ತು. ಅದೊಂದು ಶಾಲೆ. ಅಲ್ಲೊಬ್ಬ ಶಿಕ್ಷಕಿ. ಒಂದು ದಿನ ಆಕೆ ತನ್ನ ವಿದ್ಯಾರ್ಥಿಗಳಿಗೆ “ಮುಂದೆ ನಿಮಗೆ ಏನಾಗಬೇಕೆಂದು ಆಸೆ ಇದೆ ಎನ್ನುವುದನ್ನು ಒಂದು ಪೇಪರ್ ನಲ್ಲಿ ಬರೆದು ಕೊಡಿ” ಎನ್ನುತ್ತಾಳೆ. ಎಲ್ಲ ಮಕ್ಕಳೂ ಬರೆದುಕೊಡುತ್ತಾರೆ. ಶಿಕ್ಷಕಿ ಅವನ್ನು ಕರೆಕ್ಷನ್ ಮಾಡಲಿಕ್ಕಾಗಿ ಮನೆಗೆ ತರುತ್ತಾಳೆ. ಮನೆಕೆಲಸ, ಅಡುಗೆ, ಊಟ ಎಲ್ಲ ಮುಗಿಸಿ, ದಿನನಿತ್ಯದಂತೆ ಒಂದಷ್ಟು ಹೊತ್ತು ಮೊಬೈಲ್ ನೋಡಿ, ಮಲಗುವ ಮುನ್ನ ಆ ಪೇಪರ್ ಗಳನ್ನು ಓದಲು ಶುರುಮಾಡುತ್ತಾಳೆ. ಪಕ್ಕದಲ್ಲಿ ಅವಳ ಗಂಡ ಮೊಬೈಲ್ ನಲ್ಲಿ ಮುಳುಗಿರುತ್ತಾನೆ. ಇದ್ದಕ್ಕಿದ್ದ ಹಾಗೆ ಅವಳು ಒಂದು ಪೇಪರ್ ಓದುತ್ತಾ ಅಳಲು ಶುರು ಮಾಡುತ್ತಾಳೆ. ಆಗ ಅವಳ ಗಂಡ ಯಾಕೆ ಅಳ್ತಿದಿ ಎಂದು ಕೇಳುತ್ತಾನೆ. ಆಗ ಆಕೆ ಹೇಳುತ್ತಾಳೆ, ಇಲ್ಲೊಂದು ವಿದ್ಯಾರ್ಥಿಯ ಬರೆಹ ನೋಡಿ ಅಳು ಬಂತು ಎನ್ನುತ್ತಾಳೆ. ಆಗ ಗಂಡ ಏನಂಥದ್ದು ಬರೆದಿದ್ದಾನೆ ಆ ಹುಡುಗ ಎಂದು ಕೇಳುತ್ತಾನೆ. ಆಗ ಆ ಶಿಕ್ಷಕಿ ಆ ಬರೆಹವನ್ನು ಓದತೊಡಗುತ್ತಾಳೆ, “ಮಿಸ್ ನನಗೆ ದೊಡ್ಡವನಾದ ಮೇಲೆ ಒಂದು ಸ್ಮಾರ್ಟ್ ಫೋನ್ ಆಗಬೇಕು ಅಂತ ಆಸೆ. ಯಾಕಂದ್ರೆ ಅಪ್ಪ ಅಮ್ಮ ನಂಗಿಂತ ಮೊಬೈಲನ್ನೆ ತುಂಬ ಪ್ರೀತಿಸ್ತಾರೆ. ರಾತ್ರಿ ಮಲಗುವಾಗಲು ಅದನ್ನೇ ನೋಡ್ತಾರೆ, ಬೆಳಗ್ಗೆ ಕಣ್ಣು ಬಿಟ್ಟಾಗಲೂ ಅದನ್ನೇ ನೋಡ್ತಾರೆ. ನಂಜೊತೆ ಎರೆಡು ಮಾತಾಡೋದಿಲ್ಲ, ಪ್ರೀತಿಯಿಂದ ಇರೋದಿಲ್ಲ. ಸದಾ ಮೊಬೈಲಿನಲ್ಲೇ ಮುಳುಗಿರ್ತಾರೆ. ಇನ್ನು ಕಾಲ್ ಬಂದುಬಿಟ್ಟರೆ ಮುಗೀತು. ನಾನೊಬ್ಬ ಇದೀನಿ ಎನ್ನುವುದೇ ನೆನಪಿರೋದಿಲ್ಲ ಅವರಿಗೆ. ಅದಕ್ಕೆ ನಾನೊಂದು ಸ್ಮಾರ್ಟ್ ಫೋನ್ ಆಗಬೇಕು ಅಂತ ಆಸೆ. ಆಗ ಅಪ್ಪ ಅಮ್ಮ ನನ್ನನ್ನೇ ಪ್ರೀತಿಸ್ತಾರೆ” ಎಂದು ಓದಿ ಮುಗಿಸುತ್ತಾಳೆ. ಅಷ್ಟು ಹೊತ್ತಿಗಾಗಲೇ ಗಂಡನ ಕಣ್ಣೂ ತುಂಬಿರುತ್ತದೆ. ಎಂಥದೋ ತಪ್ಪಿತಸ್ಥ ಭಾವ ಅವನನ್ನೂ ಕಾಡತೊಡಗಿರುತ್ತದೆ. ಮತ್ತೆ ಗೊಗ್ಗರು ದನಿಯಲ್ಲಿ ಆ ಹುಡುಗ ಯಾರು ಎಂದು ಕೇಳುತ್ತಾನೆ. ಆ ಹುಡುಗ ಬೇರೆ ಯಾರೂ ಅಲ್ಲ ನಮ್ಮ ಮಗನೇ ಕಣ್ರೀ ಎನ್ನುತ್ತಾ ಮತ್ತೂ ಜೋರಾಗಿ ಅಳತೊಡಗುತ್ತಾಳೆ ಆ ಶಿಕ್ಷಕಿ. ಇದಂತೂ ಬಹುತೇಕ ನಮ್ಮಲ್ಲರಿಗೂ ಅನ್ವಯಿಸುವ ಕತೆಯೇನೋ ಅನಿಸಿಬಿಟ್ಟಿತು ನನಗೆ. ನಾವು ನಮ್ಮ ಮಕ್ಕಳಿಗೆ ನ್ಯಾಬದ್ಧವಾಗಿ ಅವರಿಗೆ ಸಿಗಬೇಕಾದ ಸಮಯವನ್ನ ಕೊಡುತ್ತಿಲ್ಲದ ಅಪರಾಧಿಗಳು. ಇನ್ನು ಆ ಮಕ್ಕಳು ಬೆಳೆದಾದ ಮೇಲೆ ಇನ್ನೆಂತಹ ಮೌಲ್ಯಗಳನ್ನು ಬೆಳೆಸಿಕೊಳ್ಳಲು ತಾನೆ ಸಾಧ್ಯ. ಮಕ್ಕಳು ನೋಡ ನೋಡುತ್ತಲೇ ಬೆಳೆದುಬಿಡುತ್ತಾರೆ. ಅವರ ಬೆಳವಣಿಗೆಯ ಪ್ರತಿ ಹಂತವನ್ನೂ ನಾವು ಅಚ್ಚರಿಯಿಂದ ಕಂಡು ಆನಂದಿಸಿ ಪ್ರೀತಿಸಬೇಕು. ಅದನ್ನೇ ಮಾಡದೆ ಹೋದರೆ ಮುಂದೆ ಆ ಮಕ್ಕಳು ನಮ್ಮನ್ನು ಯಾವ ಕಾರಣಕ್ಕಾಗಿ ನೆನಪಿಡಬೇಕು… ಪೇರೆಂಟಿಂಗ್ ಕೂಡ ಬಹಳ ಜವಾಬ್ದಾರಿಯುತ ಕೆಲಸ. ಹೆತ್ತರೆ ಮಾತ್ರ ಸಾಕಾಗುವುದಿಲ್ಲ. ಮಕ್ಕಳ ಅವಶ್ಯಕತೆಗೆ ಮೀರಿ ಸೌಲಭ್ಯಗಳನ್ನು ಕೊಟ್ಟು ಗಿಲ್ಟ್ ಕಳೆದುಕೊಳ್ಳುವುದಲ್ಲ, ಅವರಿಗೆ ಕೊಡಬೇಕಾದ ಸಮಯ ಕೊಟ್ಟು ಅವರನ್ನ ಪ್ರೀತಿಯಿಂದ ಪ್ರಭಾವಿಸಬೇಕಿದೆ. ಸರಿ ತಪ್ಪುಗಳನ್ನು ಗುರುತಿಸಿ ಸರಿದಾರಿ ಕಂಡುಕೊಂಡು ನಡೆಯುವುದನ್ನು  ಕಲಿಸಿಕೊಡಬೇಕಿದೆ. ಇನ್ನದಾರೂ ಒಂದಷ್ಟು ಹೊತ್ತು ಮೊಬೈಲ್ ಬಿಸಾಕಿ ನಮ್ಮ ಮಕ್ಕಳ ಜೊತೆ ಕೂತು ಒಂದಷ್ಟು ಚಂದದ ಸಮಯವನ್ನು ಕಳೆಯಬೇಕಿದೆ ಅಂತ ಅನಿಸುತ್ತಿರುವುದನ್ನು ನನ್ನಿಂದಲೇ ಶುರುಮಾಡಬೇಕಿದೆ. ಮತ್ತೆ ಎಲ್ಲಾ ಒಳ್ಳೆಯದೇ ಆಗುತ್ತೆ ಎನ್ನುವ ನಂಬಿಕೆಯ ಬೀಜವನ್ನು ಬಿತ್ತಿಕೊಂಡು ಅದು ಮೊಳೆತು ಬೆಳೆದು ಹೆಮ್ಮರವಾಗುವುದನ್ನು ಇಂಚಿಂಚೂ ಕಾಣಬೇಕಿದೆ… ********************************** –ಆಶಾ ಜಗದೀಶ್ ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.

Read Post »

You cannot copy content of this page

Scroll to Top