ಅಂಕಣ ಬರಹ ಹೂಕೊಂಡ ಹೂಕೊಂಡತಮಿಳು ಮೂಲ : ಪೆರುಮಾಳ್ ಮುರುಗನ್ಅನುವಾದ : ನಲ್ಲತಂಬಿಪ್ರ : ಲಂಕೇಶ್ ಪ್ರಕಾಶನಪ್ರಕಟಣೆಯ ವರ್ಷ : ೨೦೧೭ಬೆಲೆ : ರೂ.೧೨೫ಪುಟಗಳು : ೧೪೪ ಪುರುಷ ಪ್ರಧಾನ ಸಮಾಜದಲ್ಲಿ ಸ್ತಿçಯು ಶೋಷಣೆಗೊಳಗಾಗುವ ದುರಂತ ಕಥಾವಸ್ತುವನ್ನು ಹೊಂದಿದ ಕಾದಂಬರಿ ಇದು. ಜಾತಿ ಸಮಸ್ಯೆಯೂ ಇದರ ವಿನ್ಯಾಸದ ಇನ್ನೊಂದು ಮುಖ. ಅಲ್ಲದೆ ಸರಳ ಸ್ವಭಾವದ ಮಂದಿ ಎಂದು ಎಲ್ಲರೂ ಭಾವಿಸುವ ಗ್ರಾಮೀಣರಲ್ಲೂ ಎಂಥ ಕ್ರೌರ್ಯವಿರಬಹುದು ಎನ್ನುವ ಕಹಿ ಸತ್ಯವನ್ನು ಈ ಕಾದಂಬರಿ ಕಟ್ಟಿಕೊಡುತ್ತದೆ. ಮದುವೆಯಾಗಿ ಕೇವಲ ಎರಡು ವರ್ಷಗಳಲ್ಲೇ ಗಂಡನನ್ನು ಕಳೆದುಕೊಂಡ ಮಾರಾಯಿ ಕಡು ದಾರಿದ್ರö್ಯದ ಕಷ್ಟಗಳನ್ನೆದುರಿಸುತ್ತಲೇ ಮಗ ಕುಮರೇಶನನ್ನು ಬೆಳೆೆಸಿ ದೊಡ್ಡವನನ್ನಾಗಿಸುತ್ತಾಳೆ. ಉದ್ಯೋಗವನ್ನರಸಿ ಪಕ್ಕದ ತೋಲೂರಿಗೆ ಹೋಗುವ ಕುಮರೇಶ ಅಲ್ಲಿ ಸೋಡಾ ಉತ್ಪಾದನೆಯ ಕೆಲಸದಲ್ಲಿ ತೊಡಗುತ್ತಾನೆ. ಆ ಊರಿನಲ್ಲಿ ಪರಿಚಯವಾದ ಸರೋಜಳನ್ನು ಪ್ರೀತಿಸಿ ತನ್ನ ತಾಯಿಗಾಗಲಿ, ಅವಳ ಅಪ್ಪ-ಅಣ್ಣನಿಗಾಗಲಿ ತಿಳಿಸದೆ ದೇವಸ್ಥಾನದಲ್ಲಿ ಸರಳ ವಿವಾಹವಾಗಿ ಅವಳನ್ನು ಊರಿಗೆ ಕರೆತರುತ್ತಾನೆ. ಆದರೆ ಅಲ್ಲಿ ಕುಮರೇಶನ ತಾಯಿ ಸೊಸೆಯನ್ನು ಸ್ವೀಕರಿಸಲು ಸುತರಾಂ ಒಪ್ಪುವುದಿಲ್ಲ. ಹುಡುಗಿ ಸುಂದರಿಯಾದರೂ ಯಾವ ಜಾತಿಯವಳೋ ಎಂಬುದು ಅವಳ ಆತಂಕ. ಆದ್ದರಿಂದ ದಿನವಿಡೀ ಸೊಸೆಯನ್ನು ಬಾಯಿಗೆ ಬಂದAತೆ ಬೈಯುತ್ತ ಮನ ನೋಯಿಸುತ್ತ ಇರುತ್ತಾಳೆ. ಸರೋಜಳಿಗೆ ಹೊಸ ವಾತಾವರಣ ಭಯಾನಕವೆನ್ನಿಸುತ್ತದೆ. ಊರಿನ ಹೆಂಗಸರೆಲ್ಲರೂ ಆಗಾಗ ಬಂದು ಅವಳ ಕುಲ-ಗೋತ್ರಗಳನ್ನು ವಿಚಾರಿಸುತ್ತ, ಕೆಲವೊಮ್ಮೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತ ಇರುತ್ತಾರೆ. ತೋಲೂರಿನ ಪಟ್ಟಣದ ಜೀವನಕ್ಕೆ ಒಗ್ಗಿಕೊಂಡಿದ್ದ ಸರೋಜಳಿಗೆ ಹಳ್ಳಿಯ ಬಡ ಮನೆಯ ಸರಳ ಜೀವನಕ್ಕೆ ಹೊಂದಿಕೊಳ್ಳುವುದು ಮತ್ತು ಅವರೆಲ್ಲರ ನಿಂದನೆಗಳನ್ನು ಸಹಿಸಿಕೊಳ್ಳುವ ನರಕ ಯಾತ£ಗಳುÉ ಅಸಹನೀಯವೆನ್ನಿಸುತ್ತದೆ. ಅವಳು ಕುಮರೇಶನನ್ನು ವಶೀಕರಿಸಿಕೊಂಡ ಮಾಟಗಾತಿಯೆಂದು ಎಲ್ಲರೂ ವ್ಯಂಗ್ಯ ಮಾತನಾಡಿದಾಗ ಅಲ್ಲಿಂದ ಎಲ್ಲಾದರೂ ಓಡಿ ಹೋಗಬೇಕು ಅನ್ನಿಸುತ್ತದೆ. ಒಮ್ಮೆ ಕುಮರೇಶ್ ಹೊಸದಾಗಿ ಸೋಡಾ ಫ್ಯಾಕ್ಟರಿ ಆರಂಭಿಸುವ ಬಗ್ಗೆ ಮಾತನಾಡಲು ಪಕ್ಕದ ಊರಿಗೆ ಹೋಗಿರುತ್ತಾನೆ. ಅವನು ಆ ರಾತ್ರಿ ಮನೆಗೆ ಬರುವುದಿಲ್ಲವೆಂದು ತಿಳಿದ ಅವನ ತಾಯಿ ಮಾರಾಯಿ ಊರಿನ ಕೆಲವು ಮಂದಿಯನ್ನು ಕೂಡಿಕೊಂಡು ಸರೋಜಳನ್ನು ಕೊಲ್ಲುವ ಯೋಜನೆ ಹಾಕುತ್ತಾಳೆ. ಆದರೆ ಆ ಸಂಚನ್ನು ಅಡಗಿ ಕೇಳಿದ ಸರೋಜ ಅಲ್ಲಿಂದೆದ್ದು ಮುಳ್ಳು ಪೊದೆಗಳ ಹಿಂದೆ ಅಡಗಲು ಹೋಗುತ್ತಾಳೆ. ಅಪಾಯಕಾರಿಯೂ ಭಯಾನಕವೂ ಆದ ಆ ಜಾಗದಲ್ಲಿ ಒಳಗೊಳಗೆ ಜಾರುವ ಸರೋಜಾಳ ಮೈಕೈಗಳಿಗೆ ಗಂಭೀರ ಗಾಯಗಳಾಗುತ್ತವೆ. ಕೊಲೆ ಪಾತಕಿಗಳು ಅವಳನ್ನು ಹೇಗಾದರೂ ಮಾಡಿ ಅಲ್ಲಿಂದ ಹೊರಗೆಳೆದು ಕೊಲ್ಲಲು ಪ್ರಯತ್ನಿಸುತ್ತಾರೆ. ಆದರೆ ಅವರ ಪ್ರಯತ್ನ ಫಲಕಾರಿಯಾಗುವುದಿಲ್ಲ. ಸರೋಜಾ ಭಯದಿಂದ ತತ್ತರಿಸುತ್ತಿದ್ದಂತೆ ಕಿವಿಯ ಮೇಲೆ ಬಿದ್ದ ಕುಮರೇಶನ ಸೈಕಲ್ ಬೆಲ್ಲಿನ ಶಬ್ದ ಅವಳಿಗೆ ಮರುಜೀವ ಕೊಡುತ್ತದೆ. ಹೆಣ್ಣನ್ನು ವಿನಾಕಾರಣ ಪೀಡಿಸುವ ನಮ್ಮ ಸಮಾಜ ಎಂದು ಬದಲಾಗುತ್ತದೋ ಎಂಬ ಆತಂಕವನ್ನು ಈ ಕಾದಂಬರಿ ನಮ್ಮಲ್ಲಿ ಹುಟ್ಟಿಸುತ್ತದೆ. ನಲ್ಲತಂಬಿಯವರ ಅನುವಾದ ಆಡುಭಾಷೆಯ ಬಳಕೆಯಿಂದ ಆಪ್ತವಾಗುತ್ತದೆ. ************************************* ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ
ಅಂಕಣ ಬರಹ ಕಬ್ಬಿಗರ ಅಬ್ಬಿ ನೆಲದವ್ವನ ಒಡಲ ಜೀವಜಲ ಆ ಬಾವಿ ನೀರಿಗೆ ಅಷ್ಟೊಂದು ರುಚಿ. ಆಸರಾದ ಗಂಟಲಿಗರ ಆಸರೆಯೇ ಆ ಬಾವಿ. ನಮ್ಮ ಮನೆಯಿಂದ ಶಾಲೆ ತಲಪಲು ನಾಲ್ಕುಮೈಲಿಯ ಹೆಜ್ಜೆ. ನಡುದಾರಿಯಲ್ಲಿ ದೇವಸ್ಥಾನ. ಅದರ ಪಕ್ಕದಲ್ಲಿ ಈ ಬಾವಿ. ನಾನು ತುಂಬಾ ಚಿಕ್ಕವನಿದ್ದಾಗ, ನನ್ನ ಅಕ್ಕನ ಜತೆಗೆ ಶಾಲೆಗೆ ನಡೆದು ಬಾಯಾರಿದರೆ ಈ ಬಾವಿಯಿಂದ ಅಕ್ಕ ನೀರು ಸೇದುತ್ತಿದ್ದಳು. ಬಾವಿಯಾಳಕ್ಕೆ ಹಳೆಯ ಅಲ್ಯುಮಿನಿಯಮ್ ಬಿಂದಿಗೆ ಇಳಿಸಿ ನೀರು ನಿಧಾನವಾಗಿ ತುಂಬುವಾಗ ಗುಳು ಗುಳು ಶಬ್ಧ ಬಾವಿಯ ಪಾತ್ರದೊಳಗಿಂದ ಅನುರಣಿಸುವ ಶಬ್ಧ, ಬಾವಿಯ ಜತೆಗೆ ಬಿಂದಿಗೆ ಪಿಸುಮಾತಲ್ಲಿ ಸಲ್ಲಪಿಸುವಂತೆ ಆಪ್ತವೂ ನೈಜವೂ ಆಗಿತ್ತು. ತೆಂಗಿನ ಹುರಿಹಗ್ಗ ಹಿಡಿದು ಒಂದೊಂದೇ ಉಸಿರಿನ ಜತೆಗೆ ಒಂದೊಂದೇ ಕೈಯಳತೆಯಷ್ಟು ಎಳೆಯುತ್ತಾ ಬಾವಿಯ ಆಕರ್ಷಣೆಗೆ ವಿರುದ್ಧವಾಗಿ ಕೊರಳಿಗೆ ಉರುಳು ಸಿಕ್ಕಿಸಿದ ಬಿಂದಿಗೆ ಮೇಲೇರುತ್ತಿತ್ತು. ಅಕ್ಕ ಕೊಡ ಬಗ್ಗಿಸಿ ನನ್ನ ಪುಟ್ಟ ಬೊಗಸೆ ತುಂಬಾ ನೀರು ಸುರಿದಾಗ ಅವಳ ಸ್ತ್ರೀ ಸಹಜ ಪ್ರೀತಿಯೇ ಬೊಗಸೆ ತುಂಬಾ. ನೀರೂ ಅಷ್ಟೇ, ನೆಲದವ್ವನ ಒಡಲ ಜೀವ ಜಲವದು. ವೃತ್ತಾಕಾರದ ಕಟ್ಟೆ, ಬಾವಿಯ ಮುಖಪರಿಚಯ. ಬಾವಿಯೊಳಗೆ ಇಣುಕಿದರೆ, ನಿಶ್ಚಲವಾಗಿ ಶಾಂತವಾಗಿ ನೀರು, ಆಗಸಕ್ಕೂ, ಬಾವಿಯ ಒಳ ಅಂಚಿಗೂ ಕನ್ನಡಿಯಾಗುತ್ತೆ. ಬಾವಿಯೊಳಗೆ ಇಣುಕಿದರೆ ಅದು ನಿಮಗೆ ನಿಮ್ಮದೇ ಮುಖವನ್ನು ತೋರಿಸುತ್ತದೆ, ಗಗನದ ಬಿಂಬದ ಹಿನ್ನೆಲೆಯಲ್ಲಿ. ತಿಳಿನೀರಿಗೆ ಕಡಲೇ ಗಾತ್ರದ ಕಲ್ಲೆಸೆದರೆ, ಅಷ್ಟೂ ಬಿಂಬಗಳು ವಕ್ರ ವಕ್ರವಾಗಿ, ಅಲೆಗಳ ಹಿಂದೆ ಅಲೆಯತ್ತವೆ. ಬಾವಿಯ ಇನ್ನೊಂದು ವಿಶೇಷತೆ, ಶಬ್ಧದ ಪುನರಾವರ್ತನೆ( ಇಖೋ) ಮತ್ತು ತತ್ಪರಿಣಾಮವಾಗಿ ಸ್ವರವರ್ಧನೆ. ಮಕ್ಕಳು ಬಾವಿಯ ಮುಖಕ್ಕೆ ಮುಖ ಹಚ್ಚಿ, ಹೂಂ.. ಅಂದರೆ, ಬಾವಿಯೊಳಗಿಂದ ಯಾರೋ ಹೂಂ…ಹೂಂ.. ಅಂತ ಸ್ವರಾನುಕರಣೆ ಮಾಡಿದಂತೆ, ಮಕ್ಕಳಿಗೆ ಬಾವಿಯೊಳಗೆ ರಾಕ್ಷಸ ಇದ್ದಾನೋ ಎಂಬ ಕಲ್ಪನೆ ಮೂಡಿ, ಬಾವಿಯೊಳಗಿಂದ ಕಥೆಯ ಕವಲುಗಳು ಚಿಗುರುತ್ತವೆ. ಬಾವಿಯೊಳಗೆ ನೀವು ಇಳಿದು ಮೇಲೆ ನೋಡಿದರೆ, ನಿಮಗೆ ಕಾಣಿಸುವುದು ಆಗಸದ ಒಂದು ಚಿಕ್ಕ ತುಂಡು ಮಾತ್ರ. ಬಾವಿ ಆಳವಾಗಿದ್ದರೆ, ಬಾವಿಯೊಳಗಿಂದ ಹೊರಜಗತ್ತಿನತ್ತ ನೋಟದ ವ್ಯಾಪ್ತಿ, ನಿಮ್ಮ ಕಣ್ಣಿನ ಕ್ಷಮತೆಗಿಂತ ಹೆಚ್ಚು, ಬಾವಿಯ ಹೊರಬಾಯಿಯ ಅಳತೆಯ ಮೇಲೆಯೇ ಅವಲಂಬಿಸಿರುತ್ತೆ. ಬಾವಿಯ ಅಂಚಿನಲ್ಲಿಯೂ ಜರಿಗಿಡಗಳಂಥಹಾ ಹತ್ತು ಹಲವು ಸಸ್ಯ ಪ್ರಬೇಧಗಳು ಬೇರಿಳಿಸಿ ಜೀವನೋತ್ಸಾಹದ ದ್ಯೋತಕವಾಗಿ ತೊನೆಯುತ್ತವೆ. ನೀರ ಸೆಲೆಯೇ ಜೀವಸಂಕುಲದ ನೆಲೆ ಎನ್ನುವ ಪ್ರಪಂಚವದು. ಬಾವಿಯೊಳಗೆ ಅಂಚುಗಳಲ್ಲಿ ಪಾಚಿಯೂ ಬೆಳೆಯುತ್ತೆ. ಬಾವಿಯೊಳಗೆ ಕಪ್ಪೆ, ಅದರ ಮಕ್ಕಳು ಮರಿಗಳು ಎಲ್ಲಾ ಸೇರಿ ಸುಖೀ ಸಂಸಾರ ಕಟ್ಟುತ್ತವೆ. ಬಾವಿಯಲ್ಲಿ ಜೀವಜಲದ ಒರತೆಯಿದೆಯಷ್ಟೇ. ಅದರ ಜತೆಗೇ ಬಾವಿಯಿಂದ ನೀರು ಯಾವುದೋ ಸೆರೆಯಲ್ಲಿ ಹೊರ ಹರಿಯುವ ದಾರಿಯೂ ಇದೆ. ಈ ಒಳಹರಿವು ಮತ್ತು ಹೊರ ಹರಿವಿನ ಚಲನಶೀಲತೆಯಿಂದಾಗಿ ಬಾವಿಯ ಜಲಜ್ಞಾನಸಂಗ್ರಹ ಒಂದು ಮಟ್ಟದಲ್ಲಿರುತ್ತೆ ಮತ್ತು, ನೀರು ಸದಾ ಸ್ವಚ್ಛ ನೂತನವಾಗಿರುತ್ತೆ. ಬಾವಿ ನೀರು ನೆಲದಮ್ಮನ ಮೊಲೆಹಾಲಿನಂತೆ. ಮಣ್ಣಿನ ಖನಿಜ ಸಾರಗಳು, ಅದರ ವಿಶಿಷ್ಠವಾದ ಪರಿಮಳ ನೀರಿಗೆ ರುಚಿ ಆರೋಪಿಸುತ್ತೆ. ಬಾವಿನೀರು ನಮ್ಮ ನೋಟಕ್ಕೆ ಸಿಗದ ಲಕ್ಷಾಂತರ ಜೀವಾಣುಗಳ ಸಾಮ್ರಾಜ್ಯವೂ ಹೌದು. ಲಂಗದಾವಣಿ ತೊಟ್ಟ ಹುಡುಗಿಯರು ಬಿಂದಿಗೆ ಹಿಡಿದು ಬಾವಿಯ ನೀರು ಕೊಂಡೊಯ್ಯಲು ಬಂದರೆ ಅದನ್ನು ನೋಡಿ ಹಳ್ಳಿಗೆ ಹಳ್ಳಿಯೇ ಗಜಲ್ ಬರೆಯುತ್ತೆ. ಬಾವಿ ಕಟ್ಟೆಯ ಸುತ್ತಮುತ್ತ, ಪ್ರಣಯಗೀತೆಗಳ ಗುಂಜಾರವ ಗುನುಗುನಿಸುತ್ತೆ. ಜತೆ ಜತೆಗೆ ಬಾವಿಯ ನೀರು ಕೊಂಡೊಯ್ಯಲು ಬಂದ ಗೃಹಿಣಿಯರು ಬಾವಿಯೊಳಗಿನ ದರ್ಪಣದಲ್ಲಿ, ಪರಸ್ಪರ ತಮ್ಮ ಭಾವವನ್ನೂ ಬಿಂಬಿಸಿ ಹಂಚಿಕೊಳ್ಳುವಾಗ ಕೆಲವೊಮ್ಮೆ ಕಣ್ಣೀರ ಬಿಂದುಗಳು, ಆನಂದ ಭಾಷ್ಪಗಳು ಬಾವಿ ನೀರಿನಲ್ಲಿ ತಂಪು ಕಾಣುತ್ತವೆ. ಬೇಂದ್ರೆಯವರ ಪುಟ್ಟ ಮಗಳು ಒಂದು ಸಂಜೆ ಬಿಂದಿಗೆ ಹಿಡಿದು, ಬಾವಿಯತ್ತ ಹೆಜ್ಜೆ ಹಾಕುವ ದೃಶ್ಯ ನೋಡಿದ ನಡಿಗೆಯ ಹೆಜ್ಜೆಯ ಗೆಜದಜೆಯ ಲಯದಂತಹಾ ” ಸಂಜೆಯ ಜಾವಿಗೆ ಹೊರಟಾಳ ಬಾವಿಗೆ” ಅಂತ ಬರೆಯುತ್ತಾರೆ!. “ಸಂಜೆಯ ಜಾವಿಗೆ | ಹೊರಟೀದಿ ಬಾವಿಗೆ || ಕಿರಗೀಯ ನೀರಿಗೆ | ಒದೆಯೂತ ದಾರಿಗೆ || ಗೆಜ್ಜೀಯು ಗೆಜ್ಜಿಗೆ | ತಾಕ್ಯಾವ ಹೆಜ್ಜಿಗೆ || ಏನಾರ ನಡಿಗೆ | ಯಾವೂರ ಹುಡಿಗೆ || ಸಂಜೆಯ ಜಾವಿಗೆ | ಹೊರಟಾಳ ಬಾವಿಗೆ ||” ಬೇಂದ್ರೆಯವರ ಪದಗಳು ನಾಟ್ಯಾಂಗನೆಯ ಪದಗಳು. ಹುಡುಗಿ, ಪುಟ್ಟ ಸೀರೆಯುಟ್ಟು, ನಡೆಯೋದಲ್ಲ, ಹಾದಿಗೆ ಪುಟ್ಟ ಪಾದಗಳಿಂದ ಹಾದಿಯನ್ನು ಒದಿಯೂತ ನಡೆಯುವಾಗ, ಆಕೆಯ ಗೆಜ್ಜೆ, ಹೆಜ್ಜೆ ಮತ್ತು ನಡಿಗೆಯಲ್ಲಿ ಸಂಭ್ರಮ ಪದ್ಯವಾಗಿದೆ. ಆಕೆ ಬಿಂದಿಗೆಯಲ್ಲಿ ಜಲತುಂಬಿ ಹಿಂತಿರುಗಿ ನಡೆಯುವ ಭಂಗಿ ಈ ಕೆಳಗಿನ ಸಾಲುಗಳು. “ಮೂಗಿನ ನೇರಿಗೆ | ಹೊರಳೀದೆ ಊರಿಗೆ || ತಲಿಮ್ಯಾಲ ಬಿಂದಿಗೆ | ಕಾಲಾಗ ಅಂದಿಗೆ || ತುಂ ತುಮುಕು ತುಂಬಿದೆ | ಬಿಂದೀಗೆ ಅಂತಿದೆ || ಝಣ್‍ಝಣ ಅಂದಿಗೆ | ಅಂದಾವ ಹೊಂದಿಗೆ || ಸಂಜೀಯ ಜಾವಿಗೆ | ಹೋಗಿದ್ದೆ ಬಾವಿಗೆ || ” ಪು.ತಿ.ನರಸಿಂಹಾಚಾರ್ ಅವರು ಬಾವಿಯ ಮೂಲಕ ತತ್ವದರ್ಶನ ಮಾಡುತ್ತಾರೆ. ” ಬಾಯಾರಿಕೆಯೊಳು ಬೇಯುತ ಬಂದಿತು ಬುದ್ಧಿ ಎದೆಯ ಬಾವಿಯ ಬಳಿಗೆ ಹೇರಾಳದ ಕಗ್ಗತ್ತಲ ತಳದೊಳು ಅಮೃತ ರುಚಿಯ ತಿಳಿನೀರೆಡೆಗೆ “ ತರ್ಕಿಸುವ ಮನಸ್ಸು ಚಿಂತನೆಯ ಬೆಂಕಿಯಲ್ಲಿ ಕಾದು, ಬಾಯಾರಿ ಬರುವುದು ಎದೆಯ ಬಾವಿಯ ಬಳಿಗೆ. ಕಾವ್ಯದ ಭಾಷೆಯಲ್ಲಿ, ಎದೆ ಎಂದರೆ ಭಾವ, ಕಲ್ಪನ , ಪ್ರೀತಿ. ಆ ಬಾವಿಯ ತಳದಲ್ಲಿದೆ ತಿಳಿಯಾದ ನೀರು, ತಿಳಿವಿನ ನೀರು. ಆ ಅರಿವಿಗೆ ಅಮೃತದ ರುಚಿಯಿದೆ, ಬುದ್ಧಿ ಕೆತ್ತುವ ಲಾಜಿಕ್ ನ ವಾಸ್ತುಶಿಲ್ಪಕ್ಕೆ ಆ ರುಚಿಯಿಲ್ಲ. ಗೋಪಾಲಕೃಷ್ಣ ಅಡಿಗರ ಕವನ, ‘ ಭೂತ’ ಎಂಬ ಕವನದಲ್ಲೂ ಬಾವಿ ಪ್ರತಿಮೆಯ ಅಪೂರ್ವ ಪ್ರಯೋಗವಿದೆ. “ಬಾವಿಯೊಳಗಡೆ ಕೊಳವೆ ನೀರು ; ಮೇಲಕ್ಕಾವಿ ; ಆಕಾಶದುದ್ದವೂ ಅದರ ಕಾರಣ ಬೀದಿ ; ಕಾರ್ಮುಗಿಲ ಖಾಲಿಕೋಣೆಯ ಅಗೋಚರ ಬಿಂದು ನವಮಾಸವೂ ಕಾವ ಭ್ರೂಣರೂಪಿ— ಅಂತರಪಿಶಾಚಿ ಗುಡುಗಾಟ, ಸಿಡಿಲಿನ ಕಾಟ— ಭೂತರೂಪಕ್ಕೆ ಮಳೆ ವರ್ತಮಾನ ; ಅಗೆದುತ್ತ ಗದ್ದೆಗಳ ಕರ್ಮಭೂಮಿಯ ವರಣ ; ಭತ್ತಗೋಧುವೆ ಹಣ್ಣುಬಿಟ್ಟ ವೃಂದಾವನ, ಗುಡಿಗೋಪುರಗಳ ಬಂಗಾರ ಶಿಖರ.” ಬಾವಿಯೊಳಗೆ ಭೂತಕಾಲದ ನೀರೊರತೆ, ವರ್ತಮಾನದಲ್ಲಿ ಆವಿ, ಮೋಡವಾಗಿ ಮಳೆ ಸುರಿಯುತ್ತೆ. ಕಾಲಾಂತರ ಮತ್ತು ರೂಪಾಂತರಗಳು ಸಮಾನಾಂತರವಾಗಿ ಸಂಭವಿಸುವ ಪ್ರಕ್ರಿಯೆ ಶುರುವಾಗುವುದು ಬಾವಿಯಿಂದ. ಬಾವಿಯ ಬಗ್ಗ ಲಂಕೇಶ್ ಅವರು ಬರೆಯುವ ಈ ಸಾಲನ್ನು ಗಮನಿಸಿ! ” ಕವಿಯ ಊರಿಗೆ ಹೋದಾಗ ಅಲ್ಲಿಯ ಬಾವಿಯಲ್ಲಿ ಪಾಚಿಗಟ್ಟಿತ್ತು” ಶಿವರುದ್ರಪ್ಪನವರು ಬಾವಿಯನ್ನು ಭಾವದ ಬಾವಿಯಾಗಿ ಕಾಣುತ್ತಾರೆ. ” ಅದೂ ಬೇಕು ಇದೂ ಬೇಕು ಎಲ್ಲವೂ ಬೇಕು ನನಗೆ. ದಾರಿ ನೂರಾರಿವೆ ಬೆಳಕಿನರಮನೆಗೆ! ಬೇಡ ನನಗೆ ಸಿದ್ಧಾಂತಗಳ ರಾದ್ಧಾಂತ; ನನಗಿಲ್ಲ, ಇದೇ ಸರಿ ಇಷ್ಟೇ ಸರಿ ಎನುವ ಪಂತ. ನಾ ಬಲ್ಲೆ, ಇವು ಎಲ್ಲ ಏರುವೆಯ ಒಂದೊಂದು ಹಂತ. ನೂರಾರು ಭಾವದ ಬಾವಿ; ಎತ್ತಿಕೋ ನಿನಗೆ ಬೇಕಾದಷ್ಟು ಸಿಹಿನೀರ. ಪಾತ್ರೆಯಾಕಾರಗಳ ಕುರಿತು ಏತಕೆ ಜಗಳ? ನಮಗೆ ಬೇಕಾದದ್ದು ದಾಹ ಪರಿಹಾರ.” ನೂರಾರು ಭಾವದ ಬಾವಿಯಿಂದ ಬೇಕಾದಷ್ಟು ಸಿಹಿನೇರನ್ನು ಎತ್ತಿಕೋ. ಯಾವ ಪಾತ್ರೆಯಲ್ಲಿ ನೀರು ತುಂಬುತ್ತೇವೋ ಆ ಪಾತ್ರೆಯ ಆಕಾರ ನೀರಿನದ್ದು!. ಸಿದ್ಧಾಂತದ ಬಂಧ ಮತ್ತು ಪೂರ್ವನಿರ್ಧಾರಿತ ಆಕಾರ, ಅಂಚುಗಳು, ಚೂಪುಗಳು ಅಗತ್ಯವೇ?. ಬಾವಿಯ ನೂರು ಭಾವಗಳ ಸಿಗಿನೀರಿನ ಮೂಲ ಉದ್ದೇಶ ಆಕಾರ ಪಡೆಯುವುದೇ? ಅಥವಾ ದಾಹ ತಣಿಸುವುದೇ?. ಹೀಗೆ ಹಲವು ಪ್ರತಿಮೆಗಳಿಗೆ ಆಕಾರ ಕೊಡುವ ಬಾವಿಯನ್ನು ವರ್ತಮಾನದ ಕವಯಿತ್ರಿ ಸ್ಮಿತಾ ಅಮೃತರಾಜ್ ಸಂಪಾಜೆ ಅವರು ತುಂಬಾ ವಿಭಿನ್ನವಾಗಿ ಕವಿತೆಗಿಳಿಸಿದ್ದಾರೆ. ** ** ** ** ಬಾವಿ ಕಟ್ಟೆ “ಗುದ್ದಿ ಗುದ್ದಿ ಆಳಕ್ಕೆ ಅಗೆದು ಸಿಕ್ಕ ಜೀವ ಜಲಕ್ಕೆ ಅತ್ತ ಇತ್ತ ಮಿಸುಕಾಡದಂತೆ ಕಟ್ಟಿದ್ದು ಕಟ್ಟೆ. ನೆಟ್ಟ ದಿಟ್ಟಿಗೆ ಒಂದು ಹಿಡಿ ಆಗಸ ಬಿಟ್ಟರೆ ಆಕೆ ತರುವ ಕೊಡದೊಂದಿಗಷ್ಟೇ ಹೇಗೋ ಬೆಳೆದದ್ದು ನಂಟು. ಅದೆಂತಹ ಆತುರ ಬಿಂದಿಗೆಗೆ ಕಂಠಕ್ಕೆ ಹಗ್ಗ ಬಿಗಿಸಿಕೊಳ್ಳುತ್ತಾ ಹಾಗೇ ಇಳಿಬಿಡುವ ಹೊತ್ತಿಗೆ ಕೈಯ ಹಿಡಿತವನ್ನೇ ಸಡಿಲಿಸಿ ರೊಯ್ಯನೆ ಡುಬುಕಿ ಹೊಡೆದಾಗ ಕೊಡ ಸೇರಿ ಜಗತ್ತು ನೋಡುವ ಕಾತರಕ್ಕೆ ಬಾವಿಯ ಮೈ ತುಂಬಾ ಅಲೆ. ಅನ್ನಕ್ಕೆ ಸಾಂಬಾರಿಗೆ ಕಾಫಿಗೆ ಚಹಕ್ಕೆ ನೀರು ಸದ್ದಿಲ್ಲದೇ ಕಲಬೆರಕೆಯಾಗುವ ಸಂಕಟಕ್ಕೆ ಕುದಿ ಮತ್ತಷ್ಟು ಹೆಚ್ಚುತ್ತಿದೆ. ಖಾಲಿಯಾಗುವ ಖುಷಿಗೆ ಕೊಡ ಇಂಚಿಂಚೇ ಮೈ ಅಲಗಿಸಿ ಕೊಳ್ಳುತ್ತಿದೆ ಇತ್ತ ಬಾವಿ ಹೆಜ್ಜೆ ಸಪ್ಪಳಕ್ಕೆ ಕಿವಿ ತಾಗಿಸಿ ಕುಳಿತಿದೆ. ಈ ಕೊಡದ ನೀರು ಗಿಡದ ಬುಡಕ್ಕೋ ಅಡುಗೆ ಮನೆಯ ವ್ಯಂಜನಕ್ಕೋ? ಕುತೂಹಲ ತಣಿದ ದಿನ ಕಣ್ಣು ಹೊಳಪು ಕಳೆದುಕೊಂಡು ಬಿಡುತ್ತದೆ. ಮತ್ತೆ ಕೊಡ ತುಂಬಿಕೊಳ್ಳುತ್ತಿದೆ ಡುಬು ಡುಬು ಎದೆಬಡಿಯುವ ಒಡಲಾಳದ ಸದ್ದು ಎಲ್ಲಿಯದ್ದು .? ಬಿಂದಿಗೆಯದ್ದಾ..? ಬಾವಿಯದ್ದಾ..? ಅರೆ! ನನ್ನೆದೆಯೇಕೆ ಹೀಗೆ ಬಡಿದುಕೊಳ್ಳುತ್ತಿದೆ ಈ ಹೊತ್ತು .” ** ** ** ** ಬಾವಿ ತೋಡುವ ಕಠಿಣ ಕೆಲಸ ಮಾಡಿ,ಸಿಕ್ಕಿದ ನೀರು ಹೊರಗೆ ಹರಿಯಬಾರದಲ್ಲಾ. ಅದನ್ನು ಹರಿಯದಂತೆ ಬಂಧಿಸಲು ಬಾವಿಗೆ ಕಟ್ಟೆ ಕಟ್ಟಬೇಕು. ಬಾವಿ, ನೀರು, ಕಟ್ಟೆ ಇವುಗಳು ಏನನ್ನು ಪ್ರತಿನಿಧಿಸುತ್ತವೆ? ಓದುಗರಿಗೆ ಬಿಡುವೆ. ಈ ಕವಿತೆಯಲ್ಲಿ, ಬಾವಿ ಮತ್ತು ಬಿಂದಿಗೆ ಎರಡು ಪ್ರಮುಖ ಪಾತ್ರಗಳು. ಅವುಗಳು ಪರಸ್ಪರ ಸಂವಾದಿಸುತ್ತಾ ಕವಿತೆ ಸಾಗುತ್ತೆ. ಬಾವಿ ಆಗಸದತ್ತ ಕಣ್ಣು ನೆಟ್ಟರೆ ಅದಕ್ಕೆ ಕಾಣಸಿಗುವುದು ತುಂಡು ಆಗಸ ಮಾತ್ರ. ಬಾಹ್ಯಪ್ರಪಂಚಕ್ಕೆ ಅದರ ಸಂಬಂಧ ಹೊಂದಿಸುವುದು ಬಿಂದಿಗೆಯೇ. ಅಷ್ಟೇ ಪ್ರೀತಿ, ಆತುರ ಬಿಂದಿಗೆಗೆ. ಬಾವಿಯನ್ನು ಹೇಗೆ ಕಟ್ಟೆ ಬಂದಿಯಾಗಿಸಿದೆಯೋ, ಹಾಗೆಯೇ ಬಿಂದಿಗೆಯ ಕೊರಳಿಗೆ ಹಗ್ಗ ಬಿಗಿದಿದೆ. ಬಾವಿಯ ನೀರಿನ ಜತೆಗೆ ಬಿಂದಿಗೆಯ ಸಮಾಗಮ, ಪ್ರೇಮಜಲ ಸಿಂಚನ, ಸ್ಪರ್ಶದ ಪುಳಕ, ಅಲೆ ಎಲ್ಲವೂ ಇದೆ. ಹಾಗೆ ತುಂಬಿದ ಕೊಡ, ಬಾವಿಯಿಂದ ಹೊರಬಂದ ನಂತರವೂ ಸ್ವತಂತ್ರವಲ್ಲ, ಅದರೊಳಗಿನ ನೀರು, ಅನ್ನಕ್ಕೆ, ಸಾಂಬಾರಿಗೆ ಉಪಯೋಗವಾಗುತ್ತೆ. ಇಲ್ಲಿ ಕವಯಿತ್ರಿ ‘ಕಲಬೆರಕೆ’ ಪದ ಪ್ರಯೋಗ ಮಾಡಿದ್ದಾರೆ. ನೀರಿನ ಇಚ್ಛೆ ಸಾಂಬಾರು ಆಗುವುದು ಅಂತಿಲ್ಲ. ತಿಳಿಯಾದ ನೀರು ಸಾಂಬಾರ್ ಆದಾಗ ಅದೂ ಕಲಬೆರಕೆಯೇ. ರುಚಿಹಿಡಿದ ಆಸ್ವಾದಕನಿಗೆ ಸಾಂಬಾರ್ ರುಚಿ, ತಿಳಿಯಾಗಿದ್ದ ನೀರಿನ, ಬಾವಿಯ ಫ್ರೇಮ್ ಆಫ್ ರೆಫರೆನ್ಸ್ ನಲ್ಲಿ ಅದು ಕಲಬೆರಕೆ. ಬಿಂದಿಗೆ ತುಂಬಿದ್ದ ನೀರನ್ನು ಹೊಯ್ದಂತೆ, ಖಾಲಿಯಾಗುವ ಅನುಭವ ಕೂಡಾ ಒಂದು ಅನೂಹ್ಯ ಪ್ರಕ್ರಿಯೆಯ ಪ್ರತಿಮೆಯೇ. ಕವಿತೆಯ ಕೆಳಗಿನ ಸಾಲುಗಳು ಖಂಡಿತಾ ಹಿಂದಿ ಶಾಯರಿಗಳಲ್ಲಿ ಕಾಣಸಿಗುವ ಪಂಚ್ ಲೈನ್ ಗಳು. ” ಮತ್ತೆ ಕೊಡ ತುಂಬಿಕೊಳ್ಳುತ್ತಿದೆ ಡುಬು ಡುಬು ಎದೆಬಡಿಯುವ ಒಡಲಾಳದ ಸದ್ದು ಎಲ್ಲಿಯದ್ದು .? ಬಿಂದಿಗೆಯದ್ದಾ..? ಬಾವಿಯದ್ದಾ..? ಅರೆ! ನನ್ನೆದೆಯೇಕೆ ಹೀಗೆ ಬಡಿದುಕೊಳ್ಳುತ್ತಿದೆ ಈ ಹೊತ್ತು .” ಅಂದರೆ ಬಾವಿ, ಕೊಡ, ಬಾವಿಯೊಳಗಿನ ನೀರು, ಸಮಾನಾಂತರವಾಗಿ ನಡೆಯುವ ಒಡಲಾಳದ ಸದ್ದು ಮತ್ತು ಎದೆ ಬಡಿತ, ಕವಿತೆಯ ಮೇಲಿನ ಅಷ್ಟೂ ಸಾಲುಗಳಿಗೆ ಒಂದು ಇತ್ಯಾತ್ಮಕ ಅರ್ಥದತ್ತ ಮಾರ್ಗ ಸೂಚಿಯಾಗುತ್ತವೆ. ಸದಾ ಹೊರಜಗತ್ತಿನತ್ತ ಸಂಬಂಧ ಬೆಳೆಸುವ ಹಂಬಲ, ಕಾತರ,ಹಸಿವು ಬಾವಿಗಿದೆ. ತಿಳಿಯಾದ ಸ್ವಂತಿಕೆ ಸಮಾಜದ ಅಳವಡಿಕೆಯಲ್ಲಿ ಕಲಬೆರಕೆಯಾಗುವ ನೋವಿದೆ. ಅದು ತನ್ನ ಇಚ್ಛೆಗೆ ವಿರುದ್ಧವಾಗಿ ನಡೆಯುವ ಅಸಹನೆಯೂ ಇದೆ. ಒಡಲಾಳದ ಪ್ರೀತಿಯನ್ನು ಬಿಂದಿಗೆಯಲ್ಲಿ ಮೊಗೆ ಮೊಗೆದು ಕೊಡುವಾಗ ತುಂಬುವ ಖುಷಿಯೂ, ಹಂಚುವಾಗಿನ ಖಾಲಿಯಾಗುವ ಸಂತೃಪ್ತಿಯೂ ಕವಿತೆಯಲ್ಲಿ ಕಾಣಿಸುತ್ತೆ.
ಅಂಕಣ ಬರಹ ಕಣ್ಣು-ಕಣ್ಕಟ್ಟು ರೋಣ ತಾಲೂಕಿನ ಗಜೇಂದ್ರಗಡಕ್ಕೆ ಗೆಳೆಯರ ಭೇಟಿಗೆಂದು ಹೊರಟಿದ್ದೆ. ಹಾದಿಯಲ್ಲಿ ಯಲಬುರ್ಗಾ ತಾಲೂಕಿನ ಪುಟ್ಟಹಳ್ಳಿ ನೆಲಜೇರಿ ಎಡತಾಕಿತು. ಗೋಧಿ ಉಳ್ಳಾಗಡ್ಡೆ ಸುರೇಪಾನ ಮೆಣಸು ಮೊದಲಾಗಿ ಮಳೆಯಾಶ್ರಯದ ಪೀಕು ತೆಗೆಯುವ ಎರೆಸೀಮೆಯಿದು. ಹೆಚ್ಚಿನ ತರುಣರು ಕೊಪ್ಪಳದ ಬಗಲಲ್ಲಿ ಬೀಡುಬಿಟ್ಟಿರುವ ಉಕ್ಕಿನ ಕಾರ್ಖಾನೆಗಳಿಗೆ ದಿನಗೂಲಿಗಳಾಗಿ ಹೋಗುತ್ತಾರೆ. ನೆಲಜೇರಿ ಆರ್ಥಿಕವಾಗಿ ಬಡಕಲಾದರೂ ಸಾಂಸ್ಕøತಿಕವಾಗಿ ಸಮೃದ್ಧ ಹಳ್ಳಿ. ಈ ವೈರುಧ್ಯ ಉತ್ತರ ಕರ್ನಾಟಕದ ಬಹಳಷ್ಟು ಹಳ್ಳಿಗಳ ಲಕ್ಷಣ. ನೆಲಜೇರಿಯ ತಟ್ಟಿ ಹೋಟೆಲಿನಲ್ಲಿ ಚಹಾಪಾನ ಮಾಡುತ್ತ ಇಲ್ಲಿ ಯಾರಾದರೂ ಜನಪದ ಗಾಯಕರು ಇದ್ದಾರೆಯೇ ಎಂದು ಕೇಳಿದೆ. ಅಲ್ಲೊಬ್ಬ ಮೂಲೆಯಲ್ಲಿ ಟೀಯನ್ನೂ ಬೀಡಿಯನ್ನೂ ಒಟ್ಟಿಗೆ ಸವಿಯುತ್ತ ಕಾಲುಚಾಚಿ ಕುಳಿತವನು ಅವಸರವಿಲ್ಲದ ದನಿಯಲ್ಲಿ `ಅದಾನಲ್ಲ ಅಂದಾನಪ್ಪ. ರಿವಾಯತ್ ಪದ ಜಗ್ಗಿ ಹಾಡ್ತಾನ’ ಎಂದನು. ಅಂದಾನಪ್ಪನವರನ್ನು ನೋಡೋಣವೆಂದು ಮನೆಗೆ ಹೋದರೆ ಹೊಲಕ್ಕೆ ಹೋಗಿದ್ದರು. ಅವರು ಬರುವವರೆಗೆ ಜಗುಲಿಯಲ್ಲೇ ಬೀಡುಬಿಟ್ಟೆ. ಒಕ್ಕಲುತನದ ಹಳೇ ಮಾಳಿಗೆಮನೆ. ಹೊರಬಾಗಿಲ ಆಜುಬಾಜು ದೊಡ್ಡದಾದ ಎರಡು ಜಗುಲಿ. ಅವುಗಳ ಮೇಲೆ ಚೀಲಗಳಲ್ಲಿ ದವಸ. ಅವುಗಳ ಬದಿಗೆ ಕೌದಿಹಾಸಿ ದಿಂಬಿಟ್ಟು ಯಜಮಾನ ಕೂರಲು ಸಿದ್ಧಗೊಳಿಸಿದ ಆಸನ. ಗೋಡೆಯ ಮೇಲೆ ದಿವಂಗತರಾದ ಕುಟುಂಬದ ಹಿರಿಯರ ಪಟಗಳು. ಅವಕ್ಕೆ ಹುಲಿಯು ಪಂಜದಿಂದ ಗೆಬರಿದಂತೆ ಎಳೆದಿರುವ ವಿಭೂತಿ ಪಟ್ಟೆ. ಮನೆಯೊಳಗೆ ಇಣುಕಿದರೆ, ಸಿನುಗು ವಾಸನೆಯ ದನದ ಕೊಟ್ಟಿಗೆ. ತಾಯಿ ಮೇಯಲು ಹೋಗಿರುವುದರಿಂದ ಒಂಟಿಯಾಗಿದ್ದು ಅಂಬಾ ಎನ್ನುತ್ತಿರುವ ಎಳೆಗರು. ಅಟ್ಟಕ್ಕೆ ಕಟ್ಟಿರುವ ಉಳ್ಳಾಗಡ್ಡಿ ಬೆಳ್ಳುಳ್ಳಿ ಸಿವುಡು; ಒಣಗಿದ ಹೀರೇಕಾಯಿ ಗೊಂಚಲು. ಕೊಟ್ಟಿಗೆಯ ಬಳಿಕ ತುಸು ಎತ್ತರದಲ್ಲಿ ಮಬ್ಬು ಬೆಳಕಿನಲ್ಲಿ ಕಾಣುವ ಉಣ್ಣುವ ಜಗುಲಿ. ನಂತರ ಹೊಗೆಯಿಂದ ಕಪ್ಪಗಾಗಿ ಇದ್ದಬದ್ದ ಬೆಳಕನೆಲ್ಲ ಕುಡಿದು ಮತ್ತಷ್ಟು ಕತ್ತಲಾಗಿರುವ ಅಡುಗೆಕೋಣೆ. ಹೀಗೆ ಪಂಚೇಂದ್ರಿಯಗಳಿಗೆ ಕೆಲಸ ಹಚ್ಚಿ ಆರಾಮಾಗಿ ಕೂತಿರುವಾಗ ಅಂದಾನಪ್ಪನವರ ಸವಾರಿ ಬಂತು. ಆರಡಿ ಎತ್ತರದ 75 ವರ್ಷದ ಹಿರಿಯ. ದಪ್ಪನೆಯ ಬಿಳಿಪಟಗ ಎದ್ದು ಕಾಣುತ್ತಿತ್ತು. ಕೈಬೆರಳು ಕುಷ್ಠದಿಂದ ಕರಗಿಹೋಗಿದ್ದರೂ ಮೋಟು ಬೆರಳಲ್ಲಿ ಸೈಕಲ್ ಹ್ಯಾಂಡಲನ್ನು ಹಿಡಿದು, ಬೀದಿಗೆ ಬೈತಲೆ ತೆಗೆದಂತೆ ಹರಿದ ಬಚ್ಚಲು ನೀರಿನ ಅಂಕುಡೊಂಕುಗಳಲ್ಲಿ ಬೀಳದಂತೆ ಸವಾರಿಸುತ್ತ ಬಂದರು. ಅಂಗಳದಲ್ಲಿ ನಿಂತ ಕಾರು ಅವರಿಗೆ ಗಲಿಬಿಲಿ ತಂದಂತಿತ್ತು. ನಮಸ್ಕಾರ ಮಾಡಿ ಭೇಟಿಯ ಉದ್ದೇಶ ತಿಳಿಸಿದೆ. ತನ್ನ ಹಾಡುಪ್ರತಿಭೆಗೆ ಪರಸ್ಥಳದ ಜನ ಬಂದಿರುವುದು ಅರಿತು ಮುಖದಲ್ಲಿ ಅಭಿಮಾನ ಮೂಡಿದಂತೆ ತೋರಿತು. ಲಗುಬಗೆಯಿಂದ ಅಡುಗೆ ಮನೆಯೊಳಗೆ ನುಗ್ಗಿ ಬಿಸಿರೊಟ್ಟಿ ಮಾಡಲು ಹೇಳಿದರು. ದೊಡ್ಡ ಚರಿಗೆಯಲ್ಲಿ ಮುಂಜಾನೆಯಷ್ಟೆ ಕಡೆದ ಮಜ್ಜಿಗೆ ತಂದುಕೊಟ್ಟರು. ಹಳತಾದ ನೋಟುಬುಕ್ಕನ್ನು ನಾಗಂದಿಯ ಮೇಲಿಂದ ತೆಗೆದು, ಧೂಳು ಝಾಡಿಸಿ, ಅದರಲ್ಲಿದ್ದ ರಿವಾಯತ್ ಪದವನ್ನು ಹಾಡಲು ಶುರುಮಾಡಿದರು. ಅವರ ಭಾರಿಕಾಯದೊಳಗೆ ಈ ಹೆಣ್ದನಿ ಹೇಗಾದರೂ ಅಡಗಿಕೊಂಡಿದೆಯೊ ಎಂದು ಅಚ್ಚರಿಸುತ್ತಿದ್ದ ನನಗೆ ಪೈಲವಾನರಂತಿರುವ ಬಡೇಗುಲಾಮಲಿ ಖಾನರು ಜೇನಲ್ಲಿ ಅದ್ದಿತೆಗೆದಂತೆ ಹಾಡಿದ `ಕ್ಯಾಕರ್ಞೂ ಸಜನೀ ಸಾಜನ್ ನ ಆವೆ’ ಠುಮ್ರಿಯ ನೆನಪಾಯಿತು. ರಿವಾಯತ್ ಹಾಡಿಕೆಯಲ್ಲಿ ಹಿಮ್ಮೇಳವಿದ್ದರೇ ಚಂದ. ಒಂಟಿದನಿ ಬೇಗ ದಣಿಯುತ್ತದೆ. ಅಂದಾನಪ್ಪ ಎರಡು ಹಾಡಿಗೆ ನಿಲ್ಲಿಸಿದರು. ಕೆಲವೇ ತಿಂಗಳುಗಳಲ್ಲಿ ತಮ್ಮೂರಿನಲ್ಲಿ ರಾಜಪ್ಪಸ್ವಾಮಿಯ ಉರುಸು ನಡೆಯಲಿದೆಯೆಂದೂ, ಅಲ್ಲಿ ಕೊಪ್ಪಳ ಸೀಮೆಯ ಬಹುತೇಕ ಗಾಯಕರು ಸೇರುವರೆಂದೂ ಆಗ ಖಂಡಿತ ಬರಬೇಕೆಂದೂ ತಿಳಿಸಿದರು. ಇದಾದ ಐದಾರು ತಿಂಗಳಿಗೆ ಅಂದಾನಪ್ಪನವರ ಫೋನು ಬಂತು. ಉರುಸು ಫಲಾನೆ ದಿನವಿದೆಯೆಂದೂ ತಪ್ಪದೇ ಬರಬೇಕೆಂದೂ ಊಟ ವಸತಿಗೆ ಚಿಂತೆ ಮಾಡಬಾರದೆಂದೂ ತಿಳಿಸಿದರು. ಸ್ಕೂಟರಿನಲ್ಲಿ ಹೋದೆ. ಸಂಜೆಯಾಗಿತ್ತು. ಸುತ್ತಮುತ್ತಲ ಗ್ರಾಮದವರು ಓದಿಕೆ ಮಾಡಿಸಿಕೊಂಡು ಕೈಯಲ್ಲಿ ವಸ್ತ್ರಹೊದಿಸಿದ ಪ್ರಸಾದದ ತಟ್ಟೆ ಹಿಡಿದು ಗುಂಪಾಗಿ ಮನೆಗೆ ಮರಳುತ್ತಿದ್ದರು. ಅಂದಾನಪ್ಪ, ಹೆಸರಿಗೆ ತಕ್ಕಂತೆ ಅನ್ನದಾನಿ. ಶಿಷ್ಯನ ಮನೆಯಲ್ಲಿ ಬಿಸಿರೊಟ್ಟಿ ಮೊಸರು ಬದನೆಪಲ್ಯ ಮಾಲ್ದಿಯಿರುವ ಊಟ ಹಾಕಿಸಿದರು. ರಾತ್ರಿ ಹತ್ತಕ್ಕೆ ಮೆರವಣಿಗೆ ಕುರುಬರ ಮನೆಯಿಂದ ರಾಜಪ್ಪನ ದರ್ಗಾಕ್ಕೆ ಹೊರಟಿತು. ಅದರ ಮುಂದೆ ಮನೆಯ ಹಿರೀಕರೊಬ್ಬರು ಮೈದುಂಬಿದ್ದರು. ಅವರ ಜತೆ ಬೇಡ ಸಮುದಾಯಕ್ಕೆ ಸೇರಿದ ಹನುಮಂತದೇವರ ಗುಡಿಯ ಪೂಜಾರಿ ಜತೆಗೂಡಿದನು. ಮೆರವಣಿಗೆಯಲ್ಲಿ ಮುಸ್ಲಿಮರನ್ನೂ ಒಳಗೊಂಡಂತೆ ಊರಿನ ಎಲ್ಲ ಜಾತಿ ಸಮುದಾಯಗಳಿಗೆ ಸೇರಿದ್ದರು. ಅಂದಾನಪ್ಪನವರು ದೊಡ್ಡದೊಂದು ಕೋಲಿನ ತುದಿಗೆ ಹಾಡುಗಾರರಿಗೆ ಕೊಡುವ ಬಹುಮಾನದ ಬೆಳ್ಳಿಬಳೆಗಳನ್ನು ಸಿಕ್ಕಿಸಿಕೊಂಡು ಮುಂಚೂಣಿಯಲ್ಲಿದ್ದರು. ಮೆರವಣಿಗೆ ಹಿಂಭಾಗದಲ್ಲಿ `ಕಂದೂರಿ’ಗೆ ಬಲಿಯಾಗಲಿರುವ ಕುರಿಗಳನ್ನು ಹಿಡಿದುಕೊಂಡು ಬರುತ್ತಿದ್ದ ಭಕ್ತರ ಸೈನ್ಯವೇ ಇತ್ತು.ಊರಹೊರಗೆ ದೊಡ್ಡ ಬಯಲಿನಲ್ಲಿ ಮರಗಳ ಗುಂಪಿನ ನಡುವೆ ರಾಜಪ್ಪಜ್ಜನ ಸಮಾಧಿಯಿದೆ. ಅದು ಸೂಫೀ ಗೋರಿಯಂತೆ ಉತ್ತರ ದಕ್ಷಿಣಮುಖಿಯಾಗಿದೆ. ಒಬ್ಬ ಮುಜಾವರ್ ಅಲ್ಲಿ ಫಾತೆಹಾ ನೆರವೇರಿಸುತ್ತಿದ್ದನು. ರಾಜಪ್ಪಜ್ಜನ ಪುಣ್ಯತಿಥಿಗೆ `ಉರುಸು’ ಎಂದು ಕರೆಯುವುದರಿಂದ, ಇದು ಸೂಫಿಸಂತನಿಗೆ ಸಂಬಂಧಪಟ್ಟಿದ್ದು ಎಂದು ನನ್ನ ಊಹೆಯಾಗಿತ್ತು. ಆದರೆ ರಾಜಪ್ಪಜ್ಜ ಎಂಬತ್ತು ವರ್ಷಗಳ ಹಿಂದೆ ಬದುಕಿದ್ದ ಆರೂಢನಾಗಿದ್ದರು. ಹಿಂದುಳಿದ ಜಾತಿಗೆ ಸೇರಿದ್ದ ಆತನ ಶಿಷ್ಯರಲ್ಲಿ ಹೆಚ್ಚಿನವರು ದಲಿತರಾಗಿದ್ದು, ಅವರ ಸಮಾಧಿಗಳು ಆಸುಪಾಸಿನಲ್ಲಿದ್ದವು. ರಾಜಪ್ಪಜ್ಜನ ಸಮಾಧಿ ಪೌಳಿದ್ವಾರದಲ್ಲಿ ಮೊಹರಂ ಚಿಹ್ನೆಗಳಾದ ಹುಲಿ ಹಾಗೂ ಹಸ್ತದ ಚಿತ್ರಗಳೂ ಇವುಗಳ ಜತೆ ಗಣಪತಿ ಹಾಗೂ ಹನುಮಂತನ ಚಿತ್ರಗಳೂ ಬರೆಯಲ್ಪಟ್ಟಿದ್ದವು. ಅಂದು ನಡೆಯಲಿದ್ದ ರಿವಾಯತ್ ಪದಗಳ ಹಾಡಿಕೆ ಸಹ ಮೊಹರಂ ಸಂಪ್ರದಾಯಕ್ಕೆ ಸೇರಿತ್ತು. ರಾತ್ರಿ ಹತ್ತರ ಸುಮಾರಿಗೆ ಗಾಯಕರು ಕಲೆತರು. ಕಂಬಕ್ಕೆ ಕಟ್ಟಿದ ಮೈಕಿನ ಸುತ್ತ ಗಾಯಕರು ತಮ್ಮ ಮೇಳದ ಜತೆ ಪ್ರದಕ್ಷಿಣೆ ಹಾಕುತ್ತ ಹಾಡಿದರು. ಹಾಡಿಕೆ ಬೆಳಗಿನ ಜಾವಕ್ಕೆ ಮುಗಿಯಿತು. ಚೀಲ ಚಾಪೆ ಹಾಸಿಕೊಂಡು ಕೌದಿ ಹೊದ್ದು ಕುಳಿತ ಜನ ಕೇಳಿತು. ಗಾಯಕರನ್ನು ಹಾಡಲು ಕರೆಯುವುದು, ಚೆನ್ನಾಗಿ ಹಾಡಿದಾಗ ಉತ್ತೇಜಿಸುವುದು, ಗೆದ್ದವರಿಗೆ ಬೆಳ್ಳಿಯ ಬಳೆ ಬಹುಮಾನವಾಗಿ ಕೊಡುವುದು ಮುಂತಾದ ಕಾರ್ಯಗಳನ್ನು ಅಂದಾನಪ್ಪ ಹರೆಯದವರಂತೆ ಓಡಾಡುತ್ತ ಮಾಡಿದರು. ಉರುಸಿನ ವಿಶೇಷ `ಕಂದೂರಿ’ ಎನ್ನಲಾಗುವ ಮಾಂಸದೂಟ. ರಾತ್ರಿ ಹತ್ತರ ಸುಮಾರಿಗೆ ಮೆರವಣಿಗೆಯಲ್ಲಿ ಆಗಮಿಸಿದ್ದ ಕುರಿಗಳನ್ನು ಮುಲ್ಲಾ ಹಲಾಲ್ ಮಾಡಿದನು. ಅವನ್ನು ಜನ ಬೀಡುಬಿಟ್ಟಲ್ಲೆ ದೊಂದಿಯ ಗ್ಯಾಸ್‍ಲೈಟಿನ ಬೆಳಕಲ್ಲಿ ಹಸಿಗೆ ಮಾಡಿದರು. ನಡುರಾತ್ರಿಯ ಹೊತ್ತಿಗೆ ಅಡುಗೆ ಶುರುವಾಯಿತು. ಇಡೀ ಬಯಲು ಒಲೆಗಳ ಬೆಂಕಿಯಿಂದ ಬೀಡುಬಿಟ್ಟ ಸೈನಿಕ ಶಿಬಿರವಾಯಿತು. ಬೆಳಗಿನ ಜಾವ ಪೂಜಾರಿ ಮೈದುಂಬಿ ವರ್ಷದ ಮಳೆಬೆಳೆಯ ಕಾರ್ಣೀಕ ಹೇಳಿದನು. ಇದಾದ ಬಳಿಕ ಊಟ ಶುರು. ಜಾತ್ರೆಗೆ ಬಂದವರನ್ನು ಎಲ್ಲರೂ ಕರೆದು ಉಣ್ಣಿಸುವವರೇ. ಮಾಡಿದ ಅಡುಗೆ ಬೆಳಕು ಕಣ್ಬಿಡುವ ಮೊದಲು ಖಾಲಿಯಾಗಬೇಕು. ಮನೆಗೆ ಒಯ್ಯುವಂತಿಲ್ಲ. ಊಟದ ಜತೆ ಉರುಸು ಮುಕ್ತಾಯ ಕಂಡಿತು. ಜನ ಟಂಟಂ, ಬಂಡಿಗಳಲ್ಲಿ ಊರುಗಳಿಗೆ ತೆರಳಿದರು. ಬಿಸಿಲೇರುವ ಹೊತ್ತಿಗೆ ದರ್ಗಾ ನಿರ್ಜನವಾಯಿತು. ನೇಲಜೇರಿಯಲ್ಲಿ ಉರಿಸಿದೆ, ಸೂಫಿ ಪರಂಪರೆಯಿಲ್ಲ; ರಿವಾಯತ್ ಹಾಡಿನ ಪರಂಪರೆಯಿದೆ, ಮೊಹರಂ ಅಲ್ಲ; ಮುಸ್ಲಿಮರ ಭಾಗವಹಿಸುವಿಕೆಯಿದೆ, ಸಾಂಪ್ರದಾಯಿಕ ಇಸ್ಲಾಮಲ್ಲ; ಹತ್ತಕ್ಕೆ ಒಂಬತ್ತರÀಷ್ಟು ಹಿಂದುಗಳ ಭಾಗವಹಿಸುವಿಕೆಯಿದೆ, ಜಾತ್ರೆಯಲ್ಲ; ಅವಧೂತ ಪರಂಪರೆಯ ಲಕ್ಷಣಗಳಿವೆ, ಗುರುದೀಕ್ಷೆ ಕೊಡುವ ಪದ್ಧತಿಯಿಲ್ಲ; ಹಾಗಾದರೆ ಇದನ್ನು ಯಾವ ಧರ್ಮ ಅಥವಾ ಪಂಥದ ಚೌಕಟ್ಟಿನಲ್ಲಿಟ್ಟು ನೋಡುವುದು? ನಿರ್ದಿಷ್ಟ ಚೌಕಟ್ಟಿನಲ್ಲಿಟ್ಟು ನೋಡುವ ಅಥವಾ ಅದಕ್ಕೆ ಹೆಸರು ಕೊಡುವ ತುರ್ತು ಉರುಸಿನಲ್ಲ್ಲಿ ಭಾಗವಹಿಸಿದ ಯಾರಲ್ಲೂ ಇರಲಿಲ್ಲ. ಅವರಿಗೆ ತಾವು ಮಾಡುವ ಉರುಸು, ಹಾಡುವ ಹಾಡು, ಉಣ್ಣುವ ಊಟ ಯಾವ ಧರ್ಮಕ್ಕೆ ಸಂಬಂಧಿಸಿದವು ಎಂಬುದು ಪ್ರಶ್ನೆಯಾಗಿ ಕಾಡದಿರುವಾಗ, ನನಗೇಕೆ ಚೌಕಟ್ಟಿನ ಪ್ರಶ್ನೆ ಕಾಡುತ್ತಿದೆ? ಯಾವುದೇ ಧಾರ್ಮಿಕ ಆಚರಣೆಯನ್ನು ಈಗಾಗಲೇ ನಿರ್ವಚನಗೊಂಡಿರುವ ಜಾತಿ ಧರ್ಮ ಇಲ್ಲವೇ ಪಂಥದ ಚೌಕಟ್ಟಿನಲ್ಲಿ ಇಟ್ಟುನೋಡಬೇಕು ಎಂಬುದು ನನ್ನ ಬೌದ್ಧಿಕ ತುರ್ತೇ? ನೆಲಜೇರಿಯ ಉರುಸು ತನಗೆ ತಾನೇ ಸ್ಥಳೀಯವಾಗಿ ರೂಪುಗೊಂಡಿರುವ ಜನತೆಯ ಧರ್ಮ. ಇದರಲ್ಲಿ ಸೂಫಿಗಳ ಅವಧೂತರ ಮೊಹರಮ್ಮಿನ ಇಸ್ಲಾಮಿನ ಚಹರೆಗಳೆಲ್ಲ ಸಹಜವಾಗಿ ಒಗ್ಗೂಡಿವೆ. ಇಂತಹ ಅನೇಕ ತಾಣ ಮತ್ತು ಸಮುದಾಯಗಳು ನಾಡಲ್ಲಿವೆ. ಈ ಲೋಕಗಳನ್ನು ಅರಿಯಲು ಸದ್ಯ ಚಾಲ್ತಿಯಲ್ಲಿರುವ ಚೌಕಟ್ಟು ಸಾಲುವುದಿಲ್ಲ. ರಾಜಕೀಯವಾಗಿ ಧರ್ಮವನ್ನು ನೋಡಲು ರೂಪುಗೊಂಡಿರುವ ಕಣ್ಕಟ್ಟುಗಳಂತೂ ಯಾತಕ್ಕೂ ಬಾರವು. ಈ ಲೋಕಗಳನ್ನು ನೋಡಲು ತೆರೆದಮನಸ್ಸಿನ ಕಣ್ಣನ್ನು ಪಡೆದುಕೊಳ್ಳುವ ಅಗತ್ಯವಿದೆ. ಹಿಂದೆ ಕಲಿತಿದ್ದನ್ನು ಮಾತ್ರ ನೋಡುವ ಕಣ್ಕಟ್ಟುಗಳನ್ನಲ್ಲ. ಹಂಪಿಗೆ ತೆರಳುವ ಮುನ್ನ ಅಂದಾನಪ್ಪನವರಿಗೆ ವಿದಾಯ ಹೇಳಲೆಂದು ಹುಡುಕಿದೆ. ಜಂಗುಳಿಯಲ್ಲಿ ಸಿಗಲಿಲ್ಲ. ಅವರ ಮನೆಗೆ ಬಂದು ಕೇಳಿದೆ. ಅಷ್ಟುಹೊತ್ತಿಗೆ ಅವರು ಸೈಕಲ್ ಹತ್ತಿ ಹೊಲಕ್ಕೆ ಹೋಗಿಬಿಟ್ಟಿದ್ದರು. **************************** ರಹಮತ್ ತರೀಕೆರೆ ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ
ಅಂಕಣ ಬರಹ ಫ್ರಾಂಕಿನ್‌ಸ್ಟೆನ್ ಫ್ರಾಂಕಿನ್‌ಸ್ಟೆನ್ಮೂಲ ಇಂಗ್ಲಿಷ್ : ಮೇರಿ ಷೆಲ್ಲಿ ಕನ್ನಡಕ್ಕೆ : ಶ್ಯಾಮಲಾ ಮಾಧವಪ್ರ : ಅಂಕಿತ ಪುಸ್ತಕಪ್ರಕಟಣೆಯ ವರ್ಷ :೨೦೦೭ ಅನುವಾದಕ್ಕಾಗಿ ಸದಾ ಇಂಗ್ಲಿಷ್ ಕ್ಲಾಸಿಕ್‌ಗಳನ್ನೇ ಆರಿಸಿಕೊಳ್ಳುವ ಶ್ಯಾಮಲಾ ಮಾಧವ ಅವರು ಸಾರ್ವಕಾಲಿಕ ಪ್ರಸ್ತುತಿಯುಳ್ಳ ಮೇರಿ ಷೆಲ್ಲಿಯ ‘ಫ್ರಾಂಕಿನ್‌ಸ್ಟೆöನ್’ ಎಂಬ ಅದ್ಭುತ ವಸ್ತುವುಳ್ಳ ಕಾದಂಬರಿಯನ್ನು ಅನುವಾದಿಸಿದ್ದಾರೆ. ನಿಸರ್ಗ ನಿಯಮಗಳ ವಿರುದ್ಧ ಹೋಗುವ ಅಹಂಕಾರವನ್ನು ಮನುಷ್ಯ ತೋರಿಸಿದರೆ ಪರಿಣಾಮವೇನಾಗಬಹುದು ಎಂಬ ವಿಷಯದ ಕುರಿತುಳ್ಳ ಈ ಕಾದಂಬರಿತನ್ನ ನಿರೂಪಣೆಗೆ ಫ್ಯಾಂಟಸಿ ಶೈಲಿಯನ್ನು ಆಯ್ದುಕೊಂಡಿದೆ ಮಾತ್ರವಲ್ಲದೆ ಅದು ಒಂದು ಭಯಾನಕ ವಾತಾವರಣವನ್ನೂ ಸೃಷ್ಟಿಸುತ್ತದೆ. ಹಿಮಾಚ್ಛಾದಿತ ಉತ್ತರ ಧ್ರುವದತ್ತ ಅನ್ವೇಷಕನಾಗಿ ಸಾಹಸ ಯಾತ್ರೆ ಕೈಗೊಳ್ಳುವ ವಾಲ್ಟನ್ ತನ್ನ ಪ್ರಿಯ ಸೋದರಿ ಮಾರ್ಗರೆಟ್‌ಗೆ ಬರೆಯುವ ಪತ್ರಗಳೇ ಇಲ್ಲಿ ಇಡೀ ಕಥೆಯನ್ನು ಹೇಳುತ್ತವೆ. ವಾಲ್ಟನ್ ಹಿಮ ಸಾಗರದಲ್ಲಿ ಭೇಟಿಯಾಗುವ ಫ್ರಾಂಕಿನ್‌ಸ್ಟೆöನ್ ಎಂಬ ವ್ಯಕ್ತಿ ಅವನಲ್ಲಿ ತನ್ನ ಭೀಭತ್ಸ ಅನುಭವಗಳನ್ನು ಹೇಳಿಕೊಳ್ಳುತ್ತಾನೆ. ಪ್ರಾಕೃತಿಕ ವಿಜ್ಞಾನದ ಅವ್ಯಕ್ತ ಸೆಳೆತಕ್ಕೊಳಗಾಗಿ ಆತ ಹಗಲು-ರಾತ್ರಿ ಪರಿಶ್ರಮ ಪಟ್ಟು ಆ ವಿಷಯದ ಆಳಕ್ಕಿಳಿದು ಅಧ್ಯಯನ ನಡೆಸಿ ಅದುವರೆಗೆ ಯಾವ ಮಾನವನೂ ಮಾಡದಿರುವ, ಮೈ ನವಿರೇಳಿಸುವ ಒಂದು ವಿಶಿಷ್ಟ ಪ್ರಯೋಗವನ್ನು ಕೈಗೊಳ್ಳುತ್ತಾನೆ. ಸತ್ತ ಮನುಷ್ಯರ ಶವಗಳಿಂದ ಪ್ರತಿಯೊಂದು ಬಿಡಿ ಭಾಗಗಳನ್ನು ತೆಗೆದು ಅವೆಲ್ಲವನ್ನೂ ಪುನಃ ಸುಸ್ಥಿತಿಯಲ್ಲಿ ಜೋಡಿಸಿ ಒಂದು ದೈತ್ಯಾಕೃತಿಯನ್ನು ನಿರ್ಮಿಸಿ ಅದರೊಳಗೆ ಜೀವ ತುಂಬುವ ಒಂದು ಭಯಾನಕ ಕೃತ್ಯವದು. ರಾಕ್ಷಸನಂತೆ ವಿಕಾರನೂ ಭಯಂಕರನೂ ಆಗಿ ಬರುವ ಆ ದೈತ್ಯ ಮುಂದೆ ಬಂದು ನಿಲ್ಲುತ್ತಲೇ ಫ್ರಾಂಕಿನ್‌ಸ್ಟೆöನ್ ಭಯಗೊಂಡು ಓಡಿ ಹೋಗಿ ತನ್ನ ಊರು ಸೇರುತ್ತಾನೆ. ಆದರೆ ಆ ದೈತ್ಯ ಅವನನ್ನು ಅಲ್ಲಿಗೂ ಬಿಡದೆ ಹಿಂಬಾಲಿಸುತ್ತಾನೆ. ತನ್ನ ಸೃಷ್ಟಿಕರ್ತನನ್ನು ತಾನು ಮುಂದೇನು ಮಾಡಬೇಕೆಂದು ಕೇಳುವ ಅವಕಾಶಕ್ಕಾಗಿ ಕಾಯುತ್ತಾನೆ. ಮನುಷ್ಯ ಸಂಪರ್ಕದಲ್ಲಿ ಇರಲು ಅವನಿಂದ ಸಾಧ್ಯವಾಗುವುದಿಲ್ಲ. ಯಾಕೆಂದರೆ ಅವನನ್ನು ಕಂಡ ಕೂಡಲೇ ಎಲ್ಲರೂ ಕಿಟಾರನೆ ಕಿರುಚಿ ಓಡಿ ಹೋಗುತ್ತಾರೆ, ಇಲ್ಲವೇ ಎಲ್ಲರೂ ಜೊತೆ ಸೇರಿ ಅವನಿಗೆ ಹೊಡೆದು ಹಿಂಸಿಸಿ ಓಡಿಸುತ್ತಾರೆ. ಹೀಗೆ ಒಂಟಿತನದ ನೋವಿನ ಕ್ಷಣಗಳಲ್ಲಿ ದೈತ್ಯನು ತನ್ನ ಸೃಷ್ಟಿಕರ್ತನ ಬಗ್ಗೆ ಸಿಟ್ಟಾಗುತ್ತಾನೆ. ಕೋಪದ ಆವೇಶದಲ್ಲಿ ಅವನು ಫ್ರಾಂಕಿನ್‌ಸ್ಟೆöನ್‌ನ ಪುಟ್ಟ ತಮ್ಮನ ಕತ್ತು ಹಿಚುಕಿ ಅವನನ್ನು ಕೊಲ್ಲುತ್ತಾನೆ. ಆ ಕುರಿತು ಫ್ರಾಂಕಿನ್‌ಸ್ಟೆöನ್ ದುಃಖಿಸುತ್ತಿರುವಾಗ ಒಂದು ದಿನ ಕಾಡು ಪ್ರದೇಶವೊಂದರಲ್ಲಿ ಅವರಿಬ್ಬರು ಭೇಟಿಯಾಗಿ ದೈತ್ಯನು ತನ್ನ ಸೃಷ್ಟಿಕರ್ತನಲ್ಲಿ ತನ್ನ ನೋವನ್ನು ತೋಡಿಕೊಳ್ಳುತ್ತಾನೆ. ತನ್ನನ್ನು ಒಂಟಿತನ ಕಾಡುತ್ತಿದೆಯಾದ್ದರಿಂದ ತನಗೆ ತನ್ನಂತಯೇ ಇರುವ ಹೆಣ್ಣು ಜೀವವೊಂದನ್ನು ಸೃಷ್ಟಿಸಿ ಕೊಡಬೇಕಾಗಿ ದೈತ್ಯನು ಕೇಳಿಕೊಳ್ಳುತ್ತಾನೆ. ಆದರೆ ಇದರಿಂದ ಮಾನವ ಸಮುದಾಯಕ್ಕೆ ಅಪಾಯವಿದೆ ಎಂಬುದನ್ನರಿತ ಫ್ರಾಂಕಿಸ್ಟೆöನ್ ಅದಕ್ಕೊಪ್ಪುವುದಿಲ್ಲ. ರೋಷಗೊಂಡ ದೈತ್ಯನು ಫ್ರಾಂಕಿನ್‌ಸ್ಟೆöನ್‌ನ ಪ್ರೀತಿಪಾತ್ರರೆಲ್ಲರನ್ನೂ ಕೊಂದು ಕೊನೆಗೆ ಅವನನ್ನೂ ಕೊಲ್ಲಲು ಹೊರಡುತ್ತಾನೆ. ಕೊನೆಯ ಹಂತದಲ್ಲಿ ವಾಲ್ಟನ್‌ನ ಮುಂದೆ ಕಾಣಿಸಿಕೊಳ್ಳುವ ಫ್ರಾಂಕಿನ್‌ಸ್ಟೆöನ್ ತಾನಿನ್ನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಹೇಳಿ ಅಲ್ಲಿಂದ ಹೊರಟು ಹೋಗುತ್ತಾನೆ. ವಿಜ್ಞಾನವನ್ನು ಒಂದು ಮಿತಿಗಿಂತ ಆಚೆ ಬಳಸುವವರಿಗೆ ತಮ್ಮ ಸಾಮಾಜಿಕ ಜವಾಬ್ದಾರಿಯ ಅರಿವು ಇರಬೇಕೆಂದು ಈ ಕಾದಂಬರಿ ಎಚ್ಚರಿಸುತ್ತದೆ. ಶ್ಯಾಮಲಾ ಅವರ ಅನುವಾದ ಆಕರ್ಷಣೀಯವಾಗಿದೆ. ********************************** “ ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ
ಅಂಕಣ ಬರಹ ಎಲ್ಲಾ ಒಳ್ಳೆಯದೇ ಆಗುತ್ತೆ… ಈ ಥರದ ಮಾತುಗಳನ್ನ ನಾವು ಬಹಳಷ್ಟು ಸಾರಿ ಕೇಳಿರ್ತೇವೆ. “ಒಳ್ಳೇವ್ರಿಗೆ ಒಳ್ಳೆಯದೇ ಆಗುತ್ತೆ”, “ನಾವು ಒಬ್ರಿಗೆ ಒಳ್ಳೇದು ಮಾಡಿದ್ರೆ ದೇವರು ನಮಗೆ ಒಳ್ಳೇದು ಮಾಡ್ತಾನೆ”, “ತಾತ ಮಾಡಿದ ಪಾಪ ಮೊಮ್ನೊಗನಿಗೆ”… ಹೀಗೆ ಹಲವಾರು ಮಾತುಗಳು… ಇವೆಲ್ಲ ಬರಿಯ ಮಾತುಗಳಲ್ಲ, ಅದೊಂದು ದೈತ್ಯ ಶಕ್ತಿಯ ನಂಬಿಕೆ, ನಮ್ಮ ಬದುಕನ್ನು ಮುನ್ನಡೆಸುವ ಶಕ್ತಿ. ನನ್ನ ತಂದೆ ಒಬ್ಬ ಪ್ರಾಮಾಣಿಕ ಹೈಸ್ಕೂಲ್ ಗಣಿತದ ಮೇಷ್ಟ್ರು. ತಮ್ಮ ವಿದ್ಯಾರ್ಥಿಗಳಿಗೆ ಸ್ವಂತ ಮಕ್ಕಳ ರೀತಿಯಲ್ಲೇ ಭಾವಿಸಿ ಪಾಠ ಹೇಳಿಕೊಟ್ಟವರು. ಅವರ ಬದುಕಿನುದ್ದಕ್ಕೂ ಅವರು ನಂಬಿದ್ದು ಒಂದೇ ಒಂದು. ನಾನು ಈ ಮಕ್ಕಳಿಗೆ ಚೆನ್ನಾಗಿ ಪಾಠ ಮಾಡಿದರೆ ದೇವರು ಮುಂದೆ ನನ್ನ ಮಕ್ಕಳನ್ನ ಚನ್ನಾಗಿಟ್ಟಿರ್ತಾನೆ ಎನ್ನುವುದು. ಅದಕ್ಕೆ ಸರಿಯಾಗಿ ನಾನು ನನ್ನ ತಮ್ಮ ಓದಿ ನೌಕರಿಗೆ ಸೇರಿದ ಮೇಲೆ ಅವರಿಗೆ ಅವರ ನಂಬಿಕೆ ಮತ್ತೂ ಬಲವಾಯ್ತು. ಆದರೆ ನಮಗೆ ನಿಜ ಗೊತ್ತಿತ್ತು. ನನ್ನ ತಂದೆ ನಮಗೆ ತಿಳಿದ ಹಾಗೆ, ನಮಗೆ ಬುದ್ಧಿ ಬಂದಾಗಿನಿಂದಲೂ ಎಂದೂ ಸಂಜೆ ಮತ್ತು ಬೆಳಗಿನ ಹೊತ್ತು, ಸಮಯವನ್ನು ವ್ಯರ್ಥವಾಗಿ ಕಳೆದವರಲ್ಲ. ಬೆಳಗ್ಗೆ ಮನೆ ಪಾಠಕ್ಕೆ (ಒತ್ತಯಕ್ಕೆ ಮಣಿದು ಉಚಿತವಾಗಿ ಪಾಠ ಮಾಡುತ್ತಿದ್ದರೇ ಹೊರತು, ಅವರೆಂದೂ ಫೀಸಿಗೆ ಮನೆ ಪಾಠ ಮಾಡಿದವರಲ್ಲ… ಯಾರೋ ಕೆಲವರು ಒತ್ತಾಯ ಪೂರ್ವಕವಾಗಿ ಉಡುಗೊರೆ ಕೊಡುತ್ತಿದ್ದರಷ್ಟೇ..) ಬರುತ್ತಿದ್ದ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದರು, ಸಂಜೆ ನಾವಿಬ್ಬರು ಮಕ್ಕಳಿಗೆ. ಅವರು ನಾನು ಮತ್ತು ನನ್ನ ತಮ್ಮ ಬೆಳೆದು ಪಿಯುಸಿ ದಾಟುವವರೆಗೂ ಎಂದೂ ಟೀವಿಯನ್ನೇ ನೋಡಲಿಲ್ಲ, ಯಾವ ಮೋಜು ಅದು ಇದು ಎಂದು ಕಾಲಾಯಾಪನೆಯನ್ನೇ ಮಾಡಲಿಲ್ಲ. ಅವರು ಮೊದಲ ಬಾರಿ ನಿರುಮ್ಮಳವಾಗಿ ಟೀವಿ ನೋಡಲು ಶುರು ಮಾಡಿದ್ದೇ, ನಾನು ನೌಕರಿ ಸೇರಿ ಮತ್ತು ನನ್ನ ತಮ್ಮ ತನ್ನ ಹೆಚ್ಚಿನ ಓದಿಗಾಗಿ ಅಂತ ಮನೆ ತೊರೆದಾಗಲೇ. ಅವರ ಈ ಶ್ರಮ ವ್ಯರ್ಥವಾಗಲಿಲ್ಲ. ಆದರೆ ತಮ್ಮ ಇಡೀ ಬದುಕನ್ನೇ ಅವರ ವೃತ್ತಿ (ಸೇವೆ) ಮತ್ತು ಮಕ್ಕಳ ಬದುಕಿಗಾಗಿ ಮುಡುಪಾಗಿಟ್ಟ ರೀತಿ ಮಾತ್ರ ಈಗಲೂ ನನಗೊಂದು ಅಚ್ಚರಿ. ನನಗೂ ಸಹ ನನ್ನ ಮಕ್ಕಳಿಗೆ ಅಷ್ಟು ಸಮಯ ಕೊಡಲು ಒಮ್ಮೊಮ್ಮೆ ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ನಾನು ನನ್ನ ಮಕ್ಕಳನ್ನು ಸರಿಯಾಗಿ ಬೆಳೆಸುತ್ತಿಲ್ಲವಾ ಎನ್ನುವ ಅನುಮಾನವೂ ನನಗೆ ಕಾಡಿಬಿಡುತ್ತದೆ. ಆದರೆ ಅವರ ಒಟ್ಟಾರೆ ಬದುಕೇ ಒಂದು ಪಾಠವಾಗಿ ನನ್ನ ಮುಂದಿದೆ. ನನ್ನ ಅವಶ್ಯಕತೆ ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಅದನ್ನು ಬಳಸುತ್ತಾ ನಡೆಯಬೇಕಿದೆ. ಒಂದಂತೂ ನಿಜವಾಯಿತು. ನನ್ನಪ್ಪ ಮಹತ್ವಾಕಾಂಕ್ಷಿಗಳಾಗಿರಲಿಲ್ಲ. ಅವರಿಗೆ ಏನನ್ನೋ ಸಾಧಿಸಬೇಕು ಎನ್ನುವ ಹಂಬಲವಿರಲಿಲ್ಲ. ಆದರೆ ತಮ್ಮ ಮಕ್ಕಳು ಸನ್ನಡತೆಯುಳ್ಳವರಾಗಿರಬೇಕು, ಸದ್ಗುಣಗಳನ್ನು ಕಲಿತಿರಬೇಕು, ಸನ್ಮಾರ್ಗದಲ್ಲಿ ನಡೆಯಬೇಕು ಎನ್ನುವುದಷ್ಟೇ ಅವರಿಗೆ ಮುಖ್ಯವಾಗಿತ್ತು. ಬೇರೆಯವರ ಒಂದು ಸಣ್ಣ ಐದು ಪೈಸೆಯನ್ನೂ ಮುಟ್ಟಬಾರದು ಎಂಬ ಪಾಠ ನಮಗೆ ಸಿಕ್ಕಿದ್ದು ಅತಿ ಸಣ್ಣ ವಯಸ್ಸಿನಲ್ಲಿ. ಇವತ್ತಿಗೂ ನಮಗಿರುವುದರಲ್ಲಿ ನಾವು ತೃಪ್ತರೇ ವಿನಃ ಮತ್ತೊಬ್ಬರ ಹಣಕ್ಕೆ ಆಸೆ ಪಡಬೇಕು ಎಂದು ಯಾವತ್ತು ಅನಿಸಿಯೇ ಇಲ್ಲ ನಮಗೆ. ಅವರು ಕೊಟ್ಟಿರುವ ಸಂಸ್ಕಾರ ಅಷ್ಟು ಗಟ್ಟಿಯಾದದ್ದು. ಇವತ್ತು ಅಪ್ಪ ಅಮ್ಮನಿಂದ ಬಹಳ ದೂರದಲ್ಲಿದ್ದು ಬದುಕುತ್ತಿದ್ದರೂ ಅವರು ಕಲಿಸಿದ ಗುಣಗಳು ಸದಾ ನಮ್ಮನ್ನು ಕಾಯುತ್ತಿವೆ, ನಡೆಸುತ್ತಿವೆ. ಕೆಟ್ಟದ್ದರ ನಡುವೆಯೂ ಒಳ್ಳೆಯದನ್ನು ಆರಿಸಿಕೊಂಡು ನಡೆಯುವುದನ್ನು ಹೇಳಿಕೊಡುತ್ತಿವೆ. ಅದರೆ ಈಗಲೂ ಅಪ್ಪ ನಂಬುತ್ತಾರೆ, “ನಾನು ನನ್ನ ವಿದ್ಯಾರ್ಥಿಗಳಿಗೆ ನಿಸ್ವಾರ್ಥದಿಂದ ಹೇಳಿಕೊಟ್ಟ ನಾಲ್ಕು ಅಕ್ಷರಗಳಿಂದಾಗಿಯೇ ದೇವರು ನನ್ನ ಮಕ್ಕಳನ್ನ ಕಾಪಾಡಿದಾನೆ” ಅಂತ. ಆದರೆ ನಾನು ನಂಬುವುದು ಮಾತ್ರ ಅವರ ಪ್ರಾಮಾಣಿಕತೆ, ನಿಸ್ವಾರ್ಥತೆ, ಪರಿಶ್ರಮ, ತ್ಯಾಗ, ಮುಗ್ಧತೆ ಮತ್ತು ಪ್ರಂಜಲ ಮನಸಿನ ಪ್ರೀತಿಯನ್ನು ಮಾತ್ರ…. ಈಗ ಯೋಚಿಸುವುದಿಷ್ಟೇ ನಾನು ನನ್ನ ಮಕ್ಕಳನ್ನು ಎಷ್ಟರ ಮಟ್ಟಿಗೆ ಪ್ರಭಾವಿಸಿದ್ದೇನೆ?! ಅವರ ಒಂದಿಡೀ ಘನ ಬದುಕಿಗಾಗುವಷ್ಟು ದಟ್ಟ ಅನುಭವಗಳನ್ನು ನಾನು ಕಟ್ಟಿಕೊಡುತ್ತಿರುವೆನಾ?! ಅವರಿಗೆ ಎಂತಹ ಮಾರ್ಗವನ್ನು ತೋರಿಸುತ್ತಿದ್ದೇನೆ ನಾನು?! ಇವತ್ತಿನ ಅಂತರ್ಜಾಲದ ಯುಗದಲ್ಲಿ ನಮಗೆ ಮೊಬೈಲಿಗಿಂತಲೂ ಪ್ರಿಯವಾದದ್ದು ಬೇರೊಂದಿಲ್ಲ. ಕಂಪ್ಯೂಟರ್, ಟೀವಿಯನ್ನೂ ಹಿಂದಿಕ್ಕಿದೆ ಈ ಮೊಬೈಲು. ಅದು ನಮ್ಮ ಜೀವನದ ಅವಿಭಾಜ್ಯ ಅಂಗವೆನಿಸತೊಡಗಿದೆ. ಊಟ ನಿದ್ರೆಯ ಜೊತೆಗೆ ನಮ್ಮ ಆಯುಷ್ಯವನ್ನೂ ಕಸಿಯುತ್ತಿವೆ ಈ ಮೊಬೈಲುಗಳು. ಸಾಮಾಜಿಕ ತಾಣಗಳೆನ್ನುವ ವರ್ಚುವಲ್ ಪ್ರಪಂಚವನ್ನೇ ಅತಿಯಾಗಿ ಹಚ್ಚಿಕೊಂಡು ಅದನ್ನೇ ಸತ್ಯ ಎನ್ನುವಂತೆ ಬದುಕುತ್ತಿದ್ದೇವೆ ನಾವು. ಮೊನ್ನೆ ಒಂದು ಕತೆ ಓದಿದೆ. ಅದು ಬಹಳಷ್ಟು ಕಡೆ ಬಹಳಷ್ಟು ಸಮಯದಿಂದ ಹರಿದಾಡುತ್ತಿದ್ದು ನನ್ನ ಗಮನಕ್ಕೂ ಬಂದಿತ್ತು. ಅದೊಂದು ಶಾಲೆ. ಅಲ್ಲೊಬ್ಬ ಶಿಕ್ಷಕಿ. ಒಂದು ದಿನ ಆಕೆ ತನ್ನ ವಿದ್ಯಾರ್ಥಿಗಳಿಗೆ “ಮುಂದೆ ನಿಮಗೆ ಏನಾಗಬೇಕೆಂದು ಆಸೆ ಇದೆ ಎನ್ನುವುದನ್ನು ಒಂದು ಪೇಪರ್ ನಲ್ಲಿ ಬರೆದು ಕೊಡಿ” ಎನ್ನುತ್ತಾಳೆ. ಎಲ್ಲ ಮಕ್ಕಳೂ ಬರೆದುಕೊಡುತ್ತಾರೆ. ಶಿಕ್ಷಕಿ ಅವನ್ನು ಕರೆಕ್ಷನ್ ಮಾಡಲಿಕ್ಕಾಗಿ ಮನೆಗೆ ತರುತ್ತಾಳೆ. ಮನೆಕೆಲಸ, ಅಡುಗೆ, ಊಟ ಎಲ್ಲ ಮುಗಿಸಿ, ದಿನನಿತ್ಯದಂತೆ ಒಂದಷ್ಟು ಹೊತ್ತು ಮೊಬೈಲ್ ನೋಡಿ, ಮಲಗುವ ಮುನ್ನ ಆ ಪೇಪರ್ ಗಳನ್ನು ಓದಲು ಶುರುಮಾಡುತ್ತಾಳೆ. ಪಕ್ಕದಲ್ಲಿ ಅವಳ ಗಂಡ ಮೊಬೈಲ್ ನಲ್ಲಿ ಮುಳುಗಿರುತ್ತಾನೆ. ಇದ್ದಕ್ಕಿದ್ದ ಹಾಗೆ ಅವಳು ಒಂದು ಪೇಪರ್ ಓದುತ್ತಾ ಅಳಲು ಶುರು ಮಾಡುತ್ತಾಳೆ. ಆಗ ಅವಳ ಗಂಡ ಯಾಕೆ ಅಳ್ತಿದಿ ಎಂದು ಕೇಳುತ್ತಾನೆ. ಆಗ ಆಕೆ ಹೇಳುತ್ತಾಳೆ, ಇಲ್ಲೊಂದು ವಿದ್ಯಾರ್ಥಿಯ ಬರೆಹ ನೋಡಿ ಅಳು ಬಂತು ಎನ್ನುತ್ತಾಳೆ. ಆಗ ಗಂಡ ಏನಂಥದ್ದು ಬರೆದಿದ್ದಾನೆ ಆ ಹುಡುಗ ಎಂದು ಕೇಳುತ್ತಾನೆ. ಆಗ ಆ ಶಿಕ್ಷಕಿ ಆ ಬರೆಹವನ್ನು ಓದತೊಡಗುತ್ತಾಳೆ, “ಮಿಸ್ ನನಗೆ ದೊಡ್ಡವನಾದ ಮೇಲೆ ಒಂದು ಸ್ಮಾರ್ಟ್ ಫೋನ್ ಆಗಬೇಕು ಅಂತ ಆಸೆ. ಯಾಕಂದ್ರೆ ಅಪ್ಪ ಅಮ್ಮ ನಂಗಿಂತ ಮೊಬೈಲನ್ನೆ ತುಂಬ ಪ್ರೀತಿಸ್ತಾರೆ. ರಾತ್ರಿ ಮಲಗುವಾಗಲು ಅದನ್ನೇ ನೋಡ್ತಾರೆ, ಬೆಳಗ್ಗೆ ಕಣ್ಣು ಬಿಟ್ಟಾಗಲೂ ಅದನ್ನೇ ನೋಡ್ತಾರೆ. ನಂಜೊತೆ ಎರೆಡು ಮಾತಾಡೋದಿಲ್ಲ, ಪ್ರೀತಿಯಿಂದ ಇರೋದಿಲ್ಲ. ಸದಾ ಮೊಬೈಲಿನಲ್ಲೇ ಮುಳುಗಿರ್ತಾರೆ. ಇನ್ನು ಕಾಲ್ ಬಂದುಬಿಟ್ಟರೆ ಮುಗೀತು. ನಾನೊಬ್ಬ ಇದೀನಿ ಎನ್ನುವುದೇ ನೆನಪಿರೋದಿಲ್ಲ ಅವರಿಗೆ. ಅದಕ್ಕೆ ನಾನೊಂದು ಸ್ಮಾರ್ಟ್ ಫೋನ್ ಆಗಬೇಕು ಅಂತ ಆಸೆ. ಆಗ ಅಪ್ಪ ಅಮ್ಮ ನನ್ನನ್ನೇ ಪ್ರೀತಿಸ್ತಾರೆ” ಎಂದು ಓದಿ ಮುಗಿಸುತ್ತಾಳೆ. ಅಷ್ಟು ಹೊತ್ತಿಗಾಗಲೇ ಗಂಡನ ಕಣ್ಣೂ ತುಂಬಿರುತ್ತದೆ. ಎಂಥದೋ ತಪ್ಪಿತಸ್ಥ ಭಾವ ಅವನನ್ನೂ ಕಾಡತೊಡಗಿರುತ್ತದೆ. ಮತ್ತೆ ಗೊಗ್ಗರು ದನಿಯಲ್ಲಿ ಆ ಹುಡುಗ ಯಾರು ಎಂದು ಕೇಳುತ್ತಾನೆ. ಆ ಹುಡುಗ ಬೇರೆ ಯಾರೂ ಅಲ್ಲ ನಮ್ಮ ಮಗನೇ ಕಣ್ರೀ ಎನ್ನುತ್ತಾ ಮತ್ತೂ ಜೋರಾಗಿ ಅಳತೊಡಗುತ್ತಾಳೆ ಆ ಶಿಕ್ಷಕಿ. ಇದಂತೂ ಬಹುತೇಕ ನಮ್ಮಲ್ಲರಿಗೂ ಅನ್ವಯಿಸುವ ಕತೆಯೇನೋ ಅನಿಸಿಬಿಟ್ಟಿತು ನನಗೆ. ನಾವು ನಮ್ಮ ಮಕ್ಕಳಿಗೆ ನ್ಯಾಬದ್ಧವಾಗಿ ಅವರಿಗೆ ಸಿಗಬೇಕಾದ ಸಮಯವನ್ನ ಕೊಡುತ್ತಿಲ್ಲದ ಅಪರಾಧಿಗಳು. ಇನ್ನು ಆ ಮಕ್ಕಳು ಬೆಳೆದಾದ ಮೇಲೆ ಇನ್ನೆಂತಹ ಮೌಲ್ಯಗಳನ್ನು ಬೆಳೆಸಿಕೊಳ್ಳಲು ತಾನೆ ಸಾಧ್ಯ. ಮಕ್ಕಳು ನೋಡ ನೋಡುತ್ತಲೇ ಬೆಳೆದುಬಿಡುತ್ತಾರೆ. ಅವರ ಬೆಳವಣಿಗೆಯ ಪ್ರತಿ ಹಂತವನ್ನೂ ನಾವು ಅಚ್ಚರಿಯಿಂದ ಕಂಡು ಆನಂದಿಸಿ ಪ್ರೀತಿಸಬೇಕು. ಅದನ್ನೇ ಮಾಡದೆ ಹೋದರೆ ಮುಂದೆ ಆ ಮಕ್ಕಳು ನಮ್ಮನ್ನು ಯಾವ ಕಾರಣಕ್ಕಾಗಿ ನೆನಪಿಡಬೇಕು… ಪೇರೆಂಟಿಂಗ್ ಕೂಡ ಬಹಳ ಜವಾಬ್ದಾರಿಯುತ ಕೆಲಸ. ಹೆತ್ತರೆ ಮಾತ್ರ ಸಾಕಾಗುವುದಿಲ್ಲ. ಮಕ್ಕಳ ಅವಶ್ಯಕತೆಗೆ ಮೀರಿ ಸೌಲಭ್ಯಗಳನ್ನು ಕೊಟ್ಟು ಗಿಲ್ಟ್ ಕಳೆದುಕೊಳ್ಳುವುದಲ್ಲ, ಅವರಿಗೆ ಕೊಡಬೇಕಾದ ಸಮಯ ಕೊಟ್ಟು ಅವರನ್ನ ಪ್ರೀತಿಯಿಂದ ಪ್ರಭಾವಿಸಬೇಕಿದೆ. ಸರಿ ತಪ್ಪುಗಳನ್ನು ಗುರುತಿಸಿ ಸರಿದಾರಿ ಕಂಡುಕೊಂಡು ನಡೆಯುವುದನ್ನು ಕಲಿಸಿಕೊಡಬೇಕಿದೆ. ಇನ್ನದಾರೂ ಒಂದಷ್ಟು ಹೊತ್ತು ಮೊಬೈಲ್ ಬಿಸಾಕಿ ನಮ್ಮ ಮಕ್ಕಳ ಜೊತೆ ಕೂತು ಒಂದಷ್ಟು ಚಂದದ ಸಮಯವನ್ನು ಕಳೆಯಬೇಕಿದೆ ಅಂತ ಅನಿಸುತ್ತಿರುವುದನ್ನು ನನ್ನಿಂದಲೇ ಶುರುಮಾಡಬೇಕಿದೆ. ಮತ್ತೆ ಎಲ್ಲಾ ಒಳ್ಳೆಯದೇ ಆಗುತ್ತೆ ಎನ್ನುವ ನಂಬಿಕೆಯ ಬೀಜವನ್ನು ಬಿತ್ತಿಕೊಂಡು ಅದು ಮೊಳೆತು ಬೆಳೆದು ಹೆಮ್ಮರವಾಗುವುದನ್ನು ಇಂಚಿಂಚೂ ಕಾಣಬೇಕಿದೆ… ********************************** –ಆಶಾ ಜಗದೀಶ್ ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.
ಅಂಕಣ ಬರಹ ಹೊಸ ದನಿ ಹೊಸ ಬನಿ – ೧೫. ದೀರ್ಘ ಶೀರ್ಷಿಕೆಗಳ ಭಾರದಲ್ಲೂ ಸರಳ ನಡಿಗೆಯ ಮಂಜುಳ. ಡಿ ಕವಿತೆಗಳು ಮಂಜುಳ ಡಿ ಈಗಾಗಲೇ ವಿಶ್ವವಾಣಿ ಪತ್ರಿಕೆಯ ಅಂಕಣ ಬರಹಗಾರರಾಗಿ ಕವಯತ್ರಿಯಾಗಿ ಖ್ಯಾತರಾದವರು. ಈಗಾಗಲೇ ಮೂರು ಪುಸ್ತಕಗಳನ್ನು ಪ್ರಕಟಿಸಿರುವ ಅವರು ಬೆಂಗಳೂರಿನವರು. ಅವರ ಫೇಸ್ಬುಕ್ ಬರಹಗಳಲ್ಲಿ ಗದ್ಯ ಪದ್ಯಗಳ ಮಿಶ್ರಣವನ್ನು ಕಾಣಬಹುದು. “ಆಸೆಯ ಕಂದೀಲು” ಕವನ ಸಂಕಲನಕ್ಕೆ ಕಾವ್ಯ ವ್ಯಾಮೋಹಿ ವಾಸುದೇವ ನಾಡಿಗರು ಮುನ್ನುಡಿ ಬರೆದಿರುವುದರಿಂದ ಸಂಕಲನದ ಗುಣ ನಿಷ್ಕರ್ಷೆ ಸುಲಭದ್ದೇ ಆಗಿದೆ. ಈ ಸಂಕಲನ ಕುರಿತು ಈಗಾಗಲೇ ಎನ್.ಡಿ.ರಾಮಸ್ವಾಮಿ ಮುಖಪುಸ್ತಕದಲ್ಲಿ ಬರೆದಿದ್ದಾರೆ. ಅವರು ಹೇಳಿದ ಹಾಗೆ ಈ ಕವಿ ಉತ್ತಮ ಕವನಗಳನ್ನು ಉತ್ಸಾಹದಿಂದ ರಚಿಸಿದ್ದಾರೆ.ಕಾವ್ಯದ ಕಸುಬುದಾರಿಕೆಯನ್ನು ಇಂಗ್ಲೀಷ್ ಸಾಹಿತ್ಯದ ಉಪನ್ಯಾಸಕಿಯಾಗಿ ಅಭ್ಯಾಸ ಮಾಡುತ್ತಲೇ ಇದ್ದಾರೆ. ಭಾಷೆ,ಭಾವ,ಬಂಧಗಳು ಕವನಗಳಲ್ಲಿ ಉತ್ತಮವಾಗಿ ಮೂಡಿದೆ. ಕಾವ್ಯ ಶಿಲ್ಪದ ಕಸುಬುದಾರಿಕೆ ದಕ್ಕಿದೆ. ಅರ್ಥ ಪೂರ್ಣ ಕವನಗಳಲ್ಲಿ ಭಾವದ ಹೊಳೆ ಹರಿಸಿದ್ದಾರೆ. ಹೊಸತೇನೋ ಒಂದನ್ನು ಆತ್ಮದ ಬಾವಿಯಿಂದ ಕಾರಂಜಿಯಾಗಿಸಿದ್ದಾರೆ. ಕರುಳಿನ ಮಾತುಗಳಿಗೂ ದನಿಯಾಗಿದ್ದಾರೆ. ಅವರ ಚಿತ್ತ ಭಿತ್ತಿಯಲಿ ಸಾವಿರಾರು ಚಿಂತನೆಗಳಿವೆ. ಅವುಗಳಿಗೆ ನಿಜವಾದ ಕೈಮರ ಪೂರ್ವ ಸೂರಿಗಳ ಓದು. (ಇದು ಎನ್ಡಿಆರ್ ಮಾತು) ಇದೇ ಸಂಕಲನ ಕುರಿತು ಹೊನ್ನಾವರದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಎಂ ಹೆಗಡೆ ಹಡಿನಬಾಳ ತುಂಬು ಭರವಸೆಯ ಮಾತನ್ನು ಹೇಳಿದ್ದಾರೆ. “‘ನನ್ನನ್ನು ನೋಯಿಸಿದ್ದಾದರೂ ಏನು” ಎನ್ನುತ್ತಲೇ ಮನಸ್ಸನ್ನು ಕದ್ದ ವ್ಯಕ್ತಿಯ ಕುರಿತು ‘ಆಸೆಯ ಕಂದೀಲು’ ಕವನದಲ್ಲಿ ಕಟ್ಟಿಕೊಂಡ ಆಸೆಗಳು ಕನಸುಗಳನ್ನು ತೆರೆದಿಡುವ ರೀತಿ ಅದ್ಭುತವಾಗಿದೆ. ಊಟ ಮಾಡುವಾಗ , ಹಾಸಿಗೆ ಬಿಟ್ಟು ಏಳುವಾಗ ಹೆಜ್ಜೆ ಹೆಜ್ಜೆಗೂ ನೆನಪಿಸಿಕೊಳ್ಳುತ್ತ ಇನ್ನು ಎಲ್ಲೋ ಯಾರಿಗೋ ಏನೋ ತೊಂದರೆಯಾದಾಗ ತನ್ನ ಇನಿಯನಿಗೇನಾಯಿತೋ ಪರಿತಪಿಸುವ ರೀತಿ, ಒಲಿದ ಹೃದಯದ ಸಲುವಾಗಿ ಮಿಡಿತವನ್ನು ಧ್ವನಿಸುವ ಸಾಲುಗಳು ಅದ್ಭುತ. ಪ್ರೀತಿಯ ತೀವ್ರತೆ ಹಂಬಲ ಕಳವಳ ಕನವರಿಕೆಯೇ ಮನದಾಳದ ನೋವಿಗೆ ಕಾರಣ ಎನ್ನುವುದರ ಮೂಲಕ ಪ್ರೀತಿಯ ಆಳ ಹರಹನ್ನು ಅತ್ಯಂತ ಸುಂದರವಾಗಿ ಚಿತ್ರಿಸಿದ್ದಾರೆ. ಒಮ್ಮೆ ಮನಸ್ಸನ್ನು ಕೊಟ್ಟ ನಂತರ ಅವರ ನೆನಪಿನ ತೀವ್ರತೆ ಅಗಾಧ ಎನ್ನುವ ಸತ್ಯವನ್ನು ‘ತೀವ್ರತೆ ಎಷ್ಟಿತ್ತೆಂದರೆ’ ಕವನದ ಮೂಲಕ ತೆರೆದಿಟ್ಟಿದ್ದಾರೆ. ಇನಿಯನ ಸನಿಹ ತರುವ ಖುಷಿಯನ್ನು ಪ್ರಕೃತಿಯ ಆಗುಹೋಗುಗಳೊಂದಿಗೆ ಸಮೀಕರಿಸಿ ‘ ಸುಮ್ಮನೆ ನಿನ್ನೊಂದು ಇರುವಿಕೆ ‘ ಕವನದ ಮೂಲಕ ಮಾರ್ಮಿಕವಾಗಿ ಚಿತ್ರಿಸಿದ್ದಾರೆ. ‘ಅಣಿಯಾಗದಿದ್ದ ಗಳಿಗೆಯಲ್ಲಿ ಮಾಧುರ್ಯವನ್ನು ಪಸರಿಸಿ ಇದೀಗ ನಿನ್ನದೇ ಆದ ನೋವಿನ ಪ್ರಪಂಚದಲ್ಲಿ ನೀನಿರುವುದು ಸರಿಯೇ?’, ‘ನಿರ್ಲಿಪ್ತತೆಯ ತೊಡೆದು ಹಾಕಿ ನೋವಿನಲ್ಲೂ ಸಪ್ತ ಸ್ವರ ಹೊಮ್ಮಲು ಸಾಧ್ಯವಿಲ್ಲವೇನು?’ ಎಂದು ‘ ಜಗತ್ತಿನ ನೋವೆಲ್ಲಾ ಒಂದಾದರೆ ನಿನ್ನ ನೋವೇ ಒಂದು’ ಕವನದ ಮೂಲಕ ಮೆಚ್ಚಿದ ಇನಿಯನನ್ನು ಪ್ರೀತಿಯಿಂದ ತರಾಟೆಗೆ ತೆಗೆದುಕೊಳ್ಳುವ ಪರಿ ಸೊಗಸಾಗಿ ಮೂಡಿಬಂದಿದೆ . ಮನೆಯನ್ನು ಸುಂದರಗೊಳಿಸಿ ಗೋಡೆಗಳನ್ನು ಅದೆಷ್ಟೇ ಅಲಂಕಾರ ಗೊಳಿಸಲಿ ಯಾರಿಗೂ ಏನನ್ನೂ ಕೊಡದೆ ಕೃಪಣರಾಗಿ ತನ್ನವರಿಗಾಗಿ ಅದೆಷ್ಟೇ ಕೂಡಿ ಇಟ್ಟಿರಲಿ ಪ್ರಕೃತಿ ಮುಣಿಯಲು ಇವೆಲ್ಲವೂ ನೀರುಪಾಲಾಗಲು ಎಷ್ಟು ಹೊತ್ತು… ಯಾವ ತುಂಡು ಭೂಮಿಗಾಗಿ ಕಚ್ಚಾಡುತ್ತಿರುತ್ತೇವೆಯೋ ಅವು ಗುಡ್ಡ ಕುಸಿತದೊಂದಿಗೆ ಮಣ್ಣುಗೂಡಲು ಎಷ್ಟು ಹೊತ್ತು ಎನ್ನುವುದನ್ನು ‘ಜಲವರ್ಣ ಚಿತ್ರ ಮಳೆಯಲ್ಲಿ ಕರಗಿದೆ’ ಎನ್ನುವ ಕವನದ ಮೂಲಕ ಚೆನ್ನಾಗಿ ಚಿತ್ರಿಸಿ ಪ್ರಕೃತಿಯ ಮುಂದೆ ಮಾನವನ ಆಟ ನಡೆಯದು ಅರ್ಥವಿಲ್ಲದ ಹಗೆತನ ಜಿಪುಣತನ ಸರಿಯಲ್ಲ ಎನ್ನುವ ಸಂದೇಶವನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ‘ನಿನ್ನನ್ನು ನೋಡಿದ ಮೇಲೆ ಈಗ ಇನ್ಯಾರನ್ನುನ್ನು ನೋಡಲಿ’, ‘ನಿನ್ನೊಳಗೆ ಕರಗಿ ನಿನ್ನದೇ ಬಣ್ಣ ತಳೆದದ್ದು ಅರಿವಿಗೇ ಬರಲಿಲ್ಲ’ ಸಾಲುಗಳು ಪ್ರೀತಿಯ ಪರಾಕಾಷ್ಟತೆಯನ್ನು ಭಾವನೆಯ ತೀವ್ರತೆಯನ್ನು ಪ್ರತಿಬಿಂಬಿಸಿದರೆ, ವಿರಹಿ, ರಿಪೇರಿ, ಕಾವು ಅಗಲಿಕೆ ಧೋರಣೆ, ಬಿಂಬ.. ಪ್ರೀತಿಯಿಂದ ಘಾಸಿಗೊಂಡ ಮನದ ಅಂತರಾಳದ ಧ್ವನಿಯಂತೆ ಇವೆ. “ಆಸೆಯ ಕಂದೀಲು” ಸಂಕಲನ ಕುರಿತ ಈ ಇಬ್ಬರ ಮಾತುಗಳನ್ನು ನಾನು ಸಂಕಲನ ನೋಡಿರದ ಕಾರಣ ಆ ಸಂಕಲನ ಕುರಿತಂತೆ ಮಹತ್ವದ್ದೆನಿಸಿದ ಕೆಲವು ಸಾಲುಗಳನ್ನು ಇಲ್ಲಿ ಹಂಚಿಕೊಳ್ಳುತ್ತಲೇ ಈ ಕವಿಯು ಫೇಸ್ಬುಕ್ಕಿನಲ್ಲಿ ಪ್ರಕಟಿಸಿದ ಕೆಲವು ಕವಿತೆಗಳನ್ನು ಪರಿಚಯಿಸುತ್ತಿದ್ದೇನೆ. ನದಿಯ ಪಾತ್ರ ಅಲ್ಲಿಯೇ ಇದೆ ಅದರ ಉದಯ ಕಾಲದಿಂದಲೂ ಹರಿಯುತ್ತಿರುವ ನೀರು ಮಾತ್ರ ಹೊಸದು ಎನ್ನುವ ನಿಲುವು ಹಳೆಯದೇ ಆದರೂ ಹರಿಯುತ್ತಿರುವ ನೀರು ಹೊಸದೇ ಆಗಿರುತ್ತದೆ ಎನ್ನುವ ಆಲೋಚನೆಯನ್ನು ಸೊಗಸಾಗಿ ಹೇಳುವ ಈ ಕವಿ “ಭೌತಿಕತೆಯ ಗೀಳು ಮಾನಸಿಕ ಹರಿವು…” ಎನ್ನುವ ದೀರ್ಘ ಶೀರ್ಷಿಕೆಯ ಗಪದ್ಯದಲ್ಲಿ ಹೇಳುತ್ತಾರೆ. “ಕೆಂಪು ಡಬ್ಬ ಮತ್ತು ಕಾಗದದ ದೋಣಿ…” ಕವಿತೆಯ ಶೀರ್ಷಿಕೆಯೇ ಕುತೂಹಲ ಹೆಚ್ಚಿಸಿ ಆಧುನಿಕ ಫೋನುಗಳಿಗಿಂತಲೂ ಹೃದಯಕ್ಕೆ ಹತ್ತಿರವಾದ ಪತ್ರಗಳ ಮಹತ್ತನ್ನು ಹೇಳುತ್ತದೆ. “ತೆರೆ ಅಪ್ಪಳಿಸುವ ಗಳಿಗೆ…ಭಾನು ಭುವಿಯಲ್ಲಿ ಲೀನ” ಎನ್ನುವ ಪದ್ಯದ ರೀತಿ ಸೊಗಸಾಗಿದ್ದರೂ ಭಾನು ಎನ್ನುವುದು ಸೂರ್ಯನಿಗೆ ಬಾನು ಎಂದರೆ ಆಕಾಶ ಎನ್ನುವ ವ್ಯತ್ಯಾಸದ ಅರಿವು ಬಾರದೇ ಇದ್ದರೆ ಪದ್ಯ ಗೆದ್ದುಬಿಡುತ್ತದೆ. ಆಕಾಶ ಭೂಮಿಗಳು ಪರಸ್ಪರ ಮುಟ್ಟಿದರೂ ಮುಟ್ಟದೆಯೇ ಉಳಿವ ಕ್ಷಿತಿಜದ ಅರಿವು ಕೂಡ ಕವಿಯಾದವರಿಗೆ ಇರಲೇ ಬೇಕಾಗುತ್ತದೆ. “ಜಲವರ್ಣ ಚಿತ್ರ ಮಳೆಯಲ್ಲಿ ಕರಗಿದೆ…” ಎನ್ನುವ ಹೆಸರಿನ ಕವಿತೆಗೆ ಷರಾ ಬರೆದು ಕೊಡಗಿನ ಬಿರುಮಳೆಗೆ ಕುಸಿದ ನೆಲ ಕುರಿತ ಪದ್ಯವೆಂದು ಕವಿ ಹೇಳಿದರೂ ಈ ಕವಿತೆಯ ಮೊದ ಮೊದಲ ಸಾಲುಗಳು ಪ್ರತಿಧ್ವನಿಸುವುದು ಕಳೆದುಕೊಂಡ ಕನಸುಗಳನ್ನು, ಪ್ರೀತಿಯಿಂದ ಕಾಪಿಟ್ಟಿದ್ದನ್ನು ಕಳಕೊಂಡ ನೋವನ್ನು. “ಕತ್ತಿ ಮಚ್ಚು ಹಿಡಿದು ಹಗಲಿರುಳೂ ಸಾಧಿಸಿದ ಹಗೆ ಏಳೆಂಟು ಅಡಿ ಗುಡ್ಡದ ಭೂಮಿ ತನ್ನದೆನ್ನುವ ಒಡಹುಟ್ಟಿದವರ ಹಗೆತನವೂ ಕುಸಿದ ಗುಡ್ಡದೊಂದಿಗೆ ಈಗ ನಿನ್ನದೇ” ಎನ್ನುವ ತಿಳುವಳಿಕೆ ಲೋಕಕ್ಕೆಲ್ಲ ತಿಳಿದರೆ ಅದೆಷ್ಟು ಸಲೀಸು ಈ ಬದುಕು! ಆದರೆ ವಾಸ್ತವ ಹಾಗಿಲ್ಲವಲ್ಲ! “ಕುಸುಮಿತ ತೋಪಿನ ಹೂವಿನ ನವಿರು ಪರಿಮಳ, ಉರಿಬಿಸಿಲ ಪ್ರಖರತೆ ಊಹೂ ಹೆಜ್ಜೆಗಳು ನಿಲ್ಲುವ ಹಾಗಿಲ್ಲ ಮಾಡಿಕೊಂಡ ಪಣಗಳು ಕೊಟ್ಟ ಭಾಷೆಗಳು ದೂರ ದೂರ ಪಯಣ ಸಾಗಿದೆ ಹೀಗೆ ಸಾಗುತ್ತಿದೆ” ಎನ್ನುವ ವಿವೇಕದೊಂದಿಗೆ “ಆನೆ ಕುದುರೆ ಗಾಡಿಗಳಲ್ಲಿ ಸಾಗಲಾರೆವು ಅಲ್ಲಿಗೆ ಹೆಜ್ಜೆಗಳೇ ಮೂಡಬೇಕು…” ಎನ್ನುವ ಶೀರ್ಷಿಕೆಯ ಪದ್ಯ ಕೂಡ ಚಣಕಾಲ ಕಾಡದೇ ಇರದು. ನವೋದಯದ ಕಾಲದಲ್ಲಿ ಪ್ರಾಸ,ಗೇಯತೆ,ರಮ್ಯತೆಗಳಿದ್ದರೆ ಪ್ರಗತಿಶೀಲರ ಕಾಲದಲ್ಲಿ ಕನಸುಗಳೇ ರಾಜ್ಯಭಾರ ಮಾಡುತ್ತ ನವ್ಯವು ಪ್ರತಿಮೆ ರೂಪಕಗಳಲ್ಲಿ ಭಾರವಾಗುತ್ತ ಸಾಗಿದ್ದು ಬಂಡಾಯದ ಬಿಸಿಯುಸಿರು ವ್ಯವಸ್ಥೆಯೊಂದಿಗೆ ಸೆಣಸಾಟ ಈ ಎಲ್ಲವೂ ಹೊಸ ಕಾಲದ ಪದ್ಯಗಳಲ್ಲಿ ಭಿನ್ನ ರೀತಿಯಲ್ಲಿ ಮಿಶ್ರಣಗೊಂಡು ಸುಲಭಕ್ಕೆ ದಕ್ಕದ ರೀತಿಗೆ ಚಾಚಿಕೊಳ್ಳುತ್ತ ಕಾವ್ಯದ ನಡಿಗೆಯನ್ನು ಸುಲಭಕ್ಕೆ ಒಲಿಸಿಕೊಳ್ಳಲಾಗದ ಕಾಲ ಇದು. ಆದರೂ ಹೊಸ ದನಿಯಲ್ಲಿ ಧಂಡಿಯಾಗಿ ಹಾಡುವರ ಕಾಲದ ಹಾಡುಗಳನ್ನು ಅಳೆಯುವ ಮಾಪಕಗಳೇ ಇರದ ಈ ಕಾಲದ ಕವಿಗಳು ಪರಂಪರೆಯಿಂದ ಅರ್ಥವಾದ ರೀತಿಗೆ ಹೊಸ ಟ್ಯೂನ್ ಕೊಡುತ್ತಲೇ ಇದ್ದಾರೆ. ಅಂಥವರ ಪೈಕಿ ಮಂಜುಳ ಡಿ ಕೂಡ ಒಬ್ಬರು. ಬರಿಯ ಚುಟುಕುಗಳಲ್ಲೇ ಹೇಳಬೇಕಾದುದನ್ನು ಹೇಳುತ್ತಿರುವವರ ನಡುವೆ ತಮ್ಮ ದೀರ್ಘವೂ ಸ್ವಾರಸ್ಯವೂ ಆದ ಶೀರ್ಷಿಕೆಗಳ ಮೂಲಕ ಕಾವ್ಯವನ್ನು ಪ್ರಸ್ತುತ ಪಡಿಸುವ ಶೈಲಿ ಬೇರೆಯದೇ ಆಗಿದೆ. ಆದರೆ ಹೇಳಿಕೆಗಳ ಭಾರದಲ್ಲಿ ಕವಿತೆ ನಲುಗಬಾರದೆನ್ನುವ ಕಾವ್ಯ ಮೀಮಾಂಸಕರ ಮಾತು ಯಾರೂ ಮರೆಯಲಾರದ್ದು ಭೇಟಿಯಾಗದ ಭೇಟಿಗಳ ಬಗ್ಗೆ ಪ್ರೀತಿ, ಹಳಹಳಿಕೆ, ನೆನಪು, ಸಂಕಟಗಳ ಒಟ್ಟೂ ಮೊತ್ತವನ್ನು ಅದ್ಭುತವಾಗಿ ಅಭಿವ್ಯಕ್ತಿಸಿದ ಕೆಲವು ಟಿಪ್ಪಣಿಗಳೇ ಇಲ್ಲಿ ಕವಿತೆಯಾದ ಘನಸ್ತಿಕೆಯೂ ಇದೆ. ಬರಿಯ ಪ್ರೀತಿ ಪ್ರೇಮ ಕನಸುಗಳಿಗಷ್ಟೇ ತಮ್ಮ ಕವಿತೆಗಳ ಹರಹನ್ನು ಸೀಮಿತಗೊಳಿಸದೇ ಬದುಕಿನ ಹಲವು ವಿಸ್ತರಗಳ ಕಡೆಗೂ ಗಮನ ಸೆಳೆಯುವ ಈ ಕವಿಯ ಮುಂದಿನ ರಚನೆಗಳ ಬಗ್ಗೆ ಕುತೂಹಲ ಹೆಚ್ಚುತ್ತಲಿದೆ. ಘೋಷವಾಕ್ಯವು ಕವಿತೆಯಾಗುವುದಿಲ್ಲ ಮತ್ತು ಕವಿತೆಯಾಗಿ ಗೆದ್ದವು ಅನುದಿನದ ಘೋಷ ವಾಕ್ಯಗಳೇ ಆಗಿ ಬದಲಾಗುತ್ತವೆ ಎನ್ನುವ ಕಿವಿಮಾತಿನೊಂದಿಗೆ ಈ ಕವಿಯ ಕೆಲವು ರಚನೆಗಳನ್ನು ನಿಮ್ಮ ಓದಿಗಾಗಿ ಶಿಫಾರಸು ಮಾಡುತ್ತಿದ್ದೇನೆ. ೧. ಭೌತಿಕತೆಯ ಗೀಳು ಮಾನಸಿಕ ಹರಿವು… ನದಿಯ ಪಾತ್ರ ಅಲ್ಲಿಯೇ ಇದೆ ಅದರ ಉದಯ ಕಾಲದಿಂದಲೂ ಹರಿಯುತ್ತಿರುವ ನೀರು ಮಾತ್ರ ಹೊಸದು ಅದೇ ಹಳೇ ಆಲದ ಮರ ಅದೇ ನೆರಳು ವಿಶಾಲತೆ ಚಿಗುರು ಟಿಸಿಲೊಡೆದು ಮೂಡಿದ ನವಿರು ಹಸಿರು ಕಿರು ತೋಟದ ಅದೇ ರೋಜಾ ಗಿಡ ನೆನ್ನೆಯೂ ಹೂ ಬಿಟ್ಟಿತ್ತು ಇಂದೂ ಬಿಟ್ಟಿದೆ ಆದರೆ ದಳಗಳ ವಿನ್ಯಾಸ ಮಾತ್ರ ನೂತನ ಅವೇ ಸ್ವರಗಳು ಹೊಸ ಹೊಸ ವಿನ್ಯಾಸ ಲಯದಲ್ಲಿ ಹೆಣೆದು ಹೊಮ್ಮುವ ರಾಗಗಳ ನವೀನ ವಿನ್ಯಾಸಗಳು ಮರ ಗಿಡ ಹೂ ನದಿ ಕಡಲು ಎಲ್ಲಾ ಲೋಕಗಳಿಗೂ ಶೇಖರಣೆಯ ತೆವಲಿಲ್ಲ ಅರೆಗಳಿಯಲ್ಲಿ ಮೊಬೈಲಿನಲ್ಲಿ ತೆಗೆದ ನೂರಾರು ಚಿತ್ರಗಳ ಭೌತಿಕತೆ ಒಂದೆರಡು ಸೃಷ್ಟಿಸುವಲ್ಲಿ ವರ್ಣಚಿತ್ರ ಕಲಾವಿದನಿಗೆ ಅವಧಿಯ ಗಣನೆಯೆಲ್ಲಿ ಇದು ಮಾನಸಿಕ ಹರಿವು ಅದೇ ಕ್ಷಿತಿಜ ಅದೇ ಭೂಮಿ ಇಚ್ಛಿತ ಜೀವದೊಂದಿಗೆ ಲಯಗೊಂಡರೆ ಹೊಸದೊಂದು ಬಣ್ಣ ಪಡೆವ ಹಾಗೆ ಇಬ್ಬರ ನಡುವಿನ ಗೆರೆಯೂ ಅಳಿಸಿದ ತಾದಾತ್ಮ್ಯ ಭಾವ ಇಷ್ಟಕ್ಕೂ ನವೀನ ಗಳಿಗೆಗಳು ನವ ಅನುಭವ ಅಂದರೆ ಹೊಸ ವಿವರಗಳಲ್ಲ ಹಿಂದಿನ ಮುಂದಿನ ಅಡ್ಡ ಉದ್ದ ಹೆಸರುಗಳೆಲ್ಲಾ ಮರೆತು ಹೊಸ ಗಳಿಗೆಯೊಂದಕ್ಕೆ ಮನಸು ಹರಿಬಿಟ್ಟ ಗಳಿಗೆ ದಣಿವಿಲ್ಲದೇ ಹೊಸತನ ಚಲನಶೀಲತೆ ಮೂಡಿ ಆತ್ಮದ ಲಯದೊಂದಿಗೆ ಚೇತೋಹಾರಿಯಾಗಿ ಬೆಸೆಯುವ ಚೇತನ… ೨. ಕೆಂಪು ಡಬ್ಬ ಮತ್ತು ಕಾಗದದ ದೋಣಿ… ಬರಿಯ ಟಪಾಲುಗಳಿಲ್ಲ ಈ ಕೆಂಪು ಡಬ್ಬಿಯಲ್ಲಿ ನೂರಾರು ಕೈಗಳು ದಾಟಿ ನೂರಾರು ಗಾವುದ ತೆರಳಿ ಯಾರದೋ ಸ್ಪರ್ಶಕ್ಕೆ ಕಾದಿರುವ ಸ್ವಗತಗಳು ಮುಖತಃ ಮಾತಾಗದ ಹೇಳಲೇಬೇಕಾದ ಎಷ್ಟೋ ಮಾತುಗಳಿಗೆ ಕನಸು ಸಮಾಧಾನ ಎಚ್ಚರ ತಪ್ಪೊಪ್ಪಿಗೆ ನೆನಪು ಎಲ್ಲಾ ಸ್ವಗತಗಳು ಪದಗಳಲ್ಲಿ ಸ್ಪಷ್ಟಗೊಳ್ಳುವ ಹಾದಿ ಎಷ್ಟೋ ದೂರ ಪಯಣಿಸಿ ಬಂದ ಕಾಗದ ಒಡೆಯುವ ಗಳಿಗೆಯ ಉಸಿರ ಕಂಪು ಆತ್ಮಿಕ ಸಂವಾದವೊಂದರ ಹರವು ಜೀವಕ್ಕೆ ಉಣಿಸಬಹುದಾದ ಹಿತ ಬರೀ ಫೋನುಗಳು ಪತ್ರದ ಹಂಗೆಲ್ಲಿ ಈಗ…! ಭಾವ ಭೂಮಿಕೆಯ ಹರಿಸಿ ನಿಂತ ಪತ್ರವನ್ನೊಮ್ಮೆ ಹಿತವಾಗಿ ನೇವರಿಸಿ ಅಕ್ಷರಗಳಾದ ಸ್ವಗತ ಕಣ್ತುಂಬಿಕೊಳ್ಳುವ ವಿಸ್ಮಯದಲ್ಲಿ ವಿಹರಿಸುವ ತವಕ ಕೆಂಪುಡಬ್ಬಿಯ ನೋಡಿದಾಗ ಮೂಡದಿರದೇ… ೩.ತೆರೆ ಅಪ್ಪಳಿಸುವ ಗಳಿಗೆ…ಭಾನು ಭುವಿಯಲ್ಲಿ ಲೀನ ದೃಷ್ಟಿ ಹಾಯಿಸಿದಷ್ಟೂ ನಿನ್ನ ಹರವು ನೀಲಾಕಾಶದ ಬಣ್ಣ ತಳೆದು ನೀಲೀ ತಟ್ಟೆಯಂತೆ ತಂಪಗಿದ್ದೆ ದಣಿವಿಲ್ಲ ಮೋಡಗಳಿಗೆ ಅದೆಷ್ಟು ತಡೆದಿದ್ದವೋ ಛಿದ್ರಗೊಂಡು ಅದೆಷ್ಟು ಸುರಿದರೂ ತೀರದ ನೋವು ಮಳೆಯ ಅಗಾಧತೆಗೆ ಉಲ್ಬಣಗೊಂಡ ಪರಿ ಮಕ್ಕಳು ಕುಂಚ ಅದ್ದಿ ತೆಗೆದ ನೀರಿನಂತೆ ವಿಹ್ವಲ ವರ್ಣಕ್ಕೆ ಭಾನು ಇಳೆಗಿಳಿದಿದೋ ಕಡಲೇ ಭಾನುವಿನತ್ತ ಧಾವಿಸಿದೆಯೋ ದಿಕ್ಕುಗಳಾದರೂ ಎಲ್ಲಿ ಎಲ್ಲಾ ನಾದಗಳೂ ಬಣ್ಣಗಳೂ ಹಂಗು ಹಮ್ಮುಗಳು ಲಯ ಕಳೆದುಕೊಂಡ ಈ ರುದ್ರಘೋಷ ಅದೆಷ್ಟು ತಪನ ತನ್ಮಯತೆಯಿಂದ ಕಾದ ತವಕದ ತೀವ್ರತೆ ಮಿತಿ ಕಳೆದು ತೆರೆ ಅಪ್ಪಳಿಸುವ ಗಳಿಗೆ ಜಲದಲ್ಲಿ ಜಲ ಒಂದಾಗುವ ಗಳಿಗೆ ಭಾನು ಭೂಮಿಯಲ್ಲಿ ಲೀನ ೪. ಜಲವರ್ಣ ಚಿತ್ರ ಮಳೆಯಲ್ಲಿ ಕರಗಿದೆ… ನೆನ್ನೆಯಷ್ಟೇ ಚಂದಗೊಳಿಸಿದ್ದ ಗೋಡೆಯ ಬಣ್ಣಗಳು ಮುರಿದುಬಿದ್ದ ಹೆಂಚುಗಳೊಂದಿಗೆ ಬಣ್ಣ ಹಂಚಿಕೊಂಡಿವೆ ಅದೆಷ್ಟೊ ಬೆಲೆಯಿತ್ತು ತಂದು ಅಷ್ಟೇ ಬೆಲೆಯ ಫ್ರೇಮಿನಲಿ ಸಿಕ್ಕಿಸಿಟ್ಟು ಬೀಗಿದ ಜಲವರ್ಣ ಚಿತ್ರ ಮಳೆಯಲ್ಲಿ ಕರಗಿದೆ ಆಳು ಕಾಳಿಗೂ ಬೇಡಿ ಕೇಳಿದವರಿಗೂ ನೀಡದೇ ಮುಂದೆ ಬೇಕಾದಿತೆಂದು ಪೇರಿಸುತ್ತಲೇ ಇಟ್ಟ ಧವಸ ನೆನಸಿ ಬೇಯಿಸುವ ಗೋಜಿಲ್ಲ ಧುತ್ತೆಂದು ಇಂದು ತಾನೇ-ತಾನಾಗಿ ಧಾರೆಯಲಿ ನೆನಸಿಕೊಂಡಿವೆ ಯಾರದೋ ಬಂಗಲೆಯ ಮುಂದಿನ ಗಣಪ ಪಕ್ಕದ
ನಾಗರೀಕತೆಯನ್ನು ಆರಂಭಿಸಿದ ಮಿತ್ರರು
ಅಂಕಣ ಬರಹ-01 ಶಾಂತಿ ವಾಸು ರೇಡಿಯೋ ಸಾಮ್ರಾಜ್ಯ ಸುಮಾರು ಎಪ್ಪತ್ತು ವರ್ಷಗಳ ಹಿಂದೆ ಬೆಂಗಳೂರು ಎಂಬುದು ಬಹು ನೆಮ್ಮದಿಯ ತಾಣವಾಗಿತ್ತು. ಕರ್ನಾಟಕದ ಬೇರೆ ಬೇರೆ ಹಳ್ಳಿಗಳು, ದೇಶದ ನಾನಾ ರಾಜ್ಯಗಳಿಂದ ಉದ್ಯೋಗ, ಜೀವನವನ್ನರಸಿ ಬಂದವರಿಗೆ ಬದುಕು ಸೃಷ್ಟಿಸುತ್ತಾ, ವಿವಿಧ ಸಂಸ್ಕೃತಿಯ ಜೊತೆಗೆ ಎಲೆಕ್ಟ್ರಿಕಲ್ಸ್ ಹಾಗೂ ಎಲೆಕ್ಟ್ರಾನಿಕ್ಸ್ ಎಂಬ ಆಧುನಿಕತೆಯನ್ನು ಅಳವಡಿಸಿಕೊಳ್ಳುತ್ತಿದ್ದ ಬೆಂಗಳೂರಿನಲ್ಲಿ, ಬೆಳಕಿನ ಮೂಲವಾಗಿ ಪರಿಚಯವಾದ ಮನೆಗಳ ಬಲ್ಬುಗಳು, ಬೀದಿ ದೀಪಗಳು, ಸೈಕಲ್ಲಿಗೆ ಡೈನಾಮ ಲೈಟ್, (ಸೈಕಲ್ಲು ತುಳಿಯುವಾಗ ಪುಟ್ಟ ಬಲ್ಬ್ ಹೊತ್ತಿಕೊಳ್ಳುತ್ತಿತ್ತು.) ಈ ಡೈನಾಮ ಲೈಟುಗಳು ಬರುವ ಮೊದಲು ಬೆಳಕಿನ ಉದ್ದೇಶಕ್ಕಾಗಿ ದೀಪ ಆರಿಹೋಗದಿರಲು ಸೀಮೆಎಣ್ಣೆ ಜೊತೆಗೆ ಎರಡು ಮೂರು ತರಹದ ಎಣ್ಣೆಯನ್ನು ಮಿಶ್ರ ಗೊಳಿಸಿ, ಹಸಿರು ಹಾಗೂ ಕೆಂಪು ಗಾಜಿನ ವಿಭಜಕಗಳಿದ್ದ ಸಣ್ಣ ಬಡ್ಡಿ ದೀಪದಲ್ಲಿ ತುಂಬಿಸಿ, ರಾತ್ರಿ ಹೊತ್ತು ರಸ್ತೆಗಳಲ್ಲಿ ದೀಪ ಉರಿಸಿಕೊಂಡು ಹೋಗುತ್ತಿದ್ದುದನ್ನು ಹಾಗೂ ಈ ವ್ಯವಸ್ಥೆ ಆಗಿನ ಕಾಲಕ್ಕೆ ಕಡ್ಡಾಯವಾಗಿತ್ತು ಎಂಬುದನ್ನು ಹಿರಿಯರು ಈಗಲೂ ನೆನಪಿಸಿಕೊಳ್ಳುತ್ತಾರೆ. ಇದು ಈ ಶೀರ್ಷಿಕೆಗೆ ಅನ್ವಯವಾಗದಿದ್ದರೂ, ನಮ್ಮಂಥ ಎಷ್ಟೋ ಜನರಿಗೆ ಇದು ಹೊಸ ವಿಷಯವಾದ್ದರಿಂದ ಹೇಳುತ್ತಿದ್ದೇನೆ ಅಷ್ಟೇ. 70ರ ದಶಕದಲ್ಲಿ ಮಧ್ಯಮ ವರ್ಗದವರಿಗೆ ಸ್ಕೂಟರು, ಕ್ಯಾಮೆರಾಗಳು, ಲೈಟರಿನಲ್ಲಿ ಉರಿಯುವ ಗ್ಯಾಸ್ ಸ್ಟವುಗಳು ಕೈಗೆಟುವ ಹಾಗಾದುವಲ್ಲದೆ, ಎಲೆಕ್ಟ್ರಾನಿಕ್ ಹಾಗೂ ಎಲೆಕ್ಟ್ರಿಕಲ್ಲಿನ ವಸ್ತುಗಳಾದ ಟ್ಯೂಬ್ ಲೈಟು, ಜನರೇಟರ್, ಆಂಟೆನಾ ಇದ್ದ ಟ್ರಾನ್ಸಿಸ್ಟರ್, ಎಲೆಕ್ಟ್ರಿಕ್ ಇಸ್ತ್ರಿಪೆಟ್ಟಿಗೆ, ಮಿಕ್ಸಿ, ನೀರು ಕಾಯಿಸುವ ಕಾಯಿಲ್, ಗೀಸರ್, ಕ್ಯಾಸೆಟ್ಟುಗಳಲ್ಲಿ ಹಾಡು ಕೇಳಬಹುದಾದ ಸ್ಟೀರಿಯೋ, , ಗ್ರಾಮಾಫೋನ್, ಕಾರ್ಯಕ್ರಮ ಹಾಗೂ ಸಮಾರಂಭದಲ್ಲಿ ಎತ್ತರದ ಕಂಬ, ಮರಗಳು, ಕಟ್ಟಡಗಳ ಮೇಲೆ ಕಟ್ಟುವ ಸ್ಪೀಕರುಗಳು, ನೀರಿನ ಮೋಟರು, ಟೇಬಲ್ ಫ್ಯಾನುಗಳು, ಸೀಲಿಂಗ್ ಫ್ಯಾನುಗಳು, ಗ್ರೈಂಡರ್, ಮನೆಯ ಮೇಲೆ ಆಂಟೆನಾ ಕಟ್ಟಬೇಕಿದ್ದ ಟೆಲಿವಿಷನ್, ಆಂಟೆನಾ ಇದ್ದ ಫೋನು, ಮೈಕುಗಳು, ಹೀಗೆ ಒಂದೊಂದಾಗಿ ಪರಿಚಯವಾಗುತ್ತಾ 20 ರೂಪಾಯಿಗೆ ಒಂದು ಆಟೋಮ್ಯಾಟಿಕ್ ಕೈಗಡಿಯಾರ ಎಂಬುದಂತೂ ಆಗಿನ ಒಂದು ದೊಡ್ಡ ಕ್ರಾಂತಿಕಾರಿ ಬೆಳವಣಿಗೆಯಾಗಿ ಹೋಯಿತು. ಮೇಲೆ ಹೇಳಿದ ವಿಷಯವು, ಬೆಂಗಳೂರಿನ ಜನಸಾಮಾನ್ಯರು 70ರ ದಶಕದಲ್ಲಿ, ಹಲವಾರು ಹೊಸತುಗಳನ್ನು ಹಂತಹಂತವಾಗಿ ಅಳವಡಿಸಿಕೊಳ್ಳುತ್ತಾ ಜೀವನಶೈಲಿಯನ್ನು ಉನ್ನತವಾಗಿಸಿಕೊಂಡು, ಬೆಳವಣಿಗೆಗೆ ಒಗ್ಗಿಕೊಂಡ ಸಂಕ್ಷಿಪ್ತ ಪಕ್ಷಿನೋಟಕ್ಕೆ ಸಾಕ್ಷಿಯಾದರೆ, ಅದೇ ದಶಕಕ್ಕೆ ಎಂಟು ಅಥವಾ ಹತ್ತು ವರ್ಷದ ಮಕ್ಕಳಾಗಿದ್ದವರಿಗೆ ಅಥವಾ ಅದಕ್ಕೂ ಹೆಚ್ಚಿನ ವಯಸ್ಸಾದವರಿಗೆ ರೇಡಿಯೋದಲ್ಲಿ ಬಿತ್ತರವಾಗುತ್ತಿದ್ದ ಜಾಹೀರಾತು ಎಂದಾಕ್ಷಣ ಇಂದಿಗೂ, ಎಂದಿಗೂ ನೆನಪಾಗುವುದು ಬಿನಾಕ ಹಲ್ಲುಪುಡಿ, ಗೋಪಾಲ್ ಹಲ್ಲುಪುಡಿ, ಕೋಲ್ಗೇಟ್ ಹಲ್ಲುಪುಡಿ, ವೀಕೋ ವಜ್ರದಂತಿ, ಲೈಫಬಾಯ್ ಸೋಪು ಎನ್ನುವುದು ಆಗಾಗ ಮೇಲುಕುಹಾಕುವ ವಿಚಾರ. ಆಗೆಲ್ಲ ಸುದ್ದಿ ಹಾಗೂ ಜಾಹೀರಾತಿನ ಮಾಧ್ಯಮವಾಗಿ ಬಾವುಟಗಳು, ಪೋಸ್ಟ್ ಕಾರ್ಡುಗಳು, ಟೆಲಿಗ್ರಾಂ ಹಾಗೂ ಪತ್ರಿಕೆಗಳು ಮಾತ್ರ ಪ್ರಚಲಿತದಲ್ಲಿದ್ದು, ಏನೇ ಸುದ್ದಿ ಇದ್ದರೂ ಮಾರನೇ ದಿನವೋ ಅಥವಾ ಎಂದಿಗೂ ತಿಳಿಯುತ್ತಿತ್ತು. ಎಷ್ಟೋ ವಿಷಯಗಳು ಕೆಲವೊಮ್ಮೆ ತಿಳಿಯುತ್ತಲೇ ಇರಲಿಲ್ಲವೆಂಬುದು ಸಾರ್ವಕಾಲಿಕ ವಿಪರ್ಯಾಸವೇ ಹೌದು. ಟೆಲಿಗ್ರಾಂ ಎಂದರೆ ಅಳಿಸುವುದಕ್ಕೇ ಬರುವುದು ಎನ್ನುವುದು ಆಗಿನ ಜನರ ನಂಬಿಕೆಯಾಗಿತ್ತು. ಹೀಗಿರುವಾಗ ಕಡಿಮೆ ವಿದ್ಯುತ್ತನ್ನು ಬಳಸಿ, ಆಗಿಂದಾಗ್ಗೆ ಸುದ್ದಿ ತಿಳಿದುಕೊಳ್ಳವ ಹಾಗೂ ಜನರ ಮನರಂಜನೆಗಾಗಿ ಬಂದ ಮೊದಲ ಹೆಜ್ಜೆ ಗುರುತಾದ ರೇಡಿಯೋವನ್ನು ಶ್ರೀಸಾಮಾನ್ಯರು ಸಂತಸದಿಂದಲೇ ಸ್ವಾಗತಿಸಿದ್ದರು. ಕರ್ನಾಟಕದ ಜನಸಾಮಾನ್ಯರಿಗೆ ಹಿಂದಿ ಭಾಷೆಯ ಪರಿಚಯ ಮಾತ್ರ ರೇಡಿಯೋ ಬಂದ ನಂತರವೇ ಆದದ್ದು ಸುಳ್ಳಲ್ಲ. ಹಾಗಾಗಿಯೇ 1940 ರಿಂದ 1980 ರವರೆಗಿನ ಕಾಲಘಟ್ಟವನ್ನು ಹಿಂದಿ ಹಾಡುಗಳ “ಸುವರ್ಣ ಯುಗ” ಎಂದು ಕರೆಯಬಹುದು. “ಮರ್ಫಿ” ಸಂಸ್ಥೆಯ ರೇಡಿಯೋಗಳು ಆಗಿನ ಕಾಲದ ಹೆಮ್ಮೆಯ ಉತ್ಪನ್ನವಾಗಿತ್ತು. ಶೆಲ್ಲಿನ ಸಹಾಯದಿಂದ ಚಲಾಯಿಸಬಹುದಾಗಿದ್ದ ಟ್ರಾನ್ಸಿಸ್ಟರುಗಳಿಗೆ ವಿದ್ಯುತ್ ಬೇಕಿರಲಿಲ್ಲವೆಂಬುದು ಆ ದಿನಗಳ ವಿಶೇಷ. ಪೆಟ್ಟಿಗೆ ಗಾತ್ರದ ರೇಡಿಯೋನಲ್ಲಿ ಮುಂದೆ ಇದ್ದ ಬ್ಯಾಂಡಿನ ಸಹಾಯದಿಂದ ಅತ್ತಿತ್ತ ಓಡಾಡುತ್ತಿದ್ದ ಮುಳ್ಳನ್ನು ನಿರ್ದಿಷ್ಟ ಸಂಖ್ಯೆಯ ಮೇಲೆ ನಿಲ್ಲಿಸಿದರೆ ಹಾಡುಗಳು, ವಾರ್ತೆಗಳು ಹಾಗೂ ಕ್ರಿಕೆಟ್ಟಿನ ಕಾಮೆಂಟರಿಯನ್ನು ಕೇಳಬಹುದಿತ್ತು. ತರಂಗಾಂತರದ ಮೂಲಕ ಪ್ರಸಾರವಾಗುತ್ತಿದ್ದ ಕಾರ್ಯಕ್ರಮ ಹಲವಾರು ಅಡಚನೆಗಳಿಂದ ಕೂಡಿರುತ್ತಿದ್ದು, ಮಧ್ಯೆ ಅಲೆಯ ಶಬ್ದ ಕೇಳುತ್ತಿತ್ತು. ಅನೇಕ ಸಂಧರ್ಭಗಳಲ್ಲಿ ಏನೂ ಕೇಳಿಸದೆಯೂ ನಿಂತು ಹೋಗುತ್ತಿತ್ತು. ಆಗ ಅಕ್ಕಪಕ್ಕದ ಮನೆಗಳಲ್ಲಿ ಪ್ರಸಾರವಾಗುತ್ತಿದ್ದ ಬಾನುಲಿಯನ್ನು ಜನ ಅರಸಿ ಹೋಗುತ್ತಿದ್ದುದು ಆ ಕಾಲದ ಜನರಿಗೆ ರೇಡಿಯೋ ಪ್ರೀತಿ ಎಷ್ಟಿತ್ತು ಎಂದು ತಿಳಿಯುತ್ತದೆ. ಇಷ್ಟೇ ಅಲ್ಲ, ಉದ್ಯಾನವನಗಳಲ್ಲಿ ಪ್ರತಿ ಸಂಜೆ (ಭಾನುವಾರ ಹೊರತುಪಡಿಸಿ) ಒಂದು ನಿರ್ಧಿಷ್ಟ ಸಮಯದಲ್ಲಿ ಪ್ರಸಾರವಾಗುತ್ತಿದ್ದ ರೇಡಿಯೋ ಕಾರ್ಯಕ್ರಮ ಕೇಳಲು ಜನರು ತಂಡೋಪತಂಡವಾಗಿ ಜಮಾಯಿಸಿರುತ್ತಿದ್ದರು. ಉದ್ಯಾನದ ಮಧ್ಯೆ, ರೇಡಿಯೋ ಹಾಕಿ ಎತ್ತರದ ಕಂಬಗಳ ಮೇಲೆ ಸ್ಪೀಕರುಗಳನ್ನು ಕಟ್ಟಿ ಆ ಮೂಲಕ ಜನರಿಗೆ ಸುದ್ದಿಗಳು, ಹಾಡು, ಕ್ರಿಕೆಟ್ ಕಾಮೆಂಟರಿ, ಶಾಸ್ತ್ರೀಯ ಸಂಗೀತ ಹೀಗೆ ಅನೇಕ ಕಾರ್ಯಕ್ರಮಗಳನ್ನು ಕೇಳಿಸಲಾಗುತ್ತಿತ್ತು. ಕೆಲವೊಮ್ಮೆ ರೇಡಿಯೋಗಳ ಜೊತೆಜೊತೆಗೆ ಆಗ ತೆರೆಕಂಡ ಕಪ್ಪುಬಿಳುಪು ಸಿನಿಮಾಗಳನ್ನು, ಆ ದಿನಗಳಲ್ಲಿ ರಾತ್ರಿ ಹೊತ್ತು ರಸ್ತೆಗಳಲ್ಲಿ ಪ್ರೊಜೆಕ್ಟರ್ ಮೂಲಕ ಎತ್ತರದ ಪರದೆ ಮೇಲೆ ಪ್ರದರ್ಶಿಸುತ್ತಿದ್ದರು. ಮಕ್ಕಳಿಗಾಗಿ ಮೌಲ್ಯಾಧಾರಿತ ಕನ್ನಡದ ಸಿನಿಮಾಗಳನ್ನು ಶಾಲೆಗಳಲ್ಲಿಯೂ ಪ್ರದರ್ಶಿಸುತ್ತಿದ್ದರು. ಮಿಕ್ಕಂತೆ ಚಿತ್ರಮಂದಿರಗಳಿಗೆ, ಟೆಂಟುಗಳಿಗೆ ಹೋಗಿ ದುಡ್ಡು ಕೊಟ್ಟು ನೋಡಬೇಕಾಗಿತ್ತಾಗಲೀ, ಈಗಿನಂತೆ ಟಿವಿಯ ವಿವಿಧ ಚಾನೆಲ್ಲುಗಳು, ಕಂಪ್ಯೂಟರ್, ಲ್ಯಾಪ್ ಟಾಪ್ ಮೊಬೈಲ್ ಅಥವಾ ಟ್ಯಾಬ್ಲೆಟ್ಟುಗಳು ಆಗ ಇರಲಿಲ್ಲ. ಹಾಗಾಗಿ ಸಿನಿಮಾ ಹಾಡುಗಳನ್ನು ಕೇಳಲು ರೇಡಿಯೋ ಎಂಬುದು, ಆಗಿನ ಕಾಲದ ಜನರ ಆಪ್ತಮಿತ್ರ ಎಂದರೆ ತಪ್ಪಾಗದು. *************************************************
ನಾಗರೀಕತೆಯನ್ನು ಆರಂಭಿಸಿದ ಮಿತ್ರರು Read Post »
ಅಂಕಣ ಬರಹ ಡಾ ಶ್ರೀಧರ್ ಗೌಡ ಉಪ್ಪಿನ ಗಣಪತಿ ಲೇಖಕರ ಪರಿಚಯ : ಡಾ ಶ್ರೀಧರ್ ಗೌಡ ಉಪ್ಪಿನ ಗಣಪತಿ ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕ.ಸಾಹಿತ್ಯ ಬರಹ ಹವ್ಯಾಸ.“ಕಡಲಿಗರ ಸಂಸ್ಕೃತಿ” ಸಂಶೋಧನ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಡಾಕ್ಟರ್ ಪ್ರದಾನ ಮಾಡಿದೆ. ಡಾಕ್ಟರ್ ಸೈಯದ್ ಜಮೀರುಲ್ಲಾ ಷರೀಫ್ ಮಾರ್ಗದರ್ಶಕರು.ಸಂಶೋಧನಾ ಮಹಾಪ್ರಬಂಧ ಪುಸ್ತಕ ರೂಪದಲ್ಲಿ ಪ್ರಕಟವಾಗಿದೆ. ಕುಮಟಾತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆಮೂರು ತಾಲೂಕು ಸಾಹಿತ್ಯ ಸಮ್ಮೇಳನ ಸಂಘಟನೆಪ್ರತಿ ತಾಲ್ಲೂಕು ಸಾಹಿತ್ಯ ಸಮ್ಮೇಳನವನ್ನು ಎರಡು ದಿನಗಳ ಕಾಲ ಸಂಘಟಿಸಿ ದ್ದು ಹೆಗ್ಗಳಿಕೆ ಇವರದ್ದು.ಎರಡು ತಾಲೂಕು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಸಂಘಟಿಸಿದ್ದಾರೆ. ಕಳೆದ ವರ್ಷ ಅವರು ಕರ್ತವ್ಯ ನಿರ್ವಹಿಸುವ ಶಾಲೆಯ ಇನ್ಸ್ಪೈರ್ ಅವಾರ್ಡ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗೆ ಮಾರ್ಗದರ್ಶನ ನೀಡಿ ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ದೆಹಲಿಯಲ್ಲಿ ನಡೆಯಲಿರುವ ಆ ಕಾರ್ಯಕ್ರಮಕ್ಕೆ ಈ ವರ್ಷ ಭಾಗವಹಿಸಲಿದ್ದಾರೆ.2019 20 ರಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.“ಹಾಲಕ್ಕಿ ರಾಕು” ಕಥಾಸಂಕಲನ ಅಚ್ಚಿನಲ್ಲಿದೆ. ಡಾ.ಶ್ರೀಧರ ಗೌಡ ಅವರ ಜೊತೆ ಮುಖಾಮುಖಿ ” ಮನಸ್ಸಿನ ತುಮುಲತೆ ಸಾಕ್ಷಿಕರಿಸಲು ಕವಿತೆಗೆ ಮೊರೆ “ ಕವಿತೆಗಳನ್ನು ಏಕೆ ಬರೆಯುವಿರಿ? ನನ್ನ ಮನಸ್ಸಿನ ತುಮುಲತೆ, ದುಗುಡುತೆ ಗಳನ್ನು ಸಾಕ್ಷಿ ಕರಿಸಲು ಕವಿತೆಗಳಿಗೆ ಮೋರೆ ಹೋಗಿ , ಕವಿತೆ ಬರೆಯುತ್ತಿದ್ದೇನೆ. ಕವಿತೆ ಹುಟ್ಟುವ ಕ್ಷಣ ಯಾವುದು ? ಕವಿತೆ ಹುಟ್ಟಲ್ಲ ಇಂತಹದ್ದೆ ಸಮಯ ಅಂತಿಲ್ಲ.ಒಂದು ಘಟನೆ ಮತ್ತೆ ಮತ್ತೆ ಮನಸ್ಸನ್ನು ಕಾಡುತ್ತಿದ್ದಾಗ ಅದರ ತೀವ್ರತೆಯನ್ನು ಹತ್ತಿಕ್ಕಲಾಗದೆ ಅಸಹಾಯಕ ಸ್ಥಿತಿಗೆ ತಲುಪಿದಾಗ ಅದರಿಂದ ಪರಿಹಾರ ಕಂಡುಕೊಳ್ಳಲು ಹೊಸ ಹೊಸ ಆಲೋಚನೆಗಳಿಂದ ಹೊರಬರುವ ಸಂದರ್ಭದಲ್ಲಿ ಕವಿತೆ ಹುಟ್ಟುತ್ತ ದೇ. ಕೆಲವೊಮ್ಮೆ ಬೈಕ್ ರೈಡಿಂಗ್ ಮಾಡುವಾಗಲು ಕವಿತೆ ಹುಟ್ಟಿದ್ದು ಇದೆ. ಕವಿತೆಯ ವಸ್ತು ಏನು? ಪದೇ ಪದೇ ಕಾಡುವ ವಿಷಯ ಯಾವುದು? ನನ್ನ ಕವಿತೆಗಳಲ್ಲಿ ವಸ್ತು ನನ್ನ ಸುತ್ತಲ ಪರಿಸರ. ನಮ್ಮ ಜನಾಂಗ .ನನ್ನನ್ನು ಮತ್ತೆ ಮತ್ತೆ ಕಾಡುವ ವಿಷಯವೇನೆಂದರೆ ,ಬಾಲ್ಯ ಕಳೆದು ಹರೆಯಕ್ಕೆ ಕಾಲಿಟ್ಟ ಯುವಜನತೆ ಹೆತ್ತು ಹೊತ್ತು ಸಾಕಿದ ತಂದೆತಾಯಿಗಳನ್ನು ವೃದ್ಧಾಶ್ರಮದಲ್ಲಿ ಬಿಟ್ಟು ಅವರ ಆಸ್ತಿಗೆ ಮಾತ್ರ, ವಾರಸುದಾರರಾಗಿ ರುವ ಸಂಗತಿ ನಿಮ್ಮ ಕವಿತೆಗಳಲ್ಲಿ ಬಾಲ್ಯ ಹರೆಯ ಇಣುಕಿದೆಯೇ ? ನನ್ನ ಕವಿತೆಗಳಲ್ಲಿ ಬಾಲ್ಯ ಹರೆಯ ಎರಡರ ಜೊತೆ ಮುಪ್ಪು ಕೂಡ ಇಣುಕಿದೆ. ಪ್ರಸ್ತುತ ರಾಜಕೀಯ ಸನ್ನಿವೇಶಕ್ಕೆ ನಿಮ್ಮ ಪ್ರತಿಕ್ರಿಯೆ ಏನು? ಪ್ರಸ್ತುತ ಸಂದರ್ಭದ ರಾಜಕೀಯ ಸನ್ನಿವೇಶಗಳು ನ್ಯಾಯಾಂಗ ಮತ್ತು ಕಾರ್ಯಾಂಗ ವನ್ನು ಮೀರಿ ಪ್ರಾಮುಖ್ಯತೆ ಪಡೆದು ಕೊಂಡಂತೆ ಭಾಸವಾಗುತ್ತದೆ. ಧರ್ಮ ಮತ್ತು ದೇವರ ವಿಷಯದಲ್ಲಿ ನಿಮ್ಮ ನಿಲುವೇನು? ಜಾತಿಗೊಂದು ಧರ್ಮ ವಾಗದೆ ಮನುಷ್ಯ-ಮನುಷ್ಯರ ನಡುವಿನ ಧರ್ಮ ಒಂದಾಗಬೇಕು.ಪ್ರಕೃತಿಯಲ್ಲಿ ಅಗೋಚರವಾಗಿರುವ ಅತೀಂದ್ರಿಯವಾದ ಒಂದು ಶಕ್ತಿ ಇದೆ ಎಂದು ಭಾವಿಸಿ ಕೊಳ್ಳುವುದಾದರೆ, ಅದನ್ನು ದೇವರು ಎಂಬ ಮೂರ್ತ ಸ್ವರೂಪದಲ್ಲಿ ನೋಡಬಹುದು. ದೇವರ ಕಲ್ಪನೆ ಅವರವರ ಭಾವಕ್ಕೆ ಬಿಟ್ಟದ್ದು. ಆದಾಗ್ಯೂ ದೇವರು ಎಂಬ ಭಾವನೆ ನಮ್ಮ ಒಳಗೆ ಒಂದಿಷ್ಟು ಭಕ್ತಿಯನ್ನು ಹುಟ್ಟಿಸುತ್ತದೆ ಭಕ್ತಿ ಮನಸ್ಸಿನ ಏಕಾಗ್ರತೆ ಯಾಗುತ್ತದೆ.ಅದು ಸಂಸ್ಕಾರದ ಮೂಲವಾಗುತ್ತದೆ. ಪ್ರಸ್ತುತ ಸಾಂಸ್ಕೃತಿಕ ವಾತಾವರಣ ಹೇಗಿದೆ ? ಸಂಸ್ಕೃತಿಯ ಕುರುಹುಗಳು ಸಾಂಸ್ಕೃತಿಕ ವಾತಾವರಣವನ್ನು ನಿರ್ಮಿಸುತ್ತದೆ. ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಕೇವಲ ಮನರಂಜನೆಗೆ ಸೀಮಿತಗೊಳಿಸುತ್ತಿರುವುದು ವಿಷಾದನೀಯ.ಮೈಸೂರು ದಸರಾ ಹಂಪಿ ಉತ್ಸವ ಅವೆಲ್ಲ ಬಿಡಿ ,ಕರಾವಳಿ ಉತ್ಸವದಲ್ಲಿ ಕೂಡ ಜನಾಂಗಿಕ ವಾಗಿರುವ ಕಲೆ ಸಂಪ್ರದಾಯಗಳು ಮುಖ್ಯವಾಹಿನಿಯಿಂದ ದೂರ ಸರಿಸಲು ಪಟ್ಟಿರುತ್ತದೆ. ಉದಾಹರಣೆಗೆ ಹಾಲಕ್ಕಿಗಳ ಸುಗ್ಗಿ ಕುಣಿತ ತಾರ್ಲೆ ಕುಣಿತ ಗುಮಟೆ ಪಾಂಗ್ ಮರಗಾಲ ಕುಣಿತ ಇತ್ಯಾದಿ ಸಾಂಸ್ಕೃತಿಕ ಕುರುಹುಗಳಿಗೆ ಜಾಗವಿಲ್ಲ.ಸಂಸ್ಕೃತಿಕ ಸಂಜೆ ಎಂದರೆ ಸಿನಿಮಾನಟರನ್ನು ರಾಜ್ಯ ರಾಷ್ಟ್ರ ಮಟ್ಟದ ಗಾಯಕರನ್ನು ಕರೆಯಿಸಿ ಕುಣಿಸುವುದು ಹಾಡಿಸುವುದು ಎಂಬ ಕಲ್ಪನೆ ಆಯೋಜಕ ರಿಗೂ ಬಂದಿರುವುದು ದುರಂತ. ಸಾಹಿತ್ಯದ ರಾಜಕೀಯ ಹೇಗಿದೆ? ನಿಮ್ಮ ಪ್ರತಿಕ್ರಿಯೆ ಏನು? ಸಾಹಿತ್ಯದಲ್ಲಿ ಪ್ರತ್ಯೇಕತೆ ಬೇಕು, ಆದರೆ ಸಾಹಿತಿಗಳ ನಡುವೆ ಅಲ್ಲ. ಸಾಹಿತ್ಯದಲ್ಲಿ ವಲಯದ ರಾಜಕಾರಣ ಅಂದರೆ ಅಚ್ಚರಿ ಪಡಬೇಕಾದ ದಿನಗಳು ಇದ್ದವು. ಅಂದರೆ ಸಾಹಿತ್ಯದಲ್ಲಿ ರಾಜಕಾರಣವೇ ಅದು ಹೇಗೆ ಎಂದು ಪ್ರಶ್ನಿಸುತ್ತಿದ್ದರು.ಆದರೆ ಇವತ್ತು ರಾಜಕೀಯದ ರಾಜಕಾರಣ ಗಿಂತಲೂ , ಸಾಹಿತ್ಯದ ರಾಜಕಾರಣದಲ್ಲಿ ಹೆಚ್ಚು ರಾಡಿ ತುಂಬಿಕೊಂಡಿದೆ. ಚುನಾವಣೆಗಳು ಬಂದಾಗ ಅವರವರ ವ್ಯಕ್ತಿಗೆ ಅವರ ಇಷ್ಟಕ್ಕೆ ಸಂಬಂಧಪಟ್ಟಂತೆ ಬೆಂಬಲ ನೀಡುವುದು ಸಹಜ ಗುಣ. ಆದರೆ ಅದನ್ನೇ ನೆಪ ಮಾಡಿಕೊಂಡು ಚುನಾವಣೆಯಲ್ಲಿ ನಮ್ಮ ವಿರುದ್ಧ ಮಾಡಿದವರು ಎಂದು ಭಾವಿಸಿ ಅಂತರ ಕಾಯ್ದುಕೊಳ್ಳುವುದು ಸಾಹಿತ್ಯದ ಬೆಳವಣಿಗೆ ಯಂತೂ ಅಲ್ಲ.ಸಾಹಿತ್ಯ ವಲಯ ಒಂದಿಷ್ಟು ಚುರುಕುತನದಿಂದ ಕೆಲಸ ಮಾಡುತ್ತಿರುವುದು ಸಂತೋಷದ ವಿಷಯ. ದೇಶದ ಚಲನೆಯ ಬಗ್ಗೆ ಏನನಿಸುತ್ತದೆ ? ಈ ದೇಶದ ಚಲನ ಶೀಲ ವಾಗಿರದೆ , ಎಲ್ಲೋ ಒಂದು ಕಡೆ ಕೇಂದ್ರೀಕೃತವಾಗಿ ನಿಂತುಬಿಟ್ಟಿದೆ ಎಂಬ ಭಾವನೆ ಬರುತ್ತಿದೆ. ಬಹುಶಃ ಚುನಾವಣೆಗಳು ನಡೆಯದಿದ್ದರೆ ಪ್ರಜಾಪ್ರಭುತ್ವ ಮರೆತು ಮತ್ತೆ ವ್ಯಕ್ತಿ ಆಧಾರಿತ ಸರ್ಕಾರದಲ್ಲಿ ನಾವಿದ್ದೆವು ಎಂಬ ಭಾವನೆ ಬಂದರು ಅಚ್ಚರಿಯಿಲ್ಲ. ನಿಮ್ಮ ಮುಂದಿನ ಕನಸೇನು? ಈ ನೆಲ ಮಣ್ಣಿನ ಸಂಸ್ಕೃತಿಯ ಬೆವರಿನ ಹೊದಿಕೆ ಹೊದ್ದುಕೊಂಡಿರುವ ನಮ್ಮ ಜನಾಂಗದ ಕುರಿತು ಒಂದು ಅದ್ಭುತ ಕೃತಿ ಹೊರತರಬೇಕು ಎಂಬ ಕನಸಿದೆ. ನಿಮ್ಮ ಇಷ್ಟದ ಲೇಖಕರು ಯಾರು? ಕನ್ನಡದಲ್ಲಿ ಕುವೆಂಪು ,ಭೈರಪ್ಪ, ದೇವನೂರು ಮಹದೇವ ಮತ್ತು ಸೈಯದ್ ಜಮೀರುಲ್ಲಾ ಷರೀಫ್.ಇಂಗ್ಲಿಷ್ ಕವಿಗಳ ಬಗ್ಗೆ ಅಷ್ಟೊಂದು ಆಳವಾದ ಅಧ್ಯಯನ ನನ್ನಿಂದ ನಡೆದಿಲ್ಲ. ಷೇಕ್ಸ್ ಪಿಯರ್ ನನ್ನಿಷ್ಟದ ಕವಿ ಅವರ Mid summer Night ನನ್ನನ್ನು ಬಹಳ ಕಾಡಿದ ಕೃತಿ. ಈಚೆಗೆ ಓದಿದ ಕೃತಿಗಳಾವವು? ಶಾಮಿಯಾನ ಕವಿ ಇದು ಡಾಕ್ಟರ್ ಸೈಯದ್ ಜಮೀರುಲ್ಲಾ ಷರೀಫ್ ಅವರ ಸಮಗ್ರ ಸಾಹಿತ್ಯದ ಕೃತಿ . ಡಾ. ಸುರೇಶ ನಾಯಕ್ ಸಂಪಾದಕತ್ವದಲ್ಲಿ ಮೂಡಿಬಂದಿದೆ.“ಹುಡುಕಿ ಕೊಡುವಿರಾ ಕಾಣೆಯಾಗಿರುವ ದರ್ಜೆಯವನ ಹೊಲಿಯಲು ಬೇಕಾಗಿದೆ ಕೇಸರಿ ಬಿಳಿ ಹಸಿರು ಕೆಂಪು ಗುಲಾಬಿ ಬಣ್ಣದ ತುಂಡು ಬಟ್ಟೆಗಳ ಶಾಮಿಯಾನ “ಮನುಷ್ಯ-ಮನುಷ್ಯರ ನಡುವಿನ ಸಂಬಂಧವನ್ನು ಕವಿ ಶರೀಫರು ಮಾರ್ಮಿಕವಾಗಿ ಚಿತ್ರಿಸಿದ್ದು ಭಟ್ಕಳದಲ್ಲಿ ಕೋಮುದಳ್ಳುರಿ ಹೊತ್ತಿ ಉರಿಯುತ್ತಿದ್ದ ಸಂದರ್ಭದಲ್ಲಿ. ಸಾಹಿತ್ಯದಿಂದ ಸೌಹಾರ್ದತೆ ಸಾಧಿಸಿದ ಸಾಲುಗಳು. ನಿಮಗೆ ಇಷ್ಟದ ಕೆಲಸ ಯಾವುದು? ನನಗೆ ಇಷ್ಟವಾದ ಕೆಲಸ ತರಗತಿಯಲ್ಲಿ ಪಾಠ ಬೋಧನೆ. ಇಷ್ಟದ ಸ್ಥಳ ಯಾವುದು ? ನನಗೆ ಇಷ್ಟವಾದ ಸ್ಥಳ ನನ್ನೂರು ಉಪ್ಪಿನ ಗಣಪತಿ. ನಿಮ್ಮ ಇಷ್ಟದ ಸಿನಿಮಾ ಯಾವುದು? ನನ್ನ ಇಷ್ಟವಾದ ಸಿನಿಮಾ ಶಂಕರ್ ನಾಗ ಅಭಿನಯದ ಮೂಗನ ಸೇಡು ನಿಮ್ಮ ಜೀವನದಲ್ಲಿ ಮರೆಯಲಾಗದ ಘಟನೆ ಯಾವುದು ? ನಾನು ಪ್ರಾಥಮಿಕ ಶಾಲಾ ಶಿಕ್ಷಕನಾಗಿ ನೇಮಕಗೊಂಡ ಹೊನ್ನಾವರದ ಜನ್ನ ಕಡಕಲ್ ಶಾಲೆ ಹುಡುಕಲು ಹರಸಾಹಸ ಪಟ್ಟಿದ್ದು ಎಂದು ಮರೆಯದ ಘಟನೆಯಾಗಿಇಂದಿಗೂ ಉಳಿದುಕೊಂಡಿದೆ. ಅಂತಿಮವಾಗಿ ನಿಮಗೆ ಏನು ಹೇಳಬೇಕು ಅನ್ಸತದ ? ಇಂದು ಸಾಹಿತ್ಯ ವ್ಯಾಪಾರವಾಗುತ್ತಿದೆ ಎಂಬ ಭಾವನೆ ಎಲ್ಲೆಡೆ ಭಾಸವಾಗು ತ್ತಿದೆ . ಶಾಲೆಯಲ್ಲೂ ಕೂಡ ಅಂಕಗಳಿಗೆ ಸೀಮಿತವಾಗಿ ಪಠ್ಯವನ್ನು ಸಿದ್ಧಪಡಿಸಿರುವುದು ಸಾಹಿತ್ಯದ ಬೆಳವಣಿಗೆ ಯಂತೂ ಅಲ್ಲಾ. ಮಕ್ಕಳ ಬೌದ್ಧಿಕ ಬೆಳವಣಿಗೆ ವಾಕ್ ಚಾತುರ್ಯಕ್ಕೆ ವಿಷಯ ವಿಶ್ಲೇಷಣೆಗೆ ಪಠ್ಯದಲ್ಲಿ ಅವಕಾಶಗಳು ತುಂಬಾನೇ ಕಡಿಮೆ.ಕುವೆಂಪು ಬೇಂದ್ರೆ ಕಾರ್ನಾಡ್ ಕಂಬಾರ್ ಮಾಸ್ತಿ ಕಾರಂತ ಸೇರಿದಂತೆ ನಾಡಿನ ಸಾಹಿತಿಗಳ ಸಾಹಿತ್ಯದ ಚರ್ಚೆ ವಿಮರ್ಶೆಗಳಿಗೆ ಪಠ್ಯ ದಲ್ಲಿ ಅವಕಾಶ ನೀಡಬೇಕು.ಸಾಹಿತ್ಯದ ವಿಚಾರ ಕಮ್ಮಟಗಳು ಹೆಚ್ಚೆಚ್ಚು ಪ್ರತಿ ಗ್ರಾಮಮಟ್ಟದಿಂದ ನಡೆಯಬೇಕು. ಕರ್ನಾಟಕ ಸಾಹಿತ್ಯ ಅಕಾಡೆಮಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಕನ್ನಡಪರ ಸಂಘಟನೆಗಳು ಒಂದೆಡೆ ಸೇರಿ ಕನ್ನಡ ಸಾಹಿತ್ಯದ ಕುರಿತು ಚರ್ಚೆ ವಿಮರ್ಶೆ ನಡೆಸಿ ಸಾಹಿತ್ಯ ಕುರಿತು ಆಸಕ್ತಿ ಮೂಡುವಂತೆ ಮಾಡಬೇಕು.******************* ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಂಕಣ ಬರಹ ಸೋತು ಗೆದ್ದ ಮನುಷ್ಯ ಸೋತು ಗೆದ್ದ ಮನುಷ್ಯತೆಲುಗು ಮೂಲ : ಮಲ್ಲಾರೆಡ್ಡಿಅನುವಾದ : ಕಸ್ತೂರಿಪ್ರ : ನವಕರ್ನಾಟಕ ಪಬ್ಲಿಕೇಷನ್ಸ್ಪ್ರಕಟಣೆಯ ವರ್ಷ : ೨೦೧೭ಬೆಲೆ : ರೂ.೧೦೪ ¥ಪುಟಗಳು :೧೫೨ ಇದು ತೆಲುಗು ಮೂಲದ ಮಲ್ಲಾರೆಡ್ಡಿಯವರ ಆತ್ಮಕಥೆ. ವಿಷಮ ಪರಿಸ್ಥಿತಿಗಳು ತಂದ ನೋವು-ಸಂಕಷ್ಟಗಳಿಂದಾಗಿ ಮಾನಸಿಕವಾಗಿ ನೊಂದು ಬದುಕಿನಲ್ಲಿ ಭರವಸೆಯನ್ನೇ ಕಳೆದುಕೊಂಡು ಮಾನಸಿಕವಾಗಿ ಅಸ್ವಸ್ಥನಾದ ವ್ಯಕ್ತಿಯೊಬ್ಬ ತನ್ನ ಎಲ್ಲಾ ಅನುಭವಗಳನ್ನು ಇಲ್ಲಿ ವಿವರವಾಗಿ ಮನಮುಟ್ಟುವಂತೆ ಹೇಳುತ್ತಾನೆ. ತೀರಾ ಎಳೆಯ ಹುಡುಗನಾಗಿದ್ದಾಗಲೇ ಸೂಕ್ಷ್ಮ ಸಂವೇದನೆಯುಳ್ಳವನಾಗಿದ್ದರಿಂದ ತನ್ನ ಸುತ್ತ ಮುತ್ತ ನಡೆಯುವ ಎಲ್ಲಾ ವಿದ್ಯಮಾನಗಳನ್ನು ಆತ ತಣ್ಣಗೆ ಗಮನಿಸುತ್ತಾನೆ. ಅವನದ್ದು ಅವಿಭಕ್ತ ಕುಟುಂಬ. ಅವನು ತಂದೆಗೆ ಎರಡನೆಯ ಹೆಂಡತಿಯ ಮಗ. ತನ್ನ ತಂದೆ ತನ್ನ ತಾಯಿಗೆ ಹೆಚ್ಚು ಪ್ರೀತಿಯನ್ನು ಕೊಟ್ಟು ಮೊದಲ ಹೆಂಡತಿಯನ್ನು ಕಡೆಗಣಿಸುವುದನ್ನು ಪುಟ್ಟ ಹುಡುಗ ನೋಡುತ್ತಾನೆ. ಮುಂದೆ ಮೊದಲ ಹೆಂಡತಿ ತನ್ನ ಪಾಲಿನ ಆಸ್ತಿಯನ್ನು ಕೇಳಿ ಕುಟುಂಬವನ್ನು ಬಿಟ್ಟು ತನ್ನ ಮಕ್ಕಳೊಂದಿಗೆ ಬೇರೆಡೆಗೆ ಹೋಗಿದ್ದು ಅವನನ್ನು ಅಪಾರವಾಗಿ ನೋಯಿಸುತ್ತದೆ. ಅವನು ದೊಡ್ಡಮ್ಮನ ಮಗನನ್ನು ಅಪಾರವಾಗಿ ಪ್ರೀತಿಸಿದ್ದ . ಚಿಕ್ಕವನಾಗಿದ್ದಾಗ ನೆರೆಮನೆಯ ರಾಮು ಅವನ ಆತ್ಮೀಯ ಗೆಳೆಯನಾಗಿದ್ದ. ಆದರೂ ಅವನಿಗೆ ಗೊತ್ತಿಲ್ಲದೆಯೇ ಅವನು ಒಮ್ಮೆ ರಾಮುವಿನ ಪೆನ್ನನ್ನು ಕದ್ದಿದ್ದ. ಮುಂದೆ ಹೈಸ್ಕೂಲು ಮುಗಿಸಿ ಹೈದರಾಬಾದಿನಲ್ಲಿ ಕಾಲೇಜು ಶಿಕ್ಷಣಕ್ಕಾಗಿ ಅವನು ಹೋಗುತ್ತಾನೆ. ಅಲ್ಲಿ ಸೀಟು ಸಿಕ್ಕದೆ ಅವನು ತುಂಬಾ ಅಡೆತಡೆಗಳನ್ನು ಅನುಭವಿಸಬೇಕಾಗುತ್ತದೆ. ಅದರ ಪರಿಣಾಮವಾಗಿ ಅವನು ಮನೋರೋಗಕ್ಕೆ ತುತ್ತಾಗುತ್ತಾನೆ. ಆರಂಭದಲ್ಲಿ ವೈದ್ಯರ ಬಳಿಗೆ ಹೋಗಲು ಯಾವುದೋ ಕೀಳರಿಮೆಯಿಂದಾಗಿ ಅವನು ಹಿಂದೇಟು ಹಾಕುತ್ತಾನೆ. ಆದರೆ ಸರಿಯಾದ ಸಮಯಕ್ಕೆ ಯಾರದ್ದೋ ಉಪದೇಶದಿಂದ ಸೂಕ್ತ ಚಿಕಿತ್ಸೆ ಪಡೆದು ಗುಣಮುಖನಾಗುತ್ತಾನೆ . ದೈಹಿಕವಾಗಿ ಗಟ್ಟಿಮುಟ್ಟಾಗಿದ್ದ ಅವನು ಮುಂದೆ ತನ್ನ ಶಿಕ್ಷಣವನ್ನು ಮುಂದುವರೆಸಿ ಭಾರತದ ವಿವಿಧ ರಾಜ್ಯಗಳಲ್ಲಿ ಮಾತ್ರವಲ್ಲದೆ ಅಲ್ಜೀರಿಯಾಗೂ ಹೋಗಿ ಅಲ್ಲಿ ಇಂಗ್ಲಿಷ್ ಅಧ್ಯಾಪಕನಾಗಿ ಉದ್ಯೋಗ ಗಳಿಸಿ ಜೀವನದಲ್ಲಿ ಯಶಸ್ವಿಯಾಗುತ್ತಾನೆ. ಅನೇಕರು ತಮಗೆ ರೋಗವಿದೆಯೆಂದು ಗೊತ್ತಿದ್ದೂ ಮಾನಸಿಕ ತಜ್ಞರನ್ನು ಭೇಟಿಯಾಗಲು ಹಿಂದೇಟು ಹಾಕಿ ತಮ್ಮ ರೋಗ ಉಲ್ಬಣಗೊಳ್ಳುವುದಕ್ಕೆ ತಾವೇ ಕಾರಣರಾಗುತ್ತಾರೆ, ಅಂಥವರಿಗೆ ಮಾರ್ಗದರ್ಶನ ನೀಡುವಂಥ ಒಂದು ಕೃತಿಯಿದು. ಕೃತಿಯ ವಸ್ತು ಪ್ರಸ್ತುತತೆಯುಳ್ಳದ್ದಾಗಿದೆ. ಭಾಷೆ, ನಿರೂಪಣಾ ಶೈಲಿಗಳು ಸರಳವೂ ಸುಲಲಿತವೂ ಆಗಿದ್ದು ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ******************************** ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ
ಅಂಕಣ ಬರಹ ಪ್ರಶ್ನೆಯ ಜರೂರಿ ಕೆಲವು ವರ್ಷಗಳ ಹಿಂದೆ ಎರಡು ವಿದ್ಯಮಾನ ಜರುಗಿದವು. ಒಂದು- ತಾನು ಓದುವ ಶಾಲೆಯನ್ನು ತಾಲಿಬಾನಿಗಳು ಯಾಕೆ ಕೆಡವಬೇಕು ಎಂದು ಪ್ರಶ್ನಿಸಿದ ಪುಟ್ಟಬಾಲೆ ಮಲಾಲಳದು. ಎರಡು-ಬಾಳಾಸಾಹೇಬ್ ಠಾಕರೆ ತೀರಿಕೊಂಡರೆ ಮುಂಬೈ ಬಂದ್ ಯಾಕೆ ಮಾಡಬೇಕು ಎಂದು ಚರ್ಚಿಸಿದ ಇಬ್ಬರು ತರುಣಿಯರದು. ಸುತ್ತಮುತ್ತ ಬದುಕುತ್ತಿರುವ ಲಕ್ಷಾಂತರ ಜನರಲ್ಲಿ ಹುಟ್ಟದ ಪ್ರಶ್ನೆಗಳು ಈ ಹುಡುಗಿಯರಲ್ಲಿ ಸಹಜವಾಗಿ ಹೇಗೆ ಹುಟ್ಟಿಕೊಂಡವು? ನಮಗೇತಕ್ಕೆ ಇಲ್ಲದ ರಗಳೆ ಎಂದು ಬಹುಸಂಖ್ಯಾತ ಸಾರ್ವಜನಿಕರು ಸುರಕ್ಷಿತಮೌನ ತಾಳಿರುವಾಗ ಕೆಲವರೇಕೆ ಕೇಳುವ ದಿಟ್ಟತನ ತೋರುತ್ತಾರೆ? ಪ್ರಶ್ನೆ ಕೇಳುವುದು ಆಲೋಚನ ಶಕ್ತಿಯುಳ್ಳ ಎಲ್ಲ ವ್ಯಕ್ತಿಗಳಲ್ಲೂ ಇರುವ ಸಹಜ ಗುಣ. ಆದರೆ ಹಾಗೆ ಕೇಳದಂತೆ ತಡೆಯಲು ನೂರಾರು ಅಂಕುಶಗಳು ಸಮಾಜದಲ್ಲಿರುತ್ತವೆ. ಆದರೆ ಈ ತಡೆಗಳ ಒಳಗೂ ಪ್ರಶ್ನೆಯನ್ನು ಹುಟ್ಟಿಸಿಕೊಳ್ಳುವುದು ಮುಖ್ಯ; ಅದನ್ನು ಬಹಿರಂಗವಾಗಿ ಕೇಳುವುದು ಮತ್ತು ಅದರ ಪರಿಣಾಮ ಅನುಭವಿಸಲು ಸಿದ್ಧವಾಗುವುದು ಇನ್ನೂ ಮುಖ್ಯ. ಇದನೇ ಕುವೆಂಪು ನಿರಂಕುಶಮತಿತ್ವ ಎಂದು ಕರೆದಿದ್ದು. ಈ ನಿರಂಕುಶಮತಿತ್ವದ ಮಾರಣಾಂತಿಕ ಪರಿಣಾಮವನ್ನು ಸಾಕ್ರೆಟಿಸ್ ಎದುರಿಸಿದ; ಅನೇಕ ಸೂಫಿಗಳು, ಚಾರ್ವಾಕರು ಎದುರಿಸಿದರು; ಭಗತ್‍ಸಿಂಗ್ ಮುಂತಾದ ಹೋರಾಟಗಾರರು ಮುಖಾಮುಖಿ ಮಾಡಿದರು; ಈಗ ಪತ್ರಕರ್ತರು ಚಿಂತಕರು ಎದುರಿಸುತ್ತಿದ್ದಾರೆ. ನಮ್ಮ ಮನೆಗಳಲ್ಲಿ ಎಷ್ಟೊ ಮಹಿಳೆಯರು ಇದರ ಕಹಿಫಲವನ್ನು ಉಂಡಿದ್ದಾರೆ. ಪ್ರಶ್ನೆಗಳು ಕೇವಲ ಸ್ಥಾಪಿತ ವ್ಯವಸ್ಥೆಯನ್ನು ವಿರೋಧಿಸುವ ಕಾರಣದಿಂದ ಹುಟ್ಟುತ್ತವೆ ಎಂದು ತಿಳಿಬೇಕಿಲ್ಲ. ಅವು ಕುತೂಹಲದ ದೆಸೆಯಿಂದಲೂ ಹುಟ್ಟಬಹುದು. ಮಕ್ಕಳು ಸಹಜ ವಿಸ್ಮಯದಿಂದ ಎಷ್ಟೊಂದು ಪ್ರಶ್ನೆ ಕೇಳುತ್ತಿರುತ್ತವೆ? ಯಾಕೆ ಸಂಜೆ ಮುಂಜಾನೆ ಸೂರ್ಯ ಕೆಂಪಗೆ ಕಾಣುತ್ತದೆ? ಹೂವುಗಳಿಗೆ ಏಕಿಷ್ಟು ಬಣ್ಣಗಳಿವೆ? ನೀರೇಕೆ ಹರಿಯತ್ತದೆ? -ಹೀಗೆ ನೂರಾರು. ಇವನ್ನು ಕೇಳಿಸಿಕೊಳ್ಳುವ ಸಹನೆ ಮತ್ತು ಉತ್ತರಿಸುವ ತಿಳಿವು ಬಹುತೇಕ ಹಿರಿಯರಲ್ಲಿ ಇರುವುದಿಲ್ಲ. ತಿಳಿವನ್ನು ಕೊಡುವ ಜಾಗಗಳಾಗಿರುವ ತರಗತಿಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಎಷ್ಟೊಂದು ಪ್ರಶ್ನೆಗಳನ್ನು ಹೊಸಕಿ ಹಾಕಿರಬಹುದು ಎಂದು ನೆನೆದರೆ ಭಯವಾಗುತ್ತದೆ. ಸಹಜ ಪ್ರಶ್ನೆಯನ್ನು ದಮನಿಸುವುದು, ಕೇಳುವವರ ಚೈತನ್ಯವನ್ನೇ ದಮನಿಸಿದಂತೆ. ನಿಜವಾದ ಗುರುಗಳೂ ಕೇವಲ ಪ್ರಶ್ನೆಗೆ ಉತ್ತರಿಸುವುದಿಲ್ಲ. ಪ್ರಶ್ನೆ ಕೇಳುವ ಮನೋಭಾವವನ್ನೂ ನಿರ್ಮಿಸುತ್ತಿರುತ್ತಾರೆ. ತಂದೆತಾಯಿಗಳು ಆದರ್ಶರಾಗುವುದು, ಮಕ್ಕಳಿಗೆ ಸರಿಯಾದ ಆಹಾರ ಬಟ್ಟೆ ವಸತಿ ಕೊಡುವ ಸಾಮಾಜಿಕ ಹೊಣೆಗಾರಿಕೆ ನಿಭಾಯಿಸುವುದರಿಂದ ಮಾತ್ರವಲ್ಲ, ಅವರ ಪ್ರಶ್ನೆ, ಕುತೂಹಲ, ನಿರ್ದಿಷ್ಟ ಕ್ಷೇತ್ರದಲ್ಲಿ ಕೆಲಸ ಓದುವ ಸಹಜ ಹಕ್ಕುಗಳನ್ನು ನಾಶಮಾಡಿದ್ದಾರೊ ಇಲ್ಲವೊ ಎಂಬುದರ ಮೇಲೆ. ತನ್ನ ಪ್ರಶ್ನೆಯನ್ನು ಹೊಸಕಿಹಾಕಿದ ಅಪ್ಪನ ವಿರುದ್ಧ ಬಂಡೆದ್ದ ಪುರಾಣದ ನಚಿಕೇತ ನೆನಪಾಗುತ್ತಾನೆ. ಬಹುತೇಕ ಧರ್ಮಗಳು ಹೊಸ ಪ್ರಶ್ನೆಗಳನ್ನು ಕೇಳುವ ಧೀಮಂತರಿಂದಲೇ ಹುಟ್ಟಿವೆ. ಮುಂದೆ ಅವೇ ಧರ್ಮಗಳು ಪ್ರಶ್ನೆಗಳನ್ನು ಹತ್ತಿಕ್ಕಿಯೇ ಬೆಳೆದಿವೆ. ಬುದ್ಧನಂತಹ ಕೆಲವರು ಮಾತ್ರ ಪ್ರಶ್ನೆ ತಿಳಿವಿನ ಮೂಲವೆಂದು ನಂಬಿದ್ದರು. ನಾನು ಹೇಳಿದ್ದು ಒಪ್ಪಿಗೆಯಾಗದಿದ್ದರೆ ನಿನ್ನ ದಿಟವನ್ನು ನೀನೇ ಹುಡುಕಿಕೊ ಎಂದು ಬುದ್ಧ ನೇರವಾಗಿ ಹೇಳಿದನು. ಹೀಗೆ ಹೇಳಲು ಒಬ್ಬ ಗುರುವಿಗೆ ಬಹಳ ಧೈರ್ಯ ಬೇಕು. ಮಗುವೊಂದು ಹುಟ್ಟುವ ಜೈವಿಕಕ್ರಿಯೆ ಬಲ್ಲ ಎಲ್ಲರಿಗೂ ಅದಕ್ಕೆ ಜಾತಿ ಧರ್ಮಗಳಿರುವುದಿಲ್ಲ ಎಂಬುದು ಗೊತ್ತಿದ್ದರೂ, ಅದು ಹುಟ್ಟಿ ಲೋಕಕ್ಕೆ ಬಂದ ಕೂಡಲೇ ಅದಕ್ಕೆ ಜಾತಿ ಧರ್ಮಗಳು ಯಾಕೆ ಸುತ್ತಿಕೊಳ್ಳುತ್ತವೆ? ಹುಟ್ಟಿನಿಂದ ಯಾಕೆ ಕೆಲವರು ಕೀಳು ಅಥವಾ ಮೇಲು ಅನಿಸಿಕೊಳ್ಳಬೇಕು? ಕೆಲವರು ಯಾಕಷ್ಟು ದುಡಿದರೂ ಬಡವರಾಗಿ ಉಳಿದಿದ್ದಾರೆ? ಯಾಕೆ ವಾಸದ ಪರಿಸರವನ್ನು ಚೊಕ್ಕಟವಾಗಿ ಇರಿಸಿಕೊಳ್ಳಲು ನಮಗೆ ಸಾಧ್ಯವಾಗಿಲ್ಲ? ಯಥೇಚ್ಛವಾದ ನಿಸರ್ಗ ಸಂಪತ್ತಿದ್ದರೂ ಭಾರತದಲ್ಲೇಕೆ ಬಡತನವಿದೆ? ಎಲ್ಲರಿಗೂ ಸೇರಬೇಕಾದ ಸಂಪತ್ತನ್ನು ಲೂಟಿಹೊಡೆದವರು ಹೇಗೆ ಆರಾಮಾಗಿ ಬದುಕುತ್ತಿದ್ದಾರೆ? ದುಷ್ಟರು ಕಳ್ಳರು ಎಂದು ಗೊತ್ತಿದ್ದರೂ ಜನ ಯಾಕೆ ಕೆಲವರನ್ನು ಚುನಾವಣೆಯಲ್ಲಿ ಆರಿಸುತ್ತಾರೆ? ಸ್ತ್ರೀಯರನ್ನು ನಿಕೃಷ್ಟವಾಗಿ ಚಿತ್ರಿಸುವ ಲೇಖಕರಿಗೆ ಯಾಕೆ ಮಹಿಳಾ ಓದುಗರೇ ಹೆಚ್ಚಿದ್ದಾರೆ? ಹೀಗೆ ನೂರಾರು ಪ್ರಶ್ನೆಗಳಿವೆ. ಪ್ರ್ರಶ್ನೆ ಹುಟ್ಟುವುದು ಮತ್ತು ಪ್ರಕಟವಾಗುವುದು ಮಾತ್ರವಲ್ಲ, ಅವು ಕ್ರಿಯೆಗೂ ಕಾರಣವಾಗಬೇಕು. ಈ ಕ್ರಿಯೆ ತಪ್ಪಾದ ವ್ಯವಸ್ಥೆಯನ್ನು ಬದಲಿಸಬೇಕು. ಮಲಾಲಾ ಎತ್ತಿದ ಪ್ರಶ್ನೆ ತಾಲಿಬಾನಿಗಳನ್ನು ಪ್ರತಿರೋಧಿಸುವ ಹೊಸಅಲೆಯನ್ನು ಹುಟ್ಟಿಸಿತು. ಲೋಕದಲ್ಲಿ ಸ್ವತಂತ್ರವಾಗಿ ವಿಚಾರಮಾಡುವ ಪ್ರವೃತ್ತಿಯೇ ಹೊಸ ಪ್ರಶ್ನೆಗಳ ತಾಯಿ; ಪ್ರಶ್ನೆಗಳು ನಿಸರ್ಗ ರಹಸ್ಯಗಳನ್ನು ಶೋಧಿsಸುವ ವಿಜ್ಞಾನವನ್ನು ಬೆಳೆಸಿವೆ; ಹಳೆಯ ಸಮಾಜವನ್ನು ಹೊಸ ಸಮಾಜವಾಗಿ ಬದಲಿಸಿವೆ. ನಮ್ಮ ಪೂರ್ವಿಕರು ಪ್ರಶ್ನೆ ಕೇಳಿಕೊಳ್ಳದಿದ್ದರೆ ಬೆಂಕಿ ಅಥವಾ ಬೇಸಾಯ ಶೋಧ ಆಗುತ್ತಿರಲಿಲ್ಲ. ವಿಜ್ಞಾನ ತಂತ್ರಜ್ಞಾನದ ಫಲವಾಗಿ ನಾವಿಂದು ಅನುಭವಿಸುತ್ತಿರುವ ಸೌಲಭ್ಯಗಳು ಇರುತ್ತಿರಲಿಲ್ಲ. ಪ್ರಶ್ನೆಯಿಲ್ಲದೆ ಸ್ಥಾಪಿತಸತ್ಯಗಳ ಒಳಗಿನ ಹುಸಿ ಹೊರಬರುವುದಿಲ್ಲ; ಹೊಸ ಚಿಂತನೆ ಹುಟ್ಟುವುದಿಲ್ಲ. ನಾವೇಕೆ ಹೀಗಿದ್ದೇವೆ ಎಂಬ ಪ್ರಶ್ನೆ ಹುಟ್ಟಿರದಿದ್ದರೆ, ಅಮೆರಿಕೆಯ ಕಪ್ಪುಜನ ಗುಲಾಮಗಿರಿಯಿಂದ ಸ್ವತಂತ್ರರಾಗುತ್ತಿರಲಿಲ್ಲ; ಭಾರತೀಯರು ಬ್ರಿಟಿಶರ ವಿರುದ್ಧ ಹೋರಾಡುತ್ತಿರಲಿಲ್ಲ; ಮಹಿಳೆಯರು ಬಿಡುಗಡೆಯ ಹಾದಿ ಹುಡುಕುತ್ತ್ತಿರಲಿಲ್ಲ. ದಲಿತರು ಸ್ವಾಭಿಮಾನ ಗಳಿಸುತ್ತಿರಲಿಲ್ಲ; ಸರ್ವಾಧಿಕಾರಿಗಳು ನಾಶವಾಗುತ್ತಿರಲಿಲ್ಲ.ಚರಿತ್ರೆಯಲ್ಲಿ ಸಮಾಜಗಳನ್ನು ಬದಲಿಸಿರುವುದು ಪ್ರಶ್ನೆಗಳೇ. ರಾಜಸಭೆಗೆ ತನ್ನನ್ನು ಬಲಾತ್ಕಾರವಾಗಿ ಎಳೆದು ತಂದಾಗ ದ್ರೌಪದಿ `ತನ್ನನ್ನೇ ಪಣಕ್ಕಿಟ್ಟು ಸೋತ ವ್ಯಕ್ತಿಗೆ ತನ್ನ ಹೆಂಡತಿಯನ್ನು ಪಣಕ್ಕಿಡಲು ಹಕ್ಕಿದೆಯೇ?’ ಎಂಬ ಪ್ರಶ್ನೆ ಮುಂದಿಡುತ್ತಾಳೆ. ಉತ್ತರಿಸಲು ಸಭೆ ಒದ್ದಾಡುತ್ತದೆ. ಪ್ರಶ್ನೆಯ ಮೂಲಕ ಆಕೆ ತನ್ನ ಆಕ್ರೋಶ ವೇದನೆಗಳನ್ನಷ್ಟೆ ಹೊರಗೆಡಹುವುದಿಲ್ಲ, ಹೆಣ್ಣೊಬ್ಬಳ ಅಪಮಾನವನ್ನು ಸಹಿಸಿಕೊಂಡಿರುವ ಸಭೆಯ ಅಮಾನವೀಯತೆ ಮತ್ತು ಅವಿವೇಕವನ್ನೂ ಬಯಲಿಗೆಳೆಯುತ್ತಾಳೆ. ಪ್ರಶ್ನಿಸುವ ಪ್ರವೃತ್ತಿ ಅಧಿಕಾರಸ್ಥರ ಕೆರಳಿಕೆಗೂ ದಮನಕ್ಕೂ ಕಾರಣವಾಗುತ್ತದೆ. ಪ್ರಶ್ನೆಯೆತ್ತಿದ ಮಲಾಲಾಗೆ ತಾಲಿಬಾನಿಗಳು ಗುಂಡು ಹೊಡೆದು ಉತ್ತರಿಸಿದರು; ಮುಂಬೈ ತರುಣಿಯರಿಗೆ ಪೋಲಿಸರು ಬಂಧಿಸುವ ಮೂಲಕ ಪ್ರತಿಕ್ರಿಯಿಸಿದರು. ಧರ್ಮರಾಯನು ಯುದ್ಧದಲ್ಲಿ ಗೆದ್ದು ಅರಮನೆ ಪ್ರವೇಶಿಸುವಾಗ, `ಜ್ಞಾತಿಬಂಧುಗಳನ್ನು ಕೊಂದ ನಿನಗೆ ರಾಜ್ಯವಾಳುವ ನೈತಿಕತೆಯಿದೆಯೇ’ ಎಂದು ಪ್ರಶ್ನಿಸಿದ ಚಾರ್ವಾಕನನ್ನು ಕೊಂದರು. ಶಿಷ್ಯ ದಾರಾಶುಕುವನ್ನು ಕೊಂದ ಔರಂಗಜೇಬನ ವಿರುದ್ಧ ಸೂಫಿ ಸರ್ಮದ್ ನಗ್ನನಾಗಿ ನಿಂತು ಇಂತಹುದೇ ಪ್ರಶ್ನೆಯನ್ನೆತ್ತಿ ತಲೆದಂಡ ತೆತ್ತನು. ಸಾಂಪ್ರದಾಯಿಕ ನಂಬಿಕೆಗಳನ್ನು ಪ್ರಶ್ನಿಸಿದ ಅನೇಕ ವಿಜ್ಞಾನಿಗಳನ್ನು ಯೂರೋಪಿನ ಚರ್ಚುಗಳು ದಮನ ಮಾಡಿದ್ದಂತೂ ಸರ್ವವಿದಿತ. ಧಾರ್ಮಿಕ ಮೂಲಭೂತವಾದಿಗಳು ಮತ್ತು ರಾಜಕೀಯ ಸರ್ವಾಧಿಕಾರಿಗಳು ಇಂತಹ ದಮನವನ್ನು ಮಾಡುತ್ತಲೇ ಬಂದಿರುವರು. ಸಾಂಪ್ರದಾಯಿಕ ಕುಟುಂಬ ವ್ಯವಸ್ಥೆಯಲ್ಲಿ ಹಿರಿಯರು ಕಿರಿಯರ, ಪುರುಷರು ಮಹಿಳೆಯರ ಪ್ರಶ್ನೆಗಳನ್ನು ಹೀಗೇ ಹೊಸಕಿ ಹಾಕಿರುವರು. ಆದರೂ ಪ್ರಶ್ನಿಸುವ ಪ್ರವೃತ್ತಿಯನ್ನು ನಿಲ್ಲಿಸಲು ಸಾಧ್ಯವಾಗಿಲ್ಲ. ಸಾಧ್ಯವಾಗುವುದೂ ಇಲ್ಲ. ಪ್ರಶ್ನೆಯಿಲ್ಲದೆ ಚರಿತ್ರೆ ಚಲಿಸುವುದಿಲ್ಲ; ಲೋಕ ಬದಲುವುದಿಲ್ಲ. ಪ್ರಶ್ನೆಗಳು ಸಂಸ್ಕøತಿ ನಾಗರಿಕತೆಗಳನ್ನು ಕಟ್ಟಿಬೆಳೆಸಿದ ಶಕ್ತಿಗಳು. ಅವುಗಳ ಗಾತ್ರ ಚಿಕ್ಕದಿರಬಹುದು. ಪರಿಣಾಮ ಚಿಕ್ಕದಲ್ಲ. ಸಮಾಜದಲ್ಲಿ ಮಹತ್ವದ ಪಲ್ಲಟ ಸಂಭವಿಸಿದ್ದರೆ, ಅದರ ಹಿಂದೆ ಕೆಲವರು ಎತ್ತಿದ ಪ್ರಶ್ನೆಗಳಿವೆ; ಅವು ಹುಟ್ಟಿಸಿದ ಕ್ರಿಯೆ-ಪ್ರತಿಕ್ರಿಯೆಗಳಿವೆ. ನಮ್ಮ ಧರ್ಮದಲ್ಲಿ ಮಹಿಳೆಯರೇಕೆ ಹಿಂದುಳಿದ್ದಾರೆ, ದಲಿತರೇಕೆ ಅಸ್ಪøಶ್ಯರಾಗಿದ್ದಾರೆ, ನಿರ್ದಿಷ್ಟ ಜನರೇಕೆ ಶ್ರೇಷ್ಠರೆನಿಸಿಕೊಂಡಿದ್ದಾರೆ, ನಮ್ಮ ಮತಧರ್ಮಗಳೇಕೆ ದ್ವೇಷ ಹುಟ್ಟಿಸುತ್ತಿವೆ, ನಾನೇಕೆ ಇಷ್ಟು ನೀಚನಾಗಿದ್ದೇನೆ-ಹೀಗೆ ನಿಷ್ಠುರ ಪ್ರಶ್ನೆಗಳನ್ನು ಹುಟ್ಟಿಸಿಕೊಳ್ಳಲಾಗದ, ಅದನ್ನು ಲೋಕದ ಮುಂದಿಡಲಾರದ, ಮತ್ತು ಅಂತಹ ಪ್ರಶ್ನೆ ಕೇಳಿಸಿಕೊಳ್ಳುವ ಸಹನೆಯಿಲ್ಲದ ಯಾವ ವ್ಯಕ್ತಿ, ಸಮುದಾಯ ಮತ್ತು ಸಮಾಜವೂ ಚರಿತ್ರೆಯಲ್ಲಿ ದೊಡ್ಡದನ್ನು ಸಾಧಿಸಿಲ್ಲ. ನಾಗರಿಕ ಮತ್ತು ಮಾನವೀಯ ಕೂಡ ಆಗಿಲ್ಲ. ********************************************* ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ









