ಅಂಕಣ ಬರಹ ಊರೊಳಗೆ ಪಂಥ ರಣದೊಳಗೆ ಓಟವೆ ವಚನಕಾರರಲ್ಲಿ ಎಂಟು ಜನ ಮಾರಿತಂದೆ ಹೆಸರಿನವರು ಇದ್ದಾರೆ. ಅವರಲ್ಲಿ ಅರಿವಿನ ಮಾರಿತಂದೆಯೂ ಒಬ್ಬ. ಈತ ಹಿರಿಯ ವಚನಕಾರ. ಫ. ಗು. ಹಳಕಟ್ಟಿಯವರು “ಈತನು ಬಸವೇಶ್ವರರ ಕಾಲದಲ್ಲಿ ಶಿವಾನುಭವ ಮಂಟಪದಲ್ಲಿದ್ದನೆಂದು ವೀರಶೈವರಲ್ಲಿ ಐತಿಹ್ಯವಿರುವುದಿಲ್ಲ. ಆದ್ದರಿಂದ ಬಸವೇಶ್ವರನ ಕಾಲಕ್ಕಿಂತಲೂ ಈಚಿನವನಿರಬೇಕು. ಆದರೆ ೧೫ ನೇ ಶತಮಾನದ ಅಂತ್ಯಭಾಗದಲ್ಲಿದ್ದ ಪ್ರಸಿದ್ಧಿ ಹೊಂದಿದ ಗುಬ್ಬಿಯ ಮಲುಹಣನು ಈ ಅರಿವಿನ ಮಾರಿತಂದೆಯ ಉಕ್ತಿಗಳನ್ನು ತನ್ನ ‘ಗಣಭಾಷ್ಯ ರತ್ನಮಾಲೆ’ ಯಲ್ಲಿ ಉದಾಹರಿಸಿದ್ದಾನೆ. ಅಲ್ಲದೇ ಅನೇಕ ವಚನ ಸಂಗ್ರಹಗಳಲ್ಲಿ ಈತನ ವಚನಗಳು ಆಗಿಹೋದ ಪುರಾತನ ಕಾಲದ ಮಹತ್ವದ ವಚನಕಾರರಲ್ಲಿ ಗಣಿಸಲು ಏನೂ ಅಡ್ಡಿಯಿಲ್ಲ. ಪುರಾತನರ ವಚನಗಳಲ್ಲಿ ಈತನವೂ ಸೇರಿರುವುದರಿಂದ ಈತನ ಕಾಲವನ್ನು ಸು ೧೧೬೦ ಎಂದೇ ಹೇಳಬಹುದಾಗಿದೆ” ಎಂದಿದ್ದಾರೆ.೧ ಹನ್ನೊಂದು ಜನರ ಚರಿತ್ರೆಯ ವಿವರಗಳು ತಿಳಿದು ಬರುವುದಿಲ್ಲ, ಅವರಲ್ಲಿ ಅರಿವಿನ ಮಾರಿತಂದೆಯೂ ಒಬ್ಬ.೨ ಎಂದು ಒಂದು ಕಡೆ ಹೇಳಿದರೆ. ಮತ್ತೊಂದು ಕಡೆ ‘ವಿರೂಪಾಕ್ಷ ಪಂಡಿತನು (೧೫೮೫) ಚೆನ್ನಬಸವ ಪುರಾಣದಲ್ಲಿ ಈತನೇ ‘ಮಾದರ ಕೇತಯ್ಯ ….. ‘ ಎಂಬ ಪದ್ಯದಲ್ಲಿ ಅರಿವಿನ ಮಾರಿತಂದೆಯ ಹೆಸರನ್ನು ಹೇಳಿದ್ದಾನೆ.೩ ಎಂದು ಸಾಹಿತ್ಯ ಚರಿತ್ರಾಕಾರರು ಹೇಳಿದ್ದಾರೆ. ಜ್ಞಾನ, ತಿಳುವಳಿಕೆ, ಅನುಭವಗಳ ಸಮಪ್ರಮಾಣದ ಮಿಶ್ರಣವಾದ ಅರಿವಿಗೆ ಬಹುದೊಡ್ಡ ಪ್ರಾಶಸ್ಯ್ಯವನ್ನು ಮಾರಿತಂದೆಯು ತನ್ನ ವಚನಗಳಲ್ಲಿ ಕೊಟ್ಟಿರುವುದರಿಂದ ಈತನನ್ನ “ಅರಿವಿನ ಮಾರಿತಂದೆ” ಎಂದು ಕರೆಯಲಾಗಿದೆ.೪ ಬಸವಣ್ಣನವರು ತಮ್ಮ ವಚನಗಳಲ್ಲಿ ಹೆಸರಿಸಿರುವ ಮಾರಿತಂದೆ ಈತನಲ್ಲ ಎಂಬುದನ್ನು ವಿದ್ವಾಂಸರು ಸಾಧಿಸಿ ತೋರಿಸಿದ್ದಾರೆ.೫ ಸದಾಶಿವಮೂರ್ತಿ, ಸದಾಶಿವಮೂರ್ತಿಲಿಂಗ, ಸದಾಶಿವಲಿಂಗಮೂರ್ತಿ, ಸದಾಶಿವಲಿಂಗ ಎಂದು ಈತನ ವಚನಗಳ ಅಂಕಿತಗಳು ಇವೆ. ಅರಿವಿನ ಮಾರಿತಂದೆಯ ಒಟ್ಟೂ ವಚನಗಳ ಸಂಖ್ಯೆ ೩೦೨, ಅದರಲ್ಲಿ ೨೫೧ ಸಾಮಾನ್ಯ ವಚನಗಳಾಗಿದ್ದು, ಉಳಿದವು ಬೆಡಗಿನ ವಚನಗಳಾಗಿವೆ. ಅರಿವಿನ ಮಾರಿತಂದೆಯ ವಚನವೊಂದು ಹೀಗಿದೆ ವಾಗದ್ವೈತದಲ್ಲಿ ನುಡಿದು ಸ್ವಯಾದ್ವೈತದಲ್ಲಿ ನಡೆದು ತೋರಬೇಕು ಊರೊಳಗೆ ಪಂಥ ರಣದೊಳಗೆ ಓಟವೆ ? ಮಾತಿನಲ್ಲಿ ರಚನೆ ಮನದಲ್ಲಿ ಆಸೆಯೇ ? ಈ ಘಾತಕರ ಶಾಸ್ತ್ರ, ವಚನ ರಚನೆಗೆ ಮೆಚ್ಚಿ ಮಾಡುವವನ ಭಕ್ತಿ ಅಲಗಿನ ಘೃತವ ಶ್ವಾನ ನೆಕ್ಕಿ ನಾಲಿಗೆ ಹರಿದು ಮತ್ತಲಗ ಕಂಡು ತೊಲಗುವಂತಾಯಿತ್ತು, ಉಭಯದ ಇರವು. ಇಂತೀ ಭೇದಂಗಳ ಅರಿತು ನಿರತನಾಗಿರಬೇಕು ಸದಾಶಿವಮೂರ್ತಿಲಿಂಗವನರಿವುದಕ್ಕೆ.೬ ಈ ವಚನವು ಮೇಲು ನೋಟಕ್ಕೆ ಬಹಳ ಸರಳವಾಗಿ ಕಾಣುತ್ತಿದೆಯಾದರೂ ತನ್ನ ಆಂತರ್ಯದಲ್ಲಿ ವೀರಭಾವವೊಂದರ ಸಮರ ಪ್ರಜ್ಞೆ ನಿರಂತರವಾದ ಹರಿವನ್ನು ಹೊಂದಿದೆ. ಅಪಾಯಕಾರಿಗಳ ಲಕ್ಷಣ ಮತ್ತು ಅವರು ಆ ಮನಸ್ಥಿತಿಯಿಂದ ಹೊರಬರುವ ಮಾರ್ಗವನ್ನು ಈ ವಚನವು ತಿಳಿಸುತ್ತಿದೆ. ಎಲ್ಲ ಕಾಲದಲ್ಲಿಯೂ ಮಾತಿನ ಮಲ್ಲರ ಬಹುದೊಡ್ಡ ಗುಂಪೊಂದು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿರುತ್ತದೆ. ಆ ಮಾತಿನ ಮಲ್ಲರ ಗುಂಪು ಕೆಲವೊಮ್ಮೆ ತಮ್ಮೊಡನೆ ಸಂಪರ್ಕಕ್ಕೆ ಬರುವವರಿಗೆ ಹಾದಿಯ ನಿರ್ದೇಶವನವನ್ನೂ ಯಾವುದೇ ಭಿಡೆ ಇಲ್ಲದೆ ಮಾಡಲು ಶುರು ಮಾಡಿಬಿಡುತ್ತದೆ. ಕ್ರಿಯೆಯಲ್ಲಿ ನಿರತಕಾರವರಿಗೆ ಅದರ ಅಗತ್ಯವೇ ಇರುವುದಿಲ್ಲ. ಅಥವಾ ಮಾತಿನ ಮಲ್ಲರು ಕ್ರಿಯೆಯಲ್ಲಿ ತೊಡಗಿದರೆ ಮಾತು ತನ್ನಿಂದ ತಾನೇ ನಿಂತುಬಿಡುತ್ತದೆ. ಮಾತಿನಲ್ಲಿ ಎಲ್ಲರೂ, ಎಲ್ಲವೂ ಒಂದೇ ಎನ್ನುವ (ವಾಕ್+ಅದ್ವೈತ), ಆದರೆ ಅನುಭವಜನ್ಯ ಅರಿವಿನಿಂದ ಒಂದೇ ಎಂಬುದನ್ನು ಅರಿತು, ನಡೆದು ತೋರದಂತಹವರ (ಸ್ವಯ+ಅದ್ವೈತ) ಸ್ಥಿತಿಯನ್ನು ಹೇಳಲು ಅರಿವಿನ ಮಾರಿತಂದೆ ಎರಡು ಸಾದೃಶ್ಯಗಳನ್ನು ಬಳಸಿದ್ದಾನೆ. ಒಂದು, ಊರೊಳಗೆ ತಾನು ಕಟ್ಟಿಕೊಂಡ ಗುಂಪಿನೊಳಗೆ ವೀರಾಧಿವೀರ, ಆದರೆ ನಿಜವಾದ ರಣರಂಗದಲ್ಲಿ ಬೆನ್ನು ತಿರುಗಿಸಿ ಓಡಿ ಹೋಗುವ ರಣಹೇಡಿಯ ಚಿತ್ರವನ್ನು ಮತ್ತು ಖಡ್ಗದ ತುದಿಗೆ ಸವರಿದ ಘೃತ (ತುಪ್ಪ) ವನ್ನು ನೆಕ್ಕಿ ನಾಲಿಗೆ ಸೀಳಿದ ನಾಯಿಯು ಮತ್ತೆ ಖಡ್ಗವನ್ನು ಕಂಡು ಓಡುವ ಚಿತ್ರ. ಈ ಎರಡರ ಮೂಲಕ ಮಾತಿನ ಮಲ್ಲರು ಮತ್ತವರು ರಣಹೇಡಿಗಳು. ಬದುಕಿನಲ್ಲಿ ಏಕತ್ವವನ್ನು ಸಾಧಿಸಿ ತೋರಿಸಲಾರದ ಹೇಡಿಗಳು ಎಂದೂ, ನಾಲಿಗೆ ಸಿಳಿದ ನಾಯಿಯ ಸ್ಥಿತಿಯು ಅವರು ಸ್ವಯಾದ್ವೈತವನ್ನು ಸಾಧಿಸಲಾರದ, ಆಚರಿಸಲಾರದವರು ಎಂದು ಸ್ಪಷ್ಟವಾಗಿ ಹೇಳುತ್ತಿದ್ದಾನೆ. ಏಕಭಾವವೆನ್ನುವುದು ಘೃತದ ಹಾಗೆ. ಅದನ್ನು ಸಾಧಿಸಿದವರು ಹೆದರಿ ಓಡಬೇಕಿಲ್ಲ ಎಂಬ ದನಿಯೂ ಇದರಲ್ಲಿ ಅಡಗಿದೆ. ಮಾತಿನಲ್ಲಿ ಮಾತ್ರ ವಚನ ರಚನೆಗಳನ್ನು ಮಾಡುತ್ತಾ, ಬದುಕಿನಲ್ಲಿ ಅದರ ತತ್ವಗಳನ್ನು ಆಚರಿಸದವರೆಲ್ಲರೂ, ಸ್ವಾನುಭವದಿಂದ ನುಡಿದಂತೆ ನಡೆಯದವರು ಹೇಡಿಗಳು, ನಾಲಿಗೆ ಹರಿದ ನಾಯಿಗಳು ಎಂದು ಹೇಳುತ್ತಿದ್ದಾನೆ. ವಚನದಲ್ಲಿ ಗಮನಿಸಬೇಕಾದ ಮುಖ್ಯ ಅಂಶವೊಂದಿದೆ. “ಅರಿತು ನಿರತ” ಎಂಬ ಪದಗಳು ಒಂದಕ್ಕೊಂದು ಸಾಧಿಸುವ ಸಂಬಂಧ ವ್ಯಕ್ತಿ ಮತ್ತು ಸಮಾಜಕ್ಕೆ ಮಹತ್ವವಾದದ್ದು ಎನ್ನುತ್ತಿದ್ದಾನೆ. ಅರಿತು ಸಾಧಿಸಲಾರದ ಅಥವಾ ಅರಿಯದೆ ಮಾತನಾಡುವ ಎಲ್ಲರೂ ರಣಹೇಡಿ, ನಾಲಿಗೆ ಸೀಳಿದ ನಾಯಿಗಳೆನ್ನುವ ಭಾವ ವಚನದಲ್ಲಿದೆ. ಇದೊಂದು ರೀತಿಯಲ್ಲಿ ನುಡಿದು ಸೂತಕಿಗಳಾಗುವ ಸ್ಥಿತಿ. ಅರಿವಿನ ಮಾರಿತಂದೆಯು ಮಾತು ಮತ್ತು ಕ್ರಿಯೆಗಳು ಒಂದಿಲ್ಲದ ರಣಹೇಡಿಗಳಿಗೆ ವಚನದ ಮೊದಲ ಸಾಲಿನಲ್ಲಿಯೇ ಪಂಥಾಹ್ವಾನವನ್ನು ಕೊಡುತ್ತಾನೆ ಮತ್ತದು ಎದುರಿನವರ ನಡೆ ನುಡಿಯನ್ನು ನಿರ್ದೇಶನ ಮಾಡುವ ಸಮರ ಪ್ರಜ್ಞೆಯ ರೀತಿಯಲ್ಲಿ ಬಂದಿದೆ. ಇದು ವೀರನ ಲಕ್ಷಣ. ತಾನು ಅನುಸರಿಸಿಲ್ಲದೆ, ಅನುಭವಕ್ಕೆ ಅರಿವಿಗೆ ಬಾರದ, ಕೇವಲ ಮಾತಿಗಾಗಿ “ಸಮಯವನ್ನು ನೋಯಿಸಿ” ಎದುರಿನವರಿಗೆ ಮಾಡಲು ಆಡಲು ಹೇಳುವ ಜಾಯಮಾನದವರಲ್ಲ ವಚನಕಾರರು. ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ವೀರರಸವನ್ನು ಕುರಿತು ವಿವೇಚನೆ ಮಾಡುವಾಗ ದಾನವೀರ, ಧರ್ಮವೀರ, ದಯಾವೀರ ಎಂದು ಮೂರು ಭಾಗಗಳಲ್ಲಿ ಈ ವೀರರಸವು ಕಾವ್ಯಗಳಲ್ಲಿ ಹರಿದು ಬಂದಿದೆ ಎಂದು ಮೀಮಾಂಸಕರು ಹೇಳಿದ್ದಾರೆ. ಅರಿವಿನ ಮಾರಿತಂದೆಯ ಒಳಗೆ ಧರ್ಮವೀರದ ನದಿಯೊಂದು ನಿರಂತರವಾಗಿ ಹರಿಯುತ್ತಿರುವ ಸ್ಥಿತಿಯಲ್ಲಿ ನಿಂತಿದ್ದಾನೆ. ನಡೆ ನುಡಿಗಳು ಒಂದಾದ ಏಕತ್ರ ಸ್ಥಿತಿಯದು. ವ್ಯೋಮಮೂರ್ತಿ, ತಲೆವೆಳಗಾದ ಸ್ವಯಜ್ಞಾನಿಯಾದ ಅಲ್ಲಮನೂ “ನುಡಿದು ಸೂತಕಿ” ಗಳಾಗದಿರಲೆಂಬ ಕಾರಣದಿಂದಲೇ ಕೊಟ್ಟ ಎಚ್ಚರಿಕೆ೭ ಬಸವಣ್ಣನವರು “ನುಡಿಯೊಳಗಾಗಿ ನಡೆಯದಿದ್ದಡೆ ಕೂಡಲಗಮದೇವನೆಂತೊಲಿವನಯ್ಯಾ”೮ ಎಂದು ಹೇಳುವ ಮಾತುಗಳೂ ಇದೇ ಎಚ್ಚರಿಕೆಯಲ್ಲಿ ಬಂದಿದೆ. ಪ್ರತೀ ಕ್ಷಣವೂ ಬದುಕನ್ನು ಅರಿತು ನಿರತನಾಗಿ ನಡೆವ ಕ್ರಮವನ್ನು ವಚನಕಾರರು ತಿಳಿಸುತ್ತಲೇ ಇಂದಿಗೂ ಜೀವಂತರಾಗಿದ್ದಾರೆ ಅಡಿಟಿಪ್ಪಣಿಗಳು ೧. ಕನ್ನಡ ಸಾಹಿತ್ಯ ಚರಿತ್ರೆ. ಸಂಪುಟ ೪. ಸಂ ಡಾ. ಹಾ. ಮಾ. ನಾಯಕ ಡಾ. ಟಿ. ವಿ. ವೆಂಕಟಾಚಲ ಶಾಸ್ತ್ರೀ. ಕನ್ನಡ ಅಧ್ಯಯನ ಸಂಸ್ಥೆ. ಮೈಸೂರು ವಿಶ್ವವಿದ್ಯಯಾನಿಲಯ. ಪು ೫೬೬ (೧೯೭೭) ೨. ಬಸವಯುಗದ ವಚನ ಮಹಾಸಂಪುಟ. ಸಂ. ಡಾ. ಎಂ. ಎಂ. ಕಲಬುರ್ಗಿ. ಕನ್ನಡ ಪುಸ್ತಕ ಪ್ರಾಧಿಕಾರ. ಪು ೯೩೬ (೨೦೧೬) ೩. ಕನ್ನಡ ಸಾಹಿತ್ಯ ಚರಿತ್ರೆ. ಸಂಪುಟ ೪. ಸಂ ಡಾ. ಹಾ. ಮಾ. ನಾಯಕ ಡಾ. ಟಿ. ವಿ. ವೆಂಕಟಾಚಲ ಶಾಸ್ತ್ರೀ. ಕನ್ನಡ ಅಧ್ಯಯನ ಸಂಸ್ಥೆ. ಮೈಸೂರು ವಿಶ್ವವಿದ್ಯಯಾನಿಲಯ. ಪು ೫೬೬ ೪. ಬಸವಯುಗದ ವಚನ ಮಹಾಸಂಪುಟ. ಸಂ. ಡಾ. ಎಂ. ಎಂ. ಕಲಬುರ್ಗಿ. ಕನ್ನಡ ಪುಸ್ತಕ ಪ್ರಾಧಿಕಾರ. ಪು ೯೩೬ ೫. ಪೀಠಿಕೆಗಳು ಲೇಖನಗಳು. ಡಿ. ಎಲ್. ನರಸಿಂಹಾಚಾರ್. ಡಿ. ವಿ. ಕೆ ಮೂರ್ತಿ. ಮೈಸೂರು ಪು ೪೫೬ ಮತ್ತು ೪೫೭ ೬. ಬಸವಯುಗದ ವಚನ ಮಹಾಸಂಪುಟ. ಸಂ. ಡಾ. ಎಂ. ಎಂ. ಕಲಬುರ್ಗಿ. ಕನ್ನಡ ಪುಸ್ತಕ ಪ್ರಾಧಿಕಾರ. ವ ಸಂ ೬೦೬, ಪು ೧೦೦೩ ೭. ಮಾತೆಂಬುದು ಜ್ಯೋತಿರ್ಲಿಂಗ ! ಸ್ವರವೆಂಬುದು ಪರತತ್ವ ! ತಾಳೋಷ್ಠ ಸಂಪುಟವೆಂಬುದೇ ನಾದಬಿಂದಕಳಾತೀತ ! ಗೊಹೇಶ್ವರನ ಶರಣರು ನುಡಿದು ಸೂತಕಿಗಳಲ್ಲ ಕೇಳಾ, ಮರುಳೆ ಅಲ್ಲಮನ ವಚನ ಚಂದ್ರಿಕೆ. ಡಾ. ಎಲ್. ಬಸವರಾಜು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ವ. ಸಂ. ೯೫೧. ಪು ೨೧೪ (೨೦೧೪) ೮. ನುಡಿದರೆ ಮುತ್ತಿನ ಹಾರದಂತಿರಬೇಕು ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು ನುಡಿದರೆ ಲಿಂಗ ಮೆಚ್ಚಿ ಅಹುದಹುದೆನ್ನಬೇಕು ನುಡಿಯೊಳಗಾಗಿ ನಡೆಯದಿದ್ದಡೆ ಕೂಡಲಸಂಗಮದೇವನೆಂತೊಲಿವನಯ್ಯಾ ? ( ಟಿಪ್ಪಣಿ : ವಚನದಲ್ಲಿ ಮಾತು ಹೇಗಿರಬೇಕೆಂಬುದಕ್ಕೆ ಮೂರು ಉಪಮೆಗಳನ್ನು ಕೊಡುತ್ತಾರೆ. ಹಾರ, ದೀಪ್ತಿಗಳು ಸರಿ. ಆದರೆ “ಸಲಾಕೆ” ಯ ಮೊನಚು, ಅದರ ಕಾರ್ಯ ಸ್ಪಷ್ಟವಾಗಿ ಅರ್ಥವಾಗಿದ್ದವರಿಗೆ ಬಸವಣ್ಣನವರ ವ್ಯಕ್ತಿತ್ವದ ಬಗೆಗೆ ಹೆಚ್ಚು ಪ್ರೀತಿ, ಗೌರವ ಉಂಟಾಗುತ್ತದೆ. ಮಾತೆಂಬುದು ಸಲಾಖೆಯಂತೆ ಮೊನಚು ಹೌದು, ರಕ್ಷಣೆಗೂ ಹೌದು ಎಂಬುದನ್ನು ಮರೆಯುವ ಹಾಗಿಲ್ಲ. ) ಎನ್ನ ನಾ ಹಾಡಿಕೊಂಡೆ. ಡಾ. ಎಸ್. ವಿದ್ಯಾಶಂಕರ. ಪ್ರಿಯದರ್ಶಿನಿ ಪ್ರಕಾಶನ. ವ ಸಂ ೮೦೨. ಪು ೬೭೨ **************************** ಆರ್.ದಿಲೀಪ್ ಕುಮಾರ್ ಹುಟ್ಟಿದ್ದು ೧೯೯೧ ಮಾರ್ಚಿ ೧೬ ಮೈಸೂರಿನಲ್ಲಿ. ಸದ್ಯ ಚಾಮರಾಜನಗರದಲ್ಲಿ ತಾಯಿ ಮತ್ತು ತಮ್ಮನೊಂದಿಗೆ ವಾಸವಾಗಿದ್ದಾರೆ. ಪದವಿಪೂರ್ವ ಶಿಕ್ಷಣದಿಂದ ಬಿ.ಎಡ್ ವರೆಗಿನ ಶಿಕ್ಷಣವನ್ನು ಚಾಮರಾಜನಗರದಲ್ಲಿಯೇ ಪೂರ್ಣಗೊಳಿಸಿ, ಕೊಳ್ಳೇಗಾಲ, ಗುಂಡ್ಲುಪೇಟೆ ಮತ್ತು ಚಾಮರಾಜನಗರದ ಕಾಲೇಜುಗಳಲ್ಲಿ ನಾಲ್ಕು ವರ್ಷಗಳು ಕನ್ನಡ ಭಾಷಾ ಉಪನ್ಯಾಸಕರಾಗಿ ಸೇವೆಸಲ್ಲಿಸಿದ್ದಾರೆ. ಸಂಗೀತ, ಸಾಹಿತ್ಯ ಮತ್ತು ಚಿತ್ರಕಲೆಗಳಲ್ಲಿ ಸಮಾನವಾದ ಆಸಕ್ತಿಯಿದ್ದು, ಸದ್ಯದಲ್ಲಿ ಕಾವ್ಯರಚನೆ, ಅನುವಾದ, ಸಂಶೋಧನೆ ಮತ್ತು ಸಾಹಿತ್ಯ ವಿಮರ್ಶೆಯಲ್ಲಿ ಸಕ್ರಿಯರಾಗಿದ್ದಾರೆ. ಹಲವು ದಿನಪತ್ರಿಕೆಗಳು ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಬರೆಹಗಳು ಪ್ರಕಟವಾಗಿವೆ. ಕಾವ್ಯ ಕಮ್ಮಟ ಮತ್ತು ಕಥಾ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ೨೦೧೯ ರಲ್ಲಿ ಪ್ರಕಟವಾಗಿರುವ ‘ಹಾರುವ ಹಂಸೆ’ ಮೊದಲನೆಯ ಕವನ ಸಂಕಲನವಾಗಿದೆ.
ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ-11 ಆತ್ಮಾನುಸಂಧಾನ ಗೇರು ಹಕ್ಕಲಿನಲ್ಲಿ ಅನುಭಾವ ಗೋಷ್ಠಿಗಳು (೧) ನಮ್ಮ ಕೇರಿಗೆ ಹೊಂದಿಕೊಂಡಂತೆ ಪೇರುಮನೆ ನಾರಾಯಣ ನಾಯಕ ಎಂಬುವವರ ಒಂದು ವಿಶಾಲವಾದ ಗೇರು ಹಕ್ಕಲ’ವಿತ್ತು. ಅದನ್ನು ನಮ್ಮ ಜಾತಿಯವನೇ ಆದ ಗಣಪತಿ ಎಂಬುವನು ನೋಡಿಕೊಳ್ಳುತ್ತಿದ್ದ. ಗಣಪತಿ, ನಾರಾಯಣ ನಾಯಕರ ಮನೆಯ ಜೀತದ ಆಳು. ತನ್ನ ಹೆಂಡತಿ ಸಾವಿತ್ರಿಯೊಡನೆ ಒಡೆಯರ ಮನೆಯ ಕಸ ಮುಸುರೆ, ದನದ ಕೊಟ್ಟಿಗೆಯ ಕೆಲಸ ಮುಗಿದ ಬಳಿಕ ಅವನು ಗದ್ದೆ ಕೆಲಸದ ಮೇಲ್ವಿಚಾರಣೆ ಇತ್ಯಾದಿ ನೋಡಿಕೊಂಡು ಇರುತ್ತಿದ್ದ ಸರಿ ಸುಮಾರು ಎಪ್ರಿಲ್ ಮೇ ತಿಂಗಳು ಗೇರು ಬೀಜಗಳಾಗುವ ಹೊತ್ತಿಗೆ ಗೇರು ಬೀಜಗಳನ್ನು ಕೊಯ್ದು ದಾಸ್ತಾನು ಮಾಡಿ ಒಡೆಯನ ಮನೆಗೆ ಮುಟ್ಟಿಸುವುದು ಅವನ ಜವಾಬ್ದಾರಿಯಾಗಿತ್ತು. ಗೇರು ಬೀಜಗಳಿಗೆ ಅಷ್ಟೊಂದು ಬೆಲೆಯಿಲ್ಲದ ಕಾಲದಲ್ಲಿ ನಾಯಕರು ಗೇರು ಬೆಳೆಯ ಆದಾಯದ ಕುರಿತು ಅಷ್ಟೇನೂ ಕಾಳಜಿ ಪೂರ್ವಕ ಗಮನ ಹರಿಸುತ್ತಿರಲಿಲ್ಲ. ಹೀಗಾಗಿ ನಮ್ಮ ಗೆಳೆಯರ ಗುಂಪಿಗೆ ನಾಯಕರ ಗೇರು ಹಕ್ಕಲವೆಂಬುದು ಅತ್ಯಂತ ಪ್ರೀತಿಯ ಆಡುಂಬೊಲವಾಗಿತ್ತು. ಮೇವಿನ ತಾಣವೆನಿಸಿತ್ತು. ನಮ್ಮ ಅನುಭವ ಅನುಭಾವಗಳ ವಿಕಾಸ ಕೇಂದ್ರವಾಗಿತ್ತು. ನಮ್ಮ ಕೇರಿಯಲ್ಲಿ ಆಗ ಹೆಚ್ಚೂ ಕಡಿಮೆ ಸಮಾನ ವಯಸ್ಕ ಗೆಳೆಯರೆಂದರೆ ನಾರಾಯಣ ವೆಂಕಣ್ಣ, ನಾರಾಯಣ ಮಾಣಿ, ಕೃಷ್ಣ ಮಾಣಿ, ಹೊನ್ನಪ್ಪ ವೆಂಕಣ್ಣ, ಗಣಪತಿ ಬುದ್ದು, ನಾನು ಮತ್ತು ನನ್ನ ತಮ್ಮ ನಾಗೇಶ. ಈ ಸಪ್ತ ಪುಂಡರ ದಂಡು ರಜೆಯ ದಿನಗಳಲ್ಲಿ ಮನೆಯಿಂದ ಹೊರಬಿದ್ದರೆಂದರೆ ಗೇರುಹಕ್ಕಲಿನಲ್ಲೇ ಇರುತ್ತಾರೆ ಎಂದು ಹಿರಿಯರೆಲ್ಲಾ ಅಂದಾಜು ಮಾಡಿಕೊಳ್ಳುತ್ತಿದ್ದರು. ಹಾಗೆಂದು ಅದರ ಆಚೆಗೆ ನಮ್ಮ ಕಾರ್ಯಕ್ಷೇತ್ರ ವಿಸ್ತರಣೆಗೊಂಡಿರಲಿಲ್ಲವೆಂದು ಅರ್ಥವಲ್ಲ. ಆದರೆ ಬೇರೆ ಯಾವ ಕಾರ್ಯಕ್ರಮ ಹಾಕಿಕೊಳ್ಳುವುದಕ್ಕೂ ಯೋಜನೆಗಳು ಸಿದ್ಧವಾಗುವುದು ಗೇರುಹಕ್ಕಲಿನಲ್ಲಿಯೇ. ಹಿತ್ತಲ ಮಧ್ಯದ ಹತ್ತಿಪ್ಪತ್ತು ವರ್ಷ ಹಳೆಯದಾದ ದೊಡ್ಡ ಗೇರುಮರವೊಂದು ನಮ್ಮ ಎಲ್ಲಾ ಚಟುವಟಿಕೆಗಳಿಗೆ ಹೊಂದಿಕೆಯಾಗುತ್ತ ತನ್ನ ಆಕ್ರತಿಯನ್ನು ಬದಲಿಸಿಕೊಳ್ಳುತ್ತಿತ್ತು. ಮರದ ವಿಶಾಲ ರೆಂಬೆಗಳಲ್ಲಿ ಮರಕೋತಿ ಆಟ’ ಆಡುವುದಕ್ಕೂ, ಯಕ್ಷಗಾನ ಬಯಲಾಟ’ ಕುಣಿಯುವುದಕ್ಕೂ, ಆಗಾಗ ನಡೆಯುವ ಮೇಜವಾನಿಗಳಿಗೂ ಈ ಮರದ ನೆರಳು ಆಶ್ರಯ ತಾಣವಾಗಿತ್ತು. ಗೇರುಹಕ್ಕಲಿನಲ್ಲಿ ನಾವು ಕುಣಿಯುತ್ತಿದ್ದ ಯಕ್ಷಗಾನ ಬಯಲಾಟಗಳ ಕುರಿತು ನಾನು ಮುಂದೆ ಪ್ರಸ್ತಾಪಿಸಲಿರುವೆ. ಮೇಲೆ ಹೇಳಿದ ಮೇಜವಾನಿ’ ಎಂಬುದರ ಕುರಿತು ಒಂದಿಷ್ಟು ವಿವರಗಳನ್ನು ನೀಡಬೇಕು. ಗೇರು ಹಕ್ಕಲಿನ ಒಡೆಯ ನಾರಾಯಣ ನಾಯಕರು ಮತ್ತು ಕಾವಲುಗಾರ ಗಣಪತಿಮಾವ’ನ ಕಣ್ಣು ತಪ್ಪಿಸಿ ನಾವು ಹಕ್ಕಲಿನಲ್ಲಿ ಗೇರುಬೀಜಗಳನ್ನು ಕದ್ದು ಯಾವುದಾದರೂ ಅಂಗಡಿಗೆ ಒಯ್ದು ಮಾರಾಟ ಮಾಡಿ ಬಂದ ದುಡ್ಡಿನಲ್ಲಿ ಬೆಲ್ಲ ಅವಲಕ್ಕಿ, ಬೇಯಿಸಿದ ಗೆಣಸು, ಚಕ್ಕುಲಿ, ಮಂಡಕ್ಕಿಉಂಡಿ ಇತ್ಯಾದಿ ಸಿಕ್ಕ ತಿನಿಸುಗಳನ್ನು ಖರೀದಿಸಿ ತಂದು ಎಲ್ಲರೂ ಗೇರುಮರದ ನೆರಳಿಗೆ ಬಂದು ಹಂಚಿಕೊಂಡು ತಿನ್ನುತ್ತಿದ್ದೆವು. ಗೇರು ಬೀಜಗಳನ್ನೇ ಸುಟ್ಟು ತಿನ್ನುವುದೂ ಇತ್ತು. ಗೇರುಬೀಜದ ಸೀಜನ್ ಮುಗಿಯುತ್ತಿರುವಾಗಲೇ ಮಾವಿನ ಮಿಡಿಗಳು ಬಿಡಲಾರಂಭಿಸುತ್ತಿದ್ದವು. ಆಗ ನಮ್ಮ ತಂಡ ಮಾವಿನ ತೋಪುಗಳನ್ನು ಅರಸಿ ಹೋಗುತ್ತಿತ್ತು. ಗೇರು ಹಕ್ಕಲಿನ ಬದಿಯಲ್ಲೇ ಮೂರ್ನಾಲ್ಕು ಮಾವಿನ ಮರಗಳಿದ್ದ ಒಂದು ಚಿಕ್ಕ ಹಿತ್ತಲವಿತ್ತು. ಅದು ಕೊಂಕಣಿ ಮಾತನಾಡುವ ಒಬ್ಬ ವಿಧವೆ ಅಮ್ಮ’ನಿಗೆ ಸೇರಿದುದಾಗಿತ್ತು. ನಾಡುಮಾಸ್ಕೇರಿಯಲ್ಲಿರುವ ಏಕೈಕ ಕೊಂಕಣಿಗರ ಮನೆ ಅಮ್ಮನ ಮನೆ’ ನಾವು ಕಾಣುವ ಹೊತ್ತಿಗೆ ಈ ಅಮ್ಮ ವಿಧವೆಯಾಗಿ ಕೇಶಮುಂಡನ ಮಾಡಿಸಿಕೊಂಡು ಕೆಂಪುಸೀರೆ ಉಡುತ್ತಿದ್ದಳು. ಅಮ್ಮನ ಹೆಸರು ಏನೆಂದು ನಮಗೆ ಕೊನೆಯವರೆಗೂ ತಿಳಿಯಲೇ ಇಲ್ಲ. ಅವಳ ಹಿರಿಯ ಮಗ ಯಾವುದೋ ಉದ್ಯೋಗದಲ್ಲಿ ಹೊರಗೇ ಇರುತ್ತಿದ್ದ. ತನ್ನ ಬಳಿಯೇ ಇರುವ ಅವಳಿ ಮಕ್ಕಳು ರಾಮು ಲಕ್ಷಣರಿಗೆ ಒಂದು ಪುಟ್ಟ ಅಂಗಡಿ ಹಾಕಿಕೊಟ್ಟು ವ್ಯಾಪಾರಕ್ಕೆ ಹಚ್ಚಿದ್ದಳು. ಇದ್ದ ಸ್ವಲ್ಪ ಬೇಸಾಯದ ಭೂಮಿಯನ್ನು ಹಾಲಕ್ಕಿ ಒಕ್ಕಲಿಗರಿಗೆ ಗೇಣಿ ಬೇಸಾಯ’ ಕ್ಕೆ ನೀಡಿದ ಅಮ್ಮ, ಹಿತ್ತಲಿನಲ್ಲಿ ಬೆಳೆದ ಮಾವು ಮುರಗಲ ಇತ್ಯಾದಿ ಕಾಯಿಗಳಿಂದ ಹುಳಿ’ ತಯಾರಿಸಿ ಮಾರಾಟಮಾಡಿ ಜೀವನ ಸಾಗಿಸುತ್ತಿದ್ದಳು. ಗೇರುಹಕ್ಕಲಿಗೆ ಹೊಂದಿಕೊಂಡಂತೆ ಇರುವ ಅಮ್ಮನ ಹಿತ್ತಲಿಗೆ ಲಗ್ಗೆ ಹಾಕುವುದು ನಮಗೆ ಬಹಳ ಸುಲಭವಾಗಿತ್ತು. ಮಾವು ಕಸುಗಾಯಿಯಾದ ಸಂದರ್ಭ ನೋಡಿ ನಾವು ಅಮ್ಮನ ಹಿತ್ತಲಿನಿಂದ ಮಾವಿನ ಕಾಯಿಗಳನ್ನು ಕದ್ದು ತಂದು ಅವುಗಳನ್ನು ಸಣ್ಣಗೆ ಹೆಚ್ಚಿ ಹಸಿಮೆಣಸು ಉಪ್ಪು ಬೆರೆಸಿ ಕೊಚ್ಚೂಳಿ’ ಮಾಡಿ ಒಂದೊಂದು ಬೊಗಸೆಯಷ್ಟನ್ನು ಪಾಲು ಹಾಕಿಕೊಂಡು ತಿನ್ನುತ್ತಿದ್ದೆವು. ನಾವು ಮಾವಿನ ಕಾಯಿ ಕದಿಯಲು ಬಂದದ್ದು ಗೊತ್ತಾಗಿ ಅಮ್ಮ ತನ್ನ ಸಾಕು ನಾಯಿಯನ್ನು ಛೂ ಬಿಟ್ಟುಕೊಂಡು ಅನ್ನಿ ಯಯ್ಲಪಳೆ ರಾಂಡ್ಲೋ ಪುತಾನಿ…. ಎಂದು ಮೊದಲಾಗಿ ಬಯ್ದುಕೊಳ್ಳುತ್ತಾ ಓಡಿ ಬರುತ್ತಿದ್ದರೆ ನಾವು ಕೈಗೆ ಸಿಕ್ಕಷ್ಟು ದೋಚಿಕೊಂಡು ಓಡುವುದೇ ತುಂಬಾ ಮಜವಾಗಿರುತ್ತಿತ್ತು. ಮಾವಿನ ಹಣ್ಣುಗಳಾಗುವ ಸಮಯದಲ್ಲೂ ಮರದಡಿಯಲ್ಲೇ ಕಾದುಕುಳಿತು ಬಿದ್ದ ಹಣ್ಣುಗಳನ್ನಾಯ್ದು ತಿನ್ನುತ್ತಿದ್ದೆವು. ಬೇಸಿಗೆಯ ದಿನಗಳಲ್ಲಿ ನಮ್ಮ ಬಾಯಿ ಚಪಲಕ್ಕೆ ಆಹಾರ ಒದಗಿಸಲು ಒಂದಿಲ್ಲೊಂದು ದಾರಿ ಇದ್ದೇ ಇರುತ್ತಿತ್ತು. ಬೆಳೆದುನಿಂತ ಗೆಣಸಿನ ಹೋಳಿಗಳಾಗಲಿ, ಶೇಂಗಾ ಗದ್ದೆಗಳಾಗಲಿ ಕಂಡರೆ ಮಬ್ಬುಗತ್ತಲಲ್ಲಿ ಉಪಾಯದಿಂದ ನುಗ್ಗಿ ಲೂಟಿ ಮಾಡುತ್ತಿದ್ದೆವು. ನಮಗೆ ಅತ್ಯಂತ ದುಷ್ಕಾಳದ ದಿನಗಳೆಂದರೆ ಮಳೆಗಾಲದ ದಿನಗಳು. ಕರಾವಳಿಯ ಜೀಗುಡುಮಳೆ ಹಿಡಿಯಿತೆಂದರೆ ಮನೆಯಿಂದ ಹೊರಗೆ ಹೋಗುವುದೇ ಕಷ್ಟವಾಗುತ್ತಿತ್ತು. ಕೆಲಸವಿಲ್ಲದೆ ಕುಳಿತಾಗ ಬಾಯಿ ಚಪಲ ಇನ್ನೂ ತಾರಕಕ್ಕೇರುತ್ತಿತ್ತು. ಕೆಲವು ಮನೆಗಳಲ್ಲಿ ಮಳೆಗಾಲದ ನಾಲಿಗೆ ಚಪಲಕ್ಕಾಗಿಯೇ ಬೇಯಿಸಿದ ಗೆಣಸಿನ ಹೋಳುಗಳನ್ನು ಒಣಗಿಸಿ ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದರು. ಜೋರು ಮಳೆ ಹೊಯ್ಯುವಾಗ ಒಂದೊಂದು ಮುಷ್ಟಿ ಒಣಗಿದ ಗೆಣಸಿನ ಹೋಳುಗಳನ್ನು ಕೈಗೆಕೊಟ್ಟು ಕೂಡ್ರಿಸುತ್ತಿದ್ದರು. ಅವುಗಳನ್ನು ಸುಲಭವಾಗಿ ಜಗಿದು ತಿನ್ನುವುದು ಸಾಧ್ಯವಿರಲಿಲ್ಲ. ಒಂದೊಂದೇ ಹೋಳುಗಳನ್ನು ಬಾಯಿಗಿಟ್ಟು ಲಾಲಾರಸದಲ್ಲಿ ನೆನೆಸಿ ಮೆದುಮಾಡಿಕೊಂಡು ಜಗಿದು ನುಂಗಬೇಕಾಗುತ್ತಿತ್ತು. ಈಗಿನ ಚೂಯಿಂಗ್ ಗಮ್ ಥರ ಸಮಯ ಕೊಲ್ಲಲು ಗೆಣಸಿನ ಹೋಳುಗಳು ಬಹಳ ಸಹಾಯ ಮಾಡುತ್ತಿದ್ದವು. ಮಳೆಗಾಲದ ತಿನಿಸುಗಳಿಲ್ಲದ ದುಷ್ಕಾಳದ ಸಮಯದಲ್ಲಿ ನಮ್ಮ ನೆರವಿಗೆ ಬಂದದ್ದೇ ಗೊಣ್ಣೆಗೆಂಡೆ ಸುಳಿ’. ಮತ್ತೆ ಅದೇ ಗೇರುಹಕ್ಕಲ ನಮಗೆ ಬಲಿತ ಗೊಣ್ಣೆ ಗೆಂಡೆಗಳನ್ನು ನೀಡಿ ಉಪಕಾರ ಮಾಡುತ್ತಿತ್ತು. ಬೇಸಿಗೆಯಲ್ಲಿ ಸುಳಿವು ನೀಡದೇ ನೆಲದೊಳಗೆ ಅವಿತುಕೊಂಡಿದ್ದ ಗೊಣ್ಣೆಗೆಂಡೆಯ ಬೇರುಗಳು ಮಳೆ ಬೀಳುತ್ತಿದ್ದಂತೆ ಬಲಿತು ಚಿಗುರೊಡೆದು ಅದರ ಬಳ್ಳಿಗಳು ಗೇರುಮರದ ರೆಂಬೆಗಳನ್ನು ಆಶ್ರಯಿಸಿ ಹಬ್ಬುತ್ತಿದ್ದವು. ಬಳ್ಳಿಗಳ ಬುಡವನ್ನರಸಿ ಅಗೆದು ಗೊಣ್ಣೆಗೆಂಡೆಗಳನ್ನು ಆಯ್ದುಕೊಳ್ಳುವುದು ಸುಲಭವಾಗುತ್ತಿತ್ತು. ಒಂದು ಮುಷ್ಠಿಗಾತ್ರದ ಉರುಟಾದ ಈ ಗಡ್ಡೆಗಳಿಗೆ ಒರಟಾದ ಕಪ್ಪು ಸಿಪ್ಪೆಯ ಕವಚವಿರುತ್ತಿತ್ತು. ಗಡ್ಡೆಗಳನ್ನು ಬೇಯಿಸಿದಾಗ ಆಲೂಗಡ್ಡೆಯ ಸಿಪ್ಪೆಯಂತೆ ಸುಲಿದು ತೆಗೆಯಬಹುದಾಗಿತ್ತು. ಆದರೆ ಅಸಾಧ್ಯ ಕಹಿಯಾಗಿರುವ ಗೊಣ್ಣೆಗೆಂಡೆಗಳನ್ನು ಹಾಗೇ ಬೇಯಿಸಿ ತಿನ್ನುವುದು ಸಾಧ್ಯವಿರಲಿಲ್ಲ. ಅದಕ್ಕೆ ಸೂಕ್ತ ಕ್ರಿಯಾ ಕರ್ಮಗಳನ್ನು ಮಾಡಿ ಹದಗೊಳಿಸಿ ಗೊಣ್ಣೆಗೆಂಡೆಸುಳಿ’ಯನ್ನು ತಯಾರು ಮಾಡಬೇಕಾಗುತ್ತಿತ್ತು. ನಮ್ಮ ತಂಡದಲ್ಲಿ ನಮ್ಮೆಲ್ಲರಿಗಿಂತ ವಯಸ್ಸಿನಲ್ಲಿ ಸ್ವಲ್ಪ ಹಿರಿಯವನೆಂದರೆ ನಾರಾಯಣ ವೆಂಕಣ್ಣ. ಅವನಿಗೆ ಅದರ ಕೌಶಲ್ಯ ಚೆನ್ನಾಗಿ ತಿಳಿದಿತ್ತು. ಅವನ ಮಾರ್ಗದರ್ಶನದಂತೆ ನಾವು ನೆರವಿಗೆ ನಿಲ್ಲುತ್ತಿದ್ದೆವು. ಗೇರು ಹಕ್ಕಲಿನಿಂದ ಎಲ್ಲರೂ ಸೇರಿ ಗಡ್ಡೆಗಳನ್ನು ಅಗೆದು ತಂದಾದಮೇಲೆ ಅವುಗಳನ್ನು ಚೆನ್ನಾಗಿ ತೊಳೆದು ಮಣ್ಣಿನ ಗಡಿಗೆಯೊಂದರಲ್ಲಿ ಹಾಕಿ ಸರಿಯಾಗಿ ಬೇಯಿಸುವುದು. ಗಡ್ಡೆಗಳು ಬೆಂದ ಬಳಿಕ ಅದರ ಸಿಪ್ಪೆ ಸುಲಿದು ತೆಳ್ಳಗೆ ಹೋಳುಗಳಾಗಿ ಹೆಚ್ಚಿ ಕೊಳ್ಳುವುದು. ಹೆಚ್ಚಿದ ಹೋಳುಗಳನ್ನು ಜಾಳಿಗೆಯಂಥ ಬಿದಿರಿನ ಬುಟ್ಟಿಯಲ್ಲಿ ತುಂಬಿ ಒಂದು ರಾತ್ರಿಯಿಡೀ ಹರಿಯುವ ನೀರಿನಲ್ಲಿ ಇಟ್ಟು ಬರಬೇಕು. ಇದರಿಂದ ಗಡ್ಡೆಯಲ್ಲಿರುವ ಕಹಿ ಅಂಶ ಬಹಳಷ್ಟು ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ಮರುದಿನ ಬುಟ್ಟಿಯನ್ನು ಎತ್ತಿ ತಂದು ಮತ್ತೊಮ್ಮೆ ಚೆನ್ನಾಗಿ ತೊಳೆದು ಬೇಯಿಸಿಕೊಳ್ಳುವುದು. ಬೆಂದ ಹೋಳುಗಳನ್ನು ಮರದ ಮರಿಗೆಯಲ್ಲಿ (ಅಂದಿನ ಕಾಲದಲ್ಲಿ ಅನ್ನ ಬಸಿಯುವುದಕ್ಕಾಗಿ ದೋಣಿಯಾಕಾರದ ಕಟ್ಟಿಗೆಯ ಮರಿಗೆಗಳು ಬಹುತೇಕ ಮನೆಗಳಲ್ಲಿ ಇದ್ದವು) ಹಾಕಿ ಒನಕೆಯಿಂದ ಜಜ್ಜಿ ಮೆದುಗೊಳಿಸುವುದು. ಅದಕ್ಕೆ ಸಮಪ್ರಮಾಣದ ಬೆಲ್ಲ ಕಾಯಿಸುಳಿ’ ಬೆರೆಸಿ ಹದಮಾಡಿದರೆ ರುಚಿಯಾದ ಗೊಣ್ಣೆಗೆಂಡೆ ಸುಳಿ’ ಸಿದ್ಧವಾಗುತ್ತಿತ್ತು. ಎರಡು ದಿನಗಳ ಇಷ್ಟೆಲ್ಲ ವಿಧಿವಿಧಾನಗಳನ್ನು ನಾರಾಯಣಣ್ಣ ಅತ್ಯಂತ ತಾಳ್ಮೆಯಿಂದ ನಿರ್ವಹಿಸಿ, ಸಿದ್ಧವಾದ ಸುಳಿ’ಯನ್ನು ತಾನೇ ಬಾಳೆಲೆಯಲ್ಲಿ ನಮಗೆ ಪಾಲು ಹಾಕಿ ಕೊಡುತ್ತಿದ್ದ. ಇಪ್ಪತ್ನಾಲ್ಕು ಗಂಟೆಗಳ ಕಾಯುವಿಕೆಯ ಪರಿಣಾಮವೋ ಏನೋ ನಮ್ಮ ಪಾಲು ನಮ್ಮ ಕೈಗೆಟುಕಿದಾಗ ಮ್ರಷ್ಟಾನ್ನವೇ ಕೈಗೆ ಬಂದಂತೆ ಗಬಾಗಬಾ ಮುಕ್ಕುತ್ತಿದ್ದೆವು. ಇಷ್ಟಾಗಿಯೂ ಗೊಣ್ಣೆ ಕಹಿ ಗುಣ ಹಾಗೇ ಉಳಿದುಕೊಂಡಿರುವುದು ಗಮನಕ್ಕೆ ಬರುತ್ತಿತ್ತಾದರೂ ಲೆಕ್ಕಿಸದೇ ತಿಂದು ಮುಗಿಸುತ್ತಿದ್ದೆವು. ಈ ಮೇಜವಾನಿ ಹೆಚ್ಚೆಂದರೆ ಮಳೆಗಾಲದ ಒಂದೆರಡು ದಿನ ಮಾತ್ರ ಸಾಧ್ಯವಾಗುತ್ತಿತ್ತು. ಆದರೆ ಪ್ರತಿ ಮಳೆಗಾಲದಲ್ಲೂ, ನಾವು ದೊಡ್ಡವರಾಗುವವರೆಗೂ ವರ್ಷಕ್ಕೆ ಒಮ್ಮೆಯಾದರೂ ಈ ಮೇಜವಾನಿಯ ಯೋಗವನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ. ಬಹುಶಃ ಇದೇ ಕಾರಣದಿಂದ ಇರಬಹುದು ನಾವೆಲ್ಲರೂ ಇದೀಗ ಐವತ್ತು ದಾಟಿದ್ದೇವೆ, ಆದರೆ ಯಾರಿಗೂ ಸಕ್ಕರೆಯ ಸಮಸ್ಯೆ’ ಕಾಡಲೇ ಇಲ್ಲ. *************************** ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.ಯಕ್ಷಗಾನ ಕಲಾವಿದ. ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ. ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ಕನ್ನಡಿಗರ ಎದುರು ಇಡುತ್ತಿದೆ
ತಾಯ್ತನ ಎನ್ನುವದು ಬರಿದೆ ಜೈವಿಕ ತಾಯ್ತನಕ್ಕೆ ಸಂಬಂಧ ಪಟ್ಟುದಲ್ಲ. ಅದೊಂದು ಭಾವ. ಆ ಭಾವವಿದ್ದವರೆಲ್ಲಾ ತಾಯಂದಿರಾಗಬಹುದು ಎನ್ಬುವುದು ಸಾವಿತ್ರಿಯವರಿಂದ ಸಾಬೀತಾಗುತ್ತದೆ. ಆಕೆ ತಮ್ಮದೇ ಒಂದು ಮಗುವನ್ನು ಹೆರಲಿಲ್ಲ. ಆದರೆ ದೀನ ದಲಿತರ ಪಾಲಿಗೆ ನಿಜವಾದ ಮಾತೃಪೂರ್ಣ ತಾಯಿಯೇ ಆದರು.
ಅಂಕಣ ಬರಹ ಕೇಡಿಲ್ಲದ ಪದ ದೊರಕೊಂಬುದು ಕಿನ್ನರಿ ಬೊಮ್ಮಯ್ಯ ವಚನಕಾರರಲ್ಲಿಯೇ ಒಂದಷ್ಟು ಸಿಟ್ಟು ಸೆಡವುಗಳುಳ್ಳ ಮನುಷ್ಯ. ನೇರ ನಡೆ – ನುಡಿಗೆ ಹೆಸರಾದಂತೆ, ಪರೀಕ್ಷಿಸಿಯೇ ಎಲ್ಲವನ್ನೂ ಎಲ್ಲರನ್ನೂ ಒಪ್ಪುವವನು. ಇದಕ್ಕೆ ಸಾಕ್ಷಿಯಾಗಿ ಶೂನ್ಯಸಂಪಾದನೆಗಳಲ್ಲಿ ಬಂದಿರುವ ಅಕ್ಕನನ್ನು ಪರೀಕ್ಷಿಸುವ ಸಂದರ್ಭವನ್ನೊಮ್ಮೆ ನೋಡಿ. ಅವಳನ್ನು ಪರೀಕ್ಷಿಸಿ ‘ಹುಲಿನೆಕ್ಕಿ ಬದುಕಿದೆನು’೧ ಎಂದು ಅಕ್ಕನನ್ನು ಹುಲಿಯೆಂದು ಕರೆದು ಗೌರವಿಸಿ ಅವಳು ಕೊಡುವ ಉತ್ತರಕ್ಕೆ ಭಯದಿಂದಲೇ ಮಾತನಾಡುತ್ತಾನೆ. ಈ ಸಂದರ್ಭವು ಶೂನ್ಯಸಂಪಾದನೆಗಳಲ್ಲಿ ಬಹುಮಹತ್ವದ ಭಾಗ. ವಚನಚಳುವಳಿಯ ಕೊನೆಯ ಹಂತದಲ್ಲಿನ ಕ್ರಾಂತಿಕಲ್ಯಾಣವಾದ ಸಂದರ್ಭದಲ್ಲಿ ನಡೆದ ಯುದ್ಧವನ್ನು ಮಾಡಿದವನು ಇವನು ಎಂಬ ಪ್ರತೀತಿಯೂ ಇದೆ. ಕಿನ್ಮರಿ ಬೊಮ್ಮಯ್ಯ ಆಂಧ್ರಪ್ರದಶದ ಪೂದೂರ (ಊಡೂರು) ಎಂಬಲ್ಲಿಯವನು. ಅಕ್ಕಸಾಲಿಗ ವೃತ್ತಿಯನ್ನು ಮಾಡಿ ಬದುಕುತ್ತಿದ್ದವನು. ತನ್ನ ಗುರುವು ವೃತ್ತಿ, ಕಾಯಕ ನಿಷ್ಠೆ, ವೃತ್ತಿಧರ್ಮ ಮತ್ತು ಸತ್ಯಗಳನ್ನು ಅನುಮಾನಿಸಲಾಗಿ ಅಲ್ಲಿಂದ ಹೊರನಡೆದು ಕಲ್ಯಾಣ ಪಟ್ಟಣಕ್ಕೆ ಬಂದು ತನ್ನ ಕಾಯಕದಲ್ಲಿ ನಿರತನಾದವನು.೨ ದಿನವೂ ತನ್ನ ಕರಸ್ಥಳದಲ್ಲಿದ್ದ ಲಿಂಗದ ಮುಂದೆ ಕಿನ್ನರಿ ನುಡಿಸಿ, ಒಂದು ಹೊನ್ನು, ಒಂದು ಹಣ, ಒಂದು ಹಾಗವನ್ನು ಕೇಳುಗರಿಂದ ಪಡೆದು ಅದರಿಂದ ಜಂಗಮಾರ್ಚನೆ, ದಾಸೋಹ ಮಾಡುತ್ತಿದ್ದವನು.೩ ಬಹಳ ಮುಖ್ಯವಾಗಿ ಬಸವಣ್ಣನವರ ಸಮಕಾಲೀನ ಇವನು. ಬಸವಣ್ಣನನ್ನೇ ಬದಲಾಯಿಸಿದ, ಬಸವಣ್ಣನಿಗೆ ತಾಳುವಿಕೆಯನ್ನು ಕಲಿಸಿದ ಶಿವಶರಣನೀತ. ಈತ ತನ್ನ ಕೊನೆಯ ಕಾಲವನ್ನು ಯುದ್ಧಮಾಡುತ್ತಲೇ ಕಳೆದು ಯುದ್ಧದಲ್ಲೇ ಸತ್ತವನು.೪ ಯುದ್ಧವನ್ನು ತಡೆಯಲು ಒಂದು ನದಿಯನ್ನೇ ತಿರುಗಿಸಿದನೆಂಬ ಪ್ರತೀತಿಯೂ ಇವನ ಬಗೆಗಿದೆ.೫ ಇವನ ವಚನಗಳ ಅಂಕಿತ “ಮಹಾಲಿಂಗ ತ್ರಿಪುರಾಂತಕ ದೇವ”. ಇವನ ಒಂದು ವಚನವನ್ನು ಕವಿಚರಿತಕಾರರು ಹೆಸರಿಸಿದ್ದು, ಉಳಿದಂತೆ ಶೂನ್ಯಸಂಪಾದನೆ, ಬಸವಯುಗದ ವಚನ ಸಂಪುಟಗಳಲ್ಲಿ ಬಹಳಷ್ಟು ವಚನಗಳನ್ನು ಸಂಪಾದಿಸಿ ಕೊಟ್ಟಿದ್ದಾರೆ. ಅವನದೊಂದು ವಚನ ಹೀಗಿದೆ ————————— ನಿನ್ನ ಹರೆಯದ ರೂಹಿನ ಚೆಲುವಿನ ನುಡಿಯ ಜಾಣಿನ ಸಿರಿಯ ಸಂತೋಷದ ಕರಿ ತುರಗ ರಥ ಪದಾತಿಯ ನೆರವಿಯ ಸತಿ ಸುತರ ಬಂಧುಗಳ ಸಮೂಹದ ನಿನ್ನ ಕುಲದಭಿಮಾನದ ಗರ್ವವ ಬಿಡು, ಮರುಳಾಗದಿರು. ಅಕಟಕಟಾ ರೋಮಜನಿಂದ ಹಿರಿಯನೆ ? ಮದನನಿಂ ಚೆಲುವನೆ ? ಸುರಪತಿಯಿಂದ ಸಂಪನ್ನನೆ ? ವಾಮದೇವ ವಶಿಷ್ಠರಿಂದ ಕುಲಜನೆ ? ಅಂತಕನ ದೂತರು ಬಂದು ಕೈಬಿಡಿದೆಳೆದೊಯ್ಯುವಾಗ ನುಡಿ ತಡವಿಲ್ಲ ಕೇಳೋ ನರನೆ ! ಎನ್ನ ಮಹಾಲಿಂಗ ತ್ರಿಪುರಾಂತಕದೇವರ ಪೂಜಿಸಿಯಾದರೆ ಕೇಡಿಲ್ಲದ ಪದ ದೊರಕೊಂಬುದು ಮರುಳೆ೬ ಮನುಷ್ಯನ ಸಮಸ್ಯೆ, ಅವಗುಣವೆಂದರೆ ಎಂದರೆ ತನ್ನ ಜನ, ಹುಟ್ಟಿನಿಂದ ಬಂದ ಶ್ರೀಮಂತಿಕೆ ಮತ್ತು ಸುತ್ತಮುತ್ತಲಿನ ಜನ ಸಹಾಯ, ಸಹಕಾರ ಇವುಗಳಿಂದ ಗರ್ವಿತನಾಗುವುದು. ಅದೇ ಹುಟ್ಟಿನಿಂದ ಬೆನ್ನ ಹಿಂದೆಯೇ ಅಂಟಿ ಬಂದಿರುವ ಸಾವಿನ ಬಗೆಗೆ ಯೋಚನೆ ಮಾಡದೆ ಇರುವುದು. ಈ ವಚನವು ಎರಡೂ ಮುಖ್ಯ ನೆಲೆಗಳಾದ ಸಾವು ಮತ್ತು ಬದುಕುಗಳಲ್ಲಿ ಯಾವುದು ದೊಡ್ಡದು ? ಮತ್ತು ಏಕೆ ದೊಡ್ಡದು ? ಎಂಬ ವಿಷಯವಾಗಿ ಮಾತನಾಡುತ್ತದೆ. ಅದರೊಡನೆಯೇ ಎರಡರ ನಡುವೆ ಬದುಕು ಹೇಗಿರಬೇಕೆಂದು ಹೇಳುತ್ತದೆ. ಬಸವಣ್ಣನವರ ಒಂದು ವಚನವೂ ಇದೇ ರೀತಿಯ ಆಯಸ್ಸು ಕಡಿಮೆಯಾಗುವುದರ ಕಡೆಗೆ ಮತ್ತು ಮಾಡಬೇಕಾದ ಕಾರ್ಯದ ಕಡೆಗೆ ಗಮನ ಸೆಳೆಯುತ್ತದೆ.೭ ಆ ವಚನದ ಪ್ರಭಾವವೂ ಬೊಮ್ಮಯ್ಯನ ಪ್ರಕೃತ ವಚನದ ಮೇಲೆ ಆಗಿರಬಹುದು. ಪ್ರಕೃತ ವಚನದ ಬೆಳವಣಿಗೆಯ ಕ್ರಮವನ್ನು ಗಮನಿಸಿ. ದೇಹದ ಹೊರ ರೂಪದಿಂದ ಆರಂಭಗೊಂಡು ಭವವನ್ನು ಮೀರಿ ಗಳಿಸಬೇಕಾದ ಅಮೂರ್ತ ಪದವಿಯ ಆಶಯವನ್ನು ಹೊತ್ತು ಸಾಗುತ್ತಿದೆ. ಆದರೆ ಅದೆಲ್ಲವೂ ಹೇಳುತ್ತಿರುವುದು ಹರೆಯದ ರೂಪ, ಆ ರೂಪಕ್ಕೆ ಕಾರಣವಾದ ಚೆಲುವು, ಸಿರಿಯಿಂದುಂಟಾಗುವ ಸಂತೋಷ ಕೇಡುಗಳನ್ನೇ ಕುರಿತು ಮೊದಲ ಹಂತದ್ದು. ಅದನ್ನು ಒಪ್ಪಿ ಅಪ್ಪಿದ ನಂತರ ಎರಡನೆಯ ಮೆಟ್ಟಿಲು ಆರಂಭವಾಗುತ್ತದೆ. ಕರಿ, ತುರಗ, ರಥ, ಪದಾತಿಗಳ ಸಮೂಹ ಸೃಷ್ಟಿಸುವ ಪ್ರಭುತ್ವದ ಸ್ಥಿತಿ. ಏಕಕಾಲದಲ್ಲಿ ಹಣ, ಹಣದಿಂದ ಉಂಟಾಗುವ ಅಧಿಕಾರದ ಮದವನ್ನು ಕುರಿತು ನಂತರದ ಸಾಲುಗಳಲ್ಲಿ ಮಾತನಾಡುತ್ತಾನೆ. ಕುಟುಂಬ, ಮಕ್ಕಳು, ಹೆಂಡತಿ, ಕುಲದ ಅಭಿಮಾನ ಇವುಗಳಿಂದ ಮುಕ್ತನಾಗುವುದರ ಕಡೆಗೆ ಗಮನ ಸೆಳೆಯುತ್ತಾನೆ. ಮಾತು ಜಾಣತನದಿಂದ ಕೂಡಿರಬೇಕಾದ ಅಗತ್ಯವಿಲ್ಲ, ವಚನಕಾರರಲ್ಲಿ ಚಮತ್ಕಾರೀ ಮಾತಿಗಿಂತ ಆತ್ಮಸಾಕ್ಷಿಯಿಂದಿದ್ದರೆ ಒಳಿತೆಂಬುದು ಅಭಿಪ್ರಾಯ. ವಚನ ಎಂಬುದೇ ಭಾಷೆಯ ಕೊಡುವುದನ್ನು ತಿಳಿಸುವಾಗ ಅದರ ಮೂಲಕವೇ ಅಮೂರ್ತ ಪದವಿಯ ಆಸೆಯಿಂದ, ಭವದಲ್ಲಿ ಬದುಕುವ ಆಶಯವನ್ನು ಹೊಂದಿದ್ದು ಭವದಿಂದ ಬಿಡುಗಡೆಯಾಗಿಯೂ ಯಶಸ್ಸನ್ನು ಗಳಿಸಬೇಕಾದ ಕಡೆಗೆ ಆಸೆಯನ್ನು ಹೊತ್ತು ಈ ವಚನ ಬಂದಿದೆ. ಮೂರು ವಿಧದ ಸಂಬಂಧಗಳನ್ನು ವಚನದ ರಚನಾ ವಿನ್ಯಾಸದಲ್ಲಿ ಮೆಟ್ಟಿಲುಗಳಾಗಿ ಅನುಕ್ರಮದಲ್ಲಿ ಇಡಲಾಗಿದೆ. ದೇಹದಿಂದ ಮೊದಲ್ಗೊಂಡು ಮತ್ತೆ ದೇಹದ ಕಡೆಗೆ ಬರುವ ಕ್ರಮವದು. ೧. ದೇಹ ಸಂಬಂಧ – ಹರೆಯ, ರೂಪು, ಚೆಲುವು, ನುಡಿ, ಜಾಣತನ, ಸಂತೋಷ ೨. ಸಮೂಹ ಸಂಬಂಧ – ಕರಿ, ತುರಗ, ರಥ, ಪದಾತಿ ಇವುಗಳ ನೆರವಿ ( ಗುಂಪು ) ೩. ಕುಟುಂಬ ಸಂಬಂಧ – ಸತಿ, ಸುತರ, ಬಂಧು, ಸಮೂಹ, ಕುಲದಭಿಮಾನ ಹೀಗೆ ವಚನ ಬೆಳೆಯುತ್ತಾ ಸಾಗುತ್ತದೆ. ನಂತರದಲ್ಲಿ ನೇರವಾಗಿಯೇ ಈ ಮೂರು ಸಂಬಂಧಗಳಿಂದ ಉಂಟಾಗುವ “ಗರ್ವವ ಬಿಡು” ಎನ್ನುತ್ತಾನೆ. ಮೇಲಿನ ಮೂರು ಅನುಕ್ರಮಗಳೊಡನೆ ಸಾಧಿಸುವ ಸಂಬಂಧ ಮತ್ತು ನಂತರದಲ್ಲಿ ಬರುವ ಪುರಾಣಪ್ರತೀಕಗಳ ಜೊತೆಗೆ ಸಾಧಿಸುವ ಸಂಬಂಧವನ್ನೂ ಗಮನಿಸಿ. ಸಾಮಾನ್ಯವಾಗಿಯೇ ಆರಂಭವಾದ ವಚನವು ಕೊನೆಗೆ ಪುರಾಣಪ್ರತೀಕಗಳನ್ನು ದೃಷ್ಟಾಂತವಾಗಿ ಬಳಸಿಕೊಂಡು ಗರ್ವವನ್ನು ಬಿಡುವುದಕ್ಕೆ ಮಾರ್ಗವನ್ನು ಮಾಡುತ್ತದೆ. ರೋಮಜನಿಂದ ಹಿರಿಯನೆ ? (ಹನುಂತನ ರೋಮಗಳಿಂದ ಹುಟ್ಟಿದ ಲಿಂಗಗಳಿಗಿಂತ ದೊಡ್ಡವನೆ ) ಮನ್ಮಥನಿಂತ ಚೆಲುವನಾ ? ಇಂದ್ರನಿಗಿಂತ ಸಂಪತ್ತನ್ನು ಹೊಂದಿರುವವನೇ ? ವಾಮದೇವ ಮತ್ತು ವಶಿಷ್ಠರಿಗಿಂತ ಕುಲದಲ್ಲಿ ದೊಡ್ಡವನಾ ? ಹೀಗೆ ಬೇರೆ ಬೇರೆ ಪುರಾಣ ಕಥೆಗಳನ್ನು ತಂದು ಪ್ರಶ್ನಿಸುತ್ತಾನೆ. ಇಲ್ಲಿಯೂ ಲಿಂಗದಿಂದ/ ದೇವರಿಂದ ಆರಂಭವಾಗಿ ಮನುಷ್ಯರಲ್ಲೇ ಉತ್ತಮರಾದ, ಸಾಧನೆಯಿಂದ ದೊಡ್ಡವರಾದ ಋಷಿಗಳ ಕಡೆಗೆ ಬರುತ್ತದೆ. ಮೇಲೆ ಉನ್ನತವಾಗಿರುವ ದೃಷ್ಟಾಂತಗಳನ್ನೇ ಕೊಡುತ್ತಾನೆ. ಕೊನೆಗೆ ಮೂಲ ಉದ್ದೇಶವಾದ ಪದವಿಯನ್ನು ಗಳಿಸಬೇಕಾದರೆ “ಮಹಾಲಿಂಗ ತ್ರಿಪುರಾಂತಕದೇವರ ಪುಜಿಸಿದರೆ” “ಕೇಡಿಲ್ಲದ ಪದವಿ” ಯ “ಕೊಡುವ” ಎಂಬ ನಂಬಿಕೆಯಲ್ಲಿ, ಅದೂ “ಕಾಲನ ದೂತರು ಬಂದು ಕೈ ಹಿಡಿದೆಳೆವಾಗ” ಎಂದು “ಪರಮಪದವಿ” ಯ ಕುರಿತು ಮಾತನಾಡಿ “ನುಡಿ ತಡವಲ್ಲ” ಎಂದು ಎಚ್ಚರಿಸುತ್ತಾನೆ. ಈ ವಚನ ರಚನೆಗೆ ಕಾರಣವಾದ ಬಸವಣ್ಣನವರ “ನೆರೆ ಕೆನ್ನೆಗೆ ತೆರೆ ಗಲ್ಲಕೆ” ವಚನವನ್ನು ಇಟ್ಟು ನೋಡಬಹುದು. ಹಾಗೆಯೇ ವಚನ ಚಳಿವಳಿಯ ಅನಂತರದ ದಾಸ ಪರಂಪರೆಯಲ್ಲಿಯೂ ಇದೇ ಅಂಶಗಳು ಸ್ವಲ್ಪ ಮಾರ್ಪಾಟುಗೊಂಡು ಗೇಯತೆಯನ್ನು ಸಾಧಿಸಿಕೊಂಡು ಬಂದಿದೆ. ಪುರಂದರದಾಸರ “ಮಾನವ ಜನ್ಮ ದೊಡ್ಡದು ಇದ / ಹಾನಿ ಮಾಡಲಿ ಬೇಡಿ ಹುಚ್ಚಪ್ಪಗಳಿರಾ” ಎಂಬ ಪ್ರಖ್ಯಾತ ಕೀರ್ತನೆಯ ರಚನೆಯ ಮೇಲೆ ಪ್ರಭಾವ ಮತ್ತು ಪ್ರೇರಣೆಯಾಗಿದೆ.೮ ಅಂತಕನ ದೂತರು ಬಂದು ಕೈವಿಡಿದೆಳೆವಾಗ ನುಡಿ ತಡವಲ್ಲ ಕೇಳೋ ನರನೆ ! ಎಂದು ಕಿನ್ನರಿ ಬೊಮ್ಮಯ್ಯ ಹೇಳುವ ಈ ಸಾಲುಗಳ ಪಕ್ಕದಲ್ಲಿ ಕಾಲನ ದೂತರು ಕಾಲ್ ಪಿಡಿದೆಳೆವಾಗ ತಾಳುತಾಳೆಂದರೆ ತಾಳುವರೆ ಎಂಬ ಪುರಂದರದಾಸರ ಸಾಲುಗಳನ್ನಿಟ್ಟು ಒಮ್ಮೆ ನೋಡಿ. ಎರಡರ ನಡೆಯೂ ಒಂದೇ ಇದೆ. ವಚನದಲ್ಲಿ “ಅಂತಕನ ದೂತರು ಕೈವಿಡಿದು” ಎಂದಿದ್ದರೆ, ಪುರಂದರರಲ್ಲಿ “ಕಾಲನ ದೂತರು ಕಾಲ್ ಪಿಡಿದೆಳೆವಾಗ” ಎಂದು ಬಂದಿದೆ. ದಾಸ ಸಾಹಿತ್ಯದಲ್ಲಿ ಲಯದ ಸಾಧ್ಯತೆಯಲ್ಲಿ ಈ ಮಾತುಗಳು ಬಹಳ ಪರಿಣಾಮಕಾರಿ ಯಶಸ್ಸಯನ್ನು ಸಾಧಿಸಿಬಿಡುತ್ತದೆ. “ಕಾಲ” “ಕಾಲ್ ಪಿಡಿದು” ಈ ಪದಗಳು ಸಾವು ಸಂಭವಿಸಿದ ನಂತರ ದೇಹವನ್ನು ಎಳೆದುಕೊಂಡು ಹೊಗುವ ಚಿತ್ರವನ್ನು ಕಣ್ಣಮುಂದೆ ಕಟ್ಟಿ ಬಿಡುತ್ತವೆ. ಬೊಮ್ಮಯ್ಯನ ವಚನದಲ್ಲಿ ಮೂಲ ಆಶಯವು ಎನ್ನ ಮಹಾಲಿಂಗ ತ್ರಿಪುರಾಂತಕದೇವರ ಪೂಜಿಸಿಯಾದರೆ ಕೇಡಿಲ್ಲದ ಪದ ದೊರಕೊಂಬುದು ಮರುಳೆ ಎಂದು ಬಂದಿದ್ದರೆ, ಪುರಂದರರಲ್ಲಿ ಎನು ಕಾರಣ ಯದುಪತಿಯ ಮರೆತಿರಿ ಧನಧಾನ್ಯ ಸತಿಸುತರು ಕಾಯುವರೆ ಇನ್ನಾದರೂ ಏಕೋಭಾವದಿ ಭಜಿಸಿರೋ ಚೆನ್ನ ಶ್ರೀ ಪುರಂದರವಿಠಲರಾಯನ ಎಂದು ಬಂದಿದೆ. “ಮರುಳೆ” ಎಂಬ ಬೊಮ್ಮೆಯ್ಯನು ಎದುರಿನವರೊಂದಿಗೆ ಸಾಧಿಸುವ ಸಂಬಂಧದ ವಿಧಾನಕ್ಕೂ, ಪುರಂದರರು “ಹುಚ್ಚಪ್ಪಗಳಿರಾ” ಎನ್ನುವಾಗ ಸಾಧಿಸುವ ಸಂಬಂಧಕ್ಕೂ ಬಹಳ ಹೋಲಿಕೆಯಿದೆ. ಈ ವಿಧಾನಗಳೂ ಇಲ್ಲಿ ಬಹುಮುಖ್ಯವಾದದ್ದು ನೇರವಾಗಿ ಎದುರಿರುವವರನ್ನು “ಮರುಳರು” ಎಂದು ಭಾವಿಸಿರುವುದು ತಿಳಿಯುತ್ತದೆ. ಒಟ್ಟಾರೆಯಾಗಿ ಕಿನ್ನರಿ ಬೊಮ್ಮಯ್ಯನ ವಚನವೊಂದು ಯಾವ ಆಸೆಯನ್ನು ಹೊತ್ತು ಕಾಲವನ್ನು ಕ್ರಮಿಸಿತೋ, ಅನಂತರದ ದಾಸ ಸಾಹಿತ್ಯದ ಕಾಲವೂ ಅದೇ ಆಶಯವನ್ನು ಹೊತ್ತು ನಡೆದಿದೆ. ಈ ಆಶಯಗಳು ಇಂದಿಗೂ ಮನುಷ್ಯ ತನ್ನ ಗರ್ವವನ್ನು ಬಿಟ್ಟು ಸಾಧಿಸಿಕೊಳ್ಳಬೇಕಾದುದರ ಹಂಬಲವನ್ನು ಸಾರುತ್ತಿದೆ. ————————————— ಅಡಿಟಿಪ್ಪಣಿಗಳು ೧. ಶರಣಾರ್ಥಿ ಶರಣಾರ್ಥಿ ಎಲೆ ತಾಯೆ ಎಮ್ಮವ್ವಾ ಶರಣಾರ್ಥಿ ಶರಣಾರ್ಥಿ ಕರುಣಾಸಾಗರನಿಧಿಯೆ ದಯಾಮೂರ್ತಿ ಕಾಯೆ ಶರಣಾರ್ಥಿ ಶರಣಾರ್ಥಿ ಮಹಾಲಿಂಗ ತ್ರಿಪುರಾಂತಕನೊಡ್ಡಿದ ತೊಡಕ ನೀವು ಬಿಡಿಸಿದಿರಿ ನಿಮ್ಮ ದಯದಿಂದ ನಾನು ಹುಲಿನೆಕ್ಕಿ ಬದುಕಿದೆನು ಶರಣಾರ್ಥಿ ಶರಣಾರ್ಥಿ ತಾಯೆ ಹಲಗೆಯಾರ್ಯನ ಶೂನ್ಯಸಂಪಾದನೆ. ಸಂ. ಪ್ರೊ. ಎಸ್. ವಿದ್ಯಾಶಂಕರ್ ಮತ್ತು ಪ್ರೊ. ಜಿ.ಎಸ್. ಸಿದ್ದಲಿಂಗಯ್ಯ. ಪ್ರಿಯದರ್ಶಿನಿ ಪ್ರಕಾಶನ ಬೆಂಗಳೂರು. ವ. ಸಂ. ೧೦೨೦. ಪು ೪೪೯ ( ೨೦೦೮ ) ೨. ಶಿವಶರಣ ಕಥಾರತ್ನಕೋಶ. ತ. ಸು. ಶಾಮರಾಯ. ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ. ಪುಟ ೮೬ ( ೧೯೬೭ ) ೩. ಪೂರ್ವೋಕ್ತ ೪. ಪೂರ್ವೋಕ್ತ ೫. ಪೂರ್ವೋಕ್ತ ೬. ಬಸವಯುಗದ ವಚನ ಮಹಾಸಂಪುಟ. ಸಂ. ಡಾ. ಎಂ. ಎಂ. ಕಲಬುರ್ಗಿ. ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು. ವ.ಸಂ – ೧೧. ಪು ೧೨೦೪ ( ೨೦೧೬ ) ೭. .ನೆರೆ ಕೆನ್ನೆಗೆ ತೆರೆ ಗಲ್ಲಕೆ ಶರೀರ ಗೂಡುವೋಗದ ಮುನ್ನ ಹಲ್ಲು ಹೋಗಿ ಬೆನ್ನು ಬಾಗಿ ಅನ್ಯರಿಗೆ ಹಂಗಾಗದ ಮುನ್ನ ಕಾಲ ಮೇಲೆ ಕೈಯನೂರಿ ಕೋಲ ಹಿಡಿಯದ ಮುನ್ನ ಮುಪ್ಪಿಂದೊಪ್ಪವಳಿಯದ ಮುನ್ನ ಮೃತ್ಯುಮುಟ್ಡದ ಮುನ್ನ ಪೂಜಿಸು ನಮ್ಮ ಕೂಡಲಸಂಗಮದೇವನ ವಚನ ಸಾಹಿತ್ಯ ಸಂಗ್ರಹ. ಸಂ. ಸಂ ಶಿ ಭೂಸನೂರು ಮಠ. ವ. ಸಂ ೮೦. ಪು ೪೯ ( ೧೯೬೫ ) ೮. ಮಾನವಜನ್ಮ ದೊಡ್ಡದು ಇದ ಹಾನಿಮಾಡಲಿ ಬೇಡಿ ಹುಚ್ಚಪ್ಪಗಳಿರಾ ( ಪ ) ಕಣ್ಣು ಕೈಕಾಲ್ ಕಿವಿ ನಾಲಿಗೆ ಇರಲಿಕ್ಕೆ ಮಣ್ಣುಮುಕ್ಕಿ ಮರುಳಾಗುವರೆ ಹೆಣ್ಣುಮಣ್ಣಿಗಾಗಿ ಹರಿಯ ನಾಮಾಮೃತ ಉಣ್ಣದೆ ಉಪವಾಸ ಇರುವರೆ ಖೋಡಿ ( ೧ ) ಕಾಲನ ದೂತರು ಕಾಲ್ಪಿಡಿದೆಳೆವಾಗ ತಾಳುತಾಳೆಂದರೆ ತಾಳುವರೆ ಧಾಳಿಬಾರದ ಮುನ್ನ ಧರ್ಮವ ಗಳಿಸಿರೊ ಸುಳ್ಳಿನ ಸಂಸಾರಸುಳಿಗೆ ಸಿಕ್ಕಲುಬೇಡಿ ( ೨ ) ಏನು ಕಾರಣ ಯದುಪತಿಯ ಮರೆತಿರಿ ಧನಧಾನ್ಯ ಸತಿಸುತರು ಕಾಯುವರೆ ಇನ್ನಾದರು ಏಕೋಭಾವದಿ ಭಜಿಸಿರೊ ಚೆನ್ನ ಶ್ರೀ ಪುರಂದರವಿಠಲರಾಯನ ( ೩ ) ಹರಿದಾಸರ ಜನಪ್ರಿಯ ಹಾಡುಗಳು. ಸಂ. ಡಾ. ಟಿ. ಎಸ್. ನಾಗರತ್ನ ಮತ್ತು ಡಾ. ಮಂದಾಕಿನಿ. ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು. ಪು ೨೦೯ ***************************** ಆರ್.ದಿಲೀಪ್ ಕುಮಾರ್ ಹುಟ್ಟಿದ್ದು ೧೯೯೧ ಮಾರ್ಚಿ ೧೬ ಮೈಸೂರಿನಲ್ಲಿ. ಸದ್ಯ ಚಾಮರಾಜನಗರದಲ್ಲಿ ತಾಯಿ ಮತ್ತು ತಮ್ಮನೊಂದಿಗೆ ವಾಸವಾಗಿದ್ದಾರೆ. ಪದವಿಪೂರ್ವ ಶಿಕ್ಷಣದಿಂದ ಬಿ.ಎಡ್ ವರೆಗಿನ ಶಿಕ್ಷಣವನ್ನು ಚಾಮರಾಜನಗರದಲ್ಲಿಯೇ ಪೂರ್ಣಗೊಳಿಸಿ, ಕೊಳ್ಳೇಗಾಲ, ಗುಂಡ್ಲುಪೇಟೆ ಮತ್ತು ಚಾಮರಾಜನಗರದ ಕಾಲೇಜುಗಳಲ್ಲಿ ನಾಲ್ಕು ವರ್ಷಗಳು ಕನ್ನಡ ಭಾಷಾ ಉಪನ್ಯಾಸಕರಾಗಿ
ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ-11 ಆತ್ಮಾನುಸಂಧಾನ ಕೇರಿ — ಕೊಪ್ಪಗಳ ನಡುವೆ…. ಬನವಾಸಿಯಿಂದ ಅಪ್ಪನಿಗೆ ಅಂಕೋಲಾ ತಾಲೂಕಿನ ಮಂಜಗುಣಿ ಎಂಬ ಊರಿನ ಶಾಲೆಗೆ ವರ್ಗವಾಯಿತು. ನಮ್ಮ ಪರಿವಾರ ನಾಡುಮಾಸ್ಕೇರಿಯಲ್ಲಿ ಮತ್ತೆ ನೆಲೆಸುವ ಅವಕಾಶ ಪಡೆಯಿತು. ಅಪ್ಪ ದಿನವೂ ಗಂಗಾವಳಿ ನದಿ ದಾಟಿ ಮಂಜಗುಣೆಯ ಶಾಲೆಗೆ ಹೋಗಿ ಬರುತ್ತಿದ್ದರೆ ನಾನು ಸಮೀಪದ ಜೋಗಣೆ ಗುಡ್ಡ’ ಎಂಬ ಭಾಗದಲ್ಲಿರುವ ಪೂರ್ಣ ಪ್ರಾಥಮಿಕ ಶಾಲೆಗೆ ಏಳನೆಯ ತರಗತಿಯ ಪ್ರವೇಶ ಪಡೆದುಕೊಂಡಿದ್ದೆ. ತಮ್ಮ, ತಂಗಿಯರು ಮನೆಯ ಸಮೀಪವೇ ಇರುವ ಕಿರಿಯ ಪ್ರಾಥಮಿಕ ಶಾಲೆಗೆ ಸೇರಿಕೊಂಡರು. ನಾಡುಮಾಸ್ಕೇರಿಯ ವಾಸ್ತವ್ಯದ ಈ ಕಾಲಾವಧಿ ನನಗೆ ಕಲಿಸಿದ ಪಾಠ, ನೀಡಿದ ಅನುಭವ ಬಹಳ ಅಮೂಲ್ಯವಾದದ್ದು. ಇಲ್ಲಿ ಬಾಲ್ಯದ ಎಲ್ಲ ಸಂತಸದ ಅನುಭವಗಳೊಡನೆಯೇ ಅನೇಕ ಕಹಿ ಸಂದರ್ಭಗಳಿಗೂ ಮುಖಾಮುಖಿಯಾಗುವ ಅವಕಾಶ ಒದಗಿ ಬಂತು. ಜೀವ ವಿಕಾಸದ ಅನೇಕ ನಿಗೂಢತೆಗಳಿಗೆ ಮನಸ್ಸು ತೆರೆದುಕೊಂಡದ್ದೂ ಈ ಮಾಸ್ಕೇರಿಯಲ್ಲಿಯೇ. ೬೨-೬೩ ರ ನೆರೆ ಹಾವಳಿ ನಮ್ಮ ಊರಿನಲ್ಲೂ ಅನೇಕ ಅವಾಂತರಗಳನ್ನು ಸೃಷ್ಠಿಸಿತ್ತು. ನಮ್ಮ ಜಾತಿಯ ಹಲವಾರು ಕುಟುಂಬಗಳು ತಮ್ಮ ಸ್ವಂತದ್ದಲ್ಲದ ಒಡೆಯರ ತುಂಡು ಭೂಮಿಯಲ್ಲಿ ಅಲ್ಲಿ ಇಲ್ಲಿ ಗುಡಿಸಲು ಹಾಕಿಕೊಂಡು ಬಾಳುವೆ ನಡೆಸುತ್ತಿದ್ದರು. ಅವುಗಳೆಲ್ಲಾ ನೆರೆಹಾವಳಿಯಲ್ಲಿ ನಾಶವಾಗಿ ನೆಲೆ ಕಳೆದುಕೊಂಡಿದ್ದರು. ಪರಿಸ್ಥಿತಿಯನ್ನು ಅರಿತ ನಮ್ಮ ತಂದೆಯವರು ಓದು ಬರಹ ಬಲ್ಲವರಾದ್ದರಿಂದ ಬನವಾಸಿಯಲ್ಲಿ ಇರುವಾಗಲೇ ನಮ್ಮವರ ಕಷ್ಟಗಳು ಸರಕಾರಕ್ಕೆ ಮನವರಿಕೆಯಾಗುವಂತೆ ಅರ್ಜಿ ಬರೆದು ಎಲ್ಲರಿಗೂ ಜಮೀನು ಮತ್ತು ಮನೆ ಮಂಜೂರಿಯಾಗುವಂತೆ ಮಾಡಿದ್ದರು. ನಾವು ಮರಳಿ ನಾಡುಮಾಸ್ಕೇರಿಗೆ ಬಂದು ನೆಲೆಸುವ ಹೊತ್ತಿಗೆ ಎಲ್ಲ ನಿರಾಶ್ರಿತ ಕುಟುಂಬಗಳಿಗೆ ತಲಾ ಐದು ಗುಂಟೆ ಭೂಮಿ ಮತ್ತು ಜನತಾ ಮನೆಗಳು ಮಂಜೂರಿಯಾಗಿ ಮನೆ ಕಟ್ಟುವ ಕೆಲಸ ಆರಂಭವಾಗಿತ್ತು. ನಾಡು ಮಾಸ್ಕೇರಿಯ ನಾಡವರ ಕೊಪ್ಪದಿಂದ ಹಾರು ಮಾಸ್ಕೇರಿಯ ಬ್ರಾಹ್ಮಣರ ಮನೆಯವರೆಗೆ ವಿಶಾಲವಾದ ಬಯಲು ಪ್ರದೇಶವಿತ್ತು. ದನ-ಕರು ಸಾಕಿಕೊಂಡವರಿಗೆಲ್ಲ ಅದು ಗೋಮಾಳ’ದಂತೆ ದನ ಮೇಯಿಸುವ ಸ್ಥಳವಾಗಿತ್ತು. ಅದರ ಒಂದು ಭಾಗದಲ್ಲಿ ಆಗೇರರಿಗೆಲ್ಲಾ ಜಮೀನು ಹಂಚಿಕೆಯಾಗಿತ್ತು. ಉಳಿದ ಭಾಗವನ್ನು ಗೋಮಾಳವೆಂದೂ, ಆಟದ ಬಯಲು ಎಂದೂ ಬಿಟ್ಟಿದ್ದರು. ಹೀಗೆ ಊರಿನಲ್ಲಿ ಅಲ್ಲಿ ಇಲ್ಲಿ ಅನ್ಯರ ನೆಲದಲ್ಲಿ ಆಶ್ರಯ ಪಡೆದ ಆಗೇರರು ಒಂದು ನಿರ್ದಿಷ್ಟ ಸ್ಥಳದಲ್ಲಿ ಜನತಾ ಮನೆಗಳನ್ನು ಕಟ್ಟಿಕೊಂಡು ನೆಲೆಸುತ್ತಾ ಆಗೇರಕೇರಿ’ಯೊಂದು ನಿರ್ಮಾಣವಾಯಿತು. ಗೋಮಾಳದ ಬಯಲು ದಾಟಿದ ಬಳಿಕ ಒತ್ತಾಗಿ ಇರುವ ನಾಡವರ ಮನೆಗಳು ಮತ್ತು ಮನೆಯ ಸುತ್ತ ಸೊಂಪಾಗಿ ಬೆಳೆದು ನಿಂತ ತೆಂಗು, ಅಡಿಕೆ, ಬಾಳೆ ಮತ್ತಿತರ ಗಿಡಮರಗಳ ಕಾರಣದಿಂದ ಬಹುಶಃ ನಾಡವರ ಕೇರಿಯನ್ನು ಕೇರಿ’ ಎನ್ನದೆ ನಾಡವರ ಕೊಪ್ಪ’ ಎಂದು ಕರೆಯುತ್ತಿರಬೇಕು. ಕೇರಿಯ ಬಹುತೇಕ ಎಲ್ಲರೂ ಕೊಪ್ಪದ ಹಂಗಿನಲ್ಲೇ ಬಾಳಬೇಕಾದ ಅನಿವಾರ್ಯತೆ ಇದ್ದವರು. ನಾಡವರ ಕೃಷಿ ಭೂಮಿಯ ಕೆಲಸಗಳು, ಮನೆಯ ಕಸ ಮುಸುರೆ ಇತ್ಯಾದಿ ಕಾಯಕದಿಂದ ಆಗೇರರ ಬಹಳಷ್ಟು ಕುಟುಂಬಗಳು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಹಾಗಾಗಿ ಕೇರಿ-ಕೊಪ್ಪಗಳ ನಡುವೆ ಸಹಜವಾಗಿಯೇ ವ್ಯವಹಾರಿಕ ಸಂಬಂಧ ಬೆಸೆದುಕೊಂಡಿತ್ತು. ನಮ್ಮ ಕೇರಿಯ ಬಹಳಷ್ಟು ಜನ ತಮ್ಮ ಮದುವೆಗಾಗಿ ಜಮೀನ್ದಾರರಾಗಿದ್ದ ನಾಡವರಿಂದ ಸಾಲಪಡೆದು ಗಂಡ ಹೆಂಡತಿ ಇಬ್ಬರೂ ಜೀತದ ಆಳುಗಳಾಗಿ ದುಡಿಯುತ್ತಿದ್ದರು. ಮುಂದೆ ಈ ದಂಪತಿಗಳಿಗೆ ಹುಟ್ಟಿದ ಮಕ್ಕಳು ಕೂಡಾ ಇದೇ ಒಡೆಯನ ಮನೆಯ ಆಳಾಗಿ ದುಡಿಯುತ್ತ ಅಗತ್ಯವಾದರೆ ತಮ್ಮ ಮದುವೆಗೂ ಒಡೆಯನಿಂದ ಸಾಲ ಪಡೆಯುತ್ತ ಜೀತ ಪರಂಪರೆಯನ್ನು ಬಹುತೇಕ ಮುಂದುವರಿಸುತ್ತಿದ್ದರು. ಸಾಲ ಪಡೆಯದೆ ಜೀತದಿಂದ ಹೊರಗಿದ್ದವರೂ ಕೂಡ ದೈನಂದಿನ ಅನ್ನ ಸಂಪಾದನೆಗಾಗಿ ಇದೇ ಒಡೆಯರ ಮನೆಗಳಲ್ಲಿ, ಹೊಲಗಳಲ್ಲಿ ಚಾಕರಿ ಮಾಡುತ್ತ ಜೀವನ ನಿರ್ವಹಣೆ ಮಾಡುತ್ತಿದ್ದರು. ನಾಡವರ ಮನೆಗಳ ಕಸ-ಮುಸುರೆ, ತೋಟದ ಕೆಲಸ, ಬೆಸಾಯದ ಭೂಮಿಯಲ್ಲಿ ದುಡಿಮೆ ಇತ್ಯಾದಿಗಳನ್ನು ಮಾಡುತ್ತ ಕೇರಿಯ ಜನ ಕೊಪ್ಪದ ಯಜಮಾನರುಗಳೊಂದಿಗೆ ಅನ್ಯೋನ್ಯವಾಗಿಯೇ ಹೊಂದಿಕೊಂಡಿದ್ದರು. ಹಬ್ಬ-ಹುಣ್ಣಿಮೆ, ಯಜಮಾನರ ಮನೆಯ ಮದುವೆ, ಹರಿದಿನ ಮೊದಲಾದ ಸಮಾರಂಭಗಳಲ್ಲಿ ನಮ್ಮ ಕೇರಿಯ ಜನ ಪಾತ್ರೆಗಳನ್ನೊಯ್ದು ಒಡೆಯರ ಮನೆಗಳಿಂದ ಅನ್ನ, ಪಾಯಸ ಇತ್ಯಾದಿಗಳನ್ನು ಬಡಸಿಕೊಂಡು’ ಬಂದು ಮನೆ ಮಂದಿಯೆಲ್ಲ ಹಂಚಿಕೊಂಡು ಉಣ್ಣುತ್ತಿದ್ದರು. ದೀಪಾವಳಿ, ಯುಗಾದಿ, ಚೌತಿ, ತುಳಸಿ ಹಬ್ಬ ಮುಂತಾದ ವಿಶೇಷ ಹಬ್ಬಗಳ ದಿನ ಸಂಜೆಯ ಹೊತ್ತು ಕೇರಿಯ ಹೆಂಗಸರು ಮಕ್ಕಳೆಲ್ಲ ಒಂದೊಂದು ಹಚ್ಚಿಗೆ’ (ಬಿದಿರಿನ ಬುಟ್ಟಿ) ಅಥವಾ ಕೈಚೀಲ ಹಿಡಿದು ಕೊಪ್ಪದ ಮನೆಮನೆಯ ಮುಂದೆ ನಿಂತು ರೊಟ್ಟಿ ಬೇಡುವ’ ಅನಿಷ್ಟ ಪದ್ಧತಿಯೂ ಆಗ ಚಾಲ್ತಿಯಲ್ಲಿತ್ತು. ಇದು ಅತ್ಯಂತ ದೈನೇಸಿ ಕ್ರಮವೆಂಬ ಅರಿವಿಲ್ಲದೆ, ನನ್ನ ವಯಸ್ಸಿನ ಹುಡುಗರೂ ನಾಡವರ ಮನೆಗಳಿಂದ ಬೇಡಿ ತರುತ್ತಿದ್ದ ಬಿಳಿ ಬಿಳಿಯಾದ ರೊಟ್ಟಿಯ ಹೋಳುಗಳಿಗೆ ಆಸೆಪಟ್ಟು ನಾನೂ ಒಮ್ಮೆ ನಮ್ಮ ಗೆಳೆಯರ ತಂಡದಲ್ಲಿ ಸೇರಿಕೊಂಡು ರೊಟ್ಟಿ ಬೇಡಲು ಹೋಗಿ ಬಂದಿದ್ದೆ. ಕೆಲವು ಮನೆಗಳವರು ನನ್ನನ್ನು ಇಂಥವರ ಮಗ’ ಎಂದು ಗುರುತಿಸಿ ನನ್ನ ಕೈಚೀಲಕ್ಕೆ ಸ್ವಲ್ಪ ಹೆಚ್ಚಿನ ರೊಟ್ಟಿ ಹೋಳುಗಳನ್ನೇ ಅನುಗ್ರಹಿಸಿದ್ದರು! ನನಗೆ ಖುಷಿಯಾಗಿತ್ತು. ಆದರೆ ಮನೆಯಲ್ಲಿ ವಿಷಯ ತಿಳಿದಾಗ ದೊಡ್ಡ ರಂಪವೇ ಆಯಿತು. ಹೇಳಿ ಕೇಳಿ ನಾನೊಬ್ಬ ಸರಕಾರಿ ಸಂಬಳ ಪಡೆಯುವ ಮಾಸ್ತರನ ಮಗ. ನನ್ನಂಥವನು ಬೇಡಲು ನಿಂತದ್ದು ನನಗೂ, ನನ್ನ ತಾಯಿ, ತಂದೆಯರಿಗೂ ಅವಮಾನಕರ ಸಂಗತಿಯೇ. ಅಷ್ಟೆಲ್ಲಾ ಗಂಭೀರವಾಗಿ ಯೋಚಿಸುವ ತಿಳುವಳಿಕೆಯಾದರೂ ಎಲ್ಲಿತ್ತು? ಬರಿಯ ಬಾಯಿ ಚಪಲ ಮತ್ತು ಬೇಡುವುದೂ ಒಂದು ಆಟವೆಂಬಂತೆ ಗೆಳೆಯರೊಡನೆ ಹೊರಟುಬಿಟ್ಟಿದ್ದೆ. ಮನೆಯ ಮಾನ ಕಳೆದನೆಂದು ಅವ್ವ ಅಟ್ಟಾಡಿಸಿ ಹೊಡೆದಳು, ಅಪ್ಪ ಚೆನ್ನಾಗಿ ಬೈದಿದ್ದು, ಅಜ್ಜ ಕಣ್ಣೀರು ಹಾಕಿದ್ದ. ಆದರೆ ಅಂದು ನಮ್ಮ ಕೇರಿಯ ಜನಕ್ಕೆ ಬೇಡಿಕೆ’ ಎಂಬುದು ಹಸಿವಿನ ಅನಿವಾರ್ಯತೆಯಾಗಿತ್ತು. ಸರಿಯಾಗಿ ಅಕ್ಕಿಯ ಗಂಜಿ ಬೇಯಿಸಿ ತಿಂದರೆ ಅದೇ ಮೃಷ್ಟಾನ್ನ! ಬಹುತೇಕ ಅಕ್ಕಿಯ ನುಚ್ಚಿನ ಗಂಜಿ ಇಲ್ಲವೆ ಅಂಬಲಿ ಕುದಿಸಿ ಕುಡಿದು ದಿನಕಳೆಯುವ ಕೇರಿಯ ಜನಕ್ಕೆ ಮನೆಯಲ್ಲಿ ಒಂದು ದೋಸೆ ಮಾಡಿ ತಿನ್ನುವುದಕ್ಕೂ ಹಬ್ಬದ ದಿನಕ್ಕಾಗಿಯೇ ಕಾಯಬೇಕಿತ್ತು. ಅಂಥವರಿಗೆ ತಾವೇ ದುಡಿಯುತ್ತಿರುವ ಒಡೆಯರ ಮನೆಗಳಲ್ಲಿ ಬೇಡಿ ತಿನ್ನಲು ಯಾವ ಸಂಕೋಚವೂ ಆಗದಿರುವುದು ಸಹಜವೇ ಆಗಿತ್ತು. ಅಲ್ಲದೆ ಊರಿನ ಗ್ರಾಮದೇವತೆ ಮತ್ತು ಮನೆದೇವತೆಗಳ ಪೂಜಾ ದಿನಗಳಲ್ಲಿ ಆಗೇರರು ತಮ್ಮಲ್ಲಿರುವ ಹಲಗೆ ವಾದ್ಯ, ಪಂಚವಾದ್ಯಗಳನ್ನು ಬಾರಿಸುವ ಸೇವೆ ಸಲ್ಲಿಸುತ್ತಿದ್ದರು. ಇದಕ್ಕೆ ದೇವರ ಪ್ರಸಾದವಲ್ಲದೆ ಬೇರೆ ಸಂಭಾವನೆ ನೀಡುತ್ತಿರಲಿಲ್ಲ. ಬಹುಶಃ ಇದೇ ಕಾರಣದಿಂದ ಸಂಕ್ರಾಂತಿ, ಯುಗಾದಿ, ಸುಗ್ಗಿ ಹಬ್ಬದ ದಿನಗಳಲ್ಲಿ ಆಗೇರರು ಬೇರೆ ಬೇರೆ ತಂಡಗಳಲ್ಲಿ ಪಂಚವಾದ್ಯ, ಹಲಗೆವಾದ್ಯಗಳನ್ನು ಮನೆ ಮನೆಯ ಮುಂದೆ ಬಾರಿಸಿ ದುಡ್ಡು, ಭತ್ತ ಅಥವಾ ಅಕ್ಕಿಯನ್ನೇ ಬೇಡಿ ಪಡೆದು ಎಲ್ಲರೂ ಸಮನಾಗಿ ಹಂಚಿಕೊಳ್ಳುತ್ತಿದ್ದರು. ಇದನ್ನು ಬೇಡಿಕೆ’ ಎಂದು ಕರೆದು ಸಾಂಪ್ರದಾಯಿಕ ಆಚರಣೆಯಂತೆಯೇ ನಡೆಸುತ್ತಿದ್ದರು. ಇದಕ್ಕೆ ಸಾಮಾಜಿಕವಾಗಿ ಗೌರವವೂ ಇತ್ತು ಎಂದು ನಾನು ಭಾವಿಸಿದ್ದೇನೆ. ಏಕೆಂದರೆ ಕಾಲಮಾನದ ತೀವೃ ಬದಲಾವಣೆಗೆ ನನ್ನ ಕೇರಿಯೂ ಹೊರತಾಗಲಿಲ್ಲ. ಅಲ್ಲಿ ಶಿಕ್ಷಣ, ರಾಜಕೀಯ, ಸಾಮಾಜಿಕ ಜೀವನ ಕ್ರಮ ಎಲ್ಲದರಲ್ಲಿಯೂ ಬದಲಾವಣೆಗಳಾಗಿವೆ. ಆದರೆ ಕೇರಿಯ ಹಲಗೆವಾದ್ಯ’, ಪಂಚವಾದ್ಯ’ ತಂಡಗಳು ತಮ್ಮ ಅಂದಿನ ಬೇಡಿಕೆ’ಯ ಸಂಪ್ರದಾಯವನ್ನು ಇಂದಿಗೂ ಮುಂದುವರಿಸಿಕೊಂಡೇ ನಡೆದಿವೆ. ************************************* ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.ಯಕ್ಷಗಾನ ಕಲಾವಿದ. ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ. ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ಕನ್ನಡಿಗರ ಎದುರು ಇಡುತ್ತಿದೆ
ಅಂಕಣ ಬರಹ ಮುಗಿಲ ಪ್ರೇಮದಿ ಕಳೆಗಟ್ಟಿತು ಇಳೆ ನನ್ನ ಅರಳಿದ ಬೊಗಸೆಯೊಳಗೆ ಅವಳು ಸುರಿದ ಹಣದಲ್ಲಿ ಮಡಚಿದ ಹತ್ತು, ಐದು, ಎರಡು, ಒಂದರ ನೋಟುಗಳು. ಅಘ್ರಾಣಿಸಿದರೆ ಅವಳ ಬೆವರು ಹಾಗೂ ಹಸುಗಳ ಉಸಿರನ ಪರಿಮಳ ಬೆರೆತುಬಂದಂತೆ. ಆ ದಿನ ಬೆಳಗ್ಗೆ ನನ್ನಜ್ಜಿ ನನ್ನನ್ನು ಹತ್ತಿರ ಕರೆದು ಕೂರಿಸಿಕೊಂಡಳು “ಬಾಳೀ, ನಿನ್ನ ಶಾಲೆಯಲ್ಲಿ ಇವತ್ತು ಗಮ್ಮತ್ತು ಅಲ್ವಾ. ನೀನು ಕಲಾವಿದೆ. ತಗೋ 100 ರೂಪಾಯಿ. ಇವತ್ತು ಹೊಸ ದಿರಿಸು ತಗೋ. ನಿನ್ನಿಷ್ಟದ್ದು. ಅದನ್ನು ಹಾಕಿಕೊಂಡು ಹೋಗು. ನೋಡು,ನಿನ್ನ ಖುಷಿ ಮತ್ತಷ್ಟು ಜಾಸ್ತಿಯಾಗಲಿ.” ಆಗೆಲ್ಲ ಹೊಸ ವಸ್ತ್ರ ಬರುವುದು ವರ್ಷಕ್ಕೊಮ್ಮೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ. ಈಗ ಸಿಕ್ಕಿದ್ದು ಬೋನಸ್. ಅದು ನನ್ನಜ್ಜಿ ಹಾಲು ಮಾರಿ ಬಂದ ಹಣದಲ್ಲಿ ಉಳಿತಾಯ ಮಾಡಿದ ಕಾಸು. ಅವಳ ಕಣ್ಣಲ್ಲಿ ನನಗಾಗಿ ಬೆಳಗುವ ದೀಪಾವಳಿ. ಅಮ್ರಪಾಲಿ ನಾಟಕದ ಗುಂಗಿನಲ್ಲಿ ನನ್ನ ಶಾಲಾ ದಿನಗಳು ಚಿಗುರುತ್ತಲೇ ಇದ್ದವು. ಶಾಲೆಯ ಪಕ್ಕದಲ್ಲಿ ಕೆರೆ- ದಡ ಆಟಕ್ಕೆ ಮಕ್ಕಳು ಕೈಕೈ ಬೆಸೆದು ನಿಂತಂತೆ ,ರೈಲಿನ ಬೋಗಿಗಳ ಕೊಂಡಿ ಹೆಣೆದಂತೆ ಒಂದೇ ಬಣ್ಣ ಬಳಿದುಕೊಂಡ ಉದ್ದನೆಯ ಸಾಲು ಸಾಕು ಮನೆಗಳು. ಕೊಂಡಿ ಸಿಕ್ಕಿಸಿದಂತೆ ನಡುನಡುವೆ ಹದಿಹರೆಯದ ಪೇರಳೆ ಗಿಡಗಳು. ಒಂದೊಂದು ಮನೆಯ ಕಿಟಕಿ, ಬಾಗಿಲಿಗೆ ಮನಸ್ಸು ಆನಿಸಿದರೆ ಮೆಲ್ಲಮೆಲ್ಲನೆ ಒಂದೊಂದು ಬಗೆಯ, ರುಚಿಯ ಕಥೆಗಳು ಆಕಳಿಕೆ ಮುರಿದು ತೆರೆದುಕೊಳ್ಳುತ್ತವೆ. ಅಲ್ಲಿ ರಂಗಿನೊಡನೆ ಸ್ಪರ್ಧಿಸುವ ಹೂವುಗಳು, ಹೂಗಳನ್ನು ನೇವರಿಸುವ ಹುಡುಗಿಯರು. ಸಂಜೆಯ ಹೊತ್ತು ಮನೆಗಳ ಹಿಂದೆ ಇರುವ ಖಾಲಿ ಜಾಗದಲ್ಲಿ ಹುಡುಗರು, ಗಂಡಸರು ವಾಲಿಬಾಲ್ ಆಟ ಆಡಿದರೆ ಹುಡುಗಿಯರು ಸೇರಿಕೊಂಡು ಕಾಲೇಜಿನಲ್ಲಿ ನಡೆದ ಪ್ರಸಂಗಗಳು, ಹುಡುಗರ ಕೀಟಲೆ, ತಮ್ಮ ಪ್ರತಿಕ್ರಿಯೆ, ಹೀಗೆ ರಾಶಿ ಮಾತುಗಳನ್ನು ಪೇರಿಸಿ ಕೆನ್ನೆ ಕೆಂಪಾಗಿಸಿ ಮನಸ್ಸಿಗೆ ಯಾವು ಯಾವುದೋ ಹೊಸ ಹೊಸ ಕುಡಿಮೀಸೆಯ ಮುಖಗಳನ್ನು ತೂಗು ಹಾಕುತ್ತಿದ್ದರು. ಒಂದು ವಾರ ಬಿಟ್ಟು ನೋಡಿದರೆ ಆ ಮಾತಿನ ಒಂದಿಷ್ಟೂ ಗುರುತು ಸಿಗದಂತೆ ನವನವೀನ ಪ್ರಸಂಗಗಳು, ಜುಳುಜುಳು ನಗೆ, ಗಲಗಲ ಮಾತು ಹರಿಯುತ್ತಿತ್ತು. ಅದೆಷ್ಟು ಹುಡುಗಿಯರು ಮಂಜುಳ, ಕವಿತಾ, ಮೀನಾ,ಸರೋಜ,ಮಲ್ಲಮ್ಮ ಎಲ್ಲರೂ ಆ ಸರಕಾರಿ ವಸತಿಗೃಹಗಳ ಜೀವ ಕುಸುಮಗಳು. ಅವರ ಅಣ್ಣ, ಅಪ್ಪ, ಚಿಕ್ಕಪ್ಪ, ಮಾವ ಹೀಗೆ ಮನೆಯ ಸದಸ್ಯರೊಬ್ಬರು ಸರಕಾರಿ ಹುದ್ದೆಯಲ್ಲಿದ್ದ ಕಾರಣ ಆ ಸರಪಳಿ ಸಿಕ್ಕಿಸಿ ನಿಂತ ಮನೆಗಳಲ್ಲಿ ಇವರಿದ್ದಾರೆ. ನಮ್ಮೂರು ಅವರಿಗೆ ಸಾಕುತಾಯಿ. ಅಲ್ಲೇ ಆ ದೊಡ್ಡ ಬೇಲಿಯ ಗಡಿ ದಾಟಿರಸ್ತೆಗೆ ಬಂದು ನಿಂತರೆ ಆಗಷ್ಟೆ ಸಣ್ಣ ಹಾಡಿಯಂತಿದ್ದ ಜಾಗ ಸಮತಟ್ಟಾಗಿ ಗೆರೆಮೂಡಿಸಿ ಮೂರು ಮನೆಗಳು ತಲೆಎತ್ತಿ ಕೂತಿದೆ. ಅದರಲ್ಲೊಂದು ನಮ್ಮಮನೆ. ಹತ್ತರ ಪಬ್ಲಿಕ್ ಪರೀಕ್ಷೆಯ ಗೇಟು ದಾಟಿ ಬಾಲ್ಯದ ಭಾವಗಳನ್ನು ಕಳಚಿ ಪೀಚಲು ಕನಸಿನ ಜೋಳಿಗೆ ಬಗಲಲ್ಲಿಟ್ಟು ಕಿರಿಯ ಕಾಲೇಜಿನ ವಿದ್ಯಾರ್ಥಿಯಾಗಿದ್ದೆ. ಕಣ್ಣಿಗೆ ಕಾಣುವ ಬಣ್ಣಗಳಿಗೆ ನೂರೆಂಟು ತಡೆಗೋಡೆಗಳು. ಆದರೂ ಮೂಲೆ ಮೂಲೆಯ ಕಚಗುಳಿ ಮುಚ್ಚಟೆಯಾಗಿ ಎದೆಗಾನಿಸಿ ಸುಳ್ಳುಪೊಳ್ಳು ನಗೆಯಿಂದ ರಂಗೋಲಿ ಅರಳುತ್ತಿತ್ತು. ಚುಕ್ಕಿಚುಕ್ಕಿಗಳ ಸೇರ್ಪಡೆಯಿಂದ ವಿಸ್ತರಿಸುತ್ತಿತ್ತು. ಈ ಚುಕ್ಕಿಗಳದ್ದೇ ರಾಜ್ಯ ಅಲ್ಲಿ. ಆ ಸಮವಸ್ತ್ರತೊಟ್ಟ ಮನೆಗಳ ಸಾಲಿನಲ್ಲಿತ್ತು. ಅಲ್ಲಿಗೆ ಸಂಜೆಯ ಸಮಯ ಮೆಲ್ಲಡಿಯಿಡುತ್ತ ಹೋಗುವುದು. ಸುಮ್ಮಸುಮ್ಮನೆ ಹೋಗುತ್ತಿರಲಿಲ್ಲ. ಹಾಗೆ ಹೋಗುವುದಕ್ಕೂ ಬಲವಾದ ಕಾರಣ ವೂ ಇತ್ತು. ಆ ಸಮಯ ನನ್ನಜ್ಜ ಅಜ್ಜಿ ಒಂದಷ್ಟು ದನಗಳನ್ನು ಸಾಕುತ್ತಿದ್ದರು. ಆ ದನಗಳು ನಮ್ಮಮನೆಯ ಆರ್ಥಿಕ ಜವಾಬ್ದಾರಿಯನ್ನು ವಹಿಸಿಕೊಂಡಿದ್ದವು. ಸಂಜೆ ಕಾಲೇಜಿನಿಂದ ಬಂದ ನನಗೆ ಈ ಬೇಲಿಯೊಳಗಿನ ಮನೆಮನೆಗಳಿಗೆ ಹಾಲು ಸರಬರಾಜು ಮಾಡುವ ಕೆಲಸ. ಇದು ಎರಡು ಮೂರು ಟ್ರಿಪ್ ಆಗುವುದೂ ಇದೆ. ಎರಡೂ ಕೈಗಳಲ್ಲಿ ಹಾಲು ತುಂಬಿದ ತಂಬಿಗೆಯ ಬಾಯಿಗೆ ನನ್ನ ಬೆರಳುಗಳ ಮುಚ್ಚಳ ಸೇರಿಸಿ ಹೋಗುತ್ತಿದ್ದೆ. ಮನೆ ಮನೆಯ ಬಾಗಿಲಲ್ಲಿ ನಿಂತು ” ಹಾಲೂ..” ಎಂದು ಮನೆಯವರನ್ನು ಕೂಗುವುದು. ಅಮ್ಮನಂತವರು,ಅಕ್ಕನಂತವರು ಮಾತ್ರವಲ್ಲ ಅಪರೂಪಕ್ಕೆ ಹುಲಿಕಣ್ಣಿನ ಗಂಡುಗಳೂ ಆ ಮನೆಯ ಗುಹೆಗಳಲ್ಲಿ ಕಂಡಿದ್ದೂ ಇದೆ. ಇಲ್ಲಿಯೇ ಬಿಳೀ ಬಣ್ಣದ ದಪ್ಪ ದೇಹದ ನಳಿನಿ ಆಂಟಿ ನನಗೆ ಬದುಕಿನ ಮೊದಲ ವ್ಯಾನಿಟಿ ಬ್ಯಾಗ್ ಕೊಟ್ಟು ನಕ್ಕಿದ್ದರು. ಎಂತಹ ಖುಷಿಯದು. ಗಾಢ ನೀಲಿ ಬಣ್ಣದ ಜಂಭದ ಚೀಲ. ಅದುವರೆಗೆ ಪುಸ್ತಕಗಳನ್ನು ಕೈಯಲ್ಲಿ ಹಿಡಿದು ಅದನ್ನು ಎದೆಗಾನಿಸಿಕೊಂಡು ಹೋಗುತ್ತಿದ್ದೆ. ಈಗ ಪುಸ್ತಕಗಳಿಗೂ ವಿಶ್ರಾಂತಿಗೆ, ಪಯಣಕ್ಕೊಂದು ಗೂಡು. ಚಲಿಸುವ ಮನೆ ಸಿಕ್ಕಿತು. ಈ ಬಾಗಿಲು ತಟ್ಟುವ ಕಾಯಕ ಮುಗಿಸಿದ ನಂತರ ಸ್ವಲ್ಪ ಹೊತ್ತು ಹೆಣ್ಮಕ್ಕಳ ಮೀಟಿಂಗ್. ನನಗಿಂತ ಒಂದು, ಎರಡು ವರ್ಷ ಕಿರಿಯರು, ಹಿರಿಯರು ಪಾಲ್ಗೊಳ್ಳುವ ಸಭೆಯದು. ಪ್ರತಿಯೊಂದು ಕುಸುಮ ಕುಸುಮಿಸುವ ಪರಿ ಭಿನ್ನ. ಇಳೆ ಒರತೆ ತುಂಬಿಕೊಳ್ಳುವ ಕಾಲ. ನಮ್ಮ ಶಾಲೆ ಕಾಲೇಜುಗಳೂ ಬೇರೆಬೇರೆ. ನಾವು ಈ ಹುಡುಗರು ವಾಲಿಬಾಲ್ ಆಡುವ ಜಾಗದ ಒಂದು ಮೂಲೆಯಿಂದ ಆಚೀಚೆ ಹೋಗುವ ಪ್ರಸಂಗಗಳೂ ಇದ್ದವು. ಆಗೆಲ್ಲ ಅವ್ಯಕ್ತ ಕಂಪನಕ್ಕೆ ಕಳೆಗಟ್ಟುವ ಎಳೆ ಮನಗಳು ನಮ್ಮವು. ತಲೆಎತ್ತಿ ಅಲ್ಲಿರುವ ಗಂಡುಹುಡುಗರಿಗೆ ದೃಷ್ಟಿ ಕೂಡಿಸುವ ದಾರ್ಷ್ಟ್ಯವು ಆ ನಾಜೂಕು ಹುಡುಗಿಯರಿಗೆ ಇರಲಿಲ್ಲ. ಆ ಹುಡುಗರೂ ಜೋರಾಗಿ ದೂರು ಕೊಡುವ ಮಟ್ಟದ ಕೀಟಲೆ ಮಾಡಿದ್ದೂ ಇಲ್ಲ. ಈ ನಮ್ಮಹುಡುಗಿಯರ ಬೈಠಕ್ ನಲ್ಲಿ ಒಂದು ವಿಶೇಷತೆಯಿತ್ತು. ನಮ್ಮ ಜೊತೆ ಬಿಂದು ಎಂಬ ಒಬ್ಬ ಹುಡುಗನಿದ್ದ. ರಂಗಕ್ಕೆ ಎಳೆದೊಯ್ದರೆ ಕೃಷ್ಣನ ಪಾತ್ರಕ್ಕೆ ಹೊಂದುವಂತಹ ಮುಖ. ನಸುಗಪ್ಪು ಬಣ್ಣ. ನಗುತುಂಬಿದ ಕಣ್ಣುಗಳು. ನಮ್ಮೆಲ್ಲರಿಗೂ ಆತ್ಮೀಯ ಸ್ನೇಹಿತ. ನಮ್ಮ ಹೆಚ್ಚಿನ ಮಾತುಗಳಿಗೆ ನಮ್ಮ ಭಾವ ತುಡಿತಗಳೊಂದಿಗೆ ಒಂದಾಗುವ, ಸಲಹೆ ನೀಡುವ ಗೆಳೆಯ. ಬಲು ಚಿಕ್ಕವನಿರುವಾಗ ಪೋಲಿಯೊದಿಂದ ಒಂದು ಕಾಲು ತುಸು ಎಳೆದಂತೆ ನಡೆದಾಡುತ್ತಿದ್ದ. ಹುಡುಗರ ಆಟಕ್ಕೆ ಅವನು ನಿಷೇದಿಸಲ್ಪಟ್ಟಿದ್ದ. ಆ ಸಮಯದಲ್ಲಿ ನಾನು ಗುಂಪಿನ ಒಳ್ಳೆಯ ಕೇಳುಗಳು. ಜೊತೆಗೆ ಉಳಿದವರಿಗಿಂತ ಚೂರು ಕಮ್ಮಿ ಕಥೆಗಳು ನನ್ನಲ್ಲಿ ಶೇಖರಿಸಲ್ಪಟ್ಡಿದ್ದವು. ಅಲ್ಲದೆ ಕಥೆಯ ಅಂಚಿಗೆ ಬಂದು ಕೂರುವ ಭಾವಗಳೂ ಎದೆಕಡಲಿನಿಂದ ನೆಗೆದು ಹೊರಬರಲು ಹವಣಿಸಿದರೂ ತುಟಿಗಳಿಗೆ ಅದೃಶ್ಯ ಹೊಲಿಗೆ ಹಾಕಿದಂತಾಗಿ ಮೌನದ ನಾದಕ್ಕೆ ಮನ ಜೋಡಿಸಿಕೊಂಡಿದ್ದೆ. ಭಾವನ ತಮ್ಮನೊಂದಿಗಿನ ಒಲವಿನ ಮಾತು, ಕದ್ದು ಕೊಟ್ಟ ಮುತ್ತು, ಸಿಹಿ ಮಾತನಾಡಿ ಬೇರೆ ಹೆಣ್ಣಿನ ಚಿತ್ರ ತೋರಿಸಿದ ಅತ್ತಿಗೆಯ ತಮ್ಮ, ಕಾಲೇಜಿಗೆ ಬಂದ ವಿದೇಶಿ ವಿದ್ಯಾರ್ಥಿ ಅವನೊಂದಿಗೆ ಬದಲಾಯಿಸಿಕೊಂಡ ಪುಸ್ತಕ, ಚಾಕಲೇಟು, ಬಸ್ ನಿಲ್ದಾಣದವರೆಗಿನ ಜೊತೆ ಹೆಜ್ಜೆಗಳು ಹೀಗೇ ಏನೇನೋ ಹಂಚಿಕೆಗಳು ಮಾತಿಗೆ ಕಂಪು ಬೆರೆಸುತ್ತಿದ್ದವು. ಮೊದಲ ವರ್ಷದ ಪಿ.ಯು.ಸಿ ಇರುವಾಗ ಮತ್ತೆ ಬಂದಿತು ವಾರ್ಷಿಕೋತ್ಸವ. ಸಂಭ್ರಮವೋ ಸಂಭ್ರಮ. ನಾನೀಗ ಹಿರಿಯ ವಿದ್ಯಾರ್ಥಿನಿಯರ ಪಟ್ಡಿಯಲ್ಲಿದ್ದೆ. “ಸ್ಕೂಲ್ ಡೇ” ಅಂದರೆ ನಾಟಕವಿದೆ. ನಾಟಕ ಇದ್ದ ಮೇಲೆ ನಾನೂ ಇರಲೇಬೇಕು. ಮನಸ್ಸು ತಕತಕ ಕುಣಿಯುತ್ತಿತ್ತು. “ಬೌಮಾಸುರ” ಎಂಬ ನಾಟಕ. ಬೌಮಾಸುರ ದ್ವಿತೀಯ ಪಿ.ಯು. ವಿದ್ಯಾರ್ಥಿನಿ. ಎತ್ತರಕ್ಕಿದ್ದಳು. ಅವಳ ಸ್ವರವೇ ತುಸು ಗಡಸು. ನನಗೆ ಪ್ರಥ್ವೀದೇವಿ ಪಾತ್ರ. ಸೌಮ್ಯ ಪಾತ್ರ, ಪುಟ್ಟ ದೇಹದ ನಾನು ಭೂತಾಯಿ. ಬೌಮಾಸುರನ ಮಾತೆ. ರಿಹರ್ಸಲ್ ಗಳು ಆರಂಭವಾದವು. ಮೇಘರಾಜನಿಗೆ ಪ್ರಥ್ವೀದೇವಿಯಲ್ಲಿ ಪ್ರೀತಿ ಅಂಕುರಿಸಿ ಜಲಲ ಝಲಲ ಜಲಧಾರೆ. ನೆಲ.ಮುಗಿಲಿನ ಸಂಗಮಕೆ ಜನಿಸಿದ ಅಸುರ ಭೌಮಾಸುರ. ಆಗೆಲ್ಲ ಕಾಲೇಜಿನ ಕಾರಿಡಾರ್ ನಲ್ಲಿ ನಾನು ನಡೆಯುತ್ತಿದ್ದರೆ ನನ್ನ ನಡೆಯ ಶೈಲಿಯೇ ಬದಲಾದಂತೆ ಮನಸ್ಸಿಗೆ ಅನಿಸುತ್ತಿತ್ತು. ನಾನು ಬೇ..ರೆಯೇ, ಇವರೆಲ್ಲರಿಗಿಂತ ಭಿನ್ನ, ನಾನು ಪ್ರಥ್ವೀದೇವಿ. ಕನಸಿನಲ್ಲೇ ನನ್ನ ಇರುವಿಕೆ. ಊಟ, ತಿಂಡಿ, ಓದು ಎಲ್ಲವೂ. ಒಂದು ಸುಂದರ ರಾಗ, ಪಾತ್ರಾನುರಾಗ ನನ್ನ ಜೀವವನ್ನು ತೊನೆದಾಡಿಸುತ್ತಿತ್ತು. ವಾರ್ಷಿಕೋತ್ಸವದ ದಿನ ನಮಗೆ ಸಂಜೆ ಆರುಗಂಟೆಗೆ ಬರುವಂತೆ ಸೂಚನೆ ನೀಡಲಾಗಿತ್ತು. ಹಗಲಲ್ಲೂ ಸಣ್ಣ ಹೆದರಿಕೆಯ ಜೊತೆ ಬೆಸೆದುಕೊಂಡ ದೊಡ್ಡ ಸಂತಸದಲ್ಲಿ ಆಡುತ್ತಿದ್ದೆ. ಮನೆಯಲ್ಲಿ ಯಾರಾದರೂ ಕುಡಿಯಲು ನೀರು ತರಲು ಹೇಳಿದರೂ ಹೋದವಳು ಅಲ್ಲಲ್ಲೇ ಸ್ತಬ್ದಳಾಗಿ ಮನಸ್ಸಿನಲ್ಲಿ ಪ್ರಥ್ವಿದೇವಿಯ ಮಾತುಗಳೇ ಕುಣಿದು, ಮುಖ, ಕಣ್ಣಿನಲ್ಲಿ ಅದರ ಪ್ರತಿಫಲನ. ಮನೆಯವರು ಹತ್ತಿರ ಬಂದು ಎಚ್ಚರಿಸಬೇಕು. ಈ ಸಂದರ್ಭದಲ್ಲಿಯೇ, ನನ್ನ ಉಡುಪಿಗಾಗಿ, ಅಜ್ಜಿ ಮಡಿಲು ಬಸಿದು ಕೊಟ್ಟದ್ದು ನೂರು ರುಪಾಯಿ. ಅದುವರೆಗೂ ನಾನು ಅಂಗಡಿಗೆ ಹೋಗಿ ಡ್ರೆಸ್ ತಗೊಂಡವಳಲ್ಲ. ಏನಿದ್ದರೂ ಮನೆಯಲ್ಲಿ ತಂದದ್ದು, ಇಲ್ಲವಾದರೆ ಬಾಬಣ್ಣನ ಅಂಗಡಿಯಲ್ಲಿ ಮಾವನವರ ಹಳೆಯ ಪ್ಯಾಂಟ್ ಕೊಟ್ಟು ಅದರಲ್ಲಿ ಸ್ಕರ್ಟ್ ಅವರ ಷರ್ಟ್ ನಲ್ಲಿ ಬ್ಲೌಸ್ ಹೊಲಿಸುವುದು ವಾಡಿಕೆ. ” ಅಮ್ಮಾ ಯಾರು ತಂದು ಕೊಡ್ತಾರೆ..”ಅಂತ ನಾನಂದರೆ,”ನೀನೇ ಪ್ರಭಾವತಿ ಒಟ್ಟಿಗೆ ಹೋಗಿ ತಾ”ಎಂದಳು. ನಮ್ಮ ಮನೆಯ ಹಿಂದೆ ಗೆಳತಿ ಪ್ರಭಾ ಮನೆ. ಓಡಿದೆ. ಅವಳು ಅವಳಮ್ಮನ ಹತ್ತಿರ ಒಪ್ಪಿಗೆ ಪಡೆದು ಇಬ್ಬರೂ ಸೇರಿ ರೆಡೆಮೇಡ್ ಬಟ್ಟೆ ಅಂಗಡಿಗೆ ಹೋದೆವು. ರಾಶಿ ಹಾಕಿದ ಡ್ರೆಸ್ಸಗಳ ನಡುವೆ ಆರಿಸುವುದು ಹೇಗೆ? ಆಗೆಲ್ಲ ಟ್ರಾಯಲ್ ರೂಮ್ ಗೆ ಹೋಗಿ ದಿರಿಸಿನ ಅಳತೆ ಸರಿಯಾಗಿದೆಯೇ ಎಂದು ಪರೀಕ್ಷೆ ಮಾಡಿ ಕೊಳ್ಳಲು ಸಾಧ್ಯ ಎಂಬುದು ನಮ್ಮ ಅರಿವಿನ ಸರಹದ್ದಿಗಿಂತಲೂ ಬಹಳ ದೂರದ ಮಾತು. ಒಟ್ಟಾರೆ ಗೊಂದಲ. ಕೊನೆಗೂ ಕಡುಕೆಂಪು ಬಣ್ಣದ ಚೂಡೀದಾರ ಆರಿಸಿ ಬಹಳ ಸಂಭ್ರಮದಿಂದ ಮನೆಗೆ ಬಂದೆವು. ಮನೆಗೆ ಬಂದು ಹಾಕಿದರೆ ನಾನು, ಪ್ರಭಾವತಿ ಇಬ್ಬರೂ ಅದರ ಬಸಿರಲ್ಲಿ ಆಶ್ರಯ ಪಡೆಯಬಹುದು. ಅಷ್ಟು ಅಗಲದ ಕುರ್ತಾ, ಕೆಳಗೆ ದೊಗಳೆ ಪ್ಯಾಂಟ್. ಬೆರ್ಚಪ್ಪನಿಗೆ ಅಂಗಿ ತೊಡಿಸಿದಂತೆ ಕಾಣುತ್ತಿದ್ದೆ. ಆದರೇನು ಮಾಡುವುದು ಸಂಜೆಯಾಗಿದೆ. ಒಳಲೋಕದಲ್ಲಿ ಪ್ರಥ್ವೀದೇವಿಯ ಗಲಾಟೆ ನಡೆಯುತ್ತಲೇ ಇದೆ. ಗೆಳತಿಯರಿಗೆಲ್ಲ ಬರಲು ಒತ್ತಾಯಿಸಿ ಆಗಿದೆ. “ಬಿಂದು” ನನ್ನ ಜೊತೆಗೆ ನನ್ನ ನಾಟಕದ ಕೆಲವುಸಾಮಾಗ್ರಿಗಳ ಚೀಲ ಹಿಡಿದು ತಯಾರಾದ. ಅವನಿಗೆ ನನಗಿಂತ ಹೆಚ್ಚಿನ ಉತ್ಸಾಹ, ತಳಮಳ. ಗಳಿಗೆ ಗಳಿಗೆಗೆ ನೆನಪಿಸುತ್ತಿದ್ದ. ಚೆಂದ ಮಾಡು ಮಾರಾಯ್ತೀ, ಚೆಂದ ಮಾಡು. ಎಲ್ಲರಿಗಿಂತ ನಿನ್ನ ಆಕ್ಟ್ ಚೆಂದ ಆಗಬೇಕು. ಅಜ್ಜಿಯ ಕಾಲಿಗೆ ವಂದಿಸಿ ನಾವು ಹೊರಟೆವು. ಮಂದ ಕತ್ತಲು ಇಳಿಯುತ್ತಿತ್ತು. ಹೊಸ ಚೂಡೀದಾರದ ಪರಿಮಳ ಹೊಸತನದ ನಶೆ ಬೀರುತ್ತಿತ್ತು. “ತಡವಾಯಿತು.. ಬೇಗ ಬಿಂದೂ”ಎಂದು ವೇಗದ ಹೆಜ್ಜೆ ಹಾಕುತ್ತಿದ್ದೆ. ಮುಖ್ಯರಸ್ತೆಗೆ ಇನ್ನೇನು ತಲುಪಿದೆವು ಅನ್ನುವಾಗ ” ಫಟ್” ಎಂದಿತು. ನಾನು ಥಟ್ಟನೆ ನಿಂತೆ. ಪಾದಗಳು ಒಂದಕ್ಕೊಂದು ಜೋಡಿಸಿದಂತೆ ಇಟ್ಟಿದ್ದೆ. ದೀನಳಾಗಿ ಸ್ನೇಹಿತನ ಮುಖ ನೋಡಿದೆ. ಅವನಿಗೇನೂ ಅರ್ಥವಾಗ ” ಎಂತಾಯ್ತು, ಹೋಗುವ ಮಾರಾಯ್ತಿ” ಎನ್ನುತ್ತಾನೆ. ಎಲ್ಲಿಗೆ ಹೋಗುವುದು. ಹೆಜ್ಜೆ ಮುಂದಿಡುವುದು ಸಾಧ್ಯವೇ ಇಲ್ಲ. ಚೂಡಿದಾರದ ಪ್ಯಾಂಟಿನ ಲಾಡಿ ಒಳಗೇ ತುಂಡಾಗಿ ಬಿಟ್ಟಿದೆ. ಹಾಗೇ ನಿಲ್ಲುವ ಹಾಗಿಲ್ಲ. ಮುಂದೆ ಹೋಗುವ ಹಾಗೂ ಇಲ್ಲ.ಪ್ಯಾಂಟ್ ಕೆಳಗೆ ಬೀಳುವ ಹೆದರಿಕೆ. ವಿಪರೀತ ಭಯದಲ್ಲಿ ಕಣ್ಣು ತುಂಬಿತ್ತು. ” ಬಿಂದೂ..” ಏನು ಹೇಳುವುದು..ಸರಿಯಾಗಿ ಹೇಳಲೂ ಆಗದೇ “ಪ್ಯಾಂಟ್ ತುಂಡಾಯಿತು” “ಬೇಗ ಬೇಗ ನಡೀ ಕಾಲೇಜಿಗೆ ಎಂದ. ನನ್ನ ಸಂಕಟ ಹೆಚ್ಚುತ್ತಿತ್ತು. ಹೊಟ್ಟೆ ನೋವಿನಿಂದ ನರಳುವವರ ಹಾಗೆ ಪ್ಯಾಂಟ್ ಬೀಳದಂತೆ ಹೊಟ್ಟೆ ಹಿಡಿದುಕೊಂಡೆ. ಆದರೆ ನಡೆಯುವುದು ಕಷ್ಟ. ಊರೆಲ್ಲ ನನ್ನನ್ನೇ ನೋಡುವುದು ಎಂಬ ಭಾವದಿಂದ ನಾಚಿಕೆ,ಅವಮಾನದ ಸಂಕಟದಿಂದ ಬಿಕ್ಕಳಿಸತೊಡಗಿದೆ. “ಎಂತಾಯ್ತ..ಎಂತಾಯ್ತಾ” ಕೇಳುತ್ತಿದ್ “ನಡೆಯಲು ಆಗುವುದಿಲ್ಲ” ಎಂದೆ. ಸುತ್ತ ನೋಡಿದ. ಅಲ್ಲಿ ಮೂಲೆಯಲ್ಲಿ ಪಾಳು ಬಿದ್ದ ಚಿಕ್ಕ ಅಂಗಡಿಯಂತಹ ಮನೆಯಿತ್ತು. ಆದರೆ ಅದು ಮುಖ್ಯರಸ್ತೆಯ ಬಳಿಯಲ್ಲೇ.” ಬಾರಾ..ಅಲ್ಲಿ ನಾನು ಅಡ್ಡ ನಿಲ್ತೇನೆ. ನೀನು ಏನಾದರೂ ಸರಿ ಮಾಡು”. ಎಂದ. ಅರೆ ಜಾರಿದ ಡ್ರೆಸ್ ಕುರ್ತಾದ ಮೇಲಿನಿಂದ ಮುಷ್ಠಿಯಲ್ಲಿ ಹಿಡಿದಂತೆ ಹಿಡಿದು
ಅಂಕಣ ಬರಹ ಒಂದು ಹಾವಿನ ಕಥೆ ಮತ್ತು ನಾವು ಕೆಲವು ಒತ್ತಡಗಳು ಹುಟ್ಟಿಕೊಳ್ಳುತ್ತವೆ. ಎಂಥದೋ ಅನಿವಾರ್ಯತೆ ಕಾಡುತ್ತದೆ. ಮಾಡಬೇಕೆಂದುಕೊಂಡದ್ದನ್ನು ಮಾಡಲಾಗುತ್ತಿಲ್ಲ ಎನ್ನುವ ಚಡಪಡಿಕೆ, ನೋವು, ಹತಾಶೆ… ಬೇಕಾದವರನ್ನು ಮನಸಿಗೆ ಹತ್ತಿರವಾದವರನ್ನು ನಾವಾಗೇ ಹಚ್ಚಿಕೊಂಡವರನ್ನು ಎದೆಗೆ ತಬ್ಬುವ ಮನಸಿದ್ದಾಗಲೂ ದೂರ ನಿಲ್ಲಬೇಕಾದ ಸಂಯಮದ ಪ೫ರೀಕ್ಷೆಗೆ ತಯಾರಾಗಬೇಕಾಗಿ ಬರುವ ಪರಿಸ್ಥಿತಿಯನ್ನು ಧ್ವನಿ ತೆಗೆಯದೇ ಬಯ್ದುಕೊಳ್ಳುತ್ತಾ ಒಳಗೊಳಗೇ ಹಟಕ್ಕೆ ಬೀಳುತ್ತೇವೆ. ಅದು ನಮ್ಮ ಮೇಲಿನ ನಮ್ಮ ಹಟ. ಚೌಕಟ್ಟನ್ನು ದಾಟಿದರೆ ನಮಗೆ ನಾವು ದಕ್ಕಿಬಿಡುತ್ತೇವೆಂದು ನಮಗೆ ಗೊತ್ತು. ಆದರೆ ನಮಗೆ ಅದಕ್ಕೆ ಬೇಕಾಗುವ ಒಂದು ಸಣ್ಣ ಸಾಹಸ ಮಾಡುವುದು ಬೇಕಿಲ್ಲ. ಯಾಕಿದ್ದಾತು ಸುಖಾಸುಮ್ಮನೆ ಉಸಾಬರಿ! ಇಂಥ ಮನೋಭಾವವೇ ನಮ್ಮನ್ನು ಆಳಿಬಿಡುತ್ತದೆ. ಅದರಲ್ಲೂ ನಮ್ಮನ್ನು ಹೆದರಿಸಿ ನಿಲ್ಲುವವರು ನಮ್ಮವರೇ ಆದಾಗ ಅವರನ್ನು ಎದುರಿಸುವುದು ಮತ್ತೊಂದೇ ಬಗೆಯ ಸಂಕಟ, ಸಂಕಷ್ಟ. ನನಗೊಂದು ಕತೆ ನೆನಪಾಗುತ್ತದೆ. ಒಮ್ಮೆ ಒಬ್ಬ ಸಾಧು ದಾರಿಯಲ್ಲಿ ಹೋಗುತ್ತಿರುತ್ತಾನೆ. ಅವನನ್ನು ಕಂಡ ಸಮೀಪದ ಊರಿನ ವ್ಯಕ್ತಿಯೊಬ್ಬ ಒಂದು ಕತೆ ಹೇಳಲು ಶುರು ಮಾಡುತ್ತಾನೆ. ಇಲ್ಲೊಂದು ಹಾವಿದೆ, ಆ ಹಾವು ಈ ದಾರಿಯಲ್ಲಿ ಓಡಾಡೋ ಜನರನ್ನ ಕಚ್ಚಿ ಸಾಯಿಸ್ತಿದೆ. ಸಾಧುಗಳೇ ನೀವೇ ಏನಾದ್ರು ಮಾಡಿ ಆ ಹಾವಿಗೆ ಬುದ್ಧಿ ಕಲಿಸ್ಬೇಕು ಅಂತ ಕೇಳ್ಕೊತಾನೆ ಕೊನೆಗೆ. ನಂತ್ರ ಅಲ್ಲಿಂದ ಹೊರಟು ಹೋಗ್ತಾನೆ. ಆಮೇಲೆ ಆ ಸಾಧು ಹಾವಿನ ಬಳಿ ಹೋಗ್ತಾನೆ. ಹಾವು ಸಾಧುವನ್ನೂ ನೋಡಿ ಬುಸುಗುಡುತ್ತದೆ. ಆಗ ಸಾಧು ಅಲ್ಲಾ ನಿನಗೇನಾದ್ರು ಬುದ್ಧಿಗಿದ್ದಿ ಇದೆಯಾ ಇಲ್ವಾ… ಯಾಕ್ ನೀನು ಜನರಿಗೆ ತೊಂದ್ರೆ ಕೊಡ್ತಿದೀಯಾ? ಅದೆಲ್ಲ ತಪ್ಪು ತಾನೇ… ಪಾಪ ಕಣೋ ಬಿಟ್ಬಿಡೋ ಅದನ್ನೆಲ್ಲಾ ಅಂತ ಉಪದೇಶ ಮಾಡ್ತಾನೆ. ಇದರಿಂದ ಮನಃಪರಿವರ್ತನೆಗೆ ಒಳಗಾದ ಹಾವು ತಾನೂ ಸಾಧುವಾಗಿಬಿಡ್ತದೆ. ಸಾಧು ತನ್ನ ದಾರಿ ಹಿಡಿದು ಹೊರಟು ಹೋಗ್ತಾನೆ. ಅಂದಿನಿಂದ ಶುರು ಜನರ ಉಪಟಳ! ತನ್ನ ಪಾಡಿಗೆ ತಾನಿರೋ ಪಾಪದ ಸಾಧು ಹಾವನ್ನ ಮನ ಬಂದ ಹಾಗೆ ಹೊಡೀತಾರೆ, ಬಡೀತಾರೆ, ಕಲ್ಲು ಎಸೀತಾರೆ, ಕೋಲಿನಿಂದ ತಿವೀತಾರೆ… ಒಟ್ನಲ್ಲಿ ಹಣ್ಗಾಯಿ ನೀರ್ಗಾಯಿ ಮಾಡ್ತಾರೆ. ಆದ್ರೆ ಸಾಧುವಾಗಿಬಿಟ್ಟಿದ್ದ ಹಾವು ಮಾತ್ರ ಸುಮ್ಮನೇ ಒದೆ ತಿನ್ನುತ್ತಾ ಸಾಯುವ ಹಾಗಾಗಿಬಿಡ್ತದೆ. ಅದೇ ಮಾರ್ಗವಾಗಿ ಮತ್ತೆ ಅದೇ ಸಾಧು ಬರ್ತಾನೆ. ಹಾವಿನ ಸ್ಥಿತಿ ಕಂಡು ಅವನಿಗೆ ಮರುಕ ಹುಟ್ತದೆ. ಅದನ್ನ ಕರುಣೆಯಿಂದ ಎತ್ತಿಕೊಂಡು ಔಷಧೋಪಚಾರ ಮಾಡ್ತಾನೆ. ಆಮೇಲೆ ಕೇಳ್ತಾನೆ ಯಾಕೋ ಈ ಸ್ಥಿತಿ ನಿಂಗೆ ಅಂತ. ಆಗ ಹಾವು ಹೇಳ್ತದೆ ನೀವೇ ತಾನೆ ಹೇಳಿದ್ದು ನಾನು ಯಾರನ್ನೂ ಕಚ್ಬಾರ್ದು ಅಂತ, ಅದಕ್ಕೆ ನಾನು ಕಚ್ಚೋದನ್ನೇ ಬಿಟ್ಬಿಟ್ಟೆ. ಆದರ ಪ್ರತಿಫಲವೇ ಇದು. ನಾನು ಸುಮ್ನಿರೋದನ್ನ ಕಂಡು ಜನ ಹತ್ತಿರ ಬಂದ್ರು. ನನ್ನನ್ನ ವಿನಾಕಾರಣ ಹೊಡೆದುವಹಿಂಸೆ ಮಾಡಿದ್ರು. ಆದ್ರೂ ನಾನವರಿಗೆ ಏನೂ ಮಾಡ್ಲಿಲ್ಲ ಅನ್ನುತ್ತೆ. ಇದನ್ನು ಕೇಳಿದ ಸಾಧುವಿಗೆ ಅಯ್ಯೋ ಪಾಪ ಅನ್ಸತ್ತೆ. ಮತ್ತೆ “ಅಲ್ಲೋ ಹಾವೇ ನಾನು ನಿನಗೆ ಕಚ್ಬೇಡ, ಜನ್ರನ್ನ ಕೊಲ್ಬೇಡ ಅಂತ ಹೇಳಿದ್ನೇ ಹೊರತು, ಬುಸುಗುಟ್ಟಿ ಹೆದರಿಸ್ಬೇಡ ಅಂತ ಹೇಳಿರಲಿಲ್ಲ ತಾನೇ. ನೀನು ನಿನ್ನನ್ನ ರಕ್ಷಿಸಿಕೊಳ್ಳಲಿಕ್ಕೆ ಬುಸುಗುಟ್ಟಿ ಹೆದರಿಸಿದ್ದರೆ ಸಾಕಿತ್ತು ಅಲ್ವ… ಯಾರೂ ಹತ್ರ ಬರ್ತಿರಲಿಲ್ಲ ತಾನೇ…” ಎನ್ನುತ್ತಾರೆ. ಆಗ ಹಾವಿಗೆ ತನ್ನ ತಪ್ಪಿನ ಅರಿವಾಗ್ತದೆ. ತಾನು ಬುಸುಗುಟ್ಟಿ ಜನರಿಂದ ಪಾರಾಗಬೇಕಿತ್ತು ಮತ್ತು ಯಾರನ್ನೂ ಕಚ್ಚದೆ ಒಳ್ಳೆಯವನೂ ಆಗಬೇಕಿತ್ತು ಅಂತ. ಈ ಕತೆ ನನಗೆ ಬಹಳ ಸಾರಿ ನೆನಪಾಗ್ತಿರ್ತದೆ. ಮತ್ತೆ ಬಹಳಷ್ಟು ಪರಿಸ್ಥಿತಿಯಲ್ಲಿ ನನಗೆ ಹೇಗೆ ನಡೆದುಕೊಳ್ಳಬೇಕು ಎನ್ನುವುದಕ್ಕೆ ದಾರಿ ತೋರಿಸುತ್ತದೆ. ನಾವು ಯಾರನ್ನೇ ಆಗಲಿ, ಯಾವ ಪರಿಸ್ಥಿತಿಯಲ್ಲೇ ಆಗಲಿ ಎದುರಿಸಲು ಅಂಜಿ ಅವರು ನಮ್ಮ ವಿಷಯದಲ್ಲಿ ಅಡ್ವಾಂಟೇಜ್ ತೆಗೆದುಕೊಳ್ಳಲು ಯಾಕಾದ್ರು ಬಿಡಬೇಕು… ನಂತರ ಅವರು ಶೋಶಿಸುವಾಗ ಸುಮ್ಮನೇ ಯಾಕೆ ನಲುಗಬೇಕು… ಅದಕ್ಕೆ ಬದಲಾಗಿ ನಮ್ಮ ಅಭಿಮಾನ ಅಸ್ಮಿತೆಗೆ ಪೆಟ್ಟಾಗದಂತೆ ಒಂದು ನಿರುಪದ್ರವಿ ಗಟ್ಟಿ ದನಿಯೊಂದನ್ನು ಹೊರಹಾಕುವುದರಿಂದ ಎದುರಿನವರಿಗೆ ಕನಿಷ್ಟ ನಾವು ನಮ್ಮ ಆತ್ಮಾಭಿಮಾನಕ್ಕೆ ಪೆಟ್ಟು ಬೀಳುವಂತಾದರೆ ಸುಮ್ಮನಿರಲಾರೆವು ಎನ್ನುವ ಮೆಸೇಜನ್ನು ಅವರಿಗೆ ತಲುಪಿಸುವ ಕೆಲಸವನ್ನಾದರೂ ಮಾಡಲೇ ಬೇಕು. ಆದರೆ ಅದು ಅಷ್ಟು ಸುಲಭವಲ್ಲ. ಎದುರಿಗಿರುವವರು ಬೇರೆಯವರಾದರೆ ಕತ್ತಿ ಹಿಡಿಯುವುದು ಸುಲಭ. ಆದರೆ ನಿಂತಿರುವವರು ನಮ್ಮವರೇ ಆದಾಗ?! ಇದು ಕಷ್ಟಾತಿಕಷ್ಟ. ಆದರೆ ಖಂಡಿತಾ ಸಾಧ್ಯ. ಅಸಾಧ್ಯವಂತೂ ಅಲ್ಲ. ನಿರಾಶರಾಗದೆ ಪ್ರಯತ್ನಿಸಿದರೆ ನಮ್ಮನ್ನು ನಾವು ದೃಢಗೊಳಿಸಿಕೊಳ್ಳುವುದೂ ಸಾಧ್ಯವಾಗ್ತದೆ. ಆದರೆ ಸುಮ್ಮನೆ ಇರುವುದನ್ನು ಅದೆಷ್ಟು ವ್ಯವಸ್ಥಿತವಾಗಿ ಹೇಳಿಕೊಟ್ಟುಬಿಡುತ್ತೇವೆ ನಾವು! ನನ್ನ ಗೆಳತಿಯೊಬ್ಬರು ಇದ್ದಾರೆ. ಯಾರು ಏನೇ ಅನ್ನಲಿ ತಿರುಗಿ ಮಾತನಾಡುವುದು ಅವರಿಗೆ ಬಹಳಾ ಕಷ್ಟ. ಅವರೇ ಹೇಳುವ ಹಾಗೆ, ನಾಲ್ಕು ಜನ ಗಂಡುಮಕ್ಕಳಿದ್ದ ದೊಡ್ಡ ಮನೆಗೆ ಸೊಸೆಯಾಗಿ ಬಂದ ಅವರು, ಎಲ್ಲಿ ಒಂದು ಮಾತಾಡಿದರೆ ಬೇರೆಯವರಿಗೆ ನೋವಾಗುತ್ತದೋ ಎಂದು ಯೋಚಿಸುತ್ತಲೇ ಹಲ್ಲುಕಚ್ಚಿ ಸಹಿಸುತ್ತಾ ಬದುಕಿದ್ದು ಎನ್ನುತ್ತಾರೆ. ಎಷ್ಟೆಲ್ಲಾ ಮಾಡಿ ಬಡಿಸಿ ಉಣಿಸಿ ಕೊನೆಗೆ ಒಂದು ಕೆಟ್ಟ ಮಾತಾಡಿಬಿಟ್ಟರೆ ಮಾಡಿದ ಕೆಲಸವೆಲ್ಲಾ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗುತ್ತದಲ್ಲ ಎಂದು ಸಹಿಸುವುದನ್ನು ಕಲಿತೆ ಎನ್ನುತ್ತಾರೆ. ಇಂಥ ಪಾಠಗಳು ನಮಗೆ ತವರಿನಿಂದಲೇ ಸಿಗುತ್ತಿತ್ತು ಎಂತಲೂ ಹೇಳುವುದನ್ನು ಮರೆಯುವುದಿಲ್ಲ. ಇಂತಹ ಅದೆಷ್ಟು ಸಂಪ್ರದಾಯದ ಹೆಸರಿನ ಪಾಠಗಳು! ಈ ಪಾಠಗಳೆಲ್ಲ ಹೆಣ್ಮಕ್ಕಳಿಗೆ ಮಾತ್ರ ಏಕೆ… ಆ ನನ್ನ ಗೆಳತಿ ಇಂತಹ ಪಾಠಗಳಿಂದಾಗಿ ಅದೆಷ್ಟು ಮೃದು ಎಂದರೆ ಯಾರಾದರೂ ಗಟ್ಟಿಯಾಗಿ ಮಾತನಾಡಿದರೂ ಸಾಕು ಇವರಿಗೆ ಗಂಟಲು ಕಟ್ಟಿ ಅಳುವೇ ಬಂದುಬಿಡುತ್ತದೆ. ಇವರು ಒಂದು ಉದಾಹರಣೆ ಮಾತ್ರ. ಆದರೆ ಇಂತಹ ಅದೆಷ್ಟೋ ಜನ ಹೆಣ್ಮಕ್ಕಳು ನಮಗೆ ಸಿಗುತ್ತಾರೆ. ಮೀಸಲಾತಿ ಇದ್ದರೂ ಹೊರಬರದ, ಸ್ಪರ್ಧಿಸದ, ಸ್ಪರ್ಧಿಸಿ ಗೆದ್ದರೂ ಗಂಡನೇ ಅಧಿಕಾರ ನಡೆಸುವ ಅದೆಷ್ಟೋ ವಾಸ್ತವಗಳು ನಮ್ಮ ಕಣ್ಮುಂದೆಯೇ ಇರುತ್ತವೆ. ಇದೆಲ್ಲ ನೋಡುವಾಗ ನಾವು ನಮ್ಮೊಳಗೇ ಗಟ್ಟಿಯಾಗಿ ಹೊರಬರಬೇಕಾದ ಅಗತ್ಯ ಮತ್ತು ಅನಿವಾರ್ಯತೆಯನ್ನು ಅರಿಯಬೇಕಿದೆ ಅನಿಸುತ್ತದೆ. ಇದಕ್ಕೆ ಯಾವ ಭೇದವಿಲ್ಲ. ಹೆಣ್ಣುಮಕ್ಕಳಿಗೆ ಅದರ ಅಗತ್ಯ ಕೊಂಚ ಹೆಚ್ಚಿರಬಹುದು ಅಷ್ಟೇ. ಹೆಂಗರುಳು, ಹೆಣ್ಣಪ್ಪಿ ಅಂತೆಲ್ಲ ಮೂದಲಿಕೆಗೆ ಒಳಗಾಗುವ ಅದೆಷ್ಟೋ ಗಂಡ್ಮಕ್ಕಳ ಪಾಡೂ ಇದಕ್ಕೆ ಭಿನ್ನವಾಗಿಲ್ಲ ಎನ್ನುವುದೂ ನಿಜವೇ. ಇದಕ್ಕೆಲ್ಲ ಮದ್ದೆಂದರೆ ಮಿತಿಗಳನ್ನು ಮೀರುವುದು. ಯಾವುದು ಗೊಡ್ಡು ಎನಿಸುತ್ತದೋ ಅದನ್ನು ದಿಟ್ಟತನದಿಂದ ನಿರಾಕರಿಸುವುದು. ಕಟ್ಟಳೆಗಳು ಒಳಗಿನದ್ದಾದರೂ ಸರಿ ಹೊರಗಿನದ್ದಾದರೂ ಸರಿ, ಸರಿಸಿ ಹೊರ ಬರುವುದು… ಈ ಮದ್ದು ನಮ್ಮ ಮತಿಗೆ ದಕ್ಕಲಿ… **************************************** –ಆಶಾ ಜಗದೀಶ್ ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.
ಚಲನೆಯ ವೇಗ ಜಾಸ್ತಿ ಇರುವುದರಿಂದ ಅಂತರವು ಕೂಡ ಜಾಸ್ತಿಯಾಗ್ತಾ ಹೋಗ್ತಾ ಇದೆ ಆಧುನಿಕತೆ ಸ್ಪರ್ಶ ಹೆಚ್ಚಾಗಿ ನಮ್ಮ ಮೂಲ ಸಂಸ್ಕೃತಿಯನ್ನು ನಾವು ಕಳೆದುಕೊಳ್ಳುತ್ತಿದ್ದೇವೆ ಎಂದು ಅನಿಸುತ್ತದೆ.
ವಚನಚಳುವಳಿಗೆ ಕನ್ನಡ ಸಾಹಿತ್ಯದಲ್ಲಿ ಬಹುದೊಡ್ಡ ಸ್ಥಾನವಿದೆ. ವಚನಗಳಲ್ಲಿ ಆಡಿದ, ಸಾರಿದ, ಸಾಧಿಸಿ ತೋರಿಸಿದ ಮೌಲ್ಯಗಳು ಕೇವಲ ಘೋಷಣೆಗಳಾಗದೆ ನಡೆ ನುಡಿಯಲ್ಲಿ ಒಂದಾಗಿ ಏಕವನ್ನು ಸ್ಥಾಪಿಸಿದ ಕಾರಣದಿಂದ ವಚನಕಾರರು ಈ ನೆಲದಲ್ಲಿ ಮಾನ್ಯ ಮತ್ತು ಮುಖ್ಯರಾಗುತ್ತಾರೆ.
ಅಂಕಣ ಬರಹ ವಸಂತ ಬಂದ! ರಂಗಕ್ಕೆ ರಂಗು ತಂದ!! ವೈಶಾಲಿ ನಗರದ ಬೀದಿ. ವೈಭವದ ಅರಮನೆ. ಅದು ರಾಜನ ಅರಮನೆಯಲ್ಲ. ನಗರದ ಮುಖ್ಯ ನೃತ್ಯಗಾರ್ತಿ,ರಾಜನರ್ತಕಿ ಆಮ್ರಪಾಲಿಯ ಮನೆ. ಆಮ್ರಪಾಲಿ ಚಿಗುರು ಮಾವಿನ ತಳಿರಂತಹವಳು. ಅವಳ ಸೌಂದರ್ಯದ ಕಥನ ಕೇಳಿ ನೆರೆ ಹೊರೆಯ ರಾಜರೂ, ರಾಜಕುಮಾರರೂ ಬಂದಿದ್ದಾರೆ. ಅವಳ ಪ್ರೇಮ ಭಿಕ್ಷೆಗಾಗಿ ಹೊರಬಾಗಿಲಲ್ಲಿ ಸರದಿಯಲ್ಲಿ ಕಾಯುತ್ತಿದ್ದಾರೆ. ಆಕೆ ಒಳಗಡೆ ಇದ್ದಾಳೆ, ಪ್ರಣಯದ ತುರೀಯದ ಅಮಲಲ್ಲಿ. ಆದರೂ ಅದೇನೋ ಬೇಸರ. ಅವಳನ್ನು ಆವರಿಸಿದೆ. ಎಲ್ಲವೂ ಇದ್ದರೂ ಏನೋ ಕೊರತೆ. ತಳಮಳ. ಬಿಂದುಸಾರನಂತಹ ಮಗಧ ಚಕ್ರವರ್ತಿ ಮಾರುವೇಷದಲ್ಲಿ ಬಂದು ಅವಳ ಪಾದದ ಬಳಿ ಪ್ರೇಮ ಭಿಕ್ಷೆ ಬೇಡುತ್ತಾನೆ. ಆಮ್ರಪಾಲಿ ಪ್ರಣಯ ವೈಭವದಲ್ಲಿರುವಾಗಲೇ ಸಖಿ ಅರಹುತ್ತಾಳೆ. ನಗರಕ್ಕೆ ಗೌತಮ ಬಂದಿದ್ದಾರೆ. ಆಮ್ರಪಾಲಿಯ ಜೀವ, ಜೀವನ ಪಲ್ಲಟಗೊಳ್ಳತ್ತದೆ. ಗೌತಮ ಆಮ್ರಪಾಲಿಯ ಮನೆಗೆ ಬರುತ್ತಾನೆ. ಎಂತಹ ಅದ್ಬುತ ಕಥೆ. ಆಮ್ರಪಾಲಿ..ಗೌತಮ ಬುದ್ದ. ನಾನೂ ಕಥೆಯ ಮೋಹಕ್ಕೊಳಗಾಗಿದ್ದೆ. ಆಮ್ರಪಾಲಿಯ ಕಾಲಕ್ಕೆ ಸಂದುಹೋಗಿದ್ದೆ. ನನಗೆ ಅದರಲ್ಲಿ ರಾಜಕುಮಾರನ ಪಾತ್ರ. ಆಮ್ರಪಾಲಿಯನ್ನು ಕಾಣ ಬೇಕೆಂಬ ತುಡಿತ. ಆಕೆಯ ಎದುರು ಮಣಕಾಲೂರಿ ಬೇಡಿಕೆ. ಅಷ್ಟೆ..ಅಷ್ಟೇ ನನ್ನ ಪಾತ್ರ. ಆಮ್ರಪಾಲಿ, ” ನೀನಿನ್ನೂ ಚಿಕ್ಕ ಬಾಲಕ. ನಿನ್ನ ರಾಜ್ಯಕ್ಕೆ ಹಿಂತಿರುಗು” ಎನ್ನುತ್ತಾಳೆ. ನನಗೆ ನಿಜಕ್ಕೂ ಹಿಂತಿರುಗಲಾಗುತ್ತಿರಲಿಲ್ಲ. ಇನ್ನು ಎರಡು ಮಾತುಗಳಿದ್ದರೆ!. ಆಮ್ರಪಾಲಿಯ ಎದುರು ಇನ್ನೇನಾದರೂ ಹೇಳುವಂತಿದ್ದರೆ..ಆಸೆ. ಅದು ತುಡಿತ. ಮೋಹದಸೆಳೆತ..ಏನಂದರೂ ಒಪ್ಪುವ ಭಾವ ತೀವ್ರತೆ. ನಾಟಕದ ತರಬೇತಿ ನಡೆಯುವಾಗಲೂ ನಾನು ಆಮೃಪಾಲಿಯ ಹಿಂದೆ,ಬಿಟ್ಟ ಕಣ್ಣು ಬಿಟ್ಡಂತೆ ನೋಡುತ್ತಿದ್ದೆ. ನಾಟಕದ ದಿನ ಎಂತಹ ರೋಮಾಂಚನಗಳು. ನನಗೆ ರಾಜಕುಮಾರನ ದಿರಿಸುಗಳು. ಸಿಕ್ಕಿಸಿದ್ದ ಖಡ್ಗ,ಕಿರೀಟ..ಸಂತಸದ ಹೊಳೆಯೊಂದು ಒಳಗಡೆ ಕುಪ್ಪಳಿಸುತ್ತ ಹರಿಯುತ್ತಿತ್ತು. ಆಮ್ರಪಾಲಿ ಎಂತಹ ಸೌಂದರ್ಯ. ಅದೆಷ್ಟು ಆಭರಣಗಳು, ಚೆಂದದ ಸೀರೆ. ನಾಟಕ ಮುಗಿದರೂ ಅದೇ ಗುಂಗು. ಆಮ್ರಪಾಲಿ..ಆಮ್ರಪಾಲಿ ನಾನು ರಾಜಕುಮಾರನ ಪಾತ್ರವೇ ಆಗಿದ್ದೆ. ತಳ್ಳಿಸಿಕೊಂಡು ಹೊರದಬ್ಬಲ್ಪಟ್ಟ ರಾಜಕುಮಾರ. ಕನಸಿನ ಹೂ ನಸು ಬಿರಿದು ಕಂಪು ಸೂಸಲು ಆರಂಭಿಸಿತ್ತು. ಈ ನಾಟಕದ ಪಾತ್ರ ನನಗೆ ಸಿಕ್ಕಿದ್ದರ ಹಿಂದೆ ಬಣ್ಣ ಕಲಸುವ ಕುಂಚದಂತಹಾ ಮನಸ್ಸಿತ್ತು. ಏಳನೇ ತರಗತಿಯ ಶಾಲೆಯ ಅಂಗಳದಿಂದ ಹಿರಿಯಡಕ ಹೈಸ್ಕೂಲ್ ಮತ್ತು ಜೂನಿಯರ್ ಕಾಲೇಜಿನ ಎತ್ತರದ ಕಟ್ಟಡ ಸಮುಚ್ಛಯದೊಳಗೆ ಹೆಜ್ಜೆಯಿಟ್ಟ ಗುಬ್ಬಿ ಮರಿಯ ಪುಕ್ಕ ಬೆಳೆದಿತ್ತು. ಎಂಟನೆಯ ತರಗತಿಯಿಂದ ಪಿಯೂಸಿ ವರೆಗೆ. ವಾರ್ಷಿಕೋತ್ಸವಕ್ಕೆ ಒಂದು ನಾಟಕ. ಉಳಿದಂತೆ ನೃತ್ಯಗಳು. ನನಗೆ ಈ ನೃತ್ಯವೆಂಬುದು ಬಲು ಕಠಿಣ. ಸಂಜೆ ಮನೆಗೆ ಹೋದ ಬಳಿಕ ಮನೆಯ ಹತ್ತಿರದ ಗೆಳತಿಯರಿಗೆ,ತಂಗಿಗೆ ಮನೆಯ ಹಿಂದಿನ ಹಾಡಿಯ ಮರದ ಬುಡದಲ್ಲಿ ನನಗೆ ಕಂಠಪಾಠ ಆಗಿದ್ದ ಅದೆಷ್ಟೋ ಭಕ್ತಿಗೀತೆಗಳಿಗೆ ನೃತ್ಯಸಂಯೋಜನೆ ಮಾಡಿ ನಿರ್ದೇಶಕಿಯಾಗಿದ್ದೆ. ಅದು ಬಲು ಗುಟ್ಡಿನ ತಾಲೀಮು. ನಾನು ತಂಡದಲ್ಲಿ ಸೇರಿಕೊಂಡು ಕುಣಿಯುವುದು.. ಅಬ್ಬಬ್ಬಾ..ಎಂತ ಕಷ್ಟ. ಅದಕ್ಕೆ ಅದನ್ನು ಬಿಟ್ಟು ನನ್ನ ಪರಮ ಪ್ರೀತಿಯ ನಾಟಕದತ್ತ ಹೊಂಚು ಹಾಕಿದ್ದೆ. ಆದರೆ ಅದು ದೊಡ್ಡ ಹುಡುಗಿಯರಿಗೆ ಮೀಸಲಾಗಿತ್ತು. ಪಿಯುಸಿ ಓದುವ ಚೆಂದದ ಸವಿತಾ ಅನ್ನುವವರು ನಾಟಕದ ನಾಯಕಿಯಾಗಿ ಆಯ್ಕೆಯೂ ಆಗಿಯಾಗಿತ್ತು. ನಾಟಕದ ಉಸ್ತುವಾರಿ ತೆಗೆದುಕೊಂಡ ಉಪನ್ಯಾಸಕರ ಬಳಿ ಹೋಗೆ ದೀನಳಾಗಿ ನಿಲ್ಲುತ್ತಿದ್ದೆ. ಹೇಳಲು, ಕೇಳಲು ಸಂಕೋಚ. ಕೊನೆಗೂ ಅವರ ಕೃಪೆ ದೊರಕಿ ಪಿ.ಯು.ಸಿಯವರೇ ತುಂಬಿದ್ದ ನಾಟಕದಲ್ಲಿ ಎಂಟನೆಯ ತರಗತಿಯ ನಾನು ಸೇರ್ಪಡೆಯಾಗಿದ್ದೆ. ಹಾಗೆ ಹದಿಹರೆಯದ ರಾಜಕುಮಾರನ ಪಾತ್ರದ ಕಣ್ಣೊಳಗೆ ಅಮ್ರಪಾಲಿ ರಂಗು ಚೆಲ್ಲಿದ್ದಳು. ಎಂಟನೇ ಕ್ಲಾಸ್ ಎಂದರೆ!. ಅದು ಅಂದ, ಅದು ಚಂದ, ಅದು ಶೃಂಗಾರದತ್ತ ಕಣ್ಣು ತೆರೆಯುವ ಕದ. ಆಟವೆಂಬ ಆಟದಲ್ಲಿ ಮುಳುಗಿದ್ದ ನಮಗೆ ವಿಸ್ಮಯಗಳ ಲೋಕ ತೆರೆದಂತೆ. ಹೊಸತನ್ನು ಹುಡುಕುವ, ಮುಚ್ಚಿದ ಬಾಗಿಲಿನಾಚೆಯೇನಿದೆ ಎಂಬ ಅನ್ವೇಷಕ ಕುತೂಹಲದ, ಗೋಡೆಯಾಚೆಗಿನ ಶಬ್ಧ ಸ್ಪರ್ಶಗಳ, ಹಗಲು ಕನಸುಗಳ ತುಂಬಿದಂಗಳ. ವಿಶಾಲವಾದ ಮೈದಾನ. ಅದಕ್ಕೆ ಬೇಲಿ ಹಾಕಿದಂತೆ ಎರಡು ಬದಿ ಕಟ್ಟಡ ಒಂದು ಬದಿಯಲ್ಲಿ ಸಾಲು ಮರಗಳು. ಮಗದೊಂದು ಬದಿ ರಾಜದ್ವಾರ ತೆರೆದಂತೆ ಇರುವ ಕೆಂಪು ಮಣ್ಣಿನ ರಂಗಸ್ಥಳವದು. ಇಲ್ಲೇ ಎಷ್ಟು ಆಟಗಳು, ಪರೀಕ್ಷೆಗೆ ಕ್ಲಾಸಿಗೆ ಹೋಗುವ ಮುನ್ನ ಕೊನೆಯ ಜೀವದಾನದ ಗುಟುಕಿನಂತೆ ಸಿಗುವ ಓದು, ಸ್ನೇಹಿತರೊಂದಿಗೆ ಹಂಚಿ ತಿಂದ ಜಂಬೂ ನೇರಳೆ ಹಣ್ಣು, ಕಾಗೆ ಎಂಜಲು ಮಾಡಿ ಜೊತೆಗೆ ಮೆಲ್ಲಿದ ಮಾವಿನ ಮಿಡಿ, ಹುಣಿಸೆ ಹಣ್ಣು, ಪೇರಳೆ. ಆ ಎಲ್ಲ ನೆನಪುಗಳಿಗೆ ಈ ಮಣ್ಣಿನ ರುಚಿಯೂ ಇದೆ, ಜತೆಗೆ ವಾಸನೆಯೂ . ಮೈದಾನದ ಪಶ್ಚಿಮಕ್ಕೆ ಮುಖ್ಯರಸ್ತೆ. ರಸ್ತೆಯ ಆ ಬದಿ ಸರಕಾರಿ ಆಸ್ಪತ್ರೆ. ಖಾಸಗಿ ಡಾಕ್ಟರ್ ಗಳು ಇದ್ದರೂ ಆಗೆಲ್ಲ ಊರಿನವರ ಮೊದಲ ಆಯ್ಕೆ ಸರಕಾರಿ ಆಸ್ಪತ್ರೆಯಾಗಿತ್ತು. ಮೆಟ್ಟಲು ಹತ್ತಿ ಒಳಗೆ ಹೆಜ್ಜೆ ಇಟ್ಟರೆ ಕೋಳಿ ಗೂಡಿನೊಳಗೆ ಕೂತಂತೆ ಚೀಟಿ ಬರೆಯುವ, ಮದ್ದು ಕೊಡುವ, ಡಾಕ್ಟರ್ ಬಳಿ ಕಳುಹಿಸುವ ಕಂಪೌಂಡರ್ ನ ಕತ್ತೆತ್ತಿ ಚಾಚಿದ ಮುಖ ಕಾಣಿಸುತ್ತದೆ. ಪ್ರಾಥಮಿಕ ವಿಚಾರಣೆ ನಡೆಯುವುದು ಅವರ ಬಳಿ. ಅಲ್ಲಿಂದ ಎಡಕ್ಕೆ ತಿರುಗಿದರೆ ಬಾಗಿಲಿಗೆ ನೇತು ಬಿದ್ದ ನೀಲಿ ಪರದೆಯ ಸಂದಿನಲ್ಲಿ ಡಾಕ್ಟರ್ ರೂಮಿನ ಮೇಜು, ಸ್ಕೆತಸ್ಕೋಪ್ ನ ಉದ್ದದ ಬಾಕ್ಸ್ ಕಾಣಿಸುತ್ತದೆ. ದಾಟಿ ಹೋದರೆ ಪರೀಕ್ಷಾಕೊಠಡಿ, ನಂತರ ಲೇಡಿ ಡಾಕ್ಟರ್ ರೂಮ್. ಹಿಂದೆ ಬಂದು ಕಾಂಪೌಂಡರ್ ಗೂಡಿನಿಂದ ಮುಂದೆ ನೇರಕ್ಕೆ ಹೋದರೆ ಒಂದು, ಎರಡು, ಮೂ..ರು ಕೊಠಡಿ. ಅದು ಅಲ್ಲಿ ದಾಖಲಾದ ರೋಗಿಗಳಿಗೆ. ನಮ್ಮದು ಬಾಲ್ಯ, ಹರೆಯ ಎರಡೂ ಅಲ್ಲದ, ಎಲ್ಲೂ ಒಪ್ಪದ, ಅಲ್ಲೂ ಇಲ್ಲೂ ಸಲ್ಲುವ ಬದುಕಿನ ಸಂಕ್ರಮಣದ ಕಾಲ. ತರಗತಿಯ ನಡುವಿನ ಬಿಡುವಿನಲ್ಲಿ ನಾವು ಆಸ್ಪತ್ರೆಗೆ ಹೋಗುವುದು. ಅಲ್ಲಿ ಮಲಗಿರುವ ರೋಗಿಗಳನ್ನು ಇಣುಕುವುದು, ಲೊಚಗುಟ್ಟುವುದು, ಕೆಲವೊಮ್ಮೆ ಡಾಕ್ಟ್ರ್, ದಾದಿಯರ ಕಣ್ಣು ತಪ್ಪಿಸಿ ಒಳನುಗ್ಗಿ ಎಲ್ಲದರ ತಪಾಸಣೆ ನಡೆಸಿ ರೋಗಿಯ ರೋಗದ ವಿವರ ಪಡೆದು ಶಾಲೆಗೆ ಓಡುವುದು. ಆ ಕುಟುಂಬದ ಎಲ್ಲರೂ ನಮಗೆ ಪರಿಚಯ. ಆಗ ಗುಂಡುಗುಂಡಗಿದ್ದ ಒಬ್ಬ ಡಾಕ್ಟರ್ ವರ್ಗಾವಣೆ ಗೊಂಡು ಬಂದಿದ್ದರು. ನಮಗೆ ಅವರ ಪರಿಚಯ ಮಾಡಿಸಿಕೊಳ್ಳುವ, ಆತ್ಮೀಯತೆ ಬೆಳೆಸಿಕೊಳ್ಳುವ ಆತುರ. ಜೊತೆಗೆ ಡಾಕ್ಟರ್ ಜೋರಾ, ಪಾಪ ಇದ್ದರಾ..ಚರ್ಚೆ. ಅದಕ್ಕಾಗಿ ನನ್ನನ್ನೂ ಸೇರಿದಂತೆ ಕೆಲವು ಗೆಳತಿಯರಿಗೆ ಅನಾರೋಗ್ಯ ಕಾಡಿತು. ನನಗೆ ಕಿವಿನೋವು, ಒಬ್ಬ ಗೆಳತಿಗೆ ಹೊಟ್ಟೆನೋವು, ತಲೆನೋವು.ಹೀಗೆ ಹಲವು ಬಗೆಯ ಕಾಯಿಲೆಗಳಿಗೆ ತುತ್ತಾಗಿ ನಮ್ಮ ತಂಡವೇ ಆಸ್ಪತ್ರೆಗೆ ಧಾವಿಸಿತು ಅಲ್ಲಿ ಹೊಸ ಡಾಕ್ಟರ್ ಬಳಿ ಹೋಗುವುದು ಒಬ್ಬರನ್ನು ಡಾಕ್ಟರ್ ಪರೀಕ್ಷೆ ಮಾಡುತ್ತಿದ್ದರೆ ಉಳಿದ ಬಾಲೆಯರು ಹೊಸ ಬೆಳಕಿನಲ್ಲಿ ಡಾಕ್ಟರ್ ನ್ನು ನೋಡುವುದು, ಮುಸಿಮುಸಿ ನಗುವುದು. ಅಲ್ಲಿ ಹಲವು ದಾದಿಯರು ಇದ್ದರು. ಬಾನುಮತಿ,ಶಶಿರೇಖಾ,ಸುಮನ ಚಂದ್ರಿಕಾ..ಹೂತೋಟದ ಪರಿಮಳ ಸೂಸುವ ಸೇವಂತಿಗೆ,ಇರುವಂತಿಗೆ,ಗುಲಾಬಿ,ಸಂಪಿಗೆ ಹೂಗಳ ಹಾಗಿದ್ದ ದಾದಿಯರು. ಬಾನುಮತಿ ತುಂಬ ಸುಂದರವಾಗಿದ್ದರು. ಎತ್ತರ ಹಿಮ್ಮಡಿಯ ಚಪ್ಪಲ್, ಸ್ವಚ್ಛ ಬಿಳಿಬಣ್ಣ, ಸುತ್ತಿ ಮೇಲೆ ಕಟ್ಟಿದ ತಲೆಗೂದಲು,ಸುಂದರ ಮೈಕಟ್ಟು. ಬಿನ್ನಾಣದ ನಡುಗೆ. ಅವರು ಹತ್ತಿ, ಕತ್ತರಿ, ಮದ್ದು ಇಟ್ಟ ಟ್ರೇ ಹಿಡಿದು ಆಸ್ಪತ್ರೆಯ ಕಾರಿಡಾರಿನಲ್ಲಿ ನಡೆದಾಡುತ್ತಿದ್ದರೆ ನಾವು ಅಚ್ಚರಿ, ಕುತೂಹಲ, ತುಂಟತನದಿಂದ ಹಿಂಬಾಲಿಸುತ್ತಿದ್ದೆವು. ಅವರು ಡಾಕ್ಟರ್ ಬಳಿ ಕಣ್ಣು, ಬಾಯಿ, ಕೈ ಚಲನೆಗಳೊಂದಿಗೆ ಮಾತನಾಡುತ್ತಿದ್ದರೆ ನಮಗೋ ತಮಾಷೆ, ಕೀಟಲೆ, ಸಣ್ಣ ಹೊಟ್ಟೆಕಿಚ್ಚು!. ತರಗತಿಗೆ ಬಂದರೆ ನಮ್ಮ ಟೀಚರ್ ಗೆ ತಮಾಷೆ ಮಾಡುವ, ಸಲುಗೆ ಬೆಳೆಸುವ ಆಸಕ್ತಿ. ಹುಚ್ಚುಕೋಡಿ ಮನಸ್ಸು. ಆಗ ನಮ್ಮ ಮನೆಯ ಹಿಂದೆ ಬಾಡಿಗೆಗೆ ಒಬ್ಬ ಟೀಚರ್ ಬಂದಿದ್ದರು. ಅವಿವಾಹಿತೆ. ನಾನು ಬೆಳಗ್ಗೆ, ಮಧ್ಯಾಹ್ನ ಸಂಜೆ ಅವರ ಪುಟ್ಟ ಮನೆಯ ಸುತ್ತ ಪ್ರದಕ್ಷಿಣೆ ಹಾಕುವುದಿತ್ತು. ಹಲವಷ್ಟು ಸಲ ಶಾಲೆಗೂ ಅವರ ಜೊತೆಯೇ ಹೋಗುವುದು. ಅವರು ಆಗ ಕೆಲವು ರುಚಿಕರ ವಿಷಯ ತಿಳಿಸುತಿದ್ದರು. ಪಿಯುಸಿ ಹುಡುಗನೊಬ್ಬ ಅವರನ್ನು ಹಿಂಬಾಲಿಸಿದ್ದು, ಕಣ್ಣಲ್ಲಿ ಸನ್ನೆ ಮಾಡಿದ್ದು. ಮನೆಯವರೆಗೂ ಬಂದಿದ್ದು, ಇತ್ಯಾದಿ!. ನಾನು ಬೆಳಗ್ಗೆ ನನ್ನ ಡ್ರೆಸ್ ಸಿಕ್ಕಿಸಿ ಅವರ ರೂಮಿಗೆ ಓಡುವುದು. ಹೆಚ್ಚಾಗಿ ಅವರಿನ್ನೂ ತಯಾರಾಗಿರುವುದಿಲ್ಲ. ಅವರು ಸೀರೆ ಉಟ್ಟು ಸಿಂಗರಿಸುವ ಚೆಂದ ವನ್ನು ನನ್ನ ಬೆರಗುಗಣ್ಣು ಗಮನಿಸುತ್ತಿತ್ತು. ಅವರು ಹಚ್ಚುವ ಕ್ರೀಂ, ಹಣೆಗೆ ಇಡುವ ಬಣ್ಣಬಣ್ಣದ ತಿಲಕ, ಲಿಪ್ ಸ್ಟಿಕ್, ಸೀರೆಯ ಒನಪು, ನೆರಿಗೆ, ನೆರಿಗೆಯ ಬಿನ್ನಾಣ. ಅಲ್ಲಿ ಅಚ್ಚರಿಯನ್ನೂ ಮೀರಿದ ಕುತೂಹಲ. ನಮ್ಮದು ಆಗ ಬಾಲ್ಯಕ್ಕೆ ಟಾಟಾ ಹೇಳಿ ಮುಗಿದಿತ್ತು. ಹರೆಯವಿನ್ನೂ ಪೂರ್ತಿ ಒಳಗೆ ಬಂದಿರಲಿಲ್ಲ. ಎಂತದೋ ಹೊಸತನ. ಮುಸ್ಸಂಜೆ ಯ ಬೇಸರದಂತೆ, ಮರುಳುತನ ಸುರಿದಂತೆ ಕಾಡುವ, ಆವರಿಸಿದ ಕಾಲ. ಅಮ್ಮನ ಸೀರೆಯ ಸೆರಗನ್ನು ಡ್ರೆಸ್ಸಿನ ಮೇಲೆ ಹಾಕಿಕೊಂಡು ಕನ್ನಡಿಯ ಎದುರು ಬಿಂಬವನ್ನೇ ಮೋಹಿಸುವ ಮರುಳುತನ. ಶಾಲೆಯಲ್ಲಿ ಟೀಚರುಗಳಿಗೆ ಅಡ್ಡ ಹೆಸರುಗಳು. ಮಾತ್ರವಲ್ಲ ವಿದ್ಯಾರ್ಥಿಗಳಿಗೂ ನವನವೀನ ನಾಮಕರಣದ ಸಂಭ್ರಮ. ಕಾಲೇಜಿನ ಉಪವನದಲ್ಲಿ ಮೊಗ್ಗುಗಳು ಮೆಲ್ಲನೆ ದಳಗಳನು ಬಿಡಿಸಿ ಬಿರಿಯುವ ಪ್ರಕೃತಿಯ ಜಾದು. ಎಂತದೋ ಸಂಕೋಚ, ಲಜ್ಜೆ, ಅಪರಿಚಿತ ಭಾವಗಳು ತೆವಳಿಕೊಂಡು ಕಾಯವನ್ನು ಆವರಿಸಿ ಕಣ್ಣಿನೊಳಗಿಳಿದು ಹುತ್ತಗಟ್ಟುತ್ತಿದ್ದವು. ಚಂದಮಾಮ,ಬೊಂಬೆಮನೆಗಿಂತ ಸಾಯಿಸುತೆ,ತ್ರಿವೇಣಿ,ಸಿ.ಎನ್. ಮುಕ್ತಾ ,ಈಚನೂರು ಜಯಲಕ್ಷ್ಮಿ, ಎಂ.ಕೆ.ಇಂದಿರಾ ಮುಂತಾದವರ ಕಾದಂಬರಿಗಳ ಮೇಲೆ ಅಕ್ಕರೆ ಹೆಚ್ಚಿತ್ತು. ಅದನ್ನು ಓದಿ ನಾವೇ ಕಥಾನಾಯಕಿಯರಾಗಿ ಪುಳಕಗೊಳ್ಳುತ್ತಿದ್ದೆವು, ಕಣ್ಣೀರು ತುಂಬಿ ಕೊಳ್ಳುತ್ತಿದ್ದೆವು. ಹಾದಿಯಲ್ಲಿ ನಡೆಯುವಾಗಲೂ ಒಬ್ಬೊಬ್ಬರೇ ಮುಸಿಮುಸಿ ನಕ್ಕು ವಸಂತನಿಗೆ ತೆರೆಯುತ್ತಾ ಕೆನ್ನೆಗೆಂಪುಗಟ್ಟುತ್ತಿತ್ತು. ಚಿಗುರು ಮಾವಿನೆಲೆಗಳು ಗೊಂಚಲ ಗೊಂಚಲಾಗಿ ಮರಮರಗಳಲ್ಲಿ ನಮ್ಮ ನೋಡಿ ನಗುತ್ತಿದ್ದವು. ************************************************* ಪೂರ್ಣಿಮಾ ಸುರೇಶ್ ರಂಗಭೂಮಿ ಹಾಗೂ ಕಿರುತೆರೆ ಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿ ಭಾಷೆ ಯ ಸಿನೇಮಾಗಳಲ್ಲಿ ಅಭಿನಯ. ಕೊಂಕಣಿ ಸಿನೇಮಾ ” ಅಂತು” ವಿನ ಅಭಿನಯಕ್ಕೆ ರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿ ಪ್ರಸ್ತುತಿ 29 ಯಶಸ್ವೀ ಪ್ರದರ್ಶನ ಕಂಡಿದೆ.ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸದಸ್ಯೆ. ಪ್ರಸ್ತುತ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯೆ. “ಅಮೋಘ ಎಂಬ ಸಂಸ್ಥೆ ಹುಟ್ಟುಹಾಕಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ. ಆಕಾಶವಾಣಿ ಕಲಾವಿದೆ.ಇದುವರೆಗೆ 3 ಕವನ ಸಂಕಲನ ಸೇರಿದಂತೆ 6 ಪುಸ್ತಕಗಳು ಪ್ರಕಟಗೊಂಡಿವೆ. GSS ಕಾವ್ಯ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ,GS Max ಸಾಹಿತ್ಯ ಪ್ರಶಸ್ತಿ. ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸುವಿಕೆ





