ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ನೆನಪಿನ ದೋಣಿಯಲಿ

ಅಂಕಣ ಸಂಗಾತಿ ನೆನಪಿನದೋಣಿಯಲಿ ಜಟಕಾ ವಿಧಿಯೆಂಬ ಚಾಲಕನು ಓಡಿಸುತಿಹ  ಬಂಡಿಯಲಿ ಕುಳಿತು ನಡೆದಿದೆ ಬಾಳಪಯಣ.  ಅಲ್ಲಿಷ್ಟು ಇಲ್ಲಿಷ್ಟು ಒಂದಷ್ಟು ನೆನಪುಗಳ ಬುತ್ತಿ ಔತಣ .  ** ಕಾಲನ ನಾಗಾಲೋಟದ ಪಯಣವು  ಗಾಡಿಗೆ ಕಟ್ಟಿದ ಕುದುರೆಗಳು ನಾವು  ವಿಧಿಯ ಕಡಿವಾಣದ ಬಿಗಿ ಅಂಕೆ  ನಡೆದಿಹೆವು ಆಮಿಷಕೆ , ಚಾಟಿಯಾ ಭಯಕೆ “ಹಾಯ್ ಹಾಯ್ ಬಾಜೂ ಬಾಜೂ”  ಟಕ್ ಟಕ್ ಅನ್ನುವ ಕುದುರೆಗಳ ಖರಪುಟದ ಶಬ್ದದೊಂದಿಗೆ ಈ ಪದಗಳು ಕಿವಿಗೆ ಬಿತ್ತೆಂದರೆ ರಸ್ತೆಯಲ್ಲಿ ಆಡುತ್ತಿದ್ದ ಮಕ್ಕಳೆಲ್ಲ ಬದಿಗೆ ಸರಿದು ಗೌರವ ಸಲ್ಲಿಸುವಂತೆ ನಿಲ್ಲುತ್ತಿದ್ದೆವು.  ಬೀದಿಯ ಕೊನೆಯಲ್ಲಿ ತಿರುಗುವವರೆಗೂ ಅದನ್ನೇ ನೋಡುತ್ತಾ ಅಥವಾ ನಿಂತರೆ ಯಾರ ಮನೆಗೆ ಎಂದು ಮಾತನಾಡುತ್ತಾ. ಆ ಪಕ್ಕಕ್ಕೆ ನಿಲ್ಲುವ ಕ್ರಿಯೆಯೋ! ಎಲ್ಲರೂ ಹೇಳಿ ಹೇಳಿ ಅಚ್ಚೊತ್ತಿಬಿಟ್ಟಿತ್ತು.  ಓಡುವ ಕುದುರೆಯಡಿ ಮಕ್ಕಳು ಸಿಕ್ಕಿ ಗಾಯಗೊಳ್ಳುತ್ತಿದ್ದ ಪ್ರಕರಣಗಳು ಆಗ ಅಪರೂಪವೇನಲ್ಲ. ಇದೆಲ್ಲಾ ಅರುವತ್ತರ ದಶಕದ ಮೊದಲಿನ ವರ್ಷಗಳ ಮೈಸೂರಿನ ದೃಶ್ಯ.    ತೀರ ಇತ್ತೀಚೆಗೆ 8 ವರ್ಷದ ತಂಗಿಯ ಮಗ ಸುಧನ್ವನಿಗೆ ಕುದುರೆಗಾಡಿ ಅನುಭವ ಕೊಡಿಸಲೆಂದು ಜಟಕಾ  ಸವಾರಿಗೆ ಕರೆದೊಯ್ದಿದ್ದೆವು. ಟಾಂಗಾ ಸವಾರಿಯ ಹಳೆಯ ನೆನಪುಗಳೆಲ್ಲ ರೀಲಿನಂತೆ ಬಿಚ್ಚಿಕೊಂಡವು. ಅರಮನೆಯ ಎದುರಿಗಿನ ಟಾಂಗಾ ನಿಲ್ದಾಣದಿಂದ ಸಯ್ಯಾಜಿರಾವ್ ರಸ್ತೆ ಮತ್ತು ಸುತ್ತಲ ಪಾರಂಪರಿಕ ಕಟ್ಟಡಗಳನೆಲ್ಲಾ ನೋಡಿ ಬರುವಾಗ ಹಳೆಯ ಸಂಗತಿಗಳು ಸ್ಮರಣೆಯ ಕೋಶದಲ್ಲಿ ಅಡಗಿದ್ದವು. ಗೂಡು ಚದುರಿಸಿದಾಗ ಚೆಲ್ಲಾಪಿಲ್ಲಿಯಾಗುವ ಇರುವೆಗಳ ತರಹ ಸರಿದಾಡತೊಡಗಿದ್ದವು . ಅವುಗಳನ್ನು ಹಾಗೆಯೇ ಇಲ್ಲಿ ಹಿಡಿದಿಡುವ ಪ್ರಯತ್ನ . ನನಗೆ ನೆನಪಿರುವಷ್ಟು ಹಿಂದಕ್ಕೆ ಅಂದರೆ 5 ಅಥವಾ 6 ವರ್ಷದವಳಿದ್ದಾಗ ಮೈಸೂರಿನಲ್ಲಿ ಆಂತರಿಕ ಸಾರಿಗೆಯೆಂದರೆ ಜಟಕಾನೇ ಆಗಿತ್ತು.  ಸಿಟಿ ಬಸ್ಸುಗಳು ಇರದಿದ್ದ ಕಾಲ. ಪುಟ್ಟಮಕ್ಕಳು ನಡೆಯಲು ಹಾಗೂ ಸ್ವಲ್ಪ ದೂರದ ಪಯಣ ಇದ್ದಾಗಲೆಲ್ಲಾ ಆಶ್ರಯಿಸುತ್ತಿದ್ದುದು ಜಟಕಾವನ್ನೇ. ಮೈಸೂರಿನ ಮಹಾರಾಜರು ೧೮೯೭ ರಲ್ಲಿ ಟಾಂಗಾವನ್ನು ಮೈಸೂರಿಗೆ ತಂದರಂತೆ.  ಸುಮಾರು ಐನೂರು ಆರುನೂರು ಜಟಕಾ ಗಳಿದ್ದ ಕಾಲವೂ ಇತ್ತು ಎಂದು ಹೇಳುತ್ತಾರೆ. ಈಗ ಅವುಗಳ ಸಂಖ್ಯೆ ಶತಕ ದಾಟಿಲ್ಲ. ಅವುಗಳಿಗೆಲ್ಲಾ ನೋಂದಣಿ ಸಂಖ್ಯೆ, ಚಾಲಕರಿಗೆ ಗುರುತಿನ ಬಿಲ್ಲೆ ಕೊಡುತ್ತಿದ್ದರು. ಮುನಿಸಿಪಾಲಿಟಿಯ ಅಧಿಕಾರವ್ಯಾಪ್ತಿಗೆ ಬರುತ್ತಿದ್ದವು.  ಈಗಿನ ಆಟೋಗಳ ಹಾಗೆ ಅವುಗಳಿಗೆಂದೇ ಪ್ರತ್ಯೇಕ ಸ್ಟ್ಯಾಂಡ್ ನಿಲ್ದಾಣಗಳು ಇರುತ್ತಿತ್ತು .ನಾನೇ ಕಂಡಂತೆ ಚಾಮುಂಡಿಪುರಂ ಸರ್ಕಲ್, ಅಗ್ರಹಾರ, ಅರಮನೆಯ ಮುಂದುಗಡೆ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಕೆ ಆರ್ ಆಸ್ಪತ್ರೆಯ ಮುಂದೆ ಇಲ್ಲೆಲ್ಲಾ ಕುದುರೆ ಗಾಡಿಗಳು ಸಾಲಾಗಿ ನಿಂತಿರುತ್ತಿದ್ದವು .  ಸಾಮಾನ್ಯವಾಗಿ ಜಟಕಾ ಮತ್ತು ಟಾಂಗಾ ಎರಡೂ ಕುದುರೆ ಗಾಡಿಗೆ ಬಳಸುವ ಪದಗಳಾದರೂ ಎರಡರ ರಚನೆಯಲ್ಲಿ ಸ್ವಲ್ಪ ವ್ಯತ್ಯಾಸವಿದೆ .ಎತ್ತಿನಗಾಡಿಯದೇ ಸ್ವಲ್ಪ ಪರಿಷ್ಕೃತ ಸುಧಾರಿತ ರೂಪ ಜಟಕಾ. ಆದರೆ ಟಾಂಗಾ ನವೀನ ಮಾದರಿಯ ಐಶಾರಾಮಿ ತರಹದ್ದು.  ಮೈಸೂರು ಮಹಾರಾಜರಿಗೆಂದೇ ವಿಶೇಷ ವಿನ್ಯಾಸದಲ್ಲಿ ಮಾಡಿರುವ ಇಬ್ಬರೇ ಕೂರುವ ಇದನ್ನು ಅರಸರು ಬಹಳವಾಗಿ ಮೆಚ್ಚಿದ್ದರಿಂದ “ಷಾ ಪಸಂದ್” ಟಾಂಗಾಗಳು ಎನಿಸಿಕೊಂಡಿದ್ದವು . ಈಗೀಗ ಬರುತ್ತಿರುವ ಸಾರೋಟುಗಳು ಮತ್ತು ಐಷಾರಾಮಿ ಹಾಗೂ ವೈಭವೋಪೇತವಾಗಿರುವವು.  ಆಗಲೇ ಹೇಳಿದೆನಲ್ಲ ದೂರ ಹೋಗುವುದಿದ್ದರೆ ಜಟಕಾದಲ್ಲಿ ಅಂತ .  ಆಗೆಲ್ಲ ನಿಲ್ದಾಣಕ್ಕೆ ಬರುವುದು . ಆಗಲೂ ಈಗಿನ ಆಟೊ ಚಾಲಕರ ಹಾಗೆ ಸಾಹೇಬರುಗಳು (ಸಾಮಾನ್ಯ ಜಟಕಾ ಓಡಿಸುತ್ತಿದ್ದವರು ಮುಸಲ್ಮಾನರೇ ಆಗಿದ್ದರಿಂದ ಆ ಪದ ವಾಡಿಕೆಗೆ ಬಂದಿರಬಹುದು) ಆ ಕಡೆ ಬರಲ್ಲ ಅನ್ನುವುದು, ಜನ ಜಾಸ್ತಿಯಾಯಿತು ಅನ್ನುವುದು, ಆಣೆ ಕಾಸುಗಳಿಗೆ ಚೌಕಾಶಿ ಮಾಡುವುದು ಸಾಮಾನ್ಯವಾಗಿತ್ತು.  ಇನ್ನೂ ಆ ಚೌಕಾಶಿಯೋ… ಜುಗ್ಗಾಡಿ ಜುಗ್ಗಾಡಿ ಇಬ್ಬರೂ ಅವರವರ ಬೆಲೆಗಳಲ್ಲಿ ನಿಂತು ಕಡೆಗೆ 1 ಮದ್ಯದ ಬೆಲೆಗೆ ಒಪ್ಪಿತವಾಗುತ್ತಿತ್ತು . ಚೌಕಾಶಿ ಮಾಡದೇ ಏನನ್ನೂ ವ್ಯವಹರಿಸುತ್ತಿರಲಿಲ್ಲ ಅಂದಿನ ಹಿರಿಯರು . ನಮಗೋ ಮಕ್ಕಳಿಗೆ ಬೇಗ ಕುದುರೆಗಾಡಿ ಏರುವ ಆಸೆ .ಕೆಲವೊಮ್ಮೆ ಏರಿದ ಕುದುರೆಗಾಡಿಯವನೊಂದಿಗಿನ  ಚೌಕಾಶಿ ಗಿಟ್ಟದೆ ಮತ್ತೆ ಇಳಿದು ಬೇರೆ ಗಾಡಿಯಲ್ಲಿ ಕುಳಿತ ಪ್ರಸಂಗಗಳೂ ಇದೆ . ನಮಗೆ ಮಕ್ಕಳಿಗೆ ನೋಡಲು ಬಣ್ಣಬಣ್ಣವಾಗಿ ಅಂದವಾಗಿ ಕಾಣುತ್ತಿದ್ದ ಜಟಕಾದಲ್ಲಿ ಹೋಗುವ ಆಸೆ .ಹಿರಿಯರು ಕಟ್ಟುಮಸ್ತಾಗಿ ಆರೋಗ್ಯವಾಗಿ ಕುದುರೆ ಇರುವ ಗಾಡಿ ಆರಿಸುತ್ತಿದ್ದರು ಈ ರೀತಿ ತುಂಬಾ ಓಡಿಯಾಡಿದ ನೆನಪುಗಳು. ಒಂದೆರಡು ಘಟನೆ ನೆನಪಿದೆ ಎಷ್ಟರಮಟ್ಟಿಗೆ ಮೆದುಳಲ್ಲಿ ಹೂತಿದೆ ಎಂದರೆ ಇತ್ತೀಚೆಗೆ ಕುದುರೆಗಾಡಿಯಲ್ಲಿ ಕೂತಾಗಲೂ ಎಡಕ್ಕೆ ವಾಲಿದರೇ ಬಿದ್ದೇಬಿಟ್ಟೆನೇನೋ  ಅಂತ ಹೃದಯ ಬಾಯಿಗೆ ಬಂದಿತ್ತು. ಓಂದು ಬಾರಿ ಜೂ ಗಾರ್ಡನ್ನಿಗೆ ಹೊರಟಿದ್ದೆವು.  ನನಗೆ ಆಗ 4 / 5 ವರ್ಷ ಇರಬಹುದು. ಮನೆಗೆ ಬಂದ ನೆಂಟರೆಲ್ಲ ಸೇರಿ ಒಂದೇ ಜಟಕಾದಲ್ಲಿ ಹೇರಿಕೊಂಡೆವು.  ಚಿಕ್ಕವಳೆಂದು ಚಾಲಕನ ಪಕ್ಕದ ಸೀಟು ಖಾಯಂ ಆಗ ನನಗೆ . ಮುಂಭಾರ ಹಿಂಭಾರ ಎಲ್ಲ ಸರಿದೂಗಿಸಿ ಹೊರಟ . ಖುಷಿಯಾಗಿಯೇ ಇತ್ತು . ಅರಮನೆಯ ಹಿಂದಿನ ದ್ವಾರದ ರಸ್ತೆಯಲ್ಲಿ ಬಂದು ಬಲಗಡೆಗೆ ತಿರುಗಬೇಕಿತ್ತು . ಎಡಗಡೆಗೆ ಸ್ವಲ್ಪ ತಗ್ಗಿನಲ್ಲಿ ಅರಮನೆಯ ಮಾರಮ್ಮನ ದೇವಸ್ಥಾನದ ಅವರಣ.  ಬಲಗಡೆಗೆ ದೊಡ್ಡಕೆರೆ ಏರಿ ಇನ್ನೂ ಕೆರೆ ಮುಚ್ಚಿರಲಿಲ್ಲ. ನೀರಿತ್ತು. ಧಡ್ ಧಡ್ ಗಾಡಿಯ ಸದ್ದು, ಒಳಗಡೆ ದೊಡ್ಡವರ ಮಾತು, ಮಕ್ಕಳ ಕೇಕೆ, ಸಾಹೇಬನ ಬಾಜೂ ಬಾಜೂ ಇವುಗಳ ಮಧ್ಯೆ ಎಡ ಚಕ್ರದ ಕಡಾಣಿ ಕಳಚಿ ಬಿದ್ದ ಸದ್ದು ಯಾರಿಗೂ ಕೇಳಿಲ್ಲ . ಮುಂದೆ ಅಷ್ಟು ದೂರ ಓಡಿ ಗಾಡಿಯ ಚಕ್ರ ಕಳಚಿ ಮಾರಮ್ಮನ ಗುಡಿ ಹಳ್ಳಕ್ಕೆ ಗಾಡಿ ಒಮ್ಮೊಗವಾಗಿ ರಸ್ತೆಯಲ್ಲಿ ಉರುಳಿತ್ತು . ಮುಂದೆ ಕುಳಿತ ನಾನು ರಸ್ತೆಗೆ….. ಒಳಗಿದ್ದವರು ಒಬ್ಬರ ಮೇಲೊಬ್ಬರು. ಎಲ್ಲರದೂ ಕಿರುಚಾಟ .ಸಣ್ಣಪುಟ್ಟ ತರಚು ಗಾಯ ನೆನಪಿನಲ್ಲಿ ಅವತ್ತಿನವೇ ಕ್ಷಣಗಳು ಇನ್ನೂ ಗಿರಕಿ ಹೊಡೆಯುತ್ತೆ .ಅಕಸ್ಮಾತ್ ಬಲ ಬದಿಯ ಕೆರೆಗೆ ಬಿದ್ದಿದ್ದರೆ ಏನು ಗತಿ?ಇದನ್ನು ಬರೆಯಲು ನಿಮ್ಮ ಮುಂದೆ ನಾನೇ ಇರುತ್ತಿರಲಿಲ್ಲವೇನೋ ? ಮುಂದೆ ಎಷ್ಟೋ ದಿನ ಜಟಕಾ ಹತ್ತಲು ಭಯಪಡುತ್ತಿದ್ದೆನಂತೆ . ಅಣ್ಣ 1 ಬಾರಿ ಪಕ್ಕದಲ್ಲಿ ಕೂರಿಸಿಕೊಂಡು 1 ಸುತ್ತು ಹೊಡೆಸಿಕೊಂಡು ಬಂದಮೇಲೆ ಸರಿ ಹೋದೆನಂತೆ.   ಇನ್ನೊಂದು ಸ್ವಲ್ಪ ನಗೆಯ ಪ್ರಸಂಗ .ಆಗೆಲ್ಲ ಶ್ರೀರಂಗಪಟ್ಟಣ ಪ್ರವಾಸ ಅಂದರೆ ಬಸ್ ನಲ್ಲಿ ಅಲ್ಲಿಗೆ ಹೋಗಿ 1 ಜಟಕಾ ಮಾತಾಡಿಕೊಂಡು ದೇವಸ್ಥಾನ ನಂತರ   ದರಿಯಾದವಲತ್ ಗುಂಬಜ್ ಮತ್ತು ಸಂಗಮಗಳಿಗೆ ಭೇಟಿ (ನಿಮಿಷಾಂಬ ಆಗಿನ್ನೂ ಪ್ರಸಿದ್ಧವಾಗಿರಲಿಲ್ಲ) . ಹಾಗೆ ಗಾಡಿಯಲ್ಲಿ ಯಥಾಪ್ರಕಾರ ಡಬಲ್ ಜನ ತುಂಬಿದ್ದೆವು . ದೇವಸ್ಥಾನ ಮುಗಿಸಿ ದರಿಯಾದೌಲತ್ ಕಡೆಗೆ ಹೊರಟರೆ ದಾರಿಯಲ್ಲಿ 1 ಸಿನಿಮಾ ಟೆಂಟ್ . ಕುದುರೆ ಅಲ್ಲಿಂದ ಮುಂದಕ್ಕೆ ಹೋಗ್ತಾನೇ ಇಲ್ಲ .ಪೂಸಿ ಹೊಡೆದರೂ ಇಲ್ಲ ಚಾಟಿ ಏಟಿಗೂ ಬಗ್ತಿಲ್ಲ. ಸಾಹೇಬ ಹೇಳಿದ್ದು ಬರೀ ಅಲ್ಲಿ ತನಕ ಮಾತ್ರ ಸವಾರಿ ಬರ್ತಿದ್ದಂತೆ. ಮುಂದೆ ಹೋಗ್ಲಿಲ್ಲ ಅದಕ್ಕೆ ಅಂತ . ಕಡೆಗೆ ಕುದುರೆ ಹಟಾನೇ ಗೆದ್ದು ನಮ್ಮನ್ನೆಲ್ಲ ಬೇರೆ ಗಾಡಿಗೆ ಹತ್ತಿಸಲಾಯಿತು.  ಮನುಷ್ಯರಷ್ಟೇ ಅಲ್ಲ ಕುದುರೆಗಳಿಗೂ ಎಂತಹ “ಅಭ್ಯಾಸಬಲ” ನೋಡಿ ! ಆಗೆಲ್ಲ ಹೊಸ ಮದುವಣಿಗರು ಮೈಸೂರಿಗೆ ದಸರಾಗೆ ಬರುವ ವಾಡಿಕೆ . ಹೊಸಜೋಡಿಗಳು ಯಾವಾಗಲೂ ಷಾಪಸಂದ್ ಟಾಂಗಾದಲ್ಲಿ ಇಬ್ಬರೇ ಕೂತು ದೀಪಾಲಂಕಾರ ನೋಡಲು ಹೋಗುವುದು ಒಂದು ರಿವಾಜು. ಹೆಮ್ಮೆಯಿಂದ ನೆಂಟರಿಷ್ಟರಿಗೆಲ್ಲಾ ಕೊಚ್ಚಿಕೊಳ್ಳುವ ವಿಷಯವಾಗಿತ್ತು ಆಗ ಅದು.  ಹಾಗೆ ಆ ಬಾರಿ ನಮ್ಮ ಮನೆಗೂ ನವ ವಿವಾಹಿತ ಜೋಡಿ ಬಂದಿತಂತೆ .ಹೊರಡುವ ಮೊದಲು ಸುಮ್ಮನೆ ಸೌಜನ್ಯಕ್ಕೆಂದು ನನ್ನ ಕರೆದರೆ ಹೋಗಿಯೇ ತೀರುವೆನೆಂದು ನನ್ನ ಹಠವಂತೆ . ಅಪ್ಪ ಅಮ್ಮ ಎಷ್ಟು ಹೇಳಿದರೂ ಕೇಳದೆ ಅತ್ತು ಕರೆದು ಅವರ ಜತೆ ಹೊರಟೇಬಿಟ್ಟೆನಂತೆ. ಪಾಪ ನನ್ನನ್ನು ಎಷ್ಟು ಬಯ್ದುಕೊಂಡಿದ್ದರೋ ಏನೋ ..ಆದರೆ ಇದೆಲ್ಲಾ ಒಂದು ಚೂರೂ ನೆನಪಿಲ್ಲ ನನಗೆ. ಅಮ್ಮ ಹೇಳುತ್ತಿದ್ದುದು ಅಷ್ಟೆ  ಬರಬರುತ್ತಾ ಪೆಟ್ರೋಲ್ ವಾಹನಗಳು ಹೆಚ್ಚಾಗಿ ದ್ವಿಚಕ್ರ ವಾಹನ, ಚತುಷ್ಚಕ್ರ ವಾಹನಗಳ ಭರಾಟೆ ಹೆಚ್ಚಿದ ಮೇಲೆ ಸಮಯದ ಹಿಂದಿನ ಓಟದ ಸ್ಪರ್ಧೆಯಲ್ಲಿ ನಿಧಾನಗತಿಯ ಈ ಸಂಚಾರ ಸಾಧನ ಮೂಲೆಗುಂಪಾಯಿತು.  ಒಂದಷ್ಟು ದಿನ ಸರಕು ಸಾಗಾಣಿಕೆ ವಾಹನವಾಗಿ ಮುಂದುವರಿಯಿತು. ಈಗ ಸವಾರಿಯ ಶೋಕಿಯ ಅನುಭವಕ್ಕಷ್ಟೇ ಬಳಕೆ. ಪ್ರವಾಸಿಗರೇ ಹೆಚ್ಚಿನ ಸಂಖ್ಯೆಯ ಗ್ರಾಹಕರು . ಇದನ್ನೇ ಉದರಂಭರಣಕ್ಕಾಗಿ ನೆಚ್ಚಿದ್ದ ಕುಟುಂಬಗಳಲ್ಲಿ ಎಷ್ಟೋ ಕುಟುಂಬಗಳು ಬೇರೆ ಉದ್ಯೋಗವನ್ನರಸಿ ಹೋಗಿವೆ . ಜಟಕಾದ ಬಗ್ಗೆ ಹೇಳಿದ ಮೇಲೆ ಕುದುರೆಯ ಬಗ್ಗೆ ಒಂದೆರಡು ಮಾತು ಹೇಳದಿದ್ದರೆ ಪೂರ್ಣವಾಗುವುದಿಲ್ಲ .ಮುಂಚೆ ಈ ಕುದುರೆಗಳನ್ನು ದೂರದ       ಗಳಿಂದ ತರಿಸಿಕೊಳ್ಳುತ್ತಿದ್ದರಂತೆ . ಕುದುರೆಯ ಮಾಲೀಕರು ಗಳಂತೂ ಅದನ್ನು ತಮ್ಮ ಮಕ್ಕಳಷ್ಟೇ ಪ್ರೀತಿಯಿಂದ ಸಾಕಿ ಹುರುಳಿ ಹಸಿಹುಲ್ಲು ಒಣಹುಲ್ಲುಗಳನ್ನು ಕೊಡುತ್ತಿದ್ದರು. ಅವುಗಳಿಗೆ ಅಲಂಕಾರ ಅಂತೂ ಪೈಪೋಟಿಯಲ್ಲಿ ಮಾಡುತ್ತಿದ್ದರು.  ಬಣ್ಣಬಣ್ಣದ ಮುತ್ತಿನ ಗೆಂಡೆಗಳು ಕುಚ್ಚುಗಳು ನೋಡಲು 2 ಕಣ್ಣು ಸಾಲ್ತಿರಲಿಲ್ಲ . ಹಾಗೆಯೇ ಬಡಕಲಾದ ನಿಶ್ಶಕ್ತವಾದ ಕಾಲು ಮುರಿದುಕೊಂಡ ವಯಸ್ಸಾದ ಕುದುರೆಗಳನ್ನು ಹಾಗೆಯೇ ಬೀದಿಗೆ ಬಿಟ್ಟು ಬಿಡುತ್ತಿದ್ದರಿಂದ ಬೀದಿ ಹಸುಗಳ ತರಹ ಬೀದಿ ಕುದುರೆಗಳ ಕಾಟವೂ ಇರುತ್ತಿತ್ತು ಆಗೆಲ್ಲ . ಮೇರಾ ರಾಜ ಬೇಟಾ,  ಮೇರಾ ಸೋನಾ ಬೇಟಾ ಎಂದೆಲ್ಲಾ ಮುದ್ದಿಸುವಂತೆಯೇ ಚಾಟಿಯೇಟು ಹೊಡೆಯುವಾಗ ಹರಾಮ್ ಜಾದೇ ಬೈಗುಳವೂ ಇರುತ್ತಿತ್ತು. ಒಟ್ಟಿನಲ್ಲಿ ಕುದುರೆ ಗಾಡಿ ಓಡಿಸುವವರ ಮನೆಯ ಸದಸ್ಯನಂತೆಯೇ ಆಗಿಬಿಟ್ಟಿರುತ್ತಿತ್ತು ಕುದುರೆಗಳೂ.  ಪಾರಂಪರಿಕ ವಸ್ತುಗಳನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ. ಮೈಸೂರು ಅಂದರೆ ಅರಮನೆ, ಮಲ್ಲಿಗೆ, ವೀಳೆಯದೆಲೆ, ಬದನೆಕಾಯಿಗಳ ಹಾಗೆ ಟಾಂಗಾಗಳು ನೆನಪಿನ ಬೆಸುಗೆಗೆ ಜೋಡಿಸಿಕೊಳ್ಳುತ್ತದೆ. ಪ್ರವಾಸಿಗರಿಗೆ ಇದರ ಪರಿಚಯಕ್ಕೆಂದು NERM  ಯೋಜನೆಯಡಿ ಹೊಸ ಕುದುರೆಗಾಡಿಗಳನ್ನು ಕೊಳ್ಳಲು ಸಾಲ ರೂಪದಲ್ಲಿ ಧನಸಹಾಯ ಮಾಡಿ ಈ ಸಾಂಸ್ಕೃತಿಕ ಸಂಚಾರಿ ರಾಯಭಾರಿಗೆ ಕಾಯಕಲ್ಪ ಕಲ್ಪಿಸಲಾಗುತ್ತಿದೆ ಅದೇನೇ ಆದರೂ ಜನತೆಯೂ ಸಹ ಇದನ್ನು ಪ್ರೋತ್ಸಾಹಿಸುವ ಮೂಲಕ ಮೈಸೂರಿನ ಹೆಮ್ಮೆಯ ಪ್ರಸಿದ್ಧಿಯ ಟಾಂಗಾಗಳು ಉಳಿಯುವಂತೆ ಮಾಡಬೇಕು . ಇವು  ಈಗ ವಿರಳವಾಗಿದ್ದರೂ ಪಳೆಯುಳಿಕೆಯಾಗಿಲ್ಲ ಎಂಬುದಷ್ಟೇ ನೆಮ್ಮದಿ ತರುವ ವಿಷಯ . ಇನ್ನೂ ಜಟಕಾ ಅಂದರೆ ಕನ್ನಡ ಸಾಹಿತ್ಯ ಪ್ರೇಮಿಗಳಿಗೆಲ್ಲ ಡಿವಿಜಿಯವರ ಈ ಪ್ರಸಿದ್ಧ ಮಂಕುತಿಮ್ಮನ ಕಗ್ಗ ನೆನಪಿಗೆ ಬಾರದೆ ಇರದು .  ಬದುಕು ಜಟಕಾ ಬಂಡಿ ವಿಧಿಯದರ ಸಾಹೇಬ ಕುದುರೆ ನೀನಂ ಅವನು ಪೇಳ್ದಂತೆ ಪಯಣಿಗರು ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು  ಪದಕುಸಿಯೆ ನೆಲವಿಹುದು ಮಂಕುತಿಮ್ಮ                              _ ಡಿ ವಿ ಜಿ  ಇಲ್ಲಿ ಕುದುರೆ ಗಾಡಿಗೂ ಮನುಷ್ಯನ ಜೀವನಕ್ಕೂ ಸಾಮ್ಯತೆಯನ್ನು ಹೇಳುತ್ತಾ ಹಿರಿದಾದ ಬಾಳ ತತ್ವವನ್ನು ಅನಾವರಣಗೊಳಿಸಿದ್ದಾರೆ.  ನಿಜ! ನಮ್ಮ ಬದುಕು ಒಂದು ಜಟಕಾ ಗಾಡಿಯೇ. ನಾವೆಲ್ಲಾ ಹೇಳಿದಂತೆ ಮಾತ್ರ ನಡೆಯಬೇಕಾದ ಕುದುರೆಗಳು. ಓಡಿಸುವ ಸಾಹೇಬ ವಿಧಿ! ಆ ದೇವರು.  ಅವನ ಮರ್ಜಿ ಇದ್ದೆಡೆಗೆ ನಮ್ಮ ಪಯಣ. ನಲಿವು ಸಂತೋಷದ ಮದುವೆ ಮನೆಗಾದರೂ ಆಗಿರಬಹುದು ; ನೋವು ಸಂಕಟದ ಸ್ಮಶಾನಕ್ಕಾದರೂ ಕರೆದೊಯ್ಯಬಹುದು . ಕರ್ತವ್ಯಗಳ ಛಡಿ ಏಟಿನ ಜವಾಬ್ದಾರಿಗಳ ಭಯ ಕೆಲವೊಮ್ಮೆ ಮುನ್ನಡೆಸಿದರೆ,  ಹುರುಳಿ ಹುಲ್ಲು ವಿರಾಮದ ಆಮಿಷಗಳು ವೇಗ ಹೆಚ್ಚಿಸಬಹುದು. ಆದರೆ ಪಯಣವಂತೂ ನಿರಂತರ . ಇನ್ನು ನಡೆಯಲಾರೆ ನನ್ನಿಂದಾಗದು ಎಂದು ಕುಸಿಯಲೂ ಬಹುದು . ಆಶ್ರಯ ಕೊಡಲು ಭೂಮಿತಾಯಿ ಇದ್ದಾಳೆ ತಾತ್ಕಾಲಿಕ ವಿರಾಮದ ಸಾವರಿಸಿ ಏಳುವವರೆಗೂ ಆಸರೆಯಾಗಿ ಅಥವಾ ಮುಂದೆ ಏಳಲೇ ಆಗದು ಎಂದಾಗ ಶಾಶ್ವತವಾಗಿ ಮಲಗಲು ತಾವು

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ—51 ಅಘನಾಶಿನಿಯಲ್ಲಿ ಪಾರಾದೆ, ಪುತ್ರೋದಯದ ಸಂತಸದಲ್ಲಿ ಮುಳುಗಿದೆ ಕುಮಟಾ ತಾಲೂಕಿನ ಮಿರ್ಜಾನಿನಲ್ಲಿ ಒಂದು ಆಟ. ನಾನು ‘ಗದಾಪರ್ವ’ ಪ್ರಸಂಗದಲ್ಲಿ ಕೌರವನ ಪಾತ್ರ ನಿರ್ವಹಿಸಬೇಕಿತ್ತು. ಮಿರ್ಜಾನ್‌ನಂಥ ಊರಿನಲ್ಲಿ ನನ್ನ ಮೊದಲ ಪಾತ್ರವಾದ್ದರಿಂದ ಸರಿಯಾದ ಸಿದ್ಧತೆಯೊಂದಿಗೆ ಪ್ರದರ್ಶನ ನೀಡಿ ಜನರ ಮನಗೆಲ್ಲುವ ಅನಿವಾರ್ಯತೆಯೂ ಇತ್ತು. ಥಿಯೇಟರ್ ಆಟ ಬೇರೆ. ಹಣ ಕೊಟ್ಟು ಬರುವ ಪ್ರೇಕ್ಷಕರಿಗೆ ಸಂತೋಷವಾಗುವಂತೆ ಪಾತ್ರ ನಿರ್ವಹಣೆ ಸಾಧ್ಯವಾಗದಿದ್ದರೆ ಅವರ ಟೀಕೆಗಳನ್ನು ಸಹಿಸಲೇ ಬೇಕಾಗುತ್ತದೆ. ನಾನು ಕಾಳಜಿ ಪೂರ್ವಕವಾಗಿ ಪಾತ್ರಕ್ಕೆ ಬೇಕಾದ ಸಾಧ್ಯವಾದಷ್ಟೂ ಸಿದ್ಧತೆ ಮಾಡಿಕೊಂಡಿದ್ದೆ. ಪತ್ನಿ ನಿರ್ಮಲಾ ಮೊದಲ ಹೆರಿಗೆಗಾಗಿ ತವರೂರು ಹುಬ್ಬಳ್ಳಿಗೆ ಹೋಗಿದ್ದಳು. ನಮ್ಮೂರು ಮಾಸ್ಕೇರಿಗೆ ಹೊರಟು ಅಲ್ಲಿನ ನನ್ನ ಯಕ್ಷಗಾನ ಪ್ರೇಮಿಗಳಾದ ಬಾಲ್ಯದ ಗೆಳೆಯರನ್ನು ಕೂಡಿಕೊಂಡು ಆಟಕ್ಕೆ ಹೋಗಲು ನಿರ್ಧರಿಸಿ ಊರಿಗೆ ಬಂದೆ. ಹೇಗೂ ಎರಡನೆಯ ಪ್ರಸಂಗದಲ್ಲಿ ನನ್ನ ಪಾತ್ರವಿದೆ. ಅವಸರವೇನೂ ಇಲ್ಲವೆಂದು ರಾತ್ರಿಯ ಊಟ ಮನೆಯಲ್ಲೇ ಮುಗಿಸಿ ಗೋಕರ್ಣ ಬಸ್ಸು ಹಿಡಿದು ಗೆಳೆಯರೊಂದಿಗೆ ಹೊರಟೆ. ಅದಾಗಲೇ ನುರಿತ ಭಾಗವತನೂ ಆಗಿದ್ದ ಕೃಷ್ಣ ಮಾಸ್ಕೇರಿ, ಮಾಸ್ತರಿಕೆಯೊಂದಿಗೆ ‘ಚಿನ್ನದ ಪೆಟ್ಟಿಗೆ’ಯ ಸಣ್ಣ ವ್ಯವಹಾರ ಆರಂಭಿಸಿದ್ದ ಭಾವ ಹೊನ್ನಪ್ಪ ಮಾಸ್ತರ, ನನ್ನ ಸಹೋದರ ಶಿಕ್ಷಕ ನಾಗೇಶ ಗುಂದಿ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಎನ್.ಬಿ.ಗಣಪತಿ, ನಿರಕ್ಷರಿ ಗೆಳೆಯ ನಾರಾಯಣ ಮತ್ತು ನಮ್ಮ ದಾಯಾದಿ ಚಿಕ್ಕಪ್ಪ ನಾರಾಯಣ ಎಂಬ ಹಿರಿಯರು ಸೇರಿ ಆಟಕ್ಕೆ ಹೊರಟೆವು. ನಾವು ಗೋಕರ್ಣದಿಂದ ತದಡಿ ಎಂಬ ಊರಿಗೆ ಇನ್ನೊಂದು ಬಸ್ಸಿನಲ್ಲಿ ಪ್ರಯಾಣಿಸಿ ಅಲ್ಲಿಂದ ಅಘನಾಶಿನಿ ನದಿಯನ್ನು ನಾವೆಯ ಮೂಲಕ ದಾಟಿ ಆಚೆ ದಂಡೆಯ ಮೇಲಿರುವ ಮಿರ್ಜಾನ ಎಂಬ ಊರು ಸೇರಬೇಕಿತ್ತು. ಆದರೆ ನಾವು ತದಡಿಗೆ ಬಂದಿಳಿಯುವಾಗ ರಾತ್ರಿ ಒಂಭತ್ತರ ಮೇಲಾಗಿತ್ತು. ಅಷ್ಟು ಹೊತ್ತಿಗೆ ಪ್ರಯಾಣಿಕರನ್ನು ಅಘನಾಶಿನಿ ನದಿ ದಾಟಿಸುವ ಮಶಿನ್ ಬೋಟ್ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತ್ತು. ಹೇಗಾದರೂ ನಮ್ಮನ್ನು ನದಿ ದಾಟಿಸಲು ವಿನಂತಿಸೋಣವೆಂದರೆ ಮಶಿನ್ ಬೋಟ್ ಆಚೆ ದಡವನ್ನು ಸೇರಿ ಲಂಗರು ಹಾಕಿತ್ತು. ನದಿ ಸಮುದ್ರ ಸೇರುವ ಸ್ಥಳವಾದುದರಿಂದ ನದಿಯ ವಿಸ್ತಾರವೂ ಅಧಿಕವಾಗಿತ್ತು. ನಾವು ಧ್ವನಿಗೈದು ಕರೆದರೂ ಕೇಳುವ ಸ್ಥಿತಿ ಇರಲಿಲ್ಲ. ಇನ್ನು ನಮಗಿರುವ ದಾರಿಯೆಂದರೆ ಮರಳಿ ಹೊರಟು ಸಾಣಿಕಟ್ಟಾ, ಮಾದನಗೇರಿ, ಹಿರೇಗುತ್ತಿ ಮೊದಲಾದ ಊರುಗಳನ್ನು ಸುತ್ತಿ ಮಿರ್ಜಾನ್ ಸೇರುವುದು. ಇದು ಬಹಳ ಸುತ್ತಿನ ದಾರಿ ಮಾತ್ರವಲ್ಲದೆ ನಮಗೆ ಸಕಾಲದಲ್ಲಿ ವಾಹನಗಳು ದೊರೆಯುವುದೂ ದುಸ್ತರವಾದ ಸಮಯ. ನಾವು ಯೋಚನೆಗೆ ಒಳಗಾದೆವು. ಉಳಿದವರ ಮಾತು ಅಂತಿರಲಿ ನಾನು ಆಟವನ್ನು ತಪ್ಪಿಸಿಕೊಳ್ಳುವಂತೆಯೇ ಇರಲಿಲ್ಲ. ಯಾವ ಸಬೂಬು ಹೇಳಿದರೂ ಹಣಕೊಟ್ಟು ಬಂದ ಪ್ರೇಕ್ಷಕರು ತಗಾದೆ ಮಾಡದೇ ಇರುವುದಿಲ್ಲ. ಸಂಘಟಕರಿಗೆ ಇದು ತುಂಬಾ ತೊಂದರೆಗೆ ಈಡು ಮಾಡುತ್ತದೆ. ಹಾಗಾಗಿ ನನಗೆ ಆಟಕ್ಕೆ ಹೋಗಲೇಬೇಕಾದ ಅನಿವಾರ್ಯತೆ ಇದೆ. ನಾವು ದಿಕ್ಕುಗಾಣದವರಂತೆ ಯೋಚಿಸುತ್ತ ನಿಂತಿರುವಾಗ ಆಪತ್‌ದ್ಭಾಂದವನಂತೆ ನಾವಿಕನೊಬ್ಬ ನಮ್ಮ ಬಳಿಗೆ ಬಂದ. ಯುವಕನಂತೆ ಕಾಣುವ ಆತ ನಮ್ಮ ಸಮಸ್ಯೆಯನ್ನು ಕೇಳಿ ತಾನು ನದಿ ದಾಟಿಸುವ ಭರವಸೆ ನೀಡಿದ. ಕೊಡಬೇಕಾದ ಹಣಕಾಸಿನ ತೀರ್ಮಾನವಾದ ಬಳಿಕ ಸಮೀಪದಲ್ಲಿಯೇ ಬೇಲೆಯ ಮೇಲೆ ಎಳೆದು ಹಾಕಿದ ಒಂದು ಚಿಕ್ಕ ದೋಣಿಯನ್ನು ನೀರಿಗೆಳೆದು ನಮ್ಮ ಬಳಿಗೆ ತಂದು ನಿಲ್ಲಿಸಿದ. ಆಗಲೇ ನಾವು ಏಳು ಜನರಿದ್ದೆವು. ನಾವಿಕನೂ ಸೇರಿ ಎಂಟು ಜನ ಈ ದೋಣಿಯಲ್ಲಿ ಪ್ರಯಾಣಿಸುವುದು ಕಷ್ಟವೆನ್ನಿಸಿತು. ಆ ಪುಟ್ಟ ದೋಣಿಯಲ್ಲಿ ಒತ್ತಾಗಿ ಕುಳಿತು ನೋಡಿದೆವು. ನಮ್ಮ ದಾಯಾದಿ ಚಿಕ್ಕಪ್ಪ ಮತ್ತು ನಾರಾಯಣ ದೋಣಿಗೆ ಭಾರವಾಗುವುದೆಂದೇ ನಿರ್ಧರಿಸಿ ತಮ್ಮ ಆಟ ನೋಡುವ ಆಸೆಗೆ ತಿಲಾಂಜಲಿ ಇಟ್ಟು ಹಿಂದೆ ಸರಿದರು. ನಾವಿಕನೂ ಸೇರಿದಂತೆ ಆರು ಜನ ಪ್ರಯಾಣ ಹೊರಟೆವು. ಬೆಳದಿಂಗಳು ಹರಡಿ ವಿಸ್ತಾರವಾದ ನದಿಯ ಹರಹನ್ನೂ ತೆರೆಯ ಏರಿಳಿತದ ಭಯಾನಕತೆಯನ್ನು ಕಣ್ಣಿಗೆ ರಾಚುವಂತೆ ಪ್ರದರ್ಶಿಸುತಿತ್ತು. ನಾವಿಕನನ್ನು ಹೊರತುಪಡಿಸಿ ನಾವೆಲ್ಲ ಜೀವ ಕೈಯಲ್ಲಿ ಹಿಡಿದು ಕುಕ್ಕುರುಗಾಲಿನಲ್ಲಿ ಕುಳಿತುಕೊಂಡಿದ್ದೆವು….. ಪಶ್ಚಿಮಕ್ಕೆ ಹೊರಳಿ ನೋಡಿದರೆ ತೀರ ಸನಿಹದಲ್ಲೇ ಭೋರ್ಗರೆಯುವ ಕಡಲು….. ಉತ್ತರ ದಿಕ್ಕಿನಿಂದ ವಿಶಾಲವಾಗಿ ತೆರೆಯನ್ನೆಬ್ಬಿಸುತ್ತ “ಇನ್ನೇನು ಬಂದೇ ಬಿಟ್ಟಿತು ನನ್ನಿನಿಯನ ಅರಮನೆ………” ಎಂಬ ಸಂಭ್ರಮದಲ್ಲಿ ಧಾವಿಸುವ ಅಘನಾಶಿನಿಯ ಪ್ರವಾಹ………..! ನಾವೆಯು ನದಿಯ ಅರ್ಧಭಾಗವನ್ನು ಕ್ರಮಿಸಿರಬಹುದು. ನಮ್ಮ ಅರಿವಿಗೇ ಬಾರದಂತೆ ನಾವೆಯಲ್ಲಿ ನೀರು ತುಂಬುತ್ತಿರುವುದು ನಮ್ಮ ಗಮನಕ್ಕೆ ಬಂದಿತು! ನಾವೆಯ ತಳದಲ್ಲಿ ಸಣ್ಣ ಸಣ್ಣ ರಂಧ್ರಗಳಿರುವುದು ನೀರು ಉಕ್ಕಿ ಬರುವುದನ್ನು ನೋಡಿದಾಗಲೇ ನಮ್ಮ ಗಮನಕ್ಕೆ ಬಂದಿತು. ನಮ್ಮೆಲ್ಲರ ಎದೆಗೂಡಿನಲ್ಲಿ ಅಳಿದುಳಿದ ಧೈರ್ಯವೂ ಒಮ್ಮಿಂದೊಮ್ಮೆಲೇ ಸೋಸಿ ಹೋದಂತೆ ಕಳವಳಗೊಂಡೆವು. ಕ್ಷಣಕ್ಷಣಕ್ಕೂ ನಾವೆಯಲ್ಲಿ ನೀರು ತುಂಬುವುದನ್ನು ಕಂಡಾಗ ನಮ್ಮೆಲ್ಲರ ಜಂಘಾಬಲವೇ ಉಡುಗಿ ಹೋಯಿತು. ತುಂಬಾ ಗಾಬರಿಗೊಂಡಿದ್ದ ಭಾವ ಹೊನ್ನಪ್ಪ ಮಾಸ್ತರ ಮತ್ತು ಗೆಳೆಯ ಗಣಪತಿ ಅಂಜಿಕೆಯನ್ನು ತೋರಗೊಡದೆ ದೋಣೆಯಲ್ಲಿ ತುಂಬಿದ ನೀರನ್ನು ಬೊಗಸೆಯಲ್ಲಿ ಎತ್ತಿ ನದಿಗೆ ಚೆಲ್ಲುತ್ತಿದ್ದರು. ಸಹೋದರ ನಾಗೇಶ ಮಾತೇ ಬಾರದವನಂತೆ ಕುಳಿತಿದ್ದ. ಕೃಷ್ಣ ಭಾಗವತರು ಮಾತ್ರ “ಏನೂ ಆಗುವುದಿಲ್ಲ ಹೆದ್ರಬೇಡಿ” ಎಂದು ಸುಳ್ಳು ಸಾಂತ್ವನ ಹೇಳುತ್ತಿದ್ದರು. ನನಗೆ ಆಚೆ ಕುಣಿಯಬೇಕಿದ್ದ ದುರ್ಯೋಧನ, ಚೊಚ್ಚಿಲ ಹೆರಿಗೆಯ ಸಂಭ್ರಮದಲ್ಲಿ ಹುಬ್ಬಳ್ಳಿಯ ತೌರುಮನೆಯಲ್ಲಿರುವ ಪತ್ನಿ ನಿರ್ಮಲಾ, “ಕೌರವ ಜೋರಾಗ್ಲಿ ಹಾಂ……” ಎಂದು ಹರೆಸಿ ಕಳಿಸಿದ ಅವ್ವ, ಮುಗುಳ್ನಕ್ಕು ಅನುಮೋದಿಸಿದ ಅಪ್ಪ, ಮನೆಯಲ್ಲಿ ಉಳಿದ ತಮ್ಮ-ತಂಗಿಯರೆಲ್ಲ ಸಾಲು ಸಾಲಾಗಿ ನೆನಪಾಗತೊಡಗಿದರು…… ನಾವಿಕ ಮಾತ್ರ ಒಂದೂ ಮಾತನಾಡದೇ ಜೋರಾಗಿ ಹುಟ್ಟು ಹಾಕುವ ಕಾಯಕದಲ್ಲೇ ನಿರತನಾಗಿದ್ದ. “ದೋಣಿಗೆ ತೂತು ಬಿದ್ದದ್ದು ನಿನಗೆ ಗೊತ್ತಿಲ್ವಾಗಿತ್ತೇನೋ?” ಎಂದು ಯಾರೋ ಕೇಳಿದ ಪ್ರಶ್ನೆಗೆ ಉತ್ತರಿಸುವ ಸೌಜನ್ಯವನ್ನೂ ತೋರಲಿಲ್ಲ. ನದಿಯ ಅರ್ಧಕ್ಕಿಂತ ಹೆಚ್ಚು ಭಾಗ ಕ್ರಮಿಸಿದ್ದೆವು. ಮರಳಿ ಹಿಂದೆ ಸಾಗುವ ಪ್ರಶ್ನೆಯೇ ಇಲ್ಲ. ಇನ್ನೂ ಅರ್ಧದಷ್ಟು ನದಿಯನ್ನು ದಾಟಬೇಕಿದೆ. ಸುಲಭದ ಮಾತಲ್ಲ. ಸಂಕಷ್ಟಕ್ಕೆ ನಾವೆಲ್ಲ ಮುಖಾಮುಖಿಯಾಗಿರುವುದು ಸ್ಪಷ್ಟವಾಗಿತ್ತು. ಅಂಜತ್ತಲೇ ಹೊರಳಿ ನೋಡಿದೆ. ಸಮುದ್ರದ ಮೀನುಗಾರಿಕೆಗೆ ಹೊರಟು ಬಂದು ದಂಡೆಯ ಕೊಂಚ ದೂರ ಲಂಗರು ಹಾಕಿ ನಿಂತಿರುವ ಮರ‍್ನಾಲ್ಕು ಬೋಟುಗಳು ಮಸುಕು ಮಸುಕಾಗಿ ಕಾಣಿಸಿದವು. ದಂಡೆಯನ್ನಂತೂ ಸುರಕ್ಷಿತ ತಲುಪುವುದು ಅಸಾಧ್ಯ. ನಡುವೆಯೇ ನಿಂತ ಬೋಟುಗಳನ್ನಾದರೂ ಮುಟ್ಟಬಹುದೇನೋ ಎಂಬ ಯೋಚನೆ ಬಂದದ್ದೇ ನಾವಿಕನಿಗೆ ಸೂಚನೆ ನೀಡಿದೆ, ಎಲ್ಲರೂ ಬೋಟುಗಳನ್ನು ಗಮನಿಸಿದರು. ನಾವಿಕನೂ ಅತ್ತ ಹೊರಳಿಸಿ ದೋಣಿಯನ್ನು ಮುನ್ನಡೆಸತೊಡಗಿದ. ತುಂಬಿದ ನೀರನ್ನು ಮೊಗೆದು ಹಾಕುವ ಕಾಯಕವನ್ನು ಗೆಳೆಯರು ಮುಂದುವರಿಸಿದ್ದರು. ಮಸುಕು ಮಸುಕಾಗಿ ಕಾಣಿಸುತ್ತಿದ್ದ ಬೋಟುಗಳು ಸಮೀಪಿಸುತ್ತಿದ್ದಂತೆ ಸ್ಪಷ್ಟವಾಗತೊಡಗಿದವು. ತೀರ ಸನಿಹಕ್ಕೆ ಬಂದಾಗ ಲಂಗರು ಇಳಿಬಿಟ್ಟ ಹಗ್ಗವನ್ನು ಯಾರೋ ಕೈಚಾಚಿ ಹಿಡಿದುಕೊಂಡ ಕ್ಷಣದಲ್ಲಿ ಎಲ್ಲರೂ ಹೋದ ಜೀವ ಬಂದಂತೆ ಹಗುರಾದೆವು. ಕಷ್ಟಪಟ್ಟು ಹಗ್ಗದೊಡನೆ ಸರ್ಕಸ್ಸು ಮಾಡದೇ ವಿಧಿ ಇರಲಿಲ್ಲ. ನಾವೆಲ್ಲ ಬೋಟುಗಳನ್ನು ಸೇರಿದ ಬಳಿಕ ನಾವಿಕ ಆಚೆ ದಂಡೆಗೆ ಕೂಗು ಹಾಕಿ ಅಲ್ಲಿರುವ ನಾವಿಕರನ್ನು ಕರೆದ. ಯಾರೋ ಪುಣ್ಯಾತ್ಮರು ನಮ್ಮ ಸಂಕಷ್ಟವನ್ನು ತಿಳಿದು ಕನಿಕರ ತೋರಿ ಬೇರೆ ನಾವೆಯನ್ನು ತಂದು ನಮ್ಮನ್ನು ಆಚೆ ದಡಕ್ಕೆ ಮುಟ್ಟಿಸಿದರು. ನಮ್ಮನ್ನು ಕರೆದು ತಂದ ನಾವಿಕ ಮಾತ್ರ ತನ್ನ ನಾವೆಯನ್ನು ತನ್ನ ಪಾಡಿಗೆ ಬಿಟ್ಟು ನಮ್ಮೊಡನೆ ಆಟದ ಡೇರೆಯತ್ತ ಹೊರಟಾಗ ಯಾರೋ ಆತನನ್ನು ಪ್ರಶ್ನಿಸಿದರು. “ಹೌದು…….ಎಲ್ಲಿ ಕಟ್ಟ ಹಾಕಿ ಬಂದ್ಯೋ ಇಲ್ವೋ ನಿನ್ನ ದೋಣಿಯ……….. ಅದರ ತಳಕ್ಕೆ ತೂತು ಇರೋದು ಗೊತ್ತಿದ್ರೂ ನಮ್ಮ ಕರಕೊಂಬಂದ್ಯಲ್ಲ ಮಾರಾಯ….” ಎಂದು ಬೇಸರ ತೋಡಿಕೊಂಡರು. ಆತ ಅತ್ಯಂತ ನಿರ್ಭಾವುಕನಾಗಿ “ನಂಗೇನ ಗೊತ್ತಿತ್ರಾ…… ಅದು ನನ್ನ ದೋಣಿ ಅಲ್ಲ…….. ನಿಮ್ಮಂಗೇ ನಾನು ಆಟ ನೋಡುಕ ಬಂದವ…….” ಎಂದು ಉತ್ತರಿಸಿದಾಗ ನಮಗೆಲ್ಲ ಮತ್ತೊಮ್ಮೆ ನೀರಿಗೆ ಬಿದ್ದು ಮುಳುಗಿಯೇ ಹೋದಂಥ ಅನುಭವವಾಯಿತು! ನಡೆದ ಎಲ್ಲ ವಿದ್ಯಮಾನಗಳಿಂದ ಗೊಂದಲಗೊಂಡಿದ್ದ ನಾನು ಈ ಎಲ್ಲ ಅಧ್ವಾನಗಳನ್ನು ಮನಸ್ಸಿನಿಂದ ತೊಡೆದು ಹಾಕಿ ಪಾತ್ರದ ಕುರಿತು ಯೋಚಿಸತೊಡಗಿದೆ. ಸಂಪೂರ್ಣ ತನ್ಮಯನಾಗಿ ಪಾತ್ರ ನಿರ್ವಹಿಸಿದೆ. ಪ್ರದರ್ಶನ ಯಶಸ್ವಿಯಾಯಿತು. ಪ್ರೇಕ್ಷಕರ ಚಪ್ಪಾಳೆ, ಸಿಳ್ಳೆಗಳ ಪ್ರತಿಕ್ರಿಯೆಯಿಂದ ನಾನು ಯಶಸ್ವಿಯಾದೆ ಎಂಬ ಸಮಾಧಾನವಾಯಿತು. ಸಹ ಕಲಾವಿದರೂ ಮುಕ್ತ ಮನಸ್ಸಿನಿಂದ ಪ್ರಸಂಶೆಯ ಮಾತನಾಡಿದರು. ಪಾತ್ರ ಮುಗಿಸಿ ಒಳಗೆ ಬಂದಾಗಲೂ ಚೌಕಿ ಮನೆಗೆ ಬಂದ ಅನೇಕ ಸಹೃದಯರು ಮೆಚ್ಚುಗೆಯ ಮಾತನಾಡಿ ಅಭಿನಂದಿಸಿದರು. ನಾನು ಹೆಮ್ಮೆಯಿಂದ ಬೀಗಿದೆ! ಆದರೆ ಮರುಕ್ಷಣವೇ ತನ್ನ ವೇಷ ಕಳಚುತ್ತಿದ್ದ ಧರ್ಮರಾಯನ ಪಾತ್ರಧಾರಿ ನನ್ನನ್ನು ಉದ್ದೇಶಿಸಿ, “ನೀವು ಹಾಗೆಲ್ಲ ಮಾತಾಡಬಾರದ್ರಿ……….ಎದುರು ಪಾತ್ರಗಳನ್ನು ಗೌರವಿಸಿ ಮಾತನಾಡಬೇಕು……ಇದು ಒಳ್ಳೆ ಕಲಾವಿದರ ಲಕ್ಷಣವಲ್ಲ……” ಎಂದು ಕಟುವಾಗಿ ಮಾತಾಡಿದ. ಪಾತ್ರ ಯಶಸ್ವಿಯಾಯಿತೆಂದು ಉಬ್ಬಿಹೋದ ನಾನು ಗಾಳಿ ಬಿಟ್ಟ ಬಲೂನಿನಂತೆ ಒಮ್ಮೆಯೇ ಕುಸಿದು ಹೋದೆ. “ಏನು ತಪ್ಪಾಯಿತು?” ಎಂದೆ. “ನಾನು ದೇವಸ್ಥಾನಗಳಲ್ಲಿ ಪೂಜೆ ಮಾಡುವುದಕ್ಕೇ ಯೋಗ್ಯ ಎಂದು ಹಂಗಿಸಿದರಲ್ಲ? ಅದು ಸರಿಯಲ್ಲ” ಎಂದು ಉತ್ತರಿಸಿದ. ನನಗೆ ಏನು? ಏತ್ತ? ಎಂಬುದೇ ತಿಳಿಯದೇ ಗೊಂದಲಗೊಂಡೆ. ಅಷ್ಟೂ ಜನರ ಮುಂದೆ ಅವನ ನಿಷ್ಠುರವಾದ ನುಡಿಗಳು ನನ್ನನ್ನು ಸಿಗ್ಗಾಗಿಸಿದವು. ನಡೆದದ್ದು ಇಷ್ಟೆ.. ಪಾಂಡವರೈವರನ್ನೂ ಒಂದೊಂದು ಬಗೆಯಿಂದ ನಿಂದಿಸಿ ಅವರ ದೌರ್ಬಲ್ಯವನ್ನು ಎತ್ತಿ ಹೇಳುವುದು ದುರ್ಯೋಧನನ ಪಾತ್ರಕ್ಕೆ ಪೂರಕವಾದದ್ದೇ. ಹಾಗೆಯೇ ವಿರಾಟ ನಗರಿಯಲ್ಲಿ ಪೂಜಾರಿಯಾಗಿ ವೇಷ ಮರೆಸಿಕೊಂಡಿದ್ದ ಧರ್ಮರಾಯನ ಮೋಸವನ್ನು ಎತ್ತಿ ಹೇಳಿ ಸಹಜವಾಗಿ ನಾನು ಕೆಣಕಿದ್ದೆ. ಇದರಲ್ಲಿ ಪಾತ್ರಪೋಷಣೆಯಲ್ಲದೆ ನನಗೆ ಬೇರೆ ದುರುದ್ದೇಶವಿರಲಿಲ್ಲ. ಆದರೆ ಧರ್ಮರಾಯ ಪಾತ್ರಧಾರಿ ಇಷ್ಟೊಂದು ಮನಸ್ಸಿಗೆ ಹಚ್ಚಿಕೊಳ್ಳಲು ಕಾರಣವೇನೆಂದು ಸಹಕಲಾವಿದರು ನನಗೆ ತಿಳಿಸಿ ಹೇಳಿದಾಗಲೇ ನನಗೆ ನನ್ನ ತಪ್ಪಿನ ಅರಿವಾಯಿತು……….. ಧರ್ಮರಾಯನ ಪಾತ್ರ ಮಾಡಿದವರು ಬೀರಪ್ಪ ಗುನಗ ಎಂಬುವವರು. ಅವರು ವೃತ್ತಿಯಿಂದ ಗ್ರಾಮ ದೇವತೆಯ ಪೂಜಾರಿಯಂತೆ. ನನಗೆ ಇದು ಗೊತ್ತಿರಲಿಲ್ಲ. ತನ್ನ ವೃತ್ತಿಯನ್ನೇ ಉಲ್ಲೇಖಿಸಿ ಮಾತನಾಡಿದುದ್ದಕ್ಕೆ ಆತ ಬೇಸರಗೊಂಡಿದ್ದ ಎಂಬುದು ನಂತರ ತಿಳಿಯಿತು. ನಾನು ವೇಷ ಕಳಚಿದ ಬಳಿಕ ಆತನಿಗೆ ವಾಸ್ತವವನ್ನು ವಿವರಿಸಿ ಸಾಂತ್ವನ ಹೇಳಿದೆ. ಆತ ಸಮಾಧಾನಗೊಂಡ. ಮಾತ್ರವಲ್ಲದೆ ಬೀರಪ್ಪ ಗುನಗ ಉತ್ತಮ ಪ್ರಸಾದನ ಕಲಾವಿದನೂ ಆದುದರಿಂದ ಮುಂದಿನ ದಿನಗಳಲ್ಲಿ ಹಲವು ಯಕ್ಷಗಾನ ಪ್ರದರ್ಶನಗಳಲ್ಲಿ ನನಗೆ ಮೇಕಪ್ ಮಾಡಿ ಪಾತ್ರವನ್ನು ರೂಪಿಸಿ ನೆರವಾಗಿದ್ದಾನೆ. ಆಗೆಲ್ಲ ತದಡಿಯ ಅಂದಿನ ಘಟನೆಯನ್ನು ಸ್ಮರಿಸಿಕೊಂಡು ನಾವು ನಕ್ಕು ಹಗುರಾಗುತ್ತಿದ್ದೆವು. ಹಗಲು ನಿದ್ದೆ ಮುಗಿಸಿ ನಾಳೆ ಕಾಲೇಜು ಉಪನ್ಯಾಸಕ್ಕೆ ಸಜ್ಜುಗೊಳ್ಳುವ ಅನಿವಾರ್ಯತೆಯಿಂದ ನಾನು ಊರಿಗೆ ಹೋಗದೆ ಗೆಳೆಯರಿಂದ ಬೀಳ್ಕೊಂಡು ಅಂಕೋಲೆಯ ಬಸ್ಸು ಹಿಡಿದೆ. ಮಧ್ಯಾಹ್ನದ ನಾಲ್ಕು ಗಂಟೆಯ ಹೊತ್ತಿಗೆ ನಾನು ಗಾಢ ನಿದ್ದೆಯಲ್ಲಿರುವಾಗ ಟೆಲಿಗ್ರಾಮ ಸಂದೇಶವೊಂದು ನನ್ನನ್ನು ಹುಡುಕಿ ಬಂದಿತು. ನನ್ನ ಭಾವ ಕೃಷ್ಣರಾವ್ ಸುಲಾಖೆ “ಮೇಲ್ ಚೈಲ್ಡ ಬೋಥ್ ದಿ ಮದರ್ ಎಂಡ್ ಚೈಲ್ಡ್ ಆರ್ ಸೇಫ್….” ಎಂಬ ತಂತಿ ಸಂದೇಶ ಕಳುಹಿಸಿದ್ದರು. ಅಂದು ೧೯೮೫ ರ ಏಪ್ರಿಲ್ ಇಪ್ಪತ್ನಾಲ್ಕನೇಯ ತಾರೀಖು. ನನಗೆ ಗಂಡು ಮಗು ಹುಟ್ಟಿದ ಸಂತೋಷ ತಂದ ದಿನ. ಮನೆಯಲ್ಲಿ ನಾನೊಬ್ಬನೇ ಇದ್ದುದರಿಂದ ಸಂತಸ ತಡೆಯಲಾಗದೆ ತಂತಿ ಸಂದೇಶವನ್ನು ಮುದ್ದಿಸಿ ಮತ್ತೊಮ್ಮೆ ದುರ್ಯೋಧನನ ದಿಗಿಣ ಹೊಡೆದೆ! ಅದು ದೇಶದ ನೆಚ್ಚಿನ ಕ್ರಿಕೆಟ್ ತಾರೆ ಸಚಿನ್ ತೆಂಡೂಲ್ಕರ್ ಹುಟ್ಟಿದ ದಿನವೇ ಆದುದರಿಂದ ನನ್ನ ಜೇಷ್ಠ ಪುತ್ರನಿಗೂ ‘ಸಚಿನ್ ಕುಮಾರ್’ ಎಂದೇ ಹೆಮ್ಮೆಯಿಂದ ನಾಮಕರಣ ಮಾಡಲಾಯಿತು. ರಾಮಕೃಷ್ಣ ಗುಂದಿ

Read Post »

ಅಂಕಣ ಸಂಗಾತಿ

ನಾನು ಮೊಟ್ಟಮೊದಲು ಬಾವಿ ನೋಡಿದ್ದು ನಾವು ಬಾಡಿಗೆಗಿದ್ದ ಚಾಮುಂಡಿಪುರಂನ ಮನೆಯಲ್ಲಿಯೇ.  ನಲ್ಲಿಯಲ್ಲಿ ಧಾರಾಳ ಕಾವೇರಿ ನೀರು ಬಂದರೂ ಅಲ್ಲಿದ್ದ ಮನೆ ಮಾಲಕಿ ಮಡಿಹೆಂಗಸು ಅಜ್ಜಿ ಬಾವಿ ನೀರನ್ನೇ ಸೇದಿ ಉಪಯೋಗಿಸುತ್ತಿದ್ದುದು ಚಿಕ್ಕ ಮಕ್ಕಳಾದ ನಮಗೆ ಕೌತುಕದ ವಿಷಯ.

Read Post »

ಅಂಕಣ ಸಂಗಾತಿ, ಸಾಧಕಿಯರ ಯಶೋಗಾಥೆ

ಸಾಧಕಿಯರ ಯಶೋಗಾಥೆ

‘ ಸಾಧಕಿಯರ ಯಶೋಗಾಥೆ’ ಮಾಲಿಕೆಯನ್ನು ಸಂಗಾತಿ ಓದುಗರಿಗಾಗಿ ಸರಣಿ ರೂಪದಲ್ಲಿ ಪ್ರಕಟಿಸಲಿದೆ. ಈ ಸರಣಿ ಮಾಲಿಕೆಯನ್ನು ಲೇಖಕಿ ಡಾ. ಸುರೇಖಾ ಜಿ ರಾಠೋಡ ಪ್ರತಿವಾರ ಬರೆಯಲಿದ್ದಾರೆ

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ—50 ಯಕ್ಷರಂಗದ ಮಾನಾಪಮಾನಗಳು ೧೯೭೦-೮೦ ದಶಕವೆಂದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಯಕ್ಷಗಾನದ ಸುಗ್ಗಿಕಾಲ. ಅಪರೂಪಕ್ಕೆ ಕಾಣಲು ಸಿಗುವ ಸಿನೇಮಾ ಹೊರತು ಪಡಿಸಿದರೆ ಹಳ್ಳಿ-ಹಳ್ಳಿಗಳಲ್ಲಿ ನಡೆಯುವ ಯಕ್ಷಗಾನ ಬಯಲಾಟ, ನಾಟಕ ಪ್ರದರ್ಶನಗಳೇ ಜನಸಾಮಾನ್ಯರಿಗೆ ಮನರಂಜನೆಯ ಪ್ರಮುಖ ಮಾದ್ಯಮಗಳಾಗಿದ್ದವು. ಎಲ್ಲ ಆಟ-ನಾಟಕಗಳಿಗೂ ಸಮೃದ್ಧವಾದ ಪ್ರೇಕ್ಷಕ ಸಮುದಾಯದ ಹಾಜರಿ ಇರುತ್ತಿತ್ತು. ಜಿಲ್ಲೆಯ ಕೆರೆಮನೆ, ಕರ್ಕಿ, ಬಚ್ಚಗಾರು ಇತ್ಯಾದಿ ವೃತ್ತಿಮೇಳಗಳ ತಿರುಗಾಟವಲ್ಲದೆ ದಕ್ಷಿಣದ ಕಡೆಯಿಂದಲೂ ಸೂರತ್ಕಲ್, ಧರ್ಮಸ್ಥಳ, ಮೂಲ್ಕಿ, ಮಂಗಳೂರು, ಕೋಟ ಮುಂತಾದ ಮೇಳಗಳು ಕನಿಷ್ಟ ವರ್ಷಕ್ಕೊಂದು ತಿರುಗಾಟವನ್ನಾದರೂ ಪೂರೈಸಿ ಜಿಲ್ಲೆಯ ಜನರ ಮನರಂಜನೆಯ ಹಸಿವು ಹಿಂಗಿಸುವಲ್ಲಿ ಸಹಕರಿಸುತ್ತಿದ್ದವು! ಆಯಾ ಊರಿನ ಕೆಲವರು ತಿರುಗಾಟದ ವೃತ್ತಿ ಮೇಳದಾಟಗಳನ್ನು ಕಂಟ್ರಾಕ್ಟು ಹಿಡಿದು ಕಾಸು ಮಾಡಿಕೊಳ್ಳುವ ಯೋಜನೆಯನ್ನೂ ಹಾಕಿಕೊಳ್ಳುತ್ತಿದ್ದರು. ಕೆಲವು ಬಾರಿ ನಿರೀಕ್ಷಿತ ಲಾಭವಾಗದೆ ನಷ್ಟ ಹೊಂದಿದ್ದರೂ ಮೇಳದಾಟಗಳನ್ನು ಗುತ್ತಿಗೆ ಹಿಡಿಯುವ ಪರಂಪರೆ ಮಾತ್ರ ಇಂದಿಗೂ ಮುಂದುವರಿದಿರುವುದು ಜಿಲ್ಲೆಯ ಜನರ ಯಕ್ಷ ಪ್ರೀತಿಯ ದ್ಯೋತಕವೇ ಆಗಿದೆ. ೧೯೮೦ ರ ಸಮಯ. ಅಂಕೋಲೆಯಲ್ಲಿ “ಅಮೃತೇಶ್ವರಿ” ಮೇಳದ ಆಟ. ಆ ದಿನಗಳಲ್ಲಿ ಅಂಕೋಲೆಯ ಸೃದಯರಿಗೆ ಅಮೃತೇಶ್ವರಿ ಮೇಳವು ಅತ್ಯಂತ ಪ್ರಿಯವಾದ ತಿರುಗಾಟದ ಮೇಳವಾಗಿತ್ತು. ಇಲ್ಲಿಯ “ಗುಂಡಬಾಳಾ ಶೆಟ್ಟಿ” ಎಂಬ ದಿನಸಿ ವ್ಯಾಪಾರಿಯೊಬ್ಬರು ಬಹುತೇಕ ಮೇಳದಾಟಗಳನ್ನು ಕರೆಸಿ ಆಟವಾಡಿಸುತ್ತಿದ್ದರು. ಯಕ್ಷಗಾನವನ್ನು ಕಲಾವಿದರನ್ನು ತುಂಬಾ ಪ್ರೀತಿಸುವ ಶೆಟ್ಟರು ಇಲ್ಲಿನ ಹವ್ಯಾಸಿ ಕಲಾವಿದರನ್ನೂ ಸಂಘಟಿಸಿ ಆಗಾಗ ಆಟ ಆಡಿಸಿ ಪ್ರೋತ್ಸಾಹಿಸುತ್ತಿದ್ದರು. ನನ್ನ ಪಾತ್ರ ನಿರ್ವಹಣೆಯ ಕುರಿತಾಗಿಯೂ ತುಂಬ ಅಭಿಮಾನ ಪಡುತ್ತಿದ್ದರು. ಅವರಿಗೆ ನನ್ನನ್ನು ವೃತ್ತಿ ಮೇಳದ ಆಟದಲ್ಲಿ ಅತಿಥಿ ಕಲಾವಿದನನ್ನಾಗಿ ಪರಿಚಯಿಸಬೇಕೆಂಬ ಬಹುದೊಡ್ಡ ಆಸೆಯಿತ್ತು. ಇದೇ ಕಾರಣದಿಂದ ಅಮೃತೇಶ್ವರಿ ಮೇಳದಲ್ಲಿ ನನ್ನ ಪಾತ್ರವೊಂದನ್ನು ನಿಶ್ಚಯಿಸಿ ಆಟದ ಸಿದ್ಧತೆ ಮಾಡಿದರು. ರಾಮಚಂದ್ರ ಹೆಗಡೆ ಚಿಟ್ಟಾಣಿ, ಗೋಡೆ ನಾರಾಯಣ ಹೆಗಡೆ ಮುಂತಾದ ಅತಿರಥ ಮಹಾರಥರು ಈ ಮೇಳದಲ್ಲಿ ಮುಖ್ಯ ಕಲಾವಿದರಾಗಿದ್ದರು. ಉಪ್ಪೂರರು ಮುಖ್ಯ ಭಾಗವತರಾಗಿದ್ದರೆ ಕಾಳಿಂಗ ನಾವುಡರು ಅದೇ ಆಗ ಭಾಗವತಿಕೆಗೆ ಆರಂಭಿಸಿ ಸಭಾಲಕ್ಷಣ ಭಾಗವನ್ನಷ್ಟೆ ಪೂರೈಸುತ್ತಿದ್ದರು. ರಾತ್ರಿಯ ಮೊದಲ ಪ್ರಸಂಗ “ಬಬ್ರುಸೇನ ವಧೆ” ಗೋಡೆಯವರ ಅರ್ಜುನ, ಯಲ್ಲಾಪುರದ ಕಡೆಯ ಹೆಗಡೆಯೋರ್ವರ ಭೀಮ, ನನ್ನದು ಕೃಷ್ಣ. ಚಿಟ್ಟ್ಟಾಣಿಯವರು ನನ್ನ ಮೇಲಿನ ಪ್ರೀತಿಯಿಂದ ನನ್ನನ್ನು ಭಾಗವತ ಉಪ್ಪೂರವರಿಗೆ ಪರಿಚಯಿಸಿದರು. ಎರಡನೆಯ ವೇಷಧಾರಿಯಾಗಿ ತಾವು ಕುಳಿತುಕೊಳ್ಳುವ ಚೌಕಿಮನೆಯ ಸ್ಥಳದಲ್ಲಿ ನನ್ನನ್ನು ಕುಳ್ಳಿರಿಸಿ ಮೇಳದ ಮೇಕಪ್ ಕಲಾವಿದರಿಂದ ನನಗೆ ಬಣ್ಣ ಮಾಡಿಸಿ ವೇಷವನ್ನು ಸಿದ್ಧಗೊಳಿಸಿ ನನಗೆ ತುಂಬ ಸಹಕಾರ ನೀಡಿದರು. ಪ್ರಚಂಡ ಜನದಟ್ಟಣೆಯ ಪ್ರದರ್ಶನವಾಯಿತು! ನಾನು ವೇಷ ಕಳಚಿದ ಬಳಿಕ ತರುಣ ಭಾಗವತರಾದ ಕಾಳಿಂಗ ನಾವುಡರನ್ನು ಪರಿಚಯಿಸಿಕೊಂಡೆ. ಸ್ನೇಹದಿಂದ ಹೊರಗೆ ತಿರುಗಾಡುತ್ತ ಆಟದ ದೆಸೆಯಿಂದ ಬಂದ ಚಹಾದಂಗಡಿಯಲ್ಲಿ ಚಹಾ ಕುಡಿದು ಯಕ್ಷಗಾನ ಕಲೆಯ ಕುರಿತು ಮಾತನಾಡಿದೆವು. ಮಾತಿನ ಮಧ್ಯೆ ನಾನು ಯಕ್ಷಗಾನ ಪ್ರಸಂಗ ರಚಿಸಿದ ಸಂಗತಿ ಕೇಳಿ ತಿಳಿದ ನಾವುಡರು ಅದನ್ನು ನೋಡುವ ಕುತೂಹಲದಿಂದ ನಮ್ಮ ಮನೆಗೆ ಬರಲು ಇಚ್ಛಿಸಿದರು. ರಾತ್ರಿಯ ಎರಡನೆಯ ಪ್ರಸಂಗ ಆರಂಭವಾದ ಹೊತ್ತಿನಲ್ಲಿ ನಾನು ನಾವುಡರನ್ನು ನನ್ನ ಬೈಕಿನಲ್ಲಿ ಕರೆದುಕೊಂಡು ಆಗ ನಾನು ವಾಸಿಸುತ್ತಿದ್ದ “ಮುಲ್ಲಾ ಬಾಡಾ” ಭಾಗದ ನನ್ನ ಮನೆಗೆ ಕರೆದೊಯ್ದೆ. ನಾನು ಬರೆದ “ವೀರ ವಾಲಿ” ಪ್ರಸಂಗದ ಹಸ್ತಪ್ರತಿಯನ್ನು ಪರಿಶೀಲಿಸಲು ಅವರಿಗೆ ನೀಡಿದೆ. ಬೆಳಕು ಹರಿಯುವವರೆಗೆ ಮಾತನಾಡಿ ನಸುಕಿನಲ್ಲಿ ಅವರನ್ನು ಮೇಳದ ವಾಹನಕ್ಕೆ ತಲುಪಿಸಲು ನಾನು ನಾವುಡರನ್ನು ಮತ್ತೆ ಆಟ ನಡೆಯುತ್ತಿದ್ದ ಜೈಹಿಂದ್ ಮೈದಾನಕ್ಕೆ ಕರೆದು ತಂದೆ. ಆಟ ಮುಗಿದು ಮೇಳವು ಮುಂದಿನ ಊರಿಗೆ ಹೊರಡುವ ಸನ್ನಾಹದಲ್ಲಿತ್ತು. ಆಗಲೇ ತೀರ ಅಪ್ರಿಯವಾದ ಒಂದು ಸಂಗತಿ ನನ್ನ ಗಮನಕ್ಕೆ ಬಂದಿತು. ನಾನು ದಲಿತನೆಂಬ ಕಾರಣದಿಂದ ಮೇಳಕ್ಕೆ ಮೈಲಿಗೆಯಾಗಿದೆ ಎಂಬ ಸಂಗತಿ ಚೌಕಿ ಮನೆಯಲ್ಲಿ ರಾತ್ರಿಯೆಲ್ಲ ಚರ್ಚೆಯಾಯಿತೆಂದೂ ಮೇಳದ ಕಂಟ್ರಾಕ್ಟು ಹಿಡಿದ ಶೆಟ್ಟರು ತಪ್ಪು ಕಾಣಿಕೆ ನೀಡಿ ಪರಿಹಾರ ಮಾಡಿಕೊಡುವಂತೆ ಮೇಳದ ವ್ಯವಸ್ಥಾಪಕರು ಗುಂಡಬಾಳಾ ಶೆಟ್ಟರನ್ನು ಒತ್ತಾಯಿಸಿ ತಪ್ಪು ಕಾಣಿಕೆ ಸ್ವೀಕರಿಸಿದರೆಂದೂ ಕೆಲವು ನನ್ನ ಪರಿಚಿತ ಜನರು ನನಗೆ ತಿಳಿಸಿದಾಗ ನನಗೆ ತುಂಬಾ ಸಂಕಟವಾಯಿತು. ನಾನು ವೃತ್ತಿ ಮೇಳದಲ್ಲಿ ಅತಿಥಿ ಕಲಾವಿದನಾಗಿ ಪಾತ್ರವಹಿಸುವುದರಿಂದಲೇ ನನಗೆ ವಿಶೇಷ ಗೌರವ ಪ್ರಾಪ್ತವಾಗುವ ನಂಬಿಕೆಯಾಗಲೀ ಹಂಬಲವಾಗಲೀ ನನಗಿರಲಿಲ್ಲ. ಜನರ ಒತ್ತಾಸೆಗೆ ಮಣಿದು ಸಹಜವಾಗಿ ಒಪ್ಪಿಕೊಂಡು ಭಾಗವಹಿಸಿದ್ದೆ. ಅದು ಇಂಥ ಅವಮಾನಕ್ಕೆ ಕಾರಣವಾದದ್ದು ನನ್ನ ಯಕ್ಷರಂಗದ ಬದುಕಿನಲ್ಲಿ ಬಹುದೊಡ್ಡ ಗಾಯವಾಗಿ ಉಳಿದು ಹೋಯಿತು! ನಂತರದ ವರ್ಷಗಳಲ್ಲಿ ಹಲವು ಭಾರಿ ಹಲವಾರು ವೃತ್ತಿ ಮೇಳಗಳಲ್ಲಿ ಅತಿಥಿ ಕಲಾವಿದನಾಗಿ ಭಾಗವಹಿಸಿದೆನಾದರೂ ಆ ಎಲ್ಲ ಕ್ಷಣಗಳ ಸಂತೋಷದ ನಡುವೆಯೂ ಅಂದಿನ ಕಹಿ ನೆನಪು ಮರೆಯಲಾಗದಂತೆ ಉಳಿದಿದೆ. ಯಕ್ಷಗಾನ ಹವ್ಯಾಸಿ ತಂಡದೊಡನೆ ಪಾತ್ರ ನಿರ್ವಹಿಸುವಾಗ ಹಲವು ವಿಧದಲ್ಲಿ ಹೊಂದಾಣಿಕೆಗೆ ನಮ್ಮನ್ನು ನಾವು ಅಣಿಗೊಳಿಸುವುದು ಅನಿವಾರ್ಯ. ಭಿನ್ನ ಅಭಿರುಚಿಯ ಆಚಾರ ವಿಚಾರಗಳ ಹಿನ್ನೆಲೆಯಿಂದ ಬಂದ ಕಲಾವಿದರುಗಳಲ್ಲಿ ಹೊಂದಾಣಿಕೆ ಕಷ್ಟವೇ ಆದರೂ ಹೊಂದಾಣಿಕೆಯಿಲ್ಲದೆ ಕಲಾತಂಡಗಳನ್ನು ಮುನ್ನಡೆಸುವುದು ಕಷ್ಟವೇ ಆಗುತ್ತದೆ. ಇದು ನಾವು ನೀಡುವ ಪ್ರದರ್ಶನದ ಮೇಲೂ ಪರಿಣಾಮ ಬೀರಬಹುದು. ಕಲಾವಿದರ ನಂಬಿಕೆ, ಅಪನಂಬಿಕೆಗಳೂ ಒಟ್ಟಾರೆಯಾಗಿ ತಂಡವನ್ನು ಪ್ರಭಾವಿಸುವ ಸಂದರ್ಭಗಳೂ ಇಲ್ಲದಿಲ್ಲ. ಶಿರ್ಶಿ ತಾಲೂಕಿನ ಮತ್ತಿಘಟ್ಟ ಎಂಬ ಕಾಡಿನಿಂದ ಆವೃತವಾದ ಹಳ್ಳಿಯಲ್ಲಿ ಒಂದು ಆಟ. ಅಂಕೋಲೆಯ ನಮ್ಮ ಕಲಾತಂಡವು ಅಲ್ಲಿಯ ಜಮೀನ್ದಾರರೊಬ್ಬರ ವಿನಂತಿಯ ಮೇರೆಗೆ ‘ಗದಾಯುದ್ಧ’ ಪ್ರಸಂಗವನ್ನು ಪ್ರದರ್ಶಿಸಬೇಕಿತ್ತು. ಸಂಜೆಯ ಹೊತ್ತಿಗೆ ಮತ್ತಿಘಟ್ಟ ತಲುಪಿದ ತಂಡದ ಸದಸ್ಯರೆಲ್ಲ ಆಟ ನಡೆಯುವ ಸ್ಥಳವನ್ನು ಸೇರಿದ ಬಳಿಕ ಕೊಂಚ ವಿಶ್ರಾಂತಿ ಪಡೆದು ಕತ್ತಲಾಗುವ ಹೊತ್ತಿಗೆ ಊಟಕ್ಕೆ ಹೊರಟೆವು. ನಮಗೆ ಆಹ್ವಾನ ನೀಡಿದ ಹೆಗಡೆಯವರ ಮನೆಯಲ್ಲಿಯೇ ನಮಗೆ ಊಟಕ್ಕೆ ವ್ಯವಸ್ಥೆಯಾಗಿತ್ತು. ಹತ್ತಾರು ಎಕರೆ ಅಡಿಕೆ ತೆಂಗುಗಳ ತೋಟದ ಒಡೆಯರಾಗಿದ್ದ ಹೆಗಡೆಯವರು ಊರಿನಲ್ಲಿಯೇ ಬಹು ಜನಪ್ರಿಯ ವ್ಯಕ್ತಿಯೆಂಬುದು ತಿಳಿಯಿತು. ಮನೆಯಲ್ಲಿ ಯಾವುದೋ ದೇವತಾಕಾರ್ಯ ನೆರವೇರಿಸಿದ ಹೆಗಡೆ ರಾತ್ರಿಯ ಜಾಗರಣೆಗಾಗಿ ಯಕ್ಷಗಾನ ಪ್ರದರ್ಶನದ ಏರ್ಪಾಡು ಮಾಡಿ ನಮ್ಮನ್ನು ಆಹ್ವಾನಿಸಿದ್ದರು. ಯಕ್ಷಗಾನ ನಡೆಯುವ ರಂಗ ವೇದಿಕೆಯಿಂದ ಕೂಗಳತೆ ದೂರದಲ್ಲಿದ್ದ ಹೆಗಡೆಯವರ ಮನೆಗೆ ಹೋಗುವಾಗ ವಿಶಾಲವಾದೊಂದು ಗದ್ದೆ ಬಯಲನ್ನು ದಾಟಬೇಕಿತ್ತು. ಕಲಾ ತಂಡದ ಸದಸ್ಯರೆಲ್ಲ ಆಟದ ಕುರಿತು ಚರ್ಚಿಸುತ್ತ ಗದ್ದೆ ಹಾಳೆಯ ಮೇಲೆ ಸಾಲಾಗಿ ಹೊರಟಾಗ ದಾರಿಯ ಮಧ್ಯೆ ಗುಂಪಿನಲ್ಲಿ ಯಾರೋ ಒಬ್ಬರು “ಹೌದು……. ಈ ಮತ್ತಿಘಟ್ಟದಲ್ಲಿ ಮದ್ದು ಹಾಕುವ ರೂಢಿ ಇದೆಯಂತಲ್ಲ?” ಎಂದು ಒಂದು ಸಂದೇಹದ ಪಟಾಕಿ ಸಿಡಿಸಿದರು. ಮತ್ತೊಬ್ಬ “ಹೌದು……….. ಹೌದು ನಾನೂ ಕೇಳಿದ್ದೇನೆ….. ಈ ಊರೇ ಅದಕ್ಕೆ ಪ್ರಸಿದ್ಧವಾಗಿದೆ………..” ಎಂದು ತನ್ನದೂ ಒಂದನ್ನು ಎಸೆದ. ನಡೆಯುತ್ತಿದ್ದ ಗುಂಪು ನಡಿಗೆಯನ್ನು ನಿಲ್ಲಿಸಿ ಚರ್ಚೆಯನ್ನೇ ಮುಂದುವರಿಸಿತು. ತಂಡದಲ್ಲಿ ಹಿರಿಯರಾದ ವಿಠೋಬ ನಾಯಕ ವಂದಿಗೆ, ಮಂಗೇಶ ಗೌಡ, ಅನಂತ ಹಾವಗೋಡಿ, ಹಾಸ್ಯಗಾರ ವೆಂಕಟ್ರಮಣ ನಾಯ್ಕ ಮುಂತಾದ ಕಲಾವಿದರೂ ಹಿಮ್ಮೇಳದವರೂ ಇದ್ದಾರೆ. ಎಲ್ಲರಿಗೂ ಒಂದು ಅವ್ಯಕ್ತ ಭಯ ಶುರುವಾಯಿತಲ್ಲದೇ ಗೊತ್ತಿದ್ದ ಕೆಲವರು “ಮದ್ದು” ಹಾಕುವುದರಿಂದ ಆಗುವ ದುಷ್ಪರಿಣಾಮದ ಕುರಿತು ದೀರ್ಘವಾದ ವಿವರಣೆಯನ್ನೇ ನೀಡಲು ಆರಂಭಿಸಿದರು. ತಾವು ಕಣ್ಣಾರೆ ಕಂಡ ಅನುಭವಗಳನ್ನೇ ಕೆಲವರು ಭಯಾನಕವಾಗಿ ಬಣ್ಣಿಸಿದ ಪರಿಣಾಮ ತಂಡದ ಎಲ್ಲರಲ್ಲಿಯೂ ಅವ್ಯಕ್ತ ಭಯವೇ ಶುರುವಾಯಿತು. ಅಂತಿಮವಾಗಿ ನಡುದಾರಿಯಿಂದಲೇ ಎಲ್ಲರೂ ಮರಳಿ ರಂಗವೇದಿಕೆಯತ್ತ ಹೊರಡಲು ಸಿದ್ಧರಾದರು. ಹೆಗಡೆಯವರು ನಮಗಾಗಿ ಸಿದ್ಧಪಡಿಸಿದ ಅಡಿಗೆ ವ್ಯರ್ಥವಾಗುವುದರೊಂದಿಗೆ ಅವರ ಮನಸ್ಸಿಗೆ ನೋವಾಗಬಹುದೆಂಬ ಕಾಳಜಿಯೂ ಇಲ್ಲದೆ ನಾವೆಲ್ಲರೂ ಮರಳಿ ಬಂದೆವು. ಸಂಘಟಕರಿಗೆ ಸಂದೇಶ ತಲುಪಿಸಿ ರಂಗವೇದಿಕೆಯ ಸನಿಹವೇ ಒಲೆ ಹೂಡಿ ಒಂದಿಷ್ಟು ಅಕ್ಕಿ ಬೇಳೆ ಇತ್ಯಾದಿ ತರಿಸಿಕೊಂಡು ಎಂಥದೋ ಒಂದು ಅಡಿಗೆ ಮಾಡಿ ಊಟದ ಶಾಸ್ತ್ರ ಮುಗಿಸಿ ನಿರಾಳರಾದೆವು. ಮರುದಿನ ಮುಂಜಾನೆ ಆಟ ಮುಗಿಸಿ ಊರಿಗೆ ಹೊರಡಬೇಕೆನ್ನುವಾಗ ನನಗೊಂದು ಒತ್ತಾಯದ ಆಮಂತ್ರಣ ಬಂದಿತು. ನಮ್ಮ ಕಾಲೇಜಿನಲ್ಲಿ ನಮ್ಮ ಸಹೋದ್ಯೋಗಿಯಾಗಿದ್ದ ಹಿಂದಿ ಭಾಷಾ ಉಪನ್ಯಾಸಕ ಭಾಸ್ಕರ ಹೆಗಡೆ ಎಂಬುವವರ ಪತ್ನಿ ಜಯಲಕ್ಷ್ಮಿ ಹೆಗಡೆ ಎಂಬುವವರ ತವರೂರು ಇದು. ಕಳೆದ ತಿಂಗಳಷ್ಟೇ ಹೆರಿಗೆಯಾಗಿ ವಿಶ್ರಾಂತಿ ಪಡೆಯುತ್ತ ಇದ್ದವರು ಪರಿಚಿತನಾದ ನನಗೆ ಮುಂಜಾನೆಯ ಉಪಹಾರಕ್ಕೆ ಬರುವಂತೆ ಆಹ್ವಾನ ನೀಡಿ ಅವರ ತಂದೆಯ ಮೂಲಕ ಸಂದೇಶ ಕಳುಹಿಸಿದ್ದರು. ನಾನು ನಿರಾಕರಿಸಲಾಗದೆ ಸನಿಹದಲ್ಲೇ ಇದ್ದ ಅವರ ಮನೆಗೆ ಹೋಗಿ ಆತಿಥ್ಯ ಸ್ವೀಕರಿಸಿ ಅವರ ಯೋಗಕ್ಷೇಮ ವಿಚಾರಿಸಿಕೊಂಡೆ. ಜಯಲಕ್ಷ್ಮಿ ಹೆಗಡೆಯವರು ನಿನ್ನೆಯ ರಾತ್ರಿ ನಾವು ಹೆಗಡೆಯವರ ಮನೆಯ ಊಟ ನಿರಾಕರಿಸಿದ್ದಕ್ಕೆ ತುಂಬಾ ನೋವಿನಿಂದ ಮಾತನ್ನಾಡಿದರು. ಮತ್ತಿಘಟ್ಟದಲ್ಲಿ ‘ಮದ್ದು ಹಾಕುವ’ ಪದ್ಧತಿ ಬಹಳ ಹಿಂದಿನ ಕಾಲದಲ್ಲಿ ರೂಢಿಯಲ್ಲಿ ಇದ್ದುದು ನಿಜ. ಈಗ ಸಂಪೂರ್ಣವಾಗಿ ಅಂಥ ಪದ್ಧತಿ ನಿಂತು ಹೋಗಿದೆ. ಯಕ್ಷಗಾನ ಸಂಘಟಿಸಿದ ಹೆಗಡೆಯವರು ಆಟದ ಮೇಳದವರಿಗಾಗಿ ವಿಶೇಷವಾದ ಸಿಹಿ ಭೋಜನ ಸಿದ್ಧಪಡಿಸಿ ಕಾಯ್ದಿದ್ದರಂತೆ. ಕಲಾವಿದರೆಲ್ಲ ಹೀಗೆ ಸಂದೇಹಪಟ್ಟು ಊಟವನ್ನು ನಿರಾಕರಿಸಿದ್ದು ಅವರಿಗೆ ತುಂಬಾ ನೋವನ್ನು ಅವಮಾನವನ್ನುಂಟುಮಾಡಿದೆ. ಕೋಪದಿಂದ ಕಲಾವಿರಿಗಾಗಿ ಸಿದ್ಧಪಡಿಸಿದ ವಿಶೇಷ ಅಡಿಗೆಯನ್ನು ಅಡಿಕೆ ಮರದ ಬುಡಕ್ಕೆ ಚೆಲ್ಲಿಸಿದರಂತೆ………. ಇತ್ಯಾದಿ ವಿವರಿಸಿದ ಜಯಲಕ್ಷ್ಮಿಯವರು “ನಿಮ್ಮ ಕಲಾವಿದರೆಲ್ಲ ದೊಡ್ಡ ತಪ್ಪು ಮಾಡಿದರು ಸರ್….” ಎಂದು ನೊಂದು ನುಡಿದರು. ವಿದ್ಯಾವಂತರಾದ ನಾವೆಲ್ಲ ತಂಡದಲ್ಲಿದ್ದು ಇಂಥದೊಂದು ಅಪನಂಬಿಕೆಗೆ ಅವಕಾಶ ನೀಡಿ ಹಿರಿಯರ ಮನ ನೋಯಿಸಿದ್ದು ಆಕ್ಷೇಪಾರ್ಹವೇ ಎಂಬ ದಾಟಿಯಲ್ಲಿ ಜಯಲಕ್ಷ್ಮಿಯವರು ಮಾತನಾಡಿದಾಗ ನನಗೆ ಒಂದು ಬಗೆಯಲ್ಲಿ ನಮ್ಮ ಕೃತ್ಯಕ್ಕೆ ನಾವೇ ನಾಚಿಕೆ ಪಡುವಂತಾಯಿತು. ನಿರುಪಾಯನಾದ ನಾನು ನಮ್ಮ ಮೌಢ್ಯಕ್ಕೆ ವಿಷಾದ ವ್ಯಕ್ತಪಡಿಸಿ ಅಲ್ಲಿಂದ ಹೊರಟು ಬಂದೆ. ಮತ್ತೆ ನನಗೆ ಊಟಕ್ಕೆ ಆಮಂತ್ರಿಸಿದ ಹೆಗಡೆಯವರನ್ನು ಕಂಡು ಮಾತಾಡಿಸುವಷ್ಟು ನೈತಿಕ ಸ್ಥೆರ್ಯ ಇರಲಿಲ್ಲ. ರಾತ್ರಿಯ “ಗದಾಯುದ್ಧ” ಪ್ರದರ್ಶನ ಮತ್ತಿಘಟ್ಟದ ಪ್ರೇಕ್ಷಕರ ಮನಸೂರೆಗೊಂಡಿದ್ದು ಅವರ ಶ್ಲಾಘನೇಯ ಮಾತುಗಳಿಂದ ಉಲ್ಲಿಸಿತರಾಗಬೇಕಾದ ನಾವೆಲ್ಲ ನಾವೇ ಮಾಡಿದ ಪ್ರಮಾದಕ್ಕೆ ಪಶ್ಚಾತ್ತಾಪ ಪಡುತ್ತಲೇ ಊರಿಗೆ ಮರಳಿದ್ದೆವು. ರಾಮಕೃಷ್ಣ ಗುಂದಿ

Read Post »

ಅಂಕಣ ಸಂಗಾತಿ

ಅಂಕಣ ಸಂಗಾತಿ ನೆನಪಿನದೋಣಿಯಲಿ–02 ಕಾಲನ ಸುಳಿಗಾಳಿಯಲ್ಲಿ ಸಿಕ್ಕಿದ ತರಗೆಲೆಗಳು ನಾವು. ಆದರೂ ಸಿಗುವ ಒಂದಿಷ್ಟು ವಿರಾಮದಲ್ಲೇ ಸ್ಮರಣೆಗಳ ಜಾಡನ್ನು ಹಿಡಿದು  ಹೋದಾಗ………. ನೆನಪಿನ ದೋಣಿಯಲಿ ~೨ ಪರಿಪರಿಯ ರೂಪಿನಲಿ ಕಾಂತಿಯಲಿ ರಾಗದಲಿ ನೆರಯಿಸುತ ಪರಿಪರಿಯ ರಸಗಳಂ ಪ್ರಕೃತಿ  ಕೆರಳಿಸುತ ಹಸಿವುಗಳ ಸವಿಗಳನು ಕಲಿಸುವಳು ಗುರು ರುಚಿಗೆ ಸೃಷ್ಟಿಯಲ _  ಮಂಕುತಿಮ್ಮ   ಪ್ರಕೃತಿ ಅನೇಕ ಬಗೆಯ ರಸಗಳನ್ನು ತನ್ನ ಅಗಾಧವಾದ ಸೃಷ್ಟಿಯ ರೂಪಿನಲ್ಲಿ ಕಾಂತಿಯಲ್ಲಿ ಬಣ್ಣದಲ್ಲಿ ತುಂಬಿ ಜೀವದ ಹಸಿವುಗಳನ್ನು ಕೆರಳಿಸುತ್ತಾಳೆ.  ಅದನ್ನು ರುಚಿ ನೋಡಿದರೆ ಆನಂದ ಎಂಬುದನ್ನು ಕಲಿಸುತ್ತಾಳೆ . ಹೀಗೆ ನಮ್ಮ ಎಲ್ಲ ರುಚಿಗಳಿಗೂ ಸೃಷ್ಟಿಯೇ ಪ್ರಕೃತಿಯೇ ಗುರು .  ಹಾಗೆಯೇ ನಮ್ಮ ಆಹಾರಕ್ರಮ, ಅಭ್ಯಾಸ ,ಪಾಕವಿಧಾನಗಳು ಬಾಲ್ಯದಲ್ಲಿ ನಾವು ಏನನ್ನು ತಿಂದಿರುತ್ತೇವೆಯೋ ಅದರ ಮೇಲೆ ನಿರ್ಭರ.  ಅಮ್ಮನ ಅಡಿಗೆ, ಅಮ್ಮನ ಪಾಕ, ಅಜ್ಜಿಯ ಕೈ ತುತ್ತಿನ ರುಚಿ ಇವೆಲ್ಲಾ ನಾವಿರುವವರೆಗೂ ಮನ ಮಂಜೂಷದಲ್ಲಿ ಜತನದಲಿ ಕಾಪಿಟ್ಟ ನವಿಲುಗರಿ.  ಮುಟ್ಟಿ ತಡವಿದಾಗಲೆಲ್ಲ ಸ್ಮೃತಿಯಲೆಯ ಪುಳಕದ ನವಿರು. ಇವತ್ತು ತುಂಬಾ ನೆನಪಿಗೆ ಬರುತ್ತಿರುವುದು ಪಿಡಿಚೆಯನ್ನ.  ದೊಡ್ಡ ದೊಡ್ಡ ಪಂಚತಾರಾ ಹೋಟೆಲುಗಳಲ್ಲಿ ಈಗ ನಾಲ್ಕು ಕೋರ್ಸ್, ೫ ಕೋರ್ಸ್ ಮೀಲ್ಸ್ ಅಂತಾರಲ್ಲ ಹಾಗೆ,  ಮೂವತ್ತು ನಲವತ್ತು ವರ್ಷಗಳ ಹಿಂದೆ ಸಾಮಾನ್ಯ ಮಧ್ಯಮ ವರ್ಗದ ಮನೆಗಳಲ್ಲಿ  ದಿನದ ಊಟ ಹೀಗೆ 4 ಕೋರ್ಸಿನದು.   ಹೇಗೆ ಅಂತೀರಾ? ಎಲೆಯ ತುದಿಯ ನೆಂಚಿಕೆಗಳು ಉಪ್ಪಿನಕಾಯಿ, ಚಟ್ನಿ, ತೊಕ್ಕು, ವಿವಿಧ ಪುಡಿಗಳು ಅವುಗಳೊಂದಿಗೆ ತುಪ್ಪ ಅಥವಾ ಎಣ್ಣೆಯನ್ನು ಹಾಕಿ ಕಲಿಸಿಕೊಳ್ಳುವುದು ಇದೇ ಪಿಡಚೆ ಅನ್ನ ಮೊದಲ ಸುತ್ತು.  ಹುಳಿ ಕೂಟು ಇತ್ಯಾದಿಗಳದು ಎರಡನೆಯ ಸುತ್ತು . ತಿಳಿಸಾರಿನ ಮೂರನೇ ಸುತ್ತು ಮತ್ತು ಕಡೆಯ ಮಜ್ಜಿಗೆ ಅನ್ನದ ನಾಲ್ಕನೆ ಸುತ್ತು . ಆಯ್ತಲ್ಲ ಫೋರ್ ಕೋರ್ಸ್ ಮೀಲ್ಸ್. ಆಗೆಲ್ಲಾ ಬೆಳಿಗ್ಗೆ ಶಾಲೆಗೆ ಹೋಗುವ ಮುನ್ನ ಊಟದ ಅಭ್ಯಾಸವೇ ..ಹೀಗಾಗಿ ಪುಷ್ಕಳ ಭೋಜನ.  ಪಿಡಿಚೆ ಅಂದರೆ ನಿಘಂಟಿನ ಪ್ರಕಾರ ಒಂದು ಹಿಡಿಯಷ್ಟು ಪ್ರಮಾಣದ ಮುದ್ದೆ ಅಥವಾ ಉಂಡೆ . ಹುಳಿ ಸಾರುಗಳಂತೆ ದ್ರವ ರೂಪದಲ್ಲಿರದ ಕಾರಣ ಕಲಸಿದ ಮೇಲೆ ಅಂಗೈಯಲ್ಲಿ ಒತ್ತಿ ಉಂಡೆ ಮಾಡುತ್ತಿದ್ದುದರಿಂದ ಪಿಡಿಚೆ ಅನ್ನ  ಎನ್ನುವುದು ವಾಡಿಕೆ. ಮಿಡಿಕೆ ಅನ್ನ ಎಂತಲೂ ಅನ್ನುತ್ತಿದ್ದರು. ಆದರೆ ಅದು ಅಷ್ಟೊಂದು ರೂಢಿಯಲ್ಲಿರದ ಪದ.  ಇನ್ನು ಈ ಪಿಡಚೆ ಅನ್ನದ ವಿಧಗಳು ಹೇಳುತ್ತಾ ಹೋದರೆ ಹನುಮಂತನ ಬಾಲದುದ್ದದ ಪಟ್ಟಿ . ತರಹ ತರಹದ ಉಪ್ಪಿನಕಾಯಿಗಳು, ಹುಣಸೆ ಮಾವು ಅಮಟೆ ನೆಲ್ಲಿ ಕಾಯಿ ಮೊದಲಾದ ತೊಕ್ಕುಗಳು,  ಪುಡಿಗಳ ವಿಷಯಕ್ಕೆ ಬಂದರೆ ವಿಧವಿಧದ ಚಟ್ನಿಪುಡಿಗಳು, ಅನ್ನದಪುಡಿ, ಮೆಂತೆ ಹಿಟ್ಟಿನ ಪುಡಿಗಳು, ತರಕಾರಿಯ ಸಿಹಿ ಪಲ್ಯಗಳು, ಪುಡಿ ಕುಟ್ಟಿಹಾಕಿದ ಖಾರದ ಪಲ್ಯಗಳು, ಗೊಜ್ಜುಗಳು, ತಂಬುಳಿ, ಹಸಿಮಜ್ಜಿಗೆ ಒಂದೇ ಎರಡೇ ? ವಿಶಿಷ್ಟವಾದದ್ದು ಇನ್ನೊಂದೆಂದರೆ ತಿಳಿಸಾರಿನ (ರಸಂ) ಪುಡಿ ಮಾಡಿದ ಹೊಸದರಲ್ಲಿ ತಾಜಾ ಇರುವಾಗ ಬಿಸಿ ಅನ್ನಕ್ಕೆ ಉಪ್ಪು ಎಣ್ಣೆ ಹಾಕಿ ಇದನ್ನು ಕಲಿಸಿ ತಿಂದರೆ…..!  ಆಹಾ ವರ್ಣಿಸಲು ಪದಗಳಿಲ್ಲ ಬಿಡಿ.ಇವುಗಳೊಂದಿಗೆ ಬೇಳೆ ಮತ್ತುಮೆಂತೆಸೊಪ್ಪು/ಗೋರಿಕಾಯಿ ಹಾಕಿದ ಮಾಟೋಡಿ ಪಲ್ಯ ಪಿಡಿಚೆಯನ್ನಗಳ ರಾಜ . ನುಚ್ಚಿನುಂಡೆಯನ್ನು ಪುಡಿಮಾಡಿ ಚೂರು ಉಪ್ಪು ಜಾಸ್ತಿ ಎಣ್ಣೆ ಹಾಕಿ ಅನ್ನದೊಂದಿಗೆ ಕಲಸಿ ತಿಂದರೆ ತುಂಬಾ ಸ್ವಾದ . ಮೆಂತ್ಯ ಹಿಟ್ಟನ್ನು ಹುಣಸೆ ರಸದಲ್ಲಿ ಕಲಸಿ ಮೆಣಸಿನಕಾಯಿ ಒಗ್ಗರಿಸಿ ಮಾಡುತ್ತಿದ್ದ ಮೆಂತೆ ಹಿಟ್ಟಿನ ಗೊಜ್ಜು, ತೊಗರಿಬೇಳೆಯ ಅನ್ನದ ಪುಡಿ …..ಪಟ್ಟಿ ಅನಂತ _ಪ್ರಕಾರ ಅಪರಿಮಿತ .   ಆರೋಗ್ಯದ ದೃಷ್ಟಿಯಿಂದಲೂ ಕೆಲವು ಈ ರೀತಿಯ ಪಿಡಚೆ ಮೊದಲ ಮಗಳು ತುಂಬಾ ಉತ್ತಮ ಎಂದು ಪರಿಗಣಿಸಲ್ಪಟ್ಟಿವೆ ಮೊದಲ ಅನ್ನಕ್ಕೆ ತುಪ್ಪ ಹಾಕಿ ಕಲಿಸುವ ದೊಡ್ಡಿ ಪತ್ರೆ ತಂಬುಳಿ , ಹೇರಳೆಕಾಯಿ ಉಪ್ಪಿನಕಾಯಿ ರಸದ ಅನ್ನ  ಇವು ಪಿತ್ತಹಾರಿಗಳು. ಇನ್ನು ಬಾಣಂತಿಯರಿಗೆ ಕೊಡುವ ಬೆಳ್ಳುಳ್ಳಿ ಹಾಗೂ ಮೆಣಸು ಸೇರಿಸಿದ ಪುಡಿಯ ಅನ್ನ ಹೇರಳೆಕಾಯಿ ಹೋಳಿನ ಮೇಲೆ ಉಪ್ಪು ಮೆಣಸು ಪುಡಿ ಉದುರಿಸಿ ಸ್ಟವ್ ಮೇಲೆ ಸ್ವಲ್ಪ ಕಂದಿಸಿ ಹಿಂಡುವ ರಸ ಇವುಗಳನ್ನು ಮರೆಯಲಾದೀತೆ ? ಈ ಪಿಡಿಚೆ ಅನ್ನಗಳನ್ನು ನಂಚಿಕೆ ಮಾತ್ರ ಹಾಕಿ ಕಲೆಸಿದರೆ ಹೊಂದುವುದಿಲ್ಲ . ಎಣ್ಣೆಯೋ ತುಪ್ಪವೋ ಅಂತೂ ಜಿಡ್ಡಿನ ಮಾಧ್ಯಮ ಬೇಕು .ರುಚಿಗೆ ಅನುಸಾರ ಒಂಚೂರು ಲವಣ ಸೇರಿಸಿದರೆ ಸ್ವರ್ಗಸಮಾನಂ. ಎಣ್ಣೆಗಳಲ್ಲೂ ಹಸಿ ಕಡಲೆಕಾಯಿ ಎಣ್ಣೆ 1 ಭಾಗದವರಿಗೆ ಇಷ್ಟವಾದರೆ ಕರಾವಳಿ ಕಡೆಯವರಿಗೆ ಕೊಬರಿಎಣ್ಣೆ ಪ್ರಿಯ.ಆದರೆ ಉತ್ಕೃಷ್ಟ ರುಚಿಯ ಇರುತ್ತಿದ್ದುದು ಖಾದ್ಯಗಳನ್ನು ಕರಿದು ಉಳಿದ ಕರಿದ ಎಣ್ಣೆಯಲ್ಲಿ. ಕರಿದ ಪದಾರ್ಥಗಳ ರುಚಿ ವಾಸನೆಯನ್ನು ಇಲ್ಲಿಗೆ ವರ್ಗಾಯಿಸಿ ಬೇರೆಯದೇ ವಿಶಿಷ್ಟವಾದ ಸ್ವಾದ.  ಚಕ್ಕುಲಿ ಕರೆದೆಣ್ಣೆಯದು ಒಂದು ಘಮ ಕೋಡುಬಳೆ ಕರೆದೆಣ್ನಮೆ ಕೆಂಪಗೆ ಖಾರ, ಸಿಹಿ ಕರಿದ ಎಣ್ಣೆ ಸೂಸುತ್ತಿದ್ದ ಬೆಲ್ಲದ ಘಮಲು ನಾಲಿಗೆಯಂಚಿನ ಸಿಹಿ. ಆಗೆಲ್ಲಾ ಕರೆದ ಎಣ್ಣೆ ಆರೋಗ್ಯಕ್ಕೆ ಒಳ್ಳೆಯದಲ್ಲ ಅಂತ ನಮಗೆಲ್ಲ ತಿಳಿದೇ ಇರಲಿಲ್ಲ . ರುಚಿಗೆ ಪರ್ಯಾಯ  ಅಷ್ಟೇ ಅಲ್ಲ ಗೃಹಿಣಿಯರ ಆಪತ್ಕಾಲಕ್ಕೆ ಒದಗಿ ಬರುತ್ತಿದ್ದ ಮಿತ್ರನೂ ಹೌದು. ಹುಳಿ/ಸಾರು ಮಾಡಿಯಾದ ಮೇಲೆ ಅತಿಥಿಗಳು ಬಂದರೆ ಈಗಿನ ಹಾಗೆ ಕ್ಷಣಾರ್ಧದಲ್ಲಿ ಕೆಲಸ ಮುಗಿಸುವ ಗ್ಯಾಸ್ ಕುಕ್ಕರ್ ಮಿಕ್ಸಿ ಇರದಿದ್ದಾಗ  ಇರುವುದರಲ್ಲಿಯೇ ಸವರಿಸಬೇಕಾದ ಅನಿವಾರ್ಯ ಸಮಯದಲ್ಲಿ ಈ ಎಲ್ಲಾ ಪಿಡಿಚೆ ಯನ್ನದ ಪರಿಕರಗಳು ಸಾರು/ಹುಳಿ ಯ ಕೊರತೆ ಸರಿದೂಗಿಸುತ್ತಿದ್ದವು.  ರಾತ್ರಿ ಊಟದಲ್ಲೂ ಅಷ್ಟೇ ಬೆಳಗಿನ ವ್ಯಂಜನಗಳಲ್ಲೇ ಅಡ್ಜಸ್ಟ್ ಮಾಡಲು ಇದೇ ಸಹಾಯಕ್ಕೆ ಬರುತ್ತಿದ್ದುದು . ಮನೆಯಲ್ಲಿ ತುಂಬಾ ಜನರಿದ್ದು ಲೋಕೋ ಭಿನ್ನರುಚಿಃ ಅಂದಾಗ ಮಾಡಿದ ತರಕಾರಿಯನ್ನು ಇಷ್ಟಪಡದವರು ಇನ್ನೊಂದು ಸುತ್ತು ಇವುಗಳಲ್ಲೇ ಊಟ ಮುಗಿಸಿ ಬಿಡಬಹುದಿತ್ತು . ಈಗಿನಂತೆ ಒಬ್ಬೊಬ್ಬರಿಗೆ ಒಂದೊಂದು ತರಹ ಮಾಡುವ ಅಭ್ಯಾಸ, ವ್ಯವಧಾನ, ಮುಚ್ಚಟೆ ಆಗಿನ ಕಾಲದಲ್ಲಿರಲಿಲ್ಲ . ಇನ್ನು ಬ್ರಹ್ಮಚಾರಿಗಳು, ಹೆಂಡತಿ ಮನೆಯಲ್ಲಿರದ ಟೆಂಪರರಿ ಬ್ರಹ್ಮಚಾರಿಗಳು ಬಿಸಿಯನ್ನ ಒಂದು ಮಾಡಿಕೊಂಡು ಇವು ಮತ್ತು ಮೊಸರಿನಲ್ಲಿ ಊಟ ಮುಗಿಸಿ ಬಿಡುತ್ತಿದ್ದರು .ಆಗಲೂ ಈಗಲೂ ಯಾವಾಗಲೂ “ಅವರಿಲ್ಲದ ಊಟ”ದ ಮುಖ್ಯ ಭಾಗ ಪಿಡಚೆ ಅನ್ನ ಅಂದರೆ ನೀವೆಲ್ಲಾ ಒಪ್ಪೇ ಒಪ್ತೀರಿ ಅಲ್ವಾ?  ಹಾಗೆ ಮಕ್ಕಳ ಅಕಾಲದ ಹಸಿವಿಗೆ ಆ ಕಾಲದಲ್ಲಿ ಅಮ್ಮಂದಿರು ಉತ್ತರ ಕಂಡುಕೊಳ್ಳುತ್ತಿದ್ದುದು ಇದರಲ್ಲೇ. ಪಿಡಚೆ ಅನ್ನಗಳ ಒಂದು ಕೈತುತ್ತು ಆ ಸಣ್ಣ ಹಸಿವನ್ನು ನೀಗಿಸಿ ಬಿಡುತ್ತಿತ್ತು. ದೂರದೂರಿನ ಪ್ರವಾಸಗಳು ಕೈಗೊಂಡ ಸಮಯದಲ್ಲೂ ಇವು ಆ ಹೊತ್ತಿನ ಊಟಕ್ಕೆ ಒದಗಿಬರುತ್ತಿದ್ದವು .ಗೃಹಿಣಿಯ ನಾಜೂಕುತನ, ಸಮಯಸ್ಫೂರ್ತಿ, ವಿಶಿಷ್ಟ ಕೈರುಚಿಗೆ ಒಳ್ಳೆಯ ಸಾಕ್ಷ್ಯ ಬರೆಯುತ್ತಿದ್ದವು ಇವುಗಳು. ಇನ್ನು ನಮ್ಮ ಮನೆಯಲ್ಲಿ ಚಿಕ್ಕವರಿದ್ದಾಗ ನಮಗೆಲ್ಲ ಈ ಪಿಡಚೆ ಅನ್ನ ಕಲಿಸಿಕೊಡುತ್ತಿದ್ದದು ಅಣ್ಣನೇ (ನಮ್ಮ ತಂದೆ) ಅವರು ತಿನ್ನಲು ಶುರುಮಾಡುವ ಮೊದಲು ಯಾವುದನ್ನು ಎಲೆಯ ತುದಿಗೆ ಬಡಿಸಿರುತ್ತಾರೋ ಅದರಲ್ಲಿ ಜಾಸ್ತಿ ಅನ್ನ ಕಲೆಸಿ 3 ಜನಕ್ಕೂ ಕೈ ತುತ್ತು ಮಾಡಿ ನಮ್ಮ ತಟ್ಟೆಗಳಿಗೆ ಹಾಕಿದ ನಂತರವೇ ಅವರು ಊಟ ಆರಂಭಿಸುತ್ತಿದ್ದದ್ದು.  ಹದವಾಗಿ ಮೇಲುಪ್ಪು ಸೇರಿಸಿ ಚಟ್ನಿಪುಡಿ, ಮೆಂತೆ ಹಿಟ್ಟು, ಸಿಹಿ ಪಲ್ಯ, ಉಪ್ಪಿನಕಾಯಿ ರಸಗಳಿಗಾದರೆ ಕರಗಿಸಿದ ತುಪ್ಪ, ಅನ್ನದ ಪುಡಿ ತೊಕ್ಕು ಬೇರೆ ಪಲ್ಯ ಗೊಜ್ಜುಗಳಿಗಾದರೆ ಕರಿದ ಎಣ್ಣೆಯೋ ಹಸಿ ಕಡಲೆಕಾಯಿ ಎಣ್ಣೆಯೋ ಹಾಕಿ ಕಲಸಿ ಕೊಡುತ್ತಿದ್ದ ಆ ಘಳಿಗೆಗಳು ಬಾಲ್ಯದ ನೆನಪಿನ ಅನರ್ಘ್ಯ ರತ್ನಗಳು. ನಾವು ಎಷ್ಟೇ ಕಲಸಿ ತಿಂದರೂ ಅಣ್ಣ ಕೊಡುತ್ತಿದ್ದ ಆ ರುಚಿ ಬರುವುದೇ ಇಲ್ಲ.  ಒಟ್ಟಿಗೆ ಊಟಕ್ಕೆ ಕುಳಿತಾಗಲೆಲ್ಲಾ ಎಷ್ಟೇ ದೊಡ್ಡವರಾದ ಮೇಲೂ “ಅಣ್ಣಾ” ಅಂದರೆ ಸಾಕು 3 ಜನಕ್ಕೂ ಆಮೇಲೆ ಅಳಿಯಂದಿರಿಗೂ ಅವರೇ ಕಲಿಸಿಕೊಡುತ್ತಿದ್ದುದು. ತಟ್ಟೆಯ ಬದಲು ದೊಡ್ಡ ಪಾತ್ರೆ ಇರುತ್ತಿತ್ತು ಅಷ್ಟೇ ವ್ಯತ್ಯಾಸ . ನಮ್ಮ ತಂದೆಯ ಚಿಕ್ಕಪ್ಪ ಅಂದರೆ ನಮ್ಮ ಚಿಕ್ಕ ತಾತನವರು ಅನ್ನ ಕಲಿಸಲು ಎಣ್ಣೆ ಅಥವಾ ತುಪ್ಪ ಹಾಕಿ ಅನ್ನುವ ಬದಲು “ಜಿಡ್ಡು ಬಿಡಿ” ಅಂತಿದ್ರು .  ಅದನ್ನು ನೆನೆಸಿಕೊಂಡು ನಗುತ್ತಿದ್ದೆವು. ಈರುಳ್ಳಿ ಬಜ್ಜಿ ಅಥವಾ ಪಕೋಡಾ ಈರುಳ್ಳಿ ಸಂಡಿಗೆ ಅಂತಹವುಗಳನ್ನು ಕರೆದು ಮಿಕ್ಕಿದ ಎಣ್ಣೆ ಎಂದರೆ ಮೇಲೆ ಕಲಿಸಲು ತುಂಬಾ ರುಚಿ ಅಂತಿದ್ರು ನಮ್ಮಣ್ಣ .  ಭೌತಿಕವಾಗಿ ಅಣ್ಣಾ ದೂರವಾಗುವ ಸ್ವಲ್ಪ ದಿನಕ್ಕೆ ಮೊದಲು ಅಂದೇ ಮಾಡಿದ ಹುಣಸೆ ತೊಕ್ಕಿನ ಅನ್ನ ಕಲಿಸುತ್ತಿದ್ದರು . ಒಬ್ಬಳೇ ಇದ್ದದ್ದು ಆವತ್ತು.  ಅಣ್ಣನ ಕೈ ತುತ್ತು ತಿನ್ನಬೇಕೆನಿಸಿತ್ತು. ಎಣ್ಣೆ ಒಳಗಿಟ್ಟು ಬರುವುದರಲ್ಲಿ ಅಣ್ಣ ನನಗಾಗಿ ಒಂದು ದೊಡ್ಡ ತುತ್ತು ಮಾಡಿದ್ದರು “ಆಮೇಲೆ ಊಟ ಮಾಡುವೆಯಂತೆ . ಇದೊಂದು ತುತ್ತು ತಿನ್ನು ಎಷ್ಟು ದಿನ ಆಗಿತ್ತು ಹೀಗೆ ತುತ್ತು ಕೊಟ್ಟು” ಎಂದರು. ಅಂದಿನ ಆ ತುತ್ತೇ ಅವರ ಕಡೆಯ ಕೈತುತ್ತಾಗಿ ಬಿಟ್ಟಿತು.  ಈಗಲೂ ಪಿಡಿಚೆ ಅನ್ನ ತಿನ್ನುವಾಗಲೆಲ್ಲಾ ಅಣ್ಣನ ನೆನಪು . ಅಮ್ಮ ಇಲ್ಲವಾದಾಗ ಅಣ್ಣ ಹೇಳ್ತಿದ್ರು ಅಮ್ಮನಿಗೆ ಇಷ್ಟವಾದದ್ದು ಮಾಡಿ ನಾವು ತಿಂದರೆ ಅವರ ಆತ್ಮಕ್ಕೆ ಶಾಂತಿ ಅಂತ. ಹಾಗಾಗಿ ಅಣ್ಣನಿಗೆ ಇಷ್ಟವಾದದ್ದನ್ನೆಲ್ಲಾ ನಾನು ಬಿಟ್ಟಿಲ್ಲ . ಬಾಳ ಪುಸ್ತಕದ ಪುಟ ಪುಟಗಳಲ್ಲಿ ನೆನಪುಗಳ ಬುತ್ತಿ ಆಗಾಗ ತೆಗೆದು ಮೆಲುಕು ಹಾಕುವ ಭಾಗ್ಯವಷ್ಟೇ ಈಗ ಉಳಿದಿರುವುದು.  ಪ್ರತಿಯೊಂದು ಮನೆಯಲ್ಲೂ ಹೀಗೆ ಏನಾದರೂ 1 ವಿಶಿಷ್ಟ ವಿಶೇಷ ಅಭ್ಯಾಸ ಸಂಪ್ರದಾಯ ರೂಢಿಯಾಗಿರುತ್ತದೆ . ಒಟ್ಟಿಗಿನ ಒಡನಾಟದಲ್ಲಿ, ಸಂಸರ್ಗದಲ್ಲಿ ಅಚ್ಚಳಿಯದ ನೆನಪುಗಳು ಸರಪಳಿಯಾಗಿ ಬೆಸೆದುಕೊಂಡಿರುತ್ತದೆ . ಪರಸ್ಪರರ ಬಗೆಗಿನ ಮಮತೆ ವಾತ್ಸಲ್ಯಗಳು ಅಲ್ಲಿ ಪ್ರತಿಬಿಂಬಿತ.  ಅಪ್ಪ ಅಣ್ಣ ಅಜ್ಜ ಅಜ್ಜಿ ಅತ್ತೆ ಮಾವ ಚಿಕ್ಕಪ್ಪ ದೊಡ್ಡಪ್ಪ ಸೋದರ ಸೋದರಿಯರು ಕೆಲವೊಮ್ಮೆ ಕಸಿನ್ ಗಳು ಎಲ್ಲಾ ಸೇರಿ ಒಟ್ಟಿಗಿನ ಸಹಭೋಜನಗಳು ಒಂದಾಗಿ ಕಳೆದ ಘಟನೆಗಳು ಎಲ್ಲವೂ ಸ್ಮೃತಿಪಟಲದ ಹಸಿಗೋಡೆಯ ಮೇಲೆ ಅಂಟಿ ನಿಂತ ಹರಳುಗಳು . ಅವರಿಗೆ ಅದು ಇಷ್ಟ ಇವರಿಗೆ ಇದು ಇಷ್ಟ ಎಂದೆಲ್ಲಾ ಎಷ್ಟು ಚೆನ್ನಾಗಿ ಅರಿತಿದ್ದೆವಲ್ಲ.  ಸಹವಾಸ ಸಹಭೋಜನ ಸಹಅನುಭೂತಿ ಗಳಿಂದಲೇ ನಿಜವಾದ ಸಾಹಚರ್ಯ.  ಈಗ ಸಹಭೋಜನದ ಪರಿಕಲ್ಪನೆಯೇ ಮಾಸಿಹೋಗಿದೆ. ಬೆಳಗಿನ ಅವಸರದ ತಿಂಡಿ, ಮಧ್ಯಾಹ್ನದ ಡಬ್ಬಿಯೂಟ .ರಾತ್ರಿಯಾದರೂ ಒಟ್ಟಿಗೆ ಕುಳಿತು ಊಟ ಮಾಡುವ ಅಭ್ಯಾಸ ಕಾಲನ ಮಯಕದ ಮಬ್ಬಿನಲ್ಲಿ ಮಾಯವಾಗುತ್ತಿದೆ.  ಒಂದಿಷ್ಟು ತಟ್ಟೆಯಲ್ಲಿ ಕಲಸಿ ತಂದು ದೂರದರ್ಶನದ ಮುಂದೆಯೋ ಲ್ಯಾಪ್ ಟಾಪ್, ಮೊಬೈಲ್ ಮೇಲೆ ಕೈಯಾಡಿಸುತ್ತಲೋ ಊಟದ ಶಾಸ್ತ್ರ ಮುಗಿಸುವುದೇ ಹೆಚ್ಚು.  ಪಿಜ್ಜಾ ಬರ್ಗರ್ ನೂಡಲ್ಸ್ ಗಳ ಮುಂದೆ ಪಿಡಚೆಯನ್ನ ಬಿಡಿ, ಮಾಮೂಲಿನ ಹುಳಿ/ಸಾರಿನ ಊಟಗಳೇ ಇಂದಿನ ತಲೆಮಾರಿನವರಿಗೆ ರುಚಿಸುವುದಿಲ್ಲ .  ಪುಟ್ಟ ಕುಟುಂಬದ ಮುಷ್ಟಿಯಿಂದ ವಸುದೈವ ಕುಟುಂಬಕಂ ಎಂಬ ಸಮಷ್ಟಿಯವರೆಗಿನ ಪಯಣಕ್ಕೆ  ಸಂಸಾರದ ಮಮತೆ ಪ್ರೀತಿಗಳೆಂಬ ಪ್ರಥಮ ಹೆಜ್ಜೆಗಳಿಂದ ಶ್ರೀಕಾರ . ಇಂದಿನ ದಿನಗಳಲ್ಲಿ ಅಪರೂಪವಾಗಿರುವ ಭಾವನೆಗಳು, ಮಾರ್ದವತೆಯ ಬರಗಾಲದಲ್ಲಿ ಮಮತೆಯ ಸಿಂಚನಗಳು ಇಂತಹ ಚಿಕ್ಕ ವಿಷಯಗಳಿಂದಲೇ ಆರಂಭವಾದರೆ ಒಳಿತು . ಈಗಲಾದರೂ ಎಚ್ಚೆತ್ತುಕೊಳ್ಳೋಣ, ಹಳೆಯ ಸಾಂಪ್ರದಾಯಿಕ ಅಡುಗೆ ಊಟದ ವಿಧಾನಗಳನ್ನು ಅನುಕರಿಸೋಣ, ಅನುಸರಿಸೋಣ . ಪದ್ಧತಿಗಳನ್ನು ಮುಂದುವರೆಸಿಕೊಂಡು ಹೋಗೋಣ.  ಏನಂತೀರಿ ? ಸುಜಾತಾ ರವೀಶ್     ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು”

Read Post »

ಅಂಕಣ ಸಂಗಾತಿ, ಸಾಧಕಿಯರ ಯಶೋಗಾಥೆ

ಸಾಧಕಿಯರ ಯಶೋಗಾಥೆ’ ಮಾಲಿಕೆಯನ್ನು ಸಂಗಾತಿ ಓದುಗರಿಗಾಗಿ ಸರಣಿ ರೂಪದಲ್ಲಿ ಪ್ರಕಟಿಸಲಿದೆ. ಈ ಸರಣಿ ಮಾಲಿಕೆಯನ್ನು ಲೇಖಕಿ ಡಾ. ಸುರೇಖಾ ಜಿ ರಾಠೋಡ ಪ್ರತಿವಾರ ಬರೆಯಲಿದ್ದಾರೆ

Read Post »

You cannot copy content of this page

Scroll to Top