ಅಂಕಣ ಸಂಗಾತಿ
ನೆನಪಿನದೋಣಿಯಲಿ
ನಂ ಸೋಮುಮಾವ
ಅಂಕಣ ಸಂಗಾತಿ ಗಜಲ್ ಲೋಕ ಶೈಲಶ್ರೀಯವರ ಗಜಲ್ ಗಳಲ್ಲಿ ಪ್ರೇಮಿಗಳ ಕಲರವ… ಶೈಲಶ್ರೀಯವರ ಗಜಲ್ ಗಳಲ್ಲಿ ಪ್ರೇಮಿಗಳ ಕಲರವ… ಗಜಲ್ ಗಂಗೆ ಇಂದು ಸಂಸಾರದುದ್ದಕ್ಕೂ ಹರಿಯುತಿದ್ದಾಳೆ, ರಸಿಕರ ತನು-ಮನವನ್ನು ಸಂತೈಸುತ್ತ… ಇಂಥಹ ಗಜಲ್ ಕುರಿತು ಮಾತನಾಡುತಿದ್ದರೆ ಬೆಳದಿಂಗಳ ರಾತ್ರಿಯ ಫೀಲ್ ಆಗುತ್ತೆ…!! ಆ ಅನುಭಾವದ ಅನುಭವವನ್ನು ತಮ್ಮೊಂದಿಗೆ ಹಂಚಿಕೊಳ್ಳೋಕೆ ಖುಷಿಯೆನಿಸುತ್ತಿದೆ. ಕರುನಾಡಿನ ಪ್ರಸಿದ್ಧ ಸುಖನವರ್ ಅವರ ಪರಿಚಯದೊಂದಿಗೆ ತಮ್ಮ ಮುಂದೆ ಬರುತ್ತಿದ್ದೇನೆ. ಪ್ರೀತಿಯಿಂದ ತಾವೆಲ್ಲರೂ ಗಜಲ್ ಚಾಂದನಿಯನ್ನು ಸ್ವಾಗತಿಸುವಿರೆಂಬ ಭಾವನೆಯೊಂದಿಗೆ ನನ್ನ ಲೆಕ್ಕಣಿಕೆಗೆ ಚಾಲ್ತಿ ನೀಡುವೆ…!! “ಒಂದು ಮುಖವಿದೆ ಯಾವಾಗಲು ಕಣ್ಣುಗಳಲ್ಲಿ ನೆಲೆಸಿರುತ್ತದೆ ಒಂದು ಕಲ್ಪನೆಯಿದೆ ಅದು ಒಂಟಿಯಾಗಿರಲು ಬಿಡುವುದಿಲ್ಲ” –ಜಾವೇದ್ ನಸೀಮಿ ‘ಪ್ರೀತಿ’ ಎನ್ನುವ ಎರಡುವರೆ ಅಕ್ಷರ ಈ ಸಂಸಾರವನ್ನೆ ಆಳುತ್ತಿದೆ. ಇದನ್ನು ಅಭಿವ್ಯಕ್ತಿ ಪಡಿಸುವುದು, ಅನುಭವಿಸುವುದು ನಿಜಕ್ಕೂ ಸುಂದರವಾಗಿರುತ್ತದೆ. ಇಂಥಹ ಪ್ರೀತಿಯು ನವಿರಾದ ತುಟಿಗಳು ಮತ್ತು ಬೆರಳುಗಳಿಂದ, ಮೃದುವಾದ ದಿಂಬುಗಳಿಂದ ಹೃದಯವಂತರನ್ನು ಗಾಯಗೊಳಿಸುತ್ತದೆ. ಈ ಯೂನಿಕ್ ಪ್ರೀತಿಯನ್ನೇ ಉಸಿರಾಡುತ್ತಿರುವ ಜಗಮೆಚ್ಚಿದ ಕಾವ್ಯ ಪ್ರಕಾರವೆಂದರೆ ‘ಗಜಲ್’. ಗಜಲ್ ಎನ್ನುವುದು ದ್ವೀಪವಲ್ಲ, ಇದೊಂದು ಸೇತುವೆ. ಇದು ಕೇವಲ ಹಡಗಾಗಿರದೆ ಜೀವದ ನೌಕೆಯಾಗಿದೆ. ಈ ದಿಸೆಯಲ್ಲಿ ಗಜಲ್ ಎಂದರೆ ಈಜು ಅಲ್ಲ, ಪವಿತ್ರವಾದ ನೀರು. ನಿಜಕ್ಕೂ ಗಜಲ್ ಬರೆಯುವುದೆಂದರೆ, ಓದುವುದೆಂದರೆ ನಾವು ಜಳಕಕ್ಕೂ ಮುಂಚೆ ಬಟ್ಟೆಗಳನ್ನು ಬಿಚ್ಚಿದಂತೆ!! ನಾವು ಬಟ್ಟೆ ಒದ್ದೆಯಾಗುತ್ತವೆ ಎಂಬ ಭಯದಿಂದ ಬಟ್ಟೆ ಕಳಚುವುದಿಲ್ಲ, ಬದಲಿಗೆ ನೀರು ನಮ್ಮನ್ನು ಸ್ಪರ್ಶಿಸಲಿ ಎಂಬ ಅನನ್ಯ ಬಯಕೆಯಿಂದ. ನಾವು ಸಂಪೂರ್ಣವಾಗಿ ನೀರಿನ ಆಹ್ಲಾದತೆಯಲ್ಲಿ ಮುಳುಗಲು ಮತ್ತು ಹೊಸ ಹುಮ್ಮಸ್ಸಿನೊಂದಿಗೆ ಹೊರಹೊಮ್ಮಲು ಬಯಸುತ್ತೇವೆ. ಈ ಕಾರಣಕ್ಕಾಗಿಯೇ ಗಜಲ್ ಮೇಲಿನ ನನ್ನ ಪ್ರೀತಿ ಯಾವಾಗಲೂ ಗಿರಿ-ಶಿಖರದಂತೆ ಆಗಸದತ್ತ ಮುಖ ಮಾಡಿಯೇ ಇರುತ್ತದೆ. ಸ್ತಬ್ಧ ಮತ್ತು ನಿರಂತರ. ಗಜಲ್ ಪ್ರೀತಿಯಲ್ಲೊಂದು ಅಮಲು ಇದೆ. ಅದಕ್ಕೇ ಈ ಜಗತ್ತು ಗಜಲ್ ನ ಮಧುಶಾಲೆಯಲ್ಲಿ ಜಗದ ಜಂಜಡವನ್ನು ಮರೆತು ಮುಳುಗುತಿದೆ. ಈ ಗಜಲ್ ಪ್ರೀತಿ ಸಹೃದಯಿಗಳನ್ನು ಹೃದಯವಂತರನ್ನಾಗಿಸುತ್ತದೆ. ಕರುನಾಡಿನಲ್ಲಿ ಇಂಥಹ ಹೃದಯವಂತರಿಗೇನೂ ಕೊರತೆಯಿಲ್ಲ. ಇಂತಹ ಗಜಲ್ ಗೋ ಅವರಲ್ಲಿ ಶ್ರೀಮತಿ ಶೈಲಶ್ರೀ ಶಶಿಧರ್ ಅವರೂ ಒಬ್ಬರು. ಶ್ರೀಮತಿ ಶೈಲಶ್ರೀ ಶಶಿಧರ್ ಅವರು ಶ್ರೀ ಗೋಪಾಲ್ ರಾವ್ ಮತ್ತು ವನಜಾಕ್ಷಿ ರಾವ್ ದಂಪತಿಗಳ ಮಗಳಾಗಿ ದೊಡ್ಡ ಕೂಡು ಕುಟುಂಬದಲ್ಲಿ ಉಡುಪಿ ಜಿಲ್ಲೆಯ ಮಟ್ಟು ಗ್ರಾಮದಲ್ಲಿ ಜನಸಿದ್ದಾರೆ. ಇವರ ತಂದೆಯವರು ತಮಿಳುನಾಡಿನ ತಿರುನಲ್ವೇಲಿಯಲ್ಲಿ ಹೋಟೆಲ್ ವ್ಯವಹಾರದಲ್ಲಿದ್ದು ನಂತರ ಉಡುಪಿಗೆ ಬಂದು ನೆಲೆಸಿದರು. ಇವರ ವಿದ್ಯಾಭ್ಯಾಸವು ಉಡುಪಿಯಲ್ಲಾಗಿದೆ. ಶಾಲಾ ದಿನಗಳಿಂದಲೂ ಕಾವ್ಯ, ಕತೆ, ಕಾದಂಬರಿ… ಓದುವ ಹವ್ಯಾಸವನ್ನು ಹೊಂದಿದ್ದು, ಕ್ರಮೇಣವಾಗಿ ಸಾಹಿತ್ಯದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡರು. ಮುಂದೆ ಪದವಿ ವ್ಯಾಸಂಗ ಪೂರ್ಣ ಆಗುವುದರೊಳಗೆ ವಿವಾಹವಾಗಿ, ತುಂಬು ಸಂಸಾರದ ಜವಾಬ್ದಾರಿ ಹೊತ್ತರು. ಬರಹಕ್ಕೆ ವಯಸ್ಸಿನ ಹಂಗಿಲ್ಲ ಎನ್ನುವಂತೆ ತಮ್ಮ ೪೬ ನೇ ವಯಸ್ಸಿಗೆ ಕವನ ಬರೆಯಲು ಆರಂಭಿಸಿ ಇಲ್ಲಿಯವರೆಗೆ ಸುಮಾರು ೬೦೦ಕ್ಕೂ ಹೆಚ್ಚು ಕವಿತೆಗಳನ್ನು ಬರೆದಿದ್ದಾರೆ. ಮುಂದೆ ಗಜಲ್ ವ್ಯಾಟ್ಸಪ್ ಬಳಗಗಳಿಂದ ಗಜಲ್ ಸಾಹಿತ್ಯದಲ್ಲಿ ಅಭಿರುಚಿಯನ್ನು ಹೊಂದಿ ಗಜಲ್ ಕೃಷಿಯನ್ನು ಮಾಡುತ್ತಿದ್ದಾರೆ. ಅದರ ಫಲವೆಂಬಂತೆ ಅಸಂಖ್ಯಾತ ಗಜಲ್ ಗಳನ್ನು ಬರೆಯುತ್ತ ಕನ್ನಡ ಗಜಲ್ ಪರಂಪರೆಗೆ “ಶಶಿಯಂಗಳದ ಪಿಸುಮಾತು” ಎಂಬ ಪ್ರಥಮ ಸೆಹ್ ಗಜಲ್ ಸಂಕಲನ ಕೊಡುಗೆಯಾಗಿ ನೀಡಿದ್ದು ಇವರ ಹೆಗ್ಗಳಿಕೆಯಾಗಿದೆ. ಇದರೊಂದಿಗೆ “ರಾಧಾ ಮೋಹನ ಪ್ರೇಮಾನುರಾಗ” ಎಂಬ ರಾಧೆ ಮೋಹನರ ಪ್ರೇಮದ ಗಜಲ್ ಗಳು ಮದ್ದಣ್ಣ ಮನೋರಮೆ ಅವರ ಸಂಭಾಷಣೆಯನ್ನು ನೆನಪಿಸುವಂತಿವೆ. ಇವರ ಎರಡೂ ಗಜಲ್ ಸಂಕಲನಗಳು ಪ್ಯೂರ್ ಪ್ರೇಮಭರಿತವಾಗಿದ್ದು, ಗಜಲ್ ನ ಮೂಲ ಆಶಯವನ್ನು ಹೊಂದಿವೆ. ಇದಕ್ಕೆ ಇವರು ಬಳಸುವ ತಖಲ್ಲುಸನಾಮ ‘ಶಶಿ’ ಕೂಡ ಅಪ್ಯಾಯಮಾನವಾಗಿ ಹೊಂದಿಕೊಂಡಿದೆ. ಪ್ರಸ್ತುತವಾಗಿ ಶ್ರೀಯುತರು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಇವರ ಕಾವ್ಯ, ಗಜಲ್ ಹಾಗೂ ಇನ್ನಿತರ ಕಾವ್ಯ ಪ್ರಕಾರಗಳು ಅಂತರ್ಜಾಲ ಹಾಗೂ ದೈನಂದಿನ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಹಲವು ಗಜಲ್ ಗೋಷ್ಠಿ, ಕಾವ್ಯ ಗೋಷ್ಠಿಗಳಲ್ಲಿ ಭಾಗವಹಿಸಿರುವ ಇವರು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಕ್ರಿಯಾಶೀಲರಾಗಿದ್ದಾರೆ. ಈ ಕ್ರಿಯಾಶೀಲತೆಯನ್ನು ಗುರುತಿಸಿ ನಾಡಿನ ಸಂಘ-ಸಂಸ್ಥೆಗಳು ಗೌರವಿಸಿ ಸತ್ಕರಿಸಿವೆ. ಮನುಷ್ಯ ತಾನು ಎಷ್ಟೇ ಬೌದ್ಧಿಕವಾಗಿ ದಾಪುಗಾಲಿಟ್ಟರೂ ಅದಕ್ಕೆ ಮೆರುಗು ಬರುವುದೇ ಭಾವನೆಗಳ ಗೊಂಚಲಿನಿಂದ!! ಸಾರಸ್ವತ ಲೋಕದಲ್ಲಿ ಅಸಂಖ್ಯಾತ ಕಾವ್ಯ ಪ್ರಕಾರಗಳಿವೆ. ಅವುಗಳಲ್ಲಿ ಮನಸ್ಸಿನ ಆಳದಿಂದ ಉದಯಿಸುವ ಭಾವಾಂತರಂಗದ ಜೋಕಾಲಿ, ತಂಬೆಲರೆಂದರೆ ಗಜಲ್. ಇದು ಕಂಬನಿಯನ್ನು ಪ್ರೀತಿಸುತ್ತ ಬೆಚ್ಚನೆಯ ಆಲಿಂಗನದಿ ಭಾರವಾದ ಹೃದಯಗಳನ್ನು ಸಂತೈಸುತ್ತದೆ. ಈ ನೆಲೆಯಲ್ಲಿ ಗಮನಿಸಿದಾಗ ಗಜಲ್ ಇಡೀ ಮನುಕುಲದ ಸಂಬಂಧಗಳ ಛಾವಣಿಯಾಗಿದೆ. ಇಂಥಹ ಗಜಲ್ ಇಂದು ಆಲದ ಮರದಂತೆ ನಾಡಿನಾದ್ಯಂತ ಪಸರಿಸಿದೆ. ಗಜಲ್ ಗೋ ಶೈಲಶ್ರೀ ಯವರು ತಮ್ಮ ಗಜಾಲ್ ಗಳನ್ನು ಪ್ರೀತಿಯಿಂದ ಅಲಂಕರಿಸಿದ್ದಾರೆ, ಓದುಗರ ಹಾದಿಯುದ್ದಕ್ಕೂ ಪ್ರೀತಿಯ ಮದಿರೆಯನ್ನು ಹಂಚುತ್ತ ; ಪ್ರೀತಿ-ವಿರಹವನ್ನೆ ಪೂಜಿಸುತ್ತ ಬಂದಿದ್ದಾರೆ. ಇವರ ಗಜಲ್ ಗಳ ಪ್ರೀತಿಯಲ್ಲಿ ವಿರಹವಿದೆ, ಒಂಟಿತನವಿದೆ, ದಾಂಪತ್ಯದ ಅಮೃತವಿದೆ, ಸಿಹಿಯಾದ ದ್ರೋಹವಿದೆ. ಇವುಗಳೊಂದಿಗೆ ಪ್ರೀತಿಯಲ್ಲಿ ಸಾಕ್ಷಾತ್ಕಾರವೂ ಇದೆ. ಪ್ರೇಮಿಗಳ ಪಿಸುಮಾತು, ಏಕಾಂತದ ನಾದ, ಹೃದಯಗಳ ಸಮಾಗಮದಿಂದ ತುಂಬಿದ ಇವರ ಗಜಲ್ ಗಳು ಓದುಗರ ಪ್ರೇಮಮಿಡಿತವನ್ನು ಜಾಗೃತಗೊಳಿಸುತ್ತದೆ.——————— ಡಾ. ಮಲ್ಲಿನಾಥ ಎಸ್. ತಳವಾರ ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ
ಅಂಕಣ ಸಂಗಾತಿ
ಹೊತ್ತಿಗೆಯೊಂದಿಗೊಂದಿಷ್ಟುಹೊತ್ತು
ಬಾನು ಬೆಳಗಿತು _ ಕಾದಂಬರಿ
ಲೇಖಕಿ _ ತ್ರಿವೇಣಿ ಅನಸೂಯಾ ಶಂಕರ್
ಬಾನು ಬೆಳಗಿತು _ ಕಾದಂಬರಿ Read Post »
ಅಂಕಣ ಸಂಗಾತಿ ಪ್ರಸ್ತುತ ಪರೋಪಕಾರದ ಜೊತೆಗೆ. ದಾನ ,ದಯೆ , ಕ್ಷಮೆಗಳಂತೆ ಪರೋಪಕಾರವೂ ಒಂದು ದೈವೀಗುಣ . ಮತ್ತು ಅಪರೂಪದ ಗುಣ . ಇದು ಅನುವಂಶೀಯವೂ ಹೌದು ,ಅನುಕರಣೀಯವೂ ಹೌದು . ಹಾಗಂತ ತನ್ನ ಮನೆ ಸಂಬಂಧಗಳ ಕಡೆಗಣಿಸಿ (ಬದಿಗೊತ್ತಿ )ಇತರರಿಗೆ ಉಪಕಾರ ಮಾಡುವುದು ಅತಿರೇಕವೆನಿಸೀತು . ಹಿರಿಯರು ಹೇಳಿಲ್ಲವೇ ?“ ಮನೆ ಗೆದ್ದು ಮಾರು ಗೆದೆ ಅಂತ”. ತನ್ನ ಮಗುವ ಎತ್ತಿ ಆಡಿಸಿ ಮುದ್ದು ಮಾಡಲು ಸಮಯವಿಲ್ಲ, ಮಕ್ಕಳ ಕಲ್ಯಾಣ , ಅಭಿವೃದ್ಧಿ ಮಾಡುತ್ತಾ ಮಕ್ಕಳು ಮಮತೆ , ಸ್ವಾತಂತ್ರ್ಯ ಬಾಂಧವ್ಯಗಳ ಬಗೆಗೆ ಭಾಷಣ ಮಾಡುವುದು ದೌರ್ಭಾಗ್ಯ. ವಿಪರ್ಯಾಸ ಕೂಡ ಹೌದು. ಒಂದು ಕಡೆ ವಿವೇಕಾನಂದರು ಹೇಳುತ್ತಾರೆ “ನಮ್ಮೊಡನೆ ನಾವು ದಿನಕ್ಕೊಮ್ಮೆಯಾದರೂ ಮಾತನಾಡಿಕೊಳ್ಳದಿದ್ದರೆ ಒಬ್ಬ ಅತ್ಯುತ್ತಮ ಸ್ನೇಹಿತನೊಂದಿಗೆ ಕಳೆಯುವ ಸಮಯವನ್ನು ಕಳೆದುಕೊಂಡಂತೆ “ ನಾವು ಇನ್ನೊಬ್ಬರ ಮಾತು ಕೇಳುತ್ತೇವೆ , ನೋವು ಕೇಳುತ್ತೇವೆ ಮರುಗುತ್ತೇವೆ ಮನೆಯೊಳಗಿನ ಮನಸಿನ ಮಾತುಗಳು ಹೊರಬರಲಾಗದೇ (ಅದೆಷ್ಟೋ) ಒಳಗೇ ಕರಗಿ ಹೋಗುವುದುʼ ಪರೋಪಕಾರಿʼಗಳಿಗೆ ಗೊತ್ತೇ ಆಗುವುದಿಲ್ಲ . ಲೋಕದಾ ಡೊಂಕು ನೀವೇಕೆ ತಿದ್ದುವಿರಿ ನಿಮ್ಮನಿಮ್ಮತನುವಸಂತೈಸಿಕೊಳ್ಳಿ ನಿಮ್ಮನಿಮ್ಮಮನವಸಂತೈಸಿಕೊಳ್ಳಿ ನೆರೆಮನೆಯದುಃಖಕೆಅಳುವವರಮೆಚ್ಚ ನಮ್ಮಕೂಡಲಸಂಗಮದೇವ ಇಲ್ಲಿ ಸ್ವಾರ್ಥದ ಮಾತೇ ಬರುವುದಿಲ್ಲ ಎಲ್ಲರೂ ತಮ್ಮನೆ , ತಮ್ಮವರು ತಮ್ಮ ಪರಿಸರ ಎಂದು ಒಂದಿಷ್ಟು ಸಮಯ ಕೊಟ್ಟರೆ ಸಮಾಜ ( ಲೋಕ) ತಾನಾಗೇ ಉದ್ಧಾರವಾಗುವುದು ಎಂಬುದಾಗಿದೆ . ಚುನಾವಣೆಯಂತಹ ಸಂದರ್ಭದಲ್ಲಿ ತಮಗೆ ಬೇಕಾದ ಅಭ್ಯರ್ಥಿಗಳಿಗಾಗಿ ಹಗಲು ರಾತ್ರಿ ಚಿಂತಿಸಿ , ಓಡಾಡಿ ಗೆಲ್ಲಿಸಿ ಹಾರಾಡುವ ಕಾರ್ಯಕರ್ತರು ತಮ್ಮ ದಾಂಪತ್ಯ ಸಂಬಂಧವನ್ನು ಹಗುರಾಗಿ ಕಡೆಗಣಿಸಿ ಸೋಲಿನತ್ತವಾಲುತ್ತಿರುವುದು ಗಮನಕ್ಕೆ ಬರುವುದಿಲ್ಲ. “ಅವರೊಂದಿಗೂ ಓಡು ನಿನ್ನವರೊಂದಿಗೇ ಇರು” ಸಾಧಕರಾರೂ ಸನ್ಯಾಸಿಗಳಾಗಿಯೇ ಸಾಧಿಸಿಲ್ಲ .ಸಂಸಾರದಲ್ಲಿದ್ದುಕೊಂಡೇ ಬಸವಣ್ಣವರುʼವಿಶ್ವಗುರುʼವಾಗಿದ್ದು , ʼನಿಜವಾದ ಸರಸ್ವತಿʼ ಮೊಟ್ಟಮೊದಲ ಶಿಕ್ಷಕಿ ʼಸಾವಿತ್ರಿಬಾಪುಲೆʼ ಪತಿಯಂದಿಗಿದ್ದುಕೊಂಡೇ ಮುನ್ನಡೆದುದಲಿ ಶಿಕ಼್ಷಕಿಯಾದರು . ಹಿರಿಯರ ಹಾರೈಕೆ , ಸಂಗಾತಿಯ ಬೆಂಬಲ ಬಂಧುಗಳ ಧೈರ್ಯ ನಿಮ್ಮ ಸಾಧನೆಗೆ ಜೊತೆಯಾಗಿ ಸಮಾಜ ಸೇವೆ ಅರ್ಥಪೂರ್ಣವಾದೀತು . ಹಿಂದಿನ ಕಾಲದಲ್ಲಿ ಬಹುತೇಕ ಎಲ್ಲ ಸಾಧಕ ಋಷಿಮುನಿಗಳೂ ಸಂಸಾರಸ್ಥರೇ ಆಗಿದ್ದು ಗಮನಿಸಬೇಕಾದ ಅಂಶ. ಪ್ರಾಣಿ ಪ್ರಪಂಚದಲ್ಲು ಕೂಡ ಇದೇ ಸಿದ್ಧಾಂತವಿದೆ . ತನ್ನ ಮರಿಗಳಿಗೆ ರೆಕ್ಕೆಬಲಿತು ಹಾರಲು ಬರುವವರೆಗೂ ತಾನೇ ಗುಟುಕು ತಂದು ತಿನಿಸುತ್ತವೆ . ತಾನಿಟ್ಟ ಮೊಟ್ಟೆಗಳ ಪೋಷಣೆಗೆ ಅಷ್ಟು ದೂರದಿಂದ ಬಂದು ಕಾವು ಕೊಟ್ಟು ಮರಿಮಾಡಿ ಪೋಷಿಸುವ ಆಮೆ, ಈ ಕರ್ತವ್ಯಗಳ ಯಾರು ಹೇಳಿ ಕೊಟ್ಟರೀ ಪ್ರಾಣಿಕುಲಕೆ ? ತನ್ನ ಮರಿಗಳೊ0ದಿಗೆ ಚಿನ್ನಾಟವಾಡುತ್ತಾ ನೀರೆರೆಚಿಕೊಳ್ತಾ ಮೂಕ ಭಾಷೆಯಲ್ಲೇ ಎಲ್ಲವನ್ನೂ ಕಲಿಸುತ್ತ ಸಮಯ ಕಳೆಯುವ ಆನೆ , ಜಿಂಕೆ ಚಿರತೆಗಳು ತನ್ನಂದಿಗೇ ತಬ್ಬಿ ಹಿಡಿದು ಅಷ್ಟು ದೂರ ಜಿಗಿದು ಆಹಾರ ಹುಡುಕಿ ಹಸಿವ ತಣಿಸುವ ಪಾಠ ಕಲಿಸುವ ಮಂಗಗಳು . ಓಹ್ !ಎಲ್ಲ ಜೀವಿಗಳು ತನ್ನ ಮರಿ ಮೊಟ್ಟೆ, ತನ್ನದೇ ಒಂದು ಗೂಡು ಮಾಡಿಕೊಂಡು ಜೀವಿಸುವ ಪರಿ ಮಾನವನಿಗೆ ಉಚಿತ ಪಾಠ . ಅಮ್ಮ ಮದರ್ ತೆರೆಸಾ ಹೇಳಿದರು “ಅನ್ನ ಸಿಗದೇ ಕೊರಗುವವರಿಗಿಂತ , ಪ್ರೀತಿ ಸಿಗದೇ ಕೊರಗಿ ಸತ್ತವರೇ ಹೆಚ್ಚು . “ ವರಕವಿ ದ ರಾ ಬೇಂದ್ರೆ ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ ಅವರನ್ನು ಮಾತ್ರ ಆಹ್ವಾನಿಸಲಾಗಿತ್ತಂತೆ. ನನ್ನ ಪ್ರಶಸ್ತಿಯ ಕಂಡು ಹರುಷಪಡುವ ನನ್ನವರಿರದ ಆ ಕಾರ್ಯಕ್ರಮಕ್ಕೆ ನಾನು ಬರಲಾರೆ “ಎಂದರಂತೆ . ಆಮೇಲೆ ಮನೆಯವರೆಲ್ಲರಿಗೂ ಬರಲು ಅವಕಾಶ ಮಾಡಿಕೊಡಲಾಯಿತು . ನಮ್ಮವರಿಗೆ ನಾವು ಕೊಡಬಹುದಾದ ʼಉಡುಗೊರʼ ಎಂದರೆ ಒಂದಿಷ್ಟು ಸಮಯ . ಇದು ಸಾಧ್ಯವಾಗುವುದಾದರೆ ಯಾಕೆ ಕೊಡಲಾಗದು ? ಮನಸುಗಳಡೆಯುವ ಮುನ್ನ, ಕತ್ತಲಾವರಿಸುವ ಮುನ್ನ ಕಣ್ ತೆರೆದು ನೋಡು ನಿನ್ನೊಂದಿಗಿರುವವರನ್ನು , ನಿನಗಾಗಿ ಮಿಡಿಯುವ ಹೃದಯಗಳನ್ನು , ನೀನೆದ್ದರೆ ಚಪ್ಪಾಳಿಸಿ ಹರ್ಷಿಸಿ ಹಾರೈಸುವವರನ್ನು. ನಿಂಗಮ್ಮಭಾವಿಕಟ್ಟಿ ನಿಂಗಮ್ಮ ಭಾವಿಕಟ್ಟಿ ಅವರು ಪಂಚ ವಾಣಿ ಪತ್ರಿಕೆಯಲ್ಲಿ ಅಂಕಣ ಬರಹಗಾರ್ತಿ. ‘ಕುಶಲೋಪರಿ’ ‘ಹಾರೈಕೆ’ ಅವರ ಕವನ ಸಂಕಲನಗಳು ‘ವಚನ ಸಂಭ್ರಮ ಆಧುನಿಕ ವಚನಗಳು’ ಎಂಬ ಪುಸ್ತಕಗಳನ್ನು ಬರೆದಿದ್ದಾರೆ. ಹೈಕುಗಳು, ಹನಿಗಳನ್ನು ಮನಮುಟ್ಟುವಂತೆ ಕಟ್ಟುವ ಲೇಖಕಿ ಬಾಗಲಕೋಟೆ ಜಿಲ್ಲೆಯ ಹುನಗುಂದದವರು. ಓದು, ಬರಹ, ಪ್ರವಾಸ ಅವರ ಹವ್ಯಾಸಗಳಾಗಿದ್ದು ಅವರಿಗೆ ‘ಕಾವ್ಯಶ್ರೀ’ ‘ರಾಜ್ಯೋತ್ಸವ ಪ್ರಶಸ್ತಿ’ ‘ಆಜೂರ್’ ಪ್ರಶಸ್ತಿಗಳು ಅರಸಿ ಬಂದಿವೆ ಆಕಾಶವಾಣಿಯಲ್ಲಿ ಅವರ ಚಿಂತನ ಸಂದರ್ಶನಗಳು ಮೂಡಿಬಂದಿವೆ.
ಅಂಕಣ ಸಂಗಾತಿ ವಿಜಯಶ್ರಿ ಹಾಲಾಡಿಯವರ ಅಂಕಣ ನೆಲಸಂಪಿಗೆ ಸಣ್ಣತನಗಳನ್ನು ಮೀರಲು… . ಈಗ ರಾತ್ರಿ ಹನ್ನೆರಡೂವರೆ ಹೊತ್ತಿಗೆ ನಾಯಿಗಳದ್ದು ಬೊಬ್ಬೆಯೋ ಬೊಬ್ಬೆ, ಸುಮಾರು ಇಪ್ಪತ್ತು ದಿನಗಳ ಕಾಲ ಬಿಡದೇ ಹೊಯ್ದ ಜಡಿಮಳೆ ಮನುಷ್ಯರು, ಪ್ರಾಣಿ-ಪಕ್ಷಿಗಳ ಹೊರ ಸಂಚಾರವನ್ನೇ ನಿಯಂತ್ರಿಸಿತ್ತು ಎಂದರೂ ಉತ್ಪೇಕ್ಷೆಯಲ್ಲ. ಮಳೆಯೊಂದಿಗೆ ಚಳಿ ಗಾಳಿಯೂ ಇದ್ದದ್ದರಿಂದ ಅಗತ್ಯ ಕೆಲಸಗಳನ್ನು ಹೊರತುಪಡಿಸಿ ಹೊರಗೆ ತಲೆ ಹಾಕಲು ಯಾರಿಗೂ ಇಷ್ಟವಿಲ್ಲ. ಆದರೆ ದಿನಚರಿ ಸಾಗದೆ ಬೇರೆ ಮಾರ್ಗವಿಲ್ಲ. ಹೀಗೆ ಎಲ್ಲರನ್ನೂ ಕಟ್ಟಿ ಹಾಕಿದ್ದ ಮಳೆ ಈಗೆರಡು ದಿನದಿಂದ ಹೊಳವಾದ್ದರಿಂದ ನಮ್ಮ ನಾಯಿಗಳ ಬದುಕಿನಲ್ಲೂ ಸ್ವಲ್ಪ ಉತ್ಸಾಹ ತುಂಬಿ, ಗಂಟಲಿಗೆ ಬಲ ಬಂದಂತಿದೆ! ಯಾಕೆ ಇಷ್ಟೊಂದು ಗಲಾಟೆ ಮಾಡುತ್ತಿವೆ ಎಂದು ಹೊರಗೆ ಹೋಗಿ ನೋಡಿದರೆ ನನಗೇನೂ ಕಾಣಲಿಲ್ಲ. ಟಾಮಿ, ಕೆಂಪಿ ಗೇಟಿನ ಹತ್ತಿರ ಆಚೀಚೆ ನುಗುಳುತ್ತಾ ಚಡಪಡಿಸುತ್ತಿದ್ದರೆ ಪ್ಯಾಚಿ ಮನೆಯ ಹತ್ತಿರ ಸರ್ತ ಕುಳಿತು ಸೂಕ್ಷ್ಮವಾಗಿ ವೀಕ್ಷಿಸುತ್ತಿತ್ತು. ಯಾರೋ ಹೊಡೆದು ಕಾಲಿಗೆ ತೀವ್ರ ಪೆಟ್ಟಾಗಿ ಈಗೊಂದು ವಾರದಿಂದ ಮೂರೇ ಕಾಲಿನಲ್ಲಿ ನಡೆಯುತ್ತಿರುವ ಗುಂಡ ಮತ್ತು ಸಣ್ಣ ಪುಟ್ಟಗಾಯವಾಗಿರುವ ಕರಡಿ(ಕರಿಯ) ಎರಡೂ ಸಿಟೌಟಿನಲ್ಲೇ ಮಲಗಿ ಕಿವಿ ಕೆಪ್ಪಾಗುವಂತೆ ಅರಚುತ್ತಲೇ ಇದ್ದವು. ಕರಡಿಯಂತೂ ಸ್ಟ್ಯಾಂಡಿನೊಳಗೆ ಮಲಗಿಯೇ ಕೂಗಾಡುತ್ತಿತ್ತು! ತಾವಿಬ್ಬರು ಯಾಕೆ ಕೂಗುತ್ತಿರುವುದೆಂದೇ ಇಬ್ಬರಿಗೂ ಗೊತ್ತಿಲ್ಲ! ಒಟ್ಟೂ ಬೊಗಳುವುದು! ಗೇಟಿನ ಹತ್ತಿರ ಯಾವುದೋ ನಾಯಿ ಸುಳಿವಾಡಿತೋ ಅಥವಾ ಬಾವಲಿ, ಗುಮ್ಮಗಳು ಓಡಾಡಿದವೋ… ಏನೋ ಸಣ್ಣ ಪುಟ್ಟ ಕಾರಣಇರಬಹುದು. ಆ ತಂಪು ವಾತಾವರಣದಲ್ಲಿ ತಿರುಗಾಡಿ ಬಂದ ನನಗಂತೂ ಗುಂಡ, ಕರಡಿಯರ ವೇಷ ಕಂಡು ನಗು ಬಂತು. ‘ಸುಮ್ನೆ ಮನಿಕಣಿ’ ಎನ್ನುತ್ತಾ ಬಾಗಿಲು ಹಾಕಿಕೊಂಡು ಬಂದು ಬರೆಯಲು ಕುಳಿತೆ. ಇದೇ ಥಂಡಿ ಥಂಡಿ ದಿನಗಳ ಬಾಲ್ಯದ ನೆನಪಾಗುತ್ತದೆ. ಅಂದಿನ ನಮ್ಮ ಮನೆ ಇರುವುದೇ ಗದ್ದೆ ಬಯಲಿನಲ್ಲಿ. ಗದ್ದೆ ಬಯಲೆಂದರೆ ಸಣ್ಣದಲ್ಲ. ಉದ್ದಾನುದ್ದಕ್ಕೆ ಎಲ್ಲರ ಮನೆಗಳ ಗದ್ದೆಗಳು. ಬದಿಯಲ್ಲಿ ಅವರವರ ಮನೆ. ಸುತ್ತಲೂ ಆವರಿಸಿದ ಹಾಡಿ, ಕಾಡುಗಳು. ಆ ದಿನಗಳಲ್ಲಿ ಕಾಡು ಜಾಸ್ತಿಯೇ ಇತ್ತು. ಮನೆಯ ಹಿಂಭಾಗದಲ್ಲಿ ತೋಟ ಮತ್ತು ತೋಟಕ್ಕೆ ಒತ್ತಿಕೊಂಡು ತೋಡು. ಈ ತೋಡಿಗೆ ಕಾಡಿನಿಂದ ಹರಿದು ಬಂದ ಸಹಜ ಉಜಿರೇ ನೀರಿನ ಮೂಲ. ಹೀಗಾಗಿ ಮಳೆ, ಚಳಿಗಾಲದಲ್ಲಿ ಬಯಲು ಪೂರ್ತಿ ಥಂಡಿ. ನಮ್ಮನೆಯಲ್ಲಿ ಅಪ್ಪಯ್ಯ ಹುಡುಕಿ ಹುಡುಕಿ ಶೋಲಾಪುರ ಹೊದಿಕೆಯನ್ನೇ ತರುತ್ತಿದ್ದುದು. ಇವು ಸೊಲ್ಲಾಪುರದಲ್ಲಿ ತಯಾರಾಗುವ ಉತ್ಕೃಷ್ಟ ಹೊದಿಕೆಗಳು. ಅಪ್ಪಯ್ಯ ಹಾಗೇ, ಅವರಿಗೆ ಯಾವ ವಸ್ತು ತೆಗೆದುಕೊಂಡರೂ ಅದು ಉತ್ತಮ ಗುಣಮಟ್ಟದ್ದೇ ಆಗಿರಬೇಕು. ಹಾಗಾಗಿ ಬಾಲ್ಯದಲ್ಲಿ ಪರಿಚಿತವಾದ ಈ ‘ಶೋಲಾಪುರ’ ಹೊದಿಕೆ ಇಂದಿಗೂ ನನ್ನನ್ನು ಬಿಟ್ಟುಹೋಗಿಲ್ಲ. ಇವುಗಳ ವಿಶೇಷತೆಯೆಂದರೆ ಗಟ್ಟಿಮುಟ್ಟು, ಸುದೀರ್ಘ ಬಾಳಿಕೆ, ಒಳ್ಳೇ ಉದ್ದ-ಅಗಲ ಮತ್ತು ಚಂದದ ಬಣ್ಣ, ಡಿಸೈನ್. ಇಷ್ಟಲ್ಲದೆ ಇವುಗಳ ದೊಡ್ಡ ಗುಣವೆಂದರೆ ಹೊದಿಕೆ ಒಂತರ ಥಂಡಿ. ನಮ್ಮದಕ್ಷಿಣ ಕನ್ನಡದ ವಾತಾವರಣಕ್ಕೆ ಚೆನ್ನಾಗಿ ಹೊಂದಿಕೆಯಾಗುತ್ತವೆ ಇವು. ಯಾಕೆಂದರೆ ಎಂಥಾ ಚಳಿಯೊಳಗೂ ಒಂಚೂರು ಉರಿ ಉರಿ, ಸೆಕೆ ಸೆಕೆ, ಬೆವರು ಬೆವರು ಅನ್ನಿಸುವ ವಾತಾವರಣ ಇಲ್ಲಿಯದು. ಹಾಗಾಗಿ ನನಗೇನೋ ಈ ಶೋಲಾಪುರ ಹೊದಿಕೆ ಹೊದ್ದು ಮಲಗಿದರೆ ನಿರಾಳ, ಒಳ್ಳೇ ನಿದ್ದೆ. ಈಗ ಮಗನಿಗೂ ಇದೇ ಅಭ್ಯಾಸವಾಗಿ ಹೋಗಿದೆ. ಈ ಹೊದಿಕೆಗಳ ಬಣ್ಣ, ಡಿಸೈನ್ಗಳ ಕುರಿತಾದ ವಿಷಯ ಬಂದಾಗ ಒಂದು ವಿಷಯವನ್ನು ಪ್ರಸ್ತಾಪಿಸಲೇಬೇಕು. ಸಣ್ಣವಳಿದ್ದಾಗ ನನಗೆ ಪದೇ ಪದೇ ಜ್ವರ ಬರುತ್ತಿತ್ತು. ಆಗ ನಾನು ಹೊದೆದ ಈ ಶೋಲಾಪುರ ಹೊದಿಕೆಯ ಕೆಂಪು ಹಸಿರು ನೀಲಿ ನೇರಳೆ ಬಣ್ಣಗಳು, ಚಿತ್ತಾರಗಳೆಲ್ಲ ದೊಡ್ಡ ಆಕಾರ ತಳೆದು ವಿಕಾರವಾಗಿ ಕಣ್ಣೆದುರು ಬಂದು ಹೆದರಿಸುತ್ತಿದ್ದವು. ಹಲ್ಲು ಕಚ್ಚಿಕೊಂಡು ಅವನ್ನೆಲ್ಲ ನೋಡುತ್ತ ಹೆದರಿ ಬೆವರುತ್ತಿದ್ದೆ. ಹೊದಿಕೆಯನ್ನು ಎಸೆಯೋಣ ಅನ್ನಿಸಿದರೂ ಕೈ ಮೇಲೇಳುತ್ತಿರಲಿಲ್ಲ. ಇಷ್ಟೆಲ್ಲ ಆದರೂ ಜ್ವರ ಬಿಟ್ಟ ನಂತರ ಮತ್ತೆ ಶೋಲಾಪುರ ಹೊದಿಕೆ ಹೊದ್ದು ಮಲಗಿದರೇ ಸರಿಯಾಗಿ ನಿದ್ದೆ ಬರುತ್ತಿದ್ದುದು! ಇಂತಹ ಹೊದಿಕೆ ಹೊದ್ದು ಅಮ್ಮಮ್ಮನ ಹತ್ತಿರ ಮಲಗಿದಾಗ ಚಳಿಗಾಲವಾದರೆ ಅಂಗಳದಲ್ಲಿ ಪಟ್ ಪಟ್ ಎಂದು ಹನಿಗಳು ಬೀಳುವ ಸದ್ದು ಕಿವಿಗೆ ಹಿತವಾಗಿ ತಾಕುತ್ತಿತ್ತು. ಅದು ತೆಂಗಿನ ಮರಗಳಿಂದ ಜಾರಿದ ಇಬ್ಬನಿ ಅಂಗಳದ ನುಣುಪು ನೆಲಕ್ಕೆ ಬೀಳುವುದು. ಹಾಗೇ ಕೆಲವೊಮ್ಮೆ ಗೆಣಸಿನ ಗದ್ದೆಗೆ ಬಂದ ಜೀವಾದಿಗಳನ್ನು ಓಡಿಸುವ ‘ಹಿಡ್ಡಿಡ್ಡಿ ಹಿಡಿ ಹಿಡಿ’ ಎಂಬ ಕೂಗು, ಕಬ್ಬಿನ ಗದ್ದೆಗೆ ಬಂದ ನರಿಗಳ ‘ಕುಕುಕುಕೂಕೂಕೂ’ ಎಂಬ ಮಧುರ ಹಾಡು ರೋಮಾಂಚನಗೊಳಿಸುತ್ತಿದ್ದವು. ಆಗೆಲ್ಲ ಕತ್ತಲ ಮಾಂತ್ರಿಕ ಲೋಕದೊಳಗೆ ಏನೋ ದೊಡ್ಡ ಬೆರಗಿದೆ ಎಂಬ ಭಾವ ನನ್ನೊಳಗೆ ಪ್ರವೇಶಿಸುತ್ತಿತ್ತು. ಕೆಲವೊಮ್ಮೆ ಹೊರಗಡೆ ದೊಡ್ಡ ಶಬ್ದ ಕೇಳಿಸಿದರೆ ಅಮ್ಮಮ್ಮ ಬ್ಯಾಟರಿ ಹಿಡಿದು ಹೋಗುತ್ತಿದ್ದರು. ಗದ್ದೆಯ ಕಂಟಗಳನ್ನು ಅಗೆದು ಅಲ್ಲಿ ಹುಳುಗಳನ್ನು ಹುಡುಕಲು ಕಾಡು ಹಂದಿಗಳು ಬರುತ್ತಿದ್ದವು. ಹಾಗೆ ಬಂದ ಅವು ಬಸಳೆ ಚಪ್ಪರದ ಗಿಡಗಳು, ಬತ್ತದ ಸಸಿಗಳು ಎಲ್ಲವನ್ನೂ ಒಕ್ಕಿ ತಲೆಕೆಳಗೆ ಮಾಡಿ ಹೋಗುತ್ತಿದ್ದವು. ಅಮ್ಮಮ್ಮಗಟ್ಟಿಗಂಟಲಲ್ಲಿ ಹೆದರಿಸಿ ಬಂದು ಗೊಣಗುತ್ತಾ ಮಲಗುತ್ತಿದ್ದರು. ಅವರಿಗೆ ಪಾಪ; ಈ ಹಂದಿಗಳ ದೆಸೆಯಿಂದ ಬೆಳೆ ಹಾಳಾಗುತ್ತಿದೆಯಲ್ಲ ಎಂಬ ಚಿಂತೆ. ಆದರೆ ನನಗೆ ಯಾವುದೋ ನಿಗೂಢ ಲೋಕಕ್ಕೆ ಪ್ರಯಾಣಿಸಿದ ಅನುಭವ. ಹೊದಿಕೆಯಿಂದ ಮುಖವನ್ನು ಮಾತ್ರ ಹೊರಗೆ ಹಾಕಿ ಮಲಗಿ ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದೆ. ಮಳೆಗಾಲದಲ್ಲಂತೂ ಹೇಳುವುದೇ ಬೇಡ. ಮನೆ ಮುಂದಿನ ಗದ್ದೆಗಳೆಲ್ಲ ಕಪ್ಪೆಗಳು, ವಿವಿಧ ಕೀಟಗಳ ಸಂಗೀತ ಮೇಳಗಳಿಂದ ತುಂಬಿ ಹೋಗುತ್ತಿದ್ದವು. ಈ ಸಂಗೀತ ಒಂದು ಜೋಗುಳದಂತೆ ನಮ್ಮ ನಿದ್ದೆಯನ್ನು ಸಂತೈಸುತ್ತಿತ್ತು. ಕಣ್ಣು ಮುಚ್ಚಿದರೆ ತೆರೆದರೆ ಕಿವಿ ತುಂಬಿದ ಮಳೆಯ ಸದ್ದು; ಜೊತೆಗೆ ಕಪ್ಪೆಗಳ ಮೊರೆತ. ಇದರ ನಡುವೆ ಸುಖ ನಿದ್ದೆ! ನಡುನಡುವೆ ಗುಮ್ಮಗಳ ಕೂಗು! ‘ಊಂಹೂಂಹೂ’ ಎಂಬ ಗುಮ್ಮಗಳ ಪ್ರಶ್ನೋತ್ತರ ಹಿತವಾದ ನಡುಕ ಹುಟ್ಟಿಸುತ್ತಾ ಇನ್ನೂ ಕೂಗಲಿ, ಮತ್ತೂ ಕೂಗಲಿ ಎಂಬ ಕಾತುರ ತುಂಬುತ್ತಿತ್ತು. ಮಿಂಚುಹುಳುಗಳು ತಳಿಕಂಡಿಯಲ್ಲಿ ಒಳಗೆ ಬರುತ್ತಿದ್ದವು. ಅವು ಗತಿಸಿದ ಮನೆಯ ಹಿರಿಯರ ಆತ್ಮಗಳು ಅಂದರೆ ಜಕ್ಣಿಗಳು ಎಂದು ದೊಡ್ಡವರು ಹೇಳಿಟ್ಟಿದ್ದರಿಂದ ಅವುಗಳನ್ನು ನೋಡಿದರೆ ಒಂತರಾ ಹೆದರಿಕೆ. ಅವುಗಳನ್ನು ಮುಟ್ಟಬಾರದು ಎಂದಿದ್ದರು. ಆದರೂ ಮುಟ್ಟುವ ತವಕ. ದೂರದ ಕೇದಗೆ ಹಿಂಡಲಿನಲ್ಲಿ ಸೀರಿಯಲ್ ಲೈಟಿನಂತೆ ಜಗ್ಗನೆ ಅವು ಮಿಂಚುವುದನ್ನು ನೋಡುವಾಗ ಆಶ್ಚರ್ಯವಾಗುತ್ತಿತ್ತು. ಈ ನಡುವೆ ಜಿರಾಪತಿ ಮಳೆಯ ಶೀತ ವಾತಾವರಣದಿಂದ ಸಣ್ಣಗೆ ಒಡಲ ಜ್ವರ ಬಂದರೆ ಮಣಸಿನಕಾಳಿನ ಕಷಾಯ, ಹುರಿದಕ್ಕಿಗಂಜಿಯ ಉಪಚಾರ. ಜೋರು ಚಳಿಯಾದರೆ ಬೆಕ್ಕುಗಳೊಂದಿಗೆ ಅಡುಗೆಮನೆಯ ಒಲೆ ಬುಡದಲ್ಲಿ ಕುಳಿತು ಆಟವಾಡುವುದು. ಪ್ರೀತಿ, ಮುದ್ದು ಸಿಗುತ್ತಿದ್ದ; ಜವಾಬ್ದಾರಿಗಳೇ ಇಲ್ಲದ ಬಾಲ್ಯ! ನಿಜವಾಗಿಯೂ ಅದೊಂದು ಕಿನ್ನರ ಲೋಕವೇ. ರಾತ್ರಿ ಒಂಬತ್ತಕ್ಕೆ ಮಲಗಿದರೆ ಬೆಳಿಗ್ಗೆ ಆರರ ತನಕ ತುದಿ ಮೊದಲಿಲ್ಲದ ನೆಮ್ಮದಿಯ ಪ್ರಪಂಚ. ಆಗ ಹೊರಲೋಕದ ಯಾವ ತಲ್ಲಣಗಳೂ ನಮ್ಮಂತಾ ಮಕ್ಕಳನ್ನು ಬಾಧಿಸಲು ಸಾಧ್ಯವೇ ಇರಲಿಲ್ಲ. ಬದುಕಿನ ಉತ್ಕೃಷ್ಟ ದಿನಗಳವು! ಎಲ್ಲರ ಮನದೊಳಗೊಂದು ಮಗು ಇರುತ್ತದೆ, ಇರಬೇಕು. ಅದು ಸಂತೃಪ್ತಿಯಾಗಿದ್ದರೆ ವ್ಯಕ್ತಿ ನೆಮ್ಮದಿಯಿಂದ ದಿನ ದೂಡಬಹುದು. ಇಲ್ಲವಾದರೆ ಬದುಕೆಲ್ಲ ನೋವು, ನಿರಾಸೆ, ಗೊಂದಲ. ಮೊನ್ನೆ ಮಳೆ ಸ್ವಲ್ಪವೇ ಸ್ವಲ್ಪ ಹೊಳವಾದ ರಾತ್ರಿ, ಹನ್ನೊಂದರ ಸುಮಾರಿಗೆ ಇಲ್ಲಿ ನಮ್ಮನೆ ಹತ್ತಿರ ಗುಮ್ಮಕೂಗಿತ್ತು! ಇದು ಬಾಲ್ಯದ ‘ಊಹೂಂಹೂಂ’ ಗುಮ್ಮಅಲ್ಲ; ಇನ್ನೊಂದು ಪ್ರಭೇದದ್ದು. ‘ಗುಗ್ಗೂ… ಘುಘ್ಘೂ’ ಎಂಬ ಕೂಗಿನದ್ದು. ಮೈ ನವಿರೆದ್ದಿತು. ನಮ್ಮ ಮಾತು ಕೇಳಿ ಸಿಟ್ಟುಗೊಂಡು ಮನೆ ಹಿಂಭಾಂಗಕ್ಕೆ ಹೋದದ್ದು ತಿಳಿದು ಮನೆಯ ಎದುರಿನ ಲೈಟ್ ಆರಿಸಿ ಹಿಂಬದಿಗೆ ಹೋಗಿ ನಿಂತು ಕೇಳಿಸಿಕೊಂಡೆ. ಮೈಯ್ಯ ನರನರಗಳನ್ನೂ ಎಚ್ಚರಿಸಬಲ್ಲ ಕೂಗು. ಸುಮಾರು ಹತ್ತು ನಿಮಿಷ ಕೂಗಿ ಆಮೇಲೆ ಮೌನ ವಹಿಸಿತು. ಅಷ್ಟು ಹೊತ್ತು ಆ ಕಡುಕತ್ತಲಿನಲ್ಲಿ ನನ್ನಿಡೀ ಗಮನ ದೂರದ ಆ ಕೂಗಿನ ಮೇಲೆ ಮಾತ್ರ ಇತ್ತು. ಇಂತಹ ಅನುಭವಗಳಲ್ಲೇ ಬದುಕಿನ ಮೂಲದ್ರವ್ಯ ಅಡಗಿರುತ್ತದೆ ಅನಿಸುತ್ತದೆ ನನಗೆ. ನಮ್ಮ ಸಣ್ಣತನಗಳನ್ನು ಮರೆಸುವ ಇಂತಹ ಸಣ್ಣ ಸಣ್ಣ ಗಳಿಗೆಗಳನ್ನಾದರೂ ನಾವು ಹುಡುಕಿಕೊಳ್ಳಬೇಕು. ವಿಜಯಶ್ರೀ ಹಾಲಾಡಿ ಹುಟ್ಟೂರು: ಮುದೂರಿ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿಯ ಬಳಿ ಗ್ರಾಮ..ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ 16 ವರ್ಷಗಳ ಸೇವೆ ಮಾಡಿದ್ದಾರೆ. ಮಕ್ಕಳ ಸಾಹಿತ್ಯದಲ್ಲಿ ಹೆಚ್ಚು ಕೃಷಿ ಮಾಡಿದ್ದಾರೆ..ಆಸಕ್ತಿಯ ಕ್ಷೇತ್ರಗಳು:ಓದು, ಬರೆಹ, ನಿಸರ್ಗ, ಹಕ್ಕಿಗಳನ್ನು ಗಮನಿಸುವುದು, ಫೋಟೋಗ್ರಫಿ, ಕಾಡಿನ ತಿರುಗಾಟ ಮುಂತಾದವು.–ಕೃತಿಗಳು :ಬೀಜ ಹಸಿರಾಗುವ ಗಳಿಗೆ,ಓತಿಕ್ಯಾತ ತಲೆಕುಣ್ಸೆ,ಅಲೆಮಾರಿ ಇರುಳು, ಪಪ್ಪುನಾಯಿಯ ಪೀಪಿ, ಸೂರಕ್ಕಿ ಗೇಟ್, ಜಂಬಿಕೊಳ್ಳಿ ಮತ್ತು ಪುಟ್ಟವಿಜಿ,ಸಾಕು ಬೆಳಕಿನ ಮಾತು , ಪ್ರಕಟಿತ ಕೃತಿಗಳು.ಪಪ್ಪುನಾಯಿಯ ಪೀಪಿ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಬಂದಿದೆ.ಜಿ.ಬಿ. ಹೊಂಬಳ ಸಾಹಿತ್ಯ ಪುರಸ್ಕಾರ, ಡಿಸೋಜ- ಎಚ್ಚೆಸ್ವಿ ಪುಟಾಣಿ ಪುರಸ್ಕಾರ, ಮುಂಬೈ ಕರ್ನಾಟಕ ಸಂಘದ ಸುಶೀಲಾ ಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿ , ಶಾರದಾ ರಾವ್ ದತ್ತಿನಿಧಿ ಬಹುಮಾನ ಇನ್ನಿತರ ಕೆಲ ಪ್ರಶಸ್ತಿಗಳು ಬಂದಿವೆ. ಪತ್ರಿಕೆಗಳಲ್ಲಿ ಕವಿತೆ, ಕಥೆ, ಪ್ರಬಂಧ, ಲೇಖನಗಳು ಪ್ರಕಟವಾಗಿವೆ.ಎರಡು ಮಕ್ಕಳ ಕವಿತೆಗಳು ಸಿಬಿಎಸ್ ಸಿ ಸಿಲೆಬಸ್ ಲ್ಲಿ ಪಠ್ಯವಾಗಿದ್ದವು.ಈಗ ಏಳನೇ ತರಗತಿ ತೃತೀಯ ಭಾಷೆ ಕನ್ನಡ ಪಠ್ಯ ಪುಸ್ತಕದಲ್ಲಿ ಮಕ್ಕಳ ಪದ್ಯವೊಂದು ಪಠ್ಯವಾಗಿದೆ.
You cannot copy content of this page