ಕಾವ್ಯಯಾನ

ಕವಿತೆ

ನಾಲ್ಕು ಹೆಜ್ಜೆ ನಡೆಯಬಹುದಿತ್ತು

ಪ್ಯಾರಿಸುತ

ನಾಲ್ಕು ಹೆಜ್ಜೆ ನಡೆಯಬಹುದಿತ್ತು ನೀನು
ಒಂದೇ ಒಂದು ಹೆಜ್ಜೆ ಮುಂದೆ ಹಾಕಲಿಲ್ಲ
ಕೈಕೈ ಹಿಡಿದು,ಭುಜಕೆ ಭುಜವ ರಕ್ಷಿಸಿ
ಮೆಚ್ಚಿಕೊಂಡಿದ್ದೆ ನಾನು
ಹಿಡಿದ ಕೈ ಕೊಸರಿಕೊಂಡು ಅಲ್ಲೇ ನಿಂತೆ ನೀನು
ನಾನು ನೀನು ಮತ್ತು ಭವಿಷತ್ತಿನ ನಮ್ಮೆರಡು
ಮುದ್ದು ಮಕ್ಕಳಿಗೆ ನೀತಿಯನ್ನು
ನೀಡಬಹುದಿತ್ತು ನಾವು…
ಇಬ್ಬರಲ್ಲಿ ಯಾರೋ ಒಬ್ಬರು ನೀತಿಗೆಟ್ಟಿದ್ದೇವೆ
ಪುಟ ಹಿಮ್ಮುಖವಾಗಿ ಹಾರಿದಂತೆಲ್ಲ
ಇಬ್ಬರು ಸ್ವಚ್ಛಂದ ಪ್ರೇಮಿಗಳು ಅನ್ನುವ
ಅದೆಷ್ಟು ಪುರಾವೆಗಳು ಉಲ್ಲೇಖಿತವಾಗಿವೆ
ಕೆಲವು ಪುಟಗಳು ಮಾಸಿ ಹರಿದು ಹೋಗಿವೆ
ಅದರಲ್ಲೇನಾದರೂ ದಾಖಲಿಸಿದ್ದು
ಉಳಿದಿರಬಹುದೇನೋ…?!

ನಾಲ್ಕು ಹೆಜ್ಜೆ ಮುಂದೆ ಹೋಗಿ,
ತಿರುಗಿ ನೋಡಿದೆ ನಾನು
ನನ್ನ ಹೆಜ್ಜೆ ಅಳಿಸಿ,
ಗುರುತು ಸಿಗದೆ ಹಲ್ಲು ತೋರಿದೆ ನೀನು
ನೀನು ನಿಂತ ಜಾಗದಲ್ಲಿ ಬೇರೊರಿದ್ದ ನೆನಪುಗಳು ನನ್ನವು
ಪಡೆದ ಪ್ರೇಮ ಮಂಜುಗಡ್ಡೆ ಅನಿಸಿ ಕರುಗಿತು
ಆಗ ಇನ್ನೇನು ಇರುತ್ತೆ ಬಾಳಲಿ…
ಒಂದಷ್ಟು ಹಸಿ ಸುಳ್ಳುಗಳು
ಮತ್ತಷ್ಟು ಕಹಿ ನೆನಪುಗಳು
ಮಲ್ಲಿಗೆ ಬಳ್ಳಿಯ ಸುತ್ತ
ಗಿರಿಕಿ ಹೊಡೆಯುತ್ತಾ ನೆರಳು
ಸೂಸುವ ನೆಪದಲ್ಲಿ ಕಾಡಲು ಅಣಿಗೊಳ್ಳುತ್ತಿವೆ
ಯಾವ ಬಿಸಿಲಿಗೆ ಮೈ ಮನಸು ದಣಿಯುತ್ತಿತ್ತೋ
ಅದೇ ಬಿಸಿಲು ಮುದಿ ವಯಸ್ಸಿಗೆ ಬೆನ್ನುಬಿದ್ದಂತಿದೆ
ಯಾವ ಹಾಡುಗಳಿಗೆ ಮೈ ಮನಸು ಕುಣಿಸುತ್ತಿದ್ದೇವೋ
ಅದೇ ಹಾಡಿಗೆ ಕೈಬೆರಳು ಮಾತ್ರ ನರ್ತಿಸುವಂತಾಗಿದೆ
ಕಣ್ಣುಗಳಲ್ಲಿ ಕಣ್ಣನಿಟ್ಟು ಕಾಣುತ್ತಿದ್ದ
ಕನಸುಗಳು ರೆಕ್ಕೆ ಕತ್ತರಿಸಿಕೊಂಡಿವೆ
ಮೆತ್ತನೆ ಎದೆಯ ಮೇಲೆ ಹತ್ತುತ್ತಿದ್ದ
ಸೊಂಪಾದ ನಿದಿರೆ ಬೇಸರ ತಂದಿದೆ
ಸದಾಕಾಲ ಮೂಲೆ ಸೇರಿ ತುಕಡಿಸುತ್ತಿದ್ದ
ವಾಲುವ ಕುರ್ಚಿ
ಅಂಗಳದಲ್ಲಿ ಬಂದು ಕುಳಿತು ಪುರಾಣ ಪ್ರಕಟಿಸಿದೆ
ಇಷ್ಟೆಲ್ಲ ಘಟಿಸಿದರೂ ಮೇಲೂ
ನಾಲ್ಕು ಹೆಜ್ಜೆ ಜೊತೆಗೂಡಬೇಕಿತ್ತು ನೀನು

*********************

Leave a Reply

Back To Top