ಕವಿತೆ
ಮಾಲತಿ ಶಶಿಧರ್
ಈಗೀಗ ದಾರಿಯಲಿ ಒಬ್ಬಳೇ
ಸ್ಕೂಟಿ ಬಿಡುವಾಗ ಹಿಂದೆ
ಯಾರೋ ಕೂತು ನನ್ನ
ನೆಚ್ಚಿನ ಗೀತೆ ಗುನುಗಿದಂತೆ,
ತಿರುಗಿ ನೋಡಿದರೆ ಖಾಲಿ
ಸೀಟು
ಕನ್ನಡಿಯ ಸರಿಪಡಿಸಿ
ಗಮನಿಸಿದರೆ ಕಣ್ಮನ
ಸೆಳೆವ ರೂಪವೊಂದು
ನಸುನಕ್ಕನಂತೆ..
ಇತ್ತ ಮನೆಯ ಮುಂದಿನ
ರಂಗೋಲಿಯ ಚುಕ್ಕಿಯೊಂದು
ತಪ್ಪಿಸಿಕೊಂಡಂತೆ
ಎಷ್ಟೇ ಗೆರೆ ಎಳೆದರು
ರಂಗೋಲಿ ಅಪೂರ್ಣವಾದಂತೆ..
ಮನೆಯ ಸೂರಿನ ಮೇಲೆ
ಕಡಜವೊಂದು ಕಟ್ಟಿದ್ದ
ಮಣ್ಣಿನ ಗೂಡು ಕುಸಿದು
ಬಿದ್ದಂತೆ,
ಮನೆಗಾಗಿ ಹುಡುಕಾಡಿ
ಏಕಾಂಗಿಯಾಗಿ ಬಿಕ್ಕಿದಂತೆ..
ಸ್ನೇಹಿತೆ ನೀಡಿದ
ಗಿಳಿಮರಿ ಜೋಡಿಗಳು
ಪಂಜರದಲ್ಲಿ
ಬಂಧಿಯಾದಂತೆ,
ಲೋಕವನೇ ಮರೆತು
ಕೊಕ್ಕಿಗೆ ಕೊಕ್ಕು
ಅಂಟಿಸಿಕೊಂಡು ಅದೇನೊ
ಮಾತಾಡಿದಂತೆ
ಹಾಡಿನಲ್ಲೂ, ಕನ್ನಡಿಯಲ್ಲೂ
ಅಪೂರ್ಣತೆಯಲ್ಲೂ,
ಅಸಹಾಯಕತೆಯಲ್ಲೂ,
ಪಂಜರದಲ್ಲೂ
ಮಾತಿನಲ್ಲೂ,
ನೋವಲ್ಲು ನಲಿವಿನಲ್ಲೂ
ಬರೀ ನಿನದೇ ನೆನಪು..
******************************
ಬ್ಯುಟಿಫುಲ್. ಕಾವ್ಯಕ್ಕೆ ಎಂಥ ಶಕ್ತಿ…
ಕವಿತೆ ಬಂಧ ಚೆಂದ
ಸೊಗಸು !!