ಕವಿತೆ
ಮೊನ್ನೆ ಇವರೂ
ಹಲವು ಯುದ್ದಗಳ ಗೆದ್ದಿದ್ದರು
ಗೆದ್ದ ರಾಜ್ಯದ ಹೆಣ್ನುಗಳ
ಬೇಟೆಯಾಡಿದ್ದರು
ಇದೀಗ ಸಾಂತ್ವಾನ ಕೇಂದ್ರಗಳ
ತೆರೆದು ಕೂತಿದ್ದಾರೆ!
ಮೊನ್ನೆ ಇವರೂ
ಊರೂರುಗಳಿಗೆ ಬೆಂಕಿ
ಹಚ್ಚಿದ್ದರು
ಉರಿದ ಮನೆಗಳಲ್ಲಿ ಹೆಂಗಸರು
ಮಕ್ಕಳೆನ್ನದೆ ತಲೆ ತರೆದಿದ್ದರು
ಇದೀಗ ಆನಾಥಾಶ್ರಮಗಳ
ತೆರೆದು ಕೂತಿದ್ದಾರೆ!
ಮೊನ್ನೆ ಇವರೂ
ಕೋವಿ ಖಡ್ಘಗಳ ಹಿಡಿದಿದ್ದರು
ಇದೀಗ ಧರ್ಮಗ್ರಂಥಗಳ
ಪಾರಾಯಣ ಮಾಡುತ್ತಿದ್ದಾರೆ!
ಮೊನ್ನೆಮೊನ್ನೆಯವರೆಗೂ ನಡೆದ
ಅಕಾರಣ ಯುದ್ದಗಳಿಗೀಗ
ಸಕಾರಣಗಳ ಪಟ್ಟಿ
ಮಾಡುತ್ತ ಕೂತಿದ್ದಾರೆ
ತರಿದ ತಲೆಗಳ
ಭೋಗಿಸಿದ ಯೋನಿಗಳ
ಕಚ್ಚಿದ ಮೊಲೆಗಳ
ಕಲಸಿಹಾಕಿದ ಭ್ರೂಣಗಳ
ನಿಖರ ಅಂಕಿಅಂಶಗಳಿಗಾಗಿ
ತಲೆ ಕೆರೆದುಕೊಳ್ಳುತ್ತಿದ್ದಾರೆ
ಪ್ರತಿ ಮನುಷ್ಯನಿಗೂ ಇರಬಹುದಾದ
ಮೃಗದ ಮುಖವಾಡವ
ಕಳಚಲೆತ್ನಿಸಿದಷ್ಟೂ
ಗೊಂದಲವಾಗುವುದು ಖಚಿತ
ನೋಡು ಬರೆಯುವಾಗಲೂ ಇದನು
ಕೆಕ್ಕರಿಸಿ ನೋಡುತಿದೆ ಮೃಗವೊಂದು
ರಣಹಸಿವಿನಿಂದ!
————————————–
ಕು.ಸ.ಮದುಸೂದನ ರಂಗೇನಹಳ್ಳಿ
(ದುರಿತಕಾಲದ ದನಿ)
FINE