ಭಾವಗಳ ಹಕ್ಕಿ

ಕವಿತೆ

ವಿದ್ಯಾ ಶ್ರೀ ಎಸ್ ಅಡೂರ್

ಭಾವಗಳ ಹಕ್ಕಿಗೆ ಹಾರುವುದೇ ಕೆಲಸ
ಒಮ್ಮೆ ಆ ಮರ..ಒಮ್ಮೆ ಈ ಮರ..
ಮಗದೊಮ್ಮೆ…..ಮತ್ತೊಂದು.

ಗಮನಿಸಿದ್ದೇನೆ ನಾನು ಬಗೆ ಬಗೆ ಹಕ್ಕಿಗಳ
ಸಂಜೆ ಹೊತ್ತು ನನ್ನ ಕೈತೋಟದಲ್ಲಿ
ಭಿನ್ನ…ಭಿನ್ನ…ಒಂದೊಂದೂ.

ಕೆಲವು ಗುಂಪು ಗುಂಪುಗಳವಾದರೆ
ಕೆಲವದೋ….ಬರೀ ಗದ್ದಲ,
ಇನ್ನು ಕೆಲವು ಮೌನವಾಗಿದ್ದರೆ..
ಮತ್ತೂ ಕೆಲವು ಬರೀ…ಒಂಟಿ.

ಬಣ್ಣ ಬಣ್ಣದ ರಂಗೋಲಿಯಂತೆ ಕೆಲವಾದರೆ,
ಹಸಿರು ಮಧ್ಯೆ ಐಕ್ಯವಾದಂತೆ ಕೆಲವು
ನಾವಿರುವುದೇ ಹೀಗೆಂಬ ಮಾಸು ಬಣ್ಣದವು ಕೆಲವಾದರೆ,
ಒಂಟಿಯಾಗಿರುವ ಕಪ್ಪು ಹಕ್ಕಿ ಮೇಲೇ….ನನಗೆ ಒಲವು.

nature animals

ತುಂಬೆ ಗಿಡದಲ್ಲೂ ಕೊಂಬೆ ಕೊಂಬೆಗೆ ಹಾರುವ ಪುಟ್ಟ ಹಕ್ಕಿ,
ಒಂದು ಹೋದಲ್ಲೆಲ್ಲ ಇನ್ನೊಂದೂ ಹೋಗುವ ಜೋಡಿ ಹಕ್ಕಿ,
ಕಾಳು ಕಂಡರೆ ತನ್ನವರ ಕರೆವ ಗುಂಪು ಹಕ್ಕಿ,
ಗಾಜಿನ ಕಿಟಕಿಯ ತೂತು ಮಾಡಿಯೇ ಸಿದ್ಧ ಎಂಬಂತ ಹಠಮಾರಿ ಹಕ್ಕಿ ,

ಹೀಗೇ ..ಎಲ್ಲಾ ಹಕ್ಕಿಗಳಲ್ಲಿಯೂ ಕಾಣುವೆನು ನಾನು ನನ್ನನ್ನೇ..
ನನ್ನದೇ ಭಾವ…ನನ್ನದೇ ನೋವು…ನಲಿವು
ಪ್ರಕೃತಿಯೇ ಹಾಗೆ…ನಮ್ಮ ನೋಟಕ್ಕೆ ತಕ್ಕಂತೆ ಅದರ ಅರ್ಥ
ಆ ಅರ್ಥ ಹುಡುಕುವ ಏಕಾಂತದತ್ತವೇ…ನನ್ನ ಸೆಳವು.

********************************

One thought on “ಭಾವಗಳ ಹಕ್ಕಿ

Leave a Reply

Back To Top