ಮಹಿಳಾ ಅಧ್ಯಕ್ಷರು ಯಾಕಿಲ್ಲ… !

ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ 1915 ರಲ್ಲಿ ಸ್ಥಾಪನೆಯಾದ ‘ಕರ್ನಾಟಕ ಸಾಹಿತ್ಯ ಪರಿಷತ್ತು’ ಆಗಿನ ಮೈಸೂರಿನ ಅರಸರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಚಲನೆಗೊಂಡಿತು. ನಂತರ 1938 ರಲ್ಲಿ ‘ಕನ್ನಡ ಸಾಹಿತ್ಯ ಪರಿಷತ್ತು’ ಎಂದು ಬದಲಾಯಿತು.

ಉದ್ದೇಶ : ಕನ್ನಡ ಪುಸ್ತಕ ಪ್ರಕಟಣೆ, ಕನ್ನಡ ನಾಡು -ನುಡಿಯ ಸಂರಕ್ಷಣೆ ಮತ್ತು ಕನ್ನಡ ಭಾಷೆಗಾಗಿ ಶ್ರಮಿಸಲು ಕಟ್ಟಲಾಗಿರುವ ಸಂಸ್ಥೆ. ಇದು ಕರ್ನಾಟಕದಾದ್ಯಂತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಏರ್ಪಡಿಸುವುದರ ಮೂಲಕ ಕನ್ನಡ ಸಾಹಿತ್ಯವನ್ನು ನಾಡಿನ ಮೂಲೆ ಮೂಲೆಗಳಲ್ಲಿ ಹರಡಲು ಸಾಧ್ಯವಾಗಿದೆ. ಇದರ ಮೂಲ ಆಶಯ ಕನ್ನಡ ಸಂಸ್ಕೃತಿಯನ್ನು ಪೋಷಿಸುವ, ಬೆಳೆಸುವ ದನಿಯಾಗುವ ಹಂಬಲ. ನಂತರದಲ್ಲಿ ಈ ಆಶಯವನ್ಹೊತ್ತು ರೂಪುಗೊಂಡ ಸಂಸ್ಥೆಗಳು ಸಂಸ್ಕೃತಿ ಇಲಾಖೆ, ಪ್ರಾಧಿಕಾರಗಳು, ವಿಶ್ವವಿದ್ಯಾಲಯದ ಕನ್ನಡ ವಿಭಾಗಗಳು, ಕನ್ನಡ ವಿಶ್ವವಿದ್ಯಾಲಯ… ಸರ್ಕಾರಿ ಕೃಪಾಪೋಷಿತ ಸಂಸ್ಥೆಗಳು ಇಂದಿಗೂ ಪ್ರಸ್ತುತ.

ಇಂತಹ ಮಹೋನ್ನತ ಗುರಿಯನ್ನಿಟ್ಟುಕೊಂಡು ಸ್ಥಾಪನೆಯಾದ ಕನ್ನಡ ಸಾಹಿತ್ಯ ಪರಿಷತ್ತು ಈಗ ನೂರು ವರ್ಷಗಳನ್ನು ಪೂರೈಸಿರುವುದು ಹೆಮ್ಮೆಯ ವಿಷಯವೇ ಸರಿ. ಇದರೊಂದಿಗೆ ಈ ನೂರು ವರ್ಷಗಳ ಇತಿಹಾಸದಲ್ಲೇ ಒಮ್ಮೆಯೂ ಮಹಿಳೆಯೊಬ್ಬಳು ಕ. ಸಾ. ಪ. ದ ಅಧ್ಯಕ್ಷರಾಗಿಲ್ಲವೆಂಬುದು ಕೂಡ ಅಷ್ಟೇ ವಿಷಾದನೀಯ ಸಂಗತಿಯೂ ಹೌದು. ಪ್ರತಿಭೆ, ಸೇವೆಗಳ ವಿಷಯದಲ್ಲಿ ಗಂಡು- ಹೆಣ್ಣುಎಂಬ ಭೇದವಿರದು. ಹೆಣ್ಣೊಬ್ಬಳು ನಾಲ್ಕು ಗೋಡೆಯೊಳಗಿನಿಂದ ಹಿಡಿದು ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮ ಹೆಜ್ಜೆಗುರುತನ್ನು ಮೂಡಿಸಲು ಮುಂದಾಗಿರುವ ಈ ಯುಗದಲ್ಲಿ ನಮ್ಮ ನಾಡು -ನುಡಿ -ಸಂಸ್ಕೃತಿಯ ದಣಿಯಾಗಲೆಂದೇ ಸ್ಥಾಪಿತವಾಗಿರುವ ಕ. ಸಾ. ಪ. ದ ಅಧ್ಯಕ್ಷ ಸ್ಥಾನಕ್ಕೆ ಇನ್ನೂ ಯಾಕೆ ಓರ್ವ ಮಹಿಳಾ ಅಭ್ಯರ್ಥಿಯೂ ಅಧ್ಯಕ್ಷರಾಗಿಲ್ಲ ಎಂಬುದು ಈಗ ಅವಶ್ಯವಾಗಿ ತರ್ಕಿಸಲೇಬೇಕಾದ ವಿಷಯ.

ಹಲವು ಆಯಾಮಗಳಲ್ಲಿ ಕಾರಣಗಳನ್ನು ಹುಡುಕುತ್ತಾ ಹೊರಟರೆ ಕೆಲವು ನಮ್ಮ ಕಣ್ಣಿಗೆ ಗೋಚರಿಸಬಹುದು.. ಆದರೆ ಗೋಚರವಾಗದೆ ಉಳಿದಿರುವ, ಉಳಿಯುವ ಕಾರಣಗಳೂ ಹಲವು ಸಿಗಬಹುದು. ನಾವು ಒಮ್ಮೆ ಚರಿತ್ರೆ, ಇತಿಹಾಸದ ಪುಟಗಳನ್ನು ತಿರುವಿಹಾಕಿದಾಗ ಗಂಡಿನಷ್ಟೇ ಹೆಣ್ಣು ಕೂಡ ರಾಜಕೀಯವಾಗಿ, ಧಾರ್ಮಿಕವಾಗಿ, ಆಧ್ಯಾತ್ಮಿಕವಾಗಿ, ಜ್ಞಾನಾತ್ಮಕವಾಗಿ, ವೈಜ್ಞಾನಿಕವಾಗಿ, ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಸರಿಸಮವಾಗಿ ನಿಲ್ಲಬಲ್ಲಳು. ಅವಳಲ್ಲಿ ಸಂಘಟನಾ ಸಾಮರ್ಥ್ಯ ಹುಟ್ಟಿನಿಂದಲೇ ಬಂದ ಬಳುವಳಿ. ಮಾನವ ಸಂಘಜೀವಿ. ಪ್ರತಿ ಕುಟುಂಬದ ಹೆಣ್ಣುಮಗಳು ಕೂಡ ಒಬ್ಬ ಸಮರ್ಥ ಸಂಘಟಕಿಯಾಗಿರುತ್ತಾಳೆ ಎಂಬುದನ್ನು ನಾವು ಅಲ್ಲಗೆಳೆಯುವಂತಿಲ್ಲ. ಕಾರಣ ಒಂದು ಕುಟುಂಬದ ಸರ್ವಸದಸ್ಯರನ್ನು ನಿಯಂತ್ರಿಸುವ ಕಲೆ ಅವಳಿಗೆ ಸಿದ್ದಿಸಿರುತ್ತದೆ. ಇದರ ಜೊತೆಗೆ ಬಂಧು -ಬಳಗ, ನೆಂಟರಿಸ್ಟರು, ವೃತ್ತಿ, ಸಮಾಜ, ಸಮುದಾಯ… ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಮಹಿಳೆ ಎಲ್ಲಾ ವಲಯದಲ್ಲೂ ಪುರುಷರಿಗೆ ಸರಿಸಳಾಗಿಯೇ ಕೆಲಸ ನಿರ್ವಹಿಸಬಲ್ಲಳು. ಆದರೆ ಇದುವರೆಗಿನ ಅಧ್ಯಕ್ಷ ಸ್ಥಾನವನ್ನು ಇಂತಹ ಪ್ರಬುದ್ಧರ ಕ್ಷೇತ್ರದಲ್ಲೇ ಯಾವ ಮಹಿಳೆಯೂ ಏರಿಲ್ಲವೆಂಬುದಕ್ಕೆ ಸಾಧ್ಯತೆಗಳು ಏನಿರಬಹುದೆಂಬುದನ್ನು ಮನಗಂಡು ಕನ್ನಡದ ಸಾಹಿತಿಗಳು, ಕನ್ನಡಪರ ಮಹಿಳಾ ಸಂಘಟನೆಗಳೆಲ್ಲವೂ ಒಗ್ಗೂಡಿ ಚಿಂತನ -ಮಂಥನಗಳ ಮೂಲಕ ಸುಧಾರಿಸಿಕೊಳ್ಳುವ ತುರ್ತು ಇದೆ. ಸಾಹಿತ್ಯ ಕ್ಷೇತ್ರದಲ್ಲಿ ಹೆಸರಾಂತ ಲೇಖಕರಿರುವಂತೆಯೇ ಲೇಖಕಿಯರು ಕೂಡ ಇದ್ದಾರೆ.. ಹಲವಾರು ಮಹಿಳಾ ಸಂಘಟನೆಗಳು ಕೂಡ ಮುಂಚೂಣಿಯಲ್ಲಿವೆ. ಆದರೂ ಯಾಕೆ ಮಹಿಳೆಯರು ಅಧ್ಯಕ್ಷಗಿರಿಗೆ ಏರಲು ಸಾಧ್ಯವಾಗಿಲ್ಲ, ಆಕಾಂಕ್ಷಿಗಳ ಕೊರತೆಯೇ, ಒತ್ತಡಗಳ ಕಾರಣವೇ, ರಾಜಕೀಯ ಲಾಭಿಯ ಗೊಂದಲಗಳೇ, ಇಂದಿಗೂ ಲಿಂಗ ಅಸಮಾನತೆಯನ್ನು ಬಿಂಬಿಸುತ್ತಿದೆಯೇ, ಸಾಮಾಜಿಕ ಪರಿಸ್ಥಿತಿಗಳ ಕಾರಣವೇ? ಅಷ್ಟಕ್ಕೂ ಅಧ್ಯಕ್ಷ ಪದವಿಗೆ ಬೇಕಿರುವುದು ನಾಡು – ನುಡಿ – ಸಂಸ್ಕೃತಿಯನ್ನು ಕಟ್ಟಿ, ಬೆಳೆಸಿ, ಪೋಷಿಸುವಂತಹ ಒಬ್ಬ ಪ್ರಾಮಾಣಿಕ ಸಮರ್ಥರು ಸಾಕಲ್ಲವೇ.. ಅವರು ಗಂಡಾಗಲಿ, ಹೆಣ್ಣಾಗಲಿ… ಆಯ್ಕೆ ಸೂಕ್ತವಾಗಿರಬೇಕು. ಇದುವರೆಗೆ ಈ ಸ್ಥಾನವನ್ನು ನಿಭಾಯಿಸುವ ಒಬ್ಬ ಮಹಿಳೆಯೂ ಸಿಕ್ಕಿಲ್ಲವೇ ಎಂಬುದು ಮಾತ್ರ ಅಚ್ಚರಿ.. ರಾಜಕೀಯದಿಂದ ಹಿಡಿದು ಬಾಹ್ಯಾಕಾಶದವರೆಗೆ ಪುರುಷರ ಸಮಕ್ಕೆ ಹೆಜ್ಜೆ ಹಾಕಿದ ಮಹಿಳೆಗೆ ಕ. ಸಾ. ಪ. ದ ಅಧ್ಯಕ್ಷಗಿರಿ ಕಷ್ಟವೇ? ಅಥವಾ ಬೆವರು, ಸೇವೆಗಳಿಗೂ ಸಾಮಾಜಿಕ ಪಿಡುಗುಗಳ ಸ್ಪರ್ಶ ತಾಕಿ ಇಂಥದ್ದೊಂದು ಪರಿಸ್ಥಿತಿ ಬಂದೊದಗಿದೆಯೇ? ಇಂತಹ ನೂರಾರು ಪ್ರಶ್ನೆಗಳಿಗೆ ಪರಿಹಾರ ದೊರಕಿ ಎಲ್ಲಾ ಕನ್ನಡದ ಸಾಹಿತಿಗಳು, ಕನ್ನಡಪರ ಮತ್ತು ಮಹಿಳಾ ಸಂಘಟನೆಗಳು ಎಚ್ಛೆತ್ತುಕೊಂಡು ಮುಂದಾದರೂ ಅಧ್ಯಕ್ಷ ಸ್ಥಾನವು ಮಹಿಳೆಯರಿಂದ ಅಲಂಕರಿಸುವುದೇ.. ಕಾದು ನೋಡಬೇಕಿದೆ.

*********************

ತೇಜೋವತಿ.ಹೆಚ್.ಡಿ.

2 thoughts on “ಮಹಿಳಾ ಅಧ್ಯಕ್ಷರು ಯಾಕಿಲ್ಲ… !

  1. ತಾಲ್ಲೂಕು ಹಾಗೂ ಜಿಲ್ಲಹಂತದಲ್ಲಿ ಮಹಿಳೆಯರು ಅಧ್ಯಕ್ಷರಾಗಿದ್ದಾರೆ.
    ಕ,ಸಾ,ಪ,ಕ್ಕೂ ಸ್ಪರ್ದಿಸಲಿ

Leave a Reply

Back To Top