ಜೀವನ ಪೂರ್ತಿ ಜೀವದ ಗೆಳೆಯ

ಜಯಶ್ರೀ ಜೆ.ಅಬ್ಬಿಗೇರಿ

ಅದೆಷ್ಟೋ ದಿನಗಳಿಂದ ಹಗಲು ರಾತ್ರಿ ಪ್ರಯತ್ನಿಸಿದರೂ ನಿನ್ನನ್ನು ಮರೆಯಲಾಗುತ್ತಿಲ್ಲ. ನಿನ್ನ ನೆನಪುಗಳು ತಲೆಯಿಂದ ಆಚೀಚೆ ಕದಲದೇ ಕರಗದ ಗುಡ್ಡದಂತೆ ಕುಳಿತುಕೊಂಡು ಬಿಟ್ಟಿವೆ. ಅದ್ಯಾಕೋ ಮರೆಯಲಾಗುತ್ತಿಲ್ಲ. ಮರೆಯಬೇಕೆಂದಷ್ಟು ಹಟ ಹಿಡಿದರೂ ನಾ ಮುಂದು ತಾ ಮುಂದು ಎಂದು ಮನಃಪಟಲದ ಮೇಲೆ ನೆನಪಿಗೆ ಬಂದು ಕಾಡುತ್ತವೆ. ಹೀಗೇಕೆ? ಅಂತ ಹೃದಯ ನೂರಾರು ಬಾರಿ ಪ್ರಶ್ನಿಸಿದರೂ ಮನಸ್ಸು ತನ್ನ ಮಾತುಗಳನ್ನು ಹೇಳಲಾಗದೇ ತನ್ನ ನಾಲಿಗೆಗೆ ದೊಡ್ಡದೊಂದು ಬೀಗ ಹಾಕಿಕೊಂಡು ತನ್ನೊಳಗೆ ಮಾತುಗಳನ್ನು ಬಂಧಿಸಿಟ್ಟು ಮೌನದಲ್ಲೇ  ಕ್ಷಣ ಕ್ಷಣವೂ ನನ್ನನ್ನು ಕೊಲ್ಲುತ್ತಿದೆ. ನಿನ್ನೊಂದಿಗೆ ಕಳೆದ ಒಲವಿನ ನೆನಪುಗಳನು ಬಿಟ್ಟು ಬಿಡದೇ ಮನದಾಗಸದಿಂದ ಮಳೆಯ ಹನಿಗಳಂತೆ ಸುರಿಯುತ್ತಿವೆ. ನೀ ದೂರವಿದ್ದರೂ ನಿನ್ನ ನೆನಪುಗಳು ಮಾತ್ರ ಹೃದಯಕ್ಕೆ ತೀರಾ ತೀರಾ ಹತ್ತಿರ.  ಬದುಕಿನ ಪಯಣದಲ್ಲಿ ಸಿಹಿ ಜೇನಿನಂಥ ನಿನ್ನ ಪ್ರೀತಿಯ ನೆನಪುಗಳು ನನ್ನವು.

ಬದುಕಲು ಅದೆಷ್ಟೊ ದಾರಿಗಳಿವೆ. ಪ್ರೀತಿಯಲ್ಲಿ ಕವಲು ದಾರಿಯಲ್ಲಿ ನಿಂತ ನನಗೆ ನನ್ನ ಕಂಗಳಿನ ತುಂಬ ನೀನೇ ಬಂದೇ ಬರುತ್ತಿಯಾ ಎಂಬ ನಂಬಿಕೆಯ ಕನಸು ಹೊತ್ತು ರಾತ್ರಿಯೆಲ್ಲ ಕಣ್ಣ ರೆಪ್ಪೆ ಮುಚ್ಚದೇ ಕಾಯುತ್ತಿದ್ದೇನೆ. ಆ ನಂಬಿಕೆಯಲ್ಲಿ ದಿನ ನಿತ್ಯದ ಬದುಕು ಸಾಗುತ್ತಲೇ ಇದೆ. ಅದೆಂತ ಅನಿವಾರ್ಯತೆ ನಿನ್ನನ್ನು ಕಾಡುತ್ತಿದೆಯೊ ಗೊತ್ತಿಲ್ಲ. ಸಹಿಸಲೇಬೇಕಾದ ಅನಿವಾರ್ಯತೆ ನನಗಿದೆ. ನಿನ್ನ ಅನಿವಾರ್ಯತೆಯನ್ನು ವಿರೋಧಿಸಲೂ ಆಗದೇ ಬಿಸಿ ತುಪ್ಪ ಬಾಯಲ್ಲಿ ಹಾಕಿಕೊಂಡ ಪರಿಸ್ಥಿತಿ ಅನುಭವಿಸುತ್ತಿದ್ದೇನೆ.

ನೀನು ಒಳ್ಳೆಯವನೋ ಕೆಟ್ಟವನೋ ಎಂದು ಗೊತ್ತಾಗುವ ಮುನ್ನವೇ ನೀ ನನ್ನ ಹೃದಯದಲ್ಲಿ ಬಲಗಾಲಿಟ್ಟು ಪ್ರವೇಶ ಪಡೆದಾಗಿತ್ತು. ನಿನ್ನಲ್ಲಿ ನನಗಿರುವುದು ಅತಿಯಾದ ಸ್ನೇಹವೊ ಬೆಳೆದ ಸ್ನೇಹದ ಮುಂದುವರಿದ ಭಾಗವಾದ ಪ್ರೀತಿಯೋ? ಅತಿ ಎನಿಸುವಷ್ಟು ಆಕರ್ಷಣೆಯೋ ಯಾವುದು ಒಂದೂ ತಿಳಿಯುತ್ತಿಲ್ಲ. ಪೂರ್ತಿ ಗೊಂದಲದ ಮಡುವಿನಲ್ಲಿ ಬಿದ್ದಿದ್ದೇನೆ. ನಮ್ಮಿಬ್ಬರ ಸಂಬಂಧಕೆ ಅದ್ಯಾವ ಹೆಸರಿಡಲಿ ತಿಳಿಯದಾಗಿದೆ.? ಹೆಸರಿಟ್ಟು ಸೀಮಿತಗೊಳಿಸುವುದು ಬೇಡವೆಂದು ಮನಸ್ಸು ಹೇಳುತ್ತಿದೆ. ಒಮ್ಮೊಮ್ಮೆ ಪ್ರೀತಿಯ ಹೆಸರಿಟ್ಟು ಬಲೆಗೆ ಸಿಕ್ಕ ಮೀನಿನಂತೆ ಒದ್ದಾಡುವ ಬದಲು ಸ್ನೇಹದ ಕಡಲಲ್ಲಿ ಇಬ್ಬರೂ ಒಂದೇ ದೋಣಿಯಲ್ಲಿ ಪಯಣಿಸುವುದೇ ಒಳ್ಳೆಯದೇನೋ ಅನಿಸುತ್ತಿದೆ. ಬೆರಳುಗಳ ಸಂದಿಯಲ್ಲಿ ನಿನ್ನ ಬೆರಳುಗಳನ್ನು ಸಿಕ್ಕಿಸಿ ಭುಜಕ್ಕೊರಗಿದಾಗ ತಂಗಾಳಿಗೆ ಆಚೀಚೆ ನಲಿದಾಡುವ ಮುಂಗುರುಳುಗಳ ಮೋಡಿಗೆ ಸೋತು ನನ್ನನ್ನೇ ನೋಡುತ್ತಿರುವಾಗ ನಿನ್ನೊಂದಿಗೆ ಹಂಚಿಕೊಳ್ಳದ ವಿಷಯವೇ ಇಲ್ಲ. ಆದರೂ ಒಮ್ಮೆಯೂ ನಿನ್ನ ಮನದ ತರಂಗಗಳಲಿ ನನ್ನ ಪ್ರೀತಿಯೇ ತುಂಬಿಕೊಂಡಿದೆಯೇ? ಎಂದು ಕೇಳಲೇ ಇಲ್ಲ. ಕೇಳಬೇಕೆನಿಸಿದರೂ ನೀನು ತಪ್ಪಾಗಿ ತಿಳಿದು ನನ್ನಿಂದ ದೂರವಾಗಿ ಬಿಡುತ್ತಿಯೇನೋ ಎಂಬ ಭಯದಲ್ಲಿ ಬೇಕಂತಲೇ ಬಾಯಿಗೆ ಬೀಗ ಹಾಕಿದ್ದೆ.

ಗೆಳೆಯಾ ನಿಜ ಹೇಳು ನನ್ನೊಂದಿಗೆ ಕಳೆದ ಪ್ರತಿ ಕ್ಷಣವು ನೀನು ಸಂತಸದಿಂದಿರಲಿಲ್ಲವೇ? ಇಷ್ಟು ವರ್ಷ ಜೊತೆಗಿದ್ದರೂ ಜೊತೆಗಾತಿಯಾಗಿ ಬಾಳು ಹಂಚಿಕೊಳ್ಳಲು ಸಿದ್ದಳಿದ್ದಿಯಾ? ಎಂದು ಒಂದು ಸಾರಿ ಕೇಳಲಿಲ್ಲವೇಕೆ? ನನಗಿಂತಲೂ ಹೆಚ್ಚು ಹುಚ್ಚು ಹಿಡಿಸಿಕೊಂಡು ತುಸು ಹೆಚ್ಚೆನಿಸುವ ಹಾಗೆ ಒಳಗೊಳಗೆ ನನ್ನನ್ನು ಪ್ರೀತಿಸುತ್ತಿದ್ದರೂ ಹೇಳಿಕೊಳ್ಳಲಾಗದೇ ಮೌನಿಯಾದೆ.

ಅದೇನೆ ಇರಲಿ ನೀನು ಮಾತ್ರ ನನ್ನಿಂದ ದೂರವಾಗಬೇಡ. ಹುಣ್ಣಿಮೆ ರಾತ್ರಿ ಸಾಗರ ಚಂದಿರನ ಮುಟ್ಟಲು ಜಿಗಿಯುವಾಸೆ. ಮನಸ್ಸು ನೆಗೆಯುತ್ತಿದ್ದರೂ ಪ್ರೀತಿಯ ನಿವೇದನೆಯನ್ನು ನಿನ್ನ ಮುಂದಿಡದೇ ಮೌನದಲ್ಲೇ ಕಾಲ ಕಳೆಯುತ್ತಿದ್ದೇನೆ. ನವ ಬಾಳಿನ ಹೊಸ್ತಿಲು ದಾಟುವಾಗ ನನ್ನ ಹೆಜ್ಜೆಯ ಹಿಂದೆ ನಿನ್ನ ಹೆಜ್ಜೆ ಇರುತ್ತದೆಂದು ಸುಂದರ ಕನಸು ಕಂಡಿದ್ದೇನೆ. ಹಾಡು ಹಗಲೇ ಲೂಟಿ ಹೊಡೆಯುವ ನಿನ್ನ ನೆನಪುಗಳಲ್ಲೂ ಅದೇನೋ ಹಿತವೆನಿಸುವ ಭಾವ.

ನಿನ್ನ ತುಟಿಯಂಚಿನ ತುಂಟ ನಗು ಓರೆಗಣ್ಣಿನಿದ ಕದ್ದು ಕದ್ದು ನೋಡುತ್ತಿದ್ದ  ನಿನ್ನ ನೋಟ ರಂಗಿನಾಟಕೆ ಹಾತೊರೆಯುತ್ತಿದ್ದ ನಿನ್ನ ಮನಸ್ಸು ಒಲವಿನ ಮಿಡಿತವನ್ನು ತುಂಬಿಕೊAಡ ನಿನ್ನ ಹೃದಯವನ್ನು ನನ್ನಿಂದ ಎಂದೂ ಮರೆಯಲಾಗುವುದಿಲ್ಲ.

ಮೊನ್ನೆ ಊರ ದೇವಿಯ ಜಾತ್ರೆಯಲ್ಲಿ ನೀನು ನನ್ನನ್ನೇ ಕದ್ದು ಕದ್ದು ನೋಡಿದ್ದನ್ನು  ಮನಸ್ಸು ಜಿಂಕೆಯಂತೆ ಜಿಗಿದಾಡಿತು.. ಜೀವನ ಪೂರ್ತಿ ನನ್ನ ಜೀವದ ಗೆಳೆಯ ನೀನೇ ಎಂದು ಮನೆಯಲ್ಲಿ ಹೇಳಿ ಒಪ್ಪಿಗೆ ಪಡೆದಾಗಿದೆ.ನನ್ನಪ್ಪ ನಿನ್ನಪ್ಪನೊಂದಿಗೆ ಮಾತಾಡಿಯೂ ಆಗಿದೆ  ಇನ್ನೇಕೆ ಹಮ್ಮು ಬಿಮ್ಮು. ಬಂದು ಬಿಡು ನದಿಯ ದಂಡೆಗೆ ಜೀವನ ಪೂರ್ತಿ ಜೀವದ ಗೆಳತಿಯಾಗಿ ಇದ್ದು ಬಿಡುವೆ ನಿನ್ನ ತೋಳ ತೆಕ್ಕೆಯಲ್ಲಿ.

===========================================================

10 thoughts on “ಜೀವನ ಪೂರ್ತಿ ಜೀವದ ಗೆಳೆಯ

  1. ಜೇನಿನಂತೆ ಸವಿಯಾದ ಲೇಖನ ತುಂಬಾ ಚೆನ್ನಾಗಿದೆ

  2. ಓದುತ ಓದುತ ಹೋದಂತೆ ಮನಸ್ಸಿನಲ್ಲಿ
    ಸಿಹಿ ಲಾಡು ಒಡೆದ ಅನುಭವ ವಾಗುವಂತ
    ಒಳ್ಳೆಯ ಪ್ರೇಮ ಕಹಾನಿ.. ಜಿ

Leave a Reply

Back To Top