ಎಂಥಾ ಮಳೆ

ಕವಿತೆ

ವಸುಂಧರಾ ಕದಲೂರು

ಅಬ್ಬಾ..
ಎಂಥಾ ಮಳೆ
ಸುರಿದೂ ಸುರಿದೂ
ಸುರಿದೂ ಸುರಿದೂ
ತಟಕ್ಕನೆ ನಿಂತರೂ
ತೊಟಕ್ ತೊಟಕ್ ಎಂದು
ತೊಟ್ಟಿಕ್ಕುತಾ
ಮಲೆ ಕಾಡು ಮನೆ ಮಾಡು
ಮರದ ನೆತ್ತಿ ಗಿಡದ ಬೇರು
ಎಲ್ಲಾ ನೆನೆಸಿತು


ಅಬ್ಬಾ…
ಎಂಥಾ ಮಳೆ
ಸುರಿದೂ ಸುರಿದೂ
ಸುರಿದೂ ಸುರಿದೂ
ನದಿ ತೊರೆ ಕೆರೆ ಝರಿ
ಹಳ್ಳ ಕೊರಲು ಕೊಳ್ಳ
ತುಂಬಿಸಿ ಚೆಲ್ಲಿ ತುಳುಕಿಸಿ
ಹರಿದು ಹರಿದು ಹಾರಿತು
ಅಬ್ಬಾ…


ಎಂಥಾ ಮಳೆ
ಅಂಚಲಿ ಕೊರೆದು ಕೊಚ್ಚಿ
ಆಳಕೆ ಸುರಿದು ಚಚ್ಚಿ
ಒಂದೇ ಸಮನೆ ಹೊಡೆದು
ಹಾಸಿ ಬೀಸಿ ಬೆಚ್ಚಿ ಬೀಳಿಸಿತು.
ಅಬ್ಬಾ…
ಎಂಥಾ ಮಳೆ
ಅಳತೆ ಮೀರಿ ಸುರಿದು
ಎಲ್ಲೆ ತೂರಿ ಹರಿದು
ದಿಕ್ಕು ತಪ್ಪಿಸಿ ಲೆಕ್ಕ ಒಪ್ಪಿಸಿ
ದಿಢೀರನೆ ಧಡಾರನೆ
ಮಿಂಚು ಗುಡುಗು
ಸಿಡಿಲು ನಡುಗು
ಬಡಿದೆಬ್ಬಿಸಿ ಮಗ್ಗಲು ಮುರಿಸಿ
ಒಳ್ಳೆ ಪಾಠ ಕಲಿಸಿತು
ಅಬ್ಬಾ…


ಎಂಥಾ ಮಳೆ
ಭುವಿಯ ಕೋಪ ತೋರಿತು
ಕಡಲ ಅಲೆಯ ಕಂಗೆಡಿಸಿತು
ಸುಖದ ಕನಸು ಕೆಡಿಸಿತು
ನಗರ ಬದುಕು ಗುಡಿಸಿತು
ಅಬ್ಬಾ…
ಎಂಥಾ ಮರುಳು ಮಳೆ.

*******************************************************

4 thoughts on “ಎಂಥಾ ಮಳೆ

  1. ಅಬ್ಬಾ..ಎಂತಹ ಮಳೆ..!
    ಮಳೆಯಲ್ಲಿ ಪದಗಳ ಆಟ ಚೆಂದ.

Leave a Reply

Back To Top