ಕವಿತೆ
ವಿದ್ಯಾ ಶ್ರೀ ಎಸ್ ಅಡೂರ್
ಸೀಟಿ ಹೊಡೆಯುತ್ತದೆ ಕುಕ್ಕರ್…ತಾಳದೇ
ತನ್ನ ಅಡಿಯಲ್ಲಿ ಉರಿಯುತ್ತಿಯುವ ಬೆಂಕಿ.
ನಾನೂಹೊರಹಾಕುತ್ತೇನೆ ನೋವು ನಲಿವುಗಳ
ಪೆನ್ನು ಕಾಗದ ಹಿಡಿದು ,ಮನವನ್ನು ಕೆದಕಿ ಕೆದಕಿ .
ಹಣೆಮೇಲಿನ ನೆರಿಗೆ, ಕಣ್ಣಂಚಿನ ಹನಿ
ತುಟಿಯ ಮೇಲ್ಮುಖ ….ಕೆಳಮುಖ ಬಾಗುವಿಕೆ
ಯಾವುದೂ ಅರ್ಥವಿಲ್ಲದ್ದಲ್ಲ….ಆಕಸ್ಮಿಕವಲ್ಲ
ಪ್ರತಿಯೊಂದಕ್ಕೂ ಇದೆ ಬೇರೆ ಬೇರೆಯೇ ಪೀಠಿಕೆ.
ಮನದ ಮ್ಲಾನತೆಯೋ, ಆಹ್ಲಾದಕತೆಯೋ
ಮುಖದ ಮೇಲೆ ಕಾಣಬೇಕಾದರೆ…ಬೇಕು
ಏನಾದರೂ ಒಂದು ಇಂಧನ….ಅದಕ್ಕೇ..
ಕುಕ್ಕರ್ ನ ಉದಾಹರಣೆ ಒಂದೇ..ಸಾಕು.
ಮನವೆಂಬುದು ಒಂದು ಕುಲುಮೆಯೇ ಸರಿ..
ಬೇಯುತ್ತಿರುತ್ತದೆ ಅಲ್ಲಿ ಬೇರೆ ಬೇರೆ ವಿಷಯ
ಯಾವುದು ಮೊದಲು, ಯಾವುದು ಮತ್ತು, ಹೇಳುವಹಾಗಿಲ್ಲ,
ಹೊರಹಾಕುತ್ತದೆ ನೋಡಿಕೊಂಡು ಸಮಯ….
ಅಲ್ಲಿ ಬೇಯುತ್ತಿರುವುದು ಖುಷಿಯೋ…ತ್ರಾಸವೋ
ಯಾವುದೇ ಆದರೂ ಆ ಕ್ಷಣಕ್ಕೆ ಅದು ಮನಸಿಗೆ ಇಂಧನ
ವಿಷಯವಿಲ್ಲದ ಮನಸು ದೆವ್ವದ ಮನೆಯಂತೆ
ಅದಕ್ಕೇ…ಗಿಜಿಗುಡುತ್ತಲೇ ಇರಬೇಕು ಮನಸು, ಪ್ರತೀಕ್ಷಣ.
*********************