ಕವಿತೆ
ಜಹಾನ್ ಆರಾ ಎಚ್. ಕೋಳೂರು
ನಾನು ನಿನ್ನನ್ನು ನೋಡಿದ್ದೇನೆ
ಆದ್ರೆ ಕಣ್ಣುಗಳು ನನ್ನದಲ್ಲ
ದಶರಥನ ಮಹೋನ್ನತ ಯೋಚನೆಯಲ್ಲಿ
ಮಂಥರೆಯ ಮೋಸದಲಿ
ಊರ್ಮಿಳೆಯ ಉದಾಸೀನತೆ ಯಲ್ಲಿ
ಲಕ್ಷ್ಮಣನ ನೆರಳಿನಲ್ಲಿ
ಹನುಮಾನನ ಸೇವೆಯಲಿ
ರಾವಣನ ಶೌರ್ಯದಲ್ಲಿ
ಹೌದು ಅದೇ ಸೀತೆಯ ಕಂಬನಿಯಲ್ಲಿ
ನಿನ್ನನ್ನು ಮತ್ತೆ ನೋಡುತಿದ್ದೇನೆ
ಮತ್ತೆ ಮತ್ತೆ ಕಣ್ಣುಗಳು ನನ್ನದಲ್ಲ
ಧರ್ಮದ ಚದರಿನಲ್ಲಿ
ಜನ್ಮ ಭೂಮಿಯ ಹಂಗಿನಲಿ
ರಾಜಕೀಯದ ದಾಳದಲಿ
ಕೋರ್ಟುಗಳ ವಿವಾದಗಳಲಿ
ದಾನಿಗಳ ದಾನದಲಿ
ಮೌಢ್ಯದ ಹಾದಿಯಲ್ಲಿ
ಮಾಧ್ಯಮದ ಗದ್ದಲದಲ್ಲಿ
ನಿನ್ನ ಸೃಷ್ಟಿದ ವಾಲ್ಮೀಕಿ
ಕಡತಗಳ ಹಿಡಿದು
ಇನ್ನೂ ಹೊರಗೆ ನಿಂತಿದ್ದಾನೆ
ಅವನ್ನು ವಿಚಾರಿಸು
ನೀ ಮತ್ತೆ ಬರುವ ಅಗತ್ಯ ಇತ್ತೆ ಎಂದು?
ಸಾವು ನೋವುಗಳ ಮೇಲೆ ಹಿಡಿತ
ತಪ್ಪಿರುವಾಗ ದೇವರಾಗುವ
ಬದಲು ವೈದ್ಯನಾಗು
ಮಂದಿರ ಮಂದಿರವಾಗಿಯೋ ಉಳಿಯುತ್ತದೆ
ಆಗ ಮಾತ್ರ ನೀನು ನನ್ನ
ಅವನ ಇವನ ಮತ್ತೊಬ್ಬನ
ಕಣ್ಣಿಗೆ ಕಾಣುವೆ
ಕ್ಷಮಿಸು
ನಿನಗೆ ಸಾದ್ಯವಾದರೆ
ರಾಮರಾಜ್ಯ ಬೇಕಿದೆ ನಮಗೆ
ಕೊಟ್ಟು ಬಿಡು
***********************
ಜಹನ್ ಆರಾ ಮೇಡಂ ಅವರ ಕಣ್ಣುಗಳು ನನ್ನವಲ್ಲ ವೆಂಬ ಕವಿತೆ ಸಕಾಲಿಕವಾದುದು.. ಚಾರಿತ್ರಿಕ ವಾಗಿ ಕಟ್ಟಿಕೊಡಲು ಯತ್ನಿಸಿದ್ದಾರೆ. ಲಂಕೇಶ್ ಅವರ ಮಾತಿನಂತೆ ಇಟ್ಟಿಗೆ ಪವಿತ್ರ ಅಲ್ಲ. ಜೀವ ಪವಿತ್ರ ಅನ್ನುವಂತೆ ಸಧ್ಯದ ದುರಿತ ಕಾಲದಲ್ಲಿ ಮಂದಿರ ಕ್ಕಿಂತ ಆಸ್ಪತ್ರೆ ಅವಶ್ಯಕತೆ ಹೆಚ್ಚು ಎನ್ನುವದು ಬಿಂಬಿತ ವಾಗಿದೆ.
ಸಾವು ನೋವುಗಳ ಹಿಡಿತ ತಪ್ಪಿರುವಾಗ ವೈದ್ಯ ದೇವೋಭವ ನ ಅಗತ್ಯವಿದೆ
ಆಗ ನನಗೆ ನಿನಗೆ ಅವನಿಗೆ ಎಲ್ಲರಿಗೂ ಕಾಣುತ್ತಿ ಎಂಬ ಸೂಕ್ಷ್ಮ ಎಳೆ ಕಾವ್ಯದಲ್ಲಿ ವ್ಯಕ್ತಪಡಿಸಿದ ಕವಯಿತ್ರಿ ಯವರಿಗೆ ಶುಭಾಶಯಗಳು
Thank yousir ji