ಕವಿತೆ
ಫಾಲ್ಗುಣ ಗೌಡ ಅಚವೆ
ಚಂದ್ರ ಎಷ್ಟೇ ಕಣ್ಣು ತೆರೆಯಲು
ಪ್ರಯತ್ನಿಸಿದರೂ
ಕಿಕ್ಕಿರಿದ ಮೋಡಗಳು ಮರ ಮರಗಳ ಕತ್ತಲನ್ನೂ
ಹೊಸಕಿ ಹಾಕುತ್ತವೆ
ಇಂತಹ ಅಪರಾತ್ರಿಯಂತಹ
ಕತ್ತಲನ್ನು ನೋಡಿದರೆ
ಶಂಕ್ರ ಕೋವಿ ಹೆಗಲಿಗೆ ಹಾಕಿ
ಶಿಕಾರಿ ಹೋದನೆಂದೆ ತಿಳಿಯಬೇಕು
ಹೋಗುವುದು ದೂರವೇನಲ್ಲ
ಒಂದು ಬರ್ಕ ಹೊಡೆದೂ ಗೊತ್ತಿಲ್ಲ
ಕಳ್ಳರಗದ್ದೆ ಸುಕ್ರು ಮನೆ ಬೇಲಿ ಆಚೆ ಒಂದು ಹತ್ತು ಮಾರು ಅಷ್ಟೇ
ಹಂದಿ ಮಲಗಿದೆಯೆಂದು
ಥರಗುಟ್ಟಿದವನು ಅದರ ತಲೆಗೆ
ಗುಂಡು ಹೊಡೆದೇ ಬಿಟ್ಟವ
ಅದೆಂಗೆ ಮನೆಗೆ ಬಂದನೋ
ಮಲಗಿದನೊ ಗೊತ್ತಿಲ್ಲ
ಮರುದಿನ ಮಾದೊಡ್ ಈಡಾಗಿದೆಂದು ನಮ್ಮೂರ ಪೆಕರನಂತ ಪೊರಗೋಳು
ಹುಡುಕಾಡಿ ಏನೂ ಕಾಣದೇ
ತಿರುಗಿ ಬಂದರು
ಮುಚ್ಚಾಕಿ ಮಲಗಿದ ಶಂಕ್ರ
ಒಂಬತ್ತಾಸಾದರೂ ಎದ್ದೇ ಇರಲಿಲ್ಲ
ಭಯ ಒದ್ದುಕೊಂಡು ಬಂದು
ಎದೆ ಗಕ್ಕೆನಿಸುವಂತೆ
ಅಗಾಗ ಅವನ ಜೀವ ಬಾಯಿಗೆ
ಬರುತ್ತಿತ್ತು.
ಆಗಾಗ ತಲೆ ಸುತ್ತಿದಂತೆ ಆದಂತಾಗಿ ಸುಮ್ಮನೆ ಅಡ್ಡಾಗುತ್ತಾನೆ
ಅವನ ಚಿಂತೆ ಭಯ ಇನ್ನೇನಲ್ಲ
ತಾನು ಹೊಡೆದದ್ದು ಹಂದಿಯೋ?
ಕೊಣಮರಿಯೋ?
ಅಥವಾ ಹಂದಿ ರೂಪದ ರಾವೋ?
ಅದು ಹಂದಿಗಿರಿಯಾದರೆ
ನನ್ನ ಸಾವಿಗೆ ವಾಯಿದೆ
ಹಾಕುತ್ತದಂತೆ!
ಯಾವ ಜಡ್ಡು ಜಾಪತ್ತು
ಬರದೇ ಸಾಯಿಸುತ್ತದಂತೆ!
ಬೆಳೆದಿತ್ತು ಮನಸಲ್ಲಿಯೇ
ಅನುಮಾನದ ಹುತ್ತ!
ಇದನೆಲ್ಲಾ ನೋಡಿ ಮೂರಸಂಜಿಗೆ
ಯಾರಗೂ ಕಾಣದಂಗೆ
ಮುಕಳೇರ್ ಹಮ್ಮು ಮನೆಯಲ್ಲಿ
ನೊಟ ಹಾಕಿಸಿದರೆ..
ಮಣೆ ಕೊಟ್ಟಿನ ಮೇಲೆ ಅಕ್ಕಿ ಕಾಳು ಹಾಕಿ ಭಾರ ಬಂದಂತಾಗಿ
ಅಂವ ‘ಅದು ರಾವೇ..!’ ಎನ್ನಬೇಕೆ?
ಅವ ಕೊಟ್ಟ ಅಕ್ಕಿ ಕಾಳು
ಮನೆ ಸುತ್ತಲೂ ಸುಳಿಸಾಯ್ತು
ಅವನ ಭ್ರಾಂತಿಯೇ ಕಡಿಮೆಯಾಗಲಿಲ್ಲ
ಶಂಕ್ರ ಎದ್ದು ಕುಳಿತದ್ದು
ಮರುದಿನ ಬೆಳಿಗ್ಗೆ ನಮ್ಮದೊಂದು
ಕೊಣಮರಿ ಬಂದಿಲ್ಲ ಅಂತ
ಸಣತಮ್ ನಾಯ್ಕ ಹೇಳಿದಾಗಲೇ!
*****************
Very nice!
Thank you..
ಕಥನ ಕವನ ಮಾದರಿಗೆ ಹೊರಳಿದ ಪಾಲ್ಗುಣ ಗೌಡರ ಕಾವ್ಯದ ಹಾದಿ….
ಮಲೆಗಳಲ್ಲಿ ಮದುಮಗಳು …ಕಾದಂಬರಿಯ ಒಂದು ಪುಟದ ವಿವರಣೆಗೆ ಹೋಗಿ ಬಂದಾಯ್ತು ಕಣ್ರಿ…ಗೌಡ್ರೆ..
ಥ್ಯಾಂಕ್ ಯು ಸರ್
ಕಥನ ಕವಿತೆ..
ಕೊನೆಯಲ್ಲಿ ಮಂದಹಾಸ ಮೂಡಿಸುತ್ತದೆ..
ಕವನ ಸುಂದರವಾಗಿ ಮೂಡಿಬಂದಿದೆ
ಕವನ ಸುಂದರವಾಗಿ ಮೂಡಿಬಂದಿದೆ
ಓದಿಸಿಕೊಂಡು ಹೋಗುವ ಕಥನ ಕವನ ಕೊನೆಯಲ್ಲಿ ಹಾಸ್ಯವಾಗಿ ಕಂಡರೂ ಇಂಥ ಅದೇಷ್ಟೋ ಕತೆಗಳು ಹಳ್ಳಿಜನರ ಬಾಳಲ್ಲಿ ನಡೆದು ಹೋಗಿವೆ. ಸುಂದರ ನಿರೂಪಣೆಯುಳ್ಳ ಕಾವ್ಯ
ಕವಿತೆ ಇಷ್ಟಪಟ್ಟ ಎಲ್ಲರಿಗೂ ಧನ್ಯವಾದಗಳು