ಯಡ್ರಾಮಿಯ ಉಡುಪಿ ಹೋಟೆಲ್

ಪ್ರಬಂಧ

ಮಲ್ಲಿಕಾರ್ಜುನ ಕಡಕೋಳ

  ಹಾಗೆ ನೋಡಿದರೆ ನಮ್ಮ ಯಡ್ರಾಮಿಗೆ  ಬೆಳ್ಮಣ್ಣು ಶಂಕರಭಟ್ಟರ ಉಡುಪಿ ಹೋಟೆಲ್ ಬರುವ ಪೂರ್ವದಲ್ಲೇ ನಿಯತ್ತಿನ ನಾಯಿಗುರುತು ಬ್ಯಾಂಕ್ ಬಂದಿತ್ತು. ಸುಂಬಡ ಹಾದಿಬದಿಯ ಬಹುಪಾಲು ಬೆಳಕಿಲ್ಲದ ಬ್ಯಾಂಕಿಗೂ ಭಟ್ಟರ ಹೋಟೆಲಿಗೂ ಕೂಗಳತೆ ದೂರ.  ಅಜಮಾಸು ಮುವತ್ತು ವರ್ಷಗಳ ಹಿಂದಿನ ಮಜಕೂರವಿದು. ಹಣಮಂದೇವರ ಗುಡಿ ಬಳಿಯ ಹಳೆಯ ಬಸ್ ನಿಲ್ದಾಣದಲ್ಲಿ ಉಡುಪಿ ಹೋಟೆಲ್. ಆಗೆಲ್ಲ ರುದ್ರಯ್ಯ ಮುತ್ಯಾನ ಹೋಟೆಲ್ ಹಾಗೂ ಹಲಕರ್ಟಿ ಶಿವಣ್ಣನವರ ಹೋಟೆಲಗಳದ್ದೇ ಸ್ಟಾರ್ ಹೋಟೆಲ್ ಹವಾ. ಯಥೇಚ್ಛ ಹೊಗೆಯುಂಡು ಮಸಿಬಟ್ಟೆ ಬಣ್ಣಕ್ಕಿಳಿದ ಪತರಾಸುಗಳು, ಹಳೆಯ ಮೇಜು, ಮುಪ್ಪಾನು ಮುರುಕು ಬೆಂಚುಗಳು, ಮಣ್ಣುನೆಲದ ದೇಸಿಯ ಈ ಹೋಟೆಲುಗಳೆದುರಿಗೆ “ಉಡುಪಿ  ಬ್ರಾಹ್ಮಣರ ಹೋಟೆಲ್ ” ಬೋರ್ಡ್ ಹೊತ್ತು ಆರ್ಸಿಸಿ ಬಿಲ್ಡಿಂಗಿನಲ್ಲಿ ಈಸ್ಟ್ ಇಂಡಿಯಾ ಕಂಪನಿ‌ಯಂತೆ ಯಡ್ರಾಮಿಯಲ್ಲಿ ಝಂಡಾ ಊರಿತು.

ಅದು ಆಗ ಮದುವೆ ಹೆಣ್ಣಿನಂತೆ ಅಲಂಕರಿಸಿತ್ತು. ಕಲರ್ಫುಲ್ ಕುರ್ಚಿ, ಟೇಬಲ್ ಗಳು, ಚೆಂದನೆಯ ಗಲ್ಲಾಕುರ್ಚಿ, ಆ ಕುರ್ಚಿ ಮೇಲ್ಭಾಗದ ಮೆರುಗಿನ ಬಣ್ಣದ ಗೋಡೆಗೆ ಅಷ್ಟಮಠದ ಭಗವತ್ಪಾದರ ಫೋಟೋ. ಅದನ್ನು ನೋಡಿದರೆ ಸಾಕು ಇವರು ಮಂಗಳೂರು, ಉಡುಪಿ ಬ್ರಾಹ್ಮಣರೆಂದು ಹೇಳಬಹುದಿತ್ತು. ಉಡುಪಿ ಕಡೆಯಿಂದ ಬರುವಾಗಲೇ  ರುಚಿಕರವಾದ ಖಾದ್ಯ ತಯಾರಕ ಒಂದಿಬ್ಬರು ಅಡುಗೆ ಭಟ್ಟರು, ಸಪ್ಲಯರೊಂದಿಗೆ  ಹೊಸರುಚಿ ಬಡಿಸುವ ಸೌಟುಗಳನ್ನೂ ತಂದಿದ್ದರು. ಇನ್ನು ಕ್ಲೀನಿಂಗ್ ಗೆ ಲೋಕಲ್ ಕೆಲಸಗಾರರನ್ನು ನೇಮಿಸಿಕೊಂಡರು. ಬಿಳಿ ಆಫ್ ಶರ್ಟ್, ಅಚ್ಚ ಬಿಳಿ ಲುಂಗಿಯ ಭಟ್ಟರು ಗಲ್ಲಾ ಪೆಟ್ಟಿಗೆ ಮೇಲೆ ಕುಂತು ಸಂಜೀಮುಂದ ಬರುವ “ಉದಯವಾಣಿ”ಯಲ್ಲಿಯ ಕರಾವಳಿ ಸುದ್ದಿಗಳನ್ನು ಓದುವಲ್ಲಿ ತೋರುವಷ್ಟೇ ಆಸಕ್ತಿಯನ್ನು ಹೋಟೆಲಿನ ಶುಚಿ ಮತ್ತು ರುಚಿಯಲ್ಲೂ ತೋರಿಸುತ್ತಿದ್ದರು. ಹಾಡಿನ ಶೈಲಿಯ ಮಧುರ ಮೆಲುದನಿಯ ಭಟ್ಟರ ಮಾತುಗಳಿಗೆ ನಮ್ಮ ಮೊಗಲಾಯಿ ಸೀಮೆಯ ಹಳ್ಳೀಮಂದಿ ಮುರಕೊಂಡು  ಬಿದ್ದಿದ್ರು.

ಯಡ್ರಾಮಿ ಅಷ್ಟೇಅಲ್ಲ ಸುತ್ತಮುತ್ತಲ ಹತ್ತಾರು ಹಳ್ಳಿಯ ನಾಲಗೆಗಳಿಗೆಲ್ಲ ಭಟ್ಟರ ಹೊಟೆಲಿನ ಅಕ್ಕಿ ಖಾದ್ಯಗಳ ಹೊಸರುಚಿಯದೇ ಬಿಸಿ – ಬಿಸಿ, ಮಾತು – ಮಾತು. ದೋಸೆ, ಇಡ್ಲಿ, ವಡೆ, ಭಟ್ಟರ ಕೇಸರಿಬಾತಿನ ಪರಿಮಳ ನಮ್ಮ ಸಿರಾಕ್ಕೆ ಇಲ್ಲದಿರುವುದು ಸಾಬೀತು ಮಾಡಿದಂಗಿತ್ತು. ಇಡ್ಲಿ ವಡಾ ತಿನ್ನಲು ಎರಡೆರಡು ಸ್ಟೀಲ್ ಚಮಚಗಳು. ಸ್ಟೀಲ್ ಗಿಲಾಸಿನಲ್ಲಿ ಕುಡಿಯುವ ನೀರು. ನೀರು ತುಂಬಿದ ಸ್ಟೀಲ್ ಜಗ್. ಅದುವರೆಗೆ ಪ್ಲಾಸ್ಟಿಕ್ ಮತ್ತು ಗಿಲಾಟಿ ಗಿಲಾಸುಗಳಲ್ಲಿ ನೀರು ಕುಡಿದ ಗಿರಾಕಿಗಳಿಗೆ ಇದೆಲ್ಲ ಹೊಸ ಮೇಜವಾನಿ, ಸಹಜವಾಗಿ ಖುಷಿಕೊಟ್ಟದ್ದು ಸುಳ್ಳಲ್ಲ. ನಮ್ಮ ದೇಸಿಯ ಹೋಟೆಲುಗಳಲ್ಲಿ ಚಾರಾಣೆಗೆ ಸಿಗುವ ಸಾದಾ ಚಹ ಇಲ್ಲಿ ಬಾರಾಣೆ. ಹೊಟ್ಟೆ ತುಂಬಾ ನಾಸ್ಟಾ ಮಾಡಿದ ಗಿರಾಕಿಗಳು ದೀಡು ರುಪಾಯಿಯ ಕೇಟಿ ಕುಡಿಯಲು ಹಿಂದೇಟು ಹಾಕುತ್ತಿರಲಿಲ್ಲ. ಆಗ ಬರೀ ಬಾರಾಣೆಗೆ ಕಟ್ಟಿಗೆ ಒಲೆ ಊದಿ ಗಟ್ಟಿಯಾದ ಕೇಟೀ ಮಾಡುತ್ತಿದ್ದ ಚಾ ದುಕಾನಿನ ಎಕ್ಸಕ್ಲೂಸಿವ್  ಕೇಟೀ ಸ್ಪೆಷ್ಲಿಸ್ಟಗಳಾದ ಮುಗಳಿ ದುಂಡಪ್ಪ, ರಾವೂರ ಬಸಣ್ಣ, ಬಸಗೊಂಡೆಪ್ಪ, ಬ್ಯಾಳಿ ಶಾಂತಪ್ಪನವರ ಕಿಟ್ಲಿ ಕೇಟೀಯ  ಖಾಸಬಾತ್ ಖಾಯಂ ಗಿರಾಕಿಗಳಿಗೂ ಉಡುಪಿ ಹೊಟೇಲಿನ ಕಾಸ್ಟಲೀ ಖಡಕ್ ಟೀ ಕುಡಿಯುವ ಖಾಯಷ್.

ನಮ್ಮ ಗಾಂವಟೀ ಹೊಟೇಲುಗಳು ಮಾಡಿದ ಪೂರಿ ಭಾಜಿ ಪುಟಾಣಿ ಚಟ್ನಿಗೆ ಸಕ್ಕರೆ, ಸೂಸ್ಲಾದ ಮೇಲೂ, ಉಪ್ಪಿಟ್ಟಿನ ಮೇಲೂ ಸಕ್ಕರೆ ಉದುರಿಸಿಕೊಂಡು  ಹೀಗೆ ಎಲ್ಲದಕ್ಕೂ ಸಕ್ಕರೆ ಉದುರಿಸಿಕೊಳ್ಳುವ ಗೋಧಿ ಖಾದ್ಯದ ನಾಲಗೆಗಳಿಗೆ ಉಡುಪಿ ಖಾದ್ಯಗಳು ಬರೀ ರುಚಿಯನ್ನಷ್ಟೇ ಬರಿಸಲಿಲ್ಲ. ಉಡುಪಿ ಹೋಟೆಲಿಗೆ ಹೋಗುವುದು ಪ್ರತಿಷ್ಠೆಯ ವಿಷಯವಾಯಿತು. ಅಂತೆಯೇ ಕಡುಬಡವರು ಕೂಡ ಉಡುಪಿ ಹೋಟೆಲಿಗೆ ಹೋಗಿ ಉಡುಪಿ ಕೃಷ್ಣನ ದರ್ಶನ ಪಡಕೊಂಡು ಬಂದಷ್ಟೇ ಸಂತೃಪ್ತರಾಗುತ್ತಿದ್ದರು. ಜವೆಗೋಧಿಯ ಉದುರು ಉಪ್ಪಿಟ್ಟು ಕೊಡುತ್ತಿದ್ದ ಶಿವಣ್ಣನ  ಜವಾರಿ ರುಚಿಯ ಮುಂದೆ ಹೈಬ್ರಿಡ್ ರವೆಯ ” ಉಪ್ಮಾ “ಆರ್ಡರ್ ಮಾಡುವಲ್ಲಿ ನಮ್ಮ ನಾಲಗೆ ರುಚಿಗಳು ಕಲಕಾಗಿದ್ದವು ಎಂದರೆ ಉಡುಪಿ ಹೊಟೆಲ್ ಪ್ರಭಾವ ಯಾವ ಪ್ರಮಾಣದ್ದೆಂದು ಅರ್ಥೈಸಬಹುದು. 

Eat The Best Udupi Food At Mathsya Hotel | LBB, Chennai

ಈಗ್ಗೆ ಎರಡು ವರ್ಷದ ಹಿಂದೆ ಯಡ್ರಾಮಿ ತಾಲೂಕು ಕೇಂದ್ರವಾಗಿದೆ. ಅಲ್ಲೀಗ ಫಿಜ್ಜಾ, ಬರ್ಗರ್, ದಾಬಾ ಕಲ್ಚರ್. ವೈನ್ ಸೆಂಟರ್, ರೆಸ್ಟುರಾಗಳು ಪ್ರವೇಶ ಪಡೆದಿವೆ. ಇದರ ನಡುವೆ ಉಡುಪಿ ಹೋಟೆಲ್ ಕಣ್ಮರೆಯಾಗಿದೆ. ಭಟ್ಟರ ವಯಕ್ತಿಕ ಕಾರಣಗಳಿಂದಾಗಿ ಕೆಲವು ವರ್ಷಗಳ ಹಿಂದೆಯೇ ನಾಪತ್ತೆಯಾಯಿತು. ಈಗೀಗ ಹೊಸ ಬಸ್ ಸ್ಟ್ಯಾಂಡ್ ಹತ್ತಿರದ ಹೋಟೆಲುಗಳ ಗೋಧಿ ಖಾದ್ಯಗಳಿಗೆ  ಬದಲು ಅಕ್ಕಿ ಖಾದ್ಯದ ವಿವಿಧ ತಿಂಡಿ ಪದಾರ್ಥಗಳು ಯಾಕೋ ಅನ್ನಭಾಗ್ಯದ ನೆನಪು ತರಿಸುತ್ತಿವೆ ? ಆದರೆ ಪಥ್ಯ ಮಾಡುವ ಉತ್ತಮರೆಲ್ಲ ಎತ್ತ ಹೋದರೋ ಎಂಬ ನಮ್ಮ ಕಡಕೋಳ ಮುತ್ಯಾ ಮಡಿವಾಳಪ್ಪನ ಹಾಡಿನಂತೆ  ನೆಲದ ನೆನಪಿನ ರುದ್ರಯ್ಯ ಮುತ್ಯಾ, ಹಲಕರಟಿ ಶಿವಣ್ಣನಂಥವರು ಎತ್ತ ಹೋದರೋ ಗೊತ್ತಿಲ್ಲ. ನಮ್ಮ ನಾಲಗೆಗಳು ಮಾತ್ರ ಹೊಸರುಚಿಯ ಬಲೆಯಲ್ಲಿ ಬಿದ್ದು ಜವಾರಿ ರುಚಿ ಮತ್ತು ಅಭಿರುಚಿಯನ್ನೇ ಕಳಕೊಂಡಿವೆ.

***************

4 thoughts on “ಯಡ್ರಾಮಿಯ ಉಡುಪಿ ಹೋಟೆಲ್

  1. ನಿಜ ಕಡಕೋಳ ಸರ್ 1994 ರಲ್ಲಿ ಯಡ್ರಾಮಿ ಕ್ಯಂಪ ಮಾಡಿದ್ವಿ ಇದೇ ಜಿಕ್ಕಜೇವರ್ಗಿ ರಾಜಣ್ಣನ ಕಂಪನಿ ಯಡ್ರಮಿಯ ದರ್ಗಾದ ಪಕ್ಕದಲ್ಲಿ ಥೇಟರ ಹಾಕಿದ್ವಿ ನೀವು ಹೇಳದೆಂಗ ಅಂದು ಯಡ್ರಾಮಿಯಲ್ಲಿ ಯಾವ ಉಡಪಿ ಹೋಟಲಗಳು ಇದ್ದಿಲ್ಲಾ ಮಾಲಕರು ಕೋಟ್ಟ 15 ರೂಪಾಯಿಯಲ್ಲಿ ಏನ ತಿಂದರೂ ಐದು ರೂಪಾಯಿ ಖರ್ಚಾಕ್ಕಿದಿಲ್ಲಾ ಅಂದಿನ ಯಡ್ರಾಮಿ ಕಲಾವಿದರ ತವರೂರು ಇಂದು ತಾಲೂಕಾಗಿದ್ದು ನನಗಂತು ಹಿಡಸಲಾರಷ್ಟು ಸಂತೋಷವಾಗಿದೆ ಇಗ್ಗೆ ಎರಡು ವರ್ಷದ ಹಿಂದೆ ಯಡ್ರಾಮಿಗೆ ಹೋಗಿದ್ದೆ ನನಗ ದಿಕ್ಕಸಿಗಲಿಲ್ಲಾ ಬಸ್ಸಿಳಿದು ನೋಡತಿನಿ ನಾನೇನ ಯಡ್ರಾಮಿಗಿಳಿದಿನೋ ಕಲಬರ್ಗಿಗೆ ಇಳಿದ್ನೊಒಂದು ತಿಳಿಲಿಲ್ಲಾ ಕ್ಷಣಹೋತ್ತು ಸುದರಿಕೊಂಡ್ರಯ್ತು ಅಂಥ ಪಟ್ಟಿ ಅಂಗಡಿಗೆ ಹೋಗಿ ಹಂಗ ಕೇಳಾಕ ಸ್ವಭಿಮಾನ ಕಾಡ್ತು ಒಂದ ಸಿಗರೇಟ ತಗೊಂಡ ಸೇದಿಕೊಂತಾ ಹತ್ತರೂಪಾಯಿ ಕೋಟ್ಟರ ನಾಲ್ಕರೂಪಾಯಿ ಹೋಳ್ಳಿ ಕೋಟ್ಟ ಯಾಕ್ರಿ ಇದಊರಾಗ ಬ್ರಿಸ್ಟಾಲ ಸಿಗರೇಟ ಒಂದರೂಪಾಯ ಕೋಟ್ಟಅಂದ ಸೇದೇನಿ ಅಂದೆ ಅಂದಿನ ಯಡ್ರಾಮಿ ಅಲ್ಲರಿ ಕಾಕ ಅಂದಾ ಆಗ ಗೋತ್ತಾಯಿತು ಅಂತೂ ನಾ ಯಡ್ರಾಮಿಗೆ ಇಳದೇನಂಥಾ ಸರ್ ಯಡ್ರಾಮಿಯ ಗತ ವೈಭವ ಓದಿ ಮನಸಂತೋಷವಾಯಿತು
    ಸರ್ ಜೈ ಶ್ರೀ ವೃತ್ತಿ ರಂಗಭೂಮಿಯ ಸೇವಕ ಕೆಂಪೇಗೌಡ ವೀರನಗೌಡ ಕರೇಗೌಡರ ಸಾ ಕದಮನಹಳ್ಳಿ ಬ್ಯಾಡಗಿ ತಾಲೂಕ ಹಾವೇರಿ ಜಿಲ್ಹಾ ಕರ್ನಾಟಕ ರಾಜ್ಯ

    1. ನಿಮ್ಮ ಸಹೃದಯ ಪ್ರತಿಕ್ರಿಯೆ ಖುಷಿ ಹುಟ್ಟಿಸಿತು.

  2. ಮಜಕೂರು, ಪ ತರಾಸು ಪದಗಳ ಅರ್ಥ ತಿಳಿಯದು..ಉಳಿದಂತೆ ಭಟ್ರ ಅಡಿಗೆಯಂತೆ ನಿಮ್ಮ ಲೇಖನವೂ ರುಚಿಕರವಾಗಿ ದೆ.

Leave a Reply

Back To Top