ಮೊದಲ ಕವಿತೆಯ ರೋಮಾಂಚನ-ಸರಣಿಯ ಕೊನೆಯ ಬರಹ
ಪೂರ್ಣಿಮಾ ಸುರೇಶ್
ಬಾಲ್ಯ, ಚಂದಮಾಮ ಪುಸ್ತಕಗಳ ಪುಟಗಳೊಳಗೆ, ಅವಿತು ಚಿತ್ರಗಳಿಗೆ ಬಣ್ಣ ತುಂಬುತ್ತಿತ್ತು. ಭೂತದ ಭೂತ, ಭವಿಷ್ಯ-ಪಿಷಾಚಿ! ಯಾವುದರ ಕಾಟವೂ ಇರದ ಮುಕ್ತವಾಗಿ ಅರಳಿದ ಸುರುಳಿ ಮೊಗ್ಗು ಮೂಡಿದಾಗ, ‘ ಇಂದು’ ವಿಗೆ ಲಂಗದಾವಣಿ.
ಯಾರ ಮನೆಯಲ್ಲಿ, ಯಾವ ಅಂಗಡಿಗಳಲ್ಲಿ ಹಳೆಯ ಕಥೆ ಪುಸ್ತಕ ಸಿಗಬಹುದು. ರಾತ್ರಿ ಹತ್ತಿರದಲ್ಲಿ ಬಯಲಾಟ ಇರಬಹುದೇ?.. ಅಮ್ಮನ ಕಣ್ಣು ಬೆದರಿಸಬಹುದೇ?.ಅಜ್ಜಿಯನ್ನು ಹೇಗೆ ಒಪ್ಪಿಸಬೇಕು..ಇವಿಷ್ಟು ಬದುಕಿನ ಬಗ್ಗೆ ಮೂಡಿಕೊಳ್ಳುತ್ತಿದ್ದ ಪ್ರಶ್ನೆ ಮೊಗ್ಗುಗಳು.
ರಾತ್ರಿ ನೋಡಿದ ಬಯಲಾಟ,ಸಂಜೆ ಓದಿದ ಚಂದಮಾಮದ ಕಥೆಗಳನ್ನು ಕಣ್ಣೊಳಗೆ ತುಂಬಿ, ಕಲ್ಪನೆಯನ್ನು ಮತ್ತಷ್ಟು ಹಿಗ್ಗಿಸಿ, ಒಬ್ಬ ಸುಂದರ ರಾಜಕುಮಾರಿ,ಒಬ್ಬ ರಾಕ್ಷಸ,ದೂರದಲ್ಲಿ ಒಬ್ಬ ರಾಜಕುಮಾರನನ್ನು ಮನದ ಭಿತ್ತಿಯಲ್ಲಿ ಚಿತ್ರಿಸಿ, ಅದರ ನಶೆಗೆ ದೇಹ,ಮನಸ್ಸಿನ ಹೆಜ್ಜೆಗಳು ಗೆಜ್ಜೆ ಕಟ್ಟಿಕೊಳ್ಳುತ್ತಿದ್ದವು. ಇವುಗಳ ಭಾರ ಇಳಿಸಿಕೊಳ್ಳುವ ಆತುರ. ಸಿಕ್ಕಿಸಿಕ್ಕಿದ ಗೆಳತಿಯರನ್ನು ಎಳತಂದು ಮನೆಯ ಪಕ್ಕದ ಅಶ್ವತ್ಥ ಮರದ ಕಟ್ಟೆಯಲ್ಲಿ ಕುಳ್ಳಿರಿಸಿ ಕಲ್ಪನೆಯ ರಾಜಕುಮಾರಿಯಿಂದ ಕಥೆ ಆರಂಭಗೊಂಡು ರಾಕ್ಷಸನ ಎಳತಂದು ರಾಜಕುಮಾರ ಬಂದು. ರಾಕ್ಷಸನ ಕೊಂದು,ಅವಳನ್ನು ಮದುವೆಯಾದ ಎಂಬಲ್ಲಿಗೆ ಕಥೆಗೊಂದು ಚುಕ್ಕಿ ಬಿದ್ದು..ಮೈ ಭಾರ ಇಳಿಸಿಕೊಂಡು ಮನದ ಕೂಸನ್ನು ಅವರ ಮಡಿಲಿಗಿಟ್ಟ ಸಂತೃಪ್ತಿ.
ಒಬ್ಬಳೇ ಕೂತಾಗಲೂ ಮರುದಿನ ರೂಪುಗೊಳ್ಳುವ ರೂಪಸಿ ರಾಜಕುಮಾರಿಗೆ ಅಷ್ಟೇ ಸುಂದರ ಹೆಸರಿಡುವ ತಾಳಲಾಗದ ಚಡಪಡಿಕೆ.
ಈ ಚಕ್ರಬಂಧದಲ್ಲಿ ಇರುವಾಗ ಬಲು ದೊಡ್ಡ ಸಮಸ್ಯೆಯೊಂದು ನನ್ನ ಇರಿಯಲು ಆರಂಭಿಸಿತ್ತು. ನನಗಿಂತ ನಾಲ್ಕು ವರ್ಷ ಕಿರಿಯಳಾದ ತಂಗಿ ಅಮ್ಮನ ಮುದ್ದಿನ ಮಗಳು. ಸಹಜವಾಗಿ ಮೊದಲ ಪ್ರಾಧಾನ್ಯತೆ ಅವಳಿಗೇ ಸಿಗುತ್ತಿತ್ತು. ಜೊತೆಜೊತೆಗೆ ನನ್ನ ಅವಳ ಜಗಳದ ನಡುವೆ ಅವಳ ಗೆಲುವಿಗೆ ಸಿಕ್ಕುವ ಬ್ರಹ್ಮಾಸ್ತೃವೆಂದರೆ ಅಮ್ಮ. ಅಮ್ಮನ ಪ್ರೀತಿಗಾಗಿ ನಮ್ಮಿಬ್ಬರ ಕಾದಾಟ, ಆಕೆಗೆ ಕೆಲಸದ ನಡುವೆ, ಕಿರಿಕಿರಿ ಉಂಟು ಮಾಡುತ್ತಿತ್ತು. ಇದರಿಂದ ದೊಡ್ಡವಳಾದ ನಾನು ಪೆಟ್ಟು ತಿನ್ನುತ್ತಿದ್ದ ಸಂದರ್ಭಗಳೂ ಕಡಿಮೆಯೇನಿಲ್ಲ. ಈ ಸೋಲಿನ ನೋವು ತಂಗಿಯ ಜೊತೆಜೊತೆಗೆ, ಅಮ್ಮನ ಜೊತೆಗೂ ವಿರಸದಂತಹ ಅನಾಮಿಕ ಭಾವ ಒಂದನ್ನು ನನಗೆ ಪರಿಚಯಿಸಿತು. ಯಾವುದನ್ನೂ ಬಹಳ ಕಾಲ ನನ್ನ ಜೊತೆ ಅಡಗಿಸಲಾಗದ ನಾನು ಇದರಿಂದ ಮುಕ್ತಿ ಹೊಂದಬೇಕಿತ್ತು. ಇದನ್ನೆಲ್ಲ ಕಥೆಯ ಒಳಗೆ ತುಂಬುವ ಚಾಕ್ಯತೆ ಆಗಿನ್ನೂ ಕಲಿತಿರಲಿಲ್ಲ. ಕಥೆಯೆಂದರೆ ರಾಜಕುಮಾರಿಗೇ ಸೀಮಿತ!. ಪುಟ್ಟ ಗುಡಿಸಲಿನಂತಹ ಮನೆಯಲ್ಲಿ ಹರಕು ಪರಕು ಫ್ರಾಕು ಧರಿಸಿ,ಕೆದರಿದ, ನನ್ನ ಪುಟ್ಟ ತಲೆಗೆ ಮೀರಿದ ಕಥಾ ವಸ್ತುವಿದು. ಆದರೆ ತಿಂಡಿ, ನಿದ್ದೆ, ಪ್ರೀತಿ ಎಲ್ಲವೂ ಅಮ್ಮನಿಂದ ಮೊದಲು ಸಿಗಬೇಕಾದದ್ದು ತನಗೇ ಎಂಬ ಹಕ್ಕೊತ್ತಾಯ.
“ದಿನವೂ ಏನು ನಿನ್ನ ರಂಪ. ನೀನು ದೊಡ್ಡವಳು. ಅರ್ಥ ಮಾಡಿಕೊಳ್ಳಬೇಕು”
ಎಂಬ ಅಮ್ಮನ ಸಮಾಧಾನದ ಮಾತುಗಳು. ಹೊಸದೊಂದು ಕಿಚ್ಚಿನ ಕಿಡಿ ಮನದೊಳಗೆ ಹಚ್ಚಿತ್ತು . ಅಮ್ಮನ ಮೇಲೆ ಕೋಪ,ತುಂಟಿ ತಂಗಿ ಮೇಲೆ ಹಠ ಎಲ್ಲವನ್ನೂ ಹೊರಹಾಕಿ ಮತ್ತೆ ನನ್ನ ರಾಜಕುಮಾರಿ ಕಥೆ ತಯಾರಿಗೆ ಹೋಗಬೇಕು. ಏನು ಮಾಡುವುದು. ಇಂತಹ ಮಹಾನ್ ದುಃಖ ಯಾರಿಗೂ ತಿಳಿಯುತ್ತಿರಲಿಲ್ಲ. ಏನು ಮಾಡುವುದು? ಆಗಲೇ ಹುಟ್ಟಿತ್ತು ಕವನ. ಅದು ಬಾಲಕಿ ಕುಂತಿಗೆ ಹುಟ್ಟಿದ ಕರ್ಣ ನಂತಹಾ ಮಗು. ಹಳೇ ಪುಸ್ತಕ ಒಂದರಲ್ಲಿ ಗೀಚಿದ್ದು.”ಅಮ್ಮ ಪ್ರೀತಿಸುವುದಿಲ್ಲ” ಎಂಬ ಭಾವಾರ್ಥದ ನನ್ನ ಮೊದಲ ಕವನ. ಜೊತೆಗೆ ದಿನಾಂಕ ನಮೂದಿಸಿದ್ದೆ. ಅದು ಯಾರಿಗೂ ಕಾಣಲಿಲ್ಲ , ಕಾಣುವ ಪುಟದಲ್ಲಿ ದಾಖಲಾಗಲೂ ಇಲ್ಲ. ಆ ಹಳೆಯ ಪುಸ್ತಕ ಬಹು ಕಾಲ ಇದ್ದು ಕೊನೆಗೆಲ್ಲೋ ಮಾಯವಾಯಿತು.
ನಂತರ ಮತ್ತೆ ರಾಜಕುಮಾರಿಯನ್ನು ಪೋಷಿಸಿ ಹೊರತಂದು ಸ್ನೇಹಿತರ ಎದುರು ತಂದು ನಿಲ್ಲಿಸುವ ಕಥನ ಕಾಯಕವೇ ಮುಂದುವರೆದಿತ್ತು.
ಕವನ,ಕವಿತೆ,ಬುದ್ದಿವಂತರಿಗೆ ಮಾತ್ರ ಸರಿ. ಕವಿಗಳೆಂದರೆ ಅದ್ಭುತವೇನೋ ಕಂಡಂತೆ: ಆ ಕವಿತೆ, ನಿಜವಾದ ಕವಿತೆ ಆಗಿತ್ತೇ..ತಿಳಿಯದು. ಆದರೆ ನಂತರದ ದಿನಗಳಲ್ಲಿ ಅಮ್ಮನಿಗೆ ಅದನ್ನು ತೋರಿಸಿ ಅವಳು ನಕ್ಕು ನನ್ನ ಪೆದ್ದು ನಡವಳಿಕೆಗಾಗಿ, ನಗಲು ಬಹಳ ಕಾಲ ಕಾರಣವಾಗಿತ್ತು.
ಮುಂದೆ ಕವಿತೆ ಹೇಗಿರಬೇಕು? ನಾನೂ ಕವಿತೆ ಬರೆಯಲು ಸಾಧ್ಯವೇ ಎಂದು ಯೋಚನೆಗೆ ಒಳಗಾಗಿದ್ದೆ. ಕವಿತೆ ಬರೆಯುವವರೆಲ್ಲ ಮೇಧಾವಿಗಳು. ಅದು ನನ್ನಂತಹ ಸಾಧಾರಣ ಮಂಡೆಯ ಹೆಣ್ಣಿಗೆ ಒಲಿಯುವಂತಹದಲ್ಲ. ಹೆಚ್ಚೆಂದರೆ ಕಥೆ ಬರೆಯಬಹುದು ಎಂದು ನನ್ನ ಕನಸಿಗೆ ಕಥೆಯ ಆಹಾರ ನೀಡಿ ಸಮಾಧಾನ ಮಾಡಿದ್ದೆ.
ಆದರೂ ಹಳೇ ನೋಟ್ ಪುಸ್ತಕಗಳಲ್ಲಿ ನನಗೂ ಸರಿಯಾಗಿ ಅರ್ಥ ಆಗದ,ಬೇರೆಯವರಿಗೆ ಏನೆಂದೇ ತಿಳಿಯಲಾಗದ ಸಾಲುಗಳನ್ನು ಗೀಚಿ ಖುಷಿ ಪಟ್ಟದ್ದೂ ಇದೆ. ಆದರೆ ಇದಾವುದೂ ಕವಿತೆಯ ದರ್ಜೆಗೆ ಏರದೆ, ಕವಯತ್ರಿ ನಾನು ಆಗಲೇ ಇಲ್ಲ.
ಕಾಲೇಜಿನಲ್ಲಿ ನಮ್ಮ ಕನ್ನಡ ಪ್ರಾಧ್ಯಾಪಕರು ನಿನ್ನ ಭಾಷೆ ಚೆನ್ನಾಗಿದೆ. ಕವನ ಬರೆಯುತ್ತೀಯಾ..ಎಂದಾಗ ಬಾಂಬ್ ಸ್ಪೋಟವಾದಂತೆ ಬೆಚ್ಚಿ,ಅಂಜಿ ಓಡಿದ್ದೆ. “ಅಬ್ಬ! ಕವನ ? ನಾನು ಹೇಗೆ ಬರೆಯೋದು..ಅದು ನನಗಲ್ಲ.”
ಕೊನೆಗೂ ಒಮ್ಮೆ ಕವಿತೆ ನನ್ನಲಿ ಬಂದು ಗುನುಗುನು ಗುನುಗಿ ಲಹರಿಯೊಂದನ್ನು ತೇಲಿಸಿ ಬಿಟ್ಟಳು. ನಮ್ಮ ಮನೆಯ ಬಳಿ ಒಂದು ಮನೆಯಿತ್ತು. ಕೇವಲ ಹೆಂಗಸರಿದ್ದ ಮನೆ. ಸುಂದರ ಮಹಿಳೆಯರು. ನನಗೋ ವಾತ್ಸಲ್ಯದ ಮಹಾಪೂರ ಹರಿಸಿದವರು. ಅವರನ್ನು ಅಜ್ಜಿ,ದೊಡ್ಡಮ್ಮ,ಸಣ್ಣಜ್ಜಿ ಅಂತೆಲ್ಲ ಕರೆಯುತ್ತಿದ್ದೆ. ಬಾಲ್ಯ ಬಸಿದು ಹರೆಯ ಅಪ್ಪಿ ಯೌವನ ಕೂತು ಒಳಗೊಳಗೆ ಸಂಚಲನ ಮೂಡಿಸಿದ ಬಳಿಕ ಅವರು ನನ್ನ ಮನಸ್ಸಿನ ಆಳದಲ್ಲಿ ಗಟ್ಟಿಯಾಗಿ ಕೂತು ವೇದನೆ, ನೋವಿನ, ಪ್ರೇಮದ ಬಿಗಿದ ತಂತಿ ಎಳೆದಂತೆ .ಯಾವುದೋ ತಳಮಳ. ಬರೆಯಬೇಕು..ಹೇಗಾದರೂ..ಯಾರಿಗೂ ತಿಳಿಯಬಾರದು..ಆದರೂ ಆ ಅವರ ನೋವು ದಾಖಲಾಗಬೇಕು. ಆಗ ತಿಳಿವಿನಾಚೆಯಿಂದ ಕೆಲವು ಸಾಲುಗಳು ಹೊಳೆದು ಪುಟಗಳಲ್ಲಿ ದಾಖಲಾಗಿದ್ದವು. ಬರೆದು ನಾನೇ ಓದಿ ಕಣ್ಣೀರಾಗುತ್ತಿದ್ದೆ.
ಪ್ರೇಮ,ಪ್ರೀತಿ ಹರೆಯದ ಕನಸು ನನ್ನ ಕವಿತೆಗೆ ವಸ್ತುವಾಗದೆ, ದೇವದಾಸಿಯರು ಎಂದು ಕರೆಸಿಕೊಳ್ಳುವ ಆ ನಾಲ್ಕು ಅಮ್ಮಂದಿರ ಒಡಲ ಬಿಸುಪು ಕವನವಾಗಿತ್ತು.
ಅಂತರಂಗದ ಬಯಲಾಟ
ಮಬ್ಬಾದ ಕಣ್ಣಂಗಳದಲಿ
ಹಿತ್ತಲ ಬಯಲಾಟ
ಪಾತ್ರಧಾರಿಗಳು ಅದಲು ಬದಲು
ಪ್ರಸಂಗ ಮಾತ್ರ ಅದೇ..
ಸುಕ್ಕುಗಟ್ಟಿದ ಕೆನ್ನೆಗಳಲೂ
ಮೂಡಲ ಮನೆಯ ರಂಗು
ಕರಗುತ್ತಿದ್ದ ಬಣ್ಣಗಳಲಿ
ಉಳಿದಿಹುದು ಕೆಂಪೊಂದೇ
ಜೋತು ಬಿದ್ದ ಪ್ರಾಯ
ಬಾಲ್ಯ ಯೌವನಗಳ ಯುಗಾದಿ
ಮರೆತು ಬಿಟ್ಟ ಸಿಹಿಯೂಟ
ಅಂಟು ಜಾಡ್ಯ ಕಹಿಯೊಂದೇ
ಸಡಿಲಿಸಿದ ತೋಳುಗಳಲಿ
ದಂಡ ನಾಯಕರ ಗುರುತು
ಕನಸುಗಳ ಅಚ್ಚಿನಲಿ
ಬಡ್ಡಿಗಳಿಸುತಿಹ ವೇದನೆ
ಕುಸಿಯುತಿಹ ಕಾಲುಗಳು
ನವಿಲ ಗೆಜ್ಜೆ ಕುರುಹು
ಗಂಡು ಹೆಜ್ಜೆಯ ಭಾರಕೆ
ಧರೆಗಂಟಿದ ದೇಹ
ಮೌನವೃತಕೆ ವಾಲುತಿಹ ಮಸ್ತಿಷ್ಕದಲಿ
ಕುರುಕ್ಷೇತ್ರದ ಶಂಖನಾದ
ಕೈ ಚೆಲ್ಲುತಿಹ ಸಾರಥಿ
ವಿಜಯ ದುಂಧುಬಿ ಎಲ್ಲಿಯೋ..
** ** ** **
ಅದನ್ನು ಓದಿದ ಹಿರಿಯ ಕವಯತ್ರಿಯೊಬ್ಬರು ಕೇಳಿದ್ದರು
” ಇದೇನೇ,ಈ ಹರೆಯದಲ್ಲಿ ಇಂತಹ ಕವನ ಬರೆದಿರುವೆ. ನಿನಗೆ ಹೊಂದುವ,ನಿನ್ನ ವಯಸ್ಸಿನ ಭಾವನೆಗಳನ್ನು ಬರಿ. ಇದೆಲ್ಲಿ ಸಿಕ್ತು.”
ನಸುನಕ್ಕಿದ್ದೆ. ಅಂತರಂಗದಲ್ಲಿ ಪಟ್ಟಾಗಿ ಕೂತ ಅನುಭೂತಿ ಹಾಗೆ ಸಾರ್ವಜನಿಕವಾಗಿ ಬಿಡಿಸಿಡಲಾದೀತೇ.. ಅದು ಅನನ್ಯ. ಅದರ ಸಾರವಷ್ಟೇ ಬಸಿದು ಬೇರೊಂದು ಬಗೆಯಲ್ಲಿ ಅಕ್ಷರದ ಬಸಿರಲ್ಲಿಟ್ಟು ಹಿತದ ನೋವಿನಲ್ಲಿ ಅರಳಿಸುವ ಯತ್ನ ಮಾಡಬಹುದು. ಆ ಕವನ ನೋವಿನ ಜೊತೆಜೊತೆ ಆಪ್ತವಾದ ನೆನಪುಗಳೊಂದಿಗೆ “ನನ್ನ ಮೊದಲ ಕವನ” ಎಂಬ ಮುದ್ದೂ ಜೊತೆ ಸೇರಿಕೊಂಡಿದೆ.
ಮುಂದೆ ಕವನ ಹೇಗಿರುವುದು..ಇದು ಕವನ ಆಗಿದೆಯೇ..ನಾನು ಬರೆದಿರುವುದು ಕವಿತೆಯೇ ಎಂಬ ಗೊಂದಲಗಳೊಂದಿಗೆ ಕವಿತೆ ಹಾಗೂ ನಾನು ಜೊತೆಜೊತೆಯಾಗಿ ಬದುಕು ಸಾಗಿಸುತ್ತಿದ್ದೇವೆ.
****************************
ನೆನಪುಗಳು ಚೆಂದ