ಮೊದಲ ಕವನ

ಮೊದಲ ಕವಿತೆಯ ರೋಮಾಂಚನ

ಡಾ.ಪ್ರೇಮಲತ ಬಿ.

ತುಮಕೂರಿನ ಮಾಧ್ಯಮಿಕ ಶಾಲೆಯಲ್ಲಿದ್ದೆ. ಅತ್ಯಂತಗಟ್ಟಿ  ಚರ್ಚಾಪಟು ಅಂತ ಹೆಸರಾಗಿದ್ದೆ. ಆದಾಗ  ಧಾರವಾಡದಲ್ಲಿ ನಡೆಯಲಿದ್ದ ಎರಡನೇ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದ ಮಕ್ಕಳ ಗೋಷ್ಠಿಯ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ನಡೆಯುತ್ತಿತ್ತು. ಆಯ್ಕೆದಾರರು ಇಡೀ ಕರ್ನಾಟಕದ ಎಲ್ಲ ನಗರಗಳಿಗೂ ಭೇಟಿ ಕೊಟ್ಟು ಮಕ್ಕಳನ್ನು ಹುಡುಕುತ್ತಿದ್ದರು.

ಜಗದೀಶ ಮಳಗಿ ಎನ್ನುವವರು ನಮ್ಮ ಶಾಲೆಗೂ ಬಂದರು.ಕೊಟ್ಟ ವಿಚಾರದ ಬಗ್ಗೆ ಪ್ರಭಂದವನ್ನು ಬರೆದು ದೊಡ್ಡದೊಂದು ಭಾಷಣ ಮಾಡಿದ್ದೆ. ಅದಾದ ನಂತರ ಏನೂ ಹೇಳದೆ ಅವರು ಹೊರಟುಹೋದರು.ಒಂದೆರಡು ವಾರದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು ನನ್ನನ್ನೇ ಅಧ್ಯಕ್ಷಳನ್ನಾಗಿ  ಮಾಡಲು ಆಯ್ಕೆದಾರರ ಸಮಿತಿ ನಿರ್ಧರಿಸಿದ್ದಾರೆಂದು ತಿಳಿಸಿದರು.

ಧಾರವಾಡದ ಕಲಾಮಂದಿರದಲ್ಲಿ ನಡೆದ ಸಮ್ಮೇಳನದಲ್ಲಿಸಿದ್ದಯ್ಯ ಪುರಾಣಿಕರು, ಶಿವರಾಮ ಕಾರಂತರು,ಸಿಸು ಸಂಗಮೇಶರು, ಮುಖ್ಯಮಂತ್ರಿ ಬೊಮ್ಮಾಯಿ ಹೀಗೆ ದೊಡ್ಡ ದೊಡ್ಡ ಹೆಸರಿನ ಜನರು ಭಾಗವಹಿಸಿದ್ದರು.ಅವರೆಲ್ಲರ ಎದುರು ಭರ್ಜರಿ ಭಾಷಣ ಮಾಡಿ ಎರಡೆರಡು ಬಾರಿ ಕರತಾಡನ ಗಿಟ್ಟಿಸಿಕೊಂಡೆ. ಮಕ್ಕಳ ಸಾಹಿತ್ಯದ ಮಹತ್ವ ಮತ್ತು ಅದನ್ನು ಗಂಗಾನದಿಗೆ ಹೋಲಿಸಿ ಅದು ಕಲುಷಿತಗೊಂಡರೆ ಆಗುವ ಅನಾಹುತಗಳ ಬಗ್ಗೆಯೆಲ್ಲ ಮಾತಾಡಿದ್ದ ನೆನಪು.

ಈ ಅನುಭವದ ಮತ್ತು ಒಡನಾಟದ ಕಾರಣ ಬರೆಯಬೇಕೆನ್ನುವ ಹುನ್ನಾರ ಮೂಡಿತು.

ಆ ಹೊತ್ತಿಗೆ ಹಲವು  ಪ್ರಭಂದ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ್ದನ್ನು ಬಿಟ್ಟರೆ ಸ್ವತಃ ನಾನು ಬರೆದ ಸಾಹಿತ್ಯ ಸೊನ್ನೆಯಾಗಿತ್ತು. ನಂತರ ಕೊಟ್ಟ ಹಲವಾರು ಪತ್ರಿಕಾ ಸಂದರ್ಶನಗಳಲ್ಲಿ ಹಾಗಂತಲೇ ಹೇಳಿಕೊಂಡೆ. ೧೩ ವರ್ಷದ ನನ್ನ ಪ್ರಕಾರ ಅಲ್ಲಿ ಭಾಗವಹಿಸಿದ್ದ ಬೇರೆ ಮಕ್ಕಳೆಲ್ಲ ಬರೆದಿರುತ್ತಾರೆ ಎಂದೇ ಆಗಿತ್ತು. ಆದರೆ, ಅದು ಸತ್ಯವಾಗಿರಲಿಲ್ಲ.

ಅದೇ ಗೀಳಿನಲ್ಲಿ ಏನಾದರೂ ಬರೆಯುವ ಉತ್ಸಾಹ ನನ್ನಲ್ಲಿ ಮೂಡಿತು. ನನ್ನ ವಯಸ್ಸಿನ ಕಾರಣ ಸೀರಿಯಸ್ಸಾದದ್ದೇನಾದರೂ ಬರೆದರೆ ಪ್ರಕಟಿಸುವುದಿಲ್ಲ ಎನ್ನುವ ಗುಮಾನಿಯೂ ಇತ್ತು.ದೊಡ್ಡವರಿಗಾಗಿ ಬರೆಯುವ ಪ್ರಭುದ್ಧತೆಯಿರಲಿಲ್ಲ. ನನ್ನ ವಯಸ್ಸಿನವರಿಗೆ ಅಂತ ಮಕ್ಕಳ ಬರಹದ ನಿಗಧಿತ ಪತ್ರಿಕಾ ವಿಭಾಗಗಳಿರಲಿಲ್ಲ. ಅಥವಾ ನನಗೆ ತಿಳಿದಿರಲಿಲ್ಲ. ಚೆನ್ನಾಗಿ ಬರೆದಿದ್ದೇನೆಯೋ ಇಲ್ಲವೋ ಎನ್ನುವ ಬಗ್ಗೆ ತಿಳಿಹೇಳಲು ಯಾವ ಮಾರ್ಗದರ್ಶಕರಿರಲಿಲ್ಲ. ಈ ಕಾರಣಕ್ಕೆ ನನಗಿಂತ ಚಿಕ್ಕ ಮಕ್ಕಳಿಗೆಂದು ’ ತಿಂಡಿ’ ಎನ್ನುವ ಪದ್ಯ ಬರೆದು ತರಂಗ ವಾರಪತ್ರಿಕೆಗೆ ಕಳಿಸಿದೆ. ಬಗೆ ಬಗೆಯ ತಿಂಡಿಗಳನ್ನು ಆಸ್ವಾದಿಸುತ್ತ ಸಂತೋಷಿಸುವಾಗ ತಟ್ಟನೆ ಅಮ್ಮನ ಕೂಗಿನಿಂದ ಕೊನೆಯಾಗುವ ಕನಸಿನ ಬಗೆಗಿನ ಪದ್ಯ.ನಂತರ ಮರೆತೂ ಬಿಟ್ಟೆ.

ಆದರೆ ಕೆಲ ವಾರಗಳಲ್ಲಿ ಅದು ಪ್ರಕಟವಾಗಿ ಬಿಟ್ಟಿತು. ಮಕ್ಕಳಿಗಾಗಿ ಸಾಹಿತ್ಯದ ಒಂದು ಪುಟ್ಟ ತುಣುಕನ್ನು ಸೃಷ್ಟಿಸಿಬಿಟ್ಟಿದ್ದೆ! ನಿಜಕ್ಕೂ ನನ್ನ ಪಾತ್ರವನ್ನು ನಿಭಾಯಿಸಿದ ಗೆಲುವು ಮೂಡಿತು.

 ಅದು ನನ್ನ ಪ್ರಥಮ ಪದ್ಯವಾದರೂ ನಾನು ಕವಿಯಾಗಿದ್ದು ಸುಳ್ಳು.ನಂತರ ಬರೆಯಲೂ ಇಲ್ಲ. ಕಾಲೇಜಿಗೆ ಬಂದಾಗ ಬರೆದ ಕವನಗಳು ಕನ್ನಡ ಪ್ರಭದಲ್ಲಿ, ವಾರ್ಷಿಕೋತ್ಸವ ಪತ್ರಿಕೆಗಳಲ್ಲಿ ಪ್ರಕಟವಾದವು. ತುಷಾರದ  ಚಿತ್ರಕವನ ಸ್ಪರ್ಧೆಯಲ್ಲಿ ಬಹಮಾನ ಗಳಿಸಿದವು.ಆದರೆ,ಆಗೆಲ್ಲ ಹೆಚ್ಚಾಗಿ ತೊಡಗಿಸಿಕೊಂಡಿದ್ದು ಲೇಖನಗಳ ಬರವಣಿಗೆಯಲ್ಲಿ. ಇಂಗ್ಲೆಂಡಿಗೆ ಬಂದ ನಂತರ ಮತ್ತೆ ಹತ್ತಾರು ವರ್ಷ ಎಲ್ಲ ನಿಂತಿತು. ಇತ್ತೀಚೆಗಿನ ಹಲವಾರು ಕವನಗಳನ್ನು ಬರೆದು ಪ್ರಕಟಿಸಿದ್ದೇನಾದರೂ ನನ್ನನ್ನು ನಾನು ಕವಿಯೆಂದು ಕರೆದುಕೊಳ್ಳಲಾರೆ. ನಾನು ಸಾಹಿತ್ಯದ ವಿದ್ಯಾರ್ಥಿಯಲ್ಲ.ಭೋದಕಳಲ್ಲ. ಆದರೆ ಸ್ವಚ್ಚ , ಸರಳ ಕವಿತೆಗಳನ್ನು ಬರೆದಾಗ ಸಿಗುವ ಸೃಜನಾತ್ಮಕ ಆನಂದ ಅಷ್ಟಿಷ್ಟಲ್ಲ.ಅದರಲ್ಲೂ ನನ್ನಂತ ಎಳಸು, ಸರಳ ಕವಿಗಳ ಆನಂದ ಅತ್ಯಂತ ನವಿರಾದದ್ದು. ಬೃಹತ್ತಾದದ್ದು ಕೂಡ.

ಪ್ರಥಮ ಪದ್ಯ ಕೊಟ್ಟ ನವಿರು ಕಚಗುಳಿ, ಹೆಮ್ಮೆ, ಅಲ್ಪ-ಸ್ವಲ್ಪ ಆತ್ಮವಿಶ್ವಾಸ ಇವಕ್ಕೆಲ್ಲ ನಾನು ಅತ್ಯಂತ ಋಣಿ.ಅಲ್ಲಿಂದ ಮುಂದಕ್ಕೆ ಹವ್ಯಾಸೀ ಬರಹಗಾರಳಾಗಲು ಆ ಸಾಹಿತ್ಯ ಸಮ್ಮೇಳನ ಮತ್ತು  ತರಂಗದ ಪುಟ್ಟ ಪದ್ಯಗಳೇ ಕಾರಣಗಳಾಗಿವೆ.

*****************************

2 thoughts on “ಮೊದಲ ಕವನ

Leave a Reply

Back To Top