ಮೈಲಿಗಲ್ಲಾದ ಮೊದಲ ಕವಿತೆ

ಮೊದಲ ಕವಿತೆಯ ರೋಮಾಂಚನ

ಸುಜಾತಾ ರವೀಶ್

Close-up of Heart Shape

ಶಾಲೆಯಲ್ಲಿ ಪ್ರಬಂಧ ಸ್ಪರ್ಧೆಗಳಲ್ಲಿ ಬರೆಯುತ್ತಿದ್ದರೂ ಕವಿತೆ ಅಂತ ಬರೆದದ್ದು ಹತ್ತನೇ ತರಗತಿಯಲ್ಲೇ.  ಅದಕ್ಕೆ ಮುಂಚೆ ಗದ್ಯರೂಪದಲ್ಲಿ ಸಾಕಷ್ಟು ಮನಸ್ಸಿಗೆ ಬಂದದ್ದನ್ನು ಗೀಚಿ ನನ್ನ ಪ್ರೌಢ ಶಾಲಾ ಕನ್ನಡ ಶಿಕ್ಷಕಿ ಪುಷ್ಪಾ ಮೇಡಂ ಅವುಗಳನ್ನು ಲಂಕೇಶ್ ಪತ್ರಿಕೆಗೆ ಕಳಿಸುವ ಅಂದಿದ್ದರೂ ಕಳಿಸಿದರಾ ಬಿಟ್ಟರಾ ನೆನಪಿಲ್ಲ.  ಆಗ ಬರೆದದ್ದು ಯಾವುದೂ ಬಳಿಯಲ್ಲಿಲ್ಲ .

ಅದೊಂದು ದಿನ ಒಂದು ಪುಟ್ಟ ಆಟೋಗ್ರಾಫ್ ಸೈಜಿನ ಪುಸ್ತಕವೊಂದನ್ನು ನನ್ನ ತಂದೆ ಕೊಟ್ಟರು ಅಂಗೈ ಅಗಲದ ಆ ಪುಸ್ತಕದಲ್ಲಿ ದೊಡ್ಡ ಪ್ರಬಂಧಗಳನ್ನು ಬರೆಯಲಾಗುತ್ತಿರಲಿಲ್ಲ . ಅದರಲ್ಲಿ ಬರೆಯಬೇಕೆಂಬ ಆಸೆಗೆ ಪುಟ್ಟ ಕವನಗಳನ್ನು ಬರೆಯತೊಡಗಿದೆ.  ಆ ಪುಟ್ಟ ಪುಸ್ತಕಕ್ಕೆ ಗುಲಾಬಿ ಹೂವಿನ ರಟ್ಟು ಹಾಕಿ ಜೋಪಾನದಲ್ಲಿ ಪ್ಲಾಸ್ಟಿಕ್ ರಕ್ಷಾ ಕವಚವನ್ನು ಹಾಕಿಟ್ಟಿದ್ದೆ. ಆ ಪುಸ್ತಕ ಭರ್ತಿಯಾದ ನಂತರ ನನ್ನ ಕವನ ಬರೆಯುವಾಟವೂ ನಿಂತಿತ್ತು ಮರೆತೂ ಬಿಟ್ಟಿದ್ದೆ. ಪುಸ್ತಕವೂ ಇಷ್ಟು ವರ್ಷ ಎಲ್ಲಿತ್ತೋ ಸಿಕ್ಕಿರಲೂ ಇಲ್ಲ . ಇತ್ತೀಚೆಗೆ ಆ ಪುಸ್ತಕ ಸಿಕ್ಕಿದ್ದೂ ಅದಕ್ಕೆ ಸರಿಯಾಗಿ ಸಂಗಾತಿಯಲ್ಲಿ ಈ ವಿಷಯದ ಬಗ್ಗೆ ಬರೆಯಲು ಹೇಳಿದ್ದೂ ಕಾಕತಾಳೀಯವಾಯಿತು.ಆಗಿನ ಭಾವಗಳು ಈಗ ಮರೆತು ಹೋಗಿದೆ ಆದರೆ ಓದಿದಾಗ ಪರವಾಗಿಲ್ಲ ಸುಮಾರಾಗಿ ಬರೀತಿದ್ದೆ ಅನ್ನಿಸುತ್ತೆ (ಅಥವಾ ಈಗಲೂ ಸುಧಾರಿಸಿಲ್ಲವೋ ಗೊತ್ತಿಲ್ಲ).  ಈಗ ಅದೆಷ್ಟೋ ಕವನಗಳನ್ನು ಬರೆದಿದ್ದರೂ ೧೪_೧೫ ವಯಸ್ಸಿನ ಪುಟ್ಟ ಮನದ ಭಾವಗಳು ಈಗ ಅಚ್ಚರಿ ಮೂಡಿಸುತ್ತದೆ. ಪ್ರಪಂಚವೇ ಗೊತ್ತಿರದ ಪುಟ್ಟ ಜಗತ್ತಿನ ವಿಷಯಗಳು ವಸ್ತುವಾದ ಬಗ್ಗೆ ಖುಷಿಯೂ ಆಗುತ್ತದೆ ಆ ಪುಟ್ಟ ಪುಸ್ತಕದ ಮೊದಲ ಕವನ ಪ್ರಾಯಶಃ ನನ್ನ ಮೊದಲ ಕವನವೂ ಅದೇ ಇರಬಹುದು. ನಿಮ್ಮ ಓದಿಗಾಗಿ…….

ಮುಂಜಾವು

ಬೆಳಗಿನ ಮೊದಲ ಜಾವದಲ್ಲಿ ಎದ್ದು 

ಸವಿನಿದ್ದೆಗೆ ವಿದಾಯ ಹೇಳಿ

ಹೊರ ಬಂದಾಗ ಕಂಡದ್ದು ನೀಲಿ ಆಗಸ 

ಮರೆಯಾಗುತ್ತಿದ್ದ ಚಂದ್ರ ತಾರೆ 

ಮತ್ತೆ ಕೆಲ ನಿಮಿಷಗಳಲ್ಲಿ 

ಪೂರ್ವ ದಿಗಂತದಲ್ಲಿ 

ರಾಗ ರಂಗು ಪಸರಿಸಿತು 

ಬಾನಿನಲ್ಲಿ ಸೂರ್ಯ ಉದಯಿಸಿದ್ದ 

ಇದ ಕಂಡ ಕವಿಗಳು ವರ್ಣಿಸಬಹುದು ನೂರು 

ಆದರೇನು ಆ ನಿಸರ್ಗ ಸೌಂದರ್ಯದ 

ರಮಣೀಯತೆಯಾಳವನು ಬರಡು 

ಮಾತುಗಳೆಷ್ಟು ತಾನೇ ವರ್ಣಿಸಬಹುದು? ಅದರಿಂದೊದಗುವ ಶಾಂತ ಸುಖದ 

ಅನುಭವವನ್ನು ಹೇಗೆ ತಾನೇ ಹೇಳಬಹುದು?

ಸುಮಾರು ಮೂವತ್ತು ವರ್ಷಗಳ ಸುದೀರ್ಘ ವಿದಾಯದ ಬಳಿಕ ಬರವಣಿಗೆಯ ರೈಲು ಈಗ ಎರಡು ವರ್ಷದಿಂದೀಚೆಗೆ ಹಳಿ ಹತ್ತಿದೆ ಒಂದು ಕವನ ಸಂಕಲನ ಬಿಡುಗಡೆ,  ಪಠ್ಯಪುಸ್ತಕಕ್ಕೆ ಒಂದು ಕವನ ಆಯ್ಕೆಯಾದದ್ದು ಇವೆಲ್ಲಾ ಈಗಿನ ಮೈಲಿಗಲ್ಲುಗಳು . ಆದರೆ ಆ ಹಳೆಯ ಕವನಗಳನ್ನು ನಾನು ಯಾರಿಗೂ ತೋರಿಸಿಲ್ಲ ಎನ್ನುವುದು ವಿಚಿತ್ರ ಆದರೂ ಸತ್ಯ .   

***************

6 thoughts on “ಮೈಲಿಗಲ್ಲಾದ ಮೊದಲ ಕವಿತೆ

  1. ಹೀಗೇ ಸಾಗಲಿ ಸಾಹಿತ್ಯ ಯಾನ

  2. ಧನ್ಯವಾದಗಳು ಸುರೇಶ್ ಅವರೇ .ಬೆಟರ್ ಲೇಟ್ ಡ್ಯಾನ್ ನೆವರ್ ಅಲ್ಲವಾ ?

  3. ತಾವು ಕನ್ನಡನಾಡಿನ ಸಾಹಿತ್ಯ ಶಾರದೆ ಇದ್ದಂತೆ ತಮ್ಮ ಬರವಣಿಗೆಯ ಆಳ ಕಡಲೊಳಗಿನ ಮುತ್ತಿನಂತೆ ತಮ್ಮಬಾವ ಶುದ್ಧತೆಯ ಬರವಣಿಗೆ
    ಓದುಗರಿಗೊಂದು ಹಬ್ಬವಿದ್ದಂತೆ
    ಮುಂದಿನ ಬರಹಗಳು ಜನಜಾಗೃತಿ ಉಳ್ಳ ವೈಚಾರಿಕತೆಯಿಂದ ತುಂಬಿರಲಿ ಎಂದು ಆಶಿಸುತ್ತಾ…
    ಫೇಸ್ಬುಕ್ ಗುಂಪಿನಲ್ಲಿರುವ ಸಾಹಿತ್ಯ ಹೆಸರಿನಲ್ಲಿರುವ ಹಲವಾರು ಸಾಹಿತ್ತಿಕ ಚಟುವಟಿಕೆಗಳು ಸ್ತ್ರೀ ಹರಣದಂತೆ ಗೋಚರಿಸಿಸುತ್ತಿರುವುದರಿಂದ ಮನಸ್ಸಿಗೆ ಯಾಕೋ ತುಂಬಾ ನೋವು
    ಕೆಲವು ಸಂದರ್ಭದಲ್ಲಿ ಬೆರಳೆಣಿಕೆಯ ಭಾವನಾತ್ಮಕ ಚಿತ್ರಗಳು ಆಗೊಮ್ಮೆ ಈಗೊಮ್ಮೆ ಪ್ರದರ್ಶಿಸುತ್ತಿವೆ ಆಗಾಗ್ಗೆ ನಾನೂ ಭಾಗಿಯಾಗಿ
    ನನ್ನ ಕಾಗುಣಿತದ ತಪ್ಪು ಲೇಖನಗಳಿಗೆ ತಮ್ಮಿಂದ ಉತ್ತಮ ಸಲಹೆ ಪಡೆದು ಶಿಷ್ಯನಾದೆ mdm
    ತಮ್ಮ ಒಂದು ಕವಿತೆ ಪಠ್ಯಪುಸ್ತಕಕ್ಕೆ ಆಯ್ಕೆಯಾದದ್ದು ತುಂಬಾ ಸಂತೋಷದ ಜೊತೆಗೆ ಹೃದಯಪೂರ್ವಕ ಅಭಿನಂದನೆಗಳುmdm

    1. ಮುಂದೆ ನನ್ನ ಬರವಣಿಗೆಯ ವಿಚಾರಧಾರೆ ಹಾಗೂ ಶೈಲಿಯನ್ನು ಜನಪರ ವಿಚಾರಗಳಿಗೆ ತಿರುಗಿಸಲು ಖಂಡಿತಾ ಪ್ರಯತ್ನಿಸುತ್ತೇನೆ .ತಮ್ಮ ಹೃದಯದಾಳದ ಮಾತುಗಳಿಗೆ ಹೃತ್ಪೂರ್ವಕ ಧನ್ಯವಾದಗಳು

Leave a Reply

Back To Top