ಚರ್ಚೆ

ಟಿಪ್ಪು ಸುಲ್ತಾನನ ಇತಿಹಾಸ ಪಠ್ಯದಿಂದ ತೆಗೆಯುವುದು ಎಷ್ಟು ಸರಿ ?

ಡಾ.ಮಹಾಲಿಂಗ ಪೋಳ

ಸ್ವಾತಂತ್ರ್ಯ ಪೂರ್ವದಲ್ಲಿ ಭಾರತ ಹಲವು ರಾಜ ಸಂಸ್ಥಾನಗಳ ಬೀಡಾಗಿತ್ತು.ಅವು ತಮ್ಮದೇಯಾದ ಗಡಿಯನ್ನು ಹೊಂದಿದ್ದವು.ತಮ್ಮ ಸಂಸ್ಥಾನದ ಗಡಿಯನ್ನು ವಿಸ್ತರಿಸಲಿಕ್ಕೆ ಪಕ್ಕದ ರಾಜ್ಯಗಳ ಮೇಲೆ ದಾಳಿ ಮಾಡುತಿದ್ದವು.ಅಲ್ಲದೇ ತಮ್ಮದೇಯಾದ ಸಂಸ್ಕೃತಿಯ ಪ್ರಸಾರಕ್ಕೆ ಕ್ರಮ ಕೈಗೊಳ್ಳುತ್ತಿದ್ದವು.ಇದು ರಾಜಪ್ರಭುತ್ವ ಚಾಲ್ತಿಯಾದಾಗಿನಿಂದ ಬಂದದ್ದು.ಟಿಪ್ಪು ಕೂಡ ಈ ನಾಡಿನಲ್ಲಿ ಒಂದು ಸಂಸ್ಥಾನದ ರಾಜನಾಗಿದ್ದವ.ಅವನ ಸಂಸ್ಥಾನದ ಪ್ರದೇಶ ವಿಸ್ತರಿಸಲು ಪಕ್ಕದ ರಾಜ ಸಂಸ್ಥಾನಗಳ ಮೇಲೆ ದಾಳಿ ಮಾಡಿದ ಸರಿ.ಹಲವು ವಿರೋಧಿಗಳನ್ನು ಕೊಂದ ಸರಿ.ಈ ಕೆಲಸ ಟಿಪ್ಪು ಒಬ್ಬನು ಮಾತ್ರ ಮಾಡಿದನೆ ? ಆಗಿನ ಕಾಲದಲ್ಲಿ ಒಂದು ಸಂಸ್ಥಾನ ಇನ್ನೊಂದು ಸಂಸ್ಥಾನದ ಮೇಲೆ ಹಗೆ ಸಾಧಿಸಿ ದಾಳಿ ಮಾಡುವುದು ಸಾಮಾನ್ಯವಾಗಿತ್ತು.ಟಿಪ್ಪು ಹಿಂದುಗಳನ್ನು ಕೊಂದ ಅವನು ದುಷ್ಟ ಎಂದು ಈ ಕಾಲಘಟ್ಟದಲ್ಲಿ ನಿಂತು ತೀರ್ಮಾಣಿಸುವುದು ಎಷ್ಟು ಸರಿ ? ಯಾವುದೇ ಐತಿಹಾಸಿಕ ಘಟನೆಗಳನ್ನು ಆಯಾ ಸಂದರ್ಭದ ರಾಜನೀತಿಗೆ ಅನುಗುಣವಾಗಿ ವಿಶ್ಲೇಷಣೆ ಮಾಡಬೇಕೆ ಹೊರತು ಇಂದಿನ ರಾಜಕೀಯ ತೆವಲುಗಳಿಗಾಗಿ ವಿಶ್ಲೇಷಣೆ ಮಾಡುವುದಲ್ಲ.
ಹಿಂದೂಗಳ ಮೇಲೆ ದಾಳಿ ಮಾಡಿದ ,ಹಿಂದೂಗಳನ್ನು ಕೊಂದ ಎಂದು ಕಾರಣಕೊಟ್ಟು ಪಠ್ಯದಿಂದ ಅವನ ಇತಿಹಾಸ ಕೈಬಿಡುವುದಾದರೆ,ಹಿಂದೂ ಸಾಮ್ರಾಜ್ಯ ವಿಜಯನಗರದ ಮೇಲೆ ದಾಳಿಮಾಡಿ ಅವನತಿಗೆ ಕಾರಣವಾದ ಶಾಹಿ ಸುಲ್ತಾನರ ಇತಿಹಾಸ ,ರಕ್ಕಸ ತಂಗಡಗಿ ಯುದ್ಧದ ಕುರಿತಾಗಿ ಪಠ್ಯದಿಂದ ತೆಗೆದು ಹಾಕಬಹುದೇ ?
ಧರ್ಮದ ಆಧಾರದ ಮೇಲೆ ಇತಿಹಾಸ ನಿರ್ಧರಿಸುವುದು ಸರಿಯಲ್ಲ.ರಾಮಾನುಜಚಾರ್ಯರನ್ನು ದೇಶಬಿಟ್ಟು ಓಡಿಸಿದ ಶೈವ ಧರ್ಮಿಯ ಕುಲೋತ್ತುಂಗ ಚೋಳನ ಇತಿಹಾಸವನ್ನು ಪಠ್ಯದಿಂದ ತೆಗೆಯಿರಿ ಎಂದು ವೈಷ್ಣವರು ಒತ್ತಾಯ ಮಾಡಿದರೆ ಹೇಗೆ ?
ಹಾಗೆಯೇ ಕಲಚೂರಿ ಅರಸನ ಸೈನಿಕರ ವಚನಕಾರರನ್ನು ಬೆನ್ನಟ್ಟಿಕೊಂಡು ಹೋಗಿ ಕೊಂದ ಇತಿಹಾಸ ಗೊತ್ತೆ ಇದೆ.ಲಿಂಗಾಯತ ಸಮುದಾಯದವರೆಲ್ಲ ಕಲಚೂರಿಗಳ ಇತಿಹಾಸ ಪಠ್ಯದಲ್ಲಿ ಬೇಡ ಎಂದರೆ ಹೇಗೆ ?
ಅಂದಿನ ರಾಜನೀತಿಗಳನ್ನು ಇಂದಿನ ರಾಜನೀತಿಯ ದೃಷ್ಟಿಕೋನದಿಂದ ವಿಶ್ಲೇಷಣೆ ಮಾಡಬಾರದು.

ಶಿವಾಜಿಯು ತನ್ನ ತಂದೆಯ ಬಂದನಕ್ಕೆ ಕಾರಣರಾದರು ಎಂಬ ಉದ್ದೇಶದಿಂದ ಮುಧೋಳ,ಜಮಖಂಡಿ ಸಂಸ್ಥಾನಗಳ ಮೇಲೆ ದಾಳಿ ಮಾಡಿದ.ಮುಧೋಳ ಸಂಸ್ಥಾನದ ಭಾಗಗಳನ್ನು ನಾಶಮಾಡಿ ಸುಟ್ಟುಹೋದನಂತೆ.ಹಾಗಾದರೆ ಮುಧೋಳ,ಜಮಖಂಡಿ ಭಾಗದವರು ಶಿವಾಜಿಯ ಇತಿಹಾಸವನ್ನು ಪಠ್ಯದಿಂದ ತೆಗೆಯಿರಿ ಎಂದರೆ ಅದಕ್ಕೆ ಅರ್ಥ ಬರುತ್ತದೆಯೆ ?
ಒಂದು ಕಾಲಘಟ್ಟದ ಇತಿಹಾಸದಲ್ಲಿ ಹಲವು ಬದಲಾವಣೆಗೆ ಕಾರಣವಾದ ಒಬ್ಬ ಐತಿಹಾಸಿಕ ವ್ಯಕ್ತಿಯನ್ನು ಬದಿಗಿಟ್ಟು ಇತಿಹಾಸ ಓದುವುದೆಂದರೆ ಅದು ನೈಜ ಇತಿಹಾಸಕ್ಕೆ ಮಾಡಿದ ಮೋಸ.
ಹಿಂದೂ ರಾಜರಾರು ಬೇರೆ ಸಂಸ್ಥಾನದ ಮೇಲೆ ದಾಳಿ ಮಾಡಿಲ್ಲವೆ ? ಜನರನ್ನು ಕೊಂದಿಲ್ಲವೇ ? ಕೇವಲ ದಾಳಿ ಮಾಡುವುದು ವೈರಿಗಳನ್ನು ಕೊಲ್ಲುವ ವಿಷಯಗಳು ಮಾತ್ರ ಇತಿಹಾಸವೇ ? ಅದರಾಚೆಯಿರುವ ಆರ್ಥಿಕ,ಸಾಮಾಜಿಕ,ಸಾಂಸ್ಕೃತಿಕ ವಿಷಯಗಳು ಇತಿಹಾಸದ ವಿಷಯವಾಗಿ ಓದಬೇಕಲ್ಲವೇ ?
ಒಂದು ಕಾಲಘಟ್ಟದ ಇತಿಹಾಸವೆಂದರೆ ಒಂದುದಿನ ನಡೆದ ಘಟನೆಗಳು ಮಾತ್ರವಲ್ಲ ,ಅದು ಎಲ್ಲ ರೀತಿಯ ಅಂಶಗಳನ್ನು ಸೇರಿ ಒಂದು ಕಾಲಘಟ್ಟದ ಇತಿಹಾಸ ನಿರ್ಮಿಸುತ್ತವೆ.
ಟಿಪ್ಪು ಒಬ್ಬ ಇಸ್ಲಾಂ ಧರ್ಮದ ರಾಜ ಎಂದ ಮಾತ್ರಕ್ಕೆ ಇತಿಹಾಸ ಬದಲಾಯಿಸಲು ಬರುವುದಿಲ್ಲ.ಅದು ಒಳ್ಳೆಯದಿರಲಿ,ಕೆಟ್ಟದ್ದಿರಲಿ ಅದು ಇತಿಹಾಸದ ಭಾಗ ಅದನ್ನು ನಾವು ವಸ್ತುನಿಷ್ಠವಾಗಿ ಓದಬೇಕು,ವಿಶ್ಲೇಷಿಸಬೇಕು.ಅದನ್ನು ಬಿಟ್ಟು ಅವನು ಮುಸ್ಲಿಂ,ಹಿಂದೂಗಳ ಮೇಲೆ ದಾಳಿ ಮಾಡಿದ ,ಹಿಂದೂಗಳನ್ನು ಕೊಂದ ಎಂದು ಇತಿಹಾಸ ಪಠ್ಯದಿಂದ ಕೈಬಿಡುವುದು ಎಷ್ಟು ಸರಿ ?

ಇತಿಹಾಸದ ಘಟನೆಗಳನ್ನು ದಾಖಲೆಗಳ ಆಧಾರದಿಂದ ವಸ್ತುನಿಷ್ಠವಾಗಿ ವಿಶ್ಲೇಷಣೆ ಮಾಡಬೇಕೆ ಹೊರತು ಯಾವುದೋ ಪಂಥಕ್ಕೆ ಜೋತುಬಿದ್ದು ಕುರುಡಾಗಿ,ನೈಜತೆಯನ್ನು ಮರೆಮಾಚಿ ಹುಸಿ ಸಂಕಥನಗಳನ್ನು ಸೃಷ್ಟಿಸುವುದಲ್ಲ.

ಯಾಕೇ ಹೀಗಾಗುತ್ತಿದೆ ? ಇದಕ್ಕೇ ಕಾರಣ ಯಾರು ? ಈ ವಿಷಯ ರಾಜಕೀಯವಾಗುತ್ತಿರುವುದು ಯಾಕೆ?
ಇದರ ಬಗ್ಗೆ ಮಾತನಾಡುವವರೆಲ್ಲ ನೈಜ ಇತಿಹಾಸ ಓದಿದ್ದಾರೆಯೆ ? ಪಠ್ಯದಿಂದ ಹೊರತೆಗೆಯುವ ತೀರ್ಮಾಣ ತೆಗೆದುಕೊಂಡವರು ಇತಿಹಾಸ ತಜ್ಞರೇ ? ಈ ಪ್ರಶ್ನೆಗಳು ನಮ್ಮನ್ನು ಕಾಡಿದರೆ ಉತ್ತರ ಸಿಕ್ಕಬಹುದೇನೋ ..
ನಮ್ಮ ಅಜ್ಜನ ಇತಿಹಾಸವೇ ನಮಗೆ ಗೊತ್ತಿಲ್ಲ ..! ಹಿಂದಿನ ಘಟನೆಗಳನ್ನು ಹೆಕ್ಕಿ ತಿಪ್ಪೆ ಕೆದಕಿ ಜನರ ಮನಸ್ಸನ್ನು ಹಾಳು ಮಾಡುವುದು ಸರಿಯೇ ?

========================================================

ಪರಿಚಯ:

ಜಮಖಂಡಿಯಲ್ಲಿಉಪಬ್ಯಾಸಕರು

Leave a Reply

Back To Top